ವಚನ :

ಆಗ್ಗೆ ದಶರಥನು ಕಟಗಿ ಕುಳ್ಳನು ಆರಿಸಿ ತಾಳಿಯನ್ನು ಹಾಕಿ ಶವವನ್ನು ಅದರ ಮೇಲಿಟ್ಟು ಬೆಂಕಿ ಹಚ್ಚಿದಾಗ, ದುಃಖ ಸಹಿಸದ ಧರಣಿಕೇಶನು ತನ್ನ  ಸತಿಸಹಿತ ಚಿತೆಯಲ್ಲಿ ಹಾರಿದಾಗ ದಶರಥನು ಅನ್ನುತ್ತಾನೆ ಏನೆಂದರೆ –

ಪದ :

ನನ್ನಕ್ಕ ನನ ಅಳಿಯನ ಬಿಟ್ಟು
ನನ್ನ ಜಲ್ಮ ಹೆಚ್ಚಿನದಲ್ಲ
ನನ್ನ ಜಲ್ಮ ಹೆಚ್ಚಿನದಲ್ಲ | ಅಂತ
ತನ್ನ ಜಲ್ಮದ ಆಶೆಯು ಇಲ್ಲ         || ೧೦೭ ||

ಎಚ್ಚರಿಲ್ಲದೆ ಕಿಚ್ಚು ಜಿಗಿಯಲು
ಕಿಚ್ಚುಗಣ್ಣ ಮೆಚ್ಚಿದನಲ್ಲ
ಕಿಚ್ಚುಗಣ್ಣ ಮೆಚ್ಚಿದನಲ್ಲ | ಮನ
ಮೆಚ್ಚಿ ವರಬೇಡೆಂದನಲ್ಲ   || ೧೦೮ ||

ಬೇಡ ಬೇಡ ಅವರು ಮೂವರು ಬದುಕಲಿ
ಮಾಡುವೆ ಸೇವೆಯ ತ್ರಿಕಾಲ
ಮಾಡುವೆ ಸೇವೆಯ ತ್ರಿಕಾಲ | ಅಂತ
ಹಿಡಿದಾನೊ ಅವ ಶಿವನ ಕಾಲ       || ೧೦೯ ||

ನೋಡಿರಿ ನಿಮಗ ಯಾವ ಒಡವಿ ಬೇಕಂತ
ಮೃಡನು ಹೇಳಿ ತಗಸಿದ್ದನಲ್ಲ
ಮೃಡನು ಹೇಳಿ ತಗಸಿದ್ದನಲ್ಲ | ಅಂಥ
ಪದವಿಗೆ ನಡೆದಾರೊ ಅವರೆಲ್ಲ       || ೧೧೦ ||

ಪ್ರಾಲಬ್ಧದ ಬರಿಭೋಗ ತಪ್ಪಿಸುವರು
ಯಾರಿಲ್ಲ ಈ ಧರಿಯ ಮ್ಯಾಲ
ಯಾರಿಲ್ಲ ಈ ಧರಿಯ ಮ್ಯಾಲ | ಆ
ಮುರಾರಿನು ಬಿಟ್ಟಿಲ್ಲ ಇದು ಮೊದಲ || ೧೧೧ ||

ಪಾಪರಹಿತ ಈ ದೀಪದ ಕಲಿಯು
ರೂಪತ್ಯಾವದೊಳಗಿನ ಕೀಲ
ರೂಪತ್ಯಾವದೊಳಗಿ ಕೀಲ | ಈ
ದೀಪದಲ್ಲಿ ಮುಗನೂರ ಸ್ಥಲ          || ೧೧೨ ||

* * *

 

ಪತಿಭಕ್ತೆ ಅನಲಾದೇವಿ

ಆದಿಯಲಿ ಕೇಳತ್ರಿ ಋಷಿಯ ಸತಿ
ಅನಸೂಯಾ ಈ ದೇವಿಯು |
ಮಕ್ಕಳಿಲ್ಲದೆ ಮೋಕ್ಷವಾಗದು
ಎಂಬ ಶ್ರುತಿಯನು ಕೇಳುತಲಿ       || ೧ ||

ಸತಿಯು ಭಕ್ತಿಯ ಮಾಡುತಲಿ
ಹನ್ನೆರಡು ಸಾವಿರ ವರುಷದಲಿ |
ತಪವ ಮಾಡುತ ತಲೆಯ ಕೇಶದಿ
ಪುತ್ರಿಯಂ ಸಲೆ ಪಡೆದಳು || ೨ ||

ವಚನ :

ಪೂರ‍್ವಕಾಲದಲ್ಲಿ ಅತ್ರಿಮಹರ್ಷಿಯ ಪತ್ನಿ ಅನುಸೂಯಾದೇವಿಯು ಪತಿಭಕ್ತಿ ಪರಾಂಗಿತಳಾಗಿರ್ದು, ಮಕ್ಕಳಿಲ್ಲದವರಿಗೆ ಮೋಕ್ಷವಾಗದೆಂಬ ಶ್ರುತಿಯನ್ನು ಕೇಳಿ, ಹನ್ನೆರಡು ಸಾವಿರ ವರ್ಷದವರೆಗೆ ಮಹಾದೇವನನ್ನು ಭಜಿಸಿ, ಅವನ ವರದಿಂದ ಅನಲೆ ಎಂಬ ಹೆಣ್ಣು ಮಗಳನ್ನು ಕೇಶದಿಂದ ಪಡೆದಳು.

