‘ಶ್ರೀಸಾಮಾನ್ಯ’ವೆ ಭಗವನ್ ಮಾನ್ಯಂ;
‘ಶ್ರೀಸಾಮಾನ್ಯ’ ನೆ ಭಗವದ್ ಧನ್ಯಂ!
ಸಾಮಾನ್ಯತೆ ಭಗವಂತನ ರೀತಿ;
ಸಾಮಾನ್ಯವೆ ದಿಟ ಭಗವತ್ ಪ್ರೀತಿ!
ಸಾಮಾನ್ಯರೋ ನಾವು:
ಓ ಬನ್ನಿಂ, ಓ ಬನ್ನಿಂ
ಸಾಮಾನ್ಯದ ಪೂಜೆಗೆ ದೀಕ್ಷೆಯ ಕೊಳ್ಳಿಂ ನೀವೂ!
ಸರ್ವರಿಗಾಗಿಯೆ ಸರ್ವವ ತನ್ನಿಮ್;
“ಸರ್ವರಿನೆನಗೆ! ಸರ್ವರಿಗೆನ್ನಿಂ!
ಸರ್ವರಿಗಾಗಿಯೆ ಸರ್ವಂ!” ಎನ್ನಿಂ.
ಓ ಬನ್ನಿಂ, ಓ ಬನ್ನಿಂ
ಸಾಮಾನ್ಯದ ಪೂಜೆಗೆ ಶ್ರೀ ದೀಕ್ಷೆಯ ಕೊಳ್ಳಿಂ!

ಕೊನೆಗಂಡಿತೊ ಓರೊರ್ವರ ಗರ್ವದ ಕಾಲ,
ಇದು ಸರ್ವರ ಕಾಲ!
“ಸರ್ವೋದಯ!” “ಸರ್ವೋದಯ!”
ಸರ್ವೋದಯ ಯುಗಮಂತ್ರ!
ಸರ್ವೋದಯವೇ ಸ್ವಾತಂತ್ರ್ಯದ ಶ್ರೀತಂತ್ರ!
ಮೇಲಿಲ್ಲವೊ ಕೀಳಿಲ್ಲವೊ
ಸರ್ವ ಸಮಾನದ ರಾಜ್ಯ:
ಅಧ್ಯಕ್ಷನೊ ಸೇನಾನಿಯೊ
ಕಮ್ಮಾರನೊ ಚಮ್ಮಾರನೊ
ಕಾಯಕವೆಲ್ಲವು ಪೂಜ್ಯ!
ಕೈಗಾರನೊ ಕಲೆಗಾರನೊ
ಇರ್ವರಿಗೂ ಸಮಭೋಜ್ಯ;
ಇನ್ನಿಲ್ಲವೊ ಅಹಮಹಮಿಕೆ,
ತರತಮಗಳ ವ್ಯಾಜ್ಯ!
ಉಣಿಸಿಗೆ ಮೇಣ್ ಉಡುಪಿಗೆ ಮೇಣ್
ಆರಾಗಲಿ ಆರಡಿಯನ್
ಹಿಡಿಯುವುದಿನ್ ತ್ಯಾಜ್ಯ!
ಲೌಕಿಕದೊಳ್ ಲೌಕಿಕರಿಗೆ
ಆರಾಗಲಿ ಆರಡಿಯೊಳ್
ಹೊರಳುವುದಿನ್ ‘ಪೂಜ್ಯ್’!
– ಇದು ಲೌಕಿಕ ರಾಜ್ಯ!

ಸಾಮಾನ್ಯರೊ ನಾವು:
ಓ ಬನ್ನಿಂ
ಸಾಮಾನ್ಯದ ಪೂಜೆಗೆ ದೀಕ್ಷೆಯ ಕೊಳ್ಳಿಂ
ನೀವೂ! ನೀವೂ! ನೀವೂ! –
ನಿಲ್ ಇನ್, ದಿಟ್ಟಗೆ ನಿಲ್ ಇನ್!
ಬಾಗಿದ ಸೊಂಟವ ನೆಟ್ಟಗಿಡು;
ಬೆದರಿದ ಬೆನ್ನಂ ನೇರ್ ಮಾಡು.

