ಶ್ರವ್ಯಕಾವ್ಯಗಳ ಮಾತಾಯಿತು. ಇನ್ನು ದೃಶ್ಯಕಾವ್ಯಗಳನ್ನು ನೀತಿದೃಷ್ಟಿಯಿಂದ ಪರಿಶೀಲಿಸೋಣ. ರಾಷ್ಟ್ರದ ನೀತಿ ದೃಶ್ಯಕಾವ್ಯಗಳ ಉನ್ನತಿ ಅವನತಿಗಳೊಡನೆ ಅರೋಹಣ ಅವರೋಹಣವಾಗುವುದು ಎಂದೆಲ್ಲರ ನಂಬುಗೆ. ಅಂದರೆ ದೃಶ್ಯಕಾವ್ಯಗಳಲ್ಲಿ ಉತ್ತಮಕವಿತೆಯ ಭಾವಭಾವಗಳನ್ನು ಧರ್ಮಾಧರ್ಮಗಳು ಅನುಸರಿಸುತ್ತವೆ. ನಾಟಕಗಳಲ್ಲಿ ಉತ್ತಮಕವಿತೆಯಿದ್ದರೆ ನೀತಿಯೂ ಮುಂಬರಿಯುತ್ತದೆ; ಇಲ್ಲದಿದ್ದರೆ ನೀತಿ ಕುಂದುತ್ತದೆ. ಇದರ ಸತ್ಯಾಸತ್ಯವನ್ನು,  ಕಾರ್ಯಕಾರಣಭಾವವನ್ನು, ಸಾಹಿತ್ಯಚರಿತ್ರಕಾರರೆ ಕಂಡುಹಿಡಿದು ನಿರ್ಣಯಿಸಬೇಕು.

ಎಲ್ಲೆಲ್ಲಿ ದೃಶ್ಯಕಾವ್ಯಗಳು ಅತ್ಯುತ್ತಮ ಸ್ಥಿತಿಗೆ ಏರಿದ್ದುವೊ ಅಲ್ಲೆಲ್ಲ ನೀತಿಯೂ ಅತ್ಯುತ್ತಮ ಸ್ಥಿಯಲ್ಲಿದ್ದುದು ತಿಳಿದುಬರುತ್ತದೆ. ಉದಾಹರಣೆಗೆ ಅಥೆನ್ಸ್ ನಗರವೆ ಸಾಕು. ಅಥೆನ್ಸಿನ ಕವಿಗಳ ರುದ್ರನಾಟಕಗಳೆಂದರೆ ಕನ್ನಡಿಗಳು. ಅವುಗಳಲ್ಲಿ ಸಹೃದಯನು ಕಾಲ ದೇಶ ಸನ್ನಿವೇಶಗಳೆಂಬ ಉಪಾಧಿಗಳಿಂದ ಬದ್ಧವಾಗಿ, ಬಹು ಸೂಕ್ಷ್ಮ ಯವನಿಕೆಗಳಿಂದ ಅವೃತವಾಗಿ ಅದರ್ಶಪ್ರಾಯವಾಗಿರುವ ತನ್ನ ಆತ್ಮವನ್ನೆ ಸಂದರ್ಶಿಸುತ್ತಾನೆ. ಆತನಿಗೆ ಪ್ರಿಯವಾಗಿ ಆದರ್ಶೀಭೂತವಾಗಿರುವ ಅಂತರಿಕಭಾವಗಳೆ ಅಲ್ಲಿ ಮೂರ್ತಿವತ್ತಾಗಿ ನಲಿದಾಡುತ್ತದೆ. ಸುಖದುಃಖಗಳಲ್ಲಿ ಸಹಾನುಭೂತವಾಗಿರುಅವ ಆತನ ಹೃದಯ ವಿಶಾಲವಾಗುತ್ತದೆ. ಕರುಣೆ, ಸದಾಗ್ರಹ, ಭಯ , ದುಃಖ ಮೊದಲಾದ ರಸಭಾವಗಳಿಂದ ಆತನ ರಾಗಸಂಸ್ಕಾರ ಮೇಲ್ಮೆಯನ್ನೈದುತ್ತದೆ. ಅಲ್ಲದೆ ಆ ರಸಾನುಭವಗಳಿಗೆ ದೊರಕುವ ಸಂಪೂರ್ಣ ವ್ಯಾಯಾಮದಿಂದ ಆತ್ಮಕ್ಕೊಂದು ದಿವ್ಯಶಾಂತಿಯುಂಟಾಗುತ್ತದೆ. ಪಾಪವೂ ಕೂಡ ತನ್ನ ಕರಾಳತೆಯನ್ನು ಬಿಸುಟು ನಿಲ್ಲುತ್ತದೆ. ಅದು ವಿಧಿವಶದಿಂದ ಅಥವಾ ದುರ್ಜೆಯವಾದ ಪ್ರಕೃತಿನಿಯಮಗಳಿಂದ ಅನಿವಾರ್ಯವಾಗಿ ಸಂಭವಿಸುವುದೆಂದೂ ಸ್ವತಂತ್ರ ಚಿತ್ತದ ಸ್ವಚ್ಛಂದವೃತ್ತಿಯಲ್ಲವೆಂದೂ ಗೊತ್ತಾಗುತ್ತದೆ. ಉತ್ತಮ ವರ್ಗಕ್ಕೆ ಸೇರಿದ ನಾಟಕದಲ್ಲಿ ದ್ವೇಷಮಾತ್ಸರ್ಯಗಳಿಗೆ ಎಡೆಯಿಲ್ಲ. ಅದು ಆತ್ಮಗೌರವವನ್ನೂ ಆತ್ಮಜ್ಞಾನವನ್ನೂ ಬೋಧಿಸುತ್ತದೆ. ನಯನವಾಗಲಿ ಮನಸ್ಸಾಗಲಿ ಕನ್ನಡಿಯ ನೆರೆವಿಲ್ಲದೆ ತಮ್ಮನ್ನು ತಾವು ನೋಡಲರಿಯವು. ನಾಟಕವು ದರ್ಪಣದಂತೆ ತನ್ನನ್ನು ತನಗೆ ತೋರಿಸಿಕೊಡುತ್ತದೆ. ನಿಜವಾದ ಶಾಶ್ವತವಾದ ಕವಿತೆಯನ್ನೊಳಗೊಂಡ ದೃಶ್ಯಕಾವ್ಯವು ಭೂತಕನ್ನಡಿಯು ಚದರಿ ದುರ್ಬಲವಾಗಿರುವ ಸೂರ್ಯರಶ್ಮಿಗಳನ್ನು ಕೇಂದ್ರೀಕರಿಸಿ ಶಕ್ತಿಯುಕ್ತವನ್ನಾಗಿ ಮಾಡುವಂತೆ ಮಾನವ ಸ್ವಭಾವದ ಕಿರಣಗಳನ್ನೆಲ್ಲ ಸಾಂದ್ರಗೈದು ಅವುಗಳ ಅಂತಃಶಕ್ತಿಯನ್ನು ವ್ಯಕ್ತಗೊಳಿಸುತ್ತದೆ. ಅಲ್ಲದೆ ಬಹುಮುಖ ಭೂತದರ್ಪಣದಂತೆ ತಾನು ಸಂಗ್ರಹಿಸಿದ ಮರೀಚಿಗಳನ್ನು ಚಿತ್ರವಿತ್ರವಾಗಿ ನೆಯ್ದು, ತರತರವಾದ ಬಣ್ಣಗಳನ್ನು ಹೊಯ್ದು, ಸಾಧಾರಣವಾದುದನ್ನು ಮನೋಹರ ವಾದುದನ್ನಾಗಿ ಮಾಡಿ, ಬಿಂಬವು ಬಿದ್ದ ಕಡೆಯಲ್ಲೆಲ್ಲ ಪ್ರತಿಬಿಂಬವು ಫಲಿಸುವಂತೆ ಎಸಗುತ್ತದೆ.

ಆದರೆ ಸಾಮಾಜಿಕ ಜೀವನವು ಹೀನಸ್ಥಿಗಿಳಿದಾಗ ನಾಟಕವೂ ಅದರ ಹೀನತೆಯಲ್ಲಿ ಸಹಾನುಭೂತಿ ತೋರಿಸಲು ಪ್ರಾರಂಭಿಸಿ ದುರ್ಗತಿಗಿಳಿಯುತ್ತದೆ. ಆಗ ರುದ್ರನಾಟಕಗಳು ಇತರ ಸದೃಶಕವಿಗಳ ಸಂಗಗುಣವಿಲ್ಲದೆ ಪುರಾತನ ಮಹಾ ರುದ್ರಕಾವ್ಯಗಳ ಅಂಧ ಶುಷ್ಕಾನುಕರಾಣ ಮಾತ್ರಗಳಾಗಿ ಪರಿಣಯಿಸುತ್ತವೆ. ಅನೇಕ ಸಾರಿ ತಪ್ಪು ತಿಳಿವಳಿಕೆಯಿಂದ ಕಾವ್ಯಕಲೆಯಲ್ಲಿಯೆ ಒಪ್ಪಗೆಟ್ಟು ಹೋಗಿ, ತತ್ಕಾಲಗತವಾದ ನೀತಿಗಳನ್ನೂ ಸಮಯಗಳನ್ನೂ ಉಪದೇಶಿಸಲು ಅವುಗಳನ್ನು ದುರುಪಯೋಗಿಸುತ್ತಾರೆ. ಪಾವನವಾದ ಕವಿತೆಯನ್ನು ಎಂದೆಂದಿಗೂ ಅಂತಹ ವ್ಯಭಿಚಾರಕ್ಕೆ ತಳ್ಳಬಾರದು. ಕವಿತೆ ತನ್ನನ್ನು ಒಳಗೊಂಡ ಒರೆಯನ್ನೆ ಸುಟ್ಟುರಿಸಿಬಿಟ್ಟು ಒರೆಯಿಲಿಯಾಗಿರುವ ಮಿಂಚುಗತ್ತಿಯಂತೆ. ಅದ್ದರಿಂದ ಪ್ರತಿಭೆಯೂ ಸರ್ವಕಾಲದೇಶ ಸಮ್ಮತವಾದ ಭಾವಗಳೂ ಇಲ್ಲದ ಕಾವ್ಯವು ವಿದ್ಯುದಸಹೀನವಾದ ಭಸ್ಮೀಭೂತ ಖಡ್ಗ ಕವಚದಂತೆ. ಪ್ರತಿಭೆಯ ಶಾಸನಕ್ಕೆ ಒಳಪಡದ ರಾಗದ್ವೇಷಗಳು ನಿಕೃಷ್ಟವಾದುವು. ಯಾವಾಗ ಕಾವ್ಯಕಲೆಯಲ್ಲಿ ಮನಸ್ಸಿನ ಔದಾರ್ಯವೂ ಹೃದಯದ ವೈಶಾಲ್ಯವೂ ತೊಲಗಿ ಹೋಗಿ, ಶಾಶ್ವತಕ್ಕೆ ಬದಲಾಗಿ ನಶ್ವರವು ತಲೆದೋರಿ, ಮೃದುಹಾಸ್ಯವು ವಿಕಟಾಟ್ಟಹಾಸವಾಗಿ ಪರಿಣಮಿಸುವುದೊ ಆಗ ಜನಪದಕ್ಕೆ ಹೃದ್ರೋಗತಟ್ಟಿದಂತೆಯೆ ಸರಿ. ಆಗ ಜನರು ‘ಪಾಪ’ ಎಂದು ಮರುಗಿ ನಗುವುದಿಲ್ಲ; ‘ಹಾಗಾಗಲಿ’ ಎಂದು ಹೊಟ್ಟೆಕಿಚ್ಚಿನಿಂದ ನಗುತ್ತಾರೆ. ಸಂತೋಷದಿಂದ ನಗುವುದಕ್ಕೆ ಬದಲಾಗಿ ಸ್ವಾರ್ಥತೆಯಿಂದ ನಗುತ್ತಾರೆ. ಮಾತ್ಸರ್ಯ, ದುರುಳಹಾಸ್ಯ, ತಿರಸ್ಕಾರಭಾವ, ಅಹಂಕಾರ ಇವುಗಳೆಲ್ಲ ತಲೆಯೆತ್ತುತ್ತವೆ. ಸಹಾನುಭೂತಿ ತಲೆಮರೆಸಿಕೊಂಡು ಹೋಗುತ್ತದೆ. ಅಶ್ಲೀಲತೆ ಹೆಚ್ಚುತ್ತದೆ . ಜೀವನದಲ್ಲಿ ಸುಂದರವಾದುದು ದಿವ್ಯವಾದುದು ಎಲ್ಲವೂ ತಿರಸ್ಕರಿಸಲ್ಪಡುತ್ತವೆ. ಆಗ ಆಶ್ಲೀಲತೆ ಎಂಬ ಶವಾಹಾರಿಯಾದ ಭಯಂಕರ ನಕ್ತಂಚರಿ ಕಾವ್ಯವೆಂಬ ಜವನಿಕೆಯನ್ನು ಮುಸುಗು ಹಾಕಿಕೊಂಡು ತನ್ನ ಕೊಳಕು ಬಾಡಿನ ವಾಂತಿಯನ್ನು ತಾನೇ ಗುಟ್ಟಾಗಿ ಕದ್ದು ತಿನ್ನಲಾಂಭಿಸುತ್ತದೆ.

