ನಾಕು ಮಂದಿ ಅಣ್ಣದೇರಾ ಹಳಿಗೇರೆಂಬ ಊರಾಗ
ಹಳಿಗೇರೆಂಬ ಊರಾಗ ಹುಲಿ ಹೋಗ್ಯಾವ ನಾಗಠಾಣಕ
ಹುಲಿ ಹೋಗ್ಯಾವ ನಾಗಠಾಣಕ ಕುರಿ ಬಂದು ಮಂದ್ಯಾಗ ನಿಂತಾವ
ಗಂಗಿ ಮಾಳಮ್ಮನಂದಾರೆ ಅಡ್ಡ ಬರುವುತಾಳೇನ
ಅಡ್ಡ ಬರುವುತಿದ್ದಾಳೆ ಮರಿಯಾ ಹಿಡಿಯುತಿದ್ದಾಳ
ನಾಕು ಮಂದಿ ಅಣ್ಣದೇರಾ ತಾಯಿನ ಕೇಳುತಾರೇನ
ಬಾರೋ ಬಾರೋ ಏಯವ್ವ ತಂಗಿ ಎಲ್ಲಿಗ ಹೋಗ್ಯಾಳ
ಭಾಗ್ಯದೊಳಗ ಬರುವಕ್ಕೆ ಬದುಕಿನೊಳಗ ಇರುವಕ್ಕೆ
ಕುಡದ ಮರಿಗೋಳಲ್ಲವ್ವ ಹೊಟ್ಟಿ ನೋಡಿ ಉಣಸಕೆ
ಬಾರೋ ಬಾರೋ ಹಡದವ್ವ ತಂಗಿ ಎಲ್ಲಿ ಹಾಳವ್ವ
ಹಣೀಗಿ ಗಂಧ ಹಚ್ಯಾನ ಕುಂಕುಮಬಟ್ಟ ಹಚ್ಚಾನ
ಬಿಳಿಯಾ ರುಂಬಾಲ ಸುತ್ಯಾನ ಕಪ್ಪಿಲೆ ಕರಿಚಲುವನೆ
ಕಪ್ಪಿಲಿ ಕರಿಚಲುವನೇ ಬೂದಿಬಡಕನ ಹಿಂದೇನ
ಬೂದಿಬಡಕನ ಹಿಂದೇನ ಕೈಯಾಗ ಚರಗಿ ಹಿಡದಾಳ
ಕೈಯಾಗ ಚರಗಿ ಹಿಡದಾಳೆ ಬೆನ್ನಿಂದ ಹೋಗ್ಯಾಳೇನಯ್ಯ
ಬೆನ್ನಿಂದ ಹೋಗ್ಯಾಳಂದಾಳೆ ಬೆನ್ನಿಂದ ಹೋಗ್ಯಾಳೇನಯ್ಯ
ನಾಲ್ಕು ಮಂದಿ ಮಕ್ಕಳ ಹಿಂತ ಮಾತ ಕೇಳ್ಯಾರ
ಹಿಂತ ಮಾತ ಕೇಳ್ಯಾರೆ ದೊಣ್ಣಿ ಕೈಯಾಗ ಹಿಡದಾರ
ದೊಣ್ಣಿ ಕೈಯಾಗ ಹಿಡದಾರ ಹೆಗಲಿಗ ಹೊರವುತಾರೇನ
ಬಾರೋ ಬಾರೋ ತಾಯವ್ವ ಯಾವ ಧಾರಿಗ ಹೋಗ್ಯಾರೆ
ಮೂಡಲ ದಿಕ್ಕಿಗಲ್ಲೇಳ ಗುಡ್ಡದ ದಾರಿಗ ಹೋದಾರ
ನಾಲ್ಕು ಮಂದಿ ಅಣ್ಣದೇರಾ ಹೆಗಲಿಗ ಬಡಗಿ ಹೊತ್ತಾರ
ದೊಣ್ಣಿ ಹೆಗಲಿಟ್ಟಾರ ರಾಯಿಮಾರಗ ಹಿಡದಾರ
ಹೋಗುತ ಹೋಗುತಲ್ಲೇಳ ಗುಡ್ಡಕ ಬರುವುತಾರೇನ
ಗುಡ್ಡಕ ಬರುವ ಯಾಳ್ಯಾಕ ಸ್ಯಾಸಿಲಗ್ಗನ ನಡದಾವ
ಹರಿಯಾ ನೀರ ಬಿಟ್ಟೇನೆ ಸ್ಯಾಸಿಗ ಸುರುವನಾದಾವ
ತಾಳಿ ಗುಂಡ ತಂದಾರೆ ಕೊಬ್ಬರಿಗುಂಡ ತಂದಾರ
ಕೊಬ್ಬರಿ ಗುಂಡಿನೊಳಗೇನ ತಾಳಿ ಮುತ್ತನಿಟ್ಟಾರ
ತಾಳಿ ಮುಟ್ಟುನಿಟ್ಟಾರ ಬಯಲಿಗ ಬರುವುತಾರೇನ
ಮಲ್ಲಿಕಾರ್ಜುನ ಮಾದೇವಗ ಗಂಗಿಯ ಮಾಳಮ್ಮನ
ಗಂಗಿಯ ಮಾಳಮ್ಮಗ ಲಗ್ಗನಾಗತಾವಂದಾರ
ಕೈಯಾಗ ಗುಂಡ ಹಿಡದಾರೆ ತಾಯಿ ತಂದಿನ ಕೇಳ್ಯಾರ
ತಾಯಿ ಬಂದಿರಲಂದಾರೆ ತಂದಿ ಬಂದಾನಂದಾರ
ಬಂಧು ಬಂದಾರಂದಾರೆ ಬಳಗ ಬಂದಾರಂದಾರ
ಎಲ್ಲರೂ ಬಂದಾರಲ್ಲೇಳ ಎಲ್ಲರ ಒಪ್ಪಿಗಿದ್ದಾವ
ಎಲ್ಲರ ಒಪ್ಪಿಗಿದ್ದಾರೆ ಕರಮಣಿ ಕಟ್ಟತೀನಂದಾರ
ಹಂತ ಯಾಳ್ಯಾದೊಳಗೇನೆ ಗಂಗಿ ಮಾಳಮ್ಮನಣ್ಣದೇರಾ
ಗಂಗಿ ಮಾಳಮ್ಮನಣ್ಣದೇರಾ ಹೆಗಲಿಗ ಕೊಡ್ಲಿ ಹೊತ್ತಾರ
