ರೇವಣ ಸಿದ್ಧನ ವೃತ್ತಾಂತ

ಶಿವನೆ ನಮ್ಮಯಿ ದೇವರು ಬಂದಾರು ಬನ್ನೀರೆ
ಸ್ವಾಮಿ ನಮ್ಮಯ ದೇವರು ಬಂದಾರ ಬನ್ನೀರೆ
ಏನಮ್ಮ ಚಲುವ ದೇವರಿಗೆ ಎಂಥಾ ಹೂಗೋಳು ಬಂದಾವೆ
ಸಗರದ ಸಣ್ಣ ಮಲ್ಲಿಗಿ ಬಂದಾವ ದುರ್ಗದ ದುಂಡಮಲ್ಲಿಗಿ
ಕೆಸರಗೊಟ್ಟ ಕ್ಯಾದಿಗಿ ಬಂದಾವ ಮರಳಗೊಟ್ಟ ಮಲ್ಲಿಗೆ
ಈಳಗಿ ಹಚ್ಯಾರ ಸೀಳಿ ನೈದರ ಬಾಳಿ ದಿಂಡಿನ ಭಾಸಿಂಗ
ಕಟ್ಯಾರೋ ಕೈಲಾಸದ ಮಾಲಿ ಒಟ್ಯಾರೋ ಹೂವಿನ ಬಣಮೇನ
ಒಟ್ಟಿದ ಹೂವಿನ ಒಣಮಿಯ ಮ್ಯಾಲ ಹೊಟ್ಟಿ ಮೇಲ ಮಾಡಿ ಆಡ್ಯಾನ
ಹೂವಿನಾಗ ಹುದಗ್ಯಾನ ಮಾಲ್ಯಗ ಮಲಗ್ಯಾನ ಮಣ್ಯಗ ಕಣ್ಣ ತೆರದಾನ
ಮಗ್ಯಾಗ ಕಣ್ಣ ತೆರದಾನ ಜಗ್ಗಿನ ಗಾಳಿ ಹೊಡೆದಾನ
ಮಾರಗ ಮಾರಗಂದಾರೆ ಯಾವಲಿ ಇರುವತಾವೇನ
ಏನಮ್ಮ ದೇವರ ಮಾರಗ ಭುಂಯಾ ಕಾಡಮಗೇರ‍್ಯಾಗ
ಭುಂಯಾ ಕಾಡಮಗೇರ‍್ಯಾಗೆ ನೆಲದ ಭುಂಯಾರದೊಳಗೇನಾ
ನೆಲದ ಭುಂಯಾರದೊಳಗೇನೆ ಗುರುವ ರೇವಣಸಿದ್ಧನ
ಗುರುವ ರೇವಣಸಿದ್ಧನ ಮನದಾಗ ಯೋಚನ ಮಾಡ್ಯಾನ
ಮನದಾಗ ಯೋಚನ ಮಾಡ್ಯಾನೆ ಭಿಕ್ಷುಕ ಹೋಗಬೇಕಾಂದನ
ಶರಣ ತಿಂಗಳ ಕಡಿಯೇನ ಹಾಲಿನ ಬಿಕ್ಷಕ ಹೋಗಬೇಕಾಂದನ
ಹೊಕ್ಕಳ ಗಂಟಿ ಕಟ್ಯಾನೆ ಮಳಕಾಲ ಜಂಗ ಕಟ್ಯಾನ
ರುಂಡಮಾಳ ಹಾಕ್ಯಾನೆ ಗುಂಡಮಣಿಗೋಳು ಹಾಕ್ಯಾನ
ಮುಂಗೈಗ ಜೋಳಗಿ ಹಾಕ್ಯಾನೆ ಕ್ಯಾವಿಯ ಭಗವಾ ಹಾಕ್ಯಾನ
ಕ್ಯಾವಿಯ ಭಗವಾ ಹಾಕ್ಯಾನೆ ಲ್ಯಾವಿ ದಂಡಕೋಲ ಹಿಡದಾನ
ಲ್ಯಾವಿಯ ದಂಡಕೋಲ ಹಿಡದಾನೆ ಕೈಯಾಗ ತ್ರೀಸೂಲ ಹಿಡದಾನ
ಕೈಯಾಗ ತ್ರೀಸೂಲ ಹಿಡದಾನೆ ಮುಳ್ಳಾಆಂವಿಗಿ ಹಾಕ್ಯಾನ
ಮುಳ್ಳ ಆಂವಿಗಿ ಹಾಕ್ಯಾನೆ ಕಾಲರುಳಿಗೋಳು ತೊಟ್ಟಾನ
ಗುರುವ ರೇವಣಸಿದ್ದನೆ ನೆಲದ ಭುಂಯಾರದೊಳಗೇನ
ಹೊನ್ನ ಹೊಸ್ತುಲ ಧಾಟ್ಯಾನೆ ಏಳಗಜದ ಕಲ್ಲೇನ
ಏಳಗಜದ ಕಲ್ಲೇನೆ ಈಡ ಬಾಗಲ ಮಾಡ್ಯಾನ
ಏನಮ್ಮ ಗುರುವ ಬರುವಾಗೆ ಮುಗಲನೆ ಥೆರಿ ಹೊಡದಾವೆ
ಮುಗಲನೆ ಥೆರಿ ಹೊಡದಾವೆ ಭೂಮಿನೆ ಭುಗುಲಂದಾವ
ಗುರುವ ರೇವಣಸಿದ್ಧನೆ ರಾಯಿಮಾರಗ ಹಿಡದಾನ
ಅಲ್ಲ್ಯಾನೆ ಇಲ್ಲ್ಯಾನೇನ ಎಲ್ಲಿಗ ಬರುವುತಾರೇನ
ಶರಣ ತಿಗಳ ಕಡಿಯಾ ಸೋಮರ ಹಾಲಿನ ಭಿಕ್ಷಕ ಬಂದಾನ
ಶರಣ ತಿಂಗಳ ಕಡಿಯಾ ಸೋಮರ ಹಾಲಿನ ಭಿಕ್ಷಕ ಬಂದಾನ
ಹೋಗುತ ಹೋಗುತಲ್ಲೇಳ ಎಲ್ಲಿಗ ಬರುತಾನೇನಯ್ಯ
ಹೋಗುತ ಹೋಗುತಲ್ಲೇಳ ಹಾರರ ಗುಂಡವ್ವನ
ಹಾರರ ಗುಂಡವ್ವನ ಮನಿಗಿ ಕೋರಣ ಭೀಕ್ಷೇಳಂದಾನ
ಕಡಿಯಾಗ ಆಗಿನಿ ಮಡಿಯಾ ಉಟ್ಟಿನಿ ಮುಂದಿನ ಮನಿಯೊಂದು ಆಗಲೆ
ಮಾನವಿಲ್ಲದ ಹೀನ ಜಾತಿ ಎಂಥಾ ಮಾತೊಂದು ಆಡಿದೆ
ಗುರುವ ರೇವಣಸಿದ್ಧನೆ ನಿಂತಲ್ಲೆ ಮಾಯವಾದನ
ನಿಂತಲ್ಲೆ ಮಾಯವಾದನೆ ಎಲ್ಲಿಗ ಬಂದಾನೇನಯ್ಯ
ರಡ್ಡೇರ ನೀಲವ್ವನ ಮನಿಗೆ ಕೋರಣ ಬಿಕ್ಷೇಳಂದಾನ
ಕೋರಣ ಬಿಕ್ಷೇಳಂದಾನೆ ರೆಡ್ಡೇರ ನಿಲವ್ವನ
ಯಾವ ನಾಡದ ಜಂಗಮ ಎಂಥಾ ಬಿಕ್ಷಕ ಬಂದಿದೆ
