ಶ್ರೀನಿವಾಸ ಕೃಪೆಯೊಳೆಮ್ಮ ದೊರೆಯ ಪರೆಯಲಿ!
ನಮ್ಮ ರಾಜ, ನಮ್ಮ ದೊರೆ ಚಿರಾಯುವಾಗಲಿ!
ಜಯ ಜಯ ಜಯ ಎನ್ನುತೆಲ್ಲ
ವಿಜಯಭೇರಿ ಹೋಡೆಯಿರಿ!
ಮೊಳಗಿ ಕೂಗಿರಿ! ಜಯತು ಎನ್ನಿರಿ!
ಜಯದ ಘೋಷ ಗಗನಕೆದ್ದು
ದಿವಿಜರನ್ನು ಕರೆಯಲಿ:
ಗಗನದಿಂದ ಪುಣ್ಯ ಕುಸುಮ ಸರಿಯು ಸುರಿಯಲಿ!
ಕಹಳೆಗಳಿರ ಕೂಗಿರೈ
ವೀಣೆಗಳಿರ ಹಾಡಿರೈ
ದನಿಯ ಬೀರಿ ವಾದ್ಯಗಳಿರ ಮೆರೆದು ನಲಿಯಿರೈ!
ದೋಳುಗಳಿರ ಬಡಿಯಿರೈ
ಗುಂಡುಗಳಿರ ಸಿಡಿಯಿರೈ
ದಂಡುಗಳಿರ ನಡೆಯಿರೈ!
ನಮ್ಮ ರಮ್ಯ ಪುರದೊಳಿಂದು
ಬೆಳ್ಳಿಹಬ್ಬವೆಂಬ ಸುದ್ದಿ
ವಿಶ್ವಕೆಲ್ಲ ತಿಳಿಯುವಂತೆ ಕೂಗಿ ಸಾರಿರೈ!
ಇಂದುಮಹಿಷಪುರೆವೆ ಸಗ್ಗ
ಎಂದು ಜನರೆ ನಲಿಯಿರಿ!
ಕರೆದು ಕೂಗಿರಿ! ಜಯತು ಎನ್ನಿರಿ!
ನಮ್ಮ ದೊರೆಯ ಕೊರಲಿಗಲರ
ವಿಜಯ ಮಾಲೆಗಳನು ಹಾಕಿ ನಲಿವ ಬನ್ನಿರಿ!

ಬನ್ನಿ ರಮ್ಯ ವನಗಳೆ,
ಬನ್ನಿ ಪುಣ್ಯ ನದಿಗಳೆ,
ಬನ್ನಿ, ಋಷಿಗಳಿಂದ ಪೂಜ್ಯವಾದ ಗಿರಗಳೆ!
ಬಾರ ಕಡಲ ರಾಜನೆ,
ಬಾರ ಹೇ ದಿನೇಶನೆ,
ಬಾರ ಶಾಂತಿನಿಲಯ, ಬಾರ ಹೇ ಸುಧಾಕರ!
ಬನ್ನಿ ತಾರೆಗಳಿರ ಬನ್ನಿ,
ನಿಮ್ಮ ಕಾಣಿಕೆಗಳ ತನ್ನಿ,
ಕೃಷ್ಣನೃಪನ ಬೆಳ್ಳಿಹಬ್ಬಕೆಲ್ಲ ಬನ್ನಿರಿ!
“ಧನ್ಯ, ಧನ್ಯ, ಕೃಷ್ಣನೃಪಗೆ ಜಯತು” ಎನ್ನಿರಿ!
ಬನ್ನಿ ದಿವಿಜರೆಲ್ಲ ಬನ್ನಿ,
ನಿಮ್ಮ ಹರಕೆಗಳನು ತನ್ನಿ,
“ಜಯತು ಅಮೃತ ನೃಪಗೆ” ಎನ್ನಿ!
ಮಂಗಳದ ಮಳೆ ಕರೆಯಲಿ;
ಪುಷ್ಪವರ್ಷ ಹರ್ಷವರ್ಷವಾಗೆ ಸುರಿಯಲಿ;
ಕೃಷ್ಣಭೂಪನಮಿತಕಾಲ ನೆಲವ ಪೊರೆಯಲಿ;
ನಮ್ಮ ರಾಜನುಪವನಗಳ ಪುರವ ಸೃಷ್ಟಿಸಿ
ನಡುವೆ ಇರುವನೆಂದು ನೀವು ನಾಚಬೇಡಿರಿ,
ಬನ್ನಿ ರಮ್ಯ ವನಗಳೆ,
ನಿಮಗೆ ಸುಖಾಗಮನವು!
