ಮನೆಮನೆಯಲಿ ನೀನಾಗಿಹೆ ಗೃಹಶ್ರೀ;
ಹೆಸರಿಲ್ಲದ ಹೆಸರು ನಿನಗೆ ‘ಗೃಹಸ್ತ್ರೀ’!
ಹೇ ದಿವ್ಯ ಸಾಮಾನ್ಯೆ,
ಹೇ ಭವ್ಯೆ ದೇವಮಾನ್ಯೆ,
ಚಿರಂತನ ಅಕೀರ್ತಿಕನ್ಯೆ,
ಅನ್ನಪೂರ್ಣೆ, ಅಹಂಶೂನ್ಯೆ,
ನಮೋ ನಿನಗೆ ನಿತ್ಯಧನ್ಯೆ!

ರಾಷ್ಟ್ರಸಭಾ ಅಧ್ಯಕ್ಷಿಣಿ
ಶ್ರೀಮತಿ ಆ ಸರೋಜಿನಿ,
ಝಾನ್ಸಿರಾಣಿ ಲಕ್ಷ್ಮಿಬಾಯಿ
ಅವರಿಗೆಲ್ಲ ಮಹಾತಾಯಿ
ನೀನೆ ಬಸಿರು, ನೀನೆ ಉಸಿರು,
ನೀನಿದ್ದರೆ ಅವರ ಹೆಸರು!
ಭದ್ರತಾ ಸಮಿತಿಯಲ್ಲಿ
ವಿಜಯಲಕ್ಷ್ಮಿವಾಗ್ಮಿತೆ
ಆಧ್ಯಾತ್ಮಿಕ ಸಂಪತ್ತಿನ
ನಿನ್ನ ಭೂಮದಿದಿರಿನಲ್ಲಿ
ರಾಜಕೀಯದಲ್ಪತೆ!

ಅಡುಗೆ ಮನೆಯೆ ಪರ್ಣಶಾಲೆ;
ಒಲೆಯ ಅಗ್ನಿ ಮಖಜ್ವಾಲೆ!
ಬಿಡುವಿಲ್ಲದ ಕಟು ತಪಸ್ಯೆ:
ಹುಣ್ಣಿಮೆಯೂ ಅಮಾವಾಸ್ಯೆ!
ಆದರೂ ಅದೀನಾಸ್ಯೆ
ನೀನೆ ನಮಗೆ ಧೈರ್ಯ, ಆಶೆ!
ನಿನ್ನ ಪಾದಕಿದೋ ಪೂಜೆ:
ಪೂತ ಕವನ ಧವಳ ಲಾಜೆ!
ಬೆಂಕಿ, ಹೊಗೆ; ಹೊಗೆ, ಬೆಂಕಿ!
ಮಸಿ, ಮುಸುರೆ; ಮುಸುರೆ, ಮಸಿ!
ಅದರೇನು? ನಿಶ್ಯಂಕಿ
ಚೌಧುರಾಣಿ ಮಹೀಯಸಿ!
ನೀನೆ ಗರತಿ, ನೀನೆಯೆ ರತಿ,
ಎದೆ ಎದೆಗೂ ಹೂವಾರತಿ:
ನೀನಿರದಿರೆ ಲೋಕದ ಗತಿ
ದುರ್ಗತಿ, ಮೃತಿ, ದೇವರೆ ಗತಿ!
ರಕ್ಷಿಸು, ಓ ದೈನಂದಿನ
ಸಂಸಾರದ ರಸರೂಪದ
ಚಿರ ತಾಪಸಿ, ಸುರ ರೂಪಸಿ,
ಯತಿಸತಿ ಶಿವೆ, ಓ ಪಾರ್ವತಿ!

