ಶಿವಶರಣೆ ನಿಂಬೆಕ್ಕ

ಗುರುವೆ ನಿಮ್ಮಯ ಪರತರ ಚರಣಕೆ
ಸರಸಿಜಾತಕೆರಗುವೆ ನಾನು
ಸರಸಿಜಾತಕೆರಗುವೆ ನಾನು | ಎನ್ನ
ದುರಿತವ ಪರಿಹರಿಸಯ್ಯ ನೀನು               || ೧ ||

ಧರೆಯೊಳು ನಾನಾ ಯೋನಿಗಳಲ್ಲಿ
ತಿರುಗಿ ತಿರುಗಿ ಬಹು ಬಳಲಿರುವೆನು
ತಿರುಗಿ ತಿರುಗಿ ಬಹು ಬಳಿರುವೆನು | ಎನ್ನ
ತರಳನೆಂದು ಕಾಪಾಡಿನ್ನು           || ೨ ||

ಕರುಣ ಸಾಗರನೆಂಬುವ ನಿನ್ನ
ಬಿರುದಿಗಾಗಿ ಕರುಣಿಸು ಎನ್ನ
ಬಿರುದಿಗಾಗಿ ಕರುಣಿಸು ಎನ್ನ | ಎನ್ನ
ದುರುಳತನವ ನೋಡಬ್ಯಾಡಿನ್ನಾ             || ೩ ||

ಹಿರಿಯ ನೀನು ಕಿರಿಯ ನಾನು ನಿನ್ನ
ಮರೆಯ ಹೊಕ್ಕ ಬೇಡುವೆ ನಾನು
ಮರೆಯ ಹೊಕ್ಕ ಬೇಡುವೆ ನಾನು | ಎನ್ನ
ಮರೆಯ ಬೇಡ ಗುರು ಹರ ನೀನು             || ೪ ||

ಹರನ ಭೂಮಿಯೊಳು ಗುರುವಿನ ರೂಪ
ಧರಿಸಿ ಜಗದಿ ಚರಿಸಯ್ಯ ನೀನು
ಧರಿಸಿ ಜಗದಿ ಚರಿಸಯ್ಯ ನೀನು | ಉ
ದ್ಧರಿಸು ನಂಬಿದ ಭಕ್ತರನು           || ೫ ||

ಕಂದನು ಮಾಡಿದ ಕುಂದವ ಚಂದದಿ
ತಂದೆ ಸೈರಿಸುವ ಪಂಥವ ನೀ
ತಂದೆ ಸೈರಿಸು ಪಂಥವ ನೀ | ಎನ್ನ
ಮಂದುಮತಿಯ ತೊಲಗಿಸು ಇನ್ನಾ           || ೬ ||

ಹರನಿಗಿಂತ ಬಲು ಹಿರಿಯನೆಂದು ಬಹು
ಪರಿಯಲಿ ನಿನ್ನನು ಹಾಡುವೆನು
ಪರಿಯಲಿ ನಿನ್ನನು ಹಾಡುವೆನು | ನಾ
ವರ ಕೈವಲ್ಯವ ಬೇಡುವೆನು                   || ೭ ||

ಜಗದೊಳು ನಿನಗಿಂತ ಮಿಗಿಲಾದವರು
ನಿಗಮಾಗಮ ಶಾಸ್ತ್ರಗಳನ್ನು
ನಿಗಮಾಗಮ ಶಾಸ್ತ್ರಗಳನ್ನು | ನಾ
ನಗಿಮುಗದಿ ಪೊಗಳುವೆ ನಿಮ್ಮನ್ನು            || ೮ ||

ವಚನ :

ಇಂತು ಮೂರು ಲೋಕದಲ್ಲಿ ಗುರುವೆ ಅಧಿಕ್ಯನು. ಗುರುವಿನಿಂದಲೇ ಮುಕ್ತಿಯು. ಗುರುವು ಇಲ್ಲದಂಥ ನರನು ಪರಿಪರಿ ಜನ್ಮಗಳಲ್ಲಿ ತಿರುಗಿ ಬಹು ಕಷ್ಟಕ್ಕೆ ಗುರಿಯಾಗುವನು. ಇದರಿಂದ ಗುರುವಿನ ಪಾದವನ್ನು ಮೊದಲು ನೆನೆದು ಕತೆಯನ್ನು ಹೇಳುತ್ತೇವೆ. ಸಜ್ಜನರು ಒಲಿದು ಕೇಳ್ರಿ.

