ಆಚಾರ್ಯ ಬಿ.ಎಂ. ಶ್ರೀಕಂಠಯ್ಯನವರು ಶರೀರತ್ಯಾಗಮಾಡಿದರಂತೆ. ಮಾಡಿದರು ಎಂದು ಹೇಳಲು ಮನಸ್ಸು ಹಿಂಜರಿಯುತ್ತಿದೆ. ಅಷ್ಟು ಅನಿರೀಕ್ಷಿತ ಆ ಸುದ್ದಿ. ಅಷ್ಟು ಆಕಸ್ಮಿಕ ಅದು ಬಂದ ರೀತಿ. ಸುದ್ದಿಯನ್ನು ಆಲಿಸಿದ ಪ್ರತಿಯೊಬ್ಬ ಅಕ್ಕರಿಗ ಕನ್ನಡಿಗನೂ “ಹೌದೆ!” ಎಂದು ಹೌಹಾರಿ ಬೀಳದಿರಲಾರನು.

ಹೌದು! ಕನ್ನಡ ಸಾಹಿತ್ಯ ನವೋದಯಕ್ಕೆ ನಾಂದೀಸ್ವರೂಪರಾದವರು, ಕನ್ನಡದ ಬಾವುಟವನ್ನು ತೋಳು ನೀಡಿ ನಭಕ್ಕೆತ್ತಿದವರು, ಕನ್ನಡದ ಏಳ್ಗೆಗಾಗಿ ಕನ್ನಡದ ಬಾಳ್ಕೆಗಾಗಿ ನಾನಾ ರಂಗಗಳಲ್ಲಿ ಅನೇಕ ವಿಧಾನಗಳಲ್ಲಿ ಉಸಿರ್ಕಟ್ಟಿ ಒಮ್ಮನಸ್ಸಿನಿಂದ ಹೋರಾಡಿದವರು, “ಬಾಳ್ ಕನ್ನಡ ತಾಯ್, ಏಳ್ ಕನ್ನಡದ ತಾಯ್, ಆಳ್ ಕನ್ನಡದ ತಾಯ್!” ಎಂದು ಕೊರಳೆತ್ತಿ ಕೂಗಿದವರು, ಕೈಬೀಸಿ ಕರೆದವರು, ತೆರಪಿಲ್ಲದೆಚ್ಚರಿಸಿದವರು, ಹುರಿದುಂಬಿಸಿದವರು, ಹಾರೈಸಿದವರು, ಹರಸಿದವರು ನಿನ್ನೆ ಹಗಲು ದೇಹತ್ಯಾಗಮಾಡಿದರಂತೆ! ಕನ್ನಡಮ್ಮನಿಗಾಗಿ ಬಹಿರಂಗವಾಗಿಯೂ ಅಂತರಂಗವಾಗಿಯೂ ಅನೇಕ ತ್ಯಾಗಗಳನ್ನು ಮಾಡಿದ ಆ ಮಹಾದಾನಿಗೆ ಇದು ಕೊನೆಯ ತ್ಯಾಗ, ಈ ಶರೀರತ್ಯಾಗ.

