ಓ  ಕರೆಯುತಿದೆ ನಿನ್ನನೀ ನಮ್ಮ ತಪ್ತ ಭೂಮಿ;
ಓ ಏಳು, ಶ್ರಿ ಗೋಮಟಸ್ವಾಮಿ!
ಏಳು, ಓ ಏಳು, ಕಡೆದು ಜಡತಾ ಅಚಿನ್ನಿದ್ರೆಯಮ್;
ಏಳು, ಓ ಏಳು, ಒಡೆದು ಶತಶತಮಾನ ಮೌನದ ಶಿಲಾಮುದ್ರೆಯಂ!
ಕರುಣೆಯಿಂದೆಮಗಾಗಿ ಏಳಯ್ಯ ನಿರ್ವಾಣ ಸುಪ್ತಿಯಿಂ,
ನಿನ್ನೊಂದು ಪರಿಪೂರ್ಣತಾ ದಿವ್ಯ ತೃಪ್ತಿಯಿಂ!
ನಮ್ಮ ಹೃದಯದ ಬೃಹಚ್ಚೇತನದ ಮೂರ್ತಿಯಾಗೇಳು ಬಾ;
ಜನ್ಮ ಜನ್ಮಾಂತರದ ಸಂಸ್ಕಾರ  ಸರ್ವಸ್ವ ಸ್ಪರ್ಶಮಣಿಯಾಗೇಳು ಬಾ!
ಹಿಂದಣಾಲಸ್ಯದ ತಮಿಸ್ರಕ್ಕೆ ರವಿದೇವನಾಗಿ ಓ ಮೂಡಿ ಬಾ;
ಮುಂದಣ ಅಭೀಪ್ಸೆಯಾ ಕೈರವಕೆ ಕುಮುದೇಂದುವೋಲುದಿಸಿ ಬಾ!
ಅನುಗ್ರಹಿಸು ಬಾ;
ಉದ್ಧರಿಸು ಬಾ;
ನಿನ್ನ ಜೀರ್ಣೋದ್ಧಾರವೆಮ್ಮ  ಜೀರ್ಣೋದ್ಧಾರವಾಗೆ ಆಶೀರ್ವದಿಸು ಬಾ!

ನಿನ್ನ ಜೀರ್ಣೋದ್ಧಾರಮಂ?
ನಗದಿರು, ಮಹಾಗುರುವೆ; ನಮ್ಮದಿದು ಮರ್ತ್ಯಾವಿವೇಕಂ!
ನಿತ್ಯನೂತನನಪ್ಪ ನೀಂ ಜೀರ್ಣನೆಂತಪ್ಪೆಯಯ್?
ಸರ್ವ ಪರಿಪೂರ್ಣನಿಗೆ ನಿನಗೆ ಉದ್ಧಾರವೆಂದರರ್ಥವೇನಯ್?
ಅಲ್ತಲ್ತು;
ನಿನ್ನ್ಜಿರ್ಣೋದ್ಧಾರಮಲ್ತು:
ಹಾಳಾದುದೆಮ್ಮ ಬಾಳಿಂದು ತಾಂ ಮರಳಿ ಪಡೆಯುತಿದೆ ತನ್ನುದ್ಧಾರಮಂ!
ಕೊಳೆ ತಳ್ತುದೆಮ್ಮ ಬಾಳ್ಗಿಂದಾಗುತಿದೆ ಮೀಹದೊಲ್ ಮಸ್ತಕಾಭಿಷೇಕಂ:
ಜ್ಞಾನ ಮೇಣ್ ಭಕ್ತಿ ಮೇಣ್ ವೈರಾಗ್ಯ ಸಂಕೇತದಾ
ಅಮೃತ ಘೃತ ದಧ್ಯದಿ ಪುಣ್ಯಾಭಿಷೇಕಂ!