ಯಾರನ ಕೇಳಿದಂದಾರ ಯಾರಿಗ ಹೇಳೀದಂದಾರ
ಯಾವ ನಾಡದ ತುಡಗನೆ ಯಾವ ನಾಡದ ಕಳ್ಳನೆ
ಬೂದಿಬಡಕ ಸನ್ಯಾಸಿ ಎಲ್ಲಿಂದ ಬಂದೀದಂದಾರ
ಹ್ಯಾಂಗ ಕಟ್ಟತೀನಂದಾರ ನೋಡಿ ಬಿಟ್ಟೇವಂದಾರ
ನೋಡಿ ಬಿಟ್ಟೇವಂದಾರೆ ನಿನ್ನವ್ನಹಾಡ ಅಂದಾರ
ನಿನ್ನವ್ನಹಾಡ ಅಂದಾರೋ ಟೊಣ್ಣಿ ಎತ್ತಿ ಹಿಡದಾರ
ಟೊಣ್ಣಿ ಎತ್ತಿ ಹಿಡದಾರ ಗುಲ್ಲ ನಾಯಿ ತಂದಾರ
ಗುಲ್ಲನಾಯಿತಂದರೋ ಮಲ್ಲಯ್ಯನಮ್ಯಾಲೆ ಬಿಟ್ಟಾರೆ
ಮಲ್ಲಯ್ಯನಲ್ಲೆ ಬಿಟ್ಟಾರ ಮಾಳಮ್ಮನಮ್ಯಾಲೆ ಬಿಟ್ಟಾರ
ತುರಂಗ ಬಾಲಿನಲ್ಲೇಳ ಮಾನಕಂಜುತಾಳೇನ
ಮಾನಕಂಜೂತಾಳೇನ ಗವಿಯ ಹೋಗುತಾಳೇನ
ಗವಿಯ ಒಳಗನಲ್ಲೇಳ ತುರಂಗ ಬಾಲಿನಂದಾಳ
ಗಂಗಿ ಮಾಳಮ್ಮನಲ್ಲೇಳ ಬಯಲಿಗ ಕುಂದ್ರುತಾಳೇನ
ನಾಕು ಮಂದಿ ಅಣ್ಣದೇರಾ ಮುಂದ ಮಾಡುತಾರೇನ
ಮುಂದ ಮಾಡುತಾರೇನ ಏನಂದಾಡುತಾಳೇನ
ಏನಂದಾಡುತಾಳೇನ ಹೆಜ್ಜಿ ಮುಂದಕಿಟ್ಟೇನೆ
ಹೆಜ್ಜೆ ಮುಂದಕಿಟ್ಟೇನೆ ಹಿಂದುಕಿಡುದಿಲ್ಲಂದಾಳ
ಗುಲ್ಲನಾದವಂದಾರ ಕರಮಣಿ ಕಟ್ಟಲಿಲ್ಲೇನ
ಕರಿಮಣಿ ಕಟ್ಟಲಿಲ್ಲೇನ ಸ್ಯಾಸಿ ನಿಂತಾವೇನಯ್ಯ
ಸ್ಯಾಸಿ ನಿಂದ್ರುತಾವೇನ ಲಗ್ಗನ ನಿಂದ್ರತಾವೇನ
ವರ್ಷಕೊಮ್ಮಿನಲ್ಲೇಳ ಲಗ್ಗನಾಗುತಾವೇನ
ಲಗ್ಗನಾತುತಾವೇನ ಗುಲ್ಲನಾಗುತಾವೇನ
ಗುಲ್ಲನಾಗುತಾವೇನ ಕರಮಣಿ ನಿಂದ್ರತಾವೇನ
ನಾಲ್ಕು ಮಂದಿ ಅಣ್ಣದೇರಿಗ ಶಾಪ ಕುಡುತಾಳೇನಯ್ಯ
ಡೋಣಿ ಹಿಡಯುತಾರೇನ ಒಗ್ಗನಾಗುತಾರೇನ
ಹೆಗಲಿಗ ಅಡ್ಡ ಹಾಕ್ಯಾನೆ ಟೊಂಕಕ ಗಂಟ ಕಟ್ಯಾನ
ಕೌಡಿ ಕೊಳ್ಳಾಗ ಕಟ್ಯಾನ ನಾಯಿನಾಗಿ ಬೊಗಳ್ಯಾರ
ನಾಲ್ಕು ಮಂದಿನಲ್ಲೇಳ ಗಂಗಿ ಮಾಳಮ್ಮನಣದೇರಾ
ಗಂಗಿ ಮಾಳಮ್ಮನಣದೇರಾ ನಾಲ್ಕು ಮಂದಿ ಇದ್ದಾರ
ಅಳಿಗೇರಿ ಎಂಬ ಊರಿಗೆ ಮೂರ ತಿಂಗಳ ದಿನಾಮಾನ
ಮೂರ ತಿಂಗಳ ದಿನಮಾನ ಮಲ್ಲಯ್ಯ ಹೋಗುತಾನೇನ
ಮಲ್ಲಯ್ಯ ಹೋಗುತಾನೇನ ಮನಿಯಾ ಅಳಿಯಾನಾದನೆ
ಅತ್ತಿಮಾವನ ಮನಿಗೇನೆ ಹಬ್ಬದೂಟಕ ಹೋಗ್ಯಾನ
ಅರಕೇರಿ ಎಂಬ ಅರಮನಿಗೆ ತಾನೇ ಹೋಗುತಾನೇನ
ಏನಮ್ಮ ದೇವರ ಹಾಡೇನೆ ಇಲ್ಲಗ ಇದು ಒಂದು ಸಂದೇನ
ಇಲ್ಲಿಗ ಇದು ಒಂದು ಸಂದೇನ ಮುಂದಿನ ಸಂದಿಗ ತಿಳಸೇನೆ
ಕಳಸವಿಟ್ಟರ ಕವಿತಾ ಕೆಟ್ಯಾರ ಹೊನ್ನ ಜಗ್ಗುನಿ ಗೌಡರೊ
ದ್ಯಾವರು ಬಂದಾರ ಬನ್ನಿರೆ
ದೇವಿಯ ಮೊದಲ ದೇವರ ಮೊದಲ ದೇವಿಂದರಾಯನೆ ಮೊದಲಯ್ಯ