ಪದ :

ನೀಲನೊರೆನೆಂಬುವ ಮೇಲದಿ ಪುರದಿ
ಬಾಲಿ ನಿಂಬೆಕ್ಕನು ತಾನು
ಬಾಲಿ ನಿಂಬೆಕ್ಕನು ತಾನು | ಬಲು
ಶೀಲದೊಳಿದ್ದಳು ಬಹು ತಾನು       || ೯ ||

ಏಳು ವರ್ಷದ ಬಾಲಕನಿದ್ದನು
ಬಾಲಿ ನಿಂಬಿಯಕ್ಕನ ಮಗನು
ಬಾಲ ನಿಂಬಿಯಕ್ಕನ ಮಗನು | ತಾ
ಬಲು ಶೀಲದಲ್ಲಿ ಇದ್ದನವನು         || ೧೦ ||

ಶರಣೆ ನಿಂಬಿ ತಾ ಶರಣರ ಮನಿಗೆ
ತರುವಳು ಕೂಲಿಯ ನೀರನ್ನು
ತರುವಳು ಕೂಲಿಯ ನೀರನ್ನು | ನಿತ್ಯ
ನೇಮದಿ ನೆನೆವಳು ಶಿವನನ್ನು       || ೧೧ ||

ಕೂಲಿ ದನಗಳ ಕಾಯಲಿಕ್ಕೆ ತನ್ನ
ಬಾಲಕನ ಹಚ್ಚಿದಳಿನ್ನು
ಬಾಲಕನ ಹಚ್ಚಿದಳಿನ್ನು | ತಾ
ಪಾಲಿಸುವನು ದರಕರುಗಳನು      || ೧೨ ||

ವಚನ :

ನೀಲನೂರವೆಂಬ ಗ್ರಾಮದಲ್ಲಿ ನಿಂಬೆಕ್ಕನೆಂಬ ಶಿವಶರಣೆ ಧನ-ಕನಕ-ಪುತ್ರಾದಿ ಭೋಗಗಳನ್ನು ನಂಬದೆ, ಕಾನನದೊಳಗಾದರೋ ಮುಕ್ತಿಗೆ ಮನವಿಟ್ಟು ಬಯಸದೆ ಬಂದ ಬಡತನಕ್ಕೆ ಎಳ್ಳಷ್ಟಾದರು ಚಿಂತಿಸದೆ. ಗುರು-ಲಿಂಗ-ಜಂಗಮ-ದಾಸೋಹವನ್ನೇ ತಾನು ನಿತ್ಯದಲ್ಲಿ ಮಾಡುತ್ತಲೆ. ಶಿವಭಕ್ತರ ಮನಿಗೆ ಕೂಲಿಯ ನೀರನ್ನು ತರುತ್ತ, ತನ್ನ ಏಳು ವರ್ಷದ ಮಗನನ್ನು ಕೂಲಿಯ ದನಗಳನ್ನು ಕಾಯಲಿಕ್ಕೆ ಹಚ್ಚಿ, ಅ ಕಾಯಕದಿಂದ ಜಂಗಮರ ಸೇವೆಯಲ್ಲಿ ತೃಪ್ತಳಾಗಿದ್ದಳು.

ಪದ :

ತಾಯಿ ಮಗನು ದುಡಿತಂದ ಕೂಲಿಯಲಿ
ಹಾಯವಾಗಿ ಜಂಗಮರನ್ನು
ಹಾಯವಾಗಿ ಜಂಗಮರನ್ನು | ಸುದ್ದ
ಭಾವದಿಂದ ಉಣಿಸುವಳಿನ್ನು        || ೧೩ ||

ಬಂದ ಜಂಗಮರ ಹಿಂದಕೆ ಕಳಿಸಿದೆ
ಚಂದದಿಂದ ತಾ ನೀಡುವಳು
ಚಂದದಿಂದ ತಾ ನೀಡುವಳು | ಮನ
ದೊಂದು ನಿತ್ಯ ದಾಸೋಹವನು     || ೧೪ ||

