ವಚನ :

ಆನಂದದಿಂದ ಹೊರಟ ಶಿವದೇವ ತಾ, ಇತ್ತ ಚೆನ್ನಕ್ಕ ನಿತ್ಯದಂತೆ ಸ್ನಾನ-ಗೈಯ್ಯುತ್ತ, ಉತ್ತಮ ವಸ್ತ್ರಂಗಳ ಧರಿಸುತ್ತ, ನಿರ್ಮಲ ಮನದಿಂ ಹಾಲು ಹಿಂಡುತ್ತ, ಸಮ್ಮತದಿಂ ಪತ್ರಿ ನೈವೇದ್ಯವನು ಒಯ್ಯುತ್ತ, ನೋಡಿದಳು ಶ್ರೀಗುರುನಾಥನ. ನೀಡಿದಳು ಪಾಲ್‌ಬಟ್ಟಲವನ್ನು ಭಕ್ತಿಯಿಂದ.

ಪದ :

ತಂದು ಶಿವನ ಮುಂದ ಇಟ್ಟು ಹಾಲನು
ತಂದೆ ಸವಿಯೊ ನೀ ಪ್ರೀತಿಯಲಿ
ತಂದೆ ಸವಿಯೊ ನೀ ಪ್ರೀತಿಯಲಿ | ಎಂದು
ಹಿಂದೆ ಸರದಳತಿ ಬೇಗದಲಿ         || ೮ ||

ಒಂದು ಗಳಿಗೆ ತಾನಿಂದು ಮರೆಯಲಿ
ಬಂದು ನೋಡಿದಳು ಬಟ್ಟಲವ
ಬಂದು ನೋಡಿದಳು ಬಟ್ಟಲವ | ಹಾಲು
ಕುಡಿಯದಿದ್ದ ವರಸಾಂಬಶಿವ        || ೯ ||

ಕಂದಿ ಕುಂದಿ ಮನದೊಳು ಮರಗುತ
ತಂದ ಹಾಲು ಕುಡಿಯದೆ ನೀನು
ತಂದ ಹಾಲು ಕುಡಿಯದೆ ನೀನು | ಶಿವ
ಸುಮ್ಮನಿರುವ ಕಾರಣವೇನು        || ೧೦ ||

ಹಾಲು ಕಾಯವೊ ಹಾಲು ಒಡದವೊ
ಹಾಲು ಬಲು ಸುಡುತಿರುವವೊ
ಹಾಲು ಬಲು ಸುಡುತಿರುವವೊ | ನೀ
ಬ್ರಾಂತಿ ಎಂದು ಬಿಟ್ಟಿರುವೆಯೋ     || ೧೧ ||

ಸಾಕು ಬೇಕು ಎಂದು ಕೇಳದೆ ನೀನು
ಹಾಲು ಯಾಕೆ ಕುಡಿಯದೆ ನೀನು
ಹಾಲು ಯಾಕೆ ಕುಡಿಯದೆ ನೀನು | ಶಿವ
ಸುಮ್ಮನಿರುವ ಕಾರಣವೇನು        || ೧೨ ||

ಉಂಡಿ ಸಕ್ಕರಿ ಚಂಡು ಗುಂಡುಗಳ
ಕೊಂಡು ಕೊಡುವೆ ನಾ ನಿನಗಿನ್ನು
ಕೊಂಡು ಕೊಡುವೆ ನಾ ನಿನಗಿನ್ನು | ನಂ-
ಜುಂಡ ಕುಡಿಯೊ ನೀ ಹಾಲನ್ನು     || ೧೩ ||

ತಂದೆ ಬಂದು ಎನ್ನ ಕೊಂದು ಹಾಕುವನು
ಹಾಲು ಕುಡಿಯದಿರೆ ಕೇಳಿನ್ನು
ಹಾಲು ಕುಡಿಯದಿರೆ ಕೇಳಿನ್ನು | ನಿನ
ಪಾದದಲ್ಲಿ ಬಿದ್ದು ಸಾಯುವೆನು       || ೧೪ ||