ಶರಣ ತಿಂಗಳ ಕಡಿಯಾ ಸೋಮರ ಹಾಲಿನ ಬಿಕ್ಷಕ ಬಂದೇನ
ಚರಗಿ ಹಿಡದೀನೆ ಕರಗೋಳ ಬಿಟ್ಟೀನೆ ಚರಿಗಿ ಕೈಯಾಗ ಹಿಡದೀನೆ
ಚರಗಿ ಕೈಯೋಳ ಹಿಡದೀನೆ ಕೈವಂದು ಖಾಲಿ ಇಲ್ಲೇನ
ನಿನ್ನ ಕರಗೋಳಲ್ಲೇನ ನಿನ್ನಗಿಲ್ಲದಂಗಾಗಲೆ
ನಿನ್ನ ಕರಗೋಳಲ್ಲವ್ವ ನಿನ್ನಗಿಲ್ಲದಂಗಾಗಲೇ
ನಿನಗ ಇಲ್ಲದಂಗಾಗಲೆ ಕೈವಂದು ಖಾಲಿ ಆಗಲೇ
ಗುರುವ ರೇವಣಸಿದ್ಧನ ನಿಂತಲೆ ಮಾಯಾವಾದವ
ಅಲ್ಲ್ಯಾನ ಇಲ್ಲ್ಯಾನೇನ ಎಲ್ಲಿಗ ಬರುವುತಾನೇನೆ
ಇಳದಲ್ಲಿ ಇಳಿಗಾಳೇನ ಸುಳದಲ್ಲಿ ಸುಳಿಗಾಳೇನ
ರಾಯರ ಓಣಿಲಿ ಹಾಯ್ದನೆ ರಡ್ಡೇರ ಮನಿಯ ಮುಂದೇನ
ರಡ್ಡೇರ ಮನಿಯ ಮುಂದೇನ ಚಕ್ಕರಗಟ್ಟಿ ಮುಂದೇನ
ಚಕ್ಕರಗಟ್ಟಿ ಮುಂದೇನೆ ಕುರಬರ ಸಿದ್ದವ್ವನ
ಕುರಬರ ಸಿದ್ದವ್ವನ ಮನಿಗಿ ರೇವಣ ಬರುವುತಾನೇನ
ರೇವಣ ಬರುವುತಾನೇನ ಏನಂದಾಡುತಾನೇನ
ಸರ್ವ ಕುಲದ ಹಿರಿಯಾ ಬಾ ನನ್ನ ಗುರುವ ರೇವಣಸಿದ್ಧನ
ಗುರುವ ರೇವಣಸಿದ್ಧಗೆ ಕುರುಬರ ಸಿದ್ದವನ
ಕುರುಬರ ಸಿದ್ದವನೇ ಏನಂದಾಡುತಿದ್ದಳ
ಏ ನನ್ನ ಗುರುವ ನೀ ಬಾರೋ ಎಂಥ ಬಿಕ್ಷಕ ಬಂದೀದೆ
ಶರಣತಿಂಗಳ ಕಡಿಯಾ ಸೋಮರ ಹಾಲಿನ ಬಿಕ್ಷಕ ಬಂದೇನ
ಕುರುಬರ ಸಿದ್ದವನೇ ಒಳ್ಳೆದು ಒಳ್ಳೇದಂದಾಳ
ಚಕ್ಕರಗಟ್ಟಿ ಮ್ಯಾಲೇನ ರೇವಣಸಿದ್ದನಿದ್ದಾರ
ಗುರುವ ರೇವಣಸಿದ್ದನ ತಾವೊಂದು ಮೂರುತಿ ಆದನ
ಮನಿಯಾ ಸಾರುಣಿ ಮಾಡ್ಯಾಳ ಮನವಂದು ಮೀಸಲ ಹಾಕ್ಯಾಳ
ಮನವ ಮೀಸಲ ಹಾಕ್ಯಾಳೆ ಮನಿಯಾ ಸಾರುಣಿ ಮಾಡ್ಯಾಳ
ಏನಮ್ಮವ್ವ ಸಿದ್ದವ್ವ ಗಚ್ಚಿನ ಬಚ್ಚಲಕ ಹೋದಾಳ
ಮಡಿ ಕಳದ ಮಡಿ ಉಟ್ಟಾಳೆ ಎರದಾಳ ಹೆಣುಲ ಹಾಕ್ಕಾಳ
ಎರದಾಳ ಹೆಣುಲ ಹಾಕ್ಯಾಳೆ ಹಣಿಯಲಿ ಕುಂಕುಮ ವಿಟ್ಟಾಳ
ಹಣಿಯಲಿ ಕುಂಕಮಿಟ್ಟಾಳೆ ಹಲ್ಲಿಗಿ ಜಾಚೇಲಿ ಹಚ್ಯಾಳ
ಕೈಯಾಗ ಚರಗಿ ಹಿಡದಾಳೆ ಗೆಜ್ಜಿ ಬಿಂದಿಗಿ ಹಿಡದಾಳ
ಗೆಜ್ಜಿ ಬಿಂದಗಿ ಹಿಡದಾಳೆ ಈಡ ಬಾಗಲ ತೆರದಾಳ
ಈಡ ಬಾಗಲ ತೆರದಾಳೆ ದೊಡ್ಡಿ ಒಳಗೆ ಹೋದಳ
ದೊಡ್ಡಿ ಒಳಗೆ ಹೋದಾಳೆ ಹುಟ್ಟಗ್ವಾಮರಿ ಆಡೇನ
ಹುಟ್ಟಗ್ವಾಮರಿ ಆಡೇನ ಕಾಮಧೇನು ಇದ್ದಾವ
ಕಾಮಧೇನು ಕಲ್ಪವೃಕ್ಷ ಆಡ ಮುಂದಕ ಕರದಾಳ
ಆಡ ಮುಂದಕ ಕರದಾಳ ಆಡ ಮುಂದ ಬಂದು ನಿಂತಾವ
ಬಾರ ಬಾರ ತಾಯವ್ವ ನಮ್ಮ ಗುರುವ ಬಂದಾನ
ಶರಣಸೋಮರ ಕಡಿಯಾ ತಿಂಗಳ ಹಾಲಿನ ಬಿಕ್ಷಾಕ ಬಂದಾನ
ಮರಿಯಾ ಕುಡದ ಎಂಜಲ ಹೋತ ಹಾರಿದ ಎಂಜಲ
ಏ ನನ್ನ ಗುರುವನಲ್ಲವ್ವ ಮೀಸಲಹಾಲ ಬೇಡ್ಯಾನ
ಗಿಣ್ಣ ಹಿಂಡುತಾಳೇನ ಚರಗಿ ತುಂಬುತಾಳೇನ
ಹಾಲ ಹಿಂಡುತಾಳೇನ ಚರಗಿ ತುಂಬುತಾಳೇನ
ಚರಗಿಯ ತುಂಬುತಾಳೇನ ಮಿಸಲದ್ಹಾಲ ತಂದಾಳ
ಮೀಸಲದ್ಹಾಲ ತಂದಾಳ ಗುರುವ ರೇವಣಸಿದ್ದಗ
ಗುರುವ ರೇವಣಸಿದ್ದಗೆ ಹಾಲ ಕೊಡವುತಾಳೇನ
ಏನಮ್ಮ ರೇವಣಸಿದ್ಧನ ಹಾಲ ಸವಿದಾನೇನಯ್ಯ
