ಸರ್ಕಾರಿ ಸವಾಲ್ ೨೫ ಸಾವಿರ.  ಯಾರಾದ್ರೂ ಹೆಚ್ಚಿಗೆ ಕೂಗೋರಿದ್ರೆ ಕೂಗಬಹುದು.  ತಿಪಟೂರಿನ ಬಿದರಮ್ಮನ ಗುಡಿಯ ಚಾವಡಿ ಮುಂದೆ ಅಧಿಕಾರಿಗಳು ಹೇಳಿದ್ದೇ ತಡ, ರೈತರಲ್ಲಿ ಗುಜುಗುಜು ಗದ್ದಲ ಹೆಚ್ಚಾಯಿತು.  ಮೂಲೆಯಿಂದ ೩೦ ಸಾವಿರ ಎನ್ನುವ ಸ್ವರ ಬಂತು.  ಮೂರು ವರ್ಷದ ಕರುಗಳು ಕೆಂಗಣ್ಣು ಬಿಡುತ್ತಾ ಬುಸುಗುಡುತ್ತಿದ್ದವು.  ಎರಡು ಹಗ್ಗ ಹಾಕಿ ಹಿಡಿದ ಆಳುಗಳು ಸವಾಲುದಾರನನ್ನು ಕೆಣಕುವಂತೆ ನೋಡಿದರು.  ಹೊತ್ತು ಏರಿದಂತೆ ಬೆಲೆಯೂ ಏರತೊಡಗಿತು.  ೪೮ ಸಾವಿರಕ್ಕೆ ಬಂದು ನಿಂತಿತು.  ಸವಾಲು ಹಾಕಿದ ರೈತ ಹೆಮ್ಮೆಯಿಂದ ಜೋಡಿ ಹೋರಿಗಳ ಜೊತೆ ಬಂದು ನಿಂತ.ಇದು ನಡೆದದ್ದು ಇಸವಿ ೨೦೦೬ರಲ್ಲಿ. 

ಇದೇ ಬಿದರಮ್ಮನ ಚಾವಡಿಯಲ್ಲಿ ಇಸವಿ ೨೦೦೪ರಲ್ಲಿ ೪೬ ಸಾವಿರಕ್ಕೆ ಜೋಡಿಯೊಂದು ಹರಾಜಾಗಿತ್ತು.  ಇಸವಿ ೨೦೦೩ರಲ್ಲಿ ೪೫ ಸಾವಿರ ರೂಪಾಯಿಗಳಿಗೆ ಜೋಡಿ ಹರಾಜಾಗಿ ದಾಖಲೆ ಮಾಡಿತ್ತು.  ವರ್ಷ ವರ್ಷಕ್ಕೂ ಬೆಲೆ ಏರುತ್ತಲೇ ಇರುವುದು ಈ ಹೋರಿಗಳ ಜನಪ್ರಿಯತೆಯ ಕುರುಹಾಗಿದೆ.  ಇವೇ ಅಮೃತ ಮಹಲ್ ಎನ್ನುವ ದೇಸೀ ಗೋವಿನ ತಳಿ.

೪೪೦ ವರ್ಷಗಳ ಲಿಖಿತ ಇತಿಹಾಸ ಇರುವ ಪ್ರಸಿದ್ಧ ಗೋವಿನ ತಳಿ.  ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಜ್ಜಂಪುರದಲ್ಲಿ ಈ ತಳಿಯ ಸಂರಕ್ಷಣಾ ಹಾಗೂ ಸಂವರ್ಧನಾ ಕೇಂದ್ರವಿದೆ.  ಇಲ್ಲಿಯ ಶುದ್ಧ ತಳಿಯ ಹೋರಿಗಳಿಗೆ ಈ ರೀತಿಯ ಬೆಲೆ, ಜನಪ್ರಿಯತೆ.  ಇದು ಇಷ್ಟೆಲ್ಲಾ ಜನಪ್ರಿಯವಾಗಲು ಕಾರಣವೇನು?  ಏನಿದರ ಗಟ್ಟಿತನ? ಇದನ್ನೆಲ್ಲಾ ತಿಳಿಯಲು ಅಜ್ಜಂಪುರಕ್ಕೆ ಹೋಗೋಣ ಬನ್ನಿ.

ಅಜ್ಜಂಪುರದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಅಮೃತ ಮಹಲ್ ತಳಿ ಸಂವರ್ಧನಾ ಕೇಂದ್ರವಿದೆ.  ೧೯೨೦ರಲ್ಲಿ ಈ ಕೇಂದ್ರ ವ್ಯವಸಾಯ ಇಲಾಖೆಯ ವತಿಯಿಂದ ಪ್ರಾರಂಭವಾಯಿತು.

ಇಂದಿಗೂ ೮೫ ವರ್ಷಗಳ ಅದೇ ಪುರಾತನ ಸುಭದ್ರ ಕಟ್ಟಡದಲ್ಲಿ ಈ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ.  ೬೫೧ ಎಕರೆಗಳ ಕಾವಲು ಈ ಕೇಂದ್ರಕ್ಕಿದೆ.  ಈಗಿರುವ ೨೪೦ ಅಮೃತ ಮಹಲ್ ಹಸುಗಳಿಗೆ ಈ ಕಾವಲು ಮೀಸಲು.  ಅದರಲ್ಲಿ ಮೇವು, ಓಡಾಟ, ವಾಸ ಹಾಗೂ ವಂಶಾಭಿವೃದ್ಧಿ, ಬೆಳಗ್ಗೆ ಏಳು ಗಂಟೆಗೆ ಮೇವಿಗೆ ಹೊರಟರೆ, ಸಂಜೆ ಐದಕ್ಕೆ ದೊಡ್ಡಿಗೆ ಹಿಂದಿರುಗುತ್ತವೆ.  ದೊಡ್ಡ ಹಿಂಡು ಮೇಯಲು ಹೊರಟರೆ ಸೈನ್ಯವೊಂದು ಕವಾಯಿತಿಗೆ ಹೊರಟಂತೆ ಕಾಣಿಸುತ್ತದೆ.  ಸದೃಢವಾದ, ಬಿಳಿಯ ಗೋವುಗಳು ಎಡಗಾಲು ಮಂದಿಟ್ಟು ಶಿಸ್ತಿನಲ್ಲಿ ಟಕ್ ಟಕ್ ಎಂದು ಸದ್ದು ಮಾಡುತ್ತಾ, ಧೂಳೆಬ್ಬಿಸುತ್ತಾ ನಡೆಯತೊಡಗಿದರೆ ಯಾವುದೇ ಸೈನ್ಯಕ್ಕೂ ಬಿಟ್ಟುಕೊಡದಂತಹ ಗತ್ತು-ಗೈರತ್ತು.

ಅದಕ್ಕಾಗಿಯೇ ಇವುಗಳನ್ನು ಯುದ್ಧದಲ್ಲಿ ಬಳಸಲಾಯಿತು.  ಮೈಸೂರಿನ ಹುಲಿ ಟಿಪ್ಪು ಸುಲ್ತಾನನ ಬಳಿ ೬೦ ಸಾವಿರ ಅಮೃತಮಹಲ್ ತಳಿಯ ಗೋವುಗಳಿದ್ದವಂತೆ.  ಬ್ರಿಟಿಷರೊಂದಿಗೆ ಯುದ್ಧ ಮಾಡುವಾಗ ತನ್ನಲ್ಲಿರುವ ಕಾಲಾಳು ಕಡಿಮೆಯಾಯಿತೆಂದು ಈ ಗೋವುಗಳ ನೆಟ್ಟನೆಯ ಕೊಂಬುಗಳಿಗೆ ದೊಂದಿಯನ್ನು ಕಟ್ಟಿ ರಾತ್ರಿಯ ವೇಳೆ ಅದಕ್ಕೆ ಬೆಂಕಿ ಹಚ್ಚಿ ಯುದ್ಧಭೂಮಿಗೆ ಒಯ್ದನಂತೆ.  ಬ್ರಿಟಿಷರ ಮದ್ದು ಗುಂಡಿಗೂ ಹೆದರದೇ, ಮುಂದಡಿಯಿಟ್ಟು ಬರುತ್ತಿದ್ದ ಈ ದಂಡಿಗೆ ಕೆಂಪುಮೂತಿಯವರು ತಿರುಗಿಯೂ ನೋಡದೆ ಓಡಿದರಂತೆ.  ಆಮೇಲೆ ಗುಪ್ತಚಾರರಿಂದ ಸುದ್ದಿ ತಿಳಿದಾಗ ಆ ಗೋವುಗಳ ಬಗ್ಗೆ ಆಶ್ಚರ್ಯ ಹಾಗೂ ಹಂಬಲ ವ್ಯಕ್ತಪಡಿಸಿದ ಡ್ಯೂಕ್ ಆಫ್ ವೆಲ್ಲಿಂಗ್‌ಟನ್ ಮುಂದೆ ತಮ್ಮ ಯುದ್ಧದಲ್ಲೂ ಇವುಗಳನ್ನು ಬಳಸಿಕೊಳ್ಳುತ್ತಿದ್ದನೆಂದು ಇತಿಹಾಸದಲ್ಲಿ ದಾಖಲಾಗಿದೆ.