ಚ್ಯತ್ರಸುಮದ ಸಿರಿಯನೆಲ್ಲ ದೊರೆಗೆ ಅರ್ಪಿಸಿ;
ಬರುತ ನಿಮ್ಮ ತಳಿರ ಸಿರಿಯ ಕೊಂಡುಬನ್ನಿರಿ!
ನಿಮ್ಮ ನಗುವ ದೀಪ ಕೋಟಿ
ಗೆಮ್ಮ ಒಡೆಯನರಸನೆಂದು
ನಾಚಬೇಡಿ ಚುಕ್ಕಿಗಳಿರ, ಹೇ ಸುಧಾಕರ;
ನಿಮಗೆ ಸದಾ ಸುಖಾಗಮನ ಬನ್ನಿರೆಲ್ಲರು!
ಬರುತ ನಮ್ಮ ರಾಜಗಾಗಿ ಜೋತಿಮಾಲೆಯ
ಧಳಿಪ ದಿವ್ಯ ಕಾಣಕೆಯನು ತನ್ನಿರೆಲ್ಲರು.
“ಕೃಷ್ಣರಾಜ ಶರಧಿ” ಗೆಮ್ಮ ಜನಪನೊಡೆಯನು
ಎನ್ನುತಂಜಬೇಡ ನೀನು, ಕಡಲರಾಜನೆ:
ದಯೆಯ ಬೀಡು ನಮ್ಮ ದೊರೆಯು ನಿನಗೆ ಸ್ವಾಗತ!
ಬರುತ ನಿನ್ನ ಕಪ್ಪವಾಗಿ ಕಡಲ ಸಿರಿಯ ತಾ:
ನೀಲಮೇಘಮಾಲೆಗಳನು ಕರದಿ ಹಿಡಿದು ಬಾ!

ಘಣಘಣಿಸಿರಿ, ಘಣಘಣಿಸಿರಿ
ಗುಡಿಯ ಗಂಟೆಗಳಿರ ನೀವು:
ಜಯ ಜಯ ಜಯ! ಜಯ ಜಯ ಜಯ!
ವರನೃಪಾಲಗೆಂದು ಬೀರಿ
ಮಂಗಳಸ್ವನಂಗಳಂ!
ಥಳಿಸಿ ಬೆಳಗಿ! ಥಳಿಸಿ ಬೆಳಗಿ! ಬೆಳಗಿ ಥಳಿಸಿರಿ
ಮಂಗಳಾರತಿಗಳೆ ಪುಣ್ಯನೃಪನ ಶೀಲವ!
ಸಾರಿ ಶಂಖಗಳಿರ ಭೂಪನಮಲ ಚರಿತ್ರೆಯ
ಸಾರಿ ಜಾಗಟೆಗಳೆ ಲೋಕಕವನ ನೀತಿಯ!
ಬೆಳ್ಳಿ ಹಬ್ಬದುತ್ಸವಗಳೆ ಹೊರಡಿ ಹೊರಡಿರಿ;
ದೊರೆಯ ವರಪವಿತ್ರ ಸಿರಿಯ ಜಗಕೆ ಹರಡಿರಿ!
ಬಾರ ಮಧುನೃಪಾಲದೂತ, ಮಧುರ ಕೋಗಿಲೆ,
ಬೆಳ್ಳಿ ಹಬ್ಬವೆಂಬ ಶುಭದ
ವಾರ್ತೆಯನ್ನು ಕೊಂಡುಹೋಗು ವರ ವಸಂತೆಗೆ!
ಬರಲಿಯವನು ಚೇತ್ರನೊಡನೆ
ನಗ್ನಕಾಂತಿಯಿಂದ ಮೆರೆವ
ಕೆಂಪು ಬಿಳಿದು ಹಳದಿ ನೀಲ
ವಿವಿಧ ಬಣದಿಂದ ವೆರೆವ
ತೋರಣಾಳಿಗಳನು ಕಟ್ಟಿ ಬೆಳ್ಳಿ ಹಬ್ಬಕೆ!
ಬೀಸು, ಬೀಸು, ಸುರಭಿ ಭರಿತ ಮಲಯಜಾನಿಲ.