ತಾಯಿನಂದರ ಯಾರು ಮರ್ತ್ಯಕ ತಂದಿನಂದರ ಯಾರಯ್ಯ
ತಾಯೇಳ ಪಾರವತಿದೇವಿ ನಮ್ಮ ದೇವರು ಪರಮೇಸೂರನ
ಇವರ ಇಬ್ಬರ ಹೊರತ ಧರ್ಮರ‍್ಯಾ ಮಾರುತ್ಯಾಕ್ಯಾರ‍್ಯಾರಿಲ್ಲಯ್ಯ
ದೇವಿಧರ್ಮರ ಹಾಡೇನೆ ಎಲ್ಲಿಗ ಬರುತಾವೇನಯ್ಯ
ಸತ್ಯಧರ್ಮರ ಹಾಡೇನೆ ಜತ್ತುನಾರ‍್ಯಾಣಪುರದಾಗ
ಗ್ರಾಮನೇಳು ಹುಲಿಜಂತ್ಯಾಗೆ ದಿಂಡಗದ್ದುಗಿ ಹಾಕ್ಯಾನ
ದಿಂಡಗದ್ದುಗಿ ಹಾಕ್ಯಾನ ಮಾಳಪ್ಪ ಮಂಡಿಲಿ ಶಾಯವ ಮಾಡ್ಯಾನ
ಊಟಕ ಹುಲಿಗಿಣ್ಣವ ಕೊಟ್ಟಾನ ಆಟಕ ಹುಲಿಮರಿಯೇನ
ನಂದನ ಬನದಾಗ ಲಿಂಗ ಬಾ ನನ್ನ ರುದ್ದರ ಮಾಯವ್ವನ ತಮ್ಮನ

ಮಾರಗ ಮಾರಗಂದಾರೆ ಯಾವಲಿ ಇರುತಾವೇನ
ಸತ್ಯ ಧರ್ಮರ ಹಾಡೇನೆ ಯಾವ ಠಾಣೆದ ಮ್ಯಾಲೇನ
ಯಾವ ಠಾಣೆದ ಮ್ಯಾಲೇನ ಸೊನ್ನಲಗಿರಿಯ ಒಳಗೇನ
ಸೊನ್ನಲಗಿರಿಯ ಒಳಗೇನ ತಂದೇಳ ಮದ್ದುಗೌಡನ
ತಂದೇಳ ಮುದ್ದುಗೌಡನೇ ತಾಯೇಳ ಸುಗಲವ್ವನ
ಗೌಡಕಿ ಯಾರಿಗಿದ್ದಾವೆ ರಾಜಕಿ ಯಾರಿಗಿದ್ದಾವ
ದೇಶಕಿ ಯಾರಿಗಿದ್ದಾವೆ ಹಕ್ಕು ಯಾರಿಗಿದ್ದಾವ
ಮೂರವರ್ಷನಾದರೆ ಮಕ್ಕಳ ಫಲಗೋಳು ಇಲ್ಲಯ್ಯ
ಟೊಂಕಿಗ ಸೆರಗ ಸುತ್ಯಾರೆ ನಡುವಿಗ ನಡುಕಟ್ಟು ಸುತ್ಯಾರೆ
ನಡುವಿಗ ನಡುಕಟ್ಟು ಸುತ್ಯಾರೆ ಲ್ಯಾವಿದಂಡಕೋಲ ಹಿಡದಾರ
ಟೊಂಕಿಗ ಸೆರಗ ಸುತ್ಯಾರೆ ನಡುವಿಗ ನಡಕಟ್ಟು ಸುತ್ಯಾರೆ
ನಡುವಿಗ ನಡುಕಟ್ಟು ಸುತ್ಯಾರೆ ಲ್ಯಾವಿ ದಂಡಕೋಲ ಹಿಡದಾರ
ಟೊಂಕ ಬಾಗುತಾವೇನ ಮುಪ್ಪಿನವರು ಆದರ
ಮುಪ್ಪಿನವರು ಆದಾರೆ ಗುರುವಿನ ಕರುಣ ಇಲ್ಲೇನ
ಕಪ್ಪನೆ ಕರಿಮಡ್ಯಾಗೆ ನೆಲದ ಭುಂಯಾರದೊಳಗೇನ
ನೆಲದ ಭುಂಯಾರದೊಳಗೇನ ಗುರುವ ರೇವಣಸಿದ್ದನ
ಗುರುವ ರೇವಣಸಿದ್ದನ ಕ್ಯಾವಿ ಭಗವಾ ಹಾಕ್ಯಾನ
ಮುಂಗೈಗ ಜೋಳಿಗೆ ಹಾಕ್ಯಾನೆ ರುಂಡಮಾಳಾ ಹಾಕ್ಯಾನ
ರುಂಡಮಾಳಾ ಹಾಕ್ಯಾನೆ ಗುಂಡಮಣಿಗೋಳು ಹಾಕ್ಯಾನ
ರುಂಡಮಾಳಾ ಹಾಕ್ಯಾನೆ ಗುಂಡಮಣಿಗೋಳು ಹಾಕ್ಯಾಳಾ
ಲ್ಯಾವಿದಂಡಕೋಲ ಹಿಡದಾನೆ ಮುಂಗೈಗ ಜೋಳಗಿ ಹಾಕ್ಯಾನ
ಹೊಕ್ಕಳಗುಂಟಿ ಕಟ್ಟ್ಯಾನೆ ಮುಳ್ಳ ಆಂವಿಗಿ ಹಾಕ್ಯಾನ
ನೆಲದ ಭುಂಯಾರ ಬಿಟ್ಟಾನೆ ಏಳಗಜದ ಕಲ್ಲೇನ
ಏಳಗಜದ ಕಲ್ಲೇನ ಈಡಬಾಗಲ ಮಾಡ್ಯಾನ
ರಾಯಿಮಾರಗ ಹಿಡದಾನೆ ಎಲ್ಲಿಗ ಬರುತಾನೇನಯ್ಯ
ಅಲ್ಲ್ಯಾನ ಇಲ್ಲ್ಯಾನೇನೆ ಸೊನ್ನಲಗಿರಿಯ ಒಳಗೇನ
ಸೊನ್ನಲಗಿರಿಯ ಒಳಗೇನ ತಂದೇಳ ಮುದ್ದಗೌಡನ
