ವಚನ :

“ನಪುತ್ರಸ್ಯ ಗತಿರ್ನಾಸ್ತಿ’, ಎಂಬಂತೆ ಮಕ್ಕಳಿಲ್ಲದೆ ದುಃಖದಿಂದ ಪರಿತಪಿಸುತ್ತಿರುವಾಗ ಆ ಮುಕ್ಕಣ್ಣನು ತನಗೆ ಪುತ್ರರತ್ನ ದಯಪಾಲಿಸಿದನೆಂದು ಪೂಜಾರಿ ಹರ್ಷಪಟ್ಟು ತನ್ನ ಸುದತಿಯ ಕೈಗೆಕೊಟ್ಟ. ಆ ಸೊಕ್ಕುಜವ್ವನೆಯಾದ ಪೂಜಾರಿಯ ಹೆಂಡತಿಯು ಚಿಕ್ಕಮಗುವಿಗೆ ಗುರುಭಕ್ತನೆಂದು ನಾಮಕರಣ ಮಾಡಿ ಬಹುಪ್ರೀತಿಯಿಂದ ಜೋಪಾನಮಾಡುತ್ತಿರಲಾಗಿ, ಬಾಲಕನು ಬಿದಿಗೆಯ ಚಂದ್ರನಂತೆ ಬೆಳೆದು ಹದಿನಾರು ವರ್ಷಪ್ರಾಯದವನಾಗಿ ಬೆಳೆಯುತ್ತಿರುವಾಗ ಆದದ್ದೇನೆಂದರೆ –

ಪದ :

ದಿನ ದಿನ ಪೂಜಾರಿ ಪೂಜೆಗೆ ಹೋಗುವ
ಬೇನೆಬಂದು ಮಲಗಿದ ತಾನು
ಬೇನೆಬಂದು ಮಲಗಿದ ತಾನು | ಆ
ಭಾನುಧರನ ಪೂಜೆಗೆ ನಿತ್ಯ ||       || ೫೦ ||

ಮಗನ ಕರೆದು ತಆ ಸೊಗಸಿಲೆ ಹೇಳತಾನು
ಮಗನೆ ಪೂಜೆಮಾಡು ಈ ಹೊತ್ತು
ಮಗನೆ ಪೂಜೆಮಾಡು ಈ ಹೊತ್ತು | ಈಗ
ಹರನಲ್ಲಿಗೆ ಹೋಗೋ ನೀ ಅಂತ    || ೫೧ ||

ತಂದಿ ಮಾತ ಕೇಳಿ ಬಂದನು ಬಾಲ
ಚಂದ್ರಧರನ ಪೂಜೆಗೆ ಎಂತ
ಚಂದ್ರಧರನ ಪೂಜೆಗೆ ಎಂತ | ತಾ
ಮಂದಾರ ಮಲ್ಲಿಗೆ ತರುವುತ        || ೫೨ ||

ಮೃತ್ಯುಂಜಯನ ಗುಡಿಹತ್ತಿ ನೋಡತಾನ
ಸುತ್ತೆಲ್ಲ ಹೊಲಸು ವಿಪರೀತ
ಸುತ್ತೆಲ್ಲ ಹೊಲಸು ವಿಪರೀತ | ಸಿಟ್ಟ
ಹತ್ತಿ ಬಾಲಕ ನೋಡುತ    || ೫೩ ||

ಮದಿಯ ಮಲ್ಲನ ಇದಿರಿಗೆ ನಿಂತು
ಮುಸುರೆ ಹೆಂಗ ಮಾಡದರಂತ
ಮುಸುರೆ ಹೆಂಗ ಮಾಡಿದರಂತ | ಅಂತ
ಬೆದರಿಸಿ ಬಡಿತಾನ ಬೇಯುತ್ತ       || ೫೪ ||

ಯಾವ ದೇಶದವರು ಯಾರು ಹೇಳಿರಿ
ದೇವರಗುಡಿ ಮಾಡಿರಿ ನಾತ
ದೇವರಗುಡಿ ಮಾಡಿರಿ ನಾತ | ಅಂತ
ಬಾಯಿಮೇಲೆ ಹೊಡದಾನು ನಿಂತ  || ೫೫ ||

ಸತಿಪತಿ ಈರ‍್ವರು ಕ್ಷಿತಿಗೆ ಬಿದ್ದು ಈ
ಸುತಗೆ ಹೇಳಿ ದುಃಖದಿ ಕುಳಿತಾ
ಸುತಗೆ ಹೇಳಿ ದುಃಖದಿ ಕುಳಿತಾ | ಎಲೊ
ಮತಿವಂತ ಪರದೇಶಿ ತಾವಂತ     || ೫೬ ||