ಈ ಘಟನೆಯನ್ನು ಉದಾಹರಿಸಿದ್ದು ಈ ತಳಿಯ ವೈಶಿಷ್ಟ್ಯವನ್ನು ಹೇಳಲು.   ಅಮೃತಮಹಲ್ ತಳಿಗಳ ಮುಖ, ಬಾಲ, ಕಾಲು ಹಿಂಭಾಗಗಳು ಮಾಸಲು ಕಪ್ಪಾಗಿರುತ್ತವೆ. ಹೊಟ್ಟೆ ಭಾಗ ಬೂದು ಬಣ್ಣ.  ತಲೆಯ ಭಾಗ ಅಗಲವಿದ್ದು ಹಣೆಯ ಮಧ್ಯೆ ಹಳ್ಳವಿದೆ.  ಮುಖ ಚೂಪಾಗಿದೆ.  ಹಣೆಯ ಮಧ್ಯದಿಂದ ಮೇಲೆದ್ದ ಕೋಡುಗಳು ನೇರವಾಗಿ, ದಪ್ಪವಾಗಿದ್ದು ಚೂಪಾದ ತುದಿ ಹೊಂದಿವೆ.  ಕೆಂಪನೆಯ ಚುರುಕಿನ ಸಣ್ಣ ಕಣ್ಣುಗಳು ಟಾರ್ಚ್ ಬೆಳಕಿನಷ್ಟು ತೀಕ್ಷ್ಣವಾಗಿವೆ.  ಉದ್ದವಾದ ಕುತ್ತಿಗೆ, ತೆಳುವಾದ ಗಂಗೆದೊಗಲು, ಮಡಿಕೆ ಮಡಿಕೆಯಾಗಿ ಇಡೀ ಮುಖಕ್ಕೊಂದು ಅಂದ ಕೊಟ್ಟಿವೆ.

ಕಾಲುಗಳು ಸಪೂರ.  ಉದ್ದ ಕಡಿಮೆ.  ಗೊರಸುಗಳು ಗಟ್ಟಿಯಾಗಿದ್ದು ಬೇರೆ ಗೋವುಗಳಿಗಿರುವಂತೆ ಬೆರಳುಗಳು ಬಿಡಿ ಬಿಡಿಯಾಗಿಲ್ಲ.  ನಡೆಯುವಾಗ ನೆಲಕ್ಕೊತ್ತಿದರೂ ಚಪ್ಪಟೆಯಾಗುವುದಿಲ್ಲ.  ಪಕ್ಕಕ್ಕೆ ಹೊರಳುವುದಿಲ್ಲ.  ಬದಲಾಗಿ ಪಟ್ಟೆಂದು ಮೊಳೆ ಹೊಡೆದಂತೆ ನೆಲಕ್ಕೆ ಹೊಡೆದು ದೃಢವಾಗಿ ನಿಲ್ಲುತ್ತವೆ.  ಹೀಗಾಗಿಯೇ ಇವುಗಳಿಗೆ ಲಾಳ ಹೊಡೆಸುವುದು ಬೇಕಾಗಿಲ್ಲ.

ಭುಜ ಉಬ್ಬಾಗಿದ್ದು ದಷ್ಟಪುಷ್ಟವಾಗಿದೆ.  ಬೆನ್ನು ನೇರವಾಗಿದ್ದು ಪಕ್ಕೆಲುಬುಗಳು ಕಮಾನಾಗಿ ಕಾಣಿಸುತ್ತವೆ.  ಚರ್ಮವು ದೇಹಕ್ಕೆ ಒತ್ತಿಕೊಂಡಿದೆ.  ಈ ಎಲ್ಲಾ ಲಕ್ಷಣಗಳಿರುವ ಅಮೃತ ಮಹಲ್ ತಳಿಗಳು ರೈತರಿಗೆ ಎಷ್ಟೆಲ್ಲಾ ಉಪಯುಕ್ತವೆಂಬುದನ್ನು ತಿಳಿಸುತ್ತದೆ.

ಹಿರೇಕೆರೂರಿನ ಮಾನ್ವಿ ಪುರುಷಪ್ಪನವರಿಗೆ ಅಮೃತ ಮಹಲ್ ತಳಿಗಳೆಂದರೆ ಅಚ್ಚುಮೆಚ್ಚು.  ಹಗಲು ಏಳಕ್ಕೆ ನೇಗಿಲು ಕಟ್ಟಿದ್ರೆ ಸಂಜೆ ಆರಾದ್ರೂ ಕಮಕ್ ಕಿಮಕ್ ಅನ್ದೆ ಕೆಲ್ಸಾ ಮಾಡ್ತಾಲೇ ಇರ್‍ತೈತ್ರಿ ಸರ್ರ, ನಾವೇ ಸರದಿ ಹಂಗೆ ಬದ್ಲಾಗ್ತೀವಿ ಎಂದು ಹೆಮ್ಮೆಯಿಂದ ತಮ್ಮ ಎತ್ತುಗಳ ಮೈ ಸವರುತ್ತಾರೆ.

ಕಳೆದ ಹರಾಜಿನಲ್ಲಿ ೩೦ ಸಾವಿರ ಕೊಟ್ಟು ತಂದ ಜೋಡಿಗಳಿಂದ ತಮಗೆ ಸ್ವಲ್ಪವೂ ನಷ್ಟವಾಗಿಲ್ಲ.  ಒಂದು ದಿನವೂ ಕೆಲಸ ತಪ್ಪಿಸಿಲ್ಲ.  ನೇಗಿಲು ಕಟ್ಟಿದ್ದಿರಲಿ, ಗಾಡಿಗೆ ಕಟ್ಟಿದ್ದಿರಲಿ ಒಂದೇ ಸಮನೆ ಕೆಲಸ ಮಾಡುತ್ತಲೇ ಇದ್ದರೂ ಸುಸ್ತಾಗಿದ್ದನ್ನೇ ಕಾಣುವುದದಿಲ್ಲ.  ಒಮ್ಮೆಯೂ ಯಾವುದೇ ಕಾಯಿಲೆಗಳಿರಲಿ, ಜ್ವರ ಸಹ ಬಂದಿಲ್ಲ ಎನ್ನುವ ಗರಿಮೆಯ ಪಟ್ಟಿಯನ್ನೇ ಕೊಡುತ್ತಾರೆ.

ಇದಕ್ಕೆ ಕಾರಣ ನಾವು ಇಲ್ಲಿ ಅವುಗಳನ್ನು ಕಾಡುಪ್ರಾಣಿಗಳಂತೆಯೇ ಸಾಕುವ ರೀತಿ ಎನ್ನುತ್ತಾರೆ ಸಂವರ್ಧನಾ ಕೇಂದ್ರದ ಉಪನಿರ್ದೇಶಕರಾದ ಡಾ|| ಟಿ.ವಿ. ಕಾಂತರಾಜು.

ಈ ಗೋವುಗಳಿಗೆ ಇಲ್ಯಾವ ಹಗ್ಗದ ಬಂಧನವಿಲ್ಲ.  ಯಜಮಾನ ನೀಡಿದ್ದನ್ನೇ ತಿನ್ನಬೇಕೆಂಬ ಒತ್ತಾಯವಿಲ್ಲ.  ಕೃತಕ ಗರ್ಭಧಾರಣೆ, ಕೃತಕ ಪಾಲನೆ ಪೋಷಣೆಗಳೆಂಬ ಕಟ್ಟುಪಾಡುಗಳಿಲ್ಲ.  ಹಾಗೆಂದು ಅವುಗಳನ್ನು ಕಾಡಿನಲ್ಲಿರುವಂತೆ ಸ್ವೇಚ್ಛೆಯಾಗಿರುವುದಕ್ಕೂ ಬಿಟ್ಟಿಲ್ಲ.  ಇವುಗಳಿಗೊಂದು ತಂಗುಮನೆಯಿದೆ.  ಎಲ್ಲಿಯವರೆಗೆ ಅಲೆದರೂ ಸಂಜೆಗೆ ಅಲ್ಲಿಗೆ ಹಿಂದಿರುಗುತ್ತವೆ.