ಮೋಡಗಳಿರ ಬನ್ನಿ ಬೇಗ, ಬೇಗೆಯಡಗಲಿ;
ದೇಶವೆಲ್ಲ ಹಸರುರಿನಿಂದ ಶಾಂತವಾಗಲಿ!

ತೆರಳು, ತೆರಳು, ತೊಲಗು ಬೇಗ
ಎಲೆ ದರಿದ್ರಲಕ್ಷಿಮಿಯೆ!
ಶುಭದ ಬೆಳ್ಳಿ ಹಬ್ಬಕ್ಕಾಗಿ
ರಾಜ್ಯಲಕ್ಷ್ಮಿ ಬಾರೆಲೌ!
ಓಡು, ಓಡು ನಿಲ್ಲಬೇಡ ಕ್ಷಾಮಮಾರಿಯೆ;
ಬಾರೆಲವ್ವ ಮಂಗಳೇ ಸುಭಿಕ್ಷದೇವಿಯೆ!
ರೋಗುರುಜಿಗಳಿಂದು ಗಡಿಯ ದಾಟಿ ಹೋಗಲಿ,
ಶಾಂತಿಗಳೆಲ್ಲ ನಿತ್ಯವಾಗಿ ಬಾಳಲಿ!
ಕಿಟ್ಟದೆಲ್ಲ ಬೆಳೆಯಲಿ;
ಒಳಿತೆಲ್ಲ ಬೆಳೆಯಲಿ;
ಕೋಪ ತಾಪ ಸುಳ್ಳು ಸಿಟ್ಟು
ಭಯವು ಹೇಡಿತನಗಳೆಲ್ಲ ಮಸಣ ಸೇರಲಿ;
ಧರ್ಮ ಸತ್ಯ ದೈರ್ಯ ಶಾಂತಿಯೆಲ್ಲ ಕೊನರಲಿ;
ಬೆಳ್ಳಿಹಬ್ಬವಿಂದು, ಪಾಪ ಬೆಂದು ಹೋಗಲಿ;
ಪುಣ್ಯವೆಂಬ ಪರಮಪೈರು ಬೆಳೆದು ಫಲಿಸಲಿ!
ಕತ್ತಲೆಲ್ಲವಡಗಲಿ,
ಸುತ್ತಲುದಯವಾಗಲಿ;
ಚಿತ್ತಭಿತ್ತ ಶುದ್ಧವಾಗಿ
ಜೀವನಲ್ಲಿ ಮೆರೆಯಲಿ!
ಬೆಳ್ಳಿಹಬ್ಬವಿಂದು ಮೃತ್ಯು ಸತ್ತು ಹೋಗಲಿ;
ಅಮೃತಪಾನಮಾಡಿ ಎಲ್ಲರಮರರಾಗಲಿ!

ಧನ್ಯ ಧನ್ಯ ಪುಣ್ಯಹೃದಯ ಕೃಷ್ಷನೃಪವರ,
ಧನ್ಯಧನ್ಯ ಲೋಕಮಾನ್ಯ ರಾಜಭೂಸುರ!
ರಾಜಋಷಿಯೆ ಕರ್ಮಯೋಗಿ ನಿನಗೆ ಮಂಗಳಂ;
ಆತ್ಮವೀರ ಧರ್ಮಧೀರ ನಿನಗೆ ಮಂಗಳಂ;
ನಿನ್ನ ನೀತಿಯೊಲಮೆ ದಯೆಗಳ್
ಇತರ ರಾಜರೆದೆಗೆ ತಗುಳಿ ಮುಕ್ತಿಗೊಯ್ಯಲಿ;
ನಿನ್ನ ಬಿಳಿಯ ಬಾಳಿನಿಂದ
ಅವರ ಧರ್ಮವರಿಯಲಿ!
ಸಗ್ಗದೆಡೆಯೊಳಿಹುದು ಶಿರವು, ಪಾದ ನೆಲದೊಳು;
ಮುಕ್ತಿ ಶ್ರೀಯನೊಂದು ಕೈಲಿ,
ರಾಜಯಶ್ರೀಯನೊಂದು ಕೈಲಿ,
ಹಿಡಿಯುತಿಹವ ಪರವನೆರಡ ಸಾಧಿಸಿರುತಿಹೆ!
ಆತ್ಮಸಿರಿಯ ಮೀರಿದಾವ ಸಿರಿಯ ಬಲ್ಲೆವು?
