ಮೊದಲು ‘ಪ್ರಕೃತಿಸೌಂದರ್ಯ’ವೆಂಬ ಶಬ್ದಸಮುದಾಯದ ಅರ್ಥವನ್ನು ತಿಳಿಯಬೇಕಾಗಿದೆ. ತತ್ವಜ್ಞಾನಿಗಳು ‘ಪ್ರಕೃತಿ’ ಎಂಬ ಶಬ್ದಕ್ಕೆ ಬಹಳ ರಹಸ್ಯಾರ್ಥವನ್ನು ಕಲ್ಪಿಸಿಕೊಂಡಿದ್ದಾರೆ. ಆದರೆ ಸಾಹಿತ್ಯವು ಆ ಅರ್ಥವಷ್ಟನ್ನೂ ಅಂಗೀಕರಿಸಿರುವುದಿಲ್ಲ. ಪುರಾತನ ತತ್ವಜ್ಞನಾದ ಕಪಿಲಮಹರ್ಷಿ ತನ್ನ ಸಾಂಖ್ಯಸಿದ್ಧಾಂತದಲ್ಲಿ ‘ಪ್ರಕೃತಿ’ ‘ಪುರುಷ’ ಎಂಬೆರಡು ಶಬ್ದಗಳನ್ನು ಉಪಯೋಗಿಸಿದ್ದಾನೆ. ಅವೆರೆಡು ಶಬ್ದಗಳೇ ಆತನ ಮಹಾಸಿದ್ದಾಂತಕ್ಕೆ ಆದ್ಯಂತವಾಗಿರುವುವೆಂದರೆ ಅತಿಶಯೋಕ್ತಿಯಾಗಲಾರದು. ಕಪಿಲಋಷಿಗೆ ‘ಪ್ರಕೃತಿ’ ಎಂದರೆ ‘ಮೂಲಪ್ರಕೃತಿ’ ಎಂದರ್ಥವಾಗುವುದು. ಅಂದರೆ ಸ್ಥೂಲ ಮತ್ತು ವ್ಯಕ್ತ ಪ್ರಕೃತಿಯ ಅತ್ಯಂತ ಸೂಕ್ಷ್ಮವಾದ ಮತ್ತು ಅವ್ಯಕ್ತವಾದ ಅವಸ್ಥೆ.

ಆದರೆ ಸಾಹಿತ್ಯದಲ್ಲಿ ‘ಪ್ರಕೃತಿ’ಗೆ ಆ ಅರ್ಥವಿಲ್ಲ. ಸಾಮಾನ್ಯವಾಗಿ ಸಾಹಿತ್ಯದಲ್ಲಿ ‘ಪ್ರಕೃತಿ’ ಎಂದರೆ ವ್ಯಕ್ತ ಪ್ರಕೃತಿ – ಕಣ್ಣಿಗೆ ತೋರುವ ಬಾಹ್ಯಪ್ರಕೃತಿ ಎಂದರ್ಥವಿದೆ. ಪರ್ವತಶೃಂಗಗಳಿಂದ ಹರಿದುಬರುವ ತಿಳಿನೀರಿನ ತರಂಗಿಣಿಗಳೂ, ಮನೋರಂಜಕವಾದ ಹಸುರು ಪತ್ರಗಳಿಂದ ಆಚ್ಛಾದಿತವಾದ ರಮ್ಯ ಅರಣ್ಯಗಳೂ, ವಿಶ್ವಮಾತೆಯ ಕಂಗಳ ನೀಲ ಕಾಂತಿಯೊ ಎಂಬಂತೆ ತೋರುವ ಆಕಾಶವೂ, ಜಲಧಿಯ ಮಹಾತರಂಗಗಳಂತೆ ದಿಗಂತಪರ್ಯಂತ ಪಸರಿಸಿರುವ ಗಿರಿಗಳೂ, ಉದಯಿಸುತ್ತಿರುವ ರವಿಯ ಕಿರಣಗಳನ್ನು ಪ್ರತಿಬಿಂಬಿಸಿ ನಲಿಯುವ ಸರೋವರಗಳೂ, ಮನಸ್ಸನ್ನೂ ಮೋಹಗೊಳಿಸುವ ಹಸುರಾದ ಪೈರುಗಳಿಂದ ತುಂಬಿದ ಹೊಲಗದ್ದೆಗಳೂ, ಮೃದುಮಧುರವಾದ ಗಾಯನದಿಂದ ಕಠಿನ ಹೃದಯಗಳನ್ನು ಕೂಡ ಕರಗಿಸುವ ವಿಹಂಗಗಳೂ, ಅಡವಿ ಹೊಲ ಗದ್ದೆಗಳಲ್ಲಿ ಸ್ವೇಚ್ಛೆಯಾಗಿ ತಿರುಗಾಡುವ ಜಿಂಕೆ ನವಿಲು ಮೊದಲಾದ ಜೀವಜಂತುಗಳೂ – ಇವೇ ಮೊದಲಾದುವುಗಳ ಸಮುದಾಯಕ್ಕೆ ‘ಪ್ರಕೃತಿ’ ಎಂದರ್ಥ. ಇವುಗಳ ಪೃಥಕ್ತ್ವಕ್ಕೆ ಪ್ರಕೃತಿ ಎಂದರ್ಥವಲ್ಲ; ಇವುಗಳ ಏಕತ್ವಕ್ಕೆ (ಸಮಷ್ಟಿ) ಪ್ರಕೃತಿ ಎಂದರ್ಥ.

ಇನ್ನು ‘ಸೌಂದರ್ಯ’ವೆಂದರೇನು? ಎಂದು ನೋಡೋಣ. ರಸಿಕರಾದ ವಿದ್ವಾಂಸರು ‘ಸೌಂದರ್ಯ’ ಶಬ್ದಕ್ಕೆ ನಾನಾ ವಿಧವಾದ ವ್ಯಾಖ್ಯೆಗಳನ್ನು ನಿರೂಪಿಸಿರುವರು. ಕೆಲವರು “ಸೌಂದರ್ಯವೇ ಸತ್ಯ; ಸತ್ಯವೇ ಸೌಂದರ್ಯ” ಎಂದಿರುವರು. ಮತ್ತೆ ಕೆಲವರು “ಸೌಂದರ್ಯವೇ ಆನಂದ” ಎಂದಿರುವರು. ಇನ್ನೂ ಕೆಲವರು “ಸೌಂದರ್ಯವೇ ವಿಶ್ವಾತ್ಮನ ಕಟ್ಟಳೆ” ಎಂದು ಹೇಳಿರುವರು. ಇವುಗಳಲ್ಲಿ ಈ ವ್ಯಾಖ್ಯೆಯೇ ಸರಿ ಎನ್ನಲಾಗುವುದಿಲ್ಲ; ಏಕೆಂದರೆ ಪ್ರತಿಯೊಬ್ಬರ ನಿರೂಪಣದಲ್ಲಿಯೂ ಸತ್ಯಾಂಶವಿದ್ದೇ ಇರುವುದು. ಅದಕ್ಕೇ ಈ ರಗಳೆಯೇ ಬೇಡವೆಂದು ಅಮೇರಿಕಾದೇಶದ ಪ್ರಸಿದ್ಧ ಗ್ರಂಥಕರ್ತನೂ ಕವಿಯೂ ಆದ ಎಮರ್ಸನ್ನನು “ಸೌಂದರ್ಯವು ವ್ಯಾಖ್ಯೆಗೆ ಅತೀತವಾದುದು. ಅದ್ದರಿಂದ ನಾನು ಅದರ ನಿರೂಪಣಕ್ಕೆ ತೊಡಗುವುದೇ ಇಲ್ಲ” ಎಂದು ಹೇಳಿರುವನು. ಇರಲಿ; ಸೌಂದರ್ಯದ ವ್ಯಾಖ್ಯೆ ತಿಳಿಯುದ ಮಾತ್ರಕ್ಕೆ ಆದರ ಅನುಭವಾಗುವುದಿಲ್ಲ ಎಂದು ಯಾರೂ ಹೇಳರು. ರಸಾಯನ ಶಾಸ್ತ್ರಜ್ಞನಿಗೆ ಸಕ್ಕರೆಯ ಭೂತಪೃಥಕ್ಕರಣ (Chemical analysis)ವೂ ತಿಳಿದ ಮಾತ್ರಕ್ಕೆ ಅದು ಅವನಿಗೆ ಹೆಚ್ಚಾಗಿ ರುಚಿಸುತ್ತದೆಯೆ? ಸಕ್ಕರೆಯ ರುಚಿ ಏನೂ ಅರಿಯದ ಮೂಢನಿಗೂ ರಸಾಯನ ಶಾಸ್ತ್ರದಲ್ಲಿ ಕೋವಿದನೆನಿಸಿಕೊಂಡವನಿಗೂ ಒಂದೇ ರೀತಿ ಇರುವುದು. ನಾಲಗೆಯೊಂದು ಕೆಡದ್ದಿದರೆ ಸರಿ. ಹಾಗೆಯೆ ಸೌಂದರ್ಯಾನುಭವಕೆ ತನ್ನ ಆತ್ಮದ ಪರಿಶುದ್ಧತೆ ಕಳಂಕವಾಗದಿದ್ದರಾಯಿತು. ಸಕ್ಕರೆಯ ರಚನಾಕ್ರಮವನ್ನರಿತ ರಸಾಯನಶಾಸ್ತ್ರಜ್ಞನ ನಾಲಗೆ ಕೆಟ್ಟಿತೆಂದರೆ, ಅವನಿಗೆ ಒಣಪೃಥಕ್ಕರಣ ಜ್ಞಾನವು ಸಿಹಿಯನ್ನೆಂದಿಗೂ ತಾರದು. ಅದರಂತೆಯೆ ಸೌಂದರ್ಯದ ಶಬ್ಧಾರ್ಥ ನಿರೂಪಣವನ್ನರಿತ ಪಂಡಿತನ ಹೃದಯಸೂಕ್ಷ್ಮತೆ ಮಂದವಾಗಿದ್ದರೆ, ಆತನ ಜ್ಞಾನವು ಸೌಂದರ್ಯ ಗ್ರಹಣಕ್ಕೆ ಎಂದಿಗೂ ಸಹಕಾರಿಯಾಗಲಾರದು. ಅದುದರಿಂದ ಸೌಂದರ್ಯಪ್ರಶಂಸೆಗೆ ಬೇಕಾದುದು  ಶಬ್ದಾರ್ಥ ನಿರೂಪಣಶಕ್ತಿಯಲ್ಲ; ಅದನ್ನು ಅನುಭವಿಸುವ ಹೃದಯಸೂಕ್ಷ್ಮತೆ.