ಕೊನೆಯದೆಂದು ಹೇಳುವುದು ನಮ್ಮ ಲೋಕವ್ಯವಹಾರ ದೃಷ್ಟಿಯಿಂದ ಮಾತ್ರ. ಏಕೆಂದರೆ ಅಮರಾತ್ಮದ ಏಕೆಂದರೆ ಅನಂತಯಾತ್ರೆಗೆ ಕೊನೆ ಎಲ್ಲಿ? ಯಾವುದು ಅನಂತವೋ ಅದರ ಅನಂತ ಸಾಹಸಗಳಿಗೆ ಅಂತ್ಯವೆಲ್ಲಿ? ಆದ್ದರಿಂದ ಅದು ಕಡೆಯದೂ ಅಲ್ಲ, ಕೊನೆಯದೂ ಅಲ್ಲ. ಕೈಕೊಂಡ ಕಾರ್ಯವನ್ನು ಮುಂದುವರಿಸುವ ಸಲುವಾಗಿ, ಕನ್ನಡದ ಅಭ್ಯುದಯ ಸಾಧನೆಗೆ ಸ್ವರ್ಗವೇದಿಕೆಯಲ್ಲಿ ಸೊಂಟಕಟ್ಟುವ ಸಲುವಾಗಿ, ಅಲ್ಲಿಯ ದೇವತಾಶೀರ್ವಾದ ಶಕ್ತಿಗಳನ್ನು ಇಲ್ಲಿಗೆ ಆಮಂತ್ರಿಸುವುದಕ್ಕಾಗಿ, ನಮ್ಮ ಇಲ್ಲಿಯ ಸಾಧನೆಗೆ ಅಲ್ಲಿಯ ಕೃಪಾ ಸಹಾಯವನ್ನು ಸಂಪಾದಿಸುವುದಕ್ಕಾಗಿ ಪೂಜ್ಯ ಶ್ರೀಕಂಠಯ್ಯನವರು ಅಶರೀರಯಾತ್ರೆ ಹೋಗಿದ್ದಾರೆ. ಯಾರು ಹೇಳಿದರು ಅವರು ಮಡಿದರೆಂದು? ಈ ಬದುಕಿನಿಂದ ಆ ಬದುಕಿಗೆ ವರ್ಗವಾಗಿದ್ದಾರೆ! ಕನ್ನಡಕ್ಕಾಗಿ ದುಡಿದು ಮುನ್ನಡೆದ ಮಹನೀಯರೊಡನೆ ಸೇರಿದ್ದಾರೆ, ಕಾರ್ಯಾರ್ಥವಾಗಿಯೆ! ಕಳಿದವರಿಗಾಗಿ ಅಳುವುದು ಲೋಕದ ರೂಢಿ. ಆದರೆ ಚಿರಂಜೀವಿಯಾದ “ಶ್ರೀ” ಯುವರಿಗಾಗಿ ನಾವು ಅಳುವುದು ಸಲ್ಲ. ಏತಕ್ಕೆ ಅಳು? ನಶ್ವರ ಹೋಯಿತು, ಶಾಶ್ವತ ತೇಜಸ್ಸಿನ ಶಾಶ್ವತ ವೈಭವಕ್ಕಾಗಿ. ಇಂದು ಶ್ರೀಕಂಠಯ್ಯನವರು ಹಿಂದಿಗಿಂತಲೂ ನೂರ್ಮಡಿಯಾಗಿ ಬದುಕಿದ್ದಾರೆ! ನಮ್ಮೆದೆಯಲ್ಲಿ ಉಕ್ಕುತ್ತಿರುವ ಗೌರವ ಭಾವವೇ ಅದನ್ನು ಸಮರ್ಥಿಸುತ್ತಿದೆ! ನಮ್ಮ ಹೃದಯಭೂಮಿಕೆಯಲ್ಲಿ ಹೆಡೆಯೆತ್ತುತ್ತಿರುವ ದಿವ್ಯೋಲ್ಲಾಸದ ಅಗ್ನಿಶೇಷನೇ ಅದಕ್ಕೆ ಸಾಕ್ಷಿ! ಆಚಾರ್ಯ ಶ್ರೀಕಂಠಯ್ಯನವರು ದೇಹಬಂಧನದಿಂದ ವಿಮುಕ್ತರಾಗಿ, ಏಕಕಾಲದಲ್ಲಿ ನಮ್ಮೆಲ್ಲರೊಡನೆಯೂ ಯಾವಾಗಲೂ ಇರುವ ದಿವ್ಯಸ್ಥಿತಿಗೇರಿದ್ದಾರೆ.

