ಗುರುಭಕ್ತ

ಶ್ಲೋಕ :

ಸತ್ಯಮಾತಾ ಪಿತಾಜ್ಞಾನಂ. ಧರ್ಮೋಭ್ರಾತಾ ದಯಾ ಸಖಾ. ಶಾಂತಿ ಪತ್ನೀ ಕ್ಷಮಾ ಪುತ್ರಾಂ ಪಡೇತೆ ಮಮ ಬಾಂಧವಾ ||

ಪದ :

ಪೃಥ್ವಿಯೊಳಗತ್ಯಧಿಕವಾದ
ಸತ್ಯ ಕೇರಳ ದೇಶವಿತ್ತ
ಸತ್ಯ ಕೇರಳ ದೇಶವಿತ್ತ | ಶಿವ
ಭೃತ್ಯ ಧರಣಿ | ಕೇಶವ ಭಕ್ತ || ೧ ||

ಪುರಾಣದಾಗ ಪುರಾತರಡಿಗಳ
ಪುರಕೆ ನಂಬಿ ಕೇಳುವೆನೆಂತ
ಪುರಕೆ ನಂಬು ಕೇಳುವೆನೆಂತ | ಮನ
ಪೂರೈಸಿ ಅದರೊಳು ನಿಂತ         || ೨ ||

ಒಂದಿನ ಪುರಾನ ಕೇಳುವ ಸಮಯದಿ
ಬಂದಿತಾಗ ಒಂದು ವಿಪರೀತಾ
ಬಂದಿತಾಗ ಒಂದು ವಿಪರೀತಾ | ಈ
ಕಂದರಿಲ್ಲ | ದವಗಿಲ್ಲ ಮುಕ್ತಿ || ೩ ||

ನ ಪುತ್ರಸ್ಯ ಗತಿರ್ನಾಸ್ತಿ ಕರೆ
ನರಕ ಪ್ರಾಪ್ತಿ ಅವಗಾನಂತ
ನರಕ ಪ್ರಾಪ್ತಿ ಅವಗಾನಂತ | ಆ
ಗುರುಗಳ್ಹೇಳಿದರು ಏಕಾಂತ         || ೪ ||

ವಚನ :

ಗುರುಗಳು ಹೇಳಿದಂಥ ಅಗಮ್ಯ ವಾಕ್ಯವನ್ನು ಧರಣಿ | ಕೇಶವ ರಾಜನು ಕೇಳಿ ಗುರುಗಳನ್ನು ಕರಸಿ ಕೇಳುತ್ತಾನೆ ಏನಂದರೆ –

ಪದ :

ಮಕ್ಕಳಿಲ್ಲದ ಸಕಲಭಾಗ್ಯವಿದು
ಬೆಕ್ಕು ಮುಟ್ಟಿದೆಂಜಲವೆಂದ
ಬೆಕ್ಕು ಮುಟ್ಟಿದೆಂಬಜಲವೆಂದ | ನೀವು
ಚಕ್ಕನೆ ಹೇಳಿರಿ ಗತಿ ಮುಂದ        || ೫ ||

ತರುಳರನ್ನು ತವ ಕಾಂಬುವದಾ ಶ್ರೀ
ಗಿರಿಗೆ ಹೋಗೊ ನೀ ಇಲ್ಲಿಂದಾ
ಗಿರಿಗೆ ಹೋಗೊ ನೀ ಇಲ್ಲಿಂದಾ | ಅಲ್ಲಿ
ಸರಿಯಾಗಿ ಪೂಜೆಮಾಡು ಶಿವಂದಾ || ೬ ||

ಸದಮಲ ಸಾವಿರ ಗಣರಂದಾ ನೀ
ಮುದದಿ ಉಣಿಸಿ ಮಾಡಾನಂದಾ
ಮುದದಿ ಉಣಿಸಿ ಮಾಡಾನಂದಾ | ನೀ
ಸುದತಿ ಕೇಳಿ ಬಾ ಆನಂದ || ೭ ||

ಅಲ್ಲಿಂದ ನಿನಗೊಬ್ಬ ಚಲ್ವಪುತ್ರನು
ಸಲ್ಲುವ ಲಗುಹೋಗು ಇಲ್ಲಿಂದಾ
ಸಲ್ಲುವ ಲಗುಹೋಗು ಇಲ್ಲಿಂದಾ | ಅಂತ
ಎಲ್ಲ ಹೇಳಿ ಗುರು ತಾ ಹೋದಾ     || ೮ ||

ವಚನ :