ಕಲ್ಲಿನಾಥ ನಿನ ಎದುರಿನಲ್ಲಿ ನಾ
ಕಲ್ಲ ಹಾದು ಬಿಡುವೆನು ಪ್ರಾಣ
ಕಲ್ಲ ಹಾದು ಬಿಡುವೆನು ಪ್ರಾಣ | ನೀ
ಹಾಲು ಕುಡಿಯದಿರೆ ಕೇಳಿನ್ನು        || ೧೫ ||

ಜಾಣಿ ಪನ್ನಗವೇಣಿ ಚೆನ್ನಿಯು
ಆಣಿ ಮಾಡಿದಳು ಶಿವನಲ್ಲಿ
ಆಣಿ ಮಾಡಿದಳು ಶಿವನಲ್ಲಿ | ನಿನ್ನ
ಪಾದದಾಣೆ ಸಾಯುವೆನಿಲ್ಲಿ || ೧೬ ||

ಎಂದು ಹೇಳಿ ಆಗ ಮುಂದನಿಂತು ತಾ
ನಂದು ಹಾಯುತಿರೆ ಕಲ್ಲನ್ನು
ನಂದು ಹಾಯುತಿರೆ ಕಲ್ಲನ್ನು | ಶಿವ
ಬಂದು  ಹಿಡಿದನಾ ಚೆನ್ನಿಯನು      || ೧೭ ||

ಸಾಯಬೇಡ ಕಂದ ಕುಡಿಯುವೆ ಹಾಲ
ಬಳಲಬೇಡ ನೀನಂಬುತ
ಬಳಲಬೇಡ ನೀನಂಬುತ | ಹಾಲು
ಕುಡಿದನು ಶಿವ ತಾ ನಕ್ಕೊಂತ      || ೧೮ ||

ವಚನ :

ಇಂತು ಹಾಲು ಕುಡಿಯೆ ಪರಮೇಶ್ವರ, ಸಂತುಷ್ಟಳಾಗಿ ಚೆನ್ನವ್ವೆಯು ಮನಃಪೂರ‍್ವಕ ಕೂತು ಹರನ ಧ್ಯಾನಮಾಡುತ್ತ, ಹರಹರಾ ಎಂದು ನುಡಿದು ಬಂದಾಳೊ ಸರರರಾ.

ಪದ :

ಇಂತು ಕೊಡಗೂಸು ಸಂತೋಷದಿಂದಲಿ
ಕಂತು ಹರಗ ಒಯ್ಯುತ ಹಾಲ
ಕಂತು ಹರಗ ಒಯ್ಯುತ ಹಾಳ
ಕಂತು ಹರಗ ಒಯ್ಯುತ ಹಾಲ | ಭಯ
ಭಕ್ತಿಯಿಂದ ಕುಡಿಸುತ್ತಿರಲು || ೧೯ ||

ಒಂದು ದಿನವಸ ಬಾಲಿಂದುಧರನಿಗೆ
ಚಂದದಿಂದ ಹಾಲು ಕುಡಿಸುತ್ತ
ಚಂದದಿಂದ ಹಾಲು ಕುಡಿಸುತ್ತ | ತನ
ಮಂದಿರಕ ತಾನು ಹೋಗುತ್ತ        || ೨೦ ||

ಊರಿಗೆ ಹೋದ ಅವರಪ್ಪ ಬಂದನು
ದಾರಿಯೊಳಗ ಕಂಡಾನು ಮಗಳ
ದಾರಿಯೊಳಗ ಕಂಡಾನು ಮಗಳ | ತಾ
ಬರಿಯ ಬಟ್ಟಲಾ ಪಿಡಿದಿಹಳು        || ೨೧ ||

ಬರಿಯ ಬಟ್ಟಲಾ ಹಿಡಿದು ಹೊರಟೆ ನೀ
ಎಲ್ಲಿ ಸುರುವಿರಿ ಹಾಲನ್ನು
ಎಲ್ಲಿ ಸುರಿವಿದಿ ಹಾಲನ್ನು | ನೀ
ಕುಡಿದು ಬಿಟ್ಟೆಯೋ ಹೇಳಿನ್ನು        || ೨೨ ||

ಅಪ್ಪ ಕೇಳು ನಿನ್ನಪ್ಪಣೆಯಂತೆ
ತಪ್ಪದೆ ಹಾಲು ಒಯ್ಯುವೆನು
ತಪ್ಪದೆ ಹಾಲು ಒಯ್ಯುವೆನು | ಶ್ರೀ
ಮುಕ್ತಿಕೇಶಗ ಉಣಿಸುವೆನು || ೨೩ ||