ಪೂಜ್ಯ ಶ್ರೀಕಂಠಯ್ಯನವರ ಪರಿಚಯದಿಂದ ಪುಣ್ಯ ನನ್ನನ್ನು ಸುಮಾರು ಇಪ್ಪತ್ತು ಇಪ್ಪತ್ತೆರಡು ವರ್ಷಗಳಿಂದಲೂ ಅವಿರಾಮವಾಗಿ ಆಶೀರ್ವದಿಸುತ್ತಿದೆ. ಮೊದಲು ನನಗವರು ಗೋಚರವಾದದ್ದು ಮೈಸೂರಿನ ಮಹಾರಾಜರ ಕಾಲೇಜಿನಲ್ಲಿ ಇಂಗ್ಲಿಷ್ ಪ್ರೋಫೆಸರ‍್ ಆಗಿ. ಆಗ ಇನ್ನೂ ನನ್ನ ಬಾಳಿನ ದಿಗಂತದಲ್ಲಿ ಕನ್ನಡ ಕಾವ್ಯರವಿ ಮೂಡಿರಲಿಲ್ಲ. ಮೂಡಿರಲಿಲ್ಲ  ಮಾತ್ರವಲ್ಲ, ಅದು ಮೂಡುವ ಸುಳಿವೂ ಇರಲಿಲ್ಲ. ನನ್ನ ಒಲವೂ ಒಲವರವೂ ಇಂಗ್ಲಿಷ್  ಸಾಹಿತ್ಯಕ್ಕೆ ಸಂಪೂರ್ಣವಾಗಿ ಮೀಸಲಾಗಿದ್ದ ಕಾಲ. ನನ್ನ ಕಾವ್ಯದೇವಿ ನನಗೆ ಗೋಚರವಾದುದೂ ಇಂಗ್ಲಿಷ್ ಮೊಗವಾಡ ಹಾಕಿಕೊಂಡೇ! ನನ್ನ ಕವಿಪ್ರತಿಭೆಯನ್ನು ಕನ್ನಡದ ಕಡೆಗೆ ತಿರುಗಿಸಿದ ನಿಮಿತ್ತಮಾತ್ರ ವ್ಯಕ್ತಿ ಒಬ್ಬ ವೆದೇಶಿಯ ಕವಿಯಾದರೂ, ಅದಕ್ಕೆ ಮೆಚ್ಚುಗೆಯ ಪ್ರೋತ್ಸಾಹ ತೀರ್ಥವನ್ನು ತಳಿದು ನಿದರ್ಶನ ಮಾತ್ರದಿಂದಲೆ ನನಗೆ ಮಾರ್ಗದರ್ಶಕರಾಗಿ, ಅದರ ಬೆಳೆಗೆ ಬೇಕಾದ ವಿದ್ವದ್ಬಲವನ್ನು ಶೇಖರಿಸಲು ಕಾರಣವಾದ ವ್ಯಕ್ತಿಗಳಲ್ಲಿ ಶ್ರೀಯುವರು ಅಮಿತಗಣ್ಯರಾಗಿದ್ದಾರೆ.

