ದೇವಿ ಧರ್ಮರ ಹಾಡೇನೆ ಸೊನ್ನಲಾಪುರದ ಒಳಗೇನೆ :

ಶಿವನೆ ನಮ್ಮಯಿ ದ್ಯಾವರು ಬಂದಾರ ಬನ್ನೀರೆ
ಸ್ವಾಮಿ ನಮ್ಮಯಿ ದ್ಯಾವರು ಬಂದಾರ ಬನ್ನೀರೆ
ದೇವಿ ಧರ್ಮರ ಹಾಡೇನೆ ಸೊನ್ನಲಪುರದ ಒಳಗೇನ
ಸೊನ್ನಲಪುರದ ಒಳಗೇನೆ ಶ್ರೀಶೈಲಾದ ಒಳಗೇನ
ಶ್ರೀಶೈಲದ ಒಳಗೇನ ಮಹಾನಂದಿಯ ಮ್ಯಾಲೇನ
ಭೀಮನಕೊಳ್ಳದ ಮ್ಯಾಲೇನ ಕಮರಿಕೊಳ್ಳದ ಮ್ಯಾಲೇನ
ಕಮರಿಕೊಳ್ಳದ ಮ್ಯಾಲೇನ ಸಿದ್ಧರಾಮ ಇಳದಾನ
ಮಲ್ಲಿಕಾರ್ಜುನ ಮಹಾದೇವ ಊಟ ಮಾಡಲಂದಾನ
ಉಂಡಾರೆ ಬಾಳುಟ್ಟಾರೆ ಬಾಯಿಲಿ ಸೀತಾಳ ಉಗಳ್ಯಾರ
ಸಿದ್ಧರಾಮನಲ್ಲೇಳ ಏನಂದಾಡುತಿದ್ದಾನ
ಮಲ್ಲಿಕಾರ್ಜುನ ಮಹಾದೇವ ತಾನೇನು ಹೇಳುತಾನೇನ
ಬಾರೋ ಬಾರೋ ಸಿದ್ಧರಾಮ ಬೇಡಿದ ಕುಡತೀನಿ ಅಂದಾರ
ಸೊನ್ನಲಗಿರಿನಿದ್ದಾವೆ ಸೋಲಾಪುರನಾದವ
ಸೋಲಾಪುರದಾವೆ ಕೋಲಾಪೂರನಾದಾವ
ಸೋಲಾಪುರದಾಗೇನೆ ದಂಡಸೋಲಾಪೂರೇನ
ದಂಡಸೋಲಾಪುರದಾಗೆ ಅನ್ನ ಅನುವಲಿಬಾರದ
ಅನ್ನ ಅನುವಲಿಬಾರದ ನೀರ ಅನುವಲಿಬಾರದ
ಯಾವ ತರದಿಂದೇನ ಬಡತನ ಇರುವಲಿಬಾರದ
ಮಲ್ಲಿಕಾರ್ಜುನ ಮಹಾದೇವ ಒಳ್ಳೆದು ಒಳ್ಳೇದಂದಾನ
ಒಳ್ಳೆದು ಒಳ್ಳೇದಂದಾನೆ ಕೊಟ್ಟಿನಿ ಕೊಟ್ಟಿನಿ ಅಂದಾನ
ಅನ್ನನೀರನ್ನಲ್ಲಪ್ಪ ನಿನಗೆ ಕೊಟ್ಟಿನಿ ಅಂದಾನ
ಸಿದ್ಧರಾಮನಲ್ಲೇಳ ಮಲ್ಲಿಕಾರ್ಜುನ ಮಹಾದೇವಗ
ಮಲ್ಲಿಕಾರ್ಜುನ ಮಹಾದೇವಗ ಗಟ್ಟಿ ಪಾದ ಹಿಡದಾನ
ಮಂಡಿಲಿ ಹಸ್ತ ಇಟ್ಟಾನೆ ಆಶೀರ್ವಾದವ ಮಾಡ್ಯಾನ
ಕೈ ಕೊಟ್ಟ ಶರಣಂದಾನೆ ರಾಯಿಮಾರಗ ಹಿಡದಾನ
ಮಲ್ಲಿಕಾರ್ಜುನ ಮಹಾದೇವ ಬೆಟ್ಟ ಇಳದು ಬಂದಾನ
ಸಿದ್ಧರಾಮನಲ್ಲೇಳ ಬೆಟ್ಟ ಇಳಿಯುತಾನೇನ
ಒಂದ ಕೊಳ್ಳ ಇಳದಾನೆ ಒಂದು ಕೊಳ್ಳ ಏರ‍್ಯಾನ
ಏಳ ಕೊಳ್ಳ ಇಳದಾನೆ ಏಳ ಗುಡ್ಡ ಏರ‍್ಯಾನ
ಏಳ ಗುಡ್ಡ ಇಳದಾನೆ ಏಳ ಕೊಳ್ಳ ಏರ‍್ಯಾನ
ಸಿದ್ಧರಾಮನಂದಾರೆ ರಾಯಿಮಾರಗ ಹಿಡದಾನ
ಹಿಡಗಲ್ಲ ಹಿಟ್ಟಾದವೆ ಕಗ್ಗಲ್ಲ ನುಗ್ಗಾದವ
ಕೆಂಧೂಳ ಭರಮಂಡ್ಯಾವೆ ಸೊನ್ನಲಗಿರಿಯ ಒಳಗೇನ
ಸೊನ್ನಲಗಿರಿಯ ಒಳಗೇನೆ ರೈತರೋಣಿಲಿ ಹಾಯ್ದರ
ರಾಜರ ಗಲ್ಲಿಲಿ ಹಾಯ್ದನೆ ರಾಜರ ಬಲ್ಲಿಗ ಬಂದಾನ
ತಂದೇಳ ಮುದ್ದುಗೌಡನೆ ತಾಯೇಳ ಸುಗಲವ್ವನ
ಬಾರ ನನ್ನ ಹಡದಪ್ಪ ಎಲ್ಲಿಗ ಹೋಗಿದಿ ಅಂದಾರ
ಎಲ್ಲಿ ಹೋಗಿದಿ ಅಂದಾರೆ ಯಾವಾಗ ಬಂದೀದಂದಾರ
