ಸಾಮಾನ್ಯವಾಗಿ ಮನುಷ್ಯನ ಮಾನಸಿಕ ವ್ಯಾಪಾರಗಳನ್ನು ಎರಡು ವಿಧವಾಗಿ ವಿಭಾಗಿಸಬಹುದು: ಮೊದಲನೆಯದು ಬುದ್ಧಿಯ ಕ್ರಿಯೆ-ವಿಚಾರ; ಎರಡನೆಯದು ಭಾವದ ಕ್ರಿಯೆ-ಪ್ರತಿಭೆ. ಬುದ್ಧಿ ವಿಚಾರಾತ್ಮಕ; ಪ್ರತಿಭೆ ಭಾವಾತ್ಮಕ. ಬುದ್ಧಿ ಮನಸ್ಸಿನಲ್ಲಿ ಮೂಡಿಬರುವ ಅಲೋಚನೆಗಳಿಗಿರುವ ಪರಸ್ಪರ ಸಂಬಂಧಗಳನ್ನು ಕುರಿತು ವಿವೇಚಿಸುತ್ತದೆ; ಭಾವ ಆ ಆಲೋಚನೆಗಳನ್ನು ಮುದ್ದಿಸಿ, ಮೋಹಿಸಿ, ಅವುಗಳಿಗೆ ತನ್ನ ಬೆಳಕಿನಿಂದಲೆ ಬಣ್ಣ ಬಳಿದು, ಅವುಗಳಿಂದ ಇತರ ಆಲೋಚನೆಗಳನ್ನು ಪ್ರಿಯವಾಗುವಂತೆ ವಿರಚಿಸುತ್ತದೆ. ಬುದ್ಧಿಯ ಕಾರ್ಯ ವಿಶ್ಲೇಷಣೆ; ಪ್ರತಿಭೆಯದು ಸಂಯೋಜನೆ. ಬುದ್ಧಿ ವಸ್ತುಗಳಿಗಿರುವ ಸಂಬಂಧವನ್ನು ನಿಷ್ಕಾಮದೃಷ್ಟಿಯಿಂದ ಪರೀಕ್ಷಿಸುತ್ತದೆ; ಪ್ರತಿಭೆ ಪದಾರ್ಥಗಳಿಗಿರುವ ಪರಸ್ಪರ ಸಂಬಂಧಗಳನ್ನು ಸಮನ್ವಯಗೈಯಲು ಪ್ರೇಮದೃಷ್ಟಿಯಿಂದ ನಿರೀಕ್ಷಿಸುತ್ತದೆ. ಬುದ್ಧಿಯದು ತರ್ಕಗತಜ್ಞಾನದ ದೃಷ್ಟಿ; ಪ್ರತಿಭೆಯದು ವಿಶ್ವಜೀವನದ ದೃಷ್ಟಿ. ಪೂರ್ವಪರಿಚಿತ ಗುಣಗಳನ್ನು ಗಣನೆಗೆ ತಂದುಕೊಳ್ಳುವುದು ಬುದ್ಧಿ; ಸಮಷ್ಟಿದೃಷ್ಟಿಯಿಂದಲೂ ವ್ಯಷ್ಟಿ ದೃಷ್ಟಿಯಿಂದಲೂ ಆ ಗುಣಗಳಿಗೆ ಬೆಲೆಕಟ್ಟುವುದು ಪ್ರತಿಭೆ. ಬುದ್ಧಿಗಿರುವುದು ತಾರತಮ್ಯ ಲೋಲುಪತೆ; ಪ್ರತಿಭೆಗಿರುವುದು ಸಾಮ್ಯಲೋಲುಪತೆ. ಬುದ್ಧಿ ಭೇದಗಳನ್ನು ಗೌರವಿಸುತ್ತದೆ; ಪ್ರತಿಭೆ ಐಕ್ಯವನ್ನು ಆರಾಧಿಸುತ್ತದೆ. ಬುದ್ಧಿ ಆಯುಧದಂತೆ; ಪ್ರತಿಭೆ ಆಯುಧಪಾಣಿಯಂತೆ. ಬುದ್ಧಿ ದೇಹದಂತೆ, ಪ್ರತಿಭೆ ಆತ್ಮದಂತೆ; ಬುದ್ಧಿ ಪ್ರತಿಬಿಂಬದಂತೆ, ಪ್ರತಿಭೆ ಬಿಂಬದಂತೆ. ಅನುಭವಗಳನ್ನು ಪರಿಕ್ಷಿಸುವುದೆ ಬುದ್ಧಿಯ ಕಾರ್ಯ; ಅವುಗಳನ್ನು ಸುಂದರಗೊಳಿಸಿ ಅಲಂಕರಿಸುವುದೆ ಪ್ರತಿಭೆಯ ಕಾರ್ಯ.

ಕಾವ್ಯವನ್ನು “ಪ್ರತಿಭೆಯ ಪ್ರಕಾಶನ” ಎಂದು ಸಾಧಾರಣವಾಗಿ ವರ್ಣಿಸಬಹುದು. ಅದು ಮಾನವನ ಬಾಳಿನೊಡನೆ ಮೂಡಿಬಂದುದು. ಮಾನವನ ಹೃದಯ ಗಾಳಿಗೂ ಸ್ಪಂದಿಸಿ ನಿಕ್ವಣಿಸುವ ಒಂದು ಸುಸೂಕ್ಷ್ಮ ತಂತೀವಾದ್ಯದಂತೆ. ನಿಮಿಷ ನಿಮಿಷಕ್ಕೂ ಬದಲಾಯಿಸಿ ಬೀಸುವ ನವ ವಸಂತ ಸಮೀರಣದಿಂದ ಆ ‘ಕಿನ್ನರಿ’ ಹೇಗೆ ನಿರಂತರ ವಿವಿಧ ನಾದಗಳನು ದಾನಮಾಡುವುದೊ ಹಾಗೆಯೆ ಬಾಹ್ಯವಸ್ತುಗಳಿದಲೂ ಆಂತರಿಕ ಭಾವಗಳಿಂದಲೂ ತಾಡಿತವಾದ ಮಾನವನ ಅಂತಃಅಕರಣವು ನಾನಾವಿಧವಾಗಿ ಗಾನ ಮಾಡುತ್ತದೆ. ಆದರೆ ಮಾನವನ ಹೃದಯದಲ್ಲಿ ‘ಕಿನ್ನರಿ’ ಗಿಲ್ಲದಿರುವ ಒಂದು ಶಕ್ತಿಯಿದೆ. ಆ ಶಕ್ತಿ ಬಹುಶಃ ಚೇತನಾತ್ಮಕವಾಗಿರುವ ಎಲ್ಲ ಪ್ರಾಣಿಗಳಲ್ಲಿಯೂ ಇದೆಯೆಂದು ತೋರುತ್ತದೆ. ಪವನಪ್ರವಾಹದಿಂದ ಕಿನ್ನರಿಯ ತಂತಿಗಳಲ್ಲಿ ಮಧುರ ಸ್ವನಗಳು ಮಾತ್ರ ಜನಿಸುತ್ತವೆ.ಆದರೆ ಆ ಸ್ವನಸಮುದಾಯದಲ್ಲಿ ಆಂತರಿಕ ವ್ಯವಸ್ಥೆ ಇಲ್ಲದಿರಬಹುದು.ಸ್ವನ ಸಮುಚ್ಚಯವಿರಬಹುದು; ಸ್ವನ ಸಮನ್ವಯವಿರುವುದಿಲ್ಲ. ಮನುಷ್ಯನಲ್ಲಿಯಾದರೋ ಬಾಹ್ಯಾಭ್ಯಂತರ ವೃತ್ತಿಗಳ ತಾಡನದಿಂದ ಜನಿಸುವ ಸ್ವರಸಮೂಹದಲ್ಲಿ ಒಂದು ಆಂತರಿಕ ವ್ಯವಸ್ಥೆ ಇರುವುದು; ಸಾಮರಸ್ಯವಿರುವುದು; ಸಮನ್ವಯವಿರುವುದು. ಮಾನವನ ಹೃದಯವುವೀಣೆಯ ವಾಣಿಗೆ ಸರಿಯಾಗಿ ತನ್ನ ವಾಣಿಯನ್ನು ಹೊಂದಿಸಿಕೊಂಡು ಹಾಡುವ ಗಂಧರ್ವನಂತೆ. ಲೀಲೆಯಲ್ಲಿ ತೊಡಗಿರುವ ಕಿಶೋರನು ಧ್ವನಿ ಮತ್ತು ಚಲನೆಗಳಿಂದ ತನ್ನ ಆನಂದವನ್ನು ಪ್ರದರ್ಶಿಸುತ್ತಾನೆ. ಆತನ ವಾಣಿಯ ಪ್ರತಿಯೊಂದು ತಾನವೂ ಆತನ ಚಲನೆಯ ಪ್ರತಿಯೊಂದು ಭಂಗಿಯೂ ಆನಂದದಿಂದ ತುಂಬಿದ ಆತನ ಚಿತ್ತವೃತ್ತಿಗಳನ್ನು ನಿಷ್ಕೃಷ್ಟವಾಗಿ ಪ್ರತಿಬಿಂಬಿಸುತ್ತವೆ. ವೈಣಿಕನು ಕೆಳಗಿಟ್ಟ ಮೇಲೆಯೂ ವೀಣೆ ಸ್ವಲ್ಪವೆ ಕಂಪಿಸಿ ಝೇಂಕರಿಸುವಂತೆ, ಆನಂದ ಮತ್ತು ಅದಕ್ಕೆ ಕಾರಣಗಳಾದ ಚಿತ್ತವೃತ್ತಿಗಳು ಕೊನೆಗೊಂಡಮೇಲೆಯೂ ಬಾಲಕನು ಧ್ವನಿ ಮತ್ತು ಚಲನೆಗಳಿಂದ ಆನಂದ ಮತ್ತು ಆದರ ಕಾರಣಗಳ ಆಯುಃ ಪರಿಮಾಣವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾನೆ. ಆ ಆನಂದಪ್ರೇರಕವಸ್ತುಗಳಿಗೂ ಆನಂದ ಪ್ರಕಾಶನಕ್ಕೂ ಇರುವ ಸಂಬಂಧವೆ ಆವೇಶಜನಕ ವಸ್ತುಗಳಿಗೂ ಕವಿತೆಗೂ ಇರುವ ಸಂಬಂಧ. ಅನಾಗರಿಕನಾದ ಕಾಡಾಡಿ( – ವರ್ಷಾಂತರಗಳ ದೃಷ್ಟಿಗೆ ಮಗುವು ಹೇಗೋ ಮನ್ವಂತರಗಳ ದೃಷ್ಟಿಗೆ ಕಾಡಾಡಿ ಹಾಗೆ ) ಸುತ್ತಣ ಸನ್ನಿವೇಶ ತನ್ನಲ್ಲಿ ಪ್ರಚೋದಿಸಿದ ಭಾವಗಳನ್ನು ಪ್ರಕಾಶಪಡಿಸಬೇಕಾದರೆ ಮಗುವಿನಂತೆಯೆ ಆಡುತ್ತಾನೆ; ಮಾತಾಡುತ್ತಾನೆ; ಅಭಿನಯ ಮಾಡುತ್ತಾನೆ; ಅಥವಾ ಮಣ್ಣಿನಿಂದಾಗಲಿ ಬಣ್ಣದಿಂದಾಗಲಿ ಪ್ರಕೃತಿಯನ್ನು ಅನುಕರಿಸುತ್ತಾನೆ. ಇವೆಲ್ಲವುಗಳ ಸಹಾಯದಿಂದ ಸನ್ನಿವೇಶವನ್ನು ಚಿತ್ರಿಸಿ, ಭಾವವನ್ನು ಹೊರದೋರುತ್ತಾನೆ. ಸಮಾಜದಲ್ಲಿರುವಾಗ ರಾಗಸುಖಾವಿಷ್ಟನಾದ ಮಾನವನೆ ಮರಳಿ ಮನುಷ್ಯರ ರಾಗಸುಖಗಳಿಗೆ ವಿಷಯವಾಗುತ್ತಾನೆ. ಭಾವಗಳ ಸಂಖ್ಯೆ ಹೆಚ್ಚಿದಂತೆಲ್ಲ  ಭಾವವ್ಯಂಜಕಮಾರ್ಗಗಳೂ ಹೆಚ್ಚುತ್ತವೆ. ಮಾತು, ಅಭಿನಯ ಮತ್ತು ಅನುಕರಣ ಜನ್ಯಗಳಾದ ಕಲೆಗಳು ಭಾವ ಪ್ರತಿನಿಧಿಗಳೂ ಆಗಿ ಭಾವವ್ಯಂಜಕ ಮಾರ್ಗಗಳೂ ಆಗುತ್ತವೆ; ಬಣ್ಣದ ಕುಂಚಗಳೂ ಆಗಿ ಬಣ್ಣದ ಚಿತ್ರಗಳೂ ಆಗುತ್ತವೆ ಚಾಣಗಳೂ ಆಗಿ ಪ್ರತಿಮೆಗಳೂ ಆಗುತ್ತವೆ; ವೀಣೆಯ ತಂತಿಯೂ ಆಗಿ ವೀಣಾನಾದವೂ ಆಗಿ ಬಿಡುತ್ತವೆ. ಯಾವಾಗ ಮಾನವಜೀವಿಗಳಿಬ್ಬರು ಕಲೆಯುವರೊ ಆಗಲೆ ಸಂಘ ನಿರ್ಮಾಪಕಗಳಾದ ಸಾಮಾಜಿಕ ನಿಯಮಗಳು ಹೊರಹೊಮ್ಮುತ್ತವೆ. ವೃಕ್ಷವು ಬೀಜದಲ್ಲಿ ಅನನುಭೂತವಾಗಿರುವಂತೆ ಭವಿಷ್ಯತ್ತು ವರ್ತಮಾನದಲ್ಲಿ ಹುದುಗಿಕೊಂಡಿರುತ್ತದೆ; ಆಂದರೆ ಸಮಾಜವು ಬೆಳೆದಂತೆಲ್ಲ ಮುಂದೆ ಮನುಜರಲ್ಲಿ ವಿಕಾಸವಾಗಲಿರುವ ಗುಣಗಳೆಲ್ಲವೂ ಮೂಲದಲ್ಲಿಯೆ ಮೊಳೆಯುತ್ತವೆ. ಸಾಮ್ಯವೈಷಮ್ಯ ಐಕ್ಯಾನೈಕ್ಯ ಪರಸ್ಪರ ಅವಲಂಬನ ಇವೇ ಮೊದಲಾದವು ಕಾರ್ಯೋನ್ಮುಖವಾಗುವ ಸಾಮಾಜಿಕ ಜೀವಿಯ ಚಿತ್ತವೃತ್ತಿಗಳನ್ನು ನಿರ್ಧರಿಸುವ ತತ್ತ್ವಗಳಾಗುತ್ತವೆ. ಆಗ ಜೀವಿಗೆ ಇಂದ್ರಿಯಾನುಭವಗಳಿಂದ ಸುಖ ಜನಿಸುತ್ತದೆ; ಆದರ್ಶಪ್ರಿಯತೆಯಿಂದ ನೀತಿ ಮೂಡುತ್ತದೆ; ಲಲಿತ ಕಲೆಯಲ್ಲಿ ಸೌಂದರ್ಯ ತೋರುತ್ತದೆ; ವಿಚಾರದಿಂದ ಸತ್ಯ ಸಿದ್ಧಿಯಾಗುತ್ತದೆ; ಸ್ವಜಾತಿ ಸಂಗದಿಂದ ಪ್ರಣಯ ಮೈದೋರುತ್ತದೆ. ಆದ್ದರಿಂದಲೆ ಮಾನವರು ಸಮಾಜದ ಶೈಶವಾಸ್ಥೆಯಲ್ಲಿಯೂ ಕೂಡ, ತಮ್ಮ ನಡೆ ನುಡಿಗಳಲ್ಲಿ ಯಾವುದೊ ಒಂದು ಕಟ್ಟನ್ನು ಅನುಸರಿಸುವರು. ಇರಲಿ, ಸದ್ಯಕ್ಕೆ ಸಮಾಜ ನಿರ್ಮಾಪಕ ತತ್ತ್ವವಿಮರ್ಶೆಯನ್ನು ಇಲ್ಲಿಗೆ ನಿಲ್ಲಿಸಿ, ಪ್ರತಿಭೆ ರೂಪಗೊಳ್ಳುವ ರೀತಿಯನ್ನು ಪರಿಶೀಲಿಸೋಣ.

ಜಗತ್ತಿನ ತಾರುಣ್ಯಾವಸ್ಥೆಯಲ್ಲಿ ಜನರು ನೃತ್ಯಗೀತಗಳಿಂದ ತಮ್ಮ ಭಾವಗಳನ್ನು ಬಯಲಿಗೆ ಬೀರುತ್ತಾರೆ; ಪ್ರಕೃತಿಯನ್ನು ಅನುಕರಿಸುತ್ತಾರೆ. ಈ ಎಲ್ಲ ಕಾರ್ಯಗಳಲಿಯೂ ಒಂದು ತೆರೆನಾದ ಲಯನಿಯಮವನ್ನು ಅನುಸರಿಸುತ್ತಾರೆ. ಆದರೂ ನೆರೆದ ಜನರೆಲ್ಲರೂ ನೃತ್ಯದ ಚಲನೆಯಲ್ಲಾಗಲಿ, ಗೀತದ ಸ್ವರಮೆಳದಲ್ಲಾಗಲಿ, ಭಾಶೆಯ ಜೋಡಣೆಯಲ್ಲಾಗಲಿ, ಪ್ರಕೃತಿಯ ಅನಿಕರಣ ಸಮೂಹದಲ್ಲಾಗಲಿ ‘ಒಂದು’ ತೆರೆನಾದ ನಿಯಮವನ್ನು ಅನುಸರಿಸುವರೇ ಹೊರತು ‘ಒಂದೇ’ ನಿಯಮವನ್ನು ಅನುಸರಿಸುವುದಿಲ್ಲ. ಏಕೆಂದರೆ ಈ ಅನುಕರಣ ಪ್ರದರ್ಶನಗಳಲ್ಲಿ ಒಂದೊಂದು ಪಂಗಡಕ್ಕೂ ಒಂದೊಂದು ವಿಧವಾದ ಲಯ ಅಥವಾ ನಿಯಮ ಇದ್ದೇ ಇರುತ್ತದೆ. ಆದ್ದರಿಂದಲೆ ನೋಡುವವರಿಗಾಗಲಿ ಅಥವ ಕೇಳುವವರಿಗಾಗಲಿ ಇದರಿಂದ ಉಂಟಾಗುವ ಆಗಾಧ ನಿರ್ಮಲಾನಂದವು ಮತ್ತಾವುದರಿಂದಲೂ ಉಂಟಾಗುವುದಿಲ್ಲ. ಈ ಲಯಪ್ರೀತಿಯನ್ನೇ ಆಧುನಿಕ ಪಂಡಿತರು “ರುಚಿ” ಎಂದು ಕರೆದಿರುವರು. ಕಲೆ ವ್ಯಂಜನಕ್ಕೆ ಇನ್ನೂ ಶೈಶವಾಸ್ಥೆಯಲಿರುವಾಗ ಒಬ್ಬೊಬ್ಬನೂ ತನ್ನ ಉತ್ತಮೋತ್ತಮ ಆನಂದಕ್ಕೆ ತನಗೆ ಸುಲಭವಾಗುವ ಲಯಗತಿಯನ್ನೆ ಅನುಸರಿಸುತ್ತಾನೆ.ಅದರೆ ಆ ಅನುಕರಣೆಯಲ್ಲಿ ಉತ್ತಮ ಕಲೆಯಲ್ಲಿ ಅಂತರ್ಗತವಾಗಿರುವ ಮತ್ತು ಉತ್ತಮ ಪ್ರದರ್ಶನದಲ್ಲಿ ಪ್ರಕಾಶಗೊಳ್ಳಬೇಕಾದ ತಾರತಮ್ಯ ವೈವಿಧ್ಯಗಳು ಅಷ್ಟು ಸ್ಪಷ್ಟವಾಗಿ ಎಲ್ಲ ಸಂದರ್ಭಗಳಲ್ಲಿಯೂ ಕಂಡುಬರುವುದಿಲ್ಲ. ಒಂದೊಂದು ಸಲ ಮಾತ್ರ, ಎಲ್ಲಿ ಅನುಕರಣಶಕ್ತಿಯು ಸೌಂದರ್ಯವನ್ನು ಅತಿ ನಿಕಟವಾಗಿ ಹಿಂಬಾಲಿಸುವುದೊ ಅಲ್ಲಿ ಕಂಡುಬರಬಹುದು. ಏಕೆಂದರೆ ವಿಷಯಕ್ಕೂ ಆನಂದಕ್ಕೂ ಇರುವ ಕಾರ್ಯಕಾರಣ ಸಂಬಂಧವು ಸತ್ಯಸ್ಯ ಸತ್ಯವಾಗಿ ಪ್ರತಿಬಿಂಬಿಸುವುದೇ ಶ್ರೇಷ್ಠವಾದ ಕಲೆಯ ಲಕ್ಷಣ ಎಂದು ಹೇಳಬಹುದು. ಹಾಗೆ ಪ್ರತಿಬಿಂಬಿಸುವ ಶಕ್ತಿ ಯಾವಾತನಲ್ಲಿ ಹೆಚ್ಚಾಗಿರುವುದೊ ಆತನೆಯೆ “ಕವಿ” ಎಂದು, ಆ ಪದಕ್ಕೆ ವಿಶಾಲವಾಗಿ ಅರ್ಥವನ್ನು ಕಲ್ಪಿಸುವುದಾರೆ, ಹೇಳಬಹುದು. ಸಮಾಜವೂ ಪ್ರಕೃತಿಯೂ ತಮ್ಮ ಮನಸ್ಸಿನ ಮೇಲೆ ಮಾಡುವ ಪರಿಣಾಮಗಳನ್ನು ಕವಿಗಳು ಪ್ರಕಾಶಪಡಿಸುತ್ತಾರೆ. ಹಾಗೆ ಪ್ರಕಾಶಪಡಿಸುವ ರೀತಿಯಲ್ಲಿಯೇ ಸುಖದಾಯಕತ್ವ ಅಥವಾ ರಸಾನಂದ ಇರುವುದು. ಆ ರಸಸುಖವು ಸಮಾಜದಲ್ಲಿರುವ ಇತರ ವ್ಯಕ್ತಿಗಳಿಗೂ ಲಭಿಸುವುದು. ಆಗ ಆ ಆನಂದವನ್ನು ಸವಿದ ಸಮಾಜದಲ್ಲಿಯೂ ಕವಿಯ ರಸಸುಖದ ಪ್ರತಿಚ್ಛಾಯೆ ಮೊಗದೋರುತ್ತದೆ. ಕವಿಗಳ ಭಾಷೆ ಸಂಪೂರ್ಣವಾಗಿ ಆಲಂಕಾರಿಕವಾದುದು. ಅಲಾಕಾರವೇ ಆವರ ಭಾಷೆಗೆ ಪ್ರಾಣಪ್ರಾಯ. ಅಂದರೆ, ವಸ್ತುಗಳಿಗಿರುವ ‘ಪೂರ್ವಾಪರಿಚಿತ’ ಸಂಬಂಧಗಳನ್ನು ನೂತನವಾಗಿ ಹೊರೆಗೆಳೆದು ಜನರಿಗೆ ತೋರಿಸುತ್ತದೆ ಮತ್ತು ಆ ಸಂಬಂಧ ಪರಿಚಯಜ್ಞಾನವು ಶಾಶ್ವತವಾಗುವಂತೆ ಮಾಡುತ್ತದೆ. ಕಾಲಾನಂತರದಲ್ಲಿ ಆ ಉಪಮಾನಗಳು, ಆ ರೂಪಕಗಳು, ಆ ಆಲಂಕಾರಿಕ ಪ್ರಕ್ರಿಯೆಗಳು ಭಾವಗಳನ್ನು ಚಿತ್ರಗಳಿಂದ ಪ್ರತಿಬಿಂಬಿಸುವ ಕಾರ್ಯವನ್ನು ತ್ಯಜಿಸಿ, ಭಾವಭಾಗಗಳನ್ನೂ ಆಲೋಚನಾ ವರ್ಗಗಳನ್ನೂ ಸೂಚಿಸುವ ಸಂಕೇತಗಳಾಗಿಬಿಡುತ್ತವೆ. ಆಗ ಆ ಸಂಜ್ಞೆಗಳಿಗೂ ಅವುಗಳು ಹಿಂದೆ ಸೂಚಿಸುತ್ತಿದ್ದ ಭಾವಪೂರ್ಣವಾದ ಚಿತ್ರಗಳಿಗೂ ಚಿರವಿಯೋಗವುಂಟಾಗುವುದು. ಯಾವಾಗ ಉಪಮಾನ ಮತ್ತು ಅಲಂಕಾರಗಳಿಗೆ ಸಂಜ್ಞಾರೂಪವಾದ ಪದಗಳು ಅಚೇತನಾಗಿ, ನಿರ್ಜೀವವಾಗಿ, ಜಡವಾಗಿ, ಶವಸದೃಶವಾಗುವುವೋ ಆಗ ಹೊಸ ಕವಿಗಳು ಅವತರಿಸಿ ಹೊಸ ಭಾವಗಳನ್ನೂ ಹೊಸ ಚಿತ್ರಗಳನ್ನೂ ಹೊಸ ಅರ್ಥಗಳನ್ನೂ ಮನಸ್ಸಿನಲ್ಲಿ ಮೂಡುವಂತೆ ಮಾಡುವ ನೂತನ ಪದಗುಂಫನಗಳನ್ನು ನಿರ್ಮಿಸದಿದ್ದರೆ ಮಾನವನ ಉತ್ತಮೋತ್ತಮ ಉದ್ದೇಶ ಆಶಯ ಆದರ್ಶಗಳ ಭಾಗಕ್ಕೆ ಆ ಭಾಷೆ ಸತ್ತಂತೆಯೆ ಸರಿ. ಸಾಮ್ಯ ತಾರತಮ್ಯಗಳನ್ನು ಚಿತ್ರಿಸಿ ಸೂಚಿಸುವ ಪದ ಸಂಜ್ಞೆಗಳನ್ನು ಬೇಕನ್ ಮಹಾಪಂಡಿತನು “ಎಲ್ಲ ಮಾನವರ ಹೃತ್ಪಟಗಳಲ್ಲಿ ಸಂಚರಿಸುವ ಒಬ್ಬಳೇ ಒಬ್ಬ ಪ್ರಕೃತಿಮಾತೆಯ ದಿವ್ಯ ಚರಣಚಿಹ್ನೆಗಳು” ಎಂದು ಯುಕ್ತಿಯುಕ್ತವಾಗಿ ಕರೆದಿದ್ದಾನೆ. ಅಂತಹ ಚರಣಚಿಹ್ನೆಗಳನ್ನು ಗ್ರಹಿಸುವ ಶಕ್ತಿಯೇ ಎಲ್ಲ ತಿಳಿವಳಿಕೆಗೂ ಸಮಾನವಾಗಿ ಬೇಕೇಬೇಕಾಗಿರುವ ಮೂಲ ಸೂತ್ರ ಸದೃಶವಾದ ಪದಗಳ ನಿಧಿ ಎಂದು ಆತನ ಅಭಿಪ್ರಾಯ. ಸಮಾಜದ ಶೈಶವದಲ್ಲಿ ಗ್ರಂಥಕರ್ತರೆಲ್ಲರೂ ಕವಿಗಳೇ ಆಗಿರುವರು; ಏಕೆಂದರೆ ಆಗ ಜನರಾಡುವ ಭಾಷೆಯೇ ಕಾವ್ಯಭಾಷೆಯಾಗಿರುವುದು. ಹೀಗಿರುವಲ್ಲಿ ಯಾರು ಯಾರು ಸತ್ಯಸೌಂದರ್ಯಗಳನ್ನು ಗ್ರಹಿಸಲು ಸಮರ್ಥರಾಗುವರೋ; ಅಂದರೆ, ಮೊದಲು ಜ್ಞೇಯ ಮತ್ತು ಜ್ಞಾನಕ್ಕೂ, ಪ್ರಪಂಚ ಮತ್ತು ಅನುಭವಕ್ಕೂ ಇರುವ ಸಂಬಂಧದಲ್ಲಿರುವ ಶ್ರೇಯಸ್ಸನ್ನೂ; ತರುವಾಯ ಅನುಭವ ಮತ್ತು ಅದರ ಪ್ರಕಾಶನಕ್ಕೂ ಇರುವ ಸಂಬಂಧದಲ್ಲಿರುವ ಶ್ರೇಯಸ್ಸನ್ನೂ ಅರಿಯಬಲ್ಲರೋ ಅಂತಹರೆಲ್ಲರೂ ಕವಿಗಳಾಗಿಯೆ ಆಗುತ್ತಾರೆ. ಪ್ರತಿಯೊಂದು ಸ್ವತಂತ್ರ ಭಾಷೆಯನ್ನೂ ಅದರ ಮೂಲಸೃಷ್ಟಿ ಸ್ಥಾನದಲ್ಲಿ ಪ್ರಲಯಾವಸ್ಥೆಯಲ್ಲಿರುವ ಒಂದು ವಿಶ್ವಕಾವ್ಯವೆಂದೇ ಹೇಳಬಹುದು. ಲಿಪಿನಿಯಮ, ಭಾಷಾಶಾಸ್ತ್ರ, ವ್ಯಾಕರಣ, ಲಕ್ಷಣಶಾಸ್ತ್ರ ಮೊದಲಾದುವೆಲ್ಲವೂ ತರುವಾಯ ಬೆಳೆಯುತ್ತವೆ; ಅವುಗಳೆಲ್ಲ ಕಾವ್ಯಸೃಷ್ಟಿಯ ನಿಯಮಸ್ವರೂಪಗಳ ನಾಮಮಾಲೆ ಮಾತ್ರ.

ಆದ್ದರಿಂದ, ಶಾಶ್ವತ ರಸಾನುಭವ ಪ್ರಕಾಶಕರೂ ಅವಿನಶ್ವರ ಸತ್ಯ ಸೌಂದರ್ಯವೇತ್ತರೂ ಆದ ಕವಿಗಳು ಸಂಗೀತಸಾಹಿತ್ಯ ನಿರ್ಮಾಪಕರಾಗುವುದು ಮಾತ್ರವೆ ಅಲ್ಲದೆ ನಾಟ್ಯ, ಶಿಲ್ಪ, ಚಿತ್ರಕಲೆ ಮೊದಲಾದುವುಗಳ ಕರ್ತೃಗಳೂ ಆಗುವರು. ಆದಿಯಲ್ಲಿ ಸಭ್ಯಸಮಾಜಗಳನ್ನು ಸೃಜಿಸಿ ವಿಧಿ ನಿಷೇಧಗಳನ್ನು ಮಾಡಿದವರೂ ಕವಿಗಳೇ. ನಾಗರಿಕ ಜೀವನಕ್ಕೆ ಬೇಕಾದ ಪವಿತ್ರ ಭೊಗಗಳನ್ನೂ ಸುಂದರ ಲಲಿತಕಲೆಗಳನ್ನೂ ಕಂಡುಹಿಡಿದವರೂ ಅವರೇ. ಪರಮ ಸತ್ಯಸೌಂದರ್ಯಗಳ ಮಂಗಳ ಸನ್ನಿಧಿಗೆ ಅತಿ ನಿಕಟಸ್ಥರಾಗಿ ಅದೃಶ್ಯಲೋಕದ ಅನಿರ್ವಚನೀಯ ಪರತತ್ತ್ವಗಳನ್ನು ತಪಶ್ಯಕ್ತಿಯಿಂದ ಸ್ಪರ್ಶಿಸಿ, ಆ ಅಮೂಲ್ಯಾನುಭವಗಳನ್ನು ಜಗತ್ತಿಗೆ ಬೀರಿ ಮತಧರ್ಮಸ್ಥಾಪನೆ ಮಾಡಿದವರೂ ಆ ರಸ ಋಷಿಗಳೇ. ಆದ್ದರಿಂದಲೆ ಸನಾತನ ಮತಗಳೆಲ್ಲವು ಅವುಗಳ ಉಗಮಸ್ಥಾನದಲ್ಲಿ ಕೇವಲ ಪ್ರತಿಮಾತ್ಮಕವಾಗಿರುವುದು. ಇದಕ್ಕೆ ಶಂಖ ಚಕ್ರಾದಿಗಳಿಂದ ಶೋಭಿತನಾಗಿ ಕ್ಷೀರಸಮುದ್ರದಲ್ಲಿ ಫಣಿತಲ್ಪಶಾಯಿಯಾಗಿರುವ ವಿಷ್ಣುವೇ ಸಾಕ್ಷಿ; ನಗ್ನಶ್ಯಾಮೆಯೂ, ರುಂಡಮಾಲಾಮಂಡಿತೆಯೂ, ಅಷ್ಟಭುಜಾಂಕಿತೆಯೂ, ಲಲಾಟ ನೇತ್ರೆಯೂ, ರುದ್ರರಮಣಿಯ ಮಂಗಳ ಭಯಂಕರಿಯೂ ಆಗಿರುವ ಮಹಾಕಾಳಿಯೇ ಸಾಕ್ಷಿ; ಇಂದ್ರವಾಯು ಮೊದಲಾದ ಅಷ್ಟದಿಕ್ಪಾಲಕರೇ ಸಾಕ್ಷಿ; ಸ್ವರ್ಗ ನರಕಗಳೆ ಸಾಕ್ಷಿ.

ಕವಿಗಳು ಅವತಾರ ಮಾಡಿದ ಆಯಾ ಕಾಲದೇಶಗಳಿಗನುಸಾರವಾಗಿ ಆಯಾ ಜನರು ಅವರನ್ನು ಋಷಿಗಳೆಂದೂ ಧರ್ಮಗುರುಗಳೆಂದೂ ಧರ್ಮಶಾಸ್ತ್ರಜ್ಞರೆಂದೂ ಸ್ಮೃತಿ ಕರ್ತರೆಂದೂ ಶಾಸನಕಾರರೆಂದೂ ವಿಧಿಪ್ರತಿನಿಧಿಗಳೆಂದೂ ನ್ಯಾಯ ವಿಧಾಯಕರೆಂದೂ ಪ್ರವಾದಿಗಳೆಂದೂ ನಾನಾ ಹೆಸರುಗಳಿಂದ ಕರೆದರು. ಪರಿಶೀಲಿಸಿ ನೋಡಿದರೆ ಕವಿಯಲ್ಲಿ ಈ ಗುಣಗಳೆಲ್ಲವೂ ಹುದುಗಿರುತ್ತವೆ. ಏಕೆಂದರೆ ಕವಿಯ ನಿರ್ಮಲ ಸೂಕ್ಷ್ಮದೃಷ್ಟಿಗೆ ವರ್ತಮಾನದ ಅಂತರಂಗವು ಕಂಡುಬರುವುದರಿಂದ ಆ ಕಾಲಕ್ಕೆ ಅತ್ಯಾವಶ್ಯಕವಾಗಿ ಬೇಕಾದ ಧರ್ಮಗಳನ್ನು ಆತನು ಕಂಡುಹಿಡಿದು ನಿರೂಪಿಸುವನು; ವರ್ತಮಾನದಲ್ಲಿ ಭವಿಷ್ಯತ್ತನ್ನು ದರ್ಶಿಸುವನು; ಅಲ್ಲದೆ ಆತನ ಆಲೋಚನೆಗಳು ಪುರಾತನದ ಗರ್ಭದಿಂದ ಮೂಡಿಬಂದಿರುವ ಸುಜ್ಞಾನವೃಕ್ಷದ ಸಮಫಲ ಸದೃಶವಾಗಿರುವುವು. ಅಂದರೆ ಕವಿಗಳು ಭವಿಷ್ಯವಾದಿಗಳೆಂದಾಗಲಿ, ಭವಿಷ್ಯದ ಆತ್ಮವನ್ನು ಕುರಿತು ನುಡಿಯುವರಲ್ಲದೆ ಅದರ ನಿಷ್ಕೃಷ್ಟವಾದ ರೂಪವನ್ನು ಕುರಿತೂ ಕಣಿ ಹೇಳುವರೆಂದಾಗಲಿ ಸ್ಥೂಲಾರ್ಥಕಲ್ಪನೆ ಮಾಡಬಾರದು. ಭವಿಷ್ಯವಾದವು ಕವಿತೆಗೊಂದು ವಿಶೇಷಣಮಾತ್ರವಲ್ಲದೆ ಕವಿತೆಯೇ ಭವಿಷ್ಯವಾದಕ್ಕೊಂದು ವಿಶೇಷಣವೆಂದು ತಿಳಿಯಬಾರದು. ಹಾಗೆ ತಿಳಿಯುವುದು ಮುರ್ಖತೆಗೊಂದು ಹೆಗ್ಗುರುತಾಗುತ್ತದೆ. ಕವಿ ನಿತ್ಯವೂ ಅನಂತವೂ ಅದ್ವೈತವೂ ಆಗಿರುವ ಮಹಾ ಜಗದಾದಿ ವ್ಯಕ್ತಿತ್ವದ ಒಡನಾಡಿ; ಆದ್ದರಿಂದ ಆತನ ಭಾವಪ್ರಪಂಚದ ಮಟ್ಟಿಗಾದರು ಸ್ವಲ್ಪ ಹೆಚ್ಚುಕಡಿಮೆ ಕಾಲದೇಶಾನೈಕ್ಯಗಳಿಲ್ಲ. ಕಾಲ ದೇಶ ಮತ್ತು ಜನಸೂಚಕವಾದ ವ್ಯಾಕರಣ ನಿಯಮಗಳನ್ನು ಸ್ವಲ್ಪ ಬದಲಾಯಿಸಿಬಿಟ್ಟರೆ ಪ್ರಪಂಚದ ಯಾವ ಭಾಗದಲ್ಲಿಯೆ ಆಗಲಿ ಇರುವ ಶ್ರೇಷ್ಠತಮ ಕಾವ್ಯಗಳು ಸರ್ವಕಾಲ ಸರ್ವದೇಶ ಸರ್ವಜನ ಸಮ್ಮತವಾಗಿಬಿಡುತ್ತವೆ. ಇದರ ನಿಜಾಂಶ ರಾಮಾಯಣ, ಮಹಾಭಾರತ, ವೈಷ್ಣವ ಕೀರ್ತನೆಗಳೆ ಮೊದಲಾದ ಸರ್ವಾದರಣೀಯವಾದ ಕಾವ್ಯಗಳನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಗೊತ್ತಾಗುತ್ತದೆ; ಪಾಶ್ಚಾತ್ಯ ಮಹಾ ಕಾವ್ಯಗಳಲ್ಲಿ ಗ್ರೀಕ್ ಕವಿಗಳ ಪ್ರಗಾಥಗಳು, ಡಾಂಟೆಯ ಮಹಾಕಾವ್ಯ “ದಿವೈನ್‌ ಕಾಮೆಡಿ” ಮೊದಲಾದ ಉದ್ಗ್ರಂಥಗಳು ಮೇಲೆ ನಿರೂಪಿಸಿದ ತತ್ತ್ವ ಸಮರ್ಥನೆಗೆ ನಿದರ್ಶನಗಳಾಗುತ್ತವೆ. ಅದರಲ್ಲಿಯೂ ಕಾವ್ಯಗಳನ್ನು ಬಿಟ್ಟು ಶಿಲ್ಪ ಚಿತ್ರಕಲೆ ಸಂಗೀತ ಇವುಗಳನ್ನು ಉದಾಹರಣೆಗಳಾಗಿ ತೆಗೆದುಕೊಂಡರೆ ಪೂರ್ವೋಕ್ತ ಪ್ರತಿಪಾದನೆಯನ್ನು ಇನ್ನೂ ವಿಶದವಾಗಿ ಮನಗಾಣಬಹುದು.

