ಶೃಣ್ವಂತು ವಿಶ್ವೇ ಅಮೃತಸ್ಯ ಪುತ್ರಾಃ

ಆಯೇ ಧಾಮಾನಿ ದಿವ್ಯಾನಿ ತಸ್ತುಃ ||
ವೇದಾಹಮೇತಮ್ ಪುರಷಂ ಮಹಾನ್ತಮ್
ಆದಿತ್ಯವರ್ಣಂ ತಮಸಃ ಪರಸ್ತಾತ್ ||
ತಮೇವ ವಿದಿತ್ವಾsತಿಮೃತ್ಯುಮೇತಿ
ನಾನ್ಯಃ ಪಂಥಾ ವಿದ್ಯತೇ ಅಯನಾಯ ||

“ಈ ಭೂಮಿಯಲ್ಲಿಯೂ ದಿವ್ಯಧಾಮಗಳಲ್ಲಿಯೂ ಬಾಳುತ್ತಿರುವ ವಿಶ್ವದ ಅಮೃತಪುತ್ರರಿರಾ ಆಲಿಸಿರಿ: ತಮಸ್ಸಿಗೆ ಅತೀತನಾಗಿ ಆದಿತ್ಯವರ್ಣನಾಗಿರುವ ಪರಮಪುರಷನನ್ನು ನಾನು (ಅರಿತಿದ್ದೇನೆ) ಸಾಕ್ಷಾತ್ಕಾರ ಮಾಡಿದ್ದೇನೆ. ಆತನನ್ನು ಅರಿಯುವುದರಿಂದಲೆ ಮೃತ್ಯುವನ್ನು ದಾಟಿ ಅಮೃತರಾಗುತ್ತೇವೆ. ಅದೊಂದನ್ನುಳಿದು ಬೇರೆಯ ಹಾದಿಗಳಾವುವೂ ಇಲ್ಲ.”#

ದೂರವಾದುದು ನುಣ್ಣಗೆ ಕಾಣಿಸುವಂತೆ ಪುರಾತನವಾದುದು ಪವಿತ್ರವಾಗಿ ತೋರುತ್ತದೆ. ಬದುಕಿರುವ ಸಾಧಾರಣ ಶಿಷ್ಟನಿಗಿಂತ ತೀರಿಕೊಂಡಿರುವ ಸ್ವಲ್ಪ ದುಷ್ಟನೂ ನಮ್ಮ ಸಹಾನುಭೂತಿಗೆ ಹೆಚ್ಚು ಭಾಜನನಾಗುತ್ತಾನೆ.

ಪುರಾತನವೆಂದರೆ ಪೂಜ್ಯವಾದುದು ಎಂಬ ಭಾವವು ಮಾನವ ವರ್ಗಕ್ಕೆ ಸರ್ವಸಾಧಾರಣವಾಗಿದೆ. ಏಕೆಂದರೆ ಹಳೆಯದು ಕಾಲದೃಷ್ಟಿಯಿಂದ ದೂರವಾದುದೂ ಹೌದು, ತೀರಿಹೋದುದೂ ಹೌದು. ಮೃತನಾದವನಲ್ಲಿದ್ದ ದುರ್ಬಲತೆ ದುರ್ಗುಣಗಳನ್ನೆಲ್ಲ ನಿರ್ಲಕ್ಷಿಸಿ, ಉತ್ತಮ ಗುಣಗಳನ್ನೆ ದ್ವಿಗುಣ ಮಾಡಿ ಪ್ರಶಂಸಿಸುವಂತೆ, ಪುರಾತನದಲ್ಲಿರುವ ಕಾಳಿಕೆಯನ್ನೂ ಅದರಲ್ಲಿರುವ ಹೊನ್ನಿನೊಡನೆ ಬೆರೆಸಿ ಆರಾಧಿಸುವುದು ಸಾಮಾನ್ಯ ಜನಮನದ ಪದ್ಧತಿ, ಮೋಹ ಅಥವಾ ಭ್ರಾಂತಿ. ಧರ್ಮಗ್ರಂಥಗಳ ಮತ್ತು ಧಾರ್ಮಿಕ ವ್ಯಕ್ತಿಗಳ ವಿಚಾರದಲ್ಲಿ ಈ ಭ್ರಾಂತಿ ಮೇರೆ ಮೀರಿರುತ್ತದೆ. ಅಂತಹ ಭ್ರಾಂತಿಗೆ ಶರಣಾಗದೆ, ಕಾಳಿಕೆಯನ್ನೂ ಹೊನ್ನನ್ನೂ ಬೇರೆ ಬೇರೆ ಮಾಡಿ ಪರಿಶೀಲಿಸಿದರೆ ಉಪನಿಷತ್ತಿನ ಋಷಿಯ ‘ದರ್ಶನ’ವು ಸ್ಥಿರವೂ ಶಾಶ್ವತವೂ ಉನ್ನತವೂ ಚಿರ ಜಾಜ್ವಲ್ಯಮಾನವೂ ಆಗಿ, ಭೂತಕಾಲದ ಅಂತರಿಕ್ಷದಲ್ಲಿ ಧ್ರುವತಾರೆಯಂತೆ ಮರೆಯುತ್ತದೆ; ನವೀನ ಯಂತ್ರನಾಗರಿಕತೆಯ ಧೂಳನ್ನೂ  ಸದ್ದುಗದ್ದಲವನ್ನೂ ತೂರಿ ಮೀರಿ ದಾಟಿಬಂದು ಕಿರಣಹಸ್ತದಿಂದಲೂ ಸಾಮಗಾನದಿಂದಲೂ ನಮ್ಮನ್ನು ಕೈಬೀಸಿ ಕರೆಯುತ್ತದೆ.

ಆಧುನಿಕ ಜೀವನದ ಗಡಿಬಿಡಿಯಿಂದಲೂ ಹೋರಾಟದಿಂದಲೂ ವೇಗೋದ್ವೇಗಗಳಿಂದಲೂ ವಿಮುಖರಾಗಿ, ಕ್ಷಣಕಾಲ ಅಂತರ್ಮುಖಿಗಳಾಗಿ ಆಲಿಸಿದರೆ ಕೇಳಿಬರುತ್ತದೆ: ಭೂತಕಾಲದ ಗಭೀರ ಗರ್ಭದ ಮಹಾರಣ್ಯಗಳಿಂದ ತಪೋವನದ ಗಂಭೀರ ಋಷಿವಾಣಿ: ಆಲಿಸುವವರಿಗೆ ಎಂತಹ ಮಾಧುರ್ಯ, ಎಂತಹ ಧೈರ್ಯ, ಎಂತಹ ತೃಪ್ತಿ, ಎಂತಹ ಶಾಂತಿ!

ದಿಕ್ಕು ದಿಕ್ಕಿಗೂ ಮಿಂಚಿನ ರೆಕ್ಕೆಗಳನ್ನು ಬಿಚ್ಚಿ ಹಾರುವ ವಜ್ರದ ಕೊಕ್ಕಿನ ‘ಕಲ್ಪನೆ’ ಎಂಬುವ ಮಾಯಾಪಕ್ಷಿಯ ಸಹಾಯದಿಂದ ದೇಶ ಕಾಲಗಳನ್ನು ಕುಕ್ಕಿ ದಾಟಿ ನೋಡಿದರೆ ಆ ಪಾವನ ದೃಶ್ಯ ಕಂಗೊಳಿಸುತ್ತದೆ: ತರಂಗ ಮಂಜುಳಗಾನದಿಂದ ಪ್ರವಹಿಸುವ ಅನಂತಗಾಮಿನಿಯಾದ ನದಿಯ ತೀರದ ತಪೋವನದಲ್ಲಿ ಹಸುರಿನ ಹಾಸಗೆಯ ಮೇಲೆ ಮಂಡಿಸಿರುವ ಮಹರ್ಷಿ; ಆ ಪುಣ್ಯಮೂರ್ತಿಯ ದಿವ್ಯ ಸಾನ್ನಿಧ್ಯದಲ್ಲಿ ಬ್ರಹ್ಮವಿದ್ಯಾಕಾಂಕ್ಷಿಯಾದ ಶಿಷ್ಯವರ್ಯ. ಅವರಿಬ್ಬರೂ ಆ ಪ್ರದೇಶಕ್ಕೆ ಆಗಂತುಕರಾಗಿಲ್ಲ; ಆ ಸನ್ನಿವೇಶದ ಅಂಗಗಳಾಗಿದ್ದಾರೆ. ಋಷಿಯೊಬ್ಬನೆ ಅಲ್ಲ ಬೋಧಿಸುತ್ತಿರುವುದು; ಅಲ್ಲಿಯ ಸಮಸ್ತ ಸುಂದರ ದೃಶ್ಯವೂ ಬೋಧಿಸುತ್ತಿದೆ. ಶಿಷ್ಯನು ಋಷಿಯ ವಾಣಿಯೊಡನೆ ವಿಹಂಗಮ ಗಾಯನವನ್ನೂ ತರುಪರ್ಣಗಳ ಮರ್ಮರ ಧ್ವನಿಯನ್ನೂ ವಾಹಿನಿಯ ವೀಚಿಗಳ ಕಲರವವನ್ನೂ ಕೇಳುತ್ತಾನೆ. ತನ್ನೆದುರು ಕುಳಿತಿರುವ ಬ್ರಹ್ಮಜ್ಞನಾದ ತೇಜೋಮೂರ್ತಿಯೊಡನೆ ನೀಲಾಕಾಶವನ್ನೂ ಬೆಳ್ಮುಗಿಲುಗಳನ್ನೂ ನಳನಳಿಸಿ ಬೆಳೆದಿರುವ ತರುಸಂಕುಲಗಳ ಹಸುರು ಸಿರಿಯನ್ನೂ ಮೊರೆದು ಹರಿಯುವ ತೊರೆಯ ತೆರೆಗಳ ನಲ್ಮೆಯನ್ನೂ ನೊರೆಯ ತುಂತುರಿನ ಸೇಸೆಯನ್ನೂ ದೃಷ್ಟಿಸುತ್ತಾನೆ. ಋಷಿ ಬೋಧಿಸುತ್ತಿರುವುದು ಬುದ್ಧಿಗಿಂತಲೂ ಹೆಚ್ಚಾಗಿ ಹೃದಯಕ್ಕೆ. ಶಿಷ್ಯನಿಗೆ ಲಭಿಸುತ್ತಿರುವುದೂ ವಿಚಾರಗ್ರಾಹ್ಯವಾದ ತತ್ವಮಾತ್ರವಲ್ಲ; ಅನುಭವ ಗೋಚರವಾಗುವ ‘ದರ್ಶನ’.

ಉಪನಿಷತ್ತುಗಳ ದಿವ್ಯ ‘ದರ್ಶನ’ ಆವಿರ್ಭವಿಸಿದುದು ಅರಣ್ಯಗಳ ಮಧ್ಯದಲ್ಲಿ, ತಪೋವನಗಳಲ್ಲಿ, ಪ್ರಕೃತಿಯ ಪ್ರಶಾಂತ ಸನ್ನಿವೇಶಗಳಲ್ಲಿ. ಋಷಿಯ ಆವೇಶವು ತಪೋವನದ ಸನ್ನಿವೇಶದಿಂದ ಅದರೊಂದಿಗೆ ಹೊಂದಿಕೊಂಡೆಯೆ ಹೊರಹೊಮ್ಮಿದೆ. ಋಷಿಯ ಮಂಗಳವಾಣಿಯಲ್ಲಿ ತರಂಗಿಣಿಯ ಕಲನಾದವೂ ವಿಹಂಗಮಗಳ ಇಂಚರವೂ ಮಿಲನವಾಗಿವೆ; ಅದರಲ್ಲಿ ಅರಣ್ಯ ನದೀಪ್ರದೇಶಗಳ ಮನೋಹರತೆಯೂ ಸುನೀಲವ್ಯೋಮದ ಶಾಂತಿಯೂ ಬಾಲ ದಿನೇಶನ ಕೋಮಲ ಕಿರಣಗಳ ಸ್ವರ್ಣವರ್ಣಪೂರ್ಣವಾದ ಸುಖೋಷ್ಣವೂ ಲೀನವಾಗಿವೆ; ಅದರಲ್ಲಿ ತಪೋವನವಾಸಿಯಾಗಿ ನಿರ್ಭರತೆಯಿಂದ ಸಂಚರಿಸುವ ಹರಿಣಿಯ ಹೆಣ್ಣು ಚೆಲುವೂ ಜಾತಿವೈರವನ್ನುಳಿದು ಸೌಮ್ಯಭಾವವನ್ನು ತಾಳಿದ ಸಿಂಹದ ಗಂಡುಗಾಂಭೀರ್ಯವೂ ಅಡಕವಾಗಿದೆ. ಆದ್ದರಿಂದ ಇಂದು, ಕಾಗದದ ಮೇಲೆ ಅಚ್ಚಾಗಿರುವ ಉಪನಿಷತ್ತಿನ ಮಹಾಮಂತ್ರಗಳನ್ನು ಓದಿ, ಅವುಗಳ ಸಂಪೂರ್ಣ ಅರ್ಥವನ್ನು ಮಾತ್ರವಲ್ಲದೆ ಭಾವಾವೇಶವನ್ನೂ ಗ್ರಹಿಸಬೇಕಾದರೆ ನಾವು ಮನಸ್ಸಿನಲ್ಲಿ ಅಂದಿನ ಮಹತ್ತಾದ ಭವ್ಯ ಸನ್ನಿವೇವನ್ನೂ ನಿರ್ಮಿಸಿಕೊಳ್ಳಬೇಕು. ಕಲ್ಪನೆಯ ಸಹಾಯದಿಂದ ಅದರಲ್ಲಿ ಮರಳಿ ಬಾಳಬೇಕು; ಮನದಲ್ಲಿ ಕಟ್ಟಬೇಕು; ಭಾವದಲ್ಲಿ ಮುಟ್ಟಬೇಕು; ಋಷಿಯ ಪುಣ್ಯಕಂಠದಿಂದಲೆ ಆ ವಾಣಿಯನ್ನು ಪುನಃ ಕೇಳಬೇಕು. ಹಾಗೆ ಮಾಡಿದರೆ ಮಾತ್ರ ಭಾವಪೂರ್ಣವಾಗುತ್ತದೆ; ಆ ಋಷಿಯ ‘ದರ್ಶನ’ದ ಪರಿಚಯ ಒಂದಿನಿತಾದರೂ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಶುಷ್ಕಘೋಷವಾಗುತ್ತದೆ; ಮರುಭೂಮಿಯ ಪರ್ಯಟನವಾಗುತ್ತದೆ.

ಋಷಿಗುರು ಜ್ಞಾನಿಯಾದರೂ ಶಿಷ್ಯರೊಡನೆ ಜಿಜ್ಞಾಸುವಿನಂತೆ ವರ್ತಿಸುತ್ತಾನೆ. ಆತನಲ್ಲಿ ತೋರುವ ನಿರಹಂಕಾರ ನಮ್ಮನ್ನು ಬೆಕ್ಕಸಗೊಳಿಸುತ್ತದೆ. ಸ್ವಲ್ಪ ತಿಳಿದರೂ ಪಾರಂಗತ ಪಂಡಿತರೆಂದುಕೊಳ್ಳುವ ಈ ಕಾಲದಲ್ಲಿ ಆ ಋಷಿಯ ನಮ್ರವಾಣಿಯನ್ನು ಆಲಿಸಿದರೆ ನಮಗೆ ನಾಚಿಕೆಯಾಗುತ್ತದೆ. ಆ ಕಾಲದಲ್ಲಿ ಗುರುಶಿಷ್ಯರ ಸಂಬಂಧ ಎಷ್ಟು ನಿಕಟವಾಗಿತ್ತು! ಹೌದು; ಹಾಗಿರದಿದ್ದರೆ ‘ದರ್ಶನ’ವನ್ನು ದಯಪಾಲಿಸುವುದು ಅಸಾಧ್ಯ. ಮಗ್ಗಿ ಕೋಷ್ಟಕವನ್ನು ಕಲಿಸಿಕೊಡಲು ಗುರುಶಿಷ್ಯರ ಐಕ್ಯಭಾವ ಒಂದು ವೇಳೆ ಅನಾವಶ್ಯಕವಾಗಬಹುದು. ಆದರೆ ‘ದರ್ಶನ’ ಮಗ್ಗಿಯ ವಿದ್ಯೆಯಲ್ಲ. ಅದು ಹೃದಯದಿಂದ ಹೃದಯಕ್ಕೆ ಚಿಮ್ಮುವ ದಳ್ಳುರಿ. ಅದಕ್ಕೆ ಗುರಶಿಷ್ಯರ ಪರಸ್ಪರ ಆತ್ಮೀಯತೆ ಅತ್ಯಾವಶ್ಯಕ. ಇಬ್ಬರ ಅಂತಃಕರಣಗಳೂ ಒಂದಾಗಿರಬೇಕು. ಇಬ್ಬರ ಜೀವವೀಣೆಗಳಿಗೂ ಸಮಶ್ರುತಿಯಿರಬೇಕು.