ಪದ :

ಸಾದರದಿ ಸಾಕಿರ್ದಳನಲೆಯು
ಕನಸಿಲಾದರು ಮದುವೆಯನು |
ಒಲ್ಲೆನೆಂದು ಕಲ್ಲುಮನಸು ಮಾಡಲು
ಆಕಾಶವಾನಿಯಾದುದೇನು          || ೩ ||

ತರುಣಿ ರತ್ನವೇ ಕೇಳು ಪಣಿಯಲಿ
ಹೆಳವ ಪತಿಯು ಇರುವನು |
ಪುರುಷನೊಲ್ಲದೆ ಇರಲು ಬಿಡುವುದೆ
ಎನಲು ಚಿಂತೆಯ ಮಾಡಿದಳು      || ೪ ||

ವಚನ :

ಈ ಪ್ರಕಾರವಾಗಿ, ಪ್ರೀತಿಯಿಂದ ಜೋಪಾನಮಾಡಿದ ಮಗಳು ಕನಸಿನಲ್ಲಿಯಾದರೂ ಕೂಡಾ ಮದುವೆಯನ್ನು ಮಾಡಿಕೊಳ್ಳಬಾರದೆಂದು ಗಟ್ಟಿ ಮನಸ್ಸು ಮಾಡಿ ಇರುತಿರಲಿಕ್ಕೆ. ಒಂದಾನೊಂದು ದಿವಸ ಆಕಾಶವಾನಿಯಾದುದೇನೆಂದರೆ – ಎಲೈ ಸ್ತ್ರೀರತ್ನವೇ ನೀನು ಗಂಡನನ್ನು ಒಲ್ಲೆನೆಂದರೆ ಬಿಟ್ಟಿದ್ದಲ್ಲ. ನಿನ್ನ ಹಣಿಲಿಖಿತದಲ್ಲಿ ಹೆಳವಪತಿ ಘಟಿಸಿರುವನು. ಗಂಡನನ್ನು ಒಲ್ಲೆನೆಂದರೆ ಬಿಡುವುದೇ ವಿಧಿಯು ಎನಲು ಘಾಬರಿಗೊಂಡು ಚಿಂತೆಯನ್ನು ಮಾಡಹತ್ತಿದಳು.

ಪದ :

ತಡೆಯದಲಿ ಸಂಕೋಚಮಾಡುತ
ಅಡವಿ ಅಡವಿಯು ತಿರುಗುತ |
ಪೊಡವಿಪತಿ ಹಿಮಗಿರಿಯ ಈಶನ
ಅಡಿಗೆ ತಪವನು ಮಾಡುತ || ೫ ||

ಇರಲು ಹಿಮಗಿರಿಯಲ್ಲಿ ಅನಲೆಯ
ವಿರತಿ ಬೆಳೆದುದು ಘನತರವು |
ಪರಮ ಪುಣ್ಯಳು ಹಸಿವು ತೃಷೆಯ
ಅರುಹನವಳು ಮರೆದಿರ್ದಳು        || ೬ ||

ವಚನ :

ಆಗ್ಗೆ, ಮನಸ್ಸು ತಡೆಯದೆ ತಾಪಗೊಂಡು ಅಡವಿ ಅರಣ್ಯವ ತಿರುಗುತ್ತ, ತಂದೆ ತಾಯಿಗಳನ್ನಗಲಿ ಕಡೆಗೆ ಹಿಮಾಚಲ ಪರ್ವತಕ್ಕೆ ಹೋಗಿ ಅಲ್ಲಿ ಈಶ್ವರನನ್ನು ಕುರಿತು ತಪಸ್ಸು ಮಾಡುತ್ತ, ವಿರಕ್ತಿ ಬೆಳೆದು ಘನತರವಾದ ತಪಸ್ಸಿನಿಂದ ಅನಲಾಂಬಿಕೆಯು ಹಸಿವು ತೃಷೆ ಎಲ್ಲವನ್ನು ಮರೆತು ತಪದೊಳಗೆ ಇದ್ದಳು.