ಶ್ರವ್ಯಕಾವ್ಯಗಳಿಗಿಂತ ದೃಶ್ಯಕಾವ್ಯಗಳಲ್ಲಿ ಕವಿತೆ ಸರ್ವತೋಮೂಲವಾಗಿ ಅನೇಕ ರೋಪಗಳಿಂದ ಮೈದೋರಬಹುದಾದುದರಿಂದ ಸಾಮಾಜಿಕ ಸಂಸ್ಕೃತಿ ನಾಟಕಗಳಲ್ಲಿ ಪ್ರತಿಬಿಂಬಿಸುವಂತೆ ಇತರ ಕಾವ್ಯಗಳಲ್ಲಿ ಪ್ರತಿಬಿಂಬಿಸುವುದಿಲ್ಲ. ಸಾಮಾಜಿಕ ಸಂಸ್ಕೃತಿ ಉನ್ನತಾವಸ್ಥೆಯಲ್ಲಿದ್ದ ಕಡೆಗಳಲ್ಲೆಲ್ಲ ಅತ್ಯುತ್ತಮ ತರಗತಿಗೆ ಸೇರಿದ ದೃಶ್ಯಕಾವ್ಯಗಳು ಪ್ರಕಾಶಗೊಂಡಿವೆ. ಆದ್ದರಿಂದ ದೃಶ್ಯ ಕಾವ್ಯಗಳು ಅದೋಗತಿಯಲಿದ್ದರೆ ಸಾಮಾಜಿಕ ಸಂಸ್ಕೃತಿಯೂ ಹೀನಾವಸ್ಥೆಗೆ ಇಳಿದಿದೆ ಎಂದು ನಿಸ್ಸಂದೇಹವಾಗಿ ನಿರ್ಣಯಿಸಬಹುದು. ಅಂತಹ ಸಮಯಗಳಲ್ಲಿ ಅಳಿದ ಬಾಳಿನ ಬೆಳಕು ಮರಳಿ ಹೊಳೆಯಬೇಕಾದರೆ ಸಮರ್ಥರಾದ ದೃಶ್ಯಕಾವ್ಯಕರ್ತೃಗಳು ಪುನರಾವಿರ್ಭವಿಸಬೇಕು. ಇದೇ ಸತ್ಯವು ಕವಿತೆಯ ವಿಷಯದಲ್ಲಿಯೂ ಸಮಂಜಸವಾಗುವುದು. ಭಾಷೆಗಾಗಲಿ ಸಂಸ್ಥೆಗಾಗಲಿ ಸೃಷ್ಟಿಕರ್ತರಿದ್ದರೆ ಮಾತ್ರ ಸಾಲದು; ರಕ್ಷಕರೂ ಬೇಕು. ಅದ್ದರಿಂದ ಕವಿಯಾದವನಿಗೆ ಬ್ರಹ್ಮ ವಿಷ್ಣು ಪದವಿಗಳೆರಡೂ ಇರುತ್ತವೆ.

ಹಣತೆಯನ್ನು ಹೊತ್ತಿಸಿದರೆ ಸಾಲದು; ಸೊಡರು ಕುಂದಿ ಬೆಳಕು ನಂದಿ ಹೋಗದಂತೆ ಆಗಾಗ್ಗೆ ಎಣ್ಣೆಯನ್ನು ಹೊಯ್ದು ಬತ್ತಿಯನ್ನು ಮುಂದುವರಿಸುತ್ತಿರಬೇಕು. ಸಮಾಜವು ಅಧಃಪತನಾಭಿಮುಖವಾಯಿತೆಂದರೆ ಶಾಶ್ವತ ಸುಖಾನುಭವದಲ್ಲಿ ರಸಿಕತೆ ಶಿಥಿಲವಾಗುತ್ತಬರುತ್ತದೆ. ಧ್ರುವ ಸುಖಾನುಭದಲ್ಲಿ ವಿರಸತೆ ತಲೆದೋರುವುದೆ ಪತಿತಾವಸ್ಥೆಯ ಚಿಹ್ನೆ. ಮೊದಲು ರಸಜೀವನಕ್ಕೆ ಹೃದಯ ಶ್ವಾಸಕೋಶಗಳಂತಿರುವ ಪ್ರತಿಭೆ ಬುದ್ಧಿಗಳಿಗೆ ಹುಳು ಹಿಡಿಯುತ್ತದೆ. ತರುವಾಯ ಆ ಕ್ರಿಮಿಕೀಟಗಳು ದೇಹದಲ್ಲೆಲ್ಲ ಹರಡಿಕೊಂಡು, ವಿಷವನ್ನು ಕಾರಿ, ಅಮೃತಸದೃಶ್ಯವಾದ ರಕ್ತವನ್ನು ಹೀರಿ, ಇಂದ್ರೀಯ ಪಟುತ್ವವನ್ನು ಹಾಳುಮಾಡಿಬಿಡುತ್ತವೆ. ಕಡೆಗೆ ರುಚಿಶಕ್ತಿ ಸಂಪೂರ್ಣವಾಗಿ ಅಳಿದುಹೋಗಿ ಸುಖಗಳಲ್ಲಿ ಸ್ಥಿರವಾವುದು ಆಸ್ಥಿರವಾವುದು ಎಂಬ ವಿವೇಚನೆಯಿಲ್ಲದೆ ಸರ್ವನಾಶವಾಗುತ್ತದೆ. ಸಮಾಜವು ಅಂತಹ ದುರವಸ್ಥೆಗೆ ಈಡಾಗುವ ಸಮಯ ಬಂದಾಗ ಕವಿತೆ ಅಳಿದುಳಿದಿರುವ ನರಗಳ ಮುಖಾಂತರ ತನ್ನ ಸಿದ್ದೌಷಧಿಯನ್ನು ಪ್ರಯೋಗಿಸಿ ಪುನರುಜ್ಜೀವನ ಕಾರ್ಯಕ್ಕೆ ತೊಡಗುತ್ತದೆ; ರೋಗಿಯ ಜೀರ್ಣಶಕ್ತಿಗೆ ಮೀರದಂತೆ  ಮಿತವಾಗಿ ಹಿತವಾಗಿ ಪ್ರಿಯವಾಗಿ ಅಮೃತಪಾನ ಮಾಡಿಸುತ್ತದೆ; ಮಾನವರು ಸ್ವೀಕರಿಸಬಲ್ಲ ಸುಖಗಳೆಲ್ಲವನ್ನೂ ಕವಿತೆ ದಯಾಪಾಲಿಸುತ್ತದೆ. ಅದು ನಿತ್ಯಜೀವನದ ನಿರಂತರ ಜ್ಯೋತಿ.ಬಾಳು ಕೆಟ್ಟುಹೋಗಿ, ಸಮಾಜವೆಲ್ಲ ಹೀನಸ್ಥಿಯಲ್ಲಿರುವಾಗಲೂ ಕೂಡ ಕವಿತೆಯ ಸತ್ಯ ಸೌಂದರ್ಯ ಔದಾರ್ಯಗಳಿಗೆಲ್ಲ ಆಶ್ರಮವಾಗಿರುತ್ತದೆ. ಸಮಾಜದ ದೇಹದಲ್ಲಿ ನಾಡಿಗಳೆಲ್ಲವೂ ಸಂಪೂರ್ಣವಾಗಿ ನಿಂತುಹೋದಾಗ ಮಾತ್ರವೆ ಕವಿತೆ ಕಣ್ಮರೆಯಾಗುತ್ತದೆ. ಆದರೆ ಯಾವಾಗಲೂ ಹಾಗೆ ಆಗಿಲ್ಲ. ಚಿರಪೂರ್ವಕಾಲದಿಂದಲೂ ಮಹಾಕವಿಗಳಿಂದ ಪರಂಪರೆಯಾಗಿ ಬಂದಿರುವ ದಿವ್ಯಜ್ಯೋತಿಸೂತ್ರವು ನಡುವೆ ಎಲ್ಲಿಯೂ ತುಂಡುಗಡಿದಿಲ್ಲ. ಮಧ್ಯೆ ಮಧ್ಯೆ ಕ್ಷೀಣವಾಗಿ ಕಂಡುಬಂದರೂ ಅದು ಅಖಂಡವಾಗಿರುವುದೇನೊ ಸತ್ಯ. ಮಹಾಕವಿಗಳು ಮುಂದೆ ಮುಂದೆ ನೀಡಿದ ಆ ಜ್ಯೋತಿ ಅಲ್ಪಕವಿಗಳ ಕೈಯಿಂದ ದಾಟಿ ದಾಟಿ ಬಂದು ಕಡೆಗೆ ಮತ್ತೊಬ್ಬ ಮಹಾಕವಿಯ ಕೈಗೆ ಸೇರುತ್ತದೆ. ಆಗ ಅದು ಪುನಃ ತನ್ನ ಪೂರ್ವಜ್ಯೋತಿಯನ್ನು ಬೀರಿಯೆ ಬೀರುತ್ತದೆ; ಕವಿದ ಕತ್ತಲೆಯನ್ನು ಮತ್ತೆ ಚದರಿಸಿಯೆ ಚದರಿಸುತ್ತದೆ. ಪ್ರಾಣವಾಯು ಪುನಃ ಸಮಾಜ ಶರೀರದಲ್ಲಿ ಸಂಚರಿಸುವಂತೆ ಮಾಡುತ್ತದೆ ಆಗ ಎಲ್ಲೆಲಿಯೂ ನೂತನ ಚೇತನ ತುಂಬಿತುಳುಕುತ್ತದೆ. ಅಂತಹ ಪರಿವರ್ತನೆಯ ಸಮಯಗಳಲ್ಲಿ ಕವಿತೆ ಸಮಾಜ ಸುಧಾರಣೆಯೊಂದಿಗೆ ತನ್ನ ಸಂಸ್ಕಾರವನ್ನೂ ಅಭಿವೃದ್ಧಿಪಡಿಸಿಕೊಳ್ಳುತ್ತದೆ.

ಉತ್ತಮೊತ್ತಮ ಕಾವ್ಯಕಲೆ ನಿತ್ಯವಾದುದು; ಶಾಶ್ವತವಾದುದು; ಅನಂತವಾದುದು. ಆ ಅಕ್ಷಯ ರಸಪಾತ್ರೆ ಎಂದಿಗೂ ಬರಿದಾಗುವುದಿಲ್ಲ. ಯುಗಪರಂಪರೆಗಳು ಅದನ್ನು ಹೀರಿ ತಮ್ಮ ತೃಷ್ಣೆಯನ್ನು ಪರಿಹರಿಸಿಕೊಳ್ಳಬಹುದು; ಅದರೆ ಆ ಅಕ್ಷಯಾಮೃತ ಕಲಶ ಎಂದಿಗೂ ಬತ್ತುವುದಿಲ್ಲ. ಸರ್ವದಾ ನವರಸಪೂರ್ಣವಾಗಿ ನೂತನವಾಗಿಯೆ ಇರುತ್ತದೆ. ಅಂತೂ ಅದರ ಅಂತರಾಳದ ನಗ್ನ ಸೌಂದರ್ಯವು ಎಂದಿಗೂ ಗೋಚರವಾಗುವುದಿಲ್ಲ. ಮಹಾಕಾವ್ಯವೆಂದರೆ ಜ್ಞಾನಾನಂದವಾರಿಯಿಂದ ಸದಾ ಪರಿಪ್ಲಾವಿತವಾಗಿರುವ ಒಂದು ಬುಗ್ಗೆ . ಒಂದು ಕಾಲವಾಗಲಿ ಅಥವಾ ಒಬ್ಬ ವ್ಯಕ್ತಿಯಾಗಲಿ ತನ್ನ ಅಂತಃಶಕ್ತಿ ಸಂಸ್ಕಾರಗಳಿಗೆ ತಕ್ಕಂತೆ ಅದರ ಮಂಗಳ ಸಲಿಲವನ್ನು ಪಾನಮಾಡುತ್ತದೆ. ಪುನಃ ಬೇರೊಂದು ಸಂಸ್ಕಾರದ  ಮತ್ತು ಬೇರೊಂದು ಶಕ್ತಿಯ ಯುಗವು ತಲೆದೋರುತ್ತದೆ. ಆಗ ಅದು ಅದೇ ಹಳೆಯ ಬುಗ್ಗೆಯಲ್ಲಿ ಹೊಸ ಹೊಸ ರುಚಿಗಳನ್ನು ಕಂಡುಹಿಡಿದು, ಹೊಸ ಹೊಸ ರಸಗಳನ್ನು ಕುಡಿದಿ ಆನಂದಪಡುತ್ತದೆ. ಶ್ರೇಷ್ಠವಾದ ಕವಿತೆ ಎಂದರೆ, ಭವಿಷ್ಯದ್ವರ್ತಮಾನಗಳನ್ನು ಗಾನಮಯವಾಗಿ ಮಾಡುವ ಭೂತಕಾಲಗರ್ಭಸ್ಥನಾದ ಚಿರಾವೇಶ ಪ್ರೇರಿತ ವೈಣಿಕನಂತೆ! ಅಂತೂ ಕವಿಗಳಿಂದ ತತ್ಕಾಲ ಮತ್ತು ಕಾಲಾಂತರಗಳಿಗೆ ಮಹದುಪಕಾರವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ.