ಜಗತ್ತು ಸುಖನಿದ್ರೆಯಿಂದ ಎಚ್ಚರಗೊಳ್ಳುತ್ತಿರುವ ಪ್ರಶಾಂತ ಸಮಯದಲ್ಲಿ, ನದೀ ಅರಣ್ಯಗಳ ಮೇಲೆ ಮನೋಹರವಾಗಿ ಮೂಡುವ ಅರುಣೊದಯದ ಹೊಂಬಣ್ಣದ ಬೆಳಕಿನಲ್ಲಿ, ತಂಗಾಳಿ ಮರದೆಲೆಯ ಹನಿಗಳನ್ನು ಉದುರಿಸುತ್ತ ಮೆಲ್ಲನೆ ಬೀಸಿ ಬರುತ್ತಿರುಲು, ಋಷಿಗುರುವಿನ ಸುಶ್ರಾವ್ಯ ಸಾಮವಾಣಿ ಇಂತೆಂದು ಪ್ರಾರಂಭವಾಗುತ್ತದೆ:

ಓಂ ಸಹ ನಾವವತು ಸಹ ನೌ ಭುನಕ್ತು ಸಹ ವೀರ್ಯಂ ಕರವಾವಹೈ |
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ ||

ಆ ವಾಣಿಯಲ್ಲಿ ಗುರುವಿನ ಅಧಿಕಾರ ಗರ್ವವಿಲ್ಲ; ಶಿಷ್ಯನ ದಾಸ್ಯಭಾವವಿಲ್ಲ. ಅಹಂಕಾರವಿಲ್ಲ; ಸ್ವಾರ್ಥತೆಯಿಲ್ಲ. ಸಮತಾಭಾವ ತುಂಬಿ ತುಳುಕುತ್ತದೆ: “ಇಬ್ಬರನ್ನೂ ರಕ್ಷಿಸಲಿ; ಇಬ್ಬರನ್ನೂ ಪಾಲಿಸಲಿ. ಇಬ್ಬರೂ ಸೇರಿ ಕೆಲಸಮಾಡುವ ಶಕ್ತಿ ಬರಲಿ. ನಮ್ಮಿಬ್ಬರ ಅಧೀತ ವಿದ್ಯೆ ತೇಜಸ್ವಿಯಾಗಲಿ. ನಾವು ಒಬ್ಬರನ್ನೊಬ್ಬರು ದ್ವೇಷಿಸದಿರಲಿ.” ಎಂತಹ ಉದಾತ್ತವಾದ ಪ್ರಾರ್ಥನೆಯಿದು? ಗುರು ತನ್ನ ಪರವಾಗಿಯೂ ಶಿಷ್ಯನ ಪರವಾಗಿಯೂ ಮಹಾ ಚೈತನ್ಯವಾದ ಜಗದೀಶ್ವರನನ್ನು ಬೇಡುತ್ತಾನೆ! ಏನನ್ನೂ ಬೇಡುತ್ತಾನೆ? ರಕ್ಷಣೆ, ಪಾಲನೆ, ಶಕ್ತಿ, ತೇಜಸ್ಸು, ಪ್ರೇಮ! ಉಪನಿಷತ್ತುಗಳಲ್ಲಿ ಶಕ್ತಿಯ ಪ್ರಶಂಸೆ ವಿಶೇಷವಾಗಿದೆ. ವ್ಯಕ್ತಿ ಆರೋಗದೃಢಕಾಯನಾಗಿರಬೇಕು ಎಂಬುದು ಋಷಿಗಳ ಅಭಿಮತ. ಹಾಗಿದ್ದರೆ ಮಾತ್ರ ಆತ್ಮಲಾಭ ಸಾಧ್ಯ. ನೋವಿನ ಸಂಪಾದನೆಯೆ ಆತ್ಮಸಾಧನೆಯ ಪಥ ಎಂಬುದು ಅವರ ಮತವಾಗಿರಲಿಲ್ಲ. ಈಚೀಚೆಗೆ ಋಷಿ, ತಪಸ್ವಿ, ಸನ್ಯಾಸಿ ಅಥವಾ ಧಾರ್ಮಿಕ ವ್ಯಕ್ತಿ ಎಂದರೆ ಕ್ಷಾಮಪೀಡಿತ ಪಶುವಿನಂತೆ ಬಡಕಲಾಗಿರುವ ಮನುಷ್ಯಾಕಾರ ವಿಶೇಷ ಎಂಬ ಭಾವ ನಮ್ಮಲ್ಲಿ ಮೂಡಿದೆ. ಆದರೆ ಆ ಕಾಲದಲ್ಲಿ ಜನರು ದುರ್ಬಲತೆಯನ್ನೂ ದರ್ಮವನ್ನೂ ಒಂದೇ ವಸ್ತುವೆಂದಾಗಲಿ ಒಂದಕ್ಕೊಂದು ಗುರುತು ಎಂದಾಗಲಿ ತಿಳಿದಿರಲಿಲ್ಲ: “ಸ್ಥಿರರಂಗೈಸ್ತುಷ್ಟುವಾಂ ಸಸ್ತನೂಭಿಃ” “ಧೃಢ ದೇಹದಿಂದಲೂ ಆನಂದಂದಿಂದಲೂ ಜೀವನವು ಸುಖವಾಗಿ ಸಾಗಲಿ” “ನಾಯಮಾತ್ಮಾ ಬಲಹೀನೇನ ಲಭ್ಯಃ” “ಬಲಹೀನನಿಗೆ ಈ ಆತ್ಮವು ಲಭಿಸುವುದಿಲ್ಲ.”

“ತೇಜಸ್ವಿನಾವಧೀತಮಸ್ತು” “ನಮ್ಮಿಬ್ಬರ ಅಧೀತವಿದ್ಯೆ ತೇಜಸ್ವಿಯಾಗಲಿ.” ತತ್ತ್ವಶಾಸ್ತ್ರದ ಅಧ್ಯಯನ ಬರಿಯ ಬುದ್ಧಿಯ ವಿದ್ಯೆಯಾದರೆ ಶುಷ್ಕ ತರ್ಕವಿತರ್ಕದಲ್ಲಿ ಪರ್ಯವಸಾನವಾಗುತ್ತದೆ. ಆದರೆ ಬುದ್ಧಿ ಗ್ರಹಿಸಿದುದು ಧ್ಯಾನಮುಖದಿಂದ ಸಿದ್ಧಿಯಾಗಬೇಕು; ಅನುಭವಕ್ಕೆ ಬರಬೇಕು. ಎಂಬುದೆ ಋಷಿಯ ಆಶೆ. ಹಣತೆಗೆ ಎಣ್ಣೆ ಬತ್ತಿಗಳನ್ನು ಹಾಕಿದ ಮಾತ್ರದಿಂದ ಬೆಳಕು ಉಂಟಾಗುವುದಿಲ್ಲ. ತೇಜಸ್ಸು ಬರಬೇಕಾದರೆ ಉರಿಯುವ ಮತ್ತೊಂದು ಸೊಡರಿನ ಸಂಪರ್ಕದಿಂದಲೇ ಸಾಧ್ಯ. ಅಂತಹ ತೇಜಸ್ಸೇ ನಿಜವಾದ ವಿದ್ಯೆಯ ಚರಮೋದ್ದೇಶ ಮತ್ತು ಪರಮ ಸಾರ್ಥಕತೆ.

ನವೀನ ನಾಗರಿಕತೆಯ ನಗರಗಳಲ್ಲಿ ಕೇಳಬಾರದುದನ್ನೆಷ್ಟು ಕೇಳುತ್ತೇವೆ? ನೋಡಬಾರದುದನ್ನೆಷ್ಟು ನೋಡುತ್ತೇವೆ? ಮಾಡಬಾರದುದನ್ನೆಷ್ಟು ಮಾಡಿ ದುರ್ಬಲರೂ ರೋಗಗ್ರಸ್ತರೂ ಹತಚೇತಸರೂ ಆಗುತ್ತೇವೆ? ಯಂತ್ರಗಳು, ಯಾನಗಳು, ಜನಗಳು, ಧೂಳಿ, ಹೊಗೆ, ಗಲಭೆ, ಹೋರಾಟ, ಹೋಟಲು, ರೋಗ, ಅಶ್ಲೀಲ ಇತ್ಯಾದಿಗಳು ನಮಗೆ ದೈನಂದಿನ ವಿಷಯಗಳಾಗಿಹೋಗಿವೆ. ಈ ಅನಿವಾರ್ಯಗಳನ್ನೂ ಅಭದ್ರಗಳನ್ನೂ ಆ ತಪೋವನಗಳು ಕನಸಿನಲ್ಲಿಯೂ ಕೂಡ ಕಂಡಿರದಿರಬಹುದು. ಆದರೂ ಋಷಿಯ ಆಶೀರ್ವಾಣಿ ಹೀಗೆಂದು ಘೋಷಿಸುತ್ತದೆ:

ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ
ಭದ್ರಂ ಪಶ್ಯೇಮಾಕ್ಷಭಿರ್ಯಜತ್ರಾಃ
ಸ್ಥಿರೈರಂಗೈಸುಷ್ಟುವಾಂ ಸಸ್ತನೂಭಿಃ
ವ್ಯಶೇಮ ದೇವಹಿತಂ ಯದಾಯುಃ

“ಶುಭವಾದುದನೆ ನಮ್ಮ ಕಿವಿಯಾಲಿಸಲಿ. ಪೂಜಾರ್ಹವಾಗಿ ಮಂಗಳವಾದುದನೆ ನಮ್ಮ ಕಣ್ಣು ನೋಡಲಿ. ದೃಢದೇಹದಿಂದಲೂ ಆನಂದದಿಂದಲೂ ದೇವಹಿತವಾಗಿ ಜೀವಮಾನವು ಸುಖವಾಗಿ ಸಾಗಲಿ.” ಈ ಪ್ರಾರ್ಥನೆ ಆ ಋಷಿಗೆ ಒಂದು ವೇಳೆ ನಿತ್ಯನಿಷ್ಠೆಯ ಪ್ರಾರ್ಥನಾ ಮಾತ್ರವಾಗಿದ್ದರೂ ನಮಗೆ ಎಷ್ಟು ಆವಶ್ಯಕವಾಗಿರುತ್ತದೆ ಎಂಬುದನ್ನು ಒತ್ತಿ ಹೇಳಬೇಕಾಗಿಲ್ಲ.

ಹೀಗೆ ನಾಂದಿಯನ್ನು ನುಡಿದ ಋಷಿ ತನ್ನ ದಿವ್ಯ ‘ದರ್ಶನ’ಕ್ಕೆ ಆತ್ಮಪ್ರಾಯವಾದ ಭಾವವನ್ನು ಹಾಡುತ್ತಾನೆ. ಅದು ಬರಿಯ ಬುದ್ಧಿಯಿಂದಾಗಲಿ ಅಥವಾ ತರ್ಕದಿಂದಾಗಲಿ ಸಾಧ್ಯವಾದುದಲ್ಲ. ಆತನ ಒಳಗಣ್ಣಿಗೆ ಗೋಚರವಾದುದಾಗಿದೆ. ಎಣ್ಣೆ ಬತ್ತಿಗಳನ್ನು ಮಾತ್ರ ಇಟ್ಟುಕೊಂಡು ಹಣತೆ ಎಷ್ಟು ತರ್ಕಮಾಡಿದರೂ ಅದಕ್ಕೆ ಬೆಳಕು ಬರುವುದೂ ಇಲ್ಲ; ಬೆಳಕೆಂದರೆ ಅದಕ್ಕೆ ಅರ್ಥವಾಗುವುದೂ ಇಲ್ಲ. ಆದರೆ ಮತ್ತೊಂದು ಜ್ವಾಲೆ ತನ್ನನ್ನು ಮುಟ್ಟಿದರೆ ಬೆಳಕು ತನ್ನಷ್ಟಕ್ಕೆ ತಾನೆ ಗೋಚರವಾಗುತ್ತದೆ. ಹಾಗೆಯೆ ಸಿದ್ಧಗುರುವಿನ ಸಾನ್ನಿಧ್ಯವು ಶಿಷ್ಯನ ಭಾಗಕ್ಕೆ ಬೆಳಕಾಗಿ ಪರಿಣಮಿಸುತ್ತದೆ:

ಈಶಾವಾಸ್ಯವಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್‌ |
ತೇನತ್ಯಕ್ತೇನ ಭೂಂಜೀಥಾ ಮಾಗೃಧಃ ಕಸ್ಯಸ್ವದ್ಧನಮ್ ||

“ಚರಾಚರ ಜಗತ್ತೆಲ್ಲವನ್ನೂ ಈಶ್ವರನಿಂದ ಆವರಿಸು. ತ್ಯಾಗದಿಂದ ಅವನಿತ್ತುದನ್ನು ಆಸ್ವಾದಿಸು. ಇತರರ ಸಿರಿಗೆ ಅಳುಪದಿರು.” ಇದು ಬರಿಯ ಮೇಧಾಶಕ್ತಿಗೆ ವೇದ್ಯವಾದರೆ ಕೃತಾರ್ಥವಾಗದು; ಭಾವಕ್ಕೂ ಗೋಚರವಾಗಬೇಕು. ಚಲಿಸುತ್ತಿರುವ ಜೀವಕೋಟಿಗಳೂ, ಚಲಿಸದಿರುವ ಜಡವಸ್ತುಗಳೂ, ಈ ಪೃಥ್ವಿ, ಈ ಆಕಾಶ, ಈ ಸೂರ್ಯ ಚಂದ್ರರು, ಈ ಗ್ರಹನಕ್ಷತ್ರಗಳು, ಭಯಂಕರ ದೂರದಲ್ಲಿ ಹೊಳಪಿನ ಹೊಳೆಗಳಂತಿರುವ ಭೀಷಣಗಾತ್ರದ ನೀಹಾರಿಕಾ ಸಮೂಹಗಳು, ಈ ನದಿ, ಅರಣ್ಯ, ಪರ್ವತ, ಫಲ, ಕುಸುಮ, ಪ್ರಭಾತ, ಸಂಧ್ಯೆ, ಹುಣ್ಣಿಮೆ, ಅಮಾವಾಸ್ಯೆ, ವರ್ಷ, ನಿದಾಘ, ದಿವಾ, ರಾತ್ರಿ ಇವುಗಳೆಲ್ಲವೂ ಈಶ್ವರನ ತೇಜಸ್ಸಿನ ಮೂರ್ತಿಗಳೆಂಬ ಭಾವವು ಮನದಲ್ಲಿ ಪ್ರಜ್ವಲಿಸಬೇಕು. ಇವುಗಳೆಲ್ಲವೂ ವಿಶ್ವರೂಪಿಯಾಗಿರುವ ಈಶ್ವರನ ಮಹಾಂಗ ವಿಶೇಷಗಳೆಂದೂ ಆ ಮಹಾಚೈತನ್ಯ ಸಮುದ್ರದ ತರಂಗ ಸ್ವರೂಪಗಳೆಂದೂ ನಮಗೆ ಬೋಧೆಯಾಗಿ ನಮ್ಮಾತ್ಮ ಆನಂದೋಜ್ವಲವಾಗಬೇಕು. ಕ್ಷುದ್ರಕ್ಷುದ್ರದಲ್ಲಿಯೂ ಮಹಾ ಮಹತ್ತಿನಲ್ಲಿಯೂ ಏಕಮೇವ ಅದ್ವಿತೀಯ ಚೈತನ್ಯವು ಅಂತರ್ಯಾಮಿಯಾಗಿದೆ ಎಂಬ ಆಲೋಚನೆ ಭಾವದೀಪ್ತವಾಗಿ ಎದೆಯ ಹಣತೆಯಲ್ಲಿ ಉರಿಯಬೇಕು.

