ಕಾವ್ಯಕ್ಕೂ ಅಲಂಕಾರಗಳಿಗೂ ಇರುವ ಪ್ರಣಯವು ಚಿತ್ರಕಲೆಗೂ ವರ್ಣಗಳಿಗೂ ಇರುವ ಪರಸ್ಪರಾನುರಾಗದಂತೆ ಚಿರಸಂಯುತವಾದುದು. ವರ್ಣಶಿಲ್ಪಿಯ ಬಾವಪ್ರಕಾಶನಕ್ಕೆ ಬಣ್ಣಗಳ ಸಹಕಾರ ಸ್ನೇಹಗಳು ಎಷ್ಟರಮಟ್ಟಿಗೆ ಆವಶ್ಯಕವೋ ಹಾಗೆಯೆ ಕವಿಯ ಆತ್ಮದ ಸುರುಚಿರಾನುಭವಗಳ ಸುಂದರಾವಿರ್ಭಾವಕ್ಕೆ ಅಲಂಕಾರಗಳು ಆವಶ್ಯಕ. ಒಂದೇ ಮಾತಿನಲ್ಲಿ  ಹೇಳುವುದಾದರೆ ಕಾವ್ಯವೆಂಬುದೆಲ್ಲ ಅಲಂಕೃತಾನುಭವ ಎಂದು ಹೇಳಬಹುದು. ಮಾನವನ ಅನುಭವಗಳನ್ನು ಹಾಗೆ ಹಾಗೆಯೆ ತೆಗೆದುಕೊಂಡು ಶಸ್ತ್ರಚಿಕಿತ್ಸೆ ಮಾಡುವಂತೆ ವಿಭಜನೆಮಾಡಿ ಅವುಗಳ ನಗ್ನಸ್ವರೂಪವನ್ನೂ ನಿರ್ಣಯಿಸುವುದು ವಿಜ್ಞಾನಸಾಸ್ತ್ರದ ಕರ್ತವ್ಯಕಾರ್ಯ. ಆ ಅನುಭವಗಳನ್ನು ನಮಗೆ ಸಂಬಂಧಪಟ್ಟ ರೀತಿಯಲ್ಲಿ ಸಂಗ್ರಹಿಸಿ ಅವುಗಳ ಕುರೂಪವನ್ನು ಆವರಿಸಿ ಸುರೂಪಗಳನ್ನು ವಿಕ್ಷೇಪಿಸಿ ಅವುಗಳ ಪರಮಾರ್ಥ ಸ್ವರೂಪವು ಹೊಳೆಯುವಂತೆ  ಮಾಡುವುದು ಕಾವ್ಯದ ಲೀಲಾಕಾರ್ಯ. ಎಂದರೆ ವಿಜ್ಞಾನದ ಕಾರ್ಯ ಸತ್ಯಶೋಧನೆ. ಕಾವ್ಯದ ಕಾರ್ಯ ಸೌಂದರ್ಯ ಸಾಧನೆ. ವಿಚಾರಮಾಡಿ ನೋಡಿದರೆ ಅಂತಿಮ ಸಿದ್ಧಿಯು ವಿಜ್ಞಾನ ಮತ್ತು ಕಾವ್ಯಗಳಿಗೆ ತದತೀತವಾದ ಆ ಸತ್ಯ ಮತ್ತು ಸೌಂದರ್ಯಗಳ ತದಾತ್ಮ್ಯತೆಯಲ್ಲಿದೆ; ಮತ್ತು ಅದರಿಂದ ಪ್ರಾಪ್ತವಾಗುವ ಪರಮ ಸಾಯುಜ್ಯದಲ್ಲಿ ನೆಲೆಗೊಂಡಿದೆ. ಆ ಸ್ಥಿತಿಯಲ್ಲಿ ಸತ್ಯವು ಸೌಂದರ್ಯದ ಆಚಾರವಾಗಿರುತ್ತದೆ; ಸೌಂದರ್ಯವು ಸತ್ಯದ ಆಚಾರ್ಯನಾಗಿರುತ್ತದೆ; ಸತ್ಯ ಸೌಂದರ್ಯಗಳಿಗೆ ಅಭೇದ ಭಾವ ಉಂಟಾಗುತ್ತದೆ.

ಸತ್ಯಬೋಧಕವಾದರೂ ಸೌಂದರ್ಯಸಾಧಕವಾದ ಕಾವ್ಯದ ಭಾಷೆ ಸಂಪೂರ್ಣವಾಗಿ ಆಲಂಕಾರಿಕವಾದುದು. ಮನುಷ್ಯನಿಗೆ ಆತ್ಮ, ಗುಣ, ರೂಪ, ಭೂಷಣಗಳಿರುವಂತೆಯೆ ಕಾವ್ಯಕನ್ನಿಕೆಗೂ ಇರುವುವು. ಮಹಾತ್ಮನಾದವನಲ್ಲಿ ಮಹಾಗುಣಗಳಿದ್ದೇ ಇರುವುವು. ಮಹಾಗುಣಗಳೇ ಮಹಾತ್ಮ್ಯೆಗೆ ಸಾಕ್ಷಿ. ಅಂದರೆ ತತ್ವತಃ ಆತ್ಮ ಮತ್ತು ಗುಣಗಳನ್ನು ಬೇರೆ ಬೇರೆಯಾಗಿರುವಂತೆ ಭಾವಿಸಿದರೂ ವಸ್ತುತಃ ಅವೆರಡನ್ನೂ ಏಕಮಾತ್ರವಾದ ಅವಿಭಕ್ತತತ್ವದ ಅವಯವ ಅಥವ ಅಂಶಗಳೆಂದು ತಿಳಿಯುತ್ತೇವೆ. ರೂಪ ಮತ್ತು ಭೂಷಣಗಳು ಗೌಣವಾದುವು. ಅದರಲ್ಲಿಯೂ ರೂಪಕ್ಕಿಂತಲೂ ಭೂಷಣ ಹೆಚ್ಚು ಗೌಣವಾದುದು. ಮಹಾ ಗುಣಗಳಿರುವ ಮಹಾತ್ಮನು ಕುರೂಪಿಯಾದರೂ ಲೋಕಪೂಜ್ಯನಾಗುವನು. ಭೂಷಣಗಳಂತೂ ಆತನಿಗೆ ಬೇಡವೇ ಬೇಡ. ಹೀಗೆನ್ನುವುದರಿಂದ ಮಹಾತ್ಮನಿಗೆ ಸ್ಫುರದ್ರೂಪವಿರಬಾರದೆಂದು, ಆತನು ಭೂಷಣಗಳನ್ನು ಧರಿಸಬಾರದೆಂದೂ ಅಭಿಪ್ರಾಯವಲ್ಲ. ಅವುಗಳ ಅಭಾವದಿಂದ ಅವನ ವ್ಯಕ್ತಿತ್ವಕ್ಕೆ ಕೊರತೆಯಿಲ್ಲ ಎನುವುದಷ್ಟೆ ನಮ್ಮ ಭಾವ. ಅಷ್ಟೇ ಅಲ್ಲದೆ ಆತನಿಗೆ ಸ್ಫುರದ್ರೂಪವಿದ್ದು ಮಿತಭೂಷಣಧಾರಿಯಾದರೆ ಆತನು ಜನತೆಗೆ ಇನ್ನೂ ಹೆಚ್ಚು ಪ್ರಿಯನಾದರೂ ಆಗಬಹುದು. ಸಾಕ್ರೇತಿಸನಿಗೆ ಸ್ಫುರದ್ರೂಪವಿದ್ದಿದ್ದರೆ ಅದರಿಂದ ಅವನಿಗೆ ಸಾಧಕವಾಗುತ್ತಿತ್ತೇ ಹೊರತು ಬಾಧಕವಾಗುತ್ತಿರಲಿಲ್ಲ. ಆತನ ಸಂಭಾಷಣೆಯನ್ನು ಪ್ರೀತಿಯಿಂದ ಓದುವವರು ಆತನ ಚಿತ್ರವನ್ನೂ ಹರ್ಷದಿಂದ ಅವಲೋಕಿಸುತ್ತಿದ್ದರು.

ಮಹಾತ್ಮನಲ್ಲದೆ ಸಾಮಾನ್ಯ ಗುಣ ಉಳ್ಳವನಲ್ಲಿ ಅತಿ ಸೌಂದರ್ಯವಿದ್ದರೆ ಅವನು ಪೂಜ್ಯನಾಗದಿದ್ದರೂ ತ್ಯಾಜ್ಯನಾಗನು ಎಂದು ಹೇಳಬಹುದು. ಅಲ್ಲದೆ ಸೌಂದರ್ಯಾನುರಾಗಿಗಳಾದ ಅನೇಕರಿಗೆ ಅವನು ಪ್ರೀಯವಾಗುವುದರಲ್ಲಿ ಸಂದೇಹವಿಲ್ಲ.  ಸುವಾಸನೆ ಇಲ್ಲದ ಎಷ್ಟೋ ಅರಣ್ಯ ಪುಷ್ಫಗಳು ತಮ್ಮ ಬರಿಯ ನಯನ ಮನೋಹರವಾದ ವರ್ಣಪೂರ್ಣ ಸೌಂದರ್ಯದಿಂದಲೇ ನಗರದ ಉಪವನಗಳಲ್ಲಿ ಸ್ಥಾನ ಸಂಪಾದನೆ ಮಾಡುವುದಿಲ್ಲವೇ? ಮಹಾತ್ಮನೂ ಅಲ್ಲದೆ ಗುಣರೂಪಗಳೂ ಒಂದೂ ಇಲ್ಲದೆ ವಿರೂಪಿಯೂ ಅನಾಗರಿಕನೂ ಆದ ಮನುಷ್ಯನು ತನಗೆ ವಿಪುಲೈಶ್ವರ್ಯವಿರುವ ಪಕ್ಷದಲ್ಲಿ ಭೂಷಣಗಳಿಂದಲೆ ಮೆರೆದು ಜನಗಳನ್ನು ಆಕರ್ಷಿಸುತ್ತಾನೆ. ಇದು ಅತ್ಯಂತ ಅಧಮ ಶ್ರೇಣಿಗೆ ಸೇರಿದ ಆಕರ್ಷಣೆ. ಇದರಿಂದ ಆಕರ್ಷಿತರಾಗುವವರೂ ಕುರುಚಿಯುಳ್ಳ ಪಾಮರರು ಅಥವ ಧನಪಿಶಾಚ ಹಿಡಿದ ಲೋಭಿಗಳು.