ಕನ್ನಡದಾದಿಯ ಕಬ್ಬಿಗನಾ ಪಂಪಂ
ತನ್ನಾದಿಪುರಾಣದೊಳೊರೆದನು ನಿನ್ನಧ್ಯಾತ್ಮದ ಪೆಂಪಂ,
ಧೈರ್ಯದ ಔದಾರ್ಯದ ಮೈತ್ರಿಯ ಮೇಣ್ ತ್ಯಾಗದ ಗುಣ್ಪಂ.
ಅದನಾಲಿಸದಾ ಕವಿಕಲಿ ಚಾವುಂಡೇಶಂ
ಆ ಭವ್ಯತೆಗೋರ್ ಪ್ರತಿಮೆಯನಾಶಿಸಿ ಪುಡುಕುತ್ತಿರೆ,
ಅನುಭವ ಭೂಮತೆಗಾಕಾರಮ ಕೋರುತ್ತಿರೆಯಿರೆ
ಕಳದುಜ್ಜುಗದಿಂ ಸಂಜೆಯ ಪಾಳೆಯಕೂರ್ ದಿನಮೈತರುತಿರೆ,
ಕಂಡನ್‌ ಕಲ್ವೆಟ್ಟಿನ ಕೋಡಂ.
ಬಯ್ಗಿನ ಬಾನ್ಗಿದಿರೆದ್ದುದು ಆ ಶ್ವಣಣನ ಗಿರಿಜೂಡಂ,
ಭೀಮಂ, ರುಂದ್ರಂ, ಆಕಾಶೋನ್ನತ ಗೂಢಂ!
ನಿಂದನ್ ನಟ್ಟಾ ಎಡೆಯೊಳೆ ರಸಯೋಗಪ್ರತಿಭಾರೂಢಂ:
ಕಣಡನ್; ಕಣಡನ್; ಕಣಡನ್; ಕಣಡನ್;
ಕೊರೆಯುವವೋಲ್ ಕೊರೆಯುವವೋಲ್ ನೋಡಿದನಾ ಕಲ್‌ ಗುಂಡನ್‌.
ಕಾಣ್ಕೆಯೆ ಕಂಡರಿಸಿದವೋಲ್ ಮೂಡಿದನಾ ಗೊಮಟೇಶಂ,
ತುಂಬಿದ ಶ್ರೀಗಾತ್ರಕೆ ಕುನಿಯಿತೊ ಎನೆ ದಿಗ್‌ದೇಶಂ,
ಸಾರ್ಥಕಮಾಗಲ್‌ ಚಾವುಂಡೇಶ್ವರ ಭೂಮಾವೇಶಂ!
ಆ ಕಂಡುದನೆಯೆ ಕಂಡರಿಸಿದನೈಸಲೆ ಶಿಲ್ಪಿ,
ಕನ್ನಡನಾಡಿಗೆ ಕಣ್ಣಾಗಲ್‌ ಪೆರ್ಮೆಯ ಪೆರ್ಬಂಡೆಯ ಕಲ್ ಕಲ್ಪಿ!

ದಿಗ್ವಿಜಯಿಯಾದೊಡಂ ವಿಜಿಗೇಷುವೃತ್ತಿಯಾ
ಭರತ ಚಕ್ರೇಶ್ವರಂ ನಿನ್ನಗ್ರಜಂ
ಅಂದು ‘ಆ ವೃಷಭಗಿರಿ ಮೇಖಳಾಭಿತ್ತಿಯೊಳ್
ಆತ್ಮೀಯ ವಿಶ್ವ ವಿಶ್ವಂಭರಾ ಮಿಜಯಪ್ರಶಸ್ತಿಯಂ’
ಕೆತ್ತಿಸಲ್‌ ಪೋಗಿ ನೋಡಿದೊಡಲ್ಲಿ ತನಗೆ ತಾವಿಲ್ಲದಂತೆ
ಪೂರ್ವ ಚಕ್ರೇಶ್ವರ ಪ್ರಶಸ್ತಿಗಳ್ ತುಂಬಿರ್ದುದಂ ಕಂಡು
ಲೋಕಮಂ ಗೆಲ್ದವಂ ಕೀರ್ತಿಶನಿವಶನಾಗಿ
ಹಮ್ಮಿಗಡಿಯಾಳಾಗಿ ಬಿದಿಯ ನಗೆಗೀಡಾಗುವೋಲ್
ದಂಡರತ್ನದಿ ಸೀಂಟಿ ಆ ಪ್ರಶಸ್ತಿಯೊಳೊಂದನಳಿಸಿ
ಕಂಡರಣೆಗೈಸಿದನ್ ತನ್ನೀ ಪ್ರಶಸ್ತಿಯಂ,
ಶಾಶ್ವತವನರಿಯದೀ ನಶ್ವರ ಪ್ರಶಸ್ತಿಯಂ:

“ಸ್ವಸ್ತಿ ಸಮಸ್ತನರೇಶ್ವರ
ಮಸ್ತಕವಿನ್ಯಸ್ತಶಾಸನಂ ಸಕಲ ಜಗ
ದ್ವಸ್ತಾರಿಕತಯಶನನ್ವಯ
ವಿಸ್ತಾರಕನಾದಿದೇವನಗ್ರತನೂಜಂ.”

“ಭುವನವಿಶೇಷಕನಿಕ್ಷ್ವಾ
ಕುವಂಶಗಗನೇಂದು ಚಕ್ರರತ್ನಾಧೀಶಂ
ನವನಿಧಿವಲ್ಲಭನಾನತ
ದಿವಿಜಗಣಂ ನೆಗಳ್ದ ನಾಭಿರಾಜನ ಮೊಮ್ಮಂ.”

“ಅವನ ದಿಗ್ವಿಜಯದೊಳೈ
ರಾವತಗಜನಿಭಗಜಂಗಳಿಂ ಭುವನತಳಂ
ತೀವಿದುದಾವನ ಸೈನ್ಯದೊ
ಳಾವರಿಸಿದ ಧೂಳಿ ಪೂಳ್ದುದಂಭೋನಿಧಿಯಂ:”

“ವೇಳಾವನಂಗಳುಂ ಕು
ತ್ಕೀಳಂಗಳುಮಾವ ನೃಪನ ಪಡೆ ನಡೆವೆಡೆ ನಿ
ರ್ಮೂಳಂಗಳಾದುವಾವನ
ತೋಳಿಂ ನಿಮಿರ್ದತ್ತು ಜಳಧಿವರಮವನಿತಳಂ:”

“ದೇವಾಂಗನೆಯರ್ ಪಾಡುವ
ರಾವನ ಜಸಮಂ ಕುಳಾಚಳಾವಳಿಯೊಳ್ ಶೌ
ರ್ಯಾವಷ್ಟಂಭದಿನಾಳ್ದವ
ನವಂ ಷಟ್ಖಂಡಮಂಡಿತಕ್ಷಿತಿತಳಮಂ”

“ಆತಂ ಭರತೇಶ್ವರನಿಂ
ತೀ ತರದಿಂ ನಿಗಳ್ದ ತನ್ನ ಕೀರ್ತಿಯನೀ ವಿ
ಖ್ಯಾತ ವೃಷಬಾದ್ರಿಯೊಳ್ ಸುರ
ಗೀತಯಶಂ ನಿಳಿಸಿದಂ ನೆಲಂ ನಿಲ್ವಿನೆಗಂ.”