ಕುಲ್ಲಿ ಹುಡುಗಿ ನೀ ಸುಳ್ಳ ಹೇಳದಿರು
ಎಲ್ಲಿ ಚೆಲ್ಲಿದಿ ಹಾಲನ್ನು
ಎಲ್ಲಿ ಚೆಲ್ಲಿದಿ ಹಾಲನ್ನು | ವರ
ಕಲ್ಲಿನಾಥ ಪ್ರಸಾದವನು    || ೨೪ ||

ನಿಕಟವಿದ್ದ ಮಾತು ಗಟ್ಟಿ ಹೇಳತಾಳ
ಹಾಲು ಕುಡಿಯುವನು ಪರಶಿವನು
ಹಾಲು ಕುಡಿಯುವನು ಪರಶಿವನು | ವರ
ತಾತಾ ನಾಳೆ ತೋರುವ ನಿನಗೆ    || ೨೫ ||

ಉದಯವಾಗಲು ಚದುರಚೆನ್ನಿ ತಾ
ಮುದದಿ ನಡೆದಳು ಈಶನ ಗುಡಿಗೆ
ಮುದದಿ ನಡೆದಳು ಈಶನ ಗುಡಿಗೆ | ತನ
ತಂದೆ ಸಹಿತ ಶಂಕರನಡಿಗೆ         || ೨೬ ||

ಬಾಲೆ ಭಕ್ತಿಯಲಿ ಹರನ ಎದುರಿಗೆ
ಹಾಲ ಇಟ್ಟು ಮುಗಿದಳು ಕೈಯ
ಹಾಲ ಇಟ್ಟು ಮುಗಿದಳು ಕೈಯ | ವರ
ಕಲ್ಲಿನಾಥ ನೀ ಕುಡಿ ಹಾಲ || ೨೭ ||

ಹಸುಳೆಯ ಭಕ್ತಿ ವಸುಧೆಯೊಳಗೆ ತಾ
ಪಸರಿಸಲೆಂದು ಪರಶಿವನು
ಪಸರಿಸಲೆಂದು ಪರಶಿವನು | ತಾ
ಕುಡಿಯದಿದ್ದ ವರಕ್ಷೀರವನು          || ೨೮ ||

ನಿಂತು ನೋಡಿ ಶಿವದೇವ ಕೇಳತಾನು
ಇಂದು ಯಾಕ ಕುಡಿಯನು ಹಾಲ
ಇಂದು ಯಾಕ ಕುಡಿಯನು ಹಾಲ | ನೀ
ಇಂದುಧರಗ ಹಾಲುಣಿಸಿಲ್ಲ || ೨೯ ||

ಮೃತ್ಯುಂಜಯಗ ನೀ ಕುಡಿಸದೆ ಹಾಲ
ಮತ್ಯಾರಿಗೆ ಕುಡಿಸಿದೆ ಹಾಲ
ಮತ್ಯಾರಿಗೆ ಕುಡಿಸಿದೆ ಹಾಲ | ನಿನ
ಕುತ್ತಿಗೆ ಕಡಿದು ಚೆಲ್ಲುವೆನು || ೩೦ ||

ರೂಢಿಯೊಳಗೆ ನೀ ಎತ್ತ ಬದುಕುವಿ
ಛಿದ್ರ ಛಿದ್ರ ಮಾಡುವೆ ನಿನ್ನ
ಛಿದ್ರ ಛಿದ್ರ ಮಾಡುವೆ ನಿನ್ನ | ಎಂದು
ಬೆನ್ನ ಹತ್ತಿಬರಲು ಮುನ್ನ   || ೩೧ ||

ಬಾಲೆ ಹೆದುರುತ ಚಿನ್ಮಯ ಶಿವನೆ
ಎನ್ನ ಸಲಹು ನೀ ಎನ್ನುತಲಿ
ಎನ್ನ ಸಲಹು ನೀ ಎನ್ನುತಲಿ | ಶಿವ
ಎನ್ನುತ ಪಾದಕೆ ಎರಗುತಲಿ         || ೩೨ ||