ಪೂರ್ವೋಕ್ತ ವಿಭಜನೆ ಕಾವ್ಯಪ್ರಪಂಚಕ್ಕೂ ಚೆನ್ನಾಗಿ ಸಲ್ಲುತ್ತದೆ. ಕಾವ್ಯಕ್ಕೂ ಆತ್ಮ, ಗುಣ, ರೂಪ, ಭೂಷಣಗಳಿವೆ . ಪರಸ್ಪರೋಪಜೀವಿಗಳಾದ ಆತ್ಮ ಮತ್ತು ಗುಣ ಬಹು ಮುಖ್ಯವಾದುವು. ರೂಪದ ಶ್ರೇಷ್ಠತೆ ಆತ್ಮದ ಮತ್ತು ಗುಣದ ಸಹವಾಸದಿಂದ ನಿರ್ಣಿತವಾಗುತ್ತದೆ. ಭೂಷಣವು ಕೊನೆಯದು. ಕಾವ್ಯಕ್ಕೆ ಭಾವ ಆನಂದ ಆವೇಶಷಗಳೆ ಆತ್ಮ. ಉಪಮಾ ಮೊದಲಾದ ಅರ್ಥಾಲಂಕಾರಗಳೆ ಗುಣ. ಕೃತಕವಾಗಿರದೆ ಆತ್ಮ ಮತ್ತು ಗುಣಗಳಿಗೆ ವಿಧೇಯವಾಗಿ ಅವುಗಳನ್ನನುಸರಿಕೊಂಡು ಬರುವ ಸ್ವಾಭಾವಿಕ ಸರಳ ಪದಸರಣಿಯೆ ರೂಪ. ಗಾಯಕನ ಕಂಠದಿಂದ ಹೊರಮೂಡುವ ಸ್ವರ್ಗಿಯ ಸುಮಧುರವಾದ ಸ್ವರ ತರಂಗ ಮಾಲೆಗಳನ್ನು ಮುಚ್ಚಿ ಮುಸುಕಿ ನಾಯಕನಿಗಿಂತಲೂ ತಾನೆ ಪ್ರಧಾನವೆಂಬಂತೆ ಉಚ್ಚಘೋಷದಿಂದ ಮರ್ಯಾದೆ ಮೀರಿ ಒರಲಿ ಚೀರುವ ಹಾರ್ಮೋನಿಯಮ್ಮಿನಂತೆ ಕಾವ್ಯದ  ಆತ್ಮ ಮತ್ತು ಗುಣಗಳನ್ನು ಹಿಂದಕ್ಕೆ ಮರೆಯಿಸಿ, ಮುಂದೆ ಮುಗ್ಗಿ, ಧಿಮಿ ಧಿಮಿ ಕುಣಿದು, ಅಂತಂಗದ ವೈಭವದ ನಿದರ್ಶನಗಳಾಗುವ ನಮ್ರ ಕರ್ತವ್ಯಕ್ಕೆ ತಿಲಾರ್ಪಣವಿತ್ತು ಪಾಂಡಿತ್ಯ ಮಾತ್ರ ಪ್ರದರ್ಶಕಗಳಾಗಿ ಶಬ್ಧಾಲಂಕಾರಗಳೆಂದು ಮೆರೆಯುವ ಶಬ್ಧವ್ರಜವೆ ಭೂಷಣ. ಈ ಭೂಷಣವು ತನ್ನಳವರಿತು ವಿನೀತವಾಗಿ ನಾಗರಿಕವಾಗಿದ್ದರೆ ಸ್ಫುರದ್ರೂಪವಾಗಿ ಪರಿಣಮಿಸುವುದು . ಇಲ್ಲದಿದ್ದರೆ ಅಂಗೋಪಾಂಗಗಳಲ್ಲಿ ಬೀದಿವರಿವ ಕರ್ಪದಕಮಾಲಾ ಕೀರ್ಣವಾದ ಲಂಬಾಣಿ ಹೆಂಗಸರ ಆಶ್ಲೀಲವಾದ ಸೌಂದರ್ಯನಾಮಕ ವೇಷದಂತೆ ಅಸಹನೀಯವಾಗುವುದು.

ಉತ್ತಮ ಶ್ರೇಣಿಗೆ ಸೇರುವ ಕಾವ್ಯಕ್ಕೆ ಆತ್ಮಪ್ರಾಯವಾದ ಭಾವ ಆನಂದ ಆವೇಶಗಳೂ, ಗುಣಪ್ರಾಯವಾದ ಉಪಮೆ ಉತ್ಪ್ರೇಕ್ಷೆರೂಪಕಾದಿ ಅರ್ಥಾಲಂಕಾರಗಳೂ  ಇರಲೆಬೇಕು. ರೂಪಪ್ರಾಯವಾದ ಒಳ್ಳೆಯ ಶೈಲಿಯೂ ಇದ್ದರೆ, ಅದು ಮತ್ತೂ ಮನೋಹರವಾಗುವುದು. ಭೂಷಣಪ್ರಾಯವಾದ ಯಮಕ, ಅನುಪ್ರಾಸ, ಪ್ರತ್ಯನುಪ್ರಾಸ ಮೊದಲಾದ ಶಬ್ದಾಲಂಕಾರಗಳೂ ಗಾಂಭೀರ್ಯ ಕೆಡದಂತೆ ಬಹಳ ಮಿತವಾಗಿದ್ದರೆ ಆ ಕಾವ್ಯವೂ ಆದರ್ಶದ ಸೀಮೆಗೇರುವುದರಲ್ಲಿ ಸಂದೇಹವಿಲ್ಲ.

ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಇದುವರೆಗೂ ಮೇಲೆ ಹೇಳಿದ ಎಲ್ಲಾ ಗುಣಗಳಿಗೂ ಎಲ್ಲಾ ದೋಷಗಳಿಗೂ ಯಥೇಚ್ಛವಾಗಿ ಉದಾಹರಣೆಗಳು ದೊರೆಯುತ್ತವೆ. ಗುಣದೋಷಗಳು ಸಮತೂಕವಾಗಿವೆ ಎಂದರೂ ಅಸತ್ಯವಾಗದು. ಹೀಗಾಗಲು ಹಲವು ಕಾರಣಗಳಿವೆ.ಮೊದಲೆಯದಾಗಿ ಆತನು ಪಂಡಿತ ಕವಿ. ವಿದ್ವತ್ ಸಭಾ ನೀರೇರುಹಾಕರದಲ್ಲಿ ಝೇಂಕರಿಸಲೆಂದು (ಪೀ. ೧೨) ಷಟ್ಟದಿಗಳನ್ನು ಬರೆದಿದ್ದಾನೆ. ಎರಡನೆಯದಾಗಿ ಆತನು ಸಾಹಿತ್ಯ ಪ್ರಕಾರದಲ್ಲಿ ಆಗುತ್ತಿದ್ದ ಯುಗಪರಿವರ್ತನೆಯ ಕಾಲಕ್ಕೆ ಸೇರಿದವನಾದುದರಿಂದ ಅರ್ಧ ಸ್ವಾತಂತ್ರ್ಯ ಮಾರ್ಗಾವಲಂಬಿಯೂ ಅರ್ಧ ಸಿದ್ಧಾಂತ ಮಾರ್ಗಾವಲಂಬಿಯೂ ಅಗಿದ್ದಾನೆ. (ಪೀ. ೬, ೭ ೧೦) ಮೂರೆನೆಯದಾಗಿ ಆತನ ಕಾವ್ಯದ ವಿಷಯವು ಬರಿಯ ಸಮರ ಸಮಾಕೀರ್ಣವಾದ ಆಶ್ವಮೇಧವಾಗಿದೆ. ಆದ್ದರಿಂದಲೆ ಕವಿಯು ನಾನಾ ಉಪಾಯಾಂತರ ಗಳಿಂದ ಉಪಕಥೆಗಳ ಮೇಲೆ ಉಪಕಥೆಗಳನ್ನು ತಂದುಕೊಂಡು ತಾನೂ ಬದುಕಿಕೊಂಡುದಲ್ಲದೆ ಕಾವ್ಯವನ್ನೆ ಉಪಖ್ಯಾನಗಳ ಗೊಂಚಲನ್ನಾಗಿ ಮಾಡಿಬಿಟ್ಟಿದ್ದಾನೆ. ನಾಲ್ಕನೆಯದಾಗಿ ಆತನ ಕೃತಿ ವಿಸ್ತಾರವಾಗಿದೆ. ಸುಮಾರು ಐನೂರು ಪುಟಗಳುಳ್ಳ ಸುದೀರ್ಘಕಾವ್ಯವನ್ನು ಬರೆಯುವ ಕವಿ ಮೊದಲಿಂದ ತುದಿಯವರೆಗೆ ಒಂದೇ ಸಮನಾಗಿ ರಸವತ್ತಾಗಿ ಬರೆಯಲಾರನು. ಕೆಲವುಸಾರಿ ಗಗನದೆಡೆಗೆ ಹಾರಿದರೆ, ಕೆಲವುಸಾರಿ ನೆಲದ ಹುಡಿಯಲ್ಲಿ ಹೊರಳುವನು. ಐದನೆಯದಾಗಿ ಕಾವ್ಯದ ಕೆಲವೆಡೆಗಳಲ್ಲಿ ಆತನು ಉದ್ಧಾಮ ಕವಿ ಎಂದು ತೋರಿಬಂದರೂ ಸಮಗ್ರ ಕಾವ್ಯ ದೃಷ್ಟಿಯಿಂದ ಆತನನ್ನು ಪ್ರಥಮತಮ ಶ್ರೇಣಿಗೆ ಸೇರಿದ ಮಹಾಕವಿ ಎಂದು ಕರೆಯುವುದು ಅತಿಶಯೋಕ್ತಿಯಾಗಬಹುದು. ಕಡೆಯದಾಗಿ ಆತನ ಕೃತಿಯಲ್ಲಿ ಕಂಡುಬರುವ ಶ್ಲೇಷೆ, ಶುಷ್ಕವೈದುಷ್ಯ, ಶಬ್ದಾಡಂಬರ ಇವುಗಳಿಗೆ ಬಹುಮಟ್ಟಿಗೆ ಸಂಸ್ಕೃತ ಜೈಮಿನಿಭಾರತವೂ ಹೊಣೆಯಾಗಿರಬಹುದು.