ಪದ :

ಇರಲು ಆಕೆಯ ತಾಯಿಯಾದ
ಅನುಸುಯಾ ಈ ದೇವಿಯು |
ಪತಿಯ ಪಾದವ ನಿತ್ಯ ತೊಳೆಯುತ
ಅತಿಶಯ ಸಂತೋಷದಿ ಇರುತ     || ೭ ||

ಹಿತದಿ ಉದಕವ ತನ್ನ ತಲೆಯಲಿ
ನಿತ್ಯ ಪ್ರೋಕ್ಷಿಸಿಕೊಳ್ಳುತಲಿ |
ಅತಿತ್ವರದಿ ಚಳಿಗಿರಿಯ ದೆಶೆಗೆ
ಸುತೆಯ ಕಡೆಗೆ ತಾನ ಚಲ್ಲಿದಳು    || ೮ ||

ವಚನ :

ಹೀಗಿರಲು, ಆಕೆಯ ತಾಯಿಯಾದ ಅನಸೂಯಾದೇವಿಯು ನಿತ್ಯಕರ್ಮದಂತೆ ಪತಿಯ ಪಾದವ ತೊಳೆದು ಆ ಪಾದೋದಕವನ್ನು ತನ್ನ ತಲೆಯ ಮೇಲೆ ಸಿಂಪಡಿಸಿಕೊಳ್ಳುತ್ತಿದ್ದಳು; ಹಾಗು ಸ್ವಲ್ಪವನ್ನು ಬಾಯಲ್ಲಿ ಹಾಕುತ್ತಿದ್ದಳು. ಆ ದಿನ ಹೀಗೆ ಮಾಡಿದ್ದಲ್ಲದೆ ಮಗಳು ಐದುನೂರು ಹರದಾರಿಯ ಮೇಲೆ ತಪಶ್ಚರ್ಯಕ್ಕೆ ಕುಳಿತಿದ್ದ ಹಿಮಾಲಯ ಪರ್ವತದ ದಿಕ್ಕಿನ ಕಡೆಗೂ ಸಿಂಪಡಿಸಿದಳು.

ಪದ :

ಪತಿಯ ಕಾಣುತ ನಿತ್ಯನೇಮವ
ತಪಶ್ವಿನೀ ಆ ದಿಸೆಗೆಯೂ |
ಬಿಸುಟ ಪರಿಯನು ಹೇಳಬೇಕೆಂದು
ಎನಲು ಅನಲೆಯ ತಪವದು         || ೯ ||

ಸುಟ್ಟು ಜಠರಾಗ್ನಿಯಲಿ ಹೋಗುವದು
ಎಂದು ಪಾದದ ಉದಕವ |
ತಳಿದನನೆ ಬೆರಗಾಗಿ ಇದು
ಎಂದು ಆಡದನಾತನು     || ೧೦ ||

ವಚನ :

ಆಗ್ಯೆ, ಅನುಸುಯಾದೇವಿಯ ಗಂಡನಾದ ಅತ್ರಿಮಹರ್ಷಿಯು – ಹೇ ಸತಿಯೇ, ನೀನು ನಿತ್ಯ ನೇಮದಂತೆ ಮಾಡದೆ ಇವತ್ತಿನ ದಿವಸ ಹಿಮಾಲಯ, ಪರ್ವತದ ಕಡೆಗೆ ಪಾದೋದಕವನ್ನು ಸಿಂಪಡಿಸಿ ಕಾರಣವನ್ನು ಹೇಳಿಂದೆನಲು; ಹೇ ಪ್ರಾಣ ರತ್ನಾ, ಮಗಳಾದ ಅನಲಾದೇವಿಯನ್ನು ಜಠರಾಗ್ನಿ ಬಾಧಿಸುತ್ತಿದ್ದು ತಪಸ್ಸು ಕೆಡುವುದೆಂದು ಪಾದೋದಕವನ್ನು ಸಿಂಪಡಿಸಿದೆನು. ಈಗ ಅದು ಆರಿ ಶಾಂತವಾಯಿತೆಂದು ನುಡಿದಳು. ಇದನ್ನು ಅತ್ರಿಋಷಿ ಕೇಳಿ – ಆಕೆ ಅಲ್ಲಿ, ನೀನು ಇಲ್ಲಿ; ನೀನು ಸಿಂಪಡಿಸಿ ಪಾದೋದಕದಿಂದ ಜಠರಾಗ್ನಿಯು ಆರೆತೆನ್ನುವ ಮಾತು ಪುಸಿಎಂದನು. ಅದಕ್ಕೆ ಅನುಸುಯಾದೇವಿಯು ಹೇಳಿದ್ದೇನೆಂದರೆ – ಎನ್ನೊಡೆಯ ಮುನಿರಾಯನೆ ನಿಮ್ಮ ಭಕ್ತಿಯ ದಯದಿಂದಲೂ ಹಾಗು ಆ ಶ್ರೇಷ್ಠವಾದಂತಹ ಪಾದೋದಕದಿಂದಲೂ ಅಗ್ನಿಯು ಶಾಂತವಾಯಿತು. ಮನ್ನಿಸು, ಗುಣವಾಗಿದೆ ಎನಲು ಅತ್ರಿಋಷಿಯು ತನ್ನ ಮಗಳಾದ ಅನಲಾದೇವಿಯು ಚನ್ನಾಗಿ ಇದ್ದಾಳೋ ಇಲ್ಲವೋ ಎಂಬುದನ್ನು ನೋಡಿ ಈ ಮಾತು ಪರೀಕ್ಷಿಸಬೇಕೆಂದು ದಂಪತಿಗಳೀರ‍್ವರು ಮಗಳಿದ್ದ ಹಿಮಾಲಯ ಪರ್ವತಕ್ಕೆ ಬಂದರು.

