ಓಂ
ಅಸತ್ತಿನಿಂದೆ ಸತ್ತಿನೆಡೆಗೆ
ತಮಸ್ಸಿನಿಂದೆ ಜ್ಯೋತಿಯೆಡೆಗೆ
ಮೃತ್ಯುವಿಂದೆ ಅಮೃತದೆಡೆಗೆ
ಕರೆದೊಯ್ಯುವ ತಾರಿಣಿ,
ವಿದ್ಯೆಯಾಗಿ ಮುಕ್ತಿಯಿವ
ಅವಿದ್ಯಾಪರಿಹಾರಿಣಿ,
ಬಂಧನಭವತಾರಿಣಿ,
ನಮೋ
ಸಕಲ ರಸಾನಂದ ಕಲಾ
ಕ್ಷೇತ್ರರೂಪಧಾರಿಣಿ,
ನಮೋ ನಮೋ ನಮೋ
ಹೇ ತಮೋಹಾರಿಣಿ!

ಏಳು, ಬ್ರಹ್ಮಹೃದಯ ಸದ್ಮೆ,
ರಸಋಷಿ ಕವಿ ಪ್ರಾಣಪದ್ಮೆ:
ಹೇಳು, ಎಲ್ಲ ಬಲ್ಲ ಜಾಣೆ,
ನಿಖಿಲ ಜಗಜ್ಜೀವ ವೀಣೆ
ನೀನಿಲ್ಲದೆ ನಾನು ಕಾಣೆ
ಸೃಷ್ಟಿಯ ಪರಮಾರ್ಥವ.
ಓ ಪ್ರಾಚ್ಯೆ, ಪಾಶ್ಗಾತ್ಯೆ,
ಔತ್ತರೆಯೆ, ದಾಕ್ಷಿಣಾತ್ಯೆ, ಸರ್ವಮಿಥ್ಯೆ, ಪೂರ್ಣಸತ್ಯೆ,
ಕಲಿಸು ಚಿದಾನಂದಚಿತ್ತೆ,
ಬಾಳ್ವೆಯ ಪುರುಷಾರ್ಥವ.

ಹೇ ಆನಕ್ಷರೇ,
ಹುಟ್ಟುವಂದು ತಾಯಿಯಾದೆ;
ಹೊರೆಯುವಂದು ತೊಟ್ಟಿಲಾದೆ;
ಬೆಳೆಯುವಂದು ಗದ್ದೆ, ತೋಟ,
ಸಹ್ಯಾದ್ರಿಯ ಚೆಲುವುನೋಟ,
ಬಾನು, ಮುಗಿಲು, ಬೆಟ್ಟ, ಕಾಡು,
ಹುಲಿಯ ಬೀಡು ,ಹಕ್ಕಿಹಾಡು,
ಹೊಳೆಯ ಮಳೆಯ ಮಲೆಯ ನಾಡು-
ನೂರು ರೂಪ ನೂರು ಭಾವಗಳಲಿ ಕಾವ್ಯಬೋಧೆ
ಹೃದಯದಲ್ಲಿ ಸ್ಫುರಿಸುವಂತೆ ಪ್ರಕೃತಿಮಾತೆಯಾದೆ,
ಭವ್ಯಸೃಷ್ಟಿರೂಪಿಣಿ,
ಹೇ ಗುರುಸ್ವರೂಪಿಣಿ!

