ಓಂ!
ಭೂವ್ಯೋಮ ಸ್ವಲೋಕ ಲೋಕಂತರ ವಿಹಾರೆ,
ನಿಖಿಲ ಲೋಕ ಕವೀಂದ್ರಗಣ ಚಕಚಕಿತ ಹಾರೆ,
ಸರ್ವ ಭಾಷಾ ಸರೋವಾಙ್ಮಯ ರಸ ಶರೀರೆ,
ಸಕಲ ವಿದ್ಯಾ ಕಲಾ ಶ್ರೀಮದಮೃತಾಹಾರೆ,
ಶ್ರೀ ಕುವೆಂಪು ಚಿದಂಬರಾಮ್ನಾಯದೋಂಕಾರೆ,
ಕಯ್ ಮುಗಿದು ಬೇಡುವುನು ಏಳ್, ತಾಯೆ, ಏಳ್;
ಕಾಲ್ಗೆರಗಿ ಬೇಡುವೆನು ಏಳ್!
ನಿನ್ನಾ ಬೃಹದ್ ವೀಣೆಯಂ ಕರದಿ ತಾಳ್;
ನಿನ್ನಾ ಮಹದ್ವಾಣಿಯಿಂದಿರದೆ ಪೇಳ್
ಸ್ವಾತಂತ್ರ್ಯ ಗಾಥೆಯಂ, ಕೇಳ್,
ಓ ತಾಯೆ, ವಂದಿಸುವ ಕಂದನಂ ಕೇಳ್:
ಏಳ್, ಪೇಳ್, ಬಾಳ್!
ಸತ್ಯಲೋಕದಿನಿಳಿದು ಬಂದೆನ್ನ ಮಾನಸ ಸರೋಜಕವತರಿಸು;
ದಿವ್ಯ ಮೃದು ಕಿಂಕಿಣೀ ಕ್ವಣಿತ ನೂಪುರ ಚಾರು ಚರಣಗಳನಿರಿಸು;
ಸಾಗರದ ಶೈಲೋಪಮ ತರಂಗ ರುಂದ್ರ ವಿನ್ಯಾಸದಿಂ ಚರಿಸು;
ಇಂಚರದ ಕನ್ನಡದ ಕಿಡಿನುಡಿಗಳಂ ಕುಡಿನಾಲಗೆಗೆ ಕುಣಿಸಿ ಬರಿಸು!

“ಏಕೆ ಈ ಉತ್ಸಾಹ?
ಏನು ಆನಂದವಿದು ನಿನಗೆನ್ನ ಕಂದ?”
“ಏಕೆ ಕೇಳುತಿಹೆ?
ಹೇಳುವುದು ನೋಡಮ್ಮ ಹರಿದೆನ್ನ ಬಂಧ!”
ಬಂಧನಂ ಮಾತ್ರಮಲ್ತಂಬಿಕೆಯ ಮೆಯ್ಯುಂದವೂ ಹರಿದಿದಲ್ತೆ?
ಸಂಕೋಲೆಯಂ ಖಂಡಿಪಾತುರದಿ ತಾಯೊಡಲ ಚೆಲ್ವು ತುಂಡಾಯ್ತೆ?”

“ಬಂದ ರೋಗವನೆಂತೊ ಪರಿಹರಿಸಲೊಂದಂಗಮಂ ಬೇರಿಡುವವೋಲ್
ಇಂದಿಟ್ಟರೇನಂತೆ ಮುಂದೆ ಸಂಧಿಸಹುದೆ ನದಿ ಸಿಂಧು ಸೇರ್ವವೋಲ್.”

“ಐಕ್ಯವನೆ ಬಯಸಿ ನೀನಾದರದಿ ದುಡಿಯಲಾ ಶಂಕೆ ನನಗಿಲ್ಲ:
ಚಿನ್ಮಯಿ ಭಾರತಿಗೆ ಮೃಣ್ಮಯದ ಹಂಚಿಕೆಯ ವಂಚನೆಯೆ ಸಲ್ಲ!”

“ಆ ಪದಕೆ ದುಡಿಯುವೆವು , ಅದಕಾಗಿ ಮಡಿಯುವೆವು ಮೈತ್ರಿಯಲಿ, ತಾಯಿ.
ಸಹನೆಯನು ಶಕ್ತಿಯನು ಹೃದಯ ವೈಶಾಲ್ಯವನು ಕೃಪೆನೀಡಿ ಕಾಯಿ.”

“ನಿನ್ನೆದೆಯ ನಿನಗೊರೆಯೆ ನಾ ಕೇಳಿದೆನು ಕಂದ:
ಸರ್ವಜ್ಞೆ ನನಗರಿವುದೆಲ್ಲ!
ನನ್ನಿಚ್ಛೆಯಿಂದುಕ್ಕುತಿದೆ ನಿನ್ನ ಆನಂದ:
ಶಕ್ತಿ ನಾನೆನಗರಿದುದಿಲ್ಲ!
ನಡೆವುದಿಂತೆಲ್ಲವೂ ನನ್ನಿಚ್ಛೆಯಿಂದ;
ಫಲಂ ಸಚ್ಚಿದಾನಂದ!
ದಿವ್ಯ ಲೀಲಾರ್ಥಮೆಂದರಿವುದಯ್, ಕಂದ:
ಹುಲುಗೆ ನಿನ್ನಾನಂದ!”

ಹರಸಿದಳು ತಾಯಿ, ಹರಸಿದಳು ದೇವಿ, ಸಚ್ಚಿದಾನಂದೆ:
ನೆಲಸಿದಳು ಕವಿಶಿಶುವ ಕಂಠದಿ ಜಗದ್ವಂದ್ಯ ಚರಣಾರವಿಂದೆ!
ಬನ್ನಿ ಓ ಬನ್ನಿ, ಘಂಟೆಘೋಷದೊಳೆನ್ನಿ: “ಮಾತರಂ ವಂದೇ!”
“ಮತರಂ ವಂದೇ! ಮಾತರಂ ವಂದೇ! ಮಾತರಂ ವಂದೇ!”