“ನಗುರೋರಧಿಕಂ. ನಗುರೋರಧಿಕಂ’ “ಹರಮುನಿದರು ಗುರುಕಾಯ್ವನು ಹಾಗು ಆತನೆ ದೊಡ್ಡಾತನು. ಅದಕ್ಕಾಗಿ ಧರಣೀಕೇಶವರಾಜನು ಪುತ್ರರಿಲ್ಲದವರಿಗೆ ಪೂರ್ತ ನರಕ ಪ್ರಾಪ್ತಿಯಾಗುವದೆಂಬ ವಚನವನ್ನು ಕೇಳಿ ತನ್ನ ಗುರುಗಳನ್ನು ಕರೆಯಿಸಿ ಅವರ ಅಭಿಪ್ರಾಯವನ್ನು ಕೇಳಲಾಗಿ ಅವರು ಹೇಳಿದ್ದೇನೆಂದರೆ ;-

ಶ್ರೀಶೈಲ ಮಲ್ಲಿಕಾರ್ಜು ಪಾದದಡಿಯೋಳ್ ಒಡಲನೀಡಾಡಿ, ಸಾವಿರಾರು ಜಂಗಮಾರ್ಚನೆ ಮಾಡಿ, ಮೃಷ್ಟಾನ್ನಭೋಜನ ಉಣಿಸಿ, ಯೋಗ್ಯತಾಪ್ರಕಾರ ದಕ್ಷಿಣೆಕೊಟ್ಟು ಅವರನ್ನು ಸಂತುಷ್ಟಪಡಿಸಿದರೆ ಗಂಡು ಮಗುವಾತ್ತಾನೆಂಬ ಗುರುಗಳ ವಚನ ಕೇಳಿ, ತನ್ನ ಮಂತ್ರಿ ವರಮತಿಯನ್ನು ಕರೆದು ಧರಣಿಕೇಶವರಾಜನು ಶ್ರೀಗಿರಿಗೆ ಹೋಗಲು ಸಕಲಸಿದ್ಧತೆಗಳನ್ನು ಮಾಡೆಂದಾಗ, ಮಂತ್ರಿಯು ಅದರಂತೆ ಮಾಡಲಾಗಿ ರಾಣಿಯೊಂದಿಗೆ ಪಲ್ಲಕ್ಕಿಯಲ್ಲಿ ಕುಳಿತು ಸಕಲವೈಭವದೊಂದಿಗೆ ಶ್ರೀಶೈಲ ಮಾರ್ಗವಾಗಿ ಪ್ರಯಾಣ ಬೆಳೆಸುವಾಗ ಆದಂಥ ಕಥಾ ಏನೆಂದರೆ –

ಪದ :

ಚಂದದ ಹೂವಿನ ಬೃಂದಾವನವನು
ಮಂದಗಮನಿ ಕಂಡಳು ಚಂದ
ಮದಗಮನಿ ಕಂಡಳು ಚಂದ | ಆ
ಮಂದಾರಮಲ್ಲಿಗಿ ಹರಿ ಚಂದ        || ೯ ||

ನೆಲ್ಲು ತೆಂಗು ಬಹು ಬಲ್ಲಿದ ಚಂದನ
ಮಲ್ಲಿಗೆ ಲತೆಗಳು ಒಂದೊಂದ
ಮಲ್ಲಿಗೆ ಲತೆಗಳು ಒಂದೊಂದ | ಈ
ವಲ್ಲಭೆ ಕಾಣುತಾ ತಾ ಮುಂದ      || ೧೦ ||

ಬೆಕ್ಕು ಇಲಿಯು ಬಹು ಅಕ್ಕರಲಿರುವವು
ಮರ್ಕಟ ಸಂದಣಿ ಅದರಿಂದ
ಮರ್ಕಟ ಸಂದಣಿ ಅದರಿಂದ | ತವ
ಮಕ್ಕಳನೆತ್ಯಾವೊ ಒಂದೊಂದ      || ೧೧ ||

ವಚನ :