ನೆಲದ ಸಿರಿಯ, ಕೀರ್ತಿಸಿರಿಯ,
ಭೋಗಸಿರಿಯ, ಸರ್ವಸಿರಿಗಳನ್ನು ಮೀರಿದೆ;
ಮರ್ಮದಿಂದ ಧರ್ಮವರಿತು
ಜನಕನಂತೆಯಾಳುತಿರುವೆ ಧನ್ಯ ನೃಪಋಷಿ!
ಧರ್ಮಮಾರ್ಗವೆಂಬುದೊಂದೆ ಕೀರ್ತಿಮಾರ್ಗವು,
ಪ್ರೇಯವದುವೆ, ಶ್ರೇಯವದುವೆ,
ಅದುವೆ ಮುಕ್ತಿಮಾರ್ಗವು.
ದೇವರಂಥ ಸಾಧುಸಂತ
ರಿಂದ ದೇವನಿರುವನೆಂದು ಜನರ ನಂಬಿಕೆ.
ಹೇ ಪವಿತ್ರರಾಜ ಋಷಿಯೆ,
ದೇವರನ್ನು ಬಿಂಬಿಸಿಹುದು
ಶುಭ್ರವಾದ ನಿನ್ನ ಅಮಲ ಎದೆಯ ಕನ್ನಡಿ!
ದೊರೆಯೆ ದೇವರೆಂಬ ನುಡಿಯು ಧನ್ಯವಾಯಿತು,
ಮಾನ್ಯವಾಯಿತು, ಗಣ್ಯವಾಯಿತು,
ನಿನ್ನ ಶೀಲದಿಂದ, ಹೇ ನೃಪಾಲತಿಲಕನೆ:
ಗುಣದಿ ಪೂಜ್ಯನಾದೆ ನೀನು ಹಣದಿಯಲ್ಲವು!
ಹರಿಶ್ಚಂದ್ರ, ರಾಮ, ಕೃಷ್ಣ,
ಚಕ್ರವರ್ತಿ ವರ ಅಶೋಕ,
ಯಧಿಷ್ಟಿರಾದಿ ಮಹಾನೃಪರ
ನಾಮಮಾಲೆಯಲ್ಲಿ ನಿನ್ನ ನಾಮ ಮೆರೆವುದು!
ಸೂರ್ಯಚಂದ್ರರಿರುವತನಕ,
ಎಳೆಯೊಳಿರುವತನಕ ಧರ್ಮ,
ಜಗದ ಕಂಗಳನ್ನು ಹಿಡಿದು,
ಜಗದ ಜಿಹ್ವೆಯನ್ನು ಹಿಡಿದು,
ನೀಲನಭದಿ ಹಾರುತಿರಲಿ
ನಿನ್ನ ಕೀರ್ತಿ ಕೇತನ!
ಘೊರಮಳೆಯು ಸುರಿಯಬಹುದು,
ಚಂಡಗಾಳಿ ಬೀಸಬಹುದು,
ಸಿಡಿಲು ಮಿಂಚು ಬಡಿಯಬಹುದು;
ಹರಿಯದೆಂದು; ಬೀಳದೆಂದು,
ಧರ್ಮವನ್ನು ಸಾರಿ ತೋರಿ
ಹಾರಿ ನಲಿಯುತಿರಲಿ ನಿನ್ನ ಕೀರ್ತಿ ಕೇತನ!

ಕಾವ್ಯ ಶ್ರೀಯು ಬಂದು ನಿನ್ನನೊಲಯಿಸುವಳು,
ಕಲಾಲಕ್ಷ್ಮಿ ಬಂದು ನಿನ್ನ ಸೇವೆಗೈವಳು,
ಕಬ್ಬದಬ್ಬೆ ಸದಾ ನಿನ್ನ ಪೂಜೆ ಮಾಳ್ಪಳು;
ಗಾನದೇವಿ ಬಂದು ನಿನ್ನನಾದರಿಸುವವಳು,
ವೇಣು, ವೀಣೆ, ಜಾಣಚಾಣ, ಕುಂಚ, ಲೇಖಣಿ,
ಎಲ್ಲ ನಿನ್ನನೊಲಿಯುತಿಹವು, ನೃಪಶಿರೋಮಣಿ!
ರಾಜ ಋಷಿಯು, ರಸಿಕ ಋಷಿಯು,
ಧರ್ಮ ಋಷಿಯು, ಕರ್ಮ ಋಷಿಯು,
ಜ್ಞಾನಭಕ್ತಿಋಷಿಗಳೆಲ್ಲ ನಿನ್ನೊಳಿರುವರು!