ನನಗಿನ್ನೂ ನೆನಪಿದೆ. ಒಂದು ಸಂಜೆ ಕಾಲೇಜಿನ ಕರ್ಣಾಟಕ ಸಂಘದಲ್ಲಿ ಅವರು ರನ್ನನ ‘ಗದಾಯುದ್ಧ’ ವನ್ನು ಕುರಿತು ಉಪನ್ಯಾಸ ಮಾಡಿದರು. ಬಹುಶಃ ಅದನ್ನು ನಾಟಕಕ್ಕೆ ತಿರುಗಿಸುತ್ತಿದ್ದ ಕಾಲವೋ ಅಥವಾ ತಿರುಗಿಸಲು ಸಂಕಲ್ಪಿಸುತ್ತಿದ್ದ ಕಾಲವೋ ತಿಳಿಯದು. ಹೊರಗೆ ಬಂದ ಮೇಲೆ ಸಮೀಪದಲಿಯೆ ಗುಂಪಿನಲ್ಲಿ ಹೋಗುತ್ತಿದ್ದ ನನ್ನನ್ನು ಕರೆದರು. ನಾನು ಕರೆಗೆ ಬಹಳ ಹೆಮ್ಮೆಪಟ್ಟುಕೊಂಡೇ ಅವರೆಡೆಗೆ ಹೋದೆ. ಅವರು ಕಾಲೇಗಿನ ಅಂಗಳಕ್ಕೆ ಮೋಗವಾಗಿ ಕಟಕಟೆಯ ಮೇಲೆ ಒರಗಿನಿಂತು ನನ್ನೊಡನೆ ವಿಷಯ ಪರಿಶೀಲನೆ ಮಾಡತೊಡಗಿದರು. ನಾನು ಬಿ.ಎ. ತರಗತಿಯ ಮೊದಲನೆಯ ವರ್ಷದಲ್ಲೊ ಎರಡನೆಯ ವರ್ಷದಲ್ಲೊ ಇದ್ದೆ. ಆಗ ನನಗೆ ಕನ್ನಡಲ್ಲಿ ಸಡ್ಡೆಯಾಗಲಿ ಅಭಿಮಾನವಾಗಲಿ ಪರಿಶ್ರಮವಾಗಲಿ ಪ್ರಯೋಗಾಸಕ್ತಿಯಾಗಲಿ ವಿಶೇಷವಾಗಿರದಿದ್ದ ಕಾಲ. ಆದರೆ ಇಂಗ್ಲಿಷಿನಲ್ಲಿ ಅತಿಮೋಹ, ಅತಿಗೌರವ, ಅತಿಶ್ರದ್ಧೆ ಇದ್ದುದರಿಂದ ಇಂಗ್ಲಿಷ್  ಪ್ರೋಫೆಸರನ್ನು ಕಂಡರೆ ಗೌರವ. ಇಂಗ್ಲಿಷ್ ಪ್ರೊಫೆಸರ್ ಕೂಡ ಕನ್ನಡ ಸಂಘದಲ್ಲಿ ಕನ್ನಡದಲ್ಲಿ ಕನ್ನಡ ಕವಿಯೊಬ್ಬನ ಕಾವ್ಯವನ್ನು ಕುರಿತು ಮಾತನಾಡುತ್ತಾರೆಂದು ಸಭೆಗೆ ಹೋಗಿದ್ದೆನೋ ಅಥವಾ ಆಗತಾನೆ ಕನ್ನಡದ ಕಡೆಗೆ ನನ್ನ ಕಣ್ಣು, ಕೃಪಾಕಟಾಕ್ಷವೆಂಬಂತೆ, ಒಲೆಯುತ್ತಿದ್ದ ಕಾಲವೋ? ಶ್ರೀಕಂಠಯ್ಯನವರು ಗದಾಯುದ್ಧವನ್ನು ಕುರಿತು ಸಂವಾದ ನಡೆಸತೊಡಗಿದರು. ನನ್ನಲ್ಲಿ ಯಾವ ಯೋಗ್ಯತೆಯನ್ನು ಕಂಡರೋ, ಯಾವ ಅಧಿಕಾರವನ್ನು ಊಹಿಸಿದರೋ ನಾನರಿಯೆ. ಯಾವ ಯಾವ ವಿಷಯದಲ್ಲಿ ಕುರಿತು ಪ್ರಸ್ತಾಪಿಸಿದರೊ ಅದೂ ನೆನಪಾಗುವುದಿಲ್ಲ. ಒಂದು ಮಾತ್ರ ಸುಸ್ಪಷ್ಟವಾಗಿ ಮನಸ್ಸಿನಲ್ಲಿದೆ.