ಆದರೆ ಕವಿಗಳು ತಮ್ಮ ಸಿಂಹವಿಷ್ಟರವರನ್ನು ಮೀಮಾಂಸಕ (ವಿಚಾರ ಶಾಸ್ತ್ರಜ್ಞ)ರಿಗೂ ವೈಜ್ಞಾನಿಕರಿಗೂ ಬಿಟ್ಟುಕೊಡಬೇಕು ಎಂಬುದಕ್ಕೆ ಬೇರೊಂದು ಕಾರಣವಿದೆಯಂತೆ. ಭಾವಪ್ರಪಂಚವೇನೊ ಆನಂದಮಯವಾದುದೆಂದು ಎಲ್ಲರು ಒಪ್ಪುತ್ತಾರೆ. ಆದರೆ ವಿಚಾರಪ್ರಪಂಚವು ಹೆಚ್ಚು ಉಪಯೋಗಕರವಾದುದಂತೆ! ಆಗಲಿ, ಇದನ್ನು ಕುರಿತು ಸ್ವಲ್ಪ ಮಿಮರ್ಶಿಸೋಣ. ಉಪಯೋಗ ಅಥವಾ ಪ್ರಯೋಜನ ಎಂದರೆನು? ಸಾಮಾನ್ಯವಾಗಿ ಪ್ರೇಯಸ್ಸು ಅಥವಾ ಶ್ರೇಯಸ್ಸು ಎಂದರೆ (ಉತ್ತಮೋತ್ತಮ ಸ್ಥಿಯಲ್ಲಿ ಪ್ರೇಯಸ್ಸು ಶ್ರೇಯಸ್ಸುಗಳೆರಡೂ ಒಂದೆ.) ವಿಚಾರಶಕ್ತಿಯನ್ನೂ ರಸಾನುಭವಶಕ್ತಿಯನ್ನೂ ಪಡೆದ ವ್ಯಕ್ತಿಯ ಆತ್ಮ ಯಾವುದನ್ನು ಸಾಧಿಸುವುದೊ, ಯಾವುದರ ಸಿದ್ಧಿಯಿಂದ ಚಿರಸಂತೃಪ್ತಿಹೊಂದುವುದೊ ಅಂತಹ ವಸ್ತುತತ್ತ್ವ ಸುಖಗಳಲ್ಲಿ ಎರಡು ವಿಧವಿದೆ. ಒಂದು ಸರ್ವತ್ರವಾದುದು, ಶಾಶ್ವತವಾದುದು. ಇನ್ನೊಂದು ಏಕತ್ರವಾದುದು, ನಶ್ವರವಾದುದು. ಉಪಯೋಗ ಎಂದರೆ ಮೊದಲನೆಯದಕ್ಕೆ ಕಾರಾಣವಾಗಬಹುದು, ಅಥವಾ ಎರಡನೆಯದಕ್ಕೆ ಕಾರಣವಾಗಬಹುದು. ಮೊದಲನೆಯದರ ದೃಷ್ಟಿಯಿಂದ ಯಾವುದು ರಾಗಗಳಿಗೆ ಶಕ್ತಿನೈರ್ಮಲ್ಯಗಳನ್ನು ದಯಾಪಾಲಿಸಿ, ಭಾವವನ್ನು ವಿಕಾಸಗೊಳಿಸಿ, ಇಂದ್ರೀಯಾನುಭವಗಳಿಗೆ ದಿವ್ಯತೆಯನ್ನು ನೀಡುವುದೊ ಅದೇ ಉಪಯೋಗ ಎಂದಾಗುವುದು. ಆದರೆ ‘ಉಪಯೋಗ’ ಎಂಬ ಪದಕ್ಕೆ ಇನ್ನೂ ಸಂಕುಚಿತವಾದ ಅರ್ಥವನ್ನೂ ಕಲ್ಪಿಸಬಹುದು. ಅಂದರೆ, ಯಾವುದು ನಮ್ಮಲ್ಲಿರುವ ಮೃಗೀಯತೃಷ್ಣೆಗಳನ್ನು ಸಂತುಷ್ಟಿಗೊಳಿಸುವುದೊ, ಯಾವುದು ನಮ್ಮ ಸ್ಥೂಲಜೀವನಕ್ಕೆ ಬೇಕಾದ ಪದಾರ್ಥಗಳನ್ನು ತಂದೊದಗಿಸುವುದೊ, ಯಾವುದು ನಮ್ಮ ಇಹ ಜೀವನ ವ್ಯಾಪಾರಕ್ಕೆ ಆವಶ್ಯಕವಾದ ಲೌಕಿಕಜ್ಞಾನವನ್ನು ದಾನಮಾಡುವುದೊ, ಯಾವುದು ಮಾನವರ ವೈಯಕ್ತಿಕ ಮತ್ತು ಸಾಮಾಜಿಕ ಜೀವನಯಾತ್ರೆಗೆ ಬೇಕಾದ ಪರಸ್ಪರ ಸಹಾಯ ಸೌಕರ್ಯಗಳನ್ನು ಕಲ್ಪಿಸುವುದೊ ಅದೇ ‘ಉಪಯೋಗ’ ಎಂದು ವರ್ಣಿಸಬಹುದು.

‘ಉಪಯೋಗ’ವನ್ನು ದ್ವಿತೀಯಾರ್ಥದಲ್ಲಿ ಸ್ವೀಕರಿಸುವ ವ್ಯಕ್ತಿಗಳಿಗೆ ಸಮಾಜದಲ್ಲಿ ಒಂದು ನಿಯತಸ್ಥಾನವಿದ್ದೇ ಇದೆ. ಅವರು ಕವಿಗಳು ಹಾಕಿಕೊಟ್ಟ ಹಾದಿಯನ್ನು ಹಿಡಿದು. ಅವರ ಭಾವನಿರ್ಮಾಣಗಳನ್ನೂ ರಸಕೃತಿಗಳನ್ನೂ ಅನುಸರಿಸಿ, ಜನಜೀವನದಲ್ಲಿ ಅವರ ಆತ್ಮಸಂಸ್ಕೃತಿಯನ್ನು ಪ್ರಚುರಪಡಿಸುವರು. ಅವರು ಸಾಹಾಸದಿಂದ ಹೊಸ ಹೊಸ ದೇಶಗಳನ್ನು ಕಂಡುಹಿಡಿದು ಮನುಷ್ಯವಾಸಕ್ಕೆ ಅರ್ಹವಾದ ವಸತಿಗಳನ್ನು ನಿರ್ಮಿಸುವರು; ವೇಗವಾಗಿ ಸಂಚರಿಸುವ ಯಂತ್ರಗಳನ್ನು ಕಂಡುಹಿಡುದು ಅತ್ಯಲ್ಪಕಾಲದಲ್ಲಿಯೆ ಬಹುದೂರ ಪ್ರಯಾಣಮಾಡಲು ಸೌಕರ್ಯಗಳನ್ನು ಒದಗಿಸಿ ಜನರಿಗೆ ಕಾಲವನ್ನು ಮಿಗಿಸಿಕೊಡುವರು. ಸಾವಿರಾರು ಜನರು ನೂರಾರು ದಿನಗಳಲ್ಲಿ ಪೂರೈಸುತಿದ್ದ ಕರ್ಮಗಳನ್ನು ಸ್ವಲ್ಪ ಜನರು ಅಲ್ಪ ಕಾಲದಲ್ಲಿಯೆ ಮಾಡಿ ಮುಗಿಸುವಂತೆ ಯಂತ್ರಗಳನ್ನು ಸೃಜಿಸುವರು. ಎಲ್ಲಿಯವರೆಗೆ ಅವರು ನಮ್ಮ ದಿವ್ಯಸ್ವಭಾವಗಳ ಎಲ್ಲೆಗೆ ಕಾಲಿಡದೆ, ಮಾನವನ ಲೌಕಿಕ ಸ್ವಭಾವಗಳಿಂದ ಮಾತ್ರ ಮುದ್ರಿತವಾದ ಜಗತ್ತಿನಲ್ಲಿಯೆ ತಮ್ಮ ಕಾರ್ಯಕಲಾಪಗಳನ್ನು ನಡೆಯಿಸುವರೊ ಅಲ್ಲಿಯವರೆಗೆ ಅವರ ಪ್ರಯತ್ನಗಳೆಲ್ಲವೂ ಅನರ್ಘ್ಯಗಳಾಗಿಯೆ ಇರುತ್ತವೆ. ಆದರೆ ಮೂಢಭಕ್ತಿಯನ್ನೂ ಅಂಧಶ್ರದ್ಧೆಯನ್ನೂ ನುಚ್ಚುನೂರಾಗಿ ಒಡೆಯಲು ಹೊರಟ. ಸಂದೇಹವು ಮಾನವನ ಮನೋಲೋಕದಲ್ಲಿ ಅನರ್ಘ್ಯ ರತ್ನಗಳಂತಿರುವ ನಿತ್ಯಸತ್ಯಗಳನ್ನೂ ಚಿರ ಸುರುಚಿರ ಭಾವಗಳನ್ನೂ ಹಾಳುಮಾಡದಿರಲಿ; ದಹಿಸಿ ಭಸ್ಮಮಾಡದಿರಲಿ. ವೈಜ್ಞಾನಿಕ ಯಂತ್ರಜ್ಞರು ಜೀವನದ ಶ್ರಮವನ್ನು ಸಂಕ್ಷೇಪಗೊಳಿಸಲಿ; ಎಷ್ಟು ಬೇಕಾದರಷ್ಟು, ಅವರಿಗೆ ಸಾಧ್ಯವಾದಷ್ಟು ಅದನ್ನು ಕಡಿಮೆ ಮಾಡಲಿ. ರಾಜಕೀಯ ಅರ್ಥ ಶಾಸ್ತ್ರಜ್ಞರು ದೇಶದ ಏಳ್ಗೆಗೆ ಬೇಕಾದಷ್ಟು ಕಾರ್ಮಿಕ ಸಂಸ್ಥೆಗಳನ್ನು ಸೃಷ್ಟಿಮಾಡಲಿ. ಆದರೆ ಅವರೆಲ್ಲರೂ ಒಂದು ವಿಷಯದಲ್ಲಿ ಮಾತ್ರ ಎಚ್ಚರಿಕೆಯಿಂದಿರಬೇಕು. ಎಲ್ಲಿಯಾದರು ಅವರ ಸಿದ್ಧಾಂತಗಳೂ ಅವರ ಪ್ರಮೇಯಗಳೂ ಮಾನವನ ಆತ್ಮದ ದಿವ್ಯವಾದ ಮೂಲಸ್ವಭಾವಗಳಿಗೆ ಹೊಂದಿಕೊಂಡು ಅನುಕೂಲವಾಗಿ ಹರಿಯದೆ, ಆ ತತ್ತ್ವಗಳನ್ನು ಪ್ರತಿಭಟಿಸಿ, ಅವುಗಳಿಗೆ ಎದುರಾಗಿ, ವಿರೋಧವಾಗಿ, ಪ್ರತಿಕೂಲವಾಗಿ ಪ್ರವಹಿಸಿದರೆ, ಆತನ ಭೋಗತೃಷ್ಣೆ, ಪರಿಹಾರವಾಗುವುದಕ್ಕೆ ಬದಲಾಗಿ ಎಣ್ಣೆ ಬಿದ್ದ ಬೆಂಕಿಯಂತೆ ಅದು ಇಮ್ಮಡಿಯಾಗಿ ಕೆರಳಿ, ಮಹಾಭಯಂಕರ ಪ್ರಮಾದವಾಗಿ ಪರಿಣಮಿಸಿಬಿಡಬಹುದು. ಈಗಾಗಲೆ ಅಂತಹ ದುರವಸ್ಥೆ ಕಾಲಿಟ್ಟಿದೆ. “ಪಡೆದವನಿಗೆ ಇನ್ನನಿತು ದೊರೆಯುವುದು; ಪಡೆಯದವನಿಂದ ಅವನೊಳಿರುವ ಎಳ್ಳನಿತೂ ಸುಲಿಗೆಯಾಗುವುದು.” ಎಂಬ ವಚನ ಸಾರ್ಥಕವಾಗುತ್ತಿದೆ! ಹಣವು ಹಣಗಾರರನ್ನೆ ಸೇರುತ್ತಿದೆ; ಬಡವರು ಬರುಗೈಯಾಗುತ್ತಿದ್ದಾರೆ! ದೇಶದ ಸ್ಥಿತಿ ಶೋಚನೀಯವಾಗಿದೆ. ಒಂದು ಕಡೆ ಹುಲಿ, ಒಂದು ಕಡೆ ದರಿ. ಅತ್ತ ಕ್ರೂರಪ್ರಭುತ್ವ, ಇತ್ತ ಅನಾಯಕತ್ವ. ಜನಾಂಗದ ಇಂತಹ ವಿಷಮ ದುರ್ಗತಿಗೆ ನಿತಾಂತವಾದ ಅದರ ಕೋಮಟಿ ಬುದ್ಧಿಯೇ ಮೂಲಕಾರಣ ಎಂದು ಧೈರ್ಯವಾಗಿ ಹೇಳಿಬಿಡಬಹುದು.