ವೇಶ್ಯಾ ಸ್ತ್ರೀಯಳಿಗೆ ವಿಟಗಾರನೆ ಪ್ರಾಣಲಿಂಗ. ಆ ದೇವರು ಈ ದೇವರು ಎಂದು ಕೈಮುಗಿದಯುವಂಥಾ ಭಕ್ತನಿಗೆ ಹೊರಗಿಟ್ಟ ಪಾದರಕ್ಷೆಯೇ ಪ್ರಾಣಲಿಂಗ. ಅದರಂತೆ ಯಾವಾತನ ಮನಸ್ಸಿನಲ್ಲಿ ಏನಿರುವುದೋ ಅದರಂತೆ ವರ್ತಿಸುವನೆಂಬ ನೀತಿಯಂತೆ ಧರಣಿಕೇಶವರಾಜನು ಸತಿಯೊಡನೆ ಅಂದವಾದ ಮಾರ್ಗದಲ್ಲಿ ಐತರುತ್ತಿರುವಾಗ ರಮ್ಯಕರವಾದ ವನವು ರಾಜನ ಸತಿಯ ಕಣ್ಣಿಗೆ ಕಾಣಿಸಲಾಗಿ ಅದರಲ್ಲಿ ಪರಮಾನಂದದೊಡನೆ ತರುಣಿ ತನ್ನ ತರುಳನನ್ನು ಬಲಗೈಯಲಲಿ ಎತ್ತಿ ತಿರುಗಾಡುತ್ತಿರುವ ಮರ್ಕಟವನ್ನು ನೋಡಿ ಅನ್ನುತ್ತಾಳೆ ಏನೆಂದರೆ –

ಪದ :

ಕಾಂತ ಕೇಳು ಆ ಕೋತಿಯ ಕೊಂದು
ಪುತ್ರನನ್ನು ಹಿಡಕೊಂಡು ಬನ್ನಿರಿ
ಪುತ್ರನನ್ನು ಹಿಡಕೊಂಡು ಬನ್ನಿರಿ | ನಾ
ಪ್ರೀತಿಲಿಂದ ಸಲಹುವೆನು  || ೧೨ ||

ಮಕ್ಕಳೆಂದರೆ ಮನ ಉಕ್ಕಿ ಹರಿವುದು
ಚಿಕ್ಕ ಪ್ರಾಣಿ ಮರ್ಕಟ ಮರಿ
ಚಿಕ್ಕ ಪ್ರಾಣಿ ಮರ್ಕಟ ಮರಿ | ನಾ
ಮಕ್ಕಳಂತೆ ಎತ್ತುವೆ ದೊರಿ || ೧೩ ||

ಅಂದಮಾತಕೇಳಿ ಹೊಡೆದ ಒಂದು ಬಾಣ
ಕಂದನ ತಪ್ಪಿಸಿ ಪರಭಾರಿ
ಕಂದನ ತಪ್ಪಿಸಿ ಪರಭಾರಿ | ತಾಯಿ
ನೋಡಿತಾಗ ಬಹು ಹೌಹಾರಿ        || ೧೪ ||

ತಾಯಿಗಿಟ್ಟಿಗುರಿ ತಪ್ಪಿ ಕೂಸಿಗೆ
ಬಾಯಮೇಲೆ ಬಡದಿತು ಹಾರಿ
ಬಾಯಮೇಲೆ ಬಡದಿತು ಹಾರಿ | ಆ
ತಾಯಿ ನೋಡಿತಾಗ ಹೌಹಾರಿ      || ೧೫ ||

ವಚನ :

ಸ್ತ್ರೀಬುದ್ಧಿ ಪ್ರಳಯಾಂತಕ ಎಂಬ ನೀತಿಯಂತೆ ಧರಣಿಕೇಶವರಾಜನ ಸತಿಯಳು ಆ ತೋಟದಲ್ಲಿ ಚರಿಸತಕ್ಕ ಮಂಗಗಳನ್ನು ನೋಡಿ, ಮಂಗನಕೂಸಿನ ಮೇಲೆ ಮನಸಾಗಿ, ತನ್ನ ಕಾಂತನಿಗೆ ಹೆಣ್ಣುಮರ್ಕಟವನ್ನು ಕೊಂದು ಅದರ ಕೂಸನ್ನು ನನಗೆ ತಂದುಕೊಡಿರೆಂದು ಕೇಳಿದ್ದಕ್ಕೆ ರಾಜನು ಅದರಂತೆ ಬಾಣತೊಟ್ಟು ತಾಯಿ ಮಂಗವನ್ನು ಕೊಂದು ಅದರ ಕೂಸು ಪಡೆಯಬೇಕೆಂಬ ಆಸೆಯಿಂದ ಗುರಿಯಿಟ್ಟು ಹೊಡೆಯಲು, ಆರೇನು ಮಾಡುವರು, ಆರಿಂದಲೇನಾಗುವುದು, ಪೂರ‍್ವಜನ್ಮದ ಕರ್ಮವಿಧಿ ಬೆನ್ನು ಬಿಡದು ಎಂಬ ನೀತಿಸಾರದಂತೆ-ದೈವಯೋಗದಿಂದ ತಾಯಿ ಮಂಗವೇ ಜೀವದಿಂದುಳಿದು ಮರಿಮಂಗ ರಾಜನ ಬಾಣ ತಗುಲಿ ಹತವಾಯಿತು. ರಾಜನು ಲವಲವಿಕೆಯಿಂದ ನೋಡುತ್ತಾನೆ. ತಾಯಿಮಂಗವು ತನ್ನ ಕೂಸನ್ನು ತೊಡೆಯ ಮೇಲಿಟ್ಟು ಕೊಂಡು ಅನ್ನುತ್ತದೆ ಏನಂದರೆ –