ಪದ :

ನೋಡಿ ಶೆಕೆ ಶಾಂತವಾದದು
ಸತಿಯು ಪತಿವೃತೆ ಎಂಬುದು |
ಮನಕೆ ಖಾತ್ರಿಯ ಮಾಡಿಕೊಂಡು
ಮಗಳೆ ಮಾತಾಡೆಂದನು  || ೧೧ ||

ಬಹಳ ತಪವ ಮಾಡ್ವದರಿಂದ
ಹುರುಳು ಏನಿಲ್ಲವೆಂದನು |
ಪೇಳುವೆ ಕಜ್ಜೆ ಫಲವು ದೊರೆಯುವ
ತಿಳಿದು ಕೇಳೆಂದ್ಹೇಳ್ದನು    || ೧೨ ||

ವಚನ :

ಅಲ್ಲಿ ಮಗಳ ಒಡಲಬೆಂಕಿಯು ಶಾಂತವಾದುದನ್ನು ನೋಡಿ ಅನುಸೂಯಳು ಬಹು ಪತಿವೃತೆಯುಳ್ಳವಳೆಂದು ಮನಸ್ಸಿಗೆ ಖಾತ್ರಿಮಾಡಿಕೊಂಡು ಮಗಳನ್ನು ಮಾತಾಡಿಸಿ; ಎಲೈ ಪ್ರೀತಿಯ ಮಗಳೆ, ನಿನಗೆ ಪತಿ ಇಲ್ಲದೆ ಗತಿಯಾಗಲಾರದೆಂದೂ, ಬರಿ ಗೋರ ತಪಸ್ಸು ಮಾಡಿ ಪ್ರಯೋಜಜವಿಲ್ಲೆಂದೂ ಹೇಳಿ ಪತಿ ಸೇವೆಯೇ ತಪಸ್ಸು, ದೈವದಲ್ಲಿದ್ದುದು ಎಲ್ಲಿಗ್ಹೋದರೂ ಬಿಡುವುದಿಲ್ಲ. ನಿನಗೆ ಕಲ್ಯಾಣವಾಗುವ ದಾರಿಯನ್ನು ಹೇಳುತ್ತೇನೆ. ವಿಚಾರಮಾಡಿ ನೋಡಿ ನನ್ನ ಮಾತು ಕೇಳು; ಎಂದು ಅನಲೆಯ ತಂದೆಯಾದ ಅತ್ರಿಋಷಿ ಮಗಳಿಗೆ ಬುದ್ಧಿ ಹೇಳಿದನು.

ಪದ :

ಬಹಳ ಪರಿಯಲಿ ಹೇಳಿ ಬುದ್ಧಿಯ
ಘೋರಮುನಿ ಎಂಬ ಹೆಳವನು |
ಕರುಣಾತ್ಮಕನೆಂದು ಲಗ್ನವ
ಮಾಡ್ದರಂ ಮತ್ತ್ಹೇಳ್ದರು    || ೧೩ ||

ಪತಿಯ ಸೇವೆಯ ಮಾಡುತನುಜೆಯೆ
ಹಿತವು ಆಗ್ವದು ನಿನಗೆಯು |
ಗತಿಯು ದೊರೆವುದು ಎಂದು ಬುದ್ದಿಯ |
ಹೇಳ್ದರಂ ಬಿಟ್ಟೋದರಂ    || ೧೪ ||

ವಚನ :

ಹೀಗೆಂದು ನಾನಾಪರಿಯಲಿ ಬುದ್ಧಿಹೇಳಿ ಘೋರಮುನಿ ಎಂಬ ಹೆಳವನಿಗೆ ಮಗಳನ್ನು ಕೊಟ್ಟು ಲಗ್ನಮಾಡಿ ಮಗಳಿಗೆ ಹೇಳಿದ್ದೇನೆಂದರೆ – ಮಗಳೆ ಪತಿ ಸೇವೆಯನ್ನು ಮಾಡು. ಗಂಡನೆ ದೇವರೆಂದು ತಿಳಿ. ಅಂದರೆ ನಿನಗೆ ಮೋಕ್ಷವಾಗುವುದೆಂದು ಹೇಳಿ. ಗಂಡ ಹೆಂಡರನ್ನು ಬೀಳ್ಕೊಟ್ಟು ಋಷಿಯು ತನ್ನ ಹೆಂಡತಿಯೊಡನೆ ಹೊರಟು ಹೋದನು.