ಹೆದರಬೇಡವೆಂದು ಮುಕ್ಕಣ್ಣ ಶಿವನು
ಹಾಲು ಕುಡಿದನು ಪ್ರೀತಿಯಲಿ
ಹಾಲು ಕುಡಿದನು ಪ್ರೀತಿಯಲಿ | ವರ
ಬಾಲೆಯನ್ನು ಸಂತೈಸುತಲಿ         || ೩೩ ||

ಚದುರ ಶಿವನು ತನ್ನ ಉದರವ ಬಗಿಯುತ
ಅದರೊಳಗಿರಿಸಿದ ಚೆನ್ನಿಯನು
ಅದರೊಳಗಿರಿಸಿದ ಚೆನ್ನಿಯನು | ಅವ
ರಪ್ಪ ಹಿಡಿದ ಮುಂಗರುಳನ್ನು        || ೩೪ ||

ಅಂಗಲಿಂಗದೊಳು ಸಂಗಮವಾಯಿತು
ಮುಂಗುರಳಾದವು ಹೊರಗಿನ್ನು
ಮುಂಗುರುಳಾದವು ಹೊರಗಿನ್ನು | ಪ್ರತಿ
ವರುಷ ಬೆಳೆಯುತಿರುವವು ಇನ್ನು    || ೩೫ ||

ಸರಸವಾದ ಕೊಡಗೂಸಿನ ಕಥೆಯನು
ಆರು ಕೇಳುವರು ಭಕ್ತಿಯಲಿ
ಆರು ಕೇಳುವರು ಭಕ್ತಿಯಲಿ | ಅವ
ರಿಷ್ಟ ಸಿದ್ಧಿಪವು ಶೀಘ್ರದಲಿ  || ೭೬ ||

* * *

 

ಭಕ್ತ ಪ್ರಲ್ಲಾದ

ವಂದಿಸಿ ಸದ್ಗುರು ಶಂಕರಗುರುವರ
ಚರಣಾಬ್ಜಕೆ ಸಾನಂದದಲಿ           || ೧ ||

ಮಂದರಧರ ಶ್ರೀ ವರಗೋವಿಂದನು
ಕರುಣಿಸಿದನು ಪ್ರಲ್ಹಾದನಲಿ                   || ೨ ||

ಕೇಳಿರಿ ಸುಜ್ಞರು ವರಪ್ರಲ್ಲಾದನ
ಸತ್ಯಕಥೆಯನು ಸಾಮೋದದಲಿ               || ೩ ||

ಖೂಳ ಹಿರಣ್ಯಕಶ್ಶಪನು ಕಾಡಿದ
ವರಪ್ರಲ್ಹಾದನ ನಿಷ್ಕರುಣದಲಿ                 || ೪ ||

ವರವೈಕುಂಠದ ಪರಮಪುರುಷ ಹರಿ
ಧರಣಿಧರನ ಮೇ ಮಲಗಿರಲು                || ೫ ||

ತೋರುತ ಪರಮಾನಂದವನೀಯುತ
ಗರುಡಪಕ್ಷಿ ಮೊದಲಾದವರು                  || ೬ ||

ಸನಕಸಾನಂದ ಸನಾತನ ಮುನಿಗಳು
ಕನಕ ಕಶ್ಶಪನು ಕಾಡುದಕೆ          || ೭ ||

ಇಂತು ಬಳಲುತನಂತ ಸನ್ನಿಧಿಗೆ
ಬ್ರಹ್ಮರುದ್ರ ಮುನಿ ಮೊದಲಾಗಿ                || ೮ ||

ಶಾಂತಮುನಿ ಶ್ರೀಕಂತು ಪಿತನ ಗುಣ
ವರ್ಣನ ಮಾಡಿದರವರಾಗ          || ೯ ||

ವಚನ :

ಜಯಜಗನ್ನಿವಾಸ, ಜಯಜಗತ್‌ವಂದ್ಯ, ಜಯಜಯರೆನಿಪೆವು ನಿನಗೆ. ಜಗದಾ-ಧಾರವು ನೀನೆ. ಜಗದೊಳು ಧೀರ. ಜಗದೊಳು ಅತಿಹರುಷ ಪೂರ. ಶೂರ ರಕ್ಕಸ ಹಿರಣ್ಯಕಶ್ಯಪನ ಕೊಂದು ಭೂಮಿಭಾರ ಇಳಿಸುವುದಿಲ್ಲವೆ, ಮುನಿಜನ ವಂದಿತ ಕರುಣ ಸಾಗರನೆ ರಕ್ಷಿಸು ಅಖಿಲಗಣವ.