ಬಡಿಯಬ್ಯಾಡ ನಿನ್ನ ಅಡಿಗೆ ಬೀಳುವೆವು
ಬಡವರ ಮೇಲಿಡು ನಿನ ಮಮತೆ
ಬಡವರ ಮೇಲಿಸು ನಿನ ಮಮತೆ | ಅಂತ
ಗಡಿಬಡಿಸುತ ಅಳತಾರೊ ಕುಂತ   || ೫೭ ||

ವಚನ :

“”ಹಣೆಯ ಬರಹವ ಮೀರಿ ನಡೆದೇನಂದರೆ ತೃಣಗಿರಿಗಿದು ಅಳವಲ್ಲ” ಎಂಬ ನೀತಸಾರದಂತೆ, ಚಂದ್ರಧರಮಲ್ಲೇಶನ ಅಡಿಗೆ ಬರುವಾಗ್ಗೆ ಮಂದಮತಿ ಅರಸನ ಹೆಂಡಿತಯ ಮಾತು ಕೇಳಿ ಬಂಧುರವಾದ  ಅಂಧಕ ಸರ್ಪನ ಕೊಂದ ಕಾರಣ ತಮಗೆ ಈ ಗತಿಯಾಯಿತೆಂದು ಅಂಧಕರಾದ ಧರಣಿಕೇಶಿರಾಜ ಹಾಗೂ ಆತನ ಸತಿಯು ಆ ಪೂಜಾರಿಯ ಕಂದಗೆ ಹೇಳುತ್ತಾರೆ ಏನಂದರೆ –

ಪದ :

ಧರೆಯೊಳು ಕೇರಳ ದೇಶದ ಅರಸರು
ಹರನಲ್ಲಿಗೆ ಬಂದೆವು ಮೊದಲಾ
ಹರನಲ್ಲಿಗೆ ಬಂದೆವು ಮೊದಲಾ | ನಾವು
ವರಮಗನನು ಪಡೆಯಲು ಬಾಲ    || ೫೮ ||

ಇಷ್ಟ ಕೇಳುತ ಆ ದಿಟ್ಟಬಾಲ
ರಟ್ಟೆಹಿಡಿದು ಒಗೆದನು ಬಾಲ
ರಟ್ಟೆ ಹಿಡಿದು ಒಗೆದನು ಬಾಲ | ಒಳೆ
ಗಟ್ಟಿಸಿ ಬಯ್ಯತಾನು ಸಿಡುಕೀಲೆ     || ೫೯ ||

ಇದನ ನೋಡಿ ತಾ ಅಲ್ಲೆ ನಿಂತಿರುವ
ಮುದುಕಿ ಕಂಡು ಬಂದಾಳಲ್ಲ
ಮುದುಕಿ ಕಂಡು ಬಂದಾಳಲ್ಲ | ಎಲೊ
ಹದಗೇಡಿ ಹಡದವರ ಗುರುತಿಲ್ಲ     || ೬೦ ||

ಹಡೆದ ತಾಯಿತಂದಿ ಬಡಿದರ ನಿನಗ
ಕಡೆಗೆ ನರಕ ಆಗ್ವದು ಮೂಲ
ಕಡೆಗೆ ನರಕ ಆಗ್ನದು ಮೂಲ | ಆದನು
ತಡೆದು ಹೇಳಿ ಹಿಡಿದಾಳೊ ಕಾಲ    || ೬೧ ||

ವಚನ :

ದೇವಸ್ಥಾನದಲ್ಲಿ ಹೊಲದು ಮಾಡಿರುವ ಅಂಧಕರನ್ನು ನೋಡಿ ಗುರುಭಕ್ತನು ಕೆರಳಿ ಅವರನ್ನು ಹೊಡೆಯಲುದ್ಯುಕ್ತನಾದಾಗ ಓರ್ವ ಮುದುಕಿ ಅಲ್ಲಿಗೆ ಬಂದು ಗುರುಭಕ್ತನಿಗೆ ಅಂಧಕರೀರ‍್ವರು ನಿನ್ನ ತಾಯಿ ತಂದೆಯಾಗಿರುವರಲ್ಲದೆ ಮತ್ತಾರು ಅಲ್ಲ ಎಂದು ಅವರ ವೃತ್ತಾಂತವನ್ನು ಹೇಳುತ್ತಾಳೆ ಏನಂದರೆ –

ಪದ :

