(ಪ್ರಥಮ ವಾರ್ಷಿಕೋತ್ಷವ ಸಂಧರ್ಭದಲ್ಲಿ)
೧೫೧೯೪೮

ತುಹಿನಗಿರಿ ರಂಗದಲಿ ಧವಳಗಿರಿ ಶೃಂಗದಲಿ
ಮಿಂಚಿನಂಚಿನ ಮುಗಿಲ ಸಿಂಹಾಸನೆ!
ಬೆಳದಿಂಗಳೊಳ ಮಿಂದ ಹುಣ್ಣಿಮೆಯ ಹೊನ್ನಿರುಳು
ಅಸಾಂದ್ರ ನಕ್ಷತ್ರ ಚಂದ್ರವಸನೆ!
ವಸಂತ ಕಾನ್ತಾರ ಲತಾಂತ ಸಂಶೋಬಿ
ಅನಂತ ಸಂಕಾಶ ತುಷಾರ ರಶನೆ! ―

ತೆಗೆ! ತೆಗೆ! ―
ಸಾಲ್ಗುಮೀ ಬಣ್ಣನೆಯ ಲಲಿತ ಚಾಮರ ಸೇವೆ:
ಇಂತು ನಿನ್ನನದೆಂತು ಬಣ್ಣಿಸಲಿ ನಾನಿಂದು,
ಹೇ ಸ್ವಾತಂತ್ರ್ಯ ಲಕ್ಷ್ಮಿ? ಲಕ್ಷ್ಮಿ ಎಂಬರೆ ನಿನ್ನನ್
ಓ ದುರ್ಗಮಾ ದುರ್ಗೆ? ಬಲಿಪರಂಪರೆಯಿಂದೆ
ಪೋಷಿತಳ್ ನಿತ್ಯಯಜ್ಞೋದ್ಭವೆ ಮಹಾಕಾಳಿ
ನೀನಲ್ತೆ? ಮಸಣದೋಳ್ ತಪಮಿರ್ಪ ಕಾಪಾಲಿ
ನಿನಗಿನಿಯನಲ್ತೆ? ಹೇ ರಕ್ತ ತರ್ಪಣ ತೃಪ್ತೆ,
ನಿನ್ನನೆಂತಾಂ ಚಿತ್ರಿಸಲಿ ಪೇಳ್ ಪದ್ಮಪೀಠದಲಿ?
ತೊಡಿಸಲೆಂತಾಂ ನಿನಗೆ ಸುಮಚಾರು ಹಾರಮಂ,
ಹೇ ರುಂಡಮಾಲಿನಿಯೆ? ಜ್ವಾಲಾಮುಖಿಯೆ ದಿಟಂ
ನೀಂ; ರೌದ್ರಿಣಿಯೆ ದಿಟಂ!

ವರುಷವೊಂದಾಯ್ತಲಾ
ನೀನುದ್ಭವಿಸಿ ನಮಗೆ, ಸರ್ವಮಂಗಳೆಯೆಂದು
ಸುಸ್ವಾಗತಂ ಬಯಸಿದೆವು ನಿನಗೆ ನಾವಂದು,
ಚಿತ್ರದ ಪುಲಿಯೆನೋತು ದಿಟದ ಪುಲಿಯಂ ಪಿಡಿದ
ಪಸುಳೆಪಾಂಗಾಯ್ತಲಾ ನಮಗೆ! ಹೇ ಸ್ವಾತಂತ್ರ್ಯ
ಪರಕೀಯರೊಡ್ಡಿರ್ದ ಪಂಜರದೊಳಿರ್ದಂದು
ನೀನೆನಿತು ಚೆಲ್ವೆಯಾಗಿರ್ದೆ, ಮೃಗಶಾಲೆಯೊಳ್
ಕರ್ಬೊನ್ನೊಳಿರ್ಪ ಮೃಗರಾಜನಂ ಕ್ಷೇಮದಿಂ
ನೋಳ್ಪರ್ಭಕಂಬೋಲ್, ನಿನ್ನನೀಕ್ಷಿಸಿದರ್ಗೆ?
ಬಾಗಿಲಂ ತೆರೆದ ಬೋನಿನೊಳಿರ್ಪ ಕೋಳ್ಮಿಗಂ
ನೆಗೆದು ಹೊರಚಿಮ್ಮಿದಂತಾಯ್ತಲಾ! ದಾಸರ್ಗೆ
ಶೃಂಖಲಾಲಂಕಾರ ಸೌಂದರ್ಯೆ ನೀಂ ದಿಟಂ!
ಅಂಜುಕುಳಿಗಳಿಗೆಲ್ಲ ನೀನ್; ಹೇಡಿಗಳಿಗೆಲ್ಲ ನೀನ್;
ಭೀಮಾಂಜನೇಯರಂ ಪೂಜಿಸುವ ಧೀರರ್ಗೆ
ಸರ್ವಮಂಗಳೆ, ಭದ್ರೆ, ಕಲ್ಯಾಣಿ, ಶಿವೆ, ಲಕ್ಷ್ಮಿ,
ಇನ್ನುಳಿದ ಹೆಂಬೇಡಿಗಳ್ಗೆಲ್ಲ ಮಾರಿ ಮೇಣ್
ಚಂಡಿ!