ಪದ :

ಪ್ರಾಣಪುತ್ರ ನಿನಗೋಣು ಮುರಿದವ
ಕ್ಷೋಣಿಯೊಳಗ ಬ್ಯಾಡೋ ಮಗನ
ಕ್ಷೋಣಿಯೊಳಗ ಬ್ಯಾಡೋ ಮಗನ | ಶಿವ
ನಾಣಿಯಾಗಿ ಹೇಳತೆನಿ ನಾನ       || ೧೬ ||

ಸಣ್ಣವನಿರುತಲಿ ಹಣ್ಣು ತಿನಿಸಿದೆನು
ಕಣ್ಣಿನಿಂದ ನೋಡುತ್ತಿದ್ದೆ ದಿನಾ
ಕಣ್ಣಿನಿಂದ ನೋಡುತ್ತಿದ್ದೆ ದಿನಾ | ನಿನ
ಮಣ್ಣಿಗಿಟ್ಟು ಹ್ಯಾಂಗಿರಲಿ ನಾ         || ೧೭ ||

ಹಡದಮಗನೆ ನಿನ್ಹೊಡಿದಾತ ಮುಂದೆ
ಪಡೆಯಬೇಡ ನಿನ್ನಂತವನಾ
ಪಡೆಯಬೇಡ ನಿನ್ನಂತವನಾ | ಅಂತ
ತೊಡೆಯ ಮೇಲೆ ಮುದ್ದಿಸಿ ಮಗನಾ || ೧೮ ||

ಅರಸ ಕೇಳೋ ನೀನಿರುತ ಪುತ್ರನ
ಹರಣ ನೀಗಿದೆ ಮುದದಿಂದಾ
ಹರಣ ನೀಗಿದೆ ಮುದದಿಂದಾ | ಈ
ಪಾಪ ತಟ್ಟುವದು ದಿಟವೆಂದಾ       || ೧೯ ||

ಅರ್ಜುನನಂಗ ಶ್ರೀ ಅಜ್ಜ ಮಲ್ಲನಲಿ
ಸಜ್ಜಾಗಿ ಹೋಗತಿದಿ ಬಹುದುಂದಾ
ಸಜ್ಜಾಗಿ ಹೋಗತಿದಿ ಬಹುದುಂದಾ | ನಿನ
ದುರ್ಜನತನ ಅಲ್ಲಿ ತಿಳಿಯುವುದಾ   || ೨೦ ||

ಸಣ್ಣ ಮಗನ ಮುಕ್ಕಣ್ಣ ತಾ ಕೂಡಲಿ
ಅರಣ್ಯದಿ ಸಾಯಲಿ ದಿಕ್ಕಿಲ್ಲದಾ
ಅರಣ್ಯದಿ ಸಾಯಲಿ ದಿಕ್ಕಿಲ್ಲದಾ | ನಿನ
ಕಣ್ಣ ಕಾಣದಂತಾಗಲಿ ಮುಂದಾ     || ೨೧ ||

ವಚನ :

“ಹೃದ್ಬಾಧೆ ಪುತ್ರಚಿತಃ’ ಎಂಬಂತೆ ತಾಯಿಮಂಗವು ಧರಣಿಕೇಶವರಾಜನನ್ನುದ್ದೇಶಿಸಿ ಹೇಳಿದ್ದೇನೆಂದರೆ, ನೀನು ಧನುಮನದಿಂದ ನನ್ನ ಕೂಸು ಕೊಂದಿರುವಿ. ಶ್ರೀಶೈಲ ಮಲ್ಲಿಕಾರ್ಜುನನು ನಿನಗೆ ಪುತ್ರನನ್ನು ಕರುಣಿಸಲಿ. ಆದರೆ ಅದು ಅರಣ್ಯದಲ್ಲಿ ದಿಕ್ಕಿಲ್ಲದೆ ಸಾಯಲಿ ಎಂದು ಶಾಪಕೊಟ್ಟ ಮಾತು ಕೇಳಿ ರಾಜನು ಅನ್ನುತ್ತಾನೆ ಏನಂದರೆ –