ನಿನ್ನ ಪಡೆಯಲಿಕ್ಕೆ ತನ್ನ ದೇಶದಿಂದ
ಚನ್ನಮಲ್ಲನಿಗೆ ಬರುವುತ್ತ
ಚನ್ನಮಲ್ಲನಿಗೆ ಬರುವುತ್ತ | ತಮ
ಕಣ್ಣು ಹೋಗಿ ಕುಳಿತಾರೋ ಮರತ || ೬೨ ||

ಹೊಟ್ಟೆಗನ್ನಯಿಲ್ದ ಕಷ್ಟಬಿಟ್ಟು ಗುಡಿ
ಕಟ್ಟೆಯ ಮೇಲೆ ಹಡೆಯುತ್ತ
ಕಟ್ಟೆಯ ಮೇಲೆ ಹಡೆಯುತ್ತ | ಮೈ
ತಟ್ಟಿ ಮರಿಸ್ಯಾರು ಸುತ್ತಮುತ್ತ       || ೬೩ ||

ಅದೇ ಸಮಯದಿ ಮಲ್ಲನ ಪೂಜೆಗೆ
ಮುದದಿ ಪೂಜಾರಿ ಬರವುತ
ಮುದದಿ ಪೂಜಾರಿ ಬರವುತ | ತನ
ಸುದತಿಗೆ ನಿನ್ನ ಕೊಡವುತ || ೬೪ ||

ಅಕ್ಕರದಿಂದ ನಿನ ಜೋಕೆ ಮಾಡಿದರು
ಚಕ್ಕನೆ ತಿಳಿ ಇದು ಕರೆಮಾತಾ
ಚಕ್ಕನೆ ತಿಳಿ ಇದು ಕರೆಮಾತಾ | ಈ
ಮುಕ್ಕಣನ ಆಣಿ ಐತಂತ   || ೬೫ ||

ಮುದುಕಿ ಮಾತು ಕೇಳಿ ಬೆದರಿನಿಂತ ಮೈ
ಗದಗದ ನಡುಗಿದ ಗುರುಭಕ್ತ
ಗದಗದ ನಡುಗಿದ ಗುರುಭಕ್ತ | ಹೋಗಿ
ಎದುರಿಗೆ ನಿಂತು ಕೇಳತಾನ ತುರ್ತು         || ೬೬ ||

ವಚನ :

“ಹಿರಿಯರ ಮಾತು ಕೇಳದವರು ಹರಕ ಅರಿವೆಯ ಸಮಾನ’. ಒಳ್ಳೇದು, ಇವರು ಯಾರಿರುವರು ಮಾತಾಡಿಸಿ ನೋಡುವಾ ಎಂದು ಭರಭರನೆ ಅಂಧಕರಲ್ಲಿಗೆ ಬಂದು ಏನಯ್ಯ ತಮ್ಮದಾವೂರು ಮತ್ತು ಇಲ್ಲಿಗೆ ಏತಕ್ಕೋಸ್ಕರವಾಗಿ ಬಂದಿರುವಿರೆಂದು ಗುರುಭಕ್ತನು ಕೇಳಲು ಅಂಧಕನು ಅನ್ನುತ್ತಾರೆ ಏನಂದರೆ –

ಪದ :

ಅಪ್ಪ ಮಗನೆ ನಮ ತಪ್ಪ ಸೈರಿಸು
ತಪ್ಪದೆ ಹೇಳತೇವಿ ಮೊದಲಿಂದ
ತಪ್ಪದೆ ಹೇಳತೇವಿ ಮೊದಲಿಂದ | ನೀ
ತಪ್ಪದೀ ಕೇಳೊ ಮುದದಿಂದ        || ೬೭ ||

ಕೇರಳ ದೇಶದ ಅರಸ ನನಗ ಜನ
ಧರಣಿಕೇಶ ಅನುವರು ಕಂದ
ಧರಣಿಕೇಶ ಅನುವರು ಕಂದ | ಈ
ತರುಣಿ ನನಗೆ ಹೆಂಡತಿಯೆಂದ      || ೬೮ ||

ನೀಲಕಂಠನಲಿ ತರುಳನ ಬಿಕ್ಷೆಗೆ
ಸತಿಪತಿ ಬಂದೆವು ಊರಿಂದ
ಸತಿಪತಿ ಬಂದೆವು ಊರಿಂದ | ನಮ್ಮ
ಮತಿಯು ಹೋಗಿ ಆದೆವು ಮಂದ   || ೬೯ ||

ಶಶಿಧರನ ಗುಡಿಯಲಿ ಹಡದಾಳೊ ಕಂದ
ಶಿಸುವಿನ ಮೃಗ ಒಯ್ದಾವೊ ಕಂದ
ಶಿಸುವಿನ ಮೃಗ ಒಯ್ದಾವೊ ಕಂದ | ಸಣ್ಣ
ಕೂಸು ನಮಗೆ ಸಿಗಲಿಲ್ಲ ಮುಂದ    || ೭೦ ||