ಪದ :

ಇತ್ತಳನಲೆಯು ಗಂಡನಂ
ಹೊತ್ತು ಕೊಂಡಳು ಹೆಗಲಲಿ |
ಕತ್ತಲೆನ್ನದೆ ಪೃಥ್ವಿಯಲಿ
ಮತ್ತೆ ಪ್ರಯಾಣವ ಮಾಡ್ದಳು        || ೧೫ ||

ಕಡೆಗೆ ಕಲ್ಯಾಣಪುರಕೆ ಬಂದಳು
ಗೃಹವ ಕೇರಿಗಳ್ ನೋಡ್ದಳು |
ಬರಲು ಆ ಪಥಬಿಟ್ಟು ಮುಂದಿನ
ಮಾರ್ಗ ಹಿಡಿದೇ ಹೋದಳು         || ೧೬ ||

ವಚನ :

ಇತ್ತ ಅನಲಾದೇವಿಯು ತನ್ನ ಗಂಡ ಘೋರಮುನಿಯನ್ನು ತನ್ನ ಹೆಗಲ ಮೇಲೆ ಕೂಡ್ರಿಸಿಕೊಂಡು ಹಗಲು ರಾತ್ರಿ ಎನ್ನದೆ ಪ್ರಯಾಣ ಮಾಡುತ್ತಿರಲು; ಕಡೆಗೆ ಕಲ್ಯಾಣ ಪಟ್ಟಣಕ್ಕೆ ಬಂದು ಆ ಊರಲ್ಲಿಯ ಮನೆಗಳನ್ನು ನೋಡುತ್ತ ಕೇರಿಯಲ್ಲಿ ಬರುತ್ತಿರಲು; ಒಮ್ಮಿಂದೊಮ್ಮೆಲೆ ಮಾರ್ಗ ಬದಲಿಸಿ ಬೇರೆ ಮಾರ್ಗ ಹಿಡಿದು ನಡೆದಳು.

ಪದ :

ಸುತ್ತಿ ಹೋಗುವ ತೆರನ
ವಿಸ್ತರದಿಂದ ಹೇಳೆಂತೆಂದನು |
ಚಿತ್ತದೊಲ್ಲಭ ಕೇಳು ಹರುಷದಿ
ಬಿತ್ತರಿಸುವೆ ಕಥೆಯನು     || ೧೭ ||

ಚಂದದಿಂ ವಂದನೆಯ ಮಾಡಿ
ಹೇಳಲಿಕ್ಕನುವಾದಳು |
ಕೇಳು ವಲ್ಲಭ ಹೇಳುವೆನು
ಈ ಪುರದೋಳಿರುವಂಥ ಸೂಳೆಯು || ೧೮ ||

ಬಹಳ ಚೆಲುವೆಯು ಪದ್ಮಾವತಿ
ಎಂಬ ನಾಮದಿಂದ ಮೆರೆವಳು |
ಅವಳ ಸ್ನಾನದ ಕೀಳು ಜಲವನು
ದಾಂಟಬಾರದು ಎನ್ನುತ   || ೧೯ ||

ತವಕದಿಂ ನಾ ಹೊರಳಿ ಬಂದೆನು
ವಿವೇಕದಿಂ ತಿಳಿಯೆಂದಳು |
ಹೆಗಲ ಮೇಲಿನ ಹೆಳವ ನುಡಿದನು
ಸುಗುಣ ಸತಿಯೆ ನೀನೀಗ  || ೨೦ ||

ಈಗಳೆ ಇಲ್ಲದೆ ಪದ್ಮಾವತಿಯ-
ನಗೊದಗುವಂತೆ ಮಾಡೆಂದನು |
ಪತಿಯ ಆಜ್ಞೆಯ ಮೀರಿದರೆ ಮುಂದೆ
ಪಾಪ ತಗಲುವದೆನ್ನುತಾ  || ೨೧ ||

ವಚನ :

ಅಂದಿನ ರಾತ್ರಿ ಹನುಮಂತ ದೇವರ ಗುಡಿಯಲ್ಲಿ ಗಂಡನನ್ನು ಬಿಟ್ಟು, ಗಣಿಕಾ ಸ್ತ್ರೀಯಳ ಬಾಗಿಲಿಗೆ ಬಂದು, ಅವಳ ಅಂಗಳವ ಸಾರಿಸಿ ರಂಗವಲ್ಲಿಯನಿಟ್ಟು, ಹೊಸ್ತಿಲಿಕೆ ಕುಂಕುಮವನಿಟ್ಟು, ಯಾರಿಗೂ ಗೊತ್ತಾಗದಂತೆ ತಿರುಗಿ ತನ್ನ ಗಂಡನಿದ್ದ ಸ್ಥಳಕ್ಕೆ ಹೋಗುವಂಥವಳಾದಳು. ಮರು ದಿವಸ ಸೂರ್ಯೋದಯಕ್ಕೆ ಸೇವಕಳು ನೋಡಿ ತನ್ನೊಡತಿಗೆ ಈ ಸಂಗತಿಯನ್ನರುಹಲು, ಆಕೆಯೂ ಆಶ್ಚರ್ಯಪಟ್ಟು ನಾಳಿನ ರಾತ್ರಿಯಲ್ಲಿ ರಂಗವಾಲಿಯ ಹಾಕಲಿಕ್ಕೆ ಬರುವವರು ದೇವಾನು ದೇವತೆಗಳಾದರೂ ಬಿಡದೆ ತನ್ನ ಕಡೆಗೆ ಕರೆತರುವದೆಂದು ತನ್ನ ಸೇವಕಳಿಗೆ ಆಜ್ಞೆವಿಧಿಸಿದಳು. ಹಿಂದಿನ ದಿನದಂತೆ ಅನಲಾದೇವಿ ನಿಶಿ ಬಲಿತ ಮೇಲೆ ರಂಗವಲ್ಲಿಯನ್ನಿಡಲು ಬರಲು; ಸೇವಕಳು ಆಕೆಯನ್ನು ಹಿಡಿದು ಕರಕೊಂಡು ತಮ್ಮೊಡತಿ ಪದ್ಮಾವತಿಗೆ ಒಪ್ಪಿಸುವಂಥವಳಾದಳು.