‘ನಿಲ್ವಿನೆಗಂ ನೆಲಂ!’
ಅಧಿಕಾರ ಮೊಹಕ್ಕೆ ದರ್ಪಕ್ಕೆ ಏಂ ಪೈತ್ಯಮೇಂ ಚಲಂ?
ಅಂದಿನಾ ಶನಿಯೆ ತಾನಿಂದಿಗೂ ಕದಡುತಿಹುದೆಮ್ಮ ಬಾಳಂ.
ಆ ರೋಷ ಆ ದ್ವೇಷ ಆ ಅಹಂಕರದಾವೇಶಗಳೆ
ಪಿಡಿದಿರ್ಪವಲ್ತೆ ಪೀಳಿಂದಿಗೂ ರಾಜ್ಯಸೂತ್ರಂಗಳಂ?
ವಹಿಸಿರ್ಪವಲ್ತೆ ರಣನಾಟಕಕೆ ಶಕುನಪಾತ್ರಂಗಳಂ?
ಹೇ ಪೂಜ್ಯ ಬಾಹುಬಲಿ,
ಹೇ ಅಹಿಂಸಾ ಪರಮ ಧರ್ಮ ಕಲಿ,
ಆ ರೋಷ ಆ ದ್ವೇಷ ಆ ಅಹಂಕಾರಂಗಳಂ,
ಆ ಕೀರ್ತಿಲೋಭ ಮೇಣ್ ಆ ರಾಜ್ಯದಾಹಂಗಳಂ,
ನಿನ್ನಣ್ಣ ಭರತನೋಳ್ ಮೂರ್ತಿವೆತ್ತಿದಿರಾದ
ಆ ತಿಮಿರ ಅಸುರೀ ದೂತರ್ಕಳಂ
ನೀನಂದು ಧವಳಸತ್ತ್ವದಿ ಗೆಲ್ದೆಯಲ್ತೆ,
ಭರತಂವರಸಿ ವಿಶ್ವಮಡಿಗೆರಗುವೋಲ್!
ಭೋಗಶಿಖರದಿಂ ತ್ಯಾಗದಾ ಗೆಲ್ಗಂಬಮಂ ಮೆರೆದೆಯಲ್ತೆ
ಲೋಕಸರ್ವಂ ಮಣಿದು ಬೆರಗಾಗುವೋಲ್!
ಆಲಿಸಯ್, ಗುರುವೆ, ಶಾಂತಿಯ ಕಲ್ಪತರುವೆ,
ನೀನಂದು ನಿನ್ನಗ್ರಜಂಗೊರೆದಾ ವಚೋವೇದಮಂ,
ದಿಟದಿಂ ನಿಲಂ ನಿಲ್ವಿನೆಗಂ ನಿಲುವ ಮೇಣ್ ಮೀರ್ವ
ಶಾಶ್ವತದ ವಿಜಯಪ್ರಶಸ್ತಿಯಂ:
ಸರ್ವಮಾನವ ಮನೋ ವೃಷಭಗಿರಿಭಿತ್ತಿಯೊಳ್
ಚಿರಂ ಮೆರೆವ ವಜ್ರಲಿಪಿ ವಿಜಯ ಪ್ರಶಸ್ತಿಯಂ:

“ನಿನ್ನೀ ಬೆಸಸಿದ ಚಕ್ರಮ
ದೆನ್ನೀ ದೇಹಾದ್ರಿಯಂ ಗೆಲಲ್ ನಿರೆಯದು ನೀ
ಬಿನ್ನನಿದೇಕಿರ್ಪೆಯದೆಂ
ತೆನ್ನ ಗೆಲಲ್ ವಜ್ರಗಿರಿಯನಾರ್ಕುಮೆ ವಜ್ರಂ!”

“ನೆಲಸುಗೆ ನಿನ್ನ ವಕ್ಷದೊಳೆ ನಿಶ್ಚಳಮೀ ಭಟಖಡ್ಗಮಂಡಲೋ
ತ್ಪಲವನ ವಿಭ್ರಮ ಭ್ರಮರಿಯಪ್ಪ ಮನೋಹರಿ ರಾಜ್ಯಲಕ್ಷ್ಮಿ ಭೂ
ವಲಯಮನಯ್ಯನಿತ್ತುದುಮನಾಂ ನಿನಗಿತ್ತೆನಿದೇವುದಣ್ಣ ನೀ
ನೊಲಿದ ಲತಾಂಗಿಗಂ ಧರಿಮಾಟಿಸಿದಂದು ನೆಗಳ್ತೆ ಮಾಸದೇ?”

“ಅವಧರಿಸದೆ ನಿನ್ನೊಳ್ ಪಿರಿ
ದವಿನಯಮಂ ನೆಗಳ್ದ ದೋಷಮಂ ತಪದೋಳ್‌ ನೀ
ಗುವೆನಸದಾಗ್ರಹಮಂ ಬಿಸು
ಡುವುದೊರ್ಮೆಗೆ ಮೆರವುದೆನ್ನ ದುರ್ವಿಳಸನಮಂ!”