ಅಂದಿನಿಂದ ನಾವು ಇಂದಿನವರೆಗೆ
ಕಂದುಗೊರಳನಲಿ ಬೇಡಿ ಮುಂದ
ಕಂದುಗೊರಳಿನಲಿ ಬೇಡಿ ಮುಂದ | ಬಹು
ಬಂಧನ ಪಡೆದೆವು ಮಗನಿಂದ       || ೭೧ ||

ವಚನ :

ಆ ವೃದ್ಧಳು ಹೇಳಿದಂತೆ ಇವರಾದರೂ ಅದೇ ಸಂಗತಿಯನ್ನು ಹೇಳುತ್ತಾರೆ. ಇವರು ರಾಜರೆಂದು ಹೇಳುವ ಮಾತು ನಿಜವಿದ್ದಲ್ಲಿ ಇವರ ಗರ್ಭದಲ್ಲಿ ಜನಿಸಿದ ತನಗೆ ಬಲಗಾಲದಲ್ಲಿ ರಾಜಚಿಹ್ನೆವಿರಲಿಕ್ಕೆಬೇಕೆಂದು ಪರೀಕ್ಷಿಸಲಾಗಿ ಏನಾಯಿತೆಂದರೆ –

ಪದ :

ಪಾದದಲ್ಲಿ ಪಲ್ಲಕ್ಕಿ ಚಿಹ್ನವು
ಮೋದದಿಂದ ಕಾಣುತಲಾಗ
ಮೋದದಿಂದ ಕಾಣುತಲಾಗ | ನಾ
ಹಾಗಿ ಬಿಟ್ಟೆನೆಂದು ಮನದಾಗ       || ೭೨ ||

ತಡೆಯದೆ ಬಡವರ ಅಡಿಗೆರಗಿ ನಿಮ
ಹುಡುಗ ನಾನಿರುವೆ ಕರುಣಿಸಿರಿ
ಹುಡುಗ ನಾನಿರುವೆ ಕರುಣಿಸಿರಿ | ಬಂದು
ಅಡರಾಸಿ ತೆಕ್ಕಿಯ ಬಿದ್ದನು || ೭೩ ||

ಚಿಕ್ಕಬಾಲನು ಅತುಳ ದುಃಖದಿಂದ
ಬಿಕ್ಕಬಿಕ್ಕಿ ಅಳತಾನೊ ಬೇಗ
ಬಿಕ್ಕಿಬಿಕ್ಕಿ ಅಳತಾನೊ ಬೇಗ | ನಾ
ದಿಕ್ಕೇಡಿ ಖಬರಿಲ್ಲದ ಮಗ  || ೭೪ ||

ಮರವೆಲಿಂದ ನಾ ಹೊರಗದೂಡಿದೆನು
ತರುಳನೆತ್ತಿ ನಿಮ್ಮ ಬಗಲಾಗ
ತರುಳನೆತ್ತಿ ನಿಮ್ಮ ಬಗಲಾಗ | ನಾ
ಬಹಳ ಪಾಪಿ ಆದೆನು ಈಗ || ೭೫ ||

ವಚನ :

ದರಿದ್ರನು ಒಮ್ಮಿಲೆ ಅಪಾರವಾದ ದ್ರವ್ಯವನ್ನು ಪಡೆದಷ್ಟು ಸಂತೋಷವಾದಂತೆ ಆ ದಂಪತಿಗಳಿಗೆ ತಮ್ಮ ಪುತ್ರನನ್ನು ಪಡೆದಾಗ ಆಯಿತು. ಆಗ ಅವರು ಮಗನಾದ ಗುರುಭಕ್ತನಿಗೆ ಕೇಳಿದ್ದೇನೆಂದರೆ – ಅಯ್ಯಾ ಇಷ್ಟ ದಿವಸ ನಮ್ಮನ್ನು ಕಷ್ಟಕ್ಕೆ ಗುರಿಮಾಡಿ ನೀನು ಅದಾವಲ್ಲಿಗೆ ಹೋಗಿದ್ದಿ ಎಂದಾಗ ಗುರುಭಕ್ತ ಅನ್ನುತ್ತಾನೆ ಏನೆಂದರೆ –

ಪದ :

