ಹೀಗಿರಬೇಕೋ !

ಇಲ್ಲಿಗೆ ನಾನು ಬರಬೇಕಾದರೆ ನಮನಿಮ ಮನಸೊಂದಿರಬೇಕೊ
ತನುಮನಧನ ಗುರುವಿಗೆ ಕೊಟ್ಟು ಗರವು ಅಹಂಕಾರ ಬಿಡಬೇಕೊ
ಆರು ಅಳಿದು ಆರೂಢಮಾರ್ಗವು ಅದು ಪತ್ತವಂದಿರಬೇಕೊ
ರೂಢಿಯೊಳಗೆ ಮಾಡಿನೀಡಿ ನೀಡದ್ಹಾಂಗಿರಬೇಕೊ

ಸತ್ಯ ಪತಾಕಿ ಹಿಡಿದಿರಬೇಕೋ ನಿತ್ಯದಿ ಮನಿ ಹಸನಿರಬೇಕೊ
ನೆನವಿನೊಳಗ ನಿಜರೂಪದ ನುಡಿಗಳು ಘನವಾಗಿ ತನ್ನಲ್ಲಿರಬೇಕೊ
ಅಜಹರಸುರ ಮುನಿಗಳು ಹೌದ ಹೌದನ್ನುವಂಗಿರಬೇಕೊ
ಹಮ್ಮನ್ನುಳಿದು ಹರಿಬ್ರಹಮ್ಮನ ಸ್ಮರಣಿಯು ಅನುಗಾಲ ತನ್ನಲ್ಲಿರಬೇಕೊ

ಪ್ರಪಂಚದಲ್ಲಿರಬೇಕು ಪರಮಾತ್ಮನ ದ್ಯಾನಾ ಮಾಡಬೇಕೊ
ಪರರ ನಿಂದೆಯನು ಬಿಡಬೇಕೊ ಪರಬ್ರಹ್ಮನಲ್ಲಿ ಮನಸಿಡಬೇಕೊ
ಆತ್ಮದಲಿ ಅರಳಿರಬೇಕೊ ಅರವಿಡಿದು ಗುರುವಿನ ತಿಳಿಬೇಕೊ
ಹುಡುಗ ಬುದ್ಧಿಯ ಬಿಡಬೇಕೊ ದೃಡದಿ ಮೋಕ್ಷವ ಪಡಿಬೇಕೊ

ದೃಢದಿ ಮೋಕ್ಷವ ಪಡಿಬೇಕೊ ಇದ್ದು ಇಲ್ಲದಾಂಗಿರಬೇಕೊ
ಇದ್ದು ಇಲ್ಲದಾಂಗಿರಬೇಕೊ ದೇಹ ಬಿದ್ದು ಹೋಗುವ ಭ್ರಮೆ ಬಿಡಬೇಕೊ
ತನುಮನ ಗುರುವಿಗೆ ಕೊಟ್ಟು ಘನತಪ್ಪಿಸಿಕೊಂಡಿರಬೇಕೊ
ಜಪತಪ ಮಂತ್ರ ಯಾತಕೆ ಬೇಕೊ ಉಪವಾಸ ಮಾಡುವದು ಸಾಕೊ

ದೇಹದ ಮರ್ಮವ ತಿಳಿಬೇಕಾದರೆ ಮಾದೇವರ ವರವಿರಬೇಕೊ
ನಮನಿಮ ಮನವೊಂದಿರಬೇಕೊ ಮನದಾಗ ನಿಜ ತುಂಬಿರಬೇಕೊ
ಗಾದಿ ಶಾಸ್ತ್ರ ಓದಿ ವಾದ ಮಾಡುವವರಿಗೆ ಹಾದಿ ಇನ್ನೆಲ್ಲಿ ದೊರಿಬೇಕೊ
ಪಂಚಮುಖದ ಸಿವ ಹಂತೆಲೆ ಇರುವಾಗ ಚಿಂತಿ ಇಲ್ಲದಾಂಗಿರಬೇಕೊ