ಹುಟ್ಟಿದ ಕರುವಿನಿಂದಲೂ ಕಟ್ಟದೇ ಬೆಳೆದ ಇವುಗಳು ಮಳೆ, ಗಾಳಿ, ಬಿಸಿಲು, ಚಳಿ ಹೀಗೆ ಎಲ್ಲಾ ರೀತಿಯ ವಾತಾವರಣಕ್ಕೆ ಹೊಂದಿಕೊಂಡು ರೋಗನಿರೋಧಕ ಶಕ್ತಿ ಬೆಳೆಸಿಕೊಂಡಿರುತ್ತವೆ.  ಮೇವಿಗೆಂದು ಕಾವಲಿಗೆ ಬಿಟ್ಟಾಗ ಕೆಲವೊಮ್ಮೆ ಇತರ ಪ್ರಾಣಿಗಳಿಂದ ಅಥವಾ ಹಳ್ಳಿಗರು ಸಾಕಿದ ಪಶುಗಳಿಂದ, ಬಿಸಾಕಿದ ರೋಗಪೀಡಿತ ಸತ್ತ ಜಾನುವಾರಿನಿಂದ ಕೆಲವು ರೋಗಗಳು ಬರುವ ಸಾಧ್ಯತೆಯಿದೆ.  ಅದಕ್ಕಾಗಿ ಕೇಂದ್ರದಲ್ಲಿ ವೈದ್ಯರೂ ಇದ್ದಾರೆ.  ಇವುಗಳಿಗೆ ಚಿಕಿತ್ಸೆ ಕೊಡುವುದು ಸುಲಭವಲ್ಲ.  ಚಿಕಿತ್ಸೆ ನೀಡುವಾಗ, ಚುಚ್ಚುಮದ್ದು ಕೊಡುವಾಗ ಒಂದೊಂದೇ ಗೋವು ಬಾಗಿಲು ದಾಟಿ ಬರುವಂತೆ ವ್ಯವಸ್ಥೆ ಮಾಡಲಾಗುತ್ತದೆ.  ಅವುಗಳನ್ನು ಹಿಡಿಯಲು ಮೂವರು ನಿಂತಿರುತ್ತಾರೆ.  ಬಾಗಿಲ ಪಕ್ಕದ ಕಟಕಟೆಯ ಮಧ್ಯೆ ಬಂದ ಇವುಗಳನ್ನು ಹಿಡಿದು ಚುಚ್ಚುಮದ್ದು ನೀಡುತ್ತಾರೆ.  ಇಷ್ಟಾಗಿಯೂ ಕೆಲವು ಗೋವುಗಳು ಕಟಕಟೆ ಹಾರಿ, ತಂಗುಮನೆಯ ಸುತ್ತಲಿರುವ ಎಂಟು ಅಡಿಯ ಗೋಡೆಯನ್ನು ಹಾರಿಹೋದದ್ದನ್ನು ವೈದ್ಯರಾದ ಡಾ|| ರಂಗನಾಥರವರು ನೆನಪಿಸಿಕೊಳ್ಳುತ್ತಾರೆ.  ದೊಡ್ಡ ಹಸುಗಳನ್ನು ಪಳಗಿಸುವುದು ಕಷ್ಟ.  ಆದರೆ ಚಿಕ್ಕ ಕರುಗಳನ್ನು ಹೊಲದ ಕೆಲಸಗಳಿಗೆ, ಭಾರ ಎಳೆಯಲು ಪಳಗಿಸಬಹುದು ಎನ್ನುವ ಅಭಿಪ್ರಾಯ ಇವರದು.  ಇಲ್ಲಿಯವರೆಗೂ ಯಾವುದೇ ರೈತರು ಇವುಗಳನ್ನು ಪಳಗಿಸಲಾಗಿಲ್ಲವೆಂಬುದಾಗಲಿ, ತೊಂದರೆ ಕೊಡುತ್ತವೆಯೆಂಬ ದೂರಾಗಲೀ ನೀಡಿಲ್ಲವೆನ್ನುತ್ತಾರೆ.  ಕೇಂದ್ರದಲ್ಲಿ ಪಳಗಿಸದ ಕಾರಣ ಇವುಗಳಿಗೆ ಮೂಗುದಾರವಿಲ್ಲ.  ರೈತರು ಮನೆಗೆ ತಂದು ಪಳಗಿಸುವಾಗ ಮೂಗುದಾರ ಹಾಕುತ್ತಾರೆ.

ಚುಚ್ಚುಮದ್ದು ನೀಡುವಾಗ ತೊಂದರೆ ಕೊಡುವ ಇವುಗಳು ಸಂತೆಗೆ ಕರೆದುಕೊಂಡು ಹೋದಾಗ ಒಮ್ಮೆಯೂ ಜನರನ್ನ ಹಾಯಲಿಲ್ಲ, ತಿವಿದಿಲ್ಲ ಅಥವಾ ಹೂಂಕರಿಸಿ ಅಟ್ಟಿಸಿಕೊಂಡು ಹೋಗಿಲ್ಲ ಎನ್ನುವ ತಿಪ್ಪೇಸ್ವಾಮಿಯವರು ಬಾಯೊಂದಿಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ ಬಲು ಬುದ್ಧಿ ಇರೋವು ಎನ್ನುತ್ತಾರೆ.  ತಿಪ್ಪೇಸ್ವಾಮಿಗೆ ಹಿಂಡಿನಲ್ಲಿರುವ ಮೈಲಾರಿ ಬಲು ಇಷ್ಟ.  ಈತನ ಗತ್ತು, ಗಂಭೀರತೆಗಳು, ಹಿಂಡನ್ನು ನಡೆಸುವ ತಾಕತ್ತು ಏನೆಲ್ಲಾ ಕಾರಣಗಳಿಂದ ಈತ ಹಿಂಡಿಗೆ ಹೀರೋ.  ಅಪ್ಪಟ ಅಮೃತಮಹಲ್ ಲಕ್ಷಣಗಳೆಲ್ಲಾ ಈತನಲ್ಲಿವೆ.  ಇವನೊಂದಿಗಿರುವ ಗಂಗೆ ಸ್ವಲ್ಪ ಕಪ್ಪು.  ಇಬ್ಬರಿಗೂ ಐದು ವರ್ಷಗಳಾಗಿವೆ.  ಇಬ್ಬರೂ ಅಗಾಧವಾಗಿ ಬೆಳೆದಿದ್ದಾರೆ.  ಅಪರಿಚಿತರನ್ನು ಸ್ವಲ್ಪವೂ ನಂಬುವುದಿಲ್ಲ.  ಮೇದೆಕೇರಿ ಬೆದೆಗೆ ಬಂದಾಗ ಇಬ್ಬರೂ ಕಾದಾಟ ಮಾಡಿದ್ದಾರೆ.  ಮೇದೆಕೇರಿಯೂ ಇವರನ್ನು ಸರಿ ಆಟವಾಡಿಸಿ ಆಮೇಲೆ ಮೈಲಾರಿಗೆ ಶರಣಾದಳು.  ಚಿತ್ರಿಯನ್ನು ಗಂಗೆಯೇ ಪಡಕೊಂಡ.  ಹಿಂಡಿನಲ್ಲಿರುವಾಗ ಇವುಗಳ ಕಾದಾಟವನ್ನು ತಡೆಯಲು ಸಾಧ್ಯವಿಲ್ಲ.  ಪೆಟ್ಟು ಮಾಡಿಕೊಳ್ಳುತ್ತವೆ.  ನಂತರ ಅದಕ್ಕೆ ತಾವೇ ಸೊಪ್ಪು-ಸದೆ ತಿಂದು ವಾಸಿ ಮಾಡಿಕೊಳ್ಳುತ್ತವೆ ಎನ್ನುತ್ತಾರೆ ಮೂವತ್ತು ವರ್ಷಗಳಿಂದ ಕಾವಲು ಮಾಡುವ ಬೀರಯ್ಯ.  ಇವರೆಲ್ಲಾ ಎಲ್ಲಾ ಗೋವುಗಳನ್ನು ಅವುಗಳ ವಂಶನಾಮದಿಂದಲೇ ಕರೆಯುವುದು ಪದ್ಧತಿ.  ಅಮೃತಮಹಲ್ ಗೋವುಗಳಲ್ಲಿ ಸುಮಾರು ೧೩೦ ವಂಶಗಳಿವೆ.  (ಹಿಂದೆ ೨೦೦ಕ್ಕೂ ಹೆಚ್ಚು ಇತ್ತಂತೆ).  ನಾರಾಯಣಿ, ನಾಮಧಾರಿ, ಕಾವೇರಿ, ಕೆಂಪುಲಕ್ಕಿ, ಚುಂಚನಗಿರಿ, ಗುಲಗಂಜಿ, ಭದ್ರಿ, ಬ್ಯಾಟರಾಯ, ಕಾಳಿಂಗರಾಯ, ಮೈಲಾರಿ, ದೇವಗಿರಿ, ಪತ್ರೆ, ಕುಕ್ಕೋಡಿ, ಮದನಸರ, ಮಣಿಮೈ, ಹವಳಕ, ಬೋರಿ, ರಂಗನಾಥ, ನಂಜಿ, ಎಮ್ಮೆದೊಡ್ಡಿ ಹೀಗೆ ಎಷ್ಟೆಲ್ಲಾ ಹೆಸರುಗಳಿವೆ.  ಹಿಂಡಿನ ಕಾವಲುಗಾರರು ಎಲ್ಲಾ ಗೋವುಗಳನ್ನು ಹೆಸರು ಹಿಡಿದೇ ಕರೆಯುತ್ತಾರೆ.  ಒಮ್ಮೆಯೂ ತಪ್ಪು ಗುರುತು ಮಾಡುವುದಿಲ್ಲ.  ಈ ವಂಶಾವಳಿಗಳ ಹೆಸರು ಬಂದಿದ್ದು ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ.

ವಿಜಯನಗರ ಸಾಮ್ರಾಜ್ಯದ ವೈಭವವನ್ನು ಹೆಚ್ಚಿಸುವಲ್ಲಿ ಈ ಗೋವುಗಳ ಪಾಲೂ ಇದೆ.  ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಈ ತಳಿಯ ಗೋವುಗಳನ್ನು ಇಸವಿ ೧೫೭೨ರ ಹೊತ್ತಿಗೆ ಮೈಸೂರಿಗೆ ತರಲು ಯೋಚಿಸಲಾಯಿತು.  ಆ ಹಿಂಡಿನಲ್ಲಿದ್ದ ಅತ್ಯುತ್ತಮ ವಂಶವನ್ನು ಆಯ್ಕೆ ಮಾಡಲಾಯಿತು.  ಅವುಗಳ ಹೆಸರೇ ಈಗಾಗಲೇ ಹೇಳಿದ ನಾರಾಯಣಿ, ನಾಮಧಾರಿ… ಇತ್ಯಾದಿ.  ಈ ಗೋವುಗಳನ್ನು ಮೈಸೂರಿನ ಸ್ಥಳೀಯ ತಳಿಯಾದ ಬಹುಶಃ ಹಳ್ಳಿಕಾರ್‌ನೊಂದಿಗೆ ಬೆರೆಸಲಾಯಿತು.  ಈ ಎರಡು ಸುಪ್ರಸಿದ್ಧ ತಳಿಗಳೊಂದಿಗೆ ಸಂಕರಗೊಂಡು ಹುಟ್ಟಿದ ಕರುಗಳೇ ಅಮೃತಮಹಲ್ ಎಂದು ಹೆಸರಾಯಿತು ಎನ್ನುತ್ತದೆ ಮೈಸೂರಿನ ಚರಿತ್ರೆಯ ಪುಟಗಳು.