ಬಾನಿಳಿದು ನುಲ್ವ, ಬುವಿ ಏರಿ ಸೋಲ್ವ ಆ ಮಲೆಯ ತಲೆಗೆ,
ಅನ್ನಮಯದಾಚೆ ತನ್ನತದೀಚೆ ಚಿನ್ಮಯದ ಶಿಲೆಗೆ,
ಬನ್ನಿ ಓ ಬನ್ನಿ ನಿತ್ಯಸುಂದರ ಸತ್ಯದಮೃತದಾ ನೆಲೆಗೆ!
ನಮ್ಮ ಸಂತೋಷವನು ವಿಶ್ವವಾಲಿಸುವಂತೆ ಉಲಿಯುವಾ ಮುದಕೆ
ಈ ನಿಮ್ನ ಸಾಲುವುದೆ? ಆ ಉನ್ನತಕೆ ಬನ್ನಿ, ಘೋಷಗೈವುದಕೆ.

ಓ ಬಾರ ಸಹ್ಯಾದ್ರಿ; ಬಾರ ಓ ವಿಂಧ್ಯಾದ್ರಿ; ಬಾರ ಹಿಮಾದ್ರಿ!
ಕುಲಾದ್ರಿಗಳೆ ಬನ್ನಿ, ಸುರಾದ್ರಿಗಳೆ ಬನ್ನಿ ,ಬಾರೈ, ಹರಾದ್ರಿ!
ಬಾರಮ್ಮ ಗಂಗೆ; ಬಾರಮ್ಮ, ತುಂಗೆ; ಬಾರ ಓ ಸಿಂಧು;
ಯಮುನೆ ಕಾವೇರಿ ಗೋದೆಯರ ಸೇರಿ ಬಾ, ಕೃಷ್ಣಬಂಧು:
ಸ್ವಾತಂತ್ರ್ಯಗಾಥೆಯಿ ಮಂತ್ರಂಮಂಗಳಕೆ ತೀರ್ಥಂಗಳಂ ತಂದು
ಕುಂಭ ಕುಂಭದಿ ತುಂಬಿ ಎರೆಯಿರಂಭೋಧಿಗಳನೋಜೆಯಿಂನಿಂದು,
ಭಾರತಾಂಬೆಯ ಮುಡಿಗೆ ಬಿಂದು ಬಿಂದುಗಳಾಗೆ ರತುನಗಳೆ ಮಿಂದು.

ಏನು ಕಾಂತಿಯಿದು ಏನು ಶಾಂತಿ ಈ ತುಂಗಶೃಂಗದಲ್ಲಿ!
ಆವ ಲೋಕದಾಲೋಕವಿದು ನಮ್ಮನೊಸಗೆ ಕರೆವುದಿಲ್ಲಿ?
ಮರ್ತ್ಯವಲ್ಲವಿದು ದಿವ್ಯಧಾಮವದೊ ನೋಡು, ಬೆಳಗುಮೆಯ್ಯ
ಪುಣ್ಯಮೂರ್ತಿಗಳು ಕೀರ್ತಧವಳರೆನೆ ಹರಸಲೆತ್ತಿ ಕಯ್ಯ
ಸಾಲು ಸಾಲರಳಿ ಹಾಲುರುಳಿದಂತೆ ಮಿಂಚಿ ಮೆರೆವರಯ್ಯ!

ಆದಿ ವಿದ್ಯೆಯದೊ ವೇದಪುರುಷನದೊ ದಿವ್ಯ ಉಪನಿಷತ್ತು
ಭರತಮಾತೆಯಾ ನಿತ್ಯ ರೂಪವನು ನೆತ್ತಿಯಲ್ಲಿ ಹೊತ್ತು
ಹರಕೆಗೈವರದೊ ದೇಶದೇಶಕಾದೇಶ ಸುಧೆಯನಿತ್ತು!

ಆ ವಿಭಕ್ತೆ ತಾನಿಲಿ ಅವಿಭಕ್ತೆ ನಿತ್ಯಮೈಕ್ಯಭೂತೆ;
ದ್ವೈತೆ ಮೃತ್ತಿನಲಿ, ಅದ್ವೈತಿ ಚಿತ್ತಿನಲಿ, ದಿವೈ, ಮಹಾಶ್ವೇತೆ:
ಒಡಲು ಬಿರಿದೊಡೇನ್? ಉಸಿರು ಒಡೆಯುವುದೆ? ಭಕ್ತಿಭಾವಜಾತೆ
ಅನೇಕವಾಗಿಯೂ ಏಕವಾಗಿಹಳು ನೋಡು ಭರತಮಾತೆ,
ಸರ್ವ ತತ್ತ್ವ ಮತಧರ್ಮ ಸತ್ವ ಪೀಯೂಷ ಸ್ತನ್ಯದಾತೆ
ಹಿಂದು ಮುಸಲ ಸಿಖ ಕ್ರೈಸ್ತ ಪಾರಸಿಕ ಮುಖಾಖಿಲಾತೀತೆ!