ಪದ :

ಕರುಣವಿರಲಿ ಬಹು ತರುಣಿ ಪ್ರೀತನೆ
ಚರಣಕೆರಗಿ ಬೇಡುವೆ ನಾನು        || ೧೦ ||

ಶರಣರ ಕಷ್ಟವ ಧರಣಿಗಿಳಿದು ನೀ
ಕರುಣಮಾಡು ಕೋರಿಕೆಯನ್ನು      || ೧೧ ||

ಬ್ರಹ್ಮಗೆ ರಕ್ಕಸ ವರವನು ಬೇಡಿದ
ಇಂದ್ರಚಂದ್ರ ದೇವತೆಯಿಂದ        || ೧೨ ||

ಕುಬೇರ ಅಗ್ನಿ ವರುಣ ಆಕಾಶ
ಅಸ್ತ್ರ ಶಸ್ತ್ರ ಆಯುಧದಿಂದ  || ೧೩ ||

ಧರಣಿಪತಿ ನನಗೆ ಮರಣವಿಲ್ಲ
ಶಿವಶರಣರಂತೆ ಬದುಕುವೆ ನಾನು  || ೧೪ ||

ಕರಡಿ ಹುಲಿಯು ಕಾಡಹಂದಿ ಮೊಲಗಳು
ಹೆದರಿ ಓಡಿಹೋದವು ಬೇತಾಳ     || ೧೫ ||

ಒಳಗೆ ಹೊರಗೆ ಮತ್ತಿಳೆಗೆ ಇಲ್ಲವೊ
ಸಾವು ಎನಗೆ ಶೂರೋತ್ತಮಗೆ       || ೧೬ ||

ನಾಳಿನ ವಿಘ್ನವ ಗೆಲುವನೆಂದು
ಸಾರಿ ಹೇಳಿದನು ಭರದಿಂದ         || ೧೭ ||

ವಚನ :

ಇಂತು ಹೇಳಿದನು. ಎಲೋ ದೇವತೆಗಳಿರಾ ಬೆದರಬೇಡಿರೆಂದು ಅಭಯ ವಚನವಿತ್ತು ಅಂದುದೇನೆಂದರೆ, ಶೂರರಕ್ಕಸನಾದ ಹಿರಣ್ಯಕಶ್ಶಪನ ಹೆಂಡತಿಯಾದ ಗದದೇವಿ ಹೊಟ್ಟೆಯಲ್ಲಿ ಸ್ವಲ್ಪ ಕಾಲದಲ್ಲಿ ಪ್ರಲ್ಹಾದನೆಂಬುವ ಶಿಶುವು ಯಾವಾಗ್ಗೆ ಜನಿಸುವದೋ ಆವಾಗ್ಗೆ ನಿಮ್ಮ ದುಃಖ ಪರಿಹರಿಸುವೆನೆಂದು ಹೇಳಿದ ಮಹಾವಿಷ್ಣು ದೇವನು.

ಪದ :