ಆದರೂ ಲಕ್ಷ್ಮೀಶನು ಶ್ರೇಷ್ಠಕವಿ. ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ ವನ್ನು ಸಂಗ್ರಹಿಸಿದಂತೆ ಕನ್ನಡ ಜೈಮಿನಿ ಭಾರತವನ್ನೂ ರಸದೃಷ್ಟಿಯಿಂದ ಸಂಗ್ರಹಿಸಿದರೆ, ಮೇಲೆಹೇಳಿದ ಮಾತಿನ ಸತ್ಯ ಹೊಳೆಯುತ್ತದೆ. ಲಕ್ಷ್ಮೀಶನ ಕಾವ್ಯಜ್ಯೋತಿ ಮಬ್ಬಾಗಿದ್ದರೆ ಅದು ಮಹತ್ವದ ಅಭಾವದಿಂದಲ್ಲ, ನೀರಸತೆಯ ‘ಭಾವ’ದಿಂದ. ಚಂಡಿಯಕಥೆ, ಚಂದ್ರಹಾಸನ ಕಥೆ ಮುಂತಾದುವು (ಅಲ್ಲಲ್ಲಿ ಅತಿ ವಿರಳವಾಗಿ ಬರುವ ನೀರಸ ಪದ್ಯಗಳನ್ನು ಬಿಟ್ಟರೆ) ಅತ್ಯುತ್ತಮ ಕಾವ್ಯಗಳಾಗುವುದರಲ್ಲಿ ಲವಲೇಶವೂ ಸಂದೇಹವಿಲ್ಲ.

ಮೇಲೆ ಸೂಚಿಸಿದ ಕಾವ್ಯಭಾಗಗಳಲ್ಲಿ ಲಕ್ಷ್ಮೀಶನ ಕಥಾಲಾಪನೆ ಆದರ್ಶ ಸೀಮಾಸ್ಪರ್ಶಿಯಾಗಿದೆ. ಆತನ ಶೈಲಿಯು ವಸಂತನ ಶೋಭೆಯೊಡನಾಡುವ ವಿಹಂಗಮ ಕೂಜನದಂತೆ ಸುಂದರ ಮಂಜುಳವಾಗಿದೆ. ಅಲ್ಲಿ ಕಂಡುಬರುವ ನುಣ್ಪುನಯನಗಳು ಅನ್ಯಾದೃಶವಾದುವೆಂದು ಹೇಳಿದರೆ ಇತರ ಷಟ್ಟದೀ ಕರ್ತೃಗಳು ಕರುಬಲಾರರು. ಆದರೆ ಈ ಪ್ರಬಂಧದ ಆಶಯ ಸೀಮಾಬದ್ಧವಾದುದರಿಂದ ಮೇಲೆ ಹೇಳಿದ ವಿಷಯಗಳ ವಿಸ್ತೃತ ವಿಮರ್ಶೆ ಇಲ್ಲಿ ಅಪ್ರಕೃತ. ಲಕ್ಷ್ಮೀಶನ ಕಾವ್ಯಮಹಾವನದಲ್ಲಿ ಸೀಗೆಯ ಮೇಳೆಗಳಿವೆ. ಮುಳ್ಳಿನ ಪೊದರುಗಳಿವೆ. ಸೌದೆಗೆ ಮಾತ್ರ ಯೋಗ್ಯವಾದ ಶುಷ್ಕತರುಗಳಿವೆ; ಬೊಬ್ಬುಳಿ ಗಿಡಗಳಿವೆ. ಅದರಂತೆಯೆ ತಿಳಿಗೊಳಗಳಿವೆ; ತಾವರೆ ಹೂಗಳಿವೆ; ಮಲ್ಲಿಗೆಯ ಹೊದರುಗಳಿವೆ; ತಳಿರಿಡಿದ ಸೊಂಪೆಸೆವ ಮಾಮರಗಳೂ ಇವೆ. ಕಾಗೆ ಗೂಬೆಗಳಿರುವಂತೆಯೆ ಗಿಳಿ ಕೋಗಿಲೆ ನವಿಲುಗಳೂ ಇವೆ. ಲಕ್ಷ್ಮೀಶನ ಉಪಮೆಗಳೆಂದರೆ ಮೂಡುವ ಸೂರ್ಯನ ಎಳೆಬಿಸಿಲಿನ ಹೊಂಬೆಳಗಿನಲ್ಲಿ ನಳನಳಿಸಿ, ತಣ್ಣನೆ ತೀಡುವ ತೆಳುಗಾಳಿಗೆ ತಲೆಯೊಲೆದು ನಲಿದಾಡುವ ಹಚ್ಚನೆಯ ಹೊಸಹಸುರಿನಲ್ಲಿ, ಗರಿಗೆದರಿ, ಮಳೆಬಿಲ್ಲಿನ ಮರಿಗಳಂತೆ ಮನೋಹರವಾಗಿ ನರ್ತಿಸುವ ಮಯೂರಗಳು! ಅವುಗಳ ಸೊಬಗಿಗೆ ಸೆರೆಸಿಕ್ಕ ಪ್ರೇಕ್ಷಕನು ವನ ವಿಹಾರವನ್ನೆ ಮರೆಯುತ್ತಾನೆ. ಸೀಗೆಯ ಮೆಳೆಗಳಲ್ಲಿ ನುಗ್ಗಿ ಮೈ ಹರಿದುಕೊಂಡಿದ್ದನ್ನೂ ಲಕ್ಷಿಸುವುದಿಲ್ಲ. ಅಷ್ಟೇ ಅಲ್ಲ, ಮಯೂರ ನರ್ತನವನ್ನು ನೋಡಲೆಂದು ಎಷ್ಟು ಸೀಗೆಯ ಮೆಳೆಗಳನ್ನಾದರೂ ನುಗ್ಗಲು ಸಾಹಸ ಮಾಡುತ್ತಾನೆ. ಎಂದರೆ ಲಕ್ಷ್ಮೀಶನ ಉಪಮೆಗಳೆಲ್ಲವೂ ನರ್ತಿಸುವ ಮಯೂರಗಳೆಂದು ಯಾರೂ ಭಾವಿಸಬಾರದು. ಅವುಗಳಲ್ಲಿ ಕೆಲವು ಕೆಂಬೂತಗಳಂತೆ ಜುಗುಪ್ಸೆ ಹುಟ್ಟಿಸುತ್ತವೆ. ಚರ್ವಿತಚರ್ವಣ ಲಬ್ಧವಾದ ಕವಿಸಮಯಗಳೂ ಬೇಕಾದಷ್ಟಿವೆ. ಆದರೆ ಪ್ರಶಂಸೆಯೆ ಮುಖ್ಯ ಧ್ಯೇಯವಾದ ಪ್ರಬಂಧದಲ್ಲಿ ಅಂತಹ ನೀರಸ ಉಪಮೆಗಳನ್ನು ವಿಮರ್ಶೆಗೆ ತೆಗೆದುಕೊಳ್ಳದೆ ಮುಂದುವರಿದೆವಾದರೆ ಕವಿಗೂ ನಮಗೂ ಇಬ್ಬರಿಗೂ ಶ್ರೇಯಸ್ಸು.