ಪ್ರಕೃತಿ ಇಡೀ ಮಾನವ ಪ್ರಪಂಚಕ್ಕೆ ಮಾತ್ರವಲ್ಲದೆ, ಪ್ರತಿಯೊಬ್ಬ ಮಾನವನ ಜೀವಮಾನಕ್ಕೂ ನಿಕಟಸಂಬಂಧವುಳ್ಳದ್ದಾಗಿದೆ. ಸಮಾಜದ ವಾತಾವರಣವು ಹೇಗೆ ನಮ್ಮ ನಡೆನುಡುಗಳನ್ನು ಸ್ವಲ್ಪಮಟ್ಟಿಗಾದರೂ ನಿರ್ಣಯಿಸುವುದೊ ಹಾಗೆಯೆ ಪ್ರಕೃತಿಮಾತೆ ನಮಗೆ ತಿಳಿದಂತೆಯೊ ಅಥವಾ ತಿಳಿಯದಂತೆಯೊ ನಮ್ಮ ಮನೋಭಾವನೆಗಳನ್ನು ತಿದ್ದಿ ನಮ್ಮ ವ್ಯಕ್ತಿತ್ವಕ್ಕೆ ಒಂದು ಸ್ವರೂಪವನ್ನುಂಟುಮಾಡುತ್ತಾಳೆ.

ಹುಟ್ಟಿದ ಶಿಶುವಿಗೆ ಮೊದಲನೆಯ ವಾತಾವರಣವೆ ಪ್ರಕೃತಿ. ಆಕೆಯ ಪ್ರತಿಯೊಂದು ಮಗುವಿಗೂ ಮುಗ್ಧವಾದ ಗುರು. ಆಕೆಯ ಎಷ್ಟೋ ಉಪದೇಶಗಳನ್ನು ಶಿಶು ಕಲಿತು, ಸಂಗ್ರಹಿಸಿ, ಮನನ ಮಾಡಿಕೊಳ್ಳುತ್ತಾ ಪ್ರವರ್ಧಮಾನವಾಗುತ್ತದೆ. ಅದರಿಂದಲೇ ಚಿಕ್ಕ ಬಾಲಕರು ತಂದೆ ತಾಯಿಗಳ ಮಾತುಗಳನ್ನು ಒಂದೆಡೆಗಿಟ್ಟು, ಉಪಾಧ್ಯಾಯರ ಭಯವನ್ನೂ ಲಕ್ಷಿಸದೆ, ವಾತಾವರಣದ ಅಪಾಯಗಳನ್ನು ಧಿಕ್ಕಾರಮಾಡಿ ಪ್ರಕೃತಿಮಾತೆಯೊಡನೆ ಆಟಕ್ಕೆ ಹೋಗುವುದು. ಮಕ್ಕಳ ಹೃದಯವನ್ನು ಯಾವುದೋ ಒಂದು ಗೂಢವಾದ ಮತ್ತು ಬಲವತ್ತರವಾದ ವಾತ್ಸಲ್ಯ ಲಹರಿ ಆವರಿಸಿ ಪ್ರಕೃತಿದೇವಿಯ ಕಡೆಗೆ ಎಳೆಯುವುದು. ಆ ಎಳತವು ಭಯ, ಕ್ರೋಧ, ತೊಂದರೆ ಇವುಗಳೆಲ್ಲಕ್ಕಿಂತಲೂ ಅತಿಶಯವಾಗಿರುವುದರಿಂದಲೇ, ಬಾಲಕರು ಅವರ ಸ್ವಭಾವವನ್ನರಿಯದ ತಂದೆತಾಯಿಗಳಿಂದಲೂ ಉಪಾಧ್ಯಾಯರುಗಳಿಂದಲೂ “ಫಟಿಂಗ”  “ಸೋಮಾರಿ” ಎಂಬ ಬಿರುದುಗಳನ್ನು ಪಡೆಯುವುದು. ಬಾಲ್ಯಾವಸ್ಥೆಯಲ್ಲಿ ಬುದ್ಧಿ ಇನ್ನೂ ವಿಕಸಿತವಾಗಿರುವುದಿಲ್ಲ. ಆದ್ದರಿಂದ ಬಾಲಕರು ಪ್ರಕೃತಿಮಾತೆಯನ್ನು “ಏಕೆ ಪ್ರೀತಿಸುತ್ತೇವೆ?” ಎಂದು ಪ್ರಶ್ನೆಮಾಡದೆ ತರ್ಕಗಿರ್ಕಗಳಲ್ಲಿ ತೊಡಗದೆ ಶಿಶು ತಾಯಿಯನ್ನು ಸಹಜವಾಗಿ ಪ್ರೀತಿಸುವಂತೆ ಪ್ರೀತಿಸುವುದು.

ಸಣ್ಣ ಬಾಲಕರಿಗೂ ಪ್ರಕೃತಿಗೂ ಇರುವ ಪ್ರೇಮದ ತತ್ವವನ್ನು ತಿಳಿಯುವುದು ಬಹು ಕಠಿನ: ಅಸಾಧ್ಯವೆಂದರೂ ಎನ್ನಬಹುದು. ಏಕೆಂದರೆ ಬಾಲಕರು ತಮ್ಮ ಆಂತರ್ಯ ಭಾವನೆಗಳನ್ನು ಅರಿಯರು. ತಮ್ಮ ಅಂತರ್ಭಾವಗಳನ್ನು ಪರಿಶೀಲನಪೂರ್ವಕವಾಗಿ ವಿಚಾರಮಾಡವುದನ್ನು ಕಲಿಯುವುದರೊಳಗೆ ಅವರಿಗೆ ಬಾಲ್ಯಾವಸ್ಥೆ ಪೂರೈಸುವುದು. ಆದರೂ ಸದ್ಯದಲ್ಲಿ ಅದು ಮನೋಗಮ್ಯವಾಗಿರದಿದ್ದರೂ ಹೃದಯಗ್ರಾಹ್ಯವಾಗಿರುವುದೇನೋ ಸತ್ಯ. ಆದ್ದರಿಂದಲೆ ಅದು ನಮ್ಮ ಜೀವಮಾನಕ್ಕೆ ಅಮೃತಸಮಾನವಾಗಿ ಪರಿಣಮಿಸುವುದು. ಆದುದರಿಂದಲೆ ಮಾನವರು ತಮ್ಮ ಜನ್ಮದ ಇತರ ಎಲ್ಲಾ ಅವಸ್ಥೆಗಳಲ್ಲಿಯೂ ಕಂಬಬಿನಿಗರೆಯುತ್ತಾ ಪ್ರೇಮ ವಿಷಾದಗಳಿಂದ ಬಾಲ್ಯದ ಕಡೆಗೆ ಉತ್ಕಂಠತೆಯಿಂದ ತಿರುಗಿನೋಡುವರು. ಅಂತಹ ಆಂತರ್ಯಾವಲೋಕನದಲ್ಲಿಯೆ ನಮ್ಮ ಆನಂದವು ನೆಲೆಯಾಗಿರುವುದು. ಕೌಮಾರ ಯೌವನ ವೃದ್ಧಾಪ್ಯಗಳೆಂಬ ಅವಸ್ಥೆಗಳು ಬಾಲ್ಯವನ್ನು ಪುನಃ ಪುನಃ ಮನಸ್ಸಿನಲ್ಲಿಯೇ ಅನುಭವಿಸಿ ಆನಂದಪಡುತ್ತವೆ.