ಪ್ರಪಂಚ ಹಿಡಿದು ಕಂಚಿಪುರಕೆ ಹೋಗಿ ಪಂಚಾಮೃತವನುಣಬೇಕೊ
ಅಂದು ಇಂದು ಸಂದೇಹವ್ಯಾಕೆ ಬಂದ ದಾರಿಯ ನೋಡಲು ಬೇಕೊ
ಚಂದುಳ್ಳ ಮಾರುತಿ ತಂದೆಯಳೊಡನಾಡಿ ಕುಂದಿಲ್ಲದನ್ನವನುಣ ಬೇಕೊ
ಶಿಶ್ವಿನಹಳ್ಳಿಯಲ್ಲಿರಬೇಕು ನಿನ ನೆನಿಸಿದಾಗ ಇಲ್ಲೇ ಬರಬೇಕೊ
ನೆನಸಿದಾಗ ಇಲ್ಲೆ ಬರಬೋಕೊ ಮಾರುತಿ ಸ್ಮರಿಸಿ ಪದಹೇಳಬೇಕೊ

* * *

 

ಪಾಪ ಪುಣ್ಯದ ಪ್ರಶ್ನೆ

ಪಾಪ ಪುಣ್ಯದಾಗ ಜಾಸ್ತಿಯಾವದೆಂದು
ಪ್ರಶ್ನೆ ಮಾಡಿದಳು ಪಾರ‍್ವತಾ
ಪುಣ್ಯದ ಬಲದಿಂದ ಪಾಪ ಹುಟ್ಟಿತು
ಪರಮೇಶ್ವರಾ ಹೇಳಿದಾ ಮಾತಾ

ಹೊನ್ನು ಹೆಣ್ಣು ಆನಂದ ಕೊಟ್ಟಾರಾ
ಬಾಳ್ವೆ ಮಾಡಲಾಕ ಬಲುಸಿಸ್ತಾ
ಮನಿಹೊಲ ಮನಿಮಕ್ಕಳ ಮಾಯದಾಗ
ಈಶ್ವರನ ಬಿಟ್ಟರು ಮರತಾ

ಶಿವಾ ತನ್ನಗ ಶಕ್ತಿ ಕೊಟ್ಟರ
ವಂಕಿ ಸರಗಿ ಮಾಡಿಸೇನಂತ
ಸತ್ತು ಮಾಡಿದ ಅಗಸಾಲೇಗ ಅಂತಾಳೋ
ಏನ ಹೆಸನ ಹಚ್ಯಾನ ಮುತ್ತಾ

ಅಂಥಾ ಶ್ಯಾಣ್ಯಾ ಅಗಸಾಲ್ಯಾ ಹುಟ್ಟಿದಾನಾ
ತಾ ಹ್ಯಾಂಗ ಆದನು ಬುದ್ದಿವಂತ
ಮೂಗ ಹರದ ಮೂಳನ್ನ ಮಾಡಿದರ
ಯಾತರಾಗ ಇಡತಾಳ ನತ್ತಾ

ದೇವರ‍್ಯಾಕ ಮೂಗ ಹರದನೆಂದು ದಿನಾ
ನೆನಸತಾಳು ಮುಚ್ಚಿಗೊಂತಾ
ನತ್ತಿನ ತಕ್ಕೊಂಡು ಅತ್ತಿ ಹೂವಿನ ಸೀರಿಯ
ತಂದಳೋ ನಕ್ಕೊಂತಾ

ಜ್ಯಾಡನ ನೆನೆದು ಸೆರಗ ತೋರಸ್ಯಾಳೋ
ಜರಾ ಹಾಕ್ಯಾನು ಸುತ್ತಮುತ್ತಾ
ನಡ ಮುರದು ಕುಡುಗೋಲು ಮಾಡಿದರ
ಸೀರಿಯಲ್ಲಿ ಹಾಕುತಾಳು ಸುತ್ತಾ

ದೇವರ‍್ಯಾಕ ನನ್ನ ಊನ ಮಾಡ್ಯಾನೆಂದು
ನೆನಸಾಡಿ ಕುಂಟ್ಯಾಡಿಕೊಂತಾ
ಊರ ಮುಂದಿನ ಹೊಲ ಮಾಡಿದನು
ಮೂಡಲ ಹೋರಿಕಟ್ಟಿ ಎತ್ತಾ

