(ಕ್ರಿ. ಶ. ೧೮೧೮-೧೮೬೫) (ಸೋಂಕು ರೋಗ ಕ್ರಿಯೆಯ ವಿಧಾನ)

ಸೋಂಕು ರೋಗ ತಗುಲಿದರೆ ಇಂದು ಯಾರೂ ಗಾಬರಿ ಪಡುವುದಿಲ್ಲ. ಏಕೆಂದರೆ ಸೋಂಕು ರೋಗಗಳಿಗೆ ಇಂದು ಅನೇಕ ಔಷಧಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ನೂರು-ನೂರಿಪ್ಪತ್ತು ವರ್ಷಗಳ ಹಿಂದೆ ಈ ರೋಗಗಳು ಗಾಬರಿಗೊಳಿಸುವಂಥವಾಗಿದ್ದವು, ಮಾರಕವಾಗಿದ್ದವು. ಆಗ ಅವುಗಳ ನಿವಾರಣೆಗೆ ಅಗತ್ಯವಾದ ಔಷಧಗಳನ್ನು ಇನ್ನೂ ಅಷ್ಟಾಗಿ ಕಂಡು ಹಿಡಿದಿರಲಿಲ್ಲ. ಔಷಧಗಳನ್ನು ಕಂಡು ಹಿಡಿಯುವುದಕ್ಕೆ ಮುಂಚೆ ಸೋಂಕು ರೋಗಗಳು ಹೇಗೆ ಹರಡುತ್ತವೆ ಎಂಬುದನ್ನು ಕಂಡುಹಿಡಿಯುವುದು ಅವಶ್ಯವಾಗಿತ್ತು. ಆ ಸಮಸ್ಯೆಯನ್ನು ಬಗೆಹರಿಸಿಕೊಟ್ಟ ವೈದ್ಯ ವಿಜ್ಞಾನಿ, ಇಗ್ನಾಜ್ ಸೆಮೆಲ್ವೀಸ್. ಇವರು ಹಂಗರಿಯವರು.

ಇಗ್ನಾಜ್ ಫಿಲಿಪ್ ಸೆಮೆಲ್ವೀಸ್ ೧೮೧೮ರಲ್ಲಿ ಜನಿಸಿದರು. ವೈದ್ಯ ಶಾಸ್ತ್ರದ ಅಧ್ಯಯನ ಮಾಡಿದ ಇವರು ವಿಯೆನ್ನಾ ಆಸ್ಪತ್ರೆಯಲ್ಲಿ ಪ್ರಸೂತಿ ವಿಭಾಗದ ಸಹಾಯಕ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದರು.

ಸೋಂಕು ರೋಗ ಹೇಗೆ ಹರಡುತ್ತದೆ ಎಂಬ ಬಗ್ಗೆ ಇಗ್ನಾಜ್ ಸೆಮೆಲ್ವೀಸ್ ಮಾಡಿದ ಸಂಶೋಧನೆ ಅತ್ಯಂತ ಮಹತ್ವದ್ದು. ಈ ಸಂಶೋಧನೆಯ ಆಧಾರದ ಮೇಲೆಯೇ ಆತ ಸೋಂಕು ಅಥವಾ ಸಾಂಕ್ರಾಮಿಕ ರೋಗಗಳ ಸಮಸ್ಯೆಯನ್ನು ತಪ್ಪಿಸುವ ಸಲುವಾಗಿ ವೈದ್ಯಕೀಯ ಉಪಚಾರ ಮತ್ತು ಶಸ್ತ್ರಚಿಕಿತ್ಸೆ ಕುರಿತಾದ ಆರೋಗ್ಯಶಾಸ್ತ್ರ ನಿಯಮಗಳನ್ನು ಕಂಡುಹಿಡಿದರು. ತಾವು ಕಂಡು ಹಿಡಿದ ನಿಯಮಗಳನ್ನು ತಮ್ಮ ಕ್ಲಿನಿಕ್ಕಿನಲ್ಲೇ ಪ್ರಯೋಗಗಳ ವರೆಗೆ ಹಚ್ಚಿ ನೋಡಿದರು. ಸಾವಿನ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಿದರು.

ಆದರೆ ಈ ವಿಜ್ಞಾನಿಯೇ ಸೋಂಕು ರೋಗ ತಗುಲಿ ೧೮೬೫ರಲ್ಲಿ ನಿಧನರಾದದ್ದು ಒಂದು ವಿಪರ್ಯಾಸ.