ಗೊತ್ತಿಲ್ಲದ ಪೂಜಾರಿ ತೊತ್ತಾಗಿ ಬೆಳೆದೆ
ಪೃಥ್ವಿಪಾಲ ಕೇಳಲೊ ಅರಸ
ಪೃಥ್ವಿಪಾಲ ಕೇಳಲೊ ಅರಸ | ನಮ
ಪೃಥ್ವಿಗೆ ಹೋಗುನು ಈ ದಿವಸ       || ೭೬ ||

ಸೋಸಿ ಹೇಳ್ರಿ ನಮ ದೇಶದ ಕೂನ
ನಾಸ ಆತೊ ನಿಮ ವನವಾಸ
ನಾಶ ಆತೊ ನಿಮ ವನವಾಸ | ಈ

ಕೂಸ ನಿಮ್ಮ ಮಗ ಬಹು ಸರಸ     || ೭೭ ||

ಕೇಳಿ ಬಡವರಾಗ ಹೇಳತಾರ ಮಗನಿಗೆ
ತಾಳುತ ಮನದಲಿ ಸಂತೋಷ
ತಾಳುತ ಮನದಲಿ ಸಂತೋಷ | ಒಳೆ
ಬಾಳುವಂತ ಮಗ ನಮ್ಮ ಕೂಡ     || ೭೮ ||

ವಚನ :

ಅಯ್ಯಾ ಕುವರನೆ, ನಮ್ಮ ದೇಶವು ತೆಂಕಣ ದಿಕ್ಕಿನಲ್ಲಿರುವ ಕೇರಳವು. ಅದನ್ನು ಕೇಳಿ ಗುರುಭಕ್ತನು ಪರಮೇಶ್ವರನ ಕೈಯೊಳಗಿನ ದಂಡುಕೋಲು ತೆಗೆದುಕೊಂಡು ಹಿಂದು ಮುಂದು ನೆಲವುಕಟ್ಟಿ ಅದರಲ್ಲಿ ತಂದೆ ತಾಯಿ ಕೂಡ್ರಿಸಿಕೊಂಡು ತಂದೆ ಹೇಳಿದ ದಿಕ್ಕನ್ನು ಅನುಸರಿಸಿಕೊಂಡು ಬರುತ್ತಿರುವಾಗ ಆದ ಕಥಾ ಏನಂದರೆ –

ಪದ :

ಸುತ್ತ ಅಡವಿಯಲ್ಲಿ ಮೆತ್ತಿದ ಇಂಜನ
ಗೊತ್ತಿಲ್ಲದ ದಾರಿಯ ಕೂನ
ಗೊತ್ತಿಲ್ಲದೆ ದಾರಿಯನ ಕೂನ | ತಾನು
ಹೊತ್ತು ನಡೆದನು ಗುರುಭಕ್ತನು      || ೭೯ ||

ಹತ್ತಿ ಗುಡ್ಡ-ಗವಿ ಸುತ್ತಲು ಕೊಳಗಳು
ಸುತ್ತ ತಿರುಗುವ ಹುಲಿಗಳನು
ಸುತ್ತ ತಿರುಗುವ ಹುಲಿಗಳನು | ತಾ
ಹೊತ್ತು ಹತ್ತುತ ಬೆಟ್ಟವನು || ೮೦ ||

ದಾರಿಲ್ಲ ಬಟ್ಟಿಲ್ಲ ಊರ ಗುರ್ತಿಲ್ಲ
ಘೋರ ಕಾನನದಿ ನಡೆದಾನ
ಘೋರ ಕಾನನದಿ ನಡೆದಾನ | ಈತಗ
ಯಾರ‍್ಯಾರು ಇಲ್ಲ ಜತ್ತಿನಾ || ೮೧ ||

ಕಿರಿಯ ಮಗನು ತಾ ಕುಡುಡರ ಹೊತಗೊಂಡು
ಗುರುಭಕ್ತನು ಬರತಲಿ ತಾನು
ಗುರುಭಕ್ತನು ಬರುತಲಿ ತಾನು | ಆಗ
ನೀರಡಸಿ ನೀರ ಬೇಡ್ವರು ಮಗನ   || ೮೨ ||

ಅಡವಿಜಾಗ ನಡುರಾತ್ರಿ ಸುತ್ತಮುತ್ತ
ಗಿಡದಗುಂಪು ನೋಡಿ ನಿಂತಾನ
ಗಿಡದಗುಂಪು ನೋಡಿ ನಿಂತಾನ | ಬಹಳ
ಗಡಿಬಡಿಸ್ಯಾನು ಮನದಲಿ ತಾನು   || ೮೩ ||