ವೃತ್ತಗಳನ್ನು ಅಥವಾ ಕನ್ನಡ ಪದ್ಯಗಳನ್ನು ಇಂಗ್ಲಿಷ್ ಪದ್ಯಗಳನ್ನು ವಾಚಿಸುವಂತೆ ಏಕೆ ನಾಟಕೀಯವಾಗಿ ಓದಬಾರದು? ಹಾಗೆ ಮಾಡುವುದಾದರೆ (ಅವರೇ ಆ ದಿನ ‘ಗದಾಯುದ್ಧ’ದ ಭಾಗಗಳನ್ನು ಓದಿತೋರಿಸಿದಂತೆ) ಇಂಗ್ಲಿಷ್ “ಬ್ಲಾಂಕ್ ವರ್ಸ್” ಅನ್ನು ಹೋಲುವಂತೆ ಕನ್ನಡದಲ್ಲಿಯೂ ವೃತ್ತ ಛಂದಸ್ಸಿನಲ್ಲಿ ಕಾವ್ಯರಚನೆ ಮಾಡಬಹುದಲ್ಲವೇ?  – ಅವರ ಆ ಪ್ರಶ್ನೆಗೆ ನಾನೇನು ತೊದಲುತ್ತರ ಹೇಳಿದೇನೋ ನೆನಪಿಲ್ಲ. ಒಂದು ಮಾತ್ರ ನೆನಪಿದೆ: ವೃತ್ತಗಳನ್ನು ರಾಗವಾಗಿಯೇ ಓದಬೇಕೆಂದು ನಾನು ಹಠ ಹಿಡಿದೆ. ಅವರು ವಾದಕ್ಕೆ ತೊಡಗಲಿಲ್ಲ. ಸರಿ, ಇರಲಿ ಎಂದು ಬೇರೆಯೆ ವಿಷಯಕ್ಕೆ ಹೊರಟರು. ಕೆಲಕಾಲದ ತರುವಾಯ ನಾನು ಸ್ವತಂತ್ರವಾಗಿಯೇ, ಆಗ ತಾನೆ ಬಳಕೆಗೆ ಬರುತ್ತಿದ್ದ ಸರಳ ರಗಳೆಯ ಛಂದಸ್ಸಿನಲ್ಲಿ ಮೊತ್ತಮೊದಲನೆಯ ನಾಟಕವನ್ನು ರಚಿಸಿ ಶ್ರೀ ವೆಂಕಣ್ಣಯ್ಯನವರಾದಿಯಾಗಿ ಹಲವು ಹಿರಿಯರ ಮೆಚ್ಚುಗೆಗೆ ಪಾತ್ರನಾದಾಗ ಶ್ರೀಕಂಠಯ್ಯನವರು ಎಷ್ಟು ಸಂತೋಷಪಟ್ಟರೆಂಬುದನ್ನು ಸೂಚಿಸಲು ಕಲ್ಬುರ್ಗಿಯ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಒಂದು ಸಣ್ಣ ಘಟನೆಯನ್ನು,ಸದಸ್ಯರ ಕ್ಷಮೆ ಬೇಡಿ, ತಿಳಿಸುತ್ತೇನೆ. ‘ಶ್ರೀ’ಯವರ ‘ಗದಾಯುದ್ಧ’ ನಾಟಕ ಮತ್ತು ನನ್ನ ‘ಯಮನ ಸೋಲು’ ಎರಡು ನಾಟಕಗಳನ್ನೂ ಪ್ರೇಕ್ಷಕರು ಮನದಣಿಯೆ ನೋಡಿದ ಮೇಲೆ ‘ಶ್ರೀ’ಯವರು ತಮಗೆ ಅರ್ಪಿತವಾಗಿದ್ದ ಹಾರವನ್ನು ರಂಗದ ಮೇಲೆ ಬಹಿರಂಗವಾಗಿ ನನ್ನ ಕೊರಳಿಗೆ ಹಾಕಿ “ಇದು ಇವರಿಗೆ ಹೆಚ್ಚಾಗಿ ಸಲ್ಲತಕ್ಕದ್ದು” ಎಂದು ಹೇಳಿಬಿಟ್ಟರು! ಹೀಗೆ ಒಂದಲ್ಲ, ಎರಡಲ್ಲ, ಅನೇಕ ಸಮಯಗಳಲ್ಲಿ ಹಲವು ರೀತಿಗಳಿಂದ ನನ್ನಂತಹ ಇನ್ನೂ ಅನೇಕ ಕಿರಿಯರನ್ನೂ ಸಮಾನರೆಂಬಂತೆ ಕಂಡು, ಅವರ ಲಜ್ಜಾಭಯಗಳನ್ನು ಪರಿಹರಿಸಿ, ‘ಶ್ರೀ’ಯವರು ತಮ್ಮ ಕನ್ನಡತನದ ತೇಜಸ್ಸನ್ನು ಸಾವಿರಾರು ಹೃದಯಗಳಲ್ಲಿ ಹರಿಯಬಿಟ್ಟಿದ್ದಾರೆ. ಕನ್ನಡನಾಡು ತನ್ನ ನುಡಿ, ತನ್ನ ಸಾಹಿತ್ಯ ಇರುವವರೆಗೆ ಶ್ರೀಕಂಠಯ್ಯನವರನ್ನು ನೆನೆಯುತ್ತಿರುತ್ತದೆ.