ಪ್ರಕೃತಿಮಾತೆಯ ಮೇಲೆ ನಮಗಿರುವ ಪ್ರೇಮವು ಆಯಾ ಅವಸ್ಥೆಗಳಲಿ ವ್ಯತ್ಯಾಸ ಹೊಂದುವುದು. ಅಂದರೆ ಪ್ರೀತಿಯೇನೋ ಇದ್ದೇ ಇರುವುದು. ಆದರೆ ಪ್ರೀತಿಯ ಲಕ್ಷಣವು ಬದಲಾಯಿಸುವುದು. ಅನುಭವವು ಹೆಚ್ಚಿದಂತೆಲ್ಲಾ ನಮ್ಮ ಪ್ರೇಮವು ಭಕ್ತಿರೂಪವನ್ನು ಹೊಂದುತ್ತಾ ಬರುವುದು. ಅಂದರೆ ಮೊದಮೊದಲು ವಿಮರ್ಶಾವಿಹೀನವಾದ ವರ್ಣನಾತೀತವಾದ ಯಾವುದೋ ಒಂದು ಶಕ್ತಿ ನಮ್ಮನ್ನು ಆ ಕಡೆಗೆ ಎಳೆಯುವುದು. ಅನಂತರ ಪ್ರಕೃತಿ ನಮ್ಮ ಒಡನಾಡಿಯಂತೆ ತೋರುವುದು. ಆಗ ಪ್ರಪಂಚವೆ ಲೀಲಾಮಯವಾಗುವುದು. ನಿರ್ಮಲವಾದ ತೊರೆಗಳ ನಾದದಲ್ಲಿ ಒಬ್ಬ ಗೆಳೆಯನ ಬಾಲಕೇಳಿಯ ನುಡಿಗಳನ್ನು ಆಲಿಸುವೆವು. ಹಸುರಾಗಿಯೂ ಕೋಮಲವಾಗಿಯೂ ಇರುವ ಹುಲ್ಲಿನ ಎಸಳು ಮಂದಮಾರುತದಿಂದ ವಿಕಂಪಿತವಾಗುವುದನ್ನು ನೋಡಿದರೆ, ಬಹು ದೂರದಿಂದ ನಮ್ಮನ್ನು ನೋಡಲು ಬಂದ ಯಾವನೋ ಒಬ್ಬನ, ಅಥವಾ ಎಂದೋ ನೊಡಿದ್ದು ಈಚೆಗೆ ಬಹುಕಾಲದಿಂದಲೂ ನೋಡದೆ ಕಾತರನಾಗಿದ್ದ ಪ್ರಿಯ ಸ್ನೇಹಿತನೊಬ್ಬನ ಜ್ಞಾಪಕವಾಗುವುದು. ಆಗ ಆ ಎಸಳನ್ನು ಆನಂದದಿಂದ ಸ್ಪರ್ಶಿಸುವೆವು. ಆದು ಗಾಢವಾದ ಹೃದಯಾವೇಶದಿಂದ ಉತ್ಪತ್ತಿಯಾಗುವುದು. ರಾಗವೆಂಬ ಪೀತಾಂಬರವನ್ನುಟ್ಟು, ಹಿಮಕಣಗಳೆಂಬ ಅಮಲ ಮೌಕ್ತಿಕಗಳನ್ನು ಧರಿಸಿ, ಗಂಧವನ್ನು ಲೇಪಿಸಿಕೊಂಡು, ಉದಯಮಾರುತನಿಂದ ಬೀಸಲ್ಪಟ್ಟು, ಶಿರವನ್ನು ಒಯ್ಯೊಯ್ಯನೆ ಒಲೆದಾಡುವ ರಮಣಿಯಂತಿಹ ಪುಷ್ಫವನ್ನು ನೋಡಿದೊಡನೆ ವಿಶ್ವಮಾತೆ ನಮ್ಮ ಯೋಗಕ್ಷೇಮವನ್ನು ವಿಚಾರಿಸಿ ತಿಳಿದುಕೊಂಡು ಬರುವಂತೆ ಭೂಮಿಗೆ ಕಳುಹಿಸಿದ ದೇವದೂತಳೊ ಎಂಬಂತೆ ತೋರುವುದು. ಆಗ ಕವಿ ಆವೇಶದಿಂದ

ಆರ ನಗುವಿದು ಸುಮವೆ?
ತವ ವದನವನೀ ಪರಿ ಶೋಭಿಪ ನಗುವಾರದಿದು ಸುಮವೇ?

ಎಂದೂ ಮೊದಲಾಗಿ ಹಾಡುತ್ತಾನೆ. ಈ ಅವಸ್ಥೆ ಪೂರೈಸಿದ ಕೂಡಲೆ ಇನ್ನೊಂದು ಮಹಾ ರಹಸ್ಯವಾದ ಆವಸ್ಥೆ ಬರುವುದು. ಕೊನೆಗೆ ಪ್ರಕೃತಿ ಜೊತೆಗಾರನ ಪಾತ್ರವನ್ನು ಬಿಸುಟು ವಿಶ್ವಮಾತೆಯಾಗುತ್ತಾಳೆ. ಆಗ ಎಲ್ಲೆಲ್ಲಿಯೂ ಪರಮಾತ್ಮನೆ ತೋರುವನು. ನೀಲಗಗನ, ಶೋಭಿಸುವ ದಿನೇಶ, ರಮಣೀಯವಾದ ಚಂದ್ರ, ಹಸುರಾದ ಅರಣ್ಯ, ಹೊಲಗದ್ದೆಗಳು – ಇವೇ ಮೊದಲಾದವು ಪರಮಾತ್ಮನ ಸಾಕ್ಷಾತ್ಕಾರಗಳಾಗಿ ಪರಿಣಮಿಸುತ್ತವೆ. ಅಂಥವನಿಗೆ ಉಂಟಾಗತಕ್ಕ ಅನುಭವಗಳ ತೀಕ್ಷಣತೆಯನ್ನೂ ತತ್ಪರತೆಯನ್ನೂ ಆನಂದವನ್ನೂ ಬಣ್ಣಿಸಲಾಗುವುದಿಲ್ಲ. ಸಕ್ಕರೆಯ ಮಾಧುರ್ಯವನ್ನು ವರ್ಣಿಸಿದರೆ ತಿಳಿಯುವುದೇ? ಸವಿದೇ ನೋಡಬೇಕು. ಆ ಸ್ಥಿತಿಯನ್ನು ಅನುಭವಿಸುವ ಕವಿ ಏಕಾಂಗಿಯಾಗಿ ಅರಣ್ಯ ನದೀತಟಗಳಲ್ಲಿ ಸಂಚರಿಸುತ್ತಾ ಇತರರಿಗೆ ಹುಚ್ಚನಂತೆ ತೋರುತ್ತಾನೆ. ಆತನ ಮನಶ್ಚಕ್ಷುಗಳಿಗೆ ಪರಬ್ರಹ್ಮನ ದಿವ್ಯಾತ್ಮವು ಎಲ್ಲೆಲ್ಲಿಯೂ ಗೋಚರವಾಗುವುದು. ಅಂತಹ ಅನುಭವದಿಂದಲೆ ಕವಿ ಈ ರೀತಿ ಹಾಡುವನು:

ಓಡಿಬಾ! ಓಡಿಬಾ! ವಿಶ್ವೇಶ ಬೇಗ ಬಾ!

ಮೂಡಣ ದಸೆಯೊಳು ಮೂಡುವ ದಿನಕರ
ಮೋಡಗಳೆಡೆಯೊಳು ರಂಜಿಪನು;
ಕಾಡು ಕುಸುಮಗಳ ಕಂಪನು ಹೀರುತ
ಓಡುವನನಿಲನು ನಲಿನಲಿದು.

ಹಸುರಾಗಿಹ ಧರೆ ನಿನ್ನಾನಂದವು.
ಶಶಿರವಿಗಳು ನಿನ್ನಾನಂದ,
ಕುಸುಮಿತ ತರುಲತೆ ನಿನ್ನಾನಂದವು;
ಎಸೆವೀ ಜಗ ನಿನ್ನಾನಂದ!

ಆಡಗಿಹೆ ನೀನೀ ಪ್ರಕೃತಿ ಮಹಿಮೆಯಲಿ,
ಪೊಡವಿಯೆ ನಿನ್ನಯ ಪ್ರತಿಬಿಂಬ;
ಒಡೆಯನೆ ವಂಚಿಸಲಾರೀ ಕವಿಯನು,
ಅಡಗಿಹೆಯಾದರು ಮೈದೋರು.

ನಲಿಯುತ ಕುಣಿಯುತ ಬಾಲನ ತೆರದಿಂ
ತಳಿರ ಕಿರೀಟವ ಧರಿಸಿ ಬಾ:
ಅಲರುಗೆಜ್ಜೆಗಳ ಗಲಿರು ಗಲಿರೆನಿಸಿ
ಒಲುಮೆಯ ಬೀರುತ ಓಡಿ ಬಾ!

ಪ್ರಕೃತಿಯು ವಿಶ್ವಾತ್ಮನಿಂದ ವ್ಯಾಪಿಸಲ್ಪಟ್ಟಿರುವುದು. ವಿಜ್ಞಾನಶಾಸ್ತ್ರಜ್ಞರು ಈ ತತ್ವವನ್ನು ಧಿಕ್ಕಾರಮಾಡಿ ಪ್ರಕೃತಿಯು ಉದ್ದೇಶರಹಿತವಾದ ನಿಯಮಗಳಿಂದ ಮಾತ್ರವೇ ಬಂಧಿಸಲ್ಪಟ್ಟಿದೆಯೆನ್ನುವರು. ಅವರಿಗನುಸಾರವಾಗಿ, ಪ್ರಕೃತಿಗೆ ಪರಮಾತ್ಮನು ಕಾರಣನೂ ಅಲ್ಲ; ಅದು ಆತನ ಮೈದೋರುವಿಕೆಯಂತೂ ಬರಿಯ ಸುಳ್ಳು. ಆದರೆ ಪ್ರಕೃತಿಯು ಪರಮಾತ್ಮನ ಮೈದೋರುವಿಕೆಯೇ ಹೌದು ಎಂಬುದನ್ನು ನಾವು, ಜಲವು ಆಮ್ಲಜನಕ ಜಲಜನಕಗಳೆಂಬ ವಾಯುಗಳ ರಾಸಾಯನಿಕ ಸಂಯೋಗದಿಂದಾದುದೆಂದು ತೋರಿಸುವಂತೆ, ಸಿದ್ಧಾಂತಪಡಿಸುವುದಕ್ಕಾಗುವುದಿಲ್ಲ. ಏಕೆಂದರೆ ನಾವು ನಮ್ಮ ಸಿದ್ಧಾಂತದ ಹೊರಗೆ ನಿಲ್ಲಲಾರೆವು. ಆದರೆ ಇದನ್ನು ಅರಿಯುವುದಕ್ಕೆ ಆಗುವುದಿಲ್ಲವೇ? ಎಂದು ಪ್ರಶ್ನೆಮಾಡಿದರೆ ‘ಆಗುವುದು’ ಎಂದು ಪ್ರತ್ಯುತ್ತರ ಕೊಡಬೇಕಾಗುವುದು. ಹೇಗೆಂದರೆ? ಅನುಭವದಿಂದ, ಬರಿಯ ಅರಿವಿನಿಂದಲ್ಲ. ಇದನ್ನೇ ಉಪನಿಷತ್ ಕರ್ತರು:

ಯಸ್ಯಾಮತಂ ತಸ್ಯ ಮತಂ, ಮತಂ, ಯಸ್ಯ ವೇದ ಸಃ
ಅವಿಜ್ಞಾತಂ ವಿಜಾನತಾಂ ವಿಜ್ಞಾತಮವಿಜಾನತಾಂ

ಎಂದು ಹೇಳಿರುವರು ಅಂದರೆ:

ತಿಳಿದವನಿಗೆ ತಾ ತಿಳಿಯದದು.
ತಿಳಿಯದವನಿಗದು ತಿಳಿಯುವುದು;
ತಿಳಿದವರರಿಯರು; ತಿಳಿಯದರು
ಒಲಿದೆಲ್ಲವ ತಾವರಿಯುವರು.

ಎಂದು ಅರ್ಥಬರುವಂತೆ ಹೇಳಬಹುದು. ಶ್ಲೋಕವು ವಿರೋಧಾಭಾಸವಾಗಿ ಕಂಡುಬಂದರೂ ಸತ್ಯವಾದುದು. ಇಲ್ಲಿ ‘ತಿಳಿಯದವನು’ ಎಂಬ ಶಬ್ಧಕ್ಕೆ ಎರಡು ವಿಧವಾಗಿ ಅರ್ಥಮಾಡಬೇಕು. ಏನೆಂದರೆ ‘ತಿಳಿದವನಿಗೆ ತಾ ತಿಳಿಯದದು’ ಎನ್ನುವುದರಲ್ಲಿ ‘ತಿಳಿದವನು’ ಎಂದರೆ ಶುಷ್ಕಜ್ಞಾನಿ ಅಥವಾ ‘ವಚನಬ್ರಹ್ಮ’ನು ಎಂದರ್ಥ. ದೃಷ್ಟಾಂತವಾಗಿ ಸಕ್ಕರೆಯನ್ನು ಸವಿಯದ, ಸಕ್ಕರೆಯ ಪೃಥಕ್ಕರಣ ಜ್ಞಾನಮಾತ್ರವುಳ್ಳ ರಸಾಯನಶಾಸ್ತ್ರಜ್ಞನೇ ಸಾಕು. ‘ತಿಳಿಯದವನಿಗದು ತಿಳಿಯುವುದು’ ಎಂಬಲ್ಲಿ ‘ತಿಳಿಯದವನು’ ಎಂದರೆ ಪೃಥಕ್ಕರಣ ಅಥವಾ ಶುಷ್ಕವ್ಯಾಖ್ಯಾನ  ಜ್ಞಾನ ಉಳ್ಳವನಲ್ಲ. ಆದರೆ ಸವಿನೋಡಿದ ನಿಜವಾದ ಸಿದ್ಧನೆಂದರ್ಥ. ಅಂತೂ ಪ್ರಕೃತಿಯು ಬ್ರಹ್ಮಾಂಶವೆಂಬುದನ್ನೂ ಅನುಭವದಿಂದ ತಿಳಿಯಬಹುದಲ್ಲದೆ ಶುಷ್ಕಜ್ಞಾನದಿಂದಲ್ಲ.

ಇದನ್ನೆ ಸಾಧಿಸುವುದಕ್ಕೆ ಎಡ್ವರ್ಡ್ ಕಾರ್ಪೆಂಟರ್ ಎಂಬಾತನು ತನ್ನ “Modern Science” ಎಂಬ ಪ್ರಬಂಧದಲ್ಲಿ ಈ ರೀತಿ ಬರೆಯುತ್ತಾನೆ:

“Neither Astronomy nor Physics, nor Chemistry, nor Biology, nor Sociology supplies us with true knowledge of actual facts. All the laws discovered by those sciences are merely generalizations, having but an approximate value as laws, and that only as long as we do not know, or leave out of account, certain other factors. And even these laws seem laws to us only because we discover them in a region so far away from us in time and space that we cannot detect their non-correspondence with actual facts. The method of Science which consists in explaining things near and important to us by things more remote and indifferent, is a false method which can never bring us to the desired result.”

ಅಲ್ಲದೆ ರಷ್ಯಾದೇಶದ ಮಹಾ ಸಾಹಿತಿ ತತ್ತ್ವಜ್ಞಾನಿಯಾದ ಟಾಲ್‌ಸ್ಟಾಯ್‌ ಎಂಬಾತನು ಹೀಗೆಂದು ಹೇಳುತ್ತಾನೆ:

“Neither philosophy, nor science, can establish man’s relation to the universe, for that relation must be established before any philosophy or science can begin. They cannot do it for this further reason – that science including philosophy as a part of it investigates phenomena intellectually – independently of the investigator’s position or the feelings he experiences. But man’s relation to the world is defined not by intellect alone but also by feeling and by the whole combination of his spiritual forces. However much you may assure a man, and explain to him that all that truly exists is only idea – or that everything consists of atoms – or that the essence of life is the ‘substance’ or the will – or that heat, light, movement and electricity are different manifestations of one and the same energy – to a being that feels, suffers, rejoices, fears, and hopes, it will all fail to explain his place in the Universe”

ಇದನ್ನೆ ಕವಿವರ್ಯ ರವೀಂದ್ರನಾಥ ಠಾಕೂರರವರು ಅನುಮೋದಿಸಿ ಅವರ ‘ಸಾಧನಾ’ ಎಂಬ ಗ್ರಂಥದಲ್ಲಿ:

“Curiously enough, there are men who lose that feeling of mystery which is at the root of all our delights, when they discover the uniformity of law among the diversity of nature, as if gravitation is not more of a mystery than the fall of an apple, as if the evolution from one scale of being to the other is not something which is even more shy of explanation than a succession of creations. The trouble is that we very often stop at such a law as if it were the final end of our search, and then we find that it does not even begin to emancipate our spirit. It only satisfies our intellect, and as it does not appeal to our whole being, it only deadens in us the sense of the infinite.”

ಎಂದು ಹೇಳಿರುತ್ತಾರೆ.

ಈ ಪ್ರಮಾಣಗಳನ್ನೆಲ್ಲಾ ಕೊಟ್ಟುದು ಏತಕ್ಕೆಂದರೆ, ಪ್ರಕೃತಿಸೌಂದರ್ಯಾನುಭವವು ಬರಿಯ ಮೇಧಾಶಕ್ತಿಗೆ ನಿಲುಕತಕ್ಕದ್ದಲ್ಲ ಎಂಬುದನ್ನ ಸಿದ್ಧಾಂತಪಡಿಸುವುದಕ್ಕೆ. ಅನೇಕ ಮಹಾಪುರುಷರು ಈ ತತ್ತವನ್ನು ಸ್ವಾನುಭವದಿಂದಲೆ ಅನುಮೋದಿಸಿರುತ್ತಾರೆ.

ಈಗ ಪ್ರಕೃತಿಸೌಂದರ್ಯಾನುಭವವು ಮನಸ್ಸಂಬಂಧವಾದುದೊ ಅಥವಾ ವಿಷಯಸಂಬಂಧವಾದುದೊ ಎಂಬುದನ್ನು ವಿಚಾರಿಸಿ ತಿಳಿಯೋಣ. ಗಿರಿ, ತೊರೆ, ಕಾನನ, ಗಗನ, ರವಿ, ಚಂದ್ರ, ಮಂದಮಾರುತಖಿಮೊದಲಾದವು ಯಾವನ ಸ್ವಂತ ಆಸ್ತಿಗೂ ಒಳಪಟ್ಟುವಲ್ಲ. ಆದಕಾರಣ ಅವುಗಳಿಂದ ಜನ್ಯವಾದ ಆನಂದವು ಎಲ್ಲರ ಹಕ್ಕುಬಾಧ್ಯತೆಗಳಿಗೂ ನಿಲುಕತಕ್ಕದ್ದಾಗಿದೆ. ಈ ವಿಧವಾದ ಹರುಷವು ಅಪ್ರತಿಮವಾದುದಾದರೂ ಸುಲಭಸಾಧ್ಯವಾಗಿರುವುದು. ಅದನ್ನು ಪಡೆಯಲು ಯಾವ ತೆರನಾದ ದೇಹದಂಡನೆಯೂ ಬೇಡ; ಯಾವ ವಿಧವಾದ ಐಶ್ವರ್ಯವೂ ಬೇಡ; ಮತ್ತು ಯಾವ ಅಧಿಕಾರ ಸಾಮರ್ಥ್ಯವೂ ಅವಶ್ಯವಿಲ್ಲ. ತೀಕ್ಷ್ಣವಾದ ಬೋಧಾಶಕ್ತಿಯೂ ಮತ್ತು ಸೂಕ್ಷ್ಮವಾದ ಸಂವೇದನೆಯೂ ಯಾವನಲ್ಲಿರುವುವೋ ಆತನಿಗೆ ಆ ದಿವ್ಯವಾದ ಸಂತೋಷವು ಬೇಗನೆ ಸಿಕ್ಕುವುದು. ಹಾಗೆಂದ ಮೇಲೆ ಸೌಂದರ್ಯಾನುಭವವು ಮನಸ್ಸಂಬಂಧವಾದುದೆಂದು ಹೇಳಿದಂತೆಯೆ ಆಯಿತು. ಅಲ್ಲದೆ ಅದು ವಿಷಯಸಂಬಂಧವಾದುದೆಂದು ಯಾರಾದರೂ ಹೇಳುವುದಾದರೆ, ಕುತರ್ಕವೆಂದೇ ಹೇಳಬೇಕಾಗುತ್ತದೆ. ಸೌಂದರ್ಯವು ಬರಿಯ ವಸ್ತುಗಳ ಗುಣವೇ ಆಗಿದ್ದ ಪಕ್ಷದಲ್ಲಿ ಆ ವಸ್ತುಪ್ರದರ್ಶನದಿಂದ ಎಲ್ಲರಲ್ಲಿಯೂ ಒಂದೇ ತೆರನಾದ ಆನಂದ ಉಂಟಾಗಬೇಕಿತ್ತು. ಆದರೆ ಅನುಭವವು ಅದಕ್ಕೆ ಪ್ರತಿಬಂಧಕವಾಗಿದೆ. ದೃಷ್ಟಾಂತವಾಗಿ ಒಂದು ನಿದರ್ಶನವನ್ನು ತೆಗೆದುಕೊಳ್ಳೋಣ:

ರಂಜಿಸುವ ಪಶ್ಚಿಮಾಚಲ ಕಿರಾತಂ ತೊಟ್ಟ
ಗುಂಜಾಭರಣಮೊ, ಮೇಣ್ಗಗನಾಂಬುಧಿಯ ತಡಿಯ
ಮಂಜುವಿದ್ರುಮಲತೆಯೊ ಮೇಣಪರದಿಗ್ವಧುವಿನಂಗ
ಕುಂಕಮಲೇಪವೋ
ಅಂಜನೇಭದ ಸಿಂಧುರವೊ ಶಿವನ ಕೇಶಗಳ
ಕೆಂಜೆಡೆಯೊ ವಿಷ್ಣುಪದಪಂಕರುಹದರುಣತೆಯೊ
ಸಂಜೆವೆಣ್ಣುಟ್ಟ ರಕ್ತಾಂಬರವೊ ಪೇಳೆನಲ್ಕಾ ಬೈಗು
ಗೆಂಪೆಸೆದುದು
(
ಲಕ್ಷ್ಮೀಶ)

ಇಂಥಾ ಸಂಜೆಯನ್ನು ಎಷ್ಟೋ ಜನರು ನೋಡಿದ್ದಾರೆ; ನೋಡುತ್ತಿದ್ದಾರೆ; ಮತ್ತು ನೋಡುವರು. ಆದರೆ ಸಂಜೆಯನ್ನು ನೋಡಿದ ಪ್ರತಿಯೊಬ್ಬನ ಚಿತ್ತದಲ್ಲಿಯೂ ಒಂದೇ ವಿಧವಾದ ಭಾವವುಂಟಾಗುವುದಿಲ್ಲ. ಒಬ್ಬನು ಅದನ್ನು ಲಕ್ಷ್ಯಕ್ಕೇ ತಾರದೆ ಹೋಗುವನು. ಮತ್ತೊಬ್ಬನು ಅದರ ಬಾಹ್ಯರೂಪನ್ನು ಮಾತ್ರ ಪ್ರಶಂಸಿಸಬಹುದು. ಇನ್ನೊಬ್ಬನು ಮತ್ತೂ ಸ್ವಲ್ಪ ಮುಂದೆ ಹೋಗಿ, “ಆಹಾ! ಪರಮಾತ್ಮನ ಸೃಷ್ಟಿ ಎಷ್ಟು ದಿವ್ಯವಾದುದಪ್ಪಾ!” ಎಂದು ಉದ್ಗಾರ ತೆಗೆಯಬಹುದು. ಆದರೆ ಶ್ರೀ ರಾಮಕೃಷ್ಣಪರಮಹಂಸರಂತಹ ಸೂಕ್ಷ್ಮ ಹೃದಯರು ಸಂಜೆಯ ಬೆಡಗನ್ನು ನೋಡಿ ಮೈಮರೆತು ಸಮಾಧ್ಯವಸ್ಥೆಯನ್ನೈದಬಲ್ಲರು. ದೃಷ್ಟಾಂತಗಳು ನಿಮಗೆ ಬೇಸರವನ್ನುಂಟುಮಾಡದಿದ್ದರೆ ಇನ್ನೊಂದನ್ನು ಹೇಳುವೆನು.

ರವೀಂದ್ರನಾಥ ಠಾಕೂರರು ಒಂದು ದಿನ ಗಂಗಾನದಿಯ ಮೇಲೆ ದೋಣಿಯಲ್ಲಿ ಕುಳಿತು ಹೋಗುತ್ತಿದ್ದರು. ಆಗ ಶರದೃತುವಿನ ರಮ್ಯವಾದ ಸಂಧ್ಯಾಕಾಲವು ಮನೋರಂಜಕವಾಗಿತ್ತು. ಸೂರ್ಯನು ಆಗತಾನೆ ಮುಳುಗಿದ್ದನು. ಗಂಭೀರವಾದ ಗಗನವು ಭಾಷಾತೀತವಾದ ಶಾಂತಿ ಲಾವಣ್ಯಗಳಿಂದ ತುಂಬಿ ತುಳುಕುತ್ತಿತ್ತು. ಬಹುದೂರದವರೆಗೂ ಪಸರಿಸಿ ಹರಿಯುತ್ತಿದ್ದ ಗಂಗಾನದಿಯ ತರಂಗವಿಹೀನವಾಗಿತ್ತು. ಸಂಧ್ಯಾರಾಗಗಳೆಲ್ಲವೂ ಕನ್ನಡಿಯಲ್ಲಿ ಪ್ರತಿಬಿಂಬವಾಗುವಂತೆ, ಗಂಗೆಯ ವಕ್ಷಸ್ಥಳದಲ್ಲಿ ಪ್ರತಿಬಿಂಬಿಸಿದ್ದುವು. ಮೈಲು ಮೈಲುಗಳ ಪರಿಯಂತ ವಿಸ್ತರಿಸಿದ್ದ ಜನವಿಹೀನವಾದ ಸೈಕತ ತಟವು. ಥಳಥಳಿಸುವ ಬಣ್ಣಗಳಿಂದ ಶೋಭಿಸುವ ಪೊರೆಗಳುಳ್ಳ ಪ್ರಳಯಪೂರ್ವದ ಒಂದು ಮಹಾ ಭೂ ಜಲ ಚರ ಜಂತುವಿನಂತೆ ತೋರುತ್ತಿತ್ತು. ದೋಣಿಯು ನೀರವವಾಗಿ ಕಡಿದಾದ ನದೀತಟದೆಡೆ ತೇಲುತ್ತಿತ್ತು. ವಿಹಂಗಗಳ ಸಮುದಾಯವು ದಡದ ಮೇಲಿದ್ದ ನಿಬಿಡವಾದ ತರುಗಳಲ್ಲಿ ಚಿಲಿಪಿಲಿಗುಟ್ಟುತ್ತಿದ್ದವು. ಪ್ರಕೃತಿಯು ಈ ರೀತಿ ಇರುವ ಸಮಯದಲ್ಲಿ ದೊಡ್ಡದಾದ ಒಂದು ಮತ್ಸ್ಯವು ನೀರಿನ ಮೇಲ್ಬಾಗಕ್ಕೆ ನಗೆದು, ತಿರುಗಿ ಮುಳುಗಿ ಮಾಯವಾಯಿತು. ಸಂಧ್ಯಾಗಗನದ ಸಕಲ ರಾಗಗಳೂ ಅದರ ಪೊರೆಗಳಲ್ಲಿ ಥಳಥಳಿಸಿದವು. ಕವಿವರ್ಯರಿಗೆ, ಕ್ಷಣಮಾತ್ರ ಆ ನಾನಾ ರಾಗದ ಮರೆಯು ತೆರೆದಂತಾಗಿ, ಮರೆಯ ಹಿಂದಿದ ಮಹಿಮಾನಂದಮಯವಾದ ನೀರವಪ್ರಪಂಚವೇ ಮೈದೋರಿತು. ಅದು ಯಾವುದೋ ಒಂದು ರಹಸ್ಯಲೋಕದಿಂದ ರಮಣೀಯವಾಗಿ ನಲಿನಲಿದು ಬಂದು ಸಂಜೆಯ ಸ್ವರಮೇಳಕ್ಕೆ ತನ್ನದೇ ಒಂದು ಹೃದಯಂಗಮವಾದ ಗಾಯನವನ್ನುಂಟುಮಾಡಿತು. ಠಾಕೂರರಿಗೆ ಯಾವನೋ ಒಬ್ಬ ವಿದೇಶದ ಮಿತ್ರನು ಬಂದು ಅವನ ಮಾತೃಭಾಷೆಯಲ್ಲಿಯೇ ಕರೆದು ಕೈಬೀಸುತ್ತಿದ್ದಂತೆ ವೇದ್ಯವಾಯಿತು. ಅವರ ಚಿತ್ತದಲ್ಲಿ ಆನಂದಲಹರಿಯೊಂದು ಪ್ರವಹಿಸಿದಂತಾಯಿತು. ಆಗ ದೋಣಿಯವನು ವ್ಯಸನಸೂಚಕವಾದ ಧ್ವನಿಯಿಂದ “ಆಹಾ! ಎಷ್ಟು ದೊಡ್ಡ ಮೀನು!” ಎಂದನು. ದೋಣಿಯವನಿಗೆ ಮೀನುಪಲ್ಯದ ಜ್ಞಾಪಕವಾಯಿತು. ಅವನು ಲೋಭದೃಷ್ಟಿಯಿಂದ ಮೀನನ್ನು ನೋಡಿ ನಿಜವನ್ನರಿಯದೆ ಮೋಸಹೋದನು. ಈ ದೃಷ್ಟಾಂತವು ಸದಸ್ಯರುಗಳಿಗೆ ಸೌಂದರ್ಯಾನುಭವವು ಮಾನಸಿಕವಾದುದು, ವೈಷಯಿಕವಾದುದಲ್ಲ ಎಂಬುದನ್ನು ಚೆನ್ನಾಗಿ ಮನಗಾಣಿಸಬಹುದು.

ಪ್ರಕೃತಿಮೈತ್ರಿಯು ನಮ್ಮಲ್ಲಿ ಸದ್ಯಕ್ಕೆ ಅವ್ಯಕ್ತವಾಗಿರುವ ದೇವತ್ವವನ್ನು ವ್ಯಕ್ತಪಡಿಸುತ್ತದೆ. ಪ್ರತ್ಯಕ್ಷವಾಗಿಯಾಗಲಿ ಪರೋಕ್ಷವಾಗಿಯಾಗಲಿ ನಮ್ಮ ಅನಂತತ್ವವನ್ನು ಬೋಧೆಗೆ ತರುತ್ತದೆ; ಅಲ್ಲದೆ ನಮ್ಮ ಜೀವಮಾನವನ್ನೆಲ್ಲಾ ಆನಂದಮಯವಾಗಿ ಮಾಡುತ್ತದೆ. ಆ ಆನಂದವು ಇಂದ್ರಿಯಗಳಿಂದುಂಟಾಗುವ ಕ್ಷಣಿಕ ಸುಖಗಳಂತೆ ಚಂಚಲವಾದುದಲ್ಲ; ಅಚಲವಾದುದು; ಅಪರಿಮಿತವಾದುದು. ಅದು ಅನುಭವದಿಂದ ದೊರಕುವುದಲ್ಲದೆ, ಸಾವಿರ ಉಪನ್ಯಾಸಗಳನ್ನು ಕೇಳಿದರೂ ಬರುವುದಿಲ್ಲ. ಅಂಥಾ ಆನಂದವನ್ನು ಪಡೆಯಲು ಪ್ರತಿಯೊಬ್ಬ ಮಾನವನೂ ಚಿತ್ತಸೂಕ್ಷ್ಮತೆಯನ್ನೂ ಹೃದಯಸಂವೇದನಾ ತೀಕ್ಷಣತೆಯನ್ನೂ ವ್ಯವಸಾಯಮಾಡಲೇಬೇಕು. ಆ ಅಭ್ಯಾಸದಿಂದ ನಮ್ಮೆಲ್ಲರಿಗೂ ಅಪರಿಮಿತ ಶ್ರೇಯಸ್ಸುಂಟಾಗುವುದರಲ್ಲಿ ಲೇಶವೂ ಸಂದೇಹವಿಲ್ಲ.

ಪ್ರಕೃತಿ ಸೌಂದರ್ಯಮಯವಾದುದಲ್ಲದೆ ಆಶ್ಚರ್ಯದಾಯಕವಾಗಿಯೂ ಇರುವುದು. ನಡುರಾತ್ರಿಯಲ್ಲಿ ಕೊಠಡಿಯಿಂದ ಹೊರಹೊರಟು ಮಹಡಿಯ ಮೇಲೆ ನಿಂತು ಗಂಭೀರವಾದ ನೀಲಗಗನವನ್ನು ತಲೆಯೆತ್ತಿ ನಮ್ರತೆಯಿಂದ ನೋಡಿದರೆ, ಅಸಂಖ್ಯವಾದ ನಕ್ಷತ್ರಗಳು ಸ್ನೇಹಭಾವದಿಂದ ನಮ್ಮ ಕಡೆಗೇ ನೋಡುವಂತೆ ವೇದ್ಯವಾಗುವುದು. ಅಲ್ಲದೆ ಕೋಟ್ಯನುಕೋಟಿ ಜೀವಜಂತುಗಳಿಂದ ತುಂಬಿದ ಧರೆಯು ನಿಶ್ಶಬ್ದವಾಗಿ ಮಲಗಿ ತಾರೆಗಳನ್ನು ಕನಸಿನಲ್ಲಿ ಚುಂಬಿಸುವಂತೆ  ಮನೋಭಾವನೆಯುಂಟಾಗುವುದು. ಸೃಷ್ಟಿಕವಿತೆಯ ತಾಳಲಯ ಪ್ರಾಸಗಳು ಕವಿಹೃದಯದಲ್ಲಿ ಪ್ರತಿಧ್ವನಿಮಾಡುವುವು. ಬ್ರಹ್ಮಾಂಡ ಬಹುತ್ವದ ಅಥವಾ ಅನೇಕತ್ವದ ಏಕತ್ವವು ಅತ್ಯಾಶ್ಚರ್ಯವನ್ನುಂಟುಮಾಡುವುದು. ನೋಡುವವನು ಮೂಕನಾಗುವನು. ಯಾವ ಶಾಸ್ತ್ರವಾದರೂ ಸೃಷ್ಟಿಯ ಅರ್ಥ ಮತ್ತು ಉದ್ದೇಶಗಳನ್ನು ವಿವರಿಸಲಾರದು. ವಿಮರ್ಶನಶಕ್ತಿಯು ಭಯದಿಂದ ಹಿಂಜರಿಯುವುದು; ವಿಜ್ಞಾನಶಾಸ್ತ್ರಗಳು ಮುಗ್ಗರಿಸಿ ಬೀಳುವುವು; ತತ್ವಶಾಸ್ತ್ರವು ಅಪಮಾನ ಹೊಂದಿದ ಪಂಡಿತನಂತೆ ತಲೆಬಾಗಿ ನಿಲ್ಲುವುದು. ಆಗ ವಿಸ್ಮಯಗೊಂಡ ಮುಗ್ಧ ಬಾಲಕನನ್ನು ವಿಶ್ವಮಾತೆಯು ಅಕ್ಕರೆಯಿಂದಲೆ ಅಣಕಿಸುವಳು! ಜ್ಞಾನಗರ್ವವು ಚೂರ್ಣ ಚೂರ್ಣವಾಗಿ ತೂರಿ ಹೋಗುವುದು. ಆಗ ಬಾಲಕನು “ಹೇ ವಿಶ್ವಮಾತೆ, ಇದೇನು?” ಎಂದು ಸಬಾಷ್ಪ ಗದ್ಗದನಾಗುವನು. ಆಗ ವಿಶ್ವಮಾತೆಯು ದಯೆಯಿಂದ ಬಂದು ಚುಂಬಿಸಿ ಮುದ್ದಾಡಿ “ಮಗುವೇ, ಪ್ರೇಮವೆ ಆಗಿರುವ ನೀನು ಪ್ರೇಮವನ್ನರಿಯುವೆಯಾ?” ಎಂದು ಹೇಳುತ್ತಾ ಸಮಾಧಾನಪಡಿಸುವಳು!

ಸೃಷ್ಟಿರಚನೆ ವಿಸ್ಮಯಕಾರಿಯಾದುದಾಗಿದೆ. ಎಷ್ಟೇ ಸ್ವಾತಂತ್ರ್ಯವಿದ್ದರೂ ಕ್ರಮಬದ್ಧವಾಗಿದೆ. ಸ್ವಾತಂತ್ರ್ಯಾನಂದಗಳ ಸಮ್ಮೇಳವೇ ಮೋಕ್ಷ. ಅಂದರೆ ನಮ್ಮ ಚಿತ್ತವು ಬ್ರಹ್ಮಚಿತ್ತದಲ್ಲಿ ಲೀನವಾಗುವುದೇ ಮುಕ್ತಿ. ಸೃಷ್ಟಿಯಲ್ಲಿ ಆ ವಿಧವಾದ ಮುಕ್ತಿಯಿರುವುದು. ಅದಕ್ಕೋಸ್ಕರವೆ ಉಪನಿಷತ್ತುಗಳ ಋಷಿವರ್ಯರೊಬ್ಬರು “ಆನಂದಾಧ್ಯೇವ ಖಲ್ವಿಮಾನಿ ಭೂತಾನಿ ಜಾಯಂತೇ, ಆನಂದೇನ ಜಾತಾನಿ ಜೀವಂತಿ, ಆನಂದಂ ಪ್ರಯಂತ್ಯಭಿಸಂವಿಶಂತಿ” ಎಂದರೆ “ಆನಂದದಿಂದಲೆ ಸರ್ವಸೃಷ್ಟಿಯು ಉದ್ಭವವಾಗಿ, ಆನಂದದಿಂದಲೆ ಸಂರಕ್ಷಿಸಲ್ಪಟ್ಟು, ಆನಂದಾಭಿಮುಖವಾಗಿಯೆ ಹೋಗುತ್ತಾ ಕಡೆಗೆ ಆನಂದದಲ್ಲಿಯೆ ಐಕ್ಯವಾಗುವುದು” ಎಂದು ಹೇಳಿದರೂ ಮುಂದೆ ‘ಭಯಾದಸ್ಯಾಗ್ನಿಸ್ತಪತಿ’ ಎಂದು ಮೊದಲಾಗಿ “ಬೆಂಕಿಯು ಆತನ ಭಯದಿಂದಲೆ ಉರಿಯುವುದು; ಸೂರ್ಯನೂ ಆತನ ಭಯದಿಂದಲೆ ತೊಳಗಿ ಬೆಳಗುವನು; ಆತನ ಭಯದಿಂದಲೆ ಗಾಳಿಯು ಬೀಸುವುದು, ಮೋಡಗಳು ಮಳೆಗರೆವುವು ಮತ್ತು ಮೃತ್ಯುವು ತನ್ನ ಕರ್ತವ್ಯವನ್ನು ನಡೆಸುವುದು” ಎಂದು ಹೇಳಿದರುವರು.

ಆನಂದದಿಂದ ಉತ್ಪತ್ತಿಯಾದ ಸೃಷ್ಟಿಯನ್ನು ತರ್ತಕದಿಂದ ತಿಳಿಯಲು ಸಾಧ್ಯವೇ? ಎಂದಿಗೂ ಇಲ್ಲ. ಅದನ್ನು ಆನಂದದಿಂದಲೇ ಅನುಭಾವಿಸಬೇಕು. ಇಲ್ಲವೆ ವಿನಾಶ ಹೊಂದಬೇಕು. ವಿಜ್ಞಾನಶಾಸ್ತ್ರಜ್ಞರು ಮಾಡುತ್ತಿರುವ ಕೆಲಸವು ದುಶ್ಯಾಸನನ ಕೆಲಸದಂತೆಯೆ ಇದೆ. ಪ್ರಕೃತಿ ಎಂಬ ದ್ರೌಪದಿಯ ವಸ್ತ್ರಾಪಹರಣದಿಂದ ಆಕೆಯ ರಹಸ್ಯವನ್ನರಿಯ ಬೇಕೆಂದಿರುತ್ತಾರೆ. ಆದರೆ ಪರಬ್ರಹ್ಮನಾದ ಶ್ರೀಕೃಷ್ಣನು ದ್ರೌಪದಿಯ ವಸ್ತ್ರವು ಆನಂತವಾಗುವಂತೆ ಮಾಡಿರುತ್ತಾನೆ ದುಶ್ಯಾಸನನು ಎಷ್ಟೇ ಪದರಗಳನ್ನು ಎಳೆದರೂ ಇನ್ನೂ ಆಸಂಖ್ಯಪದರಗಳಿದ್ದೇ ಇರುತ್ತವೆ. ಪರಮಾತ್ಮನು ಕೃಪಾನಿಧಿ ಎಂದೇ ಹೇಳಬೇಕು. ಎಲ್ಲಿಯಾದರೂ ದ್ರೌಪದಿಯ ಸೀರೆಯು ಅನಂತವಾಗದಿದ್ದರೆ ಮಹಾಕಾಳಿಯ ನಗ್ನ ಬೀಕರಾಕೃತಿಯನ್ನು ನೋಡಿ ನಾಶಹೊಂದುತ್ತಿದ್ದರು. ಪರಮಾತ್ಮನು ಪ್ರಕೃತಿಯ ಮೂಲವಾದ ಮತ್ತು ಗೂಢವಾದ ಆಕಾರವು ಅತ್ಯಂತ ಕಠೋರವಾಗಿಯೂ ಭೀಕರವಾಗಿಯೂ ನರರಿಂದ ನೋಡಲಸದಳವಾಗಿಯೂ ಇರುವುದರಿಂದ ಅದನು ರಹಸ್ಯದಲ್ಲಿಟ್ಟಿದ್ದಾನೆ. ಅದು ನಮ್ಮ ಸುಕೃತಕ್ಕೆಂದೇ ಹೇಳಬೇಕು. ಜಯದಿಂದಾಗುವ ಅನಾಹುತವನ್ನರಿಯದೆ ವಿಜ್ಞಾನ ಶಾಸ್ತ್ರಜ್ಞರನ್ನು ಹುರಿದುಂಬಿಸುತ್ತಿರುವ ಕೌರವರಂತಹ ಅಜ್ಞಾನಿಗಳನ್ನೇನೆಂದು ಕರೆಯಬೇಕು? ಆ ಶಾಸ್ತ್ರಜ್ಞರಲ್ಲಿಯೆ ಭೀಷ್ಮ ದ್ರೋಣ ಮೊದಲಾದವರಂತೆ ಹಲವರು ಬುದ್ಧಿವಾದವನ್ನು ಹೇಳುತ್ತಿರುವರು. ಅವರ ನುಡಿಗಳನ್ನು ಲಕ್ಷ್ಯಕ್ಕೆ ತಾರದೆ ವಸ್ತ್ರಾಪಹರಣ ಕಾರ್ಯವನ್ನು ಮಾಡುತ್ತಲೇ ಇರುವ ಇವರಿಗೆ ಕೌರವರ ಗತಿಯೇ ಪ್ರಾಪ್ತವಾಗದಿರದು. ಹಿಂದಿನ ಘೋರ ಯುದ್ಧದಲ್ಲಿ ಭೀಮನ ಗದೆಯ ಮೊದಲನೆಯ ಘಾತವು ಬಿದ್ದೇ ಇರುವುದು. ಇನ್ನಾದರೂ ಎಚ್ಚರಗೊಳ್ಳುವರೋ ಎನೋ ನೋಡಬೇಕು.

ಪೃಥಕ್ಕರಣದಿಂದ ಪ್ರಕೃತಿ ಸೌಂದರ್ಯವು ವಿಕೃತಾವಸ್ಥೆಯನ್ನು ಹೊಂದುವುದು. ಈ ನಿಯಮವು ನಮ್ಮನ್ನು ಸತ್ಯದ ಸಾನ್ನಿಧ್ಯಕ್ಕೆ ಒಯ್ಯುವ ಬದಲು ಸತ್ಯದಿಂದ ಬಹುದೂರ ಎಳೆದುಕೊಂಡು ಹೋಗಿ ಅನೃತದ ಬಳಿಗೆ ಬಿಡುವುದು. ವಜ್ರವು ಬರಿಯ ಇದ್ದಲೇ? ಅಳತೆ ಮತ್ತು ತೂಕ ಇವೇ ಪದಾರ್ಥಗಳಿಗಿರುವ ಕೇವಲ ಲಕ್ಷಣಗಳೇ? ಇದ್ದಲನ್ನು ವಜ್ರವನ್ನಾಗಿ ಮಾಡುವ ಬೇರೆ ಯಾವುದೋ ರಹಸ್ಯವಾದ ಲಕ್ಷಣವು (ಚಿಚ್ಛಕ್ತಿ) ಇದ್ದೇ ಇರಬೇಕು. ಅದು ನಮಗೆ ಗೊತ್ತಾಗದ ಮಾತ್ರಕ್ಕೆ ಆ ಲಕ್ಷಣವೇ ಇಲ್ಲವೆಂದು ಹೇಳುವುದು ಯಾವ ನ್ಯಾಯ? ನ್ಯಾಯಧೀಶನ ಕಳ್ಳತನ ಸಭ್ಯವಾಗುತ್ತದೆಯೆ? ಜ್ಞಾನದ ಅಜ್ಞಾನವು ಸಮ್ಮತವಾಗುತ್ತದೆಯೆ ವಿಶ್ವಸೃಷ್ಟಿಯ ಉದ್ದೇಶವು ಮೇಧಾಶಕ್ತಿಗೆ ತಿಳಿಯದ ಮಾತ್ರಕ್ಕೆ ಅಂಥಾ ಉದ್ದೇಶವೇ ಇಲ್ಲವೆನ್ನುವುದು ಯಾವ ನ್ಯಾಯ?

