ಹಿಮದಿಂದೆ ತಣ್ಣಸಂಬಡೆದಿರ್ದ ಮಾಗಿಯಂ
ಕ್ರಮದಿಂದ ಜಾರಿಸಿ ವಸಂತರ್ತು ತಲೆದೋರ್ಪ
ಸಮಯದವೋಲೇನಾಕ್ಷಿಯರ್ ನನೆದ ಮೈಯೊಳಿಹ ವಸನಂಗಳಂ ಸಡಿಲ್ಚಿ
ರಮಣೀಯ ಚಿತ್ರಾವಲಂಬನದ ಶೋಭೆಗಳ
ಸಮನಿಸಿದ ಚಂದ್ರಿಕೆಯ ಸೊಗಸುವೆಳೆಮಾದಳಿರ
ಸುಮನೋನುರಾಗದಿಂ ಪಲವು ಬಣ್ಣಂಗಳಂ ತೆಗೆದುಟ್ಟು ರಂಜಿಸಿದರು!

ಎಂದೂ ನಾನಾ ವಿಧವಾಗಿ ನಿಸರ್ಗ ವಿಶ್ವವನ್ನೆಲ್ಲಾ ಸುಲಿಗೆ ಮಾಡಿರುವ ಕಬ್ಬಿಗನನ್ನು ‘ಉಪಮಾಲೋಲ’ ಎಂದು ಕರೆಯುವುದು ಅತಿಶಯೋಕ್ತಿಯಾಗಲಾರದು. ಇಂತಹ ಸಹಸ್ರಾರು ರಮಣೀಯ ಉಪಮಾಗಳಿಂದ ಖಚಿತವಾಗಿರುವ ಲಕ್ಷ್ಮೀಶನ ಶ್ರೀ ಕಾವ್ಯವು ಫುಲ್ಲಕುಸುಮಿತ ಚೈತ್ರದ್ರುಮದಲ ಮಹಾಸಮ್ಮೇಲನದಂತೆ ಲೋಕಮೋಹಕವಾಗಿದೆ. ಸರ್ವ ಸಹೃದಯ ಹೃದಯ ರಂಜಕವಾಗಿದೆ. ರಸಿಕಜನಚಿತ್ತಾಹ್ಲಾದಕ ಭೋಗಭೂಮಿಯಾಗಿದೆ. ಈ ಉಪಮಾಗಳನ್ನು ಮರಳಿ ಮರಳಿ ಓದಿಯೋದಿ ಸುಖಪಡುವ ಕಾವ್ಯಋಷಿಯನ್ನು ಸಗ್ಗಿಗರು ಕರುಬದಿರರು!

ಲಕ್ಷ್ಮೀಶನ ಉಪಮಾಲೋಲತೆ ಎಷ್ಟು ಅಗಾಧವಾದುದೆಂದರೆ ಆತನು ಒಂದೊಂದು ವೇಳೆ ಸಾದೃಶ್ಯಭಂಗವನು ಕೂಡ ಗಣನೆಗೆ ತರುವುದಿಲ್ಲ. ಉದಾಹರಣೆಗೆ ಪಾಠಕರು: ಸುವೇಗನು ಬೆಳ್ಗುದುರೆಯನು ಧರ್ಮರಾಯನ ಮುಂದೆ ತಂದಾಗ ಕವಿ ಕೊಡುವ ಉಪಮೆಯನ್ನು ತೆಗೆದುಕೊಳ್ಳಬಹುದು. (ಸಂ. ೫, ಪ ೧೧) ಬಿಳಿಯ ಕುದುರೆಗೂ ಸಿತಾಭ್ರಕ್ಕೂ ಹೊಲಿಕೆ ಇದೆ; ಕುದುರೆಗೆ ತೊಡಿಸಿದ ಕನಕಭರಣಗಳಿಗೂ ಹೊಳೆಹೊಳೆವ ಮಿಂಚಿನ ಗೊಂಚಲಿಗೂ ಹೋಲಿಕೆ ಇದೆ. ಆದರೆ ಹೊಂಗೆಜ್ಜೆಗಳ ನಿಕ್ವಣಕ್ಕೂ ಘುಡುಘುಡಿಸುವ ಮೊಳಗಿಗೂ ‘ಕುಲಗಿರಿ ಪ್ರದೇಶಕ್ಕೂ ಧರ್ಮರಾಯನಿಗೂ ಅನಿಲನಿಗೂ ಸುವೇಗನಿಗೂ’ ಪ್ರಕೃತ ಸನ್ನಿವೇಶದಲ್ಲಿ ಸಾದೃಶ್ಯಕಲ್ಪನೆ ಮಾಡುವುದು ಸಾಹಸವೆ ಸರಿ. ಅದರಲ್ಲಿಯೂ ಮಿಂಚು ಮೊಳಗುಗಳನ್ನು ಧರಿಸುವ ಮೋಡವು ಬೆಳ್ಳಗಿರುವುದೂ ಆಸ್ವಾಭಾವಿಕ? ಬೇಕಾದರೆ ಅದನ್ನೊಂದು ಅಲಂಕಾರದ ರೀತಿ ಎಂದು ಭಾವಿಸಬಹುದು. ಹಾಗಲ್ಲದೆ “ಮೊಳಗುವ ಸಿತಾಭ್ರಮಂ” ಎಂದು ವಿಭಾಗ ಮಾಡುವ ಬದಲು “ಮೊಳಗುವಸಿತಾಭ್ರಮಂ” ಎಂದು ಸಂಧಿಮಾಡಿದರೆ ಮೊಳಗುವ ಅಸಿತಾಭ್ರ ಎಂದಾಗಿ ಸ್ವಾಭಾವಿಕವಾಗುವುದು. ಆದರೆ ಬಿಳಿಯ ಕುದುರೆಗೆ ಹೋಲಿಕೆ ತಪ್ಪುವುದು. ಹೇಗೆ ಮಾಡಿದರೂ ಸಾದೃಶ್ಯಸಂಪತ್ತಿ ಸ್ವಲ್ಪ ಪೀಕಲಾಟಕ್ಕೆ  ಸಿಕ್ಕಿಕೊಳ್ಳತ್ತದೆ. ಆದರೂ ಉಪಮಾ ಪ್ರೇಮೋನ್ಮತ್ತನಾದ ಲಕ್ಷ್ಮೀಶನು ಅದೊಂದನ್ನೂ ಗಣನೆಗೆ ತರುವುದಿಲ್ಲ. ಪರಮಾತ್ಮನನ್ನು ಕಂಡ ಭಕ್ತನಿಗೆ ಆರಾಧನೆಯ ಶಿಲಾಮೂರ್ತಿ ಗೌಣವಾಗಿಬಿಡುವಂತೆ ಉಪಮಾನದ ಮಹದೈಶ್ವರ್ಯವನು ಸಂದರ್ಶಿಸಿದ ಆತನಿಗೆ ಉಪಮೇಯದ ಅಲ್ಪೈಶ್ವರ್ಯ ಅಮುಖ್ಯವಾಗಿಬಿಟ್ಟಿದೆ. ಕಾರ್ಗಾಲದಲ್ಲಿ ದುರ್ದಮ್ಯ ಚಂಡಮಾರುತನು ತಟಿಲ್ಲತಾ ಸುಶೋಭಿತವಾಗಿಯೂ ಘನರವಾನ್ವಿತವಾಗಿಯೂ ಇರುವ ಮಹಾ ಸುನೀಲ ಶಿಲಾಖಂಡಗಳಂತಿರುವ ಮೇಘ ಮಾಲೆಗಳನ್ನು ದೀರ ಪರ್ವತ ಪ್ರದೇಶಗಳಿಗೆ ತಂದಪ್ಪಳಿಸುವ ಚೇತೋಹಾರಿಯಾದ ರುದ್ರ ದೃಶ್ಯವನ್ನು ನೋಡಿದ ಯಾರಾದರೂ ಕವಿಯೊಡನೆ ಸಹಾನುಭೂತಿ ತೋರಿಸದೆ ಇರಲಾರದು! ಅಲ್ಲದೆ ಕವಿ ಲಕ್ಷಣಶಾಸ್ತ್ರಕ್ಕೆ ಲಕ್ಷ್ಯಗಳನ್ನು ತಯಾರುಮಾಡುವ ಕೂಲಿಯ ಕಮ್ಮಾರನಲ್ಲ; ಪರಿಣಾಮ ರಮಣೀಯತೆಯಲ್ಲದೆ ಅವಯವ ಸಾಧ್ಯಶ್ಯವಲ್ಲ ಉಪಮೆಯ ಗುರಿ!