ತಾಯನೋಲೈಸಲಿದೆಕೊ ನೆರೆದಿಹುದು ಋಷಿ ಮಹರ್ಷಿ ವೃಂದ,
ಬೆಳಕೆ ಮುಗಿಲಾಗಿ, ಮುಗಿಲೆ ಮೊಗವಾಗಿ ಕಣ್ಣು ಮೂಡಿದಂದ.
ಚಿಂತೆಯೆಂತಂತು ಚಿದ್ರೂಪವಾಂತು, ದೇವರಾಜ ಇಂದ್ರ
ದೇವ ದೇವತಾ ಸಂಘ ಸಹಿತ ಆನಂದ ನೃತ್ಯ ರುಂದ್ರ
ಬಂಧಮುಕ್ತಂಗೆ ಪೂಜೆಗೆಯ್ವವೋಲ್, ಕೋಟಿ ಸೂರ್ಯ ಚಂದ್ರ
ಭೋಂಕನುದಿಸಿ ಬಂದಂತೆ ಕೋರೈಸೆ ವಿಶ್ವನಯನ ಕೇಂದ್ರ
ಭಾರತಾಂಬಿಕಾ ಮುಕ್ತಿ ಪೀಠವದೊ ಸಿದ್ಧ ಯೋಗಿ ಸಾಂದ್ರ್!

ನೋಡು ಪೌರಾಣ ಲೋಕದವತಾರರವರೆ ರಾಮ, ಕೃಷ್ಣ;
ನೋಡು ತೀರ್ಥಂಕರಾದಿ ಬುದ್ದ್ದ ಗುರು ದೇವ ರಾಮಕೃಷ್ಣ!
ನೋಡು ಕವಿವರರು ವ್ಯಾಸ, ವಾಲ್ಮೀಕಿ, ಕಾಳಿದಾಸ, ಭಾಸ;
ಬಳಿಯೆ ತಳತಳಿಸುತಿಹನು ಕಾಣು ಕರ್ಣಾಟ ಕವಿ ಕುಲೇಶ!
ಅಲ್ಲಿ ವಂಗ ಗುರು, ಇಲ್ಲಿ ನಾನಕರು, ಸಂತ ಕವಿ ಕಬೀರ:
ಇತ್ತ ಸಿಡಿಲಾಳು ಕಾಣವನೆ ನಿನ್ನ ರಾಜಕೀಯ ವೀರ!

ನಿನ್ನ ಆಚಾರ್ಯನವನೆ  ಸಂಪೂಜ್ಯನೆಸೆವನತ್ತ ನೋಡು;
ಕ್ರಿಸ್ತ ಪೈಗಂಬರಾದಿ ದಿವ್ಯರಿದೊ, ಮಣಿದು ನಮನ ಮಾಡು!

ಅಲ್ಲಿ ರಾಜರ್ಷಿ, ಇಲ್ಲಿ ಯಂತ್ರರ್ಷಿ, ಅತ್ತ ಚಕ್ರವರ್ತಿ;
ಅವರೆ ಶಿಲ್ಪಿವರರಿವರೆ ಗಾಯಕರು , ನಮ್ಮ ನೆಲದ ಕೀರ್ತಿ.
ಇತ್ತ ಕೈಮುಗಿದು ಕಾಣ ನಿಂತಿಹನು ಉರಿವ ದೀಪವರ್ತಿ;
ಹೆಸರ ಮೆರೆಯದೆಯೆ ಉಸಿರನಿತ್ತವನು, ಬಾಳ್ವೆಗುಸಿರ್ ಸ್ಫೂರ್ತಿ,
ಹೊಲವನುತ್ತವನು, ಹೊರೆಯ ಹೊತ್ತವನು, ದುಡಿವ ದೈವಮೂರ್ತಿ!
ದೇವವಾಣಿಗಳ್ ಕೋಟಿ ಕಂಠಗಳ್ ಉಳಿವ ಘೋಷವೊಂದೇ;
ತಳುವಿರೇಕೆ ನೀವೋಡಿ ಬನ್ನಿ ನಾವ್ ಕೂಡಿಕೊಳುವ ಇಂದೇ.
ಸುರರ ಕೊರಳುಲಿಗೆ ನರರ ಕೊರಳುಲಿಯ ನೆರೆದು ಉಲಿವ: ‘ವಂದೇ!
ಮಾತರಂ ವಂದೇ! ಮಾತರಂ ವಂದೇ! ಮಾತರಂ ವಂದೇ!’

ಶ್ರೀದಿನಂ, ದಿಟಮಿದು ಮಹಾದಿನಂ:
ಗುರುದೇವ ಪರಮಹಂಸ ಮಹಾಸಮಾಧಿಯ ದಿನಂ!
ಅರವಿಂದ ಯೋಗೀಂದ್ರ ಜನ್ಮೋತ್ಸವದ ದಿನಂ!
ಸಾಮ್ರಾಜ್ಯಮಂ ತ್ಯಜಿಪ ಮೈತ್ರಿಯ ಮಹದ್ ದಿನಂ
ಭಾರತಸ್ವಾತಂತ್ರ್ಯ ಪುಣ್ಯೋದಯದ ದಿನಂ!
ಶ್ರೀಮನ್ ಮಹಾದಿನಂ, ಭಗವದ್ ದಯಾ ದಿನಂ,
ದಿಟಮಿದು ವಿರಾಡ್ ದಿನಂ!

ನಮೋ ನಿನಗೆ, ದಿನದೇವ!
ಪ್ರೇಮ ಚೇತನ ಮಹದ್ ವ್ಯೋಮದಿಂ ಮೂಡಿ ಬಾ;
ವೈರದ ತಮಶ್ಯಿಖರ ಶೈಲಮಂ ಮೆಟ್ಟಿ ಬಾ;
ಮನದ ಹಿಮಘನದ ನಿದ್ರಾ ಜಡವನೆಳ್ಚರಿಸಿ ಬಾ;
ಜೀವಗಳ ಚೇತನ ಸ್ರೋತಮಂ ನೆರೆ ಹರಿಸಿ ಬಾ;
ದಾಸ್ಯ ಶೃಂಖಲೆಗಳಂ ಹೃದಯದಿ ಕಲಚಿ ಬಾ;
ಮನ ಮನದ ಬಾಗಿಲ್ಗಳಂ ಬಿರಿದು ಸೆರೆ ಬಿಡಿಸಿ ಬಾ!
ಬಾ, ಬಾರ, ನೀ ತಾರ ಭಗವದಾವೇಶಮಂ,
ಧರ್ಮಾರ್ಥ ಕಾಮಕ್ಕೆ ಮೋಕ್ಷದುದ್ದೇಶಮಂ!