ಉತ್ತಮೋತ್ತಮ ಪ್ರೇಯಸ್ಸು ಅನಿರ್ವಚನೀಯವಾದುದು. ಅತ್ಯುತ್ತಮ ಸುಖವನ್ನು ಹೀಗಿಯೇ ಇದೆ ಎಂದು ವರ್ಣಿಸುವುದು ಕಷ್ಟ. ಏಕೆಂದರೆ ಅದನ್ನು ಸೂತ್ರಪ್ರಾಯವಾಗಿ ವರ್ಣಿಸಲು ಹೊರಟರೆ ಅನೇಕಾನೇಕ ವಿರೋಧಭಾಸಗಳಿಗೆ ಈಡಾಗುತ್ತದೆ. ಮಾನವ ಸ್ವಭಾವ ದುರ್ಜ್ಞೆಯ, ವಿಚಿತ್ರ. ನಮ್ಮ ಸಣ್ಣ ಮನಸ್ಸಿಗೆ ಯಾವುದು ಸುಖವೆಂದು ತೋರುವುದೊ ಅದು ನಮ್ಮ ದೊಡ್ಡ ಮನಸ್ಸಿಗೆ ದುಃಖವೆಂದು ತೋರುತ್ತದೆ. ಕೆಲವು ಸಾರಿ ಕಷ್ಟ, ನೋವು, ಯಾತನೆ, ನಿರಾಶೆ ಇವುಗಳೇ ನಮ್ಮ ಅತ್ಯುತ್ತಮ ಶ್ರೇಯೋಮಾರ್ಗಗಳಾಗುತ್ತವೆ. ರುದ್ರಕಾವ್ಯಗಳಲ್ಲಿ ನಮಗಿರುವ ಅನುಕಂಪಕ್ಕೆ ಈ ತತ್ತ್ವವೇ ಮುಖ್ಯ ಕಾರಣವೆಂದು ಹೇಳಬಹುದು. ರುದ್ರಕಾವ್ಯಗಳಲ್ಲಿ ದುಃಖದ ಅಂತರಂಗದಲ್ಲಿರುವ ಸುಖದ ಛಾಯಾದರ್ಶನವಾಗುವುದರಿಂದಲೆ ನಮಗೆ ಅವು ಪ್ರಿಯವಾಗಿರುವುವು. ಅತ್ಯಂತ ಮಧುರವಾದ ಗಾನಶ್ರವಣದಿಂದ ನಮ್ಮ ಹೃದಯದಲ್ಲಿ ಒಂದು ವಿಧವಾದ ಮೂಕವೇದನೆಯುಂಟಾಗುವುದಕ್ಕೂ ಇದೇ ಕಾರಣ. ಸುಖದಲ್ಲಿ ತೋರುವ ಸುಖಕ್ಕಿಂತಲೂ ದುಃಖದಲ್ಲಿ ತೋರುವ ಸುಖವೇ ಮಧುರತರವಾದುದು. ಆದ್ದರಿಂದಲೆ “ಮದುವೆಗಿಂತ ಮಸಣಲೇಸು” ಎಂಬ ಗಾದೆ ಹುಟ್ಟಿದೆ. ಅಂದಮಾತ್ರಕ್ಕೆ ಅತ್ಯುತ್ತಮವಾದ ಸುಖವೆಲ್ಲ ದುಃಖದಿಂದಲೇ ಹುಟ್ಟುವುದೆಂದು ಯಾರು ನಿರ್ಧರಿಸಿಬಿಡಬಾರದು. ಪ್ರೇಮದಿಂದ ಲಭಿಸುವ ಆನಂದ, ಸ್ನೇಹವು ನೀಡುವ ಸಂತೋಷ, ಪ್ರಕೃತಿ ಸೌಂದರ್ಯಾನುಭವದಿಂದ ಮೂಡುವ ಹರ್ಷ, ಕಾವ್ಯರಸಾನುಭವದಿಂದ ಉಕ್ಕುವ ಆಹ್ಲಾದ, ಎಲ್ಲಕ್ಕೂ ಮಿಗಿಲಾಗಿ ಕಾವ್ಯನಿರ್ಮಾಣದಿಂದ ಸಂಜನಿಸುವ ದಿವ್ಯಾನಂದ ಇವುಗಳೆಲ್ಲವೂ ಸಂಪೂರ್ಣವಾಗಿ ದುಃಖಕಿಲ್ಬಿಷರಹಿತವಾದುವುಗಳು.

ಈ ರೀತಿಯ ಶಾಶ್ವತವಾದ ಶ್ರೇಷ್ಠತಮಸುಖದ ನಿರ್ಮಾಣವೇ ನಿಜವಾದ ‘ಪ್ರಯೋಜನ’ ಎಂದು ಹೇಳಬಹುದು. ಅಂತಹ ಪರಮಸುಖದ ಸೃಷ್ಟಿಸ್ಥಿತಿಗಳಿಗೆ ಯಾರು ಕಾರಣಕತೃರೋ ಅವರೇ ಕವಿಗಳು ಅಥವಾ ಕಾವ್ಯತತ್ತ್ವದರ್ಶಿಗಳು.

ನಮ್ಮಲ್ಲಿ ಸಿದ್ಧಾಂತಗಳು ಬೇಕಾದಷ್ಟಿವೆ; ಆದರೆ ಅವುಗಳನ್ನು ಆಚರಣೆಗೆ ತರಲು ಸಾಧಕರಿಲ್ಲ. ಧರ್ಮಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯಶಾಸ್ತ್ರ, ಇತಿಹಾಸ ಮೊದಲಾದವುಗಳು ಯಥೇಷ್ಟವಾಗಿವೆ. ಅವುಗಳನ್ನು ಆಚರಿಸುವುದು ಮಾತ್ರ ನಮಗೆ ಗೊತ್ತಿಲ್ಲ. ತಿಂದು ಜೀರ್ಣಿಸಿಕೊಳ್ಳುವುದಕ್ಕಿಂತಲೂ ಸಾವಿರಪಾಲು ಹೆಚ್ಚಾಗಿ ಕೂಳು ಬಿದ್ದಿದೆ. ಆದರೆ ದೇಹದಾರ್ಢ್ಯವೆ ಸಾಲದೆ ಹೋಗಿದೆ. ನಾವು ಪ್ರಯೋಗಿಸಿಕೊಳ್ಳಲಾರದಷ್ಟು ವೈಜ್ಞಾನಿಕ ಮತ್ತು ಆರ್ಥಿಕ ಜ್ಞಾನವು ನಮಗೀಗ ತಿಳಿದಿದೆ. ಈ ಶಾಸ್ತ್ರಸಮೂಹಗಳ ಅಂತರಂಗದಲ್ಲಿ ಇರುವ ಕವಿತೆ ಅವುಗಳು ತೊಟ್ಟ ಅಸಂಖ್ಯ ಶುಷ್ಕ ಭೂಷಣಗಳಲ್ಲಿ ಕಣ್ಮರೆಯಾಗಿದೆ. ನೈತಿಕ ಜ್ಞಾನಕ್ಕೆ ಬರಗಾಲವಿಲ್ಲ. ಉತ್ತಮ ರಾಜಕೀಯ ಸಂಸ್ಥೆಗಳು ಹೇಗಿರಬೇಕೆಂದು ಬಹುಜನರಿಗೆ ಗೊತ್ತು; ದೇಶದ ಸಂಪದಭ್ಯುದಯಕ್ಕೆ ಸಾಕಾದ ಅರ್ಥಶಾಸ್ತ್ರ ಜ್ಞಾನವು ಅನೇಕರಲ್ಲಿದೆ. ಅಂತೂ ಎಲ್ಲರಲ್ಲಿಯೂ ಈಗಿರುವುದಕ್ಕಿಂತ ಮುಂದೆ ಬರಬೇಕಾದ ಆಚಾರ ವ್ಯವಹಾರಗಳ ವಿಷಯದಲ್ಲಿ ಶ್ರೇಷ್ಠತರ ಜ್ಞಾನವು ಇದ್ದೇ ಇದೆ ಎಂದು ಧೈರ್ಯವಾಗಿ ಹೇಳಬಹುದು. ಪ್ರತಿಯೊಬ್ಬರಲ್ಲಿಯೂ ಆದರ್ಶವು ಆಚಾರಕ್ಕಿಂತ ಒಂದಿನಿತಾದರೂ ಎತ್ತರದಲ್ಲಿರುವುದು. ಈಗ ನಮಗೆ ಬೇಕಾಗಿರುವುದು ಬರಿಯ ಅರಿವಲ್ಲ; ಅರಿತುದನ್ನು ಆಚರಿಸಲು ಬೇಕಾಗುವ ಎದೆಯ ಕಿಡಿ. ಬುದ್ಧಿ ಪರಿಗ್ರಹಿಸಿದುದನ್ನು ಪ್ರತಿಭೆ ಗ್ರಹಿಸಲು ಸಹಾಯಮಾಡುವ ನಿರ್ಮಾಣಶಕ್ತಿ ಬೇಕು; ಭಾವಿಸಿದುದನ್ನು ಕೈಕೊಂಡು ನಡೆಸಲು ತಕ್ಕ ಉತ್ಸಾಹ ಬೇಕು; ಬುದ್ಧಿಶಕ್ತಿಗೆ ರಾಗಶಕ್ತಿಯ ನೆರವುಬೇಕು, ಜೀವಿತದ ಕಾವ್ಯರಸಬೇಕು; ಕವಿತೆ ಎಂಬ ಮಿಂಚಿನುಣಿಸಾಗಬೇಕು. ನಮ್ಮ ಕಾರ್ಪಣ್ಯ ಹೆಚ್ಚಾಗಿ ಮಿತಿಮೀರಿ ಹೋಗಿದೆ; ನಮಗೆ ಅಜೀರ್ಣವಾಗಿದೆ. ವಿಜ್ಞಾನ ಮುಂದುವರಿದಂತೆಲ್ಲ ಬಾಹ್ಯ ಪ್ರಪಂಚದಲ್ಲಿ ಮಾನವನ ಅಧಿಕಾರನೇಮಿ ವಿಸ್ತಾರವಾಗಿದೆ. ಹಾಗೆಯೆ ಕವಿತಾರಸಾಭಾವದ ದೆಸೆಯಿಂದ ಅಂತಹ ಪ್ರಪಂಚದಲ್ಲಿ ಆತನಗಿದ್ದ ಅಧಿಕಾರ ವಲಯ ಬರಬರುತ್ತ ಸಂಕುಚಿತವಾಗಿದೆ. ಪಂಚಭೂತಗಳನ್ನು ತನಗೆ ದಾಸರನ್ನಾಗಿ ಮಾಡಿಕೊಂಡ ಮಾನವನು ತಾನೇ ಅವುಗಳಿಗೆ ದಾಸಾನುದಾಸನಾಗಿ ಬಿಟ್ಟಿದ್ದಾನೆ. ಮನುಷ್ಯನಲ್ಲಿ ತಿಳಿವಿಗೆ ತಳಹದಿಯಂತಿರುವ ರಸಮಯವಾದ ಕಲಾನಿರ್ಮಾಣಕ ಶಕ್ತಿಗಿಂತಲೂ ಶುಷ್ಕವಾದ ಯಂತ್ರನಿರ್ಮಾಣಕ ಶಕ್ತಿ ಮಿತಿಮೀರಿ ಬೆಳೆಯುವುದರಿಂದ ಸ್ವಾರ್ಥತೆ ಹೆಚ್ಚುತ್ತದೆ. ಯಂತ್ರಕರ್ಮಾಗಾರಗಳು ತಲೆಯೆತ್ತುತ್ತವೆ. ಎಲ್ಲರಿಗೂ ಸಲ್ಲಬೇಕಾದ ಸಂಪತ್ತು ಒಂದೇ ಕಡೆ ಸೇರಿಬಿಡುತ್ತದೆ. ಬಡವರು ಇನ್ನೂ ಬಡವರಾಗುತ್ತಾರೆ; ದೊಡ್ಡವರು ಇನ್ನೂ ದೊಡ್ಡವರಾಗುತ್ತಾರೆ. ಸಮಾಜದ ಸಮತೆ ಕೆಟ್ಟುಹೋಗುತ್ತದೆ. ಲೋಕದ ಸುಖವನ್ನು ಹೆಚ್ಚಿಸಲೆಂದು ಕಂಡುಹಿಡಯಲ್ಪಟ್ಟ ಯಂತ್ರಸಾಮಗ್ರಿಗಳು ಲೋಕದ ಅನಂತ ದುಃಖಕ್ಕೆ ಕಾರಣಭೂತವಾಗುತ್ತವೆ. ಕವಿತೆಗೂ ಸ್ವಾರ್ಥತೆಗೂ  ರಾಮನಿಗೂ ಕಾಮನಿಗೂ ಇರುವ ಅಂತರವಿದೆ.