ಭಾಷೆ, ವರ್ಣ, ರೂಪ, ಮತಾಚಾರ, ದೇಶಾಚಾರ ಇವುಗಳೆಲ್ಲ ಕವಿತೆಗೆ ಉಪಾದಾನ ಮತ್ತು ನಿಮಿತ್ತಕಾರಣಗಳು; ಕಾರ್ಯಕಾರಣಗಳ ಪರ್ಯಾಯತ್ವವನ್ನು ಹೇಳುವ ಅಲಂಕಾರವನ್ನು ಅನುಸರಿಸುವುದಾದರೆ ಅವುಗಳನ್ನೆಲ್ಲ ಕವಿತೆಯೆಂದು ಕರೆದುಬಿಡಬಹುದು. ಆದರೆ ಕವಿತೆ ಎಂಬ ಪದಕ್ಕೆ ಅಷ್ಟೊಂದು ವಿಶಾಲವಾದ ಅರ್ಥವಲಯವಿಲ್ಲ. ಮಾನವನ ಎದೆದಾವರೆಯ ಗದ್ದುಗೆಯಲ್ಲಿ ತೆರೆಮರೆಯ ಹಿಂದೆ ಕುಳಿತಿರುವ ಆ ಸಾರ್ವಭೌಮಿಕ ಶಕ್ತಿಯಿಂದ ನಿರ್ಮಿತವಾದ ಸುವ್ಯವಸ್ಥಿತ ಭಾಷೆಗೆ, ಅದರಲ್ಲಿಯೂ ಛಂದೋಬದ್ಧವಾದ ಭಾಷೆಗೆ ಮಾತ್ರ ಸಾಮಾನ್ಯವಾಗಿ ಕವಿತೆ ಎಂದು ಹೆಸರಿದೆ. ಛಂದಸ್ಸು ಭಾಷೆಯ ಸ್ವಭಾವದಿಂದಲೇ ಸ್ವಯಂ ಸಿದ್ಧವಾಗಿ ಮೈದೋರುವುದು. ಏಕೆಂದರೆ ನಮ್ಮ ಮಾನಸಿಕ ವ್ಯಾಪಾರಗಳನ್ನೂ ಆಂತರಿಕ ರಾಗಗಳನ್ನೂ ಇದ್ದಹಾಗೆಯೆ ಪ್ರಕಾಶಪಡಿಸುವ ಸೌಲಭ್ಯವು ಭಾಷೆಗಿರುವಂತೆ ಶಿಲ್ಪ ನಾಟ್ಯ ಚಿತ್ರಕಲೆಗಳಿಗಿರುವುದಿಲ್ಲ. ವರ್ಣ ರೂಪ ಚಲನೆಗಳಿಗಿಂತಲೂ ಭಾಷೆಯಲ್ಲಿ ಹೆಚ್ಚು ವೈವಿಧ್ಯವಿರುವುದು, ಹೆಚ್ಚು ಸೂಕ್ಷ್ಮತೆ ಇರುವುದು. ಅಲ್ಲದೆ ಭಾಷೆ ತನ್ನನ್ನು ನಿರ್ಮಾಣ ಮಾಡುವ ಶಕ್ತಿಗೆ ಇತರ ಎಲ್ಲ ಕಲಾವಿಧಾನಗಳಿಗಿಂತಲೂ ಹೆಚ್ಚು ವಿಧೇಯತೆಯಿಂದಿರುವುದು; ಅಂದರೆ, ಮನುಷ್ಯನಿಗೆ ಭಾಷೆ ಹತೋಟಿಯಲ್ಲಿರುವಂತೆ ವರ್ಣ ರೂಪ ಅಭಿನಯಗಳು ಹತೋಟಿಯಲ್ಲಿರುವುದಿಲ್ಲ. ಏಕೆಂದರೆ ಭಾಷೆ ಪ್ರತಿಭೆಯಿಂದ ಸ್ವಯಂಪ್ರಕಾಶಿತವಾಗಿ ಮೂಡಿಬಂದುದು; ‘ಕವಿಕಲ್ಪನೆ’ಗೆ ಮಾತ್ರ ಅದರ ಸಂಬಂಧವಿರುವುದು; ಆಲೋಚನೆಗೆ ಮಾತ್ರ ಅದು ವಶವರ್ತಿ. ಆದರೆ ಇನ್ನುಳಿದ ಕಲಾಸಾಮಗ್ರಿಗಳಲ್ಲಿ, ಕರ್ಮೋಪಕರಣಗಳಲ್ಲಿ ಮತ್ತು ಕಲೋಪಾಧಿಗಳಲ್ಲಿ ಪರಸ್ಪರ ಬಾಹ್ಯಸಂಬಂಧಗಳಿರುವುದರಿಂದ ಅವು ಪರತಃ ಪ್ರಕಾಶಿತವಾದುವು. ಅಂದರೆ ಪ್ರತಿಭೆಗೂ ಭಾಷೆಗೂ ಇರುವ ನಿಕಟ ಮೈತ್ರಿ ಪ್ರತಿಭೆಗೂ ಇತರ ಕಲೆಗಳಿಗೂ ಇರುವುದಿಲ್ಲ. ಹೇಗೆಂದರೆ, ಭಾವವನ್ನು ಭಾಷೆಯಿಂದ ಸುಲಭವಾಗಿ ಶೀಘ್ರವಾಗಿ ಪ್ರಕಾಶಪಡಿಸುವಂತೆ ವರ್ಣ ರೂಪಾಭಿನಯಗಳಿಂದ ಪ್ರದರ್ಶಿಸಲಾಗುವುದಿಲ್ಲ. ಏಕೆಂದರೆ, ಭಾವಕ್ಕೂ ಭಾವಪ್ರಕಾಶನಕ್ಕೂ ಭಾಷೆಯಲ್ಲಿ ಹೆಚ್ಚು ಅಂತರವಿರುವುದಿಲ್ಲ; ಇರುವ ಅಂತರವೂ ಬಹು ಸೂಕ್ಷ್ಮವಾದುದು. ಆದರೆ ಅದೇ ಭಾವಕ್ಕೂ ಅದೇ ಭಾವ ಪ್ರದರ್ಶನಕ್ಕೂ ಶಿಲ್ಪನಾಟ್ಯ ಚಿತ್ರಕಲೆಗಳಲ್ಲಿ ಸ್ವಲ್ಪ ಹೆಚ್ಚು ಅಂತರವಿರುವುದು; ಇರುವ ಅಂತರವೂ ಒಂದಿನಿತು ಸ್ಥೂಲವಾದುದು. ಕೆಲವು ಸಾರಿ ಭಾವದೊಂದಿಗೇ ಪದವೂ ಮೂಡುತ್ತದೆ; ಪದದೊಂದಿಗೇ ಅರ್ಥ ತಲೆದೋರುತ್ತದೆ. ಸೂರ್ಯೋದಯದ ವರ್ಣನೆ ಮಾಡುವಷ್ಟು ಸುಲಭಶೀಘ್ರವಾಗಿ ಸೂರ್ಯೋದಯದ ಚಿತ್ರ ಬರೆಯಲಾಗುವುದಿಲ್ಲ. ಭಾಷೆ ಜ್ಯೊತಿಯನ್ನು ಪ್ರತಿಬಿಂಬಿಸುವ ದರ್ಪಣದಂತೆ; ಇತರ ಕಲಾಮಾರ್ಗಗಳು ಜ್ಯೋತಿಯನ್ನು ಒಳಕೊಂಡು ಅದನ್ನಿನಿತು ಮಬ್ಬುಗೈಯುವ ಮೇಘದಂತೆ. ಇತರ ಕಲೆಗಳಿಗಿರುವಂತೆ ಭಾಷೆಗೆ ತೊಡಕುಗಳಿಲ್ಲ; ಅಲ್ಲದೆ ಸ್ವಲ್ಪ ಅಸಹಾಯ ಶೂರತ್ವವೂ ಇರುವುದು. ಕಾವ್ಯಕಲೆ ಇತರ ಕಲೆಗಳಷ್ಟು ಬೇಗನೆ ಮುದಿಯಾಗುವುದಿಲ್ಲ. ಆದ್ದರಿಂದಲೆ ಕವಿಗಳ ಪ್ರತಿಭೆಗೆ ಯಾವ ವಿಧದಲ್ಲಿಯೂ ಬಿಟ್ಟುಕೊಡದಂತಹ ಪ್ರತಿಭಾಶಾಲಿಗಳಾದ ಶಿಲ್ಪಿ ಮತ್ತು ವರ್ಣಶಿಲ್ಪಿಗಳಿದ್ದರೂ ಅವರ ಕೀರ್ತಿ ಕವಿಗಳ ಕೀರ್ತಿಗೆ ಸರಿಸಾಟಿಯಾಗಿ ಬಂದಿಲ್ಲ. ವೀಣೆ ಮತ್ತು ಕಿನ್ನರಿಗಳನ್ನು ಹಿಡಿದು ಸರಿಸಮನಾದ ಪ್ರತಿಭೆಯುಳ್ಳ ಇಬ್ಬರು ಗಾಯಕರು ಗಾನ ಮಾಡಿದರೆ, ಕಿನ್ನರಿ ಹಿಡಿದವನು ವೀಣೆ ಹಿಡಿದವನಿಗೆ ಎಂದಿಗೂ ಸರಿಬರಲಾರನು. ಕವಿಗಳಿಗಿಂತ ಹೆಚ್ಚಿನ ಕೀರ್ತಿವಂತರೆಂದರೆ ಮತಸ್ಥಾಪಕರು ಮತ್ತು ರಾಷ್ಟ್ರನಿರ್ಮಾಣಕರು ಎಂದು ತೋರುತ್ತದೆ. ಅದೂ ಕೂಡ, ಅವರು ನಿರ್ಮಿಸಿದ ಸಂಸ್ಥೆಗಳು ಬದುಕಿರುವವರೆಗೆ ಮಾತ್ರವೆ ಅವರ ಯಶಃಕಾಂತಿ ದೇದೀಪ್ಯಮಾನವಾಗಿರುತ್ತದೆ. ಅಷ್ಟೇ ಅಲ್ಲದೆ ಅವರು ಸರ್ವಮತ ಪೂಜ್ಯರೂ ಸರ್ವ ರಾಷ್ಟ್ರಮಾನ್ಯರೂ ಆಗಿರುವುದು ದುರ್ಲಭ. ಈ ದೃಷ್ಟಿಯಿಂದ ನೋಡಿದರೆ ಸರ್ವತ್ರ ಸರ್ವದಾ ಸರ್ವಮಾನ್ಯವಾಗಿರುವ ಕವಿಗಳ ಕೀರ್ತಿಯೆ ಮಿಗಿಲಾಗುವುದೆಂದು ತಿಳಿಯಬಹುದು.