ರಂಟಿ ನೇಗಲಿ ನಟ್ಟಕಡಿದು ಗೊಬ್ಬರ
ಓದು ಹಾಕ್ಯಾನೊ ಮಸ್ತಾ
ಮನ ನೋಡುದು ಮಸ್ತ ಬೆಳದೀತು
ಮ್ಯಾಟ ಹತ್ತಿ ನೋಡಿದ ನಿಂತಾ

ನೋಡಿ ಅಂತಾನೊ ಹಿಡಿದೆ
ಆಯಿಗಾರಗ ಕೊಡಬೇಕು ಎತ್ತ
ಮಾಯರೂಪದಿಂದ ಆಗ ಈಶ್ವರ
ಬಂದು ಕುಂತಾ ಮಾತಾಡಿಕೊಂತಾ

ಬೀಳಹೊಲ ಏನ ಬೆಳದೈತಂತಾನೋ
ನೀನ ಕಾಣತೀದಿ ಮಣಿವಂತಾ
ಏನ ಹೇಳತಿ ಎತ್ತು ಅಳಿಗೆ ನೆತ್ತರು
ಇಳಿದಾವು ಎದಿಯಾಗಂತ

ಮೇನತ್ತ ಮಾಡಿ ನೀ ಮಿಕ್ಕಿ ಬೆಳೆದೀತು
ದೇವರು ಹೋದ ಒಳ್ಳೆಯದಂತಾ
ಮುಂದಿನ ವರುಷಕ ಮಸ್ತ ಬದುಕು ಮಾಡಿ
ಬಿತ್ತಿದಾನು ಬೆಳೆದೀತಂತಾ

ಬಿತ್ತಿದ ಬೀಜ ಭೂಮಿ ನುಂಗಿತು
ಕಾಣಲಿಲ್ಲ ಹುಟ್ಟಿದ ಗುರುತಾ
ಆಗ ಈಶ್ವರ ಬಂದ ಕೇಳತಾನೊ
ಬೀಳಯ್ಯಾಕ ಬಿದ್ದೈತಂತಾ

ಏನ ಹೇಳಲಿ ದೇವರ ಮನಸ್ಸಿಗೆ
ಬರಲಿಲ್ಲಾ ಮಾಡಿದ ಗಾತಾ
ಆಡಿದ ಮಾತಿಗೆ ಅನುಭೋಗಿಸೆಂದು
ಮಾಯವಾದನೋ ಭಗವಂತಾ

ನೆಳ್ಳುವಾಗ ನೆನವುದು ಕರೆ ಎಂದು
ಕರಬಲ ಆದಳೊ ಪಾರ‍್ವತಾ
ಶ್ಯಾರ ಕುಂದಗೋಳ ಶಂಭುಲಿಂಗನ
ನಂಬಿವವನು ಆದಾನು ಮುಕ್ತಾ

* * *

 

ಆತ್ಮಲಿಂಗನ ಜಾತ್ರಿ

ಸ್ವಾಮಿ ನಮ್ಮಯ ದೇವಾರ ಬಂದಾರ ಬನ್ನಿರೋ
ಗುರುವೆ ನಮ್ಮಯ ದೇವಾರ ಬಂದಾವು ಬನ್ನಿರೋ
ಆತ್ಮಲಿಂಗನಜಾತ್ರಿ ಆಗತದ ಪ್ರೀತಿಲಿಂದ ಕೇಳರಿಕುಂತಾ

ದೇಹವೆಂಬುದು ತೇರ ಮಾಡಿದನೊ
ರಥಾ ನಡಿಸಿದನೊ ವಾಯುಸುತಾ
ಎರಡು ಪಾದಗಳ ಗಾಲಿ ಮಾಡಿದನೊ
ತೂಕ ಇಟ್ಟಿದಾನೊ ಸಮತೋಲಾ

ಕಾಲುಗಾಲಿಗೆ ಅಚ್ಚು ಹಾಕಿದನೊ
ಸದರ ಸಂದಿಗೆ ಜಡಿದಾನೊ ಕೀಲಾ
ಕರೆಯ ಮಾಡಬಹುದು ತೇರಾ
ಹೆಚ್ಚಿನ್ಯಾವ ಬ್ರಹ್ಮದೇವರಾ