ಪ್ರಕೃತಿ ಪ್ರಪಂಚಕ್ಕೆ ಸೇರಿದ ಉಪಮಾಗಳ ಮಾತಾಯಿತು. ಇನ್ನು ಬಹು ಪರಿಚಿತವಾದ ವ್ಯವಹಾರ ಪ್ರಪಂಚದ ಉಪಮಾಗಳನ್ನು ತೆಗೆದುಕೊಳ್ಳೋಣ. ಕವಿ ಮೊದಲನೆ ಸಂಧಿಯಲ್ಲಿ ತನ್ನ ಕಾವ್ಯಕ್ಕೆ ಪೀಠಿಕೆ ಬರೆಯುತ್ತಾ, ಚೆನ್ನಾಗಿ ಓದಿನೋಡಿ ರಸಾಸ್ವಾದನೆ ಮಾಡದೆ ವಿನೂತನ ಕವಿತೆ ಎಂದು ಕುಂದಿಟ್ಟು ಜರೆದೊಡೆ ಪೇಳ್ದವನೊಳ್ ಅದಾವದೂಣೆಯಂ ಎಂದು ಪ್ರಶ್ನೆ ಮಾಡುತ್ತಾನೆ. ಆ ಸಂದರ್ಭದಲ್ಲಿ

ಕೆನೆವಾಲ ಕಡೆದು ನವನೀತಮಂ ತೆಗೆದು ಬಾ
ಯ್ಗಿನಿದಾಗಿ ಸವಿಯದದರೊಳಗೆ ಪುಳಿವಿಡಿದು ರಸ
ವನೆ ಕಿಡಿದೊಡೆ ಕರೆದ ಸುರಭಿಗಪ್ಪುದೆ ಕೊರತೆ  (ಪೀ. ಸಂ. . )

ಎಂದು ಹೇಳಿ ಕಡೆಗೆ “ಜಾಣರಿದನರಿದು ಮತ್ಸರವನುಳಿದಾಲಿಪುದು” ಎಂದು ಹಿತೋಪದೇಶ ಮಾಡುತ್ತಾನೆ. ತರುವಾಯ ಕಾವ್ಯರಚನೆಗೆ ತಾನು ನಿಮಿತ್ತ ಮಾತ್ರನೆಂದೂ “ಗೀರ್ವಾಣ ಪುರ ನಿಲಯ ಲಕ್ಷ್ಮೀವರಂ ತಾನೆ” ನಿಜವಾದ ಕಾವ್ಯಕರ್ತೃವೆಂದೂ, ಆತನೆ “ಸಂಗೀತ ಸುಕಲಾ ನಿಪುಣನು ವೀಣೆಯಿಂ ಗಾನಮಂ ನುಡಿಸುವಂದದೊಳೆನ್ನ ವಾಣಿಯಿಂ ಕವಿತೆಯಿಂ ಪೇಳಿಸಿದಂ” ಎಂದೂ ಹೇಳಿಕೊಂಡಿರುತ್ತಾನೆ. ಸರೋವರದಲ್ಲಿ ಮೀಯಲೆಂದು ಮುಳುಗುವ ಆನೆಗಳ ದಾನಾಭಿಲಾಷೆಯನ್ನು ಅಳಿಕುಲವು “ಖಳರ ಪುರುಷಾರ್ಥಮಂ ಕಾಮಿಸುವ ಯಾಚಕಾವಳಿಯಂತೆ” (ಸಂ. ೩, ಪ. ೩೯) ತೊರೆದು ತೊಲಗಿದುವಂತೆ ಕಲಾವಿದನಪ್ಪ ಮಾರುತಿಯ ಕಣ್ಗಳಿಗೆ ಯೌವನಾಶ್ವನ ಶ್ವೇತಾಶ್ವವು “ನುತ ಸತ್ಕವಿ ಪ್ರೌಢತರ ಸುಪ್ರಬಂಧದಂತೆ” (ಸಂ. ೪, ಪ. ೮) ಮನೋಹರವಾಗಿ ಇತ್ತಂತೆ. ಅನುಸಾಲ್ವನು “ಬೆಣ್ಣೆಗಳ್ಳನ ಕೊಬ್ಬಿದ ಉದರದೊಳು ಪೊಚ್ಚ ಪೊಸ ಸುಣ್ಣಮಂ ಪೊಯ್ದುನೀರೆರೆದಂತೆ” (ಸಂ. ೭, ಪ. ೨೯) ಮಾಡುವೆನು ಎಂದು ರೋಡಿಸಿದನಂತೆ. ವಿಂಧ್ಯಗಿರಿಯನ್ನು ದಾಟಿದ ಜನ್ನಗುದರೆ ಒಂದು ಶಿಲೆಯನ್ನೇರಿ ಖುರಂ ಕೀಲಿಸಲು ಬೆಸುಗೆ ಹಿಡಿದಂತೆ ನಡೆಗೆಟ್ಟು “ದರಿದ್ರನ ಮನೋರಥದಂತೆ” (ಸಂ. ೧೦, ಪ ೧೧) ನಿಂದುದಂತೆ. ರಣರಂಗವಿದ್ದುದು “ಲೋಕದಖಿಳ ಪ್ರಾಣಿಗಳನುಂಡ ಅಜೀರ್ತಿಯಿಂದೋಕರಿಸಿದನೊ ಕಾಲನೆಂಬಿನಂ” (ಸಂ. ೧೨, ಪ ೪೫). ಅರ್ಜುನನ ತೇರು “ತಿರ್ರನೆ ತಿಗುರಿಯಂತೆ” (ಸಂ. ೧೩, ಪ ೫) ತಿರುಗಿತು. ಶ್ರೀರಾಮನು “ಕಲಿಯುಗದ ವಿಪ್ರರಾಚಾರಮಂ ಬಿಡುವಂತೆ” (ಸಂ. ೧೮, ಪ ೫೧) ಸೀತೆಯನ್ನು ಬಿಟ್ಟನು. ಸೀತಾದೇವಿಯನ್ನು ಕಾಡಿಗೆ ಬಿಡಲು ಕರೆದುಕೊಂಡು ಹೊರಟ ಲಕ್ಷ್ಮಣನ ರಥದ ಪತಾಕೆ “ರಘುವರಂ ಅಂಗನೆಯನುಳಿದಂ ಅಹಹ ಎಂದು ಅಡಿಗಡಿಗೆ ತಲೆಗೊಡಹುವಂತೆ” (ಸಂ.೧೯, ಪ ೧) ತೋರಿದುದು. ಜಾನಕಿಗೆ ತನ್ನ ಪತಿ ತನ್ನನ್ನುಳಿದ ವಿಷಯ ತಿಳಿದಾಗ ಕಾಡಿನಲ್ಲಿ “ಮೈಮರೆಯುತೆ ಎಚ್ಚರುತೆ ಪಾವಗಿದ ಪಸುಳೆವೋಲ್” ಇದ್ದಳು. ಲಕ್ಷ್ಮಣನ ಮನಸ್ಸು ತಾನೆಂದೂ ಅಗಲದ ಅಣ್ಣನ ಕಡೆಗೂ ದೂಳು ಕಾಯದೊಳು ಹತ್ತಿ ಹೊರಳುವ ಸೀತೆಯ ಕಡೆಗೂ ಹರಿದಾಡಿ ಆತನು “ತೂಗುಯ್ಯಲೆವೊಲಾದನು” (ಸಂ. ೧೯, ಪ ೨೯). “ಎತ್ತಲುಂ ಕೆತ್ತವೊಲ್ ಮುತ್ತಿ ಮುಸುಗಿತ್ತು ಕಗ್ಗತ್ತಲೆ ಧರಿತ್ರಿಯಂ ಮುಳ್ಳುಮೊನೆ ಕೊಳ್ಳದಂತೆ” (ಸಂ. ೨೬, ಪ ೬). ವಾಯಸಪ್ರತತಿ ಗರಿಗಳನ್ನು ಹೊದಿಸಿ ಮಗ್ಗುಲೊಳಿಟ್ಟು ಕೋಕಿಲೆಯ ಮರಿಗಳನ್ನು ಮೈಯ್ಯಲ್ಲಿ ಹುದುಗಿಕೊಂಡು “ನರೆಲೋಭಿ ವಿತ್ತಮಂ ಸುಯ್ದಾನಮಂ ಮಾಳ್ಪ ತೆರೆದಿಂದೆ” (ಸಂ. ೨೮, ಪ ೪) ಪಾಲಿಸುತ್ತಿದ್ದವು. ಕೊಟ್ಟದ್ದು ತನಗೆ ಬೈತಿಟ್ಟದ್ದು ಪರರಿಗೆ ಎಂಬ ಸರ್ವಜ್ಞಮೂರ್ತಿಯ ಪದ್ಯವನ್ನು ನೆನಪಿಗೆ ತಂದುಕೊಡರೆ ವಾಚಕರು ಕೋಗಿಲೆಯ ಮರಿಗಳನ್ನು ಸಾಕುವ ಕಾಗೆಗಳಿಗಾಗುವ ಲಾಭವನ್ನು ಮನಗಾಣಬಹುದು.