ಹಾಲ ಸವಿದಾನೇನಪ್ಪ ಹರಕಿ ಕೊಡುವುತಾನೇನಯ್ಯ
ನನಗೆ ಬಿಕ್ಷೆ ಕೊಟ್ಟಿದೆ ದೊಡ್ಡಿಯಾ ದೊಡ್ಡದಾಗಲೇ
ಒಂದಕೆರಡನಾಗಲೆ ಎರಡಕ ಹತ್ತನಾಗಲೇ
ಎರಡಕ ಹತ್ತನಾಗಲೇ ಹತ್ತಕ ಸಾವೀರಾಗಲೇ
ಹಾಲ ದಾನಿವರ ಹಟ್ಯಾಗ ಮಜ್ಜಿಗಿ ದಾನಿವರ ಮನಿಯಾಗ
ಹಸುವಿಗ ಹಾಲ ಹಾಕ್ಯಾರೆ ಸಿಸುವಿಗ ಬೆಣ್ಣೊಂದು ಇಟ್ಟಾರೆ
ಬಂಜಿ ತೊಟ್ಟಲ ಕಟ್ಟಲೆ ಬಾಣತಿ ಜೋಗಳ ಹಾಡಲೆ
ಕುಂಬಿ ಕುಂಬಿ ಹತ್ತಲೆ ರಂಬಿ ರಂಬಿ ಹತ್ತಲೆ
ಹಗುಲ ಬೆಳ್ಳನಾಗಲೇ ಹಗಲ ದೀವಟಗಿ ಆಗಲೆ
ಸರ್ವ ಕುಲಕ ಹಿರಿಯಾ ಬಾ ನನ ಗುರುವ ರೇವಣಸಿದ್ದನ
ಗುರುವ ರೇವಣಸಿದ್ದನೆ ಹರಕಿ ಕೊಡುವುತಾನೇನ
ಕುರುಬರ ಸಿದ್ದವನ ಗಟ್ಟಿ ಪಾದ ಹಿಡದಾಳ
ಗಟ್ಟಿ ಪಾದ ಹಿಡದಾಳ ಮಂಡೀಲಿ ಹಸ್ತ ಇಟ್ಟಾನ
ಯಾವಂದ ಯಾವ ಕಾಲದಲ್ಲಿ ಇದಿಯಾ ತೌರ ತಿಳಿಯವ್ವ
ಪಾದ ಬಿಡುವುತಾಳೇನ ಪಾವನಾಗುತಾಳೇನ

ಗುರುವ ರೇವಣಸಿದ್ದನೆ ರಾಯಿಮಾರಗ ಹಿಡದಾನೇನ
ಅಲ್ಲ್ಯಾನ ಇಲ್ಲ್ಯಾನೇನ ಎಲ್ಲಿಗ ಹೋಗುತಾನೇನ
ಅಲ್ಲ್ಯಾನ ಇಲ್ಲ್ಯಾನೇನ ಅಗಸರ ಮಡಿವಾಳನ
ಅಗಸರ ಮಡಿವಾಳನ ಮನಿಗಿ ಗುರುವ ರೇವಣಸಿದ್ದನ
ಗುರುವ ರೇವಣಸಿದ್ದನ ಕೋರಣ ಬಿಕ್ಷೇಳಂದಾನ
ಮಡಿವಾಳನ ಮಡದಿ ನೀಲಮ್ಮ ಊರಾನ ಬಟ್ಟಿಗ ಹೋಗ್ಯಾಳ
ಅಗಸರ ಮಡಿವಾಳನ ಮನಿಯಾಗ ಇರುವುತಾನೇನ
ಮನಿಯಾಗಿರುವುತಾನೇನ ಯಾವ ನಾಡದ ಜಂಗಮ
ಯಾವ ನಾಡದ ಜಂಗಮ ಕೋರಣ ಭಿಕ್ಷೇಳಂದಾನ
ಯಾವ ನಾಡದ ಜಂಗಮನೆದು ಮನಿಯಾ ಹೊರಗೆ ಬಂದಾನೆ
ಹೊರಳಿ ಮನಿಯಾಕ ಹೋದನೆ ಮರ ತುಂಬ ಮುತ್ತ ತಂದಾನ
ಮರ ತುಂಬ ಮುತ್ತ ತಂದಾನೆ ಭಿಕ್ಷಾ ನೀಡಲಿ ಬಂದಾನ
ಗುರುವ ರೇವಣಸಿದ್ಧನೆ ನುಡದಾನೆ ಮಾತಾಡ್ಯಾನೆ
ಮರ ತುಂಬ ಮುತ್ತ ಮಡಿವಾಳ ಹಳಿಯಾ ಜ್ವಾಳನಿದ್ದಾವ
ಒಲ್ಲೇನ ನುಡಿವಾಳ ಒಲ್ಲೇನ ಹಿಂತಾ ಭಿಕ್ಷಾ ಒಲ್ಲೇನ
ನನ್ನ ಮನಿಯಾ ಒಳಗೇನ ಹಳಿಯಾ ಜ್ವಾಳನಿದ್ದಾವ
ಇಂಥ ಭಿಕ್ಷಾ ಒಲ್ಲೇನೆ ಹೊರಳಿ ಮನಿಯಾಗ ಹೋಗ್ಯಾನ
ಹೊರಳಿ ಹೋಗುತಾನೇನೆ ಮಡಿವಾಳ ಮನಿಯಾಕ ಹೋಗ್ಯಾನ
ಹವುಳ ಮುತ್ತ ತಂದಾನ ಭಿಕ್ಷಾ ನೀಡಲಿ ಬಂದಾನ
ಭಿಕ್ಷಾ ನೀಡಲಿ ಬಂದಾನ ಗುರುವ ರೇವಣಸಿದ್ದನ
ನಿನ್ನ ಮನಿಯ ಒಳಗೇನೆ ಮುಗ್ಗಜ್ವಾಳನಿದ್ದಾವ
ಅಗಸರ ಮಡಿವಾಳನೇ ಏನಂದಾಡುತ್ತಿದ್ದಾನ
ಯಾವ ನಾಡಾದ ಜಂಗಮ್ಮ ಎಂಥಾ ಭಿಕ್ಷಾ ಬೇಡಿಗೆ
ಎಂಥಾ ಭಿಕ್ಷಾ ಬೇಡಿದೆ ಬೇಡಿದ ಭಿಕ್ಷಾ ಕೊಟ್ಟೇನೆ
ಗುರುವ ರೇವಣಸಿದ್ದನೆ ನುಡದಾನೆ ಮಾತಾಡ್ಯಾನ
ಹನ್ನೆರಡು ವರ್ಷಿನ ಕಂತೇನ ಗಂಜಿ ಮಾಡಲಿಬೇಕಯ್ಯ
ಇಪ್ಪತ್ತು ವರ್ಷಿನ ಕಂತೇನ ಗಂಜಿ ಮಾಡಲಿಬೇಕಯ್ಯ
ಇಪ್ಪತ್ತು ವರ್ಷಿನ ಕಂತೇನ ಗಂಜಿ ಮಾಡಲಿಬೇಕಯ್ಯ
ಅಗಸರ ಮಡಿವಾಳನೆ ಒಳ್ಳೆದು ಒಳ್ಳೆದಂದಾನ
ಸರ್ವ ಕುಲಕ ಹಿರಿಯಾ ಬಾ ನನ್ನ ಗುರುವ ರೇವಣಸಿದ್ದನೆ
ಹನ್ನೆರಡು ವರ್ಷಿನ ಕಂತೇನೆ ಮಡಿವಾಳ ಕೈಯಾಗ ಕೊಟ್ಟಾನ