ಕವನಶಕ್ತಿಯ ಕಾರ್ಯ ದ್ವಿಮುಖವಾದುದು. ಆತ್ಮಕ್ಕೆ ಜ್ಞಾನ, ಆನಂದ, ಶಕ್ತಿಗಳನ್ನು ದಯಪಾಲಿಸುವ ನೂತನ ಸಾಮಾಗ್ರಿಗಳನ್ನು ಸೃಜಿಸುವುದು ಅದರ ಒಂದನೆಯ ಕೆಲಸ. ಎರಡನೆಯದೆಂದರೆ, ಹಾಗೆ ನಿರ್ಮಿಸಿದ ಸಾಮಾಗ್ರಿಗಳಿಗೆ ಒಂದು ತೆರನಾದ ಲಯವನ್ನೂ ನಿಯಮವನ್ನೂ ಕೊಟ್ಟು, ಅವುಗಳನ್ನು ಪ್ರತಿಬಿಂಬಿಸುವಂತೆ ಮನಸ್ಸನ್ನು ಪ್ರೇರಿಸುವುದು. ಯಾವಾಗ ಸ್ವಾರ್ಥತೆ ಹೆಚ್ಚಿ, ಬಾಹ್ಯ ವಿಷಯ ಭೋಗಗಳು ಪ್ರಬಲಿಸಿ, ಅವುಗಳನ್ನು ಜೀರ್ಣಿಸಿಕೊಳ್ಳುವ ಅಂತರಾತ್ಮನ ನಿರ್ಮಲಾಂತಶ್ಯಕ್ತಿ ಕುಂದಿಹೋಗುವುದೋ ಆಗ ಕಾವ್ಯಶಕ್ತಿಯಿಂದ ಮನುಷ್ಯನ ದಿವ್ಯ ಸ್ವಭಾವಗಳಿಗೆ ಮಹದುಪಕಾರವಾಗುವಂತೆ ಮತ್ತಾವಾಗಲೂ ಆಗಲಾರದು.

ಕವಿತೆ ದಿವ್ಯವಾದುದು, ಭವ್ಯವಾದುದು , ಮಂಗಳಮನೋಹರವಾದುದು. ಅದು ಜ್ಞಾನದ ಬೀಜವೂ ಹೌದು; ಜ್ಞಾನದ ವೃಕ್ಷವೂ ಆಗಿದೆ. ಅದು ಸರ್ವ ವಿಜ್ಞಾನ ಶಾಸ್ತ್ರಗಳನ್ನು ಒಳಗೊಂಡಿದೆ; ಎಲ್ಲ ಶಾಸ್ತ್ರಗಳೂ ಅನುಸರಿಸಲರ್ಹವಾದ ಆದರ್ಶವಾಗಿದೆ. ಅನುಸರಿಸಲೇಬೇಕೆಂಬ ಅದರ್ಶವೆಂದರೂ ಎನ್ನಬಹುದು. ಅದು ತಿಳಿವಿಗೆಲ್ಲ ಮೊತ್ತಮೊದಲೂ ತುತ್ತತುದಿಯೂ ಆಗಿದೆ. ಅರಿವೆಲ್ಲವೂ ಅದರಿಂದಲೇ ಮೂಡುವುದು; ಅದರಿಂದಲೇ ಅಲಂಕೃತವಾಗುವುದು. ಅದು ಹಾಳಾದರೆ ಎಲ್ಲ ಹಾಳಾದಂತೆಯೇ ಸರಿ. ಕವಿತಾರಸಶಕ್ತಿ ಬತ್ತಿ ಹೋದರೆ ಬಾಳೆಲ್ಲ ಬಂಜೆಯಾಗಿ ಜೀವನವೃಕ್ಷವೆ ಆಮೂಲಾಗ್ರವಾಗಿ ಬಾಡಿಹೋಗುವುದು. ಜೀವಿತವೆಂಬ ಹೂವಿಗೆ ಕವಿತೆ ಕಂಪುಬಣ್ಣಗಳಂತಿರುವುದು. ಅಸ್ಥಿಮಾಂಸಗಳಿಂದ ನಿರ್ಮಿತವಾದ ದೇಹಕ್ಕೆ ಸೌಂದರ್ಯ ತೇಜಸ್ಸುಗಳಿರುವಂತೆ ಮನುಷ್ಯ ಜೀವನಕ್ಕೆ ಕವಿತೆಯಿರುವುದು. ಕವಿತೆಯೊಂದಿಲ್ಲದಿದ್ದರೆ ಧರ್ಮ, ಪ್ರೇಮ, ಸ್ನೇಹ ದೇಶಾಭಿಮಾನ ಮೊದಲಾದುವುಗಳು ಎಲ್ಲಿರುತ್ತಿದ್ದುವು? ನಾವು ವಾಸಮಾಡುವ ಸುಂದರ ವಿಶ್ವದ ಸುರಮ್ಯ ದೃಶ್ಯಗಳಿಗೆ ಯಾವ ಮನ್ನಣೆ ಎಲ್ಲಿರುತಿತ್ತು? ಇಹಲೋಕದ ಶಾಂತಿಸಮಾಧಾನಗಳ ಗತಿಯೇನಾಗುತ್ತಿತ್ತು? ಪರಲೋಕದಲ್ಲಿ ನಮಗಿರುವ ಆಶೆ, ಭರವಸೆ, ಭಕ್ತಿ, ಶಾಂತಿ ಮೊದಲಾದ ಸರ್ವೋತ್ತಮ ದಿವ್ಯ ಭಾವಗಳು ಯಾವ ಮೂಲೆಯಲ್ಲಿ ಎಲ್ಲಿರುತ್ತಿದ್ದುವು? ಕವಿತೆಯ ಅನ್ವೇಷಕ ದೃಷ್ಟಿಯ ದಿವ್ಯದೀಧಿತಿಗೆ ಸೆರೆಯಾಗಿರುವ ಆ ಮಹಾ ಸತ್ಯ ಸೌಂದರ್ಯಗಳು ವಾಣಿಜ್ಯಶಾಸ್ತ್ರಗಳ ಪೇಚಕ ನಯನ ದೃಷ್ಟಿಗೆ ಎಂದಿಗಾದರೂ ಗೋಚರಿಸುತ್ತಿದ್ದುವೇ? ಕವಿತೆ ಪಾಂಡಿತ್ಯದಂತೆ ಚಿತ್ತಸಾಮರ್ಥ್ಯಕ್ಕೆ ಶರಣಾಗತಕ್ಕ ತೊತ್ತಲ್ಲ: ಯಾವಾಗ ಬೇಕೆಂದರಾಗ “ನಾನು ಕವನ ಕಟ್ಟುತ್ತೇನೆ” ಎಂದು ಯಾವನೂ ಹೇಳಲಾರನು. ಎಂತಹ ಸಮರ್ಥನಾದ ಕವಿಯಾದರೂ ಹಾಗೆ ಹೇಳಲಾರನು ಏಕೆಂದರೆ ಸ್ಫೂರ್ತಿ ಮನಸ್ಸಿನಲ್ಲಿ ಮಿಂಚಿ ಮಾಯವಾಗುವ ಒಂದು ಅವಾಙ್ಮನಸಗೋಚರವಾದ ಶಕ್ತಿ. ಆ ಶಕ್ತಿ ಅಂತರಂಗದಲ್ಲಿ ಮೂಡಿ ಹೂವಿಗೆ ಬಣ್ಣವೇರುವಂತೆ ಏರುತ್ತದೆ. ಏರುತ್ತ ಏರುತ್ತಲೆ ಮಾಸಿಹೋಗಲಾರಂಭವಾಗುತ್ತದೆ. ಅದರ ಗಮನಾಗಮನದ ರಹಸ್ಯವೂ ಅಜ್ಞೇಯವಾದುದು. ಮಿಂಚಿ ಮೂಡಿದ ಆ ಶಕ್ತಿಯ ಪ್ರಭಾವಜ್ಯೋತಿ ಹಾಗೆಯೇ ತುದಿಯವರೆಗೂ ಬಾಡದೆ, ಮಾಸದೆ, ಅಂತರಂಗದಲ್ಲಿ ನಿಲ್ಲುವುದಾದರೆ, ಏನು ಹೇಳುವುದು? ಅದರ ಕತೆಯೇ ಬೇರೆ! ಅದರಿಂದುಂಟಾಗುವ ಕಾವ್ಯಕಾರ್ಯದ ಮಹಿಮೆಯನ್ನು ಬರೆದು ಬಣ್ಣಿಸಲಳವಲ್ಲ. ಆದರೆ ಕಾವ್ಯರಚನೆ ಪ್ರಾರಂಭವಾಗುತ್ತಲೆ ಕಾವ್ಯಾವೇಶ ಬಾಡತೊಡಗುತ್ತದೆ. ಜಗತ್ತಿನಲ್ಲಿ ಉತ್ತಮೋತ್ತಮವೆಂದು ಹೆಸರು ಪಡೆದಿರುವ ಕಾವ್ಯವೂ ಕೂಡ ಕವಿಯ ಮೂಲಾವೇಶದ ಆದಿಸ್ಫೂರ್ತಿಯ ನೆರಳಿನ ನೆರಳಿನ ನೆರಳಿನ ನೆರಳೆಂದೇ ಹೇಳಿಬಿಡಬಹುದು. ಕಾವ್ಯದ ಅತ್ಯುತ್ತಮ ಭಾಗಗಳು ಪ್ರಯತ್ನದಿಂದ, ಕಷ್ಟದಿಂದ, ಶ್ರಮದಿಂದ, ಪಾಂಡಿತ್ಯದಿಂದ ರಚಿತವಾಗುತ್ತವೆ ಎಂದು ತಿಳಿಯಿವುದು ಶುದ್ಧಮೌಢ್ಯ. ಬೇಕಾದರೆ ಆಧುನಿಕ ಕವಿಗಳಲ್ಲಿ ಶ್ರೇಷ್ಠತಮರೆನ್ನಿಸಿಕೊಳ್ಳುವರು ಯಾರಾದರೂ ಈ ಮಾತಿನ ನಿಜವನ್ನು ಪರಿಶೀಲಿಸಿ ನೋಡಲಿ! ಆಗ ಗೊತ್ತಾಗುತ್ತದೆ .  ಕವಿ ಭಾವಗಳನ್ನು ಪರೀಕ್ಷಿಸಬೇಕು, ಶೈಲಿಯನ್ನು ನಯಮಾದಬೇಕು, ಬರೆದುದನ್ನು ತಿದ್ದಬೇಕು ಎಂದು ಮೊದಲಾಗಿ ವಿಮರ್ಶಕರು ವಿಧಿಸುವ ನಿಯಮಗಳೆಲ್ಲವೂ, ಹೇಳುವ ಬುದ್ಧಿವಾದಗಳೆಲ್ಲವೂ, ಔಪಚಾರಿಕವಾದುವಷ್ಟೆ. ಅವುಗಳ ಅಭಿಪ್ರಾಯವೇನೆಂದರೆ: ಆವೇಶದ ಸಮಯವನ್ನು ಎಚ್ಚರಿಕೆಯಿಂದ ಕೈಬಿಡದೆ ವಿನಿಯೋಗಿಸಿಕೊಳ್ಳಬೇಕು; ಹೃದಯದ ಅನುಭವಸೂಚನೆಗಳನ್ನು ಸಚೇತನ ಕವಿಸಮಯಗಳಿಂದ ಅಲಂಕರಿಸಬೇಕು; ಭಾವದಿಂದ ಭಾವಕ್ಕೆ ನಡುವೆ ಇರಬಹುದಾದ ಅಂತರವನ್ನು ತುಂಬಿಕೊಳ್ಳಬೇಕು; ರಸಸೇತುವನ್ನು ಕಟ್ಟಬೇಕು. ಇಷ್ಟೇ ಹೊರತು ಹೆಚ್ಚೇನೂ ಅಲ್ಲ. “ಪ್ಯಾರಡೈಸ್ ಲಾಸ್ಟ್” ಎಂಬ ಆಂಗ್ಲೇಯ ಮಹಾಕಾವ್ಯ ಭಾಷೆಯಲ್ಲಿ ಮೈಗೊಳ್ಳುವ ಮುನ್ನವೆ ಮಿಲ್ಟನ್ ಕವಿಯ ಹೃದಯದಲ್ಲಿ ಸಂಪೂರ್ಣವಾಗಿ ಮೂಡಿತ್ತು. ಯಾಂತ್ರಿಕವಾಗಿ ತಯಾರಾದ ಪದ್ಯಗಳಿಗೂ ಭಾವಸ್ಫೂರ್ತಿಯಿಂದ ಹೊರಹೊಮ್ಮಿದ ಕವನಗಳಿಗೂ ಬಣ್ಣಗಾರನ ಹಸೆಗೋಡೆಯ ಚಿತ್ರಕ್ಕೂ ರಸಮೂರ್ತಿಯಾದ ಕಲಾಕೋವಿದ ವರ್ಣಶಿಲ್ಪಿಯ ಚಿತ್ರಕಲೆಗೂ ಇರುವ ಅಂತರವಿರುತ್ತದೆ. ಕುಂಬಾರನು ಮಾರಾಟಕ್ಕೆಂದು ಮಾಡಿದ ಗಣೇಶಗಳನ್ನು ನೋಡಿ, ನಿಜವಾದ ಶಿಲ್ಪಿಯ ಭಾವವೇ ಮೂರ್ತಿಮತ್ತಾದಂತಿರುವ ಬೇಲೂರಿನ ಶಿಲಾಬಾಲಿಕೆಯರನ್ನು ನೋಡಿದರೆ ಮೇಲೆ ಹೇಳಿದ ಮಾತಿನ ಅರ್ಥ ಚೆನ್ನಾಗಿ ಮಂದಟ್ಟಾಗುವುದು. ಕುಂಬಾರನ ಕೈಯಲ್ಲಿ ವಿಗ್ರಹ ಕೆಲಸದವರು ಕಟ್ಟುವ ಗೋಡೆಯಂತೆ ಮೇಲೇಳುತ್ತದೆ; ಬೆಳೆಯುತ್ತದೆ. ಶಿಲ್ಪಿಯ ಮನದಲ್ಲಿ ಮೂರ್ತಿ ಮಾತೆಯ ಗರ್ಭಕೋಶದಲ್ಲಿ ಶಿಶು ಮೂಡುವಂತೆ ಮೈದೋರುತ್ತದೆ; ಬಳೆಯುತ್ತದೆ. ರಸಕೃತಿಯನ್ನು ಹೆತ್ತ ಮನಸ್ಸಿಗೇ ಅದು ಹೇಗೆ ಹುಟ್ಟಿತು? ಹೇಗೆ ಬಳೆಯಿತು? ಏಕೆ ಹುಟ್ಟಿತು? ಏಕೆ ಬಳೆಯಿತು? ಎಂಬುದು ತಿಳಿಯುವುದಿಲ್ಲ.