ಹಿರಿಯ ಬಾಳನ್ನು ಬಾಳಿದ ಅವರ ವಿಚಾರವಾಗಿ ಈ ಹದಿನೈದು ನಿಮಿಷದ ಭಾಷಣದಲ್ಲಿ ಹೇಳಬೇಕಾದದ್ದೆಲ್ಲವನ್ನೂ ಹೇಳಿಬಿಡುತ್ತೇನೆಂದು ಪ್ರಯತ್ನಿಸುವುದು ಬಾಲ ಚಾಪಲ್ಯವಾದೀತು. ಆ ಅಸಾಧ್ಯ ಪ್ರಯತ್ನಕ್ಕೆ ಬಹುದೂರ ನಿಲ್ಲುತ್ತದೆ, ಕೈ ಮುಗಿದು, ನನ್ನ ಈ ನಿವೇದನ. ನಾನು ಅವರನ್ನು ಕಂಡಿರುವುದು ವಿಶೇಷವಾಗಿ ಸಾರ್ವಜನಿಕ ಜೀವನದಲ್ಲಿ – ಅಧ್ಯಾಪಕ, ವಾಗ್ಮಿ, ಸಾಹಿತ್ಯವಿಮರ್ಶಕ, ಸಾಹಿತ್ಯಕರ್ತೃ, ಕನ್ನಡಭಕ್ತ, ಪ್ರಚಾರಪಟು, ದಾನಿ, ತ್ಯಾಗಿ, ಇತ್ಯಾದಿ ಪಾತ್ರಗಳಲ್ಲಿ. ಆದರೆ ಈ ಎಲ್ಲ ಪಾತ್ರಗಳಿಗೂ ಶಕ್ತಿದಾಯಕವಾಗಿರುವ ಪಾತ್ರಗಳೂ ಆತ್ಮವ್ಯಾಪಾರಗಳೂ ಜೀವಾತ್ಮನಿಗೆ ಇವೆ ಎಂಬುದನ್ನು ನಾನು ಚೆನ್ನಾಗಿ ಬಲ್ಲೆ. ಬಹುಶಃ ಅವುಗಳಲ್ಲಿ ಕೆಲವು ಆಯಾ ವ್ಯಕ್ತಿಗಲ್ಲದೆ ಇತರರಿಗೆ ಅಗೋಚರವೂ ಆಗಿರುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ ಆ ಅಗೋಚರ ವ್ಯಾಪಾರಗಳಿಗೇ ನಾನು ವರಿಷ್ಠವಾಗಿ ಬೆಲೆ ಕಟ್ಟುತ್ತೇನೆ. ಶ್ರೀಮಾನ್ ಶ್ರೀಕಂಠಯ್ಯನವರು ತಮ್ಮ ಓದುಮನೆಯ ಮೇಜಿನ ಮೇಲೆ ತಮಗೆದುರಾಗಿ ಬುದ್ಧದೇವನ ಒಂದು ಪ್ರಶಾಂತ ಸುಂದರವಾದ ಬಿಳಿಯ ವಿಗ್ರಹವನ್ನು ಇಟ್ಟುಕೊಂಡಿರುತ್ತಿದ್ದುದು ನಾನು ಅವರಲ್ಲಿಗೆ ಹೋದಾಗಲೆಲ್ಲ ಕಣ್ಣಿಗೆ ಬೀಳುತ್ತಿತ್ತು. ಅದರ ವಿಚಾರವಾಗಿ ಅವರು ಒಂದೇ ಒಂದು ಸಾರಿ ನನ್ನೊಡನೆ  ಹೇಳಿದ್ದೆಂದರೆ: ಅದನ್ನು ಯಾವುದೋ ಒಂದು ಪ್ರದರ್ಶನದಲ್ಲಿ ಕೊಂಡುಕೊಂಡ ವಿಚಾರವಾಗಿ! ಆದರೆ ಅದನ್ನು ನೋಡುತ್ತಿದ್ದ ಅವರ ಕಣ್ಣೂ, ಅದನ್ನು ಬಣ್ಣಿಸುತ್ತಿದ್ದ ರೀತಿಯಲ್ಲಿ ಇಣುಕುತ್ತಿದ್ದ ದಿವ್ಯರುಚಿಯೂ ಬೇರೊಂದು ರಹಸ್ಯ ಕಥೆಯನ್ನೂ ಬಯಲಿಗೆಳೆಯುತ್ತಿದ್ದವು. ಅವರ ಕೆಲವು ಭಾಷಣಗಳಲ್ಲಿಯೂ ಆ ರುಚಿ ಅಲ್ಲಲ್ಲಿ ತಲೆಹಾಕದೆ ಇರುತ್ತಿರಲಿಲ್ಲ. ಅದೆಲ್ಲ ಅವರ ಆತ್ಮಶ್ರೀಗೆ ಸಂಬಂದಪಟ್ಟುದು; ಚಿರಕಲ್ಯಾಣಕ್ಕೆ ಕಾರಣವಾದದ್ದು; ಅವರ ಜನ್ಮ ಜನ್ಮಾಂತರಗಳ ಸಂಸ್ಕಾರಗಳಿಗೂ ಸಚ್ಚಿದಾನಂದ ಸಾಧಕವಾದ ಆತ್ಮವಿಕಾಸಕ್ಕೂ ಸಮನ್ವಿತವಾದದ್ದು. ನಮಗೆ ಪ್ರಕೃತವಾದದ್ದು ಈ ಜನ್ಮದಲ್ಲಿ ವ್ಯಕ್ತಗೊಂಡ ಈ ಪುರಷಕಾರಕ್ಕೆ ಸಂಬಂದಪಟ್ಟದ್ದು ಮಾತ್ರ.

