ಮೂಕ ಮಗನಿಗೆ ಮಾತು ಬರತಾದ

ಒಂದಾ ತಿಂಗಳಾದವ ಎರಡ ತಿಂಗಳಾದವ
ಐದ ತಿಂಗಳಾದವೆ ಒಂದು ವರ್ಷನಾದವ
ಮೂರ ವರ್ಷನಾದವ ನಾಲ್ಕು ವರ್ಷನಾದವ
ಐದ ವರ್ಷನಾದವ ಮೂಕ ಮಗನಿದ್ದಾನ
ಮೂಕ ಮಗನಿದ್ದಾನ ಮಾತ ಬರುವುದಿಲ್ಲೇನ
ಐದು ವರ್ಷನಾದವ ಮೂಕ ಮಗನಿದ್ದಾನೆ
ಮೂಕ ಮಗನಿದ್ದಾನ ಮಾತ ಬರುವುದಿಲ್ಲೇನ
ಐದು ವರ್ಷನಾದಾವೆ ಆರ ವರ್ಷನಾದಾವ
ಎಂಟ ವರ್ಷನಾದಾವ ಏನಂದಾಡುತಾರೇನ
ಸೊನ್ನಲಗಿರಿ ಅರಸನ ಸಾಲಿಗ ಹ್ಯಾಂಗ ಹೋದನ
ವಾರಿಗ್ಯಾನ ಸಂಗಟ ಎಮ್ಮಿ ಕಾಯಿಲಾಕ ಹೋದನ
ಎಮ್ಮಿ ಕಾಯಲಾಕ ಹೋದನೆ ಎಮ್ಮಿಕಾಯಲಿ ಹೋದಲ್ಲಿ
ವಾರಿಗಿ ಹುಡುಗರಲ್ಲೇಳ ಬೆಂಕಿ ಖೆಂಡ ತಂದಾರ
ಬೆಂಕಿ ಖೆಂಡ ತಂದಾರೆ ತೆಲಗಿ ಇಡುವುತಾರೇನ
ಮಾತನಾಡುದಿಲ್ಲೇನೆ ತಾನೇನಾಗುವುದಿಲ್ಲೇನ
ಇಟ್ಟ ಬೆಂಕಿನಲ್ಲೇಳ ತಾಂವೇ ತಗದಾರೇನಯ್ಯ
ಹತ್ತು ವರ್ಷನಾದವ ಹನ್ನೊಂದು ವರ್ಷಿನವನೇನ
ಬಾರೋ ಬಾರೋ ನಮ್ಮಪ್ಪ ನಂದೊಂದು ಮಾತಕೇಳಯ್ಯ
ಬಾರೋ ಬಾರೋ ಸಿದ್ಧರಾಮ ನಿಮ್ಮ ಮನಿಯ ಒಳಗೇನ
ನಿಮ್ಮ ಮನಿಯ ಒಳಗೇನ ಎಳ್ಳು ಕೊಡಬೇಕಂದಾರ
ಎಳ್ಳ ಕೊಡಬೇಕಂದಾರ ನಾವು ಎಳ್ಳು ತಿನ್ನಬೇಕಂದಾರ
ಕೈಯಾಗ ಬಡಗಿ ಹಿಡದಿದ್ದ ಮುಂದನಾಗುತಾನೇನ
ಮುಂದನಾಗುತಾನೇನ ಹಿಂದ ಹೋಗುತಾರೇನ
ಸೊನ್ನಲಗಿರಿಯ ಒಳಗೇನೆ ಸಿದ್ಧರಾಮ ಬಂದಾನ
ಸಿದ್ಧರಾಮನಲ್ಲೇಳ ಒಳಿಯಾಕ ಬರುವುತಾನೇನ
ತಾಯೇಳ ಸುಗಲವ್ವನ ಎಳ್ಳಿನ ಗಡಗಿ ನೆಲಿಮ್ಯಾಲ
ಎಳ್ಳಿನ ಗಡಗಿ ನೆಲಿಮ್ಯಾಲೆ ತುಂಬಿ ಇಡುವುತಾಳೇನ
ತುಂಬಿದ ಗಡಗಿಗ ಸಿದ್ಧರಾಮ ಕ್ಷಣದಾಗ ತೂತ ಹಾಕ್ಯಾನ
ವಾರಿಗಿ ಹುಡುಗಲ್ಲೇಳ ಅಂಗಿ ಒಡ್ಡುತಾರೇನ
ಮನುಷನ ಒಂದಾ ಅಂಗೇನ ತುಂಬಿಕೊಂಡು ಬಂದಾರ
ಉಡಿಯಾಗ ಎಳ್ಳ ತುಂಬ್ಯಾರೆ ಓಡಿ ಹೋಗುತಾರೇನ
ವಾರಿಗಿ ಹುಡುಗರ ಸಂಗಟ ಸಿದ್ಧರಾಮ ಹೋಗ್ಯಾನ