ಕವಿತೆ ಸುಖತಮವೂ ಶ್ರೇಷ್ಠತಮವೂ ಆಗಿರುವ ಸಮಯಗಳಲ್ಲಿ ಸುಖತಮವೂ ಶ್ರೇಷ್ಠತಮವೂ ಆಗಿರುವ ವ್ಯಕ್ತಿಗಳಿಂದ ಹೊರಹೊಮ್ಮುವ ಮಧುರ ಮಂಗಳವಾಣಿ. ನಾವು ನೋಡಿದ ದೃಶ್ಯಗಳನ್ನೊ ಅಥವಾ ವ್ಯಕ್ತಿಗಳನ್ನೊ ಕುರಿತ ಭಾವ ರಾಗ ಆಲೋಚನೆಗಳು ಕೆಲವು ಸಾರಿ ನಮ್ಮ ಬಗೆಯಲ್ಲಿ ಸುಳಿದು ಮಿಂಚುತ್ತವೆ. ಅವು ಹೇಳಿ ಕೇಳಿ ಹೊಳೆಯುವುದಿಲ್ಲ. ಹೇಳದೆ ಬಂದು ಕೇಳದೆ ಹೊರಟುಹೋಗುತ್ತವೆ. ಆದರೆ ಅವುಗಳಿಂದ ನಮಗೆ ಬಣ್ಣಿಸಲಾರದ ಆನಂದ ಆತ್ಮೋನ್ನತಿಗಳುಂಟಾಗುತ್ತವೆ. ಅವು ತೆರಳಿದಾಗಲೇ ಅವುಗಳಲ್ಲಿ ಮೋಹ ಹೆಚ್ಚುತ್ತದೆ; ಹೋದುವಲ್ಲಾ ಎಂಬ ಹಂಬಲದ ದುಃಖವೇ ಸುಖಕರವಾಗಿ ಪರಿಣಮಿಸುತ್ತದೆ. ಆ ಸೌಂದರ್ಯಾನುಭವ ಮಾನವನೆದೆಯಲ್ಲಿ ದೇವನ ಸಂಚಾರದಂತೆ. ಅದು ಕಡಲಿನ ಮೇಲೆ ಬೀಸುವ ಗಾಳಿಯಂತೆ ಬರುತ್ತದೆ. ಬಂದಾಗ ಭಾವತರಂಗಗಳೇಳುತ್ತವೆ. ಮರಳಿ ನಿಂತಾಗ ತೆರೆಗಳಡಗಿ ಶಾಂತವಾಗುತ್ತದೆ. ಆದರೆ ಗಾಳಿ ಬೀಸಿದಾಗ ಮೇಲೆದ್ದ ಅಲೆಗಳ ಗುರುತು ತೀರಿದ ತೆರೆತೆರೆಯಾದ ಮರಳಿನಲ್ಲಿ ತೋರುವಂತೆ ಈ ಅನುಭವ ಮಿಂಚಿಹೋದರೂ ಆದರ ಮುದ್ರೆ ಸ್ಮೃತಿರೂಪವಾಗಿ ನಮ್ಮೆದೆಯ ಮೇಲೆ ಬಿದ್ದೇ ಇರುತ್ತದೆ. ಯಾರ ಕಲ್ಪನಾಶಕ್ತಿ ಮಹತ್ತಾದುದೋ, ಯಾರ ಹೃದಯ ಸೂಕ್ಷ್ಮವಾದುದೋ ಅವರಲ್ಲಿ ಮಾತ್ರವೇ ಮೇಲೆ ಹೇಳಿದಂತಹ ದಿವ್ಯಾನುಭವಗಳು ಅವಿರ್ಭವಿಸುತ್ತವೆ. ಅವುಗಳಿಂದ ಪವಿತ್ರವಾದ ಸ್ವಭಾವವು ಯಾವ ದುಷ್ಟಭಾವಗಳನ್ನೂ ಹತ್ತಿರ ಬರಗೊಡಿಸುವುದಿಲ್ಲ. ಧರ್ಮಬುದ್ಧಿ, ಪ್ರೇಮ, ದೇಶಭಕ್ತಿ, ಸ್ನೇಹ ಮೊದಲಾದ ಮಹತ್ತಾದ ಭಾವಗಳೆಲ್ಲವೂ ಅಂತಹ ದಿವ್ಯಾನುಭವಜನ್ಯವಾದುವುಗಳೇ.  ಹಾಗೆ ಭಾವವಶವಾಗಿರುವಾಗ ಮನುಷ್ಯನ ಮಹದಾತ್ಮವು ಬ್ರಹ್ಮವಾಗುತ್ತದೆ; ಆಗ ಸ್ವಾರ್ಥತೆ ಎಂಬುದು ಅಣುಪ್ರಾಯವಾಗುತ್ತದೆ. ರಸಋಷಿಗಳೂ ಸೂಕ್ಷ್ಮಸ್ವಭಾವವುಳ್ಳವರೂ ಅದುದರಿಂದ ಕವಿಗಳು ಆ ದಿವ್ಯಾನುಭವಗಳನ್ನು ಪಡೆಯುತ್ತಾರೆ. ಅಷ್ಟೇ ಅಲ್ಲ, ಮಿಂಚಿ ಮಾಯಾವಾಗುವ ಆ ಅಲೌಖಿಕ ತೇಜಸ್ಸಿನಿಂದ ಜಡ ಜಗತ್ತನ್ನೂ ಬೆಳಗುತ್ತಾರೆ. ಅವರು ಒಂದು ಭಾವದಿಂದ, ಒಂದು ಬಣ್ಣನೆಯಿಂದ, ಒಂದು ನಣ್ಚರರಿಂದ, ಹಿಂದೆ ಎಂದೂ ಆ ಅನುಭವಗಳನ್ನು ಕಾಣದವರ ಎದೆಯ ತಂತಿಗಳನ್ನು ಮಿಡಿದು, ಆ ಅಪಾರ್ಥಿವ ಸುಮಧುರ ಗಾನದ ಪರಿಚಯಮಾಡಿಕೊಡಬಲ್ಲರು. ಜಡವಾಗಿ, ನಿರ್ಜಿವವಾಗಿ, ನಿದ್ದೆ ಮಾಡುತ್ತಿರುವ ಭೂತಕಾಲವು ಅವರ, ಆ ರಸಜೀವಿಗಳ, ಮಹಿಮಾಮಯ ಸ್ಪರ್ಶದಿಂದ ಸಚೇತನವಾಗಿ, ಪುನರುಜ್ಜೀವಿತವಾಗಿ ನಳನಳಿಸಿ ರಂಜಿಸಿ ನಲಿಯುತ್ತದೆ. ಕವಿತೆ ಜಗತ್ತಿನಲ್ಲಿರುವ ಸತ್ಯ ಸೌಂದರ್ಯಗಳನ್ನು ಅಮೃತವನ್ನಾಗಿ ಮಾಡುತ್ತದೆ ಹೊಳೆದು ನಿಮಿಷಮಾತ್ರದಲ್ಲಿ ಕಣ್ಮರೆಯಾಗುವ ಜೀವನದ ಉತ್ತಮಾನುಭವಗಳನ್ನು ತನ್ನ ಹದುಳತಕ್ಕೆಯಲ್ಲಿ ಸೆರೆಹಿಡಿದು, ಅವುಗಳನ್ನು ಪರಿಷ್ಕರಿಸಿ, ಅಲಂಕರಿಸಿ, ಅವುಗಳಿಗೆ ಭಾಷೆಯ ಶ್ರೀಮಂತ ಶೈಲಿಯ ಸುಂದರ ರೂಪವನ್ನು ದಯಾಪಾಲಿಸಿ, ಮಂಜುಳವಾಣಿಯನ್ನು ನೀಡಿ, ಜನತಾಲೋಕಕ್ಕೆ ಕಳುಹಿಸುತ್ತದೆ. ಆ ಜನರಲ್ಲಿ ಸಹೃದಯರಾದವರು ಅವುಗಳ ಮಧುರ ಸಂದೇಶಕ್ಕೆ ಕಿವಿಗೊಟ್ಟು ಆಲಿಸಿ ಆನಂದಪಟ್ಟು ಆದರಿಸುತ್ತಾನೆ. ಕವಿತೆ ಜಗಜ್ಜೀವನದ ಹೃದಯಮಂದಿರದಲ್ಲಿ ಅಪೂರ್ಣವಾಗಿ ಸಂಭವಿಸುವ ದೇವದೇವನ ಮಂಗಳಾಗಮನವನ್ನು ಸದಾ ಹೊಚ್ಚಹೊಸತಾಗಿರಿಸುತ್ತದೆ.