ಕನ್ನಡ ಸಾಹಿತ್ಯಕ್ಕೆ ಶ್ರೀಯವರ ಕಾಣಿಕೆ ಅಪೂರ್ವವಾದದ್ದು. ‘ಇಂಗ್ಲಿಷ್‌ ಗೀತಗಳು’ ‘ಅಶ್ವತ್ಥಾಮನ್’ ‘ರಜತಮಹೋತ್ಸವ ಪ್ರಗಾಧ’ – ಒಂದೊಂದೂ ಕನ್ನಡ ನವೋದಯಕ್ಕೆ ಹಾದಿ ತೋರಿಸಿದ ಕೃತಿಗಳು. ಅವೆಲ್ಲವುಗಳನ್ನು ಕುರಿತ ವಿಶಾಲವಾದ ಪ್ರಶಂಸೆಯೂ ವಿವರವಾದ ವಿಮರ್ಶೆಯೂ ಈ ಆಕಾಶವಾಣಿಯಿಂದಲೆ ಇನ್ನು ಒಂದೆರಡು ವಾರಗಳ ಒಳಗಾಗಿ ನಡೆಯಲಿದೆಯೆಂದು ಕೇಳುತ್ತೇನೆ. ಇದು ಸಮಯವೂ ಅಲ್ಲ, ಇಲ್ಲಿ ಸಮಯವೂ ಇಲ್ಲ.

ಶ್ರೀ ಅರವಿಂದರು ಸ್ವಾಮಿ ವಿವೇಕಾನಂದರ ಪುರಷಕಾರದ ವಿಚಾರವಾಗಿ ಹೇಳುತ್ತಾ ಕೊನೆಯಲ್ಲಿ ಹೀಗೆಂದಿದ್ದಾರೆ:

“Not only are the men greater than their definite works, but their influence in so wide and formless it has little relation to any formal work that they have left behind them.”

ಹಿರಿಯರ ಹಿರಿಮೆ ಅವರು ತಮ್ಮ ಹಿಂದೆ ಬಿಟ್ಟುಹೋಗುವ ಕೃತಿಗಳಿಗಿಂತಲೂ ಹಿರಿದಾದುದು. ಆಚಾರ್ಯ ಶ್ರೀಕಂಠಯ್ಯನವರ ವಿಚಾರದಲ್ಲಿ ಅದು ಬಹಳ ಸತ್ಯವೆಂದು ನನ್ನ ಭಾವನೆ. ಅವರು ಸಂಕಲ್ಪಿಸಿದ್ದ ಕೃತಿಗಳನ್ನು ಅವರು ಕೈಗೂಡಿಸಿರುವ ಕೃತಿಗಳಿಗೆ ಹೋಲಿಸಿದರೆ ಆ ಮಾತು ಮತ್ತೂ ಅರ್ಥವತ್ತಾಗುತ್ತದೆ.