ಪದ :

ಕೆಟ್ಟೆ ಕೆಟ್ಟೆ ಈ ಮರ್ಕಟಶಾಪವು
ತಟ್ಟದೆನಗೆ ಬಿಡುದಿಲ್ಲ ಮುಂದಾ
ತಟ್ಟದೆನಗೆ ಬಿಡುದಿಲ್ಲ ಮುಂದಾ | ನನ
ದುಷ್ಟ ಹೆಂಡತಿಯ ಮಾತಿಂದಾ      || ೨೩ ||

ಶಾಪತೆಗೆದುಕೊಂಡು ಭೂಪಾಲ ತನ್ನಯ
ಪ್ರೀತಿ ಪತ್ನಿಯ ಹತ್ತಿರ ಬಂದಾ
ಪ್ರೀತಿ ಪತ್ನಿಯ ಹತ್ತಿರ ಬಂದಾ | ಅದು
ಕೊಟೈತಿ ಶಾಪ ಹಿಡಿಯಂದಾ       || ೨೪ ||

ವಚನ :

ಧರಣಿಕೇಶವರಾಜ ದುಃಖದಿಂದ ಮಂಗನಶಾಪವನ್ನು ಪಡೆದು ತಿರುಗಿ ತನ್ನ ಸತಿಯ ಮುಂದೆ ಸರ್ವಸಂಗತಿ ವಿವರಿಸುತ್ತಾನೆ ಏನಂದರೆ –

ಪದ :

ಆಯತಾಕ್ಷಿ ಕೇಳೆ ತಾಯಿ ಉಳಿದು ಮೆಗೆ
ಸಾಯಲು ಹೋದಾನು ತಾ ಸತ್ತ
ಸಾಯಲು ಹೋದನು ತಾ ಸತ್ತ | ಆ
ತಾಯಿ ಕುಳಿತುಕೊಂಡು ಅಳತಿತ್ತಾ  || ೨೫ ||

ಇಷ್ಟು ಕೇಳಿ ನಾ ಭೆಟ್ಟಿಯಾಗಲು
ಕೊಟ್ಟೈತಿ ಶಾಪವ ಹಿಡಿಯಂತಾ
ಕೊಟ್ಟೈತಿ ಶಾಪವ ಹಿಡಯಂತಾ | ನಿನಗ
ಹುಟ್ಟಲಿ ಮಂಗನ ಮಗನಂತಾ      || ೨೬ ||

ಪರರ ಕೈಲಿ ಅವ ಮರಣ ಹೊಂದಲಿ
ಸರ್ಪ ತಾಕಿ ಹೋಗಲಿ ಸತ್ತ
ಸರ್ಪ ತಾಕಿ ಹೋಗಲಿ ಸತ್ತ | ಈ
ಪರಿಕೊಟ್ಟು ಕಳಿಸಿತು ತುರ್ತು       || ೨೭ ||

ವಚನ :

’ಅಲ್ಪ ಬುದ್ಧಿ ನಾರೀಣಾಂ’ಯಂತಹ ಉತ್ತಮ ಸ್ಥಿತಿ ಇದ್ದಾಗ್ಯೂ ಅವಳಿಗೆ ಮತಿ ಕಡಿಮೆಯಾಗುವ ಸಂಭವ ಉಂಟು. ಅಂತೆಯೆ ರಾಜನ ಸತಿ ಅನ್ನುತ್ತಾಳೆ – ಕಾಗೆಯ ಶಾಪ ದೊರೆಗೆ ಮುಟ್ಟಲಿಲ್ಲವಂತೆ. ಅಡವಿ ಸಂಚರಿಸುವ ಅಜ್ಞಾನಕೋತಿಯ ಶಾಪವು ನಮಗೆ ಮುಟ್ಟಲಾರದೆಂದು ಅಹಂಕಾರದಿಂದ ಪತಿಗೆ ವಿವರಿಸಿದಳಲ್ಲದೆ ಜಾಗ್ರತೆ ಪ್ರಯಾಣ ಬೆಳಸಲು ರಾಜನಿಗೆ ಪಲ್ಲಕ್ಕಿ ಏರಬೇಕೆಂದಳು. ಹೀಗೆ ಮಾರ್ಗ ಕ್ರಮವಹಿಸುತ್ತಿರುವಾಗ ಮುಂದೇನಾಗು ವುದೆಂದರೆ –