ಪ್ರಜೆಗಳಾದ ನಾವು ನಿನ್ನ
ಹೊಂದಿ ಧನ್ಯರಾದೆವು;
ನಿನ್ನ ಸೇವೆ ಗೈದು ನಾವು ಮಾನ್ಯರಾದೆವು.
ಬನ್ನಿ ಬನ್ನಿ ಜನಗೆಳಲ್ಲ, ಸೇರಿ ಸಭೆಯಲಿ:
“ಧನ್ಯ ಧನ್ಯ ಯೋಗಿಮಾನ್ಯ ಕೃಷ್ಣನೃಪವರ!”
ಎಂಬ ನಿಮ್ಮ ಹರ್ಷಘೋಷ ಗಗನಕೇಳಲಿ!

ದೊರೆಯೆ ನಿನ್ನ ಹೃದಯದಾಳ ಕಡಲಿನಾಳವು;
ಗಗನದಂತೆಯಿಹುದು ನಿನ್ನ ಮನದ ಬಿತ್ತರ!
ಬೇದಭಾವ ರಹಿತ ನೀನು;
ವೇದವರಿತ ಸಾಧು ನೀನು;
ರಾಮಕೃಷ್ಣ ಪರಮಹಂಸ, ಶ್ರೀವಿವೇಕರು
ದೇಶದೇಶಗಳಲಿ ಸಾರಿ ಸಾರಿ ಹೇಳಿದ
ಸರ್ವಧರ್ಮ ಸಮನ್ವವಯ
ಕಾರ್ಯದಲ್ಲಿ ತೋರಿಸಿರುವೆ, ನೀನೆ ಧನ್ಯನು!
ಹಿಂದು, ಮುಸಲ, ಕ್ರೈಸ್ತ, ಜೈನ
ಎಂಬ ಭೇದ ಭಾವವಿಡದೆ
ರಾಮರಾಜ್ಯವಾಳುವೆ!
ಬೇರೆ ಬೇರೆ ಗಿರಿಗಳಲಿ ಜನಿಸಿ ಹರಿದರೂ
ಬೇರೆ ಬೇರೆ ನಾಮಗಳನು ಧರಿಸಿ ಹರಿದರೂ
ಹೊಳೆಗಳೆಲ್ಲ ಕಡೆಗೆ ಕಡಲ ಪಾಲೆ ಎಂಬುವ
ಮರ್ಮವರಿತ ಋಷಿಯು ನೀನು, ಧರ್ಮವೀರನೆ!
ಮಾರ್ಗವಮಿತ, ನಿಲಯವೊಂದೆ;
ರೂಪವಮಿತ, ಸಿಹಿಯದೊಂದೆ;
ನಾಮವಮಿತ, ಜಲವದೊಂದೆ;
ಎಂಬ ತತ್ತ್ವವರಿತು ನೀನು ಮುಕ್ತನಾಗಿಹೆ!
ಮತದ್ವೇಷವನ್ನು ಬಿಟ್ಟು
ಮತಭ್ರಾಂತಿಯನ್ನು ಬಿಟ್ಟು
ಭಾರತೇಯರೆಲ್ಲ ನಿನ್ನ
ನೋಡಿ ಧರ್ಮ ವಿಷಯಗಳಲಿ
ಸಹನೆಯನ್ನು ಕಲಿಯಲಿ.
ಬ್ರಾಂತಿಕ್ರಾಂತಿ ಎಲ್ಲವಡಗಿ ಸತ್ಯ ತುಂಬಲಿ;
ಶಾಂತಿ ಸುಖವು ನಿನ್ನ ರಾಜ್ಯದಲ್ಲಿ ನೆಲಸಲಿ!

ದೊರೆಯೆ ಕವಿಯ ಹಕ್ಕಿನಿಂದ ನಿನ್ನ ಕೇಳ್ವೆನು,
ಹೆಮ್ಮೆಯಿಂದ ಬೇಡುವೆ ― ಸ್ವಾ
ತಂತ್ರ್ಯದಿಂದ ಬೇಡುವೆ,
ಮನ್ನಿಸೆನ್ನನಾಲಿಸು!
ಜನರ ಮತವೆ ಕವಿಯ ಮತವು,
ಅವರ ಹಿತವೆ ಕವಿಯ ಹಿತವು,
ಅವರ ವಾಣಿ ಕವಿಯ ವಾಣಿ, ಮನ್ನಿಸಾಲಿಸು!