ಹೀಗೆ ಸಮಸ್ತ ವಿಶ್ವವನ್ನೂ ಈಶ್ವರನಿಂದ ತುಂಬಿ, ಆವರಿಸಿ, ಆಸ್ವಾದಿಸಬೇಕು. ಜುಗುಪ್ಸೆಯಿಂದ ವಿಸರ್ಜಿಸಬೇಕು ಎಂಬುದಲ್ಲ ಋಷಿವಾಣಿ – ‘ತ್ಯಾಗದಿಂದ ಅದನ್ನು ಆಸ್ವಾದಿಸಬೇಕು.’ ಇತರರ ಸಿರಿಗೆ ಆಸೆಪಡಬಾರದು. ಎಂದರೆ ಎಲ್ಲವನ್ನೂ ಈಶ್ವರನಲ್ಲಿ ಸಮರ್ಪಿಸಿ, ನಿಸ್ಸಂಗತೆಯಿಂದಲೂ ನಿಷ್ಕಾಮತೆಯಿಂದಲೂ ನಿರ್ಮಾತ್ಸರ್ಯದಿಂದಲೂ ಪ್ರಪಂಚವನ್ನೂ ಸವಿಯಬೇಕು. ಋಷಿಯ ರಸದೃಷ್ಟಿಗೆ ಜಗತ್ತು ತಪೋವನವೂ ಹೌದು, ನಂದನೋದ್ಯಾನವೂ ಹೌದು; ಸಾಧನಾರಂಗವೂ ಹೌದು, ವಿಹಾರಭೂಮಿಯೂ ಹೌದು. ಆದ್ದರಿಂದ ಆನಂದಮಯನಾದ ಈಶ್ವರನ ಈ ಉದಾರ ತಪೋದ್ಯಾನದಲ್ಲಿ ಜುಗುಪ್ಸೆಗಾಗಲಿ ನಿರಾಶೆಗಾಗಲಿ ಕಾರ್ಪಣ್ಯಕ್ಕಾಗಲಿ ಅವಕಾಶ ಕೊಡಬಾರದು.

ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ |
ಸರ್ವಭೂತೇಷು ಚಾತ್ಮಾನಂ ತತೋ ವಿಜುಗುಪ್ಸತೇ |

“ಎಲ್ಲವನು ಆತ್ಮದಲ್ಲಿ, ಆತ್ಮವನು ಎಲ್ಲದರಲ್ಲಿ ಕಾಣುವವನಿಗೆ ಜುಗುಪ್ಸೆ ಇಲ್ಲ.”

ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ |
ಎವಂ ತ್ವಯಿ ನಾನ್ಯಥೇತೋsಸ್ತಿ ಕರ್ಮ ಲಿಪ್ಯತೇ ನರೇ ||

“ಒಂದು ಶತಮಾನ ಬಾಳಬೇಕೆಂದು ಬಯಸುವಾತನು ಕರ್ಮಮಾಡುತ್ತಲೆ ಬಾಳಬೇಕು. ಹಾಗೆ (ಜಗತ್ತೆಲ್ಲವನ್ನೂ ಈಶ್ವರನಿಂದ ಆವರಿಸಿ) ಬಾಳಿದರೆ ಕರ್ಮಲೇಪನವಿಲ್ಲ.” ನೂರುವರ್ಷ ಬಾಳಬೇಕೆನ್ನುವವನು ತ್ಯಾಗಪೂರ್ಣವಾದ ಕರ್ಮವನ್ನು ಮಾಡುತ್ತಲೆ ಬಾಳಬೇಕು. ತ್ಯಾಗದ ಹೆಸರಿನಲ್ಲಿ ಸೋಮಾರಿತನವನ್ನು ಆಶ್ರಯಿಸುವುದು ಉಪನಿಷತ್ತಿನ ಋಷಿಗೆ ಸರಿಬೀಳುವ ಮಾರ್ಗವಲ್ಲ.

ಹಾಗಾದರೆ ಎಂತಹ ಕರ್ಮಮಾಡಬೇಕು? ಯಜ್ಞ ಯಾಗ ಹೋಮ ಮೊದಲಾದ ಬಣಗು ಕರ್ಮಕ್ರಿಯೆಗಳನ್ನು ಎಸಗಬೇಕೆಂದಲ್ಲ ಋಷಿಯ ಅಭಿಪ್ರಾಯ. ಅಂತಹ ಸ್ಥೂಲ ಜಡ ಕರ್ಮಕ್ರಿಯೆಗಳಿಂದ ನಿಜವಾದ ಶ್ರೇಯಸ್ಸು ಲಭಿಸುವುದಿಲ್ಲ. “ಇಷ್ಟಾಪೂರ್ತಂ ಮಾನ್ಯಮಾನಾ ವರಿಷ್ಠಂ ನಾನ್ಯಚ್ಛ್ರೇಯೋ ವೇದಯಂತೇ ಪ್ರಮೂಢಾಃ | ನಾಕಸ್ಯ ಪೃಷ್ಠೇ ತೇ ಸುಕೃತೇsನುಭೂತ್ವೇಮಂ ಲೋಕಂ ಹೀನತರಂ ವಾ ವಿಶಂತಿ ||” “ಅಜ್ಞಾನಿಗಳು ಯಜ್ಞಯಾಗಾದಿ ಕರ್ಮಕ್ರಿಯೆಗಳನ್ನು ಬಹು ಮುಖ್ಯವೆಂದು ಭಾವಿಸಿ, ಶ್ರೇಯಸ್ಸಿಗೆ ಬೇರೆ ಹಾದಿಯನ್ನೆ ಅರಿಯುವುದಿಲ್ಲ. ಸ್ವರ್ಗದಲ್ಲಿ ಸುಕೃತಗಳನ್ನೆಲ್ಲ ಅನುಭವಿಸಿದ ಮೇಲೆ, ಅವರು ಪುನಃ ಈ ಲೋಕಕ್ಕಾಗಲಿ, ಇದಕ್ಕಿಂತಲೂ ಹೀನತರ ಲೋಕಕ್ಕಾಗಲಿ ಬೀಳುತ್ತಾರೆ.” ಅಂತಹ ಕರ್ಮಕ್ರಿಯೆಗಳನ್ನೆ ಪರಮ ಕರ್ತವ್ಯಗಳೆಂದು ವಾದಿಸುವ ವೇದವಾದರತರಾದ ಪಾಂಡಿತ್ಯಗ್ರಸ್ತರನ್ನು ಕುರಿತು ಋಷಿ ಇಂತೆಂದು ಕನಿಕರದಿಂದ ಮೂದಲಿಸಿದ್ದಾನೆ: “ಅವಿದ್ಯಾಯಾಮಂತರೇ ವರ್ತ ಮಾನಾಃ ಸ್ವಯಂ ಧೀರಾಃ ಪಂಡಿತಂ ಮಾನ್ಯಮಾನಾಃ ಜಂಘನ್ಯಮಾನಾಃ ಪರಿಯಂತಿ ಮೂಢಾ ಅಂಧೇನೈವ ನೀಯಮಾನಾ ಯಥಾಂಧಾಃ ||” “ಅವಿದ್ಯೆಯ ಮಧ್ಯೆ ಬಿದ್ದುಕೊಂಡಿದ್ದರೂ ತಾವು ಬುದ್ಧಿವಂತರೆಂದೂ ಪಂಡಿತರೆಂದೂ ಭ್ರಮಿಸಿ, ಕುರುಡರಿಂದ ನಡೆಯಿಸಲ್ಪಡುವ ಕುರುಡರಂತೆ, ಅಜ್ಞಾನಿಗಳು ಕಷ್ಟಕ್ಕೀಡಾಗಿ ತೊಳಲುತ್ತಾರೆ.”

‘ಕರ್ಮ’ ಮಾಡುತ್ತ ನೂರುವರ್ಷ ಬಾಳಬೇಕು, ಎಂದರೆ ‘ಶ್ರೇಯಸ್ಕರವಾದ ಕರ್ಮ’ ಎಂದರ್ಥ. ದೇವಸ್ಥಾನಕ್ಕೆ ಹೋದ ಮಾತ್ರಕ್ಕೆ; ಹಣ್ಣು ಕಾಯಿಗಳನ್ನು ಅರ್ಪಿಸಿ ಮಂಗಳಾರತಿ ಎತ್ತಿದ ಮಾತ್ರಕ್ಕೆ, ದೇವರಿಗೆ ಒಂದು ಮಣ ಬಂಗಾರದ (ಅದನ್ನು ಬಡಬಗ್ಗರಿಂದ ಸುಲಿದುಕೊಂಡಿದ್ದರೂ ಚಿಂತೆಯಿಲ್ಲ) ಕಿರೀಟ ಮಾಡಿಸಿ ಅವನಿಗೆ ಟೋಪಿಹಾಕಿದ ಮಾತ್ರಕ್ಕೆ, ತುಪ್ಪವನ್ನು ಬೆಂಕಿಗೆ ಹೊಯ್ದು ಸ್ವಾಹಾ ಸ್ವಾಹಾ ಎಂದು ಘೋಷಿಸಿದ ಮಾತ್ರಕ್ಕೆ ಈಶ್ವರನನ್ನು ಆರಾಧಿಸಿದಂತಾಗುವುದಿಲ್ಲ. ಆತನ ಸೃಷ್ಟಿಯನ್ನು ಒಲಿಯಬೇಕು; ಅದರಲ್ಲಿಯ ಸೊಬಗನ್ನು ಸವಿದು ನಲಿಯಬೇಕು; ಆತನ ಜೀವರಾಶಿಗಳನ್ನು ಪ್ರೀತಿಸಬೇಕು; ಅವುಗಳ ಸೇವೆ ಮಾಡಬೇಕು; ಆತನನ್ನು ಪ್ರಾರ್ಥಿಸಬೇಕು, ಧ್ಯಾನಿಸಬೇಕು; ಆತನಲ್ಲಿ ವಿಹರಿಸಬೇಕು. ಅದು ಆರಾಧನೆ, ಅದು ಸಾಧನೆ. ಅದರಿಂದ ಪರಮ ಶ್ರೇಯಸ್ಸು ಲಭಿಸುತ್ತದೆ.

ನಮಗೆ ತಾತ್ಕಾಲಿಕವಾಗಿ ರುಚಿಯಾಗಿರುವುದು ಪ್ರೇಯಸ್ಸು; ಶಾಶ್ವತವಾಗಿ ಹಿತಕಾರಿಯಾಗಿರುವುದು ಶ್ರೇಯಸ್ಸು. ಬುದ್ಧಿವಂತನು ಶ್ರೇಯಸ್ಸನ್ನು ಬಯಸುತ್ತಾನೆ: ಶ್ರೇಯಶ್ಚ ಪ್ರೇಯಶ್ಚ ಮನುಷ್ಯಮೇತಸ್ತೌ ಸಂಪರೀತ್ಯವಿವಿನಕ್ತಿ ಧೀರಃ | ಶ್ರೇಯೋಹಿ ಧೀರೋsಭಿಪ್ರೇಯಸೋ ವೃಣೀತೇ ಪ್ರೇಯೋಮಂದೋ ಯೋಗಕ್ಷೇಮಾದ್ವೃಣೀತೇ ||

“ಶ್ರೇಯಸ್ಸು ಪ್ರೇಯಸ್ಸುಗಳೆರಡೂ ಮನುಷ್ಯನ ಬಳಿಗೆ ಬರುತ್ತವೆ. ಧೀರನು (ಬುದ್ಧಿವಂತನು) ಅವುಗಳನ್ನು ಪರೀಕ್ಷಿಸಿ ಪ್ರತ್ಯೇಕಿಸುತ್ತಾನೆ. ಏಕೆಂದರೆ ಧೀರನು ಪ್ರೇಯಸ್ಸಿಗಿಂತಲೂ ಶ್ರೇಯಸ್ಸನ್ನೆ ಕೋರುತ್ತಾನೆ. ಮಂದಮತಿ ಶರೀರಸುಖಕ್ಕಾಗಿ ಪ್ರೇಯಸ್ಸನ್ನು ಆರಿಸುತ್ತಾನೆ.”

ನಿಜವಾದ ಶ್ರೇಯಸ್ಸು ಅನಂತದಲ್ಲಿದೆ; ಅಲ್ಪದಲ್ಲಿಲ್ಲ. ಸಾಂತವಾದುದು ಎಂದಿಗೂ ಅನಂತ ಸುಖಕ್ಕೆ ಕಾರಣವಾಗಲಾರದು. ಆದ್ದರಿಂದ ಅನಂತವನ್ನು ತಿಳಿಯಲೂ ಅನುಭವಿಸಲೂ ಪ್ರಯತ್ನಿಸಬೇಕು. “ಯೋ ವೈ ಭೂಮಾತತ್ಸುಖಂ ನಾಲ್ಪೇ ಸುಖಮಸ್ತಿ, ಭೂಮೈವ ಸುಖಂ, ಭೂಮಾತ್ವೇವ ವಿಜಿಜ್ಞಾಸಿತವ್ಯ ಇತಿ.” “ಅನಂತವು (ಭೂಮಾ) ಸುಖ; ಆದ್ದರಿಂದ ಅದನ್ನು ತಿಳಿಯಲು ಪ್ರಯತ್ನಿಸಬೇಕು.”

ತಿಳಿಯುವುದೆಂದರೇನು? ತಿಳಿಯುವುದು ಹೇಗೆ? ದಾರಿ ಯಾವುದು? ರೀತಿಯಾವುದು ಇವುಗಳೆಲ್ಲ ಗಹನವಾದ ಪ್ರಶ್ನೆಗಳು. ಇವುಗಳಿಗೆ ಉತ್ತರ ಬಹುಶಃ ನೇರವಾಗಿ ದೊರೆಯಲಾರದು. ಆದರೂ ಋಷಿ ಅದನ್ನು ಸೂಚಿಸಲು ಯತ್ನಿಸಿದ್ದಾನೆ. ಆ ಪ್ರಯತ್ನ ವಿಶೇಷವಾಗಿ ನೇತ್ಯಾತ್ಮಕವಾಗಿದ್ದರೂ ಕೆಲವೆಡೆ ಇತ್ಯಾತ್ಮಕವಾಗಿದೆ. ಜಡಪ್ರಪಂಚದ ವಸ್ತುಗಳನ್ನು ಕುರಿತು ಇತ್ಯರ್ಥ ಹೇಳುವುದು ಸುಲಭಸಾಧ್ಯ. ಆದರೆ ಯಾವ ಮಾತಿಗೂ ಯಾವ ಅಳತೆಗೂ ಸಿಲುಕದೆ ಅನಂತವೂ ಅಸೀಮವೂ ಅಗೋಚರವೂ ಅನಿರ್ವಚನೀಯವೂ ಆಗಿರುವ ಆತ್ಮವನ್ನು ಕುರಿತು ‘ಎರಡು ಎರಡಲಿ ನಾಲ್ಕು’ ಎಂದಂತೆ ಗುಣಾಕಾರಹಾಕಿ ನಿಷ್ಕೃಷ್ಟವಾಗಿ ಹೇಳುವುದು ಎಂದಿಗೂ ಸಾಧ್ಯವಲ್ಲ. ಅಷ್ಟುದೂರ ಹೋಗುವುದೂ ಬೇಡ. ಒಂದು ಸಾಧಾರಣ ದೃಷ್ಟಾಂತವನ್ನು ತೆಗೆದುಕೊಳ್ಳೋಣ. ತಾಯಿಯೊಬ್ಬಳು ಅರ್ಧ ಘಂಟೆಯ ಹೊತ್ತು ಪಲ್ಯಕ್ಕೆ ತರಕಾರಿಯನ್ನು ಕತ್ತರಿಸುತ್ತಾಳೆ ಎಂದು ಭಾವಿಸಿ. ಆಕೆಯನ್ನು ಕುರಿತು ‘ಅರ್ಧ ಗಂಟೆಯ ಕಾಲ ನೀನು ಕಡಿದಿದ್ದೇನು’ ಎಂದು ನೀವು ಕೇಳಿದರೆ ಆಕೆ ತಾನು ಮಾಡಿದ ಕಾರ್ಯವನ್ನು ತೋರಿಸಲೂ ಸಮರ್ಥಳಾಗುತ್ತಾಳೆ ಎಂದು ಭಾವಿಸಿ. ಆ ಕೆಲಸದ ಅಳತೆ ತೂಕಗಳನ್ನೂ ಶ್ರಮವನ್ನೂ ನೀವು ಗ್ರಹಿಸಲೂ ನಿಮಗೆ ಸಾಧ್ಯವಾಗುತ್ತದೆ. ಅದೇ ತಾಯಿ ಅರ್ಧಗಂಟೆಯ ಹೊತ್ತನ್ನು ತನ್ನ ಕಂದನನ್ನು ಮುದ್ದಿಸುವ ಆನಂದದಲ್ಲಿ ಕಳೆಯುತ್ತಾಳೆಂದು ಭಾವಿಸಿ. ಆಗ ನೀವು ಹೋಗಿ ಹಿಂದೆ ಹಾಕಿದ ಪ್ರಶ್ನೆಯನ್ನೆ ಹಾಕಿದರೆ, ಆಕೆ ತನ್ನ ಕಾರ್ಯದ ಮಹಿಮೆಯನ್ನು ಹೇಗೆ ತೋರಿಸಿಯಾಳು? ಯಾವ ಮಾತುಗಳಲ್ಲಿ ಹೇಳಿಯಾಳು? ಹೇಳಿದರೂ ಆ ಅನುಭವವರಿಯದ ನಿಮಗೆ ಅದು ತಿಳಿಯುವುದೆಂತು? ಇಂತಹ ಸಾಧಾರಣ ಅನುಭವವೇ ಅನಿರ್ವಚನೀಯವಾಗುತ್ತದೆ, ಅಪ್ರಮೇಯವಾಗುತ್ತದೆ ಎಂದಮೇಲೆ ಅನಂತದ ಅನುಭವದ ವಿಚಾರವಾಗಿ ಹೇಳುವುದೇನು? ಆದ್ದರಿಂದಲೆ ಪ್ರಮಾಣಿಕರಾದ ತಾತ್ವಿಕರೆಲ್ಲರೂ ಅಂತ್ಯದಲ್ಲಿ ಅಜ್ಞಾನವನ್ನು ಒಪ್ಪಿಕೊಂಡುಬಿಟ್ಟಿರುತ್ತಾರೆ. ಇಲ್ಲಿ ಅಜ್ಞಾನವೆಂದರೆ ‘ಜ್ಞಾನವಿಲ್ಲದಿರುವಿಕೆ’ ಎಂದು ಭಾವವಲ್ಲ; ‘ಜ್ಞಾನಾತೀತವಾಗಿರುವಿಕೆ’ ಅಥವಾ ‘ಬುದ್ಧಿಮೇರೆಯನ್ನು ಮೀರಿರುವಿಕೆ’ ಎಂದು ಭಾವ.