ಕವಿತೆಯ ಚುಂಬನದಿಂದ ಮಾನವನ ಅನುಭವಗಳೆಲ್ಲ ಮುದ್ದಾಗಿ ಮನೋಹರವಾಗುತ್ತವೆ. ಅದು ಸೊಬಗಿಗೆ ಸೊಬಗು ನೀಡುತ್ತದೆ. ಅತ್ಯಂತ ಕುರೂಪವಾದುದನ್ನೂ ಸಹನೀಯವಾದುದನ್ನಾಗಿ ಮಾಡುತ್ತದೆ. ಆದರ ದಿವ್ಯಸನ್ನಿಧಿಯಲ್ಲಿ ಲಲಿತ ರುದ್ರ, ಸುಖ ದುಃಖ, ಶಾಶ್ವತ ನಶ್ವರ ಎಲ್ಲವೂ ತಮ್ಮ ತಮ್ಮ ವಿರೋಧಭಾವವನ್ನು ಬಿಸುಟು ಒಂದನ್ನೊಂದು ಆಲಿಂಗಿಸುತ್ತವೆ. ಅದರ ಮಹಿಮೆಯ ಮುಂದೆ, ಅದರ ಕೋಮಲ ಮಂದಸ್ಮಿತದೆದುರು ದ್ವಂದ್ವಗಳೆಲ್ಲ ತಮ್ಮ ಪರಸ್ಪರ ಶತ್ರುತ್ವವನ್ನು ತ್ಯಜಿಸಿ ಶರಣಾಗುತ್ತವೆ. ಅದು ಮುಟ್ಟಿದರೆ ಮಟ್ಟಿ ಹೊಂಗಟ್ಟೆಯಾಗುತ್ತದೆ. ಅದರ ಸಾನ್ನಿಧ್ಯವಲಯದ ಜ್ಯೋತಿಗೆ ಸಿಕ್ಕಿಬಿದ್ದವುಗಳೆಲ್ಲ ಅದರಂತೆಯೆ ಜ್ಯೋತಿರ್ಮಯವಾಗುತ್ತವೆ. ಅದರ ಮಾಯಾಶಕ್ತಿಯ ಪ್ರಭಾವದಿಂದ ಹುಟ್ಟುಸಾವುಗಳೆಂಬ ಎರಡು ದಡಗಳ ನಡುವೆ ಹರಿಯುವ ಬಾಳಿನ ಹೊಳೆಯ ಕೊಳಕುನೀರು ಪವಿತ್ರವಾಗಿ ತೀರ್ಥಸ್ರೋತವಾಗುತ್ತದೆ; ವಿದ್ಯುದುದಕದ ಮಂಗಳ ಗಂಗೆಯಾಗುತ್ತದೆ. ಅದರ ಸ್ಪರ್ಶದಿಂದ ದೃಷ್ಟಿ ಸರ್ವದಾ ಸಚೇತನನೂತನವಾಗಿರುತ್ತದೆ. ಕವಿತೆ ಜಗತ್ತಿನ ಸ್ಥೂಲಪದಾರ್ಥಗಳ ಅಂತರಾಳದಲ್ಲಿ ಅಂತರ್ಯಾಮಿಯಾಗಿರುವ ನಗ್ನಸೌಂದರ್ಯವನ್ನು ಬಯಲಿಗೆಳೆದು ಪ್ರತ್ಯಕ್ಷವಾಗುವಂತೆ ಮಾಡುತ್ತದೆ.

ನಮ್ಮ ಕಣ್ಣಿನ ಬಣ್ಣವೇ ಎಲ್ಲ ವಸ್ತುಗಳಲ್ಲಿಯೂ ಇರುವಂತೆ ತೋರುತ್ತದೆ; ನಮ್ಮ ದೃಷ್ಟಿಯಿದ್ದಂತೆ ಜಗತ್ತು ಕಾಣುತ್ತದೆ. ಸ್ವರ್ಗನರಕಗಳನ್ನು ಕೂಡ ಮನಸ್ಸೇ ಸೃಜಿಸುತ್ತದೆ. ಆದರೆ ಕವಿತೆಯ ಸೂಕ್ಷ್ಮದೃಷ್ಟಿಗೆ ಕ್ಷಣಿಕ ತಾತ್ಕಾಲಿಕವಾದ ಅನುಭವಗಳ ಅವಿನಶ್ವರ ಅಂತರಂಗ ಗೋಚರಿಸುತ್ತದೆ. ಅತಿ ಪರಿಚಯದಿಂದ ವಸ್ತುಗಳಲ್ಲಿ ನಮಗುಂಟಾಗುವ ಅವಜ್ಞತಾರೂಪದ ಔದಾಸೀನ್ಯವನ್ನು ಪರಿಹರಿಸುತ್ತದೆ. ತನ್ನ ಸುರುಚಿರ ಯವನಿಕೆಯಿಂದ ಜಗತ್ತನ್ನು ಆವರಿಸಿ ಅಲಂಕರಿಸುವುದರಿಂದಾಗಲಿ, ಅಥವಾ ಜಗತ್ತನ್ನು ಆವರಿಸಿರುವ ತಿಮಿರಾವರಣವನ್ನು ಸುಲಿದು ತೆಗೆದೊಗೆಯುವುದರಿಂದಾಗಲಿ ನಮ್ಮ ಲೋಕದಲ್ಲಿಯೆ ನಮಗೆ ಮತ್ತೊಂದು ದಿವ್ಯತರಲೋಕ ಮೈದೋರುವಂತೆ ಮಾಡುತ್ತದೆ. ಕವಿತೆ ನಮಗೆ ತೋರುವ ಆ ಲೋಕದೆದುರು ನಮ್ಮ ದಿನಚರಿಯ ಪ್ರಪಂಚ ಒಂದು ನರಕವೆಂದೇ ಹೇಳಬಹುದು. ಕವಿತೆ ನಶ್ವರ ಜಗತ್ತಿನಲ್ಲಿ ಹುದುಗಿರುವ ಶಾಶ್ವತ ಪ್ರಪಂಚವನ್ನು ನಮಗೆ ಪ್ರದರ್ಶಿಸಿ, ನಮ್ಮ ಮನೋನಯನಗಳಿಗೆ ನಿತ್ಯನೂತನ ಜ್ಯೋತಿಯನ್ನು ನೀಡಿ, ಹಳೆತೆಲ್ಲ ಯಾವಾಗಲೂ ಹೊಸತಾಗಿರುವಂತೆ ಮಾಡುತ್ತದೆ. ದರ್ಶಿತ ಪ್ರಪಂಚವನ್ನು ಆದರ್ಶನ ಪ್ರಪಂಚವಾಗಿ ಮಾಡುತ್ತದೆ; ಆದರ್ಶನ ಪ್ರಪಂಚವನ್ನು ದರ್ಶಿತ ಪ್ರಪಂಚವನ್ನಾಗಿ ಮಾದುತ್ತದೆ. ನೋಡಿದುದನ್ನು ಅನುಭವಿಸುವಂತೆ ಮಾಡುತ್ತದೆ; ಭಾವಿಸಿದುದನ್ನು ಕಾಣುವಂತೆ ಮಾಡುತ್ತದೆ. ಭಾವವನ್ನು ಬುದ್ಧಿಯುಕ್ತವಾಗಿ ಮಾಡುತ್ತದೆ; ಬುದ್ಧಿಯನ್ನು ಭಾವಮಯವಾಗಿ ಮಾಡುತ್ತದೆ. ಹಳೆತಾಗಿ, ಹಳಸಿ, ಹಾಳಾದ ವಿಶ್ವವನ್ನು ಪುನಃ ನೂತನ ರಮಣೀಯವಾಗಿ ನಿರ್ಮಿಸುತ್ತದೆ.

ಕವಿ ಪಾಠಕರ ಭಾಗಕ್ಕೆ ಹೇಗೆ ಪರಮಜ್ಞಾನದ, ಪರಮಸುಖದ, ಉತ್ತಮ ನೀತಿಯ ಮತ್ತು ದಿವ್ಯ ಮಹಿಮೆಯ ದಾನಿಯಾಗಿರುವನೋ ಹಾಗೆಯೆ ಆತನು ಸ್ವತಃ ಪರಮ ಸುಖಿಯೂ, ಪರಮಜ್ಞಾನಿಯೂ, ಮಹಾಪುರುಷನೂ ಮತ್ತು ಆದರ್ಶಖನಿಯೂ ಆಗಿರಬೇಕು. ಆತನ ಕೀರ್ತಿಯ ಮಾತದಂತಿರಲಿ. ಆತನ ನಿರುಪಮ ಯಶಸ್ಸಿಗೆ ಕಾಲವೇ ಸಾಕ್ಷಿ! ಆತನು ಆದರ್ಶಜ್ಞಾನಿ, ಆದರ್ಶಸುಖಿ ಎಂಬ ವಿಷಯವೂ ನಿರ್ವಿವಾದುದು. ಮಹಾಕವಿಗಳೆಲ್ಲರೂ ಪರಿಶುದ್ಧಾತ್ಮರಾಗಿದ್ದರು; ದಿವ್ಯಜ್ಞಾನಿಗಳಾಗಿದ್ದರು; ಅಷ್ಟೇ ಅಲ್ಲ, ಅವರ ಅಂತರಂಗ ಜೀವನವನ್ನು ಪ್ರವೇಶಿಸಿ ನೋಡಿದರೆ ಅವರು ಪರಮಸುಖಿಗಳಾಗಿದ್ದರೆಂಬುದೂ  ವೇದ್ಯವಾಗುತ್ತವೆ. ಇದಕ್ಕೆ ಅಪವಾದಗಳಿದ್ದರೆ ಅವೂ ವಾದವನ್ನು ಪುಷ್ಟೀಕರಿಸುತ್ತವೆಯೇ ಹೊರತು ಖಂಡಿಸುವುದಿಲ್ಲ. ಮಹಾಕವಿಗಳಲ್ಲಿ ಎಲಿಯಾದರೂ ಒಂದು ವೇಳೆ ದೋಷಗಳಿದ್ದರೂ ಕೂಡ, ಆ ದೋಷಗಳು ಅವರಲ್ಲಿ ತೋರಿ ಬರುವ ಮಹಾಗುಣಗಳೆದುರು ಅಣುಮಾತ್ರವಾಗಿಬಿಡುತ್ತವೆ. ಅಂದು ತಿಮಿರದಂತಿದ್ದ ಅವರ ದೋಷಗಳು ಇಂದು ತುಷಾರದಂತೆ ಶ್ವೇತವಾಗಿ ಪರಿಣಮಿಸಿವೆ.