ಪುರಾಣ ಮತ್ತು ಪುಣ್ಯ ಕಥೆಗಳಿಂದ ಲಕ್ಷ್ಮೀಶನು ಅನೇಕ ಉಪಮಾನಗಳನ್ನು ರಚಿಸಿದ್ದಾನೆ. ಆ ಉಪಮಾನಗಳು ಪೂರ್ವ ಕಥೆಯ ಪರಿಚಯವಿದ್ದವರಿಗೆ ಮಾತ್ರ ಅರ್ಥವಾಗುತ್ತವೆ. ಅಂದರೆ ಬೇರೆ ದೇಶಗಳ ಜನಗಳಿಗೆ ಅಥವಾ ಬೇರೆ ಸಂಸ್ಕೃತಿಯ ಜನಗಳಿಗೆ ಅವು ಮನೋಹರವಾಗಲಾರವು. ಆದರೆ ಆ ಕಥೆಯನ್ನು ತಿಳಿದವರಿಗೂ ಇತರ ಕಾವ್ಯಗಳಲ್ಲಿ ಅವುಗಳ ವರ್ಣನೆಯನ್ನು ಓದಿದವರಿಗೂ ರಸೋತ್ಕರ್ಷವಾಗಬಹುದು. ಏನೆಂದರೂ ಅಂತಹ ಉಪಮಾನಗಳು ಬಹು ಸರಸವಾದವು ಎಂದು ಹೇಳಲಾಗುವುದಿಲ್ಲ. ತಿರುಕನು ತಿರುಕನನ್ನು ಬೇಡುವಂತೆ, ಕುರುಡನು ಕುರುಡನನ್ನು ನಡೆಯಿಸುವಂತೆ ಕೆಲವು ವೇಳೆ ಅವುಗಳ ಪ್ರಯತ್ನ ನಿಷ್ಪ್ರಯೋಜಕವಾಗಬಹುದು.* ಕರಿಘಟೆಯ ಮೊಗ್ಗರವು ಸಲಿಲಪಾನಕೆಂದು ಸರೋವರಕ್ಕಿಳಿಯುವುದನ್ನು ಕವಿ “ಸಗ್ಗದಾಣ್ಮನ ವಜ್ರ ಹತಿಯಿಂದೆ ಸಾಗರಕೆ ಮುಗ್ಗುವ ಕುಲಾದ್ರಿಗಳ ಮರಿಗಳ ಸಮೂಹ ವೆನಲ್” (ಸಂ. ೩, ಪ ೩೮) ಎಂದು ವರ್ಣಿಸುತ್ತಾನೆ. ಇಲ್ಲಿ “ಅದ್ರಿಗಳ ಸಮೂಹ” ಎನ್ನುವುದರಲ್ಲಿ ಇರುವ ಸಾರ್ವತ್ರಿಕತೆಯಾಗಲಿ ಸಾದೃಶ್ಯವಾಗಲಿ ಉಪಮಾನದ ಉಳಿದ ಭಾಗದಲ್ಲಿ ಇರುವುದಿಲ್ಲ. ಏನಾದರೂ ಸ್ವಾರಸ್ಯವಿದ್ದರೂ ಅದು ಅದರ ಸಾರ್ವತ್ರಿಕತೆ ಇರುವ ಭಾಗದಿಂದ ಹೊರತು ಬೇರೆಯಲ್ಲ. ಮೇಘನಾದನು ಯೌವನಾಶ್ವನ ಬಿಳಿ ಕುದುರೆಯನ್ನು ಎತ್ತಿಕೊಂಡು ಹಾರಿ ಓಡುವುದನ್ನು “ಗರುಡನುತ್ಸಾಹದಿಂದೆತ್ತಿಕೊಂಡೊಯ್ವಮೃತಕಲಶವೋ” (ಸಂ. ೪, ಪ. ೧೩) ಎಂದು ವರ್ಣಿಸುತ್ತಾನೆ. ಅದನ್ನೆ ಹಿಂದಿನ ಪದ್ಯದಲ್ಲಿ “ಸರದತ್ತಣಿಂದಂಚೆ ಬೆಳ್ದಾವರೆಯನಳ್ತಿಯಂ ಕಿತ್ತು ನಭಕೇಳ್ವಂತೆ” (ಸಂ. ೪, ಪ. ೧೨) ಎಂದು ಬಣ್ಣಿಸಿದ್ದಾನೆ. ಪೂರ್ವಕಥೆ ತಿಳಿದಿರುವ ನಮಗೂ, ಗರುಡನನ್ನು ಗೌರವಿಸಿ ಅಮೃತಕಲಶವನ್ನು ಅಪೇಕ್ಷಿಸುವ ನಮಗೂ ಕೂಡ ಕೃಷ್ಣವರ್ಣದ ಹಂಸವು ಶ್ವೇತಪದ್ಮವನ್ನು ಚುಂಚುವಿನಲ್ಲಿಟ್ಟುಕೊಂಡು ಆಕಾಶದ ಅಪಾರ ನೀಲಪಟದಲಿ ಧೀರವಾಗಿ ಹಾರಿಬರುವ ಚಿತ್ರವು ಗರುಡನು ಅಮೃತಕಲಶವನ್ನು ಎತ್ತಿಕೊಂಡು ಬರುವ ಚಿತ್ರಕ್ಕಿಂತಲೂ ರಮಣೀಯತರವಾಗಿ ಕಾಣಬರುವುದಿಲ್ಲವೆ? ಹಾರುವ ಹಂಸವನ್ನು ನೋಡಿ ಬಣ್ಣಿಸುತ್ತಿರುವ ಸಹೃದಯನಿಗೆ ‘ಈ ಹಾಳು ಗರುಡನು ಅಮೃತಕಲಶಧಾರಿಯಾಗಿ ಏಕೆ ಅಡ್ಡ ಬಂದನು?’ ಎನ್ನಿಸಿದರೂ ಎನ್ನಿಸಬಹುದು. ಅಷ್ಟೇ ಅಲ್ಲ. ನಮ್ಮನ್ನು ಯೋಗ್ಯತಾ ಪರೀಕ್ಷಕರನ್ನಾಗಿ ಮಾಡಿದರೆ ಹಂಸಕ್ಕೇ ಪಾರಿತೋಷಕ ದೊರಕುವುದರಲ್ಲಿ ಸಂದೇಹವಿಲ್ಲ!# ಇಷ್ಟದಾರೂ ಕೆಲವೆಡೆಗಳಲ್ಲಿ ಪೂರ್ವಕಥೆಯ ಉಪಮಾನವು ಅತ್ಯಂತ ರಮಣೀಯವಾಗಿರುವ ಸಂಭವವೂ ಉಂಟು. ಅದಕ್ಕೆ ದೃಷ್ಟಾಂತವಾಗಿ ಈ ಕೆಳಗಿನ ಪದ್ಯವನ್ನು ತೆಗೆದುಕೊಳ್ಳೋಣ. ಯೌವನಾಶ್ವನು ಭೀಮ ವೃಷಕೇತು ಮೇಘನಾದರ ಮೇಲೆ ಕದನಮಾಡಲು ಸೇನಾಸಮೇತವಾಗಿ ಹೊರಡುವನು. ದೊರೆಯ ಹಿಂದೆ ಸಾಲುಸಾಲಾಗಿ ನಡೆದು ಬರುವ ಸುಶಿಕ್ಷಿತ ಸುಸಜ್ಜಿತ ಸೇನಾವಾಹಿನಿಯನ್ನು ಕವಿ ಹೀಗೆ ಬಣ್ಣಿಸುತ್ತಾನೆ:

ಇದು ಭಗೀರಥ ರಥವ ಬೆಂಕೊಂಡು ಪರಿವ ಸುರ
ನದಿಯ ಪ್ರವಾಹಮೆನಲ್ ನೃಪನ ವರ ವರೂ
ಥದ ಪಿಂತೆ ಬಹುವಾದ್ಯ ರಭಸದಿಂದೆಡೆವರಿಯದೈತಪ್ಪ ಚತುರಂಗದ
ಪದಹತಿಗೆ ಧರೆ ನಡುಗುತಿರೆ ಜಹ್ನುಮುನಿಪನಂ
ತದರ ಸಂಭ್ರಮಕೆ ಸೈರಿಸದಂತರಂಗದೊಳ್
ಕುದಿಯುತಿರ್ದಂ ಕರ್ಣ ಸುತನವನ ಭಾವಮಂ ಪವನಜಾತಂ ಕಂಡನು!
(
, ೨೮)

ಭಗೀರಥನ ರಥದ ಹಿಂದೆ ಪರ್ವತ ಕಂದರ ಕಾನನಗಳನ್ನು ಏರಿ ಇಳಿದು ನುಗ್ಗಿ ಹರಿದುಬರುವ ಗಂಗೆಯ ಬಿಳಿ ಹೊನಲು ಹೃದಯವನ್ನು ತಲ್ಲಣಿಸಿ ಹುಚ್ಚು ಹಿಡಿಸುವಂತಹ ಸುಮನೋಹರವಾದ ದೃಶ್ಯ. ಆದ್ದರಿಂದ ನಮ್ಮೆದೆ ಹಿಗ್ಗುತ್ತದೆ. ಜಹ್ನು ಮುನಿಪನ ಅಂತರಂಗದ ಕುದಿದಾಟ ಮೊದಲಾದ ಕಗ್ಗದ ಕಡೆಗೆ ನಮ್ಮ ಗಮನ ಹೋಗುವುದೇ ಇಲ್ಲ. ಈ ಉಪಮಾನವನ್ನು ಕೂಡ ಸ್ವಲ್ಪ ಪರೀಕ್ಷಿಸಿದರೆ ಅದರ ಯೋಗ್ಯತೆ ಇರುವುದು ನಿಜವಾಗಿಯೂ ಪೂರ್ವ ಕಥೆಯಲ್ಲಲ್ಲ ಎಂಬುದು ಹೊಳೆಯುವುದು. ನಮಗೆ ಇಲ್ಲಿ ಭಗೀರಥನೂ ಅಷ್ಟು ಮುಖ್ಯವಲ್ಲ. ಸುರನದಿಯ ಹೊನಲು ಅವನ ಹಿಂದೆ ಹರಿದು ಬರದಿದ್ದರೆ ಅವನು ನಮಗೆ ಮುಖ್ಯವಾಗುತ್ತಲೆ ಇರಲಿಲ್ಲ. ಭಗೀರತಥನಿಗೆ ಬದಲಾಗಿ ಅಗಸ್ತ್ಯ ಭ್ರಾತನೊಬ್ಬನನ್ನು ಹಾಕಿಕೊಂಡರೂ ಪದ್ಯದ ಪ್ರಾಸ ಮಾತ್ರೆಗಳಿಗೆ ಕೊರತೆ ಬರಬಹುದೇ ಹೊರತು ನಮ್ಮ ಕಲ್ಪನೆಗೆ ಯಾವ ವಿಧದಲ್ಲಿಯೂ ಕುಂದು ಬರುವುದಿಲ್ಲ. ನೀಲಧ್ವಜನ ‘ಮನೆಯ ಅಳಿಯ’ ನಾಗಿದ್ದ ಅಗ್ನಿ ಅರ್ಜುನನ ಸೇನೆಯನ್ನು ಸುಡತೊಡಗಲು ಸೈನಿಕರೂ ಆನೆಕುದುರೆಗಳೂ

ಕಟ್ಟುಗ್ರ ಕೋಪದಿಂ ಮುಳಿದಂದು ರಾಘವಂ
ತೊಟ್ಟ ಬಾಣದ ಮೊನೆಯ ದಳ್ಳುರಿಯ ಜಳಕೆ ಕಂ
ಗೆಟ್ಟು ಸಿಡಿಮಿಡಿಗೊಂಡ ಸಾಗರದ ಜೀವಾಳಿಯಂತೆ (, ೪೦)

