ವ್ಯಕ್ತಿಗಿರ್ಪ್ಪತ್ತ್ಯೆದು ವರ್ಷಗಳ್ ಪರಿದಾದೊಡಂ
ವಿಶ್ವವಿದ್ಯಾನಿಲಯದಂತಪ್ಪ ಸಂಸ್ಥೆಗದು
ಬರಿಯಲ್ಪಮೈಸೆ! ಅದರಿಂದಮಾಂ ಮುಂದೆ ಆ
ನಿನ್ನ ಸ್ವರ್ಣೋತ್ಸವಕೆ ಮುಡಿಪನಿಟ್ಟಿಹೆನೋಂದು
ಪರಿಣತಶ್ರೇಷ್ಠಪ್ರಗಾಥಮಂ. ಇಂದುಲಿವ
ಈ ಕವನವೊಂದು ಶಾಸ್ತ್ರಕ್ರಿಯಾಕರ್ಮದೋಲ್
ಬರಿ ಸಂಪ್ರದಾಯಮೆಂದರಿವಿದೌ, ಓ ನನ್ನ
ವಿಶ್ವವಿದ್ಯಾಮಾತೆ. ಶಿಶುತನವನುತ್ತರಿಸಿ
ಬಾಲ್ಯ ಕೌಮಾರಗಳ ನಡುವೆ ನಡೆವೀ ನಿನಗೆ
ನಾಂ ಚಿರಕೃತಜ್ಞನೆಂ: ಬುದ್ಧಿಗನ್ನವನಿತ್ತೆ;
ಹೃದಯಕಮೃತವನಿತ್ತೆ: ಮೇಣಂತೆ ಲೌಕಿಕದ
ಜೀವಿತಕ್ಕಶ್ರಯವನಿತ್ತೆ. ನಿನ್ನ ಬೆಳಕಿಗೆ
ಪೊಕ್ಕು,ಕವಿ ಋಷಿ ಕೃತಿಯ ರಸಸುಖವನೀಂಟಿದೆನ್;
ನಾನಮುಖದ ದಿವ್ಯ ವಿಜ್ಞನಿಗಳ ಜಗಜ್
ಜಿಜ್ಞಾಸೆಯಿಂ ಗುಹ್ಯಸೃಷ್ಟಿಯ ರಹಸ್ಯಮಂ
ಸವಿದೆನಾಂ, ಬುದ್ಧಿಯ ಕ್ಷುರಸ್ಯ ಧಾರಾ ನಿಶಿತ
ಜಿಹ್ವೆಯಿಂ. ಮೇಣ್, ನರರ ನಡುವಿರ್ದೊಡಂ ದಲ್
ಚಿರಂತನೇಕಾಂಗಿ ನಾಂ, ಪಡೆದೆನೊರ್ವನ ಪುಣ್ಯ
ಸಹವಾಸಮಂ. ದಿವಂಗತನಾದನಾತನುಂ
ಕವಿಯ ಕೃತಿಗಳನೊಲಿದು ಕೇಳ್ವ ಲೋಕಕೆ ಕಿವುಡು
ಬರ್ಪಂತೆ. ಓ ನನ್ನ ವಿಶ್ವವಿದ್ಯಾಜನನಿ,
ಹೇ ದೇವಿ, ಒರೆದಾ ಸಮಸ್ತ ಕೃಪೆಗಳಿಗೆ ನಾಂ
ನಿನಗಿದೊ ಕೃತಜ್ಞನೆಂ. ಮಣಿವೆ ಸಾಷ್ಟಾಂಗದಿಂ
ನಿನ್ನಡಿಗೆ, ಹರಕೆಯಂ ಬೇಡಿ.

ಕೇಳ್, ಅದೊಂಡಂ
ನಿನ್ನ ಕವಿಶಿಶುವ ಪೆರ್ಮೆಯ ನುಡಿಗಳಂ; ಕ್ಷಮಿಸಾ
ಕಿಡಿಗಳಮ್: ದೇವಿ ನೀನೊರ್ವಳಲ್ತೆನ್ನೆರ್ದೆಯ
ಗುಡಿಯ ಗೋಪುರ ಕೃತಿಗೆ ಕಾರಣಲ್. ನಿನಗಿನ್
ಮಿಗಿಲ್ ಇರ್ಪುವಾ ಗಿರಿ ಅರಣ್ಯ ಸಹ್ಯಾದ್ರಿಯುಂ,
ಮತ್ತಮಾ ದಕ್ಷೀಣೇಶ್ವರ ದೇವಮಾನವನ
ತಪಕೆ ಸಿದ್ಧಿಗೆ ಮೆಯ್ಯವೋಲಿರ್ಪ ಗುರುಮಂದಿರಂ.
ನೀಂ ಬೋಧಿಸಿದ ತತ್ತ್ವಗಳನಲ್ಲಿ ಸಾಧಿಸಿದೆ
ನಾಂ. ಆ ಸ್ವತಂತ್ರತೆಗೆ ನೀನಿನ್ನುಮಾಸೆಯಿಂ
ನೋಂತಿರ್ಪೆಯೌ. ಸಂಕಟದ ಸೊಲ್ಲಿದಂ, ತಾಯೆ,
ಕೇಳ್: ನೀನಸ್ವತಂತ್ರೆ! ನಾಡಿಗಿಲ್ಲದುದೆಂತು
ನಿನಗೆ ದೊರೆಕೊಳ್ವುದೌ, ಜನನಿ? ನಮಗಿಲ್ಲದುದು
ನಿನಗೆಲ್ಲಿ? ನಾಮಲ್ತೆ ನಿನ್ನುಸಿರ್? ಮುಂದೆ ಆ
ನಿನ್ನ ಸ್ವರ್ಣೋತ್ಸವಕ್ಕಾದೊಡಂ ಕವಿಯ ಈ
ಹೆಬ್ಬಯಕೆ ಕೈಗೂಡಿ, ಇಂದಿನ ಬೃಹನ್ನಿಶೆಯ
ನೇಮಿಯಿಂ ಮೂಡಿ ಬಹ ಸ್ವಾತಂತ್ರ್ಯ ಸೂರ್ಯನಾ
ದಿವ್ಯ ಜ್ಯೋತಿಃಸ್ಫೂರ್ತಿಯಿಂದೆನ್ನ ಅಂದಿನಾ
ಪಕ್ವತರ ಮಧುರ ಪರಿಣತ ವಾಣಿ ಉಲಿವವೋಲ್
ಮಹತ್ತರ ಪ್ರಗಾಥಮಂ, ಆ ಸರಸ್ವತಿ, ದೇವಿ,
ಸಿರಿಗನ್ನಡಂ ಗೆಲ್ವವೋಲೆಮಗೆ ದಯೆಗೆಯ್ಗೆ!

೧೦-೭-೧೯೪೧