ತಂದೇಳ ಮುದ್ದಗೌಡನ ಮನಿಗಿ ಗುರುವ ರೇವಣಸಿದ್ದನ
ಗುರುವ ರೇವಣಸಿದ್ದನೆ ಮನಿಗಿ ಬರುವುತಾನೇನ
ತಾಯೇಳ ಸುಗಲವ್ವನ ಗುರುವಿಗ ನೋಡುತಾಳೇನ
ಗುರುವಿನ ನೋಡುತಾಳೇನೆ ತುಂಬಿದ ಕೊಡದ ನೀರೇನ
ತುಂಬಿದ ಕೊಡದ ನೀರೇನೆ ಪಾದ ತೊಳಿಯುತಾಳೇನ
ತಂದೇಳ ಮುದ್ದುಗೌಡನೇ ತಾಯೇಳ ಸುಗಲವ್ವನ
ತಾಯೇಳ ಸುಗಲವ್ವನ ಸೀತಾಳ ಮುಗಿಯುತಾಳೇನ
ಗುರುವ ಬಂದಾನಂದಾರೆ ಕುಂದ್ರು ಮನ್ನುಣಿ ಮಾಡ್ಯಾರ
ಕುಂದಲ ಹಚ್ಚಿದ ಮಣಿಯ ಚೌಕಿ ತಾವಂದು ಮನ್ನುಣಿ ಮಾಡ್ಯಾರ
ಗುರುವ ರೇವಣಸಿದ್ದನೆ ತಾವಂದು ಮೂರುತಿ ಆದಾನ
ಗುರುವ ಬಂದಾನಂದಾರೆ ಅಡಗೀಯ ಸಿಂಗಾರ ಮಾಡ್ಯಾರೆ
ಗುರುವ ರೇವಣಸಿದ್ದನೆ ನುಡದಾನೆ ಮಾತಾಡ್ಯಾನ
ನುಡದಾನೆ ಮಾತಾಡ್ಯಾನೆ ಮಕ್ಕಳಿಲ್ಲದ ಮನಿಯಾಗ
ಮಕ್ಕಳಿಲ್ಲದ ಮನಿಯಾಗೆ ಊಟ ಮಾಡದಿಲ್ಲೇನ
ಜಗವಂದು ಮಾತಾನಾಡ್ಯಾರೆ ನೀನೊಂದು ಮಾತನಾಡಿದೆ
ನೀ ಕೊಡದ ಮಕ್ಕಳ ಎಲ್ಲಿಂದ ಬರುತಾವಂದಾರ
ಅರುವನಿಲ್ಲದ ಗುರುವೇನ ವರನಿಲ್ಲದ ಗುರುವೇನ
ಪರವನಿಲ್ಲದ ಗುರುವಿಗ ಏನಂದು ಮಾತನಾಡ್ಯಾರ
ಒಳ್ಳೇದು ಒಳ್ಳೆದೆಂದಾರೆ ಗುರುವ ರೇವಣಸಿದ್ದನ
ಗುರುವ ರೇವಣಸಿದ್ದನೆ ಸೀತಾಳ ಕೊಡುವುತಾನೇನ
ಇಂದಿನ ದಿನಮಾನಿಲ್ಲೇನ ಮುಂದಿನ ದಿನಮಾನಿಲ್ಲೇನ
ಇಂದೇ ಪಾರಗೋಳು ಕೊಟ್ಟೇನೆ ದಿನಮಾನ ಎಣಸಾಲಿ ಅಂದಾನ
ನಿಂದ್ಯದ ಮಾತೊಂದು ಆಡ್ಯಾರೆ ಕುಂದ್ಯಾದ ಮಾತೊಂದು ಆಡ್ಯಾರ
ನೀವಂದು ಮಾತಾನಾಡಿದರೆ ಮನಸಿಗ ಒಡದಾವಂದಾನ
ಮನಸಿಗ ಬಡದಿಲ್ಲಂದಾರೆ ಮುಪ್ಪಿನವರಾದೇವ
ಮುಪ್ಪಿನವರ ಆದೇವ ಮಕ್ಕಳು ಹ್ಯಾಂಗ ಆದಾವ
ಟೊಂಕಿಗ ಸೆರಗ ಸುತ್ತಿವೆ ಲ್ಯಾವಿದಂಡಕೋಲ ಹಿಡದೀವೆ
ನಡುವಿಗ ನಡಕಟ್ಟ ಸುತ್ತೀವೆ ಲ್ಯಾವಿದಂಡಕೋಲ ಹಿಡದೀವೆ
ಒಳ್ಳೆ ರಾಜನಂದಾರೆ ಒಳ್ಳೆ ಗೌಡನಂದಾರ
ರೈತರಾಣೆರ ಮಕ್ಕಳೆ ಏನಂದಾಡುತ್ತಿದ್ದಾರ
ನಮಗೂ ಮಕ್ಕಳಿಲ್ಲೇಳ ಮಕ್ಕಳ ಕುಡಿಗೋಳು ಇಲ್ಲೇಳ
ಹುಟ್ಟ ಬಂಜಿನಾದೇವ ಎಲ್ಲಿಂದ ಮಕ್ಕಳ ಬರತಾವ
ಗುರುವ ರೇವಣಸಿದ್ದನೆ ನುಡದಾನೆ ಮಾತಾಡ್ಯಾನ
ಇಂದಿನ ದಿನಮಾನಿಲ್ಲೇನೆ ಮುಂದಿನ ದಿನಮಾನಿಲ್ಲೇನ
ಇಂದಿನ ದಿನಮಾನ ಅಲ್ಲ ಸುಗಲವ್ವ ನೀನೆ ಇಳಸಲಿಬೇಕವ್ವ
ಒಂಬತ್ತು ತಿಂಗಳಾದಾವೆ ಒಂಬತ್ತು ದಿನಮಾನದಾವ
ಬಾಣಸ್ತಾನ ಆದಾವೆ ತೊಟ್ಟಿಲದೊಳಗ ಹಾಕರೆ
ತೊಟ್ಟಿಲದೊಳಗೆ ಹಾಕರೆ ಬಾಣಸ್ತಾನ ಮಾಡರೆ