ಇಪ್ಪತ್ತು ವರ್ಷಿನ ಕಂತೇನ ಮಡಿವಾಳ ಕೈಯಾಗ ಕೊಟ್ಟಾನ
ಗುರುವ ರೇವಣಸಿದ್ದನ ನುಡದಾನೆ ಮಾತಾಡ್ಯಾನ
ಉರಿಯಾ ಕಟಗಿ ಬ್ಯಾಡಲ್ಲ ಹೊರವ ಕಟಗಿ ಬ್ಯಾಡಲ್ಲ
ಸುಣ್ಣ ಬೀಳಲಿ ಬಾರದ ಭಟ್ಟಿ ಹಾಕಲಿ ಬಾರದ
ಹರಿಯಾ ನೀರ ಬ್ಯಾಡಲ್ಲ ಹಚ್ಚು ಸಾಬನ ಬ್ಯಾಡಲ್ಲ
ಒಗಿಯಾ ಭಂಡಿ ಬ್ಯಾಡಲ್ಲ ಕಲ್ಲಿಗಿ ಬಡಿಯಲಿ ಬಾರದ
ಕಲ್ಲಿಗಿ ಬಡಿಯಲಿ ಬಾರದ ಕೈಯಲಿ ಹಿಂಡಲಿಬಾರದ
ಕೊರಿಯಾ ಕಡ್ಡಿ ಬ್ಯಾಡಲ್ಲ ಕಡ್ಡಿನ ಮನಿಯಾ ಬ್ಯಾಡಲ್ಲ
ಕಲ್ಲಿಗಿ ಬಡಿಯಲಿ ಬಾರದ ಕೈಯಲಿ ಹಿಂಡಲಿಬಾರದ
ಕೊರಿಯ ಕಡ್ಡಿ ಬ್ಯಾಡಲ್ಲ ಕುದಿಯಾ ಗಡಗಿ ಬ್ಯಾಡಲ್ಲ
ಒಳ್ಳೆದು ಒಳ್ಳೇದಂದಾನೆ ಅಗಸರ ಮಡಿವಾಳನೆ
ಒಳ್ಳೆದು ಒಳ್ಳೇದಂದಾನೆ ಇಂದ ಹೋಗತೀನಿ ಅಂದಾನ
ಇಂದ ಹೋಗತೀನಿ ಅಂದಾನೆ ನಾಳಿಗ ಬರತೇನಿ ಅಂದಾನ
ನಾಳಿಗ ಬರತೇನಿ ಅಂದಾನ ರೇವಣ್ಣ ನಿಂತಲ್ಲೆ ಮಾಯವಾದನ

ಅಗಸೂರ ಮಡಿವಾಳನೆ ದೇವರ ಕೋಲಿ ಒಳಗೇನೆ
ದೇವರ ಕೋಲಿಯ ಒಳಗೇನೆ ಜಗಲಿಯ ಮ್ಯಾಲ ಇಳುವ್ಯಾನ
ಜಗಲಿಯ ಮ್ಯಾಲೆ ಇಳುವ್ಯಾನೆ ಹಳ್ಳ ಲೋಭಾನ ಸುಟ್ಟಾನ
ನಡುವಿನ ಮನಿಯಾಗ ಕುಂತಾನೆ ಮಾರಿ ಸಣ್ಣದು ಮಾಡ್ಯಾನೆ
ಮಡಿವಾಳನ ಮಡದಿ ನೀಲಮ್ಮ ಊರನ ಬಟ್ಟಿಗ ಹೋಗ್ಯಾಳ
ಊರನ ಬೆಟ್ಟಿಗ ಹೋಗ್ಯಾಳೆ ಮಡದೀಯ ನೀಲಮ್ಮನ
ಮಡದೀಯ ನೀಲಮ್ಮನೆ ಊರಾನ ಬಟ್ಟಿ ತಂದಾಳ
ಊರನ ಬಟ್ಟಿ ತಂದಾಳೆ ಹೊರಗಿನ ಕಟ್ಟಿಗ ಒಗದಾಳ
ಊರನ ಬಟ್ಟಿ ತಂದಾಳೆ ಹೊರಗಿನ ಕಟ್ಟಿಗ ಒಗದಾಳ
ಹೊನ್ನ ಹೊಸ್ತುಲ ಧಾಟ್ಯಾಳೆ ನೀಲಮ್ಮ ಮನಿಯಾಗ ಬಂದಾಳ
ನೀಲಮ್ಮ ಮನಿಯಾಗ ಬಂದಾಳೆ ಪುರುಷನ ಮಾರಿ ನೋಡ್ಯಾಳ
ಮಾರಿ ಸಣ್ಣವಾದಾವೆ ಮಕವ ಸಣ್ಣವಾದವ
ಯಾರೇನಂದಾರ ಹೇಳಯ್ಯ ಯಾರೇನಾಡ್ಯಾರ ಹೇಳಯ್ಯ
ಯಾರೇನಾಂದರ ಹೇಳ ನನಗ ಹೊಸ್ತುಲ ತಗಸೇನಂದಾಳ
ಕಣ್ಣಿಲಂದಾರ ಹೇಳ ನನಗ ಕಣ್ಣ ತಗಸೇನಂದಾಳ
ಕಣ್ಣಿಲಂದಾರ ಹೇಳ ನನಗ ಕಣ್ಣ ತಗಸೇನಂದಾಳ
ಯಾರೇನಂದಿಲ್ಲಂದಿದ್ದ ಯಾರೇನಾಡಿಲ್ಲಂದಿದ್ದ
ಯಾವ ನಾಡ ಜಂಗಮ್ಮ ಭಿಕ್ಷಾಕ ಬಂದೇನಂದಾನ
ಹವುಳ ಮುತ್ತು ವೈದರ ಹಳಿಯಾ ಜ್ವಾಳನಂದಾನ
ಮನಿಯಾಗ ಹೊರಳಿ ತಂದೇನ ಬಿಳಿಯಾ ಮುತ್ತ ವೈದೇನ
ಬಿಳಿಯಾ ಮುತ್ತು ವೈದರೆ ನುಡದಾನೆ ಮಾತಾಡ್ಯಾನ
ನನ್ನ ಮನಿಯಾ ಒಳಗೇನೆ ಮುಗ್ಗಜ್ವಾಳನಿದ್ದಾವ
ಹೊರಳಿ ಹೋದೇನಂದಾನೆ ಎಂಥಾ ಭಿಕ್ಷಾ ಬೇಡ್ಯಾನೆ
ಯಾವ ನಾಡದ ಜಂಗಮನೇನು ಎಂಥಾ ಭಿಕ್ಷಾ ಬೇಡ್ಯಾನೆ
ಯಾವ ನಾಡದ ಜಂಗಮನೇನು ಎಂಥಾ ಭಿಕ್ಷಾ ಬೇಡ್ಯಾನ
ಎಂಥಾ ಭಿಕ್ಷಾ ಬೇಡ್ಯಾನೆ ಗುರುವ ರೇವಣಸಿದ್ದನ
ಹನ್ನೆರಡು ವರ್ಷಿನ ಕಂತೇನೆ ಇಪ್ಪತ್ತು ವರ್ಷಿನ ಕಂತೇನ
ಹನ್ನೆರಡು ವರ್ಷಿನ ಕಂತೇನೆ ಗಂಜಿ ಮಾಡಲಿಬೇಕಯ್ಯ
ಗಂಜಿ ಮಾಡಲಿಬೇಕಪ್ಪ ಗಳಗಿ ಹಾಕಲಿಬೇಕಯ್ಯ
ಇಪ್ಪತ್ತು ವರ್ಷಿನ ಕಂತೇನ ಗಂಜಿ ಮಾಡಲಿಬೇಕಯ್ಯ