“ಎರಡು ವಸ್ತುಗಳಿಗೆ ಪರಸ್ಪರ ಸಾದೃಶ್ಯಸಂಪತ್ತು ಎಲ್ಲಿ ಶೋಭಿಸುತ್ತದೆಯೋ ಅಲ್ಲಿ ಉಪಮಾಲಂಕಾರ” ಎಂದು ಪ್ರಾಚೀನ ಅಲಂಕಾರ ಶಾಸ್ತ್ರಜ್ಞರ ಮತವಿದೆ. ಉಪಮೆ ಎಂದರೆ ಹೋಲಿಕೆ ಎಂದರ್ಥ. ಉಪಮೆಯನ್ನು ಅಲಂಕಾರ ಎಂದು ಕರೆದರೂ ಅದರಿಂದ ಒಂದೊಂದು ವೇಳೆ ಉಪಕಾರವೂ ಆಗುವ ಸಂಭವವಿದೆ. ಚೆನ್ನಾಗಿ ಅನುಭವಕ್ಕೆ ಬಂದ ವಸ್ತುವಿನ ಸಾದೃಶ್ಯವನ್ನು ಹೇಳಿ, ಚೆನ್ನಾಗಿ ಅನುಭವಕ್ಕೆ ಬಾರದ ವಸ್ತುವಿನ ಅನುಭವವನ್ನು ಆದಷ್ಟುಮಟ್ಟಿಗಾದರೂ ಮಾಡಿಕೊಡಬಹುದು. ಆದರೆ ವಿಶೇಷವಾಗಿ ಕಾವ್ಯದಲ್ಲಿ ಉಪಕಾರಕ್ಕಾಗಿ ಉಪಮೆಯನ್ನು ಉಪಯೋಗಿಸುವುದಕ್ಕಿಂತಲೂ ಅಲಂಕಾರಕ್ಕಾಗಿ ಉಪಯೋಗಿಸುವುದೇ ಹೆಚ್ಚು. ಕೆಲವು ಸಾರಿ ಉಪಮೆ ಎರಡು ಕೆಲಸಗಳನ್ನೂ ಮಾಡುವುದು, ಗಂಗಾವಾರಿ ದೇಹದ ಕೊಳೆಯನ್ನು ತೊಳೆದು ಅತ್ಮದ ಪಾಪವನ್ನೂ ಪರಿಹರಿಸುವಂತೆ. ಉಪಮೆ ಎಂದರೆ ಸಾದೃಶ್ಯವೆಂದು ಮೇಲೆಯೆ ಹೇಳಿದ್ದೇವೆ. ಸಾದೃಶ್ಯವು ರೂಪದಲ್ಲಿರಬಹುದು, ಗುಣದಲ್ಲಿರಬಹುದು ಅಥವ ರೂಪಗುಣಗಳಲ್ಲಿ ಸಂಪೂರ್ಣ ವ್ಯತ್ಯಾಸವಿರುವ ಎರಡು ವಸ್ತುಗಳು ಪ್ರೇಕ್ಷಕನ ಹೃದಯದಲ್ಲಿ ಉನ್ಮೇಷಗೊಳಿಸುವ ಒಂದೇ ತೆರನಾದ ಭಾವದಲ್ಲಿರಬಹುದು. ರೂಪೋಪಮೆ ಗುಣೋಪಮೆ ಸುಲಭಗ್ರಾಹ್ಯವಾಗಿವೆ. ಭಾವೋಪಮೆಯನ್ನೂ ಕೆಲವು ಉದಾಹರಣೆಗಳಿಂದ ವಿವರಿಸಿದರೆ ಚೆನ್ನಾಗಿ ಗೊತ್ತಾಗುತ್ತದೆ. “ಬನದ ಕಣ್ಣೆಂಬಂತೆ ತಿಳಿಗೊಳವು ರಂಜಿಸಿತು”, “ಪರ್ವತವು ಮಹಾ ಯೋಗಿಯಂತೆ ಕಾಣಿಸಿತು”, “ಹಸುರ ಮೇಲೆ ಎಳೆ ಬಿಸಿಲು ಹಸುಳೆಯಂತೆ ನಲಿದಾಡಿತು”, “ಚಿಟ್ಟೆಯು ಬನಗಳ ಬಣ್ಣದ ಕವಿತೆಯಂತೆ ಶೋಭಿಸಿತು.” ಪರ್ವತ ಶಿಖಿರದಲ್ಲಿ ನಿಂತು ಅರಣ್ಯ ಸಮಾಕೀರ್ಣವಾದ ಕಂದರದಲ್ಲಿರುವ ಸರೋವರವನ್ನು ನೋಡಲು, ಪ್ರೇಕ್ಷನ ಹೃದಯದಲ್ಲಿ ಹಿಂದೆ ತಾನು ತೇಜಸ್ವಿಯಾದ ವ್ಯಕ್ತಿಯ ವಿಶಾಲ ನೇತ್ರವನ್ನು ನೋಡಿದಾಗ ಯಾವ ಭಾವವು ಹೊಮ್ಮಿದ್ದಿತೋ ಆ ಭಾವವೆ ಮರಳಿ ಹೊಮ್ಮುವುದರಿಂದ ಅದನ್ನು “ಬನದ ಕಣ್ಣು” ಎಂದು ಕರೆಯುವನು. ಗಗನಚುಂಬಿತವಾಗಿಯೂ ಧೀರ ಪ್ರಶಾಂತವಾಗಿಯೂ ಮೇಲೆದ್ದ ಪರ್ವತವನ್ನು ಕಂಡೊಡನೆ ನೋಟಕನ ಹೃದಯದಲ್ಲಿ ಮಹಾಯೋಗಿಯನ್ನು ಸಂದರ್ಶಿಸಿದಂತೆ ಭಾವವಾಗುಬಹುದು. ಹಾಗೆಯೆ ನೂರಾರು ರಂಗುಗಳನ್ನು ತೊಟ್ಟುಕೊಂಡು ಬನದಲ್ಲಿ ಹಾರಾಡುವ ಚಿಟ್ಟೆಯು ಪ್ರೇಕ್ಷಕನ ಹೃದಯದಲ್ಲಿ ಭಾವಗೀತೆಯ ಶ್ರವಣದಿಂದ ಉತ್ಪನ್ನವಾಗುವ ಆನಂದಾತಿಶಯದ ಭಾವವನ್ನು ತರಬಹುದು. ಮೇಲಿನ ಉದಾಹರಣೆಗಳನ್ನು ಕೂಲಂಕಷವಾಗಿ ವಿಭಜನೆಮಾಡಿ ಪರೀಕ್ಷಿಸಿದರೆ ಆಯಾ ವಸ್ತುಗಳಿಂದ ಉನ್ಮೇಷವಾಗುವ ಭಾವಗಳಿಗೆ ಅವುಗಳಲ್ಲಿರುವ ಗುಣಗಳೆಯೆ ಕಾರಣವೆಂದು ತೋರಬಹುದು. ಹಾಗಾದರೆ ಅವುಗಳೆಲ್ಲ ಗುಣೋಪಮೆಯ ಜಾತಿಗೇ ಏಕೆ ಸೇರಬಾರದು ಎಂಬ ಪ್ರಶ್ನೆ ಮೂಡಬಹುದು. ಭಾವೋಮಪೆಯಲ್ಲಿ ವಸ್ತುವಿನಿಂದ ಉನ್ಮೇಷವಾಗುವ ಭಾವಕ್ಕೆ ತತ್ವತಃ ಅದರ ಗುಣಗಳೆಯೆ ಕಾರಣವಾದರೂ ಗುಣೋಪಮೆಯಲ್ಲಿರುವಂತೆ ಕಾರಣಗಳು ಅಷ್ಟು ಪ್ರತ್ಯಕ್ಷವಾಗಿರುವುದಿಲ್ಲ. ಅಲ್ಲದೆ ಭಾವೋಪಮೆಯು ವ್ಯಕ್ತಿಯ ತಾತ್ಕಾಲಿಕ ಮನೋವೃತ್ತಿಗೆ ಅನುಸಾರವಾಗಿ ಮೈದೋರುವುದು. ವ್ಯಕ್ತಿಯೊಬ್ಬನು ಗತಿಸಿದ ತನ್ನ ಇನಿಯಳನ್ನು ಆಗತಾನೆ ಸ್ಮಶಾನದಲ್ಲಿ ಸುಟ್ಟು ಬೂದಿ ಮಾಡಿ ಹಿಂತಿರುಗುವಾಗ ಚಂದ್ರನು ಬೆಳ್ದಿಂಗಳನ್ನು ಬೀರುತ್ತ ಮೂಡಿದರೆ, ಅವನಿಗೆ ಚಂದ್ರನು ಚಿತೆಯ ಬೆಂಕಿಯಂತೆಯೂ ಬೆಳ್ದಿಂಗಳು ಚೆಲ್ಲಿದ ಹೆಣದ ಬೂದಿಯಂತೆಯೂ ಭಾಸವಾಗಬಹುದು. ಅದೇ ಚಂದ್ರನು ಪ್ರೇಯಸಿಯೊಡನೆ ವಿಹರಿಸುವ ಮತ್ತೊಬ್ಬನಿಗೆ ತನ್ನ ಕಾಂತೆಯ ವದನದಂತೆಯೂ, ಅದೇ ಬೆಳ್ದಿಂಗಳು ತನ್ನಿನಿಯಳ ಪ್ರೇಮದಂತೆಯೂ ತೋರಬಹುದು. ಅಥವ ಮೊದಲನೆ ವ್ಯಕ್ತಿಯಲ್ಲಿಯೆ ಆತನು ತಾನು ಹಿಂದೆ ತನ್ನ ಕಾಂತೆಯೊಡನೆ ಸರಸದಿಂದಿದ್ದಾಗ ಎರಡನೆಯ ವ್ಯಕ್ತಿಯ ಭಾವವೆ ಉನ್ಮೇಷವಾಗಿರಬಹುದು. ಆದ್ದರಿಂದ ಭಾವೋಪಮೆ ಗುಣೋಪಮೆಯಂತಲ್ಲದೆ ಸಂಪೂರ್ಣವಾಗಿ ವ್ಯಕ್ತಿಯ ಚಿತ್ತವೃತ್ತಿಗೆ ಶರಣಾಗುತ್ತದೆ. ವ್ಯಕ್ತಿಯ ಆಂತರ್ಯದ ಅವಸ್ಥೆಯನ್ನು ಗಣನೆಗೆ ತಂದುಕೊಳ್ಳದೆ ಆ ಅವಸ್ಥೆಯಿಂದ ಪ್ರತ್ಯೇಕವಾಗಿ ಪರಿಶೀಲಿಸಿದರೆ ಭಾವೋಪಮೆ ಅರ್ಥವಿಹೀನವಾಗಿಯೂ ಹುಚ್ಚು ಹುಚ್ಚಾಗಿಯೂ ತೋರಬಹುದು. ಹೀಗೆ ವ್ಯಕ್ತಿಯ ಚಿತ್ತವೃತ್ತಿಯ ಆದಾರದ ಮೇಲೆಯೆ ಸಂಪೂರ್ಣವಾಗಿ ನಿಲ್ಲುವುದರಿಂದ ಭಾವೊಪಮೆ ವರ್ಣನಾ ಕಾವ್ಯಗಳಿಗಿಂತಲೂ ವ್ಯಂಜಕಕಾವ್ಯಗಳಲ್ಲಿ ವಿಫುಲಪ್ರಧಾನವಾಗಿ ಪ್ರಾಶಸ್ತ್ಯ ಪಡೆದಿದೆ.

ವಿದ್ವಾಂಸರ ಮನೋರಂಜನಾರ್ಥವಾಗಿ ಸಾದೃಶ್ಯಮೂಲವಾದ ಅರ್ಥಾಲಂಕಾರಗಳು ನಾಮಭೇದದಿಂದ ಅನೇಕವಾಗಿದ್ದರೂ ತತ್ವತಃ ಇರುವುದು ಉಪಮಾಲಂಕಾರವೊಂದೇ. ಉಳಿದುದೆಲ್ಲ ಉಪಮಾಲಂಕಾರದ ರೂಪಾಂತರಗಳು. ಆದುದರಿಂದ ಈ ಪ್ರಬಂಧದಲ್ಲಿ ಉಪಮಾಲಂಕಾರಕ್ಕೆ ವಿಶಾಲವಾದ ಅರ್ಥಕಲ್ಪನೆ ಮಾಡಿಕೊಂಡು ಲಕ್ಷ್ಮೀಶನ ಉಪಮೆಗಳ ಅಂದಚಂದಗಳನ್ನು ಪರಿಶೀಲಿಸುತ್ತೇವೆ.