ಶ್ರೇಷ್ಠಮಲ್ಲ ನನಗೆ ಇಷ್ಟು ಕಷ್ಟವನು
ಒಟ್ಟುಗೂಡಿಸಿ ತರಬೇಕೇನ
ಒಟ್ಟುಗೂಡಿಸಿ ತರಬೇಕೇನ | ನಿನ
ದೃಷ್ಟಿ ಇಟ್ಟು ರಕ್ಷಿಸು ಎನ   || ೮೪ ||

ಕೆಟ್ಟ ಅಡವಿ ನಾ ಬಿಟ್ಟು ಕವಡಿ
ಇಟ್ಟು ಹೋದರೆ ಹತ್ತದು ಕೂನ
ಇಟ್ಟು ಹೋದರೆ ಹತ್ತದು ಕೂನ | ನಾ
ಬಿಟ್ಟರೆ ಪಿತರಿಗೆ ಆಗತೈತಿ ಮರಣ   || ೮೫ ||

ವಚನ :

ಹೇ ದೇವಾ ನಿನ್ನ ಮಗನಿಗೆ ಇಂತಹ ಕಠಿಣ ಸಮಯವನ್ನು ತಂದೊಡ್ಡಬೇಕೆ? ನೀರಿಲ್ಲದ ಸ್ಥಾನಕ್ಕೆ ತಂದಿಯೋ ನನ್ನ. ಕೆಳಗಿಟ್ಟು ಹೋದರೆ ಹುಲಿ ಕರಡಿ ತಿನ್ನತಾವೊ ತಂದೆ ತಾಯಿನ್ನ.  ಏರಿಸಿ ಕಟ್ಟಬೇಕುಯ ದೊಡ್ಡ ಮರದ ತುದಿಗೆ ಕವಡಿಯನಾ. ಬಟ್ಟಿಗುರುತ ಹುಡುಕಿ ಹೋಗಬೇಕು ನೀರಿದ್ದ ಬಳಿಗೆ ನಾ. ತಪ್ಪಲವ ಹರಿದು ಒಗೆಯಬೇಕು ಈ ಭೂಮಿಗೆ. ಅಂದರೆ ಬಂದು ಮುಟ್ಟತೇನಿ ನಮ್ಮ ತಂದೆತಾಯಿಗಳನ್ನ. ಕೈಯಲ್ಲಿ ನೀರನಪಾತ್ರೆ ಹಿಡಕೊಂಡು ನೀರಹುಡುಕುತ್ತ ಹೊರಟಾನೊ ಗುರುಭಕ್ತನು. ಮಾರ್ಗದಲ್ಲಿ ಅಕಸ್ಮಾತ್ ಒಂದು ಕೆರೆಯನ್ನು ಕಂಡು ಅನ್ನುತ್ತಾನೆ ಏನೆಂದರೆ –

ಪದ :

ಹರನೆ ನನಗೆ ನೀ ಕರುಣಿಸಿ ನೀರಿನ
ಕೆರೆ ತಂದು ತೋರಿದಿ ಅಂದ
ಕೆರೆ ತಂದು ತೋರಿದಿ ಅಂದ | ಬಹು
ಹರುಷದಿಂದ ಒಳಿಯಾಕ ಹೋದ    || ೮೬ ||

ಹುಡುಗ ಪೋಗಿ ತಾನು ದುಡುಕಿಲೆ ತುಂಬಲು
ಬುಡುಬುಡು ಅಂದಿತೋ ಆ ಶಬ್ದ
ಬುಡುಬುಡು ಅಂದಿತೋ ಆ ಶಬ್ದ |
ಆ ಕಡೆಗೆ ದಶರಥ ಕುಳಿತಿದ್ದ         || ೮೭ ||

ಕುಸುಮ ಕಾಯಲಿಕ್ಕೆ ದಶರಥನಿದ್ದನು
ಕೊಸರಿ ಬಾಣ ತೆಗೆದನು ಒಂದ
ಕೊಸರಿ ಬಾಣ ತೆಗೆದನು ಒಂದ | ಆ
ಕೆಟ್ಟಪಶು ಹೊಕ್ಕಿದೆ ಎಂದ  || ೮೮ ||

ಗುರಿಯನಿಟ್ಟು ಆ ಗುಡಿಗುಡಿ ಶಬ್ದಕೆ
ಶರವಹೂಡಿ ಶಕ್ತಿಯಲಿಂದ
ಶರಣಹೂಡಿ ಶಕ್ತಿಯಲಿಂದ | ಅದು
ತರುಳಗ ಬಡದಿತೋ ಭರದಿಂದ    || ೮೯ ||