ಗಂಜಿ ಮಾಡಲಿಬೇಕಪ್ಪ ಗಳಗಿ ಮಾಡಲಿಬೇಕಯ್ಯ
ಗುರುವ ರೇವಣ್ಣಸಿದ್ದನ ನುಡದಾನೆ ಮಾತಾಡ್ಯಾನ
ಹೂಡ ಒಲಿಯಾ ಬ್ಯಾಡಪ್ಪ ಕುದಿಯಾ ಗಡಗಿ ಬ್ಯಾಡಯ್ಯ
ಕುದಿಯಾ ಗಡಗಿ ಬ್ಯಾಡಪ್ಪ ಸುಣ್ಣಕ ಬೀಳಲಿ ಬಾರದ
ಸುಣ್ಣಕ ಬೀಳಲಿಬಾರದ ಭಟ್ಟಿಗಿ ಬೀಳಲಿಬಾರದ
ಉರುವ ಕಟಗಿ ಬ್ಯಾಡಪ್ಪ ಕುಡಿಯಾ ನೀರ ಬ್ಯಾಡಯ್ಯ
ಹಚ್ಚು ಬೆಂಕಿ ಬ್ಯಾಡಪ್ಪ ಕುದಿಯಾ ಗಡಗಿ ಬ್ಯಾಡಯ್ಯ
ಒಗಿಯಾ ಭಂಡಿ ಬ್ಯಾಡಪ್ಪ ಹರಿಯಾ ನೀರ ಬ್ಯಾಡಪ್ಪ
ಕಲ್ಲಿಗಿ ಬಡಿಯಲಿ ಬಾರದ ಕೈಯಲಿ ಹಿಂಡಲಿ ಬಾರದ
ಬಂಡಿಗಿ ಬಡಿಯಲಿ ಬಾರದ ಹಚ್ಚು ಸಾಬನ ಬ್ಯಾಡಂದ
ಇಷ್ಟು ಮಾತ ಹೇಳಿದ್ದ ನಿಂತಲ್ಲೆ ಮಾಯವಾಗಿದ್ದ
ಇಂದ ಹೋಗತೇನಿ ಅಂದಾನೆ ನಾಳಿಗ ಬರತೀನಿ ಅಂದಾನ
ಒಳ್ಳೆದು ಒಳ್ಳೆದಂದಾನೆ ಕಂತಿ ಇಳವೀನಿ ಅಂದಾನ
ಮಡದೀಯ ನೀಲಮ್ಮನೆ ಒಳ್ಳೆದು ಒಳ್ಳೇದಂದಾಳೆ
ಗಂಜಿ ಮಾಡತೀನಿ ಅಂದಾರೆ ಗಳಿಗಿ ಮಾಡತೀನಂದಾರ
ಮನಿಯಾ ಸಾರುಣಿ ಮಾಡ್ಯಾಳೆ ಮನವಂದು ಮೀಸಲ ಮಾಡ್ಯಾಳ
ಕಾಯ ವಜ್ಜರ ಮಾಡ್ಯಾಳೆ ಮನವಂದು ಮಿಸಲ ಮಾಡ್ಯಾಳ
ಗಚ್ಚಿನ ಬಚ್ಚಲಕ ಹೋಗ್ಯಾಳೆ ಎರದಾಳ ಹೆಣುಲ ಹಾಕ್ಯಾಳ
ಎರದಾಳ ಹೆಣಲ ಹಾಕ್ಯಾಳೆ ಎಳಿಯಾ ಬೇತುಲ ತಗದಾಳ
ಮಡಿ ಕಳದ ಮಡಿ ಉಟ್ಟಾಳೆ ಹಣಿಯಲಿ ಕುಂಕುಮಿಟ್ಟಾಳ
ಹಣಿಯಲ್ಲಿ ಕುಂಕುಮಿಟ್ಟಾಳೆ ಹಲ್ಲಿಗಿ ಜಾಚೇಲಿ ಹಚ್ಯಾಳ
ಮಡದೀಯ ನೀಲಮ್ಮನೆ ಹಿರಿಯರು ಗಳಿಸಿದ ಜಂಬೇನ
ಹಿರಿಯರು ಗಳಿಸಿದ ಜಂಬೇನ ದೇವರ ಜಗುಲಿ ಮ್ಯಾಲೇನ
ದೇವರ ಜಗುಲಿಯ ಮ್ಯಾಲೇನ ಜಂಬ್ಯಾ ಕೈಯಾಗ ಹಿಡದಾಳ
ಜಂಬ್ಯಾ ಕೈಯಾಗ ಹಿಡದಾಳೆ ನುಡದಾಳೆ ಮಾತಾಡ್ಯಾಳೆ
ಹರಕಿನಾಗಿ ಬಂದಾವೆ ವರವ ಕೂಡಿ ಬಂದಾವ
ವರವ ಕೂಡಿ ಬಂದಾರೆ ಜಲ್ಮ ಸಾರ್ಥಕ ಮಾಡಯ್ಯ
ಗುರುವ ರೇವಣಸಿದ್ಧಗೆ ಜಲ್ಮ ಸಾರ್ಥಕ ಮಾಡಯ್ಯ
ಜಲ್ಮ ಸಾರುತ ಮಾಡಯ್ಯ ಸಿರಸ ಪವಾಡ ಕೊಟ್ಟೇನ
ಜಂಬ್ಯಾ ಹಿಡಯುತಾಳೇನ ಉಟ್ಟರದೊಳಗ ಸಿಗಸ್ಯಾಳ
ಹನ್ನೆರಡು ವರ್ಷಿನ ಕಂತೇನ ಇಪ್ಪತ್ತು ವರ್ಷಿನ ಕಂತೇನ
ಇಪ್ಪತ್ತು ವರ್ಷಿನ ಕಂತೇನ ಮಡಿವಾಳಗ ಹೊರಸುತಾಳೇನ
ಊರಾನ ಬಟ್ಟೆ ನೀಲಮ್ಮ ಮಂಡಿಯಾ ಮ್ಯಾಲ ಹೊತ್ತಾಳ
ಮಂದನ ಮಳಗೀಲಿ ಬಂದಾರೆ ಚಂದನ ಚಾವುಡಿಲಿ ಹಾಯ್ದರ
ರಾಯರ ಓಣಿಲಿ ಹಾಯ್ದರೆ ರಡ್ಡೇರ ಮನಿಯ ಮುಂದೇನ
ರಾಜವಾಡದ ಮುಂದೇನೆ ಬಣ್ಣದಗಸೀಲಿ ಹಾಯ್ದರ
ಬಣ್ಣದಗಸೀಲಿ ಹಾಯ್ದರೆ ರಾಯಿಮಾರಗ ಹಿಡದಾರ
ಅಲ್ಯಾರ ಇಲ್ಯಾರೇನೆ ಎಲ್ಲಿಗ ಬರವುತಾರೇನ
ಎಲ್ಲಿಗ ಹೋಗುತಾರೇನ ಹರಿಯಾ ಹಳ್ಳದೊಳಗೇನ
ಹರಿಯಾ ಹಳ್ಳದೊಳಗೇನ ಊರನ ಬಟ್ಟಿ ಒಗದಾಳ
ಊರಾನ ಬಟ್ಟಿ ಒಗದಾಳ ಗಳಗಿ ಹಾಕುತಾಳೇನ
ಗಳಗಿ ಹಾಕುತಾಳೇನ ಪುರುಷಾಗ ಹೇಳುತಾಳೇನ
ಯಾಳ್ಯಾಗೋಳು ಬಹಳಾದವೇ ಗಂಜಿ ಮಾಡಬೇಕಂದಾಳ
ಗಂಜಿ ಮಾಡಬೇಕಂದಾಳೆ ಗಳಗಿ ಮಾಡಬೇಕಂದಾಳ