ಆತನ ಕೃತಿಯನ್ನು ಓದುವ ಯಾರಾದರು ಲಕ್ಷ್ಮೀಶನು ‘ಉಪಮಾಲೋಲ’ ಎಂಬುದನ್ನು ಬಹುಬೇಗನೆ ಮನಗಾಣಬಹುದು. ಕವಿಗಳ ಭಾಷೆಗೆ ಅಲಂಕಾರಿಕವಾದುದು; ಅದರಲ್ಲಿಯೂ ಉಪಮಾ ಪೂರ್ಣವಾದುದು. ಅದರಲ್ಲಿಯೂ ಪುರಾಣಗಳನ್ನು ಬರೆದ ಕವಿಗಳು ಯಾವ ದೇಶದವರಾಗಲಿ ಯಾವ ಕಾಲದವರಾಗಲಿ ಉಪಮಾಲಂಕಾರವನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಏಕೆಂದರೆ ಉಪಮಾಲಂಕಾರವು ಮಲ್ಲಿಗೆಯ ಹೂವಿನಂತೆ ಹಗ್ಗವನ್ನು ಕೂಡ ಸಗ್ಗಕ್ಕೊಯ್ಯಬಲ್ಲುದು. ಅದು ಸಹೃದಯ ಹೃದ್ಯವಾಗಿರುವುದರಿಂದಲೂ ತತ್ಸಮಯದಲ್ಲಿ ಅಪ್ರಕೃತವಾಗಿ ಕಂಡುಬಂದರೂ ಮನೋಹರವಾದ ಇತರಾನುಭವ ಚಿತ್ರಗಳನ್ನು ಸ್ಮೃತಿಪಥಕ್ಕೆ ತಂದು, ಕಲ್ಪನೆಯನ್ನು ಸಜೀವ ಜ್ಯೋತಿರ್ಮಯವಾಗಿ ಮಾಡಿ, ಆನಂದದಾಯಕವಾಗುವುದರಿಂದಲೂ ಪಾಶ್ಚಾತ್ಯದೇಶಗಳ ಪುರಾಣ ಕಾವ್ಯಗಳಲ್ಲಿ ಉಪಮಾಲಂಕಾರವು ಪ್ರಬಲಾಕಾರವನ್ನು ಧಾರಣೆಮಾಡಿ “ಮಹೋಪಮೆ” (Epic Simile) ಎಂಬ ಹೆಸರಿನಿಂದ ಎಲ್ಲರ ಆದರಣೆಗೂ ಗೌರವಕ್ಕೂ ಪಾತ್ರವಾಗಿದೆ. ನಮ್ಮಲ್ಲಿ ಆ ಮಹೋಪಮೆಯನ್ನು ಸರ್ವಾಂಶದಲ್ಲಿಯೂ ಹೋಲುವ ಉಪಮೆಗಳು ಇಲ್ಲವೆ ಇಲ್ಲ. ಆದರೂ ಅಲ್ಲಲ್ಲಿ ಮಹೋಪಮೆಯನ್ನು ನೆನಪಿಗೆ ತರುವ ಛಾಯಾಚಿತ್ರಗಳನ್ನಾದರೂ ಸಂದರ್ಶಿಸಬಹುದು. ವಿರಳವಾಗಿ.

ಲಕ್ಷ್ಮೀಶನ ಕಾವ್ಯಮಹಾವನದಲ್ಲಿ ಕವಿತಾ ಲಕ್ಷ್ಮಿ ಉಪಮಾಸ್ವರ್ಣಕಲಶವನ್ನು ಕೈಲಾಂತು ವಿಹರಿಸುತ್ತಿದ್ದಾಳೆ. ಆ ಪುಣ್ಯ ಕಲಶವು ಸಹಸ್ರ ವಿವಿಧ ವರ್ಣಮಯ ಅಕ್ಷಯಾಮೃತ ಜಲದಿಂದ ತುಂಬಿ ತುಳುಕುತ್ತಿದೆ. ಆ ಸುರಂಗಿತವಾರಿಯ ಸಂಸೇಚನೆಯಿಂದ ಮುಳ್ಳಿನ ಹೊದರುಗಳೂ ಕೂಡ ಕೆಲವು ಸಾರಿ ಮನೋಜ್ಞವಾಗಿ ರಂಜಿಸುತ್ತವೆ! ಉಪಮೆಗಳಿಗಾಗಿ ಕವಿ ನಾನಾ ಪ್ರಪಂಚಗಳನ್ನು ಸೂರೆಗೊಂಡಿದ್ದಾನೆ. ಕೆಲವು ಸಾರಿ ಉಪಮಾನವು ಉಪಮೇಯವನ್ನು ಪುಷ್ಟೀಕರಿಸಿ ಸಿಂಗರಿಸಬೇಕೆಂಬ ಸಮಯನಿಯಮವನ್ನೂ ಕೂಡ ಗಣನೆಗೆ ತಾರದೆ, ಉಪಮಾನದ ವೈಭವ ಸೌಂದರ್ಯಗಳ ಸಮ್ಮೋಹಿನೀ ಶಕ್ತಿಗೆ ಮಾತ್ರವೆ ಶರಣಾಗಿ, ಮನಸೋತು, ಮೈಮರೆತು, ತಮ್ಮ ಮಹಾ ಜ್ಯೋತಿಯಿಂದ ಉಪಮೇಯಗಳನ್ನೆ ಮಬ್ಬುಗೈಯ್ದು ಮರೆಯಿಸುವ ಉಪಮಾಗಳನ್ನೂ ಕವಿ ವಿರಚಿಸಿದ್ದಾನೆ. ಆತನು ವಿರಚಿಸಿರುವ ಉಪಮಾಗಳಲ್ಲಿ ಪ್ರಕೃತಿ ಪ್ರಪಂಚದಿಂದ ಆಯ್ದುಕೊಂಡವುಗಳೆ ಬಹು ಸಂಖ್ಯಾಕವಾಗಿವೆ. ಬಹು ಪರಿಚಿತವಾದ ವ್ಯವಹಾರ ಪ್ರಪಂಚದ ಉಪಮೇಗಳೂ ವಿಶೇಷವಾಗಿವೆ. ಉಳಿದವುಗಳಲ್ಲಿ ಕೆಲವು ಪುರಾಣ ಮತ್ತು ಪೂರ್ವಕಥಾ ಪ್ರಪಂಚಕ್ಕೆ ಸೇರಿದುವು; ಕೆಲವು ಅಧ್ಯಾತ್ಮಜೀವನ ಪ್ರಪಂಚಕ್ಕೆ ಸಂಬಂಧಪಟ್ಟವು; ಮತ್ತೆ ಕೆಲವು ಕಲ್ಪನಾಕಲ್ಪಿತವಾದುವು; ಇನ್ನು ಕೆಲವು ಜನಸಾಮಾನ್ಯ ಜೀವನಕ್ಕೆ ಸೇರಿದ ಗಾದೆಗಳಿಂದ ಮಾಡಿದುವಾಗಿವೆ; ಐತಿಹ್ಯ, ಧರ್ಮಶಾಸ್ತ್ರ, ಶೃಂಗಾರ ಇವುಗಳಿಗೆ ಸೇರಿದ ಉಪಮಾಗಳೂ ಕೆಲವಿದೆ. ಈ ಸಣ್ಣ ಪ್ರಬಂಧದಲ್ಲಿ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿರುವ ಎಲ್ಲ ಉಪಮೆಗಳನ್ನೂ ಪರಿಶೀಲಿಸುವ ಉದ್ದೇಶವಿಲ್ಲ. ಚರ್ವಿತಚರ್ವಣಲಬ್ಧವಾದ ನೀರಸೋಪಮೆಗಳ ಮಾತಂತಿರಲಿ, ಸರಸ ಸಜೀವವಾದ ಎಲ್ಲ ಉಪಮೆಗಳನ್ನು ತೆಗೆದುಕೊಂಡರೂ ಲೇಖನ ಎಲ್ಲೆಮೀರದಿರುವುದಿಲ್ಲ. ಆದ್ದರಿಂದ ಆತನ ಕಾವ್ಯರಂಗದಲ್ಲಿ ಅಲ್ಲಲ್ಲಿ ನಲಿಯುವ ಹಲಕೆಲವು ಮಾರ್ಗದರ್ಶಿಗಳಾಗುವ ಉಪಮಾಗಳನ್ನು ಮಾತ್ರವೆ ಆರಿಸಿಕೊಂಡು ವಿಮರ್ಶಪೂರ್ವಕವಾಗಿ ಬಣ್ಣಿಸುವುದು ನಮ್ಮ ಪ್ರಕೃತ ಕರ್ತವ್ಯ.

ಮೊದಲು ಕವಿಗೆ ಅತ್ಯಂತ ಪ್ರಿಯವಾದ ಪ್ರಕೃತಿ ಪ್ರಪಂಚವನ್ನೆ ತೆಗೆದುಕೊಳ್ಳೋಣ. ಲಕ್ಷ್ಮೀಶನು ನಿಸರ್ಗಸೌಂದರ್ಯವನ್ನು ಕಣ್ದೆರೆದು ನೋಡಿ ಎದೆತುಂಬಿ ಸವಿದವನೆಂದು ಆತನ ಕಾವ್ಯದಲ್ಲಿ ಅಲ್ಲಲ್ಲಿ ಮೈದೋರುವ ಪ್ರಕೃತಿ ವರ್ಣನೆಗಳಿಂದ ಗೊತ್ತಾಗುತ್ತದೆ. ಸೂರ್ಯೋದಯ ಸೂರ್ಯಾಸ್ತ ವಸಂತಾಗಮ ವರ್ಷಾಗಮ ಶಿಶಿರಾಗಮ ಚಂದ್ರೋದಯ ಅರಣ್ಯ ಪರ್ವತ ಋಷ್ಯಾಶ್ರಮ ಶಾಲಿವನ ಮೊದಲಾದುವುಗಳ ವರ್ಣನೆಗಳಲ್ಲಿ ಆತನು ಪ್ರಕೃತಿಯನ್ನು ಎಷ್ಟರಮಟ್ಟಿಗೆ ಒಲಿದಿದ್ದನೆಂಬುದು ಒಡೆದು ಮೂಡಿರುತ್ತದೆ. ಕೆಲವೆಡೆ ಶ್ಲೇಷೆ ಯಮಕ ಅನುಪ್ರಾಸ ಶುಷ್ಕಕವಿಸಮಯ ಇವುಗಳ ಹಾವಳಿಗೆ ಸಿಕ್ಕಿ ಆ ವರ್ಣನೆಗಳು ‘ಕರ್ಕಶ ತನುವಂತಃಶೂನ್ಯ’ವಾಗಿವೆ ಎಂಬುದೂ ನಿರ್ವಿವಾದವಾಗಿದೆ. ಆದರೂ ಉಳಿದೆಡೆಗಳಲ್ಲಿ ಪಾಂಡಿತ್ಯ ಮತ್ತು ಸಂಪ್ರದಾಯಗಳಿಂದ ಬಿಡುಗಡೆಹೊಂದಿ ಕವಿ ತಾನು ಕಂಡುಂಡು ಅನುಭವಿಸಿದ ದೃಶ್ಯಗಳನ್ನು ಸ್ವಾಭಾವಿಕವಾಗಿಯೂ ಸರಳವಾಗಿಯೂ ಸಜೀವವಾಗಿಯೂ ಚಿತ್ರಿಸಿದ್ದಾನೆ. ಅದರಲ್ಲಿಯೂ ಉಪಮಾಲಂಕಾರಗಳಲ್ಲಿ ಪ್ರಕೃತಿಯನ್ನು ಬಹಳ ಸುಲಲಿತವಾಗಿ ಉಪಯೋಗಿಸಿಕೊಂಡಿದ್ದಾನೆ. ಅಲ್ಲಿ ತೋರುವ ಒದೊಂದು ಚಿತ್ರವೂ ತನ್ನದೇ ಆಗಿರುವ ಒಂದು ರಮಣೀಯ ಗಾಂಭೀರ್ಯದಿಂದ ಕಂಗೊಳಿಸುವುದು. ಧರ್ಮರಾಯನು ಬಂಧುಗಳನ್ನು ಕೊಂದೆವೆಲ್ಲಾ ಎಂದು ದುಗುಡದಿಂದಿರಲಾಗಿ ವೇದವ್ಯಾಸನು ಹಸ್ತಿನಾವತಿಗೆ ಬಂದು ಚಕ್ರವರ್ತಿಯನ್ನು ಕಾಣಿಸಿಕೊಳ್ಳುತ್ತಾನೆ. ಆಗ ಧರ್ಮರಾಯನ ಶೋಕದ ಸ್ಥಿತಿಯನ್ನು ಕವಿ ಹೀಗೆಂದು ಬಣ್ಣಿಸಿದ್ದಾನೆ:

ಅರಸನನುತಾಪದಿಂ ತಲೆವಾಗಿ ಮಾತಾಡ
ದಿರುತಿರ್ದನನಿಲ ಸಂಚಾರಮೊಂದಿನಿತಿಲ್ಲ
ದುರಿವ ಕಡುವೇಸಗೆಯ ಬಿಸಿಲಿಂದೆ ಬಸವಳಿದ
ಕೋಮಲ ರಸಾಲದಂತೆ ||
(
ಸಂ. , . ೧೪)

ಯಾರಾದರೂ ಬೆಟ್ಟಬೇಸಗೆಯ ನಡುಹಗಲಲ್ಲಿ ಹೊಸದಾಗಿ ತಳಿತ ಮಾಮರವನ್ನು ಚೆನ್ನಾಗಿ ನೋಡಿದ್ದರೆ ಮೇಲಿನ ಉಪಮೆಯ ಚೇತೋಹರತೆ ತಿಳಿಯುತ್ತದೆ. ಬಿಸಿಲಿನ ತಾಪಕ್ಕೆ ಬಸವಳಿದ ತಳಿರ ಚಿತ್ರವೊಂದನ್ನೆ ಅಲ್ಲ, ಬೇಸಗೆಯ ನಡುಹಗಲ ಮೌನವನ್ನು ಸೂಚಿಸುವುದು ಕವಿಯ ಆಶಯ. ಅಲ್ಲದೆ ವೈಶಾಖದ ಮಧ್ಯಾಹ್ನದಲ್ಲಿ ಅನಿಲ ಸಂಚಾರವಿಲ್ಲದಿರುವುದೂ ಪಕ್ಷಿಗಳು ಕೂಡ ಗಿಡಮರಗಳಲ್ಲಿ ಹದುಗಿ ಹುದುಗಿ ತೂಕಡಿಸುವುದೂ ನಮ್ಮ ಅನುಭವಕ್ಕೆ ಬರುತ್ತದೆ. ಈ ಪ್ರಭಂಧದ ದೃಷ್ಟಿ ಉಪಮೇಯ ಉಪಮಾನಗಳಿಗಿರುವ ಸಾದೃಶ್ಯ ಸಂಪತ್ತಿಯ ಶೋಭೆಯ ಪ್ರತಿಪಾದನೆಯ ಕಡೆಗಿಂತಲೂ ಉಪಮಾ ವೈಭವದ ಕಡೆಗಿರುವುದರಿಂದ ಆ ವಿಚಾರವನ್ನು ಲಂಬಿಸಿ ಬರೆಯಲಾಗುವುದಿಲ್ಲ. ಕವಿ ಧರ್ಮರಾಯನ ಅನುತಾಪವನ್ನು ಬೇಸಗೆಯ ಬಿಸಿಲಿಗೂ, ರಾಜನನ್ನು ಕೋಮಲ ರಸಾಲಕ್ಕೂ, ಮಾತನಾಡದಿರುವುದನ್ನು ಅನಿಲ ಸಂಚಾರವಿಲ್ಲದ ನೀರವತೆಗೂ ಹೋಲಿಸಿದ್ದಾನೆ ಎಂಬುದನ್ನು ಸಾಹಿತ್ಯದಲ್ಲಿ ತಿಲಮಾತ್ರ ಪರಿಶ್ರಮವಿರುವವರೂ ತಿಳಿದುಕೊಳ್ಳಬಹುದು. ಆದರೆ ಉಪಮಾನದ ಚಿತ್ರವನ್ನು ಸಂಪೂರ್ಣವಾಗಿ ಗ್ರಹಿಸುವವರಿಗೆ ಆ ತಿಳುವಳಿಕೆ ಅನಾವಶ್ಯಕವಲ್ಲದಿದ್ದರೂ ಅಷ್ಟೇನೂ ಅನಿವಾರ್ಯವಾಗಿರುವುದಿಲ್ಲ.

ಪ್ರಾತಃಕಾಲದಲ್ಲಿ ತಳತಳಿಸಿ ಮೂಡುವ ಸೂರ್ಯನ ದೇದಿಪ್ಯಮಾನವಾದ ಬಿಂಬವು ವನಾವೃತಪರ್ವತಾಗ್ರದ ದಿಗಂತರೇಖೆಯಲ್ಲಿ ಇಣಿಕಿನೋಡುವಂತೆ ಮೈದೋರುವ ಚಿರಸ್ಮರಣೀಯ ಸುಂದರ ದೃಶ್ಯವನ್ನು ಉಪಮೆಯಲ್ಲಿ ಕವಿ ಹೀಗೆ ಚಿತ್ರಿಸಿದ್ದಾನೆ:

ಮೂಡು ದೆಸೆಯೊಳ್ ಕೆಂಪು ದೊರೆಯೆ ತಾರಗೆ ಪರಿಯೆ
ಕೂಡೆ ತಂಗಾಳಿ ಮುಂಬರಿಯೆ ಕಮಲಂ ಬಿರಿಯೆ
ಪಾಡುವೆಳೆದುಂಬಿಗಳ್ ಮೊರೆಯೆ ಚಕ್ರಂ ನೆರೆಯೆ
ನೈದಿಲೆಯ ಸೊಂಪು ಮುರಿಯೆ
ಬೀಡುಗೊಂಡಿರ್ದ ಕತ್ತಲೆಯ ಪಾಳೆಯಮೆತ್ತ
ಲೋಡಿದುದೊ ನೋಡಿದಪೆನೆಂದು ಪೂರ್ವಾಚಲದ
ಕೋಡುಗಲ್ಲಂ ಪತ್ತುವಂತೆ ಮೆರೆದಂ ಪ್ರಭೆಯೊಳಾವ್ಯಕ್ತನಾದಿತ್ಯನು!
(
ಸಂ. , . ೬೫)

ಭಗವಾನ್ ಸೂರ್ಯದೇವನು ಮಾತ್ರವೆ ಅಲ್ಲ, ಸಮಸ್ತ ವಿಶ್ವವೂ ಆತನ ಆಗಮನಕ್ಕಾಗಿ ತುದಿಬೆರಳಮೇಲೆ ಉತ್ಕಂಠವಾಗಿರುವ ಭಾಗವು ಲಕ್ಷ್ಮೀಶನ ಹೃದಯದಲಿ ತುಳುಕುತಿದೆ. ಪದ್ಯದ ಉತ್ತಾರರ್ಧದಲ್ಲಿ ವರ್ಣೀತವಾಗಿರುವ ಚಿತ್ರಕ್ಕೆ ಬೇಕಾದನಿತು ಹಿನ್ನೆಲೆ ಪೂರ್ವಾರ್ಧದಲ್ಲಿದೆ. ಮೂಡಣ ಬಾನೆಡೆಯಲ್ಲಿ ಮೆಲ್ಲನರಳುವ ತಣ್ಣನೆಯ ನರುಗೆಂಪು; ಕಣ್ಮರೆಯಾಗುತ್ತಿರುವ ನಕ್ಷತ್ರಗಳು; ತೀಡುವ ತಂಗಾಳಿ; ತಿಳಿಗೊಳದಲ್ಲಿ ಬಿರಿಯುವ ತಾವರೆಗಳು; ಹಾಡುವ ಎಳೆ ದುಂಬಿಗಳು; ಚಕ್ರವಾಕ ಪಕ್ಷಿಗಳ ಪುನರ್ಮಿಲನ; ಮರುಗಿ ಮುಗುಳುವ ನೈದಿಲೆಗಳು ಮೊದಲಾದುವನ್ನು ಸಮರ್ಥನಾದ ವರ್ಣಶಿಲ್ಪಿಯೋಪಾದಿಯಲ್ಲಿ ಬಣ್ಣಿಸಿ, ತರುವಾಯ ಸೂರ್ಯನು ಪೂರ್ವಚಲದ ಕೋಡುಗಲ್ಲನ್ನು ಹತ್ತುವ ಚಿತ್ರಕ್ಕೆ ಪ್ರಾಧಾನ್ಯವನ್ನು ಕೊಟ್ಟು ವರ್ಣಿಸಿದ್ದಾನೆ. ಈ ಸ್ವರ್ಗೀಯ ಚಿತ್ರವನ್ನು ಇನ್ನೂ ಹೆಚ್ಚಾಗಿ ವಿವರಿಸಲೆಳಸಿದರೆ ಪ್ರಾತಃ ಸೂರ್ಯನ ಸುವರ್ಣಜ್ಯೋತಿಯಲ್ಲಿ ಎಳೆದಳಿರಮೇಲೆ ಮಿರುಮಿರುಗುವ ಹಿಮಮಣಿಯನ್ನು ಮುಟ್ಟಿನೋಡಲು ಪ್ರಯತ್ನಿಸುವ ಗಾಂಪನಂತಾಗುತ್ತೇವೆ. ಅನುಭವಿಸಿ ಮೌನದಿಂದಿರುವುದೆ ಮೇಲು.