ಆದುವಂತೆ. ಹಂಸಧ್ವಜನ ಪತ್ತನವಾದ ಚಂಪಕಾನಗರಿಯ ಕೋಟೆ

ತ್ರಿದಶಪತಿ ಗಿರಿಗಳಂ ಕಡಿವಂದು ತೆಗೆದಿಡುವೆನೆಂದು ತಿರಿಪಿದ ಕುಲಿಶದಾ
ಪೊದರುವೆಳಗಿಳೆಗಿಳಿದು ವಜ್ರಮಯವಾಗಿ ನಿಂ
ದುದೊ……….. (೧೦, ೩೬)

ಎನ್ನುವಂತೆ ರಂಜಿಸಿತಂತೆ. ಇದು ಚಿತ್ತದ್ಯೋತಕವಾಗಿದೆ. ಇಂದ್ರನು ವಜ್ರಾಯುಧವನ್ನು ತಿರುಗಿಸುವ ದೃಶ್ಯ ನಮಗೆ ಅಪರಿಚಿತವಾಗಿದ್ದರೂ ಬಾಲಕರು ಕತ್ತಲಲ್ಲಿ ಉರಿಕೊಳ್ಳಿಗಳನ್ನು ಗಿರ್ರನೆ ಸುತ್ತಿಸುವ ನೋಟವನ್ನು ನಾವು ನೋಡಿರುತ್ತೇವೆ. ಆ ಜ್ವಾಲಾನೇಮಿ ಘನವೂ ಶಾಶ್ವತವೂ ಆದರೆ ಎಷ್ಟು ಅಂದವಾಗುವುದೊ ಅದನ್ನು ಊಹಿಸಿ ಅನುಭವಿಸಬಹುದು.

ಕುಶನು ಶತ್ರುಘ್ನನ ಸೇನೆಯ ಮೇಲೆ “ತಾರಕನ ಪೆರ್ಬಡೆಗೆ ಗುಹನೈದುವಂತೆ” (೨೦, ೩೩) ಒದಗಿದನಂತೆ. ದುಷ್ಟಬುದ್ಧಿಯ ಮಗನಾದ ಮದನನು

ಶ್ರೀಕಂಠನಂ ಕೆಣಕಿ ಮೆಯ್ಗೆಟ್ಟ ಮದನನಂ
ಲೋಕದೊಳ್ ಜರೆವಂತೆ ಶಂಕರ ಪ್ರಿಯನಾಗಿ
ಸಾಕಾರದಿಂದೆಸೆವ ಮದನನಿವನೆಂಬತೆ….
(
೩೦, ೪೪)

ರಂಜಿಸಿದನೆಂಬುದು ಕವಿಯ ವರ್ಣನೆ. ಪೂರ್ವಕಥೆಯಿಂದ ತೆಗೆದುಕೊಂಡ ಇಂತಹ ಉಪಮಾನಗಳು ಜೈಮಿನಿ ಭಾರತದಲ್ಲಿ ಅನೇಕವಿವೆ. ಆದರೆ ಅವುಗಳಿಂದ ಕಾವ್ಯದ ಸೊಬಗು ಹೆಚ್ಚಾಗಿದೆಯೊ ಪೆಚ್ಚಾಗಿದೊ ಹೇಳಲಸಾಧ್ಯ. ಪೆಚ್ಚಾಗಿದೆ ಎಂದರೆ ಕೆಲವರಿಗೆ ರುಚಿಸದಿರಬಹುದು.

ಪೂರ್ವಕಥೆಯ ಉಪಮಾನಗಳಿಗಿಂತಲೂ ನೀರಸವಾದುದೆಂದರೆ ಕವಿಸಮಯದ ಉಪಮೆಗಳು. ಅವುಗಳು ಕವಿಚೈತ್ರವನಚೂತನ ಕಾವ್ಯದಲ್ಲಿ ಬಂದಿಳಿಕೆಗಳಂತೆ ಬೇಕಾದಷ್ಟಿವೆ.ಅವುಗಳೆಲ್ಲಾ ಅಷ್ಟದಿಗ್ಗಜಗಳು, ಆದಿಶೇಷ, ಆದಿಕುರ್ಮ, ಕುಲಪರ್ವತಗಳು, ಸಪ್ತಸಮುದ್ರಗಳೆ ಮೊದಲಾದ ಅಜ್ಞಾನ ಮೂಲವಾದ ಸನಾತನ ವಿಜ್ಞಾನದ ಮೇಲೆ ನಿಂತಿವೆ.*

ಲಕ್ಷ್ಮೀಶನು ಅಧ್ಯಾತ್ಮ ಪ್ರಪಂಚದಿಂದಲೂ ಉಪಮಾನಗಳನ್ನು ರಚಿಸಿದ್ದಾನೆ. ಅವುಗಳು ಬಹು ಅಲ್ಪಸಂಖ್ಯಾತವಾದರೂ ತತ್ವಗರ್ಭಿತವಾಗಿವೆ. ಆ ಉಪಮೆಗಳ ಸಂಪೂರ್ಣ ರಸಾಸ್ವಾದನೆಯಾಗಬೇಕಾದರೆ ಸೂಕ್ಷ್ಮಧೀಶಕ್ತಿಯೂ ಬೇಕು. ಅಲ್ಲದೆ ದರ್ಶನಶಾಸ್ತ್ರಗಳ ಪರಿಚಯವೂ ಸ್ವಲ್ಪ ಬೇಕಾಗಬಹುದು. ಶೈಶಿರ ಮಾಸವು ಜಗುಳ್ದು ವಸಂತವು ತಲೆದೋರಲು ಮಾಗಿಯ ವಿಮೋಚನೆಯ ಒಡನೊಡನೆ ತಂಗಾಳಿ ಸುಳಿವುದನ್ನು ಕವಿ

. . . ಪಾತಕ ಕ್ಷಯದಂತೆ ಮಾಗಿಯ ವಿ
ಮೋಚನಂ ಕಾಣಿಸಲ್ ಪುಣ್ಯವಾಸನೆಯಂತೆ
ದಕ್ಷಿಣದ ವಾಯು ಸುಳಿಯೆ (, )

ಎಂದು ವರ್ಣಿಸುತ್ತಾನೆ. ಅರ್ಜುನನ ಸೇನೆ ಪ್ರವೀರನನ್ನು ನಾನಾ ದಿಕ್ಕುಗಳಿಂದ ಬಂದು ಮುತ್ತಿದರೂ ಅವನು ಅತಿ ಸತ್ವದಿಂದ ತೇರೈಸದಿದ್ದುದನ್ನು

(ಸಂ)ಸಾರ ಪ್ರಲಾಪ ಮಾಲಾಕುಲಮನಧ್ಯಾತ್ಮ
ಸಾರದಿಂ ತಡೆವ ಯೋಗೀಶ್ವರನ ಚಿತ್ತದಂತೆಚ್ಚರಿಕೆ ಧಾತುಗೆಡದೆ (, ೨೮)

ಎಂದು ಬಣ್ಣಿಸಿದ್ದಾನೆ. ನುಗ್ಗಿಬರುವ ಪರಸೈನ್ಯದ ನಡುವೆ ವೀರನಾದ ಸುರಥನು ಕೃಷ್ಣಾರ್ಜುನರನ್ನು ಹುಡುಕಿದುದು

ಘೋರ ಸಂಸಾರದೊಳ್ ಮುಸುಕುವ ಮರವೆಯಂ ನಿ
ವಾರಿಸಿ ಮಹಾಯೋಗಿ ಜೀವಪರಮಾತ್ಮರ ವಿ
ಚಾರಿಸುವ ತೆರದಿಂದೆ ರಿಪು ಮೋಹರದೊಳೊತ್ತಿ ಕವಿವ ಭಟರಂ ಗಣಿಸದೆ
ವೀರ ಸುರಥಂ ಕೃಷ್ಣ ಫಲ್ಗುಣರನರಸಿದನು
ದಾರ ವಿಕ್ರಮ ಪರಿಜ್ಞಾನದಿಂದೆಡ ಬಲನ
ನಾರೈಯ್ಯದೇಕಾಗ್ರಚಿತ್ತದಿಂ ವಸುಮತೀಕಾಂತ ಕೇಳದ್ಭುತವನು || (ಸಂ ೧೪, )

ಶ್ರೀರಾಮಚಂದ್ರನು “ಮಮತೆಯಂ ಮಹಾಯೋಗಿ ಬಿಡುವಂತೆ” (೧೮, ೫೪) ಸೀತೆ ತನಗೆ ಅತ್ಯಂತ ಪ್ರಿಯಳಾದರೂ ಮುಂದಿನ ಶ್ರೇಯಸ್ಸಿಗೋಸ್ಕರ ಆಕೆಯನ್ನು ಬಿಡುತ್ತೇನೆಂದು ಹೇಳುತ್ತಾನೆ. “ಬಹುದುರಿತಮಂ ಸ್ವಧರ್ಮದೊಳೊರಸುವಂತೆ” (೨೦, ೩೨) ಕುಶನು ಶತ್ರುಗಳನ್ನು ಸವರುತ್ತಾನೆ. ಚಂಡಾಲರು ಕೊಲೆಮಾಡಲೆಂದು ಕಾಡಿಗೊಯ್ಯುವ ಚಂದ್ರಹಾಸನು (೨೮–೩೧) “ಪಾತಕಿಗಳೊಡಲೊಳಿಹ ಪರಮಾತ್ಮನಂತೆ”ಯೂ “ಬಹಳ ಕೋಪಾತಿಶಯ ದೊಲಿಹ ವಿವೇಕದಂತೆ”ಯೂ ಇದ್ದನೆಂಬುದು ಎಷ್ಟು ಸಮಂಜಸವಾಗಿದೆ; ಎಷ್ಟು ಆಶಾಜನಕವಾಗಿದೆ!