ಅಂದಿನಿಂದ ತಾಯಿಯ ಹೆಸರಿನಿಂದಲೇ ವಂಶ ಗುರುತಿಸುವಿಕೆ ಪ್ರಾರಂಭವಾಯಿತು.  ಕರು ಹುಟ್ಟಿದ ಕೂಡಲೇ ದ ಎನ್ನುವ ಗುರುತು ಮಾಡುವ ಪದ್ಧತಿ.  ಮುಂದೆ ತಲೆಮಾರು ಹೆಚ್ಚಿದಂತೆಲ್ಲಾ ಗುರುತು ಬದಲಾಯಿತು.  ಈಗ ಕರ್ನಾಟಕದಲ್ಲಿರುವ ಪ್ರತಿ ಕೇಂದ್ರದಲ್ಲೂ ಹುಟ್ಟಿದ ಕರುಗಳ ಎಡಬದಿಯಲ್ಲಿ ಕೇಂದ್ರವಿರುವ ಊರಿನ ಹೆಸರಿನ ಮೊದಲಕ್ಷರ, ಅಂದರೆ ಅಜ್ಜಂಪುರವಾದರೆ ಎ ಎಂದು, ಲಿಂಗದಹಳ್ಳಿಯಾದರೆ ಎಲ್ ಎಂದು ಗುರುತಿಸುತ್ತಾರೆ.  ನಂತರ ಕರು ಹುಟ್ಟಿದ ವರ್ಷ ಹಾಗೂ ಹಿಂಡಿನಲ್ಲಿ ಆ ವರ್ಷ ಅದು ಎಷ್ಟನೇ ಕರು ಎಂಬ ಸಂಖ್ಯೆಯನ್ನು ಗುರುತು ಮಾಡುತ್ತಾರೆ.

ಉದಾಹರಣೆಗೆ ಸಿ-೨೦೦೪-೧೪ ಎಂದಿದ್ದರೆ ಕರುವು ಚಿಕ್ಕ ಎಮ್ಮಿಗನೂರಿನಲ್ಲಿ ೨೦೦೪ರಲ್ಲಿ ಹುಟ್ಟಿದ ೧೪ನೇ ಕರು ಎಂದು ಹೇಳಬಹುದು.  ಇದರೊಂದಿಗೆ ಅದರ ತಾಯಿಯ ಹೆಸರೇ ಕರುವಿಗೆ ಬರುತ್ತದೆ.  ಅಧಿಕಾರಿಗಳು ಈ ಸಂಖ್ಯೆ ಗುರುತಿನ ಮೇಲೆ ಹೆಸರು ಗುರುತಿಸಿದರೆ ಕಾವಲಿನವರು ಅಭ್ಯಾಸ ಬಲದಿಂದ ಹೆಸರು ಹೇಳುತ್ತಾರೆ.

ಹಸುಗಳು ಸುಮಾರು ಮೂರು ವರ್ಷಕ್ಕೆ ಬೆದೆಗೆ ಬರುವ ಕಾರಣ ಬೀಜದ ಹೋರಿಗಳನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಬದಲಿಸಲಾಗುತ್ತದೆ.  ಉಪಕೇಂದ್ರಗಳಲ್ಲಿ ಹುಟ್ಟಿದ ಬೇರೆ ವಂಶದ ಬೀಜದ ಹೋರಿಗಳನ್ನು ತರಲಾಗುತ್ತದೆ.

ಹೀಗೆ ಒಂದೇ ವಂಶದ ತಳಿಗಳು ಸಂಕರವಾಗದಂತೆ ನೋಡಿಕೊಳ್ಳಲಾಗುತ್ತದೆ.  ಹಸುವು ಗರ್ಭ ಕಟ್ಟಿದಾಗಲೂ ನಿತ್ಯದ ವರ್ತನೆಯಲ್ಲಿ ಸ್ವಲ್ಪವೂ ಬದಲಾವಣೆಯಾಗುವುದಿಲ್ಲ.  ಕಾವಲಿನಲ್ಲಿಯೇ ಮೇವು.  ಅಷ್ಟೇ ಓಡಾಟ, ಅದೇ ಚಳಿ, ಗಾಳಿ, ಮಳೆ, ಬಿಸಿಲು.  ಗರ್ಭಸ್ಥ ಹಸುವಿನ ಮೇವು ವಿಭಿನ್ನವಾಗಿರುವುದನ್ನು ಕಾವಲುಗಾರರಾದ ರಾಮಲಿಂಗಯ್ಯ, ತಿಪ್ಪೇಸ್ವಾಮಿ ಗುರುತಿಸುತ್ತಾರೆ.

ಕಾವಲಿನಲ್ಲಿರುವ ಕೆಲವು ಜಾತಿಯ ಸೊಪ್ಪುಗಳು, ಉತ್ತರಣಿ ಕಡ್ಡಿಯನ್ನು ಮೇಯುವುದು, ಪರ್ವತರಾಯನ ಕೆರೆಗೆ ಆಗಾಗ ಹೋಗಿ ಯಥೇಚ್ಛ ನೀರು ಕುಡಿಯುವುದನ್ನು ಮಾಡುತ್ತವೆ.  ಆದರೆ ಕರು ಹಾಕಿದ್ದನ್ನು ಕಸ (ಪ್ಲಾಸೆಂಟಾ) ಬಿದ್ದಿದ್ದನ್ನು ಮಾತ್ರ ನನ್ನ ೪೦ ವರ್ಷಗಳ ಕಾವಲಿನಲ್ಲಿ ಒಮ್ಮೆಯೂ ನೋಡಿಲ್ಲ ಎಂದು ರಾಮಲಿಂಗಯ್ಯನವರು ಹೇಳಿದಾಗ ವಿಚಿತ್ರ ಎನಿಸುತ್ತದೆ.

ಕರು ಹುಟ್ಟಿದ ಕೂಡಲೇ ನಡೆಯಲು ಪ್ರಾರಂಭಿಸುತ್ತದೆ.  ಹಿಂಡಿನಲ್ಲಿರುವ ಉಳಿದ ಹಸುಗಳಂತೆ ಓಡಾಟ ಮಾಡುತ್ತಾ, ಆಗಾಗ ತಾಯಿಯ ಮೊಲೆಹಾಲು ಕುಡಿಯುತ್ತಾ, ತಾಯಿಯೊಂದಿಗೇ ಇರುತ್ತದೆ.  ಈ ಹೊಸ ಕರುಗಳು ತಂಗುಮನೆಗೆ ಹಿಂತಿರುಗಿದ ತಕ್ಷಣ ಗುರುತು ಮಾಡಲಾಗುತ್ತದೆ.

ಹೋರಿಕರುಗಳು ದೊಡ್ಡದಾದಂತೆ ಹಿಂಡಿನಿಂದ ಬೇರೆ ಮಾಡಿ ಇಡುತ್ತಾರೆ.  ಅವುಗಳು ಅಮೃತಮಹಲ್ ಲಕ್ಷಣಗಳನ್ನು ಎಷ್ಟು ಪ್ರಮಾಣದಲ್ಲಿ ಹೊಂದಿವೆ ಎಂಬುದನ್ನು ದಾಖಲಿಸುತ್ತಾರೆ.  ಅದಕ್ಕೆ ಮೂರು ವರ್ಷವಾದಂತೆ ಹರಾಜು ಹಾಕುತ್ತಾರೆ.  ಈ ಹರಾಜು ಕೇವಲ ಅಮೃತಮಹಲ್ ತಳಿಗಳ ವಿಸ್ತರಣೆಗಾಗಿ ರೂಪಿಸಲಾಗಿದೆ.  ಟಿಪ್ಪುವಿನ ಕಾಲದಲ್ಲೂ ಈ ತಳಿಗಳ ವಿಸ್ತರಣೆಗೆ ನಾನಾ ಯೋಜನೆಗಳನ್ನು ರೂಪಿಸಲಾಗಿತ್ತು ಎಂದು ಮೈಸೂರಿನ ಗೆಝೆಟಿಯರ್‌ನಲ್ಲಿ ಇಸವಿ ೧೮೬೦ರಲ್ಲಿ ಉಲ್ಲೇಖಿಸಲಾಗಿದೆ.

ಮೈಸೂರಿನ ಅರಸರ ದರ್ಬಾರಿನಲ್ಲಿ ಅಮೃತ ಮಹಲ್‌ಗಳಿಗೆ ವಿಶೇಷ ಆದರವಿತ್ತು.  ಸುಮಾರು ಒಂದು ಲಕ್ಷ ಗೋವುಗಳಿಗಾಗಿ ೪.೧೩ ಲಕ್ಷ ಎಕರೆಗೂ ಹೆಚ್ಚು ಭೂಮಿ ನೀಡಲಾಗಿತ್ತು.  ಅವುಗಳಲ್ಲಿ ೨೪೦ ಗುಂಪುಗಳನ್ನು ಮಾಡಿ ಅವುಗಳಿಗೆ ಸೇರ್‍ವೆಗಾರರು, ಕಾವಲು ರೇಂಜರ್ ಹಾಗೂ ಕಾವಲುಗಾರರನ್ನು ನೇಮಿಸುತ್ತಿದ್ದರು.  ವರ್ಷಾವಧಿ ಕಾವಲು ಮಾಡಿ ದಸರೆಯ ಸಮಯಕ್ಕೆ ಅರಮನೆಗೆ ಕರೆಸುತ್ತಿದರು.  ಅಮೃತಮಹಲ್ ಹೋರಿ, ಹಸು, ಎತ್ತುಗಳ ಪ್ರದರ್ಶನ, ಸಾಹಸ ಪ್ರದರ್ಶನಗಳು ಏರ್ಪಾಡಾಗುತ್ತಿತ್ತು.  ಅತ್ಯುತ್ತಮವಾಗಿ ಸಾಕಿದವರಿಗೆ ಬಹುಮಾನವೂ ಸಿಗುತ್ತಿತ್ತು.

