ಹೊಲದಾಗಿದ್ದ ದೇಸಾಯಿ ಮನಿಗಿ ಬರುವುತಾನೇನ
ಜಳಕ ಮಾಡುತಾನೇನೆ ಊಟ ಮಾಡುತಾನೇನ
ಮೂರ ತಿಂಗಳ ದಿನಮಾನ ಯಾಳ್ಯಾ ಹೋಗುತಾವೇನ
ಸಣ್ಣ ದೇಸಾಯಿನಲ್ಲೇಳ ಹೊಲದಾಗಿರುವತಾನೇನ
ತಂದಿಯ ದೇಸಾಯನಲ್ಲೇಳ ಜೇಳಜಿ ಒಳಗೆ ಮನಗ್ಯಾನ
ಯಾರು ಏಳದುಕಿಂತೇನ ಕೋಳಿ ಕೂಗದು ಮೊದಲೇನ
ಕೋಳಿಕೂಗದು ಮೊದಲೇನ ಲಿಂಗಮ್ಮ ಏಳುತಾಳೇನ
ಗಚ್ಚಿನ ಬಚ್ಚಲಕ ಹೋಗ್ಯಾಳೆ ಹೆಚ್ಚಿನ ಜಳಕ ಮಾಡ್ಯಾಳೆ
ಮಿನದಾಳ ಮಡಿಯುಟ್ಟಾಳೆ ಹಣಿಯಲಿ ಕುಂಕಮಿಟ್ಟಾಳ
ಕೈಯಾಗ ಚರಗಿ ಹಿಡದಾಳೆ ಕರವಂದು ಬಿಡುವುತಾಳೇನ
ಕರವಂದು ಬಿಡುವುತಾಳೇನ ಹಾಲ ಹಿಂಡುತಾಳೇನ
ಕಾಯಿಕರ್ಪೂರ ಹಿಡದಾಳೆ ಮೀಸಲ ಸೀತಾಳ ಹಿಡದಾಳೆ
ಚರಗಿ ಹಾಲ ಹಿಡದಾಳೆ ಲ್ಯಾಯದ ಪಡಸಾಲಿ ಒಳಗೇನ
ಬಾಕಲ ತೆರಿಯುತಾಳೇನ ಹೊರಗ ಹೋಗುತಾಳೇನ
ಚಂದನ ಚೌಡಿಯ ಮುಂದೇನ ಮಂದನ ಮಳಗೀಲಿ ಹಾಯ್ದಳ
ಊರ ನಾಯಿಕೋಡಿ ಅಲ್ಲಪ್ಪ ಲಿಂಗಮ್ಮ ನೋಡುತಾಳೇನ
ಹಬ್ಬನೆ ಹವರಾತರೆ ಸಬ್ಬನೆ ಸರಹೊತ್ತೇನ
ಇಂತಯಾಳಿ ಒಳಗೇನ ಒಬ್ಬಾಕಿ ಹೆಣ್ಣುಮಗಳೇನ
ಒಬ್ಬಾಕಿ ಹೆಣ್ಣಮಗಳೇನ ಎಲ್ಲಿಗ ಹೋಗತಾಳಂದಾನ
ಹಾಯಲಿಂಗಮ್ಮ ಮುಂದೇನ ನಾಯಿಕೋಡಿ ಹಿಂದ ನಡದಾನ
ಹಳ್ಳದಾಟಿ ಹೋಗ್ಯಾನ ಹಳ್ಳದ ಗಡ್ಡಿಗ ನಿಂತಾನ
ಗಜ್ಜ ಹೈಯ್ಯಾಳ ಲಿಂಗನೆ ಹೈಯಾಳ ಸೀಮಿಗ ಹೋದಳ
ಹೈಯಾಳ ಸೀಮಿಗ ಹೋದಳ ನಾಯಿಕೊಡಿ ಮರಳಿ ಬಂದಾನ
ಯಾವ ಗೆಣಿಯನಿದ್ದಾನೆ ಯಾವ ಮಿಂಡನಿದ್ದಾನ
ಹೊತ್ತೇರಿ ಮುಂಜಾನಿ ಹೋದೇನ ದೇಸಾಯಿಗ ಹೇಳೇನಂದಾನ
ಮನಸೀನೊಳಗನಲ್ಲೇಳ ನಾಯಿಕೊಡಿ ಮಾತನಾಡ್ಯಾನ
ಇಂಥ ಮಾತನಾಡ್ಯಾನೆ ಮನಿಗಿ ಹೋಗುತಾನೇನ
ಹಾಯಲಿಂಗಮ್ಮನಲ್ಲೇಳ ಹುತ್ತಿನಗಡ್ಡಿಗ ಬಂದಾಳ
ಚರಗಿ ನೀರ ಸುರುವ್ಯಾಳೆ ಕುಂಕುಮ ಭಂಡಾರ ಹಚ್ಯಾಳ
ಹಳ್ಳುಲೋಭನ ಸುಟ್ಟಾಳೆ ಕಾಯಿಕರ್ಪೂರ ಒಡದಾಳ
ಹಾಲ ಸಕ್ಕರಿ ಇಟ್ಟಾಳೆ ಗಜ್ಜ ಎಳದ ಲಿಂಗನ
ಗಜ್ಜಯಿ ಎಳದ ಲಿಂಗನೆ ಹಾಲ ಕುಡಿಯುತಾನೇನ
ಬಾರೋ ಬಾರೋ ಲಿಂಗವ್ವ ನಾಳಿಗ ನಿನ್ನ ಪೂಜೆವ್ವ
ನಾಳಿಗ ನಿನ್ನ ಪೂಜೆವ್ವ ಎರವನಾದವಂದಾನ
ಒಳ್ಳೆದು ಒಳ್ಳೆದಂದಾಳೆ ಹೊರಳಿ ಹೋಗುತಾಳೇನ
ಹೊರಳಿ ಹೋಗುತಾಳೇನ ಹಳ್ಳ ಧಾಟುತಾಳೇನ
ಊರ ಒಳಗೆ ಹೋದಾಳೆ ದೇಸಾಯಿ ಮನಿಗೆ ಬಂದಾಳ
ಬಾಗಲ ತಲುಪ ಹಾಕ್ಯಾಳ ಅಗಳಿಯ ದಬ್ಬುತಾಳೇನ
ಅಗಳಿಯ ದಬ್ಬುತಾಳೇನ ಮನಿಯಾಕ ಹೋಗುತಾಳೇನ
ಲ್ಯಾಯದ ಪಡಸಾಲಿ ಒಳಗೇನ ಚರಗಿ ಇಡುವುತಾಳೇನ
ಮಲ್ಲನಮನಗೂತಾಳೇನ ಹೊತ್ತರೆ ಮುಂಜಾನಿ ಎದ್ದಾಳ

ಊರ ನಾಯಿಕೋಡಿ ಅಲ್ಲೇಳ ಮನಿಗಿ ಬರುವುತಾನೇನ
ಮನಿಗಿ ಬರುವುತಾನೇನ ದೇಸಾಯಿ ಕುಂತಾನೇನಯ್ಯ
ಬಾಗಿ ಮುದ್ರಿ ಕೊಟ್ಟಾನೆ ಏನಂದಡಾತಾನೇನ
ಸಣ್ಣ ದೇಸಾಯಿನಲ್ಲಪ್ಪ ಎಲ್ಲಿ ಇರುತಾನಂದಾನ
ಇಂದಿಗ ಮೂರತಿಂಗಳ ವನದಾಗ ಇರತಾನಂದಾನ
ಎಂಟು ಎತ್ತಾನಲ್ಲೇಳ ವನದಾಗ ಇರತಾನಂದಾನ
ಮುಂಜಾಳಿ ಜಳಕಕ ಬರತಾರೆ ಊಟ ಮಾಡೇವಂದಾನ
ಊಟ ಮಾಡಿ ಹೋಗತಾನೇ ಬುತ್ತಿ ಒಯ್ಯುತಾಳೇನಯ್ಯ
ಬುತ್ತಿಯನಿಲ್ಲೇಳಂದಾನೆ ವಿದ್ಯಯಿಲ್ಲೇಳಂದಾನ
ಮಾನ ಹೋಗಲಿಬಾರದ ಜೀವ ಹೋಗದು ಪಾಡಯ್ಯ
ಹಂಗುರಗಿ ಗೌಡರ ಮಗಳ ಹಾಯಿನಿಂಗಮ್ಮನೇನೆ ನಮ್ಮಯ
ಕೈಯಾಗ ಚರಗಿ ಹಿಡದಾಳೆ ಊರ ಬಿಟ್ಟು ಹೋದಾಳೆ
ಹಬ್ಬನೆ ಹವರಾತರೆ ಸಬ್ಬನೆ ಸರವತ್ತೇನ
ಸಬ್ಬನೆ ಸರಹೊತ್ತಿನಾಗ ಒಬ್ಬಕಿ ಹೋಗುತಾಳೇನ
ಖೂನ ಹಿಡದಾ ಹೋಗೀನೆ ಗುರುತ ಹಿಡದಾ ಹೋಗಿನೆ
ಹಳ್ಳ ಧಾಟೀನಂದಾನೆ ಬೆನ್ನ ಹತ್ತೀನಂದಾನ
ಹಯ್ಯಾಳ ಸೀಮಿತಾನೇನ ನಾನೇ ಹೋಗಿನಂದಾನ
ಯಾವ ಗೆಣಿಯಾನಿಟ್ಟಾಳ ಯಾವ ಮಿಂಡನಿಟ್ಟಾಳ
ಕತ್ತಲಿ ಅಡುವಿ ಒಳಗೇನ ಕಂಟಿ ಒಳಗೆ ಹೋದಾಳ
ಹೊರಳಿ ಬಂದೀನಂದಾನ ಮನಿಗಿ ಹೋಗಿನಂದಾನ
ಎಕಚಿಂತಿಯಾ ದೇಸಾಯನೆ ಉರದ ಬೆಂಕಿನಾದಾನ
ಉರದ ಬೆಂಕಿನಾದನೆ ತೆಲಿವಂದು ಖೆಂಡನಾದನ
ಹೊತ್ತೇರೆ ಮುಂಜಾನಿ ಎದ್ದಿದ್ದ ದೇಸಾಯಿ ಮನಿಗಿ ಬಂದಿದ್ದ
ಜಾಮ ಜಳಕವ ಮಾಡಿದ್ದ ಉಂಡಾನೆ ಬಾಳುಟ್ಟಾನೆ
ತಂದಿ ಹೇಳುತಾನೇನ ಮಗನೆ ಕೇಳುತಾನೇನ
ಸಂಜಿಗ ಬರಬೇಕಂದಾನ ಜೇಳಜಿ ಒಳಗೆ ಇರಬೇಕ
ನಿನ್ನ ಮಡದಿನಲ್ಲೇಳ ಹೈಯ್ಯಾಳದೂರಿಗ ಹೋದಳ
ಊರಿಗ ಹೋಗ್ಯಾಳಂದಾನೆ ಹಬ್ಬನೆ ಹವರಾತರೆ
ಯಾವಾಗ ಹೋತಾಳಲ್ಲಪ್ಪ ಯಾವಗ ಬರತಾಳೇನಯ್ಯ
ಮೂರ ತಿಂಗಳ ದಿನಮಾನ ಮನಿಯಾಗ ನೀನೆ ಇಲ್ಲಯ್ಯ
ಒಳ್ಳೆದು ಒಳ್ಳೇದಂದಿದ್ದ  ಸಂಜಿಯ ಮಾಡಿ ಬಂದೇನ
ಸಂಜಿಯ ಮಾಡಿ ಬಂದಾನೆ ಉಂಡಾನೆ ಬಾಳುಟ್ಟನ
ಜೇಳಜಿ ಒಳಗ ನಮ್ಮಯ್ಯ ಇಬ್ಬರು ತಂದಿಯ ಮಕ್ಕಳ
ಚಂದುರಾಯುಧ ಹಿಡದಾರ ಚಪ್ಪಗೊಡಲಿ ಹಿಡದಾರ
ಯಾರು ಏಳದುಕಿಂತೇನ ಕೋಳಿ ಕೂಗದ ಮೊದಲೇನ
ಗಚ್ಚಿನ ಬಚ್ಚಲಕ ಹೋಗ್ಯಾಳೆ ಹೆಚ್ಚಿನ ಜಳಕ ಮಾಡ್ಯಾಳ
ಮಡಿ ಕಳದ ಮಡಿ ಉಟ್ಟಾಳೆ ಹಣೆಯಲಿ ಕುಂಕುಮಿಟ್ಟಾಳ
ಕರವಂದು ಬಿಡುವುತಾಳೇನ ಚರಗಿ ಹಾಲ ಹಿಂಡ್ಯಾಳ
ಕೈಯಾಗ ಸೀತಾಳ ಹಿಡದಾಳ ಕಾಯಿ ಕರ್ಪೂರ ಹಿಡದಾಳ
ಕಾಯಿ ಕರ್ಪೂರ ಹಿಡದಾಳೆ ರಾಯಿಮಾರಗ ಹಿಡದಾಳ
ಲ್ಯಾಯದ ಪಡಸಾಲಿ ಇಳದಾಳ ಅಗಳಿ ದಬ್ಬುತಾಳೇನ
ಅಗಳಿಯ ದಬ್ಬುತಾಳೇನ ಬಾಕಲ ತಲುಪ ತೆರದಾಳ
ರಾಯಿಮಾರಗ ಹಿಡದಾಳ ರವ್ವಣಿ ಮಾಡುತಾಳೇನ
ಹೊನ್ನ ಹಯ್ಯಾಳ ಭೂಮ್ಯಾಗೆ ಗಜ್ಜಯಿ ಎಳದ ಲಿಂಗನೆ
ಗಜ್ಜಯಿ ಎಳದ ಲಿಂಗನೆ ಹಾಯಲಿಂಗಮ್ಮನೆ ಬಂದಾಳ
ತಂದಿ ಮಗನ ಕೂಡ್ಯಾರ ಕೊಡಲಿ ಹಿಡದಾರೇನಯ್ಯಾ
ಚಂದರಾಯುಧ ಹಿಡದಾರ ಚಪ್ಪಗೊಡಲಿ ಹಿಡದಾರ
ಹಾಯಲಿಂಗಮ್ಮನಲ್ಲೇಳ ದೇಸಾಯಿ ಹಿಂದ ನಡದಾರ
ಕಾಂತಾರ ಕಂಟಿ ಒಳಗೇನ ಹಿಂಗಾರಿಗಳ್ಳಿ ಒಳಗೇನ
ಒಡಿಯಾನ ಕಂಟಿ ಒಳಗೇನ ಮುರಗಿ ಹೊಡದಾ ಬೆಳದಾವ
ಮುರಗಿ ಹೊಡದು ಬೆಳದಾವೆ ಹಾಯಲಿಂಗಮ್ಮನೆ ಬಂದಾಳ
ಮೂರಕಣ್ಣಿನ ಹುತ್ತಿಗೆ ಚರಗಿ ಸುರುವುತಾಳೇನ
ಚರಗಿ ಸುರುವುತಾಳೇನ ಭಂಡಾರ ಹಚ್ಚುತಾಳೇನ
ಊದು ಭಂಡಾರ ಹಚ್ಯಾಳ ಕಾಯಿಕರ್ಪೂರ ಒಡದಾಳ
ಚರಗಿ ಮ್ಯಾಲಯಿಟ್ಟಾಳೆ ಹೊಂದಿಸಿ ಕೈಯ ಮುಗದಾಳ
ಇಬ್ಬರು ದೇಸಾಯಿಗಳೇನ ಎಡಕ ಬಲಕ ನಿಂತಾರ
ಚಪ್ಪಗೊಡಲಿ ಎತ್ಯಾರೆ ಚಂದುರಾಮನಂತವ
ಚಂದರಾಮನಂತವೇ ಚಪ್ಪಗೊಡಲಿ ಎತ್ಯಾರ
ಆಯುಧ ಎತ್ತುತಾರೇನ ಹಂಗೇ ನಿಂದ್ರುತಾರೇನ
ಮ್ಯಾಕ ಏಳವಲ್ಲವೆ ತೆಳಿಯಾಕ ಇಳಿಯಾವಲ್ಲವ
ನಿಂಗಮ್ಮ ಹೊರಳಿ ನೋಡಿಲ್ಲ ಹೊಂದಿಸಿ ಕೈಯ ಮುಗದಾಳ
ಹೊಂದುಸಿ ಕೈಯ ಮುಗದಾಳೆ ಕಣ್ಣಮುಚ್ಚಿ ನಿಂತಾಳ
ಹಿರಿಯರಿಗ ಹ್ಯಾಂಗ ನಡಸೀದಿ ಲಿಂಗಯ್ಯ ಕಿರಿಯರಿಗ ಹಂಗೇ ನಡಸಯ್ಯ
ಎಕಚಿಂತಿಯ ದೇಸಾಯಿರಿಗೆ ಕೈಯ ಹೋಗಿ ನಿಂತಾವ
ಕೈಯ ಹೋಗಿ ನಿಂತಾರೆ ಕಣ್ಣ ಹೋಗಿ ನಿಂತಾರ
ಕೊಡ್ಲಿ ಏಳವಲ್ಲವೇ ತಲವಾರ ಏಳವಲ್ಲವ
ಎತ್ತಿದ ಕೈಯ ದೇಸಾಯಿಗ ತೆಳಗ ಇಳಿಯಾವಲ್ಲವ
ತೆಳಗ ಇಳಿಯಾವಲ್ಲವೇ ಕಣ್ಣ ಹೋಗಿ ನಿಂತಾವ
ಎಕಚಿಂತಿಯ ದೇಸಾಯಿಗ ತೆಳಗ ಇಳಿಯಾವಲ್ಲವ
ಹಾಯಲಿಂಗಮ್ಮನಗೂಡೇನೆ ಲಿಂಗ ಮಾತಾನಾಡ್ಯಾನ
ಬಾರೋ ಬಾರೋ ಲಿಂಗಮ್ಮ ಏನ ಬೇಡತಿ ಬೇಡವ್ವ
ಏನ ಬೇಡತಿ ಬೇಡವ್ವ ಬೇಡಿದ ಕುಡಿತೀನಿ ಅಂದಾನ
ಬೇಡಿದ ಕೊಡುತೀನಲ್ಲವ್ವ ಹಿಂದಕ ಹೊರಳಿ ನೋಡವ್ವ
ಹಿಂದಕ ಹೊರಳಿ ನೋಡ್ಯಾಳೆ ಮಾವ ಬಲಕ ನಿಂತಾನ
ಮಾವ ಬಲಕ ನಿಂತಾನೆ ಪುರುಷ ಎಡಕಾ ನಿಂತಾನ
ಕೊಡಲಿ ಎತ್ತಿ ಹಿಡದಾರೆ ಚಂದರಾಯುಧ ಹಿಡದಾರ
ಮ್ಯಾಕ ಏಳವಲ್ಲವೇ ತೆಳಿಯಾಕ ಇಳಿಯವಲ್ಲವ
ಬಾರೋ ಬಾರೋ ಲಿಂಗಮ್ಮ ತಪ್ಪು ನನಗೆ ಆದವ
ಭೂಮಿಗಿ ಬೀಳುತಾರೇನೆ ಪಾದ ಕೊಡಬೇಕಂದಾರ
ನೀವೆ ತಂದಿ ತಾಯಪ್ಪ ನಾನು ಎಷ್ಟರ ಮನಸೇಳ
ನಾನು ಎಷ್ಟರ ಮನಸ್ಯಾನೆ ಹೈಯ್ಯಳ ಲಿಂಗಗ ಕೇಳರೆ
ಗಜ್ಜಯಿ ಎಳದ ಲಿಂಗನೆ ನುಡದಾನೆ ಮಾತಾಡ್ಯಾನ
ಬಾರೋ ಬಾರೋ ಲಿಂಗಮ್ಮ ಬೇಡಿದ ಕೊಡಿತೀನಿ ಅಂದಾನ
ಬೇಡಿದ ಕೊಡತೀನಿ ಅಂದಾನೆ ಹೇಳಿದ ಮಾಡೇನಂದಾನ
ಅತ್ತಿ ಮಾವ ಗಂಡಗೆ ಕಣ್ಣ ಹೋಗಿ ನಿಂತಾರ
ಎಂಟನೇಗಲ ಎತ್ತೇನೆ ಕಣ್ಣ ಹೋಗಿ ನಿಂತಾವ
ಅತ್ತಿಯ ನಾದುನಿದೇರಪ್ಪ ಮನಿಯಾಗ ಕಣ್ಣ ಹೋದವ
ಹ್ಯಾಂಗ ಮಾಡಬೇಕಂದಾಳ ಲಿಂಗಮ್ಮ ಎಂತುಮಾಡಬೇಕಂದಾಳ
ಬಾರೋ ಬಾರೋ ಲಿಂಗಮ್ಮ ಬೇಡಿದ ಕೊಡತೀನಿ ಅಂದಾನ
ನೂಲಹುಣ್ಣಿಮಿ ದಿವಸೇನ ಪಲ್ಲಕ್ಕಿ ಸಂಗಟ ಬರಬೇಕಾ
ಹವುಳ ಮುತ್ತಿನ ಪಲ್ಲಕ್ಕಿ ಸಂಗಟ ನೀವೆ ಬರಬೇಕಂದಾಳ
ನೀವು ಬರತನಕಲ್ಲೇಳ ಜಾತರಿನಾಗದಿಲ್ಲೇನ
ಏಕಚಿಂತಿಯ ದೇಸಾಯರ ಧಾರಿಯ ನೋಡುತಾರೇನ
ಧಾರಿಯ ನೋಡುತಾರೇನ ಬಾಜಿಯ ಸಂಗಟ ಬರಬೇಕ
ಒಡ್ಡಿವಾಲಗ ಸಂಗಟೆ ಕಟ್ಟಿ ಮುಂದ ನಿಂದ್ರರೆ
ಐದ ಹಿಡಿಯಾ ಹೊನ್ನನೇ ನೀವೇ ಹಾಲಿಸಬೇಕಯ್ಯ
ನೀವೆ ಬಂದಾರಲ್ಲವ್ವ ಜಾತರಿ ಬಿದ್ದಾವಂದಾರ
ಎಲ್ಲಿಯ ಬೇಕೆನಲ್ಲವ್ವ ಬ್ಯಾಟಿಯ ಚೂರಿ ಹಾಕ್ಯಾರ
ಬ್ಯಾಟಿಯ ಚೂರಿ ಹಾಕ್ಯಾರೆ ಜಾತೂರಿ ನಡಿಯುತಾವೇನ
ನಿನ್ನ ಬಾಯಿಲಿ ಅಲ್ಲವ್ವ ನುಡುದುದು ಆದಾವಂದಾನ
ನೀನೆ ಸೀತಾಳ ಹಾಕಿದರೆ ನೀನೆ ಭಂಡಾರ ಹಚ್ಚಿದರ
ಮಾವಗ ಕಣ್ಣ ಬಂದಾವೆ ಪುರುಷಗ ಕಣ್ಣ ಬಂದಾವ
ಎಂಟನೇಗಲ ಎತ್ತಿಗ ನೀನೆ ಭಂಡಾರ ಹಚ್ಚಿದರ
ಭಂಡಾರ ಹೊಡಿಯಲಿಬೇಕವ್ವ ಭಂಡಾರ ತೂರಲಿಬೇಕವ್ವ
ಮನಿಯಾಗ ಹೊಡಿಯಲಿ ಬೇಕವ್ವ ಹಣಿಗಿ ಹಚ್ಚಲಿ ಬೇಕವ್ವ
ಮನದಾನ ಹರಿಕಿ ನಿಂಗಮ್ಮ ಆಗಿ ಬರತಾವಂದಾನ
ಹಿಂದಿನ ಕಾಲ ಹೋದಾವೆ ಮುಂದಿನ ಕಾಲ ಬಂದಾವ
ಪೂಜಿ ಸರದಾವಂದಾನೆ ಇಂದಿಗ ಕಡಿಯನಾದಾವ
ಇಂದಿಗ ಕಡಿಯಾನಾದವೆ ಗಜ್ಜಯಿ ಎಳದ ಲಿಂಗನೆ
ಸೀತಳ ಕೊಡುವುತಾನೇನ ಭಂಡಾರ ಕೊಡುವುತಾನೇನ
ಹೈಯ್ಯಾಳ ಲಿಂಗನಲ್ಲೇಳ ನಿಂತಲ್ಲೆ ಮಾಯವಾದನ
ಮಾವಗ ಸೀತಾಳ ಹೊಡದಾಳೆ ಗಂಡಗ ಸೀತಾಳ ಹೊಡದಾಳ
ಭಂಡಾರ ಹಚ್ಚುತಾಳೇನೆ ಕಣ್ಣ ಬರುವುತಾವೇನ
ಬಾರ ಬಾರ ದೇಸಾಯಿ ಏನ ತಪ್ಪ ಮಾಡಿದೆ
ತಾಯಿನಂದರ ನೀನಪ್ಪ ತಂದಿನಂದರ ನೀನಪ್ಪ
ಮೂರು ಮಂದಿ ಕೂಡ್ಯಾರೆ ಮನಿಗಿ ಬರುವುತಾರೇನ
ಎಂಟನೇಗಲ ಎತ್ತಿಗ ಭಂಡಾರ ಹೊಡಿಯುತಾಳೇನೆ
ಸೀತಾಳ ಹೊಡಿಯುತಾಳೇನ ಕಣ್ಣ ಬರುವುತಾವೇನ
ಮನಿಯಾ ಒಳಗ ನಮ್ಮಯ್ಯ ಭಂಡಾರ ಹೊಡಿಯಲಿಬೇಕವ್ವ
ಎಮ್ಮಿ ಕರಗೋಳಗಲ್ಲೇಳ ಉಟಗಿ ಬ್ಯಾನಿ ಹೋದವ
ಆಕಳ ಕರಗೋಳಿಗಲ್ಲೇಳ ಉಟಗಿ ಬ್ಯಾನಿ ಹೋದವ
ರಕ್ತಹಿಂಡ ಎಮ್ಮಿ ಆಕಳ ಹಾಲ ಹಿಂಡುತಾವೇನ
ಹರಕಿನಾಗಿ ಬಂದಾವೇ ವರವ ಕೂಡಿ ಬಂದಾವ
ಹಂಗುರಗಿ ಗೌಡರ ಸೊಸಿಯೇನ ಹಾಯನಿಂಗಮ್ಮನ ನಮ್ಮಯ್ಯ
ಹಾಯಿನಿಂಗಮ್ಮ ನಮ್ಮಯ್ಯ ಎಕಚಿಂತಿ ದೇಸಾಯನ
ಎಕಚಿಂತಿ ದೇಸಾಯಿನ ಮಗಳೇನ ಹಾಯಲಿಂಗಮ್ಮ ನಮ್ಮಯ್ಯಾ
ದೇವಿ ಧರ್ಮರ ಹಾಡೇನೆ ಇಲ್ಲಿಗ ಇದು ಒಂದು ಸಂದೇನ
ಇಲ್ಲಿಗ ಇದು ಒಂದು ಸಂದೇನ ಮುಂದಿನ ಸಂದಿಗ ತಿಳಸೇನ
ದ್ಯಾವರು ಬಂದಾರ ಬನ್ನೀರೆ

***

 

ಗಂಗಿ ಮಾಳಮ್ಮನ ವೃತ್ತಾಂತ

ಶಿವನೆ ನಮ್ಮಯಿ ದ್ಯಾವರು ಬಂದಾರ ಬನ್ನೀರೆ
ಸ್ವಾಮಿ ನಮ್ಮಯಿ ದ್ಯಾವರು ಬಂದಾರ ಬನ್ನೀರೆ
ಮೂಡಲ ನಡುಬಾ ಮುತ್ತಿನಚಂಡು ನನ್ನ ಮುತ್ಯಾ ಮೈಲಾರಿಲಿಂಗನ
ಮರ್ತ್ಯಲೋಕದೊಳಗೇನಪ್ಪಿಲ್ಲಿ ಮಣಿಯಾನಮಲ್ಲಸೂರನ
ಮಣಿಯಾಮಲ್ಲಸೂರಗೆ ವಧಗೋಳು ಮಾಡಬೇಕಂದಾನ
ವಧಗೋಳು ಮಾಡಬೇಕಂದಾನೆ ಕೈಯಲಾಸ ಬಿಟ್ಟಾನ
ಕೈಯಲಾಸ ಬಿಟ್ಟರೆ ಮರ್ತ್ಯಲೋಕಕ ಇಳದಾನ
ಬುರುವದಕೆಲ್ಲ ಬಂದಾನೆ ಭಂಡಾರ ಬಲ್ಲಿನಿಲ್ಲೇನ
ಭಂಡಾರ ಬಲ್ಲಿ ಇಲ್ಲೇನೆ ಯಾರನ ಕೇಳಬೇಕಂದಾನ
ಯಾರನ ಕೇಳಬೇಕೆಂದಾರೆ ಹೆಗ್ಗಣ ಪರದಾನಿದ್ದಾನ
ಹೆಗ್ಗಣ ಪರದಾನಿಗಲ್ಲೇಳ ಭಂಡಾರ ಶೋದ ಕೇಳಯ್ಯ
ಅಣ್ಣಿಗೇರಿ ಎಂಬ ಊರಾಗೆ ಗಂಗಿಮಾಳಮ್ಮಿದ್ದಾಳ
ಗಂಗಿಮಾಳಮ್ಮನ ಬಲ್ಲೇನೆ ಭಂಡರ ಇರತಾದಂದಾರ
ಒಳ್ಳೆದು ಒಳ್ಳೆದಂದಾರ ಮಲ್ಲಯ್ಯ ಹೇಳುತಾನೇನ
ಮಲ್ಲಯ್ಯ ಹೇಳುತಾನೇನ ಹೆಗ್ಗಣ ಪರಧಾನಿ ಬಂದಾನ
ಮಾದೇವ ಬರುವುತಾನೇನ ಮಲ್ಲಯ್ಯ ಬರುವುತಾನೇನ
ಅಣ್ಣಿಗೇರಿ ಊರ ಮುಂದೇನ ಬಳಿಯ ವ್ಯಾಪಾರಿಟ್ಟಾರ
ಬಳಿಯಾ ವ್ಯಾಪಾರಿದ್ದಾರೆ ಡೇರ‍್ಯಾ ಹೊಡಿಯುತಾರೇನ
ವೀರಗಂಧ ಹಚ್ಯಾರ ಕುಂಕುಮ ಬಟ್ಟ ಹಚ್ಯಾರ
ಕಪ್ಪಿಲಿ ಕರಿ ಚಲುವನೇ ಮುಪ್ಪಿಲೆ ಬಹಳ ಹಿರಿಯನ
ಮುಪ್ಪಿಲೆ ಬಹಳ ಹಿರಿಯನೆ ಗಂಗಿ ಢೇರ‍್ಯಾ ಒಳಗೇನ
ಗಂಗಿ ಡೇರ‍್ಯಾ ಒಳಗೇನೆ ಕಡ್ಡಿಬಿಲವಾರ ಒಳಗೇನ
ಹಸುರು ಬಿಳಿಯಾ ಇಟ್ಟಾನೆ ಚಿಕ್ಕಿಯ ಬಳಿಗೋಳಿಟ್ಟಾನ
ಕಡ್ಡಿಯ ಬಿಲ್ವಾರಿಟ್ಟಾನೆ ಕೆಂಪ ಬಳಿಗೋಳಿಟ್ಟಾನ
ಕೆಂಪ ಬಿಳಿಗೋಳಿಟ್ಟಾನೆ ಗುಲಾಬಿ ಬಿಳಿಗೋಳಿಟ್ಟಾನ
ನಾನ ತರಹದ ಬಳಿಯೇನೆ ವ್ಯಾಪಾರಿಡುವುತಾನೇನ
ಅತ್ತಿಯ ಮನಿಯ ಸೊಸ್ತೇರೆ ತೌರಮನಿಯ ಹೆಣ್ಣಮಕ್ಕಳೆ
ರಾಯಿಮಾರಗ ಹಿಡದಾರೆ ಭಾಂಯಿ ಧಾಟಿ ಬಂದಾರ
ಭಾಂಯಿ ಧಾಟಿ ಬಂದಾರೆ ಬಳಿಯ ವ್ಯಾಪಾರ ಕೇಳ್ಯಾರ
ಗುತ್ತಾಗಿ ಬಳಿಗೋಳು ಹಾಕೇವೆ ಪುಣ್ಯ ಪಡಿಯಲಿ ಬಂದೇವ
ಪುಣ್ಯದ ಬಳಿಗೋಳು ಹಾಕೇವೆ ಪುಣ್ಯ ಪಡಿಯಲಿ ಬಂದೇವ
ಹೆಗ್ಗಣ ಪರಧಾನಲ್ಲೇಳ ಕರಕೊಂಡು ಬರುವುತಾನೇನ
ಅತ್ತಿಯ ಮನಿಯ ಸೊಸ್ತೇರ ತೌರಮನಿ ಹೆಣ್ಣಮಕ್ಕಳ
ಅಂಗೈಲಿಂದ ಬಳಿಯೇನೆ ಮುಂಗೈತಾನ ಏರ‍್ಯಾವ
ಒಳ್ಳೆದು ಒಳ್ಳೇದಂದಾನೆ ಪುಣ್ಯ ಪಡಿಯಲಿ ಬಂದೇನ
ಏ ನನ್ನ ಹಡದಪ್ಪಾಗೋಳ ಹೆಣ್ಣು ಗಂಡು ಹುಟ್ಟಲಿ
ಹೆಣ್ಣು ಗಂಡು ಹುಟ್ಟಲೆ ಹೊಟ್ಟೆ ಬೆಳೆಯಲಿ ಅಂದಾರ
ಹರಕಿ ಕೊಡವುತಾರೇನ ಸಾಗಿ ಹೋಗುತಾರೇನ
ರಾಯರ ಓಣಿಲಿ ಹಾಯ್ದರ ಹಿರಿಯ ಕುರುಬರ ಮನಿಗೇನ
ಹಿರಿಯ ಕುರುಬರೆ ಮನಿಯಾಗೆ ಗಂಗಿ ಮಾಳಮ್ಮನಿದ್ದಾಳ
ಬರಿಯಾ ನನ್ನ ಅಕ್ಕದೇರಾ ಎಲ್ಲಿಗೆ ಹೋಗೀರುದಾನ
ಬರಿಯಾ ನನ್ನ ತಂಗಿದೇರಾ ಯಾವಲಿ ಬಳಿಯಾ ಬಂದಾವೆ
ಬಾರೋ ಬಾರೋ ಮಾಳಮ್ಮ ನಾವೇನು ಹೇಳಮಿ ಅಂದಾರ
ಬಳಿಯಾ ವರ್ಣನಲ್ಲವ್ವ ನಾವೇ ಹೆಳಂಗಿಲ್ಲವ್ವ
ಎಷ್ಟು ವರ್ಣನ ಮಾಡಿದರ ಹಾಳೇ ಅವೇಳಂದಾಳ
ಬಳಿಯಾ ವರ್ಣನಲ್ಲವ್ವ ನಾವೇ ಹೇಳಂಗಿಲ್ಲವ್ವ
ಎಷ್ಟು ವರ್ಣನ ಮಾಡಿದರ ಹಾಳೇ ಅವೇಳಂದಾಳ
ಬಳಿಯಾ ವ್ಯಾಪರವಲ್ಲವ್ವ ಭಾಂಯಿ ಮಂದನಾದವ
ವಾರಿಗಿ ನಾರ‍್ಯಾರಲ್ಲೇಳ ಹೇಳಿ ಮನಿಗಿ ಹೋದರ

ಗಂಗಿ ಮಾಳಮ್ಮನಲ್ಲೇಳ ಕೈಯಾಗ ತಂಬಿಗೀ ಹಿಡದಾಳ
ಕೈಯಾಗ ತಂಬಗಿ ಹಿಡಿದಾಳೆ ರಾಯಿಮಾರಗ ಹಿಡದಾಳ
ರಾಯಿಮಾರಗ ಹಿಡದಾಳೆ ಎಲ್ಲಿಗೆ ಬರುವುತಾಳೇನ
ಬಾಂಯಿ ಧಾಟಿ ಬಂದಾಳೆ ಹೆಗ್ಗಣ ಪರದಾನೀಗ ಬಂದಾಳ
ಪುಣ್ಯದ ಬಳಿಗೋಳು ಹಾಕೇವ ಪುಣ್ಯ ಪಡಿಯಲಿ ಬಂದೇವ
ಬಾರ ಬಾರ ನನ್ನವ್ವ ಗಂಗಿ ಢೇರ‍್ಯಾ ಒಳಗೇನ
ಒಳಗ ಮನ್ನುಸುತಾನೇನ ಒಳಗ ಕರಿಯುತಾನೇನ
ಗಂಗಿ ಮಾಳಮ್ಮನಂದಾರೆ ಗಂಗಿ ಢೇರ‍್ಯಾದೊಳಗೇನ
ಹಣಿಮ್ಯಾಲ ನಾಮ ಇಟ್ಟಿದ್ದ ಗಂಧ ಹಚ್ಚುತಾನೇನ
ಗಳಗಿ ರೂಪದವನೇನ ಗಳಗಿಗಂಟಕದವನೇನ
ಒಳಗ ಕರಿಯುತಾನೇನ ಮಲ್ಲಯ್ಯಗ ನೋಡುತಾಳೇನ
ಮಲ್ಲಯ್ಯಗ ನೋಡುತಾಳೇನ ಮನುಸ ಹೋಗುತಾವೇನ
ಮನುಸ ಹೋಗುತಾವೇನ ಮೈಯಮರತ ಕುಂತಾರ
ಗಂಗಿ ಢೇರ‍್ಯಾದೊಳಗೇನೆ ಮಾಳಮ್ಮ ಕುಂದ್ರುತಾಳೇನ
ಮಾಳಮ್ಮ ಕುಂದ್ರತಾಳೇನ ಮಾದೇವ ಕುಂದ್ರುತಾನೇನ
ಬಾರೋ ಬಾರೋ ಏಸ್ವಾಮಿ ಯಾಕ ಬಂದೀದಂದಾಳ
ಕೈಯಲಾಸದಲಿಂದೇನೆ ಏನು ಕಾರಣ ಬಂದಿದೆ
ಮಣಿಯಾ ಮಲ್ಲಸೂರಗೆ ಕೊಲಿಯಾ ಮಾಡಲಿ ಬಂದೇನ
ಬರುವದಕೆಲ್ಲ ಬಂದೀನೆ ಭಂಡಾರ ಮರತ ಬಂದೇನ
ಬರುವುದಕೆಲ್ಲ ಬಂದೀನೆ ಭಂಡಾರ ಮರತ ಬಂದೀನೆ
ನಿನ್ನ ಹಡದಲ್ಲವ್ವ ಭಂಡಾರಾದಂತೇಳ್ಯಾರ
ಭಂಡಾರಾದಂತೇಳ್ಯಾರೆ ನಿನ್ನ ಸಲುವಾಗಿ ಬಂದೇನ
ನನ್ನ ಬಲ್ಲಿ ಮಾರಾಯ ಭಂಡಾರಾದೇಳಂದಾಳ
ನನಗ ಲಗ್ನನಾಗಿಲ್ಲ ಲಗ್ಗನಾಗಲಿ ಬೇಕಯ್ಯಾ
ಭಂಡಾರ ಕೈವಾಸ ಕೊಟ್ಟೇನೆ ಬೆನ್ನಿಂದ ಬರತೀನಿ ಅಂದಾಳ

ಅಂತೂ ಇಂತೂ ಯಾಳ್ಯಾಗ ಮಾತನಾಡುತಾಳೇನ
ಹಂತ ಯಾಳ್ಯಾದೊಳಗೇನೆ ತಾಯಿ ಬರುವುತಾಳೇನ
ತಾಯಿ ಬರುವುತಾಳೇನ ಹೆಗ್ಗಣ ಪರಧಾನಿ ಕುಂತಾನ
ಕಪ್ಪಿಲೆ ಕರಿಚಲುವಳೆ ಹಂತಕಿ ಬರತಾಳಂದಾನ
ಕಪ್ಪಿಲೆ ಕರಿ ಚಲುವೇನೆ ಗುಂಡನ ಮಾರಿ ಹೆಣ್ಣೇನ
ಗುಂಡನ ಮಾರಿ ಹೆಣ್ಣೇನ ಗಂಗಿ ಮಾಳಮ್ಮನಂದಾರ
ಗಂಗಿ ಮಾಳಮ್ಮನಂದಾರೆ ನನ್ನ ಮಗಳ ಇದ್ದಾಳ
ನನ್ನ ಮಗಳ ಇದ್ದಾಳೆ ಕೈಯಾಗ ಚರಗಿ ಹಿಡದಾಳ
ಗಂಗಿ ಢೇರ‍್ಯಾದೊಳಗೇನೆ ಮಾಳಮ್ಮ ಹೋಗ್ಯಾಳೇನಯ್ಯ
ಖರಿಯಾ ಮಾತನಾಡಿರೆ ಒಳ್ಳೇದು ಒಳ್ಳೇದಂದಾನ
ಗಂಗಿ ಮಾಳಮ್ಮನಲ್ಲೇಳ ಮಲ್ಲಯ್ಯನಗೂಡ ಮಾತೇನ
ನಿಮ್ಮ ಅವ್ವ ಬರತಾಳೆ ನಿನಗ ಬಡಿದ ವೈದಾಳೆ
ನಿನಗೂ ಬಡದ ವೈದಾಳೆ ಬರುವದು ಯಾವಗಂದಾನ
ಬಳಿಯಾ ವ್ಯಾಪಾರ ಬಂದ ಮಾಡಿ ಗೂಳ್ಯಾ ಕಟ್ಟಿದ ಯಾಳ್ಯಾಕ
ಗೂಳ್ಯಾ ಕಟ್ಟಿದ ಯಾಳ್ಯಾಕೆ ತೆಲಿಮ್ಯಾಲೆ ಹೊತ್ತ ಯಾಳ್ಯಾಕೆ
ಹೊನ್ನ ಹೊಸ್ತಲ ಚಿನ್ನದ ತೋಳ ಬಂಗಾರದ ಮೇಲಕಟ್ಟೇನ
ಬಂಗಾರದ ಮೇಲಕಟ್ಟಿನ ಮನಿಯ ನಮ್ಮದಾದೋ ಮಲ್ಲಯ್ಯ
ಎರಡ ಅಂತಸ ಮ್ಯಾಲೇನ ಜಡಿಯಾ ಅರಸಲಿ ನಿಂತೇನ
ಧಾರಿಯ ಮ್ಯಾಲೆ ಬಂದಾರ ತೆಳಗ ನಾನೇ ಇಳದೇನ
ಕೈಯಾಗ ಚರಗಿ ಹಿಡದೇನ ಉಡಿಯಲಿ ಭಂಡಾರ ಕಟ್ಟೇನ
ಉಡಿಯಲಿ ಭಂಡಾರ ಕಟ್ಟೇನೆ ಬೆನ್ನಿಂದ ನಾನೇ ಬಂದೇನ
ಬೆನ್ನಿಂದ ನಾನೇ ಬಂದೇನ ಭಾಷಿ ಕೊಡುವುತಾಳೇನ
ಹುಟ್ಟುಬಾರಂದಾಳ ಬಿಳಿಯಾಬಾರದಂದಾಳ
ಯಾವ ದೇಶದ ತುಡಗನೆ ಯಾವ ದೇಶದ ಕಳ್ಳನ
ಬೂದಿಬಡಕ ಸನ್ಯಾಸಿಗಿ ಬೆನ್ನ ಹತ್ತೀದಂದಾಳ
ಗಂಗಿ ಢೇರ‍್ಯಾದೊಳಗೇನೆ ತೆಲಿಯಾ ಮ್ಯಾಲಿನ ಜುಂಜರಿ ಹಿಡದಾಳ
ತೆಲಿಯಾ ಮ್ಯಾಲಿನ ಜುಂಜಿರಿ ಹಿಡಿದಾಳೆ ಬಡತಾ ಮಾಡುತಾಳೇನ
ಬಡತ ಮಾಡುತಾಳೇನ ಎಳದ ವೈಯುತಾಳೇನ
ಈಗ ಬಂದ ಹುಡುಗಿ ನೀನು ಎಲ್ಲಿಗೆ ಬರಬಾರದಂದಾಳ
ತೆಲಿಯಾ ಮ್ಯಾಲೆ ಹೊಡದಾಳ ಬೆನ್ನಿನ ಮ್ಯಾಲೆ ಹೊಡದಾಳೆ
ಸೆರಗ ಹಿಡದು ಎಳದಾಳ ಬೆನ್ನಿನ ಮ್ಯಾಲೆ ಹೊಡದಾಳೆ

ಮುಪ್ಪನ ಮುದುಕಿ ಅಲ್ಲೇನೆ ಮನಿಯಾ ಒಳಗೆ ಕುಂತಾಳ
ಎರದಾಳೆ ಹೆಣುಲ ಹಾಕ್ಯಾಳೆ ಗಚ್ಚಿನ ಬಚ್ಚಲಕ ಹೋಗ್ಯಾಳ
ಗಚ್ಚಿನ ಬಚ್ಚಲಕ ಹೋಗ್ಯಾಳೆ ಎರದಾಳೆ ಹೆಣುಲ ಹಾಕ್ಯಾಳ
ಎರದಾಳೆ ಹೆಣುಲ ಹಾಕ್ಯಾಳೆ ಎಳಿಯಾ ಬೇತಲ ತಗದಾಳ
ಹಣಿಯಲಿ ಕುಂಕಮಿಟ್ಟಾಳೆ ಹಲ್ಲಿಗ ಜಾಚೇಲಿ ಹಚ್ಯಾಳ
ಹಲ್ಲಿಗ ಜಾಚೇಲಿ ಹಚ್ಯಾಳೆ ಉಡಿಯಲಿ ಭಂಡಾರ ಕಟ್ಯಾಳ
ತಾಯಿನ ತೆಳಗ ಬಿಟ್ಟಾಳೆ ಮೇಲಮ್ಯಾಳಿಗಿ ಏರ‍್ಯಾಳ
ಮೂರ ಲೋಕದೊಡಿಯಾನೆ ಮಲ್ಲಯ್ಯ ದೇವರು ಬಂದಾರ
ಮಲ್ಲಿಕಾರ್ಜುನ ಮಹಾದೇವ ಬಳಿಯಾ ವ್ಯಾಪಾರ ಕಟ್ಯಾನೆ
ಬಳಿಯಾ ವ್ಯಾಪಾರ ಕಟ್ಯಾನೆ ನಂದಿಗ ಮುಂದ ಮಾಡ್ಯಾನ
ನಂದಿನ ಮುಂದ ಮಾಡ್ಯಾನೆ ತಾನೇ ಹಿಂದ ನಡದಾನ
ನಂದಿಯ ಹಿಂದ ನಡದಾನೆ ಹೆಗ್ಗಣ ಪರದಾನಿ ನಡದಾನ
ನಂದಿಯ ಹಿಂದ ನಡದಾನ ಹೆಗ್ಗಣ ಪರದಾನಿ ನಡದಾನೆ
ಮೇಲಮಾಳಿಗಿ ಮ್ಯಾಲೇನ ತುರುಬ ಬಿಚ್ಚುತಾಳೇನ
ತುರುಬ ಬಿಚ್ಚುತಾಳೇನ ಗಾಳಿಗರವುತಾಳೇನ
ಗಾಳಿಗರವುತಾಳೇನ ಕೈಯ ಮಾಡುತಾಳೇನ
ಮಲಿಕಾರ್ಜುನ ಮಾದೇವ ರಾಯಿಮಾರಗ ಹಿಡದಾನ
ತೆಳಿಯಾಕ ಇಳಿಯುತಾಳೇನ ಕೈಯಾಗ ಚರಗಿ ಹಿಡದಾಳ
ಕೈಯಾಗ ಚರಗಿ ಹಿಡದಾಳೆ ಬೆನ್ನ ಹತ್ತಿ ನಡದಾಳ
ಮುಪ್ಪಿನಂತ ಎಲ್ಲವ್ವ ಮನಿಯಾಗ ಉಳಿಯುತಾಳೇನ
ಮಲ್ಲಿಕಾರ್ಜುನ ಮಹಾದೇವಗ ಬೆನ್ನ ಹತ್ತಿ ನಡದಾಳ
ಅಲ್ಲ್ಯಾನ ಇಲ್ಲ್ಯಾನೇನ ಮೈಲಾಪುರದ ಗುಡ್ಡಕ
ಮೈಲಾಪುರದ ಗುಡ್ಡಕ ಮಲ್ಲಯ್ಯ ಹೋಗುತಾನೇನ
ಮಲ್ಲಯ್ಯ ಹೋಗುತಾನೇನ ತಾನೇನು ಹೇಳುತಾನೇನ
ಮನಸ ಕಲತಾವಂದಾರೆ ಮಾತ ಕಲತಾವಂದಾರ
ಹಾದಿಗಂದಾರ ಹಾಕ್ಯಾರೆ ಬೀದಿಗ ಚಳಿಯಾ ಕೊಟ್ಟಾರ
ಹಸುರ ಬಳಿಗೋಳು ಹಾಕ್ಯಾರ ಕಾಲಿಗಿ ಕಾಲಪಿಲ್ಲೆ ಇಟ್ಟಾರ
ಕೈಯಾಗ ಬಳಿಯಾ ಇಟ್ಟಾರೆ ಕಾಲಗ ಕಾಲುಂಗರಿಟ್ಟಾರ
ಕಾಲಿಗ ಕಾಲುಂಗರಿಟ್ಟಾರೆ ಸ್ಯಾಸಿ ಮಾಡಬೇಕಂದಾರ