ಬೇಡಿದನ್ನವ ನೀಡುತಲಿದ್ದಳು
ರೂಢಿಯಲ್ಲಿ ಉಪಚಾರವನು
ರೂಢಿಯಲ್ಲಿ ಉಪಚಾರವನು | ನಲಿ
ದಾಡಿ ಮಾಡಿದಳು ತೃಪ್ತಿಯನು      || ೧೫ ||

ವಚನ :

ನಿಂಬೆಕ್ಕನು ತನ್ನ ಸುಕುಮಾರನು ದುಡಿದು ತಂದ ಹಣದಿಂದಲೇ ಬಂದಂಥ ಜಂಗಮರಿಗೆ ಭಕ್ತಿಮಾಡುತ್ತಿದ್ದಳು. ಗಣಂಗಳು ಎಷ್ಟೋ ಕೂಡಿದ ಹಾಗಾದರೂ ನಿಂಬೆಕ್ಕನ ಅಂಬಲಿಯು ಅಮೃತಕ್ಕಿಂತ ಮಧುರವಾಗಿ ಬಂದಂಥ ಚರಮೂರ್ತಿಗಳು ಆನಂದದಿಂದ ಅವಳನ್ನು ಹರಸುತ್ತಿದ್ದರು.

ಪದ :

ಒಂದು ದಿವಸ ಕೈಲಾಸದಿ ಶಿವನು
ಚಂದದಿಂದ ಓಲಗದೊಳಗೆ
ಚಂದದಿಂದ ಓಲಗದೊಳಗೆ | ಆ
ನಂದದಿಂದ ಕುಳಿತಿರಲಾಗಿ || ೧೬ ||

ಓಲಗದೊಳು ಸಿರಿಯಾಳ ಶೆಟ್ಟಿ ತಾ
ನೀಲಕಂಠನೆದುರಿಗೆ ಬೇಗ
ನೀಲಕಂಠನೆದುರಿಗೆ ಬೇಗ | ತಾ
ತಾಂಬಲೆಂಬ ಗರ್ವದೊಳಗೆ         || ೧೭ ||

ನನ್ನ ಹಾಗೆ ಮಗನನ್ನು ಕೊಯ್ದು ಶಿವಗೆ
ಉಣಿಸಿದವರು ಯಾರು ಇಹದೊಳಗೆ
ಉಣಿಸಿದವರು ಯಾರು ಇಹದೊಳಗೆ | ಸಾ
ಮಾನ್ಯನಲ್ಲ ನಾ ಜಗದೊಳಗೆ        || ೧೮ ||

ಮಾನ್ಯ ನಾನು ಮುಕ್ಕಣ್ಣನ ಸಭೆಯೊಳು
ಎನ್ನನು ಹೋಲುವರ‍್ಯಾರೀಗ
ಎನ್ನನು ಹೋಲುವರ‍್ಯಾರೀಗ | ಬಹು
ಮನ್ನಿಸುವರು ಸರ್ವರು ಎನಗ       || ೧೯ ||

ಇಂತು ಸೊಕ್ಕಿ ಮನ ಬಂದ ಹಾಗೆ ತಾ
ಕುಂದದಿ ನುಡಿದನು ಸಭೆಯೊಳಗೆ
ಕುಂದದಿ ನುಡಿದನು ಸಭೆಯೊಳಗೆ | ಬಲು
ಮಂದಮತಿಯ ಮನುಜರ ಹಾಗೆ    || ೨೦ ||

ವಚನ :

ಒಂದು ದಿವಸ ಕೈಲಾಸ ನಗರದಲ್ಲಿ ಶಿವನು ಓಲಗದೊಳಗೆ ಪಾರ್ವತಿಯೊಡನೆ ಕುಳಿತಿದ್ದ. ಹರಿ ಬ್ರಹ್ಮ ದೇವೇಂದ್ರ ಮುಂತಾದ ದೇವತೆಗಳು ಕುಳಿತಿರಲು, ವಶಿಷ್ಠ ವಾಮದೇವಾದಿ ಮುನಿಗಳು ಶಿವನಿಗೆ ಸಮಾನರಾದ ಪ್ರಮಥರು ಅನೇಕ ಶರಣರು ನೆರದಿದ್ದರು. ಆಗ ಸಿರಿಯಾಳನು ನುಡಿದಿದ್ದೇನೆಂದರೆ – ನನ್ನ ಹಾಗೆ ಮಗನನ್ನು ಕೊಯ್ದು ಶಿವನಿಗೆ ಉಣಿಸಿ ಕೈಲಾಸ ಸೂರಿಗೊಂಡವರಾರು? ನಾನೇ ಶ್ರೇಷ್ಠನು. ನನ್ನಂಥ ಭಕ್ತಿವಂತರು ಸಭೆಯೊಳಗೆ ಯಾರೂ ಇಲ್ಲವೆಂದು ಮಂದಮತಿಗಳ ಹಾಗೆ ನುಡಿದ ಶಿರಯಾಳನ ಸೊಕ್ಕು ಮುರಿಯಬೇಕೆಂದು ಪರಿಶಿವನು ಯೋಚಿಸಿದನು.