ಕದಿರ ಕೈದುವನಾಂತು ಕತ್ತಲೆಯನೊತ್ತಿ ಬಾ;
ಜನ ಹೃದಯ ಹೊಲದಲಿ ಅಹಿಂಸೆಯಂ ಬಿತ್ತಿ ಬಾ;
ಲೋಕಕೆ ಅಶೋಕ ಸಂದೇಶಮಂ ಸಾರಿ ಬಾ:
‘ಧರ್ಮಕ್ಕೆ! ಸತ್ಯಕ್ಕೆ!’
‘ನಾವೆತ್ತಿದೀ ಧ್ವಜಂ!
‘ಪುಣ್ಯಕ್ಕೆ! ಪ್ರೇಮಕ್ಕೆ!’
‘ತಾನಕ್ಕೆ ಬಲ್ ಭುಜಂ!’
ಎಂದಲಿವ ಕಂಠ ಕೋಟಿಯೊಳುದಿಸಿ ಬಾ!
‘ಜಯಮಕ್ಕೆ ! ಶಭಮಕ್ಕೆ! ಗೆಲವಕ್ಕೆ! ಸೊಗವಕ್ಕೆ!
ಭಾರತ ಚಿರಾಯುವಕ್ಕೆ!’
ಎಂಬ ಮಂತ್ರಕೆ ಮೂಡಿ ಬಾ; ತೊಳಗಿ ಬಾ, ಬೆಳಗಿ ಬಾ, ಏರಿ ಬಾ! ಬಾ ಬಾ!

ಸಾರಿ ಬಾ ಸರ್ವರ್ಗೆ ಸ್ವಾತಂತ್ರ್ಯಮಂ;
ಸಾರಿ ಬಾ ಸರ್ವರ್ಗೆ ಸಾಮ್ಯತ್ವಮಂ;
ಸರ್ವರ್ಗೆ ಸಾರಿ ಬಾ ಸೌಹಾರ್ದಮಂ:
ಸರ್ವ ಲೋಕದ ಸರ್ವ ಸಂತೋಷಮಂ,
ಸರ್ವರಿಂ ಸರ್ವರಾ ಉದ್ಧಾರಮಂ!

ನನಸಾದುದೊ ಶತಮಾನದ
ಶತ ಶತ ಮನದಾ ಕನಸಿಂದು:
ಸ್ವಾತಂತ್ರ್ಯದ ಸಂಗ್ರಾಮದಿ
ಗತಿಸಿದಮಿತ ಹುತ ಆತ್ಮರ
ಬಲಿದಾನಂ ಫಲಿಸತೊ ಇಂದು!
ಓ ಎಳೆಯರಿ, ಓ ಮುದಿಯರೆ,
ಓ ಗೆಳೆಯರೆ ಐತನ್ನಿ;
ಹೊಸ ಬಾಳಿಗೆ ಐತನ್ನಿ;
ಹೊಸ ಬಾಳಿಗೆ ಹೊಸನೋಂಪಿಯ
ಹೊಸ ಕಂಕಣವನು ತನ್ನಿ:

ಆ ಜಾತಿಯ ಈ ವರ್ಣದ
ಭೇದದ ಭೂತವನಿಂದೇ
ಸಂಹರಿಸುವ ಸುರ ನೀತಿಯ
ವ್ರತವಾಗಲಿ ಪಥವೊಂದೇ!
ಪೊರೆಗಳಚಿದ ಹೊಸ ನಾಗರ
ಹೆಡೆಯೆತ್ತುವ ತೆರದಿ
ಹೊಸ ನೋಂಪಿಯ ಹೊಸ ಹುರುಪಿಂ
ಝಳಪಿಸಲಾ ಋತ ಖಡ್ಗಂ
ದೃಢ ಮುಷ್ಟಿಯ ಕರದಿ!

‘ದೇವಿಗೆ ಬಲಿ ಭಾರತ ಕಲಿ!’
ಎಂಬುವ ಉಲಿ ತೊಟ್ಟಿಲ ಬಳಿ
ಜೋಗುಳವಾಗಲಿ ಬಾಯ್ಗೆ;
ಕಂದನ ತೋಳ್ ತಾ ಕರವಾಳ್
ಜಗದಂಬೆ ದಿಟಮೆಂಬದೆ
ನಂಬುಗೆಯಾಗಲಿ ತಾಯ್ಗೆ!
ಇನ್ನೆಂದೂ ಮುಂದೆಂದೂ
ಬರದಿರಲಿಂದೆಯ್ತಂದೀ
ಸ್ವಾತಂತ್ರ್ಯಕೆ ಕುಂದು.
ಪರುಷಾರ್ಥದ ಪರಮಾರ್ಥದ
ಆಧ್ಯಾತ್ಮಿಕ ಚೇತನಕೀ
ಸ್ವಾತಂತ್ರ್ಯದ ಸಂಕೇತವೆ
ಚಿರಕೇತನವಾಗುವವೋಲ್‌
ಕೃಪೆಯಿರಲೆಂದೆಂದೂ!