ಅಂಗಿಯ ಒಡ್ಡಿನಿಂತಾನ ಉಡಿಯಾಗ ಎಳ್ಳು ಬಿದ್ದಾವ
ಉಡಿಯಾಗ ಎಳ್ಳು ಬಿದ್ದಾವ ಕೈಯಾಗ ಬಡಗಿ ಹಿಡದಾನ
ಕೈಯಾಗ ಬಡಗಿ ಹಿಡದಾನೆ ಗಡಗಿ ತಳಕ ಬಡಸ್ಯಾನ
ಚೆಲ್ಲಿಯಾ ಬಂದನಾಗ್ಯಾವೆ ಎಳ್ಳು ಒಳಗೆ ಉಳದಾವ
ವಾರಿಗಿ ಹುಡುಗರ ಸಂಗಟ ತಾನು ಓಡಿ ಬಂದಾನ
ಕೆರಿಯ ಒಳಗೇ ಬಂದಾರೆ ಎಮ್ಮಿ ಕಾಯುತ್ತಿದ್ದಾರ
ಮಾತ ಬಾರದ ಸಿದ್ಧರಾಮ ಎಳ್ಳ ನಮಗ ತಿನಸ್ಯಾನ
ಎಳ್ಳು ನಮಗೆ ತಿನಸ್ಯಾನೆ ಮಾತ ಇವನಿಗ ಬರತಾವ
ಮಾತ ಇವನಿಗ ಬರತಾವೆಂದು ಎಳ್ಳು ತಿನುವುತಾರೇನ
ಎಳ್ಳು ತಿನವುತಾರೇನ ಹೊತ್ತನೆ ಹೊಡಮಳ್ಯಾವ
ಮನಿಗಿ ಹೋಗುತಾರೇನೆ ಎಮ್ಮಿ ಕಟ್ಟುತಾರೇನ
ವಾರಿಗಿ ಹುಡುಗರಲ್ಲಪ್ಪ ತಮ್ಮ ತಮ್ಮ ಮನಿಯಾಗ
ತಮ್ಮ ತಮ್ಮ ಮನಿಯಾಗೆ ತಾಯಿ ತಂದಿಗ ಹೇಳ್ಯಾರ
ಸಿದ್ಧರಾಮಗಲ್ಲೇಳ ನಾವು ಗಮ್ಮತ ಮಾಡಿವಿ ಅಂದಾರ
ಬಾರೋ ಬಾರೋ ಸಿದ್ಧರಾಮ ಎಳ್ಳ ತಿನುವಂಗಾದವ
ಬಡಗಿ ತೊಗೊಂಡಲ್ಲಪ್ಪ ಮುಂದನಾಗುತಾನೇನ
ಮನಿಗಿ ಬರವುತಾನೇನ ನೆಲಿಯ ಮ್ಯಾಲಿನ ಗಡಗೇನ
ನೆಲಿಯ ಮ್ಯಾಲಿನ ಗಡಗೀಗೆಲ್ಲ ತಳದಾಗ ತೂತ ಹಾಕ್ಯಾನ
ಅಂಗಿ ಒಡ್ಡಿ ನಿಂತೇವ ಉಡಿಯಾಗ ಎಳ್ಳ ಬಿದ್ದಾವ
ಉಡಿಯಾ ತುಂಬಿಕೊಂಡೇವೆ ಹೊರಗ ಓಡಿ ಹೋದೇವ
ಹತ್ತೆಂಟು ಮಂದಿ ಹುಡುಗರೆ ಎಳ್ಳ ತಂದಿವಿ ಅಂದಾರ
ಸಿದ್ಧರಾಮನಲ್ಲೇಳ ಅವನು ತರುವುತಾನೇನ
ಎಲ್ಲರೂ ಕೂಡಿವಿ ಅಂದಾರೆ ಎಳ್ಳ ತಿಂದೀವಂದಾರ
ಅಂದಿನ ದಿನಮಾನಲ್ಲೇಳ ನಮ್ಮತಾಯಿ ತಂದಿನ
ಮೂರ ದಿನದ ಮ್ಯಾಲೇನ ಎಮ್ಮಿ ಹೊಡಕೊಂಡು ಬಂದಾರ
ಸಿದ್ಧರಾಮನ ಮನಿಯಾ ಮುಂದ ಎಮ್ಮಿ ಹೊಡಕೊಂಡು ಬಂದಾರ
ತಾಯೇಳ ಸುಗಲವ್ವನ ಹುಡುಗರಿಗ ಹೇಳುತಾಳೇನ
ಸಿದ್ಧರಾಮಗಲ್ಲಪ್ಪ ಬಹಳ ಕರಕೊಂಡು ಕಾಯಿಬೇಕ
ಶಾಣ್ಯಾ ಹಾನೇಳಂದಾರೆ ಇವನಿಗ ಮಾತ ಬರತಾವಂದಾರ