ಹೆತ್ತಯ್ಯನನೆ ಹುಟ್ಟಿದೊಡನೆಯೆ ತಿಂದೆ,
ಹೇ ಭಯಂಕರಿ! ಪಮಚನದಿಗಳಿ ನೆತ್ತರನೆ
ಹರಿಯಿಸಿದೆ! ಪ್ರಕೃತಿ ಸುಂದರ ಮಧುರ ಫಲಪುಷ್ಟ
ಪರಿಮಳದ ಕೌಶೇಯ ಕೋಮಲದ ಕಾಶ್ಮೀರದೊಳ್
ಪೊತ್ತಿಸಿದೆ ನಾಣ್ಗೇಡಿತನದ ಕಲಹಾಗ್ನಿಯಂ;
ಅಗ್ನಿಪುತ್ರಿಯೆ ದಿಟಂ ನೀನಗ್ನಿ ಸಂಭವೆ ಆ
ದ್ರೌಪದಿಯವೋಲ್! ಮತ್ತಿತ್ತಮೀ ತೆಂಕಣಾಸೆಯೊಳ್
ಗುರುತರ ಪ್ರಲಯ ನಾಟಕಕೆ ಮುನ್ನುಡಿಯುತಿಹೆ,
ಹೇ ರೌದ್ರಿ, ಕಿಡಿಕಿಡಿಯ ರಣನಾಂದಿಯಂ!

ಜನನಿ,
ನೀನಿಂದು ಕಾಳಿಯಾಗಿರ್ಪೊಡಂ ಬಲ್ಲೆನಾಂ
ನೀನಂತರದಿ ಭದ್ರೆ ಮೇಣ್ ಶುಭಂಕರಿಯೆಂಬುದಂ.
ಕ್ಲೇಶಮೂಷೆಯೊಳೆಮ್ಮ ಕಾಳಿಕೆಯ ಕಳೆಯದೆಯೆ
ನಿನ್ನ ಕಾಳೀಮುಖಂ ಲಕ್ಷ್ಮಿಯಾಗದು, ದೇವಿ.
ಬಾಪು ಮೇಣುಸ್ಮಾನರಂತೆ ಸಿಂಗರು* ನಿನ್ನ
ಯಜ್ಞ ಕುಂಡದ ಬೇಳ್ವೆಗಿಂಧನಗಳಾಗಿಹರ್;
ಈಗಳಶರೀರಗಳ್ ಆತ್ಮಬಲದಿಂದೆಮಗೆ
ಬೆಂಬಲಂ ನಿಂದಿಹರ್ ಧರ್ಮ ಸಂಗ್ರಾಮದೊಳ್‌.
ವೀರ ನಾಯಕರೆಮ್ಮ ರಾಜ್ಯಸೂತ್ರಂಗಳಂ
ಪಿಡಿದು ನಡಸಿರ್ಪರ್ ಅಕಂಪಿತರ್, ಅಚಂಚಲರ್,
ಮುಷ್ಟಿಯೊಳ್‌ ಮೇಣ್‌ ದೃಷ್ಟಿಯೊಳ್, ಅಂತೆಯೆ ತಪೋಧನರ್
ಋಷಿಯರುಂ ಕವಿಗಳುಂ ಸಂನ್ಯಾಸಯೋಗದಿಂ
ಕಾಳಿಯಿಂ ಕಮಲೆ ಮೈದೋರ್ಪಂತೆ ಮಾಡಲ್ಕೆ
ತೊಡಗಿಹರ್, ತಂತಮ್ಮ ಧರ್ಮದ ತಪಸ್ಯೆಯೋಳ್.
ಜ್ಞಾನಿಗಳ್‌, ವಿಜ್ಞಾನಿಗಳ್‌, ಯಂತ್ರ ಶಿಲ್ಪಿಗಳ್‌,
ಕುಂಚ ಲೇಖನಿ ಚಾಣ ನೀಗಿಲ್ಗಳೆಲ್ಗರುಂ
ನಿನ್ನ ಸಾಕ್ಷಾತ್ಕರಣ ಯಜ್ಞದೊಳಿಂದು ನಿಷ್ಠಿತರ್,
ಆ ಎಲ್ಲರನು ಹರಸು, ಹೇ ಸ್ವಾತಂತ್ರ್ಯ ದುರ್ಗೆ;
ನಮ್ಮ ಸಾಧನೆ ಸಿದ್ಧಿಗಾಣ್ಬಂತೆ ಶ್ರೀಘ್ರದಿಂದೀ
ದುರ್ಗಾವತಾರಮಂ ಮುಗಿಸಿ ಬಾ; ಮೂಡಿ ಬಾ
ಶಾಂತಿ ಶಶಿ ಕಾಂತಿಯಂ ಸಿಂಚಿಸಿ, ಲಸಲಕ್ಷ್ಮಯೋಲ್!

೧೦-೮-೧೯೪೮


* ಕಾಶ್ಮೀರದಲ್ಲಿ ಬಲಿಯಾದ ಭಾರತ ಸೇನೆಯ ದಳಪತಿಗಳು.