ಇಂದುಮುಖಿಯ ಗೋವಿಂದನ ದಯದಿಂದ
ಕಂದನಹೊಂದಿ ಕೈಲಾಸದಲಿ        || ೧೮ ||

ಚಂದದಿ ಚಂದಿರನಂತೆ ನಗುವುತ
ಆನಂದದಿ ತೋರುವ ನವಜಗಕೆ     || ೧೯ ||

ನಿತ್ಯದಿ ಬೆಳೆದನು ಶಿಸು ಪ್ರಲ್ಹಾದನು
ಐದು ವರ್ಷ ಬಾಲಕನಾಗಿ  || ೨೦ ||

ಹುಡುಗನ ನೋಡಿ ಸಡಗರದಿಂದ
ಸಾಲಿಗ್ಹಾಕ್ಯಾರೊ ಶುಭಮೂರ್ತದಲಿ || ೨೧ ||

ಕೂಡಿದ ಹುಡುಗರ ಹಿಂದೆ ಹಾಕಿದನು
ಶಾಸ್ತ್ರವಿದ್ಯೆ ಪುರಾಣದಲಿ   || ೨೨ ||

ಬಾಲಕನಲ್ಲಿ ಅರಸನೆಂದು ಬಹು
ಭಕ್ತಿಯಿಂದ ನಡಕೊಳ್ಳುತಲಿ          || ೨೩ ||

ಬಾಲಕ ಶ್ರೀಹರಿ ಸರ್ವೋತ್ತಮ ತಾ
ನೆಂದು ಭಜನೆಯ ಮಾಡುತಲಿ      || ೨೪ ||

ಹರಿಭಜನೆಯನ್ನು ಮಾಡುತ ನಿಂತರು
ಕೈಹಾಕಿ ಚಪ್ಪಾಳೆ ಹೊಡಿದು         || ೨೫ ||

ಗುರುಗಳ ತಂಡ ಹಿರಿಯರೆಲ್ಲರು
ನೋಡಿದಾರು ಹುಡುಗನ ಆಟ       || ೨೬||

ಹುಡುಗನ ಆಟ ನೋಡಿ ರಕ್ಕಸ
ತರುವನು ಮಗ ದಾಳಿಯ ಬೇಗ    || ೨೭ ||

ವಚನ :

ಇಂತು ಹೇಳಿದನು ಹಿರಣ್ಯಕಶ್ಯಪ. ಶಾಂತ ಪ್ರಲ್ಹಾದನೆ ಕಂತು ಪಿತನ ಧ್ಯಾನವನ್ನು ಬಿಡುಬಿಡು. ನಮ್ಮ ರಕ್ಕಸ ಕುಲಕ್ಕೆ ಪೂಜಿಪನಾಗು. ವೇದಾ ಗಮನವನ್ನು ತ್ಯಜಿಸು. ಮುನಿಜನರನ್ನು ಕಷ್ಟಗೊಳಿಸು. ಎಲೈ ಬಾಲಕನೆ ನಿಖಿಳಜನಲೋಲನೆ.

ಪದ :