ಹಂತ ಮಾತನಲ್ಲಪ್ಪ ನಿಮ್ಮಗ್ಹ್ಯಾಂಗೆ ತಿಳದಾವ
ವಾರಿಗಿ ಹುಡುಗರಲಪ್ಪ ಬಾಯನ ಮಾತ ಹೇಳ್ಯಾರ
ಎಳ್ಳು ತಿರುವಂಗಾದಾವೆ ಎಳ್ಳು ಕುಡಬೇಕಂದೇವ
ಬಡಗಿ ತೊಗೊಂಡಲ್ಲವ್ವ ಮನಿಗಿ ಬರುವುತಾನೇನ
ಸಿದ್ಧರಾಮನ ಬೆನ್ನ ಹಿಂದ ನಾವನೇ ಬಂದೀವಿ ಅಂದಾರ
ನಾವೇ ಮನಿಗಿ ಬಂದೇವೆ ನೀನೆ ಹೊರಗ ಹೋಗಿದ್ದೆ
ಸಿದ್ಧರಾಮ ನೋಡವ್ವ ಎಳ್ಳ ಗಡಗಿ ತಳದಾಗ
ತಳದಾಗ ತೂತ ಹಾಕ್ಯಾನೆ ಎಳ್ಳಾ ತೆಳಗ ಚೆಲ್ಯಾವ
ಅಂಗಿ ನಾವು ಒಡ್ಡೇವೆ ಮನುಷ್ಯಗೊಂದಾ ಉಡಿಯೇನ
ನಮ್ಮ ಉಡಿಯಾ ಒಳಗವ್ವ ಎಳ್ಳ ತೊಗೊಂಡೇವ
ಬಾರೋ ಬಾರೋ ಏಯವ್ವ ನೀನೆ ಬೈಯಲಿಬ್ಯಾಡಪ್ಪ
ನಿನ್ನ ಮನಿಯ ಒಳಗವ್ವ ಎಳ್ಳ ಕಳವ ಮಾಡೇವ
ಸಿದ್ಧರಾಮನ ಕೈಯದಾಗೆ ಎಳ್ಳ ವೈಯದೀವಿ ಅಂದಾರ
ತಾಯೇಳ ಸುಗಲವ್ವನ ಹಿಗ್ಗಿಲಿ ಮಾತನಾಡ್ಯಾಳ
ಬರಿಯಾ ನನ್ನ ತಮ್ಮದೇರಾ ಸುಳ್ಳುನಾಡಲಿ ಬಾರದ
ಒಬ್ಬರಿದ್ದಾರಲ್ಲೇಳ ಹತ್ತೆಂಟು ಮಂದಿ ಹೇಳ್ಯಾರ
ಹತ್ತೆಂಟು ಮಂದಿ ಹೇಳ್ಯಾರ ಎಮ್ಮಿ ಹೊಡಕೊಂಡು ಹೋದಾರ
ಏನಮ್ಮ ತಾಯಿ ಸುಗಲವ್ವ ಹೊರಳಿ ಮನಿಗೆ ಬಂದಾಳ
ಹೊರಳಿ ಮನಿಗಿ ಬಂದಾಳೆ ಎಳ್ಳ ಗಡಗಿ ನೋಡ್ಯಾಳ
ಎಟ್ಟು ತುಂಬಿದ ಎಳ್ಳೇನ ಅಟ್ಟೇ ಇರುವುತಾವೇನ
ಯಾರಿಗ ನಂಬಲಿ ಅಂದಾಳೆ ಯಾರಿಗ ಕರಿಯಲಿ ಅಂದಾಳ
ಸಿದ್ಧರಾಮನಂದಾರ ಅವರೇ ಮಕ್ಕಳಿದ್ದಾರ
ಮಕ್ಕಳ ಮಾತನಲ್ಲೇಳ ಹ್ಯಾಂಗ ಸುಳ್ಳ ಅನುವಲೇ
ಗುರುವ ರೇವಣ್ಣಸಿದ್ಧನೇ ಎಂಥಾ ಮಗನ ಕೊಟ್ಟಿದೆ
ಹನ್ನೆರಡು ವರ್ಷಿನತಾನೇನ ಮೂಕ ಮಗನ ಕೊಟ್ಟೇನ
ಒಳ್ಳೆದು ಒಳ್ಳೆದಂದಾಳೆ ಎಮ್ಮಿ ಬಿಡುವುತಾಳೇನ
ಎಮ್ಮಿ ಬಿಡುವುತಾಳೇನ ಬುತ್ತಿ ಕಟ್ಟುತಾಳೇನ
ವಾರಿಗ ಹುಡುಗರ ಸಂಗಟ ಕೆರಿಯಾಗ ಎಮ್ಮಿ ಬಂದಾವ
ಬಾರಾತಾನ ಕಾಯಿದಾರೆ ಸಿದ್ಧರಾಮಗ ಕರದಾರ
ಬಾರಾ ಬಾರಾ ಸಿದ್ಧರಾಮ ಊಟ ಮಾಡರಿ ಅಂದಾರ