ಲೋಕ ಮಲಗಿದಂದು ನೀ ನಟ್ಟ ನಡೂ ರಾತ್ರಿ
ಎಚ್ಚರಾಂತ; ಅವಿಶ್ರಾಂತೆಯಾದೆ ಪುನರ್ ಯಾತ್ರಿ.*
ಸರ್ವಕಾಲ ಸರ್ವದೇಶ ಸರ್ವ ಮೋಕ್ಷ ಮಂತ್ರೇ,
ಅಸ್ವತಂತ್ರೆ ಸುಸ್ವತಂತ್ರೆಯಾದೆ ವಿಶ್ವತಂತ್ರೆ
ಮನುಜ ಕುಲದ ಪುರೋಗತಿಗೆ ಪೂಜ್ಯ ಅಧಿಷ್ಠಾತ್ರಿ,
ಅಖಂಡಿತೇ ಸಪಂಡಿತೇ ನೀನೆ ಜಗದ್‌ಧಾತ್ರಿ.
ಜಡವನೊದ್ದು ನಿದ್ದೆಗೊಡಹಿ ಎದ್ದು ನಡೆವ ವೇಳೆ
ಚರಣ ಚಲನ ಚಕಿತವಾಯ್ತು ಚತುರ್ವಾರ್ಧಿ ವೇಲೆ.
ಆ ಸುವಾರ್ತೆಗಾಶುವಾರ್ತೆ ನೆರವನಿತ್ತು ಪೇಳೆ
ಒರ್ವನಿರುಳ ಮೌನದಲ್ಲಿ ಧ್ಯಾನ ಮನದಿ ಕೇಳೆ
ಬೆಳ್ಳಿಬೆಟ್ಟದಿಂದ ದುಮುಕಿ ರುದ್ರನಟ್ಟಹಾಸ
ತಿರೆಯ ತಟ್ಟಿದಂತೆ ಬಂತು ಜನ ಸಮುದ್ರ ಘೋಷ!
ಏನು ಘೋಷ! ಏನು ತೋಷ! ಏನು ಆsವೇಶ!
ದೇವವೃಂದ ಸಹಿತ ಬಂದ ಇಂದ್ರ ರುಂದ್ರ ಘೋಷ!

ಆಲಿಸದರೊಳಿನಿತು ಇಲ್ಲ ಲೇಶಮಾತ್ರ ರೋಷ:
ಧ್ವೇಷವಿಷವನೀಂಟೆ ರುದ್ರನಮೃತಕಿಹುದೆ ದೋಷ?
ಪ್ರಾಣ ಮನೋಮಯಕೆ ಏರಿ ಅನ್ನಮಯ ವಿಕಾಸ
ಅನ್ನಮಯಕೆ ಇಳಿದಿದೆ ಆನಂದಮಯದ ಕೋಶ!

ಏಳು ತಾಯಿ, ಬಾಳು ತಾಯಿ, ಜಗತ್‌ ಕsಲ್ಯಾಣಿ;
ಯುಗ ಯುಗಾಯು ಜಗವನಾಳು, ದರ್ಮಚಕ್ರಪಾಣಿ;
ದಿಗ್‌ದಿಗಂತ ರಣಿತಮಕ್ಕೆ ನಿನ್ನ ದಿವ್ಯ ವಾಣಿ;
ಸುಕೃತದಿಂದೆ ಎದ್ದು ನಿಂದೆ; ನಡೆ ಮುಂದೆ, ರಾಣಿ!
ನುತಿಗೆ ನಿಂದೆಗೊಲವದೊಂದೆಯಾಗಿ ತೆರಣು ಮುಂದೆ;
ಮರಳಿ ಹಿಂದೆ ಬೀಳದಿಂದೆ ನುಗ್ಗು ಮುಂದೆ ಮುಂದೆ!
ತಾಯಿ ತಂದೆ ಗುರುಗಳೊಂದೆಯಾಗಿ ಬಂದೆ, ದೇವಿ;
ನಡೆ ಇಂದೆ, ನಡೆ ಮುಂದೆ, ನಡೆ ನಮ್ಮನೋವಿ!

ಶಾಂತಿ ಸತ್ಯ ಮುಕ್ತಿ ಧರ್ಮ ತತ್ತ್ವ ಮಹೋದಾತ್ತೆ
ಕಾವ್ಯ ಶಿಲ್ಪ ನೃತ್ಯ ಗಾನ ಸಕಲ ಕಲಾವೆತ್ತೆ
ಶ್ರದ್ಧೆಯಾಗಿ, ಬುದ್ಧಿಯಾಗಿ, ತಪಸ್ ಶಕ್ತಿಯಾಗಿ,
ಭಗವದಾತ್ಮ ಸಿದ್ಧಿಗಾಗಿ ಪರಾಭಕ್ತಿಯಾಗಿ,
ನಡಸು ನಮ್ಮನೆಲ್ಲ, ಅಮ್ಮ , ಪೂರ್ಣಯೋಗಕಾಗಿ!

ಆದಿಶಕ್ತಿ, ಅಂತ್ಯಮುಕ್ತಿ, ಸಾಂತೆ ಮೇಣನಂತೆ:
ದೇಶ ದೇಸದವರಿಗವರ ದೇಶ ದೇವಿಯಂತೆ
ತೋರಿ ನಮಗೆ ತೋರುತಿರುವೆ ಭರತಮಾತೆಯಂತೆ!

ನಮೋ ದೇವಿ! ನಮೇ ತಾಯಿ! ನಮೋ ಭರತಮಾತೆ!
ಅಸಾಮನ್ಯೆ, ಲೋಕಮಾನ್ಯೆ, ಧನ್ಯೆ ಭಾಗ್ಯದಾತೆ!
ನಮಸ್ ಸತ್ಯೆ, ನಮೋ ನಿತ್ಯೆ, ನಮೋ ಜಗನ್ಮಾತೆ!