ಅನ್ನ ಮೊಸರಬುತ್ತೆವ್ವ ನೀನೇ ಕಟ್ಟಿದಿ ಅಂದಾರ
ನೀನೆ ಕಟ್ಟಿದಿ ಅಂಥಾನೆ ನಾನೇ ವೈದಿನಿ ಅಂದಾನ
ಮಲ್ಲಿಕಾರ್ಜುನ ಮಹಾದೇವ ಕೆರಿಯಾ ಒಳಗ ಇಲ್ಲವ್ವ
ಕೆರಿಯಾ ಒಳಗ ಇಲ್ಲವ್ವ ನಾಡಿನೊಳಗ ಇಲ್ಲವ್ವ
ನಾಡ ನಾಡ ತಿರಗೇನ ಕಾಡ ಕಾಡ ತಿರಗೇನ
ಕಾಡ ಕಾಡ ತಿರಗೇನೆ ಬೆಟ್ಟಕ ಹೋದೇನಂದಾನ
ಹೆಜ್ಜಿನೆ ಸಿಗುವಲ್ಲವ ಹೋಲಿಕಿ ಹೊಳಿವಲ್ಲವ
ಹೋಲಿಕಿ ಹೊಳಿವಲ್ಲವೆ ಪರ್ವತ ಗುಡ್ಡಕ ಹೋದೇನ
ಏಳ ಗುಡ್ಡ ಏರೇನೆ ಕಮರಿ ಏರಿ ನಿಂತೇನ
ಕಮರಿಯ ಕೊಳದಾಗೇನ ಮಲ್ಲಿಕಾರ್ಜುನ ಮಹಾದೇವ
ಮಲ್ಲಿಕಾರ್ಜುನ ಮಹಾದೇವ ನಮಗೆ ದೊರತಾನಂದಾನ
ನಮಗೂ ದೊರತಾನಂದಿದ್ದ ಕಮರಿ ಮ್ಯಾಲೆ ಬಂದಿದ್ದ
ಕಮರಿ ಮ್ಯಾಲೆ ಬಂದಿದ್ದ ಊಟ ಮಾಡೇಳಂದೇನ
ಉಂಡಾನೆ ಬಾಳುಟ್ಟಾನೆ ಬಾಯಿಲಿ ಸೀತಾಳ ಉಗಳ್ಯಾನ
ಮಲ್ಲಿಕಾರ್ಜುನ ಮಹಾದೇವ ಬೇಡಿದ ಕೊಟ್ಟೇನಂದಾನ
ನನಗ ಬೇಡಿದ ಕೊಟ್ಟಾನೆ ಗಟ್ಟಿ ಪಾದ ಹಿಡದೇನ
ಕೈಕೊಟ್ಟ ಶರಣಂದೇನೆ ಆಶೀರ್ವಾದ ಮಾಡ್ಯಾನ
ಸಿದ್ಧರಾಮನಲ್ಲೇಳ ತಾಯಿಗ ಹೇಳುತಾನೇನ
ತಾಯಿಗ ಹೇಳುತಾನೇನೆ ತಂದಿಗ ಹೇಳುತಾನೇನ
ಗೌಡಕಿ ಮಾಡತ್ತಿದ್ದಾನೆ ರಾಜಕಿ ಮಾಡೂತಿದ್ದಾನೆ
ಶರಣಕ್ಕಿಂತನಲ್ಲಪ್ಪ ಶಿವಶರಣರ ಹೆಚ್ಚಿಗೆ
ಶಿವಶರಣರ ಸಂಗಟ ಸಹವಾಸ ಮಾಡುತಾನೇನ
ತಾಯಿತಂದಿನಲ್ಲೇಳ ನುಡದಾರೆ ಮಾತಾಡ್ಯಾರ
ನುಡದಾರೆ ಮಾತಾಡ್ಯಾರೆ ಏನಂದಾಡುತ್ತಿದ್ದಾರ
ಶರಣರ ಸಂಗ ನಿನ್ನಗ ಯಾಕ ಬೇಕೇಳಂದಾರ
ಯಾಕ ಬೇಕೇಳಂದಾರ ದೂರ ಸರದು ಕುಂದ್ರಯ್ಯ
ಹೆಚ್ಚಿನ ಮಾತ ಬ್ಯಾಡಪ್ಪ ನೀನೆ ಭವಿಯ ಇದ್ದೇನ
ನೀನೆ ಭವಿಯಾ ಇದ್ದೇನೆ ಗುರುವಿನ ಕರುಣ ಇಲ್ಲೇನ
ಗುರುವಿನ ಕರುಣ ಇಲ್ಲಪ್ಪ ಸರದ ಕುಂದ್ರಲಿ ಬೇಕಯ್ಯ
ಶಿವಶರಣರಂದಾರ ಸಿದ್ಧರಾಮ ತಿಳದಾನ
ಸಿದ್ಧರಾಮ ತಿಳದಾನ ಹ್ಯಾಂಗ ಮಾಡಲಿ ಅಂದಾನ
ಹ್ಯಾಂಗ ಮಾಡಲಿ ಅಂದಾನೆ ಎಲ್ಲಿಗೆ ಹೋಗಲಿ ಅಂದಾನ
ಸೊನ್ನಲಿಗಿರಿಯ ಬಿಟ್ಟಾನೆ ರಾಯಿಮಾರಗ ಹಿಡದಾನ
ರಾಯಿಮಾರಗ ಹಿಡದಾನೆ ಮಲ್ಲಯ್ಯನ ಧ್ಯಾನ ಮಾಡ್ಯಾನ
ಮಲ್ಲಯ್ಯನ ಧ್ಯಾನ ಮಾಡ್ಯಾನೆ ಮಹಾದೇವನ ಧ್ಯಾನ ಮಾಡ್ಯಾನ
ಮಲ್ಲಿಕಾರ್ಜುನ ಮಹಾದೇವನ ದರ್ಶನಾಗೇಳಂದಾನ
ಅಲ್ಲ್ಯಾನ ಇಲ್ಲ್ಯಾನೇನ ಪರ್ವುತ ಬೆಟ್ಟಕ ಹೋದನ
ಬೆಟ್ಟಕ ಹೋಗುತಾನೇನ ಎಲ್ಲಿಗ ಹೋಗುತಾನೇನ