ಆದ್ದರಿಂದಲೆ ಈ ಭೂಮವಾದ ಆತ್ಮವು ಬಹಳ ಓದುವುದರಿದಾಗಲಿ ಹೆಚ್ಚು ಮೇಧಾಶಕ್ತಿಯಿಂದಾಗಲಿ ಲಭಿಸುವುದಲ್ಲ ಎಂಬುದು ಋಷಿಯ ವಾಕ್ಯ. ಮನಸ್ಸನ್ನು ವಿಷಯ ಸಂಗ್ರಹಶಾಲೆಯನ್ನಾಗಿ ಮಾಡಿದ ಮಾತ್ರಕ್ಕೆ ದರ್ಶನೋದಯವಾಗುವುದಿಲ್ಲ. ಈಗ ಪ್ರಪಂಚದಲ್ಲಿರುವ ಬಹುಸಂಖ್ಯೆಯ ವಿಶ್ವವಿದ್ಯಾನಿಲಯಗಳಲ್ಲಿ ಎಷ್ಟು ಮಂದಿ ತತ್ವಶಾಸ್ತ್ರಾಧ್ಯಾಪಕರೂ ಅಧ್ಯಾಯಿಗಳೂ ಇದ್ದಾರೆ! ಹಾಗೆಯೆ ವೇದೋಪನಿಷತ್ತುಗಳನ್ನೆಲ್ಲ ಬಾಯಿಪಾಟ ಮಾಡಿ, ಬೇಕಾದರೆ ಅವುಗಳನ್ನು ಹಿಂದುಮುಂದಾಗಿ, ತಲೆಕೆಳಗಾಗಿ, ‘ಉಲ್ಟಾ ಸೀದಾ’ ಲಾಗ ಹಾಕಿಸಿ ಹೇಳುವ ಘನಪಾಠಿಗಳೆಷ್ಟಿದ್ದಾರೆ! ಹಾಗೆಯೆ ವ್ಯಾಖ್ಯಾನ ಟೀಕೆಗಳನ್ನೆಲ್ಲ ಚೆನ್ನಾಗಿ ಅಧ್ಯಯನಮಾಡಿ ಗಂಟೆಗಂಟೆಗಳ ಕಾಲ ಭಯಂಕರವಾಗಿ ತರ್ಕಮಾಡುವ ಪಂಡಿತೋತ್ತಮರೂ ಜಗದ್ಗುರಗಳೂ ಎಷ್ಟಿದ್ದಾರೆ! ಅವರೆಲ್ಲರಿಗೂ ದರ್ಶನೋದಯವಾಗಿದೆಯೆ? ಅವರ ಜೀವನವನ್ನೂ ಅವರ ಸಂಕುಚಿತ ದೃಷ್ಟಿಯನ್ನೂ ಅವರ ಅವಿಶಾಲವಾದ ಮತ್ತು ಅನುದಾರವಾದ ಹೃದಯವನ್ನೂ ನೋಡಿದರೆ ‘ಆಗಿದೆ’ ಎಂದು ಹೇಳುವುದು ತಾನೆ ಹೇಗೆ? ಮತ್ತೊಮ್ಮೆ ಹಿಂದೆ ಹೇಳಿದ ದೃಷ್ಟಾಂತವೊಂದನ್ನು ನೆನಪಿಗೆ ತಂದುಕೊಂಡರೆ ಮೇಲಿನ ವಾಕ್ಯಗಳ ಅಭಿಪ್ರಾಯ ಚೆನ್ನಾಗಿ ಸ್ಟರಿಸುತ್ತದೆ. ಬರಿಯ ಪಾಂಡಿತ್ಯ ಎಣ್ಣೆಬತ್ತಿ ಹಣತೆಗಳನ್ನು ವಿಶೇಷಬಹುಲವಾಗಿ ಸಂಗ್ರಹಿಸಿದಂತೆಯೆ ಹೊರತು ಅದರಿಂದ ದೀಪಕಾಂತಿ ಮೈದೋರುವುದಿಲ್ಲ. “ನಾಯಮಾತ್ಮಾ ಪ್ರವಚನೇನ ಲಭ್ಯೋ ನ ಮೇಧಯಾ ನ ಬಹುನಾ ಶ್ರುತೇನ” “ಪ್ರವಚನದಿಂದಾಗಲಿ ಮೇಧಾಶಕ್ತಿಯಿಂದಾಗಲಿ ಬಹುಶ್ರುತಿಯಿಂದಾಗಲಿ ಈ ಆತ್ಮವು ಲಭಿಸುವುದಿಲ್ಲ?” ಅದರೆ “ಯಮೇವೈಷ ವೃಣುತೇ ತೇನ ಲಭ್ಯಸ್ತಸ್ಯೈಷ ಆತ್ಮಾ ವಿವೃಣುತೇ ತನುಂ ಸ್ವಾಮ್‌” “ಯಾವನು ಅದನ್ನು ಪಡೆಯಲು ಹಂಬಲಿಸುತ್ತಾನೋ ಅವನಿಗೆ ಅದು ತನಗೆ ತಾನೆ ಸಾಧ್ಯವಾಗುತ್ತದೆ. ಅಂತಹವನಿಗೆ ಆತ್ಮವು ತನ್ನ ಸ್ವರೂಪವನ್ನು ತೋರುತ್ತದೆ.” ಬರಿಯ ಶಾಸ್ತ್ರಾಧ್ಯನದಿಂದಲ್ಲ, ಸಾಧನೆಯ ನಿಮಿತ್ತದಿಂದ ಆತ್ಮವು ಸ್ವಯಂ ವೇದ್ಯವಾಗುತ್ತದೆ, ಎಂಬುದು ಋಷಿಗುರುವಿನ ಬೋಧೆ.

ಮೇಧಾಶಕ್ತಿಯಿಂದಾಗಲಿ ಪ್ರವಚನದಿಂದಾಗಲಿ ಬಹುಶ್ರುತಿಯಿಂದಾಗಲಿ ಆತ್ಮವು ಏಕೆ ಸಾಕ್ಷಾತ್ಕಾರವಾಗುವುದಿಲ್ಲ ಎಂದರೆ ಅದು ಇಂದ್ರಿಯ, ಮನಸ್ಸು, ಮತ್ತು ಬುದ್ಧಿಗಳಿಗೆಲ್ಲ ಆಧಾರವಾಗಿದೆ; ಅತೀತವಾಗಿದೆ. ಕಣ್ಣು ನೋಡುತ್ತದೆ, ಆದರೆ ನೋಡಿಕೊಳ್ಳಲಾರದು. ಕಿವಿ ಕೇಳುತ್ತದೆ ಆದರೆ ಕೇಳಿಕೊಳ್ಳಲಾರದು. ಯಾವುದರ ಆಧಾರದಿಂದ ಮನಸ್ಸು ಚಿಂತಿಸಲು ಸಮರ್ಥವಾಗಿದೆಯೋ ಅಥವಾ ಯಾವುದರಿಂದ ಮನಸ್ಸು ಮನಸ್ಸಾಗಿದೆಯೋ ಅದನ್ನು ಮನಸ್ಸು ಅರಿಯಲಾರದು. ಅಂಶವು ಪೂರ್ಣವನ್ನೆಂದಿಗೂ ಗ್ರಹಿಸಲಾರದು. ಈ ವಿಷಯವನ್ನೇ ಋಷಿಯ ಉದಾರ ಮಧುರವಾಣಿ ಇಂತೆಂದು ಅನನುಕರಣೀಯವಾಗಿ ಉಲಿಯುತ್ತದೆ:

ತತ್ರ ಚಕ್ಷುರ್ಗಚ್ಛತಿ ವಾಗ್ಗಚ್ಛತಿ ನೋ ಮನೋ ವಿದ್ಮೋ ವಿಜಾನೀಮೋ ಯಥೈತದನುಶಿಷ್ಯಾತ್ || ಅನ್ಯದೇವ ತದ್ವಿದಿತಾದಥೋ ಅವಿದಿತಾದಧಿ | ಇತಿ ಶುಶ್ರುಮ ಪೂರ್ವೇಷಾಂ ಯೇನಸ್ತದ್ವ್ಯಾಚಚಕ್ಷಿರೇ ||”

“ಕಣ್ಣು ಮತ್ತು ಮನಸ್ಸು ಯಾವುದೂ ಅಲ್ಲಿಗೆ ಹೋಗುವುದಿಲ್ಲ. ನಮಗದು ತಿಳಿದಿಲ್ಲ. ಅದನ್ನು ಕುರಿತು ಇತರರಿಗೆ ಬೋದಿಸುವುದೆಂತೋ ಅದನೂ ನಾವು ತಿಳಿದಿಲ್ಲ. ತಿಳಿದುದಕ್ಕದು ಬೇರೆಯಾಗಿದೆ; ತಿಳಿಯದುದನು ಮೀರಿದೆ. ಹೀಗೆಂದು ನಮಗದನು ಕಲಿಸಿದ ಪೂರ್ವದ ಋಷಿಗಳು ಹೇಳಿದ್ದಾರೆ.”

ಕಲಿಸಲೆಂದು ಕುಳಿತಿರುವ ಗುರು ಕಲಿಯಲೆಂದು ಕುಳಿತಿರುವ ಶಿಷ್ಯನಿಗೆ ಧೈರ್ಯವಾಗಿ ಹೇಳುತ್ತಿದ್ದಾನೆ: “ನಮಗದು ತಿಳಿದಿಲ್ಲ. ಅದನ್ನು ಕುರಿತು ಇತರರಿಗೆ ಬೋಧಿಸುವುದೆಂತೋ ಅದನೂ ನಾವು ತಿಳಿದಿಲ್ಲ” ಎಂದು. ಅದೀಗ ನಿಜವಾದ ಸತ್ಯಾನ್ವೇಷಕನ ಧೀರಮತಿ. ಗುರುಗಳೆಂದು ಕರೆದುಕೊಳ್ಳುವ ಎಷ್ಟು ಮಂದಿ ಹೀಗೆ ತಮ್ಮ ಶಿಷ್ಯರಿಗೆ ಹೇಳಿಯಾರು? ಹೇಳಿದರೆ ಗೌರವವೆಲ್ಲಿಯಾದರೂ ಕಡಮೆಯಾದರೆ! ಅಂಥವರು ಸತ್ಯೋಪಾಸಕರಲ್ಲ. ಅವರ ಹೃದಯವಿರುವುದು ಮಿಥ್ಯೆಯಲ್ಲಿ. ಅವರು ಪೂಜಿಸುವುದು ‘ಅದನ್ನಲ್ಲ’, ‘ಇದನ್ನು.’ ಆದರೆ ‘ಇದು’ ಬ್ರಹ್ಮವಲ್ಲ.

ಯನ್ಮನಸಾ ಮನುತೇ ಯೇನಾಹುರ್ಮನೋ ಮತಂ |
ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಹದಿದಮುಪಾಸತೇ ||

“ಮನಸ್ಸು ಅದನ್ನು ಚಿಂತಿಸಲಾರದು; ಏಕೆಂದರೆ ಮನಸ್ಸು ಚಿಂತಿಸುವಂತೆ ಮಾಡುವುದೇ ಅದು. ಅದನೇ ಬ್ರಹ್ಮವೆಂದು ತಿಳಿ; ಜನರು ಉಪಾಸಿಸುವ ಇದನ್ನಲ್ಲ.”

“ಅದರಲ್ಲಿ ಎಂದರೆ ಆ ಬ್ರಹ್ಮದಲ್ಲಿ ‘ಇದು’ ಎಂದರೆ ಈ ‘ಜಗತ್ತು’, ‘ಇಲ್ಲ’ ಎಂದರೆ ‘ಅದು’ ‘ಇದ’ನ್ನು ಮೀರಿದೆ. ‘ಇಲ್ಲಿ’ ಎಷ್ಟೇ ಮಹತ್ತಾದುದು ಎಂದು ಪರಿಗಣಿಸಲ್ಪಟ್ಟರೂ ‘ಅಲ್ಲಿ’ ಅದು ಅತ್ಯಲ್ಪವಾಗುತ್ತದೆ.” ವ್ಯಕ್ತಿಯ ಮತ್ತು ವ್ಯಕ್ತಸೃಷ್ಟಿಯ ಮಹಿಮೆ ಗೌರವಗಳನ್ನು ಅಲ್ಲಗಳೆಯಬೇಕೆಂದಲ್ಲ, ಅವ್ಯಕ್ತದ ಅಥವಾ ಬ್ರಹ್ಮದ ಅನಿರ್ವಚನೀಯತೆಯನ್ನು ಸೂಚಿಸಲೆಂದು ಋಷಿ ಹೀಗೆಂದು ರೋಮಾಂಚವಾಗುವಂತೆ ಹಾಡುತ್ತಿದ್ದಾನೆ:

ತತ್ರ ಸೂರ್ಯೋ ಭಾತಿ ಚಂದ್ರತಾರಕಂ
ನೇಮಾ ವಿದ್ಯುತೋ ಭಾಂತಿ ಕುತೋsಯಮಗ್ನಿಃ |
ತಮೇವ ಭಾಂತಮನುಭಾತಿ ಸರ್ವಂ
ತಸ್ಯ ಭಾಸಾ ಸರ್ವಮಿದಂ ವಭಾತಿ ||

“ರವಿ ತೊಳಗನಲ್ಲಿ, ಶಶಿ ಬೆಳಗನಲ್ಲಿ, ತಾರೆ ಹೊಳೆಯುವ ಅಲ್ಲಿ. ಮಿಂಚು ಮಿಂಚದು ಅಲ್ಲಿ. ಉರಿಯಬಲ್ಲುದು ಎಂತು ಈ ಬೆಂಕಿ? ಅವನು ಹೊಳೆದರೆ ಅವನನನುಸರಿಸಿ ಎಲ್ಲ ಹೊಳೆಯುತ್ತದೆ. ಇದೆಲ್ಲ ಅವನ ಜ್ಯೋತಿಯಿಂದಲೆ ಪ್ರಕಾಶಿತವಾಗಿದೆ.”

