ದಿವ್ಯಮಂತ್ರವ ಜಪಿಸು; ಬೆಂಬಲ ಮಹಾತ್ಮನಿಗೆ!
ದೂರವೆನಿತಾದರೇನ್ ಪ್ರಾರ್ಥನಾ ಜವಕೆ?
ಇಂದೊಬ್ಬನೆಯೆ ನಡೆದನಾ ದೈವವನು ನೆಮ್ಮಿ
ಮತವೈರ ದಹಿಸಿದಾ ಶ್ರೀರಾಮಪುರಕೆ!
ನಿನ್ನ ಹೆಸರಿನ ಹಳ್ಳಿ ಅದು, ಓ ರಾವಣಾರಿ;
ನಿನ್ನ ನಾಮದ ಭಕುತನಾ ಪೂಜ್ಯಗಾಂಧಿ.
ನಿನ್ನ ಚರಿತೆಯನುಲಿದ ಕವಿಗೆ ನೀಡೀ ಭಿಕ್ಷೆ:
ಬೇಡುತಿಹೆನಸಹಾಯನಿಗೆ ಆಗು ರಕ್ಷೆ!
ಶಂಕೆಯೇತಕೆ, ಹೃದಯ? ಇರಲು ಜಗದೀಶ ದಯಾ
ರಕ್ಷೆಯಾಗದೆ ಪೇಳ್‌ ಅಮರ ಲಕ್ಷಸೇನೆ?
ಕೋಟ್ಯಾತ್ಮಸಂಬಂಧಿ ಪೇಳೊಂಟಿಗನೆ ಗಾಂಧಿ?
ಕೋಟಿ ಹೃತ್ ಪ್ರಾರ್ಥನಾ ಕೋಟಿ ಫಣೆಗಳನೆತ್ತಿ
ಕೋಟಿ ನಿಲ್ವನದೊ ಧರ್ಮಫಣಿರಾಟ್‌ ತಾನೆ!

೨೨-೧೧-೧೯೪೬