ನಿಜವಾದ ಅಧ್ಯಾತ್ಮ ಪ್ರಪಂಚಕ್ಕೆ ಸೇರದೆ ಸನಾತನ ಕರ್ಮ ಧರ್ಮ ನೀತಿ ಶಾಸ್ತ್ರಗಳ ಆಧಾರದಮೇಲೆ ನಿಂತಿರುವ ಕೆಲವು ಉಪಮಾನಗಳಿವೆ. ಕುಶನ ಶರಘಾತಿಗೆ ಶತ್ರುಗಳು “ಪಿರಿದು ಕನ್ಯಾವಿಕ್ರಯಂಗೈದು ಜೀವಿಸುವ ಮಾನವನ ಪಿತೃಗಳಂತೆ” (೨೦, ೩೧) ಪತಿತರಾದರಂತೆ. “ನೆರೆ ಮಂತ್ರಿ ಮಂತ್ರದಿಂ ದಹಿತರುತ್ಸಾಹಮಂ ಬರಿಗೈವತೆರದಿಂದೆ” (೨೭, ೩೮) ಅರ್ಜುನನು ಶತ್ರುಗಳು ಬಿಟ್ಟ ಬಾಣಗಳನ್ನು ತರಿದೊಟ್ಟಿದನಂತೆ. ಅವನ ಪ್ರತಿಭಟನೆಗೆ ಶತ್ರುಗಳ ಬಾಣಗಳೆಲ್ಲಾ “ಕೂಟ ಸಾಕ್ಷಿಯ ಸಿರಿವೊಲು” (೨೦, ೧೬) ಬಯಲಾದುವಂತೆ.

ಯುಕ್ತಿಪೂರ್ಣವಾದ ಕಲ್ಪನೆಯಿಂದ ಮೂಡಿರುವ ಕೆಲವು ಉಪಮಾನಗಳಿವೆ. ಉದಾಹರಣೆಗೆ ಉಪವನದ ವರ್ಣನೆಯಲ್ಲಿ ಬರುವ ಈ ಪದ್ಯವನ್ನು ತೆಗೆದುಕೊಳ್ಳೋಣ.

ಪೂಗಳ ಪರಾಗಮೊಕ್ಕಿರ್ದಿಳೆಯ ಮೇಲೆ ಹಂ
ಸೀ ಗಣಂ ನಡೆಯಲದರಡಿವಜ್ಜೆ ಪತ್ತಿ ಸಾ
ಲಾಗಿರಲ್ಕೀ ಬನವ ವಿರಹಿಗಳ್ ಪುಗದಂತೆ ಶೋಭೆಯಿಂ ಮದನನೆಂಬ
ಯೋಗಿ ಬರೆದಿರಿಸಿರ್ದ ಯಂತ್ರದಕ್ಕರಮಿದೆಂ
ದಾಗ ತಮಗಿರುಳಹ ವಿಯೋಗಮಂ ನೆನೆದಂಜಿ
ಬೇಗದಿಂ ತೊಡೆವಂತೆ ಪೂರಳ್ದು ರತಿಗೈವ ಕೋಕಗಳಂ ನೋಡೆಂದನು || (, ೨೬)

ಇದರಲ್ಲಿ ಉಪಮಾನವು ಬರಿಯ ಯುಕ್ತಿಯಮೇಲೆ ನಿಂತಿರುವುದರಿಂದ ನಮ್ಮ ಮನಸ್ಸು ಸ್ವಲ್ಪ ಆಶ್ವರ್ಯ ಪಡೆಬಹುದು. ಆದರೆ ಹೃದಯವು ಆವೇಶದಿಂದ ನಲಿಯಲಾರದು. ಉಪಮೇಯದ ಚಿತ್ರವು ಮಾತ್ರ ಬಹುರಮ್ಯವಾಗಿ ಕಣ್ಣಿಗೆ ಕಟ್ಟುತ್ತದೆ. ವಿರಹಿಗಳು, ಮದನಯೋಗಿ, ಯಂತ್ರದಕ್ಕರ, ವಿಯೋಗ ಮೊದಲಾದುವುಗಳು ಇಲ್ಲದಿದ್ದರೂ ನೋಟವು ಮನೋಹರವಾಗೆಯೆ ಇರುತ್ತಿತ್ತು. ಅಷ್ಟೇ ಅಲ್ಲ, ಈ ಪದ್ಯದಲ್ಲಿ ಉಪಮಾನವು ಉಪಮೇಯದ ಶೋಭೆಗೆ ಅಡ್ಡ ಬರುವುದೆಂದೂ ಹೇಳಬಹುದು. ಏಕೆಂದರೆ ಉಪಮೇಯದ ಲಲಿತ ಚಿತ್ರಕಲ್ಪನೆಯಲ್ಲಿಯೆ ತಲ್ಲೀನವಾಗುವ ಮನಸ್ಸನ್ನು ಉಪಮಾನವು ಕಲಕುತ್ತದೆ.

ಕೆಲಡೆಗಳಲ್ಲಿ ಯುಕ್ತಿ ಕಲಾಪೂರ್ಣವಾಗಿ ಶೋಭಿಸುವುದೂ ಉಂಟು. ಜ್ವಾಲೆ ಗಂಗಾದೇವಿಯಲ್ಲಿ ದೋಷಾರೋಪಣೆ ಮಾಡಲು, ಆಕೆ ಬೆದರಿ

ಅಂಬುರುಹ ರೋಲಂಬ ಮತ್ಸ್ಯ ಕಚ್ಛಪ ವಾರಿ
ಕಂಬು ಸೀಕರ ಚಕ್ರವಾಕ ಶೈವಾಲ ಕಾ
ದಂಬ ಗಂಭೀರ ಸೈಕತ ಮೃಣಾಳಂಗಳಿವು ತನಗವಯವಂಗಳಾಗೆ
ಇಂಬಾದ ಸೌಂದರ್ಯಮಾ ನದಿಯ ನಡುವೆ ಪ್ರತಿ
ಬಿಂಬಿಸಿದವೋಲ್ ದಿವ್ಯ ರೂಪನಳವಡಿಸಿ ಜಗ
ದಂಬೆ ಜಾಹ್ನವಿ ಸಲಿಲ ಮಧ್ಯದಿಂದೆದ್ದು ಬಂದಾ ಜ್ವಾಲೆಯಂ ಕೇಳ್ದಳು || (, ೨೮)

ಹಿಂದೆ ತೆಗೆದುಕೊಂಡ ಉದಾಹರಣೆಯಲ್ಲಿ ಯುಕ್ತಿಯು ಚಿತ್ರಶೋಭೆಗೆ ಅಭರಣ ಪ್ರಾಯವಾಗಿತ್ತು; ಇದರಲ್ಲಿ ಆಭರಣಪ್ರಾಯವಾಗಿದೆ ಈ ಪದ್ಯವು ವರ್ಣೀಸುವ ಸ್ವರ್ಗೀಯ ಚಿತ್ರ ಅದರ ಪೂರ್ಣತೆಯಲ್ಲಿದೆ. ವಿಭಜನೆ ಮಾಡಿದರೆ ಅದು ಕೆಡುವುದು. ಪದ್ಯದ ಪೂರ್ವಾರ್ಧದ ಒಂದೊಂದು ಪದವನ್ನೂ ತೆಗೆದುಕೊಂಡು ಅಂಬುರುಹ ಎಂದರೆ ಮುಖ, ರೋಲಂಬ ಅಂದರೆ ಕೇಶ, ಮತ್ಸ್ಯ ಎಂದರೆ ಕಣ್ಣು ಎಂದು ಗಂಗೆಯ ಅವಯವ ಪಟ್ಟಿಯನ್ನು ನಿರ್ಣಯಿಸಬಹುದು. ಆದರೆ ಅದು ಕವಿಯ ಆಶಯವಲ್ಲ. ಇದೊಂದು ವಿಧವಾದ ಚಿತ್ರಶ್ಲೇಷೆ ಎಂದರೂ ಎನ್ನಬಹುದು. ಭಿನ್ನವೇಷವು ಅಭಿನ್ನಾವೇಶದಿಂದ ದೀಪ್ತವಾಗಿದೆ. ಇಲ್ಲಿರುವ ಚಿತ್ರ ರೂಪಕಲೆಗೆ (Realistic art) ಸೇರಿದುದಲ್ಲ; ಭಾವಕಲೆಗೆ (Idealistic art) ಸೇರಿದುದು. ಅಂಬುರುಹ ರೋಲಂಬ ಮೊದಲಾದುವುಗಳ ಸಮಾವೇಶವು ಸ್ತ್ರೀ ಸೌಂದರ್ಯ ಭಾವಸೂತ್ರದಿಂದ ಬಂಧಿತವಾಗಿ ಜಗದಂಬೆ ಜಾಹ್ನವಿಯ ಚಿತ್ರ ಆವಿರ್ಭವಿಸಿದೆ. ಆ ವಸ್ತುಗಳಸಂಸರ್ಗದಲ್ಲಿ ಸ್ಪಷ್ಟತೆ ಇಲ್ಲ. ಅದೊಂದು ಸ್ವರ್ಣಸ್ವಪ್ನದ  ಅರ್ಧ ಅಸ್ಫುಟವಾದ ವರ್ಣಪೂರ್ಣಚಿತ್ರ. ಅಂಬರುಹ ಎಂದರೂ ಎನ್ನಬಹುದು, ಮುಖವೆಂದರೂ ಎನ್ನಬಹುದು. ರೋಲಂಬ ರಾಜಿ ಕೇಶರಾಶಿಯಂತೆಯೆ ಇದೆ! ಅಥವಾ ಕೇಶರಾಶಿಯೂ ರೋಲಂಬ ರಾಜಿಯಂತೆ ಕಾಣುತ್ತಿರಬಹುದಲ್ಲದೆ? ಆ ಕಣ್ಣು! ಒಮ್ಮೆ ಮತ್ಸ್ಯದಂತೆ ತೋರಿ ಒಮ್ಮೆ ಕಣ್ಣಾಗುತ್ತಿದೆ! ಅಂತೂ ಚಿತ್ರ ಮನೋಜ್ಞವಾಗಿದೆ. ದೇವಿಯ ಸುಂದರಾಕೃತಿ ನದಿಯ ನಿರ್ಮಲೋದಕದಲ್ಲಿ ಪ್ರತಿಬಿಂಬಿಸಿದ್ದನ್ನೂ ಚಿತ್ರಿಸಿಕೊಂಡರೆ ಮನಸ್ಸು ಹರ್ಷೋನ್ಮತ್ತವಾಗದಿರದು! (ಸಂ. ೨೬. ಪ ೧೩, ೧೫ ಇವುಗಳನ್ನೂ ನೋಡಿ.)