ಜಯ ಜಯ ಜಯ ವಿಜಯಿ ಭವ, ಹೇ ವೈಜಯಂತಿ!
ನಿನ್ನ ನಿಳಲೊಳೇಳ್ಗೆವಡೆದು ಗೆಲ್ಗೆ ಭುವನ ಶಾಂತಿ!
ಓ ಸುಮರ್ಣೆ, ಹೇ ಅವರ್ಣೆ, ನೀಲಿಮಾ ತ್ರಿವರ್ಣೆ,
ಉಷಸ್ ಪೀತೆ, ದಿವಾ ಶ್ವೇತೆ, ನಿಶನೈಲ ಜಾತೆ,
ಸುಧಾ ಶಂಖ ಶಂಕರಾ ಗದಾ ಭಯಂಕರಾsಜಿತೆ,
ಅಮೃತ ದಿವ್ಯಖಚಿತ ಭವ್ಯ ಧರ್ಮಚಕ್ರ ರಾಜಿತೆ,
ಪ್ರೇಮ ನಿನ್ನ ಪರಮ ಅನ್ನವಾಗಲವನಿಪೂಜಿತೆ!

ಮೈತ್ರಿ ಸಹನೆ ಶಾಂತಿಗಾಗಿ ನಭೋ ಗಾಮಿಯಾಗು!
ಪೊಡವಿಯಾಳು! ಕಡಲ ಸೀಳು! ಗೆಲ್ಗು, ಬಾಳು, ಹೋಗು!
ಗ್ಲಾನಿಯಲ್ಲಿ ಹಾನಿಯೆಲ್ಲಿ ಅಲ್ಲಿ ರಕ್ಷೆಯಾಗು;
ಕ್ರೌರ್ಯವೆಲ್ಲಿ ಪಾಪವೆಲ್ಲಿ ಅಲ್ಲಿ ಶಿಕ್ಷೆಯಾಗು;
ಕ್ಷಾಮ ಕಷ್ಟ ನಷ್ಟಗಳಲಿ ನೀ ಸುಭಿಕ್ಷೆಯಾಗು:
ಅಣ್ಣನಿಹನೋ ಕನ್ನಡದಾ ಭುಜಧ್ವಜೋದ್ದಂಡ!
ಚಿಣ್ಣ, ನಿನಗೆ ಬೆಂಬಲಮಿರೆ ಗಂಡಭೇsರುಂಡ
ಶಂಕೆ ಬೇಡ; ಬಿಂಕದಿಂದ ನುಗ್ಗು, ನಡೆ, ಹೋಗು;
ಸದಾ ಕಾಲ ಸರ್ವದೇಶ ಸಕಲ ಮಿತ್ರನಾಗು!

ಭರತಖಂಡದಗ್ನಿ ಕುಂಡದಿಂದ ಸಿಡಿದ ಕೆಂಡ
ಲೋಕ ತಾಪ ಹರಣ ರೂಪ ಧರಿಸಲಾಯ್ತು ಝಂಡಾ!
ನಮ್ಮ ನಾಡ ಪೆಂಪಿನೊಂದು ನೀಳ್ದ ಬಾಹು ಶಾಖೆ
ದಿವಿಜರೂರ್ಗೆ ಧಾಳಿಯಿಡುವುದೀ ಮಹಾ ಪತಾಕೆ!
ಗೌರವಕ್ಕೆ ಬಣಗು ಟೆಕ್ಕೆಯೂರೆಗೋಲು ಸಾಕೆ?
ಧ್ವಜಸ್ತಂಭ ನಿನಗೆ ಮೇರು: ದ್ಯುಮಂಡಲಾವಲಂಬಿ!
ರಜತ ಶೈಲ ನಿನಗೆ ತೇರು: ದಿವೌಕಸಾವಲಂಬಿ!
ಹಾರು, ಏರು, ಓ ಧ್ವಜವೆ,
ವೈನತೇಯ ಸಮ ದ್ವಿಜವೆ!
ಚಂದ್ರ ಚೂಬಿ, ಸುರ್ಯ ಚುಂಬಿ, ಖಚರ, ಚರಣ ಚುಂಬಿ,
ಹಾರು ಏರು, ನೋಡುತಿಹುದು ನಾಡು ನಿನ್ನ ನಂಬಿ.
ತ್ರಿದಶ ಹರ್ಷ ವೃಷ್ಟಿಯದೋ ವರ್ಷ ಛದ್ಮರೂಪಿ;
ವಿಧಿಯ ಹರಕೆ ಮೆರೆವುದದೋ ಇಂದ್ರಚಾಪರೂಪಿ:*
ದೇವರಿಗೂ ಮಿಚ್ಚಿದೆಂದು ನಂಬದವನೆ ಪಾಪಿ.!

ಅಮರ ಬಾಹು, ಅಸುರ ರಾಹು, ನೆಲಕೆ ಮುಗಿಲ ಕಾಹು;
ಕರ್ಮ ಜಗಕೆ ಧರ್ಮಪುರುಷನಿಟ್ಟ ಬೆರಳ ಬೇಹು;
ಹೇ ತ್ರಿವರ್ಣ ಕೇತನ,
ನೀನೆ ನಮ್ಮ ಚೇತನ;
ಪ್ರೇಮ ಧೈರ್ಯ ಸತ್ಯ ಧರ್ಮ ಶಾಂತಿ ಚಿರನಿಕೇತನ!