ಒಂದೊಂದು ಕೆಲಸಕ ಒಬ್ಬಬ್ಬರ ನೇಮಿಸಿದರ
ಕುಂತು ನಡಸಿದಾರೋ ಆ ತೇರಾ
ಜಂಗಿನ ಗಡ್ಡಿ ಆತೊ ಇಲ್ಲಿಗೆ
ಬ್ರಹ್ಮನ ಹುನ್ನಾರ ಬಹು ಅಸಲಾ

ಬ್ರಹ್ಮ ಬಡಿಗನಾಗಿ ತೇರ ಮಾಡಿದಾನೊ
ಉಳಿಯ ಬಾಚಿ ಕೈಯೊಳಗಿಲ್ಲಾ
ಮೂರು ಲೋಕಕ ಮೀರಿದಂತವ
ಅವನ ಬುದ್ದಿಗೇನು ಕಡಿಮಿಲ್ಲಾ

ವಿಸ್ತಾರದಿಂದ ನೆಲೆ ಏರಿಸಿದಾನೊ
ಕೊಟ್ಟು ಕಳವಿದಾನೊ ತಾ ಕುಂತ
ದುಂಡು ಬಾಳಿಯ ದಿಂಡಿನಂತವು
ಎರಡು ತೊಡಿಗಳ ಬಹು ಸಾಚಾ

ಚಂಡಿಕಿ ಕಳಸದ ಮೇಲೆ ನಿಶಾನಿ
ನೋಡಿ ಮನಾ ಆದೀತು ಶಾಂತಾ
ತೇರಿನ ಹೊಂದಿಕೆ ಇನ್ನೇನ ಹೇಳಲಿ
ಬಡಿಗ ಕಳಸವನ್ನು ಹೊಂದಿಸಿದ್ದ

ಎತ್ತ ನೋಡಿದರ ಗೊತ್ತು ಹತ್ತದಂಗ
ಗುಪ್ತರೀತಿಲಿಂದ ಮುಗಿಸಿದ್ದ
ಮುನ್ನೂರಾ ಅರವತ್ತು ನರಾ ಹುರಿಯ ಮಾಡಿ
ಅದಕ ಮುರವಳಿ ಗಂಟಿ ತಿರವಿದ್ದ

ಬಿರಿಯ ಬಲಾದಿಂದ ಬಿಗದ ನಿಂತಿತೊ
ಹೋದಾಡುತ್ತಿದ್ದಿಲ್ಲ ಹಿಂದಮುಂದ
ಚರ್ಮ ಎಂಬುದು ಸೆಲ್ಲೆಯ ಮಾಡಿದಾನೊ
ತೇರಿನ ಸುತ್ತಲು ಸುತ್ತಿದ

ಪಂಚತತ್ವವೆಂಬು ಆಯ್ದು ಗುಣಗಳ
ಅರಿವಿನಿಂದ ಸಿಂಗರಿಸಿದ್ದ
ಒಬ್ಬ ಮೂರುವರಿಮಳಾ ಉದ್ದಾ
ಅಳತಿ ತಗೋಳಿರಿ ನೀವು ನಿಂತ

ಗುಣಗಳೆಂಬು ಎರಡು ಉದ್ದಿಗಿ ಮಾಡಿ
ಮೊದಲ ಮಾಡಿದಾನೋ ತಯ್ಯಾರ
ಧ್ಯೆರ್ಯವೆಂಬುದು ನಗಾ ಬಿಗದಾನೊ
ಮೂಕದೊಳಗ ಇರುವ ಆಧಾರ

ಬುದ್ಧಿ ಮನಸು ಇವು ಎರಡು ಕೂಡಿಕೊಂಡು
ತೇರ ಜಗ್ಗಿದಾವೊ ಜೋಡ ಸರಾ
ಬಾಯಲ್ಲಿ ಹೊರಬಿದ್ದ ಶಬ್ದ ವಾಕ್ಯಗಳು
ಆಗ ಹೊಡದಾವೊ ಜಯಕಾರಾ

ಸಪೂರಿ ತೇರಿನ ಹಿಂದೆ ನಿಂದರಿಸಿ
ಊದಿಸ್ಯಾರೊ ಅವರು ಗೋರಸ್ವರಾ
ಭೀಕರೆಂಬುದ ಗದ್ದಿಗೆ ಮಾಡಿ
ಸಿಂಹಾಸನ ರಚಿಸ್ಯಾನೊ ಬಡಿಗ್ಯಾ