ಒಂದು ಗುಡ್ಡ ಏರ‍್ಯಾನೆ ಒಂದಾ ಕೊಳ್ಳ ಇಳದಾನ
ಒಂದಾ ಕೊಳ್ಳ ಇಳದಾನೆ ಎರಡ ಕೊಳ್ಳ ಏರ‍್ಯಾನ
ಕಾಡ ಇಳಿಯುತಾನೇನ ಗುಡ್ಡ ಏರುತಾನೇನ
ಎಪ್ಪತ್ತೊಂದು ಗಿರಿಯಾಗ ಮಲ್ಲಿಕಾರ್ಜುನ ಮಹಾದೇವ
ಮಲ್ಲಿಕಾರ್ಜುನ ಮಹಾದೇವ ಬೆಟ್ಟದೊಳಗೆ ದೊರತಾನ
ಬೆಟ್ಟದೊಳಗೆ ದೊರತಾನ ಗಟ್ಟಿ ಪಾದಕ ಹೊಂದ್ಯಾನ
ಗಟ್ಟಿ ಪಾದ ಹಿಡದಾನೆ ಏನಂದಾಡುತ್ತಿದ್ದಾನ
ಬಾರೋ ಬಾರೋ ಸಿದ್ಧರಾಮ ಬಂದ ಕಾರಣ ಹೇಳಯ್ಯ
ಸಿದ್ಧರಾಮನಂದಾನೆ ನುಡದಾನೆ  ಮಾತಾಡ್ಯಾನ
ಶಿವನಕಿಂತನಲ್ಲಪ್ಪ ಹೆಚ್ಚಿನ ಶರಣರಂದಾರ
ಶಿವನಕೀನ ಶರಣರ ಹೆಚ್ಚ ಶಿವಶರಣರಂದಾರ
ಶಿವನಕೀನ ಶಿವಶರಣರು ಹೆಚ್ಚು ಹೆಚ್ಚಿನ ಮಾತೊಂದು ಆಡ್ಯಾರ
ಗುರುವಿನ ಕರುಣ ಇಲ್ಲೇನ ಭವಿಯ ಇದ್ದೇಳಂದಾರ
ಭವಿಯಾ ಇದ್ದೇಳಂದಾರ ಸರದು ಕುಂದ್ರು ಅಂದಾರ
ಆತ್ಮಧನವನಲ್ಲಪ್ಪ ನಿನಗೆ ಯಾಕೆ ಬೇಕಪ್ಪ
ಸಿದ್ಧರಾಮನಲ್ಲಪ್ಪ ಸರದು ಕುಂದ್ರು ಅಂದಾನ
ಒಳ್ಳೆದು ಒಳ್ಳೆಂದದೇನ ಇಲ್ಲಿಗ ಬಂದೇನಂದಾನ
ಮಲ್ಲಿಕಾರ್ಜುನ ಮಹಾದೇವ ಏನಂದಾಡುತಾನೇನ
ಚರಗಿ ತುಂಬಿ ಇಟ್ಟಾನ ಸುರಗಿ ತುಂಬುತಾನೇನ
ಸಾಮಾನ ತುರುವುತಾನೇನ ತಾಯೇನಂದಾಡ್ಯಾನ
ಸುರಗಿ ಸುತ್ತುತಾನೇನ ಸುರಗಿ ಒಳಗೆ ಕುಂತಾನ
ಮಲ್ಲಿಕಾರ್ಜುನ ಮಹಾದೇವ ಏನ ಹೇಳುತಾನೇನ
ತನುವ ಧನವ ಮನವೇನ ಮೂರು ಬಿಡಬೇಕಂದಾನ
ತನುವ ಬಿಡಬೇಕಂದಿದ್ದ ಮನವ ಬಿಡಬೇಕಂದಿದ್ದ
ಮನವ ಬಿಡಬೇಕಂದಿದ್ದ ತನವ ಬಿಡಬೇಕಂದಿದ್ದ
ಹೆಣ್ಣು ಬಿಡಬೇಕಂದಿದ್ದ ಹೊನ್ನು ಬಿಡಬೇಕಂದಿದ್ದ
ಹೊನ್ನು ಬಿಡಬೇಕಂದಿದ್ದ ಮಣ್ಣು ಬಿಡಬೇಕಂದಿದ್ದ
ಆಶೀರ್ವಾದ ಮಾಡಿದ್ದ ಆಶೀರೋಜನ ಮಾಡ್ಯಾನ
ಆಶೀರೋಜನ ಮಾಡ್ಯಾನೆ ಗಟ್ಟಿ ಪಾದ ಹಿಡದಾನ
ಮಂಡಿಲಿ ಹಸ್ತ ಇಟ್ಟಾನೆ ಮಲ್ಲಿಕಾರ್ಜುನ ಮಾದೇವ
ಮಲ್ಲಿಕಾರ್ಜುನ ಮಹಾದೇವ ಸಿದ್ಧರಾಮಗ ಹೇಳ್ಯಾನ
ಸಿದ್ಧರಾಮಗಲಲ್ಲಪ್ಪ ನಿನಗೆ ಕೊಟ್ಟಿನಿ ಅಂದಾನ
ಶಿವನಕೀನ ಶರಣರ ಹೆಚ್ಚ ಶಿವಶರಣ ಆದಿಗೆ
ಶಿವಶರಣ ಆದಿಗೆ ಅಂದಾನೆ ನೀನೆ ಹೋಗಲಿಬೇಕಯ್ಯ
ಬಾರೋ ಬಾರೋ ಹಡದಪ್ಪ ನಾನು ಹೋಗದಿಲ್ಲೇನ
ನೀನೇ ಮುಂದ ಇದ್ದಾರ ನಾನೇ ಹಿಂದ ಬಂದೇನ
ನೀನೇ ಹಿಂದನಾದರ ನಾನು ಮುಂದ ಒಲ್ಲೇನ
ಮಲ್ಲಿಕಾರ್ಜುನ ಮಹಾದೇವ ಏನಂದಾಡುತಾನೇನ
ಬ್ಯಾಡೋ ಬ್ಯಾಡೋ ಸಿದ್ಧರಾಮ ಒಬ್ಬಂವ ಹೋಗಲಿಬೇಕಯ್ಯ