ಪದ :

ಸೊಕ್ಕಿಲೆ ನುಡಿದ ಶೆಟ್ಟಿಯ ಸೊಕ್ಕನು
ಮುಕ್ಕಣ್ಣನು ಮುರಿಯಲು ಬೇಗ
ಮುಕ್ಕಣ್ಣನು ಮುರಿಯಲು ಬೇಗ | ತಾ
ಗಕ್ಕನೆ ಕರೆತಂದನು ಆಗ  || ೨೧ ||

ಚರವೇಷ ತಾ ಧರಿಸಿ ಸೊಕ್ಕಿನ
ಸಿರಿಯಾಳನೊಡಗೊಂಡವ ಆಗ
ಸಿರಿಯಾಳನೊಡಗೊಂಡವ ಆಗ | ತಾ
ಧರಿಗಿಳಿದನು ಅರಿಯದ ಹಾಗೆ       || ೨೨ ||

ನಿಂಬಿಯಕ್ಕನ ಮನೆಗೆ ಬಂದರು
ಸಂಭ್ರಮಗೊಳ್ಳುತ ಮನದೊಳಗ
ಸಂಭ್ರಮಗೊಳ್ಳುತ ಮನದೊಳಗ | ಜಗ
ದಾಂಬಿ ಶರಣೆ ನೋಡಿದಳಾಗ       || ೨೩ ||

ವಚನ :

ಆಗ ಶಿವನು ಸಿರಿಯಾಳಶೆಟ್ಟಿಯನ್ನು ಕರೆದುಕೊಂಡು ಜಂಗಮ ರೂಪದಿಂದ ಗುರು ಶಿಷ್ಯರಾಗಿ ಭೂಲೋಕಕ್ಕಿಳಿದು ಅಡಿಗಡಿಗೆ ಶಿವ ಶಿವ ಎಂದು ನುಡಿಯುತ್ತ ನಿಂಬೆಕ್ಕನ ಮನೆಗೆ ಬಂದರು. ಆಗ ಶರಣೆ ನಿಂಬೆಕ್ಕನು ಆ ಚರಮೂರ್ತಿಗಳ ಕಂಡು ಮನದಲಿ ಹರುಷಗೊಂಡು ಅವರಿಗೆ ನೀರನ್ನು ಕೊಟ್ಟಳು.

ಪದ :

ಶರಣೆ ನಿಂಬಿ ತಾ ಬರದಲಿ ಕಾಣುತ
ಚರಮೂರ್ತಿಯ ಪಾದವ ತೊಳದು
ಚರಮೂರ್ತಿಯ ಪಾದವ ತೊಳದು | ತಾ
ವರಗಿ ನಮಿಸಿದಳು ಮನ ಒಲಿದು   || ೨೪ ||

ಆಗ ಕಪಟ ಶಿವ ಬೇಗನೆ ನಂಬಿಗೆ
ರಾಗದಿಂದ ನುಡಿದನು ತಿಳಿದು
ರಾಗದಿಂದ ನುಡಿದನು ತಿಳಿದು | ನಮ
ಗೀಗ ನೀಡು ಅನ್ನವ ತಿಳಿದು         || ೨೫ ||

ನಂಬಿ ಬಂದೆನು ಸಾಂಬನ ನೆನೆಯುತ
ನಿಂಬಿಯೆ ನಿನ್ನ ಮನ ಒಲಿದು
ನಿಂಬಿಯೆ ನಿನ್ನ ಮನ ಒಲಿದು | ತುಸು
ಅಂಬಲಿ ನೀಡವ್ವ ನೀ ತಿಳಿದು        || ೨೬ ||