ಮುಂದೆ ಹೈದರಾಲಿಯೂ ಈ ಪರಂಪರೆಯನ್ನ ಮುಂದುವರೆಸಿದನು.  ಟಿಪ್ಪುವಿನ ಕಾಲದಲ್ಲಿ ಈ ಹಸುಗಳಿಗಾಗಿಯೇ ಹಾಗಲವಾಡಿಯ ಪಾಳೇಗಾರರೊಂದಿಗೆ ಯುದ್ಧವೂ ನಡೆದಿದ್ದು ಇತಿಹಾಸದಲ್ಲಿ ದಾಖಲಾಗಿದೆ.

ಮುಂದೆ ಬ್ರಿಟಿಷರ ಕಾಲದಲ್ಲಿ ಇವುಗಳ ಸಾಮರ್ಥ್ಯ ಮತ್ತು ಮೌಲ್ಯಕ್ಕಾಗಿ ಖಲ್ಲೆ ಎಂಬ ಕಮೀಷನರ್ ಹಿಂಡನ್ನು ಒಡೆದು, ವಿವಿಧ ಕಡೆಗಳಿಗೆ ಸೈನ್ಯದ ಸಾಮರ್ಥ್ಯ ಹೆಚ್ಚಿಸಲು ಕಳುಹಿಸಿದನು.  ಹೀಗೆ ಒಡೆದುಹೋದ ಹಿಂಡನ್ನು ಮತ್ತೆ ಸೇರಿಸಲು ಮೈಸೂರಿನ ಮಹಾರಾಜರ ಆಸಕ್ತಿಯೇ ಕಾರಣವಾಯಿತು.  ನಂತರ ಇವೆಲ್ಲಾ ಪಶುಪಾಲನಾ ಇಲಾಖೆಗೆ ವರ್ಗವಾಯಿತು.

ದೇಶ ಸ್ವತಂತ್ರವಾದ ಮೇಲೆ ಕಾವಲುಗಳ ವಿಸ್ತೀರ್ಣ ಕ್ಷೀಣಗೊಳ್ಳತೊಡಗಿತು.  ವ್ಯವಸಾಯಕ್ಕಾಗಿ, ಕಾರ್ಖಾನೆಗಳಿಗಾಗಿ ಮೊದಲಾದ ಕಾರಣಗಳಿಗೆ ಕಾವಲಿನ ಮೇಲೆ ಕಣ್ಣು ಹಾಯಿಸಿದರು.  ಹೀಗೆ ೩೩,೫೯೧ ಎಕರೆ ಮಾತ್ರ ಇಲಾಖೆಗೆ ಉಳಿಯಿತು.  ೧೯೮೨ರಲ್ಲಿ ಆಗಿನ ಕೇಂದ್ರದ ಜನಪ್ರಿಯ ಅಧಿಕಾರಿಗಳಾಗಿದ್ದ ಡಾ. ಟಿ.ಎಸ್. ಕೃಷ್ಣಮೂರ್ತಿಯವರು ಕಾವಲುಗಳ ಒತ್ತುವರಿ ವಿರೋಧಿಸಿ ಕಠಿಣ ಕ್ರಮ ಕೈಗೊಂಡರು.  ಆದರೆ ಸ್ಥಳೀಯ ರಾಜಕಾರಣಿಗಳು ಇವರನ್ನು ಎತ್ತಂಗಡಿ ಮಾಡಿಸಿದರು.  ಆದರೆ ಅವರ ಜನಪ್ರಿಯತೆ, ಮತ್ತೆ ಈ ಕೇಂದ್ರಕ್ಕೆ ಕರೆತಂದಿತು.  ಕಾವಲುಗಳ ಅಭಿವೃದ್ಧಿಗೆ ಬಹಳಷ್ಟು ಶ್ರಮ ವಹಿಸಿದರು.

ಕಾವಲುಗಳ ಅಭಿವೃದ್ಧಿಯೊಂದಿಗೆ ಸೈಲೇಜುಗಳನ್ನು ನಿರ್ಮಿಸಿದರು.  ಸೈಲೇಜುಗಳೆಂದರೆ ನೆಲದಲ್ಲಿ ತೋಡಿದ ದೊಡ್ಡ ದೊಡ್ಡ ಹೊಂಡಗಳು.  ಇದರಲ್ಲಿ ಉಪ್ಪು ಹಾಗೂ ಕಾಕಂಬಿಯನ್ನು ಬೆರೆಸಿದ ಹುಲ್ಲು ಸಂಗ್ರಹ ಮಾಡುತ್ತಾರೆ.  ಅಗತ್ಯ ಬಿದ್ದಾಗ ಗೋವುಗಳಿಗೆ ಮೇವು ತೆಗೆದುಹಾಕುತ್ತಾರೆ.

ಕೇಂದ್ರದಲ್ಲಿ ಮೇವಿನ ತಳಿಯ ಮೆಕ್ಕೆಜೋಳವನ್ನು ಬೆಳೆಸಿದರು.  ಆಗಷ್ಟೇ ಪರಿಚಯವಾಗಿದ್ದ ತುಂತುರು ನೀರಾವರಿಯನ್ನು ಅಳವಡಿಸಿದರು.  ಹೀಗೆ ಒಂದೊಂದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿದರು.  ಇದಕ್ಕೆಲ್ಲಾ ಜನರ ಸಹಭಾಗಿತ್ವವನ್ನು ಪಡೆದರು.  ಕಾವಲುಗಳಲ್ಲಿ ಚಿಗುರು ಸಾಗು, ಕಡ್ಡಿ ಸಾಗು ಎಂದಿರುತ್ತದೆ.  ಅಮೃತ್‌ಮಹಲ್‌ಗಳು ಚಿಗುರು ಸಾಗನ್ನು ತಿಂದಮೇಲೆ ರೈತರಿಗೆ ಉಳಿಯುವ ಕಡ್ಡಿ ಸಾಗಿನಲ್ಲಿ ತಮ್ಮ ಪಶುಗಳಿಗೆ ಮೇಯಿಸಲು ಅವಕಾಶ ನೀಡಿದರು.

ಕೇಂದ್ರಕ್ಕೆ ತಂದ ಡೀಸೆಲ್ ಪಂಪ್‌ಗಳನ್ನು, ತುಂತುರು ನೀರಾವರಿಯ ಉಪಕರಣಗಳನ್ನು ರೈತರಿಗೆ ಬಾಡಿಗೆಗಾಗಿ ನೀಡಿದರು.  ಜನರಿಗೆ ಕೃಷಿ ಅಭಿವೃದ್ಧಿಯ ಹೊಸ ಸಾಧ್ಯತೆಯ ಪರಿಚಯ, ಕಾವಲುಗಳು, ಊರಿಗೆ ಪ್ರಯೋಜನವಾಗುವ ರೀತಿಯನ್ನು ವಿವರಿಸಿದರು.

ಸಕ್ಕರೆಪಟ್ಟಣದಲ್ಲಿರುವ ಅಯ್ಯನ ಕೆರೆಯು ಪಕ್ಕದ ಕಾವಲಿನಿಂದ ಜೀವಂತವಾಗಿದೆ.  ಅಲ್ಲಿ ಗಿಡಮರಗಳ ರಕ್ಷಣೆಯಿಂದಾಗಿ ಉಳಿದ ಕಾಡು, ತಪ್ಪಿದ ಮಣ್ಣಿನ ಸವಕಳಿಗಳನ್ನು ತಿಳಿಹೇಳಿದರು.  ಅದೇ ರೀತಿ ಅಂದಿನ ಸೂಳೆಕೆರೆಯ (ಶಾಂತಿಸಾಗರ) ಸಮೀಪದ ೩೦೦ ಎಕರೆ ಕಾವಲನ್ನು ಉಳಿಸುವ ಪ್ರಯತ್ನ ಮಾಡಿದರು.

ಸರ್ಕಾರದ ಅನುದಾನದಿಂದಾಗಿ ಮಿಶ್ರ ತಳಿಯ ಹಸುಗಳ ಸಾಕುವಿಕೆ ಆರಂಭವಾಯಿತು.  ಮೊಲ ಸಾಕಾಣಿಕಾ ಕೇಂದ್ರವನ್ನು ಪ್ರಾರಂಭ ಮಾಡಲಾಯಿತು.  ಈ ಕೇಂದ್ರದಲ್ಲಿನ ಹಾಲು ಉತ್ತಮ ಗುಣಮಟ್ಟದ್ದಾಗಿದ್ದು ತಾಲ್ಲೂಕಿನಲ್ಲಿಯೇ ಪ್ರಸಿದ್ಧಿ ಪಡೆಯಿತು.  ಕೆಲವು ವಂಶದ ಅಮೃತಮಹಲ್‌ಗಳನ್ನು ಅಧ್ಯಯನ ಮಾಡಲಾಯಿತು.  ಉದಾಹರಣೆಗೆ ಪತ್ರೆ ವಂಶದ ಹಸುವು ಹೆಚ್ಚು ಹಾಲು ಕೊಡುವುದೊಂದೇ ಅಲ್ಲದೆ ವರ್ಷ ವರ್ಷವೂ ಕರು ಹಾಕಿದ್ದನ್ನು ದಾಖಲಿಸಿದರು.