ಇಂತು ನೇತ್ಯಾತ್ಮಕವಾಗಿ ಹಾಡಿದ ಋಷಿ ಇತ್ಯಾತ್ಮಕವಾಗಿಯೂ ಹಾಡಿದ್ದಾನೆ. “ಇಲ್ಲ, ಇಲ್ಲ, ಅದಲ್ಲ, ಇದಲ್ಲ” ಎಂದು ವರ್ಣಿಸಿದರೆ ಕಡೆಯಲ್ಲಿ ಉಳಿಯುವುದು ಶೂನ್ಯ ಎಂದು ಅನೇಕರು ಭಾವಿಸಿತ್ತಾರೆ. ಕಣ್ಣು ಕಾಣದುದೂ, ಕಿವಿ ಕೇಳದುದೂ, ಮನಸ್ಸು ಅರಿಯದುದೂ, ಇಂದ್ರಿಯಗಳಿಗೆ ಗೊಚರಿಸದುದೂ ಶೂನ್ಯವಲ್ಲದೆ ಮತ್ತೇನು? ಉತ್ತರ ರೂಪವಾಗಿಯೂ, ಅದು ಶೂನ್ಯವಲ್ಲ ಎಂಬುದನ್ನು ಸೂಚಿಸುವ ಸಲುವಾಗಿಯೂ, ಅದು ಸರ್ವ ಸಂಪೂರ್ಣವಾದುದು, ಕಣ್ಣು ಕಿವಿ ಮನಸ್ಸು ಇಂದ್ರಿಯಗಳೆಲ್ಲ ಪ್ರಾಣವಾಗಿ ಅವುಗಳಿಗೆ ಪರಮಾಧಾರವಾದುದು ಮತ್ತು ಉತ್ತಮೋತ್ತಮ ಸತ್ಯವಾದುದು ಎಂಬುದನ್ನು ಬೋಧಿಸಲೆಂದೂ ಋಷಿ ಇಂತು ನುಡಿಯುತ್ತಾನೆ:

ಶೋತ್ರಸ್ಯ ಶ್ರೋತ್ರಂ ಮನಸೋ ಮನೋ ಯದ್ವಾಚೋ ವಾಚಂ ಪ್ರಾಣಸ್ಯ ಪ್ರಾಣಶ್ಚಕ್ಷುಷಶ್ಚಕ್ಷುಃ | ಅತಿಮುಚ್ಯ ಧೀರಾಃ ಪ್ರೇತ್ಯಾಸ್ಮಾಲ್ಲೋಕಾದಮೃತಾ ಭವಂತಿ |”

“ಕಿವಿಗೆ ಕಿವಿ; ಮನಸ್ಸಿಗೆ ಮನಸ್ಸು; ನಾಲಗೆಗೆ ನಾಲಗೆ; ಪ್ರಾಣಕ್ಕೆ ಪ್ರಾಣ; ಕಣ್ಣಿಗೆ ಕಣ್ಣು; ಮಿಥ್ಯೆಯನು ತೊರೆದು ಜ್ಞಾನಿಯು ದೇಹಾಂತರದಲಿ ಅಮೃತವಾಗುತ್ತಾನೆ.”

ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ |
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ ||

“ಚಲಿಸುತ್ತದೆ, ಚಲಿಸದಿದೆ, ದೂರವಿದೆ, ಹತ್ತಿರವಿದೆ; ಎಲ್ಲದರ ಒಳಗೂ ಇದೆ, ಎಲ್ಲದರ ಹೊರಗೂ ಇದೆ.”

ಹೌದು; ಋಷಿಗುರುವೇನೋ ಹೀಗೆ ಮಂಜುಳವಾಗಿ ವರ್ಣಿಸುತ್ತಿದ್ದಾನೆ. ಆದರೆ ಆ ಶಬ್ದಜಾಲವು ಮಹಾರಣ್ಯದಂತೆ ವಿಭ್ರಮಕಾರಿಯಾಗಿದೆಯಲ್ಲಾ? ಬುದ್ಧಿಗೆ ಯಾವುದೂ ನಿಷ್ಕೃಷ್ಟವಾಗಿ ಸಿಕ್ಕುವುದಿಲ್ಲವಲ್ಲಾ! ಎಂದರೆ ಅದಕ್ಕೆ ಋಷಿ ಸಮಾಧಾನ ಹೇಳುತ್ತಾನೆ. ದ್ವಂದ್ವಮಯವೂ ಸ್ಥೂಲವೂ ಆದ ವ್ಯಕ್ತ ಜಗತ್ತನ್ನು ಮಾತ್ರ ಗ್ರಹಿಸಲೋಸ್ಕರ ಆ ವ್ಯಕ್ತಜಗತ್ತಿನಲ್ಲಿ ಒಂದು ಅಂಶ ಮಾತ್ರವಾಗಿ ಜೀವಪರಿಣಾಮದಲ್ಲಿ ಇತ್ತೀಚೆಗೆ ಉದ್ಭವಿಸಿರುವ ಈ ಬುದ್ಧಿ, ನಿರ್ದ್ವಂದ್ವವೂ ಸೂಕ್ಷ್ಮಾತ್‌ ಸೂಕ್ಷ್ಮತರವೂ, ನಮ್ಮ ಬುದ್ಧಿಗೆ ಸಾಧ್ಯವಾಗಿರುವ ಎಲ್ಲ ಗುಣಗಳಿಗೆ ಅತೀತವಾಗಿಯೂ ಇರುವ ಆತ್ಮವನ್ನು, ಇತರ ವಸ್ತುಗಳನ್ನು ಗ್ರಹಿಸುವಂತೆ, ಗ್ರಹಿಸಲಾರದು. ಬುದ್ಧಿಯಿಂದ ಇತರ ವೈಜ್ಞಾನಿಕ ವಿಷಯಗಳನ್ನು ತಿಳಿದಂತೆ ಆತ್ಮನನ್ನು ತಿಳಿದಿದ್ದೇನೆ ಎನ್ನುವವನಿಗೆ ಆತ್ಮವು ನಿಜವಾಗಿಯೂ ತಿಳಿದಿಲ್ಲ. ಇದು ಬುದ್ಧಿಗ್ರಾಹ್ಯವಲ್ಲವಾದ್ದರಿಂದ ತಿಳಿಯಲ್ಪಡುವುದಲ್ಲ ಎಂದು ಯಾರಿಗೆ ಗೊತ್ತಾಗುತ್ತದೆಯೊ ಅವನಿಗೆ ಆತ್ಮಸ್ವರೂಪ ಗೋಚರವಾಗಿದೆ ಎಂದು ಹೇಳಬೇಕು:

ಯಸ್ಯಾ ಮತಂ ತಸ್ಯ ಮತಂ ಯಸ್ಯ ವೇದ ಸಃ |
ಅವಿಜ್ಞಾತಂ ವಿಜಾನತಾಂ ವಿಜ್ಞಾತಮವಿಜಾನತಾಂ ||

“ತಿಳಿಯದವನಿಗೆ ಅದು ತಿಳಿದಿದೆ. ತಿಳಿದವನಿಗೆ ಅದು ತಿಳಿದಿಲ್ಲ. ಅದು ತಿಳಿಯದವನಿಗೆ ತಿಳಿದುದೂ ತಿಳಿದವನಿಗೆ ತಿಳಿಯದುದೂ ಆಗಿದೆ.”

ಇದು ‘ದರ್ಶನ’ ವೇದ್ಯವಾದುದು; ಪಾಂಡಿತ್ಯ ಗೋಚರವಾದುದಲ್ಲ. ಹಾಗೆಂದಮಾತ್ರಕ್ಕೆ ಋಷಿಗೆ ಅದರ ವಿಚಾರವಾಗಿ ಏನೂ ಗೊ‌ತ್ತಿಲ್ಲ; ಆತನೂ ಅಜ್ಞಾನಿ ಎಂದು ಭಾವಿಸಬಾರದು. ಇತರ ವಿಷಯಗಳನ್ನು ಗ್ರಹಿಸುವಂತೆ ಬುದ್ಧಿ ಅದನ್ನು ಸ್ಪಷ್ಟವಾಗಿ ನಿಷ್ಕೃಷ್ಟವಾಗಿ ಗ್ರಹಿಸಲಸಾಧ್ಯ. ಆದರೂ ಋಷಿಯ ಅಂತರಂಗಕ್ಕೆ ಅದು ಗೋಚರವಾಗಿದೆ. ಆತನ ಅನುಭವವನ್ನು ಯಾವ ಭಾಷೆಯೂ ವಣಿಸಲಾರದು. “ಯತೋ ವಾಚೋ ನಿವರ್ತಂತೇ; ಅಪ್ರಾಪ್ಯ ಮನಸಾ ಸಹ.” ಅದನ್ನು ಕುರಿತು ಹೇಳಲು ಹೋದರೆ ಮಾತು ಸೋತು ಹಿಂಜರಿಯುತ್ತದೆ. ಅದು ಮನಸ್ಸಿಗೂ ಕೂಡ ಅಪ್ರಾಪ್ಯವಾದುದು. ಈ ಅನಿವಾರ್ಯವಾದ ಇಕ್ಕಟ್ಟಿನಲ್ಲಿ ಸಿಕ್ಕಿದ ಋಷಿ ಹೀಗೆಂದು ಘೋಷಿಸುತ್ತಾನೆ:

ನಾಹಂ ಮನ್ಯೇ ಸುವೇದೇಶಿ ವೇದೇಶಿ ವೇದ |
ಯೋ ನಸ್ತದ್ವೇದ ತದ್ವೇದ ನೋ ವೇದೇಶಿ ವೇದ ||

“ಚೆನ್ನಾಗಿ ತಿಳಿದಿದ್ದೇನೆಂದು ನನಗೆ ತಿಳಿದಿಲ್ಲ. ಆದರೂ ತಿಳಿದಿದ್ದೇನೆ. ‘ನನಗೆ ತಿಳಿದಿಲ್ಲ ಎಂದಲ್ಲ, ಆದರೂ ತಿಳಿದಿದೆ’ ಎನ್ನುವುದರ ಭಾವ ನಮ್ಮಲ್ಲಿ ಅದನ್ನು ತಿಳಿದವನಿಗೆ ತಿಳಿದಿದೆ.”

ಋಷಿಗೆ ಸತ್ಯ ಅನುಭವಗೋಚರವಾಗಿದೆ; ಆದರೆ ಅದು ಬುದ್ಧಿ ಗ್ರಾಹ್ಯವಾದುದಲ್ಲ. ಅಂತಹುದನ್ನು ಮಾತಿನಲ್ಲಿ ಹೇಳುವುದೆಂತು? ಏನು ಚಿಂತಿಸಿದರೂ ವಾಚಿಸಿದರೂ ಅದು ಅರ್ಧಸತ್ಯ ಅಥವಾ ಅಪಸತ್ಯವಾಗಿ ಬಿಡುತ್ತದೆ. ಅದನ್ನು ‘ಏಕ’ ಎಂದಾಗಲಿ, ‘ಬಹು’ ಎಂದಾಗಲಿ ‘ಕರುಣ’ ಎಂದಾಗಲಿ ‘ಕ್ರೂರ’ ಎಂದಾಗಲಿ ‘ಎಲ್ಲ’ ಎಂದಾಗಲಿ ‘ಇಲ್ಲ’ ಎಂದಾಗಲಿ ಯಾವ ಗುಣ ಮಾನ ಸಂಬಂಧಗಳಿಂದಾಗಲಿ ವಿಶೇಷಿಸುವುದಕ್ಕಾಗುವುದಿಲ್ಲ. ಅದು ಗುಣಾತೀತವಾದುದು ಎಂದರೆ ಗುಣಮಯ ಮತ್ತು ನಿರ್ಗುಣ ಎಂಬ ವಿಶೇಷಣಗಳಿಂದ ಅವರ್ಣನೀಯವಾದುದು. ಅದು ಸಂಪೂರ್ಣವಾಗಿ ಮಾನಸಂಬಂಧ ದೂರವಾಗಿ ಅಮೇಯವಾದುದು. ಅಂತಹ ಆತ್ಮವನ್ನು ಇತರ ಪದಾರ್ಥವನ್ನೊ ಗಣಿತವನ್ನೊ ಕುರಿತು ಆಡುವಂತೆ ‘ತಿಳಿದಿದ್ದೇನೆ’ ಎನ್ನುವುದು ಮೂರ್ಖತನಕ್ಕೆ ಮಹಾಸಾಕ್ಷಿ. ಆದರೂ ಋಷಿಯ ಎದೆ ಅದನ್ನು ಕಂಡಿದೆ. ಮನಗಾಣ್ಕೆಯಿಂದ ಅವನು ಅದನ್ನು ತಿಳಿದಿಲ್ಲ; ಎದೆಗಾಣ್ಕೆಯಿಂದ ಅರಿತಿದ್ದಾನೆ.

ಇಲ್ಲಿ ಋಷಿ ಶಿಷ್ಯನನ್ನು ಹಠಾತ್ತಾಗಿ ಆದರೂ ಸಕಾರಣವಾಗಿ ಎಚ್ಚರಿಸುತ್ತಾನೆ. ಬಹುಶಃ ಶಿಷ್ಯನ ಮನದಲ್ಲಿ “ಗುರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೀಗೆ ವಿರೋಧಾಭಾಸವಾಗಿ ಮಾತಾಡುತ್ತಿದ್ದಾನೆ. ಆತನಿಗೂ ಪೂರ್ಣಸತ್ಯದ ಅನುಭವ ಆಗಿದೆಯೋ ಇಲ್ಲವೋ? ಆಗಿದ್ದರೆ ಹೀಗೇಕೆ ಅಸ್ಪಷ್ಟವಾಗಿ ಅನಿರ್ದಿಷ್ಟವಾಗಿ ಅನಿಷ್ಕೃಷ್ಟವಾಗಿ ಮಾತಾಡುತ್ತಿದ್ದನು?” ಎಂಬ ಅಭಿಪ್ರಾಯ ಮೊಳೆತಿರಬಹುದು. ಅಲ್ಲದೆ ಅವನು ಒಳಗೊಳಗೆ ತರ್ಕ ವ್ಯಾಕರಣ ತತ್ತ್ವಶಾಸ್ತ್ರಗಳನ್ನು ಓದಿ, ಪಾಂಡಿತ್ಯ ಸಂಪಾದನೆಮಾಡಿ, ವಾದದಲಿ ಎಲ್ಲರನ್ನೂ ಸೋಲಿಸುವಂತಾದರೆ ತಾನು ವಿದ್ಯಾವಂತನಾಗುತ್ತೇನೆ; ವಾದದಲ್ಲಿ ‘ಕೂದಲು ಸೀಳುವ’ ಕುಶಲತೆಯಿರುವುದೇ ವಿದ್ಯೆಯ ಲಕ್ಷಣ ಎಂದು ಆಲೋಚಿಸಿರಬಹುದು. ಅಂತಹ ವಿಷಮವಾದ ‘ಜ್ಞಾನದ ಅಜ್ಞಾನ’ವನ್ನು ಬೇರುಸಹಿತ ಕೀಳಲೆಂದು ಋಷಿ ಇಂತೆಂದು ಎಚ್ಚರಿಕೆ ಹೇಳಿದ್ದಾನೆ:

ಅಂಧಂ ತಮಃ ಪ್ರವಿಶನ್ತಿ ಯೇsವಿದ್ಯಾಮುಪಾಸತೇ |
ತತೋ ಭೂಯ ಇವ ತೇ ತಮೋ ವಿದ್ಯಾಯಾಂ ರತಾಃ ||

“ಅವಿದ್ಯೆಯನೆ ಉಪಾಸಿಸುವವರು ಕುರುಡುಗತ್ತಲೆಗಿಳಿಯುತ್ತಾರೆ. ವಿದ್ಯೆಯಲ್ಲಿಯೆ ಮಾತ್ರ ನಿರತರಾದವರು ಅದಕ್ಕಿಂತಲೂ ಹೆಚ್ಚಾದ ಕಗ್ಗತ್ತಲೆಗಿಳಿಯುತ್ತಾರೆ!” ಈ ಶ್ಲೋಕ ಇಬ್ಬಾಯಿಯ ಕೂರಸಿಯಂತೆ ಒಂದು ಕಡೆ ಸಾಧಕನನ್ನೂ ಇನ್ನೊಂದು ಕಡೆ ಪಂಡಿತನನ್ನೂ ತಿವಿಯುತ್ತದೆ. ಅದು ಋಷಿಯ ‘ದರ್ಶನ’ ದೀಪದ ಒಂದು ಬಹು ಮುಖ್ಯವಾದ ಕಿರಣವಾಗಿದೆ. ಋಷಿ ‘ಅವಿದ್ಯೆ’ ಮತ್ತು ‘ವಿದ್ಯೆ’ ಎಂಬ ಎರಡು ಪದಗಳನ್ನು ಉಪಯೋಗಿಸಿದ್ದಾನೆ. ‘ಅವಿದ್ಯೆ’ ಎಂದರೆ ವ್ಯಕ್ತಪ್ರಪಂಚವೂ ಮತ್ತು ಅದಕ್ಕೆ ಸಂಬಂಧಪಟ್ಟ ಎಲ್ಲ ವಿಧವಾದ ಜ್ಞಾನವೂ ಎಂದರ್ಥ. ವಿದ್ಯೆ ಎಂದರೆ ಅವ್ಯಕ್ತವೂ ಮತ್ತು ಅದಕ್ಕೆ ಸಂಬಂಧಿಸಿದ ಸರ್ವಜ್ಞಾನವೂ ಎಂದರ್ಥ. ಉದಾಹರಣೆಗಾಗಿ ಅರ್ಥಶಾಸ್ತ್ರ, ವಿಜ್ಞಾನಶಾಸ್ತ್ರ, ಪ್ರಾಣಿಶಾಸ್ತ್ರ, ರಾಜ್ಯಶಾಸ್ತ್ರ, ಐಶ್ವರ್ಯ, ಆರೋಗ್ಯ, ಕೀರ್ತಿ ಇತ್ಯಾದಿಗಳೂ ಮತ್ತು ಅವುಗಳ ಸಂಪಾದನೆಯ ಮಾರ್ಗಗಳೂ ‘ಅವಿದ್ಯೆ’ಗೆ ಸೇರುತ್ತವೆ. (ಇಲ್ಲಿ ‘ಅವಿದ್ಯೆ’ ಎನ್ನುವ ಮಾತಿಗೆ ‘ದುರ್ವಿದ್ಯೆ’ ಎಂಬಂತೆ ಕೆಟ್ಟ ಅರ್ಥವಿಲ್ಲ. ಅದೊಂದು ಪಾರಿಭಾಷಿಕ ಪದ) ಹಾಗೆಯೆ ತತ್ತ್ವಶಾಸ್ತ್ರ, ಧರ್ಮಶಾಸ್ತ್ರ, ವೇದ ಉಪನಿಷತ್ತು, ಆಗಮ, ಉಪಾಸನೆ, ಪೂಜೆ, ಧ್ಯಾನ, ತಪಸ್ಸು, ಇತ್ಯಾದಿಗಳೆಲ್ಲ ‘ವಿದ್ಯೆ’ಗೆ ಸೇರುತ್ತವೆ. ಸುಮಾರಾಗಿ ಹೇಳುವುದಾದರೆ ‘ಅವಿದ್ಯೆ’ಯನ್ನು ಲೌಕಿಕವೆಂದೂ ‘ವಿದ್ಯೆ’ಯನ್ನು ಪಾರಲೌಕಿಕವೆಂದೂ ಹೇಳಬಹುದು. ಇಷ್ಟನ್ನೂ ಗ್ರಹಿಸಿದರೆ ಋಷಿಯ ಮಾತಿನ ಅರ್ಥಭಾವಗಳು ಚೆನ್ನಾಗಿ ವೇದ್ಯವಾಗುತ್ತವೆ. ಇದೇನು ಹೀಗೆ ಹೇಳಿಬಿಟ್ಟಿದ್ದಾನಲ್ಲ ಎಂದು ನಾವು ಚಕಿತರಾಗುವುದೂ ಅನಾವಷ್ಯಕವಾಗುತ್ತದೆ.

ಮೊದಲು ಸಾಧಕನನ್ನು ತೆಗೆದುಕೊಳ್ಳೋಣ. ಎಷ್ಟು ಮಂದಿ ಸಾಧಕರು ಈಶ್ವರ ಸಾಕ್ಷಾತ್ಕಾರ, ವೈರಾಗ್ಯ, ತಪಸ್ಸು, ಸನ್ಯಾಸ, ಮೋಕ್ಷ ಸಂಪಾದನೆ, ಮಾಯಾವಿಸರ್ಜನೆ ಮೊದಲಾದವುಗಳ ಹೆಸರಿನಲ್ಲಿ ಶುಷ್ಕಜೀವಿಗಳಾಗಿ, ಸಲಿಲಸಮೃದ್ಧವಾದ ತಮ್ಮ ಜೀವನವಾಹಿನಿಗಳನ್ನು ‘ವಿದ್ಯೆ’ಯ ಮರಳುಗಾಡಿನಲ್ಲಿ ಹಾಳುಮಾಡಿಕೊಂಡಿದ್ದಾರೆ? ಸೂರ್ಯ ಚಂದ್ರಾದಿಗಳ ಉದಯಾಸ್ತಗಳೂ, ಅರಣ್ಯ ಪರ್ವತ ಶ್ರೇಣಿಗಳ ಧೀರ ಗಾಂಭೀರ್ಯವೂ, ಲಕ್ಷ ಲಕ್ಷ ಪಕ್ಷಿಗಳ ವಿವಿಧ ರಾಗರಂಜಿತವಾದ ಮಧುರತರ ಗಾಯನವೂ, ವಸಂತ ವನರಾಜಿಯ ಕುಸಮೋತ್ಸವದ ನರುಗಂಪೂ, ಮೇಘಧ್ವನಿ ಮಿದ್ಯುತ್ತು ಮಸಲಧಾರೆ ಜಂಝಾವಾತಗಳಿಂದ ಶಂಕರ ಭಯಂಕರವಾದ ವರ್ಷಭೈರವನ ರುದ್ರತಾಂಡವ ಲೀಲೆಯೂ, ಮನುಷ್ಯ ಜೀವಿತ ಸಮುದ್ರ ಮಂಥನದಿಂದ ಆವಿರ್ಭವಿಸಿ ಅನರ್ಘ್ಯ ಪದಾರ್ಥಗಳಾಗಿರುವ ಕಾವ್ಯ, ಚಿತ್ರ, ಗಾನ, ಶಿಲ್ಪ ಮೊದಲಾದ ದಿವ್ಯ ಕಲೆಗಳೂ, ಪ್ರೇಮ ಪ್ರೀತಿ ವಾತ್ಸಲ್ಯ ಪ್ರಣಯಾದಿಗಳಿಗೆ ಸಂಬಂಧಪಟ್ಟ ಭಾವರಾಗಗಳೂ ಸೌಂದರ್ಯವೂ – ಇವುಗಳೆಲ್ಲವನ್ನೂ ‘ಅವಿದ್ಯೆ’ಮಾಯೆ, ಮೋಹ ಮರುಮರೀಚಿಕೆಯೆಂದು ತಿರಸ್ಕರಿಸಿ, ‘ವಿದ್ಯೆ’ಯ ಮತ್ತೊಂದು ಮರುಮರೀಚಿಕೆಗಾಗಿ ಸುತ್ತಿಸುತ್ತಿ ಬಳಲಿ ಶೂನ್ಯರಾಗುವ ತ್ಯಾಗಿಗಳು ಅನೇಕರಿದ್ದಾರೆ. ಉಳ್ಳಿಯ ಸಿಪ್ಪೆಯನ್ನು ಸುಲಿದು ತಿರುಳನ್ನು ಹುಡುಕಿ ಕಡೆಯಲ್ಲಿ ವಂಚಿತರಾಗಿ ಹತಾಶರಾಗುವ ಅಂತಹ ಸಾಧಕರನ್ನು ಕುರಿತು ಋಷಿ ಕನಿಕರದಿಂದ “ಅಯ್ಯಾ, ಅವಿದ್ಯೆಯನ್ನೇ ಎಂದರೆ ಐಹಿಕ ಸುಖಸಂಪತ್ತುಗಳನ್ನು ಮಾತ್ರವೇ ಅರಸುವವರು ಕತ್ತಲೆಗಿಳಿಯುತ್ತಾರೆ, ನಿಜ. ಆದರೆ ನೀನು ವಿದ್ಯೆಯಲ್ಲಿಯೇ ಎಂದರೆ ನೇತ್ಯಾತ್ಮಕ ಸೂಕ್ಷ್ಮತೆಯಲ್ಲಿಯೇ ಮಾತ್ರ ‘ರತ’ನಾದರೆ ಅವಿದ್ಯೆಯ ಉಪಾಸಕರಿಗಿಂತಲೂ ಭಯಂಕರವಾದ ಶೂನ್ಯಕ್ಕಿಳಿಯುತ್ತೀಯೆ!” ಎಂದು ಎಚ್ಚರಿಕೆ ಹೇಳುತ್ತಾನೆ.

ಹಾಗೆಯೆ ಪಂಡಿತರಿಗೂ ಬುದ್ಧಿ ಹೇಳಿದ್ದಾನೆ. ‘ಬ್ರಹ್ಮವಿದ್ಯೆ, ಬ್ರಹ್ಮವಿದ್ಯೆ’ – ಎಂದುಕೊಂಡು ತರ್ಕವಿತರ್ಕ ವಾದವಿವಾದಗಳ ಡೊಂಬವಿದ್ಯೆಯಲ್ಲಿ ಪರಿಣತರಾಗಿ ಜಗತ್ತೆಲ್ಲ ಸ್ವಪ್ನವತ್ತೆಂದು ಉಪನ್ಯಾಸ ಮಾಡುತ್ತಿದ್ದರೂ ಸ್ವಪ್ನದಲ್ಲಿಯೂ ಕೂಡ ಆ ಜಗತ್ತಿನ ವಿಷಯ ಸುಖಗಳನ್ನು ಅನುಭವಿಸುತ್ತಲೂ ಆಶಿಸುತ್ತಲೂ ಇರುವ ಮಿಥ್ಯಾಚಾರಿಗಳು, – ‘ವಿದ್ಯಾಯಾಂ ರತ’ರಾದವರು – ಅವಿದ್ಯೆಯ ಉಪಾಸಕರಿಗಿಂತಲೂ ಹೆಚ್ಚಾದ ಕಗ್ಗತ್ತಲೆಗಿಳಿಯುತ್ತಾರೆ. ತರ್ಕಶಾಸ್ತ್ರದಿಂದಲೂ ತಮ್ಮ ಬುದ್ಧಿಯಿಂದಲೂ ಸರ್ವತೋಮುಖವೂ ಸರ್ವಗುಣಾತೀತವೂ ಆದ ಗುಹ್ಯಗುಹ್ಯವಾದ ಚೈತನ್ಯವನ್ನು ಹಿಡಿಯುತ್ತೇವೆ ಎಂದು ಭ್ರಮಿಸಿ ಘನಾಂಧಕಾರಕ್ಕಿಳಿಯುತ್ತಾರೆ.

ಆದ್ದರಿಂದ ನಿಜವಾದ ಯೋಗಮಾರ್ಗವು ಸಂಪೂರ್ಣ ‘ಅವಿದ್ಯೆ’ಯ ಉಪಾಸನೆಯಲ್ಲಿಯೂ ಇಲ್ಲ; ಸಂಪೂರ್ಣ ‘ವಿದ್ಯಾ’ ಲಂಪಟತೆಯಲ್ಲಿಯೂ ಇಲ್ಲ. ಮೃಗೀಯ ಭೋಗದಲ್ಲಿಯೂ ಇಲ್ಲ; ಕಠೋರತ್ಯಾಗದಲ್ಲಿಯೂ ಇಲ್ಲ. ಮಧ್ಯಮಾರ್ಗದಲ್ಲಿದೆ, ಸಮತೆಯಲ್ಲಿದೆ. ‘ಅವಿದ್ಯೆ’ ಅಥವಾ ‘ಮಾಯೆ,’ ‘ವಿದ್ಯೆ’ ಅಥವ ‘ಬ್ರಹ್ಮ’ ಇವೆರಡರ ಸಮನ್ವಯವೂ ಆವಶ್ಯಕ. ‘ಮಾಯೆ’ಯ ಕೃಪೆಯಿಲ್ಲದೆ ‘ಬ್ರಹ್ಮ’ ಸಾಕ್ಷಾತ್ಕಾರವಿಲ್ಲ. ಆದ್ದರಿಂದ

ವಿದ್ಯಾಂ ಚಾವಿದ್ಯಾಂ ಯಸ್ತದ್ವೇದೋಭಯಂ ಸಹ |
ಅವಿದ್ಯೆಯಾ ಮೃತ್ಯುಂ ತೀರ್ತ್ವಾ ವಿದ್ಯಯಾsಮೃತಮಶ್ನುತೇ ||

“ವಿದ್ಯೆ ಅವಿದ್ಯೆಗಳೆರಡನೂ ತಿಳಿಯುವವನು ಅವಿದ್ಯೆಯಿಂದ ಮೃತ್ಯುವನ್ನು ಉತ್ತರಿಸಿ ವಿದ್ಯೆಯಿಂದ ಅಮೃತವನ್ನು ಪಡೆಯುತ್ತಾನೆ.”

‘ಅಮೃತ’ವನ್ನು ಪಡೆಯಲು ‘ವಿದ್ಯೆ’ಯು ಬೇಕಾಗುವಂತೆ ‘ಮೃತ್ಯು’ನ್ನು ಉತ್ತರಿಸಲು ‘ಅವಿದ್ಯೆ’ಯ ಸಹಾಯ ಬೇಕು – ಬಹಳ ಹಸಿದವನಿಂದ ದೇವರಧ್ಯಾನಮಾಡಲು ಸಾಧ್ಯವಿಲ್ಲ! ಈ ಲೋಕದಲ್ಲಿ ಬಾಳಬೇಕಾದರೆ ‘ಅವಿದ್ಯೆ’ ಎಂದರೆ ಅನ್ನ, ಬಟ್ಟೆ, ಸಂಘ, ಸಂಪತ್ತು, ಆರೋಗ್ಯ, ಕಾವ್ಯ, ಕಲೆ, ಪ್ರೇಮ, ಕ್ಷೇಮ ಎಲ್ಲವೂ ಬೇಕು. ಹಾಗೆಯೆ ಆತ್ಮದ ಅಮೃತತ್ವವನ್ನು ಪಡೆಯಬೇಕಾದರೆ ‘ವಿದ್ಯೆ’ ಎಂದರೆ ಆಲೋಚನೆ, ಅಸ್ವಾರ್ಥತೆ, ಅಧ್ಯಯನ, ವಿವೇಕ, ಆರಾಧನೆ, ತತ್ತ್ವ, ಧ್ಯಾನ ಇತ್ಯಾದಿಗಳು ಆವಶ್ಯಕ.

‘ಅವಿದ್ಯೆ’ಯು ‘ವಿದ್ಯೆ’ಯಿಂದ ಸಂಪೂರ್ಣವಾಗಿ ಬೇರೆಯಾದುದೂ ಅಲ್ಲ; ಅವುಗಳು ಒಂದಕ್ಕೊಂದು ವಿರೋಧಗಳೂ ಅಲ್ಲ. ‘ಮಾಯೆ’ಯೂ ‘ಬ್ರಹ್ಮ’ದಿಂದಲೆ ಹೊಮ್ಮಿದೆ. ಅಷ್ಟೇ ಅಲ್ಲ; ಮಾಯೆಯೂ ಬ್ರಹ್ಮವೇ: ‘ಸರ್ವಂ ಖಲ್ವಿದಂ ಬ್ರಹ್ಮ’. ಆದ್ದರಿಂದ ಈ ಮಹಾ ವ್ಯಕ್ತಜಗತ್ತು ನಮ್ಮ ಮಹಾ ಆತ್ಮದ ಒಂದು ಅವಿಷ್ಕಾರ. ಆತ್ಮದಲ್ಲಿ ಎಲ್ಲವೂ ಐಕ್ಯವಾಗಿದೆ. ಯಾವುದೂ ತಿರಸ್ಕಾರಾರ್ಹವಾಗಿಲ್ಲ. ತಿರಸ್ಕಾರಕ್ಕೆ ‘ತ್ಯಾಗ’ ‘ವೈರಾಗ್ಯ’ ಎಂದು ಮೊದಲಾಗಿ ಹೆಸರಿಟ್ಟರೂ ಕೂಡ ಅದು ‘ಆತ್ಮನಿಂದೆ’ ಯಾಗದಿರದು.

“ಯಾವಾನ್ವಾ ಅಯಮಾಕಾಶಸ್ತಾವಾನೇಷೋsನ್ತರ್ಹೃದಯ ಆಕಾಶಃ ಉಭೇ ಅಸ್ಮಿನ್ ದ್ಯಾವಾಪೃಥವೀ ಅನ್ತರೇವ ಸಮಾಹಿತೇ ಉಭವಾಗ್ನಿಶ್ಚ ವಾಯುಶ್ಚ ಸೂರ್ಯಚಂದ್ರಮಸಾವುಭೌ ವಿದ್ಯುನ್ನಕ್ಷತ್ರಾಣಿ ಯಚ್ಚಾಸ್ಸೇ ಹಾಸ್ತಿ ಯಚ್ಚ ನಾಸ್ತಿ ಸರ್ವಂ ತದಸ್ಮಿನ್ಸಮಾಹಿತಮಿತಿ.”