ರಸಕ್ಷೀರಶರಧಿಯಲ್ಲಿ ನಿನ್ನ ದಿವ್ಯಹಸ್ತ
ಕಡೆಯುತಿರಲು ಮೂಡಿತೊಂದು ಮೇರುಸದೃಶ ಹುತ್ತ:
ಸುಪ್ತಫಣಿಯ ಗುಪ್ತರೋಷವಾಗುವಂತೆ ತಪ್ತ
ಸುರುಳಿಬಿಚ್ಚುತಿತ್ತು ಅಲ್ಲಿ ಆದಿಕವಿಯ ಚಿತ್ತ!
ಹೇ ಅರೂಪಮೋಹಿನಿ,
ನಿನ್ನ ಸುಳಿಗೆ ಸೆಳೆದ ಮನಸು
ಹಸುಳೆಯುಸಿರ ಹೊನ್ನ ಕನಸು
ಹೊಸತು ರಸದ ಹಸಿವೆಯಿಂದ ಸುಳಿದುದತ್ತ ಇತ್ತ:
ಜೀವಮಧುಪ ಕುಟಜಕೋಟಿಗಳಲಿ ವಿಹರಿಸುತ್ತ
ಪುಷ್ಪಲಕ್ಷವಕ್ಷಗಳನು ಚುಂಬಿಸುತ್ತ
ಹೀರಿ ಹಾರಿ ಝೇಂಕರಿಸಿತು ಮಕರಂದ ನಿಮಿತ.
ಸೇರ್ವೆಯಾಯ್ತು ಮಧುಪಟಲದಿ
ಜೇನ್ ಗಣ್ಣಿನ ಶತಜಟಿಲದಿ
ಕರ್ಣಾಟಕ ಸರಸ್ವತಿಯ ಜಿಹ್ವೆಯಮೃತ ವಿತ್ತ!

ಹೇ ಮೃತ್ಯುಮಾಧುರೀ,
ಸಾವಿನೊಂದು ನೋವಿನೊಂದು ಹಾವಿನಂತೆ ಬಂದೆ;
ಹುತ್ತಹೊಕ್ಕು ಕವಿಯನೆಳೆದು ದೂರ ಕರೆದು ತಂದೆ:
ಸಹ್ಯಶಿಶುಗೆ ಚಾಮುಂಡಿಯೆ ಸ್ತನ್ಯವಾಗೆ ನಿಂದೆ!
ಹೊಸತೆ ಹುಟ್ಟಿದೆಳೆಯ ಕರು
ತಾಯ್ಗೆಚ್ಚಲನರಸುವೋಲ್
ಕವಿಯಾತ್ಮದ ತೃಷೆಯ ತರು
ತಡವಿ ಹುಡುಕಿ ಚಾಚಿರೆ ತೋಳ್,
ಕೃಪಾಮಯೀ ಜಗಜ್ಜನನಿ
ಜ್ಞಾನಾಮೃತ ದಿವ್ಯಸ್ತನಿ,
ನಿನ್ನ ವಕ್ಷದಮೃತಕಲಶ ಹಸಿದ ತುಟಿಗೆ ತಾಗಿ
ರಸವನೀಂಟಿದತಲ ಭೋಗಿ
ಅತುಲ ವೈನತೇಯನಾಗಿ
ಅಮರಗಂಗೆ ಭಗೀರಥಗೆ ಒಲಿದಳಪಗೆಯಾಗಿ!
ಗಂಗೆಯೊಡನೆ ಥೇಂಸಿಗಾಯ್ತು ಗಹನ ಗಗನಸಂಗಮ;
ನೆರೆಯುಕ್ಕಿದ ಕಾವೇರಿಗೆ ಸೊಗಸಿದುವು ವಿಹಂಗಮ:
ವಂದಿಸುತ್ತ ಸಂಧಿದ್ದುವು ಧನ್ಯ ಪೂರ್ವಪಶ್ವಿಮ!

ಏನದ್ಭುತ, ಏನ್ ಸಾಹಸ, ಕೃತಿಲೋಕಾರ್ಷಣ:
ಶತಚಿಂತನ ರಸಭಾವನ ರೋಮಾಂಚನ ಘರ್ಷಣ!
ಕ್ಷೀರಾಬ್ಧಿಯ ದೇವಾಸುರ ಫಣಿಮಂಥನ ಮಂದರ,
ಐರಾವತ ಉಚ್ಚ್ಯೆಃಶ್ರವ ಅಮೃತ ಲಕ್ಷ್ಮಿಬಂಧುರ,
ಹಾಲಾಹಲ ವಿಷಘೋರವನೀಂಟುವ ಶಿವ ಸುಂದರ:
ಏನದ್ಭುತ, ಏನ್ ಸಾಹಸ, ಕೃತಿಲೋಕಾಕರ್ಷಣ್!
ಕವಿಧಮನಿಯ ರಕುತದಲ್ಲಿ
ತೇಲಾಡಿತು ಹಿಮಾಲಯ;
ಉಚ್ಛ್ವಾಸದಿ ಸ್ಪಂದಿಸಿತಾ
ಸಹ್ಯಾದ್ರಿಯ ಅರಣ್ಯಚಯ!
ಶತ ಶತ ಶತ ವಿಕಸಿತ ದಲವಾದುದು ಋಷಿಹೃನ್ನಿಯ:
ಅವತರಿಸಿತು ತವ ಚರಣದ ಮಧುಛಂದೋ ನಾಟ್ಯಲಯ;
ವಿಶ್ವಪ್ರಜ್ಞೆಗೆ ವೇದಿಕೆಯಾದುದು ಶ್ರೀ ವಿದ್ಯಾನಿಲಯ!