ವಚನ :

ಬಂದ ಚರಮೂರ್ತಿಗಳ ಪಾದ ತೊಳಿದು, ಗದ್ದಿಗೆಯನ್ನು ಹಾಕಿ, ಕೈಮುಗಿಯಲಾಗಿ ಕಪಟ ಜಂಗನು ಹೇಳುತ್ತಾನೆ. ಹೇ ತಾಯಿ ಈಗ ಮೂರು ದಿವಸ ಹೊಟ್ಟಿಗೆ ಅನ್ನವಿಲ್ಲದೆ ಹಸಿವಿನಿಂದ ಪ್ರಾಣ ಹೋಗಲಿಕ್ಕೆ ಹವಣಿಸುವುದು. ಒಡಲುರಿಯನ್ನು ತಾಳಲಾರದೆ ನಿನ್ನ ಮನಿಗೆ ಬಂದಿದ್ದೇವೆ. ತುರ್ತ ಎಮಗೆ ಊಟ ಮಾಡಿಸು. ಅಂದ ಮಾತಿಗೆ ಶರಣೆ ನಿಂಬೆಕ್ಕನು ಮನದಲ್ಲಿ ಮರಮರನೆ ಮರುಗಿ ಅನ್ನುತ್ತಾಳೇನೆಂದರೆ –

ಪದ :

ಅವರ ಮಾತ ಕೇಳಿ ಮಾಡಿದಳಾಗ
ಅವಸರದಲಿ ಅಡಗಿಯನೊಲಿದು
ಅವಸರದಲಿ ಅಡಗಿಯನೊಲಿದು | ಆ
ಶಿವನಿಗೊಂದು ಶಾಂತಿಯು ತಿಳಿದು || ೨೭ ||

ಅಡಗಿ ಮಾಡಿ ಬಹು ಸಡಗತದಿಂದಲಿ
ಮಡಿ ನೀರಿಗೆ ಹೋದಳು ಜಲ್ದಿ
ಮಡಿ ನೀರಿಗೆ ಹೋದಳು ಜಲ್ದಿ | ಆ
ಹುಡುಗ ಬಂದನು ಬಹು ಹಸ್ದು       || ೨೮ ||

ತಾಯಿ ಕರೆಯುತ ಒಳಗೆ ಬಂದನು
ಬಾಯಿ ಬಿಡುತ ಬಿಸಲಿಗೆ ಬೆಂದು
ಬಾಯಿ ಬಿಡುತ ಬಿಸಲಿಗೆ ಬೆಂದು | ತಾ
ಆಯಾಸದಿಂದ ಸಣ್ಣವ ಬಂದು       || ೨೯ ||

ಮನಿಯೊಳಗೆ ತನ್ನ ಜನನಿಯಿಲ್ಲದೆ
ತನುಜನು ಸಂಕಟದಲಿ ನೊಂದು
ತನುಜನು ಸಂಕಟದಲಿ ನೊಂದು | ತಾ
ನಿಂತನು ಪರಿಪರಿಯಲ್ಲಿ ಇಂದು      || ೩೦ ||

ವಚನ :

ಆಗ ಶಿವಶರಣೆ ನಿಂಬೆಕ್ಕನು. ಶರಣರು ಹಸಿದುಗೊಂಡು ಬಂದಿದ್ದಾರೆಂದು ತಡವಿಲ್ಲದೇ ಅಡಗಿಯನ್ನು ಮಾಡತೊಡಗಿದಳು. ಅಡಗಿಯಾದ ಮೇಲೆ ಶರಣೆ ನಿಂಬೆಕ್ಕನು ಕೊಡ ಹೊತ್ತುಕೊಂಡು ಮಡಿ ನೀರಿಗೆ ಹೋದಳು. ಆಗ ಹುಡುಗನು ತಾಯಿ ತಾಯಿ ಎಂದು ಮನಿಗೆ ಬಂದು ತನ್ನ ತಾಯಿ ಇಲ್ಲದ್ದನ್ನು ನೋಡಿ ನೀರು ಕುಡಿದು ಒಡಿಯರಿಗೆ ಮಾಡಿದ ಮೀಸಲಡಿಗೆಯೆಂಬುವುದನ್ನು ತಿಳಿಯದೆ ಕಡುಬು ಕಜ್ಜಾಯವನ್ನು ಕೈಯಲ್ಲಿ ಹಿಡಿದು ತಿನ್ನುತ್ತಾ ಕುಂತದ್ದನ್ನು ಕೊಡ ಹೊತ್ತುಕೊಂಡು ಬರುವ ನಿಂಬೆಕ್ಕನು ನೋಡಿ –