ಅಂತೂ ಕವಿತೆ ಎಂಬ ಪದದ ಅರ್ಥಕ್ಕೆ ಒಂದು ಮೇರೆಯನ್ನು ರಚಿಸಿದಂತಾಯಿತು. ಕವಿತೆ ಎಂದರೆ ಎಲ್ಲರಿಗೂ ಪರಿಚಯವಿರುವ ಸಾಹಿತ್ಯಕಲೆ; ಅದು ಮೈಗೊಂಡ ಸ್ವಯಂ ಪ್ರತಿಭೆಯ ಸಂಪೂರ್ಣ ಮತ್ತು ಶ್ರೇಷ್ಠತಮ ಪ್ರಕಾಶನ. ಆ ಅರ್ಥದ ಮೇರೆಯನ್ನು ಇನ್ನೂ ಕಿರಿದಾಗಿ ಮಾಡುವುದು ಆವಶ್ಯಕ. ಛಂದೋಬದ್ಧವಾದ ಭಾಷೆಗೂ ಛಂದಸ್ಸಿಲ್ಲದ ಭಾಷೆಗೂ ಇರುವ ಪ್ರಭೇದವನ್ನು ನಿರ್ಣಯಿಸಬೇಕು. ಏಕೆಂದರೆ ಜನಸಾಮಾನ್ಯರಲ್ಲಿ ಪ್ರಚುರವಾಗಿರುವ ಗದ್ಯಪದ್ಯಗಳೆಂಬ ವಿಭಾಗವು ಶಾಸ್ತ್ರರಿತಿಯಿಂದ ಸಾಧುವಲ್ಲ.

ಪದ ಮತ್ತು ಅರ್ಥಗಳಿಗೆ ಪರಸ್ಪರ ಸಂಬಂಧವಿರುವುದಲ್ಲದೆ ಅವುಗಳು ನಿರ್ದೇಶಿಸುವ ವಸ್ತುಗಳಿಗೂ ಸಂಬಂಧವಿರುವುದು. ಈ ಸಂಬಂಧದ್ವಯದ ನಿಯಮಕ್ರಮದ ಜ್ಞಾನವೂ, ಅವುಗಳು ಪ್ರತಿಬಿಂಬಿಸುವ ಆಲೋಚನೆಗಳ ಸಂಬಂಧದ ನಿಯಮಕ್ರಮದ ಜ್ಞಾನವೂ ಯಾವಾಗಲೂ ಜತೆಗೂಡಿರುವುವು. ಆದ್ದರಿಂದಲೆ ಕವಿಗಳ ಭಾಷೆಯಲ್ಲಿ ಒಂದು ವಿಧವಾದ ನಾದಕ್ರಮವೂ ಲಯನಿಯಮವೂ ಯಾವಾಗಲೂ ಇದ್ದೇ ಇರುತ್ತದೆ. ಇರದೆಯಿದ್ದರೆ ಅದನ್ನು ಕವಿತೆ ಎಂದು ಕರೆಯಲಾಗದು. ಏಕೆಂದರೆ ಪದಗಳು ಎಷ್ಟು ಮುಖ್ಯವೋ ಪದಪ್ರಕಾಶನ ಕ್ರಮವೂ ಅಷ್ಟೆ ಮುಖ್ಯವಾದುದು; ಲಯಬದ್ಧವಾದ ಪದಗಳಲ್ಲಿ ಒಂದು ವಿಧವಾದ ಸಂಮೋಹಿನೀ ಶಕ್ತಿಯಿರುವುದು. ಆದ್ದರಿಂದಲೆ ಭಾಷಾಂತರಗಳು ಮೂಲಕಾವ್ಯದ ಓಜಸ್ಸನ್ನು ಪ್ರತಿಫಲಿಸಲರಿಯದೆ ಸೋತು ತಲೆಬಾಗುತ್ತವೆ. ಕೆಂದಾವರೆಯೊಂದನ್ನು ಮೂಷೆಯಲ್ಲಿಟ್ಟು ಕಾಯಿಸಿ ಅದರ ವರ್ಣಸುವಾಸನೆಗಳ ಮೂಲತತ್ತ್ವವನ್ನು ಕಂಡುಹಿಡಿಯುವುದು ಎಷ್ಟು ಸಾರ್ಥಕವೋ, ಕವಿಕೃತ ಕಾವ್ಯದ ಮಾಧುರ್ಯವನ್ನು ಭಾಷಾಂತರ ಮಾಡುವುದೂ ಅಷ್ಟೇ ಸಾರ್ಥಕ. ಬೀಜದಿಂದ ಬಳ್ಳಿ ಮೂಡಿ ಅದರಿಂದ ಹೂವು ಬಿಡಬೇಕೇ ಹೊರತು, ಹೂವನ್ನು ಬೇರೆ ಯಾವ ವಿಧದಿಂದಲೂ ತಯಾರು ಮಾಡುವುದು ಅಸಾಧ್ಯ.

ಕವಿಗಳ ಭಾಷೆಯಲ್ಲಿ ಯಾವಾಗಲೂ ತೋರಿಬರುವ ಒಂದು ಲಯನಿಯಮವನ್ನೂ ಅದಕ್ಕೆ ಸಂಬಂಧಪಟ್ಟ ನಾದ ನಿಯಮವನ್ನೂ ಪರಿಶೀಲಿಸಿದುದರ ಫಲವಾಗಿ ಛಂದಸ್ಸು ಹುಟ್ಟಿತು. ಛಂದಸ್ಸು ಎಂದರೆ ಪೂರ್ವದಿಂದಲೂ ಜನರ ಅನುಭವಕ್ಕೆ ಬಂದಿರುವ ಒಂದು ವಿಧವಾದ ಸ್ವರನಿಯಮ ನಿಷ್ಠೆಯುಳ್ಳ ಭಾಷಾಪದ್ಧತಿ. ಆದರೆ ಕವಿಯಾದವನು ಹಿಂದಿನಿಂದ ಬಂದ ಛಂದೋರೂಪಗಳನ್ನೇ ಅನುಸರಿಸಬೇಕೆಂಬ ನಿಯಮವಿಲ್ಲ; ಛಂದಸ್ಸಿನ ಆತ್ಮವನ್ನು ಸಾಕ್ಷಾತ್ಕಾರಮಾಡಿಕೊಂಡು ತನ್ನ ಪ್ರತಿಭೆಗೆ ಯೋಗ್ಯವಾದ ಬೇರೆ ಬೇರೆ ರೂಪಗಳನ್ನು ನಿರ್ಮಿಸಬಹುದು. ಹಿಂದಿನ ರೂಪಗಳೇನೋ ಅನುಸರಿಸಲು ಸುಲಭವಾದುವು; ಸರ್ವ ಜನರ ಆದರಕ್ಕೆ ಪಾತ್ರವಾದುವು; ಅದರಲ್ಲಿಯೂ ಕಥಾಮಯವಾದ ಪುರಾಣಗಳನ್ನು ಬರೆಯುವಾಗ ಹಿಂದಿನ ಛಂದೋರೂಪಗಳನ್ನೇ ಅನುಸರಿಸುವುದು ಲೇಸು. ಆದರೆ ಪ್ರತಿಯೊಬ್ಬ ಮಹಾಕವಿಯಾದವನೂ ತನ್ನ ಪ್ರತಿಭೆಗೆ, ತನ್ನ ರಚನಾಶಕ್ತಿಗೆ ತಕ್ಕಂತೆ ಪೂರ್ವಕವಿಗಳ ಕಾವ್ಯರೂಪಗಳನ್ನು ಅವಶ್ಯವಾಗಿ ಮಾರ್ಪಡಿಸಿಕೊಂಡೇ ಮುಂಬರಿಯಬೇಕು. ಕವಿಗಳಿಗೂ ಗದ್ಯಕರ್ತೃಗಳಿಗೂ ನಾವು ಮಾಡಿಕೊಡಿರುವ ಭೇದ ಕೃತಕವಾದುದು. ಕವಿಗಳಿಗೂ ದರ್ಶನಕಾರರಿಗೂ ಹಿಂದೆಯೇ ಭೇದಕಲ್ಪನೆಯಾಯಿತು. ತತ್ತ್ವದರ್ಶಿಯಾಗಿದ್ದ ಪ್ಲೇಟೋಮಹಾಶಯನು ಸ್ವಭಾವಿತಃ ಕವಿಯಾಗಿದ್ದನು. ಆತನ ತತ್ತ್ವಗಳಲ್ಲಿ ಮಿಂಚುವ ಸತ್ಯವೂ, ಆತನ ಭಾವಗಳಲ್ಲಿ ಪ್ರಜ್ವಲಿಸುವ ತೇಜಸ್ಸೂ, ಆತನ ಭಾಷೆಯಲ್ಲಿ ನಲಿಯುವ ಸ್ವರಮಾಂಜುಳ್ಯವೂ ಅನ್ಯಾದೃಶವಾದುವು. ಆತನು ತನ್ನ ಬರವಣಿಗೆಯಲ್ಲಿ ಪುರಾಣ ನಾಟಕ ಕವನ ರೂಪಗಳನ್ನು ನಿರಾಕರಿಸಿದನು; ಏಕೆಂದರೆ, ಪೂರ್ವಪರಿಚಿತಗಳಾದ ರೂಪ ಮತ್ತು ಕಥೆಗಳ ನೆರವಿಲ್ಲದೆ ತನ್ನ ಉನ್ನತಾಲೋಚನೆಗಳಲ್ಲಿಯೆ ಸ್ವರನಿಯಮಕಲ್ಪನೆಮಾಡಲು ಆತನು ಎಳಸಿದನು; ಅಲ್ಲದೆ ತನ್ನ ಶೈಲಿಯ ವಿವಿಧ ಯತಿನಿಯಮಗಳನ್ನು ಒಳಕೊಳ್ಳುವಂತಹ ನಿರ್ಣಿತ ಛಂದೋರೂಪವೊಂದನ್ನು ತಯಾರುಮಾಡಲು ಆತನು ಇಷ್ಟಪಡಲೂ ಇಲ್ಲ. ಸಿಸಿರೋ ಎಂಬ ವಾಗ್ಮಿ ಆತನ ಶೈಲಿ ಯತಿಗತಿ ಗಾಂಭೀರ್ಯವನ್ನು ಅನುಕರಿಸಲು ಪ್ರಯತ್ನಮಾಡಿದನು; ಆದರೆ ಜಯಶೀಲನಾಗಲಿಲ್ಲ. ಲಾರ್ಡ್ ಬೇಕನ್ ಮಹಾಶಯನು ಕವಿಯಾಗಿದ್ದನು. ಆತನ ಶೈಲಿಯಲ್ಲಿ ಮಧುರ ಗಂಭೀರ ಛಂದೋವಿಲಾಸವಿದೆ. ಆತನ ಅಪಾರ ತತ್ತ್ವಜ್ಞಾನ ನಮ್ಮ ಮನಸ್ಸಿಗೆ ಹಿತವಾಗಿರುವಂತೆಯೇ ಶೈಲಿಯ ಮಾಧುರ್ಯವೂ ನಮ್ಮೆದೆಗೆ ಪ್ರಿಯವಾಗಿರುವುದು. ಹಾಗೆಯೇ ಕ್ರಾಂತಿಯುಗದ ಗ್ರಂಥಕರ್ತರೆಲ್ಲರ ಗದ್ಯ ಶೈಲಿಯಲ್ಲಿಯೂ ಪದ್ಯ ಶೈಲಿಯಲ್ಲಿ ಕಂಡುಬರುವ ಸ್ವರನಿಯಮಗಳೂ ಯತಿವಿನ್ಯಾಸಗಳೂ ಛಂದೋವಿಲಾಸಗಳೂ ಅಡಕವಾಗಿವೆ. ಛಂದಸ್ಸೆಂದರೇನು? ಅನಾದಿಯಾದ ಅನಾಹತ ಧ್ವನಿಯ ಪ್ರತಿಧ್ವನಿ! ಹೀಗೆ ಹೇಳುವುದರಿಂದ ಹಿಂದಿನ ರೂಪಗಳನ್ನೆ ಹಿಡಿದು ಬರೆದವರು ಅದನ್ನು ಬಿಟ್ಟು ಬರೆದವರಿಗಿಂತ ತತ್ತ್ವದರ್ಶನದಲ್ಲಾಗಲಿ ತತ್ತ್ವಬೋಧೆಯಲ್ಲಾಗಲಿ ಕಡಮೆ ಎಂದು ನಮ್ಮ ಅಭಿಪ್ರಾಯವಲ್ಲ. ಷೇಕ್ಸ್ಪಿಯರ್, ಡಾಂಟೆ, ಮಿಲ್ಟನ್ ಮೊದಲಾದ ಮಹಾ ಕವಿಗಳು ಉತ್ತಮೋತ್ತಮ ತತ್ತ್ವದರ್ಶಿಗಳೂ ಹೌದು.