“ಹೃದಯದ ಆಕಾಶವು ಹೊರಗಿನ ಆಕಾಶದಂತೆ ಬೃಹತ್ತಾಗಿದೆ. ಸ್ವರ್ಗ ಪೃಥವಿಗಳೆರಡೂ ಅದರೊಳಗೆ ಅಡಕವಾಗಿದೆ. ಅಗ್ನಿವಾಯುಗಳೂ ಸೂರ್ಯ ಚಂದ್ರರೂ ವಿದ್ಯುತ್ತು ನಕ್ಷತ್ರಗಳೂ ಜಗತ್ತಿನಲ್ಲಿ ಇರುವುದೂ ಇಲ್ಲದಿರುವುದೂ ಎಲ್ಲವೂ ಅದರೊಳಗೆ ಅಂತರ್ಗತವಾಗಿದೆ.

“ಈ ಆತ್ಮವು” ಋಷಿ ಹೇಳುತ್ತಾನೆ, “ಅದ್ಭುತವಾಗಿದೆ; ಅತ್ಯಧ್ಭುತವಾಗಿದೆ.” ಇದು ಇಂದ್ರಿಯ ಗೋಚರವಾಗಿರುವ ಪ್ರಕೃತಿ ವ್ಯಾಪಾರಗಳಲ್ಲಿ ಕಂಡು ಬರುವ ಎಲ್ಲ ಗುಣಗಳಿಂದಲೂ ಮುಕ್ತವಾಗಿದೆ, ಅತೀತವಾಗಿದೆ. ಆತ್ಮದ ವಿಚಾರವಾಗಿರುವ ಋಷಿಯ ‘ದರ್ಶನ’ವು ಮರಣಭಯ, ಪಾಪಭಯ, ನರಕಭಯ, ಸ್ವರ್ಗಚ್ಯುತಿಯ ಭಯ ಇತ್ಯಾದಿಯಾದ ಸರ್ವಭಯಗಳಿಂದಲೂ ನಮ್ಮನ್ನು ಉದ್ಧಾರಮಾಡುವಂತಹುದಾಗಿದೆ. ಏಕೆಂದರೆ ಈ ಲೋಕೋತ್ತರವಾದ ಅಮರವಾಣಿ ಆತ್ಮದ ಅಮೃತತ್ವವನ್ನೂ ಅದರ ನಿತ್ಯಶುದ್ಧತೆಯನ್ನೂ ಸಾರುತ್ತದೆ:

ಜಾಯತೇ ಮ್ರಿಯತೇ ವಾ ವಿಪಶ್ಚಿನ್ನಾಯಂ ಕುಶಶ್ಚಿನ್ನ ಬಭೂವ ಕಶ್ಚಿತ್‌ |
ಅಜೋನಿತ್ಯಃ ಶಾಶ್ವತೋsಯಂ ಪುರಾಣೋ ಹನ್ಯತೇ ಹನ್ಯಮಾನೇ ಶರೀರೇ ||

“ಚೇತನವಾದ ಆತ್ಮವು ಹುಟ್ಟುವುದಿಲ್ಲ, ಸಾಯುವುದಿಲ್ಲ. ಎಲ್ಲಿಂದಲೂ ಬಂದಿಲ್ಲ. ಏನೂ ಆಗಿರಲಿಲ್ಲ. ಅಜವೂ ನಿತ್ಯವೂ ಶ್ವಾಶತವೂ ಪರಾಣವೂ ಆಗಿರುವ ಅದು ಮೈ ಕೊಲೆಯಾದೊಡನೆ ಕೊಲೆಯಾಗುವುದಿಲ್ಲ.”

ಹನ್ತಾ ಚೇನ್ಮನ್ಯತೇ ಹಂತುಂ ಹತಶ್ಚೇನ್ಮನ್ಯತೇ ಹತಂ |
ಉಭೌ ತೌ ವಿಜಾನೀತೋ ನಾಯಂ ಹನ್ತಿ ಹನ್ಯತೇ ||”

“ಇದನ್ನು ಕೊಲೆಮಾಡಲೆಳಸುವ ಕೊಲೆಗಾರನೂ ಇದು ಕೊಲೆಯಾಯಿತೆಂದು ಅಳಲುವ ಕೊಲೆಯಾದವನೂ ಇಬ್ಬರು ತಿಳಿಯದವರು. ಇದು ಕೊಲ್ಲುವುದೂ ಇಲ್ಲ, ಕೊಲೆಯಾಗುವುದೂ ಇಲ್ಲ.”

ನಿಸರ್ಗದಲ್ಲಿ ನಾವು ಕಾಣುವಂತೆ ಎಲ್ಲವೂ ಬದಲಾವಣೆ ಹೊಂದುತ್ತವೆ. ಅಚಲವಾಗಿ ಅಕ್ಷಯವಾಗಿ ಅಚಂದ್ರಾರ್ಕವಾಗಿ ನಿಲ್ಲುವಂತೆ ತೋರುತ್ತಿರುವ ಮಹಾಪರ್ವತಗಳೂ ಕೂಡ ಪ್ರತಿಯೊಂದು ಕ್ಷಣದಲ್ಲಿಯೂ ವ್ಯತ್ಯಾಸ ಹೊಂದುತ್ತಿವೆ ಎಂದು ವಿಜ್ಞಾನಶಾಸ್ತ್ರ ಕಂಡು ಹೇಳುತ್ತಿದೆ. ಆ ಚಂದ್ರ ಸೂರ್ಯರು ಕೂಡ ಕ್ಷಯಿಸುತ್ತಿದ್ದಾರಂತೆ! ಅವರ ನಾಶವೂ ಅನಿವಾರ್ಯವಾದುದಂತೆ! ಜಗತ್ತು ಕ್ರಮೇಣ ನಡೆಗೆಡುತ್ತಿರುವ ಒಂದು ಯಂತ್ರದಂತಿದೆಯಂತೆ. ಒಂದಲ್ಲ ಒಂದು ದಿನ ಯಂತ್ರ ನಿಂತು ಹೊಗುವುದು ನಿಶ್ಚಯವಂತೆ! ಬಾಹ್ಯ ಜಗತ್ತಿನ ವಿಚಾರವಂತಿರಲಿ. ನಮ್ಮ ಅಂತರ ಜಗತ್ತು ಅದಕ್ಕಿಂತಲೂ ಹೆಚ್ಚು ಚಪಲ ಚಂಚಲವಾಗಿ ಕಾಣುತ್ತದೆ. ಅಲ್ಲಿ ಕ್ಷಣ ಕ್ಷಣವೂ ಜರುಗುತ್ತಿರುವ ಸೃಷ್ಟಿಸ್ಥಿತಿ ಪ್ರಲಯಗಳು ಹೊರಗಿನ ಸೃಷ್ಟಿಸ್ಥಿತಿ ಪ್ರಲಯಗಳಿಗಿಂತಲೂ ಭವ್ಯತರವಾಗಿದೆ. ಆದ್ದರಿಂದಲೆ ಜಗತ್ತನ್ನೂ ಅದರ ಜೀವನವನ್ನೂ ನಶ್ವರ ಎಂದು ಕರೆದರು. ಅದನ್ನು ನೀರಮೇಲಣ ಗುಳ್ಳೆಗೂ ಕನಸಿಗೂ ಹೋಲಿಸದರು ಮತ್ತೆ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಬ್ರಹ್ಮಸತ್ಯಂ ಜಗನ್ಮಿಥ್ಯಾ” ಎಂದು ಹೇಳಿ, ಜಗತ್ತಿನ ಅಸ್ತಿತ್ವವನ್ನು ಶಶವಿಷಾಣ (ಮೊಲದ ಕೊಂಬು)ಕ್ಕೂ ವಂಧ್ಯಾಪುತ್ರ (ಬಂಜೆಯ ಮಗ)ನಿಗೂ ಮರುಮರೀಚಿಕೆ (ಬಿಸಿಲ್ಗುದುರೆ)ಗೂ ಹೋಲಿಸಿದರು. ಆದರೆ ಈ ‘ಚಲನೆ’ಯ, ಈ ‘ಚಾಂಚಲ್ಯ’ದ, ಈ ಅಶಾಶ್ವತದ ಆಧಾರವಾಗಿಯೂ ಅಂತರ್ಯವಾಗಿಯೂ ಸರ್ವಸ್ವವಾಗಿಯೂ ‘ಅತ್ಮ’ವೊಂದಿದೆ ಅದರ ಸಾಕ್ಷಾತ್ಕಾರವಾದ ಮೇಲೆ “ಬ್ರಹ್ಮ ಸತ್ಯಂ ಜಗನ್ಮಿಥ್ಯಾ” ಎಂಬ ಅಲ್ಪಸತ್ಯವು ವಿಕಾಸಹೋಂದಿ “ಸರ್ವಂ ಖಲ್ವಿದಂ ಬ್ರಹ್ಮ” ಎಂಬ ಮಹಾಸತ್ಯವು ವಿಕಸಿತವಾಗಿ ಸಹಸ್ರದಲ ಪದ್ಮದಂತೆ ವಿರಾಜಿಸುತ್ತದೆ. ಈ ವಿರಾಟ್‌ ‘ದರ್ಶನ’ ದೊರೆಕೊಂಡ ಹೊರತೂ ಶಾಶ್ವತ ಶಾಂತಿಯಿಲ್ಲ.

ನಿತ್ಯೋsನಿತ್ಯಾನಾಂ ಚೇತನಶ್ಚೇತನಾನಾಂ ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್ |
ತಮಾತ್ಮಸ್ಥಂ ಯೇsನುಪಶ್ಯಂತಿ ಧೀರಾಸ್ತೇಷಾಂ ಶಾಂತಿಃ ಶಾಶ್ವತೀ ನೇತರೇಷಾಮ್ ||

“ಅನಿತ್ಯದಲ್ಲಿ ನಿತ್ಯವಾಗಿ, ಚೇತನದಲ್ಲಿ ಚೈತನ್ಯವಾಗಿ, ಅನೇಕದಲ್ಲಿ ಏಕವಾಗಿ, ಎಲ್ಲರ ಇಷ್ಟಾರ್ಥಗಳನ್ನೂ ನೆರವೇರಿಸುತ್ತದೆ. ಯಾರು ಅದನ್ನು ಆತ್ಮಸ್ಥವಾಗಿ ಕಾಣುತ್ತಾರೊ ಅಂತಹ ಧೀರರಿಗೆ ಶಾಶ್ವತ ಶಾಂತಿ ಲಭಿಸುತ್ತದೆ, ಉಳಿದವರಿಗಲ್ಲ.

ಅಣೋರಣೀಯಾನ್ಮಹತೋ ಮಹೀಯಾನಾತ್ಮಾಸ್ಯ ಜಂತೋರ್ನಿಹಿತೋ ಗುಹಾಯಾಂ |
ತಮಕ್ರತುಃ ಪಶ್ಯತಿ ವೀತಶೋಕೋ ಧಾತುಪ್ರಸಾದಾನ್ಮಹಿಮಾನಮಾತ್ಮನಃ ||

“ಅಣುವಿಗಿಂತಲೂ ಅಣುವಾಗಿ ಮಹತ್ತಿಗಿಂತಲೂ ಮಹತ್ತಾಗಿ ಆತ್ಮವು ಪ್ರತಿಯೊಂದು ಹೃದಯದಲ್ಲಿಯೂ ನಿಹಿತವಾಗಿದೆ. ಕಾಮವಿಜಯಿಯಾಗಿ ಇಂದ್ರಿಯ, ಮನಸ್ಸುಗಳನ್ನು ಸಂಯಮಿಸಿದವನಿಗೆ ಆತ್ಮಜ್ಯೋತಿಯ ದರ್ಶನದಿಂದ ಶೊಕ ಪರಿಹಾರವಾಗುತ್ತದೆ.”

ಇಲ್ಲಿ ಋಷಿಯ ‘ದರ್ಶನ’ ತಾರಾಮಂಡಲದಂತೆ ಪ್ರೋಜ್ವಲವಾಗಿ ಬಿರಿದು ಬುದ್ಧಿಯನ್ನು ಮೀರಿದ ಪ್ರತಿಭೆಗೆ, – ಮತಿಗೆ ಅತೀತವಾದ ಅನುಭೂತಿಗೆ ಮಾತ್ರವೆ ಆವಿಷ್ಕೃತವಾಗುವ ಭವ್ಯವೂ, ಗಹನವೂ, ಸಂಕುಚಿತ ವ್ಯಕ್ತಿತ್ವಪ್ರಿಯವಾದ ಸ್ವಾರ್ಥ ಜೀವನ ದೃಷ್ಟಿಯಿಂದ ಮಹಾಭೀಷಣವೂ ಆಗಿರುವ ಆತ್ಮ ಬ್ರಹ್ಮಗಳ ಅದ್ವಯಭಾವದಲ್ಲಿ ಕೊನೆಗೊಂಡಿದೆ. ‘ಅದ್ವಯಭಾವ’ ಎಂದರೆ ‘ಐಕ್ಯಭಾವ’ ಎಂದು ತಿಳಿಯಬಾರದು. ಆತ್ಮಬ್ರಹ್ಮಗಳ ಸಂಬಂಧವು ನಮಗೆ ತಿಳಿದಿರುವ ಸರ್ವ ಸಂಬಂಧಗಳಿಂದಲೂ ಬೇರೆಯಾಗಿದೆ. ಕಟ್ಟಿಗೆಯ ರಾಶಿಯಲ್ಲಿ ಒಂದು ಕಟ್ಟಿಗೆಗೂ ಮತ್ತೊಂದು ಕಟ್ಟಿಗೆಗೂ ಇರುವ ಸಮುಚ್ಚಯ ಸಂಬಂಧವೂ ಅಲ್ಲ; ಸಮುದ್ರಕ್ಕೂ ತರಂಗಗಳಿಗೂ ಇರುವ ಸಮವಾಯ ಸಂಬಂಧವೂ ಅಲ್ಲ; ಅಥವ ಜಲಲೀನವಾದ ಸಕ್ಕರೆಗೂ ಜಲಕ್ಕೂ ಇರುವ ಐಕ್ಯ ಸಂಬಂಧವೂ ಅಲ್ಲ. ಅದೊಂದು ಮಹಾ ರಹಸ್ಯವಾಗಿದೆ. ಮತಿಗೆ ಮಿರಿದ ವಿಷಯವಾಗಿದೆ. ಆದರೂ ಋಷಿಯ ‘ದರ್ಶನ’ಕ್ಕೆಸಂವೇದ್ಯವಾಗಿದೆ:

ಯೋ ವೈ ತತ್ಪರಮಂ | ಬ್ರಹ್ಮವೇದ ಬ್ರಹ್ಮೈವ ಭವತಿ | ನಾಸ್ಯಾಬ್ರಹ್ಮವಿತ್ಕುಲೇ ಭವತಿ | ತರತಿ ಶೋಕಂ ತರತಿ ಪಾಪ್ಮಾನಂ ಗುಹಾಗ್ರಂಥಿಭ್ಯೋ ವಿಮುಕ್ತೋsಮೃತೋ ಭವತಿ ||”

“ಬ್ರಹ್ಮವನು ಅರಿತವನು ಬ್ರಹ್ಮ ತಾನಾಗುವನು. ಅವನ ಕುಲದಲಿ ಅಬ್ರಹ್ಮವಿದನು ಜನಿಸನು. ಅಂತಹನು ಹೃದಯ ಗ್ರಂಥಿಯಿಂದ ವಿಮುಕ್ತನಾಗಿ ಶೋಕಪಾಪಗಳನ್ನು ದಾಟಿ ಅಮೃತನಾಗುತ್ತಾನೆ.”

ಯಥಾ ನದ್ಯಃ ಸ್ಯಂದಮಾನಾಃ ಸಮುದ್ರೇsಸ್ತಂ ಗಚ್ಛಂತಿ ನಾಮರೂಪೇ ವಿಹಾಯ | ತಥಾ ವಿದ್ವಾನ್ನಾಮರೂಪಾದ್ವಿಮುಕ್ತಃ ಪರಾತ್ಪರಂ ಪುರುಷಮುಪೈತಿ ದಿವ್ಯಮ್ ||”

“ಹರಿವ ಹೊಳೆಗಳು ನಾಮರೂಪಗಳನು ಉಳಿದು ಸಮುದ್ರಲೀನವಾಗುವಂತೆ ವಿದ್ವಾಂಸನು (ಜ್ಞಾನಿಯು) ನಾಮರೂಪಗಳಿಂದ ವಿಮುಕ್ತನಾಗಿ ಅವ್ಯಕ್ತದಾಚೆಯ ಪರಾತ್ಪರವೂ ದಿವ್ಯವೂ ಆದ ಪುರಷನನ್ನು ಪಡೆಯುತ್ತಾನೆ.”