ನಾನು ಹೋಗಬೇಕಾದರೆ ಸಂಗಟ ಗುರುವ ಬೇಕಯ್ಯ
ನನಗ ಜೋಡ ಬೇಕಪ್ಪ ನನಗ ಜತಿಯಾ ಬೇಕಪ್ಪ
ನೀನು ಸಂಗಡಿದ್ದರ ಸೊನ್ನಲಗಿರಿಗೆ ಹೋದೇನ
ಸೊನ್ನಲಗಿರಿಯ ಒಳಗೇನ ನಿನ್ನ ಗುಡಿಯಾ ಕಟ್ಟಸೇನ
ಸೊನ್ನಲಗಿರಿಯ ಒಳಗೇನ ನಿನ್ನ ಮಠಗೋಳು ಕಟ್ಟಸೇನ
ಗುರುವ ಶಿಷ್ಯರು ಕೂಡ್ಯಾರೆ ರಾಯಿಮಾರಗ ಹಿಡದಾರ
ರಾಯಿಮಾರಗ ಹಿಡದಾರೆ ರವ್ವಣಿ ಮಾಡುತಾರೇನ
ಇಳದಲ್ಲಿ ಇಳಿಗಾಳೇನ ಸುಳದಲ್ಲಿ ಸುಳಿಗಾಳೇನ
ಸುಳದಲ್ಲಿ ಸುಳಿಗಾಳೇನ ಗಾಳಿಕ್ಕಿಂತ ಮುಂದೇನ
ಗಾಳಿಕ್ಕಿಂತ ಮುಂದೇನ ಸೊನ್ನಲಪುರದ ಒಳಗೇನ
ಸೊನ್ನಲಪುರದ ಒಳಗೇನ ಸೋಲಾಪುರದ ಒಳಗೇನ
ಸೋಲಾಪುರದೊಳಗೇನ ಕುಂಬಾರ ಓಣಿಯ ಮುಂದೇನ
ಕುಂಬಾರ ಓಣಿ ಮುಂದೇನ ಬಾಳಿ ಅಗಸಿ ಹಿಂದೇನ
ಬಾಳಿ ಅಗಸಿ ಹಿಂದೇನ ಮಲ್ಲಿಕಾರ್ಜುನ ಮಹಾದೇವಗ
ಮಲ್ಲಿಕಾರ್ಜುನ ಮಹಾದೇವಗ ಗುಡಿಯ ಕಟ್ಟುತಾನೇನ
ಗದ್ದುಗಿ ಹಾಕುತಾನೇನ ಗುಡಿಯ ಮುಗಸೂತಾನೇನ
ಗಂಟಿ ಮಾಡುತಾನೇನ ಜಾಗುಟ ಮಾಡುತಾನೇನ
ಮಲ್ಲಿಕಾರ್ಜುನ ಮಹಾದೇವಗ ನಾಗರ ಹೆಡಿಯಾ ಧೂಪರ್ತೆ
ನಾಗರ ಹೆಡಿಯಾ ಧೂಪರ್ತೆ ಎತ್ತಿ ಬೆಳಗುತಾನೇನ
ಮಲ್ಲಿಕಾರ್ಜುನ ಮಹಾದೇವನ ಗುಡಿಯಾ ಮುಂದೇ ಇರುವುತಾನೇನ
ಗುಡಿಯಾ ಹಿಂದ ಸಿದ್ಧರಾಮನ ಮನಿಯಾ ಇರುವುತಾವೇನ
ಮನಿಯಾ ಇರುವುತಾವೇನ ಸಂಸಾರ ಮಾಡತ್ತಿದ್ದಾನ
ಸಂಸಾರ ಮಾಡತ್ತಿದ್ದಾನ ದಂದಿಗಿ ಮಾಡತ್ತಿದ್ದಾನ
ತಾನೇ ಬರಬೇಕಾದ ಗುರುವಿನ ಕರಕೊಂಡು ಬಂದಾರ
ಸಂಗಟ ಗುರುವ ಬಂದಾನ ಮಲ್ಲಿಕಾರ್ಜುನ ಮಹಾದೇವ

ಕೆರಿಯಾ ಒಳಗೆ ಹೋಗ್ಯಾನೆ ಏನ ನೋಡುತಾನೇನ
ಕೆರಿಯಾ ಒಳಗನಲ್ಲಪ್ಪ ಸಿದ್ಧರಾಮ ಬಂದಾನ
ಸಿದ್ಧರಾಮನಲ್ಲೇಳ ಏನಂದಾಡುತ್ತಿದ್ದಾನ
ಬಾರೋ ಬಾರೋ ನನ್ನಪ್ಪ ಒಡ್ಡ ಹಾಕಲಿಬೇಕಯ್ಯ
ಎಷ್ಟು ದುಡದೀರಲ್ಲಪ್ಪ ಅಷ್ಟೇ ದುಡಿಯಲಿಬೇಕಯ್ಯ
ಅಷ್ಟೇ ದುಡದರಲ್ಲಪ್ಪ ನಿಮ್ಮ ಪಗಾರಂದಾನ
ನಿಮ್ಮ ಪಗಾರಲ್ಲಪ್ಪ ಮಣ್ಣ ಗುಂಪಿ ಒಳಗೇನ
ಕೆಲಸ ಮಾಡಲಿ ಬೇಕಪ್ಪ ಮಣ್ಣ ತೋಡಲಿಬೇಕಯ್ಯ
ಬುಟ್ಟಿ ತುಂಬಲಿಬೇಕಪ್ಪ ಒಡ್ಡಿಗ ಹಾಕಲಿಬೇಕಯ್ಯ
ಹೊತ್ತ ಹೋದ ಮ್ಯಾಲೇನ ದಂವತಿ ಬಿಟ್ಟ ಮ್ಯಾಲೇನ
ಕೈಕಾಲ ಮಾರಿ ತೊಳದೇನ ಬಟ್ಟಿ ಹಾಕೊಂಡು ಮ್ಯಾಲೇನ
ತಾಯ್ಯಾರಾಗಿ ಬರಬೇಕ ಮಣ್ಣ ಕುಂಪಿಉ ಕೆದರರೆ