ಅತ್ತ ತಾಯಿತಂದೆ ಸಾಯಿತಾರೊ ನೀರಿಲ್ಲದ
ವ್ಯರ್ಥವಾಯಿತೊ ಇಲ್ಲಿಗೆ ಬಂದ
ವ್ಯರ್ಥವಾಯಿತೊ ಇಲ್ಲಿಗೆ ಬಂದ | ಬಹು
ಕರ್ತಮಲ್ಲ ಗತಿಕೊಡೊ ಎಂದ       || ೯೦ ||

ಶಿಶುವಿನ ನುಡಿಯನು ದಶರಥ ಕೇಳಿದೆ
ದೆಸೆಗೆಟ್ಟು ಅಡರಾಸಿ ತಾ ಬಂದ
ದೆಸೆಗೆಟ್ಟು ಅಡರಾಸಿ ತಾ ಬಂದ | ಆ
ಶಿಸುವಿಗೆ ಕೇಳತಾನ ಯಾರ‍್ಮಗನೆಂದ         || ೯೧ ||

ಈ ಘೋರ ರಾತ್ರಿ ಎಲ್ಲಿಂದ ಬಂದಿ
ಕಾನನದಲಿ ಬಹು ಮುದಿಂದ
ಕಾನನದಲಿ ಬಹು ಮುದದಿಂದ | ನಿನ
ಕೂನ ಪೂರ ಅವ ಹೇಳೆಂದ         || ೯೨ ||

ಎದಿಯನ ಬಾಣದ ಬಾಧಿ ಸೈರಿಸಿ
ಹೆದರಿ ಹೆದರಿ ಗುರುಭಕ್ತಂದ
ಹೆದರಿ ಹೆದರಿ ಗುರುಭಕ್ತಂದ | ಆ
ವರಪಿತ ಎನಗೆ ಧರಣಿಕೇಶಂದ      || ೯೩ ||

ಹರನಲ್ಲಿಗೆ ಬಂದಾರೊ ಹಿಂದ ತಾವ್
ತರುಳನ ಪಡೆಯಲು ಬಹುಮುದದಿಂದ
ತರುಳನ ಪಡೆಯಲು ಬಹುಮುದದಿಂದ | ನಾ
ತರುಳ ಅವರ ಮಗ ಹೌದೆಂದ      || ೯೪ ||

ಅಪ್ಪಮಗನೆ ನಂದು ತಪ್ಪು ಆಯಿತೆಂದು
ಗಪ್ಪನೆ ಹೇಳತಾನೊ ದಶರಥ
ಗಪ್ಪನೆ ಹೇಳತಾನೊ ದಶರಥ | ನಿಮ
ಅಪ್ಪ ನಿನಗೆ ಮಾವನು ಮುದ್ದ       || ೯೫ ||

ಚಿಕ್ಕಮ್ಮ ನನಗೆ ಅಕ್ಕನ ಸರಿಯೋ
ದುಃಖ ಹೇಗೆ ಸೈರಿಸಲಿ ಕಂದ
ದುಃಖ ಹೇಗೆ ಸೈರಿಸಲಿ ಕಂದ | ನಾ
ದಿಕ್ಕೇಡಿಯೋ ಬಿಟ್ಟಿನಿ ಕೊಂದ       || ೯೬ ||

ಕಂದ ಹೇಳತಾನ ಕೊಂದರ ಚಿಂತಿಲ್ಲ
ತಂದೆ ತಾಯಿಗೆ ನೀರು ಕುಡಿಸೆಂದ
ತಂದೆ ತಾಯಿಗೆ ನೀರು ಕುಡಿಸೆಂದ | ಬಹು
ಚಂದ ಹೇಳಿ ಸುಮ್ಮನಾದ ಕಂದ    || ೯೭ ||

ವಚನ :

ಅತಗೊಂತ ಕೇಳತಾನೊ ದಶರಥ ಹಾದಿಯ ಕೂನಾ. ಸುತನು ಹೇಳತಾನೊ ತಾ ಬಂದಂಥ ದಾರಿಯ ಕೂನಾ. ಕ್ಷಿತ್ರಿಯಮೇಲೆ ಹರಿದು ಒಗೆದು ಬಂದೆನು ತಪ್ಪಲವನಾ. ಏರಿಸಿ ಕಟ್ಟಿರುವೆ ದೊಡ್ಡಮರದ ತುದಿಗೆ ಕವಡಿಯನಾ. ಎಂದು ಗುರುಭಕ್ತ ಹೇಳಿದಂತೆ ಆ ಘೋರ ರಾತ್ರಿಯಲ್ಲಿ ದಶರಥನು ನಡೆದುಬಂದು ಮರನ ಏರಿ ಮರುಮಾತಾಡದೆ ಗುರುಭಕ್ತನ ತಾಯಿತಂದೆಗಳಿಗೆ ನೀರು ಕುಡಿಸ್ಯಾನೊ. ಜಲಬಾಧೆ ಹಿಂದಿನ ನಂತರ ತಾಯಿ ತಂದೆಗಳು ಅನ್ನುತ್ತಾರೆ ಏನಂದರೆ –