ಅಪೂರ್ಣದ ಮೇಲೆ ಮೂರ್ತನಾದನೊ
ಆತ್ಮಲಿಂಗನು ತಾ ಕುಂತ
ವಿಚಾರ ಎಂಬುವ ಮಾರ್ಗವ ಹಿಡದು
ಸಾಗಿ ಬಂತೊ ಭೂಮಿಯ ಮ್ಯಾಲ

ಚಪ್ಪನ್ನ ದೇಶಕ ಒಪ್ಪುವ ತೇರಿದು
ಜನಾ ನೋಡಿ ಆದಿತೋ ಹುಚ್ಚ
ಮೂರು ದಿನದ ಜಾತರಿಯ ಮಾಡಿಕೊಂಡು
ಹೋಗುದಲ್ಲ ಸಣ್ಣಾಗಿ

* * *

 

ಗುರುಮಾರ್ಗ ಬಿಡಬ್ಯಾಡ

ಗುರುವಿನ ಪಾದ ಗಟ್ಟ್ಯಾಗಿ ಹಿಡಿಯೋ
ಗುರುಮಾರ್ಗ ನೀ ಬಿಡಬ್ಯಾಡ
ಹುಡುಗನಾಂಗ ಅಡವಿ ಹಿಡಿಯಲು ಬ್ಯಾಡ
ಕಡುವನಂಗ ತಿರುಗಲು ಬ್ಯಾಡ

ಕುಂತು ಕೇಳು ಸಾಕ್ಷಾತ್ ಹೇಳತೀನಿ
ಭ್ರಾಂತಿಗೆಟ್ಟು ನೀ ತಿರುಗಲು ಬೇಡ
ನಗುತ ಹೇಳತಿನಿ ಸತ್ಯದ ಮಾತ
ಹೇಳಿದರ ಸಿಟ್ಟಿಗೆ ಬರಬ್ಯಾಡ

ಕೆಳಗ ನೋಡಿ ನಡಿಬೇಕೋ ತಮ್ಮ
ಹೆಡಿ ಎತ್ತಿ ತಿರುಗಲು ನೀ ಬೇಡಾ
ಕೂಲಿ ಮಾಡುದು ನಿನ್ನ ಪಾಲಿಗೆ ಇಟ್ಟಾನ
ಅರಸ್ತಾನ ನೀ ಬೇಡ ಬ್ಯಾಡಾ

ನೆಲ ಸಕಲ ಹೊತ್ತು ತಿರುಗುವ ಮಂದಿ ನೋಡಿ
ಉಸಿರುಗಳೆಯಲು ನೀ ಬೇಡಾ
ಹರಕ ಚಾಪಿ ಹಾಸಿಕೊಳ್ಳವರೆಲ್ಲ
ಅರಸ್ತಾನಕ ಆಸೆ ಮಾಡಬ್ಯಾಡಾ

ಅಗಸರ ಮನೆಯೊಳು ಅಡಕ ಅರಬಿ ಹೊತ್ತು
ಸುಳ್ಳು ಬಡಿವಾರ ಮಾಡಬೇಡಾ
ಶಿವ ನಿನ್ನ ಪಾಲಿಗೆ ಸತ್ವವ ಕೊಟ್ಟರೆ
ನನ್ನ ಸರಿ ಯಾರಿಲ್ಲ ಅನಬೇಡಾ

ನಿನ್ನ ಮಡದಿ ಮಾತು ಕೇಳಿ
ತಾಯಿತಂದ್ಗೆ ಹರಿಹಾಯ ಬೇಡಾ
ಕುಡಿದ ಹಾಲಿನ ಕೂನವಿಲ್ಲದೆ
ಅವರ ಮನಸು ನೋಯಿಸಬೇಡಾ

ಕಾಶೀರಾಮೇಸುರ ಅವರೆಂದು ತಿಳಕೊ
ನೀಯೇನು ಕಾಶಿಗೆ ಹೋಗಬೇಡಾ
ಶಿವ ನಿನ್ನ ಪಾಲಿಗೆ ದವಳತನ ಕೊಟ್ಟರೆ
ಬಡವರಿಗೆ ಹಣ ಕೊಡಲು ಮರಿಬೇಡಾ