ನಡಸು ಎಮ್ಮನೆಲ್ಲ ನಿನ್ನ ಮಧ್ಯಮಾರ್ಗದಿ,
ಇಹವ ಸಾಧಿಸುತ್ತ ಪರವ ಪಡೆವ ಮಾರ್ಗದಿ!
ಕಾವ್ಯರಸವ ಹೀರಿ ಜನರು
ಹರ್ಷಪಡುವ ತೆರದಿ ಮಾಡು, ನೀಡು, ವಿದ್ಯೆಯ!
ಪೂರ್ವಪಶ್ಚಿಮೆಂಬ ಬೇದ ವಿದ್ಯೆಗಿಲ್ಲವು;
ಯಂತ್ರವಿದ್ಯೆಯನ್ನು ಹೊಯ್ದು ವೇದವಿದ್ಯೆಗೆ,
ಅತಿಯ ಬಿಡಿಸಿ ಮಿತಿಯ ಹಿಡಿಸು,
ರಾಜ ಋಷಿವರ!
ಯಾರು ಅರಿಯದಂಥ ಮಹಾಕವಿಗಳಿರುವುರು,
ಜಗವ ಬೆರಗು ಮಾಡಬಲ್ಲ
ಚಿತ್ರಗಾರರಿರುವರು,
ಶಿಲ್ಪತಿಲಕರಿರುವರು.
ಕಲಾವನಿತೆಯೊಲಿದ ಜನರ ಲಕ್ಷ್ಮಿಯೊಲಿಯಳು,
ಲಕ್ಷ್ಮಿಯೊಲಿಯದಿರುವ ಕಲೆಗೆ ಇಲ್ಲ ಗೌರವ,
ನಿನ್ನು ದಾರಶೀಲ ಸುರಿವ ಮಳೆಯ ಹನಿಯೊಳು
ಹನಿಯದೊಂದೆ ಹನಿಯಲವರ ದಿವ್ಯಶಿರದೊಳು;
ನಿನ್ನ ಕೀರ್ತಿ ಬೆಳೆವುದು,
ಜಗದ ಕಲೆಯು ಬೆಳೆವುದು,
ನಿನ್ನ ರಾಮರಾಜ್ಯ ದೇವನಿಲಯವಪ್ಪುದು!
ಕವಿಯ ಹಕ್ಕಿನಿಂದ ನಾನು ನಿನ್ನ ಬೇಡುವೆ,
ಸ್ವಾರ್ಥಕಾಗಿ ಬೇಡುವೆ! – ಪ
ರಾರ್ಥಕಾಗಿ ಬೇಡುವೆ! – ಸ್ವಾ
ತಂತ್ರ್ಯದಿಂದ ಬೇಡುವೆ!
ಹೆಮ್ಮೆಯಿಂದ ಸಿಂಹದಂತೆ ಬೇಡುತಿರುವೆನು;
ಕೃಷ್ಣರಾಜ ಕೃಷ್ಣನಂತೆ ನೀಡುವ ಭಿಕ್ಷವ!

ವಿಶ್ವಜನನಿ, ಯದುನೃಪಾಲ ಕುಲದ ದೇವತೆ,
ದೇವಿ, ತಾಯೆ, ಹೇ ಶ್ರೀ ಚಾಮುಂಡಿಯೆ,
ಬೆಟ್ಟವಿಳಿದು ಬಾರೆಲೌ!
ಪಟ್ಟಕಟ್ಟಿ ನೀನೆ ಪೊರೆದ
ಶ್ರೀಕೃಷ್ಣನೃಪಗೆ ಪರಮಕೃಪೆಯ ತಾರೆಲೌ!
ವೇದೃಷಿಗಳೆಲ್ಲ ಬನ್ನಿ,
ಯೋಗಿತಿಲಕರೆಲ್ಲ ಬನ್ನಿ,
ಪೂರ್ವಕವಿಗಳೆಲ್ಲ, ಬನ್ನಿ,
ಪೂರ್ವರಾಜರೆಲ್ಲ ಬನ್ನಿ,
ಕೀರ್ತಿಶೇಷರೆಲ್ಲ ಬನ್ನಿ,
ನಿಮ್ಮ ಹರಕೆಗಳನು ತಂದು ‘ಸ್ವಸ್ತಿ’ ಎನ್ನಿರಿ!