ಕವಿ ಉಪಯೋಗಿಸಿರುವ ಕೆಲವು ಉಪಮಾಗಳು ಸೊಗಸಾದ ನಾಣ್ಣುಡಿಗಳಂತಿವೆ. ಆ ಗಾದೆಗಳಲ್ಲಿ ಜೀವ ತುಂಬಿದೆ. ಕೆಲವನ್ನಂತೂ ಓದಿದರೆ ನಗದಿರಲಾಗುವುದಿಲ್ಲ. ಮಡಿವಾಳದ ಬೇರಿನ ಸುವಾಸನೆಗೆ “ನಿಧಾನವನ್ ಅಭಾಗ್ಯಂ ಕಾಣದಿಪ್ಪಂತೆ” (ಸಂ. ೩, ಪ. ೩೦) ಅಳಿವ್ರಾತ ತಿರುಗುವುದಂತೆ! ಯೌವನಾಶ್ವನ ಕುದುರೆಯನ್ನು ಹೊತ್ತುಕೊಂಡು ಹೋಗುವ ಮೇಘನಾದನು ತನ್ನನ್ನು ಅಟ್ಟಿಬರುತ್ತಿದ್ದ ಶತ್ರುಗಳನ್ನು ನೋಡಿ “ಜೀವಮಂ ತೆಗೆದುಕೊಂಡೊಯ್ವ ಕಾಲನಂ ಪೆಣನಟ್ಟುವಂತಾಯ್ತಲಾ ನಿಮ್ಮ ಸಾಹಸಂ” (೪, ೧೬) ಎಂದು ಮೂದಲಿಸುತ್ತಾನೆ. ಸೌಭರಿ ಮನಿಯು ಯಾಗದ ಕುದರೆಯ ಬೆಂಗಾವಲಾಗಿ ಬಂದ ಫಲ್ಗುಣನನ್ನು ಕುರಿತು “ಹರಿ ಮನೆಯೊಳಿರೆ ಗರ್ದಭಾಕೃತಿಯ ಹರಿಯೊಡನೆ ಬಂದೆ, ಸುರಭೂಜಮಿರೆ ಶಾಲ್ಮಲಿಯ ನರಸುವಂತೆ” (ಸಂ ೧೦, ೧೯) ಎಂದು ಹಾಸ್ಯಮಾಡುತ್ತಾನೆ. ಅದೂ ಸಾಲದೆ,

ಕೊಟ್ಟಿಗೆಯ ಕಾಮಧೇನುವನೊಲ್ಲದಳ್ತಿಯಿಂ
ಕಟ್ಟರಣ್ಯದ ಪುಲಿಯನರಸಿ ಕರೆಯಲ್ಕೊದೆಯ ಕಟ್ಟುವೆಯಲಾ. . . . (ಸಂ. ೧೦, ೨೦)

ಎಂದೂ ಹೀಯಾಳಿಸುತ್ತಾನೆ. ಚಂಡಿಯನ್ನು ಮದುವೆ ಮಾಡಿಕೊಂಡ ಉದ್ದಾಲಕನಿಗೆ “ಮುಳ್ಳಿಡಿದ ಮರನೇರಿದಂತಾದುದು.” (ಸಂ. ೧೦, ೨೪) ಅಷ್ಟೇ ಅಲ್ಲ; ಇಹಪರಕದು ಒಳ್ಳಿತಾದಪುದೆ? ಬಂದುದು ತಪೋಹಾನಿ ಎಂದು “ಅಳ್ಳೆಯೊಳ್ ಕೋಲ್ಗೊಂಡ ತೆರದೊಳ್ ಉದ್ದಾಲಕಂ ಚಿಂತಿಪಂ ಪ್ರತಿದಿನದೊಳು.” (ಸಂ. ೧೦, ೨೪) ತನಗೆ ಮಾರಾಂತ ಸುರಥನಿಗೆ ಅರ್ಜುನನು “ತಲೆ ಬಲ್ಲಿತೆಂದು ಕಲ್ಲಂ ಪಾಯ್ವೆಲಾ (ಸಂ. ೧೪, ೯) ಎಂದು ಬುದ್ಧಿ ಹೇಳುತ್ತಾನೆ. ಚಂದ್ರಹಾಸನು ಕಾಡಿನಲ್ಲಿ ರೋದಿಸುತ್ತಿರಲು ಕಾಳ್ಮಿಗಗಳೆಲ್ಲಾ “ಕರುಬರಿದ್ದೂರಿಂದೆ ಕಾಡೊಳ್ಳಿತೆನಿಸುವಂತೆ” (ಸಂ. ೨೮, ೩೬) ಅರ್ಭಕನನ್ನು ಉಪಚರಿಸಿದುವಂತೆ!

ಭಾವ ಸಾದೃಶ್ಯದ ದೃಷ್ಟಿಯಿಂದಲೆ ಹೆಚ್ಚು ಮನೋಹರವಾಗಿ ಕಾಣುವ ಶೃಂಗಾರದ ಉಪಮೆಗಳನ್ನು ಕವಿ ಅಲ್ಲಿ ಇಲ್ಲಿ ಜೋಡಿಸಿದ್ದಾನೆ. ಭೀಮನು ಬೆಟ್ಟದಮೇಲೆ ನಿಂತು ಹೊಳಲ ಹೊರಗೆ ನೀರು ಕುಡಿಯಲೆಂದು ಬರುವ ಯೌವನಾಶ್ವ ಭೂಪನ ಎಲ್ಲ ಕುದುರೆಗಳನ್ನೂ ನೋಡಿ ನೋಡಿ ತನಗೆ ಬೇಕಾದ ಶ್ವೇತಾಶ್ವವು ಕಣ್ಣಿಗೆ ಕಾಣದಿರಲು

. . . . . ಪ್ರಣಯ ಕಲಹದೊಳ್
ಮುನಿದ ಕಾಂತೆಯ ಕುಪಿತ ವದನಾರವಿಂದದೊಳ್
ಮಿನುಗುವೆಳನಗೆ ತೋರುವನ್ನೆಗಂ ಚಿತ್ತದೊಳ್ ಕುದಿವ ನಾಗರಿಕನಂತೆ || (ಸಂ , ೨೧)

ಉದ್ವಿಗ್ನಚಿತ್ತನಾಗುತ್ತಾನೆ. ಭಗವಾನ್ ಸೂರ್ಯದೇವನು ದರ್ಶನೀಯವಾದ ಕೆಂಗೆಂಡದುಂಡೆಯಂತೆ ಪಡುವಣೆಡೆ ಇಂತಿದ್ದನಂತೆ:

(ಅನ್ನೆ)ಗಂ ಗಗನಮಣಿ ಪಶ್ಚಿಮಾಂಗನೆಯ ಬೈತಲೆಯ
ರಂಗು ಮಾಣಿಕದಂತೆ ಕಣ್ಗೆ ಕಾಣಿಸುತಿರ್ದುದಸ್ತಗಿರಿ ಮಸ್ತಕದೊಳು || (ಸಂ. , ೪೫)

ಇಲ್ಲಿ ಉಪಮಾನ ಸಂಗಗುಣದಿಂದ ಪ್ರೇಕ್ಷಕನು ಗಗನಮಣಿಯನ್ನು ಇನಿಯಳ ಬೈತಲೆಯ ರಂಗು ಮಾಣಿಕದಂತೆಯೆ ನೋಡಿ ಹರ್ಷಿಸುವನು. ಅಲ್ಲದೆ ಪ್ರಣಯ ಪ್ರೇಮವೂ ಸಂಧ್ಯಾಗಗನದಂತೆ ಅತಿರಾಗ ರಂಜಿತವಾದುದಲ್ಲವೆ? ಬೈಗುಗೆಂಪನ್ನು “ಅಪರದಿಗ್ವಧುವಿನಂಗ ಕುಂಕುಮ ಲೇಪವೋ” (ಸಂ. ೮, ೪೬) “ಸಂಜೆವೆಣ್ಣಟ್ಟ ರಕ್ತಾಂಬರವೊ” (ಸಂ. ೮, ೪೬) ಎಂದು ವರ್ಣಿಸಿದ್ದಾನೆ. ಸಂಜೆದಾರೆಗಳನ್ನು “ಬಿಚ್ಚಿವೆಣೆವಕ್ಕಿಗಳ ಹೃದಯಮಂ ಬೇಯಿಸುವ ಪೊಚ್ಚಪೊಸ ಕೆಂಡಂಗಳೆನೆ” ಎಂದೂ, “ತನ್ನ ಬಾಳುವೆಗೆ ನಚ್ಚಿನವಳ್ ಈ ರಾತ್ರಿವಧುವೆಂದು ಹಿಮಕರಂ ಮೆಚ್ಚಿ ಮುಂಗಳುಪಿದೆಳಮಾಣಿಕದ ಮಣಿಗಳೆನೆ” (ಸಂ. ೮, ಪ ೪೭) ಎಂದೂ ಶೃಂಗರಿಸಿದ್ದಾನೆ.