ಊಟ ಮಾಡರಿ ಅಂದಾರ ಹೊರಳಿ ನೋಡುತಾನೇನ
ಕಿಂವಿಯ ಕೇಳುತಾವಂದಾರೋ ಇಂವಗ ಮಾತ ಬರತಾವಂದಾರ
ತಾವೇ ಕರಿಯುತಾರೇನ ಬುತ್ತಿಯ ಗಂಟ ಬಿಚ್ಚ್ಯಾರ
ಬುತ್ತಿಗಂಟ ಬಿಚ್ಚ್ಯಾರ ಊಟ ಮಾಡುತಾರೇನ
ಸೀತಾಳ ಮುಗಿಯುತಾರೇನ ಎಮ್ಮಿ ಕಾಯುತಾರೇನ
ಬಾರಾದ ಮ್ಯಾಲ ಎರಡೇನ ಮೂರನಾಗುತಾವೇನ
ಒಂಬತಾಸಿನ ಟೈಮಿಗೆ ಮಲ್ಲಿಕಾರ್ಜುನ ಮಹಾದೇವ
ಮಲ್ಲಿಕಾರ್ಜುನ ಮಹಾದೇವ ನವಣಿ ಹೊಲದಾಗ ಬಂದಾನ
ನವಣಿ ಹೊಲದಾಗ ಬಂದಾನ ಎಮ್ಮಿ ಕಾಯಲಿ ಬಂದಾನ
ಎಮ್ಮಿ ಕಾಯಲಿ ಬಂದಾರೆ ಸಿದ್ಧರಾಮ ನೋಡ್ಯಾನ
ಸಿದ್ಧರಾಮನಲ್ಲೇಳ ಮಹಾದೇವಗೆ ನೋಡತಾನೇನ
ಬಡಗಿ ತೆಳಗ ಇಟ್ಟಾನೆ ಪಾದಕ ಹೊಂದುತಾನೇನ
ಪಾದಕ ಹೊಂದುತಾನೇನ ಮಲ್ಲಿಕಾರ್ಜುನ ಮಹಾದೇವ
ಮಲ್ಲಿಕಾರ್ಜುನ ಮಹಾದೇವ ಮಂಡಿಲಿ ಹಸ್ತ ಇಟ್ಟಾಗ
ಸಿದ್ಧರಾಮನೆಂದಾನೆ ಮಲ್ಲಯ್ಯಾ ಕೂಗುತಾನೇನ
ಬಾರೋ ಬಾರೋ ಸಿದ್ಧರಾಮ ಮಾರಿಗ ನೀರ ಇಲ್ಲೇನ
ಮೂರ ದಿವಸನಾದಾವೆ ಊಟ ಮಾಡಿಲ್ಲಂದಾನ
ಊಟ ಮಾಡಿಲ್ಲಂದಾನ ಹೊಟ್ಟಿಗ ಹೊಡವನಾದಾವ
ಹ್ಯಾಂಗ ಮಾಡಬೇಕಂದಾನ ಎಲ್ಲಿಗ ಹೋಗಬೇಕಂದಾನ
ಮಲ್ಲಿಕಾರ್ಜುನ ಮಹಾದೇವ ಸಿದ್ಧರಾಮನ ಹೇಳ್ಯಾನ
ಬಾರೋ ಬಾರೋ ಸಿದ್ಧರಾಮ ಮನಿಗಿ ಹೋಗಲಿಬೇಕಯ್ಯ
ಮನಿಗಿ ಹೋಗಲಿಬೇಕಪ್ಪ ಮಸರ ಬಾನಾದ ಬುತ್ತೇನ
ಮಸರ ಬಾನಾದ ಬುತ್ತೇನ ನೀನೇ ತರಬೇಕಂದಾರ
ಬಾರೋ ಬಾರೋ ಸಿದ್ಧರಾಮ ಮನಿಗಿ ಹೋಗಲಿಬೇಕಯ್ಯ
ಮನಿಗಿ ಹೋಗಲಿಬೇಕಪ್ಪ ಮಸರ ಬಾನಾದ ಬುತ್ತೇನ
ಮಸರ ಬಾನಾದ ಬುತ್ತೇನ ನೀನೇ ತರಬೇಕಂದಾರ
ನಾನು ಬರುವತನಕೇನ ಎಮ್ಮಿ ಯಾರು ಕಾಯಿದಾರ
ಎಮ್ಮಿ ಯಾರು ಕಾಯಿದಾರ ನವಣಿ ಹೊಲದಾಗ ಹೋದವ
ಸಿದ್ಧರಾಮಗಲ್ಲೇಳ ಮಹಾದೇವ ಹೇಳುತಾನೇನ
ನೀನು ಬರುತನಕಲ್ಲೇಳ ಎಮ್ಮಿ ಕಾಯಿತೀನಿ ಅಂದಾನ
ಮಸರ ಬಾನಾದ ಬುತ್ತೇನ ನೀನೇ ತರಬೇಕಂದಾನ
