‘ಗದಾಯುದ್ಧ’ವನ್ನು ಓದಿ ಪೂರೈಸಿದ ಮೇಲೆ ಯಾವುದೊ ಒಂದು ಮಹಾ ವಸ್ತುವಿನ ಮಹಾ ವಿನಾಶದ ಯಾತನೆ ಹೃದಯವನ್ನಾವರಿಸುತ್ತದೆ. ಕಾವ್ಯದ ವಿವಿಧ ವಿಷಯಗಳು ಕ್ರಮಕ್ರಮೇಣ ಮನದಿಂದ ಜಾರುತ್ತವೆ. ಕೌರವ ವಿನಾಶದ ಭಾವವೊಂದೇ ನಮ್ಮನ್ನು ಪೀಡಿಸುತ್ತದೆ. ಅದೂ ಮಧುರ ಯಾತನೆ: ಕಾವ್ಯರಂಗವು ಅನೇಕ ಶ್ರೇಷ್ಠತರ ಪಾತ್ರಗಳಿಂದ ಅಲಂಕೃತವಾದುದು. ಅನೇಕ ವೀರರು ತಮ್ಮ ಶಕ್ತಿಪ್ರದರ್ಶನದಿಂದ ಆ ರಂಗದಲ್ಲಿ ಮೆರೆದಿದ್ದಾರೆ. ಒಂದೆಡೆ ಮಾಯಾವಿಯಾದ ಶ್ರೀಕೃಷ್ಣ! ಒಂದೆಡೆ ಧರ್ಮಕ್ಕೇ ಆಗರನಾದ ಯುಧಿಷ್ಟಿರ! ರಂಗಮಧ್ಯದಲ್ಲಿ ತ್ರೈಲೋಕ್ಯವೀರನೆನಿಸಿದ ವೀರಪಾರ್ಥ! ಒಂದು ಕಡೆ ಪ್ರಳಯಭೈರವನನ್ನೂ ಹಂಗಿಸುವ ಭೀಮ! ಎದುರಿನಲ್ಲಿ ದುಶ್ಯಾಸನ! ದಾನಶೂರ ವೀರಾಗ್ರೇಸರ ಕರ್ಣ! ಇನ್ನು ಗುರು ಸಮುದಾಯದಲ್ಲಿ ಎಂದರೆ, ಎಲ್ಲರೂ ಅಸಾಮಾನ್ಯರು; ಎಲ್ಲರೂ ಅನುಪಮ ವೀರರು: ಪಿತಾಮಹ ಭೀಷ್ಮರು! ಚಾಪಾಗಮಾಚಾರ್ಯರಾದ ದ್ರೋಣರು! ರುದ್ರಾವತಾರನೆನಿಸಿದ ಅಶ್ವತ್ಥಾಮ! ಇನ್ನು ‘ಗದಾಯುದ್ಧ’ಕ್ಕೇ ಅಲ್ಲದೆ ಇಡೀ ಮಹಾಭಾರತಕ್ಕೇ ಸೂತ್ರಧಾರನೆನಿಸಿದ ವೈಕುಂಠನನ್ನೆ ತನ್ನ ಕಪಟ ನಾಟಕ ಸೂತ್ರಕ್ಕೆ ಬಿಗಿದ ದ್ರೌಪದಿ! ಇಷ್ಟು ವ್ಯಕ್ತಿಗಳಿದ್ದರೂ ಒಬ್ಬರಾದರು ಕೌರವನಂತೆ ನಮ್ಮನ್ನು ಆಕರ್ಷಿಸುವುದಿಲ್ಲ.# ಒಬ್ಬರಾದರೂ ನಮ್ಮನ್ನು ತಳಮಳಿಸರು. ಕೆಲವರು ತಮ್ಮ ಘನತೆಯಿಂದ ನಮ್ಮ ತಾತ್ಕಾಲಿಕ ಮೆಚ್ಚಿಕೆಗೆ ಪಾತ್ರಾರಾಗಬಹುದು. ಆದರೆ ಅವರ ಘನತೆ ‘ನೀರಸ’ವಾದ ಘನತೆ! ಅವರಲ್ಲಿಯೂ ಗಾಂಭೀರ್ಯವಿರಬಹುದು. ಆದರೆ ಫಣಿಕೇತನನ ಮಹೋನ್ನತ ಗಾಂಭೀರ್ಯಕ್ಕೆ ಎಣೆಯಾಗದು. ಕೆಲವರದು ತೊರೆಗಳ ಗಾಂಭೀರ್ಯ; ಕೆಲವರದು ವಾಹಿನಿಗಳ ಗಾಂಭೀರ್ಯ; ಮತ್ತೆ ಕೆಲವರದು ಶಾಂತಸರೋವರಗಳ ಗಾಂಭೀರ್ಯ; ಆದರೆ ದುರ್ಯೋಧನನದು –

ಘುಳಿಘುಳಿಸುತೇಳ್ವ ಬೊಬ್ಬುಳಿಗಳಿಂ ಸುಳಿಗಳಿಂ
ಸೆಳೆಸೆಳೆದು ನಡೆವ ಪೆರ್ದೆರೆಗಳಿಂ ನೊರೆಗಳಿಂ
ಪೊಳೆವ ತುಂತುರಿನ ಸೀರ್ಪನಿಗಳಿಂ ಧ್ವನಿಗಳಿಂ ವಿವಿಧ ರತ್ನಂಗಳಿಂದೆ
ಒಳಕೊಳ್ವ ನಾನಾ ಪ್ರವಾಹದಿಂ ಗ್ರಾಹದಿಂ
ದಳತೆಗಳವಡದೆಂಬ ಪೆಂಪಿನಿಂ ಗುಣ್ಪಿನಿಂ
ದಳದ ಪವಳದ ನಿಮಿರ್ದ ಕುಡಿಗಳಿಂ ತಡಿಗಳಿಂ. . . . . ||
ಲಕ್ಷ್ಮೀಶ

ಗಭೀರ ಸುವಿಸ್ತೃತವಾದ ವಿಕ್ಷುಬ್ಧ ಮಹೋದಧಿಯ ಗಾಂಭೀರ್ಯ! ಆತನ ವೈಭವ ಸಾಗರದ ವೈಭವ. ಒಂದು ವೇಳೆ ಅವನ ಸರಿಸಮಾನರಿರಬಹುದು. ಬೇರೊಂದು ದೃಷ್ಟಿಯಿಂದ ಅವನನ್ನು ಮೀರಿಸಿದವರಿರಬಹುದು. ಆದರೂ ಕೌರವನಿಗಾದ ದುಃಖತರವಾದ ಅಂತ್ಯವು ನಮ್ಮ ಹೃದಯದ ಪ್ರೀತಿಕರುಣಾ ಪ್ರವಾಹಗಳನ್ನು ಅವನ ಕಡೆಗೆ ಸೆಳೆಯುತ್ತದೆ. ಅವನ ಶೋಕದಲ್ಲಿ ನಾವೂ ಭಾಗಿಗಳಾಗುತ್ತೇವೆ. ಅವನ ಛಲದಲ್ಲಿ ನಾವು ಒಳಗೊಳಗೆ ಗುಟ್ಟಾಗಿಯಾದರೂ ಹಿಗ್ಗುತ್ತೇವೆ. ಗೊಡ್ಡುಧರ್ಮದೃಷ್ಟಿಯಿಂದ ಕೌರವನನ್ನು ಪರೀಕ್ಷೆಮಾಡೆವು. ಅವನು “ನಮ್ಮ” ಸ್ವಂತ ಕಥಾನಾಯಕ! “ನಮ್ಮ” ವೀರ! ಧರ್ಮದೃಷ್ಟಿಯಿಂದ ಕೌರವನು, ಒಂದು ವೇಳೆ, ಅನ್ಯಾಯಿ ಪಾಪಿ ಎಂದು ತೋರಿದರೂ ನಾವು ಕೌರವನೊಡನೆ ಅಧರ್ಮಿಗಳಾಗಲು ಹಿಂತೆಗೆಯುವುದಿಲ್ಲ. ಅಷ್ಟೇ ಏಕೆ? ವೀರ ಕೌರವನ ಅಧರ್ಮವನ್ನೂ ಪ್ರಶಂಸಿಸುವೆವು. ಮಿಲ್ಟನ್ ಕವಿಯ ಪ್ರಸಿದ್ದ ಮಹಾಕಾವ್ಯದ ‘ಪ್ಯಾರಡೈಸ್ ಲಾಸ್ಟ್’ ನಲ್ಲಿ ಬರುವ “ಸೇಟನ್” ನನು ದೈವದ್ವೇಷಿಯಾದರೂ ಅವನನ್ನು ಕಂಡು ಹೇಗೆ ಹಿಗ್ಗುವೆವೋ, ಅವನೊಡನೆ ನರಕದಲ್ಲಾದರೂ ಇದ್ದು ಕಷ್ಟಪಡಲು ಹೇಗೆ ಗುಟ್ಟಾಗಿ ಹಾರೈಸುವೆವೋ ಹಾಗೆಯೆ ಕೌರವನೊಡನೆ ಸೇರಲು ಇಚ್ಛಿಸುತ್ತೇವೆ. ‘ಪ್ಯಾರಡೈಸ್ ಲಾಸ್ಟ’ ನಲ್ಲಿ ಬರುವ “ದೇವರು” “ಅವನ ಪುತ್ರ” “ಅವನ ದೇವದೂತರು” ಇವರ ಧೈರ್ಯ ಸಾಹಸ ಘನತೆಗಳು ಮಿಲ್ಟನ್ ಕವಿಯ “ಸೇಟನ್” ನಿನ ಮುಂದೆ ನೀರಸವಾಗಿ ತೋರುತ್ತವೆ. “ಸೇಟನ್” ನನು

“Farewell, happy fields,
Where joy forever dwells! Hail horrors! hail
Infernal world! and thou, profoundest Hell,
Receive thy new possessor – One who brings
A mind not to be changed by place or time.
The mind is its own place, and in itself
Can make a Heaven of Hell, a Hell of Heaven.”*

ಎಂದು ಹೇಳಲು ನಮಗೆಷ್ಟು ಮೈಜುಮ್ಮೆನ್ನುವುದೋ, ಅಷ್ಟೇ ಕೌರವನು –

ನೆಲಕಿರಿವೆನೆಂದು ಬಗೆದಿರೆ
ಚಲಕಿರಿವೆಂ ಪಾಂಡುಸುತರೊಳೀ ನೆಲವಿದು ಪಾ
ಳ್ನೆಲನೆನಗೆ ದಿನಪ ಸುತನಂ
ಕೊಲಿಸಿದ ನೆಲನೊಡನೆ ಮತ್ತೆ ಪುದುವಾಳ್ದಪೆನೇ?

ಎನ್ನಲೂ ಮೈಜುಮ್ಮೆನ್ನುವುದು. ಕೌರವನ “ಅಧರ್ಮ”ವು ರೋಮಾಂಚವನ್ನುಂಟುಮಾಡುವುದು. ಇತರರ ನೀರಸ “ಧರ್ಮ”ವು ನಮ್ಮನ್ನು ಪುಳಕಿತರನ್ನಾಗಿ ಮಾಡುವುದಿಲ್ಲ.