ಕವಿತೆಯೆಂದರೆ ನಿತ್ಯ ಶಾಶ್ವತ ಜೀವನದ ಪರಿಪೂರ್ಣ ಪ್ರತಿಬಿಂಬ. ಕವಿತೆಗೂ ಕತೆಗೂ ಇರುವ ವ್ಯತ್ಯಾಸವೂ ಇದೇ. ಕಥೆ ಎಂದರೆ ಕಾಲ ದೇಶ ಸನ್ನಿವೇಶ ಕಾರಣ ಕಾರ್ಯಗಳ ಕ್ರಮವನ್ನು ಅನುಸರಿಸಿರುವ ಘಟನೆಗಳ ಒಂದು ಪಟ್ಟಿ. ಕವಿತೆ ಎಂದರೆ ಸರ್ವಮನಸ್ಸುಗಳ ಪ್ರತಿನಿಧಿಸ್ವರೂಪವೂ ನಿಧಿಸ್ವರೂಪವೂ ಆಗಿರುವ ಕವಿಮನಸ್ಸಿನಲ್ಲಿ ನೆಲೆಸಿರುವ ಮಾನಸ್ವಭಾವದ ಸ್ಥಿರ ನಿಶ್ಚಲ ನಿಯಮಗಳಿಗನುಸಾರವಾಗಿ ಜಗತ್ತಿನಲ್ಲಿ ಸಂಘಟಿಸುವ ಘಟನಾಸಾಮಗ್ರಿಯಿಂದ ಹೊರಹೊರಮ್ಮುವ ಒಂದು ಕಲಾಕಾರ್ಯ. ಕಥೆ ಅಪೂರ್ಣವಾದುದು; ಪರಿಮಿತ ಕಾಲಕ್ಕೆ ಮಾತ್ರ ಅನ್ವಯಿಸತಕ್ಕುದು; ಮುಂದೆಂದೂ ನಡೆಯಲರಿಯದ  ಘಟನಾಕ್ರಮವುಳ್ಳುದು. ಕವಿತೆ ಪೂರ್ಣವಾದುದು; ಅದು ಮಾನವ ಸ್ವಭಾವದ ವೈವಿಧ್ಯಗಳಿಂದ ಸಾಧ್ಯವಾಗಬಹುದಾದ ಎಲ್ಲ ಕಾರ್ಯಗಳಿಗೂ ಎಲ್ಲ ಚಿತ್ತವೃತ್ತಿಗಳಿಗೂ ಸಮಸ್ಯಾ ಪರಿಹಾರಕ ರೂಪವಾದ ಮೂಲ ಭಾವಬೀಜಗಳನ್ನು ಒಳಕೊಂಡಿರುವುದು. ನಿಷ್ರೃ ಷ್ಟ  ಘಟನೆಗಳನ್ನೊಳಗೊಂಡ ಕಥೆಯಲ್ಲಿರಬಹುದಾದ ಕವಿತಾಭಾಗವನ್ನು ಕಳಚಿಬಿಟ್ಟರೆ ಅತ್ಯಲ್ಪಕಾಲದಲ್ಲಿಯೆ ಆ ಕಥೆ ನೀರಸವಾಗಿಬಿಡುತ್ತದೆ. ಆದರೆ ಕಾಲದಿಂದ ಕವಿತೆ ಕೆಡುವುದಿಲ್ಲ; ಏಕೆಂದರೆ ಕವಿತೆಯಲ್ಲಿರುವ ನಿತ್ಯಸತ್ಯಗಳೂ ಶಾಶ್ವತತತ್ತ್ವಗಳೂ ಸರ್ವಕಾಲದೇಶ ಸಂದರ್ಭಗಳಲ್ಲಿಯೂ ಹೊಸ ಹೊಸ ಪ್ರಯೋಗಗಳನ್ನು ಪಡೆದು ಚಿರನೂತನವಾಗಿ ರಂಜಿಸುತ್ತವೆ. ಆದ್ದರಿಂದಲೆ ‘ಸಂಗ್ರಹ’ ಗಳನ್ನು ನಿಜವಾದ ಇತಿಹಾಸದಲ್ಲಿ ಇರುವ ಶಾಶ್ವತ ಕವಿತಾಭಾಗವನ್ನು ತಿಂದುಹಾಕುವ ಕೀಟಗಳು ಎಂದು ಕರೆದಿದ್ದಾರೆ. ನಿಷ್ಕೃಷ್ಟ ಘಟನೆಗಳನ್ನು ಕ್ರಮವಾಗಿ ಮಾತ್ರ ಹೇಳುವ ಕಥೆ, ವಸ್ತುವೊಂದರ ಸುರೂಪವನ್ನು ಆವರಿಸಿ , ಕುರೂಪವನ್ನು ವಿಕ್ಷೇಪಿಸಿ, ಅದನ್ನು ವಿಕಾರವಾಗಿ ಮಾಡುವ ದರ್ಪಣದಂತೆ. ಕವಿತೆಯಾದರೋ ವಸ್ತುವಿನ ಕುರೂಪವನ್ನು ಆವರಿಸಿ, ಸುರೂಪವನ್ನು ವಿಕ್ಷೇಪಿಸಿ, ಅದನ್ನು ಸುಂದರವಾಗಿ ಮಾದುವ ಮುಕುರದಂತೆ.

ಸಮಸ್ತ ಗ್ರಂಥವೂ ರಸವತ್ತಾದ ಕಾವ್ಯವಾಗಿರದೆ ಇದ್ದರೂ ಆದರ ಭಾಗಗಳಲ್ಲಿ ಉತ್ತಮ ಕವಿತೆಯಿರಬಹುದು. ರಸವತ್ತಾಗಿರದ ವಾಕ್ಯಾರಣ್ಯದ ಮಧ್ಯೆ ಯಾವುದಾದರೊಂದು ವಾಕ್ಯವೇ ಉತ್ತಮ ಕಾವ್ಯವಾಗಿರಬಹುದು; ಕೆಲವು ಸಾರಿ ಯಾವುದಾದರೊಂದು ಪದಗುಂಫನವೊಂದರಲ್ಲಿಯೇ ಅಚ್ಯುತ ಪ್ರತಿಭಾಜ್ಯೋತಿ ಕಿಡಿದೋರಬಹುದು. ಆದ್ದರಿಂದಲೆ ಪ್ರಸಿದ್ಧ ಚರಿತಕಾರರಾದ ಹೆರೋಡೋಟಸ್, ಪ್ಲೂಟಾರ್ಕ್, ಲಿವಿ ಮೊದಲಾದವರು ಸ್ವಭಾವತಃ ಕವಿಗಳಾಗಿದ್ದರೆಂದು ಹೇಳುವುದು. ಅವರು ಅನುಸರಿಸಿದ ಕಾವ್ಯರೂಪಗಳು ಅವರ ಕವಿತಾಶಕ್ತಿಯನ್ನು ಚೆನ್ನಾಗಿ ವಿಕಾಸಗೊಳಿಸಲು ಬಿಡದ ಬಂಧನಗಳಾಗಿದ್ದರೂ ಅವರ ಕೃತಿಗಳಲ್ಲಿ ಉತ್ತಮ ಕವಿತಾಪ್ರಪಂಚಕ್ಕೆ ಮಾತ್ರ ಸೇರತಕ್ಕ ಪ್ರತಿಭಾಜ್ಯೋತಿ ಅಲ್ಲಲ್ಲಿ ವಿಶೇಷವಾಗಿ ಮಿಂಚಿರುವುದನ್ನು ನಾವು ಕಾಣಬಹುದು.

ಕವಿತೆ ಎಂದರೆ ಏನು? ಕವಿಗಳೆಂದರೆ ಯಾರು? ಎಂಬ ವಿಚಾರಗಳನ್ನು ಚರ್ಚಿಸಿ ನಿರ್ಣಯಮಾಡಿದ್ದಾಯಿತು. ಇನ್ನು ಸಮಾಜದ ಮೇಲೆ ಕವಿತೆಯ ಪ್ರಭಾವ ಎಷ್ಟಿರುವುದೆಂದು ನಿರ್ಧರಿಸೋಣ.