ಒಳ್ಳೆದು ಒಳ್ಳೆದಂದಾನ ಸಿದ್ಧರಾಮನಂದಾನ
ಮನಿಗಿ ಹೋಗಿ ಬರತೀನಿ ಬುತ್ತಿ ತರತೀನಿ ಅಂದಾನ
ಬುತ್ತಿ ತರತೀನಿ ಅಂದಾನ ಇಲ್ಲೇ ಇರಬೇಕಂದಾನ
ಸಿದ್ಧರಾಮನಲ್ಲಪ್ಪ ಮನಿಗಿ ಹೋಗುತಾನೇನ
ಮಲ್ಲಿಕಾರ್ಜುನ ಮಹಾದೇವ ಕೆರಿಯಾಗ ಎಮ್ಮಿ ಕಾಯದಾನ
ಸಿದ್ಧರಾಮನ ಧಾರೇನ ಮಹಾದೇವ ನೋಡುತಾನೇನ
ಸಿದ್ಧರಾಮನಲ್ಲೇಳ ಮನಿಗಿ ಹೋಗುತಾನೇನ
ಬಾಗಲ ಬಳಿಗೆ ನಿಂತಾನ ಎವ್ವಾ ಎವ್ವಾನಂತ ಕೂಗ್ಯಾನೆ
ಏ ನನ್ನ ತಾಯಿ ನೀ ಬಾರೋ ಮಸರ ಬಾನಾದ ಬುತ್ತೇನ
ಮಸರ ಬಾನಾದ ಬುತ್ತೇನ ನೀನೇ ಕಟ್ಟಲಿಬೇಕವ್ವ
ಮಾದೇವ ಬರತಾನಂದಾರೆ ಮಲಿಕಾರ್ಜುನ ಮಹಾದೇವ
ಮಲ್ಲಿಕಾರ್ಜುನ ಮಹಾದೇವಗ ಬುತ್ತಿ ವೈತೀನಿ ಅಂದಾನ
ತಾಯೇಳ ಸುಗಲವ್ವಗೆ ಮನಸು ಆನಂದಾದವ
ಹನ್ನೆರಡು ವರ್ಷದ ಮಗನಿಗೆ ಮಾತ ಬಂದಾವಂದಾಳ
ಹನ್ನೆರಡು ವರ್ಷ ದಿನಮನ ಮೂಕ ಇರುವುತಾನೇನ
ಸಂಬ ಕಣ್ಣಾ ತೆರೆದಾನೆ ಶಿವನು ಕಣ್ಣ ತೆರದಾನ
ಬಿಳಿಯಾ ಬಟ್ಟೆ ಹರದಾಳೆ ಮಸರ ಬಾನಾದ ಬುತ್ತೇನ
ಮಸರ ಬಾನಾದ ಬುತ್ತೇನ ಕಲಿಸಿ ಕಟ್ಟುತಾಳೇನ
ಸಿದ್ಧಾರಾಮನಪ್ಪ ಬುತ್ತಿ ಕೈಯಾಗ ಹಿಡದಾನ
ಎಡಕಿನ ಕೈಯ ಒಳಗೇನ ಬುತ್ತಿ ಹಿಡಿಯತಾನೇನ
ಬಲಕಿಯ ಕೈಯನಲ್ಲಪ್ಪ ಎತ್ತಿ ಹಿಡಿಯುತಾನೇನ
ಮಲ್ಲಿಕಾರ್ಜುನ ಮಹಾದೇವನ ತಾನೇ ಕರಿಯುತಾನೇನ
ಮಲ್ಲಯ್ಯಂತ ಕೂಗ್ಯಾನೆ ಮಾದೇವಂತ ಕೂಗ್ಯಾನ
ಮಾದೇವಂತ ಕೂಗ್ಯಾನೆ ಕೆರಿಯಾಗ ಬರವುತಾನೇನ
ವಾರಿಗಿ ಹುಡುಗರಿಲ್ಲೇಳ ತಾನೇ ಕೇಳುತಾನೇನ
ಬರಿಯಾ ನನ್ನ ತಮ್ಮದೇರ ಎಮ್ಮಿ ಕಾಯಲಾಕಲ್ಲಪ್ಪ
ಎಮ್ಮಿ ಕಾಯುವದಕಲ್ಲೇಳ ಮಲ್ಲಿಕಾರ್ಜುನ ಮಾದೇವ
ಮನಿಗಿ ಹೋಗಂತೇಳ್ಯಾನ ಬುತ್ತಿ ತರಬೇಕಂದಾನ
ಬುತ್ತಿ ತಂದೀನಿ ಅಂದಾನೆ ಮಲ್ಲಯ್ಯ ಎಲ್ಲಿ ಹಾನಯ್ಯ
ಹುಚ್ಚ ಸೂಳಿ ಮಗನೆ ಹ್ಯಾಂಗ ಬರತಾನಂದಾರ