ಷೇಕ್ಸ್ಪಿಯರ್ ನಾಟಕಗಳನ್ನೆಲ್ಲ ಕನ್ನಡಕ್ಕೆ ಇಳಿಸಬೇಕು; ಗ್ರೀಕ್‌ ನಾಟಕಗಳನ್ನು ಭಾಷಾಂತರಿಸಬೇಕು; ಕರ್ಣಾಟಕವನ್ನು ಮತ್ತೆ ಕೂಡಿಸಬೇಕು; ಕರ್ಣಾಟಕಕ್ಕೊಂದು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಬೇಕು; ಕನ್ನಡ ಎಲ್ಲೆಲ್ಲಿಯೂ ವೈಭವದಿಂದ ಮೆರೆಯಬೇಕು; ಅದಕ್ಕೆ ಎಲ್ಲರ ಮನ್ನಣೆಯೂ, ದೊರೆಯುವಂತಾಗಬೇಕು – ಒಂದೇ? ಎರಡೇ? ಈ ಹೊಂಗನಸುಗಳು, ಈ ಹೆಗ್ಗನಸುಗಳು? ನೂರಾರು! ಆದರೇನು? ಮೂರಕ್ಕಾಶಿಸಿ ಮೂರನ್ನೂ ಪಡೆದವನಿಗಿಂತ ನೂರಕ್ಕಾಶಿಸಿ ಆರನ್ನೆ ಪಡೆಯುವಾತನು ಹಿರಿಯನೆ ದಿಟ!

ಯಾರು ಬಲ್ಲರು? ಈಡೇರದ ಸಂಕಲ್ಪಗಳನ್ನು ಈಡೇರಿಸುವುದಕ್ಕೆ ಮತ್ತೊಮ್ಮೆ. . . . . ಅದನ್ನೇಕೆ ಬಾಯಬಿಟ್ಟಾಡಬೇಕು ಈ ಸಮಯದಲ್ಲಿ? ಲೋಕಲೋಕಾಂತರಗಳಲ್ಲಿ ಜೀವಕ್ಕೆ ಹಾದಿ ಸುಗಮವಾಗಲೆಂದು ಈಶೋಪನಿಷತ್ತಿನ ಮಂತ್ರಗಳಲ್ಲಿ ಪ್ರಾರ್ಥಿಸಿ, ಈ ಭಾಷಣವನ್ನು ಪೂರೈಸುತ್ತೇನೆ:

ವಾಯುರನಿಲಮಮೃತಮಥೇದಂ ಭಸ್ಮಾನ್ತಂ ಶರೀರಮ್ |
ಓಂ ಕ್ರತೋ ಸ್ಮರ, ಕೃತಂ ಸ್ಮರ; ಕ್ರತೋ ಸ್ಮರ, ಕೃತಂ ಸ್ಮರ ||
ಅಗ್ನೇ ನಯ ಸುಪಥಾ ರಾಯೇ ಆಸ್ಮಾನ್
ವಿಶ್ವಾನಿ ದೇವ ವಯುನಾನಿ ವಿದ್ವಾನ್ |
ಯುಯೋಧ್ಯಸ್ಮಜ್ಜುಹುರಾಣಮೇನೋ
ಭೂಯಿಷ್ಠಾಂ ತೇ ನಮ ಉಕ್ತಿಂ ವಿಧೇಮ ||
ಓಂ ಶಾಂತಿಃ ಶಾಂತಿಃ ಶಾಂತಿಃ.

(೧೯೪೬)


* ೧೯೪೬ರಲ್ಲಿ ಪ್ರಬುದ್ಧ ಕರ್ಣಾಟಕದಲ್ಲಿ ಮೊದಲು ಪ್ರಕಟವಾಯಿತು.