ಮಣ್ಣ ಕುಂಪಿ ಕೆದರಿದರ ನಿಮ್ಮ ಭಕ್ತಿನಂದಾನ
ನೀನಾ ದುಡಿದಿದ ಅಲ್ಲೇ ಕುಡತಾನಂದಾನ
ಅಲ್ಲೇ ಕುಡತಾನಂದಾರ ಕೆರಿಯಾ ಹಾಕುತಾರೇನ
ದುಡದ ಪಗಾರಲ್ಲೇಳ ಮಣ್ಣ ಕುಂಪಿ ಒಳಗೇನ
ಮಣ್ಣ ಕುಂಪಿ ಒಳಗೇನೆ ಪಗಾರ ಕುಡುವುತಾರೇನ
ಭಕ್ತಿ ಇದ್ದಷ್ಟು ಸಿಕ್ಕಾವೇ ಧಿಡವ ಇದ್ದದು ದೊರತಾವ
ಸಿದ್ಧಾರಾಮನಲ್ಲಪ್ಪ ಒಡ್ಡ ಮುಗಸೂತಾನೇನ
ಒಡ್ಡ ಮುಗಸೂತಾನೇನ ಕೆರಿಯಾ ಮುಗುಸೂತಾನೇನ
ಸೊನ್ನಲಗಿರಿಯ ಒಳಗೇನೆ ಸುತ್ತುಮುತ್ತ ಒಡ್ಡೇನ
ಸುತ್ತಮುತ್ತ ಒಡ್ಡೇನ ನಡುವ ಕೆರಿಯಾ ಒಳಗೇನ
ನಡುವ ಕೆರಿಯಾ ಒಳಗೇನ ಪಾತಾಳ ಪಾಯ ಹೊಡದಾರ
ಪಾತಾಳ ಪಾಯ ಹೊಡದಾನೆ ಗುಡಿಯಾ ಕಟ್ಟುತಾನೇನ
ಗುಡಿಯಾ ಕಟ್ಟುತಾನೇನ ವಾಸ ಮಾಡುತಾನೇನ
ವಾಸ ಮಾಡುತಾನೇನ ಸಿದ್ಧರಾಮ ಕುಂತಾನ
ಸಿದ್ಧರಾಮನಲ್ಲೇಳ ಕೆರಿಯಾ ಒಳಗ ಕುಂತಾನ
ಕೆರಿಯಾ ಒಳಗೆ ಕುಂತಾನ ಪೂಜಿ ಮಾಡತಾನೇನ
ಹೂವಿನ ಗಿಡಗೋಳಿಗೆ ಹಾಕ್ಯಾರೆ ಪೂಜಿ ಮಾಡುತಾರೇನ
ಪೂಜಿ ಮಾಡುತಾರೇನ ಕಸಗೋಳು ಹೊಡಿಯುತಾರೇನ
ಕಸಗೋಳು ಹೊಡಿಯುತಾರೇನ ಪೂಜಿ ಮಾಡುತಾರೇನ
ದಾಸೋಗ ಇಡುವುತಾರೇನ ಅನ್ನ ಕ್ಷೇತ್ರ ಮಾಡ್ಯಾರ
ಅನ್ನಕ್ಷೇತ್ರ ಅಲ್ಲಪ್ಪ ಧರ್ಮ ಮಾಡುತಾರೇನ
ಸೊನ್ನಲಪುರದ ಒಳಗೇನ ಜಾತೂರಿ ಮಾಡುತಾರೇನ
ಜಾತುರಿ ಮಾಡುತಾರೇನ ಹೂವ ಹರಿಯುತಾರೇನ

ಹೂವಿನ ಬಗೀಚದೊಳಗೇನ ಹೆಣ್ಣಮಗಳ ಇದ್ದಾಳ
ಹೆಣ್ಣಮಗಳ ಯಾಮನಗೊಂಬಿ ನೀರ ಹಾಕುತಾಳೇನ
ಚಿಕ್ಕ ವಯಾಸ್ಸದಾಗೇನ ಅಲ್ಲೇ ದುಡಿಯುತಾಳೇನ
ಅಲ್ಲೇ ದುಡಿಯುತಾಳೇನ ಅಲ್ಲೇ ಕುಂದ್ರುತಾಳೇನ
ಧರ್ಮರ ಗುಡಿಯ ಒಳಗೇನೆ ತಾನೇ ಇರುವುತಾಳೇನ
ಹೊಸ್ತಲದೊಳಗೇನಲ್ಲಪ್ಪ ತಾನೇ ಇರುವುತಾಳೇನ
ತಾನೇ ಇರುವುತಾಳೇನ ರಾತುರಿ ಹಗಲ ಇದ್ದಾಳ
ಮನಿಯಾಮಾರ ಬಿಟ್ಟಾಳ ತಾನು ತಂದೀನ ಬಿಟ್ಟಾಳ
ಅಣ್ಣ ತಮ್ಮದೇರು ಬಿಟ್ಟಾಳೆ ಏನಂದಾಡುತಾರೇನ
ಹೂವ ಕಾಯುತಾಳೇನ ಮಠವ ಕಾಯುತಾಳೇನ
ಹಗಲ ಹನ್ನೆರಡು ವರ್ಷೇನ ಇರುಳು ಹನ್ನೆರಡು ವರ್ಷೇನ
ಇಪ್ಪತನಾಲ್ಕು ವರ್ಷಪ್ಪ ಅಲ್ಲೇ ಇರುವುತಾಳೇನ
ಒಂದಾನ ಒಂದು ಕಾಲದಲ್ಲೇ ಒಂದಾನ ಒಂದು ದಿನದಲ್ಲೇ
ಒಂದಾನ ಒಂದು ದಿನಮಾನ ಸಿದ್ಧಾರಾಮನಂದಾನ
ಬಾರೋ ಬಾರೋ ತಾಯವ್ವ ನನ್ನ ಮಾತ ಕೇಳವ್ವ
ತಾಯಿನ ಬಿಟ್ಟಿದಿ ಅಂದಾನೆ ತಂದಿನಿ ಬಿಟ್ಟಿದಿ ಅಂದಾನ
