ಸುದ್ದಿಯನೋದುತ್ತಿರೆ  ಬಳಿಗೈತಂದಳು ಕಿರಿಮಗಳು;
ಮುದ್ದಿನ ಮೊಗದರಳಿಗೆ ಮುತ್ತಿದ್ದುವು ಕರಿದುಂಬಿಯ ಕುರುಳು.
ತೆಕ್ಕನುಕ್ಕಿ ಜಾಗ್ರತವಾದುದು ನನ್ನೊಳಗಾ
ಪಶ್ಚಿಮ ಪಂಜಾಬಿನ ಹಿಂದೂ ತಂದೆಯ ಕರುಳು:
ದುಕ್ಕಕೆ ಸೆರೆಬಿಗಿದುದು ಕೊರಳು.
ಮಂಜಾದುವು ಕಣ್:
ಪತ್ರಿಕೆ, ಹಿಂದೂ; ಪಟ್ಟಣ, ಮೈಸೂರು.
ತೊಯ್ದುದುಪಶ್ಚಿಮ ಪಂಜಾಬಿನ ಮಣ್! –
ಆಃ ದುರ್ಬಲ ಬಲಿ ಕಬ್ಬಿಗನೀ ಕಣ್ಣೀರು! –
ಏನಿದು? ಕಾಣ್:
ಜನ, ಜನ, ಜನ, ಜನ , ಜನ!
ಯೋಜನ, ಯೋಜನ, ಯೋಜನ,
ಜನಜಂಗುಳಿ ಸರಪಣಿವರಿದಿದೆ ಸರ್ಪಣರಸ್ತೆಯಲಿ!
ಹುಟ್ಟಿದ ನೆಲ ಕೆಟ್ಟು,
ನೆಲೆಗೆಟ್ಟು. . . .
ಹೊಲಮನೆ ಐಸಿರಿ ಎಲ್ಲವ ಬಿಟ್ಟು,
ಕಾಲ್ಗೆಟ್ಟು. . . .
ಕಣ್ಗೆಟ್ಟು. . . .
ಮತವೈರದ ಸಿಟ್ಟುರಿಯಲಿ ಸುಟ್ಟು,
ಪಾಕಿಸ್ತಾನದ ಪೆಟ್ಟಿಗೆ ಮರವಟ್ಟೂ
ಹಿಂದೂಸ್ತಾನದ ದಿಗಂತರಕ್ಷೆಗೆ ಬಾಯ್ವಿಟ್ಟು
ಜನವಾಹಿನಿ ತರ್ಪಣವರಿದಿದೆ ಸರ್ಪಣರಸ್ತೆಯಲಿ,
ಅಸ್ತವ್ಯಸ್ತಂ ಪಥ ಸಂತ್ರಸ್ತಂ
ಗೂಳೆಯದೆಗೆದಿದೆ ದುರವಸ್ಥೆಯಲಿ!
ಜೋಲುತ ನಡೆಯುವ ತಾಯಿಯ ಮಡಿಲಲಿ
ಅದೊ, ಆಲಿಸು, ಒರಲುತ್ತಿದೆ ಕೂಸು;
ಅವಳೆಡೆ ಕುಂಟುವ ಕಂದನ ಕಾಲಿನ
ನೆತ್ತರಿಗಿದೊ ನಾನೋದುವ ಪತ್ರಿಕೆ
ಕೆಮ್ಮಾಸು!
ಕೈವಿಡಿದೊಲಿದವನೆಲ್ಲಿ, ಓ ತಾಯಿ!-
ಅಯ್ಯೊ ಹೇಳಲು ಬರುವುದೆ ಬಾಯಿ?
ನಾಲಗೆ ಸತ್ತಿದೆ; ಅದೇ ಲೇಸು!
ಪಡೆದಯ್ಯನದೆಲ್ಲಿ, ಓ ಕಂದ?
ನೀನಾದರು ಹೇಳ್, ಏನಾದ?
‘ಗೋಳಿಡುವಕ್ಕನ ಪಾಪಿಗಳುಯ್ದುರು,
ಅವಳನು ಬಿಡಿಸಲು ಹೋದ. . . .’
ಸರಿ, ಬಿಡು, ಮುಂದಾದುದು ಗೊತ್ತು:
ತಲೆ ನೆಲಕುರುಳಿತ್ತು;
ನೆತ್ತರು ಮಣ್ಣನ್ ತೊಯ್ದುತ್ತು;
ಪಾಕಿಸ್ತಾನಂ ಫಲವತ್ತಾಯ್ತು!
ನಿನಗೇನೊರೆಯಲಿ ಹೇಳ್, ತಂಗಿ?
ಸೀತೆಯನುಯ್ದಾ ರಾಕ್ಷಸನಂ ಭಂಗಿಸಿದಾತನೆ ಆಪತ್ಸಂಗಿ!
ಬಂಕಿಯ ಮಗಳಾ ದ್ರೌಪದಿ ನಿನಗಾಲಿ ರಕ್ಷೆ:
ದುಶ್ಯಾಸನನಿಗೆ ತಪ್ಪಿತೆ ಶಿಕ್ಷೆ?
ಧೈರ್ಯದ್ರುಮ ಭೀಮನ ಕರೆ; ಅವನಿನ್ನೂ ಸತ್ತಿಲ್ಲ!
ಅವನಾ ರೋಷದ ಅಗ್ನಿ ಸಮುದ್ರಂ ಇನ್ನೂ ಬತ್ತಿಲ್ಲ!
ಅಣ್ಣನ ಕಣ್ ಸನ್ನೆಯ ಸಾತ್ತ್ವಿಕವಿನ್ನೂ ಉರಿಹೊತ್ತಿಲ್ಲ!
ನೀ ದೃಢಳಾಗಿರೆ ಮೃಡನಡಹಾಯ್ದುರು ಕೇಳ್, ತಂಗಿ,
ದುಶ್ಯಾಸನನಿಗೆ ವಧೆ ತಪ್ಪಿಲ್ಲ:
ನಿನ್ನ ರಕ್ಷೆಗದೊ ಪಣತೊಟ್ಟಿಹನಾ
ಭೀಮನ ಪೂಣ್ಕೆಗೆ ಬೆಪ್ಪಿಲ್ಲ!
ತೊಯ್ದಾ ಪತ್ರಿಕೆಯನು ಕೈಬಿಟ್ಟೆ;
ಮಗಳನು ಮುದ್ದಿಸಿ ಮುತ್ತಿಟ್ಟೆ;
ಕೊನೆಗೆ…
ಕ್ಷೇಮಂಕರಿ ಶಕ್ತಿಯ ಪ್ರಾರ್ಥನೆಗೆ
ಭಾವದ ಹೃದ್ಭಾರದಿ ತೊನೆಯುತ ನಡೆದೆನು ನಾ ದೇವರ ಮನೆಗೆ!