ಹಣ್ಣಾಗಿ ನಿಂತ ಶಾಲಿವನಗಳಲ್ಲಿ ಕೀರ ನಿಕುರುಂಬವನ್ನು ಸೋವಲೆಂದಿರ್ದ ಪಾಮರಿಯರನ್ನು ವರ್ಣಿಸುವ ನೆವದಿಂದ ಕವಿ ಶಾಲಿವನದ ಚಿತ್ರವನ್ನೆಲ್ಲಾ ನಮ್ಮಕಣ್ಣೆದುರಿಗೆ ತರುವ ಉಪಮಾವನ್ನು ತಂದೊಡ್ದುತ್ತಾನೆ. ಇಲ್ಲಿ ಪಾಮರಿಯರಿಗೆ ಸಾದೃಶ್ಯವನ್ನು ಹೇಳುವ ಉದ್ದೇಶಕ್ಕಿಂತಲೂ ಬೆಳೆದು ನಿಂತ ಬತ್ತದ ದದ್ದೆಯನ್ನು ವರ್ಣಿಸುವ ಆಶಯ ಕವಿಯಲ್ಲಿಹೆಚ್ಚಾಗಿದೆ ಎಂದು ತೋರುತ್ತದೆ.

ತಂಬೆಲರ ಸೊಗಸಿಂಗೆ ತಲೆದೂಗುವಂತೆ ತಳ
ದಂಬುಜದ ಪರಿಮಳಕೆ ಶಿರವನೊಲೆವಂತೆ ಮರಿ
ದುಂಬಿಗಳ ಗಾನಕ್ಕೆ ಶಿರವನೊಲೆದಾಡುವಂತೊಯ್ಯೊಯ್ಯನೊಲೆದಾಡುವ
ಪೊಂಬಣ್ಣಮೆಸೆವ ಕಳಮ ಶ್ರೀಯ ಪರಿಚರ್ಯೆ
ಯಂ ಬಿಡದೆ ಮಾಳ್ವ ಕೆಳೆದಿಯರೆನಲ್ ಕೀರ ನಿಕು
ರುಂಬಮಂ ಸೋವಲೆಂದಲ್ಲಿರ್ದ ಪಾಮರಿಯರಧ್ವಗರ ನಡೆಗೆಡಿಪರು ||
(
ಸಂ. , . )

ಹೊಂಬಣ್ಣದ ಬತ್ತದ ಗದ್ದೆಯ ಕೊರಲೊಲೆದಾಟವನು ಉತ್ಪ್ರೇಕ್ಷೀಸುವ ನೆವದಿಂದ ನಮ್ಮ ಮನಸ್ಸು ತಂಬೆಲರ ಸೊಗಸನ್ನೂ ಅಂಬುಜದ ಪರಿಮಳವನೂ ಮರಿದುಂಬಿಗಳ ಗಾನವನ್ನೂ ಮರೆಯದಿರುವಂತೆ ಮಾಡುತ್ತಾನೆ. ಹೀಗೆ ಉಪಮೆ ಉಪಮೆಯನ್ನು ಹೊತ್ತು, ಉಪಮೆ ಉಪಮೆಗೆ ಆಧಾರವಾಗಿ, ಉಪಮೆ ಉಪಮೆಯನ್ನು ಪೋಷಿಸಿ, ಉಪಮೆ ಉಪಮೆಗೆ ಬಣ್ಣವೆರಚುವಂತೆ ಮಾಡಿ, ಪಾಠಕರ ದೃಷ್ಟಿಗೆ ಬೇರೊಂದು ನೂತನ ಪ್ರಪಂಚವೆ ಗೋಚರವಾಗುವಂತೆ ಮಾಡುವುದು ಲಕ್ಷ್ಮೀಶನ ಒಂದು ಹಿರಿಮೆ.

ಬಿಸಿಲ ಬೇಗೆಗೆ ಬಳಲಿ ದಾರಿಗರು ನೀರು ಕುಡಿಯಲೆಂದು ಅರವಟ್ಟಿಗೆ ಬರಲು, ಅಲ್ಲಿದ್ದ ಹೆಣ್ಣುಗಳು ಚಿನ್ನದ ಕಲಶಗಳನ್ನು ಕೈಯಲ್ಲಿ ಹಿಡಿದು, ಬಂದವರ ಬಾಯಿಗೆ ಜುಳಿಗೆಯಿಂದ ನೀರುಹೊಯ್ಯುವ ಚಿತ್ರವನ್ನೂ, ಆ ಚಿತ್ರವನ್ನು ಅಲಂಕರಿಸಲೋಸುಗ ತಂದೊಡ್ಡಿದ ಉಪಮಾನದ ಲಲಿತತರ ಚಿತ್ರವನ್ನೂ ನೋಡಿದರೆ ಯಾವ ಶ್ರೇಷ್ಠ ಚಿತ್ರಗಾರನು ತಾನೆ ಹೆಮ್ಮೆಯಿಂದ ಹಿಗ್ಗನು?

ತಳಿರೆಡೆಯೊಳಿರ್ದ ಮಾವಿನ ತೋರ ತನಿವಣ್ಣ
ಗಿಳಿ ಕರ್ದುಂಕಿದೊಡೆ ರಸಮೊಸರಿ ಸೋರ್ವಂತೆ ಹೆಂ
ಗಳ ಕರತಳದ ಪೊಂಗಳಸದ ಜುಳಿಗೆಯೊಳಿಟ್ಟ ಬೆರಳಂ ತೆಗೆದು ಬಿಡಲೈ
ಲಲಿತ ಚಂಪಕ ತನುಚ್ಛಾಯೆಯಿಂ ಕೆಂಪಿಡಿದ
ಜಳಧಾರೆ ಕಂಗೊಳಿಸುತಿರ್ಪುದು. . . . .
(
ಸಂ. , . ೧೧)

ಹಸುರು ಸೀರೆಯನ್ನುಟ್ಟ ಹೆಣ್ಣನ್ನು ತಳಿತ ಮಾಮರಕ್ಕೂ, ಆಕೆಯ ನಳಿ ತೋಳ್ಗಳನ್ನು ಮಾವಿನಕೊಂಬೆಗಳಿಗೂ, ಆಕೆಯ ಕೈಲಾಂತ ಹೊಂಗಳಸವನ್ನು ತೋರ ತನಿವಣ್ಣಿಗೂ, ಕಳಶದ ಕಲಾಪೂರ್ಣವಾದ ಕೊಂಕು ಜುಳಿಗೆಯ ಬಾಯನ್ನು ಮುಚ್ಚಿ ಮುಚ್ಚಿ ಬಿಡುವ ಕೊಂಕುಗೈದ ಬೆರಳನ್ನು ಮಾವಿನ ಹಣ್ಣಿನ ಮೇಲೆ ಕುಳಿತು ಕರ್ದುಂಕುವ ಗಿಳಿಗೂ, ಕುಂಕುಮ ಕೇಸರಿಯೆ ಮೊದಲಾದ ಸುಗಂಧ ದ್ರವಗಳಿಂದಲೂ ಕೆಂಡಸಂಗೆಯ ಮೈ ಬಣ್ಣದ ಹೆಣ್ಣುಗಳ ತನುಚ್ಛಾಯೆಯಿಂದಲೂ ಎಂಬಂತೆ ಹೊಂಬಣ್ಣವಾಂತು ಸುರಿಯುವ ನೀರನ್ನು ಮಾವಿನ ಹಣ್ಣಿನ ರಸಕ್ಕೂ ಹೋಲಿಸಿರುವ ಕವಿವರನ ರಸಿಕತೆಗೆ ಮೇರೆಯಿದೆಯೆ? ಗಿಳಿಗೂ ಹೆಣ್ಣನ ಬೆರಳಿಗೂ ಇರುವ ಸಾದೃಶ್ಯದಲ್ಲಿ ಇನ್ನೂ ಹೆಚ್ಚು ಕೌಶಲ್ಯವಿದೆ. ಗಿಳಿಯ ಕೊಕ್ಕು ಕೆಂಪು; ಅದರಂತೆಯೆ ಹೆಣ್ಣಿನ ಬೆರಳಿನ ಉಗುರು ಮದರಂಗಿಯಿಂದ ಕೆಂಪಾಗಿತ್ತು ಎಂಬುದು ಕವಿಯ ಭಾವ. ಇಲ್ಲಿ ಉಪಮೇಯ ಉಪಮಾನಗಳೆರಡೂ ಒಂದೇ ಚಿತ್ರದಲ್ಲಿ ರಂಜಿಸುವಂತೆ ಮಾಡಿ.ಚಿತ್ರ ಕಲೆಯಲ್ಲಿಯೂ ಶ್ಲೇಷಾಲಂಕಾರ ಸಾಧ್ಯವಾಗುವಂತೆ ಮಾಡುವುದಿಲ್ಲವೆ?

ಘಟೋತ್ಕಚನ ತನಯನಾದ ಕೃಷ್ಣವರ್ಣದ ಮೇಘನಾದನು ಯೌವನಾಶ್ವನ “ಸ್ವಚ್ಛತರ ಧವಳಾಂಗದ ಅತಿಮನೋಹರ ಪೀತ ಪುಚ್ಛದ ಸುಗಮನದ ಒಂದೇ ಕಿವಿಯೊಳೆಸೆವ ನೀಲಚ್ಛವಿಯ ಕೋಮಲ ತುರಂಗಮಂ” ತುಡುಕಿ ಹಿಡಿದು ಆಕಾಶಮಾರ್ಗದಲ್ಲಿ ಹಾರಿಬರುವುದನ್ನು “ಸರದತ್ತಣಿಂದಂಚೆ ಬೆಳ್ದಾವರೆಯನಳ್ತಿಯಂ ಕಿತ್ತು ನಭಕೇಳ್ವಂತೆ” (ಸಂ. ೪, ಪ. ೧೨) ಎಂದು ಕವಿ ಬಣ್ಣಿಸುವನು.ಉಪಮಾನದ ವೈಭವವು ಉಪಮೇಯವನ್ನು ಮರೆಯಿಸುವಂತೆ ಇರುವುದಕ್ಕೆ ಇದೊಂದು ಉದಾಹರಣೆಯಾಗಬಹುದು.