ಬಂಧು ಬಿಟ್ಟಿದಿ ಅಂದಾನೆ ಬಳಗ ಬಿಟ್ಟಿದಿ ಅಂದಾನ
ರಾತುರಿ ಹಗಲ ಮಾಡಿದ್ದೆ ಹಗಲ ರಾತುರಿ ಮಾಡಿದ್ದೆ
ಬಾರೋ ಬಾರೋ ಏಯವ್ವ ಸೇವಾ ಮಾಡಿದಿ ಅಂದಾನ
ಸೇವಾ ಮಾಡಿದಿ ಅಂದಾನೆ ಶಾಯವ ಮಾಡಿದಿ ಅಂದಾನ
ನೀರ ಹಾಕಿದಿ ಅಂದಾನ ಗಿಡಗೋಳು ಬೇಸೀದಿ ಅಂದಾನ
ಕೆರಿಯಾ ಒಳಗನಲ್ಲೇಳ ಸಿದ್ಧರಾಮ ಹೇಳ್ಯಾನ
ಬಂಧು ಬಿಟ್ಟದಿ ಅಂದಾನೆ ಬಳಗ ಬಿಟ್ಟಿದಿ ಅಂದಾನ
ಎಷ್ಟು ದುಡದಾರಲ್ಲಪ್ಪ ನಿನ್ನಗ ಏನು ದೊರತಾವ
ನಿನ್ನಗ ಏನು ದೊರತಾವೇ ನಾನೇ ಹೇಳೇನು ಕೇಳವ್ವ
ಇಪ್ಪತ್ತು ವರ್ಷ ದಿನಮಾನ ಭಕ್ತಿ ಮಾಡಿದಿ ಅಂದಾನ
ಇಪ್ಪತ್ತು ವರ್ಷ ದಿನಮಾನ ಭಕ್ತಿ ಮಾಡಿದಿ ಅಂದಾನ
ಕೊಟ್ಟಟು ಉಂಡಿದಿ ಅಂದಾನೆ ದುಡದಟ್ಟು ಮಾಡಿದಿ ಅಂದಾನ
ನೀನು ದುಡದ ಕೂಲೆವ್ವ ನಾನೇ ಕಡುತೀನಿ ಅಂದಾನ
ಏನ ಬೇಡತಿ ಬೇಡವ್ವ ಬೇಡಿದ ಕುಡತೀನಿ ಅಂದಾನ
ನೀನು ಬೇಡಿದಲ್ಲವ್ವ ನಾನೇ ಕುಡತೀನಿ ಅಂದಾನ
ನೀನೆ ಬೇಡಿದಲ್ಲವ್ವ ನಾನೇ ಕುಡತೀನಿ ಅಂದಾನ
ಹೆಣ್ಣುಮಗಳ ಯೌವನಗೊಂಬಿ ಏನಂದಾಡುತಾಳೇನ
ಏನಂದಾಡುತಾಳೇನೆ ಸಿದ್ಧರಾಮ ಕೇಳ್ಯಾನ
ಬಾಯಿ ಮಾತಿಗಲ್ಲಪ್ಪ ನಾನೇ ಬೇಡುದಿಲ್ಲಯ್ಯ
ಭಾಷೆ ಕೊಟ್ಟರಲ್ಲಪ್ಪ ನಾನೇ ಬೇಡೇನಂದಾಳ
ನೀನೇ ಭಾಷಿ ಕೊಟ್ಟಾರೆ ನಾನೇ ಬೇಡೇನಂದಾಳ
ಸಿದ್ಧರಾಮನಂದಾರೆ ತನ್ನ ಮನಸಿಗ ತಿಳಿದಾನ
ಜಾಗಿರ ಬೇಡ್ಯಾಳಂದಾನೆ ರೊಕ್ಕಾ ಬೇಡ್ಯಾಳಂದಾನ
ಹಕ್ಕ ಬೇಡ್ಯಾಳಂದಾನೆ ದಕ್ಕ ಬೇಡ್ಯಾಳಂದಾನ
ರೊಕ್ಕ ಕುಡತೀನಿ ಅಂದಾನೆ ರೂಪಾಯಿ ಕುಡತೀನಿ ಅಂದಾನ
ಬಾರೋ ಬಾರೋ ಏಯವ್ವ ಏನಬೇಡತಿ ಬೇಡವ್ವ
ತಳದ ಮಾನ್ಯದ ಹೊದಾಗ ಅರ್ಧ ಪಾಲ ಕೊಟ್ಟೇನ
ಆಕಳ ಜನ್ನುಗಿ ಕೊಟ್ಟೇನ ಹೋರಿ ಕಂಟಲಿ ಬಿಟ್ಟೇನ
ಗೌಡಕಿ ಪಾಲ ಕೊಟ್ಟೇನೆ ರಾಜಕಿ ನಿನಗ ಬಿಟ್ಟೇನ
ಗೌಡಕಿ ಒಲ್ಲೇನಂದಾಳ ರಾಜಕಿ ಒಲ್ಲೇನಂದಾಳ
ಎಮ್ಮಿ ಒಲ್ಲೇನಂದಾಳೆ ರಾಜಕಿ ಒಲ್ಲೇನಂದಾಳ
ಬಾರೋ ಬಾರೋ ಏಯವ್ವ ಏನ ಬೇಡತಿ ಬೇಡವ್ವ
ನಾನು ಬೇಡಿದಲ್ಲಪ್ಪ ನೀನೇ ಕುಡುವಲಿ ಬೇಕಯ್ಯ
ಬಾರೊ ಬಾರೊ ಏಯವ್ವ ಏನ ಬೇಡತಿ ಬೇಡವ್ವ
ನಾನು ಬೇಡಿದಲ್ಲಪ್ಪ ನೀನೇ ಕುಡುವಲಿ ಬೇಕಯ್ಯ
ಬಾರೊ ಬಾರೊ ಏಯಪ್ಪ ನೀನೇ ಬೇಕೇಳಂದಾಳ
ನೀನೆ ಬೇಕೇಳಂದಾಳೆ ಮದುವಿ ಆದೇನಂದಾಳ
ನೀನೇ ನನ್ನವನಾದಾಗ ಗೌಡಿಕಿ ನಮ್ಮದಾದಾವ