ಪದ :

ಬಾರೊ ಮಗನೆ ಈ ಘೋರ ರಾತ್ರಿಯಲಿ
ನೀರಿಗೆ ಹೋಗಿ ಬಳಲದಿ ಪುತ್ರ
ನೀರಿಗೆ ಹೋಗಿ ಬಳಲದಿ ಪುತ್ರ | ನಿನ
ಮಾರಿ ನೋಡಲಿಕೆ ಇಲ್ಲೊ ನೇತ್ರ    || ೯೮ ||

ದುಃಖವು ಅಬ್ಬರಸಿ ಅಕ್ಕಗ ಹೇಳತಾನೊ
ದಿಕ್ಕೇಡಿಯೋ ನಾ ದಶರಥ
ದಿಕ್ಕೇಡಿಯೋ ನಾ ದಶರಥ | ನಿಮ
ಚಿಕ್ಕ ಬಲ ಸತ್ತಾನೊ ಆತ  || ೯೯ ||

ಅಡವಿಯ ಆನೆ ಅಂತ ಹೊಡದೆನು ಬಾಣವ
ಹುಡುಗನ ಎದಿಗೆ ಗುರಿತಾಕಿ
ಹುಡುಗನು ಎದಿಗೆ ಗುರುತಾಕಿ | ನಾ
ಒಡನೆ ಒಯ್ಯುವೇನು ನಿಮ ಅತ್ತ    || ೧೦೦ ||

ಇಷ್ಟ ಕೇಳಿ ತಾವ್ ಸೃಷ್ಟಿಗೆ ಬಿದ್ದರು
ಕೆಟ್ಟವೆಂದು ಬಹು ದುಃಖಿಸುತ
ಕೆಟ್ಟವೆಂದು ಬಹು ದುಃಖಿಸುತ | ನೀ
ಬಿಟ್ಟುಹೋದಿ ಏನೋ ಗುರುಭಕ್ತ     || ೧೧೦ ||

ಒಡಲಿಗೆ ಅನ್ನವು ಗುಡಿಯಾಗ ಸಿಗತಿತ್ತ
ಅಡವ್ಯಾಗ ಬಿಟ್ಟು ಹೋದಿಯೊ ಅತ್ತ
ಅಡವ್ಯಾಗ ಬಿಟ್ಟು ಹೋದಿಯೊ ಅತ್ತ | ನಿನ
ಹಡೆದು ಆಯಿತೋ ಬಹು ಅರ್ಥ     || ೧೦೨ ||

ಇತ್ತ ಕಾವಡಿ ಹೊತ್ತಾನೊ ದಶರಥ
ಪುತ್ರನಲ್ಲಿಗೆ ತಂದು ಇಳವುತ
ಪುತ್ರನಲ್ಲಿಗೆ ತಂದು ಇಳವುತ | ತಾ
ಕಿತ್ತಬಾಣವ ಬಹು ತುರ್ತ  || ೧೦೩ ||

ಹರಹರ ಎನ್ನುತ ತರುಳ ಸಾಯಲು
ತರಹರಗೊಳತಾನು ದಶರಥ
ತರಹರಗೊಳತಾನು ದಶರಥ | ಆಗ
ಕುರುಡರಿಗೆ ಕಣ್ಣು ಬರವುತ || ೧೦೪ ||

ಚಂದ್ರಮುಖದ ಕಂದನ ನೋಡಿ ತಂದೆ
ತಾಯಿಗಳು ಸುತ್ತಲು ಕುಳಿತ
ತಾಯಿಗಳು ಸುತ್ತಲು ಕುಳಿತ | ಮನ
ಬಂದಾಗ ಅತ್ತು ಹೊರಳುತ         || ೧೦೫ ||

ಇಲ್ಲೆ ಕುಳಿತರೆ ಬಲ್ಲಿದ ಅಡವಿಯೊಳು
ಹುಲ್ಲೆ ಹುಲಿಗಳು ಇರುವವು ಬಹಳ
ಹುಲ್ಲೆ ಹುಲಿಗಳು ಇರುವವು ಬಹಳ | ತಾನು
ಆಗಲೆ ಆರಿಸಿ ಒಟ್ಯಾನು ಕುಳ್ಳ       || ೧೦೬ ||