‘ಗದಾಯುದ್ಧ’ದಲ್ಲಿ ಕೌರವನ ಸ್ಥಾನ ಅಪೂರ್ವವಾಗಿದೆ. ಆ ಅಸಮತೆಯಿಂದಲೆ ಅವನ ಪ್ರಾಮುಖ್ಯಕ್ಕೆ ಅತಿಶಯತೆ. ಆ ಅಪೂರ್ವತೆಯೆ ಆತನ ಪ್ರಾಧಾನ್ಯಕ್ಕೆ ಕಾರಣ. ಇತರ ವ್ಯಕ್ತಿಗಳ ಶೀಲಕ್ಕೂ ಆತನ ಶೀಲಕ್ಕೂ ಎಷ್ಟೋ ಅಂತರವಿದೆ. ಕೆಲವರ ಶೀಲವು ದೇವತ್ವದಿಂದ ಅತಿಮಾನುಷವಾಗಿದೆ. ಕೆಲವರದು ಉತ್ಪ್ರೇಕ್ಷೆಯಿಂದ ಅಮಾನುಷವೆಂದು ತೋರುವುದು. ಕೆಲವರಲ್ಲಿ ದೇವತ್ವವು ಮನುಷ್ಯತ್ವಕ್ಕೆ ಇಳಿದಿದೆ. ಕೆಲವರಲ್ಲಿ ಮನುಷ್ಯತ್ವವು ದೇವತ್ವದ ಸಾಹಾಯದಿಂದ ಕಾಂತಿಯುಕ್ತವಾಗಿದೆ. ಆದರೆ ಮನುಷ್ಯತ್ವವು ತನ್ನ ಬಲ ತನ್ನ ಧೈರ್ಯ ತನ್ನ ದೃಢತೆ ಇವುಗಳಿಂದ ಅದೃಷ್ಟದೊಡನೆ ಹೋರಾಡಿ ನಿರುಪಮವಾಗಿ ಪ್ರಕಾಶಿಸುವುದು ಕೌರವನೊಬ್ಬನಲ್ಲಿಯೇ. ಶ್ರೀ ಕೃಷ್ಣನು ಪರಮಾತ್ಮನಾದನು. ಆದುದರಿಂದ ಅವನಲ್ಲಿ ಹೆಚ್ಚಿಗೆ ಯಾವುದೂ ಇಲ್ಲ. ಯಾವ “ಗೊಗ್ಗ”ನಾದರೂ ಪರಮಾತ್ಮತನವಿದ್ದರೆ ಕೃಷ್ಣನ ಪಾತ್ರವನ್ನು ಧೈರ್ಯವಾಗಿ ವಹಿಸಿಬಿಡಬಹುದು. ಕೃಷ್ಣನ ಹೆಮ್ಮೆ ನಿರಾಧಾರವಾದುದು. ಅವನು ಪ್ರಶಂಸೆಗೆ ಅತೀತನಾಗಿಬಿಟ್ಟಿದ್ದಾನೆ. ನಿರ್ಗುಣನಿಗೆ ಶೀಲವೆಲ್ಲಿಂದ ಬಂದೀತು? ಇನ್ನು ಧರ್ಮರಾಯನೋ “ಧರ್ಮರಾಯನೆ” – ಅವನದು ಅತಿಶುಭ್ರಶೀಲ! ಮನುಷ್ಯತ್ವಕ್ಕೆ ಮೀರಿದ ಅಮಲ ಚಾರಿತ್ರ. ಶ್ವೇತಾಂಬರವು ವೆಗ್ಗಳವಾದರೂ ಸುವರ್ಣ ವಸ್ತ್ರಗಳೆದುರು ಮನೋಹರವಾದುದಲ್ಲ. ಅವನ ವಿಷಯವಾಗಿ ನಮಗೆ ಉದ್ರೇಕವೂ ಇಲ್ಲ, ಉದ್ವೇಗವೂ ಇಲ್ಲ. ಅವನನ್ನು ಕುರಿತು “ಪಾಪ, ಹುಡುಗ ಬಲು ಒಳ್ಳೆಯವ. ತಂಟೆಯಿಲ್ಲ, ಚೇಷ್ಟೇಯಿಲ್ಲ, ಬಾ ಅಂದರೆ ಬರುತ್ತಾನೆ; ಹೋಗು ಎಂದರೆ ಹೋಗುತ್ತಾನೆ! ದೇವರ ಮರಿ” ಎನ್ನಬಹುದು. ಆದರೆ ತಮ್ಮ ಚಟುವಟಿಕೆಯಿಂದ ನಮ್ಮನ್ನು ರೇಗಿಸುವ ಬಾಕರನ್ನೆ ನಾವು ನಿಜವಾಗಿಯೂ ಪ್ರೀತಿಸುವುದು. ಅತಿ ಸಾಧುವಾದ ಬಾಲಕರನ್ನು ಲಕ್ಷ್ಯಕ್ಕೆ ತರುವುದಿಲ್ಲ. ಅತಿ ಸಾಧುತ್ವ ಸಪ್ಪೆಯಾಗುತ್ತದೆ! ಧರ್ಮರಾಯನೇನೊ ಶ್ರೇಷ್ಠನೆ ಹೌದು. ಆದರೆ ಅವನ ಶ್ರೇಷ್ಠತ್ವ ‘ನೀರಸ’ವಾದುದು; ಉತ್ಸಾಹ ಪ್ರಚೋದಕವಲ್ಲ. ಇನ್ನು ಅರ್ಜುನ? ಅವನನ್ನೇನೊ ಕಲಿಪಾರ್ಥನೆಂದು ಕರೆಯುವರು! ಅವನ ಕಲಿತನವೆಲ್ಲಾ ಕೃಷ್ಣನಲ್ಲಿ! ಅರ್ಜುನನ ಶೌರ್ಯಕ್ಕೆ ಶ್ರೀಕೃಷ್ಣನೆ ದೊಡ್ಡ “ಬ್ಯಾಂಕು”! ಅರ್ಜುನನ ತೇಜಸ್ಸು ಕಡತಂದ ಕಾಂತಿ, ಎರವಿನ ಬೆಳಕು. ಚಂದ್ರನೂ ಬೆಳಗುತ್ತಾನೆ. ಆದರೆ ತೊಳಗುತ್ತಾನೆಯೆ? ಅರ್ಜುನನ ಪರಾಕ್ರಮ ಚಂದ್ರನ ಬೆಳಕಿನಂತೆ. ಕವಿವರ್ಯ ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಬಭ್ರುವಾಹನನು ಅರ್ಜುನನನ್ನು ಕುರಿತು –

ಕರ್ಣ ಭೀಷ್ಮ ದ್ರೋಣರಂ ಗೆಲ್ದು ಕೊಟ್ಟಂ ಸು
ಪರ್ಣಧ್ವಜಂ ನಿನಗೆ, ಕರುಣದಿಂ ಕಾದಿದನ್
ಅಪರ್ಣಾಧವಂ, ನಿನ್ನೊಳಗ್ಗಳಿಕೆ ಪಿರಿದೆಂದು ಮೇದಿನಿಯೊಳರಿಯದವರು
ವರ್ಣಿಸುವರೆಂದು ಬೆರೆತಿಹೆ. . . . . .

ಎಂದು ಹೇಳಿದುದು ಶತ್ರುವಿನ ಮೂದಲೆಯ ಮಾತಾದರೂ ಸತ್ಯಾಂಶ ಶೂನ್ಯವಾದುದಲ್ಲ. ಶ್ರೀಕೃಷ್ಣನ ಬೆಂಬಲವಿದ್ದಲ್ಲಿ ಎಂಥಾ “ಪೆದ್ದಂಭಟ್ಟ”ನಾದರೂ ಸ್ವಲ್ಪವೂ ಹಿಂಜರಿಯದೆ ಅರ್ಜುನನ ಪಾತ್ರಧಾರಿಯಗಬಹುದು. ಭೀಮನನ್ನು ನಾವು ಸುಮ್ಮನೆ ಅಲ್ಲಗಳೆಯುವುದಕ್ಕೆ ಆಗುವುದಿಲ್ಲ. ಆದರೂ ಭೀಮನಿಗೆ ದೈವಸಹಾಯ ಉಂಟೇ ಉಂಟು! ಅದಿಲ್ಲದೆ ಅವನು ಕೌರವನನ್ನು ಜಯಿಸುತ್ತಲೇ ಇರಲಿಲ್ಲ. ದುಶ್ಯಾಸನನ ವಿಚಾರದಲ್ಲಿ ನಮಗೆ ಸ್ವಲ್ಪ ಮರುಕ ಉಂಟಾಗಬಹುದು. ಆದರೆ ಅವನು ತನ್ನ ಸಹೋದರನಿಗಾಗಿ ಮಡಿದನೆಂಬ ಸಮಾಧಾನ ಉಂಟು. ಕರ್ಣನನ್ನು ನೆನಪಿಗೆ ತಂದುಕೊಂಡರೆ ನಮ್ಮ ಹೃದಯವು ಕರಗಿ ದುಃಖಾಶ್ರು ಧಾರೆಧಾರೆಯಾಗಿ ಹರಿಯದಿರದು. ಇಡೀ ಮಹಾಭಾರತದಲ್ಲಿ ಕರ್ಣನಂತಹ ಇನ್ನೊಬ್ಬ ಮಹಾನುಭಾವನನ್ನು ನಾವು ಹುಡುಕುವುದು ವ್ಯರ್ಥ. ನಮ್ಮ ಅನ್ವೇಷಣ ಎಂದಿಗೂ ಫಲಕಾರಿಯಾಗದು. ಆದರೂ ಕರ್ಣನಿಗಾದ ಗತಿಗೂ ಒಂದು ಸಮಾಧಾನವುಂಟು. ಅದು ಕುಂಟು ಕಾರಣವಲ್ಲ; ಕುರುಡು ಸಮಾಧಾನವಲ್ಲ. ಅದೇನೆಂದರೆ, ಕರ್ಣನು ತನ್ನ ಗುರಿಯನ್ನು ಸಾಧಿಸದೆ ಗತಿಸಿದವನಲ್ಲ. ಅವನಿಗಾದ ಗತಿ ದುರ್ಗತಿಯಲ್ಲ. ಕೌರವನು ಮಡಿದ ಕರ್ಣನನ್ನು ನೋಡಿ ಪ್ರಲಾಪಿಸುವಾಗ –

ವಸುವಂ ದ್ವಿಜನ್ಮ ದಾನದೆ,
ಪೊಸ ಜೌವನಮಂ ಸ್ವದಾರ ಸಂತೋಷದೆ, ನಿ
ನ್ನುಸುವಂ ಪತಿಕಾರ್ಯದೆ,
ರ್ಜಿಸಿದೈ ನಿನ್ನನ್ನನ್ ಆವನಂಗಾಧಿಪತೀ?

ಎಂದು ತನ್ನ ಪ್ರಿಯ ಗೆಳೆಯನನ್ನು ಹೊಗಳಿದುದು ಬರಿಯ ಹೊಗಳುಭಟ್ಟರ ಸ್ತುತಿಯಲ್ಲ. ಅಥವಾ ಗೆಳೆಯರನ್ನು ಕುರಿತು ಮಾಡುವ ಸಂಪ್ರದಾಯದ ಪ್ರಶಂಸೆಯಲ್ಲ. ಕರ್ಣನ ಮರಣವು ಸುಗತಿದಾಯಕವಾದದ್ದು. ಆದುದರಿಂದ ಅದೂ ಅಷ್ಟು ದುಃಖಕರವಾದುದಲ್ಲ.