ಏ ನನ್ನ ಪುರುಷ ನೀ ಬಾರೋ ಜಂಬ್ಯಾ ಕಿತ್ತುತಾಳೇನ
ಎತ್ತಿ ಹಾಕಲಿಬೇಕಪ್ಪ ನನ್ನ ಕುತ್ತಗಿ ಕೊಯಲಿಬೇಕಲ್ಲ
ಒಂದಾ ತೆಲಿಯಾ ಎರಡ ಮಲಿಯಾ ಹೂಡ ಒಲಿಯಾ ಮಾಡಯ್ಯ
ಕಯ್ಯಾ ಕಾಲ ಕಡದ ನೀನು ಉರುವ ಕಟಗಿ ಮಾಡಯ್ಯ
ಉರುವ ಕಟಗಿ ಮಾಡೇ ನೀನು ಮೈಯಾ ಮ್ಯಾಲಿನ ಕೂದಲ
ಮೈಯಾ ಮ್ಯಾಲಿನ ಕೂದಲಕೊಂದು ಕಡ್ಡಿ ಮಾಡಲಿಬೇಕಯ್ಯ
ಕುತ್ತಗಿ ಕೊಯ್ದ ರಕ್ತನೆ ಅಳಿಯಾ ನೀರ ಮಾಡಯ್ಯ
ಅಂಗೈ ಬಂಡಿ ಮಾಡೋ ನೀನು ಮುಂಗೈ ಹಿಂಡಲಿ ಬೇಕಯ್ಯ
ತೆಲಿಯಾ ಮಿದುಡ ತಗದ ನೀನು ಹಚ್ಚು ಸಾಬನ ಮಾಡಲ್ಲ
ಒಂದಾ ತೆಲಿಯಾ ಎರಡ ಮಲಿಯಾ ಹೂಡ ಒಲಿಯಾ ಮಾಡಯ್ಯ
ಹೂಡ ಒಲಿಯಾ ಮ್ಯಾಲೇನ ಡೊಕ್ಕಿ ಹಿಡಿಯಲಿಬೇಕಯ್ಯಾ
ಡೊಕ್ಕಿ ಹಿಡಿಯಲಿಬೇಕಲ್ಲೊ ಕಡ್ಡಿ ಕೊರದ ಹಚ್ಚಯ್ಯ
ಕೈಯಾ ಕಾಲ ಕಡದ ನೀನು ಉರವ ಕಟಗಿ ಮಾಡಲ್ಲ
ಹ್ಯಾಂಗ ಮಾಡಬೇಕಂದಾರೆ ಹ್ಯಾಂಗ ಹೊಡಿಬೇಕಂದಾರ
ಮಡದೀಯ ನೀಲಮ್ಮನೆ ಕಣ್ಣ ತೆರಿಯುತಾಳೇನ
ನನ್ನ ಮಾತ ಕೇಳಿದರ ಅಪ್ಪಗ ಹುಟ್ಟಿದಿ ಅಂದಾಳ
ಅಪ್ಪಗ ಹುಟ್ಟಿದಿ ಅಂದಾಳೆ ಗುರುವಿನ ಹರಕಿ ಮುಟ್ಟಿಸಿಗೆ

ಅಗಸರ ಮಡಿವಾಳನೆ ಉರದ ಬೆಂಕಿನಾದನ
ಉರದ ಬೆಂಕಿನಾದನೆ ತೆಲಿವಂದು ಖೆಂಡನಾದನ
ಹುಟ್ಟಿದು ಒಮ್ಮೇಳಂದಾನೆ ಸಾವುದು ಒಮ್ಮೇಳಂದಾನ
ಕೈಯಾಗ ಜಂಬ್ಯಾ ಹಿಡಿದಾನೆ ಮಡದೀನ ಎತ್ತಿ ಹಾಕ್ಯಾನ
ಮಡಿದೀಯ ನಿ ಲಮ್ಮಗೆ ಕುತ್ತಿಗಿ ಕೊಯ್ಯುತಾನೇನ
ಎರಡ ಮಲಿಯಾ ಒಂದ ತಲಿಯಾ ಹೂಡ ಒಲಿಯ ಮಾಡ್ಯಾನ
ಕೈಯಾ ಕಾಲ ಕಡದಾನೆ ಉರವ ಕಟಗಿ ಮಾಡ್ಯಾನ
ಕಡ್ಡಿ ಮುಂದ ಇಟ್ಟಾನೆ ಡೊಕ್ಕಿ ಸೀಳುತಾನೇನ
ಎರಡ ಮಲಿಯಾ ಒಂದ ತೇಲಿಯಾ ಹೂಡ ಒಲಿಯ ಮಾಡ್ಯನ
ಕೈಯಾ ಕಾಲ ಕಡದಾನೆ ಉರವ ಕಟಗಿ ಮಾಡ್ಯಾನ
ಕಡ್ಡಿ ಮುಂದ ಇಟ್ಟಾನೆ ಡೊಕ್ಕಿ ಸೀಳುತಾನೇನ
ಎರಡ ಮಲಿಯಾ ಒಂದು ತೇಲಿಯಾ ಹೂಡ ಒಲಿಯಾ ಮಾಡ್ಯಾನ
ಎರಡ ಮಲಿಯಾ ಒಂದು ತೇಲಿಯಾ ಹೂಡ ಒಲಿಯಾ ಮಾಡ್ಯಾನ
ಹೂಡ ಒಲಿಯಾ ಮ್ಯಾಲೇನೆ ಡೊಕ್ಕಿ ಇಡುವುತಾನೇನ
ಡೊಕ್ಕಿ ಹಿಡಿಯುತಾನೇನೆ ತೆಲಿಯನ ಕೂದಲ ಹರದಾನ
ಕೈಯಾ ಕಾಲ ತಗದಾನೆ ಒಲಿಯಾಗ ಇಡುವುತಾನೇನ
ಕಡ್ಡಿ ಕೊರದಾನಲ್ಲಪ್ಪ ಒಲಿಯಾ ಪುಟವ ಮಾಡ್ಯಾನ
ಒಲಿಯಾ ಪುಟವ ಮಾಡ್ಯಾನೆ ಒಲಿಯಾ ಕುದಿಯಾ ಹಿಡದಾನ
ಹನ್ನೆರಡು ವರ್ಷಿನ ಕಂತೇನ ಇಪ್ಪತ್ತು ವರ್ಷಿನ ಕಂತೇನ
ಇಪ್ಪತ್ತು ವರ್ಷಿನ ಕಂತೇನ ಡೊಕ್ಕಿ ಒಳಗ ಇಟ್ಟಾನ
ಡೊಕ್ಕಿ ಒಳಗ ಇಟ್ಟಾನೆ ಕುದಿಯಾ ಹಿಡಯುತಾನೇನ
ಕುದಿಯಾ ಹಿಡಿಯುತಾನೇನ ಉಕ್ಕ ಬರುವುತಾವೇನ
ಉಕ್ಕಾ ಬರವುತಾವೇನ ಕಟಗಿ ಕಡಿಯಾಕಾದವ
ಕಟಗಿ ಕಡಿಯಾಕಾದಾವೆ ಗಂಜಿ ಬಯಲಿಗ ತಗದಾನ
ಗಂಜಿ ಬಯಲಿಗ ತಗದಾನೆ ಅಂಗೈ ಬಂಡಿ ಮಾಡ್ಯಾನ
ಅಂಗೈ ಬಂಡಿ ಮಾಡ್ಯಾನೆ ಅರುವಿ ನೀರ ನೋಡ್ಯಾನ
ಹರಿಯಾ ರಂಗದೊಳಗೇಳ ಕಂತಿ ಗಂಜಿ ಮಾಡ್ಯಾನ
ತಲಿಯ ಮಿದಡ ತಗದಾನ ಅಂಗೈ ಭಂಡಿ ಮಾಡ್ಯಾನೆ