ತರುಳಮಗನೆ ಬಿಡು ದುರಳತನವನು
ಸರಳಮಾತಿಲಿಂದಿರು ನೀನು        || ೨೮ ||

ಕಪ್ಪುಗೊರಳನ ಪೂಜಿಸುವ ಶಿಸುವೆ
ಮರೆತುಬಿಡು ಆ ಹರಿಯನ್ನು         || ೨೯ ||

ತಂದೆಯೆ ಎನ್ನನು ರಕ್ಷಿಪ ಹರಿಯು
ಅವನ ಸಮರಣೆ ಬಿಟ್ಟರೇನಿನ್ನು      || ೩೦ ||

ಇಂದಿರ ರಮಣನ ಆಜ್ಞೆ ಇದ್ದರೆ
ಪ್ರಾಣಹೋದರೂ ಭೀತಿಯು ಇಲ್ಲ    || ೩೧ ||

ಕೇಳಿ ಈ ಮಾತನು ಸಿಟ್ಟಿಗೆದ್ದು
ನಿಟ್ಟುಸುರ ಬಿಟ್ಟ ರಕ್ಕಸ ತಾನು      || ೩೨ ||

ಖೂಳ ನಿನ್ನಯ ಪ್ರಾಣ ತೆಗೆಯುವೆ
ಹರಿ ಅಂದರೆ ನಾಳಿನ ದಿವಸ        || ೩೩ ||

ಸಾರಿ ಹೇಳತೇನಿ ಶೂರಶಿಖಾಮಣಿ
ವಾರಿಜಾಕ್ಷನೆಲ್ಲಿ ಹುಟ್ಟಿದನು || ೩೪ ||

ಪರಂಜ್ಯೋತಿ ಪರಬ್ರಹ್ಮನಲ್ಲಿಯೇ
ಅಂಬ ಹುಟ್ಟಿತು ಅದು ಮೊದಲ      || ೩೫ ||

ನಾನೆಂಬುವ ದೈತ್ಯಭಾವಗಳು
ತಿಳಿದು ನೋಡಿದರೇನಿಲ್ಲ   || ೩೬ ||

ಜ್ಞಾನಿಗಳೆಲ್ಲ ತಿಳಿದು ಹೇಳುವರು
ಮೊಟ್ಟಮೊದಲು ಏನೇನಿಲ್ಲ || ೫೭ ||

ಪ್ರಲ್ಹಾದನು ಹೇಳುತ ತಂದೆಗೆ
ಹರಿಹರನೆಂಬುದು ಬೇದಿಲ್ಲ || ೩೮ ||

ಹರಿಹರನೆಂಬುದು ಬೇದಿಲ್ಲವೊ
ವೀರಧೀರ ಮೊದಲಾದವರು         || ೩೯ ||

ಇಂತು ಮಾತನು ಕೇಳಿ ರಕ್ಕಸ
ರಟ್ಟಿ ಹಿಡಿದು ಒಗೆದನು ದೂರಾ      || ೪೦ ||

ಕಣ್ಣುಮುಚ್ಚಿ ಹರಿ ಸ್ಮರಣೆ ಮಾಡಿದರೆ
ಬಂದಿತಾಗ ಮೈಮೇಲೆ ಖಬರ       || ೪೧ ||

ಸಣ್ಣ ಕಂದನು ಸಭೆಗೆ ಬಂದನು
ತಂದೆ ಕುಂತ ಜಾಗಾದಲ್ಲಿ  || ೪೨ ||

ಆನೆಯ ಕಾಲಿಗೆ ಕಟ್ಟಿ ಎಳೆಸಿರೆಂದು
ಆಳಿಗೆ ಆಜ್ಞೆಯ ಮಾಡಿದನು         || ೪೩ ||

ಆನೆ ಎಳದರೂ ಪ್ರಾಣ ಹೋಗಲಿಲ್ಲ
ಮತ್ತೆ ತಿರುಗಿ ಬಂದನು ಮಗನು     || ೪೪ ||

ಮಾನಿನಿ ಕರೆದು ಮನ್ನಿಸಿ ಹೇಳತಾನು
ಮಗನಿಗೆ ವಿಷವನು ಕೊಡು ನೀನು   || ೪೫ ||

ಶಿಶುವ ಕೇಳು ನಿನ್ನ ಪಿತನ ಮಾತನು
ಮೀರಿ ಹೋಗುವದು ಧರ್ಮಲ್ಲ       || ೪೬ ||

ಅಸುರರ ಕುಲಕೆ ವೈರಿಯಾದ ಹರಿ
ಸ್ಮರಣೆ ಮಾಡುವದು ತರವಲ್ಲ       || ೪೭ ||

ಹುಟ್ಟಿದ ಕುಲಕೆ ನೋಡಿ ನಡೆದರೆ
ಲೋಕದೊಳಗೆ ಅವನೇ ಹೆಚ್ಚು      || ೪೮ ||

ಗಟ್ಟಿಸಿ ಹೇಳತಾನು ಬಾಲನು ತಾಯಿಗೆ
ಅಸುರ ಕುಲಕೆ ಬೆಂಕಿಯ ಹಚ್ಚು      || ೪೯ ||