ಸ್ವಸ್ವರೂಪದ ಸಚ್ಚಿದಾನಂದ ಸಾಕ್ಷಾತ್ಕರಣರೂಪ ಮೋಕ್ಷಂ
ಪೂರ್ಣತಾ ಸಿದ್ಧಿಯದೆ ಮನುಜ ಜನ್ಮಕೆ ಪರಮ ಚರಮ ಲಕ್ಷ್ಯಂ;
ಕೈವಲ್ಯದಾ ಸಮ್ಯಕ್ತ್ವದೊಳ್‌ ನೆಲೆಸಿರ್ಪ ನೀಂ ಜಗದ್ವಂದ್ಯಂ:
ನಿನ್ನ ನಿನಿವುದೇ ನಮಗೆ ಚೇತನೋದ್ಬೋಧನಂ;
ನಿನ್ನ ಪೂಜೆಯೆ ನಮಗೆ ಅಧ್ಯಾತ್ಮ ಸಾಧನಂ;
ಆ ದಿವ್ಯ ನಿಷ್ಕ್ರಿಯಾ ಕ್ರಿಯೆಗನ್ಯ ಕರ್ಮಂಗಳೆಲ್ಲ ಹಿಮಗಿರಿಯಿದಿರ ವಿಮಧ್ಯಂ!
ಹೇ ಸಾಧುಕುಲ ಶಾಶ್ವತ ಸ್ಪೂರ್ತಿ,
ಹೇ ವಿರಾಡ್ ಭವ್ಯ ಗುರುಮೂರ್ತಿ,
ನೆಲೆಸು ನಮ್ಮೆರ್ದೆಗಳಲಿ ನಿನ್ನಾ ತಪೋರೂಪದಿಂ;
ಜ್ಯೋತಿಯೆಡೆಗೆತ್ತು ನಮ್ಮಾತ್ಮಂಗಳಂ ಸ್ವಾರ್ಥತೆಯ ಈ ತಮಃಕೂಪದಿಂ;
ಭೂಮವಾಗಲ್ ನಮ್ಮ ಚೈತನ್ಯಮದನುದ್ಧರಿಸು ಈ ಅಲ್ಪತ್ವದಭಿಶಾಪದಿಂ!
ನಿನ್ನ ಕನ್ನಡ ನಾಡನೊಂದುಗೂಡಿಸಿ ಕಾಯಿ;
ನಿನ್ನ ಕನ್ನಡನುಡಿಯನಾಡಿ ಧನ್ಯವಾಗಲಿ ನಮ್ಮ ಬಾಯಿ;
ಅನ್ಯಭಾಷಾಮೋಹದಾಸ್ಯಕ್ಕೆ ಪಕ್ಕಾಗದಿರಲೆಮ್ಮ ತಾಯಿ!
ನಿನ್ನ ಭಾರತಭೂಮಿ ನಿನ್ನುನ್ನತಿಗೆ ಬೆಳೆದು ನಿಲ್ಗೆ;
ಪೃಥಿವಿಯ ಸುಧಾಕಾಂಕ್ಷೆ ಭಾರತಿಯ ಶಾಂತಿಮಯ ವಕ್ಷದಿಂ ಸಲ್ಗೆ;
ಮರ್ತ್ಯಮಾನಸಕೋಶಕವತರಿಸಿ ನಿತ್ಯಮತಿಮಾಸನಂ ಗೆಲ್ಗೆ;
ಪೂರ್ಣತಾ ಸಿದ್ಧಿಯಿಂದೀ ಧರಿಯನೇಗಳುಂ ಕ್ಷೀರಕೈವಲ್ಯಮಾಳಗಳ್ಗೆ;
ಶ್ರೀ ಮಸ್ತಕಾಭಿಷೇಕದೊಳುದಿಸಿ ನದನದಿಗಳೆಮ್ಮಿಳೆಯ ಸಿರಿಸೊಗಂ ಚಿರಂ ಬಾಳ್ಗೆ!

೯-೯-೧೯೫೧