ಕವಿತೆ ಸರ್ವದಾ ಸುಖಮಯವಾದುದು; ನಿತ್ಯಾನಂದಕರವಾದುದು. ಅದು ನೀಡುವ ಆನಂದಮಯ ಜ್ಞಾನವನ್ನು ಎಲ್ಲರೂ ಎದೆದೆರೆದು ಸ್ವೀಕರಿಸುತ್ತಾರೆ. ನಾಗರಿಕತೆಯ ಶೈಶವದಲ್ಲಿ ಕವಿಗಳಿಗಾಗಲಿ ಪಾಠಕರಿಗಾಗಲಿ ಕವಿತೆಯ ಶ್ರೇಷ್ಠತೆ ಸಂಪೂರ್ಣವಾಗಿ ಹೊಳೆದಿರುವುದಿಲ್ಲ; ಏಕೆಂದರೆ ಅದರ ಕಾರ್ಯವು ದಿವ್ಯವಾದುದು, ಅಚಿಂತ್ಯವಾದುದು, ಜಾಗ್ರದವಸ್ಥಾತೀತವಾದುದು.ಅದರ ಪ್ರಭಾವ ಮಹಿಮೆಯನ್ನು ಅಳೆಯುವ ಕೆಲಸ ಮುಂದೆ ಬರುವ ಸಂತತಿಗೆ ಸೇರಿದುದು. ಈ ಅಧುನಿಕ ಕಾಲದಲ್ಲಿಯೂ ಕೂಡ ಯಾವ ಕವಿಯೂ ಜೀವಂತನಾಗಿರುವಾಗಲೆ ತನ್ನ ಯಶಃ ಸ್ತೂಪದ ಉತ್ತುಂಗಶಿಖರವನ್ನು ಅಡರಲಿಲ್ಲ. ಸರ್ವಸನ್ಮಾನಿತನೂ ಸರ್ವಕಾಲ ಸಮ್ಮತನೂ ಆದ ಮಹಾಕವಿಯ ಯೋಗ್ಯತೆಯನ್ನು ಪರೀಕ್ಷಿಸಬೇಕಾದರೆ ಆತನ ಸರಿಸಮಾನರಾದವರೇ ಆ ಕೆಲಸಕ್ಕೆ ಕೈಹಾಕಬೇಕು. ಅಂದರೆ ಅನೇಕ ತಲೆಮಾರುಗಳಲ್ಲಿ ಹುಟ್ಟಿಬರುವ ಪ್ರತಿಭಾಶಾಲಿಗಳಾದ ಕಾವ್ಯರ್ಷಿಗಳಲ್ಲಿ ಅತ್ಯುತ್ತಮರಾದವರನ್ನೇ ಆಯ್ದು ಆ ಕೆಲಸಕ್ಕೆ ಹಚ್ಚಬೇಕು. ಅಂದರೆ ಕಾಲವೇ ಮಹಾಕವಿಯ ಮಹಿಮೆಯನ್ನು ಕಂಡುಹಿಡಿದು ನಿರ್ಣಯಿಸಬೇಕು. ಕವಿ ಕತ್ತಲಲ್ಲಿ ಕುಳಿತು, ಏಕಾಂತವನ್ನು ಮಧುರ ನಿಸ್ವನಮಯವನ್ನಾಗಿ ಮಾಡಲೆಳಸಿ ಹಾಡುವ ನೈಟಿಂಗೇಲ್ ಪಕ್ಷಿಯಂತೆ. ಅದೃಶ್ಯ ಮಾಯಾವೈಣಿಕನ ಮಧುರಮೋಹನ ಸುರಗಾನದಿಂದ ಮುಗ್ಧರಾದಂತಿರುವ ಮಾನವರೇ ಆತನ ಸದಸ್ಯ ಮಂಡಲಿ. ಗಾನವೆಲ್ಲಿಂದೈ ತರುವುದೋ ಅರಿಯರವರು; ಇಂಚರ ಕೇಳಿಬರುವುದೇಕೋ ತಿಳಿಯರವರು; ಅಂತೂ ಮುಗ್ಧರಾಗಿ, ಮೋಹಿತರಾಗಿ, ಶಾಂತರಾಗಿ, ಭಾವಾವಿಷ್ಟರಾಗಿ ವೀಣಾನಾದವನ್ನು ಅಲಿಸುತ್ತಿರುವರು. ಹೋಮರ್ ಮಹಾಕವಿಯ ಕಾವ್ಯಗಳು ಕಿಶೋರ ಗ್ರೀಸ್ ದೇಶಕ್ಕೆ ಜೋಗುಳದಂತಿದ್ದುವು. ಹಾಗೆಯೇ ತರುಣ ಭಾರತವರ್ಷಕ್ಕೆ ವಾಲ್ಮೀಕಿ ವ್ಯಾಸರ ದಿವ್ಯವಾಣಿಗಳು ರಸಸುಖಕರವೂ ಆತ್ಮೋದ್ದೀಪಕವೂ ಅಗಿದ್ದುವು. ಆ ಮಹಾಕಾವ್ಯಗಳ ಆಸ್ತಿಭಾರದ ಮೇಲೆಯೇ ತರುವಾಯ ಮೂಡಿದ ನಾಗರಿಕತೆಯೆಲ್ಲ ನಿಂತಿರುವುದು. ಆ ಕಾವ್ಯಧೇನುಗಳ ಸ್ತನ್ಯಪಾನದಿಂದಲೆ ದೇಶದ ಆತ್ಮಗಳು ಸುಪುಷ್ಟವಾಗಿರುವುವು. ಆ ಕವಿಗಳಲ್ಲಿ ಆಗಿನ ಯುಗಧರ್ಮಸಮಸ್ತವೂ ಮೂರ್ತಿಮತ್ತಾಗಿತ್ತು. ಆದ್ದರಿಂದಲೆ ಹೋಮರನನ್ನು ಓದಿದವರು ಅಖಿಲಿಸ್ , ಹೆಕ್ಟರ್, ಮತ್ತು ಯುಲಿಸಿಸ್ ಮಹಾವೀರರಂತಾಗಬೇಕೆಂದೂ, ರಾಮಾಯಾಣ ಓದಿದವರು ರಾಮ, ಲಕ್ಷಣ, ಸೀತೆ ಹನುಮಂತ ಮೊದಲಾದ ಆದರ್ಶ ಸ್ತ್ರೀಪುರುಷರಂತೆ ಆಗಬೇಕೆಂದೂ, ಮಹಾಬಾರತವನ್ನು ಓದಿದವರು ಕರ್ಣ, ಕೌರವ, ಅರ್ಜುನ, ಧರ್ಮರಾಯ ಮೊದಲಾದವರಂತೆ ಆಗಬೇಕೆಂದೂ ಪ್ರಯತ್ನಿಸಿದ ಪಕ್ಷದಲ್ಲಿ ಆಶ್ಚರ್ಯವೇನಿಲ್ಲ. ಈ ಅಮೃತಾತ್ಮರಾದ ಮಹಾಕವಿಗಳ ಅಮೃತಮಯ ಅಮರ ಕಾವ್ಯ ಪ್ರಪಂಚದಲ್ಲಿ ಸತ್ಯ, ಸೌಂದರ್ಯ, ಶೌರ್ಯ, ಧರ್ಮ, ಕರ್ಮ, ಭಕ್ತಿ, ದೇಶಭಕ್ತಿ, ಸ್ನೇಹ, ಕೈಕಂರ್ಯ, ಪಾತಿವ್ರತ್ಯ ಮೊದಲಾದ ಮಹಾಧೀರ ಗುಣಗಳೆಲ್ಲ ಮೈವೆತ್ತಿವೆ. ಆ ಕಾವ್ಯಲೋಕದ ಮಹಾವ್ಯಕ್ತಿಗಳ ದರ್ಶನ ಪರಿಚಯಗಳಿಂದ ಆ ಕಾಲದ ಜನರ ಭಾವಗಳು ಸಹಾನುಭೂತಿಯಿಂದ ಸುಸಂಸ್ಕೃತವಾಗಿ ವಿಶಾಲವಾಗಿರಬೇಕು.ಪ್ರಶಂಸೆ ಆರಾಧನೆಯಾಗಿ, ಆರಾಧನೆ ಅನುಕರಣೆಯಿಂದ ಕ್ರಮೇಣ ತಲ್ಲೀನತೆಯನ್ನು ಹೊಂದಿತು.ಆ ಕಾವ್ಯವ್ಯಕ್ತಿಗಳಲ್ಲಿ ಸರ್ವಾನುಕರಣೀಯವಾದ ಧರ್ಮನೀತಿಗಳಿಗೇನು ಬರಗಾಲಲಿಲ್ಲ. ಧರ್ಮದ ರೂಪವು ಕಾಲಕಾಲಕ್ಕೆ ಇನಿತು ಪರಿವರ್ತನೆಹೊಂದಿದರೂ ಅದರ ಆತ್ಮವು ಸರ್ವದಾ ಅದ್ವೈತವಾದುದು..ಪ್ರತಿಯೊಂದು ಯುಗವು ಸ್ವಲ್ಪ ಹೆಚ್ಚುಕಡಿಮೆ ತನ್ನ ಅಧರ್ಮಗಳಿಗೆ ಧರ್ಮದ ವೇಷವನ್ನು ತೊಡಿಸಿ ಆರಾಧಿಸುತ್ತದೆ. ಪ್ರಿತೀಕಾರವೆಂಬುದು ಅರ್ಧಬರ್ಬರ ಯುಗವು ಆರಾಧಿಸುವ ನಗ್ನಭಯಂಕರ ಮೂರ್ತಿ; ಆತ್ಮವಂಚನೆಯೆಂಬುದು ಸರ್ವದಾ ಅತೃಪ್ತಭೋಗತೃಷ್ಣೆ ಪೂಜಿಸುವ ಅವಕುಂಠಿತ ಮಾಯಾಂಗನೆ. ಆದರೆ ಕವಿಯಾದವನು ತನ್ನ ಯುಗಧರ್ಮದಲ್ಲಿ ಕಂಡುಬರುವ ತಪ್ಪುಗಳನ್ನು ತನ್ನ ಕವಿತೆ ತಾತ್ಕಾಲಿಕವಾಗಿ ಧರಿಸುವ ದುಕೂಲಗಳೆಂದು ತಿಳಿಯುತ್ತಾನೆ. ಆದರೆ ಆ ಯವನಿಕೆಗಳು ಕವಿತೆಯಲ್ಲಿರುವ ಶಾಶ್ವತ ಸೌಂದರ್ಯಗಳನ್ನು ತುಸು ಮರೆಮಾಡಬಲ್ಲುವೆ ಹೊರತು ಮರೆಯಿಸಿಯೆ ಬಿಡುವುದಿಲ್ಲ. ಪುರಾಣದಲ್ಲಿಯಾಗಲಿ ನಾಟಕದಲ್ಲಿಯಾಗಲಿ ಬರುವ ವೀರ ಪುರುಷನೊರ್ವನು ಅವುಗಳನು ತನ್ನ ಆತ್ಮಕ್ಕೆ ತೊಡಿಸಬಹುದು, ಆತನು ಪುರಾತನ ಅಥವಾ ನೂತನ ಸಮರವಸನಗಳಲ್ಲಿ ಯಾವುದನ್ನಾದರೂ ತನ್ನ ದೇಹಕ್ಕೆ ಉಡಿಸಿಕೊಳ್ಳುವಂತೆ. ಅಂದರೆ ಅವುಗಳಿಂದ ಆತನ ಅಂತರಿಕ ವ್ಯಕ್ತಿತ್ವ ಬದಲಾವಣೆ ಹೊಂದುವುದಿಲ್ಲ. ಬೇಕಾದರೆ ಹಿಂದಿನ ಇಂದಿನ ಉಡುಗೆಗಳಿಗಿಂತ ಶ್ರೇಷ್ಠತರ ವಸನಗಳನ್ನೂ ಆತನು ಧರಿಸಬಹುದು. ಆತ್ಮದ ಐಶ್ವರ್ಯವನ್ನು ನಡುವೆ ಬಂದು ನಡುವೆ ಹೋಗುವ ಹೊರಗಿನ ಜವನಿಕೆಗಳು ಮುಚ್ಚಲರಿಯವು. ಅದಕ್ಕೆ ಬದಲಾಗಿ ಅಂತರ‍್ಜ್ಯೋತಿಯೇ ಬಾಹ್ಯವನ್ನು ಕಾಂತಿಯುಕ್ತವನ್ನಾಗಿ ಮಾಡುವುದು; ವೇಷದ ರೀತಿಯೇ ಆವೇಶದ ಮಹಿಮೆಯನ್ನು ಸೂಚಿಸುವುದು. ಧೀರ ಗಂಭೀರನಾಗಿರುವ ಪುರುಷನಿಗೆ ಎಂತಹ ಅನಾಗರಿಕ ವಸನಗಳನ್ನು ತೊಡಿಸಿದರೂ ಆತನ ವ್ಯಕ್ತಿತ್ವ ಹೊರ ಬೀಳದಿರುವುದಿಲ್ಲ. ಮಹಾಕವಿಗಳಲ್ಲಿ ಯಾರೂ ತಮ್ಮ ಪ್ರತಿಭೆಯ ತೇಜಸ್ಸನ್ನು ನಗ್ನವಾಗಿ ಪ್ರದರ್ಶೀಸಿರುವುದಿಲ್ಲ, ಬಹುಶಃ ಆ ಅನಾಹುತ ಧ್ವನಿ ಮಾನವರ ಕಿವಿಗಳಿಗೆ ಬೇಳಬೇಕಾದರೆ ಕಾಲದೇಶಾಚಾರಗಳ ಅವರಣದ ವೇಷಧಾರಣೆ ಮಾಡಲೇಬೇಕೆಂದು ತೋರುತ್ತದೆ.