ಪದ :

ನೀನು ಪರಮೆಯು ಗಣಿಕೆಯರಂಗಳ
ಸಾರಿಸಿದ ಪರಿಯನು ಸಾನುರಾಗದಿ |
ಪೇಳು ಎಂದು ಪದ್ಮಾವತಿ ನುಡಿಯಲು
ಅದಕನಾಂಬಿಯು ನುಡಿದಳು        || ೨೨ ||

ಎನ್ನ ಕಾಂತನು ನಿನಗೆ ಮುದದಿ
ಮನಸೋತನಾಗಿರುವನು |
ಬಂದೆ ನಾನು ನಿನ್ನ ಗೃಹಕೆ
ಎಂದು ಮತ್ತೆಯು ನುಡಿದಳು        || ೨೩ ||

ಇಂದು ಪತಿಯ ಇಷ್ಟವನ್ನು
ಚಂದದಿಂ ಮಾಡೆಂದಳು |
ಒಲ್ಲದಿರ್ದೊಡೆ ಪ್ರಾಣಕೊಡುವೆನು
ಕಣಿ ನೀ ಎಂದಳು || ೨೪ ||

ಸೊಲ್ಲು ಕೇಳುತ ರೂಪಸಿಯು
ಕರುಣದಿಂದ ಇತೆಂದಳು |
ಕುಂಟ ಗಂಡನ ಸೇವೆಯು ನಿನಗೆ
ಅಂಟಿಕೊಂಡ ಕಾರಣ      || ೨೫ ||

ಕುಂಟಲಗಿತ್ತಿಯಾಗಿ ನೀ
ಟೊಂಕಕಟ್ಟಿ ನಿಂತಿರುವಿಯಾ |
ನಿನ್ನ ಅಂದದಿ ಪತಿಯ ಭಕ್ತಿಯ
ಮಾಳ್ಪರಂ ನಾ ಕಾಣೆನು   || ೨೬ ||

ಸಂದೇಹವಿಲ್ಲದೆ ಇಂದು ನೀ
ಕರಕೊಂಡು ಬಾ ಎಂದಳು |
ಅಂದಮಾತ ಕೇಳಿ ಅನಲಾಂಬಿಕೆಗೆ
ಹರುಷವು ನೂರ‍್ಮಡಿಯಾಯಿತು      || ೨೭ ||

ಬಂದು ಕಾಂತನ ಮುಂದೆ ಎಲ್ಲವ
ಪೇಳಿ ಮರುದಿನ ಸಂಜೆಗೆ |
ಹೊತ್ತು ಹೆಗಲಲಿ ಪದ್ಮಾವತಿಯ
ಶಯನ ಮಂಚಕ ಇಳಿಸಿದಳು        || ೨೮ ||

ಮತ್ತೆ ಮಂಚದ ಮೇಲೆ ಕೂಡ್ರಿಸಿ
ಹೊರಗೆ ಬಾಗಿಲು ಕಾಯ್ದಳು |
ಸರಸಿಜಾನನೆ ಪದ್ಮಾವತಿಯು
ಹರುಷದಿಂದ ಸವಿಮಾತನು         || ೨೯ ||

ವರ ಪರಿಮಳಗಳನು ತೀಡಿ
ವೀಳ್ಯವನು ಇತ್ತಳು |
ಸ್ಮರನ ಯುದ್ದದಿ ಭರದಿ ಶಾಂತಿಯ
ಮಾಡಿ ಸ್ನೇಹದಿ ಅಪ್ಪಿದಳು || ೩೦ ||

ವಚನ :

ತದನಂತರ ಅನಲಾಂಬಿಕೆಯು ಬಾಗಿಲು ತೆರೆದು ಪತಿಯನ್ನು ಹೊತ್ತುಕೊಂಡು ಆ ಘೋರವಾದ ನಿಶೆಯಲ್ಲಿ ಮಾರ್ಗಕ್ರಮಿಸುತ್ತಿರುವಾಗ, ಮಾರ್ಗದಲ್ಲಿ ಮಾಂಡವ್ಯನೆಂಬ ಋಷಿಯು ತಪವಗೈಯ್ಯುತ್ತಿರಲು ಅವನ ಚರಿತ್ರೆ ಪೇಳ್ವೆನು.