ಕವಿತೆಗೂ ತರ್ಕಕ್ಕೂ ಇಷ್ಟೇ ವ್ಯತ್ಯಾಸ. ತರ್ಕವು ಮಾನಸಿಕ ನಿಯಮಗಳಿಂದ ಬದ್ಧವಾಗಿರುತ್ತದೆ. ಕವಿತೆ ಆ ಕಟ್ಟುಗಳಿಗೆ ಸಿಕ್ಕುವುದಿಲ್ಲ; ಅತೀತವಾಗಿರುತ್ತದೆ. ಅದರ ಉದಯಾಸ್ತಗಳು ಇಚ್ಛಾಧೀನವಾದುವಲ್ಲ. ಯಾರಲ್ಲಿ ಕಾವ್ಯಶಕ್ತಿ ಅಥವಾ ಪ್ರತಿಭೆ ಪದೇ ಪದೇ ಮಿಂಚುವುದೋ ಅಂತಹರಲ್ಲಿ ಅದೊಂದು ಜೀವನದ ನಿಯಮವಾಗಿ ತೋರಬಹುದು; ಸಮೇದ ಹಾದಿಯಾಗಿ ತೋರಬಹುದು. ಆದರೂ, ಆವೇಶವಿಲ್ಲದಿರುವಾಗ ಕವಿ ಸಾಧಾರಣ ಮನುಷ್ಯನಾಗುತ್ತಾನೆ. ಆಗ ಆತನೂ ಇತರರಂತೆ ಸುತ್ತಣ ಸನ್ನಿವೇಶಗಳ ಪ್ರಭಾವಕ್ಕೆ ಶರಣಾಗುತ್ತಾನೆ. ಆದರೆ ಇತರರಿಗಿಂತ ಆತನದು ಸೂಕ್ಷ್ಮಪ್ರಕೃತಿಯಾಗಿರುವುದರಿಂದ, ಆತನಿಗೆ ಸುಖದುಃಖಗಳ ಅನಿಭವವು ತೀಕ್ಷ್ಣತರವಾಗಿರುವುದರಿಂದ, – ಇತರರು ಅರಿಯಲಾರದಷ್ಟು ತೀಕ್ಷ್ಣತರವಾಗಿರುವುದರಿಂದ – ಆತನು ಬಹು ಬೇಗನೆ ಅನಿತ್ಯವಾದುದನ್ನು ಅಸುಖವಾದುದನ್ನೂ ಬಿಟ್ಟು ವಿವೇಕದಿಂದ ನಿತ್ಯವಾದುದನ್ನೂ ಸುಖವಾದುದನ್ನೂ ಸಾಧಿಸಲಾರಂಭಿಸುತ್ತಾನೆ.

ಈಗ ನಮ್ಮ ನಾಡಿನ ಸಾಹಿತ್ಯಪ್ರಪಂಚದಲ್ಲಿ ಹೊಸದಿನದ ಉದಯವಾಗಿದೆ. ಮೂಡಣ ಬಾನಕರೆಯಲ್ಲಿ ಹೊಸ ಹೊಂಬೆಳಕಿನ ಚಿಲುಮೆ ಚಿಮ್ಮುತ್ತಿದೆ. ಒಣಗಿಹೋದಂತಿದ್ದ ಗಿಡಮರಬಳ್ಳಿಗಳಲ್ಲಿ ತಳಿರು ಹೂವು ಕಾಯಿ ಹಣ್ಣುಗಳನ್ನು ಹೇರುವ ನೂತನ ಚೇತನದಾಯಕನಾದ ನವ ವಸಂತ ಪ್ರಭಾತ ಸಮೀರಣನು “ಒಂದೆಡೆಯೊಳಂ ತನಗೆ ನಿಲವಿಲ್ಲದತಿವೇಗದಿಂದೆ ಪ್ರಬಲಮಾಗಿ” ಬೀಸುತ್ತಿದ್ದಾನೆ. ಸನಾತನದ ಅಂತಸ್ಸಾರವನ್ನು ಹೀರಿಕೊಂಡು ನೂತನವು ನವಜೀವನದ ಮಹೋತ್ಸವವನ್ನು ಪ್ರಾರಂಭಿಸಿರುತ್ತದೆ. ಭವಿಷ್ಯತ್ತಿನ ಜಯಗಾಥವನ್ನು ಎದೆತುಂಬಿ ಕೊರಳುತುಂಬಿ ಹಾಡುವ ತರುಣ ಕೋಗಿಲೆಗಳು ತಳಿತ ಮಾಮರಗಳಲ್ಲಿ ಉಲಿಯತೊಡಗಿವೆ. ಅಲ್ಲಲ್ಲಿ ಪ್ರತಿಭಟನೆಯ ಕರ್ಕಶವಾಣಿಗಳು ಕೇಳಿಬಂದರೂ, ಅಲ್ಲಲ್ಲಿ ಮಾತ್ಸರ್ಯವು ತಲೆಯೆತ್ತಿ ಅದ್ಯತನವಾದ ಮಹಿಮೆಯನ್ನು ಬೀಳುಗಳೆದರೂ, ಅಲ್ಲಲ್ಲಿ ಕೋಗಿಲೆಗಳ ಮಧುರಸ್ವರ ಪರಿಷತ್ತಿನಲ್ಲಿ ಗೂಬೆಗಳ ‘ಗೂ’ ದನಿಯೂ ಕೇಳಿಬರುತ್ತಿದ್ದರೂ ನಮ್ಮ ಈ ಕಾಲವು ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ಚಿರಸ್ಮರಣೀಯವಾಗುವುದರಲ್ಲಿ ಸಂದೇಹವಿಲ್ಲ.

ಭರತಖಂಡದಲ್ಲಿ ಇದೊಂದು ಮಹಾಯುಗ. ಮಹಾವ್ಯಕ್ತಿಗಳು ಮಹಾಶಕ್ತಿಗಳನ್ನು ದೇಶದ ಮೇಲೆ ಪ್ರವಹಿಸಲು ಬಿಟ್ಟಿದ್ದಾರೆ. ಮಹದ್ವ್ಯಾಪಾರಗಳು ಜರುಗುತ್ತಿವೆ. ನಮ್ಮಲ್ಲಿ ರಾಜಕೀಯ ಮತ್ತು ಧಾರ್ಮಿಕ ಸ್ವಾತಂತ್ರ್ಯಗಳಿಗಾಗಿ ಈಗ ನಡೆಯುತ್ತಿರುವ ಮಹಾಧರ್ಮಸಂಗ್ರಾಮವು ಹಿಂದೆ ನಡೆದೆಲ್ಲ ಸಂಗ್ರಾಮಗಳಿಗಿಂತ ಮಹತ್ತರವಾದುದು. ಮಹಾಭಾರತವು ಇಂದು ಮಹತ್ತರ ಭಾರತವಾಗುತ್ತಿರುವುದು! ಇಂತಹ ಸಮಯದಲ್ಲಿ ಕವಿತೆಯ ಸಾಹಾಯ ಅತ್ಯಾವಶ್ಯಕ. ಈಗ ಅದು ಪಾಂಚಜನ್ಯದಂತೆ ಕೂಗಿ ಕರೆದು ಜನರನ್ನು  ಎಚ್ಚರಗೊಳಿಸಿ ಹುರಿದುಂಬಿಸಬೇಕು; ಕೊಳಲಿನಂತೆ ಹಾಡಿ ಸಂತೈಸಿ ಸಂತೋಷಪಡಿಸಬೇಕು; ಕಿನ್ನರಿಯಂತೆ ಉಲಿದು ಗತವೈಭದ ನೆನಪು ತಂದುಕೊಡಬೇಕು;ಬರುವ ವೈಭವದ ದರ್ಶನವನ್ನು ಕಣ್ಗಳ ಮುಂದೆ ಕುಣಿಸಬೇಕು; ಮಿಂಚಿನಂತೆ ಹೊಳೆದು, ಸಿಡಿಲಿನಂತೆ ಸಿಡಿದು, ಹಕ್ಕಿಯಂತೆ ಉಲಿದು, ಹೂವಿನಂತೆ ನಲಿದು ನಮ್ಮ ರಾಷ್ಟ್ರಜೀವನವನ್ನು ಮೇಲೆತ್ತಬೆಕು. ಇಂತಹ ಶಕ್ತಿಯನ್ನು ಪಡೆದ ಪುಣ್ಯಾತ್ಮರು ತಮ್ಮ ಮಹಿಮೆಯನ್ನು ತಾವು ಅರಿಯದಿರಬಹುದು.ಆದರೂ ಅವರ ಎದೆದಾವರೆಯ ಗದ್ದುಗೆಯಲ್ಲಿ ಮಂಡಿಸಿದ ಜ್ಯೋತಿರ್ಮಯ ಶಕ್ತಿಮಯ ಪುಣ್ಯಮಯ ರಸಮಯ ಕವಿತಾಲಕ್ಷ್ಮಿ ಸರಸ್ವತಿ ಅವರ ಜೀವಿತಕಾರ್ಯವನ್ನು ಸಫಲಗೊಳಿಸದಿರುವುದಿಲ್ಲ. ಆಗಲೇ ಆ ದಿವ್ಯವಾಣಿ ಕಾರ್ಯೋನ್ಮುಖಳಾಗಿದ್ದಾಳೆ. ಪ್ರಸಿದ್ಧ ಆಧುನಿಕ ಲೇಖಕರ ರಸಕೃತಿಗಳನ್ನು ಓದಿ ಹಿಗ್ಗದಿರುವುದು ಆಸಾಧ್ಯ. ಆ ಕಬ್ಬಿಗರುಲಿಯಲ್ಲಿ ಹರಿಯುತ್ತಿರುವ ಮಿಂಚಿನ ಹೊನಲಿನಲ್ಲಿ ಮಿಂದು, ನೆತ್ತರನ್ನು ಬಿಸಿಮಾಡಿಕೊಂಡು, ಬಾಳನ್ನು ಹೊಸದುಮಾಡಿಕೊಳ್ಳದಿರಲಾಗುವುದಿಲ್ಲ. ಆ ವಿದ್ಯುದಾಗಾರಗಳು ತಮ್ಮ ಶಕ್ತಿಗೆ ತಾವೇ ಬೆಚ್ಚಬಹುದು. ಆದರೆ ಅದು ವ್ಯಕ್ತಿ ಮಾಹಾತ್ಮ್ಯೆಯಲ್ಲ; ಯುಗಶಕ್ತಿಮಾಹಾತ್ಮ್ಯೆ! ಕವಿಗಳೆಂದರೆ ಅನಿರ್ವಚನೀಯವಾದ ಆವೇಶಕ್ಕೆ ನೆಲೆಬೀಡಾಗಿರುವ ರಸಋಷಿಗಳು; ನೂತನ ವರ್ತಮಾನದ ಮೇಲೆಬಿದ್ದಿರುವ ಆಗಾಮಿಕ ಭವಿಷ್ಯತ್ತಿನ ಮಹಾ ಭೀಮ ಛಾಯೆಗಳಿಗೆ ರತ್ನದರ್ಪಣ ಸದೃಶರಾದವರು; ಹೇಳಲಸದಳವಾದುದನ್ನು ಹೇಳುತ್ತಿರುವ ವಾಣಿಗಳು; ರಣ ರಂಗದಲ್ಲಿ ಪಟುಭಟರನ್ನು ಸಮರೋನ್ಮುಖರನ್ನಾಗಿ ಮಾಡುತ್ತಿರುವ ಪಾಂಚಜನ್ಯಗಳು; ಜಗಜ್ಜೀವನಕ್ಕೆ ಚಲನಶಕ್ತಿಯನ್ನು ದಯಾಪಾಲಿಸುತ್ತಿರುವ ಅವಿಕಂಪಿತ ನಿಶ್ಚಲ ಶಕ್ತಿಗಳು!

ಕವಿಗಳೆಂದರೆ ಆಚಾರ್ಯಪಟ್ಟವಿಲ್ಲದ ಜಗತ್ತಿನ ಮಹದಾಚಾರ್ಯರು!
ಮಹಾಕವಿ ಅನಧಿಕೃತ ಶಾಸನಕರ್ತ!

೧೩೧೦೧೯೩೦


ಕಬ್ಬಿಗರು

ಸವಿನುಡಿಯ ಸಿರಿಗುಡಿಯ
ಕಟ್ಟುವರು ನಾವು;
ಹೊಂಗನಸುಗಳ ಮುಡಿಯ
ಮುಟ್ಟುವರು ನಾವು!
.  .  .  .  .  .

ನಮ್ಮ ಇಂದಿನ ಕನಸು
ನಿಮ್ಮ ನಾಳೆಯ ಮನಸು.
.  .  .  .  .  .

ಆಚಾರ್ಯತನವಿಲ್ಲ,
ನಮ್ಮದಾಚಾರ.
ಅಧಿಕಾರವೆಮಗಿಲ್ಲ,
ನಮ್ಮದಧಿಕಾರ!
.  .  .  .  .  .

ಇಂದು ನಾಳೆಯ ಮೇಲೆ
ನಾಳೆ ಇಂದಿನ ಮೇಲೆ
ಚೆಲ್ಲುತಿಹ ಛಾಯೆಗಳು,
ನಾವು ಮಾಯೆಗಳು!
.  .  .  .  .  .

ಸಂಕ್ಷಿಪ್ತ ಬ್ರಹ್ಮವೈ
ಕವಿಯ ಕೈಬುಟ್ಟಿ!
ಕಲ್ಪ ಕಲ್ಪಗಳಲ್ಲಿ
ಸಾಯುವುವು ಹುಟ್ಟಿ!

ಕುವೆಂಪು