ಮರೆವುದಿಂತಾ ನಮ್ಮ ಸ್ವಾತಂತ್ರ್ಯ ಶಿಲ್ಪಿಯಂ
ದಿವ್ಯ ದಿನದೀ ಶುಭ ಮುಹೂರ್ತದಲ್ಲಿ?
ಮರೆವುದೆಂತಯ್‌ ಭುವನ ಗೌರವ ಮಹಾತ್ಮನಂ
ಸ್ವಾತಂತ್ರ್ಯದೀ ಸುಪ್ರಭಾತದಲ್ಲಿ?
ಹಜ್ಜೆಹಜ್ಜೆಯನಿಡಿಸಿ ಕೈಹಿಡಿದು ನಡೆಗಲಿಸಿ
ಬಿಡುಗಡೆಗೆ ತಂದ ಆ ತಂದೆಯಲ್ಲಿ?
ಎಲ್ಲಿ? ಓ ಅವನೆಲ್ಲಿ? ನಿಚ್ಚವೂ ನಮ್ಮೆದೆಯ
ನಂಜೀಂಟುವಾ ನೀಲಕಂಠನೆಲ್ಲಿ?

ಜನಮನದ ಹಗೆತನದ ರೋಷ ಹಾಲಾಹಲದಿ
ಹಾಲುದಿಸಿ ಬರುವಂತೆ ಮೂಡಿ ಬಂದೆ!
ಕ್ರಿಸ್ತಿಬುದ್ಧರ ಮೈತ್ರಿಯಂ ಸಾರಿ ಸಾಧಿಸುತೆ
ವಿಶ್ವಸೇವಕರ ಪಂಕ್ತಿಯಲಿ ನಿಂದೆ!
ಯಂತ್ರನಾಗರಿಕತೆಯ ರಾಜಕೀಯದ ಕುಟಿಲ
ತಂತ್ರಕಧ್ಯಾತ್ಮ ಮಂತ್ರವನು ತಂದೆ!
ಇಂದಿನುತ್ಸವಕೆಮ್ಮನುಳಿದೆಲ್ಲಿ ಹೋದೆ, ಹೇ
ಸ್ವಾತಂತ್ರ್ಯ ಕನ್ಯೆಯಂ ಪಡೆದ ತಂದೆ?

ಇಲ್ಲಿ ಉತ್ಸವದೊಳವನಿಲ್ಲ, ಆ ದೂರದಲಿ
ಕ್ರೋಧ ಕಾರ್ಪಣ್ಯ ರೋದನಗಳೊಡನೆ,
ಕೆನ್ನೀರು ಕಣ್ಣೀರುಗಳ ಹೊನ ಗೋಳ್‌ನಡುವೆ
ದಾರಿದ್ರ್ಯ ದೈನ್ಯ ಧನಮದಗಳೊಡನೆ
ವಾದಿಸತೆ ಬೋಧಿಸುತೆ ಕರುಣೆಯಂ ಸಾಧಿಸುತೆ
ಭಕ್ತಿಯಿಂ ದೇವನಂ ಪ್ರಾರ್ಥಿಸುತ್ತೆ
ನಿರಶನವ್ರತನಿಷ್ಠನಾಗಿಹನು ನೋಡಲ್ಲಿ
ಧರ್ಮ ಶಕ್ತಿಯ ಕೃಪೆಯನರ್ಥಿಸುತ್ತೆ!
ಈಶ್ವರ ಕೃಪಾಬಲದ ಯಾಚನೆಯ ಸಲುವಾಗಿ ಭೂಮಾತೆ ಕಳುಹಿಸಿಹ ದೂತಭಿಕ್ಷು;
ಈ ಲೋಕಮಂ ನಿರ್ನಿಮೇಷಮವಲೋಕಿಸುವ
ಆ ಲೋಕ ಋತದೊಂದಲೋಕ ಚಕ್ಷು;
ಸೃಷ್ಟಿಕರ್ತಂ ಸೃಷ್ಟಿ ತಾನಾಗಿ ಸೃಷ್ಟಿಯೊಳೆ
ದುಡಿಯತಿರ್ಪುದಕವನೆ ದಿವ್ಯಸಾಕ್ಷಿ!
ಗಾಂಧಿಯೆಂಬಾ ಪೆಸರೆ ನಾಂದಿಯಾಗಲಿ ನಮ್ಮ
ಸ್ವಾತಂತ್ರ್ಯ ಸಂಭ್ರಮಕೆ: ಹಾಡು, ಪಕ್ಷಿ!

೧೦

ಜಯ್ ಶ್ರೀ ಗಾಂಧಿಗೆ ಜಯ್!
ಜಯ್ ಸ್ವಾತಂತ್ರ್ಯ ಶ್ರೀ ನಾಂದಿಗೆ ಜಯ್!
ಜಯ್ ಭಗವತ್ ಕೃಪೆಯಾ ಶ್ರೀಮತ್ ಕರುಣೆಯ
ಚಿರಬಂಧಿಗೆ ಜಯ್!
ಜಯ್ ರಾಷ್ಟ್ರಧ್ವಜಕೆ!
ಜಯ್ ಸ್ವಾತಂತ್ರ್ಯ ಸಾಧಿಸಿದಾ ವೀರ ಶ್ರೀ ಭುಜಕೆ!
ಜಯ್ ಸತ್ಯ ಅಹಿಂಸಾ ತ್ಯಾಗ ಸಮರ್ಪಣದಾ
ಋತಚಿನ್ಮಯ ನಿಜಕೆ!