ಪದ :

ಅವನ ಹೆಂಡರು ಇಬ್ಬರಿದ್ದರು
ಚಪಲೆ ಚಂಚಲೆ ಎಂಬುವರು |
ಅವಿವೇಕಿ ಇದ್ದರು ಪತಿಯ ತಪಕೆ
ವಿಘ್ನವ ಮಾಡುತಿರ್ದರು    || ೩೧ ||

ಮುನಿಯು ಅವರನು ಬಿಟ್ಟು ವೈರಾಗ್ಯದಿ
ವನದೊಳು ಇರಲು ಹೆಂಡರು |
ಬಿಡದೆ ತೊಣಚಿಗಳಾಗಿ ಕಿವಿಯಲಿ
ಕಡಿಯುತ ಕಷ್ಟ ಕೊಡುತಿರ್ದರು     || ೩೨ ||

ವಚನ :

ಆಗ ತಪಕೆ ವಿಘ್ನವ ತರಲು, ಅವನ (ಮಾಂಡವ್ಯ ಋಷಿಯ) ಚಿತ್ತ ಪಲ್ಲಟವಾಗಲು, ಅಪಾರ ಸಿಟ್ಟಿನಿಂ ಸತಿಯರಿಗೆ ಮುಳ್ಳಿನಿಂದೊತ್ತಿ ಚುಚ್ಚಿದನಾತನು. ಸತಿಯರುಗಳ ಸತ್ತ ಮೇಲೆ ಮುನಿಯ ಕೋಪ ಶಾಂತವಾಗಿ ಅತಿತ್ವರತದಿ ವಿಚಾರಬಂದು ಚಿಂತೆಯನ್ನು ಮಾಡ್ದನು. ಕೊಂದವಗೆ ಕೊಲೆ ತಪ್ಪದಿದನಾ ಮಂದಮತಿ ಇದನೇನು ಮಾಡಿದೆ; ಎಂದು ಚಿಂತೆಗೈಯ್ಯುತ್ತ ಮತ್ತೆ ಮುಂದೆ ತಪವನು ಮಾಡುತ್ತಾ ಇರಲು ಆಕಾಶವಾಣಿಯಾದುದೇನೆಂದರೆ – ವರ ಶೂಲಕಿಕ್ಕಿದವನಿಗೆ ಶೂಲ ತಪ್ಪದು ಎಂದು ಸಂಕಲ್ಪ ಕೇಳಿದ ಮೇಲೆ –

ಪದ :

ಆಗ ಮಾಂಡವ್ಯ ಮುನಿಯು
ಬೇಗ ಘಾಬರಿಯಾಗುತಾ |
ಗಗನ ವಾಕ್ಯದಂತೆ ಈಗ
ನನಗೆ ತಪ್ಪದು ಎಂದು     || ೩೩ ||

ಮೇಣದ ಶೂಲ ಮಾಡಿ ನೆಲದಿ
ನಡಸಿದನು ಆತನು |
ಬಂದ ಬಾಧೆಯ ಕಳೆಯಬೇಕು
ಎಂದು ಹಾಯ್ದನಾತನು    || ೩೪ ||

ಬರಿಯ ಮೇಣದ ಶೂಲ ಹೋಗಿ
ಖರೆಯ ಕಬ್ಬಿಣವಾಯಿತು |
ಪರಮಪಾತಕ ತಪ್ಪದೆಂದು
ಹೊರಳಿ ಬಿದ್ದನಾತನು      || ೫೫ ||

ಇರಿದು ಶೂಲವು ಬೆನ್ನಿನೊಳುಮೂಡಿ
ಘಾಯ ಮಾಡಿತಾತನಿಗೆ |
ಮರಮರನೆ ಮರಗುತ್ತ ಮನದಲಿ
ತಪವ ಮಾಡುತ ಇರ್ದನು || ೫೬ ||

ವಚನ :

ಬರೀ ಮೇಣದಿಂದ ಮಾಡಿದ ಶೂಲ ಹೋಗಿ ಖರೇ ರೀತಿಯಿಂದ ಉಕ್ಕಿನ ಶೂಲವಾಗಿ ಮಾಡಂವ್ಯಋಷಿಯ ಹೊಟ್ಟೆಯೊಳಗಿಂದ ಹಾಯ್ದು ಬೆನ್ನಿಗೆ ನಡಲು; ನಾನು ಮಾಡಿದ ಪಾಪವು ಹೇಗೆ ಮಾಡಿದರೂ ಹೋಗೆಲಿಲ್ಲವೆಂದು ಅನೇಕ ರೀತಿಯಿಂದ ಕಷ್ಟಪಟ್ಟು ಮತ್ತೂ ತಪಸ್ಸುಮಡುತ್ತ ಕುಳಿತನು.