ಅಂಗೈ ಭಂಡಿ ಮಾಡ್ಯಾನೆ ತೆಲಿಯನ ಮಿದಡ ಹಚ್ಯಾನ
ತೆಲಿಯಾನ ಮಿದಡ ಹಚ್ಯಾನ ರಕ್ತದೊಳಗ ಇಟ್ಟಾನ
ಹನ್ನೆರಡು ವರ್ಷಿನ ಕಂತೇನ ಗಂಜಿ ಮಾಡುತಾನೇನೆ
ಗಂಜಿ ಮಾಡುತಾನೇನೆ ಗಳಗಿ ಹಾಕುತೇನೇನ
ಇಪ್ಪತ್ತು ವರ್ಷಿನ ಕಂತೇನ ಗಳಗಿ ಮಾಡುತಾನೇನ
ಗಂಜಿ ಮಾಡುತಾನೇನ ಗಳಗಿ ಹಾಕುತಾನೇನ
ಗುರುವಿನ ಕಂತಿನಲ್ಲೇಳ ಗಳಗಿ ಮಾಡುತಾನೇನ
ಹನ್ನೆರಡು ವರ್ಷಿನ ಕಂತೇನ ಇಪ್ಪತು ವರ್ಷಿನ ಕಂತೇನ
ಇಪ್ಪತ್ತು ವರ್ಷಿನ ಕಂತೇನ ಮಂಡಿಯ ಮ್ಯಾಲ ಹೊತ್ತಾನ
ಊರನ ಬಟ್ಟಿ ಮಡಿವಾಳ ಹೆಗಲಿನ ಮ್ಯಾಲ ಹಾಕ್ಯಾನ
ಹೆಗಲಿನ ಮ್ಯಾಲೆ ಹಾಕ್ಯಾನೆ ಹರಿಯಾ ಹಳ್ಳ ಬಿಟ್ಟಾನ
ಅಗಸರ ಮಡಿವಾಳನೆ ಚಿಂತಿ ಮಾಡುತಾನೇನ
ಬರುವಾಗ ಇಬ್ಬರು ಬಂದೇವೆ ಹೋಗುವಾಗ ಒಬ್ಬವನಾದೇನ
ಮಾರಿ ಸಣ್ಣದು ಮಾಡ್ಯಾನೆ ಕಣ್ಣಿಗೆ ನೀರು ತಂದಾನ
ಇಲ್ಲದ ಮಡದೀನಲ್ಲೇಳ ಎಲ್ಲಿಂದ ತರಬೇಕಂದಾನ
ಅಗಸರ ಮಡಿವಾಳನೆ ಹಳ್ಳ ಬಿಟ್ಟು ನಡದಾನ
ಹಳ್ಳ ಬಿಟ್ಟು ನಡದಾನೆ ರಾಯಿ ಮಾರಗ ಹಿಡದಾನ
ಅಲ್ಲ್ಯಾನ ಇಲ್ಲ್ಯಾನೇನೆ ಬಣ್ಣದಗಸೀಲಿ ಹಾಯ್ದನ
ರಾಯರ ಓಣಿಲಿ ಹಾಯ್ದನೆ ರಡ್ಡೇರ ಮನಿಯಾ ಮುಂದೇನ
ಚಂದನ ಚೌಡೀಲಿ ಹಾಯ್ದನೆ ಮಂದನ ಮಳಗೀಲಿ ಬಂದಾನ
ರಾಜಾವಾಡದ ಮುಂದೇನೆ ತನ್ನ ಮನಿಗೆ ಬಂದಾನ
ತನ್ನ ಮನಿಗೆ ಬಂದಾನೆ ಹೊರಗಿನ ಕಟ್ಟಿ ಮ್ಯಾಲೆನ
ಹೊರಗಿನ ಕಟ್ಟಿಯ ಮ್ಯಾಲೇನ ಊರನ ಬಟ್ಟಿ ಒಗದಾನ
ದೇವರ ಜಗುಲಿಯ ಮ್ಯಾಲೇನ ಗುರುವಿನ ಕಂತಿ ಹಿಡದಾನ

ಅಂತ ಇಂತ ಯಾಳ್ಯಾದೊಳಗ ಗುರುವ ಬರವುತಾನೇನ
ಕಡಿಯಾ ಸೋಮರದಿವಸೇನ ಕಂತಿಯ ಬಿಕ್ಷಕ ಬಂದಾನ
ಕಂತಿಯಾ ಭಿಕ್ಷಕ ಬಂದಾನೆ ಗುರುವ ರೇವಣಸಿದ್ಧನ
ಗುರುವ ರೇವಣಸಿದ್ಧನ ಕೋರಣ ಭಿಕ್ಷೇಳಂದಾನ
ಅಗಸರ ಮಡಿವಾಳನೆ ಮನಿಯಾಗ ಹೋಗುತಾನೇನ
ಹನ್ನೆರಡು ವರ್ಷಿನ ಕಂತೇನ ಇಪ್ಪತ್ತು ವರ್ಷಿನ ಕಂತೇನ
ಎರಡು ಕಂತಿನಲ್ಲೇಳ ಕೈಯಾಗ ಹಿಡಿಯುತಾನೇನ
ಅಗಸರ ಮಡಿವಾಳನೆ ಭಿಕ್ಷಾ ನೀಡಕ ಬಂದಾನ
ಭಿಕ್ಷಾ ನೀಡಲಿ ಬಂದಾರೆ ಅಗಸರ ಮಡಿವಾಳಗ
ಗುರುವ ರೇವಣಸಿದ್ದನೆ ನುಡದಾನೆ ಮಾತಾಡ್ಯಾನ
ನುಡದಾನೆ ಮಾತಾಡ್ಯಾನೆ ಭಿಕ್ಷಾ ನೀಡಕ ಬಂದಾನ
ಒಬ್ಬರ ಕೊಟ್ಟರಲ್ಲಪ್ಪ ಗಳಗಿ ಒಲ್ಲೇಳಂದಾನ
ಗಳಗಿ ಒಲ್ಲೇಳಂದಾನೆ ಗಂಜಿ ಒಲ್ಲೇಳಂದಾನ
ಮಡದೀಯ ನೀನು ಬರಬೇಕೆ ಕಂತಿ ಕೊಡಬೇಕಂದಾನ
ಅಗಸರ ಮಡವಾಳನೆ ನುಡದಾನೆ ಮಾತಾಡ್ಯಾನೆ
ಲಗ್ಗನಾಗಿಲ್ಲಂದಾನೆ ಇಲ್ಲದ ಮಡದೀನಂದಾನ
ಇಲ್ಲದ ಮಡದೀನಲ್ಲೇಳ ಎಲ್ಲಿಂದ ತರಬೇಕಂದಾನ
ನನಗೆ ಲಗ್ಗನಾಗಿಲ್ಲ ನನ್ನ ಮಡದಿ ಇಲ್ಲೇಳ
ನನ್ನ ಮಡದಿ ಇಲ್ಲಯ್ಯ ಭಿಕ್ಷಾ ಕೊಡತೀನಿ ಮೈಯಬೇಕ
ಗುರುವ ರೇವಣಸಿದ್ಧನ ನುಡದಾನೆ ಮಾತಾಡ್ಯಾನ
ದೇವರ ಖೋಲಿ ಒಳಗೇನ ದೇವರ ಜಗಲಿ ಮ್ಯಾಲೇನ
ದೇವರ ಜಗುಲಿಮ್ಯಾಲೇನ ಕಂತಿ ಇಡುವುಲಿಬೇಕಯ್ಯ