“ಪುರುಷನನ್ನು ಪಡೆಯುತ್ತಾನೆ.” ಏಕೆಂದರೆ ಬ್ರಹ್ಮವು ಜಡತತ್ತ್ವ ಮಾತ್ರವಲ್ಲ; ‘ವ್ಯಕ್ತಿತ್ವ’ವಿಲ್ಲದ ಬರಿಯ “ಅವ್ಯಕ್ತ” ಮಾತ್ರವಲ್ಲ. ಅದು ಅಂಧಕಾರದ ಪಾತಾಳವಲ್ಲ; ಪರಂಜ್ಯೋತಿಯ ಖನಿ! ಕೆಲವರಿಗೆ ಬ್ರಹ್ಮವೆಂದರೆ ಶೂನ್ಯತೆಯ ಮಹಾಗುಹೆ ಎಂಬ ಭಾವವಿದೆ. ಅಂಥವರಿಗೆ ಬ್ರಹ್ಮ ಸಾಕ್ಷಾತ್ಕಾರ, ಬ್ರಹ್ಮದೊಳಗಾಗುವುದು ಎಂದರೆ ತಮ್ಮ ಸಂಪದ್ಯುಕ್ತವಾದ ಆತ್ಮವನ್ನು ‘ಕಳೆದುಕೊಳ್ಳುವುದು’ ಎಂದರ್ಥವಾಗುತ್ತದೆ. ಆದರೆ ಉಪನಿಷತ್ತಿನ ಋಷಿಯ ‘ದರ್ಶನ’ದಂತೆ ಬ್ರಹ್ಮವು ಶೂನ್ಯತೆಯ ಗುಹೆಯಲ್ಲ; ಬ್ರಹ್ಮ ಸಾಕ್ಷಾತ್ಕಾರ ಎಂದರೆ ನಮ್ಮ ಸಂಪದ್ಯುಕ್ತವಾದ ಆತ್ಮವನ್ನು ‘ಕಳೆದುಕೊಳ್ಳುವುದು’ ಎಂದರ್ಥವಲ್ಲ; ಅನಂತ ಸಂಪದ್ಯುಕ್ತನಾದ ಪುರುಷನನ್ನು ‘ಪಡೆಯುವುದು’ ಎಂದರ್ಥ.

ಬ್ರಹ್ಮ, ಆತ್ಮ, ಪರಾತ್ಪರಪುರುಷ ಎಂಬ ಹೆಸರುಗಳಿಂದ ನಿರ್ದಿಷ್ಟವಾಗಿರುವ ಆ ಚೈತನ್ಯವು ನಿಯಮಮಯವಾಗಿದ್ದರೂ ಸರ್ವ ಸ್ವತಂತ್ರವಾದುದು, ಸಚ್ಚಿದಾನಂದವಾದುದು. ಸೃಷ್ಟಿಯ ಶರೀರವು ಕಠಿಣ ಶೃಂಖಲೆಗಳಿಂದ ಬಂಧಿತವಾದಂತೆ ತೋರಿದರೂ ಅದರ ಅಂತಶ್ಚೇತನವು ಸ್ವಾತಂತ್ರ್ಯ ಪೂರ್ಣವಾದ ಆನಂದಿಂದ ತುಂಬಿ ತುಳುಕುತ್ತಿದೆ. ಅದು ಕವಿಯ ಕಲಾಕರ್ಮದಂತೆ ಛಂದಸ್ಸಿನ ಬಂಧನಕ್ಕೆ ಒಳಗಾದರೂ ರಸಪ್ರಕಾಶನದ ಆನಂದದಿಂದ ‘ಮುಕ್ತ’ವಾಗಿದೆ. ಅದರಲ್ಲಿ ಆಲಿಂಗನದ ಬಾಹುಬಂಧನವಿದ್ದರೂ ಚುಂಬನದ ಮೋಕ್ಷವಿದೆ. ತಾವರೆ ಹೂವಿನ ಎಸಳ ಮೇಲೆಸೆವ ಪ್ರಾತಃಕಾಲದ ಹಿಮಮಣಿಯಂತೆ ಮಾಯೆಯ ಕೆಂದುಟಿಯ ಮೇಲೆ ಮುಕ್ತಿಯ ಮುತ್ತು ಸುಖಾತಿಶಯದಿಂದ ವಿಕಂಪಿಸುತ್ತಿದೆ! ಮಾಯಾ ಮುಕ್ತಿಗಳ ಮಹಾಲೀಲೆಯನ್ನು ಸಾಕ್ಷಾತ್ಕರಿಸಿಕೊಂಡಿರುವ ಉಪನಿಷತ್ತಿನ ರಸಋಷಿ ತನಗಾದ ‘ದರ್ಶನ’ಕ್ಕೆ ತಾನೆ ಆವಿಷ್ಟನಾಗಿ ಮಿಡಿದ ವೀಣೆಯ ತಂತಿಯಂತೆ ನಡುಗುತ್ತಿದ್ದಾನೆ. ಆಲಿಸುವವರ ಪುಣ್ಯವಶದಿಂದ ನಾದಮಧು ಧಾರೆಯೂ ಬಣ್ಣದ ಬುಗ್ಗೆಯಂತೆ ಹೊಮ್ಮಿ ಚಿಮ್ಮುತ್ತಿದೆ:

ಭಯಾದಸ್ಯಾಗ್ನಿಸ್ತಪತಿ ಭಯಾತ್ತಪತಿ ಸೂರ್ಯಃ ಭಯಾದಿಂದ್ರಶ್ಚವಾಯುಶ್ಚ ಮೃತ್ಯರ್ಧಾವತಿ ಪಂಚಮಃ ||”

“ಅವನ ಭಯದಿಂದ ಬೆಂಕಿಯುರಿಯುತ್ತದೆ; ರವಿ ಹೊಳೆಯುತ್ತದೆ. ಇಂದ್ರವಾಯುಗಳು ಕರ್ತವ್ಯನಿಷ್ಠರಾಗಿದ್ದಾರೆ. ಐದನೆಯಾದಾದ ಮೃತ್ಯವೂ ಧಾವಿಸುತ್ತದೆ.”

ಇಂತು ಮಾಯೆಯ ಬಂಧನವನ್ನು ಕುರಿತು ಹಾಡಿದ ತರುವಾಯ ಋಷಿ ಮುಕ್ತಿಯ ಆನಂದವನ್ನು ಕುರಿತು ಹಾಡುತ್ತಾನೆ. ಆ ಗಾನಕ್ಕಿಂತ ಭವ್ಯತರವಾದ ಗಾನ ಜಗತ್ತಿನಲ್ಲಿ ಮತ್ತೊಂದಿಲ್ಲ. ಅದು ಋಷಿಯ ‘ದರ್ಶನ’ ದೇವಾಲಯಕ್ಕೆ ಮಿಂಚಿನ ಮೆರಗುಕೊಟ್ಟು, ಮಳೆಬಿಲ್ಲಿನ ಮುಲಾಮು ಹಚ್ಚಿ ಅಲಂಕರಿಸಿದ ನವರತ್ನಖಚಿತವಾದ ಹೇಮಕಲಶದಂತೆ ಜಗನ್ಮೋಹಕವಾಗಿ ಭುವನಾನಂದಕರವಾಗಿದೆ:

ಆನಂದೋ ಬ್ರಹ್ಮೇತಿ ವ್ಯಜಾನಾತ್ | ಆನಂದಾದ್ಧ್ಯೇವ ಖಲ್ವಿಮಾನಿ ಭೂತಾನಿ ಜಾಯಂತೇ | ಆನಂದೇನ ಜಾತಾನಿ ಜೀವಂತಿ | ಆನಂದಂ ಪ್ರಯಂತ್ಯಭಿಸಂವಿಶಂತಿ ||”

“ಆನಂದವೆ ಬ್ರಹ್ಮವೆಂದು ತಿಳಿ. ಸಕಲಭೂತಾದಿಗಳೂ ಆನಂದದಿಂದಲೆ ಹುಟ್ಟುತ್ತವೆ. ಆನಂದದಿಂದಲೆ ಬಾಳುತ್ತವೆ. ಆನಂದಾಭಿಮುಖವಾಗಿ ಚಲಿಸುತ್ತವೆ. ಕೊನೆಗೆ ಅಂದದೊಳಗೇ ಪ್ರವೇಶಿಸಿ ಲೀನವಾಗುತ್ತವೆ.”

ಎಂತಹ ಆಹ್ಲಾದವಾಣಿಯಿದು! ಎಂತಹ ಆಶಾವಾಣಿಯಿದು! ಅತ್ಯಂತ ಹತಾಶಜೀವಿಯೂ ಕೂಡ ಈ ಆನಂದ ಸಂದೇಶವನ್ನು ಕೇಳಿ ರೋಮಾಂಚ ಹೊಂದಬೇಕಾಗುತ್ತದೆ. ಋಷಿಯ ‘ದರ್ಶನ’ ಇಲ್ಲಿ ಹಾಲುಜೇನು ಹರಿಸುತ್ತಿದೆ. ಸೃಷ್ಟಿಯಲ್ಲಿ ಜಡವೆಂಬುದಿಲ್ಲ. ಇರುವುದೆಲ್ಲ ಚೈತನ್ಯ. ಆ ಚೈತನ್ಯವು ಆನಂದಸ್ವರೂಪಿ. ನಾವು ಜಡವೆಂದು ಕರೆಯುತ್ತಿರುವುದೆಲ್ಲ ಆ ಚೈತನ್ಯದ ಒಂದು ಆರೋಪ; ಆ ಆನಂದದ ಒಂದು ಅಭಾಸ. ಜಡವೆಂಬುದು ದಿಟವಾಗಿಯೂ ಚೇತನದ ಒಂದು ಅಭಿನಯ, ನಟನೆ, ವಿಲಾಸ! ಬ್ರಹ್ಮವು ಆನಂದ. ಸತ್ಯಮಿಥ್ಯೆಗಳೆರಡೂ ಆನಂದ. ನಮ್ಮಲ್ಲಿ ಅತ್ಯಂತ ಕ್ಷುದ್ರತಮ ವ್ಯಕ್ತಿಯೂ ಆ ಆನಂದಕ್ಕೆ ಹಕ್ಕುದಾರನು; ಅಷ್ಟೇ ಅಲ್ಲ, ಕೆಲಸಕ್ಕೆ ಬಾರದೆಂದು ತೋರುವ ಅಣೋರಣೀಯವಾದ ಕ್ರಿಮಿಯೂ ಕೂಡ ಆ ಮಹತೋಮಹೀಯವಾದ ಆನಂದಕ್ಕೆ ಭಾಜನವಾಗುತ್ತದೆ! ಭಾಜನವಾಗಿದೆ! ಮೊಳೆತ ಗರುಕೆಯಲ್ಲಿ ಆ ಆನಂದ ಚಿಮ್ಮುತ್ತಿದೆ; ನೆಗೆನೆಗೆದು ಹರಿವ ತೊರೆಯ ನೊರೆನೀರಿನಲ್ಲಿ ಮೊರೆಯುತ್ತದೆ!

ಉಪನಿಷತ್ತಿನ ಋಷಿಯ ಈ ಉದಾತ್ತ ‘ದರ್ಶನ’ದ ಈ ಮಹೌದಾರ್ಯವನ್ನು ಇನ್ನೆಲ್ಲಿ ಕಾಣಲಾಗುತ್ತದೆ? ಇದಕ್ಕಿಂತಲೂ ಹೆಚ್ಚು ಭೂಮವಾದ ಬ್ರಹ್ಮದ ವರ್ಣನೆ ಮತ್ತೆಲ್ಲಿ ದೊರೆಯುತ್ತದೆ?

ಆದರೆ ಈ ಆನಂದದ ಸಂದೇಶ ಬರಿಯ ತತ್ತಟ್ವಮಾತ್ರವಾಗಿ, ಬರಿಯ ಬುದ್ಧಿಯ ವಿಷಯವಾಗಿ ನಿಂತುಬಿಟ್ಟರೆ ಸಾಲದು. ಅದು ನಮ್ಮ ಆತ್ಮದ ಅನುಭವವಾಗಿ ಹೃದಯದ ಆವೇಶವಾಗಿ ಪರಿಣಮಿಸಬೇಕು. ನಮ್ಮ ಧಮನಿಯಲ್ಲಿ ಮಿಂಚಾಗಿ ಹರಿಯಬೇಕು, ಕಣ್ಣಿನಲ್ಲಿ ತೇಜಸ್ಸಾಗಿ ಉರಿಯಬೇಕು. ವದನದಲ್ಲಿ ಓಜಸ್ಸಾಗಬೇಕು! ಅಭೀಪ್ಸೆಯಿಲ್ಲದೆ, ಅಭ್ಯಾಸವಿಲ್ಲದೆ, ಸಾಧನೆಯಿಲ್ಲದೆ, ತಪಸ್ಸಿಲ್ಲದೆ ಆ ‘ದರ್ಶನ’ ಲಭಿಸುವುದಿಲ್ಲ. ಋಷಿಯ ಪಾಂಚಜನ್ಯ ಸದೃಶವಾದ ವಾಣಿ ಇಂತು ಮೊಳಗುತ್ತಿದೆ, ಎಚ್ಚರಿಸುತ್ತಿದೆ, ಹುರಿದುಂಬಿಸುತ್ತಿದೆ:

ಉತ್ತಿಷ್ಠತ ಜಾಗ್ರತ ಪ್ರಾಪ್ಯವರಾನ್ನಿಬೋಧತ | ಕ್ಷುರಾಸ್ಯಧಾರಾನಿಶಿತಾ ದುರತ್ಯಯಾ ದುರ್ಗಂ | ಪಥಸ್ತತ್ಕವಯೋ ವದಂತಿ ||”

“ಎದ್ದೇಳು, ಎಚ್ಚರಗೊಳ್ಳು! ಮಹರ್ಷಿಗಳ (ದೊಡ್ಡವರ) ಬಳಿಗೆ ಹೋಗಿ ಕಲಿ. ಕೌರವ ಕತ್ತಿಯ ಅಲಗು ಹರಿತವಾದುದು, ದುರತ್ಯಯವಾದುದು. ಹಾಗೆಯೆ ಆ ಹಾದಿಯೂ ದುರ್ಗಮ ಎಂದು ಕವಿಗಳು ಹೇಳುತ್ತಾರೆ.”

ಅಂತಹ ದರ್ಶನ ಪ್ರಾಪ್ತವಾದಮೇಲೆ ಸಾಧಕನು ಸಿದ್ಧನಾಗುತ್ತಾನೆ. ಆಗ ಮಂತ್ರದ್ರಷ್ಟನಾದ ರಸಋಷಿಗೆ ಪರಬ್ರಹ್ಮ ಪೂರ್ಣವೆಂದೂ ಮಾಯಾ ಜಗತ್ತೂ ಪೂರ್ಣವೆಂದು, ಆ ಪೂರ್ಣಬ್ರಹ್ಮದಿಂದ ಈ ಪೂರ್ಣಜಗತ್ತು ಪ್ರಕಾಶಿತವಾಗಿದೆ. ಎಂದೂ, ಆದರೂ ಆ ಪೂರ್ಣವು ಅಕ್ಷಯವೆಂದೂ, ಆ ಪೂರ್ಣದಲ್ಲಿ ಈ ಪೂರ್ಣವು ಲೀನವಾದರೂ ಪೂರ್ಣವೇ ಉಳಿಯುವುದೆಂದೂ, ಯಾವುದಕ್ಕೂ ಎಲ್ಲಿಯೂ ಒಂದಿನಿತೂ ನಾಶವಿಲ್ಲವೆಂದೂ, ಬ್ರಹ್ಮ ಸಾಕ್ಷತ್ಕಾರವೆಂದರೆ ಶೂನ್ಯತಾ ಪಾತಾಳ ಪ್ರವೇಶವಲ್ಲವೆಂದೂ ಅನುಭೂತಿಯಾಗುತ್ತದೆ:

ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ||”
ಓಂ ಶಾಂತಿಃ ಶಾಂತಿಃ ಶಾಂತಿಃ

(೧೯೩೬)


* ‘ವಿಶ್ವವಾಣಿ’ ಮಾಸಪತ್ರಿಕೆಯಲ್ಲಿ ೧೯೩೬ ರಲ್ಲಿ ಮೊದಲು ಪ್ರಕಟವಾಯಿತು.

# ಈ ಪ್ರಬಂಧದಲ್ಲಿ ಉದ್ಧರಿಸಿರುವ ಮಂತ್ರಗಳಿಗೆ ಪದಶಃ ಅರ್ಥಬರೆದು ನಿಷ್ಕೃಷ್ಟವಾಗಿ ಭಾಷಾಂತರ ಮಾಡಿಲ್ಲ. ಒಟ್ಟಿನಲ್ಲಿ ಭಾವಗೋಚರವಾಗುವಂತೆ ಸರಳಾನುವಾದ ಮಾಡಿದೆ.