ಯಾವ ಯಾವ ಅನುಭವವಲಯಗಳಿಂದ ಲಕ್ಷ್ಮೀಶನು ಉಪಮಾನಗಳನ್ನು ಸೃಜಿಸಿದ್ದಾನೆ ಎಂಬ ವಿಚಾರಗಳನ್ನು ಸಂಕ್ಷೇಪವಾಗಿ ಪರಿಶೀಲಿಸಿದ್ದಾಯಿತು. ಒಂದೇ ಉಪಮೇಯಕ್ಕೆ ವಿವಿಧ ಪ್ರಪಂಚಗಳಿಂದ ಆಯ್ದ ಉಪಮಾನಗಳ ಮಾಲೆಯನ್ನು ಹೇಗೆ ತೊಡಿಸುತ್ತಾನೆ ಎಂಬುದನ್ನು ಒಂದೆರಡು ಉದಾಹರಣೆಗಳಿಂದ ವಿಮರ್ಶಿಸೋಣ. ದುಷ್ಟಬುದ್ಧಿಯ ಪ್ರೇರಣೆಯಂತೆ ಕೊಲೆಪಾತಕರು ಚಂದ್ರಹಾಸನನ್ನು ಅರಣ್ಯಕ್ಕೆ ಕೊಂಡೊಯ್ಯುತ್ತಿರಲು,

ಪಾತಕಿಗಳೊಡಲೊಳಿಹ ಪರಮಾತ್ಮನಂತೆ, ಯಮ
ದೂತರೆಳೆತಂದಜಾಮಿಳನಂತೆ, ಕಾಕಸಂ
ಘಾತದೊಳು ಸಿಕ್ಕಿರ್ದ ಕೋಗಿಲೆಯ ಮರಿಯಂತೆ, ನಲುಗಿ ಕತ್ತಲೆಯೊಳಿರ್ದ
ಶೀತಳ ಮರೀಚಿ ಲಾಂಛನದಂತೆ, ಬಹಳ ಕೋ
ಪಾತಿಶಯದೊಳಗಿಹ ವಿವೇಕದಂತಾಗ ಪಶು
ಫಾತಕಿಗಳೆತ್ತಿ ಕೊಂಡೊಯ್ದ ಬಾಲಕನಿರ್ದನವರೊಡಯೊಳಂಜುತಳುತೆ || (. ೨೮, ೩೧)

ಈ ಉಪಮಾನಮಾಲೆಯಲ್ಲಿ ಅಧ್ಯಾತ್ಮ ಪುರಾಣ ಪ್ರಕೃತಿ ಪ್ರಪಂಚಗಳು ಸೂರೆಯಾದಂತಿವೆ. ಬಣ್ಣದಮೇಲೆ ಬಣ್ಣ, ರೂಪದಮೇಲೆ ರೂಪ, ಭಾವದ ಮೇಲೆ ಭಾವಗಳು ತಾಂಡವಾಡುವಂತಿವೆ. ಪುಂಖಾನುಪುಂಖವಾಗಿ ಹಾರಿ ಬರುವ ಉಪಮಾ ಸುಮಬಾಣಗಳಲ್ಲಿ ಒಂದಾದ ಮೇಲೆ ಇನ್ನೊಂದು ಅಥವಾ ಒಂದು ತಪ್ಪಿದರೆ ಮತ್ತೊಂದು ಸಹೃದಯ ರಾಗರಸಕೋಶವನ್ನೂ ಪ್ರವೇಶಿಸದಿರುವುದಿಲ್ಲ.

ಕುಳಿಂದನು ಚಂದ್ರಹಾಸನನ್ನು ಚಂದನಾವತಿಗೆ ಕರೆತರಲು

ಕತ್ತಲೆಯ ಮನೆಗೆ ಮಣಿದೀಪದಂತೆ ಸಲೆ
ಬತ್ತಿದ ಸರೋವರಕೆ ನವ ಜಲಮೊದವಿದಂತೆ
ಬಿತ್ತರದ ಕಾವ್ಯರಚನೆಗೆ ದೇವತಾಸ್ತುತಿ ನೆಗಳ್ದಂತೆ ಭೂತಳದೊಳು
ಮತ್ತೆ ಸಂತಾನವಿಲ್ಲದ ಕುಳಿಂದನ ಬಾಳ್ಕೆ
ಗುತ್ತಮ ಕುಮಾರನಾದಂ ಚಂದ್ರಹಾಸನೆನ
ಲುತ್ತರೋತ್ತರಮಪ್ಪುದಚ್ಚರಿಯೆ ಸುರಪುರದ ಲಕ್ಷೀವರನ ಭಕ್ತರು || (ಸಂ. ೨೮, ೬೩)

ಪದ್ಯದಲ್ಲಿರುವ ಉಪಮಾನಮಂಜರಿಯಲ್ಲಿ ಉಷ್ಣ, ಪ್ರಕಾಶ, ಶೈತ್ಯ, ಪರಿಪೂರ್ಣತೆ, ಶುಭ, ಸಂಪತ್ತು, ಮೊದಲಾದ ಸುರಚಿರ ಸುಮಗಳು ಎಷ್ಟು ಮನೋಹರವಾಗಿ ಎಂತಹ ಕೌಶಲದಿಂದ ಖಚಿತವಾಗಿವೆ! ಕುಳಿಂದನಿಗೆ ಮಾತ್ರವೆ ಅಲ್ಲ, ನಮ್ಮೆದೆಗೂ ಬೆಳಕು ಬಂದಂತಾಗುವುದು; ಬತ್ತಿದ ಕೊಳಕ್ಕೆ ಮಳೆನೀರು ತುಂಬುವಂತೆ ನಮ್ಮೆದೆಗೂ ತಣ್ಪುಹರಿದು ತುಂಬುವುದು; ದೇವತಾ ಸ್ತುತಿ ಮಾಡಿದಂತೆ ನಮ್ಮೆದೆಗೂ ಮಂಗಳ ಮೈದೋರುವುದು!

ಯುದ್ಧರಂಗಗಳಲ್ಲಿ ಸೈನಿಕರ ನುಗ್ಗಾಟ ಹೋರಾಟಗಳನ್ನು ಕವಿ ಹೀಗೆಂದು ವರ್ಣಿಸುತ್ತಾನೆ.

ಮಗ್ಗಿದರ್ ಮಸಗಿದಂಬುಧಿಯ ತೆರೆಯುಂತೆ, ಸಲೆ
ಮುಗ್ಗಿದರ್ ಮುಗಿದ ಮೊಗ್ಗರದಂತೆ, ಭೋಕರಿಸು
ತೊಗ್ಗಿದರ್ ಕವಿದು ಜೇನ್ನೊಣದಂತೆ, ಪೊಯ್ದಾಡಿ ರಿಪುಸೈನ್ಯಕಾನನವನು
ನೆಗ್ಗಿದರ್ ನೆಲೆಗೆಡಿಸಿ ಬಿರುಗಾಳಿಯಂತೈದೆ
ನುಗ್ಗಿದರ್ ನುಚ್ಚುನುರಿಯಾಗೆ ಬರಸಿಡಿಲಂತೆ
ಹಿಗ್ಗಿದರ್ ಪೆಚ್ಚಿ ವೀರಾವೇಶದಿಂದೆ ಪಟು ಭಟರಾಗಳಾಹವದೊಳು || (, ೩೨)

ಒಂದೊಂದು ಉಪಮಾನವೂ ಒಂದೊಂದು ಚಿತ್ರವನ್ನು ಮನಸ್ಸಿಗೆ ತರುತ್ತದೆ. ಹತ್ತಾರು ಭಾವಗಳ ಸಹಾಯದಿಂದ ಸಮರವು ಭಯಂಕರವಾಗುತ್ತದೆ. ಇಂತಹ ಉಪಮಾನ ಮಾಲೆಗಳು ಲಕ್ಷ್ಮೀಶನ ಕಾವ್ಯದಲ್ಲಿ ಅನೇಕವಾಗಿವೆ. ಅವುಗಳಿಂದ ಕಾವ್ಯದ ಭಾವಪುಷ್ಟಿಗೆ ಎಷ್ಟೋ ಸಹಾಯ ಒದಗಿದೆ.

ಅನೇಕವೇಳೆ ಕವಿ ಉಪಮೇಯದ ವಿವಿಧ ಮುಖಗಳನ್ನು ಸಾವಯವ ಉಪಮಾನದ ಸಹಾಯದಿಂದ ಚಿತ್ರಿಸುತ್ತಾನೆ. ಅಂದರೆ ಉಪಮಾನಗಳನ್ನೋ ಅಥವಾ ತದ್ರೂಪಾಂತರವಾದ ರೂಪಗಳನ್ನೋ ಅವಯವಗಳನ್ನಾಗುಳ್ಳ ಪೂರ್ಣವ್ಯಕ್ತಿತ್ವವಿರುವ ಉಪಮಾನವೊಂದನ್ನು ನಿರ್ಮಿಸಿ ಅದನ್ನು ಉಪಮೇಯದೊಂದಿಗೆ ಅನ್ವಯಮಾಡಿ ಸಾದೃಶ್ಯಸಂಪತ್ತಿ ಹೊಳೆಯುವಂತೆ ಮಾಡುತ್ತಾನೆ.