ಪದ :

ಇತ್ತ ಅನಲಾದೇವಿಯು ಕಾಂತನ
ಹೊತ್ತು ಹೆಗಲಲಿ ಚಂದದಲಿ |
ಕತ್ತಲಲಿ ವನದಲ್ಲಿ ಮತ್ತೆಯು
ಮಾರ್ಗ ಹಿಡಿದೇ ಬರುತಲಿ || ೩೭ ||

ಅನಿತರೊಳಗೆ ಅವಳ ನಲ್ಲನ
ಚರಣವು ಮಾಂಡವ್ಯಗೆ |
ಘನತರದಿ ಬಡಿಯಲ್ಕೆ ಕೋಪದಿ
ಶಾಪಿಸಿದನು ಬಹು ಆತನು          || ೩೮ ||

ಎನ್ನ ನೋಯಿಸಿದವರ ಶಿರವು
ಇನ್ನು ದಿನಮಣಿ ಉದಯಕೆ |
ಮನ್ನಣೆ ಇಲ್ಲದೆ ಸಹಸ್ರಹೋಳು
ಆಗಲೆಂದು ಶಪಿಸಲು       || ೩೯ ||

ಆಗ ಅನಲಾದೇವಿ ಅದನನು
ಕೇಳಿ ಮನದಲಿ ನಡಗುತಾ |
ಭೋಗ ಎಂತಿಹುದೋ ಎಂದು
ಚಿಂತೆ ಮಾಡುತ ಕುಳಿತಳು         || ೪೦ ||

ವಚನ :

ಮರುಕ್ಷಣವೆ ಅನಲಾದೇವಿಯು ಹೊತ್ತು ಉದಿಸಬೇಡೆಂದು ಸೂರ್ಯಗೆ ಎತ್ತಿ ಕೈಮುಗಿದು ಶಿವನಾಣೆ ಇಟ್ಟು ಮಾರ್ಗಕ್ರಮಿಸುತ್ತಿರಲು, ದಿನಮಣಿಯು ಅನಲಾಯಿಯ ಆಣೆಗೆ ನಡಗುತ್ತ ಗುಪ್ತದಿಂದ ಕುಳಿತ. ಒಂದು ಪಕ್ಷ ಕಾಲದವರೆಗೆ ಕತ್ತಲು ಕವಿಯಲು ಅಂದು ವಿಭುದರು ಸುರಪನೊಡಗೂಡಿ ಮೊರೆ ಇಟ್ಟರೈ ಶಂಕರನಿಗೆ. ಸೂರ್ಯನ ಕಿರಣವ ಕಾಣದೆ ಎಮ್ಮಯ ಕರ್ಮಂಗಳು ನೆರೆ ಕೆಟ್ಟವೆಂದು ವಿಷಮಗೊರಳನು ಅವರ ವಾಕ್ಯವ ಕೇಳಿ ಸಂತೈಸಲು ಭುವಿಗೆ ಬಂದನು.

ಪದ :

ಶಿವನು ಅನಲಾದೇವಿಗೆಯು
ಪ್ರತ್ಯಕ್ಷವು ಆಗುತ |
ಯುವತಿರತ್ನವೆ ರವಿಯ ಆಣೆಯ
ತವಕದಿಂ ತೆಗೆ ಎಂದನು   || ೪೧ ||

ಅನಲೆಯು ಅವಸರದಿಂದ ಶಿವನಿಗೆ
ನಮಿಸಿ ಎಲ್ಲವ ಪೇಳ್ದಳು |
ದಿನಮಣಿಯೆ ನೀ ಉದಿಸು ಎಂದು
ಆಣೆಯಂ ನೆರೆಕೊಂಡಳು   || ೪೨ ||

ಅಣೆಕೊಂಡಾಕ್ಷಣಕೆ ಸೂರ್ಯನು
ಕಾಣುವಂಥವನಾದನು |
ಮಾಣದೆಯು ಅನಲಾಯಿಯ ದೇವನ
ಮಸ್ತಕವು ಒಡೆದ್ಹೋಯಿತು || ೪೩ ||

ತ್ವರಿತದಿ ಪರಮೇಶ್ವರನು ಹಸ್ತವ
ಹರಿದ ಶಿರದಲಿ ಇಟ್ಟನು |
ಭರದಿ ಷೋಡಶರೂಪದ
ಪರಮ ಪುರುಷನು ಆದನು || ೪೪ ||

ವಚನ :

ಹರನು ಅನಲಾದೇವಿಗೆ ವರವು ಬೇಡೆಂದಾಗ, ಭರದಿ ಶೂಲದಿ ಇರಿದು ಕೊಂಡಿಹ ಸತಿ ಪತಿಗಳೆಲ್ಲರನು ಕರುಣದಿಂದಲಿ ಸಲಹು ಎನ್ನಲು, ಸರ್ವರನು ಜಗದೀಶನು ಹರುಷದಿಂದಲಿ ಬೇಡಿದಂತೆ ಕೊಟ್ಟು ಕಾಯುವಂಥವನಾದನು.

ಪದ :

ಇತ್ತ ಆಕಾಶ ಮಾರ್ಗದಿ
ಬಂದುದೈ ವಿಮಾನವು |
ಭಕ್ತರನು ಕರಕೊಂಡು ಹೋಗಲು
ಪುಷ್ಪವೃಷ್ಟಿಯು ಕರೆದುದು  || ೪೫ ||

ಪತಿಯು ಅಗಲದೆ ಅನಲಾದೇವಿಯು
ಮುಕ್ತಿಯನು ಸಲೆ ಪಡೆದಳು |
ಹಿತದಿ ಶಿವ ಶಿವ ಎನ್ನುತಲಿ
ಮಾರ್ಗ ಹಿಡಿದೇ ನಡೆದಳು || ೪೬ ||