ಕೌರವೇಶ್ವರನ ಮರಣದ ಅಪೂರ್ವತೆಯೇ ಬೇರೆ! ಆದರ ಶೋಕರಸವೇ ಬೇರೆ. ಕಾಲವಶರಾದ ಇತರ ವೀರರು ಸ್ವಾಮಿಕಾರ್ಯವೆಂಬ ಧ್ಯೇಯವನ್ನು ಸಾಧಿಸುತ್ತಾ ಅಳಿದರು.ಅನೇಕ ಸೈನಿಕರ ನಡುವೆ ತಮ್ಮ ಹಸ್ತಲಾಘವವನ್ನೂ ಬಿಲ್ಬಲ್ಮೆಯನ್ನೂ ಪ್ರದರ್ಶಿಸುತ್ತಾ ವೀರಮರಣೋನ್ಮುಖರಾದರು. ಸ್ವಾಮಿಕಾರ್ಯವು ಜಯ ಹೊಂದುವುದೆಂಬ ದೂರದ ನೆಚ್ಚಿಕೆಯಿಂದಾದರೂ ಇಹಲೋಕವನ್ನಗಲಿದರು. ಆದರೆ ಸುಯೋಧನನು ತನಗಾಗಿ ಎಲ್ಲರೂ ನಾಶ ಹೊಂದಿದುದನ್ನು ಕಣ್ಣಾರೆ ಕಂಡು, ತನ್ನ ಕಾರ್ಯದ ಅಪಜಯ, ನಿಷ್ಟ್ರಯೋಜನಗಳನ್ನೂ ಅನುಭವಿಸಿ, ಚಕ್ರವರ್ತಿಯಾದರೂ ಅನುಚರರಿಲ್ಲದೆ ಒಂಟಿಗನಾಗಿ ಹೋರಾಡಿ, ನಿರ್ಜನ ಪ್ರದೇಶದಲ್ಲಿ ದೇಶಿಗನಂತೆ ಪರಲೋಕಗತನಾಗ ಬೇಕಾಯಿತು! ಚಕ್ರವರ್ತಿಯ ಈ ವಿಧವಾದ  ಅಂತ್ಯವು ನಮಗೆ ಖೇದವನ್ನುಂಟು ಮಾಡದೆ ಇರದು. ಕುರುರಾಜನ ಶೀಲದಲ್ಲಿದ್ದ ಅತಿ ಭರವಸೆ, ಅತಿ ದಿಟ್ಟತನ ಇವು ಆತನ ಮಹಾ ವಿನಾಶಕ್ಕೆ ಕಾರಣವಾದುವು, ರನ್ನನ ‘ಗದಾಯುದ್ಧ’ದ ಕೌರವನ ಘನತೆ ಆತನ ಅಂತ್ಯವನ್ನು ಇನ್ನೂ ದುಃಖಕರವಾದುದನ್ನಾಗಿ ಮಾಡುತ್ತದೆ. ‘ಗದಾಯುದ್ಧ’ವು ಕೌರವ ಜೀವನಾಟಕದ ದುಃಖಾಂತವಾದ ಕೊನೆಯ ಅಂಕ. ಕವಿಚಕ್ರವರ್ತಿ ಕಳಂಕಿತ ದುರ್ಯೋಧನನನ್ನು ನಮ್ಮ ಮುಂದಿಡಲು ಇಷ್ಟಪಡದೆ,  ಬರಿಯ ಘನತೆಯನ್ನೆ ಹೊರಹೊಮ್ಮಿಸುವ ಅವನ ಜೀವಮಾನದ ಅಂತ್ಯಭಾಗವನ್ನೇ ತನ್ನ ಕಾವ್ಯದ ವಿಷಯವಾಗಿಟ್ಟುಕೊಂಡಿರುತ್ತಾನೆ. ಮೋಸದಿಂದ ಭೀಮನಿಗೆ ವಿಷವೂಡಿದ ಕೌರವನನ್ನು ಕಾಣೆವು. ಕೃತ್ರಿಮ ದ್ಯೂತದಿಂದ ಧರ್ಮರಾಯಾದಿಗಳನ್ನು ವನಾಂತರಕ್ಕಟ್ಟಿದ ಕುರುಪತಿಯನ್ನು ನೋಡೆವು. ದ್ರೌಪದಿಯ ವಸ್ತ್ರಾಪಹರಣ ಮಾಡಿಸಿದ ಹೀನಹೃದಯನಾದ ದುರ್ಯೋಧನನ್ನು ದೃಷ್ಟಿಸೆವು. ಆರಗಿನ ಮನೆಗೆ ಬೆಂಕಿಯಿಟ್ಟ ಕಠಿನ ಮನಸ್ಕನನ್ನು ಸಂದರ್ಶಿಸೆವು. ಆದರೆ ಊರುಭಂಗ ಕಿರೀಟ ಭಂಗಗಳಿಗೊಳಗಾದ ಕುರುಕುಲ ಸಾರ್ವಭೌಮನ ಸರ್ವನಾಶವನ್ನು ಎದುರುಗೊಳ್ಳುತ್ತೇವೆ. ಮಹಾಭಾರತದ ಕೌರವನ ಆಳಿವಿಗಾಗಿ ನಾವು ವಿಷಾದಪಡೆವು. ವ್ಯಾಸಮಹರ್ಷಿಯ ದುಯ್ಯೋಧನನಿಗೆ ರನ್ನ ಕವಿಯ ಕೌರವನ ಶೀಲದ ಕಾಂತಿಯಿಲ್ಲ. ಘನವಾದುದರ ನಾಶಕ್ಕಿಂತಲೂ ಘನತರವಾದುದರ ಸಂಹಾರವು ಹೆಚ್ಚು ದುಃಖಕರ! ಮಹಾಭಾರತದ ಕೌರವನು ತನ್ನ ಸರ್ವ ಸೈನ್ಯವೂ ಹತವಾದುದನ್ನು ನೋಡಿ ಹೆಡಿಯಂತೆ  ರಣರಂಗದಿಂದ ಓಡಿಹೋಗುವನು. ‘ಗದಾಯುದ್ಧ’ದ ಸುಯೋಧನನು ತನ್ನ ಮಾತಾಪಿತೃಗಳು ಸಂಧಿಮಾಡಿಕೊಳ್ಳೆಂದರೂ ಕೇಳದೆ, ಒಬ್ಬೊಂಟಿಗನಾಗಿ ಗದೆಯನ್ನು ಹೆಗಲಮೇಲೆ ಹೇರಿಕೊಂಡು ರೂಪುವೆತ್ತ ಶೌರ್ಯದಂತೆ ರಣರಂಗಾಭಿಮುಖನಾಗುವನು. ಅಂಧ ನೃಪಾಲನು ಪುತ್ರನನ್ನು ಕುರಿತು –

ಯಮಸುತನಿಂಬುಕೆಯ್ವನೆಮಗಿನ್ನುಮೊಡಂಬಡು ಕಂದ ಸಂಧಿಯಂ
ಸಮಗೊಳಿಸಲ್ಕೆ ಸಂಜಯನನಟ್ಟುವೆ, ಭೀಮನೊಳಾದ ಬದ್ಧವೈ
ರಮನುಳಿ, ನೋಡದಿರ್ಸುತಸಹೋದರ ದುಃಖಮನೀವುದರ್ಧರಾ
ಜ್ಯಮನವರ್ಗೆ….

ಎಂದು ಬೇಡಿಕೊಂಡರೂ ವೀರಪುಂಗವ ಕೌರವನು ಕೇಳಲಿಲ್ಲ. ಜನನಿ ಗಾಂಧಾರಿ –

. . . . . . . . . . . .  . . . .
ಗುರುವಚನಮಲಂಘನೀಯಮೆಂಬುದು ಮಗನೇ.
ಸಮರ ವ್ಯಾಪಾರಂ ಮಾ
ಣ್ದು ಮಗನೆ ನಿಜ ಶಿಬಿರದತ್ತ ಬಿಜಯಂಗೆಯ್
ತ್ತ ಮಗಂದಿರ್ಸತ್ತರ್ನೀ
ನೆಮಗುಳ್ಳೊಡೆ ಸಾಲ್ವುದವರನಿಂ ತಂದಪೆವೇ?

ಎಂದು ಬಹುವಾಗಿ ಮಗನನ್ನು ಕೇಳಿಕೊಳ್ಳುತ್ತಾಳೆ. ಆದರೂ ಕೌರವನು –

ತನ್ನೊಡವುಟ್ಟಿದರ್ಪೆಸರ ನಾಲ್ವರೊಳೊರ್ವರುಮಿಲ್ಲದಿರ್ದೊಡಂ
ತನ್ನಸುವಂ ನಿವೇದಿಸುವನಗ್ನಿಗೆ ಧರ್ಮತನೂಜನೆಂದೊಡಾ
ನೆನ್ನೊಡವುಟ್ಟಿದರ್ಪೆಸರ ನೂರ್ವರೊಳೂರ್ವರುಮಿಲ್ಲ ಬಾಳ್ವೆನೆಂ
ಬೆನ್ನಳಿಯಾಸೆಯಂ ಬಿಸುಡಿಮಿನ್ನವರಾದುದನಾಗದಿರ್ಪೆನೇ?
ಸಾಧಿಸುವೆಂ ಫಲ್ಗುಣನಿಂ
ಸಾಧಿಸುವೆಂ ಪವನಸುತನ ಬಸಿರಿಂ ಹಾ !
ರ್ಣಾ ! ದುಶ್ಯಾಸನ! ತೆಗೆವೆಂ.
ನಿರ್ದೋಷಿಗಳಿಕ್ಕೆ, ಯಮಜನೊಳ್ಪುದುವಾಳೆಂ!

ಎಂದು ಸಂಜಯನೊಡಗೂಡಿ ಸಮರಾಂಗಣಕ್ಕೆ ಹೊರಡುವನು. ಕುರುನೃಪತಿಯ ಈ ತೆರನಾದ ದಿಟ್ಟತನದಲ್ಲಿ ಒಂದು ಪೆಂಪಿದೆ! ಅಜ್ಜಂದಿರೂ ನೀತಿಶಾಸ್ತ್ರಜ್ಞರೂ ದುರ್ಯೋಧನನು ಜನನೀಜನಕರ ‘ಉಪದೇಶ’ ವನ್ನು ಉಲ್ಲಂಘಿಸಬಾರದಾಗಿತ್ತೆಂದು ಹೇಳಬಹುದು. ಆದರೂ ತರುಣ ಪಾಠಕನು ‘ಕೌರವನು ತಂದೆತಾಯಿಗಳ ಮಾತಿಗೆ ಎಲ್ಲಿ ಒಪ್ಪಿಬಿಡುವನೋ?’ ಎಂದು ಒಳಗೊಳಗೆ ತಳಮಳಿಸದಿರನು. ಆತನು ಹಿರಿಯರ ಮಾತಿಗೆ ಒಪ್ಪಿದ್ದರೆ ಸೌಭಾಗ್ಯವಂತನಾಗುತ್ತಿದ್ದನು. ಆದರೆ ಆ ಹಾಳು ಹೇಡಿತನದ ಸೌಭಾಗ್ಯವೇಕೆ? ಈಗಲಾದರೊ ಅವನ ಕೀರ್ತಿ ರಸರಹಿತ ಭಾಗ್ಯದಲಿ ಅಡಗಿ ನಶಿಸಿ ಹೋಗುವ ಬದಲು, ದೌರ್ಭಾಗ್ಯದಲ್ಲಿ ಇಮ್ಮಾಡಿಯಾಗಿ ಬೆಳೆದು ಕಂಗೊಳಿಸುತ್ತಿದೆ. ಈಗ ಆತನಿಗೆ ಸಾವೇ ಜೀವವಾಗಿರುವುದು; ಆಗ ಜೀವವೇ ಸಾವಾಗುತ್ತಿದ್ದಿತು.

ಮಹಾಭಾರತದ ಕೌರವನು ಪಾಂಡವರಿಗೆ ಹೆದರಿ, ವೈಶಂಪಾಯನ ಸರೋವರದಲ್ಲಿ ಅವಿತುಕೊಂಡಿರಲು, ಧರ್ಮರಾಯ ಭೀಮಾದಿಗಳು ಅಲ್ಲಿಗೆ ಬಂದು ಅವನನ್ನು ಯುದ್ಧಕ್ಕೆ ಕರೆಯುವರು. ಆಗ ಕೌರವನು ಅಂಜುಬುರುಕನಂತೆ “ಅಭಾವ ವೈರಾಗ್ಯ”ದಿಂದ “ಯಾರಿಗೋಸ್ಕರ ರಾಜ್ಯವನ್ನು ಅಪೇಕ್ಷೀಸುತ್ತಿದ್ದೆನೋ ಅವರೆಲ್ಲರೂ ಸತ್ತರು. ನಿಮ್ಮನ್ನು ಜೈಸಿದರೂ ರಾಜ್ಯದ ಮೇಲೆ ನನಗೆ ಅಪೇಕ್ಷೆಯಿಲ್ಲ. ಸಹಾಯವಿಲ್ಲದ ನನಗೆ ರಾಜ್ಯವೇತಕ್ಕೆ? ನೀವೇ ಅದನ್ನು ಅನುಭವಿಸಿ. ನಾನು ತಪಸ್ಸಿಗೆ ಹೋಗುತ್ತೇನೆ?” ಎಂದು ನುಡಿಯುವನು. ಆದರೆ ರನ್ನ ಸೃಷ್ಟಿತ ಕೌರವನ ಘನತೆಯೆ ಬೇರೆ. ತಂದೆ ತಾಯಿಗಳನ್ನು ಬೀಳ್ಕೊಂಡು ಸಂಜಯನೊಡಗೂಡಿ ರಣರಂಗದ ದುಃಖಕರವಾದ ಘೋರ ದೃಶ್ಯಗಳನ್ನು ನೋಡುತ್ತಾ ಕುರುಪಿತಾಮಹರು ಶರಶಯನರಾಗಿದ್ದಲ್ಲಿಗೆ “ದೇಸಿಗನೆ ಬರ್ಪವೊಲೊರ್ವನೆ” ಹೋಗುತ್ತಾನೆ. ಚಕ್ರವರ್ತಿಯ ಆ ಸ್ಥಿತಿ ಬೀಷ್ಮರಂತಹರನ್ನೂ “ಬಾಷ್ಪಾಂಬುಪೂರಿತಲೋಚನ” ರನ್ನಾಗಿಮಾಡುತ್ತದೆ. ಅವರು ಪನ್ನಗಪತಾಕನ ಮೊದಲಿನ ವೈಭವಕ್ಕೂ ಕಡೆಗಾದ ದೇಸಿಗತನಕ್ಕೂ ಇರುವ ಅಂತರವನ್ನು ನೋಡಿ –

ಢವಳ ಗಜೇಂದ್ರಮುಂ ಧವಳ ಚಾಮರಮುಂ ಧವಳಾತಪತ್ರಮುಂ
ಧವಳ ವಿಲೋಚನೋತ್ಪಲ ವಧೂಜನಮುಂ ಬೆರಸಷ್ಟದಿಕ್ತಟಂ
ಧವಳಿಸೆ ಕೀರ್ತಿಯಿಂ ಧವಳ ಮಂಗಳ ಗೇಯದಿನೊಪ್ಪಿ ಬರ್ಪ ಕೌ
ರವ ಧವಳಂಗೆ ದೇಸಿಗನೆ ಬರ್ಪವೊಲೊರ್ವನೆ ಬರ್ಪುದಾದುದೇ?