ಅನ್ನಿಲ್ಲಂತ ಕಿವಿಲೆ ಕೇಳಬ್ಯಾಡ ತಮ್ಮಾ
ಅರ‍್ವಿಲ್ಲಂತ ಕಣ್ಣಿಲೆ ನೋಡಬೇಡಾ
ಸ್ವರ್ಗವು ನಿನ್ನಂಗ ಸರತಿ ಹಾಡಿತು
ದಾನಧರ್ಮಕ ಕೈ ಬಿಡಬೇಡಾ

ಶಿವ ನಿನ್ನ ಪಾಲಿಗೆ ದೊರೆತರೆ
ಹಣಕೊಟ್ಟು ಬಡ್ಡಿ ತಿನಬ್ಯಾಡಾ
ಗುರುವು ಕಲ್ಲು ಕಟಿದು ಬಜನಿ ಮಾಡಂದ್ರೆ
ಮೈ ಮರೆತು ತಿರುಗಲು ನೀ ಬೇಡಾ

ಹಸುಮಗನಾ ತುಸು ಹೇಳತೀನಿ
ತಿಳಕೊಂಡು ಹೇಳೋ ನಿನ ಮನದಾಗ

* * *

 

ನಾನೆಂಬುದು ನರಕ

ನಾನೆಂಬುದು ನರಕದ ಪ್ರಾಪ್ತಿ
ಗರವಿನ ಮಾತೊಂದು ಬಿಡಬೇಕೊ
ಗುರುವಿನ ಹೊರತು ಮತ್ತ್ಯಾರಿಲ್ಲ
ಚರಣಕೆ ಚಿತ್ತವನಿಡಬೇಕೊ

ಶಿವಕೊಟ್ಟ ಕಾಲಕ್ಕೆ ದಾನಾಧರ್ಮ
ಪುಣ್ಯದ ವಾಸನೆ ಇರಬೇಕೊ
ಉಂಡದ್ದು ಉಟ್ಟದ್ದು ಕೊಟ್ಟದ್ದು
ಲಾಭದೊಳಗೆ ಲಾಭ ಅನಬೇಕೊ

ಪರಸ್ತ್ರೀಯರು ಇದರಿಗೆ ಬಂದರೆ
ಅವರು ನಮತಾಯಿ ಸರಿ ಅನಬೇಕೊ
ತನ್ನ ದೇಹಾ ತಾನೆ ಸುಟ್ಟರೆ
ಅವನೆ ಸಾಧು ಅನಬೇಕೊ

ತನ್ನ ಬಡತನ ತನ್ನಲ್ಲಿ ಇದ್ದರೆ
ವಚನಕ ಪ್ರಾಣವ ಕೊಡಬೇಕೊ
ಊರ ಹೊರಗಿನ ಮೂರುವರಿಮೊಳ ಜಗ
ನಮ್ಮದ ಅಂತ ಎನಬೇಕೊ

ಸಿವ ಕರದ ಕಾಲಕೆ ಮೇಲಕೆ ಹೋಗಿ
ವಂದಿನ ಜಡತಿಯ ಕೊಡಬೇಕೊ
ಪುಂಡ ನವಲಗುಂದ ಗಂಡಮೆಟ್ಟ ನೋಡ
ನಾಗಲಿಂಗನ ನೆನಿಬೇಕೊ

ಕಂಡಿತ ಮಾತಿಗಿ ವಾದ ಹಾಕುವ
ಭಂಡರ ಗೋಷ್ಠಿಯ ಬಿಡಬೇಕೊ

* * *

 

ನೀತಿ ಮಾತು

ಅಕ್ಕತಂಗಿಯರೆಲ್ಲ ಏಕ ರೀತಿ ಚಿತ್ತದಿಂದ
ಅಕ್ಕರತಿಲಿ ಕೇಳರೆವ್ವ ಕುಂತ
ಹೆಣ್ಣಮಕ್ಕಳಾಗಿ ಹುಟ್ಟಿ ಬಂದ ಮ್ಯಾಲ
ಹ್ಯಾಂಗ ಆಗತೀರಿ ನೀವು ಮುಕ್ತ