ನನ್ನ ಧ್ಯಾನ ಮಾಡರೆ ನಾನೇ ಬರತೀನಿ ಅಂದಾನ
ತೊಟ್ಟಿಲದೊಲಗ ಹಾಕಿದರೆ ಹೆಸರ ನಾವೇ ಕರದೇವ
ಹೆಸರ ನಾವೇ ಕರದೇವೆ ಊಟ ನಾವು ಮಾಡೇವ
ತಾಯೇಳ ಸುಗಲವ್ವನ ತಂದೇಳ ಮುದ್ದುಗೌಡಗ
ತಂದೇಳ ಮುದ್ದುಗೌಡಗ ಫಲಗೋಳು ಕೊಟ್ಟು ನಡದಾನ
ಹನ್ನೆರಡು ಹನ್ನೆರಡು ವರ್ಷೇನ ಇಪ್ಪತನಾಲ್ಕು ವರ್ಷನ
ಇಪ್ಪತ್ತನಾಲ್ಕು ವರ್ಷಿನ ವಯಾ ಸುಗಲವ್ವಗ ಕೊಟ್ಟೇನೆಂದಾನ
ಮೂವತ್ತು ವರ್ಷಿನ ವಯಾ ಮುದ್ದುಗೌಡಗ ಕೊಟ್ಟೇನ
ನಿಮ್ಮ ಮನಕನಲ್ಲೇಳ ಮೂವತ್ತು ವರ್ಷ ವಯಸ್ಸ
ನಿಮ್ಮ ಅತ್ಯುಕಲ್ಲೇಳ ಇಪ್ಪತೈದ ವಯಸ್ಸ
ರೈತರಾಣೆರ ಮಕ್ಕಳಿಗೆ ಮುಪ್ಪಿನವರ ಕಂಡೀರೆ
ಒಳ್ಳೆದು ಒಳ್ಳೇದಂದಾನೆ ಮಂಡಿಲಿ ಹಸ್ತ ಇಟ್ಟಾನ
ಮಂಡಿಲಿ ಹಸ್ತ ಇಟ್ಟಾನೆ ಹೋಗಿ ಬರತೀನಿ ಅಂದಾನ
ಸೊನ್ನಲಗಿರಿಯಾ ಬಿಟ್ಟಾನೆ ರಾಯಿಮಾರಗ ಹಿಡದಾನ
ಇಳದಲ್ಲಿ ಇಳಿಗಾಳೇನ ಸುಳದಲಿ ಸುಳಿಗಾಳೇನ
ಗಾಳಿಕ್ಕಿಂತ ಮುಂದೇನ ಪರಮಾಳದ ಗಾಳಿನಾದನ
ಹೋಗುತ ಹೋಗತಲ್ಲೇಳ ಕಪ್ಪನೆ ಕರಿಮಡ್ಡಿಗೆ
ಕಪ್ಪನೆ ಕರಿಮಡ್ಯಾಗೆ ನೆಲಸ ಭುಂಯಾರದೊಳಗೇನ
ಈಡ ಬಾಗಲತೆರದಾನೆ ಗವಿಯ ಒಳಗ ಹೋಗ್ಯಾನ

ಮುದ್ದಪ್ಪ ಸುಗಲವ್ವಗೆ ಏನಂದಾಡುತ್ತಿದ್ದಾನ
ಸೊನ್ನಲಗಿರಿಯ ಒಳಗೇನೆ ಗೌಡಿಕಿ ನಮ್ಮದಿದ್ದಾವೆ
ಗೌಡಕಿ ನಮ್ಮದಿದ್ದಾವೇ ರಾಜಕಿ ನಮ್ಮದಿದ್ದಾವೆ
ಟೊಂಕ ಬಾಗಿ ನಡದಾರೆ ಬೆನ್ನ ಬಾಗಿ ನಡದಾರ
ವಯಸ್ಸ ಬದಲನಾದವೆ ದಾರಿ ನಡಿಯುತಾರೇನ
ರೈತರಾಣೆರ ಮಕ್ಕಳೆ ನುಡದಾರೆ ಮಾತಾಡ್ಯಾರ
ನಮ್ಮಗ ನೋಡದಕಲ್ಲೇಳ ಮುಪ್ಪಿನವರ ಕಂಡಾರ
ಲ್ಯಾವಿದಂಡಕೋಲ ಬಿಟ್ಟಾರೆ ನಡವಿಗ ಸೆರಗ ಬಿಟ್ಟಾರ
ನಡಕಟ್ಟ ಬಿಡುವುತಾರೇನೆ ಲ್ಯಾವಿದಂಡಕೋಲ ಬಿಟ್ಟಾರ
ಒಂದಾ ತಿಂಗಳಾದಾವೆ ಎರಡ ತಿಂಗಳಾದಾವ
ಮೂರು ತಿಂಗಳಾದವೇ ತಾಯೇಳ ಸುಗಲವ್ವಗ
ತಾಯೇಳ ಸುಲವ್ವನ ಮೊದಲಿನ ಆವುತಾರ ತಾಳ್ಯಾಳ
ಮೈಯ ತುಂಬುತಾವೇನೆ ಕೈಯ ತುಂಬುತಾವೇನೆ
ಅವುತಾರ ಹೋಗುತಾವೇನ ಹೆಂತಾ ಅವುತಾರ ಬಂದಾವ
ಅತ್ತಿಯ ಮನಿಯ ಸೊಸ್ತೇರಿಗೆ ತೌರಮನಿಯ ಹೆಣ್ಣಮಕ್ಕಳಿಗೆ
ದೇವರ ಕೊಟ್ಟಾನಂದಾರೆ ಸಂಬಾ ಕೊಟ್ಟಾನಂದಾರ
ರೈತರಾಣ್ಯಾರ ಮಕ್ಕಳೆ ಏನುಂದಾಡುತಾರೇನ
ದೇವರು ಕೊಟ್ಟಾನಂದಾರೆ ಮುಪ್ಪಿಗಾದಾವಂದರ
ಮುಪ್ಪಿನ ವಯಸ್ಸುದಾಗೇನ ತಾಯೇಲ ಸುಗಲವ್ವಗ