ಎಂದು “ವಿಸ್ಮಯಾಕ್ರಾಂತ ಸ್ವಾಂತ” ರಾಗುವರು. ಕೌರವನ ಆ ಇರವನ್ನು ನೆನಸಿಕೊಂಡರೆ ಯಾರಿಗೆ ತಾನೆ ಉಮ್ಮಳ ಉಂಟಾಗದಿರದು. ನವಪಲ್ಲವಿತ ಚೈತ್ರ ವೈಭವದಿಂದ ಪೆಂಪುವೆತ್ತ ಕುಸುಮಿತ ರಮ್ಯಾರಣ್ಯವು ತನ್ನ ಮರಗಳ ಸಂಘಟ್ಟನದಿಂದುಂಟಾದ ಬೆಂಕಿಯಿಂದಲೆ ಉರಿದು ಹಾಳಾದುದನ್ನು ಕಂಡು ಯಾರುತಾನೆ ವ್ಯಸನಪಡರು? ಅನಿವಾರ್ಯವಾದ ಅನಿರ್ವಚನೀಯ ಶಕ್ತಿಯೊಂದು ಕೌರವನನ್ನು ತನ್ನ ವಿನಾಶಕ್ಕೆ ಎಳೆಯುತ್ತಿದ್ದುದನ್ನು ಭೀಷ್ಮರು ತಿಳಿದು, ಸಂಧಿಯ ಮಾತನ್ನು ನೆವ ಮಾತ್ರಕ್ಕೆ ಹೇಳುವರು. ಆಗ ಕೌರವನು “ನಿಮಗೆ ಪೊಡಮಟ್ಟು ಪೋಪೀ ಸಮಕಟ್ಟಿಂ ಬಂದೆನ್. ಅಹಿತರೊಳ್ ಸಂಧಿಯ ನೇಂ ಸಮಕೊಳಿಸಲೆಂದು ಬಂದೆನೆ? ಸಮರದೆ ಎನಗಜ್ಜ ಪೇಳಿಮಾವುದು ಕಜ್ಜಂ” “ಚಲಮಂ ಗಂಡುಮನಪ್ಪುಕೆಯ್ವೆನಗಮಾ ಕಾಂತೇಯರೊಳ್ ಸಂಧಿಯೇ? ” “ನೆಲಕಿರಿವೆನೆಂದು ಬರೆದಿರೆ ಚಲಕಿರಿವೆಂ” ಎಂದು ತನ್ನ ಕ್ಷತ್ರಿಯತ್ವವನ್ನು ಪ್ರದರ್ಶಿಸುತ್ತಾನೆ. ಆಗ ಗಾಂಗೇಯರು ಧೃತರಾಷ್ಟ್ರಸುತನನ್ನು ಮನದಲ್ಲಿ ಹೊಗಳಿ “ಮಗನೆ, ನೀನೆಂತುಮೆಮ್ಮ ಪೇಳ್ದುದಂ ಕೈಕೊಳ್ಳದೆ ಛಲಮನೆ ಕೈಕೊಂಡು ಪಾಂಡುನಂದನರೊಳ್ ಕಾದಿದಲ್ಲದಿರೆನೆಂಬೆಯಪ್ಪೊಡೆ ತೀರ್ಥಯಾತ್ರೆಗೆ ಪೋದ ಬಲದೇವಂ ಬರ್ಪನ್ನೆಗಂ ನೀನಿರ್ದೆಡೆಯನರಿಯದಂತು ಮೆಯ್ಗೆರೆದು, ಅಶ್ವತ್ಥಾಮ ಕೃಪ ಕೃತವರ್ಮರ್ ಬರ್ಪನ್ನೆಗಂ ಕಾಲವಂಚನೆಗೈವುದು. ಮೇಣ್ ಜಲಮಂತ್ರ ವಿದ್ಯಾಭ್ಯಾಸಮಂ ಕೈಕೊಂಡು, ಕುರುಕ್ಷೇತ್ರದುತ್ತರ ದಿಶಾಭಾಗದೊಳಿರ್ಪ ವೈಶಂಪಾಯನ ಸರೋವರಮಂ, ಪೊಕ್ಕಿರ್ದು, ಇಂದಿನೊಂದಿರುಳಂ ಕಳಿಪಿ ನಾಳೆ ನಿಮ್ಮ ನೆಗಳ್ವುದಂ ನೆಗಳ್ವುದು” ಎಂದು ರಾಜತಂತ್ರದ ಹಿತವಚನಗಳನ್ನು ಹೇಳುತ್ತಾರೆ. ಹೀಗೆ ರನ್ನ ನಿರ್ಮಿತ ಕೌರವನು ಆಡಗಿದುದು ಗುರುವಿನ ಆಜ್ಞೆಯ ಮೇರೆಗಲ್ಲದೆ ಬರಿಯ ಭೀತಿಯಿಂದಲ್ಲ. ‘ಗದಾಯುದ್ಧ’ದ ಕೌರವನ ಶೌರ್ಯ, ಧೈರ್ಯ, ಶೀಲ, ಘನತೆಗಳು ಆತನ ಅನಾಥ ಅಂತ್ಯದ ದಿಕ್ಕಿಲ್ಲದ ಅವಸ್ಥೆಯನ್ನು ಇನ್ನೂ ಅತ್ಯಂತ ಶೋಕಕರವಾದುದನ್ನಾಗಿ ಮಾಡುತ್ತವೆ. ಆದ್ದರಿಂದಲೆ ಆ ಗೋಳನ್ನು ಕಂಡು ನಮ್ಮ ಹೃದಯಕ್ಕೆ ತಳಮಳ, ಯಾತನೆ.

ಕಥಾನಾಯಕನು ಬರಿಯ ದುರ್ಗುಣದ ಆಗರವಾಗಿದ್ದರೆ ಅವನ ಮರಣದಲ್ಲಿ ಯಾರೂ ಶೋಕಿಸರು. ಬರಿಯ ಸುಗುಣದ ಆವಾಸವಾಗಿ ಶುಭ್ರಾಂಬರದಂತೆ ಇದ್ದರೆ ಆತನ ಶೀಲ ನೀರಸವಾಗುತ್ತದೆ. ಅಂತಹವನಿಗೆ ದುಃಖಾಂತ್ಯವೊದಗಿದರೆ ನಮಗೆ ದುಃಖಕ್ಕೆ ಬದಲು ಕೋಪವೂ, ಸೃಷ್ಟಿರಹಸ್ಯದಲ್ಲಿ ಕುತೂಹಲದ ಬದಲು ಅಸಹ್ಯವೂ ಉಂಟಾಗದಿರವು. “ಗದಾಯುದ್ಧ”ದ ಕಥಾನಾಯಕ ಕೌರವನು ದುರ್ಗುಣದ ಆಗರವೂ ಅಲ್ಲ, ಸುಗುಣದ ಅವಾಸವೂ ಅಲ್ಲ. ಸಂಪೂರ್ಣ ಕಳಂಕರಹಿತನೂ ಅಲ್ಲ; ಪೂರ್ಣ ಕಳಂಕಸಹಿತನೂ ಅಲ್ಲ. ಅವನ ಶೀಲದಲ್ಲಿ ಒಂದೆರಡು ಕುಂದು ಕೊರತೆಗಳಿವೆ, ಅವಗುಣಗಳಿವೆ. ಆದರೆ ಅವನು ಶೀಲಶೂನ್ಯನಲ್ಲ; ಘನಗುಣಿ. ಅವನ ಘನತೆಯೇ ಅವನನ್ನು ನಮಗೆ ಪ್ರಿಯನನ್ನಾಗಿ ಮಾಡುತ್ತದೆ. ಕೌರವನು ವಿಶಾಲಹೃದಯನು. ಸಣ್ಣಪುಟ್ಟ ಹೀನಾಭಿಲಾಷೆಗಳು ಅವನಲ್ಲಿ ಸೇರವು. ಮೃಗರಾಜನಾದ ಕೇಸರಿ ಹುಳು ಹಪ್ಪಟೆಗಳನ್ನು ಬೇಟೆಯಾಡುವುದೇ? ಅದು ನರಿಯ ಕೆಲಸ! ಸಿಂಹವು ಆನೆಯಮೇಲೆಯೇ ಬೀಳುವುದು. ಹುಲುಮೃಗಗಳನ್ನು ಎಂದಿಗೂ ಬೇಟೆಯಾಡದು. ಹಾಗೆ ಮಾಡುವುದು ಆದರ ಗಾಂಭೀರ್ಯಕ್ಕೆ ಕಡಿಮೆ. ಕೌರವನ ಗಾಭೀರ್ಯವು ಉಕ್ಕಿ ಮೊರೆಮೊರೆದು ಭೋರಿಡುವ ಕಡಲ ಗಾಂಭೀರ್ಯ. ಹಾಗಾದರೆ ಅವನ ಶೀಲವು ಬರಿಯ ರೌದ್ರಾತ್ಮಕವಾದುದೇ? ಎಂದರೆ ಅಲ್ಲ. ಆದರಲ್ಲಿ ಶಾಂತಸ್ವಭಾವವೂ ಉಂಟು. ಅದು ರಣರಂಗದಲ್ಲಿ ಸಿಡಿದುರುಳುವ ಅರಿಭಟರ ರುಂಡದಿಂದ ಪೊರಮಡುವ ಕೆನ್ನೀರ ಧಾರೆಯನ್ನು ಕಂಡು ಹೇಗೆ ಆವೇಶಭರಿತವಾಗುವುದೋ, ಹಾಗೆಯೆ ವನಗಳ ದಿವ್ಯ ರಮಣೀಯತೆಯನ್ನು ದೃಷ್ಟಿಸಿ, ಆನಂದದಿಂದ ಹಿಗ್ಗಿ ಭಾವಪರವಶವಾಗುತ್ತಿದ್ದಿತು. ವರ್ಡ್ಸವರ್ತ್ ಕವಿ ತನ್ನ “ಸುಖಿಭಟ” (The Happy Warrior) ಎಂಬ ಪ್ರಸಿದ್ಧ ಕವಿತೆಯಲ್ಲಿ –

He who though thus endued with a sense
And faculty for storm and turbulence
Is yet a soul whose master-bias leans
To home-felt pleasure and to gentle scenes;

ಎಂದು “ಸುಖಿಭಟ”ನ ಸ್ವಭಾವವನ್ನು ವರ್ಣಿಸಿದ್ದಾನೆ. ಅದರಂತೆಯೆ ಕೌರವನು ಬರಿಯ ರೌದ್ರರಸಪ್ರಿಯನೆ ಆಗಿರದೆ ಶಾಂತರಸಪ್ರಿಯನೂ ಆಗಿದ್ದನು. ಅವನ ಮೃದು ಸ್ವಭಾವವು ರಣರಂಗದಲ್ಲಿ ಸಂಜಯನೊಡನೆ ಭೀಷ್ಮರಿದ್ದಲ್ಲಿಗೆ ಹೋಗುತ್ತಿರುವಾಗ ಹೊರಬೀಳುತ್ತದೆ. ಆತನು ತನ್ನ ಬಂಧುಗಳ ಮತ್ತು ಅನುಜರ ವಿನಾಶವನ್ನು ನೋಡಿಯೂ ಮರುಗದಿರುವಷ್ಟು ಕಠಿನ ಹೃದಯನಲ್ಲ. ತನ್ನ ಮಿತ್ರರ ಮತ್ತು ಗುರುಗಳ ದುರವಸ್ಥೆಯನ್ನು ಕಂಡೂ ಶೋಕಿಸದಷ್ಟು ಪಾಷಾಣ ಹೃದಯನಲ್ಲ. ಹಿತರಳಿವಿಗಾಗಿ ಮರುಗುವುದಿರಲಿ, ಮಹಾವೀರರೂ ದುಃಸಾಧ್ಯರೂ ಆದ ಶತ್ರುಭಟರು ಮಡಿದಿರುವುದನ್ನು ನೋಡಿ, ಅವರ ಅಣ್ಮಿಗೆ ಮೆಚ್ಚಿ, ಅವರ ಧೈರ್ಯ ಸಾಹಸಗಳನ್ನು ಸ್ತುತಿಸಿ, ಅವರ ಗುಣಪ್ರಶಂಸೆಯನ್ನು ಮಾಡದೆ ಕೌರವೇಂದ್ರನ ಘನಹೃದಯ ಶಾಂತವಾಗುತ್ತಿರಲಿಲ್ಲ. ‘ಗದಾಯುದ್ಧ’ದಲ್ಲಿ ಆತನ ಈ ವಿಧವಾದ ಘನತೆಗೆ ನಿದರ್ಶನಗಳು ಅನೇಕವಾಗಿವೆ. ರಣರಂಗದಲ್ಲಿ ರಕ್ತ ನೆಣ ಮಜ್ಜೆ ಮಾಂಸಗಳಿಂದ ಅಸಹ್ಯವಾದ ದಾರಿಯಲ್ಲಿ ನಡೆಯುತ್ತಿರುವ ಕುರುರಾಜನನ್ನು ನೋಡಿ ಸಂಜಯನು –

ವಿನುತ ವಿರೋಧಿ ಮಂಡಳಿತ ಮೌಳಿ ವಿಘಟ್ಟಿತ ಪಾದಪೀಠ ಕಾಂ
ಚನ ಕಮಳಾಯಮಾನಮಿವು ನಿಮ್ಮಯ ಮೆಲ್ಲಡಿ ಭಿಂಡಿವಾಳದಂ
ಬಿನ ಕರವಾಳ ಕಕ್ಕಡೆಯ ಕೊಂತದ ಧಾರೆಗಳುರ್ಚೆ ಸಂಗರಾ
ವನಿತಳದೊಳ್ವಿಧಾತ್ರ ವಶದಿಂ ನಿಮಗಂ ನಡೆವಂತುಟಾದುದೇ?

ಎಂದು ಕಂಬನಿಗೆರೆಯುತ್ತಾನೆ. ಅವನನ್ನು ಅಭಿಮಾನಧನನಾದ ಸುಯೋಧನನು ಸಂತೈಸಿ –

ತನುಜಾನುಜರ ವಿಯೋಗದ
ಮನಃಕ್ಷತಂ ನೋಯಿಸಲ್ಕೆ ನೆರೆಯವು, ಸಮರಾ
ವನಿಯೊಳಿಡಿದಿರ್ದ ಕಯ್ದುಗ. . . .
ಳಿನಿಸುಂ ನೋಯಿಕುಮೆ ವಜ್ರಮನನಪ್ಪೆನ್ನಂ?

ಎಂದು ತನ್ನ ಹೃದಯದ ಕಠಿನ ಮತ್ತು ಮೃದು ಸ್ವಭಾವಗಳೆರಡನ್ನೂ ಪ್ರಕಾಶಪಡಿಸಿರುವನು. “ಸಮರಾವನಿಯೊಳಿಡಿದಿರ್ದ ಕಯ್ದುಗಳ” ಭಾಗಕ್ಕೆ ವೀರ ದುರ್ಯೋಧನನು ವಜ್ರಮನಸ್ಕನೆ ಹೌದು. ಆದರೆ “ತನುಜಾನುಜರ ವಿಯೋಗದ ಮನಃಕ್ಷತ”ಕ್ಕೆ ಮಾತ್ರ ಅವನ ಎದೆ ಹೂವಿನೆದೆ. ತನಗಾಗಿ, ತನ್ನ ಕೀರ್ತಿಗಾಗಿ, ತನ್ನ ಉನ್ನತಿಗಾಗಿ, ತನ್ನ ಅಭಿವೃದ್ಧಿಗಾಗಿ ಹೋರಾಡಿ ಮಡಿದ ಗುರು ಮಿತ್ರ ಸಾಮಂತ ನೃಪಸಂಕುಲವನ್ನು ಸಂದರ್ಶಿಸಲು “ಧನ್ಯತೆ ಕೃತಜ್ಞತೆಯ ಕಣ್ಣೀರು ಹನಿತು” ಕೌರವನ ಕೆನ್ನೆಗಳನ್ನು ತೊಯ್ಯುತ್ತವೆ. ಅವರ ಸೋಲನ್ನು ಅವರವರ ಉಪೇಕ್ಷೆಗೆ ಆರೋಪಿಸದೆ ತನ್ನ ಕರ್ಮವಶದ ಮೇಲೆಯೆ ಹಾಕಿಕೊಳ್ಳುತ್ತಾನೆ: ರಣರಂಗದಲ್ಲಿ ಸತ್ತು ಬಿದ್ದ ದ್ರೋಣರನ್ನು ಕಂಡು “ನಿಮ್ಮುಪೇಕ್ಷೆಯೆಂದರಿಯೆನಿದೆನ್ನ ಕರ್ಮವಶಮೆಂದರಿಯೆಂ ನಿಮಗಿಂತು ಸಾವುಮೇತರದಿನಕಾರಣಂ ನೆರೆಯೆ ಸಂಭವಿಸಿರ್ದುದೊ ಕುಂಭಸಂಭವಾ?” ಎಂದು ದುಃಖಿಸುತ್ತಾನೆ. ಮಹಾನುಭಾವನಾದ ಕೌರವನು ಸಮರಾಂಗಣದಲ್ಲಿ ಅಭಿಮನ್ಯು ಕುಮಾರನನ್ನು ಕಂಡಾಗ, ಅವನನ್ನು ಸ್ತುತಿಸಿ, ಅವನ ಸಾಹಸಕ್ಕೆ ಮೆಚ್ಚಿ, ಅವನಿಗೆ ಅಭಿನಂದಿಸಿ, ತನ್ನ ಘನತೆಯನ್ನು ಅಧಿಕವಾಗಿ ಪ್ರಕಾಶಪಡಿಸಿಕೊಂಡಿದ್ದಾನೆ. ತನಗೆ ಕಷ್ಟಸಾಧ್ಯರೂ ವೀರರೂ ಆದ ಅರಿಗಳನ್ನು ಕಂಡು ಕರುಬುವ ಸಣ್ಣ ಮನಸ್ಸಿನ ಹೀನ ಹೃದಯದ ಪಾಪಿ ತಾನಲ್ಲವೆಂದು ಕೌರವನು ತೋರಿಸಿಕೊಂಡಿದ್ದಾನೆ. ವೀರನು ವೀರತ್ವಪ್ರಿಯನು; ವೀರತ್ವ ಎಲ್ಲಿಯೆ ಇರಲಿ ಅದನ್ನು ಕಂಡು ಆನಂದದಿಂದ ಹಿಗ್ಗುವನು. ಸ್ವಪಕ್ಷದವನಾಗಲಿ ಪರಪಕ್ಷದವನಾಗಲಿ ಕುರುರಾಜನಿಗೆ ವೀರನು ಪೂಜಾರ್ಹನೆ ಹೌದು; ವಂದನೀಯನೆ ಹೌದು. ಅಭಿಮನ್ಯು ಸಾಹಸಧನನೆಂದು ಕೌರವೇಶ್ವರನು ಆತನಿಗೆ ಕೈಮುಗಿಯುತ್ತಾನೆ. ಅಭಿಮನ್ಯುವಿಗಾದ ವೀರಮರಣವೇ ತನಗಾಗಲೆಂದು ಹಾರೈಸುತ್ತಾನೆ. “ನಿನ್ನನಾನಿನಿತಂ ಪ್ರಾರ್ಥಿಸುವೆನಭಿಮನ್ಯು ನಿಜ ಸಾಹಸೈಕದೇಶಾನುಮರಣಮೆಮಗಕ್ಕೆ ಗಡಾ!” “ನಿನ್ನೊರೆಗೆ ದೊರೆಗೆ ಗಂಡರುಮೊಳರೇ?” ಈ ತೆರನಾದ ಶತ್ರುಪ್ರಶಂಸೆಯಿಂದ ಸುಯೋಧನನು ತನ್ನ ಗಾಂಭೀರ್ಯಕ್ಕೆ ಹೊಳಪನ್ನು ತಂದುಕೊಂಡಿದ್ದಾನೆ. ತನ್ನ ವೀರರಸಾರ್ಣವಕ್ಕೆ ಮತ್ತೊಂದು ವೀರರಸದ ಅಮಲ ಗಂಗಾನದಿ ಸಂಗಮಿಸುವಂತೆ ಮಾಡಿರುತ್ತಾನೆ. ಇದರಿಂದ ಕೌರವನು ಬರಿಯ ದುಷ್ಟ ಸಾಹಸಿಯಲ್ಲ, ಅವಿಶ್ರಾಂತ ಪರಾಕ್ರಮಿ ಎಂದು ಚೆನ್ನಾಗಿ ಮನಗಾಣಬಹುದು. ಅವನು ವೀರರಸ ಪ್ರಧಾನನಾದ ಕಥಾನಾಯಕ. ಉಳಿದ ರಸಗಳು ಉತ್ತೇಜಕ ನಿಮಿತ್ತ; ವೀರರಸಕ್ಕೆ ಉಪಷ್ಟಂಭಕ, ‘ಗದಾಯುದ್ಧ’ದಲ್ಲಿ ವೀರರಸದ ಮಹಾವಾಹಿನಿ ತಡೆಯಿಲ್ಲದೆ ಮಹಾ ರಭಸದಿಂದ ಪ್ರವಹಿಸುತ್ತಿದೆ. ಉಳಿದ ರಸಗಳು ಉಪನದಿಗಳಂತೆ ಅದಕ್ಕೆ ಸೇರಿ ಅದನ್ನು ವರ್ಧಿಸುತ್ತಿವೆ. ಕೌರವನು ತನ್ನ ತಮ್ಮನನ್ನು ಯುದ್ಧಭೂಮಿಯಲ್ಲಿ ಕಂಡು ಬಹಳವಾಗಿ ರೋದಿಸಿದರೂ, ಶೋಕವು ವೀರಾತ್ಮಕ ಕ್ರೋಧದಲ್ಲಿ ಪರಿಸಮಾಪ್ತವಾಗುತ್ತದೆ. ಮೊದಮೊದಲು ಶೂರ ಸಹೋದರನ ಅಳಿವಿನ “ಅಳಲಂ ಸೈರಿಸಲಾರದೆ” “ದುಶ್ಯಾಸನ, ಭೀಮ ಭೀಮಗದೆಯಿಂ ಪಂಚತ್ವಮಂ ಪೊರ್ದಿದೈ.” “ಸಾಲದೆ ನಿನ್ನಯ ಕೂರ್ಮೆಗಮದೆನ್ನ ಸೌಧರ್ಮಿಕೆಗಂ” “ಮೊನೆಯೊಳ್ಸೂಳ್ತಡಮಾಯ್ತಿದೊಂದೆಡೆಯೊಳಂ ಹಾ ವತ್ಸ ದುಶ್ಯಾಸನಾ” ಎಂದು ವಿಪ್ರಳಾಪಂ ಗೆಯ್ದರೂ

ಅನುಜನ ನೆತ್ತರನೀಂಟಿದ
ನೆತ್ತರಂ ಜೀವಸಹಿತಮೀಂಟದೆ ದುರ್ಯೋ
ಧನನೆಂಬ ಪೆಸರ್ಗೆ ಮುಯ್ಯಾಂ
ಪೆನೆ ದುಶ್ಯಾಸನನ ಬನ್ನಮಂ ನೀಗುವೆನೇ?

ಎಂದು “ಪಿಂಗಾಕ್ಷಂ ಕೋಪಾರುಣೀಕೃತ ನೇತ್ರನಾಗಿ ತನ್ನ ತಮ್ಮನ ಕಳೇಬರಮಂ ನೋಡಲಾರದೆ” ಅಲ್ಲಿಂದ ತೆರಳುತ್ತಾನೆ. ಕೌರವನು ಅಂಗಾಧಿಪತಿಯಾದ ಕರ್ಣನನ್ನು ನೋಡಿ ಮಾಡಿದ ಪ್ರಲಾಪವು ಆತನ ಅಂತರಂಗವನ್ನು ವ್ಯಕ್ತಗೊಳಿಸುತ್ತದೆ. ಅವನ ಬಹಿರಂಗವು ಕಾಠಿನ್ಯ, ಅಂತರಂಗವು ಕೋಮಲ; ಬಹಿರಂಗವು ಕ್ರೂರಾತ್ಮಕವೆಂದು ತೋರಬಹುದು; ಆದರೂ ಅಂತರಂಗವು ದಯಾತ್ಮಕವಾದುದು. ಕರ್ಣನನ್ನು ನೋಡಿ ದುರ್ಯೋಧನನು ಮಾಡುವ ಪ್ರಲಾಪದಲ್ಲಿ, ಕವಿಚಕ್ರವರ್ತಿ ತನ್ನ ವೀರನು ಮಹಾನುಭಾವನೂ ಆದ ಕತಾನಾಯಕನ ಘನವಾದ ಅಂತಃಕರಣವನ್ನು ಹೊರಗೆಳೆದು ಹಿಡಿದಿದ್ದಾನೆ. ಕುರುನೃಪಾಲನ ಶೀಲದ ಕ್ರೂರ ಮತ್ತು ಕಠಿನಪಕ್ಷವು ಶತ್ರುಗಳ ಎದುರಿನಲ್ಲಿ ಹೊರಹೊಮ್ಮಿರುವುದು. ಅವನ ಶೀಲದ ಕೋಮಲ ಮತ್ತು ಸೌಮ್ಯ ಪಕ್ಷವು ಮಿತ್ರರ ಮುಂದುಗಡೆ ಮೈದೋರಿರುವುದು. ಅರಿಗಳ ಮುಂದೆ ಕುರುಕೇಸರಿ ನಿದಾಘದ ನಡುಹಗಲ ಸೂರ್ಯ. ಗೆಳೆಯರ ಎದುರು ಅವನು ಶರದೃತುವಿನ ಆಹ್ಲಾದಕರವಾದ ಹುಣ್ಣಿಮೆಯ ಹಿಮಕರ. ವಿರೋಧಿಗಳ ದೃಷ್ಟಿಗೆ ಅವನು ಅನಂತವಾಗಿ ಉರಿಬಿಸಿಲಿನಲ್ಲಿ ಪಸರಿಸಿ ಬೇಸತ್ತ ಬೆಂಗಾಡು, ಮರುಭೂಮಿ! ಅಲ್ಲಿ ನೀರಿಲ್ಲ, ಹಸುರಿಲ್ಲ, ಗಿಡವಿಲ್ಲ, ಮರವಿಲ್ಲ. ಅಲ್ಲಿ ಬಿಸಿಯುಸಿರು ಬೀಸಿ ಬಳಲಿಕೆ ತರುತ್ತದೆ; ಕ್ರೂರ ಮೃಗತೃಷ್ಣಿಕೆ ಮನಮೋಹಿಸಿ ಮೋಸಮಾಡುತ್ತದೆ. ಅಲ್ಲಿಲ್ಲ ಉಲ್ಲಾಸ; ಅಲ್ಲಿಲ್ಲ ಸಂತೋಷ; ಅಲ್ಲಿರುವುದು ಬರಿಯ ಬಿಡುವಿಲ್ಲದಾಯಾಸ. ಹಿತೈಷಿಗಳ ದೃಷ್ಟಿಗೆ ಅವನು ತಳಿತೆಸೆವ ಕುಸುಮಿತ ತರುರಾಜಿಗಳಿಂದ ರಮಣೀಯವಾಗಿ ನಳಿನಳಿಸಿ ನಲಿವ ರಮ್ಯೋಪವನ. ಅಲ್ಲಿ ನೀರಿದೆ, ಹಸುರಿದೆ, ಗಿಡವಿದೆ, ಮರವಿದೆ, ಅಲ್ಲಿ ತಂಬೆಲರು ಮೆಲ್ಲಮೆಲ್ಲನೆ ಸುಳಿದಾಡಿ ಬಳಲಿಕೆಯ ಪರಿಹರಿಸಿ ಚಿಗುರಿನಲ್ಲಡಗುತ್ತದೆ. ಅಲ್ಲೆಲ್ಲಿಯೂ ಉಲ್ಲಾಸ, ಎಲ್ಲಿಯೂ ಸಂತೋಷ; ಎಲ್ಲಿಯೂ ಉತ್ಸಾಹ; ಅರಿಗಳಿಗೆ ಅವನ ಬಳಲಿಕೆಯ ಸೆರೆಮನೆ, ಅಳಲಿನಾಗರ; ಗೆಳೆಯರಿಗೆ ಅವನು ಉಲ್ಲಾಸದರಮನೆ, ಸಂತಸದ ಸುಗ್ಗಿ.

ದಿನಕರ ತನೂಜನನ್ನು ನೋಡಿದ ಕುರುನೃಪಾಲನ ಹೃದ್ವನಧಿಯ ಬಾಡಬಾಗ್ನಿ ತತ್ಕಾಲಕ್ಕಾದರೂ ಅಡಗಿತು. ಅದಕ್ಕೆ ಬದಲಾಗಿ ಅವನ ಹೃದಯಕಮಲದ ಮಧುರ ಮಧುವು ಧಾರೆಧಾರೆಯಾಗಿ ಅವಿಚ್ಛಿನ್ನವಾಗಿ ಪ್ರವಹಿಸತೊಡಗಿತು. ಆಗ “ವೀರ ಕೌರವನು” ಮಿತ್ರ ಪ್ರೇಮದ ಮುಸುಗು ದಿಗಂತದಲ್ಲಿ ಕರಗಿ ಮಾಯವಾಗುತ್ತಾನೆ. ನಾವಾಗ ನೋಡುವುದು ರಣರಂಗದ ಕಲ್ಲೆದೆಯ ಕೌರವನನ್ನಲ್ಲ; ದಾಯಾದಿಗಳ ರಾಜ್ಯವನ್ನು ಮೋಸದಿಂದ ಅಪಹರಿಸಲೆಳೆಸಿದ ಅನ್ಯಾಯಿ ಕೌರವನನ್ನಲ್ಲ; ತನ್ನ ಸರ್ವ ಸೈನ್ಯವೂ ಹತವಾದ ಮೇಲೆ ಒಂಟಿಯಾಗಿ ಗದೆಯನ್ನು ಹೆಗಲ ಮೇಲೇರಿಸಿಕೊಂಡು ಕದನಕ್ಕೆ ಪೊರಮಟ್ಟ ಅಚಲ ಮನಸ್ಸಿನ ದುರ್ಯೋಧನನನ್ನಲ್ಲ; ವಿಜಯಲಕ್ಷ್ಮಿಯ ಮುಂದಲೆಯನ್ನು ನಿರಾಯಸವಾಗಿ ಹಿಡಿದೆಳೆದು ಬರುವೆನೆಂಬ ಉನ್ಮತ್ತ ಶೌರ್ಯದ ಕುರುನೃಪನನ್ನಲ್ಲ. “ವೀರ ಕೌರವ”ನು ಗೆಳೆಯನ ಅಳಿವೆಂಬ ಅಳಲಿನ ಹೊಳೆಯ ಜಲದ ಸೆಳವಿನಲ್ಲಿ ಸಿಕ್ಕಿ ಬಳಲಿ ಬಸವಳಿದು, ಅನಂತಸಾಗರದ ಅಗಮ್ಯತೀರದ ರಹಸ್ಯಲೋಕದಲ್ಲಡಗಿ ಅತೀತನಾಗುತ್ತಾನೆ. ಅಲ್ಲಿ ಮಹಾಭಾರತದ ಅಪ್ರತಿಮ ಶೂರ ದುರ್ಯೋಧನನು ಮನೋಗಗನದ ಮಾಯಾನೀಲದಲ್ಲಿ ಅಡಗುತ್ತಾನೆ. ಕೌರವೇಂದ್ರನಿಗೆ ಬಲಗೈಯಾಗಿ ಜಗದ್ವಿಖ್ಯಾತನಾದ ಕರ್ಣನ ಹೃದಯಾಕಾಶದ ಅನಿರ್ವಚನೀಯ ಶೂನ್ಯದಲ್ಲಿ ಐಕ್ಯವಾಗುತ್ತಾನೆ. ನಮ್ಮ ಮನಸ್ಸಿಗೆ ಗೋಚರವಾಗುವವರು ಕರ್ಣ ದುರ್ಯೋಧನರಲ್ಲ; ಅಳಿದ ಕರ್ಣನಿಗಾಗಿ ಶೋಕಿಸುವ ದುರ್ಯೋಧನನಲ್ಲ. ನಮಗೆ ತೋರುವವರು – ಅಳಿದೊಬ್ಬ ಗೆಳೆಯ; ಅವನಿಗಾಗಿ ಶೋಕಸಾಗರದಲ್ಲಿ ಮುಳುಗಿ ತೇಲುವ ಮತ್ತೊಬ್ಬ ಮಿತ್ರ. ಆ ಮಿತ್ರನ ಶೋಕದಲ್ಲಿ ನಾವೂ ಸಮಭಾಗಿಗಳಾಗುತ್ತೇವೆ. ಆಗ ಕೌರವನ ದುಷ್ಟ ಸಂಗಗಳೆಲ್ಲಾ ನಮ್ಮ ಮನದಿಂದ ದೂರವಾಗುತ್ತವೆ. ಅವನ ಶೀಲದ ಘನತೆಗೆ ಪುಟವಿಟ್ಟಂತಾಗಿ, ಅದು ಇಮ್ಮಡಿಯಾಗಿ ಥಳಿಸುತ್ತದೆ. ಅವನು ಬರಿಯ “ಪಾಳ್ನೆಲಕ್ಕೆ” ಆಸೆಪಡುವ ಅಧಮ ಲೋಭಿಯಲ್ಲವೆಂಬುದು ಪ್ರಕಾಶಕ್ಕೆ ಬರುತ್ತದೆ. ಅವನು ಮಡಿದ ಕರ್ಣನನ್ನು ಕಂಡು

ನೀನಿಲ್ಲದರಸುಗೆಯ್ವೆನೆ
ನೀನಿಲ್ಲದೆ ಬಾಳ್ವನೆ. . . . . ಬಗೆದಪ್ಪೆನೆ. . . . .

ಎಂದು ತನ್ನ ಹೃದಯದ ಔದಾರ್ಯವನ್ನೂ ಮನಸ್ಸಿನ ವಿಶಾಲತೆಯನ್ನೂ ತೋರ್ಪಡಿಸಿರುವನು. ಅವನು ಬರಿಯ ರಾಜ್ಯಾಭಿಲಾಷೆಯ ಲೋಭಿಯಾಗಿದ್ದರೆ ಧರ್ಮನಂದನನು ಭೀಮ ದರ್ಯೋಧನರ ಕಾಳಗಕ್ಕೆ ಮುಂಚೆ

ಆಗದು ಸಮರಂ, ಗುಣಯುತ
ನಾಗು, ಮಹಾಭೋಗ ಭಾಗಿ, ನಿನ್ನಾಳ್ವ ಮಹೀ
ಭಾಗಮುಮಂ ಸಕಲ ಮಹೀ
ಭಾಗಮುಮಂ ನೀನೆ ಕೂಂಡು ಸುಖಮಿರಲಾಗಾ?

ಎಂದು ಮೊದಲಾಗಿ ಮಾಡಿದ ವಿಡಂಬನಾತ್ಮಕವಾಗಬಹುದಾದ ‘ನೀರಸ’ವಾದ ಧರ್ಮಭೋಧನೆಗೆ ಒಡಂಬಡದೆ ಇರುತ್ತಿದ್ದನೆ? ಕವಿಚಕ್ರವರ್ತಿಯ ದುರ್ಯೋಧನನು ದೀನಮನಸ್ಕನಲ್ಲ; ಮಹಾಪರಾಕ್ರಮಿ. ಅವನು ಬರಿಯ ಅದೃಷ್ಟಗೇಡಿಯಲ್ಲ; ಅದೃಷ್ಟದೇವತೆಯ ಮುಂಗುರುಳೋಳಿಯನ್ನು ಹಿಡಿದು ನೆಲಕ್ಕೆ ಅಪ್ಪಳಿಸಲೆಳೆಸಿದ ಉನ್ಮತ್ತ ಸಾಹಸಿ. ಅವನ ವಿನಾಶಕ್ಕೆ ಕಾರಣ ಅಬಲತೆ ಹೇಡಿತನಗಳಲ್ಲ, ಅತಿ ಧೈರ್ಯ, ಅತಿ ಔದ್ಧತ್ಯ. ಕೌರವನು ಗಾಂಗೇಯರೊಡನೆ ಪಾಂಡವರ ಕೂಡೆ ಸಂಧಿಗೊಡಂಬಡದೆ “ಚಲಮಂ ಗಂಡುಮನಪ್ಪುಕೆಯ್ವೆನಗಮಾ ಕಾಂತೇಯರೊಳ್ ಸಂಧಿಯೇ?” “ನೆಲಕಿರಿಮೆನೆಂದು ಬಗೆದಿರೆ ಚಲಕಿರಿವೆಂ ಪಾಂಡುಸುತರೊಳೀ ನೆಲನಿದು ಪಾಳ್ನೆಲನೆನಗೆ ದಿನಪಸುತನಂ ಕೊಲಿಸಿದ ನೆಲನೊಡನೆ ಮತ್ತೆ ಪುದುವಾಳ್ದಪೆನೆ?” ಎಂದು ಮೊದಲಾಗಿ ನುಡಿದ ಛಲಾತ್ಮಕವಾದ ವೀರವಾಕ್ಯಗಳು, ಆತನು ಸ್ವಾರ್ಥವನ್ನೇ ಬಯಸುವ ಹೀನಲೋಭಿಯಲ್ಲವೆಂಬುದನ್ನು ಚೆನ್ನಾಗಿ ಮನಗಾಣಿಸುತ್ತವೆ. ಕುರುಚಕ್ರವರ್ತಿಯ ಭೀಕರ ಸಾಹಸ ಅವನ ಭಾಗಕ್ಕೆ ಒಂದು ಮಹಾ ಕಾಳಲೀಲೆ. ಜಯಾಪಜಯಗಳು ಅವನಿಗೆ ಆಕಸ್ಮಿಕವಾದ ಸಂಗತಿಗಳು. ಆತನು ಪ್ರಯೋಜನಪ್ರಿಯನಲ್ಲ; ಲಾಭಪ್ರಿಯನೂ ಅಲ್ಲ; ಬರಿಯ ಸಾಹಸ ಪ್ರಿಯನು. ಜಯಾಪಜಯ ಸಾಹಸಪ್ರಿಯನಿಗೆ ಅಪೇಕ್ಷಣೀಯವಲ್ಲ, ಉಪೇಕ್ಷಣೀಯ. ಈ ಅಭಿಪ್ರಾಯವನ್ನು ಅವನೇ ಭೀಷ್ಮರೆದುರು

ಈಯೆರಡನೆನ್ನ ನಿಡುದೋ
ಳಾಯತ್ತಂ ವೀರವೃತ್ತಿ ಜಯಮೆಂಬುದು ದೈ
ವಾಯತ್ತಮಜ್ಜ ಭರತಾ
ನ್ವಾಯಕ್ಕೆ ಕಲಂಕಮಾಗದಂತಿರೆ ನೆಗಳ್ವೆಂ

ಎಂದು ಸೂಚಿಸಿರುವನು. ಅವನಿಗಾಗಬಹುದಾದ ಜಯಕ್ಕಿಂತಲೂ ಅವನಿಗಾದ ಅಪಜಯವೆ ಆತನ ಸಾಹಸಕ್ಕೆ ನೂತನ ಕಾಂತಿದಾಯಕವಾಗಿದೆ. ಮರಣವು ಕೌರವನಂಥಾ ಮಹಾವೀರನಿಗೆ ಆಭರಣಪ್ರಾಯವಾದುದು. ಅದು ಅವನ ಶೀಲದ ಘನತೆ ಗಾಂಭೀರ್ಯಗಳಿಗೆ ಪವಿತ್ರತೆಯನ್ನು ದಯಪಾಲಿಸಿ ಉಜ್ವಲವಾಗುವಂತೆ ಮಾಡುವುದು. ರಹಸ್ಯವಾದ ಅತೀತ ಸಾಮ್ರಾಜ್ಯಕ್ಕೆ ಪ್ರಯಾಣ ಮಾಡಿದವರನ್ನು ಲೋಕವು ಕಠಿನವಾದ ನ್ಯಾಯದೃಷ್ಟಿಯಿಂದ ಪರೀಕ್ಷೆಮಾಡಿ ಖಂಡಿಸದೆ, ಸಹಾನುಭೂತಿಯಿಂದ ಅವರ ತಪ್ಪುಗಳನ್ನು ಕ್ಷಮಿಸಿ, ಅವರ ಸುಗುಣಗಳನ್ನು ಪ್ರಶಂಸೆ ಮಾಡುವುದು. ಕೌರವನ ದುಃಶೀಲಕ್ಕೆ ಮರಣರಂಗವೆ ಕಾಶಿ; ಮರಣವೆ ಪಾಪವಿನಾಶಕವಾದ ಪರಮ ಪವಿತ್ರವಾದ ಅಮಲ ಗಂಗಾಜಲ. ಬಂಧುಗಳನ್ನೂ ಮಿತ್ರರನ್ನೂ ಗುರುಗಳನ್ನೂ ಸಕಲ ಸೈನ್ಯವನ್ನೂ ಕಳೆದುಕೊಂಡ ದುರ್ಯೋಧನನಿಗೆ ಮರಣವೇ ದಿವ್ಯಮಾರ್ಗ; ಅದೇ ಪರಮ ಶುಭ. ಯಾವುದೋ ಒಂದು ಅದೃಷ್ಟ ಪ್ರವಾಹವು ಕೌರವನನ್ನು ಮರಣಾಂಬುಧಿಗೆ ನಿರ್ದಾಕ್ಷಿಣ್ಯವಾಗಿ ಕೊಚ್ಚಿಕೊಂಡು ಹೋಗುವುದನ್ನು ನಾವು ಮೊದಲಿನಿಂದಲೂ ತಿಳಿಯಬಹುದು. ಅಥವಾ ಊಹಿಸಬಹುದು. ಮರಣವೇ ಸುಯೋಧನನಿಗಾಗಬೇಕಾದ ಅನಿವಾರ್ಯ ಗತಿ. ಮೃತ್ಯುಗತನಾಗದ ದುರ್ಯೋಧನನು ನಮಗೆ ಪ್ರಿಯವಾಗುತ್ತಿದ್ದನೋ ಇಲ್ಲವೋ ಸಂದೇಹಕರ. ಮಹಾನುಭಾವರ ಮರಣವು ಒಂದು ಸಾಮನ್ಯ ಘಟನೆಯಲ್ಲ. ‘ದೇಶದ ಹಾಹಾಕಾರವಿಲ್ಲದೆ ದೊರೆ ನೆಲಕುರುಳನು’ ಎಂದು ಷೇಕ್ಷ್‌ಪಿಯರ್ ಕವಿ ಬರೆದಿರುವನು. ನೊಣದ ಸಾವಿಗೆ ಮರುಗುವವರಾರು? ಗಜದ ಅಳಿವಿಗೆ ಗೋಳಾಡದವರಾರು? ವೀರರಸವು ತನ್ನ ಆಧಿಕ್ಯದಿಂದಲೆ ಆರಿಹೋಗುವುದನ್ನು ನೋಡಿ ವ್ಯಸನದಿಂದ ತಲ್ಲಣಿಸದ ಹೃದಯವಿರುವುದೆ? ವೀರ ಕೌರವನ ಮರಣಕ್ಕಾಗಿ ಶೋಕಿಸದವನು ಹೀನಮನಸ್ಕನೆಂದೆ ಹೇಳಬೇಕು. ‘ಮಾನವರು ನಾವು; ಮಹತ್ತಾದುದು ಯಾವುದೆ ಆಗಲಿ ಎಳ್ಳನಿತಾದರೂ ಲೋಕದಿಂದ ತೊಲಗಿದರೆ ಅದು ನಮ್ಮನ್ನು ತಳಮಳಿಸಲೆಬೇಕು’ ಎಂದಿದ್ದಾನೆ ವರ್ಡ್ಸ್‌‌ವರ್ತ್. ಕೌರವನು ಸಾಮಾನ್ಯನಲ್ಲ; ಸಾಮಾನ್ಯರಿಗೆ ಆತನ ವೀರ ದೃಢಸಂಕಲ್ಪ ಎಲ್ಲಿಂದ ಬಂದೀತು? ಆತನ ಘನತೆ ಗಾಂಭೀರ್ಯಗಳು ಅಪೂರ್ವವಾದುವು. ಆದುದರಿಂದಲೆ ಕವಿಚಕ್ರವರ್ತಿ ಅವನನ್ನು “ಮಹಾನುಭಾವ” ಎಂಬ ಯೋಗ್ಯವಿಶೇಷಣದಿಂದ ಒಪ್ಪುವಂತೆ ಅಲಂಕರಿಸಿದ್ದಾನೆ. ಗೀತೆಯಲ್ಲಿ ಶ್ರೀಕೃಷ್ಣಪರಮಾತ್ಮನು

ಯದ್ಯದ್ವಿಭೂತಿಮತ್ಸತ್ತ್ವಂ ಶ್ರೀಮದೂರ್ಜಿತಮೇವ ವಾ
ತತ್ತದೇವಾಗಚ್ಛ ತ್ವಂ ಮಮ ತೇಜೋಂಶ ಸಂಭವಂ

“ಯಾವ ಯಾವ ವಸ್ತು ವಿಶೇಷಗಳು ಸಾಮರ್ಥ್ಯವೂ ಅತಿಶಯವೂ ಜ್ಞಾನವೂ ಧೈರ್ಯವೂ ಸಂಪತ್ತೂ ಉಳ್ಳವುಗಳೋ ಆಯಾ ವಸ್ತು ವಿಶೇಷಗಳು ನನ್ನ ತೇಜಸ್ಸಿನ ಅಂಶದಿಂದ ಹುಟ್ಟಿದುವೆಂದು ತಿಳಿ.” ಎಂಬುದಾಗಿ ಪಾರ್ಥನಿಗೆ ಬೋಧಿಸಿದ್ದಾನೆ. ಅದರಂತೆಯೆ ಕೌರವನಲ್ಲಿ ಕಂಡುಬರುವ ಅಪ್ರತಿಮ ವೀರತ್ವವೂ ಅತಿಶಯವಾದ ಅವಿಶ್ರಾಂತ ಪರಾಕ್ರಮವೂ ದೇವಾಂಶಸಂಭೂತಗಳಾಗಿಯೆ ಇವೆ. ಶ್ರೀರಾಮಕೃಷ್ಣ ಪರಮಹಂಸರಂತೆ ‘ಪಾಪ’ ‘ಪುಣ್ಯ’ ಎಂಬ ಶಬ್ದಗಳಿಗೆ ಬದಲಾಗಿ “ಅಶಕ್ತಿ” “ಶಕ್ತಿ” ಎಂಬ ಪದಗಳನ್ನು ಉಪಯೋಗಿಸುವುದಾದರೆ ಕೌರವನು ‘ಪಾಪಿ’ಯಾಗದೆ ‘ಶಕ್ತರ’ ಗುಂಪಿಗೆ ಸೇರಿಬಿಡುತ್ತಾನೆ. ಅವನು ಅತಿಬಲನು, ಅಂಥಾ ವೀರನ ಮರಣವು ರಸಭರಿತವಾಗಿ ತೇಜೋಮಯವಾದುದಾದರೂ ದುಃಖಕರವಾದುದು. ಮರಣದಲ್ಲಿ ದುರ್ಯೋಧನನು ನಿಶೆಯ ಗಗನದ ಧೂಮಕೇತುವಿನಂತೆ ಥಳಥಳಿಸುವನು. ಅಲ್ಲಿ ಅವನ ಗಾಂಭೀರ್ಯವು ತನ್ನ ಪರಮಾವಧಿಯನ್ನು ಮುಟ್ಟುವುದು. ಹಾಗಾದರೆ ಇನ್ನು ಕೌರವೇಂದ್ರನ ಅಂತಿಮ ಕಾಲದ ವೈಭವದ ಬೆಡಗನ್ನು ವಿಸ್ಮಯಾನ್ವಿತರಾಗಿ ದೃಷ್ಟಿಸಲು ತೆರಳೋಣ.

‘ಗದಾಯುದ್ಧ’ವು ಚಂಪೂ ಕಾವ್ಯವಾದರೂ ಅದೊಂದು ಮಹಾದುಃಖಾಂತ ನಾಟಕ. ಅದರ ಕೊನೆಯ ಅಂಕದ ಕೊನೆಯ ದೃಶ್ಯವೆ ಕೌರವನ ಮಹಿಮಾಮಯವಾದ ಮರಣ. ಕವಿಕುಲ ಶೀರೋಮಣಿ ನಮ್ಮನ್ನು ಕಾಲದೇಶಾತೀತರನ್ನಾಗಿ ಮಾಡಿ, ಕಲ್ಪನಾ ರಾಜ್ಯದ ಸ್ವಪ್ನಮಾರ್ಗದಿಂದ ವೈಶಂಪಾಯನ ಸರೋವರದ ತೀರದೆಡೆಗೆ ತೇಲಿಸಿಕೊಂಡು ಹೋಗಿ ನಿಲ್ಲಿಸುತ್ತಾನೆ. ಕಣ್ದೆರೆದು ನೋಡಿದರೆ ಶತಮಾನಗಳ ಹಿಂದಿನ ನೀಲಗಗನ; ಶತಮಾನಗಳ ಹಿಂದಿನ ಪವಿತ್ರತಮ ರಮಣೀಯ ವಾತಾವರಣ; ವನಾವೃತವಾದ ಬಂಧುರ ವೈಶಂಪಾಯನ ಕಮಲಾಕರ; ಪಶ್ಚಿಮ ಗಗನಾಂಗಣದಲ್ಲಿ ಮುಳುಗುವ ರವಿ ವ್ಯಸನಸೂಚಕವಾದರೂ ಅತಿ ಪ್ರಕಾಶವಾದ ಸಂಜೆಗೆಂಪನ್ನು ಬೀರುತ್ತಿದ್ದಾನೆ. ದ್ವಾಪರಯುಗದ ಶಾಂತಯುಕ್ತವಾದ ಸಂಧ್ಯಾಕಾಲ; ಸಾಮಾನ್ಯವಾಗಿ ಸಾಯಂಕಾಲ ಮೌನವ್ರತಚಾರಿಯಾದರೂ ಇಂದು ವೈಶಂಪಾಯನ ಕೊಳದ ತೀರದಲ್ಲಿ ಎಂದೂ ಎಲ್ಲೆಲ್ಲಿಯೂ ಇರದ ಅತಿಶಯ ನೀರವತೆ. ಮಸಣಮೌನವೆಂದರೂ ಎನ್ನಬಹುದು. ಇದೇನು ಕೊಳದ ನೀರು ಬಗ್ಗಡವಾಗಿದೆ? ಪ್ರತಿ ದಿನವೂ ಸರಸ್ಸಿನಲ್ಲಿ ಕಲಕಲರವವನ್ನುಂಟುಮಾಡುತ್ತಿದ್ದ ಜಲಪಕ್ಷಿಗಳು ಒಂದಾದರೂ ಕಾಣುವುದಿಲ್ಲ; ಒಂದರ ಕೊರಲ ದನಿಯಾದರೂ ಕೇಳಿಬರುವುದಿಲ್ಲ. ಎಲ್ಲೆಲ್ಲಿಯೂ ಗಭೀರ ನಿಶ್ಯಬ್ದತೆ! ಇದೇನು ಸರಸ್ತಟದ ಕೋಮಲವಾದ ಗಿಡಬಳ್ಳಿಗಳು ಮುರಿದುಬಿದ್ದಿವೆ? ಕಾಡುಕೋಣಗಳ ಹೋರಾಟವೆನ್ನಲಾಗುವುದಿಲ್ಲ; ಏಕೆಂದರೆ ಗೊರಸಿನ ಗುರುತಿಲ್ಲ. ತೀರದ ಹಸುರಿನ ಹಾಸಗೆ ಯಾವುದೋ ಘಾತದಿಂದ ಬಾಡಿ ಸೊರಗಿದಂತಿದೆ. ನೋಟಕನು ಉತ್ತರ ಕ್ಷಣದಲ್ಲಿಯೆ ಮನುಷ್ಯರ ಪಾದಗಳ ಗುರುತನ್ನೂ, ಹಸುರಿಗೆ ಅರುನತೆಯನ್ನು ಕೊಡುವ ಶೋಣಿತವನ್ನೂ ಕಂಡು ಚಮಕಿತನಾಗುವನು. ಇದಾವನು? ತೀರದ ಒಂದು ಕಡೆಯಲ್ಲಿ ಊರುಭಂಗ ಕಿರೀಟಭಂಗಿತನಾಗಿ ಬಿದ್ದು ಕಡೆಯುಸಿರೆಳೆಯುತ್ತಿರುವನು? ಅವನೇ ಕೌರವ ಮಹಾನುಭಾವ; ಅವನೇ ಕುರುಕುಲ ಚಕ್ರವರ್ತಿ! ಕವಿಪುಂಗವ ಆರ್ಯ ರನ್ನನು ನಮ್ಮನ್ನು ಸ್ವಲ್ಪ ಮುಂಚಿತವಾಗಿಯೆ ಅಲ್ಲಿಗೆ ಕೊಂಡೊಯ್ದಿದ್ದರೆ ಕುರುನೃಪಾಲನ ಈ ದುರ್ಗತಿ ನಮಗೆ ವಿಸ್ಮಯಕಾರಿಯಾಗುತ್ತಿರಲೆ ಇಲ್ಲ.

ಎಲೈ ಭೀಮನೇ, ಜಲರುಹನಾಭನು ತೊಡೆಯನ್ನು ಹೊಯ್ದು ಸೂಚಿಸದಿದ್ದರೆ ನಿನಗಾವ ಗತಿಯಾಗುತ್ತಿತ್ತು? ನೀನು ಮೂರ್ಛೆಹೋದಾಗ ವೀರ ಕೌರವನ ಘನ ಹೃದಯವು ಕ್ಷತ್ರಿಯ ಧರ್ಮಕ್ಕೋಸುಗ ನಿನ್ನನ್ನು ಕಾಪಾಡದಿದ್ದರೆ ನಿನ್ನ ಪಾಡೇನಾಗುತ್ತಿತ್ತು? ನೀನು ಮಾತ್ರ ಕೆಳಗೆ ಬಿದ್ದವನ ಕಿರೀಟವನ್ನು ಕಾಲಿನಿಂದೊದೆಯಬಹುದೆ? ಜಯ ವೀರ ಕೌರವ; ಛಿಃ ಭೀಮಸೇನ! ಕೌರವನ ಮಕುಟಭಂಗ ಮಾಡಿದ ನಿನ್ನ ಪಾದಘಾತದಿಂದ ನಿನ್ನ ಯಶೋಲಕ್ಷ್ಮಿಯನ್ನು ನೀನೇ ಒದ್ದಂತಾಯಿತು: ದುರ್ಯೋಧನನ ಕಿರೀಟದ ಮಣಿಗಣವು ಚೆದರಿ ನೆಲಕ್ಕುರುಳಿದಾಗಲೆ ನಿನ್ನ ಕೀರ್ತಿ ಕಲಶವೂ ಪುಡಿಪುಡಿಯಾಯಿತು! ಕೌರವನು ಹೇಗಾದರು ಸ್ವಯಂಪ್ರಕಾಶನು; ನೀನು ಅಲ್ಪವಾದರೂ ಪರತಃ ಪ್ರಕಾಶನು. ಸುಯೋಧನನನ್ನು ಸಂಹರಿಸಿದ ಮಾತ್ರದಿಂದ ಅವನಿಗಿಂತ ನೀನೇನು ಅತಿಶಯನಲ್ಲ. ಬಡ ಬೇಡನೊಬ್ಬನು ಕೃಷ್ಣನನ್ನು ಸಂಹರಿಸನೇ?

ಎಲೈ ರಾಜ್ಯಲಕ್ಷ್ಮಿಯೇ, ನೀನು ಕೌರವನನ್ನು ತ್ಯಜಿಸಿದ ಮಾತ್ರಕ್ಕೆ ಅವನ ಚಕ್ರವರ್ತಿತ್ವಕ್ಕೆ ಕುಂದಾಗಲಿಲ್ಲ; ಅವನು ವೀರರ ಚಕ್ರವರ್ತಿ. ಹೇಡಿಗಳ ಜಯಕ್ಕಿಂತಲೂ ವೀರರ ಸೋಲೇ ಶ್ರೇಷ್ಠವಾದುದಲ್ಲವೆ? ನೀನು ಗುಣಲೋಲಳಲ್ಲ; ಘನಶೀಲಪ್ರಿಯಳಲ್ಲ. ಬರಿಯ ‘ನೀರಸ’ ಜಯಪ್ರಿಯಳು; ನೀನು ಸ್ವಾಭಾವಿಕವಾಗಿಯೆ ಚಂಚಲಳು. ನೀನು ತೊಲಗಿದರೆ ಕೌರವನ ಗೌರವಕ್ಕೆ ಕುಂದೇನೂ ಇಲ್ಲ.

ಕೌರವನು ಏಕಾಂಗ ಶೂರನು; ಅಂಥಾ ವೀರನಿಗೆ ಏಕಾಂಗಿಯಾಗಿ ಸಾಯುವುದೇ ಕೀರ್ತಿಕರ. ಮಹಾನುಭಾವನಾದ ಕೌರವನ ಅಳಿವನ್ನು ಸಂಧ್ಯಾಕಾಲಕ್ಕೆ ಹಾಕಿರುವುದರಲ್ಲಿ ರನ್ನನ ಕವಿತಾ ಪ್ರತಿಭೆ ಚೆನ್ನಾಗಿ ಮೈದೋರಿರುವುದು. ದಿವಸದವಸಾನ ಕಾಲವು ಎಷ್ಟು ಜ್ಯೋತಿರ್ಮಯವಾದುದೋ ಕೌರವನ ಅವಸಾನವು ಅಷ್ಟೇ ದೇದೀಪ್ಯಮಾನವಾದುದೆಂದು ಕವಿ ಸೂಚಿಸಿರುವನು:

ಪಂಕಷಮುಂ ಸಹೃದ್ವದನ ಪಂಕಜಮುಂ ಮುಗಿವನ್ನಮುಗ್ರತೇ
ಜಂ ಕಿಡುತಿರ್ಪಿನಂ ನಿಜ ಕರಂಗಳನಂದುಡುಗುತ್ತುಮಿರ್ದು
ಕ್ರಾಂಕಮಗಲ್ವಿನಂ ಕ್ರಮದಿನಂಬರಮಂ ಬಿಸುಟುರ್ಬಿನಂದಕಾ
ರಂ ಕವಿತರ್ಪಿನಂ ಕುರುಕುಲಾರ್ಕ್ನುಮರ್ಕನುಮಸ್ತ ಮೆಯ್ದಿದರ್!

ದಿನಾಂತಕಾಲದ ಅರ್ಕನ ವೈಭವವೂ ಕುರುಕುಲಾರ್ಕನ ಅಂತ್ಯದ ಸಂಪತ್ತೂ ಎರಡೂ ಒಂದನ್ನೊಂದು ಮೂದಲಿಸುತ್ತಿದ್ದುವೆ? ಅಥವಾ ಒಂದರೊಡನೊಂದು ಸಹಾನುಭೂತಿ ಪ್ರದರ್ಶನಗೈಯುತ್ತಿದ್ದುವು ಎನ್ನಬಾರದೇಕೆ? ಅಂತೂ ಸರ್ವರಿಂದಲೂ ಬಿಡಲ್ಪಟ್ಟ ಕೌರವೇಶ್ವರನಿಗೆ ಪ್ರಕೃತಿ ಮಾತೆಯಾದರೂ ತನ್ನ ಪವಿತ್ರವಾದ ಕಾಣಿಕೆಯನ್ನು ಅರ್ಪಿಸಿದಳು. ಮಹಾ ವಸ್ತುವೊಂದರ ವಿನಾಶವನ್ನು ಕಂಡು ಆಕೆಯಾದರೂ ಉದ್ವೇಗಭರಿತಳಾಗಿ, ತನ್ನ ಶೋಕವನ್ನು ಸೂಚಿಸಿ, ಕೌರವನು ನಿಜವಾಗಿಯೂ ಮಹಾನುಭಾವನೆಂಬುದನ್ನೂ ಸ್ಥಿರಪಡಿಸಿದಳು. ದಿನೇಶನಂತ್ಯವು ಎಷ್ಟು ಮಹಿಮಾಸ್ಪದವಾದುದೋ, ಎಷ್ಟು ವೈಭವಯುಕ್ತವಾದುದೋ, ಎಷ್ಟು ಶೋಕಭರಿತವಾದುದೋ, ಕುರುರಾಜನ ಅಂತ್ಯವೂ ಅಷ್ಟೇ ಮಹಿಮೆ ವೈಭವ ಶೋಕಭರಿತವಾದುದೆಂದು ಪ್ರಕೃತಿದೇವಿ ತೋರಿಸಿದಳು. ತನ್ನ ಯುಗದ ಒಂದು ಮಹಾ ದಿವಸಾವಸಾನ ಕಾಲದಲ್ಲಿ, ಒಬ್ಬ ಮಹಾಪುರಷನ ಅವಸಾನವೂ ಸಂಭವಿಸಿತಲ್ಲಾ ಎಂದು ಯುಗಪುರುಷನಾದ ದ್ವಾಪರನೂ ಖಿನ್ನವದನನಾದನು!

(೧೯೨೮)


* ೧೯೨೮ರಲ್ಲಿ ಮಹಾರಾಜಾ ಕಾಲೇಜಿನ ಸಂಘ ಪ್ರಕಟಿಸಿದ ‘ರನ್ನಕವಿ ಪ್ರಶಸ್ತಿ’ಗೆ ಬರೆದ ಲೇಖನ.

# ಈ ವಿಮರ್ಶೆ ರನ್ನನ ‘ಗದಾಯುದ್ಧ’ಕ್ಕೆ ಮಾತ್ರ ಸೀಮಿತವಾಗುತ್ತದೆ.

* Paradise Lost, Book I, Lines 249–255.