ಮದವೀಗಂಡನ ಅಂಶ ಮನೆಯ ದೇವರೆಂದು
ಪಾದಸೇವೆ ಮಾಡರಿ ನಿರ್ತ
ಪಾದ ತೊಳೆದು ಪಾದೋದಕವ ಕುಡಿರೆವ್ವ
ಅದರಾಗೈತರಿ ನಿಮಮುಕ್ತಿ

ಚೆಲುವನಿಲ್ಲವೆಂದು ಜರಿಯ ಬ್ಯಾಡರಿ
ಅದರಾಗ ನಿಮಗ ಮುಕ್ತಿ
ಬಡವ ಗಂಡನಿದ್ದರ ದುಡದ ತಂದ ಹಾಕಬೇಕ
ಜೋಪಾನ ಮಾಡಬೇಕ ನಗನಗತ

ಮಂಗಳಸೂತ್ರ ಇದ್ದರ ಸಾಕ
ಬೇಡಬಾರ‍್ದು ಬಂಗಾದ ವಸ್ತಾ
ಹತ್ತು ಸಾವಿರ ವಸ್ತ ಇಟ್ಟರ ಏನು
ನತ್ತು ಇಲ್ಲದಿದ್ದರ ವ್ಯರ್ಥ

ಮೂಗುತಿ ನತ್ತ ಮಂಗಳಸೂತ್ರ
ಪ್ರಾಣನಾಥ ಗಂಡನ ಗುರ್ತ
ರೂಡಿಲಿ ಗಂಡ ಚಲುವ ಇಲ್ಲದಿದ್ದರ
ಹೋಗಿ ಸೇರತಾರ ತವರೂರ

ಕುಂಟನೆವಾ ಹೇಳಿ ತಂಟೆ ತೆಗೆಯತಾರ
ಹೇಳಲಾಕ ಬಂದರ ಹಿರಿಯರಾ
ಹಿರಿಯರು ಬಂದು ಕರೆಮಾತ ಹೇಳಿದರ
ಬೇದು ಕಳಸತಾರ ಬೆರಕಿಯವರಾ

ಹೇಳಿದಂಗ ಕೇಳು ಗಂಡನಿದ್ದರ
ಪೂರಾ ಹೆಂಗಸರ ಅಧಿಕಾರ
ಮೂಕ ಕುರಿಯಂಗ ಮುನ್ನೋಡಿ ಬೀಳಂತ
ಕಣ್ಣಕಿಸದು ಮಾಡತಾರ ಜಬರ

ಜಬರಮಾಡಿ ಜಗ್ಗಿ ಜೋಲಿ ಹೊಡೆಯತಾರ
ಅವರಿಗಿಲ್ಲ ಗಂಡರಸ ಕಬರ
ಅತ್ತಿ ಮನಿಗೆ ಹೋಗಿ ಅಂಜಿ ನಡೆಯಬೇಕು
ತವರವರಿಗ್ಹೇಸರ ತರಬೇಕ

ಕೆಟ್ಟ ಗುಣಗಳೆಲ್ಲ ಬಿಟ್ಟು ಬಿಡರೆವ್ವ
ಗಟ್ಟ್ಯಾಗಿ ಮಾಡತೀನಿ ನಮಸ್ಕಾರ
ಅನಾಚಾರದಿಂದ ಅಡವಿ ಕೂಡಬ್ಯಾಡ್ರಿ
ಹಿಡಿಯರೆವ್ವ ಧರ್ಮದ ಗುರತ

ರಾಮದೇವರ ಹೆಂಡತಿ ತಾನೆ ಸೀತಾದೇವಿ
ಪತಿಲಿಂದ ಪಡದಾಳೊ ಸಂಪತ್ತಾ
ಗಂಡಗಂಜದ ಮಿಂಡ ರಂಡ್ಯಾರು
ಹಿಂಡಗಟ್ಟಿ ತಿರುಗುವರೊ ಪೂರಾ

ಆ ರಂಡ್ಯಾರನ ಹಿಡದ ಕಡಿಯಬೇಕ ಸೀದಾ
ಇಲ್ಲದಿದ್ದರೆ ಸೆರಗ ಹರದು ಬಿಡಬೇಕ ಪೂರಾ
ಬ್ರಹ್ಮರೆಲ್ಲರೂ ಧರ್ಮವಂತರು
ಬ್ರಹ್ಮ ಆಜ್ಞೆ ಬಲ್ಲವರೊ