ಬುತ್ತಿ ತರುವುತಾರೇನ ಬಾನಾ ತರವುತಾರೇನ
ರೈತ ರಾಣೆರ ಮಕ್ಕಳ ತಾಯೇಳ ಸುಗಲವ್ವಗ
ಎಳ್ಳು ಹಚ್ಚಿದ ರೊಟ್ಟೇನ ಎಣ್ಣೆ ಬದನಿಕಾಯೇನ
ಎಣ್ಣೆ ಬದನಿಕಾಯೇನ ಮಸರಬಾನದ ಬುತ್ತೇನ
ಹಪ್ಪಳ ಸಂಡಿಗೆ ತಂದಾರೆ ಉಪ್ಪಿನಕಾಯಿ ತಂದಾರ
ತಾಯೇಳ ಸುಗಲವ್ವನ ಬುತ್ತಿ ಬರುವುತಾರೇನ
ನಾಲ್ಕು ತಿಂಗಳಾದಾವೆ ಒಂಬತ್ತು ತಿಂಗಳಾದವೆ
ಒಂಬತ್ತು ದಿನಾಮಾನಾದಾವ ಒಂಬತ್ತು ತಾಸನಾದವ
ದಿನಮಾನ ಎಣಸುತಾರೇನ ದೇವರು ಕೊಟ್ಟೀದಂದಾರ
ರೈತರಾಣೆರ ಮಕ್ಕಳೆ ಅತ್ತಿಯ ಮನಿಯ ಸೊಸ್ತೇರ
ನೆರಿಬಂದ ಗುರುಹಿರಿಯರ ಸೂಲಗಿತ್ತಿ ಸುಬ್ಬವ್ವ
ನಡುವ ಹಿಡಿಯ ನಾಗವ್ವ ಸುದ್ದಿ ವೈಯ್ಯಾ ಸಿದ್ದವ್ವ
ಮೂರು ಮಂದಿ ಬಂದಾರೆ ಮುಂದ ನಿಂದ್ರತಾರೇನ
ನೀರ ಕಾಸುತಾರೇನ ತಾಯಿಗ ಹಾಕುತಾರೇನ
ಸುಗಲವ್ವ ತಾಯಿಗಲ್ಲೇಳ ಬಾಣಸ್ತಾನ ನೋಡವ್ವ
ಹಿಂದ ಕುಂದ್ರುತಾರೇನ ಮುಂದ ಕುಂದ್ರತಾರೇನ
ಸಾಯಿತೇನ ಹಡದವ್ವ ತಾಯಿನ ಕಾಣದವರವ್ವ
ಅಕ್ಕನ ಕಾಣದವರವ್ವ ತಂಗಿನ ಕಾಣದವರವ್ವ
ನಾವೇ ಮುಪ್ಪಿನವರವ್ವ ದೇವರ ಕೊಟ್ಟನಂದಾರ
ದೇವರ ಧ್ಯಾನ ಮಾಡ್ಯಾರೆ ತಾಯೇಳ ಸುಗಲವ್ವಗ
ಕೊಡುವದಕೆಲ್ಲ ಕೊಟ್ಟೀನೆ ಕಣ್ಣು ತೆರಿಯಲಿಬೇಕಯ್ಯ
ಸಂಬಾ ಕಣ್ಣ ತೆರದಾನೆ ಶಿವನು ಕಣ್ಣು ತೆರದಾನ
ಶಿವನು ಕಣ್ಣ ತೆರದಾನ ತಾಯೇಳ ಸುಗಲವ್ವಗ
ತಾಯೇಳ ಸುಗಲವ್ವನೆ ಗಂಡಸ ಮಗನೆ ಹಡದಾಳ

ಸೊನ್ನಲಗಿರಿಯ ಪಟ್ಟಣಕ ರಾಜಾ ಹುಟ್ಯಾನಂದಾರ
ರಾಜಾ ಹುಟ್ಯಾನಂದಾರ ಗೌಡ ಹುಟ್ಯಾನಂದಾರ
ಗೌಡ ಹುಟ್ಯಾನಂದಾರೆ ದೇಸಾಯಿ ಹುಟ್ಯಾನಂದಾರ
ಹಕ್ಕು ನಿಂದೇನಾದಾವೆ ದಕ್ಕು ನಿಂದೇನಾದವ
ಸೊನ್ನಲಪೂರಕಲ್ಲೇಳ ಅಧಿಪತಿ ಆದಾನಂದಾರ
ದೇವರ ಕೊಟ್ಟನಂದಾರೆ ಜ್ವಾಕಿನಾಗುತಾರೇನ
ರೈತರಾಣ್ಯಾರ ಮಕ್ಕಳ ಬಾಣಾಸ್ತಾನ ಮಾಡ್ಯಾರ
ಎಂಟು ದಿನಗೋಳು ಆದಾವೆ ಒಂಬತ್ತು ದಿನಗೋಳ ಆದಾವ
ಹನ್ನೊಂದು ದಿನದ ಒಳಗೇನ ಬಣ್ಣದ ತೊಟ್ಟಿಲ ತಂದಾರ
ನಡುಮನಿ ಪಡಸಾಲಿ ಒಳಗೇನ ತೊಟ್ಟಿಲ ಕಟ್ಟುತಾರೇನೆ
ಒಕ್ಕುಳ ಹೂರಣಕ ಹಾಕ್ಯಾರ ಊರಿಗೆ ಊಟ ಹೇಳ್ಯಾರ
ತಾಯೇಳ ಸುಗಲವ್ವನೆ ಬಿಂದಿಗಿ ಕೈಯಾಗ ಹಿಡದಾರ
ವಾರಿಗಿ ನಾರ‍್ಯಾರಿಗಲ್ಲೇಳ ತಾನೇ ಕರಿಯುತಾಳೇನ
ದೇವರ ನಮಗೆ ಕೊಟ್ಟಾನೆ ಇದೇ ಒಂದ ಅಂದಾಳ
ಎಂದು ಹೋಗಿಲ್ಲಂದಾಳೆ ನಾನೇ ಮಾಡಿಲ್ಲಂದಾಳ
ಮಕ್ಕಳ ಹಡದ ತಾಯಿದೇರ ನಾವೇ ಮರತೀವಿ ಅಂದಾರ