ಪದ :

ಮುದುಕನಾಗಿ ಮೈ ಗದಗದ ನಡಗುವ
ಮುದಿಯ ಸರ್ಪವ ಕಂಡನೋ ಒಂದಾ
ಮುದಿಯ ಸರ್ಪವ ಕಂಡನೋ ಒಂದಾ | ಆಗ
ಸುದತಿ ಹೇಳಿದಳು ಅಲ್ಲೊಂದಾ     || ೨೮ ||

ಮಕ್ಕಳಿಗೋಸ್ಕರ ಮುಕ್ಕಣನಲ್ಲಿಗೆ
ಅಕ್ಕರದಲಿ ಹೋಗತೇವಿ ಇಂದಾ
ಅಕ್ಕರದಲಿ ಹೋಗತೇವಿ ಇಂದಾ | ಇದಕೆ
ವಿಷವು ಬಂದಿತೋ ನಮ ಮುಂದಾ || ೨೯ ||

ಕಡಿದು ತುಂಡುಮಾಡಿ ಕಡೆಗೆ ಒಗೆದು ಲಗು
ನಡೆಯಿರಿ ಮುದಿ ಮಲ್ಲನ ಮುಂದಾ
ನಡೆಯಿರಿ ಮುದಿ ಮೆಲ್ಲನ ಮುಂದಾ | ಅಂತ
ಮಡದಿ ಹೇಳಿದಳು ತ್ವರೆಯಿಂದಾ    || ೩೦ ||

ಸತಿಯ ಮಾತಿಗೆ ತುಂಡಗಡಿದ ದೊರಿ
ತುಂಡ ಸರ್ಪ ಹೇಳಿತು ಕರೆದಾ
ತುಂಡ ಸರ್ಪ ಹೇಳಿತು ಕರೆದಾ | ಎಲೊ
ಮಂಡಲಪತಿ ಕೊಂದೆಲೊ ಮರ್ದಾ  || ೩೧ ||

ವಚನ :

ಮದಾಂಧ ಕಾಲದಲ್ಲಿ ಮಂದ ಬುದ್ಧಿ ಪ್ರಾಪ್ತವಾಗಿ ರಾಜನು ಹೊಡೆದ ಬಾಣದ ಪೆಟ್ಟಿಗೆ ಆ ಸರ್ಪವು ಎರಡು ತುಂಡಾಯಿತು. ಆಗ ಮಂಡಲಾಧಿಪತಿ ಅರಸನನ್ನು ಕರೆದು ಹೇಳಿದ್ದೇನೆಂದರೆ – ಎಲೋ ಮಹಾರಾಜಾ ನೀನು ಪುತ್ರಾರ್ಥಿಯಾಗಿ ಶ್ರೀ ಮೃತ್ಯುಂಜಯನಾದ ಶ್ರೀಶೈಲ ಮಲ್ಲಿಕಾರ್ಜುನನಲ್ಲಿ ಹೋಗುತ್ತಿ. ಆ ಮಲ್ಲಿಕಾರ್ಜುನನು ನಿನಗೆ ಪುತ್ರನನ್ನು ಕರುಣಿಸಲಿ. ಪುತ್ರನ ಜನನವಾದ ತರುವಾಯವೇ ನಿಮ್ಮೀರ‍್ವರ ಕಣ್ಣುಗಳು ಕಾಣದಂತಾಗಲೆಂದು ಶಿವನಾಣೆ ಇಟ್ಟು ಶಾಪವನ್ನಿತ್ತಿತ್ತು. ರಾಜನು ಭಾರ ಹೃದಯನಾಗಿ ತನ್ನ ಸತಿಯ ಮುಂದೆ ಬಂದು ನಡೆದ ಸಂಗತಿ ವಿವರಿಸಿದಾಗ ಅದನ್ನೊಂದೂ ಮನಸ್ಸಿಗೆ ಹಚ್ಚಿಕೊಳ್ಳಬೇಡಿರೆಂದು ಹೇಳಿ ಶ್ರೀಗಿರಿಗೆ ಪ್ರಯಾಣ ಬೆಳಸಿದರಲ್ಲದೆ ಶ್ರೀಗಿರಿಯ ಮಲ್ಲಿಕಾರ್ಜುನನ ಗುಡಿ ತಲುಪುತ್ತ –

ಪದ :