ಹಿಡಿಯದಿರಲಿ ನಿನಗಾದರು
ಗಂಡಸರಾ ಕುತ್ತ:
ಪ್ರಖ್ಯಾತಿಯ ಪಡೆಯುವೊಂದು
ಪ್ರಾಪಂಚಿಕ ಪಿತ್ತ!
ಹೊಸಲಾಚೆಗೆ ನೀನೋತರೆ
ಹೊಸಲೀಚೆಗೆ ಬೆಳಕಿಲ್ಲ:
ಹೆಸರಾಸೆಗೆ ನೀ ಸೋತರೆ
ಉಸಿರಸೆಯೆ ನಮಗಿಲ್ಲ!

ನಿನ್ನಿಂದಲೆ ಹಿಮ್ಮೆಟ್ಟಿದೆ
ಜನ ಜನದಾ ಕುಸಂಸ್ಕ್ರತಿ;
ನಿನ್ನಿಂದಲೆ ಸೆಡೆತಡಗಿದೆ
ಮನಮನದಾ ಅಸಂಸ್ಕ್ರತಿ.
ರಾಮಾಯಣ ಮಹಾಭಾರತ
ಶಾಕುಂತಲ ಕಾದಂಬರಿ
ಬಹುಕವಿಗಳ ರಸಸೃಷ್ಟಿಯ
ಬಹುಕಲೆಗಳ ರಸದೃಷ್ಟಿಯ
ತುಷ್ಟಿಗೆ ಮೇಣ್ ಪುಷ್ಟಿಗೆ ನೀನ್
ದೇವತೆಯಾಗಿರುವೆ;
ಆ ಸೀತೆಯೊ ಮಾಶ್ವೇತೆಯೊ
ಸಾವಿತ್ರಿಯೊ ದಮಯಂತಿಯೊ
ಆರಾದರು ಸರಿಯೆ
ಹೆಗಲೆಣೆ ನಿನಗಾ ಪೆರ್ಮೆಗೆ
ಪಿರಿದನು ನಾನರಿಯೆ!

ತಾಳುತ್ತಿದೆ ಬಾಳುತ್ತಿದೆ
ನಿನ್ನಿಂದೆಮ್ಮ ಇಳೆ.
ಹೇ ದಿವ್ಯೆ, ಸಾಮಾನ್ಯೆ,
ಮನೆಮನೆಯಾ ಊರ್ಮಿಳೆ,
ಗೃಹಿಣಿ, ಗರತಿ, ದೇವಿ, ತಾಯಿ,
ಹೆಸರಿಲ್ಲದ ಮಹಿಳೆ,
ಮಣಿವನು ಇದೊ ನಿನ್ನಡಿಗೀ
ಹುಸಿವೆಸರಿಗೆ ಮರುಳಾಗದ
ಹೆಸರೊಲ್ಲದ ಹಸುಳೆ!

ಸೌಖ್ಯದ ನೆಲೆ, ಶಾಂತಿಯ ಮನೆ,
ಸೌಂದರ್ಯದ ಶಿವಮಂದಿರೆ,
ಸಾಮಾನ್ಯದ ಸಿರಿತವರೆ,
ಹಿಡಿಯದಿರಲಿ ನಿನಗವರಾ
ಹೊಗಳಿಕೆಯಾ ಕೀರ್ತಿಯ ಶನಿ,
ಗೃಹ ಗೃಹ ಗೃಹ ತಪಸ್ವಿನೀ!
ಪತ್ರಿಕೆಗಳ ದಪ್ಪಕ್ಷರ
ಮೇಣ್ ಚಿತ್ರದ ಕ್ಷಣಿಕಕೆ ನೀ
ಬೆಪ್ಪಾಗದೆ, ಹೇ ಜನನೀ,
ಒಪ್ಪಾಗಿರು, ಒಲವಾಗಿರು;
ನಿಜಮತದಲಿ ಋಜುಪಥದಲಿ
ನಡಸೆಮ್ಮನು, ಋತದರ್ಶಿನಿ
ಹೇ ಮನುಕುಲ ಕಲ್ಯಾಣೀ

೧೭-೩-೧೯೫೦