ಗೌಡಕಿ ನಮ್ಮದಿದ್ದಾವೆ ರಾಜಿಕಿ ನಮ್ಮದಿದ್ದಾವ
ನೀನೇ ನನ್ನವನಾದಾಗ ಎಲ್ಲಾ ಗೌಡಕಿ ನಂದೇನ
ಬಾರೋ ಬಾರೋ ಏಯವ್ವ ನಂದೊಂದು ಮಾತ ಕೇಳವ್ವ
ನನ್ನ ತೊಗೊಂಡಲ್ಲವ್ವ ನೀನು ಏನು ಮಾಡಿಗೆ
ನೀನು ಏನು ಮಾಡಿಗೆ ನಾನು ಏನು ಮಾಡಿಲ್ಲ
ನಾನು ಶಿವಭಕ್ತ ಅಂದಿದ್ದ ನೀನು ಬ್ಯಾರೆ ಅಂದಿದ್ದ
ನಂದ ಮತಗೋಳು ಏನವ್ವ ನಿನ್ನ ಮತಗೋಳೇನವ್ವ
ಕೊಟ್ಟನಾದಿಗಲ್ಲೇಳ ಎಂಥಾ ತಪ್ಪುನಾದಾವ
ನಾಲಿಗಿ ಕಡಕನಾದೀಗೆ ಯಾಸಿಗಡಕ ನಾದೀಗೆ
ನಿನ್ನ ಗುರುವಿನ ಮುಂದೇನ ನೀನೇ ಹೇಳಿದಿ ಅಂದಾಳ
ಬಾಯಿ ಮಾತ ಬ್ಯಾಡಂತ ಮೊದಲೇ ಹೇಳಿನಿ ಅಂದಾಳ
ಸಿದ್ಧರಾಮನಂದಾರೆ ಒಳ್ಳೆದು ಒಳ್ಳೇದಂದಾರ
ವಚನ ಕೊಟ್ಟೀನಂದಾನ ಬೇಡಿದ ಕುಡತೀನಿ ಅಂದಾನ
ನನ್ನಗ ಲಗ್ಗನಾದರೆ ನೀನು ನನ್ನವನಾದಿಗೆ
ನಾನು ನಿನ್ನವಳಾದೇನ ನೀನು ನನ್ನವನಾದೀಗೆ
ನೀನು ಲಗ್ಗನಾದರೆ ನಾನು ನಿನ್ನವಳಾದೇನ
ನೀನು ನನ್ನವಳಾದೀಗೆ ನನ್ನ ಮನಸಿನ ಮ್ಯಾಲೇನ
ನನ್ನ ಮನಸ್ಸಿಗಲ್ಲೇಳ ನನ್ನಗ ಬಂದುದು ಮ್ಯಾಡೇನ
ಆದುದು ಮಾಡೇನಂದಾನೆ ಬಂದುದು ಮಾಡೇನಂದಾನ
ನಿನ್ನ ಮನಸಿಗ ತಿಳಿದಿದ್ದ ನೀನೆ ಮಾಡಲಿಬೇಕಯ್ಯ
ನಿನ್ನ ಮನಸಿಗ ತಿಳಿದಿದ್ದೆ ನಾನು ನಿನ್ನವಳಾದೇನ
ಒಳ್ಳೆದು ಒಳ್ಳೇದಂದಾನೆ ಸಿದ್ಧರಾಮ ಕೇಳ್ಯಾನ
ಸಿದ್ಧರಾಮ ಕೇಳ್ಯಾನ ಸಂಕ್ರಮಣ ದಿವಸೇನ
ಸಂಕ್ರಮಣ ದಿವಸೇನ ಮುಂಜಾಳಿ ಆರಗಂಟೇನ
ಮುಂಜಾಳಿ ಆರಗಂಟೀಗೆ ಚಾಜ ಮಾಡುತಾರೇನ
ಬೀಗರು ಬರುವುತಾರೇನ ಮದುವಿ ಮಾಡುತಾರೇನ
ಎಣ್ಣೆ ಹಚ್ಚುತಾರೇನ ಅರಿಶಿನ ಹಚ್ಚುತಾರೇನ
ನೀರ ಮಿನಿಯುತಾರೇನ ಸುರಗಿ ಸುತ್ತುತಾರೇನ
ಕಾಲುಂಗರ ಇಡುವುತಾರೇನ ಪಿಲ್ಯಾ ಇಡವುತಾರೇನ
ಮುತ್ತೈದಿ ಬಳಿಯಾ ಹಾಕ್ಯಾರೆ ಮುತ್ತು ತರುವುತಾರೇನ
ತಾಯಿ ಮಕ್ಕಳು ಮಿನದಾರ ಬಟ್ಟಿ ಮಾಡುತಾರೇನ
ಸ್ಯಾಸಿಕಟ್ಟಿ ಮ್ಯಾಲೇನ ಸಿದ್ಧರಾಮ ಹೋದನ
ಸಾಂಬಾಯಿ ಅಲ್ಲೇಳ ಸಿದ್ಧರಾಮನ ಜೋಡಿಗೆ
ಸಿದ್ಧಾರಾಮನ ಜೋಡಿಗೆ ಎಡಕ ಕೂಡುತಾಳೇನ
ಮುಂಜಾನಿ ಏಳನ ಹೋಗ್ಯಾನ ಹದಿನೈದು ನಿಮಿಷದೊಳಗೇನ
ಏಳು ಹದಿನೈದಕಲ್ಲೇಲ ಕರಮಣಿ ಕಟ್ಟುತಾರೇನ
ಕರಮಣಿ ಕಟ್ಟುತಾರೇನ ಅಕ್ಕಿಕಾಳ ಒಗದಾರ
ಅಕ್ಕಿಕಾಳ ಒಗದಾರ ಸ್ಯಾಸಿ ಮುಗಸೂತಾರೇನ
ಹತ್ತು ಮಂದಿನಲ್ಲೇಳ ರೈತರು ಮದುಮಕ್ಕಳಾದರ