ಇಂಪಾದ ಗಾಯನವನ್ನು ಹಾಡುವ ಹಕ್ಕಿಯನ್ನು ಹಿಡಿದು, ಕೊಯ್ದು, ಹೃದಯ ಲೋಮನಾಳ ರಕ್ತನಾಳಗಳನ್ನು ಪರೀಕ್ಷಿಸಿದ ಮಾತ್ರಕ್ಕೆ ಹಕ್ಕಿಯ ನಿರ್ಮಾಣದ ಅರ್ಥವನ್ನರಿತಂತಾಯಿತೇ? ಆ ವಿಶ್ಲೇಷಣದಿಂದ ಆದರ ಗಾನದ ಸವಿಯನ್ನೂ ಅರ್ಥವನ್ನೂ ಗ್ರಹಿಸಿದಂತಾಗುತ್ತದೆಯೇ? ಈ ರೀತಿಯ ಪೃಥಕ್ಕರಣವನ್ನನುಸರಿಸಿ ಸತ್ಯದ ಎಲ್ಲೆಯನ್ನಾದರೂ ಮುಟ್ಟುಲಾಗುವುದೇ? ಉದಯಗಗನವು ಸೊಂಪುವೆತ್ತ ಅರುಣತೆಯಿಂದ ಮಂದಹಾಸವನ್ನು ಬೀರುವಾಗ ಅನಿಲಕಂಪಿತವಾದ ತಳಿರ ನಡುವೆ ಕುಳಿತು ಆಹ್ಲಾದಕರವಾಗಿ ಹಾಡಿ ಕವಿಯನ್ನು ಮುಗ್ಧನನ್ನಾಗಿ ಮಾಡುವ ಕೋಗಿಲೆಯೆಲ್ಲಿ? ಪಶ್ವಾದಿ ಶಾಸ್ತ್ರಜ್ಞನ ಪ್ರಯೋಗಶಾಲೆಯಲ್ಲಿ ಅಂಗಚ್ಛೇದ ಮಾಡಲ್ಪಟ್ಟು ವಿಕಾರವಾಗಿಯೂ ಅಸಹ್ಯವಾಗಿಯೂ ಬಿದ್ದಿರುವ ಮಾಂಸದ ಮುದ್ದೆಯೆಲ್ಲಿ? ಕೇವಲಸತ್ಯವಾದ ಜೀವವನ್ನು ತೆಗೆದು ಹಾಕಿ ಸತ್ಯವಿಹೀನವಾದುದರಲ್ಲಿ ಸತ್ಯವನ್ನು ಹುಡುಕುವುದು ಎಂತಹ ಬುದ್ಧಿ ಹೀನತೆ? ಕೋಗಿಲೆ ಕೇವಲ ಮಾಂಸ ನರ ಹೃದಯ ಲೋಮನಾಳಗಳ ಸಮುಚ್ಚಯವೇ? ಸತ್ಯಕ್ಕೆ ಸತ್ಯವಾದ ಆತ್ಮವನ್ನು ಮೂಲೆಗಿಟ್ಟು ನಿರ್ಜೀವವಾದ ಮಾಂಸದಲ್ಲಿ ಸತ್ಯವನ್ನು ಬಯಸುವುದು ಮತಿಹೀನರ ಕಾರ್ಯ.

ಪ್ರಕೃತಿಸೌಂದರ್ಯಾನುಭವವು ಪ್ರತಿಯೊಬ್ಬನ ಆತ್ಮಕಲ್ಯಾಣಕ್ಕೂ ಆತ್ಯಾವಶ್ಯಕವಾದುದು. ಜಗತ್ತೇ ಒಂದು ಮಹಾ ದೇವಾಲಯ. ನಾವು ದೇವತಾರಾಧನೆಗೆ ಬಂದ ಭಕ್ತರು. ಸನ್ನಿವೇಶದ ಸಂಸ್ಕಾರದಿಂದ ನಮ್ಮ ಧ್ಯೇಯವು ಮರೆಯಾಗಿ ಹೋಗಿರಬಹುದು. ಆದರೂ ಚಿಂತೆಯಿಲ್ಲ. ದೇವಾಲಯದಿಂದ ಹೊರಗೆ ಹೋಗುವುದರೊಳಗಾಗಿ, ಒಂದು ಸಲವಾದರೂ, ದೇವರ ದರ್ಶನವಾಗದಿರುವುದಿಲ್ಲ.

ಆಹಾ, ಜಗತ್ತು ಎಂತಹ ದೇವಸ್ಥಾನ! ಎಲ್ಲಾ ದೇವಸ್ಥಾನಗಳಲ್ಲಿಯೂ ವಿಗ್ರಹಗಳಿವೆ, ಸ್ವರಮೇಳವಿದೆ, ಹೂಮಾಲೆಗಳಿವೆ; ಗೋಪುರಗಳಿವೆ; ಧರ್ಮಶಾಸ್ತ್ರಗಳಿವೆ; ಶಾಸನಗಳಿವೆ; ಅರ್ಚಕರಿದ್ದಾರೆ.

ಆದರೆ ಯಾವ ಗುಡಿಯಲ್ಲಿ ಕಡಲಿನಂತಹ ಪಂಚಪಾತ್ರೆ ಇದೆ? ಆಕಾಶದಂತಹ ಗೋಪುರವಿದೆ? ಸೂರ್ಯ ಚಂದ್ರ ತಾರಕೆಗಳಂತಹ ದೀಪಗಳಿವೆ? ಮಾನವರಂಥಾ ಸಜೀವರಾದ, ಪ್ರೇಮಮಯರಾದ, ಸಮಯಕ್ಕೊದಗುವ ವಿಗ್ರಹಗಳಿವೆ? ಜಗತ್ತಿನ ಕಲ್ಯಾಣಕ್ಕಾಗಿ ಪರಮಾತ್ಮನು ತೋರಿರುವ ಕೃಪೆಯಲ್ಲಿ ಆತನ ಕರುಣೆಯನ್ನು ತಿಳಿಯುವಷ್ಟು ಸುಲಭವಾಗಿ ಇನ್ನಾವ ಗುಡಿಯಲ್ಲಿ ಆತನ ಕೃಪೆಯನ್ನು ಅನುಭವಿಸಬಲ್ಲೆವು? ವಿಹಂಗಮಗಾನಕ್ಕೆ ಸರಿಸಾಟಿಯಾದ ಸ್ವರಮೇಳವು ಯಾವ ದೇವರ ನಿಲಯದಲ್ಲಿದೆ? ವನಮಾಲೆಗಿಂತಲೂ ದಿವ್ಯವಾದ ಹೂಮಾಲೆ ಯಾವುದಿರುವುದು? ಹೃದಯದಲ್ಲಿ ಬರೆದ ಧರ್ಮಶಾಸ್ತ್ರಕ್ಕಿಂತಲೂ ಉತ್ಕೃಷ್ಟವಾದ ಧರ್ಮಶಾಸ್ತ್ರವಿದೆಯೇ? ದಂಪತಿಗಳ ಅನ್ಯೋನ್ಯವಾದ ಆತ್ಮಯಜ್ಞಕ್ಕಿಂತಲೂ ಹೆಚ್ಚಿನ ಯಜ್ಞವುಂಟೇ? ಪರಮಾತ್ಮನ ಸ್ವಂತ ಯಜ್ಞಭೂಮಿಯಾದ ಮಾನವನ ಹೃದಯಕ್ಕಿಂತಲೂ ಶ್ರೇಷ್ಠವಾದ ಕ್ರತುಪೀಠವಿದೆಯೇ? ಹೊಳೆ ತೊರೆ ಕೆರೆಗಳ ನಿರ್ಮಲವಾದ ಅಗ್ರೋದಕಕ್ಕಿಂತಲೂ ದಿವ್ಯವಾದ ತೀರ್ಥ ಬೇರೊಂದಿದೆಯೇ?

ಇಂತಹ ಮಹಿಮಾನಂದಮಯವಾದ ದೇವಾಲಯದಲ್ಲಿ ನಲಿದಾಡುವ ನಮಗೆ “ಪ್ರಕೃತಿಸೌಂದರ್ಯ” ವೆಂಬ ಉಪನ್ಯಾಸವಾದರೂ ಏಕೆ?

ಕೇಳಿ ಕೇಳಿ ಗೆಳೆಯರೆ
ದಿವ್ಯಮಂತ್ರ ಘೋಷವಾ!
ಏಳಿ ಏಳಿ ಬೇಗನೇ
ಜಗದ ಗುಡಿಗೆ ಪೋಗುವಾ!
ಶಶಿಯು ರವಿಯು ತಾರಕೆಗಳು ದೀಪವಾಗಲಿ,
ಕಾನನಗಳು ವಿಕಸಿತ ಸುಮ ಮಾಲೆಯಾಗಲಿ!
ಮೇಲೆ ನಲಿವ ನೀಲಗಗನ ಗೋಪುರಾಗಲಿ,
ಕಡಲು ತೊರೆ ತಟಾಕ ಪಂಚಪಾತ್ರೆಯಾಗಲಿ!
ವರ ತರಂಗ ಸಲಿಲಧಾರೆ ತೀರ್ಥವಾಗಲಿ,
ದಿವ್ಯ ಪುಷ್ಪಗಂಧವೆಮ್ಮ ಧೂಪವಾಗಲಿ!
ಕೋಕಿಲಾದಿ ವಿಹಗಗೀತ ವಾದ್ಯವಾಗಲಿ,
ಹೃದಯ ಪ್ರೇಮವೆಮ್ಮ ಧರ್ಮಶಾಸ್ತ್ರವಾಗಲಿ!
ಭಕ್ತಿಯೆಮ್ಮ ದಿವ್ಯ ಆತ್ಮ ಯಜ್ಞವಾಗಲಿ,
ಬ್ರಹ್ಮಯಜ್ಞ ಶಾಲೆ ಹೃದಯಪೀಠವಾಗಲಿ!

ಕೇಳಿ ಕೇಳಿ ಗೆಳೆಯರೆ
ದಿವ್ಯಮಂತ್ರ ಘೋಷವಾ!
ಏಳಿ ಏಳಿ ಬೇಗನೇ
ಜಗದ ಗುಡಿಗೆ ಪೋಗುವಾ!
(
೧೯೨೬)

* * *


* ೧೯೨೬ರಲ್ಲಿ ಮೊದಲು ಜಯಕರ್ಣಾಟಕದಲ್ಲಿ, ಪ್ರಕಟವಾದದ್ದು, ಭಾವ, ಭಾಷೆ ಮತ್ತು ತತ್ತ್ವದೃಷ್ಟಿಗಳಲ್ಲಿ ಲೇಖಕನ ಸದ್ಯದ ನಿಲುಮೆ ಬದಲಾವಣೆ ಹೊಂದಿರುವ ಎಡೆಗಳಲ್ಲಿಯೂ ಯಾವ ವ್ಯತ್ಯಾಸಗಳನ್ನೂ ಮಾಡುವ ಗೋಜಿಗೆ ಹೋಗಿಲ್ಲ.