ಚಿದ್ರೂಪಿಣಿ ಭರತಾರಿಣಿ ಉತ್ತರರೋತ್ತರೆ
ಕವಿಯನೆತ್ತಿ ರಕ್ಷಿಸಲ್ಕೆ
ಬಂದಳಿತ್ತ ದಕ್ಷಿಣಕ್ಕೆ
ಶ್ರೀ ವಿವೇಕ ಪರಮಹಂಸ ದಕ್ಷಿಣೇಶ್ವರೆ;
ಕಣ್ದೆರೆಯಿತು ಬೋಧನಾ
ಗರಿಗೆದರಿತು ಸಾಧನಾ
ಅಲೋಕಲೋಕ ಯಾತ್ರಿಯಾಯ್ತು ದಿವ್ಯದರ್ಶನ.
ಲಲಿತಾದ್ರಿಯ ಲಲಿತಸಂಗ
ಚಾಮುಂಡಿಯ ರುದ್ರರಂಗ
ಕಾರಂಜಿಯ ಜಲತರಂಗ
ತಾವಾದುವು ವಿದ್ಯಾಂಬಿಕೆಯಂತರಂಗ!
ಬಾನಾದುದು ಭಗವಂತನ ಮಾನಸ ಚಿದ್ರೂಪ:
ಬುವಿಯಾದುದು ಭಗವತಿಯಾ ಮೈತ್ರಿಯ ಮೃದ್ರೂಪ:
ಜಗವೆಲ್ಲ ತಾನಾದುದು ರಸಲೀಲಾರೂಪ!
ರಸದೃಷ್ಟಿಗೆ ಬ್ರಹ್ಮಾಂಡವೆ ಋತಚಿನ್ಮಯ ಕಾವ್ಯಮಯ;
ಅನುಭಾವದ ವಿಜ್ಞಾನಕೆ ಅನ್ನವು ಆನಂದಮಯ!

ಆಕಾಶದ ಆನಂತ್ಯದಿ, ಹೇ ಅನಂತೇ,
ಗರಿಗೆದರಿದೆ ಖಗಚೇತನ ಚಿದಾನಂದ ಚಿಂತೆ.
ಹಾರುತ್ತಿದೆ! ಏರುತ್ತಿದೆ!
ಅಗ್ನಿಗೆ ಬಳಿಸಾರುತ್ತಿದೆ!
ಸುಗಿಯದವೋಲ್ ಶೂನ್ಯತೆಗೀ ಮಮಕಾರದ ಚಿಕ್ಕೆ,
ಋತಚಿನ್ನಯಿ, ಕ್ರತುದೀಕ್ಷಿತೆ, ನಿನ್ನಯ ಕೃಪೆಯಕ್ಕೆ
ಸಾಧನದೀ ಸಾಹಸಕ್ಕೆ
ಸೋಲದವೋಲ್ ರೆಕ್ಕೆ!
ಪೂರ್ಣತೆಯಿಂದೈತಂದೀ ಪೂರ್ಣಸೃಷ್ಟಿ
ಪೂರ್ಣತೆಯಿಂ ಪಡೆಯುವಂತೆ ಪೂರ್ಣಪುಷ್ಟಿ
ಅರವಿಂದದವೋಲ್ ಅರಳಲೆಮಗೆ ಯೋಗಪೂರ್ಣದೃಷ್ಟಿ!
ಓಂ ಶಾಂತಿಃ ಶಾಂತಿಃ ಶಾಂತಿ

೧೯೫೧