ನೆಲ ನೋಡುವ ಕಣ್ಣಂ ಮೇಲೆತ್ತಿ
ಅಭ್ಯಾಸಂ ಮರೆತಾ ತಲೆಯೆತ್ತಿ
ಎದುರಾಳಿಯ ಮೊಗ ನೋಡು!
ಶತಶತಮಾನಂ ಗಗನವ ಹೀರದೆ,
ದಾಸ್ಯದ ತಿಮಿರದಿ ದಾರಿಯೆ ತೋರದೆ,
ದಾರಿದ್ರ್ಯದ ಶವಭಾರದಿ ಬಗ್ಗಿ,
ದರ್ಪದ ಪದಘಾತಕೆ ದೈನ್ಯದಿ ಕುಗ್ಗಿ
ಕುನಿದಿಹ ವಕ್ಷವನುಬ್ಬಿಸಿ ಉಸಿರಾಡು!

ತೊಲಗಿತು ನಿನ್ನೆಯ ನಾಯ್ ಪಾಡು;
ಇನ್ನಿದು ದಿಟಕೂ ನಿನ್ನಯ ತಾಯ್ ನಾಡು:
ನಿನ್ನದೆ ನೆಲ ! ನಿನ್ನದೆ ಹೊಲ!
ನಿನ್ನದೆ ಕಾನ್! ನಿನ್ನದೆ ಬಾನ್
ನಿನ್ನದೆ ನುಡಿ! ನಿನ್ನದೆ ಗುಡಿ!
ನಿನ್ನದೆ ಹೊಳೆ! ನಿನ್ನದೆ ಬೆಳೆ!
ನಿನಗಾಗಿಯೆ ನಿನ್ನೊಲವಿಗೆ
ಇನ್ ಮಿಸಲ್ ನೀ ಬೇಳೆವ ಬೆಳೆ!
ನಿನಗಾಗಿಯೆ ನಿನ್ನೊಲವಿಗೆ
ಇನ್ ಮಿಸಲ್ ನೀ ಉಳುವ ಇಳೆ!

‘ಶ್ರೀಸಾಮಾನ್ಯರೊ’ ನಾವು:
ಶ್ರೀಸಾಮಾನ್ಯದ ಪೂಜೆಗೆ ದೀಕ್ಷೆಯ ಕೊಳ್ಳಿಂ ನೀವೂ!
ಹೆಸರಾಸೆಗೆ ಕೆಸರಾಸೆಗೆ
ಉಸಿರನು ನೋಯಿಸೆವಾವು;
ಹಿಡಿಯದು ನಮ್ಮನು ಕೀರ್ತಿಯ ಹವ್ಯಾಸದ ಹೆಬ್ಬಾವು!
ಭಗವಂತನೆ ಸರ್ವೋತ್ತಮ ಸಾಮಾನ್ಯನ್:
ಸಾಮಾನ್ಯನೆ ಸರ್ವೋತ್ತಮ ಶ್ರೀಮಂತನ್!
ಆತನೆ ಓರ್ವನ್, ಆತನೆ ಸರ್ವನ್,
ಸರ್ವಾತ್ಮನ್ ತಾನ್ ಸರ್ವಾನನ್ಯನ್!
ನಮಗಿಲ್ಲಯ್ ಶಾಶ್ವತ ನಾಮದ ಗರ್ವಂ,
ನಶ್ವರವನೆ ಶಾಶ್ವತವಾಗಿಸುವಾ
ಅಹಂಕಾರದಾ ಮಿಥ್ಯಾಗರ್ವಂ.
ನಶ್ವರ ಸುಖಿಗಳ್ ನಾವು:
ಕೇಡಲ್ಲವೊ ನಮಗಾ ಹೆಸರಿಲ್ಲದ ಸಾವು!
ಹಿಂಜರಿಯೆವು, ಅಂಜೆವು, ಸಾಮಾನ್ಯತೆಗಾವು!
ನೇಗಿಲ್ ಲೇಖನಿ ತಕ್ಕಡಿ ಕತ್ತಿ
ನಮಗೆಲ್ಲಂ ಸಮರಸ ಸಂಪತ್ತಿ.
ನಮಗಲ್ಲವೊ ಪತ್ರಿಕೆಗಳ್
ಪೊತ್ತಿಸುವಾ ಪ್ರಖ್ಯಾತಿಯ
ಪುಲ್ವೆಂಕೆಯ ಕಾಂತಿ,
ಹೆಸರಿನ ವಿಭ್ರಾಂತಿ!
ಹೆಸರರಿಯದ ದಿನದಿನದಾ
ಒಲುಮೆಯ ಬಾಳಿನ, ನಲುಮೆಯ ಸೇವೆಯ
ಅಖ್ಯಾತಿಯೆ ನಮ್ಮಾತ್ಮದ ಚಿರಶಾಂತಿ!
ಶಾಂತಿಗೆ ದುರ್ಗಂ, ಶಾಂತಿಸ್ವರ್ಗಂ,
ಅಖ್ಯಾತಿಯೆ ಸಾಮಾನ್ಯರ ಶ್ರೀಮನ್ ಮಾರ್ಗಂ:

ಬರಿ ಲೌಕಿಕವಲ್ಲಯ್ ನಮ್ಮೆದೆಯುಸುರಿನ ಗಮನಂ:
ಹುಸಿಯಲ್ಲದ ಋಷಿತನಕಿದೊ ನಮ್ಮಯ ನಮನಂ;
ರಸ ತುಂಬಿದ ಕವಿಕಲೆಗಿದೊ ನಮ್ಮಯ ನಮನಂ!
ಭಗವತ್ ತ್ಯಾಗಿಗೆ ಇದೊ ನಮನಂ!
ಶ್ರೀಮದ್ ಯೋಗಿಗೆ ಇದೊ ನಮನಂ! –
ಮೇಣ್….
ಮರೆ ಮೋಸದ ಬೂಟಾಟಿಕೆಗಿದೊ ಮರ್ದನ ದಮನಂ!
ಧರ್ಮದ ಸೋಗಿನ ದುರ್ಲಾಭಕೆ ಕೋ ಧಿಕ್ಕಾರದ ಶಮನಂ;
ಮೇಣ್ ಬಲಭೇಷಜ ವಮನಂ! –
ಹನಿ ಹನಿ ಸೇರುತ ಹರಿಯುವ ಜನ ಜನತಾ ಭಕ್ತಿ
ತಾನದೆ ತಿಳಿಯಯ್ ಸಾಮಾನ್ಯರ ಶ್ರೀಶಕ್ತಿ.
ಸರ್ವೋದಯವೆಮ್ಮಯ ಗುರುದೀಕ್ಷಾಮಂತ್ರಂ;
ಸರ್ವಪ್ರೇಮಜ ಸಮತಾಭಾವಂ ಶಿಕ್ಷಾತಂತ್ರಂ;
ಸರ್ವಸಮರ್ಪಣ ಯೋಗದ ಮರ್ಮಂ
ಬೋದಿಪ ನಿತ್ಯ ನಿರಂತರ ಕರ್ಮಂ
ಸಾಧಿಪ ಲೀಲಾನಂದದ ಧರ್ಮಂ ರಕ್ಷಾಯಂತ್ರಂ!
‘ಶ್ರೀಸಾಮಾನ್ಯರೊ’ ನಾವು:
ಓ ಬನ್ನಿಂ,
ಸಾಮಾನ್ಯದ ಪೂಜೆಗೆ ದೀಕ್ಷೆಯ ಕೊಳ್ಳಿಂ
ನೀವೂ! ನೀವೂ! ನಿವೂ!