ಮಡದೀಯ ನೀಲಮ್ಮನೆಂದು ಓ ಎಂಬ ಶಬ್ದ ಕೂಗಯ್ಯಾ
ಒಳ್ಳೆದು ಒಳ್ಳೆದಂದಾನೆ ಕಂತಿಯ ಮನಿಯಾಗ ಒಯ್ದಾನ
ಕಂತಿ ಮನಿಯಾಕ ಒಯ್ದನೆ ದೇವರ ಜಗುಲಿ ಮ್ಯಾಲೇನ
ದೇವರ ಜಗುಲಿಮ್ಯಾಲೇನ ಕಂತಿ ಇಳುವುತಾನೇನ
ದೇವರ ಖೋಲಿ ಒಳಗೇನೆ ಮಡದೀಯ ನೀಲಮ್ಮನ
ಮಡದೀಯ ನೀಲಮ್ಮನೆಂದು ಓ ಎಂಬ ಶಬುದ ಮಾಡ್ಯಾನ
ಮಡದೀಯ ನೀಲಮ್ಮನೆಂದು ಓಯೆಂಬ ಶಬುದ ಕೂಗ್ಯಾನ
ಓಯೆಂಬ ಶಬುದ ಕೂಗ್ಯಾನೆ ಹಳ್ಳದಾಗ ಧನಿಯಾ ಕೊಟ್ಟಾನ
ಅಗಸರ ಮಡಿವಾಳನೆ ನಡುವಿನ ಮನಿಯಾ ಒಳಗೇನ
ನಡುವಿನ ಮನಿಯಾ ಒಳಗೇನೆ ಓಯೆಂಬ ಶಬುದ ಮಾಡ್ಯಾನ
ಮಡದೀಯ ನೀಲಮ್ಮನೆಂದು ಓಯೆಂಬ ಶಬುದ ಕೊಟ್ಟಾನ
ಓಯೆಂಬ ಶಬುದ ಕೊಟ್ಟಾಗ ಊರಾಗ ಧನಿಯಾ ಕೊಟ್ಟಾಳ
ಊರಾಗ ಧನಿಯಾ ಕೊಟ್ಟಾಳೆ ಮಡದೀಯ ನೀಲಮ್ಮನೆ
ಅಗಸರ ಮಡಿವಾಳನೆ ಹೊರಗಿನ ಕಟ್ಟಿಗ ಬಂದಾನೆ
ಹೊರಗಿನ ಕಟ್ಟಿಗ ಬಂದಾನೆ ಓಯೆಂಬ ಶಬುದ ಕೂಗ್ಯಾನ
ಓಯೆಂಬ ಶಬುದ ಕೂಗ್ಯಾನೆ ದೇವರ ಖೋಲಿ ಒಳಗೇನ
ದೇವರ ಖೋಲಿಯ ಒಳಗೇನೆ ಮಡದೀಯ ನೀಲಮ್ಮನೆ
ಮಡದೀಯ ನೀಲಮ್ಮನೆ ಧನಿಯಾ ಕೊಡವುತಾಳೇನ
ಅಗಸರ ಮಡಿವಾಳನೆ ದೇವರ ಖೋಲಿಗ ಹೋಗ್ಯಾನ
ಮಡದೀಯ ನೀಲಮ್ಮನೆ ಅಗಸರ ಮಡಿವಾಳನೆ
ಇಪ್ಪತ್ತು ವರ್ಷಿನ ಕಂತೇನೆ ಮಡದೀಯ ಕೈಯಾಗ ಕೊಟ್ಟಾನ
ಹನ್ನೆರಡು ವರ್ಷಿನ ಕಂತೇನ ತನ್ನ ಕೈಯಾಗ ಹಿಡದಾನ
ಮಡದಿ ಪುರುಷರು ಕೂಡ್ಯಾರೆ ಕಂತಿನ ಭಿಕ್ಷವ ತಂದಾರ
ಅಗಸರ ಮಡಿವಾಳನೆ ಕಂತಿಯ ಭಿಕ್ಷಾ ನೀಡ್ಯಾನ
ಮಡದೀಯ ನೀಲಮ್ಮನೆ ಕಂತಿಯಾ ಭಿಕ್ಷಾ ನೀಡ್ಯಾಳ
ಗುರುವ ರೇವಣಸಿದ್ಧನೆ ನುಡದಾನೆ ಮಾತಾಡ್ಯಾನ
ಭಾವಕ ಮೆಚ್ಚೀದಂದಾನೆ ಭಕ್ತಿಗ ಮೆಚ್ಚೀದಂದಾನ
ಏನ ಬೇಡತಿ ಬೇಡರೆ ಬೇಡಿದ ಕುಡತಿನಿ ಅಂದಾನ
ಅಗಸರ ಮಡಿವಾಳನೆ ಮಡದೀಯ ನೀಲಮ್ಮನ
ಮಡದೀಯ ನೀಲಮ್ಮನ ತಾಯೇನು ಬೇಡುತಾಳೇನ
ಹರಿಯಾ ಹಳ್ಳದೊಳಗೇನೆ ಹರಿಯಾ ನೀರ ಬೇಡ್ಯಾರ
ಹರಿಯಾ ಗಂಗಿ ಒಳಗೇನೆ ಹರಿಯಾ ನೀರ ಬೇಡ್ಯಾರ
ಕಣಕಿಸ ಜ್ವಾಳ ಬೇಡ್ಯಾರೆ ಮನಿಗೊಂದು ರೊಟ್ಟಿ ಬೇಡ್ಯಾರ
ಗುರುವ ರೇವಣಸಿದ್ದನೆ ಒಳ್ಳೆದು ಒಳ್ಳೆದಂದಾರ
ಹರಿಯಾ ಹಳ್ಳದೊಳಗೇನ ಹರಿಯಾ ನೀರ ಕೊಟ್ಟೇನೆ
ಕಣಕಿಸ ಜ್ವಾಳ ಕೊಟ್ಟೇನೆ ಮನಿಗೊಂದು ರೊಟ್ಟಿ ಕೊಟ್ಟೇನ
ಮಡದಿಯ ನೀಲಮ್ಮನ ಅಗಸರ ಮಡಿವಾಳನ
ಗುರುವ ರೇವಣಸಿದ್ಧನೆ ಮಂಡೀಲಿ ಹಸ್ತ ಇಟ್ಟಾರ
ಮಂಡೀಲಿ ಹಸ್ತ ಇಟ್ಟಾನೆ ಆಶೀರ್ವಾದ ಮಾಡ್ಯಾನ
ಆಶೀರ್ವಾದ ಮಾಡ್ಯಾನೆ ಆಶೀರೋಜನ ಕೊಟ್ಟಾರ
ಮಡದಿಯ ನೀಲಮ್ಮನ ಅಗಸರ ಮಡಿವಾಳನ
ಹೊರಳಿ ಮನಿಯಾಗ ಹೋದರೆ ಗುರುವ ರೇವಣಸಿದ್ದನ
ಗುರುವ ರೇವಣಸಿದ್ದನೆ ನಿಂತಲ್ಲೆ ಮಾಯವಾದನ
ದೇವಿ ದರ್ಮರ ಹಾಡೇನ ಇಲ್ಲಿಗಿ ಇದು ಒಂದು ಸಂದೇನ
ಕಳಸವಿಟ್ಟರ ಕವಿತ ಕಟ್ಯಾರ ಹೊನ್ನ ಜಗ್ಗುನಿ ಗೌಡರೋ
ದೇವರು ಬಂದಾರ ಬನ್ನೀರೆ