ಕೈಯಾಗ ಬಿಂದಿಗಿ ಹಿಡದಾರ ಕುಂಕುಮ ಚೀಟಿ ತಂದಾರ
ಹಣಿಯಲಿ ಕುಂಕುಮ ತಂದಾರೆ ಹಲ್ಲಿಗಿ ಜಾಚೇಲಿ ತಂದಾರ
ಉತ್ತುತಿ ಉರಿಗೊಬ್ಬರೆ ಉಡಿಯಕ್ಕಿ ಸಾಮನ ತಂದಾರ
ಅರಬಳ್ಳ ಅರಶಿಣ ತಂದಾರೆ ಕಿರಬಳ್ಳ ಕುಂಕುಮ ತಂದಾರ
ಹರುವ ಕಬ್ಬ ತಂದಾರೆ ಒಡುವ ಟೆಂಗ ತಂದಾರ
ಗುಲಾಬಿ ಹುಗೋಳು ತಂದಾರೆ ಬಿಳಿಯಾ ಮಲ್ಲಿಗಿ ತಂದಾರ
ನೆನಿಯಕ್ಕಿ ನೆನಿಗಡಲೇನ ಕೊನಿಯೊಂದು ಬಾಳಿಹಣ್ಣೇನ
ಕಲ್ಲ ಕಟ್ಟಿದ ಬಾಂಯೇನ ಮಲ್ಲಿಗಿ ಹಚ್ಚಿದ ಸೋಪಾನ
ಮೆಲ್ಲ ಮೆಲ್ಲಕ ಇಳದಾರ ಗಂಗಿ ಪುಜಿಗೆ ನಿಂತಾರ
ಪಾದಕ ನೀರ ಬಡದಾವೆ ಪೈರಿಗೆ ಬಡಿಯುತಾವೇನ
ಪೈರಿಗ ಹೊಡಿಯುತಾರೇನ ಅರಬಳ್ಳ ಅರಿಶಿಣ ಹಚ್ಯಾರ
ಅರಬಳ್ಳ ಅರಿಶಿಣ ಹಚ್ಯಾರೆ ಕಿರಬಳ್ಳ ಕುಂಕುಮ ಹಚ್ಯಾರ
ಉತ್ತುತಿ ಉರಿಗೊಬ್ವರೆ ಉಡಿಯಕ್ಕಿ ಸಾಮನಿಟ್ಟಾರ
ಕಡುವ ಕಬ್ಬ ಇಟ್ಟಾರೆ ಒಡುವ ಟೆಂಗ ಇಟ್ಟಾರ
ಉತ್ತುತ್ತಿ ಉರಿಗೊಬ್ಬರೆ ಉಡಿಯಕಿ ಸಾಮನ ತುಂಬ್ಯಾರ
ನೆನಿಯಕ್ಕಿ ನೆನಿಗಡಲೇನ ಕೊನಿಯೊಂದು ಬಾಳಿ ಹಣ್ಣೇನ
ಕೊನಿಯ ಬಾಳಿ ಹಣ್ಣೀನ ಚಲುವ ಬಾಳಿ ಹಣ್ಣೇನ
ತಾಯೇಳ ಸುಗಲವ್ವನ ಗಂಗಿ ಪೂಜ ಮಾಡ್ಯಾಳ
ಗಂಗಿ ಪೂಜೆ ಮಾಡ್ಯಾಳೆ ಗೌರಿ ಪೂಜಿ ಮಾಡ್ಯಾಳ
ಗಂಗಿನ ಮಿನದಾಳೇನಪ್ಪ ಗೌರಿನ ಮಿನದಾಳೇನಯ್ಯ
ಬಿಂದಿಗಿ ಪೂಜಿ ಮಾಡ್ಯಾಳೆ ಬಾಗಿಸಿ ತುಂಬುತಾಳೇನ
ತಾಯೇಳ ಸುಗಲವ್ವನ ಬಿಂದಗಿ ಹೆಗಲ ಮ್ಯಾಲೇನ
ಮೆಲ್ಲ ಮೆಲ್ಲಕ ಏರ‍್ಯಾಳೆ ರಾಯಿಮಾರಗ ಹಿಡದಾಳ
ಅಲ್ಲ್ಯಾಳ ಇಲ್ಲ್ಯಾಳೇನ ಎಲ್ಲಿಗ ಬರುವುತಾಳೇನ
ರಾಯರ ಓಣಿಲಿ ಹಾಯ್ದಳೆ ರಡ್ಡೇರ ಮನಿಯ ಮುಂದೇನ
ಚಂದನ ಚಾವುಡಿಲಿ ಹಾಯ್ದಳೆ ಮಂದನ ಮಳಗೀಯ ಮುಂದೇನ
ರಾಜಾವಾಡದ ಮುಂದೇನ ತಮ್ಮ ಮನಿಗ ಬಂದಾಳ
ತಮ್ಮ ಮನಿಗೆ ಬಂದಾಳೆ ಲ್ಯಾಯದ ಪಡಸಾಲಿ ಒಳಗೇನ
ಲ್ಯಾಯದ ಪಡಸಾಲಿ ಒಳಗೇನ ತೊಟ್ಟಿಲ ಬುಡಕೆ ಇಳುವ್ಯಾಳ
ತೊಟ್ಟಿಲ ಬುಡಕೆ ಇಳುವ್ಯಾಳೆ ತಾಯಿ ಕುಂದ್ರುತಾಳೇನ
ಕುಬಸ ಮಾಡುತಾರೇನ ಮುತ್ತ ಮಾಡುತಾರೇನ
ಮುತ್ತ ಮಾಡುತಾರೇನ ಕುಬಸದ ಗಳಗಿ ಮಾಡ್ಯಾರ
ಒಕ್ಕುಳ ಗುಗ್ಗರಿ ಹಾಕ್ಯಾರೆ ಗುಗ್ಗರಿ ಬೀರುತಾರೇನ
ಮುದ್ದವ್ವ ಸುಗಲವ್ವನ ಏನಂದಾಡುತಾರೇನ
ಮುದ್ದಗೊಂಡನಲ್ಲೇಳ ಗುರುವಿನ ಧ್ಯಾನ ಮಾಡ್ಯಾನ
ಕಪ್ಪ ಕರಿಮಡ್ಡ್ಯಾಗ ಗುರುವ ರೇವಣಸಿದ್ದನ
ಹೊಕ್ಕಳಗಂಟಿ ಕಟ್ಯಾನೆ ಮಲಕಾಲಜಂಗ ಕಟ್ಟ್ಯಾನ
ಲ್ಯಾವಿದಂಡಕೋಲ ಹಿಡದಾನೆ ಕ್ಯಾವಿಭಗವಾ ಹಾಕ್ಯಾನ
ರುಂಡಮಣಿಗೋಳು ಹಾಕ್ಯಾನ ಗುಂಡಮಣಿಗೋಳು ಹಾಕ್ಯಾನ
ಕೈಯಾಗ ತ್ರೀಸೂಲ ಹಿಡದಾನ ಗುಂಡ ಬುಗರಿ ಹಿಡದಾನ
ಮುಳ್ಳಾಆವಿಗಿ ಹಾಕ್ಯಾನ ಕೈಯಾಗ ಜೋಗಿ ಹಿಡದಾನ
ಹೊನ್ನಹೊಸ್ತುಲ ಧಾಟ್ಯಾನೆ ಏಳ ಗಜದ ಕಲ್ಲೇನ
ಏಳ ಗಜದ ಕಲ್ಲೇನ ಮಾಮುರಿ ಮಾಡುತಾನೇನ
ಇಳದಲ್ಲಿ ಇಳಿಗಾಳೇನ ಸುಳದಲ್ಲಿ ಸುಳಿಗಾಳೇನ
ಗಾಳಿಕ್ಕಿಂತ ಮುಂದೇನ ಪರಮಾಳದ ಗಾಳಿನಾದಾವ
ಅಲ್ಲ್ಯಾನ ಇಲ್ಲ್ಯಾನೇನ ಸೊನ್ನಲಪುರದ ಒಳಗೇನ
ಸೊನ್ನಲಪುರದ ಒಳಗೇನ ರಾಯರ ಓಣಿಲಿ ಬಂದಾನ
ರಡ್ಡೇರ ಮನಿಯ ಮುಂದೇನ ರಾಜಾವಾಡಕ ಬಂದಾನ
ರಾಜಾವಾಡಕ ಬಂದಾನೆ ಲ್ಯಾಯದಪಡಸಾಲಿ ಒಳಗೇನ
ಲ್ಯಾಯದ ಪಡಸಾಲಿ ಒಳಗೇನ ಗುರುವಿನ ಪಾದ ತೊಳದಾರ
ಗುರುವಿನ ಪಾದತೋಳದಾರೆ ಪಾದ ಧೂಳ ಹೊಡದಾರ
ತೊಟ್ಟಿಲ ಬಲ್ಲಿ ಬಂದಾನ ರೈತರಾಣೇರ ಮಕ್ಕಳ
ಸೊನ್ನಲಪುರಕಲ್ಲೇಳ ಅಧಿಪತಿ ಅಂತ ಕೂಗ್ಯಾರ
ಅಧಿಪತಿ ಅಂತ ಕೂಗ್ಯಾರ ರಾಜ್ಯಾನಂತ ಕೂಗ್ಯಾರ
ದೇಸಾಯಿನಂತ ಕೂಗ್ಯಾರೆ ಗೌಡನಂತ ಕೂಗ್ಯಾರ
ಮಲ್ಲಿಕಾರ್ಜುನ ಮಾದೇವನಂತ ಹೆಸರ ಕರಿಯುತಾರೇನ
ಸಿದ್ಧರಾಮನಂದಾರೆ ಕಲಿಯ ಯೋಗದೊಳಗೇನ
ಜೋ ಜೋ ಅನುವುತಾರೇನ ಜೋಗಳ ಹಾಡುತಾರೇನ
ಜೋಗುಳ ಹಾಡುತಾರೇನ ಸಿದ್ಧರಾಮನಂದಾರ
ಸಿದ್ಧರಾಮನಂದಾರ ಗುಗ್ಗರಿ ಬೀರುತಾರೇನ
ಹೊಕ್ಕಳ ಗುಗ್ಗರಿ ಬೀರ‍್ಯಾರೆ ಊಟ ಹೇಳುತಾರೇನ
ಊಟ ಹೇಳುತಾರೇನ ಬಿನ್ನ ಕೊಡುವುತಾರೇನ
ಬಿನ್ನ ಕೊಡುವುತಾರೇನ ಗುರುವ ರೇವಣಸಿದ್ಧನ
ಗುರುವ ರೇವಣಸಿದ್ಧನ ಬಿನ್ನ ಹೇಳುತಾನೇನ
ಐವತ್ತೊಂದು ಮಂದಿಗೆ ಬಿನ್ನಾ ಕೊಡಬೇಕಂದಾನ
ತೊಂಬತ್ತೊಂದು ಮಂದಿಗೆ ಬಿನ್ನಾ ನಡಸೂತಾರೇನ
ಊಟ ಮಾಡುತಾರೇನ ಹೆಸರ ಕೇಳೂತಾರೇನ
ಹನ್ನೆರಡು ವರ್ಷಿನ ಮಗನೇನ ಮೂಕ ಮಗನ ಕೊಟ್ಟೇನೆ
ಮೂಕ ಮಗನ ಕೊಟ್ಟೇನೆ ಸಿದ್ಧರಾಮನಂದಾರ
ಸಿದ್ಧರಾಮನಂದಾರೆ ಊಟ ಮಾಡುತಾರೇನ
ಉಂಡಾರೆ ಭಾಳುಭಟ್ಟಾರೆ ಬಾಯಿಲಿ ಸೀತಾಳ ಉಗಳ್ಯಾರೆ
ಬಾಯಿಲಿ ಸೀತಾಳ ಉಗಳ್ಯಾರೆ ಊಟ ಮುಗುಸೂತಾರೇನ
ಗುರುವ ರೇವಣಸಿದ್ಧನ ಹೋಗಿ ಬರತೀನಿ ಅಂದಾನ
ತಂದೇಳ ಮುದ್ದುಗೌಡನ ತಾಯೇಳ ಸುಗಲವ್ವನ
ಗುರುವ ರೇವಣಸಿದ್ಧನ ಪಾದಕ ಹೊಂದುತಾರೇನ
ಹೋಗಿ ಬರತೀನಿ ಅಂದಾನೆ ಬೇಗಿ ಬರತೀವಿ ಅಂದಾನ