ಅನಾಚಾರದಿಂದ ಅಡವಿಕೂಡತಾರ
ಹಿಡಿಯಲಿಲ್ಲ ಧರ್ಮದ ಗುರತ
ಬೋಳ್ಯಾರಾಗಿ ನಾರುಮಡಿ ಉಡುದುಬಿಟ್ಟು
ಬೇಡತಾರ ಹೊಸ ಪೀತಾಂಬರಾ

ಆಚಾರಗೆಟ್ಟು ಅಡ್ಡದಾರಿ ಹಿಡಿದು
ಗುಡ್ಡ ತುಳಿಯತಾರ ತಿಳಿಯದವರಾ
ಕೆಟ್ಟಗುಣಗಳೆಲ್ಲ ಬಿಟ್ಟು ಬಿಡರೆಂತ
ಗುಟ್ಟಾಗಿ ಮಾಡತೀನಿ ನಮಸ್ಕಾರ

ಕರಿಯಪ್ಪ, ಪರಸಪ್ಪ ಇವರಿಬ್ಬರೂ
ಬುದ್ಧಿವಂತನ ಸೇವಕರೊ

ಜಂಗಮನಿದ್ದಾ ಜಗದೊಳಗವ್ವಾ
ಜಂಗಮನೋಳು ಜಗವೆಲ್ಲಾ
ಆಕಾರ ಮಾಡಿಕೊಂಡು ಬಂದೆವ್ವಾ
ನಿರಾಕಾರ ಮಾಡಿಕೊಂಡು ಕುಂತೆವ್ವಾ

ಶಾಂತ ಚಿತ್ತದಿಂದ ಆದಾನವ್ವಾ
ಅದು ಏಕಮುಖವಾಯ್ತು ಶಾಂತವ್ವಾ
ಅನುಮಾನವಿಲ್ಲದೆ ಸನ್ಮಾನವಿಲ್ಲದೆ
ತನುಮನ ಯೋಚನೆ ಬಿಡರೆವ್ವಾ

ಒಂಬತ್ತು ಪುರದೊಳು ಹೋದ ಪುರುಷನು
ಕುಂಬಿನಿಗಿಳಿದು ಬಂದಾನವ್ವಾ
ಅಂಬಿಕಾಮುಖಿಯರೆ ನಂಬಿಗೆಯಿಂದಲಿ
ಸಾಂಬನಿವನೆಂದರಿರೆವ್ವಾ

ಬಂದ ವಿಧರಿಗಿನ್ನು ಸಂದೇಹವ್ಯಾಕೆ
ಬಂದಾನ ಭವಗಳ ಕಡಿರೆವ್ವಾ
ಮುಂದಿನ್ನ ಹುಡಕಿದರೆ ಎಂದಿಗೆ ಸಿಕ್ಕಾನು
ಮಂದಮತಿಯಾಗುದು ಬಿಡಿರೆವ್ವಾ

ಎಲ್ಲದರಲ್ಲೆ ಇರುವವನವ್ವಾ
ಮುಂದೆ ಇಲ್ಲೆ ನುಡಿಯುವನೊ
ಆರು ಭಾಗದಲ್ಲಿದ್ದವನವ್ವಾ
ಅರರಲಾಡುತ ಐದಾನವ್ವಾ

ಆರರಲಾಡುತ ಐದಾನವ್ವಾ
ಅರಿಗೆ ಸಿಗದಂಗೈದವನವ್ವಾ
ಶೂನ್ಯ ಸ್ಥೂಲ ಜಂಗಮನವ್ವಾ
ಸ್ನಾನಕ ಬಂದಾನ ನೋಡವ್ವಾ

ಧರಿಯೊಳು ಸೆಟ್ಟರ ಸಿವನವ್ವಾ
ಅರವಿನೊಳರವು ಹಿಡಿಯವ್ವಾ
ಪರಿಪರಿ ಕಷ್ಟವು ನೋಡವ್ವಾ
ಪರಸಿವನಿಗೆ ಕೈವೊಡ್ಡವ್ವಾ

ಧರೆಯೊಳು ಶಿಶ್ವಿನಹಳ್ಳಿ ವಾಸವ್ವಾ
ಆತನ ದಯದಿಂದ ಹೇಳೆನವ್ವಾ