ಪದ :

ಒಂದು ವನಿಕೆಯನು ತಂದು ಹೊಡೆದಳು
ಕೊಂದುಬಿಟ್ಟಳು ತನ್ನ ಮಗನನ್ನು
ಕೊಂದುಬಿಟ್ಟಳು ತನ್ನ ಮಗನನನ್ನು | ಎಳೆ
ತಂದಳು ಕಂದನ ಹೆಣವನ್ನು         || ೩೧ ||

ನಿಲ್ಲದೆ ಗ್ವಾದಲಿಗೆಳೆದು ಮುಚ್ಚಿದಳು
ಹುಲ್ಲಿನಿಂದ ಮರಿ ಮಾಡಿದಳು
ಹುಲ್ಲಿನಿಂದ ಮರಿ ಮಾಡಿದಳು | ಇದ
ನೆಲ್ಲ ಮುಸುಕಿನೊಳು ನೋಡಿದರು  || ೩೨ ||

ನೋಡಿ ಮನದಿ ಭಯಗೂಡಿ ಶೆಟ್ಟಿಗೆ
ಗಾಡದಿ ತೋರಿದ ಶಂಕರನು
ಗಾಡದಿ ತೋರಿದ ಶಂಕರನು | ಮತಿ
ಗೇಡಿ ಶೆಟ್ಟಿ ಬೆರಗಾದನ    || ೩೩ ||

ವಚನ :

ಆಗ ನಿಂಬೆಕ್ಕನು ಕಂದನೆಂಬ ಕಕ್ಕುಲತೆಯಿಲ್ಲದೆ ಮನೆ ಹೊಕ್ಕ ತುಡುಗ ನಾಯಿ ಬಡಿದಂತೆ ಬಡಿದಳು. ಹುಡುಗನ ಬಾಯಿಯೊಳಗಿಂದ ಅನ್ನವು ಹೊರಬಿದ್ದು ಘೋರ ಕೊಳ್ಳದಂತೆ ರಕ್ತವು ಚಿಮ್ಮುತ್ತ ದಮ್ಮು ಹತ್ತಿ ಅಳ್ಳಿ ಬಡಕೊಳ್ಳುತ್ತ ಹಾಗೇ ಬಿಕ್ಕಿ ಪ್ರಾಣ ಬಿಡುವ ಕೂಸಿನ ತಲೆಯ ಮೇಲೆ ಆ ನಿಷ್ಠುರಳಾದಂತಾ ತಾಯಿಯು ಅದೇ ಒನಕೆಯಿಂದ ಹೊಡೆದು ಬಡದು ಎಳತಂದು ಗ್ವಾದಲ್ಲಿಯಲ್ಲಿ ಹಾಕಿ ಮೇಲೆ ಹುಲ್ಲು ಮುಚ್ಚಿದಳು. ಇದನ್ನು ಕಂಡ ಸಿರಿಯಾಳ ಶೆಟ್ಟಿಗೆ ಅನ್ನುತ್ತಾಳೇನೆಂದರೆ –

ಪದ :

ಕೆಟ್ಟ ನಾಯಿ ಕಾಲಿಟ್ಟು ಮನಿಯ ಮುಡ
ಚಟ್ಟು ಮಾಡಿಬಿಟ್ಟಿತೋ ಎಂದು
ಚಟ್ಟು ಮಾಡಿಬಿಟ್ಟಿತೋ ಎಂದು | ತಾ
ತಟ್ಟನೆ ಸಾರಿಸಿದಳು ಎಂದು         || ೩೪ ||

ದಿಟ್ಟ ಶರಣ ಮಡಿಯುಟ್ಟ ಮಾಡಿದಳು
ತಟ್ಟನೆ ಹೊಸ ಅಡಿಗಿಯನ್ನು
ತಟ್ಟನೆ ಹೊಸ ಅಡಿಗಿಯನ್ನು | ಮಡಿ
ಯುಟ್ಟು ಬಹಳ ಮನಸಿಗೆ ತಂದು    || ೩೫ ||