ಭೂಮಿದೇವಿ ಬಾರೆಲೌ;
ಭಾರತಾಂಬೆ ಬಾರೆಲೌ;
ಮಗನ ಬೆಳ್ಳಿ ಹಬ್ಬವೆಂದು
ಉಬ್ಬುತಿರುವ ಹೃದಯದಿಂದ
ಕನ್ನಡಾಂಬೆ ಬಾರೆಲೌ;
ನಿಮ್ಮ ಮುದ್ದು ರಾಜಮಗನ
ಬೆಳ್ಳಿಹಬ್ಬವಿಂದು ನಿಮಗೆ ಸುಖಾಗಮನವು!
ಬಾರೆಲವ್ವ ಭೂಮಿದೇವಿ, ಇತ್ತ, ಇತ್ತ ಬಾ;
ಪುತ್ರಗಾಗಿ ನೀನು ತಂದ ಹರಕೆಗಳನು ತಾ;
ಬಾರೆಲವ್ವ ಭಾರತಾಂಬೆ, ಇತ್ತ, ಇತ್ತ ಬಾ;
ಮಗನಿಗಾಗಿ ನೀನು ತಂದ ವರಗಳನು ತಾ;
ನಮ್ಮ ನಾಡ ತಾಯಿ ನೀನು,
ನಮ್ಮ ನೀನು ಅರಿಯೆ ಏನು?
ಅಮ್ಮ ಬಾರೆ ಕನ್ನಡಾಂಬೆ, ಇತ್ತ, ಇತ್ತ ಬಾ;
ಮುದ್ದಿಗಾಗಿ ನೀನು ತಂದ ದಾನಗಳನು ತಾ!
ಮೇಲೆ ನೋಡಿ! ಮೇಲೆ ನೋಡಿ!
ಗಗನವೆಲ್ಲ ರಂಜಿಸಿಹುದು!
ವೇದಋಷಿಗಳೆಲ್ಲರಿಳಿದು ಬರುತಲಿರುವುರ,
ಯೋಗಿವರ್ಯರೆಲ್ಲ ‘ಸ್ವಸ್ತಿ’ ಎಂದು ಬರುವರು,
ಪೂರ್ವಗಕವಿಗಳೆಲ್ಲ ಹಾಡಿ ಹಾಡಿ ಬರುವರು,
ಹುರಷದಿಂದ ರಾಜರೆಲ್ಲರಿಳಿದು ಬರುವರು!
ಅದೋ ನೋಡಿ! ಅದೋ ನೋಡಿ!
ಶ್ರೀ ವಿವೇಕರೊಡನೆ ಕೂಡಿ ಕರೆದು ಶಿಷ್ಯರ
ರಾಮಕೃಷ್ಣಪರಮಹಂಸರಿಳಿದು ಬರುವರು!
ಇತ್ತ ನೋಡಿ! ಇತ್ತ ನೋಡಿ!
ಬೇಡಕವಿಯ ಕೂಡಿ ಬಹನು ಬಾದರಾಯಣ;
ಕಪಿಲಋಷಿಯ ಕೂಡಿ ಬಹನು ಶಂಕರಾರ್ಯನು!
ಅದೋ ಅಲ್ಲಿ! ಅದೋ ಅಲ್ಲಿ!
ಗಾರ್ಗಿಯೊಡನೆ ಯಾಜ್ಞವಲ್ಕ್ಯನಿಳಿದು ಬರುವನು!
ಇತ್ತ ನೋಡಿ! ಅತ್ತ ನೋಡಿ!
ಅಲ್ಲಿ ಅಗೋ! ಇಲ್ಲಿ ಇಗೋ!
“ಸ್ವಸ್ತಿ ಸ್ವಸ್ತಿ” ಎನ್ನುತೆಲ್ಲ
ಗಗನತಳ್ವ ತುಂಬಿಯಿಳಿದು ಬರುತಲಿರುವರು!
ಇತ್ತ ನೋಡಿ! ಇತ್ತ ನೋಡಿ!
ನಗೆಯ ಜೊನ್ನವನ್ನು ಬೀರಿ
ಗುಂಪದೊಂದು ನಲಿದು ಬರುತಲಿರುವುದಾರದು?
ಓಹೊ ತಿಳಿಯಿತೋಹೊ ತಿಳಿಯಿತೀಗ ತಿಳಿಯಿತು!
