ಸಂಗನ ಬಸವ ದೊಡ್ಡವ !

ಧರುಣಿ ಮ್ಯಾಲ ನೋಡಪ್ಪಾ ಯಾರ‍್ಯಾರು ದೊಡ್ಡವರು ಐದಾರೊ
ಯಾರ‍್ಯಾರು ದೊಡ್ಡವರೈದಾರೆಂದರ ಕೃಷ್ಣದೇವರು ದೊಡ್ಡವರೋ
ಕೃಷ್ಣದೇವರು ದೊಡ್ಡವನೆಂದರ ತೋಳಿಗೆ ಸಾವಿರ ಗೋಪ್ಯಾರೋ
ತೋಳಿಗೆ ಸಾವಿರ ಗೋಪ್ಯಾರಂದರ ಅವೇನು ಆಳಲಿಲ್ಲೇನೋ
ಯಾರ‍್ಯಾರು ದೊಡ್ಡವರೈದಾರಂದರ ಗಣಪತಿರಾಯನು ದೊಡ್ಡವನೋ
ಗಣಪತಿರಾಯ ದೊಡ್ಡವನೆಂದರ ಆನಿಯ ಮುದದವನಲ್ಲೇನೋ
ಯಾರ‍್ಯಾರು ದೊಡ್ಡವರೈದಾರೆಂದರ ಹರಿಶ್ಚಂದ್ರರಾಯ ದೊಡ್ಡವನೋ
ಹರಿಶ್ಚಂದ್ರರಾಯ ದೊಡ್ಡವನೆಂದರ ಸುಡುಗಾಡಿ ಕಾಯಲಿಲ್ಲೇನೋ
ಯಾರ‍್ಯಾರು ದೊಡ್ಡವರೈದಾರೆಂದರ ತಿಪ್ಪೇಸೂರನು ದೊಡ್ಡವನೋ
ತಿಪ್ಪೇಸುರ ದೊಡ್ಡವನಾದರ ತಿಪ್ಪಿಯ ಕಾಯಲಿಲ್ಲೇನೋ
ಯಾರ‍್ಯಾರು ದೊಡ್ಡವರೈದಾರೆಂದರ ಹನುಮಂತದೇವರು ದೊಡ್ಡವನೋ
ಹನುಮಂತದೇವರು ದೊಡ್ಡವನಾದರ ಒರಗು ಮಾರಿಯವನಲ್ಲೇನೋ
ಯಾರ‍್ಯಾರು ದೊಡ್ಡವರೈದಾರೆಂದರ ನಾಗಭೂಷಣ ದೊಡ್ಡವನೋ
ನಾಗಭೂಷಣ ದೊಡ್ಡವನಾದರ ನಾಲಿಗಿ ಸೀಳಲಿಲ್ಲೇನೋ
ಯಾರ‍್ಯಾರು ದೊಡ್ಡವರೈದಾರೆಂದರ ಸರ್ವಗೇರಿ ಬಸವಣ್ಣನೋ
ಸರ್ವಗೇರಿ ಸಂಗನಬಸವ ಅವನು ದೊಡ್ಡವ ಹೌದೇಳೋ

* * *

 

ಬಸವಯ್ಯ

ನಿರಂಕಾರದ ಅಡ್ಡ ಅಗಲ ಗುರಳಿ ಹುಟ್ಟಿತೊ
ಆಕಾಶದ ಅಡ್ಡ ಅಗಲ ಬಸವಯ್ಯನೊ
ಗುರಳಿ ಒಡೆಯಿತೊ ಗಗನ ತುಳಕಿತೊ
ಸಾಕ್ಷಾತ್ ಭಗವಂತ ಬಸವಯ್ಯನೊ

ಸಾಕ್ಷಾತ್ ಭಗವಂತನ ಲಗ್ನ ಹಿಡಿದಾನ
ಏನ ಹೇಳಲ್ಯೊ ಬಸವಯ್ಯನೊ
ದೇವಿ ದ್ಯಾವರ ಲಗ್ನ ಹಿಡದಾನ
ಭಕ್ತಿವಂತ ನನ್ನ ಬಸವಯ್ಯನೊ

ಕತ್ತಲೆಂಬುದೊಂದ ಹಂದರ ಹಾಕಿದಾನೊ
ಏನ ಹೇಳಲೆಪ್ಪ ನಾ ಬಸವಯ್ಯನೊ
ಅರವತ್ತಾರು ಸೂರ್ಯರ ತಳಕ ಕಟ್ಟಿದನೊ
ಭಕ್ತಿವಂತ ನನ್ನ ಬಸವಯ್ಯನೊ

ತನ್ನ ಶರೀರದಿಂದ ವಿಚಾರವೆನ್ವ
ಹಾಲ್ಗಂಬ ಕಟ್ಟತಾನೊ ಬಸವಯ್ಯನೊ
ತನ್ನ ಶರೀರ ಮಣ್ಣನು ತಗದು
ಏನು ಹೇಳಲೆಪ್ಪ ನಾ ಬಸವಯ್ಯನೊ

ಐರ‍್ಯಾಣಿ ಮಗಿ ಮಾಡಿದಾನೊ ನನ ಬಸವಯ್ಯನೊ
ಪಂಚತಂತ್ರದಿಂದ ಐದು ಮಂತ್ರ ಊದಿ
ಮತ್ತೈದ್ಯಾರ ಮಾಡತಾನೊ ಬಸವಯ್ಯನೊ
ಏನ ಹೇಳಲೆಪ್ಪ ನಾ ಬಸವಯ್ಯನೊ

ತನ್ನ ಕೋಡಿನ್ಯಾಗಿನ ಬೆವರನು ತಗದು
ಅರಿಷಿಣ ಭಂಡಾರ ಮಾಡಿ ನನ್ನ ಬಸವಯ್ಯನೊ
ಕಂಕಣ ಕಟ್ಟತಾನೋ ತಾ ಕೂತು
ಏನ ಹೇಳಲೆಪ್ಪ ನನ ಬಸವಯ್ಯನೊ

ಇಬತ್ತಿ ಧರಸಿ ಸುರಗಿ ಮಗಿ ಹಿಡಸತಾನೊ
ಭಕ್ತಿವಂತ ನನ ಬಸವಯ್ಯನೊ
ತನ್ನ ಶರೀರದಿಂದ ಎಳಿಯನು ತಗದು
ಸುರಗಿ ಸುತ್ತತಾನ ಬಸವಯ್ಯನೊ

ವಿಚಾರದಿಂದ ಗಣಗಳ ಹಿಡಕೊಂಡು
ಬಾಸಿಂಗ ಕಟ್ಟತಾನೊ ಬಸವಯ್ಯನೊ
ತಾನೆ ಬ್ರಹ್ಮ ತಾನೆ ಉಪಾಧ್ಯಾಯ
ಏನ ಹೇಳಲೆಪ್ಪ ಬಸವಯ್ಯನೊ

ಸೋಬಾನ ಅನ್ನೀರಿ ಸೋಬಾನ ತಂಗಿ
ಸೋಬಾನ ಸೋ ಅನ್ನಿ ಬಸವಯ್ಯನೊ
ಪಂಚತಂತ್ರದಿಂದ ಐದ ಮಂತ್ರ ಊದಿ
ಕಂಕಣ ಕಟ್ಟತಾನೊ ಬಸವಯ್ಯನೊ

ಸಾಮದೋಮ ಎಂಬ ಮಂತ್ರವ ಊದಿ
ಅಕ್ಕಿಕಾಳ ಹಾರಸತಾನ ಬಸವಯ್ಯನೊ
ಬಸವರಾಜನಂತ ದೇವರ‍್ಯಾರೂ ಇಲ್ಲ
ಏನ ಹೇಳಲೆಪ್ಪ ನನ್ನ ಬಸವಯ್ಯನೊ

ನೀರಿನ ಮ್ಯಾಲ ಮೆರವಣಿಗಿ ತಗಿಶ್ಯಾನ
ಆಕಾಶಕ ಬಾರಿಸೆಂದ ಬಸವಯ್ಯನೊ
ನಡುವ ಸುಳ್ಳಾಗ ನೊಸಲಗಣ್ಣ ಇಟಗೊಂಡು
ಹಗಲ ದೀಪ ಹಚ್ಚತಾನ ಬಸವಯ್ಯನೊ

ಸುಳ್ಳ ಅನಬ್ಯಾಡರೆಪ್ಪ ಸುಟಗೊಂಡ ಸತ್ತೀರಿ
ಬಬಲಾದಿ ತಳದಾಗ ನೋಡಂದೆನಿ
ಕಲ್ಲ ಕಾಗದ ಮ್ಯಾಲ ಬರದ ಇಟ್ಟೈತೊ
ಏನ ಹೇಳಲೆಪ್ಪ ನಾ ಬಸವಯ್ಯನೊ

* * *

 

ಬಸವನ ಭಕ್ತಿ

ಕಲ್ಯಾಣ ಪಟ್ಟಣದಾಗ ಕೋಟಿ ಜಂಗಮ್ರ ತಂದು ಭಕ್ತಿ ಮಾಡಿದ ಬಸವೇಶ್ವರನು
ಲಕ್ಷದ ಮ್ಯಾಲ ತೊಂಬತ್ತಾರು ಸಾವಿರ ಮೊದಲ ಮಾಡಿದ ಬಸವೇಶ್ವರನು
ಇಷ್ಟು ಜಂಗಮರಿಗೆಲ್ಲ ಉಟ್ಟ ಮಡಿಯ ತಂದು ಬಿಚ್ಚಿ ಉಡಿಸಿದ ಬಸವೇಶ್ವರನು
ಅಂಗಯ್ಯಾಗ ಇಟ್ಟು ಪೂಜೆ ಮಾಡಿದರ ವಿಭೂತಿ ಕೊಟ್ಟ ಬಸವೇಶ್ವರನು
ತಾಲಿತಂಬಿಗಿ ಕೊಟ್ಟು ಗಿಂಡಿಲುದಕವಿಟ್ಟು ತಳಗಿ ಕೊಟ್ಟ ಬಸವೇಶ್ವರನು
ಕುಂತ ಜಂಗಮರಿಗೆಲ್ಲ ಕಾಣುಕಾಂತಿ ಕೊಟ್ಟ ಸತ್ಯವಂತ ಬಸವೇಶ್ವರನು
ಕಂತಿಜಂಗಮರಿಗೆಲ್ಲ ಪಂಚಪಕ್ವಾನ್ನ ಮಾಡಿ ನೀಡತಿದ್ದ ಬಸವೇಶ್ವರನು
ದ್ವಾರಬಾಗಿಲದೊಳು ಪಾರ ಕಾವಲಯಿಟ್ಟು ದ್ವಾರ ಪಾಲಕರ ಬಸವೇಶ್ವರನು
ಬಸವಣ್ಣ ಭಕ್ತಿಯ ಸಾರುದು ಶಿವ ಕೇಳಿ ನೋಡಬೇಕೆಂದಲ್ಲಿ ಈಶ್ವರನು
ಕಪಟರೂಪವ ತಾಳಿ ಕಲ್ಯಾಣಕ ಬಂದು ಕುಲ್ಲ ಜನರನ್ನ ಕೇಳಿದ ಈಶ್ವರನು
ಬಿಜ್ಜಳನು ಮನಿಮುಂದ ಬಸವಣ್ಣನ ಮನಿ ಕೇಳಿದರ ಕೈಮಾಡಿದ ಬಿಜ್ಜಳನು
ಹೆಂಡ ಖಂಡನೊಯಿದು ಭಂಗಿ ಚೀಲಾನಾಕಿ ಬಾಗಿಲಿಗಿ ನಿಂತಾನು ಈಶ್ವರನು
ಕ್ವಾರ‍್ಹಲ್ಲು ತೋರುತ ವಾರಿನೋಟ ನೋಡುತ ಅರಮನಿಗ್ಹೋದ ಈಶ್ವರನು
ದ್ವಾರಪಾಲಕರ ನೀವ್ಯಾರಂತ ಕೇಳಿದರ ಊಟಕ ಬಂದೇನಿ ಎಂದ ಈಶ್ವರನು
ಅಂಗರೂಪವ ತಾಳಿ ಲಿಂಗವಿಲ್ಲವೆಂದು ಜಂಗಮ ಬಂದನು ಈಶ್ವರನು
ಹೇಸಿಮಾನವನಲ್ಲಿ ಈಶ್ವರ ಶಿವಪ್ಪನ ದಾರಿ ಕೇಳಿದ ಬಸವೇಶ್ವರನು
ಯಾಸಿಗಾಲವನು ಕೇಶಿ ಮಾರ್ಗಹಿಡಿದು ಕೇತನಕೇರಿಗೋದ ಈಶ್ವರನು
ಕೇತನ ಕೇರಿಯೊಳು ಸತ್ತ ಕರವ ಬಿಚ್ಚಿ ಹಾಲ ಹಾಕಿದ್ದ ಈಶ್ವರನು
ಇಷ್ಟ ಮಾತುಕೇಳಿ ಬಿಟ್ಟಾನು ಅರಮನಿ ಕೇಳಿಮಾರ್ಗ ಹಿಡಿದ ಬಸವಣ್ಣನು
ಕೇಶಿಮಾರ್ಗ ಹಿಡಿದು ಕೇತನ ಕೇರಿಗೆ ಹೋದ ಈಶ್ವರನ ಕಂಡ ಬಸವೇಶ್ವರನು
ಬಾರಪ್ಪ ಶಿವನೆಂದು ಬಾಗಿ ಪಾದ ಹಿಡದರ ಪಾದ ಕಿತ್ತುಬಂದ ಈಶ್ವರನು
ಕಿತ್ತಪಾದ ನೋಡೋ ಹೊತ್ತಾನು ಬೆನ್ನಿಲೆ ಅರಮನಿಗ್ಹೋದ ಬಸವೇಶ್ವರನು
ಅರಮನಿ ಒಳಗೊಂದು ಗುರುವಿನ ಗದ್ದಿಗಿ ಓದು ಇಳವಿದ ಬಸವಣ್ಣನು
ಹತ್ತು ಅವತಾರ ತಾಳಿ ದಶಭುಜವ ತೋರಿದ ಪಂಚಮುಖದ ಪರಮೇಶ್ವರನು
ಬಾರಪ್ಪ ಬಸವಣ್ಣ ನಿನ್ನ ಭಕ್ತಿಗೆ ಒಲಿದೆ ಏನ ಬೇಡತೀದಿ ಎಂದ ಈಶ್ವರನು
ಬೇಡಿದ್ದ ಕೊಡು ಗುರುಭಕ್ತಿ  ಮಾಡುವಂಥ ಪರುಷ ಬಟ್ಲ ಬೇಡಿದ ಬಸವೇಶ್ವರನು
ಕಾಗಿ ಕರ್ರಗ ಇದ್ದರ ಗುರುವೆ ಕೋಗಿಲ ಹೋಲಲು ಬಲ್ಲದಾ
ಬೆಳ್ಳಕ್ಕಿ ಬೆಳ್ಳಗಿದ್ದರೇನು ಬೆಳದಿಂಗಳ್ಹೋಲಲು ಬಲ್ಲದಾ
ಕ್ಯಾವಿ ಅಂಗಿ ತೊಟ್ಟವರೆಲ್ಲ ಸ್ವಾಮಿಯಾಗಲು ಬಲ್ಲರಾ
ಅಡ್ಡಜ್ಯಾಡಿಯ ಹೊದ್ದವರೆಲ್ಲ ಸಿದ್ಧರಾಗಲು ಬಲ್ಲರಾ
ಜಂಗಕಟ್ಟಿದ ಮನುಜರೆಲ್ಲ ಜಂಗಮನ್ಹೋಲಲು ಬಲ್ಲರಾ
ಅತ್ತಿಗೆ ಜಡದ ಸೊಸ್ತ್ಯಾರೆಲ್ಲ ಮಲ್ಲವ್ವನ್ಹೋಲಲು ಬಲ್ಲರಾ
ನೀರಿಗ್ಹೋದ ನಾರ‍್ಯಾರೆಲ್ಲ ನೀಲವ್ವನ್ಹೋಲ ಬಲ್ಲರಾ
ನೀತಿಗೇಳ ನೀಲವ್ವ ಮೇಲ ಭಕ್ತಿಗೇಳ ಬಸವಣ್ಣವನು
ಅಂಗಸ್ವರ ನೀಲವ್ವ ಬಲ್ಲಳ ಜಂಗಸ್ವರ ಬಸವಣ್ಣನೋ
ನಮ್ಮ ಹಸಿವ ನೀನು ಬಲ್ಲ್ಯೊ ಪಂಚಲಿಂಗ ನನ್ನ ಬೀರಯ್ಯ
ರಾಜಮಾರ್ಗ ಹಿಡಿರೆವ್ವ ನಾವು ರಾಜರ‍್ಹೊತ್ತಿಗೆ ಓದವರು
ರಾಜರೊತ್ತಿಗೆ ಓದವರೇನ ಸಿದ್ದರ‍್ಹೊತ್ತಿಗೆ ಓದುವನೋ

* * *

 

ಮಲ್ಲವ್ವನ ಮಹಿಮೆ

ಸ್ವಾಮಿ  ನಮೈ ದೇವರ ಬಂದಾರ ಬನ್ನೀರೇ
ಅಲ್ಲಿ ನೋಡಿದರೆ ನಮ್ಮವರು ಇಲ್ಲಿ ನೋಡಿದರೆ ನಮ್ಮವರು
ಕಲ್ಯಾಣದಾಗ ನಮ್ಮವರು ಕಲಿಯುಗದೊಳು ನಮ್ಮವರು
ದೇವಿ ಕರಿವೂನ ಬನ್ನಿರೇ ದೇವರ ಕರಿವೂನ ಬನ್ನೀರೆ

ಹೊಸದಾಗಿ ಕಲತೀನಿ ಕುಸಿಲಿಂದ ಹೇಳತೀನಿ ಹೇಳುವೆ ಮಲ್ಲವ್ವನ ಚರಿತೆಯನಾ
ಕರುಣದಿ ಕಾಯೋ ನಿಮ್ಮ ಮೊರೆಯಹೊಕ್ಕೆನು ಚರಣಕಮಲಕ್ಕೆ ಎರಗುವೆ ನಾನಾ
ಕುಳಕುಂಬಿ ಊರಾಗ ಮಂದಿ ಬಳಗದಾಗ ಎಲ್ಲರು ಪ್ರೀತಿ ಮಲ್ಲವ್ವಗ
ಎಲ್ಲರು ಪ್ರೀತಿ ಮಲ್ಲವ್ವಗ ದರ್ಪಿಲೆ ಹಿರಿತನ ಮನಿಯೊಳಗ
ಮಾವ ದೊಡದೊಂದು ಬಾವಿ ಕಟ್ಟಿಸಿದಾ ಸಾವಧಾನ ಸಂಪಾದಿಸಿದಾ
ಸಾವಿರ ರೂಪಾಯಿಗಳ ಖರ್ಚು ಮಾಡಿದನೊ ನೀರ ಬೀಳಲಿಲ್ಲೊ ಬಾವ್ಯಾಗ
ನೀರ ಬೀಳಲಿಲ್ಲೋ ಬಾವ್ಯಾಗ ರಮಲ ತೆಗೆಸಿ ನೋಡ್ಯಾನ ಆಗ
ರಮಲ ತೆಗೆಸಿ ನೋಡ್ಯಾನ ಆಗ ಸೊಸಿಯ ಹಾರ ಬೇಡಿತು ಆಗ
ಸೊಸಿಯ ಹಾರ ನಾ ಕೊಡುವದಿಲ್ಲೆಂದಾ ಕಲ್ಲು ದುಂಡಿಲೆ ಬಾವಿ ಮುಚ್ಚುವೆನೆಂದಾ
ಹ್ಯಾವ ತೊಟ್ಟು ಹೊಲದಾಗ ಇರುವನೋ ಉರಿಜ್ವರ ಮನಿಯಾಗ ಎಲ್ಲರಿಗಾ
ಉರಿ ಜ್ವರ ಮನಿಯಾಗ ಎಲ್ಲರಿಗೆ ಹ್ವಾರೇವು ಒಬ್ಬಾಕಿ ಮಲ್ಲವ್ವಗ

ವಚನ

ನೊರೆ ಹಾಲು ಕಾಸಿ ಅಡಗಿ ಮಾಡಿ ತುಂಬ್ಯಾಳೊ ಮಲ್ಲಮ್ಮ ಬುಟ್ಟಿಗೆ
ಸೇರಿಸಿ ಕಾಂತಿ ಹೊತ್ತಾಳೊ ಹೆಡಗಿ ಹೊಲದಾಗ ಮಾವ ಹಸಗೊಂಡ
ಹೊಲಕ ತಂದ ಇಳಿವ್ಯಾಳೋ ಬುತ್ತಿ ಎತ್ತು ತುಳದ ಒಡದಿತೋ ಕೊಡಾ
ಅಲ್ಲಿ ನೀರು ಇಲ್ಲೋ ಕುಡಿಯಾಕ ಮುಕ್ಕಾ
ತಂಬಿಗಿ ಹಿಡಿದು ಬಾವ್ಯಾಗ ಒಂಬತ್ತು ಪಾಟುಣಗಿಗೆ ಹೋಗಿದಳೋ
ಒಂಬತ್ತು ಪಾಟುಣಿಗೆ ಇಳಿದಾಳೋ ಮಲ್ಲಮ್ಮ ಗಂಗವ್ವ ಉಕ್ಕಲೇರಿ ಬಂದಿದಳೋ
ಜಲಧಿ ಕೂಡಿಕೊಂಡು ಹೊಂಟಾಳೋ ಮಲ್ಲವ್ವ ಮಾವ ಹೊಂಟನು ಹಲಬುತ
ಹರನ ಹಂಬಲಿಸುತ ಹರಳ ಒಗೆದು ನೆಲೆಹತ್ತದ ಗಿರಿಕಳಸವನಾ
ಬೆಳವಲದಾಗಿ ಹಿಡಿದಾಳೊ ಮಲ್ಲಮ್ಮ ಕೋಳಿ ಕೂಗಿತು ಒಳೇ ನಿವಳಾ
ಕೋಳಿ ಕೂಗಿದ ದನಿ ಕೇಳಿ ಗಂಗವ್ವ ಬೆಳವಲದಾಗ ಬಿದ್ದು ಹೊರಳಿದಳೋ
ಬೆಟ್ಟವೇರಿ ಗುಡ್ಡ ಬಡದಾಳ ಗಂಗವ್ವ ಕೂಡಲಸಂಗಮಕ ಕೂಡಿದಳೋ
ಕೂಡಲಸಂಗಮಕ ಕೂಡ್ಯಾಳೋ ಗಂಗವ್ವ ಸೃಷ್ಟಿ ಪಾತಾಳಕ ಹೋಗಿದಳೋ
ಹಳಿಬಂಡಿ ಬರತಾವ ಪನ್ನಾಸಾ ಕಾಳಿ ಕರ್ಣಿಗಳ ಆರ್ಭಾಟ
ಬಾಳಿ ತೆಂಗು ಸೀರಿ ಕುಪ್ಪಸ ಏರಿಸುವರು ಗಂಗವ್ವಗ
ಇಡಿಗಡ್ಲಿ ಗಂಧ ಕುಂಕುಮಬಟ್ಟು ಬಿಡಿಮಲ್ಲಿಗೆ ಹಂಗ ನೊಲವನೋ
ಹಂಗನೂಲನು ಕೊರಳಾಗ ಹಾಕಿ ಉಡಿಯತುಂಬಿ ಉಣಸತಾರ ಮುತ್ತೈದೆಯರು
ಮುತ್ತೈದಿ ಮಲ್ಲಮ್ಮಗ ಮುಕ್ತಿಕೊಡಲೆಂದು ಎತ್ತಿ ಬೆಳಗುವೆ ಆರತಿಯಾ
ಇಲ್ಲಿಗೆ ಒಂದು ಸಂದೇಳ ಗುರುವೆ ಹಾಡಿದವರ ಪದ ಮುಂದ್ಕೇಳೋ

* * *

 

ಅತ್ತಿ – ಸೊಸಿ ಕಥೆ

ಅತ್ತೀ ಮನಿಗೆ ಸೊಸಿಯು ಬಂದಾಳೊ
ಪ್ರೀತಿಯಿಂದ ಬಾಳ ಮಾಡುದಕ
ಯಾಕ ಸೊಸಿ ಹಿಂಗ್ಯಾಕ ಮಾಡತಿ
ನೀ ಬಂದಿ ನನ್ನ ಕೊಲ್ಲುದಕ

ಕೊಲ್ಲ ಬ್ಯಾಡ ಸೊಸಿ ಕಾಲಿಗಿ ಬೀಳತೇನಿ
ಬಿಜಗಣಿ ಕೊಡುವೇನು ಸ್ವಾಧಿನಕ
ಉಂಡು ಗಂಡ ಕೊನೆಗೆ ಹೊಲಕ ಹೋದನೊ
ವ್ಯಾಳ್ಯೆಕ ಯಾರಿಲ್ಲ ಮನಿಯಾಗ

ಎಪ್ಪತ್ತು ವರುಷದ ಮುಪ್ಪಾನ ಮುದಕಿ
ನೂಲಕ ಕುಂತಾಳೊ ಕೋಣ್ಯಾಗ
ಬಾಯಿ ಮಾಡ್ಯಾಳಂತ ಬಾಯ್ತುಂಬ ಅರಳಿ
ತುರಕಿ ಬಿಟ್ಟಳೊ ಗಂಟಲದೊಳಗ

ಮುದಕಿ ಮಾಡಿದ ಧರ್ಮ ಒದಗಿ ಬಂದಿತೋ
ಹೊಲದಿಂದ ಮಗ ಬಂದ ಮದ್ಯಾನಕ
ಮಗನ ಕಂಡ ಕೈಸೊನ್ನಿ ಮಾಡತಾಳ
ಬಾಯಾಗ ಅರಳಿ ತಗಿಯುದಕ

ತಾಯಿ ಕೈಸೊನ್ನಿ ಮಗ್ಗ ತಿಳಿಯಲಿಲ್ಲ
ಹೆಣತಿ ಕೇಳತಾನ ಆ ಕ್ಷಣಕ
ಕಳ್ಳ ನನ್ನತ್ತಿ ಹಾಳ ಮಾಡತಾಳ
ಹೊತಗೊಂಡ ಹೋಗಿ ಚಲ್ಲ ದೊಡ್ಡ ಮಡಕ

ಹೆಣತಿ ಮಾತ ಕೇಳಿ ಕಂಬಳಿ ತೊಗೊಂಡು
ಪಡಚಿ ಕಟ್ಟಿದನು ಆ ಕ್ಷಣಕ
ಪಡಚಿ ಹೊತಗೊಂಡು ಕಾನನಕ ಹೋಗಿ
ಬಿರಿಸಿಲಿ ಒಗಿದನೋ ದೊಡ್ಡ ಮಡಕ

ಮುದಕಿ ಮಾಡಿದ ಧರ‍್ಮ ಒದಗಿ ಬಂದಿತು
ಮಾದೇವರು ಬಂದನೋ ಆಕಿ ಗುಣಕ
ಮಡದಾನ ಮುದಕಿ ಕಡಿಯಾಕ ತಗದು
ಅಕಲ ಹೇಳತಾನ ಆಕಿ ಗುಣಕ

ಕೊಡಪಾನ ಹೊನ್ನ ಕೊಡತೇನಿ ಮಗಳ
ಬೇಕಾದಂಗ ತಿನ್ನೋಣ ಸಾಯುತನಕ
ಇಷ್ಟ ಹೇಳಿ ಶಿವ ಮಾಯವಾದನು
ಅಕಲ ಮಾಡಿತೋ ತಿಳಿಗೇಡಿತನಕ

ಇದು ಒಂದು ಕೊಡಪಾನ ಕೊಡಬೇಕೊ
ಮಗ್ಗ ಹೆಸರು ಉಳಿಯುವದು ಕಡಿತನಕ
ಕೊಡಪಾನ ಹೊತಗೊಂಡು ಬರುವದ ಕಂಡು
ಗಂಡಗ ಹೇಳತಾಳ ಆ ಕ್ಷಣಕ

ಮತ್ತ ನಿಮ್ಮವ್ವ ದೆವ್ವಾಗಿ ಬರತಾಳ
ಹೊಡಿಬೇಕ ಕಡಕೊಂಡು ಮೀಳುವಂಗ
ಹೆಣತಿ ಮಾತಕೇಳಿ ಒಣಕಿಯ ತೊಗೊಂಡು
ತಾಯಿ ಬಡಿದ ನೆಲಕ ಬೀಳುವಂಗ

ಹೊಡಿಬ್ಯಾಡ ಮಗನ ಬಡಿಬ್ಯಾಡ ಮಗನ
ಕೊಡಪಾನ ತೋರಸ್ಯಾಳ ಬಗಲಾಂದ
ಕೊಡಪಾನ ನೋಡಿ ಹೊಡಿವದ ಕಂಡು ಸೊಸಿ
ಬಿಡಿಸಿಕೊಂಡು ಹೋದಳು ಅರಮನಿಗೆ

ಕೊಡಪಾನವನ್ನು ಎಲ್ಲಿಂದ ತಂದಿ
ಒತ್ತರಮಾಡಿ ಹೇಳ ಅತ್ತೆವ್ವ
ಏನ ಹೇಳಲಿ ಸೊಸಿ ನಾ ಬಿದ್ದ ಮಡದಾಗ
ಕೊಡಪಾನ ಆದಾವೊ ಬಲ್ಲಂಗ

ಐ ನನ್ನ ಗಂಡ ನನ್ನ ಒಗೆದು ಬಾರೋ ನೀ
ಅತ್ತಿ ಒಗೆದ ಆ ಮಡದಾಗ
ಜಾಳಗಿ ಹೊನ್ನ ಬಳಕೊಂಡ ಬರತೇನಿ
ದೈವುಳ್ಳರಾಗನು ಉರಾಗ

ಹೆಣತಿ ಮಾತ ಕೇಳಿ ಕಂಬಳಿ ತೊಗೊಂಡು
ಪಡಚಿ ಕಟ್ಟಿದನು ಲಗುಬೇಗ
ಪಡಚಿ ತೊಗೊಂದು ಕಾನನಕ ಹೋಗಿ
ಬಿರಿಸಿಲಿ ಒಗೆದನೊ ಮಡದಾಗ

ಮುಳಗಿದ ಹೆಣತಿ ಮ್ಯಾಗ ಬರಲಿಲ್ಲ
ತಾಯಿ ಕೇಳತಾಳ ಆ ಕ್ಷಣಕ
ಮೂರು ದಿವಸದಮ್ಯಾಲ ಬಳಕೊಂಡು ಕರಕೊಂಡು
ಬರುವೇನು ಆ ಮ್ಯಾಲ ನಿಮ್ಮನಿಗೆ

ಮೂರು ದಿವಸದ ಮ್ಯಾಲ ಹೋಗಿ ನೋಡತಾರ
ಹೆಣ ಆಗಿ ತೆಲಿ ಕಾಲಮೇಲ
ಸತ್ತದ್ದು ಕಂಡು ತಾಯಿ ಕೇಳತಾನ
ಎವ್ವಾ ಹೆಣತಿಗೆ ಜೀವಿಲ್ಲ

ಈಶ್ವರ ಹೆಣತಿಗೆ ಜೀವಿಲ್ಲ
ಮತ್ತೆ ಮದವಿ ಮಾಡಿದಳಲ್ಲ

* * *

 

 

ತ್ರಿಕಾಲ ಮಾಡತಿ ಶಿವಭಜನೆ

ನಂಬಿ ನಾನು ಮಾಡುವೆ ಭಜನಾ ಜಗದಂಬಿ ಪತಿಯೆ ಪಾಲಿಸೋ ಎನ್ನ
ಶಂಭುಶಂಕರ ತೋರೋ ಚರಣ ಪ್ರಾರಂಭದಲ್ಲಿ ಸ್ಮರಿಸುವೆ ನಿನ್ನ
ಪಾರ್ವತಿ ಸುತಾ ಗಜಾನನ ನಿನ್ನ ಪೂರ್ವದಲ್ಲಿ ಪೂಜಿಸುವೆ ಮುನ್ನ
ಘೋರಭಯಗಳ ದೂರು ಮಾಡುತ ಪಾರಗಾಣಿಸೋ ಪಾಮರನ
ಆದಿಯಲ್ಲಿ ಯಮನಾದಿ ದೇವರ ನಾಂದಿಯಲ್ಲಿ ಮಾಡುವೆ ಭಜನ
ಶಿವನೆ ಬಂದು ತಾ ಭೋಗಿಸಲೆಂದು ಸಾಧಿಸಿ ಬೇಡುವೆ ವರಗಳನ
ಸಣ್ಣ ಹುಡುಗ ನಾ ಮತಿಹೀನ ಸುಜ್ಞಾನ ನೀಡಿ ಪಾಲಿಸೋ ಪೂರ್ಣ
ನಿನ್ನ ಮಹಿಮೆಯನ್ನು ಬಣ್ಣಿಸಲಾರೆ ವೇದಗಳೆಲ್ಲಾ ಆದಾವು ಸುಮ್ಮನಾ
ಎರೆಯುವ ಪರಿಮಳ ಜಲವನ್ನು ಮೇಲೆ ಧರಿಸಿ ಶ್ರೀ ಗಂಧವನು
ಏರಿಸುವೆ ಜಾಜಮಲ್ಲಿಗೆ ಶಾವಂತಿಗೆ ಕುಸುಮಗಳನ್ನ
ನಿತ್ಯ ಬೆಳಗುವೆ ನಿರಂಜನಾ ಕಡ್ಡಿ ಬತ್ತಿ ಕರ್ಪೂರಾರುತಿಯನ್ನ
ಎಡಬಿಡದೆ ನಿನ್ನ ಅಡಿಗಳ ಪೂಜಿಸಿ ಎಡಿಯ ಮಾಡುವೆನು ಪರಮಾನ್ನ
ದೋಷ ಹರಿಸಿ ಈ ಕೂಸುಗಳನ್ನು ಪರಿಪೋಷಿಸಿ ನೀಡೈ ವರಗಳನು
ಶಂಭುಶಂಕರ ತೋರು ಚರಣ ಪ್ರಾರಂಭದಲ್ಲಿ ಸ್ಮರಿಸುವೆ ನಿನ್ನಾ
ಕರುಣದಿಂದ ಕಾಯೋ ಗೌರೀವರ ಜರಾಮರಣರಹಿತ ನೀಡೈ ವರವಾ
ವಾಲಗ ಮಜಲ ನೋಡಲಾಕ ಕೂಡ್ಯಾರೊ ದೊಡ್ಡ ದೊಡ್ಡ ಪಂಡಿತರಾ
ಸರ್ವರಿಗೆ ಮಾಡುವೆ ನಮಸ್ಕಾರ ಕೈ ಮುಗಿದು ಹೇಳುವೆ ವಿಸ್ತಾರ
ಗುಲ್ಲ ಮಾಡುವೆ ಎನ್ನ ಸೊಲ್ಲ ಕೇಳರಿ ಚಿತ್ತಗೊಟ್ಟು ಕುಂತ ನಿಂತವರಾ
ಸರ್ವರಿಗೆ ಒಬ್ಬನೇ ದೇವರು ಶ್ರೀ ಸಾಂಬನ ಹೊರತು ಇನ್ನಾರಿಲ್ಲ
ವೀರಶೈವರಿಗೆ ಶಂಕರ ರೂಪ ಬ್ರಾಹ್ಮಣರಿಗೆ ದೇವತಾ ಕುವರ
ಕ್ಷತ್ರಿಯರಿಗೆ ಶ್ರೀ ರಘುವೀರ ಮತ್ತು ಕುರುಬರಿಗೆ ಆದನೋ ಬೀರಪ್ಪ
ಅಣುರೇಣುವಿನಲಿ ತುಂಬಿ ತುಳಕತಾನೋ ರೂಪ ತೋರತಾನೋ ನಾನಾಥರಾ
ಶಕ್ತಿಪತಿ ಶ್ರೀ ಶಂಕರ ನೇತ್ರ ಸಿಂಹಾಸನದವನೋ ಶೂಲಧರಾ
ಪರಿಪರಿಯಿಂದಲಿ ಪಾಲಿಪ ಜಗವನು ಪಾವನಮೂರ್ತಿ ಪರಮೇಶ್ವರಾ
ಲೋಕಪಾಲಕ ಮುಕ್ಕಣ್ಣ ಜಗದೀಶ ಮುಕ್ತಿ ನಂದಿಯವನಾ
ಕಂಬುಕಂದರ ತೋರೋ ಚರಣ, ಪ್ರಾರಂಭದಲಿ ಸ್ಮರಿಸುವೆ ನಿನ್ನಾ
ಮಹಾಮಹಿಮನೋ ಮಹೇಶ್ವರ ಸಕಲ ಜೀವಿಗಳಿಗೆ ಆಧಾರ ನಾತಾ
ಭೂಮಿ ಆಕಾಶ ನೀರು ಗಾಳಿ ಬೆಂಕಿ ಇವನಿಂದಲೇ ಹುಟ್ಟ್ಯಾವೊ ಪೂರಾ
ಶಿವನಿಂದ ಸೃಷ್ಟಿ ಆಕಾರಾ ಈ ಸೃಷ್ಟಿ ತುಂಬ ಅವನ ಹೆಸರಾ
ಶಕ್ತಿ ಹೆಚ್ಚು ಅಂತ ಮತ್ತೊಬ್ಬರನ್ನುವರು ತತ್ವದ ಅರ್ಥ ತಿಳಿಯದ ಜನರಾ
ತರ್ಕ ಮಾಡಿರಿ ಬಲ್ಲಿದರಾ ಸುಳ್ಳ ಯಾಕ ಮಾಡತೀರಿ ತಕರಾರಾ
ಮೋಕ್ಷದಾತ ಮಹಾದೇವನ್ಹೆಂಡತಿ ಸೇವೆ ಮಾಡತಾಳ ನಿರಂತರಾ
ಧರಿಯೊಳು ಹುಲಕುಂದ ಜಾಹೀರಾ ನಮ್ಮ ಹಿರೇಮಠೇಶನ ಆಕಾರಾ
ಈಶಭಕ್ತ ಸುಖವಾಸ ಚಿಕ್ಕುಂಬಿ ಸಂಶಯ ಬಂದರೆ ಕೇಳರಿ ಪೂರಾ
ಕಾಲಿ ಮಾಡಬೇಡರಿ ಕಾಲಹರಣ ತ್ರಿಕಾಲ ಮಾಡರಿ ಶಿವಭಜನಾ
ಶಂಭುಶಂಕರ ತೋರೋ ಚರಣ ಪ್ರಾರಂಭದಲ್ಲಿ ಸ್ಮರಿಸುವೆ ನಿನ್ನಾ