ಕಳಸ ಹಿಡಿಯುತಾರೇನ ಮದುಮಕ್ಕಳು ಆಗುತಾರೇನ
ಅಂಗಿ ಕಳಿಯುತಾರೇನ ಕಸಿಅಂಗಿ ಹಾಕುತಾರೇನ
ಅರಿಶಿಣ ಹಚ್ಚುತಾರೇನ ಭಾಸಿಂಗ ಕಟ್ಟುತಾರೇನ
ಕೈಗಿ ಕಂಕಣ ಕಟ್ಯಾರೆ ಮೈಗಿ ಅರಿಶಿಣ ಹಚ್ಯಾರ
ಏಳು ಹದಿನೈದಕಲ್ಲೇಳ ಕರಮಣಿ ಕಟ್ಟುತಾರೇನೆ
ಸಂಜಿತಾನನಲ್ಲಪ್ಪ ಮಡದಿ ಇರುವುತಾಳೇನ
ಸಿದ್ಧರಾಮನ ಸಂಗಟ ಮಡದಿ ಮಾತನಾಡ್ಯಾಳ
ಮಡದಿ ಸಂಗಟಲ್ಲೇಳ ಸಿದ್ಧಾರಾಮ ನಡದಾನ
ಆರು ಘಂಟನಾದವ ಏಳ ಘಂಟಾನಾದವ
ಎಂಟರ ಒಳಗನಲ್ಲೇಳ ಸಿದ್ಧಾರಾಮನಂದಾನ
ಸಿದ್ಧಾರಾಮನಲ್ಲೇಳ ಮದ್ದಿಲಿ ಕುಣಿಯಾ ಹೊಡದಾನ
ಮದ್ದಿಲಿ ಕುಣಿಯಾ ಹೊಡದಾನೆ ಮದ್ದ ಹಾಕುತಾನೇನ
ಗಂಡನ ಮಾತನಲ್ಲೇಳ ಮಡದಿ ಮೀರಲಿ ಬಾರದ
ಮಡದಿ ಮಾತನಲ್ಲೇಳ ಗಂಡ ಮೀರಲಿ ಬಾರದ
ಮದ್ದಿನ ಕುಣಿಯ ಒಳಗೇನ ಮಡದೀನ ಕುಂದ್ರುತಾಳೇನ
ಮೂರ ಕಂಡಗ ಮದ್ದೇನ ಮ್ಯಾಲ ಒಟ್ಟುತಾರೇನ
ಸಂಜಿ ಎಂಟನಾದರ ಮದ್ದು ಒಟ್ಟುತಾರೇನ
ಒಂಬತ್ತರೊಳಗನಲ್ಲೇಳ ಮದ್ದು ಕುಂದ್ರುತಾವೇನ
ಮದ್ದು ಕುಂತ್ರುತಾವೇನ ಮದ್ದು ಬಿಚ್ಚುತಾರೇನ
ಸಿದ್ಧರಾಮನ ಮಡದೇನ ಮದ್ದಿನ ಕುಣಿಯ ಒಳಗೇನ
ಒಂಬತ್ತುವರಿಯನಾದಾಗ ಮದ್ದಿಗಬೆಂಕಿಯ ಕೊಟ್ಟಾರ
ಮದ್ದಿಗ ಕೊಳ್ಳಿಯ ಕೊಟ್ಟಾನೆ ಮದ್ದ ಸುಡುವುತಾವೇನ
ಮದ್ದ ಸುಡುವುತಾವೇನ ಮಡದಿ ಸುಡುವುತಾಳೇನ
ಏಳು ಹದಿನೈದು ನಿಮಿಟಕ ಕರಮಣಿ ಕಟ್ಟುತಾರೇನ
ಸಂಜಿ ಒಂಬತ್ತರತಾನೇನ ಮಡದಿ ಸುಟ್ಟ ಹೋದಳ
ಐದು ನಂದಿಕೋಲೇನ ಯಾರ ಪಾಲಿಗ ಆವೇಳ
ಮಲ್ಲಿಕಾರ್ಜುನ ಮಹಾದೇವಗ ಎರಡ ನಂದಿಕೋಲೇನ
ಸಿದ್ಧರಾಮಗಲ್ಲೇಳ ಎರಡ ನಂದಿಕೋಲೇನ
ಒಂದು ನಂದಿ ಕೋಲೇನ ಹರಿಯ ಜನರ ಓಣ್ಯಾಗ
ಹರಿಯಾಜನರ ಓಣ್ಯಾಗ ನಂದಿಯಾಕೋಲ ಬಿಟ್ಟಾರ
ನಂದಿಯ ಕೋಲನಂದಾರ ಖೂನ ಉಳಿಯುತಾವೇನ
ಖೂನ ಉಳಿಯುತಾವೇನ ಚಾಜ ಬರುವುತಾವೇನಬ
ಸೊನ್ನಲಗಿರಿಯ ಒಳಗೇನ ಐದ ದಿನಮಾನಲ್ಲೇಳ
ಐದ ದಿನಮಾನಲ್ಲೇಳ ನಂದಿಯ ಕೋಲ ಮೆರದಾವ
ನಂದಿಯ ಕೋಲ ಮೆರದಾರ ಜಾತೂರಿ ಆಗುತಾವೇನ
ಸಿದ್ಧಾರಾಮನ ಹಾಡೇನೆ ಇಲ್ಲಿಗ ಮುಗಿಯುತಾವೇನ
ದೇವಿ ಧರ್ಮುರ ಹಾಡೇನ ಇಲ್ಲಿಗ ಒಂದು ಸಂದೇನ
ಇಲ್ಲಿಗ ಒಂದು ಸಂದೇನ ಹಾಡಿದರ ಪದ ಮುಂದೇನ
ಕಳಸವಿಟ್ಟಾರ ಕವಿತ ಕಟ್ಯಾರ ಹೊನ್ನ ಜಗ್ಗುನಿ ಗೌಡರೋ
ಬ್ಯಾವರು ಬಂದಾರ ಬನ್ನೀರೆ