ಯದುನೃಪಾಲವಂಶವೃಕ್ಷ
ದಲರಮಾಲೆ ಬರುತಲಿಹುದು;
ನೋಡಿ ಚಾಮರಾಜನಲ್ಲಿ;
ನೋಡಿ ಕೃಷ್ಣರಾಜನಲ್ಲಿ;
ಚಿಕ್ಕದೇವರಾಜನಲ್ಲಿ;
ನೋಡಿ, ಹಾಡಿ, ಹಾಡಿ ನೋಡಿ ಜನರೆ ನಲಿಯಿರಿ!
“ಜಯ ಜಯ ಜಯ! ಜಯ ಜಯ ಜಯ!
ಜಯತು ಪೂರ್ವರಾಜರುಗಳೆ” ಎಂದು ಘೋಷಿಸಿ!
ಬನ್ನಿರಲ್ಲ, ಬನ್ನಿರೆಲ್ಲ ಧನ್ಯರಾದೆವು;
ದೊರೆಯ ಬೆಳ್ಳಿಹಬ್ಬವಿಂದು ವಿಶ್ವ ನಲಿಯಲಿ.
ರಾಮಕೃಷ್ಣ ಬಾರೆರೈ
ಶ್ರೀವಿವೇಕ ಬಾರೆರೈ
ವೇದವ್ಯಾಸ ಬಾರೆರೈ
ಕಾಳಿದಾಸ ಬಾರೆರೈ
ಬೇಡಕವಿಯೆ ಬಾರೆರೈ!
ದೇವಿಸೀತೆ ಬಾರೆಲೌ;
ಗೌರಿ ಗಾರ್ಗಿ ಬನ್ನಿರೌ;
ಮೈತ್ರೇಯಿ ಬಾರೆಲೌ!
ಬಾರೆಲವ್ವ ವೀರನಾರಿ, ದೇವಿ ದ್ರೌಪದಿ;
ಬಾರೆಲವ್ವ ಧನ್ಯ ನೃಪರನೊಲಿವ ಜಯಸಿರಿ!
ಬನ್ನಿರೆಲ್ಲ “ಸ್ವಸ್ತಿ” ಎಂದು ದೊರೆಯ ಹರಸಿರಿ;
ಕೃಷ್ಣರಾಜ ರಾಜಋಷಿಗೆ ವಿಜಯವಾಗಲಿ!
ಬೆಳ್ಳಿಹಬ್ಬವಾಗಿ ಹೊನ್ನಹಬ್ಬವಾಗಲಿ!
ಹೊನ್ನಹಬ್ಬ ಮುಗಿಯೆ ರನ್ನಹಬ್ಬವಾಗಲಿ!
ನಮ್ಮ ರಾಜ ನಮ್ಮ ದೊರೆ ಚಿರಾಯುವಾಗಲಿ!
ಶ್ರೀನಿವಾಸ ಕೃಪೆಯೊಳೆಮ್ಮ ದೊರೆಯ ಪೊರೆಯಲಿ!*

೧೯೨೭


* ಮೂವತ್ತು ವರ್ಷಗಳ ಹಿಂದೆ ಬರೆದ ಈ ಕವನ ಇದುವರೆಗೆ ಯಾವ ಸಂಕಲನದಲ್ಲಿಯೂ ಸೇರಿರಲಿಲ್ಲ. ಇದರ ಪ್ರತಿಯೂ ಕವಿಯ ಬಳಿ ಇರಲಿಲ್ಲ. ಮಿತ್ರರೊಬ್ಬರು ಅದರ ಪ್ರತಿಯನ್ನು ಒದಗಿಸಿ, ಅದನ್ನು ಇಲ್ಲಿ ಸೇರಿಸಲು ಅವಕಾಶ ಕಲ್ಪಿಸಿಕೊಟ್ಟುದಕ್ಕಾಗಿ ಅವರಿಗೆ ಕೃತಜ್ಞನಾಗಿದ್ದೇನೆ. ರಾಜತ್ವವೇ ಸಂಪೂರ್ಣವಾಗಿ ನಶಿಸಿ ಹೋಗಿರುವ ನವೀನ ಭಾರತದಲ್ಲಿ ಈ ಕವನಕ್ಕೆ ಒಂದು ಐತಿಹಾಸಿಕ ಮಾತ್ರವಾದ ಬೆಲೆ ಇರಬಹುದು ಅಲ್ಲದೆ ಈ ಕವಿಯ ಮೊದಲ ತೊದಲ ಭಾಷಾಸ್ವರೂಪ ಮತ್ತು ವಸ್ತು ಸ್ವರೂಪ ಏನಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಲೂಬಹುದು.