ಶಿವಭಕ್ತ ತಿರುನೀಲಕಂಠ

ಶರಣ ಗುರುವೆ ನಿಮ್ಮ ಅಡಿಯ ಪೂಜಿಸುವೆ
ಮರಣರಹಿತ ಕರುಣಿಸು ದೇವ
ಶರಣರ ಪಾದಕೆ ಸ್ಮರಿಸುತ ಹೇಳುವೆ
ತಿರುನೀಲಕಂಠನ ಅನುಭಾವ

ಮೆರೆಯುತಿರುವದು ತೋರೆಂಬ ಊರ
ಆ ಪುರದ ವರ್ಣನಾ ಹೇಳುವೆ ನಾ
ಸರಸದಿ ರತ್ನದ ತೆನೆಗಳ ಕೊತ್ಲೆಮರ
ಕೊತ್ತಲದೆನೆ ಬಾಗಿದ ಕ್ಯಾದಗಿ

ಎನ್ನ ಸಾಂಬ ಹೇಳತಾನೆ ಸೌಂದರ್ಯ
ನಂಬಿಗೆ ನಿಂಬಣ್ಣನೆ ಕೇಳಲು
ಕುಂಬಿನಿಯೋಳ್ ಶಿವಶರಣರು ನಿಮ್ಮನು
ತಗದರು ಕುಲದಿಂದ ಹೊರಗೆ

ಅಂದಮಾತ ಕೇಳಿ ಸೌಂದರ್ಯ ಹೇಳತಾನ
ಇದೇನ ಮಾಡುವಿ ಹಂತವನ
ತಮ್ಮಗೊಳ ನಿಮ್ಮ ಹೊಂದಿಗಿರುವೆನು
ಕುಂದೇನು ಬರುವದು ನಮಗಿನ್ನ

ಶಂಕರನಿಗೆ ಹೇಳತಾನ ನಿಂಬಣ್ಣನು ತಾನ
ನಾವೇನ ಮಾಡೇವಿ ಹಂತಾದನ್ನ
ನಮ್ಮನ್ನ ಯಾಕ ತಗದಾರ ಕುಲದಿಂದ
ಹೊರಗೆ ಬಂದು ಚಿಂತೆಯಿಂದಿರಲು

ಆಗ ಶಂಕರನು ಹೇಳತಾನ ನಿಂಬಿಗೆ
ನೀನಿಷ್ಟು ಮಾಡುವಿ ಭಕ್ತಿಯನು
ನಿನಗಿಂತ ಹೆಚ್ಚಿನ ತಿರುನೀಲಕಂಠನಿರುವನು
ಹೇಳುವೆನು ಕೇಳು ಆತನ ಚರಿತ್ರೆ

ತಿರುಮಲೇಶ್ವರನ ಪೂಜೆ ಮಾಡಲು
ತಿರುನೀಲಕಂಠನ  ಭಕ್ತಿಯನು
ಹರುಷದಿ ಹೇಳುವೆ ಕೇಳಲು ನಂಬಿ
ಮರಿಬ್ಯಾಡೋ ಮುದದಲಿ ಇನ್ನು

ಒಂದು ದಿನ ಈಶ್ವರನ ಪೂಜೆಗೆ
ಹೋಗುತ್ತಿದ್ದ ಶರಣನು ತಾನು
ಕಂದುಗೊರಳನ ಪೂಜೆಯ ಮಾಡಿ
ಅಂದವಾಗಿ ಏರಿಸಿದನು ದಳವನು

ಧೂಪ ದೀಪ ನೈವೇದ್ಯ ತಾಂಬೂಲ
ದೀಪ ಬೆಳಗಿ ಏಕಾರತಿಯನು
ಪಾಪಹರನೆ ಪರಮಾತ್ಮ ಶಂಕರ
ಲೋಪಮಾಡು ನನ್ನ ಭವವನು

ಶೋಡಸ ಪೂಜೆಯ ಮಾಡುತ ಶರಣನು
ಹಾಡತಾನ ಶಿವನ ಸ್ತುತಿಯನು
ಬೆಡಗೊಲಿದ ಸುಡುಗಾಡವಾಸನೆ
ಬೇಡಿಕೊಂಬೆ ಕೈಪಿಡಿದು ಎನ್ನನು

ಹಾಡುತ ಬಹುಕೊಂಡಾಡುತ ಭಕ್ತಿಯ
ಮಾಡುತಿದ್ದ ಶರಣನು ತಾನು
ನೋಡುತ ಪುರವನು ಶರಣನು ತಾನು
ಮನೆಯ ದಾರಿ ಹಿಡಿದಿಹನು

ವಚನ

ತಿರುನೀಲಕಂಠನು ಒಂದು ಓಣಿಯ
ಬಾಜಾರ ಹಿಡಿದು ಬರುತ್ತಿದ್ದ
ವೇಶ್ಯಾಸ್ತ್ರೀಯ ಮನೆಮುಂದೆ ಹಾದು
ಬರುತಿದ್ದ ಆ ಶಿವಮೂರ್ತಿ

ಎಂಜಲ ನೀರ ಒಗೆದಾಳ ಆ ಸ್ತ್ರೀ
ಮೈಮೇಲೆ ಮಾಳಗಿ ಮೇಲಿಂದ
ಕಣ್ಣಾರೆ ನೋಡ್ಯಾನು ಶರಣನು ತಾನು
ಶಿವ ಶಿವ ಎಂದು ಅಂದಾನ

ಪಾತರದವಳು ಆತುರದಿಂದ ಬಂದು
ನೋಡತಾಳ ಕಿಡಿಕ್ಯಾಗ
ಭೀತಳಾಗಿ ಶಿವ ಘಾತವಾಯಿತೆಂದು
ಒತ್ತರಮಾಡಿ ಕೆಳಬಂದಾಳ

ತಿರುನೀಲಕಂಠನ ಚರಣಕ ಎರಗಿ
ಹೇಳತಾಳ ತಾ ಕೈಮುಗಿದು
ಮರುವಿನ ಜನ್ಮದು ಮರತೇನ ದೇವ
ಕರುಣಮಾಡಿ ಕೃಪೆ ಮಾಡೋ

ಕಾಯೋ ದೇವನೆ ಕಾಯೋ ಕರುಣದಿ
ವೇಗವ ಮರುವಿಗೆ ನಾ ಬಪ್ಪೆ
ಕಾಯದ ತಪ್ಪು ವಿಘ್ನದ ಮಾತಿದು
ನಾನು ನಾಶ ಆಗುವ ಮುನ್ನ

ಸ್ತುತಿಯ ಕೇಳಿ ಶಿವಶರಣ ಅಂತಾನು
ನಿನ್ನ ಕಡೆಗಿಲ್ಲವು ಭೇದ
ಗತಿಗೆ ಹೊಂದಿ ಸದ್ಗತಿಗೆ ಹೋಗ ನೀ
ಮತಿವಂತಿಯಾಗಿ ಬಾಳು ನೀ

ವೇಶ್ಯಾಸ್ತ್ರೀ ಹೇಳತಾಳ ಶರಣಗೆ
ನಮ್ಮ ಮನಿಗೆ ಬರಬೇಕರಿ ಈಗ
ಪಾದಪೂಜೆ ಮಾಡತೇನಿ ತಮ್ಮದು
ಆಗುವದು ನನಗ ಸನಮಂತ

ಪಾತರದವಳು ಕೇಳತಾಳ ಶರಣಗ
ಮನೆಗೆ ಬರಬೇಕರಿ ಅಂತ
ನಿಡಿ ತಾಯಿ ಬರುವೆನಂತ ಶರಣನು
ವಚನ ಕೊಟ್ಟಾನ ಆ ಸ್ತ್ರೀಗೆ

ಗದ್ದುಗೆ ಹಾಸ್ಯಾಳ ವಿನಯದಿಂದ
ಸ್ನಾನ ಮಾಡಿಸಿದಳು ಅಲ್ಲಿಂದ
ಅಂಗಾರ ಕುಂಕುಮ ಜೀವಾದಿ ಕಸ್ತೂರಿ
ಮಲ್ಲಿಗಿ ಎಣ್ಣಿ ಹಚ್ಯಾಳ

ಗಂಧ ಸೊಗಸದಿ ಪರಿಮಳ ಚೆಂದದಿ
ತೀಡುತ ಜೀವದಿ ಮಕರಂದ
ಗುಲಾಬಿ ಗುಳಿಗುಳಿ ಸಂಪಿಗಿ ಎಣ್ಣಿ
ಮೈತುಂಬಿ ಹಚ್ಚಿ ತೊಳದಾಳೆ

ಪನ್ನೀರ ಸ್ನಾನವ ಮಾಡಿಸಿ ಚೆನ್ನಾಗಿ
ಹೊನ್ನ ಗದ್ದುಗೆ ಹಾಕುತ ಚಂದ
ಹಲವು ಪರಿಯಿಂದ ಸೇವೆ ಮಾಡ್ಯಾಳ
ಮಲಹರದೇವನು ಇವನಂತ

ಧೂಪ, ದೀಪ, ನೈವೇದ್ಯ ತಾಂಬೂಲ
ಅಕ್ಷತೆ ಕುಂಕುಮ ಪರಿಮಳವ
ಪಾಪಹರಗ ಪವಿತ್ರ ಪತ್ನಿಯು
ಧರಿಸಿ ಮಂಗಲ ಪುಷ್ಪವನ

ಶರಣನ ಪೂಜೆ ಮಾಡ್ಯಾಳ ಖುಶಿಯಿಂದ
ಹರುಷವುಕ್ಕಿ ಬಂದೀತ ಆಗ
ಪಾತರದವಳಿಗೆ ಆಶೀರ್ವಾದ ಮಾಡ್ಯಾನ
ತಿರುನೀಲಕಂಠನು ಆ ಕ್ಷಣದಾಗ

ಮನೆಯ ದಾರಿ ಹಿಡದಾನ ಶರಣನು
ಬಾಗಿಲ ಬಳಿ ಬಂದು ನಿಂತಾನ
ಅಡರಿಸಿ ಬಂದಳು ಒಳಗಿಂದ ಹೆಂಡತಿ
ಸುವಾಸನೆ ಹೊಡೆಯುತಿತ್ತು ದೂರದಿ

ಹಿಂದಕ ಸರಿದು ಮಂದನ್ನ ದನಿಯಾಗ
ಹೇಳತಾಳ ತನ್ನ ಪತಿ ಮುಂದೆ
ಕುಂದೇನು ತಂದಿರಿ ಯಾವ ಸ್ತ್ರೀಯಳ
ಮನೆಗೆ ಹೋಗಿ ಬಂದಿರಿ ನೀವಿಂದು

ಪಾತಕ ದೋಷಕ ಬಿದ್ದಿರಿ ಕಾಂತಾ
ನಮ್ಮ ನಿಮ್ಮ ಸಲಿಗಿ ಸಾಕೆಂದೆ
ಕಳ್ಳತನವ ಮಾಡಿ ಕಳ್ಳಿ ಮನಿಯೋಳ್
ಉಳ್ಳಾಡಿ ಬಂದಿರಿ ನೀವಿಂದು

ಎಂಜಲ ಸಿಡಿದದ್ದು ಮಂಜುಳವಾಣಿ
ತೊಳದ ಹಚ್ಚಿದಳು ಮಕರಂದ
ಕೆಂಜೆಡೆ ಶಿವನ ಪಾದವೆ ಸಾಕ್ಷಿ
ನನ್ನ ತಪ್ಪು ಇಲ್ಲ ಎಳ್ಳಷ್ಟ

ಶಿವನಾಣಿ ಕೊಟ್ಟದ್ದಕೆ ಸತಿ ಒಡಂಬಟ್ಟು
ಒಳಗೆ ಬರಲಿಕ್ಕೆ ಹೇಳ್ಯಾಳು
ಸಂಜೆಯ ಪೂಜೆಯ ಮಾಡ್ಯಾಳ ಗಂಡಗ
ನೀರಕೊಟ್ಟು ಊಟ ನೀಡ್ಯಾಳ

ಗಂಡಗ ಊಟ ನೀಡ್ಯಾಳ ಸರಿಯಳು
ತಾನೋ ಊಟವ ಮಾಡ್ಯಾಳ
ಗಂಡಗ ಬೇರೆ ಹಾಸಿಗಿ ಹಾಸ್ಯಾಳ
ಗಂಡನ ಬಿಟ್ಟು ತಾ ಮಲಗ್ಯಾಳ

ಮಧ್ಯರಾತ್ರಿಯ ಹೊತ್ತಿನಲ್ಲಿ ಹೆಂಡತಿ
ಮನಮುಟ್ಟಿ ಆಳಲಿಕ್ಕೆ ಹೋದಾನು
ಮುಟ್ಟಿದರೆ ಶಿವನಾಣೆ ಎಂದು ಸತಿ
ಆಗಲೆ ಆಣೆಯ ಇಟ್ಟಾಳು

ಮುಟ್ಟಬ್ಯಾಡೊ ಮುದಿಮಲ್ಲನ ಆಣೆ
ಕೆಟ್ಟು ಹೋಗತಿನಿ ನಾನಿಂದ
ಕೆಟ್ಟ ಕಾರ‍್ಯ ಮಾಡಿ ಬಂದಿರಿ ನೀವು
ಎಷ್ಟು ಹೇಳಿದರೂ ಬ್ಯಾಂಡಾಂತ

ಪತಿವೃತಾ ಸ್ತ್ರೀಯಳ ಸತಿಯ ಬಿಟ್ಟು
ಪರಸತಿಯ ನೋಡಿ ಬಂದಿರಿ ಇಂದು
ಹ್ಯಾಂವ ಹತ್ತೇತಿ ಅವರಿಬ್ಬರಿಗೆ
ಹೆಂಡತಿ ಮರತಾನೊ ಮಾಕಾಂತ

ಶಂಭೋ ನಿನ್ನಾಣೆ ಎಂಬತ್ತು ವರುಷ
ಹೆಣತಿ ಮುಟ್ಟಲಿಲ್ಲೋ ಏಕಾಂತ
ತುಂಬ್ಯಾವು ದಿನಗಳು ಮುದಕರುವರು
ಅವರಿಗೆ ಮಕ್ಕಳಾಗಲಿಲ್ಲ ಒಬ್ಬಾತ

ಚಿಂತಿ ಹತ್ತಿ ಶಿವಶಂಕರ ಅಂತಾನು
ಎಂಥಾಹಾ ಶಿವಭಕ್ತ ನಿಷ್ಠೆವಂತ ಶಿವಭಕ್ತ
ಕಾಂತಿಯ ಗಂಡನ ಕೂಡಿಸಿ ಬರ್ತಿನಿ
ಅಂಥಾ ಹೊಂಟ ಪಾರ್ವತಿನಾಥಾ

* * *

ಚಂಗಳವ್ವ

ಮೂರು ಕಣ್ಣಿನವ ಮುಕ್ಕಣ್ಣ ಶಿವರಾಯ
ತಾ ಒಂದು ರೂಪ ಆಗ್ಯಾನೋ
ತಾ ಒಂದು ರೂಪ ಆಗ್ಯಾನಲ್ಲೋ
ಲಿಂಗ ಜಂಗಮನಾಗ್ಯಾನೋ

ಕಂತಿ ಅರಬಿಯ ಉಟ್ಟಾನಲ್ಲೋ
ಕಂಟಿ ಅಂಗಿಯ ತೊಟ್ಟಾನೋ
ಕಂಟಿ ಅಂಗಿಯ ತೊಟ್ಟಾನಲ್ಲೋ
ಮುರಗಿ ಮುಂಡಾಸ ಸುತ್ಯಾನೋ

ಕಾಲಿಗಿ ಜಂಗ ಕಟ್ಟ್ಯಾನಲ್ಲೋ
ಇಬತ್ತಿ ಭಸ್ಮ ಧರಿಸ್ಯಾನೋ
ಇಬತ್ತಿ ಭಸ್ಮ ಧರಿಸ್ಯಾನಲ್ಲೋ
ಮುಂಗೈಗೆ ಜೋಳಿಗಿ ಹಾಕ್ಯಾನಲ್ಲೋ

ಮುಂಗೈಗೆ ಜೋಳಿಗಿ ಹಾಕ್ಯಾನಲ್ಲೋ
ಮುರಗಿ ಬೆತ್ತವ ಹಿಡಿದಾನೋ
ಮುರಗಿ ಬೆತ್ತವ ಹಿಡಿದಾನಲ್ಲೋ
ಊರನೆಲ್ಲ ಆಡ್ಯಾನೋ

ಊರನೆಲ್ಲ ಆಡ್ಯಾನಲ್ಲೋ
ಚಂಗಳವ್ವನ ಮನಿಗೆ ಬಂದಾನೋ
ಆಗ ನೋಡು ಚಂಗಳವ್ವನಲ್ಲೋ
ಮುತ್ತುರತ್ನ ತುಂಬಿ ತಂದಾಳೋ

ಕೈಲಾಸದ ಗುರುವೇಳೋ
ಮತ್ತೊಂದು ಮಾತು ಹೇಳ್ಯಾನೋ
ಮುತ್ತು ನಮಗೇನು ಕಡಿಮಿಲ್ಲ ಚಂಗಳವ್ವ
ರತ್ನ ನಮಗ ಏನು ಕಡಿಮಿಲ್ಲ

ಮುತ್ತುರತ್ನ ಹಿಂದಕ ಓದು
ಬೆಳ್ಳಿಬಂಗಾರ ತುಂಬಿ ತಂದಾಳೋ
ಕೈಲಾಸದ ಗುರುವೇಳೋ
ಮತ್ತೊಂದು ಮಾತು ಹೇಳ್ಯಾನೋ

ನಮಗ ಹಸಿವು ಆಗ್ಯಾವು ಚಂಗಳವ್ವ
ನಿಮ್ಮ ಮನಿಯ ಬಿನ್ನಾಯವೋ
ನಿನ್ನ ಮಗನ ಕೊರದ ಅಡಗಿಯ ಮಾಡಿ
ನಮಗ ಪಲ್ಲೇವ ನೀಡಲ್ಲೋ

ಆಗ ನೋಡು ಚಂಗಳವ್ವ ಅಲ್ಲೆ
ಬಹಳ ದುಃಕವ ಮಾಡ್ಯಾಳೋ
ಬಹಳ ದುಃಕವ ಮಾಡ್ಯಾಳಲ್ಲೋ
ಸ್ವಾಮಿ ಪಾದಕ ಬಿದ್ದಾಳೋ

ಸ್ವಾಮಿ ಪಾದಕ ಬಿದ್ದಾಳ ಚಂಗಳವ್ವ
ಮೆಲ್ಲಮೆಲ್ಲಕ ಎದ್ದಾಳೋ
ಓದುಸಾಲಿಗ ಹೋಗ್ಯಾಳ ಚಂಗಳವ್ವ
ಕೂಗ್ಯಾಡಿ ಮಗನ ಕರದಾಳೋ

ಕೂಗ್ಯಾಡಿ ಮಗನ ಕರದಾಳ ಚಂಗಳವ್ವ
ಬಾ ಚಿಲ್ಲಾಳಂತ ಅಂದಾಳೋ
ಲೆತ್ತದಾಲಿಯೇ ಲೇಕುಣಿ ಕಡ್ಡಿ
ಗಿಲಿ ಗಿಲಿ ಮಗ ಓಡಿ ಬಂದಾನೋ

ಗಿಲಿ ಗಿಲಿ ಮಗ ಓಡಿ ಬಂದನಲ್ಲೋ
ಅಡಗಿ ಮನೆತನ ಕರತಂದಾಳೋ
ಅಡಗಿ ಮನೆತನ ಕರೆದು ತಂದಾಳೋ ಚಂಗಳವ್ವ
ಕೊಳ್ಳು ಮೆಟ್ಟಿ ಕುತಗಿ ಕೊಯ್ದಾಳೋ

ಕೊಳ್ಳು ಮೆಟ್ಟಿ ಕುತಗಿ ಕೊಯ್ದಾಳೊ ಚಂಗಳವ್ವ
ರನ್ನದ ಈಳಿಗಿ ಹಿಡಿದಾಳೋ
ರನ್ನದ ಈಳಿಗಿ ಹಿಡಿದಾಳೋ ಚಂಗಳವ್ವ
ಸಣ್ಣಗಾದರೂ ಹೆಚ್ಯಾಳೋ

ಸಣ್ಣಗಾದರೂ ಹೆಚ್ಚಾಳೊ ಚಂಗಳವ್ವ
ತಾಮ್ರದ ತಪೆಲ್ಯಾಗ ಇಳಿವ್ಯಾಳೋ
ತಾಮ್ರದ ತಪೆಲ್ಯಾಗ ಇಳಿವ್ಯಾಳ ಚಂಗಳವ್ವ
ಉಪ್ಪು ಕಾರ ಮೆಣಸಿಂಡಿ ಹಾಕ್ಯಾಳೋ

ಉಪ್ಪುಕಾರ ಮೆಣಸಿಂಡಿ ಹಾಕ್ಯಾಳ ಚಂಗಳವ್ವ
ಬೆಳ್ಳಿ ಒಲಿಮ್ಯಾಲೆ ಇಳಿವ್ಯಾಳೋ
ಬೆಳ್ಳಿ ಒಲಿಮ್ಯಾಲೆ ಇಳಿವ್ಯಾಳ ಚಂಗಳವ್ವ
ಊದಿನ ಕಡ್ಡಿಲೆ ಉರಿವ್ಯಾಳೋ ಚಂಗಳವ್ವ

ಊದಿನ ಕಡ್ಡಿಲೆ ಉರಿವ್ಯಾಳೋ
ಬಂಗಾರ ಹುಟ್ಟಿಲಿ ತಿರಿವ್ಯಾಳೋ
ಆಗ ನೋಡು ಚಂಗಳವ್ವ ಅಲ್ಲೇ
ಹದಹಾಕಿ ಅಡಗಿ ಮಾಡ್ಯಾಳೋ

ಹದಹಾಕಿ ಅಡಗಿ ಮಾಡ್ಯಾಳೋ ಚಂಗಳವ್ವ
ಜಂಗಮಗ ನೀರನು ಕೊಟ್ಟಾಳೋ
ಏಳೋ ಏಳೋ ಏಳ ನನ ಗುರುವೆ
ಜಳಕದ ವೇಳೆ ಆದಾವೋ

ಕೈಲಾಸದ ಗುರುವೆ ಏಳು
ಮೆಲ್ಲ ಮೆಲ್ಲಗೆ ಎದ್ದಾನೋ
ಮೆಲ್ಲ ಮೆಲ್ಲಗೆ ಎದ್ದಾನಲ್ಲೊ
ಮೈಯ ಮೇಲಿನ ಅರಿಬಿ ಇಳಿವ್ಯಾನೋ

ಮೈಮ್ಯಾಲಿನ ಅರಿಬಿ ಇಳಿವ್ಯಾನಲ್ಲೊ
ಜಳಕ ಜಾಪತ್ರಿ ಮಾಡ್ಯಾನೋ
ಜಳಕ ಜಾಪತ್ರಿ ಮಾಡ್ಯಾನಲ್ಲೋ
ಶಿವಪೂಜೆ ಮಾಡುತಲೈದಾನೋ

ಆಗ ನೋಡು ಚಂಗಳವ್ವನು ಅಲ್ಲೆ
ಜಂಗಮಗ ಎಡಿಯ ಮಾಡ್ಯಾಳೋ
ಕೈಲಾಸದ ಗುರುವೇಳು ಅವ
ಮತ್ತೊಂದು ಮಾತು ಹೇಳ್ಯಾನೊ

ಬಾರೋ ಬಾರೋ ಬಾ ನನ್ನ ಮಗಳ
ನಂದೊಂದು ಮಾತು ಕೇಳಿ ಹೋಗು
ಏನನ್ನ ಕೋಟಿ ನಿನ್ನ ಮಗನು
ಬಿನ್ನಾಯ ಮಾಡಬೇಕೆಂದಾನೋ

ಆಗ ನೋಡು ಚಂಗಳವ್ವ ಅಲ್ಲೆ
ಬಹಳ ದುಃಕವ ಮಾಡ್ಯಾಳೋ
ಬಹಳ ದುಃಕವ ಮಾಡ್ಯಾಳಲ್ಲೋ
ಏನೆಂದು ಹೇಳುತೈದಾಳೋ

ಒಬ್ಬನ ಮಗನ ಕೊಂದು ಅಡಿಗಿ ಮಾಡಿನಿ
ಇನ್ನೊಬ್ಬ ಮಗನಿಲ್ಲೇಳೋ
ಬಾರೋ ಬಾ ನನ್ನ ಮಗಳ
ನಂದೊಂದು ಮಾತು ಕೇಳಿ ಹೋಗೋ

ಓದು ಸಾಲಿಗೆ ಹೋಗವ್ವ ಚಂಗಳವ್ವ
ಕೂಗ್ಯಾಡಿ ಮಗನ ಕರೆಯಲ್ಲೆ
ಆಗ ನೋಡು ಚಂಗಳವ್ವ ಅಲ್ಲಿ
ಕೂಗ್ಯಾಡಿ ಮಗನ ಕರದಾಳೋ

ಕೂಗ್ಯಾಡಿ ಮಗನ ಕರೆದಾಳು ಚಂಗಳವ್ವ
ಬಾಲೇಳಂತದಾಳೋ
ಲೆತ್ತದಾಲಿಯೋ ಲೇಕುಣಿಕಡ್ಡಿ
ಗಿಲಿ ಗಿಲಿ ಮಗ ಓಡಿ ಬಂದಾನೋ

ಗಿಲಿ ಗಿಲಿ ಮಗ ಓಡಿ ಬಂದಾನಲ್ಲೋ
ಸ್ವಾಮಿ ಹಂತಿಲೇ ಕುಳಿತಾನೋ
ಕೈಯಲಾಸದ ಗುರುವೇಳು ಅವ
ಮತ್ತೊಂದು ಮಾತು ಹೇಳ್ಯಾನೋ

ಬಾರೋ ಬಾರವ್ವಾ ನನ ಮಗಳ
ನಂದೊಂದು ಮಾತು ಕೇಳಿ ಹೋಗು
ಏನ ಬೇಡತಿ ಬೇಡ ನನ್ನ ಮಗಳ
ಬೇಡಿದ ಭಾಗ್ಯವ ಕೊಡುವೆನು

ಆಗ ನೋಡು ಚಂಗಳವ್ವ ಆಗ
ಗುರುವಿನ ಆಸರ ಕೇಳ್ಯಾಳೋ
ಕೈಲಾಸದ ಗುರುವೇಳು ಅವ
ಯಾಕಾಗಲೊಲ್ಲದಂದಾನೋ

ಯಾಕಾಗವಲ್ಲದಂದಾನಲ್ಲೋ
ನಂದಿ ಏರುತಲೈದಾನೋ
ನಂದಿ ಏರುತಲೈದಾನಲ್ಲೋ
ಕೈಲಾಸಕ ಹೋಗ್ಯಾನೋ