ಎಲ್ಲಿ ಕಾಣೆನು ಈ ಮಲ್ಲನ ಗುಡಿ
ವಲ್ಲಭೆ ನೋಡಂತ ಪೇಳಿದನು
ವಲ್ಲಭೆ ನೋಡಂತ ಪೇಳಿದನು | ಸುತ್ತ
ಎಲ್ಲ ಕಳಸರತ್ನದ ತೆನಿಯನ್ನು       || ೩೨ ||

ಪುತ್ರ ಪವಳಿಯಲ್ಲಿ ಮುತ್ತಿನಗೊಂಚಲ
ಹತ್ತು ದಿಕ್ಕಿನಲ್ಲಿ ವೈಭವನು
ಹತ್ತು ದಿಕ್ಕಿನಲ್ಲಿ ವೈಭವನು | ಮುಖ
ವೆತ್ತಿ ನೋಡಿ ಮೈಮುರಿದಾನು      || ೩೩ ||

ಎಲ್ಲಿ ನೋಡಿದರು ಫುಲ್ಲಶರಣರು
ಬಲ್ಲಿದ ಶಿವಲಿಂಗದ ಸ್ಥಾನ
ಬಲ್ಲಿದ ಶಿವಲಿಂಗದ ಸ್ಥಾನ | ಮುದಿ
ಮಲ್ಲನಿರುವನು ಆ ಸ್ಥಾನ   || ೩೪ ||

ಧರಣಿಕೇಶ ಅವ ಶರಣಮಾಡಿ ಶಿವ
ಚರಣಕೆ ಎರಗಲು ನಡೆದಾನು
ಚರಣಕೆ ಎರಗಲು ನಡೆದಾನು | ತನ
ತರುಣಿಕೊಡಿ ಹೊಕ್ಕ ಗುಡಿಯನು    || ೩೫ ||

ಸಾಷ್ಟಾಂಗ ಮಾಡುತ ಶ್ರೇಷ್ಠ ಶಂಕರಗ
ಭೆಟ್ಟಿಯಾಗಿ ತುಸು ಕುಳಿತಾನು
ಭೆಟ್ಟಿಯಾಗಿ ತುಸು ಕುಳಿತಾನು | ತಂದು
ಅಷ್ಟ ಸಾಹಿತ್ಯನೆಲ್ಲ ಇಳಸಿದನು      || ೩೬ ||

ರಾಜ ಹೇಳಿತಾನ ಪೂಜಾರಿ ಕರೆದು
ವಾಜಮಿ ಮಾಡಭಿಷೇಕವನು
ವಾಜಮಿ ಮಾಡಭಿಷೇಕವನು | ಈ
ರಾಜೇಶ್ವರಿಕಾಂತನ ನೀನು          || ೩೭ ||

ಹಿಟ್ಟು ಅಕ್ಕಿಗಳ ಮೆಟ್ಟಿಗೆ ಇರಿಸುತ
ಚಟ್ಟನೆ ಹೂಡಿಸಿದಡಗಿಯನಾ
ಚಟ್ಟನೆ ಹೊಡುಸಿದಡಗಿಯನಾ | ಬಂ
ದಷ್ಟು ಚರರಿಗೆ ಹೇಳಿ ಬಿನ್ನಾಯನಾ  || ೩೮ ||

ತುಪ್ಪಹೋಳಗಿ ಅಪ್ಪಗಣಕೆ
ಸಂತುಷ್ಟಪಡಿಸಿದ ಪರಿಪೂರ್ಣ
ಸಂತುಷ್ಟಪಡಿಸಿದ ಪರಿಪೂರ್ಣ | ಆಗ
ಇಂತಪ್ಪ ಗಣರಿಗೆ ಸಮಾಧಾನ      || ೩೯ ||

ವಚನ :

ಶ್ರೀಶೈಲ ಮಲ್ಲಿಕಾರ್ಜುನನಿಗೆ ಧೂಪ ದೀಪ ನೈವೇದ್ಯ ಎಡಿಮಾಡಿ ಹಾಗೂ ಗಣರಿಗೆ ತೃಪ್ತಪಡಿಸಿದರೂ ಪೂರ್ವದಲ್ಲಿ ಮಾಡಿದ ಮರ್ಕಟ ಹಾಗೂ ಉರಗತಿಯ ಪಾಪವನ್ನು ಕಳೆದುಕೊಳ್ಳುವುದರಲ್ಲಿ ರಾಜದಂಪತಿಗಳು ಅಸಫಲರಾದರು. ಅಂತೆಯೇ, ಸತಿಪತಿಯರ ನೇತೃಗಳು ಅದೇ ದಿವಸ ದೃಷ್ಟಿಯನ್ನು ಕಳೆದುಕೊಂಡು ಅದೇ ದೇವಾಲಯದಲ್ಲಿ ಕಾಲಕಳೆಯುತ್ತಿರುವಾಗ –