ಅಡಿಗೆಮಾಡಿ ಬಹು ಸಡಗರದಿಂದಲಿ
ಒಡಿಯರನೆಬ್ಬಿಸಿ ಕರತಂದು
ಒಡಿಯರನೆಬ್ಬಿಸಿ ಕರತಂದು | ತಾ
ಎಡಿಯಮಾಡಿ ನಮಿಸಿದಳಂದು     || ೩೬ ||

ವಚನ :

ಆಗ ನಿಂಬೆಕ್ಕನು ಮನಿ ಸಾರಿಸಿ, ಮೈ ತೊಳೆದುಕೊಂಡು, ಭಕ್ತಿಯಿಂದ ಶರಣುಮಾಡಿ. ಕೈ ಜೋಡಿಸಿ ನಿಂತಳು.

ಪದ :

ಶರಣು ಮಾಡುವ ಶರಣೆಯ ನೋಡಿ
ಹರನು ಹೇಳತಾನು ಮನಒಲಿದು
ಹರನು ಹೇಳತಾನು ಮನಒಲಿದು | ನೀ
ಅರಿದು ತಾರ ಕಂದನ ಒಲಿದು       || ೩೭ ||

ಧರಿಯೊಳು ಎಂಥ ಮರಗುಟಗೇಡಿ ನೀ
ತರುಳನನ್ನು ಕರೆಯುದ ಮರತಿ
ತರುಳನನ್ನು ಕರೆಯುವ ಮರತಿ | ನೀ
ಅರಿದುಣಿಸುವಿ ನಮ್ಮನು ಕರೆದು     || ೩೮ ||

ತಾಯಿ ತಾಯಿಯೆಂದು ಒಬ್ಬ ಬಾಲಕನು
ಬಾಯಿ ಬಿಡುತ ಕೂಗಿದ ಬಂದು
ಬಾಯಿ ಬಿಡುತ ಕೂಗಿದ ಬಂದು | ಆ
ಯಾಸದಿಂದ ಹುಡಿಕಿದನೆಂದು       || ೩೯ ||

ನಿದ್ದಿಗಣ್ಣಿಲೆ ಮುದ್ದಬಾಲನ
ಶಬ್ದ ಕೇಳಿದೆವು ಮೈಮರೆದು
ಶಬ್ದ ಕೇಳಿದೆವು ಮೈಮರೆದು | ನೀ
ಸದ್ಯಕೆ ಕರಿ ಬರುವನು ಒಲಿದು      || ೪೦ ||

ಬಂದ ಜಂಗಮರ ಪಂಕ್ತಿಗೆ ನಿನ್ನ
ಕಂದನ ಬಿಡುವರೆ ನೋಡಿನ್ನು
ಕಂದನ ಬಿಡುವರೆ ನೋಡಿನ್ನು | ನಾವು
ಕಂದನ ಬಿಟ್ಟು ಹೆಂಗ ಉಣ್ಣುವುದು   || ೪೧ ||

ವಚನ :

ಹೇ ತಾಯಿ ನಾವು ಮಲಗಿದಾಗ, ಯಾರೋ ಒಬ್ಬ ಬಾಲಕ ಬಂದು, ಅವ್ವಾ ಎಂದು ನಿನ್ನನ್ನು ಕರೆದು ಹಾಗಾಯಿತು. ಬಹಳಮಾಡಿ ಆ ಹುಡುಗ ನಿನ್ನ ಮಗನಿರಬಹುದು. ಯಾಕಂದರೆ ಇಂದು ನಿನ್ನ ಮನಿಗೆ ಬಂದಿದ್ದೇವೆ. ಇಂತಾ ದಿವಸದಲ್ಲಿ ನಿನ್ನ ಮಗನನ್ನು ಬಿಟ್ಟು ಹೇಗೆ ಉಂಬೋಣ. ಅದಕ್ಕೆ ಅವನನ್ನು ಊಟಕ್ಕೆ ಕುಳ್ಳಿರಿಸೆಂದು ಹೇಳಿದರು.