ಮಲ್ಲಿಕಾರ್ಜುನ ಮಹಾದೇವ ಹ್ಯಾಂಗ ಮಾನುವರ ಕಣ್ಣಿಗ ಬಿದ್ದಾನ
ಮಾನುವರ ಕಣ್ಣಿಗಲ್ಲಪ್ಪ ಹ್ಯಾಂಗ ಬೀಳತಾನಂದಾರ
ಎಡಗೈ ಎತ್ತಿ ಹಿಡದಾನೆ ಬಲಿಗೈಲಿ ಕೂಗುತಾನೇನ
ಬುತ್ತಿ ಎತ್ತಿ ಹಿಡದಾನ ಬಲಗೈ ಎತ್ತಿ ಕೂಗ್ಯಾನ
ಮಲ್ಲಯ್ಯ ಮಲ್ಲಯ್ಯನಂದಾನೆ ಮಲ್ಲಿಕಾರ್ಜುನಂದಾನ
ಕಾಡಿಗ ಹೋಗುತಾನೇನ ನಾಡಿಗೆ ಹೋಗುತಾನೇನ
ಹ್ಯಾಂಗ ಮಾಡಲಿ ಅಂದಾನ ಎಲ್ಲಿದೊರಕ್ಯಾನಂದಾನ
ಧಾರಿ ಒಳಗ ಬಂದಾರೆ ಮಾನುರ ಕೇಳೂತಾನೇನ
ಮಲ್ಲಿಕಾರ್ಜುನ ಮಹಾದೇವನ ನೀವು ನೋಡಿರೇನಂದಾನ
ಮಲ್ಲಯ್ಯಗ ನೋಡಿರಿ ಅಂದಾನೆ ಮಾದೇವಗ ನೋಡಿರಿ ಅಂದಾನ
ಬಲಗೈ ಎತ್ತಿ ಹಿಡದಾನ ಬಲಗೈ ಬುತ್ತಿ ಹಿಡಿದಾನ
ಮಲ್ಲಿಕಾರ್ಜುನಂದಾನೆ ಮಾದೇನಂತ ಕೂಗ್ಯಾನ
ಎಡಗೈ ಒಳಗ ಬುತ್ತೇನ ಬಲಗೈ ಎತ್ತಿ ಕೂಗ್ಯಾನ
ಮಲ್ಲಯ್ಯ ಮಲ್ಲಯ್ಯನಂದಾರೆ ಮಲ್ಲಿಕಾರ್ಜುನಂದಾನ
ಮಲ್ಲಿಕಾರ್ಜುನ ಮಾದೇನಂದು ಓ ಎಂಬ ಶಬುದ ಕೂಗ್ಯಾನ
ನಾಡ ನಾಡ ತಿರಗ್ಯಾನೆ ಕಾಡ ಕಾಡ ತಿರಗ್ಯಾನೆ
ಕಾಡ ಕಾಡ ತಿರಗ್ಯಾನೆ ಬೆಟ್ಟಕ ಹೋಗುತಾನೇನ
ಬೆಟ್ಟಕ ಹೋಗುತಾನೆನ ಮಲ್ಲಿಕಾರ್ಜುನ ಮಾದೇವ
ಮಲ್ಲಿಕಾರ್ಜುನ ಮಾದೇವನಂದು ಮಲ್ಲಯ್ಯನೆಂದು ಕೂಗ್ಯಾನ
ಒಂದು ಬೆಟ್ಟ ಏರ‍್ಯಾನೆ ಎರಡು ಬೆಟ್ಟ ಇಳದಾನ
ಬೆಟ್ಟ ಇಳಿಯುತಾನೇನ ಕೊಳದಾಗ ಹೋಗುತಾನೇನ
ಶ್ರೀಶೈಲ ಬೆಟ್ಟದೊಳಗೇನೆ ಮಲ್ಲಿಕಾರ್ಜುನ ಮಹಾದೇವ
ಮಲ್ಲಿಕಾರ್ಜುನ ಮಹಾದೇವನಂದು ತಾನೇ ಕೂಗೂತಾನೇನ
ದಿಮ್ಮಿ ಕೊಳ್ಳಕ ಹೋಗ್ಯಾನ ಮ್ಯಾಲೆ ಹೋಗಿನಿಂತಾನ
ಮಲ್ಲಿಕಾರ್ಜುನ ಮಾದೇವ ಓ ಯೆಂಬ ಶಬುದ ಕೂಗ್ಯಾನ
ಓ ಎಂಬ ಶಬುದ ಕೂಗ್ಯಾನೆ ನೀವೇ ನೋಡಿರಿ ಅಂದಾನ
ನೀವೇ ನೋಡಿರಿ ಅಂದಾನೆ ಎಲ್ಲಿಗ ಹೋಗ್ಯಾರಂದಾನ
ಹ್ಯಾಂಗ ಮಾಡಲಿ ಅಂದಾನೆ ಬುತ್ತಿ ಯಾರು ಉಂಡಾರ