ಪದ :

ಕಣ್ಣು ಹೋಗಿ ಮುಕ್ಕಣ್ಣನ ಗುಡಿಯಲಿ
ಬಣ್ಣಗೆಟ್ಟು ಬಾಯಿ ಬಿಡತಾರ
ಬಣ್ಣಗೆಟ್ಟು ಬಾಯಿ ಬಿಡತಾರ | ತಮ್ಮ
ಪುಣ್ಯ ತೀರಿತಂತ ಅಳತಾರ         || ೪೦ ||

ಮಂತ್ರಿದಂಡು ಸ್ವಾತಂತ್ರ್ಯದಿ ತಮ್ಮ
ಪ್ರಾಂತಕ ಎಲ್ಲರು ತಿರುಗಿದರ
ಪ್ರಾಂತಕ ಎಲ್ಲರು ತಿರುಗಿದರ | ಅ
ತಂತ್ರವಾಗಿ ಉಳಿದರು ಇವರ       || ೪೧ ||

ಒಡೆಯ ಮಲ್ಲನ ಗುಡಿಯೊಳು ಇಬ್ಬರು
ಕಡುದುಃಖದಿ ಉಳಕೊಂಡಾರ
ಕಡುದುಃಖದಿ ಉಳಕೊಂಡಾರ | ತಾವು
ಪಡೆದ ರಾಜ್ಯವೆಲ್ಲ ಮರೆತಾರ        || ೪೨ ||

ಗಂಡಹೆಂಡರು ಕುರುಡಗಣ್ಣಿನಲ್ಲಿ
ಉಂಡೇನಂದರ ಅನ್ನ ಇಲ್ಲದ
ಉಂಡೇನಂದರ ಅನ್ನ ಇಲ್ಲ | ಬಹು
ಬಂಡಾಟ ಬಿಡುತ ಅಳತಾರ         || ೪೩ ||

ಹರನ ಪೂಜೆ ಮಾಡಾವ ಇವರಿಗೆ
ಕರೆದುಕೊಡುವ ತಂಗಚೂರ
ಕರೆದುಕೊಡುವ ತಂಗಳಚೂರ | ಬಹು
ಮರಮರ ಮರುಗುತ ತಿಂಬುವರ   || ೪೪ ||

ಈಶನ ಗುಡಿಯಲಿ ಶಶಿಮುಖಿನಾರಿ
ಬಸರು ಆಗಿಬಿಡತಾಳೊ ಘೋರಾ
ಬಸರು ಆಗಿಬಿಡತಾಳೊ ಘೋರಾ | ಆ
ಶಶಿಮುಖಿ ಬಯಕಿ ಬಲುಜೋರಾ    || ೪೫ ||

ಒಂಭತ್ತು ತಿಂಗಳು ತುಂಬುತ ನಾರಿಗೆ
ಕುಂಭಿನಿಯೊಳು ಜನಿಸಿದ ಕುವರ
ಕುಂಭಿನಿಯೊಳು ಜನಿಸಿದ ಕುವರ | ಬಹು
ಸಂಭ್ರಮ ಕಳವಳಪಡತಾರ         || ೪೬ ||

ತಂದಿತಾಯಿಗಳ ಕಂದನ ನೋಡಾಕ
ಅಂಧಕರಾಗಿ ಇರುವರು ಪೂರಾ
ಅಂಧಕರಾಗಿ ಇರುವರು ಪೂರಾ | ತಮ
ಕಂದನ ಬಿಟ್ಟಾರೊ ಪರಭಾರ        || ೪೭ ||

ಆ ಸಮಯದಿ ತಾ ಈಶನ ಪೂಜೆಗೆ
ಹಸನಾಗಿ ಪೂಜಾರಿ ಬಂದಾನೊ
ಹಸನಾಗಿ ಪೂಜಾರಿ ಬಂದಾನೊ ಈ
ಕೂಸಿನ ಗುಡಿಯಾಗ ನೋಡ್ಯಾನೊ || ೪೮ ||

ಮುದಿಯ ಮಲ್ಲನು ನನಗೆ ಒಲಿದುಕೊಟ್ಟ
ಎನುತ ಮಾಡಿದನು ಅವಸರ
ಎನುತ ಮಾಡಿದನು ಅವಸರ | ತನ
ಸುದತಿಗೊಯ್ದ ಕೊಟ್ಟನು ಸದರ     || ೪೯ ||