ಮುಂದೆ ಸರ್ಕಾರದ ಅನುದಾನಗಳು ನಿಂತು, ಕೆಲಸಗಾರರು ಕಡಿಮೆಯಾಗಿ ಈ ಯೋಜನೆಯೆಲ್ಲಾ ಮೂಲೆಗುಂಪಾಯಿತು.  ಈಗ ಕೇಂದ್ರದಲ್ಲಿ ಮೊಲ ಸಾಕಾಣಿಕೆ ಹಾಗೂ ಮಿಶ್ರತಳಿ ಹಸುಗಳ ಸಾಕುವಿಕೆ ಇಲ್ಲವಾಗಿದೆ.

ಸರ್ಕಾರವು ಕೇವಲ ಅಮೃತಮಹಲ್‌ಗಳಿಗೆ ಮಾತ್ರ ಅನುದಾನವನ್ನು ನೀಡಿರುವುದರಿಂದ ಕೇಂದ್ರವನ್ನೂ, ಸಿಬ್ಬಂದಿವರ್ಗವನ್ನೂ ಈಗಿರುವಷ್ಟು ಅನುದಾನದಲ್ಲಿ ನಡೆಸಬೇಕಾಗಿದೆ.

ಇಲ್ಲಿ ರೈತರಿಗೆ ಕೃಷಿ ಹಾಗೂ ಪಶುಪಾಲನೆ ಕುರಿತಾದ ತರಬೇತಿ ನಡೆಯುತ್ತದೆ.  ಅದಕ್ಕಾಗಿ ೪೦ಕ್ಕೂ ಹೆಚ್ಚು ರೀತಿಯ ಮೇವಿನ ತಳಿಗಳನ್ನು ಬೆಳೆಸುತ್ತಿದ್ದಾರೆ.  ಆಸ್ಪ್ರೇಯನ್ ಸಿಂಕ್ಲರ್‍ಸ್, ರೋಡ್ಸ್, ಪ್ಯಾರ, ಜಟ್ಸ್, ಎಟಿಎಂ ಮೇಜ್, ಒಗರು ಜೋಳ, ಕುದುರೆ ಮಸಾಲೆ, ಸಜ್ಜೆ, ನವಣೆ, ಹುರುಳಿ, ಅಲಸಂದೆ, ಕೋ-೩, ಕೋ-೨, ನೇಪಿಯರ್, ಬಿಎಚ್-೯, ಪಂಚಾಬ್‌ಗಿನಿ, ಬಫೆಲ್‌ಗ್ರಾಸ್, ಹೆಡ್ಜ್, ಲೂಸರ್ನ್, ದೀನಬಂಧು ಹೀಗೆ ಪ್ರಾತ್ಯಕ್ಷಿಕೆಗೋಸ್ಕರವೇ ಮಡಿಗಳನ್ನು ಮಾಡಿದ್ದಾರೆ.  ಈ ತಳಿಗಳ ಬೀಜಗಳನ್ನು ಸಂಗ್ರಹಿಸಿ ರೈತರಿಗೆ ಹಂಚುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.

ಹಿಂದೆ ಮೊಲ ಸಾಕಾಣಿಕೆ ಮಾಡುತ್ತಿದ್ದ ಜಾಗದಲ್ಲಿ ಈಗ ಗಿರಿರಾಜ ತಳಿಯ ಕೋಳಿ ಸಾಕಣೆ ನಡೆದಿದೆ.

ಸುಮಾರು ೩೫೦ ಎಕರೆಗಳಷ್ಟು ಜಾಗವನ್ನು ಉಳುಮೆ ಮಾಡಿಸಲಾಗುತ್ತಿದೆ.  ಇದರಲ್ಲಿ ಬೆಳೆದ ಮೇವನ್ನು ಈಗ ಗೊಣಬೆ ಮಾಡಿ ಸಂಗ್ರಹಿಸಲಾಗುತ್ತಿದೆ.  ಸೈಲೇಜ್ ಗುಂಡಿಗಳು ಖಾಲಿ ಬಿದ್ದಿವೆ.  ಹಿಂದೆ ಮೇವು ಸಂಸ್ಕರಣೆ ಮಾಡುತ್ತಿದ್ದ ಯಂತ್ರಗಳನ್ನೆಲ್ಲಾ ತೂಕದ ಲೆಕ್ಕದಲ್ಲಿ ಹರಾಜು ಹಾಕುವ ಸಿದ್ಧತೆ ನಡೆದಿದೆ.  ಸರ್ಕಾರದ ಆದೇಶದಂತೆ ಎಲ್ಲಾ ಕೆಲಸಗಳನ್ನು ಟೆಂಡರ್ ಮೂಲಕವೇ ಮಾಡಿಸಬೇಕಾಗಿದೆ.  ೧೯೯೫ರವರೆಗೆ ಕೆಲಸ ಮಾಡುತ್ತಿದ್ದ ೩೦೦ ಜನ ಕೆಲಸಗಾರರನ್ನು ತೆಗೆದು ಹಾಕಿದ ಪ್ರಯುಕ್ತ ಈಗ ಖಾಯಂ ಇರುವವರು ೩೩ ಜನ ಮಾತ್ರ.  ಅದಕ್ಕಾಗಿ ಕೆಲಸ ನಿರ್ವಹಣೆಯಲ್ಲಿ ಅಪಾರ ವ್ಯತ್ಯಯವಾಗುತ್ತಿದೆ.  ಇಷ್ಟೆಲ್ಲಾ ಸಮಸ್ಯೆಗಳ ನಡುವೆಯೂ ತಿರುಪತಿಯಲ್ಲಿ ನಡೆದ ದಕ್ಷಿಣಭಾರತದ ಜಾನುವಾರು ಮೇಳದಲ್ಲಿ ಇಸವಿ ೨೦೦೫ರ ಅತ್ಯುತ್ತಮ ಜಾನುವಾರು ಪ್ರಶಸ್ತಿಯನ್ನು ಈ ಕೇಂದ್ರದ ನಾರಾಯಣಿ ಹಾಗೂ ಗಾಳಿಕೆರೆ ವಂಶದ ತಳಿಗಳು ಪಡೆದುಕೊಂಡಿವೆ.

ಅಮೃತಮಹಲ್ ಗೋವುಗಳನ್ನು ಆಹಾರದ, ನೀರಿನ ಮತ್ತು ವಾತಾವರಣದ ಇನ್ನಿತರ ಯಾವುದೇ ಸಮಸ್ಯೆಯೂ ಹೆದರಿಸಲಾರದು.  ಇಂತಹ ಅನೇಕ ಬರಗಾಲವನ್ನು ಈ ಹಿಂಡು ಸಹಿಸಿ ಬದುಕಿದೆ.

ಇಸವಿ ೨೦೦೨ರಲ್ಲಿ ಮಳೆ ಬಾರದಿದ್ದಾಗ ಹಿಂಡನ್ನು ಮೇವಿಗೆಂದು ತಪ್ಪಲು ಕಾವಲಿಗೆ ಒಯ್ಯಲಾಯಿತು.  ಮುಂಗಾರು ಬಾರದಿದ್ದಾಗ ಹಿಂದೆಯೂ ತಣಿಗೆಬೈಲು, ಕೆಮ್ಮಣ್ಣುಗುಂಡಿ, ಗಂಗೂರು, ಬಂಡೀಗುಡ್ಡ ಕಾಡುಗಳಿಗೆ ತಪ್ಪಲು ತಿನ್ನಲು ಹಿಂಡನ್ನು ಕರೆದೊಯ್ಯುತಿದ್ದರು.  ಈ ಸಾರಿ ನಲ್ ಪಕ್ಕದ ಕಾಡುಗಳಲ್ಲಿ ಅಂದರೆ ಬಾಳೆಕಟ್ಟೆ, ಓತಘಟ್ಟ, ಲಕ್ಕಿನಘಟ್ಟ, ಮದಗದ ಕೆರೆ ಮುಂತಾದ ಕಡೆ ಹಿಂಡನ್ನು ಕರೆದೊಯ್ದು ಮಳೆ ಬರುವವರೆಗೂ ಅಲ್ಲೇ ಸುತ್ತಾಡುತ್ತಿದ್ದುದನ್ನು ತಿಪ್ಪೇಸ್ವಾಮಿ ನೆನಪಿಸಿಕೊಳ್ಳುತ್ತ… ಹಡವೆ ಮೇವು, ಮಡುವಿನ ನೀರು ಇದ್ರೂ ಸಾಕು ಸಾರ್, ಚೆಂದಾಗಿ ಬಾಳ್ತವೆ ಎಂದು ನುಡಿಯುತ್ತಾರೆ.