ಯಾವಾಗ ಉಂಡಿದಿ ಅಂದಾನ ಎಲ್ಲಿಂದ ಬಂದಿದಿ ಅಂದಾನ
ಉಣಸುತಾನಕಲ್ಲೇಳ ನಾನೇ ಬಿಡುವುದಿಲ್ಲಂದಾನ
ಊಟ ಮಾಡುತಾನಕೇನ ನಾನೇ ಬಿಡವದಿಲ್ಲಯ್ಯ
ಎಡಗೈಯ ಒಳಗ ಬುತ್ತೇನೆ ಬಲಗೈಯ ಎತ್ತಿ ಕೂಗ್ಯಾನ
ಕಮರಿ ಏರಿ ನಿಂತಾನ ತಾನೇ ನೋಡತಾನೇನ
ಮಲ್ಲಿಕಾರ್ಜುನ ಮಹಾದೇವಂದು ಓ ಯೆಂಬ ಶಬುದ ಕೂಗ್ಯಾನ
ನಿನಗೂ ಸಾಕಾನಾದಾರ ನನಗೂ ಯಾಕಬೇಕಯ್ಯ
ನನ್ನ ಜೀವನಲ್ಲಪ್ಪ ನನಗ ಸಾಕನಾದವ
ಮಲ್ಲಿಕಾರ್ಜುನ ಮಹಾದೇವ ಮಹಾದೇವಂತ ಕೂಗ್ಯಾನ
ಮಹದೇವಂತ ಕೂಗ್ಯಾನೆ ಮಲ್ಲಯ್ಯನಂತ ಕೂಗ್ಯಾನ
ಮಲ್ಲಯ್ಯನಂತ ಕೂಗ್ಯಾನೆ ಕಣ್ಣಿಗ ನೀರ ತಂದಾನ
ಕಣ್ಣಿಗ ನೀರ ತಂದಾನ ಹಿಂದ ಮೂರ ಮಾರೇನ
ಹಿಂದಕ ಮೂರ ಮಾರೇನ ಸಿದ್ಧರಾಮ ಸರದಾನ
ಸಿದ್ಧರಾಮ ಸರದಾನೆ ಕಣ್ಣಿಗ ನೀರ ತಂದಾನ
ಮಲ್ಲಿಕಾರ್ಜುನ ಮಹಾದೇವ ಮಲ್ಲಯ್ಯನಂತ ಕೂಗ್ಯಾನ
ಕಣ್ಣನೀರನಲ್ಲಪ್ಪ ಕೆಳಗ ಬೀಳುತಾವೇನ
ಕೆಳಗ ಬೀಳುತಾವೇನ ಜರಿಯಾ ಗುಂಡನಾದವ
ಮೂರ ಮಾರ ಸರದಾನ ಮುಂದಕ ಹೋಗುತಾನೇಕ
ನಿನಗೂ ಸಾಕನಾದಾರ ನನಗೂ ಯಾತಕಬೇಕಯ್ಯ
ನಿನ್ನಗ ಸಾಕನಾದರ ನನ್ನಗ ಯಾತಕಬೇಕಯ್ಯ
ಎಡಗೈ ಒಳಗ ಬುತ್ತೇನ ಬಲಗೈ ಎತ್ತಿ ಕೂಗ್ಯಾನ
ಬಲಗೈ ಎತ್ತಿ ಕೂಗ್ಯಾನೆ ಕುಮರಿ ಹಾರುತಾನೇನ
ದಕ್ಷಿಣ ತೆಲಿಯನಾದಾವ ಉತ್ತರ ಕಾಲನಾದಾವ
ಪೂರ್ವ ದಿಕ್ಕಿನಿಂದೇನ ಮಲ್ಲಯ್ಯ ಓಡಿ ಬಂದಾನ
ಮಲ್ಲಯ್ಯ ಓಡಿ ಬಂದಾನ ಟೊಂಕಕ ಕೈಯ ಹಾಕ್ಯಾನ
ಹೆಡಕಿಗ ಒಂದು ಕೈಯೇನ ಟೊಂಕಕ ಒಂದು ಕೈಯೇನ
ಬಾರೋ ಬಾರೋ ಸಿದ್ಧರಾಮ ಎಂಥಾ ಘಾತಕ ಇದ್ದಿಗೆ
ಕಣ್ಣು ಮುಚ್ಚುತಾನೇನ ಬಾಯಿ ಮುಚ್ಚುತಾನೇನ
ಬಾಯಿ ಮುಚ್ಚುತಾನೇನ ಸಾವಿಗಂಜಲಿಲ್ಲೇನ
ಮಲ್ಲಿಕಾರ್ಜುನ ಮಹಾದೇವ ಮ್ಯಾಲ ತರವುತಾನೇನ
ಮ್ಯಾಲ ತರುವುತಾನೇನ ಕೈಯಾಗ ಹಿಡಕೊಂಡು ತಂದಾನ
ಬಾರೋ ಬಾರೋ ಸಿದ್ಧಾರಾಮ ಶೆಡವ ಮಾಡಿದೇನಪ್ಪ