ಪದ :

ಅಂದ ಮಾತ ಕೇಳಿ ನಿಂಬಿಯು ತಾ
ಕುಂದದೆ ಶಿವ ಈತನು ಎನುತ
ಕುಂದದೆ ಶಿವ ಈತನು ಎನುತ | ಮನ
ಗುಂದದೇ ಹೇಳಿದಳು ಕೋಪಿಸುತ  || ೪೨ ||

ಬಡಿವಾರದ ಸಿರಿಯಾಳ ಅಲ್ಲ ನಾನು
ಮಡಿದ ಮಗನ ಕರಿಲಿಕ್ಕೆನುತ
ಮಡಿದ ಮಗನ ಕರಿಲಿಕ್ಕೆನುತ | ಬಿಡು
ಸುಡುಗಾಟದ ಮಾತುಗಳತ್ತ         || ೪೩ ||

ಬಂದಿಸಲಿಕೆ ನಿನ್ನ ಹಂಗಿನೊಳಿರುವಂಥ
ಚಾಂಗಳೆಯು ನಾನಲ್ಲ ಪೂರ್ತ
ಚಾಂಗಳೆಯು ನಾನಲ್ಲ ಪೂರ್ತ | ನೀ
ತಿಳಿದುಕೋ ಬೇಗನೆ ಇದ ತುರ್ತಾ  || ೪೪ ||

 

ಕೋಳೂರ ಕೊಡಗೂಸು

ಇಂದು ಶೇಖರಗೆ ಒಂದೆ ಮನದಿ ನಾ
ವಂದಿಸಿ ಕರಗಳ ಮುಗಿಯುವೆನು
ವಂದಿಸಿ ಕರಗಳ ಮುಗಿಯುವೆನು | ನಾ
ಶ್ರೀ ಅಂಬೆಯ ಪಾದಕೆ ಎರಗುವೆನು           || ೧ ||

ಆರುಮುಗದೇವ ವರ ವೀರೇಶಗ
ಪರತರ ಕರಿಮುಖದೇವನಿಗೆ
ಪರತರ ಕರಿಮುಖದೇವನಿಗೆ | ಗುರು
ಎರಗುವೆನು ಗುರು ಪ್ರಮಥರಿಗೆ               || ೨ ||

ಬುವನದಲಿ ಶಿವಭಕ್ತಿ ಬೆಳೆಸಲು
ಅವತರಿಸಿದ ಶ್ರೀ ಬಸವೇಶ
ಅವತರಿಸಿದ ಶ್ರೀ ಬಸವೇಶ | ನೀ
ನಮ್ಮನು ಸಲಹು ಸದ್ಗುಣಕೋಶ              || ೩ ||

ಶಾರದಿ ನೀನು ಪೂರ ಕರುಣದಿ
ಪೋರನ ಕಾಯೋ ಪ್ರೀತಿಯಲಿ
ಪೋರನ ಕಾಯೋ ಪ್ರೀತಿಯಲಿ | ನಿಮ್ಮ
ಚರಣಕೆ ಎರಗುವೆ ಹರುಷದಲಿ                || ೪ ||

ದೇಶದೊಳಗ ಕೋಳೂರ ವಾಸನು
ಈಶಭಕ್ತ ಶಿವದೇವ ತಾನು
ಈಶಭಕ್ತ ಶಿವದೇವ ತಾನು | ವರ
ಕಲ್ಲೇಶಗ ಪಾಲು ಒಯ್ಯುವನು                 || ೫ ||

ಒಂದು ದಿವಸ ಶಿವದೇವ ಕಾರ್ಯಕೆ
ಒಂದೂರಿಗೆ ತಾನು ಹೋಗುತ್ತ
ಒಂದೂರಿಗೆ ತಾನು ಹೋಗುತ್ತ | ತನ್ನ
ಕಂದನ ಕರದು ಹೇಳುತ್ತ            || ೬ ||

ಬಾಲೆ ಕೇಳು ವರ ನೀಲಕಂಠಗ
ಹಾಲನೊಯ್ಯುವದು ಭಕ್ತಿಯಲಿ
ಹಾಲನೊಯ್ಯುವದು ಭಕ್ತಿಯಲಿ | ನಮ
ನಿತ್ಯ ನಿಯಮನು ನಡೆಸುತಲಿ                || ೭ ||