ಬರಗಾಲದಲ್ಲಿ ಹುಲ್ಲು ಸಿಕ್ಕುತ್ತಲೇ ಇರಲಿಲ್ಲ.  ಸೊಪ್ಪು, ತೊಗಟೆಗಳು, ಕುರುಚಲು ಗಿಡಗಳೇ ಅಹಾರ.  ಹಾಗಂತ ಆಹಾರಕ್ಕಾಗಿ ಅಲೆಯುತ್ತಲೇ ಇರುವುದು, ಗುಂಪು ತಪ್ಪಿಹೋಗುವುದು ಮಾಡುತ್ತಿರಲಿಲ್ಲ.  ಗುಂಪಿನಿಂದ ಒಂದು ಚಿಕ್ಕ ಕರು ಹಿಂದುಳಿದರೂ ಅಥವಾ ತಪ್ಪಿಸಿಕೊಂಡರೂ ಸಾಕು, ಐದಾರು ಹಸುಗಳು ಒಟ್ಟಾಗಿ ಸೇರಿ ಹುಡುಕುತ್ತಿದ್ದವು.  ಬರಗಾಲವಾದ್ದರಿಂದ ಅನೇಕ ಹಸುಗಳು ಗರ್ಭ ಕಟ್ಟಲಿಲ್ಲ!  ಬೆದೆಗೆ ಬಂದರೂ ತಪ್ಪಿಸಿಕೊಂಡು ಓಡುತ್ತಿದ್ದವು.  ಆದುದರಿಂದ ಈ ವರ್ಷ ಕರುಗಳು ಹರಾಜಿಗೆ ಸಿಕ್ಕಿದ್ದು ಬಹಳ ಕಡಿಮೆ.  ಒಮ್ಮೊಮ್ಮೆ ದಿನವಿಡೀ ನೀರು ಸಿಕ್ಕುತ್ತಿರಲಿಲ್ಲ.  ಆಗಲೂ ದಾಹದಿಂದ ಬಳಲುತ್ತಿರಲಿಲ್ಲ.  ಆದರೆ ನೀರು ಸಿಕ್ಕಾಗ ಎರಡು ಮೂರು ದಿನ ಅದೇ ತಪ್ಪಲಿನಲ್ಲಿರುತ್ತಿದ್ದವು.  ಇವುಗಳದು ಸ್ವಚ್ಛತೆಯ ಸ್ವಭಾವ.  ಮೈ ಹೊಲಸಾದರೆ, ಧೂಳಾದರೆ ತಾವಾಗಿಯೇ ಕೆರೆಯಲ್ಲಿ ಈಜಾಡುತ್ತವೆ.  ಒಮ್ಮೊಮ್ಮೆ ಮರಳು, ಮಣ್ಣಿನಲ್ಲಿ ಹೊರಳಾಡುವುದು ಪದ್ಧತಿ.  ಆದರೆ ಬರಗಾಲದ ಸಮಯದಲ್ಲಿ ಸಗಣಿಯನ್ನು ಮೈಗೆ ಅಂಟಿಸಿಕೊಳ್ಳುತ್ತಿರಲಿಲ್ಲ.  ಕರುಗಳೂ ಸಹ ತಾಯಿಯನ್ನು ಅನುಸರಿಸಿ ಸ್ವಚ್ಛವಾಗಿರುವುದು ಆಶ್ಚರ್ಯದ ಸಂಗತಿ.

ಕಾಡುಪ್ರಾಣಿಗಳಿಂದ ಅಪಾಯದ ಸುಳಿವನ್ನು ಶೀಘ್ರವಾಗಿ ಗ್ರಹಿಸುವ ಇವುಗಳು ಒಮ್ಮೆ ದೂರದ ಪೊದೆಯಲ್ಲಿ ಚಿರತೆಯೊಂದು ಅಡಗಿದ್ದಾಗ, ಅದನ್ನು ಮಂಗ ಹಾಗೂ ಹಕ್ಕಿಗಳಿಂದ ಸೂಚನೆ ಪಡೆದು ಮುಂದೆ ಹೋಗದೆ ನಿಂತುಬಿಟ್ಟವು.  ಕಾವಲು ಪಡೆಯವರು ಬೊಬ್ಬೆಗರೆಯುತ್ತಾ ಅಟಕಾಯಿಸಿದಾಗ ಚಿರತೆ ಪೊದೆಯಿಂದ ಓಡಿಹೋದ ಮೇಲೆ ಹಿಂಡಿಗೆ ಸಮಾಧಾನವಾಯಿತು.

ಕಾವಲಿನೊಂದಿಗಿರುವ ಈ ಜನರ ಸೂಕ್ತ ಅವಲೋಕನಗಳ ಅಧ್ಯಯನ ಇನ್ನಷ್ಟು ಹೊಸ ಮಾಹಿತಿಗಳನ್ನು ನೀಡುತ್ತದೆ.

ಇವುಗಳು ಯಾವುದೇ ಔಷಧಿಯಲ್ಲದೆ ಕರು ಹಾಕುವ, ಗಾಯಗಳನ್ನು ವಾಸಿ ಮಾಡಿಕೊಳ್ಳುವ, ವಾತಾವರಣಕ್ಕೆ ಹೊಂದಿಕೊಳ್ಳುವ, ಒಟ್ಟಾರೆ ೨೫ ವರ್ಷಗಳ ಕಾಲ ಯಾವುದೇ ಖಾಯಿಲೆಗಳಿಲ್ಲದೆ ಬದುಕುವ ರೀತಿ ಅವುಗಳ ಆಹಾರವನ್ನು ಅವಲಂಬಿಸಿದೆ.  ಇವುಗಳ ಆಹಾರಸೂಕ್ಷ್ಮಗಳನ್ನು ಸರಿಯಾಗಿ ಅಭ್ಯಾಸ ಮಾಡಬೇಕಾಗಿದೆ ಎಂದು ಡಾ|| ರಂಗನಾಥ್ ಹೇಳುತ್ತಾರೆ.

ಪರಿಸರ ರಕ್ಷಣೆ, ಕೆರೆಗಳ ರಕ್ಷಣೆ, ಕಾವಲುಗಳ ರಕ್ಷಣೆ, ಸಮುದಾಯದ ರಕ್ಷಣೆ, ಒಟ್ಟಾರೆ ಒಂದಕ್ಕೊಂದು ಕೊಂಡಿಯಂತೆ ಜೋಡಿಸಿರುವ ಸಮಸ್ತ ಜೀವವೈವಿಧ್ಯಗಳ ರಕ್ಷಣೆಗೋಸ್ಕರವಾದರೂ ಅಮೃತಮಹಲ್ ತಳಿಗಳ ಉಳಿವು ಅಗತ್ಯ ಹಾಗೂ ಅನಿವಾರ್ಯ ಕೂಡ.

ಒಂದಿಷ್ಟು ಊಹಾಪೋಹ

ಮೈಸೂರು ಅರಸರ ಕಾಲದಲ್ಲಿ ಬೆಣ್ಣೆಚಾವಡಿ ಎಂದು ಹೆಸರಿದ್ದ ಈ ತಳಿಗಳಿಗೆ ಟಿಪ್ಪುವಿನ ಕಾಲದಲ್ಲಿ ಅಮೃತಮಹಲ್ ಎಂದು ಹೆಸರಾಯಿತು.  ಇದಕ್ಕೆ ಕಾರಣವೇನೆಂಬುದು ತಿಳಿಯದು.  ಆದರೆ ಅಜ್ಜಂಪುರದ ಸಮೀಪ ಇರುವ ಇತಿಹಾಸ ಪ್ರಸಿದ್ಧ ಅಮೃತಾಪುರ, ಅಮೃತೇಶ್ವರ ದೇವಾಲಯಗಳು ಕಾರಣವಾಗಿರಬಹುದು ಎಂಬುದು ಸ್ಥಳೀಯರ ಊಹೆ.

ಇದರ ಹಾಲನ್ನು ಕೆಂಪಗೆ ಕಾಸಿ ಕುಡಿದರೆ ಭಾರಿ ರುಚಿ.  ಒಂಥರಾ ಮಬ್ಬು, ಸುಖವಾಗಿ ನಿದ್ದೆ ಬರುತ್ತದೆ ಎಂಬ ಅನುಭವ ತಿಪ್ಪೇಸ್ವಾಮಿಯವರದು.  ಆದುದರಿಂದ ಅಮೃತದಂತಹ ಹಾಲಿನಿಂದಾಗಿ ಈ ತಳಿಗೆ ಅಮೃತಮಹಲ್ ಎಂಬ ಹೆಸರು ಬಂದಿರಬಹುದೆಂಬ ಊಹೆ ಅವರದು.

ಇತಿಹಾಸ ತಜ್ಞರು ಆಫ್ಘಾನಿಸ್ಥಾನದಲ್ಲೂ ಈ ತಳಿಯ ಕುರುಹನ್ನು ಪತ್ತೆ ಮಾಡಿರುವುದನ್ನು ದಾಖಲಿಸಿದ್ದಾರೆ.  ಅಂತೆಯೇ ಸಿಂಧೂ ಕಣಿವೆಯ ನಾಗರೀಕತೆಯನ್ನು ಗುರುತಿಸುವ ಚಿಹ್ನೆಯಲ್ಲಿರುವ ಹಸುವಿನ ಚಿತ್ರ ಅಪ್ಪಟ ಅಮೃತಮಹಲ್‌ನಂತಿರುವುದು ಕಾಕತಾಳೀಯವೇ?!