ಅರ್ಪಿತವಾಗಲಿ ಈ ಸ್ವಾತಂತ್ರ್ಯಂ
ಶ್ರೀ ಚಾಮುಂಡಿಯ ಪದತಲಕೆ!
ಅರ್ಪಿತವಾಗಲಿ ಈ ಸ್ವಾತಂತ್ರ್ಯಂ
ಶ್ರೀ ಪುರುಷೋತ್ತಮ ಕ್ರೀಬಲಕೆ!
ಅರ್ಪಿತವಾಗಲಿ ಈ ಸ್ವಾತಂತ್ರ್ಯಂ
ಪರಮಹಂಸ ಗುರುವರನಡಿಗೆ!
ಅರ್ಪಿತವಾಗಲಿ ಈ ಸ್ವಾತಂತ್ರ್ಯಂ
ಅರುಣಾಚಲ ಋಷಿಯೆದೆಗುಡಿಗೆ!
ಸಮರ್ಪಿತವಾಗಲಿ ಈ ಸ್ವಾತಂತ್ರ್ಯಂ
ಶ್ರೀ ಅರವಿಂದರ ಸಿರಿಮುಡಿಗೆ!
ಸಮರ್ಪಿತವಾಗಲಿ ಈ ಸ್ವಾತಂತ್ರ್ಯಂ
ಚಿರ ಕಲ್ಯಾಣಕೆ ಅಡಿಗಡಿಗೆ!
ರಕ್ಷೆಯಾಗಲಿ ರಾಮಚಂದ್ರನ ರುದ್ರ ಕೋದಂಡ!
ರಕ್ಷೆಯಾಗಲಿ ಆಂಜನೇಯನ ವಜ್ರ ದೋರ್ದಂಡ!

ಕೋಂಟೆ ನಿಲ್ಲಲಿ ಕೃಷ್ಣಚಕ್ರದ ಭೀಷ್ಮ ಲಯಕೋಪ!
ಕೋಂಟೆ ನಿಲ್ಲಲಿ ಭೀಮಸೇನ ಭುಜ ಗದಾಟೋಪ!

ಕಾವಲಾಗಲಿ ಕಲಿ ಧನಂಜಯ ಚಾಪ ಗಾಂಡೀವ!
ಕಾವಲಾಗಲಿ ರುಂದ್ರ ಬಲರಾ ವಾಲಿ ಸುಗ್ರೀವ!

ರಕ್ಷೆಯಾಗಲಿ ದಕ್ಷಿಣೇಶ್ವರ ಪರಮ ಗುರುದೇವ!
ರಕ್ಷೆಯಾಗಲಿ ಸಕಲ ರಕ್ಷಕನಾ ಮಹಾದೇವ!

ಓಂ ಶಾಂತಿಃ ಶಾಂತಿಃ ಶಾಂತಿಃ

೧೫-೮-೧೯೪೭* ಕ್ರಿ.ಶ. ಸಾವಿರದ ಒಂಬಯ್ನೂರ ನಾಲ್ವತ್ತೇಳನೆಯ ಅಗಸ್ಟ್ ಹದಿನಾಲ್ಕನೆಯ ತಾರೀಖು ಮಧ್ಯರಾತ್ರಿ ಕಳೆದ ಮರುಕ್ಷಣದಲ್ಲಿ ಅಗಸ್ಟ ಹದಿನೈದು ಜಗಕ್ಕೆ ಕಾಲಿಟ್ಟೊಡನೆ ಭಾರತ ದೇಶ ಸ್ವತಂತ್ರವಾಗಿ ತನ್ನ ಸ್ವಾತಂತ್ರ್ಯವನ್ನು ಲೋಕಕ್ಕೆ ಘೋಷಿಸಿತು. ಅಂದಿನ ಇರುಳು ಹನ್ನೊಂದು ಗಂಟೆಯಿಂದ ಹನ್ನೆರಡೂವರೆ ಗಂಟೆವರೆಗೆ ರೇಡಿಯೋ ಪಕ್ಕದಲ್ಲಿ ಕುಳಿತು ದೆಹಲಿಯಿಂದ ಬರುತ್ತಿದ್ದ ವ್ಯಾಖ್ಯಾನ ಸಮೇತವಾದ ವಾರ್ತಾ ಘೋಷಣೆಯನ್ನೂ ವಿಫುಲ ಜನಸಂಘ ಘೋಷವನ್ನೂ ಆಲಿಸುತ್ತಿದ್ದ ಕಲ್ಪನಾ ಶಕ್ತಿ ಸಮನ್ವಿತರಾದ ಪುಣ್ಯವಂತರಿಗೆ ತಮಗಾದ ಅನುಭವಕ್ಕೆ ಪ್ರತಿಮೆಗಳಾಗಬಹುದು ಈ ಕವನ ಪಂಕ್ತಿಗಳು.

* ಅಗಸ್ಟ್ ಹದಿನೈದನೆಯ ತಾರೀಖು ಸಂಜೆ ದೆಹಲಿಯಲ್ಲಿ ಸಮಾರು ಮೂರು ಲಕ್ಷಕ್ಕೆ ಮೀರಿದ ಜನಮಯ ಚಕ್ರವಾಳದಲ್ಲಿ ನಡೆದ ರಾಷ್ಟಧ್ವಜಾರೋಹಣದ ಸಮಯದಲ್ಲಿ ಮಳೆ ಸುರಿದುದೆಂದೂ ತುಸು ಹೊತ್ತಿನಲ್ಲಿಯೆ ಹೊಳವಾಗಿ ಗಗನಾಭ್ರವೇದಿಕೆಯಲ್ಲಿ ಕೇತನ ಪಟದ ತ್ರಿವರ್ಣಗಳಿಗೆ ಭಿತ್ತಿಯಾಗಿ ಸಮರಸವಾಗಿ ಸೊಗಸಾಗಿ ಕಾಮನಬಿಲ್ಲು ಕಟ್ಟಿತೆಂದೂ ರೇಡಿಯೋ ವ್ಯಾಖ್ಯಾನಕಾರನೂ ವರ್ಣಿಸಿದ್ದನ್ನು ಸಹೃದಯರು ಗಮನಿಸಬಹುದು.