ಭೀಮನು ಶತ್ರುಗಳಿಗೆ ಇದಿರಾಗಿ ನಿಂತುದನ್ನು “ಪೆರ್ಬೆಟ್ಟೊತ್ತಿ ನೂಕುವ ಮಹಾವಾತಘಾತಮಂ ತಡೆದೊಲೆಯದಿಪ್ಪಂತೆ” (ಸಂ. ೪, ೨೯) ಎಂದೂ, ರಕ್ತಮಯವಾದ ರಣರಂಗದ ಸಂಗರವನ್ನು “ಸಂಧ್ಯಾಗಮವನಂದು ಸೂಚಿಪಂತೆ” (ಸಂ. ೪, ೪೫) ಎಂದೂ, ಸುವೇಗನು ಲಲಿತಕನಕಾಭರಣಗಳ ಕಾಂತಿಯಿಂದಲೂ ಸುಗತಿಗುಲಿವ ಹೊಂಗೆಜ್ಜೆಗಳ ರಭಸದಿಂದಲೂ ಎಸೆವ ನಿರ್ಮಲ ವಾಜಿಯನ್ನು ಧರ್ಮಜನ ಮುಂದೆ ತಂದು ನಿಲ್ಲಿಸಿದುದನ್ನು

ಬಳಿಕ ಹೊಳೆಹೊಳೆವ ಮಿಂಚಿನ ಗೊಂಚಲೆತ್ತಲುಂ
ಬಳಸಿ ಕಂಗೊಳಿಸುತಿರಲಡಿಗಡಿಗೆ ಘುಡಿಘುಡಿಸಿ
ಮೊಳಗುವ ಸಿತಾಭ್ರಮಂ ಕುಲಗಿರಿ ತಟಪ್ರದೇಶಕೆ ಸಾರ್ಚುವನಿಲನಂತೆ
(
ಸಂ. , ೧೧)

ಎಂದೂ, ನಗರವನ್ನು ಸಿಂಗರಿಸಿದ ನವರತ್ನಖಚಿತ ತೋರಣಗಳನ್ನು “ಶುಭ್ರಾಭ್ರದೊಳ್‌ಮೂಡಿದಮರೇಂದ್ರಚಾಪದಂತೆ” (ಸಂ. ೬. ೧೧) ಎಂದೂ ಉಷಃಕಾಲದ ಬಾಂದಳವನ್ನು “ಪಲ್ಲವಿಸಿತಮಲ ಪೂರ್ವಾಶಾಲತಿಕೆ ಎನಲ್ ಕೆಂಪಡರ್ದುದು ಮೂಡಲು” (ಸಂ. ೯, ೧೩) ಎಂದೂ, ಹೊಟ್ಟೆಯುರಿಯಿಂದ ಮುಳಿದ ನೀಲಧ್ವಜನ ಪತ್ನಿಯಾದ ಜ್ವಾಲೆ ಗಂಗಾದೇವಿಗೆ ಅರ್ಜುನನ ಮೇಲೆ ಕೋಪ ಉಂಟಾಗುವಂತೆ ಮಾಡಿದುದನ್ನು “ಪಚ್ಚಲೆಯ ತರುವನ್ ಒಣಗಿದ ಮರದ ಪೊರೆಯ ಕಾಳ್ಕಿಚ್ಚು ಕೊಂಡುರಿವವೋಲ್” (ಸಂ, ೧೦, ೩೨) ಎಂದೂ, ಸುರಥನು “ಸೊಕ್ಕಾನೆ ಪೊಕ್ಕು ಕಾಸಾರಮಂ ಕಲಕುವಂತೆ” ಶತ್ರು ಸೈನ್ಯವನ್ನು ಕಲಕಿ “ನೊಂದೆಕ್ಕಲಂ ಬೀದಿವರಿದಟ್ಟುವಂತೆ” (ಸಂ. ೧೪, ೬) ಸೈನಿಕರನ್ನು ಅಟ್ಟಿದನೆಂದೂ, “ಪಡೆ ಸಾಗಿದುದು ಬಿರುಗಾಳಿ ಬೀಸಿದೊಡೆ ಬಿಣ್ಪಿಡಿದ ಮೇಘಸಂಕುಲಮಿರದೆ ಪರಿವಂತೆ” (ಸಂ.೧೬, ೩೯) ಎಂದೂ, ವರ್ಷಾಗಮದಲ್ಲಿ “ಎದ್ದುವು ಮುಗಿಲ್ಗಳ್ ಎಣ್ದೆಸೆಗಳೊಳ್ ತರತರದೊಳಿದ್ದುವು ಗಿರಿಗಳಂತೆ” (ಸಂ. ೧೭, ೨) ಎಂದೂ, ಅಪರ ದಿಗ್ಭಾಗದಲ್ಲಿ ಮುಳುಗುತ್ತಿರುವ ತರಣಿ ಮಂಡಲವನ್ನು “ಪಿರಿದೆನಿಪ ಕತ್ತಲೆಯ ರಾಶಿಯಂ ಪೊತ್ತಿಕೊಂಡುರಿವ ವೆಂಕೆಯ ಕಡೆಯೊಳುಳಿದ ಕೆಂಗೆಂಡಮೆನೆ” (ಸಂ. ೧೨, ಪ. ೨೦) ಎಂದೂ, ಗರ್ಭಲಾಂಛನವನ್ನು “ಪುದುಗಿರ್ದು ಪರಿಮಳದೊಳೊಪ್ಪುವ ಲತಾಂತ ಕಟ್ಮಲದಂತೆ” (ಸಂ. ೧೮, ೧೯) ಎಂದೂ, “ವನಜದರಳನುಳಿದಾರಡಿಗೆ ಬೊಬ್ಬಳಿಯ ಪೂವಿನೊಳ್ ಮಧುವುಂಟೆ” (ಸಂ. ೧೯, ೧೨) ಎಂದೂ, ಗರ್ಭಿಣಿಯಾದ ಸೀತಾಮಾತೆ ಶ್ರೀರಾಮನು ಲಕ್ಷ್ಮಣನಿಗಿತ್ತ  ಕಠೋರಾಜ್ಞೆಯನ್ನು ಕೇಳಿ “ಬಿರುಗಾಳಿ ಪೊಡೆಯಲ್ಕೆ ಕಂಪಿಸಿ ಫಲಿತ ಕದಳಿ ಮುರಿದಿಳೆಗೊರಗುವಂತೆ” (ಸಂ. ೧೯, ೧೬) ಬಿದ್ದಳೆಂದೂ, ಲಕ್ಷ್ಮಣನು ಬಿಟ್ಟು ತೆರಳಲು ಕಾಡಿನಲ್ಲಿ ಮೈಮರೆತೊರಗಿದ ಸೀತಾಮಾತೆಯನು “ಬೇರ್ಗೊಯ್ದು ಬಿಸುಟೆಳೆಯ ಬಳ್ಳಿಯಂತೆ” (ಸಂ. ೧೯, ಪ. ೩೧) ಎಂದೂ, ಅಡವಿಯಲ್ಲಿ ಬಗೆಗೆಟ್ಟ ಸೀತೆ ವಾಲ್ಮೀಕಿಯ ಕಣ್ಣಿಗೆ “ಗ್ರೀಷ್ಮಋತುವಿಂನವೆದ ಕಾಂತಾರದಧಿದೇವಿ ತಾನೆನಲ್” (ಸಂ. ೧೯, ೩೮) ಕಂಡಳೆಂದೂ, ಕುಶನ ಶರಾಘಾತಿಗೆ ಭರತಾನುಜನು “ಗಿರಿತಟದೊಳ್ ಒಂದೊಂದರೊಳ್ ಪೆಣಗಿ ಸೋಲ್ತ ಮದಕರಿ ದರಿಗುರುಳ್ದಂತೆ” (ಸಂ. ೨೦, ೩೧) ಬಿದ್ದನೆಂದೂ, ಕುಶನು ಮಾರಾಂತ ಕಾಲಜಿತುವನ್ನು  “ಅಜ ಗಳಸ್ತನದಂತೆಸೆವ ನಿನ್ನಾ ಪೌರುಷಂ” (ಸಂ. ೨೦, ೫೨) ಎಂದು ಮೂದಲಿಸಿದನೆಂದೂ, ಕುಶಲವರು ತಮ್ಮ ತಾಯಿಯಡಿಗೆ ಎಳೆತಂದ ಹನುಮ ಜಾಂಬವರು “ಕಾನನದ ಬೇಂಟೆಯೊಳ್ ಸಿಕ್ಕಿ ಸೀಗರಿಗೊಂಬ ಮೃಗಪೋತಕಂಗಳಂತೆ” (ಸಂ. ೨೧, ೪೧) ಇದ್ದರೆಂದೂ, ಕರ್ಣಜ ಪಾರ್ಥರಾಸ್ಯಂಗಳು “ಇಡಿದ ಕತ್ತೆಲೆಯಿಂ ಜಗುಳ್ದ ವಾರಿಜದಂತೆ, ಬಿಡದೆ ಮುಸುಕಿದ ಮೇಘಮಂ ಕಳೆದ ರವಿಯಂತೆ” (ಸಂ. ೨೪, ೬೭) ಇದ್ದುವೆಂದೂ, ದುಷ್ಟಬುದ್ಧಿ “ಕ್ರೂರ ನಕ್ರಾಕುಲದೊಳಿಡಿದಿರ್ಪ ಪೆರ್ಮಡು ಗಭೀರ ಜಲದೊಳೆಸೆವಂತೆ” (ಸಂ. ೨೮, ೨೮) ಇದ್ದನೆಂದೂ,ವಿಷಯೆ “ಸನ್ನುತ ವಸಂತದೊಳ್ ಬಾಯ್ದೆರೆವ ಕೋಗಿಲೆಯ ಮರಿವೊಲವಳಿಂತೆಂದಳು” (ಸಂ. ೨೯, ೩೦) ಎಂದೂ, “ಪರ ಹಿಂಸೆಯಂ ಮಾಡಿ ಮಾನವಂ ಬಾಳ್ದಪನೆ ದೀಪವಂ ಕೆಡಿಸುವ ಪತಂಗದಂತೆ” (ಸಂ. ೩೧, ೫೩) ಎಂದೂ, ಸರೋವರದಲ್ಲಿ ಮಿಂದ ಲಲನೆಯರು –


* ೧೯೩೩ ರಲ್ಲಿ ಚಿಕ್ಕಮಗಳೂರಿನವರು ಪ್ರಕಟಿಸಿದ ‘ಲಕ್ಷ್ಮೀಶ ಕವಿ ಪ್ರಶಸ್ತಿ’ ಯಲ್ಲಿ ಮೊದಲು ಪ್ರಕಟವಾಯಿತು