ನನ್ನ ಮ್ಯಾಲನಲ್ಲಪ್ಪ ಮುಣಸ ಮಾಡಿದಿ ಅಂದಾನ
ಸಿದ್ಧರಾಮನಂದಾನೆ ತಾನೇ ಕೂಗೂತಾನೇನ
ಸಿದ್ಧರಾಮನಂದೇನ ಮಲ್ಲಯ್ಯ ಕೂಗೂತಾನೇನ
ಗದ್ದ ಹಿಡದು ಹೇಳ್ಯಾನ ತುಟಿಯ ಹಿಡದು ಕರದಾನ
ತುಟಿಯಾ ಹಿಡದು ಹೇಳ್ಯಾನ ಕಣ್ಣ ತೆರೆದು ನೋಡ್ಯಾನ
ಕಣ್ಣು ತೆರದು ನೋಡ್ಯಾನೆ ಬಾಯಿ ತೆರದು ನೋಡ್ಯಾನ
ಬಾಯಿ ತೆರಿಯುತಾನೇನ ಕಣ್ಣ ತೆರಿಯುತಾನೇನ
ಹದಿನಾಲ್ಕು ವರ್ಷನಲ್ಲೇನ ಸಿದ್ಧಾರಾಮನಿದ್ದಾನ
ಕಿರಿಯಾ ಜಡಿಯಾ ಬಿಟ್ಟಾನ ಕಣ್ಣಾ ತೆರೆದು ನೋಡ್ಯಾನ
ಮಲ್ಲಿಕಾರ್ಜುನ ಮಹಾದೇವ ಮಲ್ಲಯ್ಯ ಕೂಗುತಾನೇನ
ಸಿದ್ಧರಮನಲ್ಲೇಳ ಎದ್ದು ಕುಂದ್ರುತಾರೇನ
ಎದ್ದು ಕುಂದ್ರುತಾನೇನ ಮಲ್ಲಯ್ಯಗ ಹೇಳುತಾನೇನ
ಬುತ್ತಿ ಗಂಟ ಬಿಚ್ಚೇನ ಊಟ ಮಾಡೇಳಂದಾನ
ಊಟ ಮಾಡಲಿಬೇಕಪ್ಪ ಸೀತಾಳ ಮುಗಿಯಲಿಬೇಕಯ್ಯ
ಯಾವಾಗ ಉಂಡಿದಿ ಅಂದಾನೆ ಎಲ್ಲಿ ಬಂದಿದಿ ಅಂದಾನ
ಮಲ್ಲಿಕಾರ್ಜುನ ಮಹಾದೇವ ನುಡದಾನೆ ಮಾತಾಡ್ಯಾನ
ಒಲ್ಲೇನಪ್ಪ ಒಲ್ಲೇನ ನನಗ ಹಸುವನಾಗಿಲ್ಲ
ನಿನಗ ಹಸುವನಾಗಲಿಕ್ಕ ನನಗ ಹಸುವನಾಗಿಲ್ಲ
ನಿನಗ ಹಸುವನಾಗಲಿಕ್ಕ ಬುತ್ತಿಯಾರಿಗ ಬೇಕಪ್ಪ
ಸಿದ್ಧರಾಮನಲ್ಲೇಳ ತಯ್ಯಾರಾಗುತಾನೇನ
ಮಲ್ಲಿಕಾರ್ಜುನ ಮಹಾದೇವ ಏನಂದಾಡುತ್ತಿದ್ದಾನೇನ
ನೀನು ಉಣುವಲಿಬೇಕಪ್ಪ ನಾನು ಉಣತೀನಿ ಅಂದಾನ
ನಾನೇ ಉಣತೀನಿ ಅಂದಾನೆ ನೀನೇ ಉಣಬೇಕಂದಾನ
ಮೊದಲೆ ನೀನೇ ಉಂಡಾರ ಹಿಂದಿದ ನಾನೇ ಉಂಡೇನ
ನನ್ನಗೂಡ ಸಿದ್ಧರಾಮ ಕೂಡಿ ಉಣಬೇಕಂದಾರ
ಒಳ್ಳೇದು ಒಳ್ಳೇದಂದಾರೆ ಉಂಡಾರೆ ಬಾಳುಟ್ಟಾರೆ
ಉಂಡಾರೆ ಭಾಳುಟ್ಟಾರೆ ಬಾಯಿಲಿ ಸೀತಾಳ ಉಗಳ್ಯಾರ
ದೇವಿಧರ್ಮರ ಹಾಡೇನ ಇಲ್ಲಿಗ ಇದು ಒಂದು ಸಂದೇನ
ಕಳಸವಿಟ್ಟಾರ ಕವಿತಾ ಕಟ್ಯಾರ ಹೊನ್ನ ಜಗ್ಗುನಿ ಗೌಡರೋ
ದೇವರ ಬಂದಾರ ಬನ್ನೀರೆ !