ಕಡುಗಂಪೆಸೆವ ತಳಿರ ತನಿಗೆಂಡಮಂ ಕಲಕಿ
ನಡೆದು. ಮೊನೆಮುಗುಳ ಶಸ್ತ್ರಂಗಳಂ ಪಾಯ್ದು, ಮಾ
ಮಿಡಿಯ ಜೊಂಪದ ವಜ್ರಮುಷ್ಟಿಯಂ ಜಡಿದು, ಲತೆಗಳ ಕೊನರ ಚಾಟಿಯಿಂದ
ಬಡಿದು, ಕೋಗಿಲೆಯ ನಿಡುಸರದ ಬೊಬ್ಬೆಯೊಳಾರ್ದು
ಬಿಡದೆ ವನದೇವಿಯೋಲಗದೊಳುತ್ಸವದಿಂದ
ಮಡಿಗಡಿಗೆ ತುಣಗೊಂಡವನಂತೆಸೆವ ಮಂದಮಾರುತನ ನೋಡೆಂದನು || (, ೩೨)

ಇಲ್ಲಿ ಮಂದಮಾರುತನನ್ನು ತೂಣಗೊಂಡವನಿಗೆ ಹೋಲಿಸಿದ್ದಾನೆ. ಇವೆರಡೂ ಪೂರ್ಣಚಿತ್ರಗಳು. ತೂಣಗೊಂಡವನ ಕ್ರಿಯೆಗಳನ್ನು ವರ್ಣಿಸುವಾಗ ಕವಿ ಮಂದಮಾರುತನ ಕ್ರಿಯೆಗಳನ್ನೂ ಹೇಳುತ್ತಾನೆ. ತಳಿರ ತನಿಗೆಂಡ, ಮೊನೆ ಮುಗುಳ ಶಸ್ತ್ರ, ಮಾಮಿಡಿಯ ಜೊಂಪದ ವಜ್ರಮುಷ್ಟಿ, ಲತೆಗಳ ಕೊನರ ಚಾಟಿ, ಮೊದಲಾದ ಪದಗುಂಫನಗಳಲ್ಲಿ ಪೂರ್ವಭಾಗವು ಮಾರುತನಿಗೂ ಉತ್ತರಭಾಗವು ತೂಣಗೊಂಡವನಿಗೂ ಅನ್ವಯವಾಗುವುದು. ಕಲಕಿ, ನಡೆದು, ಪಾಯ್ದು, ಜಡಿದು, ಬಡಿದು, ಆರ್ದು ಈ ಪದಗಳು ಉಪಮಾನ ಉಪಮೇಯಗಳೆರಡಕ್ಕೂ ಸೇರುತ್ತವೆ. ಅದರಿಂದ ಓದುವವರಿಗೆ ಮೈಮೇಲೆ ಬಂದವನ ಚಿತ್ರಮಾತ್ರವೆ ಅಲ್ಲ, ಸಮಗ್ರ ವಸಂತವನದ ಚಿತ್ರವೂ ಗೋಚರವಾಗುತ್ತದೆ.

ಇದರಿಂದ ಸಂಪೂರ್ಣ ಭಿನ್ನವಾದ ಇನ್ನೊಂದು ಸನ್ನಿವೇಶವನ್ನು ತೆಗೆದುಕೊಳ್ಳೋಣ. ಮಯೂರಧ್ವಜನಿಗೆ ಕೃಷ್ಣನು ಪ್ರತ್ಯಕ್ಷನಾದಾಗ ಹೀಗೆ ಕಾಣಿಸಿತಂತೆ.

ಹೇಮಾಂಬರದ ಲಲಿತಕಾಂತಿ ಹೊಳೆಹೊಳೆವ ಸೌ
ದಾಮಿನಿಯವೊಲಿರೆ, ಪೊರೆದ ಕರುಣಾರಸಂ ಸು
ಧಾಮಯದ ಮಳೆಯವೊಲಿರೆ, ನುಡಿವ ಗಂಭೀರ ವಾಕ್ಯಂ
ಕೂಡೆ ಮೊಳಗುವೊಲಿರೆ,
ಕೋಮಲ ಶ್ಯಾಮ ಲಾವಣ್ಯತನು ಮುಂಗಾರ
ಜೀಮೂತದೊಡ್ಡಿನವೊಲಿರೆ, ಪಿರಿದು ನಲಿಯದಿಹ
ನೇ ಮಯೂರಧ್ವಜಂ ಪೇಳೆನಲ್ ಕೃಷ್ಣನಂ ಕಂಡು ಪುಳಕಿತನಾದನು || (೨೬, ೫೯)

ಇಲ್ಲಿ ಮಯೂರಧ್ವಜಂ ಎಂಬ ಪದ್ಯದಲ್ಲಿ ಕವಿಗಿರುವ ಶ್ಲೇಷಾರ್ಥಪ್ರಿಯತೆಯನ್ನು ಮೂಲೆಗೊತ್ತಿ ಉಪಮಾನ ಉಪಮೇಯಗಳನ್ನು ಪರಿಶೀಲಿಸೋಣ. ಶ್ರೀಕೃಷ್ಣನು ವರ್ಷಾಗಮನದಂತೆ ರಂಜಿಸಿದನೆಂದು ಹೇಳುವುದು ಕವಿಯ ಆಶಯ. ಶ್ರೀಕೃಷ್ಣನೂ ವರ್ಷಾಗಮನವೂ ಎರಡೂ ವೈಶಿಷ್ಟ್ಯವಿರುವ ಚಿತ್ರಗಳು, ಎರಡೂ ಸಾವಯವವಾದುವು. ಅವಯವಗಳಿಗಿರುವ ಸಾದೃಶ್ಯವನ್ನು ಕವಿ ಪದ್ಯದದಲ್ಲಿ ವ್ಯಕ್ತವಾಗಿಯೆ ಹೇಳಿಬಿಟ್ಟಿದ್ದಾನೆ. ಹಿಂದಿನ ಪದ್ಯದಲ್ಲಿದ್ದಂತೆಯೆ ಸಾದೃಶ್ಯವು ರೂಪಕದಲ್ಲಿ ಹುದುಗಿಲ್ಲ. ಶ್ರೀಕೃಷ್ಣನ ಚಿತ್ರವು ವರ್ಷಾಗಮ ಚಿತ್ರದ ಸಾಮ್ಯದಿಂದ ಭವ್ಯರಮಣೀಯವಾಗಿದೆ.

ಲಕ್ಷ್ಮೀಶನ ಕಾವ್ಯಮಹಾವನದಲ್ಲಿ ಸೀಗೆಯ ಮೆಳೆಯ ಕಂಟಕಕ್ಷತಕ್ಕೆ ಸಿಲುಕದೆ ನಡೆದು ಉಪಮಾ ಮಯೂರಗಳ ಸುರಮ್ಯನರ್ತನವನ್ನು ಕಣ್ಣು ತುಂಬಿ ನೋಡಿದ್ದಾಯಿತು. ವನವಿಹಾರಾನಂತರ ಕವಿಚೈತ್ರವನಚೂತನಿಗೆ ಉಪಮಾಲೋಲನೆಂಬ ಬಿರುದನ್ನು ನಿವೇದಿಸಬಹುದೆಂದು ವಾಚಕರು ಮನಗಂಡಿರಬಹುದು. ಲಕ್ಷ್ಮೀಶ ‘ಉಪಮಾಲೋಲ’ ಎಂಬುದು ನಿರ್ವಿವಾದವಾಗಿ ಸಿದ್ಧಾಂತಗೊಂಡಿದೆ!

ಆದರೆ ಮರೆತ ಮಾತೊಂದಿದೆ. ವನವಿಹಾರ ಮುಗಿದುದೆಂದೂ, ನೋಡಬೇಕಾದುದೆಲ್ಲವನ್ನೂ ನೋಡಿದೆವೆಂದೂ, ಇನ್ನು ಪ್ರೇಕ್ಷಣೀಯವಾದುದು ಯಾವುದೂ ಇಲ್ಲವೆಂದೂ ಯಾರು ತಿಳಿಯಬಾರದು. ಈ ಪ್ರಬಂಧ ಮಾರ್ಗದರ್ಶಕ ಮಾತ್ರವಾದುದು. ಈ ವಿಹಾರಯಾತ್ರೆ ಮುಂದೆ ಎಲ್ಲರೂ ಅವಶ್ಯವಾಗಿ ಮಾಡಲಿರುವ ನೂರಾರು ಯಾತ್ರೆಗಳಿಗೆ ಪೀಠಿಕಾಪ್ರಾಯ ಮಾತ್ರವಾಗಿದೆ.

ಪ್ರತಿಭೆಯಿಂದ ಹೊರಹೊಮ್ಮಿದ ಕಾವ್ಯ ಅಕ್ಷಯಪಾತ್ರೆಯಂತೆ ಸರ್ವದಾ ಸಂಪೂರ್ಣವಾದುದು, ಚಿರನೂತನವಾದುದು. ಅಂತಹ ಅಕ್ಷಯ ರಸಪಾತ್ರೆಗೆ ಮೇರೆ ಕಲ್ಪಿಸಿದರೆ ಅದರಿಂದ ನಮ್ಮ ಕ್ಷುದ್ರಹೃದಯದ ದಾರಿದ್ರವನ್ನು ನಾವೆ ಸೂಚಿಸಿದಂತಾಗುವುದೆ ಹೊರತು ರಸಪಾತ್ರೆಯ ಮಹೌದಾರ್ಯಕ್ಕೆ ಕಾರ್ಪಣ್ಯ ದೋಷಾರೋಪಣೆ ಮಾಡಿದಂತಾಗುವುದಿಲ್ಲ.

(೧೯೩೩)


* ಲೇಖನ ಸದ್ಯದ ಮನೋಧರ್ಮದ ಕಾವ್ಯಮಿಮಾಂಸೆಯಲ್ಲಿ ಈ ವಿಮರ್ಶೆ ತುಸು ತಿದ್ದುಪಡೆದಿದೆ: ‘ತಪೋನಂದನ’, ‘ರಸೋ ವೈ ಸಃ’ ನೋಡಿ.

# ಅದಕ್ಕೆ ಕಾರಣ ಪುರಾಣದ ಉಪಮೆ ಚರ್ವಿತ ಚರ್ವಣವಾಗಿರುವುದರಿಂದಲೆ ಹೊರತು ಬೇರೆಯಲ್ಲ.

* ‘ರಸೋ ವೈ ಸಃ’ ಗ್ರಂಥದಲ್ಲಿ “ಸಾಹಿತ್ಯದಲ್ಲಿ ಪ್ರತಿಮಾ” ಎಂಬ ಪ್ರಬಂಧವನ್ನು ನೋಡಿದರೆ ಅವುಗಳ ಭಾವೋಪಯೋಗದಿಂದೊದಗುವ ಕಾವ್ಯಪ್ರಯೋಜನ ತಿಳಿಯುತ್ತದೆ.