ಇದೇ ರೀತಿ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿರುವ ಬೃಹತ್ ನಂದಿಯ ಲಕ್ಷಣಗಳು, ಕಣ್ಣು, ಗೌರಿದೇವಿಯ ಮೇಲಿಟ್ಟಿರುವ ತೀಕ್ಷ್ಣನೋಟ-ಈ ಎಲ್ಲಾ ಲಕ್ಷಣಗಳು ಅಮೃತಮಹಲ್ ಹೋಲುವುದರಿಂದ ಈ ನಂದಿಯೂ ಅಮೃತಮಹಲ್ ಇರಬಹುದೇ ಎನಿಸದಿರದು.  ಇದಕ್ಕೆ ಪುಷ್ಠಿ ನೀಡುವ ಅಂಶವೆಂದರೆ ಸೊರಬ, ಶಿರಾಳಕೊಪ್ಪ, ಶಿಕಾರಿಪುರ, ಹಿರೇಕೆರೂರು, ಹಾವೇರಿ, ಬ್ಯಾಡಗಿ, ಹಾನಗಲ್ಲು, ಮಾಸೂರು ಮುಂತಾದ ಬನವಾಸಿಯ ಸುತ್ತಮುತ್ತಲಿನ ಊರುಗಳಲ್ಲಿ ಈ ತಳಿಗಳಿಗೆ ಬಹು ಹಿಂದಿನಿಂದಲೂ ಬಹಳ ಬೇಡಿಕೆ ಇದೆ.

ಸೂಕ್ಷ್ಮತೆ

ಅಮೃತಮಹಲ್‌ಗಳ ಸೂಕ್ಷ್ಮತೆ ಎಷ್ಟೆಂದರೆ ಆಕಾಶದಲ್ಲ್ಲಿ ವಿಮಾನ ಹೋದರೆ ಅದರ ಶಬ್ದಕ್ಕೆ ಹೂಂಕರಿಸುತ್ತಲೇ ಇರುತ್ತವೆ.  ಒಂದು ದಿನ ಹಿಂಡಿಗೆ ಹಿಂಡೇ ವ್ಯಾ ವ್ಯಾ ಎಂದು ಅರಚುವುದು, ಮೇವಿಗೆ ಬಿಟ್ಟಾಗಲೂ ಹೋಗದೆ ನಿಲ್ಲುವುದು, ಕೇಂದ್ರದ ಹತ್ತಿರದಲ್ಲೇ ಅಡ್ಡಾಡುವುದು ಮಾಡುತ್ತಿದ್ದವು.  ಇವುಗಳ ಈ ರೀತಿಯ ವರ್ತನೆ ಕೇಂದ್ರದಲ್ಲಿ ಎಲ್ಲರಿಗೂ ಆಶ್ಚರ್ಯ, ಏನೋ ಗೊಂದಲ, ಅನುಮಾನ.  ಮರುದಿನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾಗಲೇ ಡಾ|| ವೇಣುಗೋಪಾಲ್ ನಿಧನ ಹೊಂದಿದರು.  ಅಂದು ಸಂಜೆ ಬೇಗ ಹಿಂತಿರುಗಿದ ಹಿಂಡು ಸದ್ದಿಲ್ಲದೆ ಮೌನವಾಗಿದ್ದವು ಎನ್ನುವ ವಿವರಣೆ ತಿಪ್ಪೇಸ್ವಾಮಿಯವರದು.

ಹಠ

ಮೂರು ವರ್ಷದ ಹೋರಿಗಳನ್ನು ಹರಾಜು ಹಿಡಿದ ಮೇಲೆ ಕಾಲಿಗೆ ಹಗ್ಗ ಕಟ್ಟಿ, ಮೂಗುದಾರ ಹಾಕುತ್ತಾರೆ.  ಮನೆಗೆ ಒಯ್ದು ೪-೫ ದಿನಗಳ ಕಾಲ ಉಪವಾಸ ಕೆಡವುತ್ತಾರೆ.  ಆಗಲೂ ಹಠ, ಸಿಟ್ಟು ನಿಲ್ಲದಿದ್ದರೆ ಇನ್ನಷ್ಟು ದಿನ ಉಪವಾಸದ ನಂತರ ನಿಧಾನವಾಗಿ ಪಳಗಿಸುತ್ತಾರೆ.

ಒಮ್ಮೆ ಹೆಸರುಘಟ್ಟಕ್ಕೆ ಕಳುಹಿಸಿದ್ದ ಹೊಕ್ಕಳುಗಂಟಿಯು ರಾತ್ರೋರಾತ್ರಿ ಅಲ್ಲಿನ ಬಂಧನಗಳನ್ನೆಲ್ಲಾ ಹರಿದುಕೊಂಡು ಅಜ್ಜಂಪುರಕ್ಕೆ ಹಿಂತಿರುಗಿತ್ತು.

ಲಂಕೇಶ್‌ರವರು ಇವುಗಳ ಸಾಮರ್ಥ್ಯದ ಬಗ್ಗೆ ಕಣ್ಣಾರೆ ನೋಡಬೇಕೆಂದು ಬಯಸಿ ಕೇಂದ್ರಕ್ಕೆ ಬಂದಿದ್ದರು.  ಆಗ ಟ್ರ್ಯಾಕ್ಟರ್‌ಗೆ ೧೫ ಟನ್ ಭಾರ ತುಂಬಿ ಅಮೃತಮಹಲ್‌ಗಳಿಂದ ಎಳೆಸಲಾಯಿತು.  ಮುಂದೆ ಲಂಕೇಶ್ ಪತ್ರಿಕೆಯಲ್ಲಿನ ಮುಖಪುಟದಲ್ಲಿ ಈ ಸುದ್ದಿ ಪ್ರಾಧಾನ್ಯತೆ ಪಡೆಯಿತು.

ಮೌಲ್ಯ ಹಾಗೂ ಅಭಿವೃದ್ಧಿ

ಇಸವಿ ೨೦೦೩ರಲ್ಲಿ ೧೧೫ ಕರುಗಳ ಮಾರಾಟದಿಂದ ೧೦.೩೬ ಲಕ್ಷ ಆದಾಯ ಬಂದರೆ, ೨೦೦೪ರಲ್ಲಿ ೧೦೦ ಕರುಗಳಿಂದ ಆದಾಯ ೧೨ ಲಕ್ಷ ದಾಟಿತು.  ೨೦೦೫ರಲ್ಲಿ ಕೇವಲ ೪೦ ಕರುಗಳನ್ನು ಮಾರಿದ್ದರಿಂದ ೧೫ ಲಕ್ಷ ಆದಾಯ ದೊರೆತಿದೆ.  ಆದರೆ ಕೇಂದ್ರದ ಖರ್ಚು ೪೦ ಲಕ್ಷಕ್ಕೂ ಹೆಚ್ಚು.  ಅನುದಾನದ ಹಣ ೧೫ ಲಕ್ಷ ದೊರೆಯುತ್ತಿದ್ದು ಇದರಲ್ಲಿ ಕಾವಲು, ಮೇವು, ಆಹಾರ, ಡೀಸೆಲ್, ಕೃಷಿ, ನೀರಾವರಿಗಳಿಗೆ ಖರ್ಚಾಗುತ್ತದೆ.

ಹಿಂದೊಮ್ಮೆ ಸ್ವಿಡ್ಜರ್‌ಲ್ಯಾಂಡಿನ ಸಂಸ್ಥೆಯೊಂದು ಅನುದಾನ ನೀಡಲು ಮುಂದಾಯಿತು.  ಅದಕ್ಕಾಗಿ ಅಮೃತ್‌ಮಹಲ್ ಅಭಿವೃದ್ಧಿ ಸಮಿತಿ ರಚನೆಯಾಯಿತು.  ಸ್ವಿಸ್ ಸಂಸ್ಥೆಯ ಅಧ್ಯಯನದ ಪ್ರಕಾರ ಈ ತಳಿಗಳ ರಕ್ಷಣೆ ಎಂದರೆ ಗ್ರಾಮಗಳು, ಸಮುದಾಯ, ಹುಲ್ಲುಗಾವಲು, ಕೆರೆ, ಕೃಷಿ ಹಾಗೂ ಪರಂಪರೆಯ ರಕ್ಷಣೆ ಎಂಬುದಾಗಿತ್ತು.  ಆದರೆ ಆಮೇಲೆ ಏನಾಯಿತೋ ತಿಳಿಯದು.  ಈ ಸಮಿತಿಯ ಒಂದು ಸಭೆಯೂ ನಡೆದಿಲ್ಲ.  ಅನುದಾನ ಬಂದ ಬಗ್ಗೆ ಮಾಹಿತಿಯೂ ಇಲ್ಲ.

ಕಾವಲುಗಳ ಒತ್ತುವರಿಯಂತೂ ಕಾನೂನುಬದ್ಧವಾಗಿಯೇ ನಡೆಯುತ್ತಿದೆ.  ಈ ತಳಿಯ ವಿಶೇಷತೆ, ಅಗತ್ಯ, ಇವುಗಳಿಗೆ ಬೇಕಾದ ಸೌಕರ್ಯಗಳು ಹಾಗೂ ಇವುಗಳ ಜೀವನವಿಧಾನದ ಬಗ್ಗೆ ಜನರಿಗೆ ತಿಳುವಳಿಕೆಯೇ ಇಲ್ಲ.

ಈ ತಳಿಗಳ ಕುರಿತಾಗಿ ಪ್ರಚಾರವಾಗಲಿ, ಇವುಗಳನ್ನು ಜನಪ್ರಿಯಗೊಳಿಸುವ, ರೈತರಿಗೆ ಸುಲಭ ಬೆಲೆಯಲ್ಲಿ ನೀಡುವ, ಹೆಚ್ಚು ಜನರಿಗೆ ತಲುಪಿಸುವ ಯಾವುದೇ ಕೆಲಸಗಳಾಗಲಿ ನಡೆಯುತ್ತಿಲ್ಲ.  ಈ ರೀತಿಯ ಯಾವ ಯೋಜನೆಯೂ ಕೇಂದ್ರದಲ್ಲಿಲ್ಲ.