ಬೇಡಮಗನೆ ಈ ಕೇಡ ವಿಷವು
ಕಾಡುಗಿಚ್ಚಿನಂತಿರುವುದು   || ೫೦ ||

ಬಳಲುತ ಬಟ್ಟಲು ತುಂಬಿಕೊಟ್ಟಳು
ಎರವು ಎನಗೆ ಕಂದನ ರೂಪ        || ೫೧ ||

ಬಾಲ ನಿನ್ನಯ ವಜ್ರ ಕೆತ್ತಿಸಿದ
ಗೆಜ್ಜೆ ಸರಪಣಿ ಉಡದಾರ  || ೫೨ ||

ಶಾಲುಜೋಡು ಶಕಲಾತಿ ಅಂಗಿಯು
ಎಷ್ಟು ಹೇಳಲಿ ಅಪರಂಪಾರ         || ೫೩ ||

ಕಷ್ಟಬಂತು ಬಲುಬ್ರಷ್ಠಳೆಂದು ಜನ
ಬಯ್ಯುವರೆನಗೆ ಬಗೆಬಗೆಯ         || ೫೪ ||

ಇಂತು ದುಃಖಿಸುತ ನಿಂತಿರುತಾಯಿ
ನೋಡುವಷ್ಟರಲಿ ವಿಷಕುಡಿದು       || ೫೫ ||

ಶಾಂತನಾಗಿ ಅನಂತನ ನೆನಸುತ
ತೋರಿದ ಮಗ ತಾ ಅತಿ ಹರುಷ    || ೫೬ ||

ಆಡುತ ಬಂದ ಪ್ರಲ್ಹಾದನು
ತಂದೆ ಕುಂತ ಜಾಗಾದಲ್ಲಿ  || ೩೭ ||

ನೋಡಿದ ತಂದೆ ಹೇಳಿದನಾಗ
ಹಾಕವನ ಕಾದ ಎಣ್ಣೆಯಲಿ || ೫೮ ||

ರಾಜನ ಮಾತಕೇಳಿ ಕಡಾವಿಗೆ
ಇಟ್ಟರಾಗ ಒಲಿಯನು ಹೂಡಿ         || ೫೯ ||

ಹೂಜಿಲೆ ಎಣ್ಣೆ ತುಂಬಿದರಾಗ
ನೂರುಕೊಡ ದೌಡಾದೌಡಿ || ೬೦ ||

ಕಳಕಳ ಕುದಿಯುವ ಎಣ್ಣೆಯೊಳಗೆ
ಒಗೆದುಬಿಟ್ಟರು ರಕ್ಕಸ ಮಗನ       || ೬೧ ||

ನಳಿನನಾಭನ ಭಜಿಸಲು ಎಣ್ಣೆ
ತಣ್ಣಗಾಗಿ ಹೋಯಿತು ಪೂರಾ       || ೬೨ ||

ಮತ್ತೆ ನುಡಿದನು ಅಧಮ ರಕ್ಕಸ
ಸುತ್ತು ಮುತ್ತು ನೋಡಿದ ಸದರ     || ೬೩ ||

ಹೊತ್ತ ಮುಳುಗುತ ಬಂದ ವ್ಯಾಳ್ಯದಾಗ
ಕತ್ತಿ ಹಿಡಿದು ಕಡಿದನು ಚದುರ       || ೬೪ ||

ಕುಲಗೇಡಿ ನಿನ್ನ ಕಡಿದು ಹಾಕುವೆನು
ಹೇಳು ನಿನ್ನ ಸ್ವಾಮಿಯು ಎಲ್ಲಿ       || ೬೫ ||

ಕುಲುಕುಲುನಕ್ಕು ಖುಲ್ಲಾ ಹೇಳತಾನು
ಇರುವಸ್ವಾಮಿ ಎಲ್ಲಾದರಲ್ಲಿ || ೬೬ ||

ಭೂತಳ ತೇಜ ವಾಯು ಆಕಾಶ
ಚಂದ್ರಸೂರ್ಯ ದಶದಿಕ್ಕಿನಲ್ಲಿ        || ೬೭ ||

ಒಡಿಯುತ ಕಂಬ ಗಡಗಡನೆಂದು
ಸಿಡಿಲಿನಂತೆ ಆಯಿತು ಶಬ್ದ || ೬೮ ||

ದಡದಡ ಬಿದ್ದವು ಗುಡ್ಡ ಗಿಡಗಳು
ಉಕ್ಕೇರಿತು ಆಗ ಸಮುಂದರ       || ೬೯ ||

ವಚನ :

ಕೇಳಿರಿ, ಆ ಹರಿಯು ನಾರಸಿಂಹನ ಅವತಾರವನ್ನು ತಾಳಿ ಕಂಬದಿಂದ ಹೊರಬಂದು ಹಿರಣ್ಯಕಶ್ಯಪನನ್ನು ಕೊಂದನು. ಆಮೇಲೆ ಪ್ರಲ್ಹಾದನನ್ನು ಮುಂದೆ ಕರೆದು ತಲೆಯ ಮೇಲೆ ಅಭಯ ಹಸ್ತವನ್ನಿಟ್ಟು ಸಾಯುಜ್ಯ ಪದವಿ ದಯಪಾಲಿಸಿದನು.