ಕಾವ್ಯಕಲೆ ಮಾನವನನ್ನು ನೀತಿಗೆ ಹೇಗೆ ಒಯ್ಯುತ್ತದೆ ಎಂಬ ಮರ್ಮವನ್ನು ಅರಿಯದವರು ಕಾವ್ಯಗಳೆಲ್ಲ ಕುನೀತಿಯುತವಾದುವೆಂದು ಹಳಿಯುತ್ತಾರೆ. ಕಾವ್ಯಪ್ರಣೀತವಾದ ನೀತಿಗಳನ್ನು ನಿಯಮಬದ್ಧವನ್ನಾಗಿ ಮಾದಿ, ಆ ನೀತಿಗಳಿಗೆ ಸಾಮಾಜಿಕ ಜೀವನದಿಂದ ದೃಷ್ಟಾಂತಗಳನ್ನು ಕೊಡುವುದೇ ನೀತಿ ಶಾಸ್ತ್ರದ ಕೆಲಸವಾಗಿದೆ. ಅದಂತಿರಲಿ; ನೀತಿಗಳಿಗೇನು ಕಡಿಮೆಯಾದುದರಿಂದಲ್ಲ ಜನರು ಕುಮಾರ್ಗಿಗಳಾಗಿರುವುದು. ಕಾವ್ಯಕಲೆ ಜನರಲ್ಲಿ ನೀತಿಯನ್ನು ಹರಡುವ ವಿಧಾನವೇ ಬೇರೆ; ಅದರ ದಿವ್ಯತೆಯೇ ಬೇರೆ. ಅದು ನೂರಾರು ಹೊಸ ಹೊಸ ಆಲೋಚನೆಗಳಿಂದಲೂ, ವಿವಿಧ ಭಾವಸಂಧಿ ಸಬಳತ್ವಗಳನ್ನು ಉದ್ರೇಕಿಸುವುದರಿಂದಲೂ ಮನಸ್ಸನ್ನು ಜಾಗ್ರತಗೊಳಿಸಿ ಪ್ರಜ್ಞೆಯನ್ನು ವಿಶಾಲಗೊಳಿಸುತ್ತದೆ. ಕವಿತೆ ಜಗತ್ತಿನ ಅವ್ಯಕ್ತ ಸೌಂದರ್ಯವನ್ನು ವ್ಯಕ್ತವಾಗುವಂತೆ ಮಾಡುತ್ತದೆ. ಪರಿಚಿತ ವಸ್ತುಗಳಿಗೆ ಅಪರಿಚಿತತ್ತ್ವವನ್ನು ಅರೋಪಿಸಿ ಅವುಗಳನ್ನು ಚಿರನೂತನವಾಗಿ ಮಾಡುತ್ತದೆ. ತಾನು ಯಾವುದಕ್ಕೆ ಪ್ರತಿನಿಧಿಯಾಗಿರುವುದೋ ಅದನ್ನು ಪುನಃ ಪ್ರತಿನಿರ್ಮಾಣಮಾಡುತ್ತದೆ. ಅನೇಕರ ಹೃದಯಗಳಲ್ಲಿ ಗೊತ್ತುಗುರಿಯಿಲ್ಲದೆ ಅನಾಥವಾಗಿ ಸಂಚರಿಸುವ ನಿರಾಕಾರ ಮೂಕಭಾವಗಳಿಗೆ ಸಾಕಾರವಾಣಿಯನ್ನು ದಾನಮಾಡುತ್ತದೆ. ಕವಿತೆಯ ಕೋಮಲ ಸಂಮೋಹಿನೀ ಶಕ್ತಿಯಿಂದ ಮೈಗೊಂಡ ಭಾವಗಳು ಜನರಿಗೆ ಶಾಂತಿಯ ಶಾಶ್ವತ ಪ್ರತಿನಿಧಿಗಳಾಗಿಯೂ ಸೌಂದರ್ಯದ ಚಿರನಿಧಿಗಳಾಗಿಯೂ ಪರಿಣಮಿಸುವುವು. ಧರ್ಮದ ಅಂತರಂಗವು ಪ್ರೇಮ; ನೀತಿಯ ಎದೆಗುಟ್ಟು ಒಲ್ಮೆ. ಅಂದರೆ ನಮ್ಮ ಆತ್ಮವು ಸಂಪೂರ್ಣ ಅಸ್ವಾರ್ಥತೆಯಿಂದ ತನ್ನನ್ನು ತಾನೇ ತ್ಯಾಗಮಾಡಿಇತರ ಯಾರೊಬ್ಬರ ವ್ಯಕ್ತಿತ್ವ, ಕಾರ್ಯ ಅಥವಾ ಭಾವದಲ್ಲಿ ತೋರಿಬರುವ ಸೌಂದರ್ಯದಲ್ಲಿ ತಲ್ಲೀನವಾಗುವುದೆ ಪ್ರೇಮ. ಮನುಷ್ಯನು ಅತ್ಯುತ್ತಮನಾಗಬೇಕಾದರೆ ಆತನ ಕಲ್ಪನಾಶಕ್ತಿ ಆಗಾಧವೂ ವಿಶಾಲವೂ ಆಗಿರಬೇಕು. ಅವನಿಗೆ ಇತರರ ಕಣ್ಣಿನಿಂದ ನೋಡುವ ಶಕ್ತಿಯೂ, ಇತರರ ಹೃದಯದಿಂದ ಅನುಭವಿಸುವ ರಕ್ತಿಯೂ ಇರಬೇಕು; ತನ್ನವರ ಸುಖದುಃಖಗಳು ತನ್ನವಾಗಬೇಕು. ಮನುಷ್ಯರಲ್ಲಿರುವ ರಾಗರಸಗಳೇ ಧರ್ಮಕ್ಕಿರುವ ದೊಡ್ಡ ಸಹಾಯ. ಕವಿತೆ ಧರ್ಮಕ್ಕೆ ಮಾರ್ಗಪ್ರಾಯವಾದ ಆ ರಾಗರಸಗಳನ್ನು ತಿದ್ದಿ ಶುದ್ಧಿಮಾಡುತ್ತದೆ. ಕವಿತೆ ತನ್ನಲ್ಲಿರುವ ಚಿರನವಸುಖ ಸೂಚಕ ಶಕ್ತಿಯಿಂದ ಮಾನವನ ದೃದಯದ ರಾಗರಸವಲಯವನ್ನು ವಿಸ್ತಾರಗೈಯುತ್ತದೆ. ಆ ಸುಖಾಪೇಕ್ಷೆ ಇತರ ಎಲ್ಲ ಪ್ರಲೋಭನಗಳನ್ನೂ ತನ್ನೆಡೆಗೆ ಅಕರ್ಷಿಸಿ ಭಕ್ಷಿಸಿ ಬಿಡುತ್ತದೆ; ಅಲ್ಲದೆ ಅಂತಹ ಕಲಾಸುಖತೃಷ್ಣೆಯನ್ನು ಮತ್ತಷ್ಟು ಕೆರಳಿಸುತ್ತದೆ. ಕವಿತೆ ಮನುಷ್ಯನಲ್ಲಿರುವ ಧರ್ಮಾವಲಂಬನ ಶಕ್ತಿಯನ್ನು ಬಲಪಡಿಸುತ್ತದೆ, ವ್ಯಾಯಾಮವು ದೇಹವನ್ನು ಬಲಪಡಿಸುವಂತೆ. ಆದ್ದರಿಂದ ಕವಿಯಾದವನು ತತ್ಕಾಲದೇಶಗತಮಾತ್ರವಾದ ಧರ್ಮಾಧರ್ಮಭಾವಗಳನ್ನು ತನ್ನವೆಂದು ಭ್ರಮಿಸಿ ತನ್ನ ಕಾವ್ಯಗಳಲ್ಲಿ ಸೇರಿಸಬಾರದು. ಹಾಗೆ ಮಾದಿದರೆ ಶಾಶ್ವತ ಸತ್ಯತತ್ತ್ವಗಳ ಮಹಿಮೆಯನ್ನು ಕುರಿತು ಹಾಡುವ ಮೇಲುಮಟ್ಟದ ಕೀರ್ತಿ ಸೌಭಾಗ್ಯಗಳನ್ನು ಬಿಟ್ಟು ಅನಿತ್ಯ ಅಶಾಶ್ವತ ಘಟನೆಗಳನ್ನು ಕುರಿತು ಬರೆಯುವ ಕೀಳುಮಟ್ಟದ ಕೆಲಸವನ್ನು ಕೈಕೊಂಡಂತಾಗುತ್ತದೆ. ಅದನ್ನೂ ಬಹುಶಃ ಕೃತಕೃತ್ಯವಾಗುವಂತೆ ಸರಿಯಾಗಿ ಚಿತ್ರಿಸಲು ಸಾಧ್ಯವಾಗದೆ ಇರಬಹುದು. ಮಹಾಕವಿಗಳಾದವರು ಯಾರೇ ಆಗಲಿ ಇಂತಹ ಅಕಾರ್ಯಕ್ಕೆ ತೊಡಗಿಲ್ಲ. ಕವಿತಾಶಕ್ತಿ ಅಪಾರವಾಗಿದ್ದರೂ ಆಗಾಧವಾಗಿರದ ಕವಿಗಳು ತಮ್ಮ ಕಾವ್ಯಗಳಲ್ಲಿ ಅಲ್ಲಲ್ಲಿ ನೀತಿಪ್ರತಿಪಾದನೆಗೆ ಕೈಯಿಟ್ಟಿರುವರು. ಆದ್ದರಿಂದ ಎಲ್ಲೆಲ್ಲಿ ನೀತಿಪ್ರತಿಪಾದನೆ ಎಷ್ಟೆಷ್ಟು ಪ್ರಮಾಣದಲ್ಲಿ ಅಭಿವ್ಯಕ್ತವಾಗಿದೆಯೋ ಅಲ್ಲಲ್ಲಿ ಅವರ ಕಾವ್ಯಗಳು ಅಷ್ಟಷ್ಟೆ ಪ್ರಮಾಣದಲ್ಲಿ ಕಳೆಗುಂದಿಹೊಗಿವೆ.

ಕವಿತ ನೀತಿಬೋಧೆಗೆ ಹೊರಟರೆ ಕಲೆಗೇಡಿಯಾಗುತ್ತದೆ. ಹಾಡಿ ನಲಿಸುವ ಕೋಗಿಲೆ ಕೂಗಿ ಎಚ್ಚರಿಸುವ ತುತೂರಿಯ ಕೆಲಸವನ್ನು ವಹಿಸಿದಂತಾಗುತ್ತದೆ. ಕೋಗಿಲೆಯ ಇಂಚರ ಎಚ್ಚರಗೊಳಿಸಬಹುದು; ಅದರೆ ಅದು ಅದರ ಗೌಣ ಕಾರ್ಯ. ಅಂದರೆ ಕವಿತೆಯಲ್ಲಿ ನೀತಿಬೋಧೆ ಇರಬಾರದೆಂದೂ, ಉತ್ತಮ ಕಾವ್ಯಗಳಲ್ಲಿ ಧರ್ಮವಿಲ್ಲವೆಂದೂ ಭಾವಿಸಬಾರದು. ವಾಲ್ವೀಕಿ ವ್ಯಾಸರ ಮಹಾಕಾವ್ಯಗಳಿಲ್ಲದಿದ್ದರೆ ಭಾರತವರ್ಷದ ಜನಸಾಮಾನ್ಯವು ಯಾವ ಅಸಂಸ್ಕೃತ ಸ್ಥಿತಿಯಲ್ಲಿರುತ್ತಿತ್ತೋ ಹೇಳಬಲ್ಲವರಾರು? ವೇದ, ಉಪನಿಷತ್ತು, ಧರ್ಮಶಾಸ್ತ್ರ ಮೊದಲಾದುವು ಯುಗಯುಗಗಳಲ್ಲಿ ಸಾಧಿಸಲಾರದು ಕಾರ್ಯವನ್ನು ರಾಮಾಯಣ ಮಹಾಭಾರತ ಬಹುಬೇಗನೆ ಸಾಧಿಸಿಬಿಟ್ಟಿವೆ. ನಿರಕ್ಷರ ಕುಕ್ಷಿಗಳಾದ ಕೋಟ್ಯನು ಕೋಟಿ ಮಾನವರಿಗೆ ಆತೋತ್ಮನ್ನತಿಯನ್ನು ಧಾರೆಯರೆದಿರುವ ಗ್ರಂಥಗಳೆಂದರೆ ಆ ಮಹಾಕಾವ್ಯಗಳೆ. ಲಕ್ಷಾಂತರ ಜನಗಳಿಗೆ ಉನ್ನತಾದರ್ಶಗಳನ್ನು ದಾನಮಾಡಿ, ಆದರ್ಶಜೀವಿಗಳನ್ನು ಕಲ್ಪಿಸಿಕೊಟ್ಟು ಉದ್ಧಾರಮಾಡಿರುವುವೂ ಆ ದಿವ್ಯಪುರಾಣಗಳೇ. ಆ ಕಾವ್ಯ ಕಾಮಧೇನುಗಳ ಪೀಯೂಷಪಾನದಿಂದಲೆ ಭತರಖಂಡವು ಅಮೃತ್ವವನ್ನು ಪಡೆದಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಕಾವ್ಯವು ಆತ್ಮಕಲ್ಯಾಣವನ್ನೊಳಗೊಂಡಿರುವ ಆನಂದದ ಬಟ್ಟಲು. ನೂರು ಶುಷ್ಕ ನೀತಿಶತಕಗಳು ಮಾಡಲಾರದ ಕೆಲಸವನ್ನು ಒಂದೇ ಒಂದು ಇಂಪಾದ ಕೀರ್ತನೆ ಮಾಡಬಲ್ಲದು. ರಸಋಷಿ ಕಬೀರನ ಮಧುರಗಾನಗಳಿಂದ ದೇಶದ ಮೇಲೆಲ್ಲಾ ಪ್ರವಹಿಸಿದ ಭಕ್ತಿಜ್ಞಾನ ವಾಹಿನಿಗಳು ಎಷ್ಟು ಜನ ಆಚಾರ್ಯರ ಧರ್ಮಬೊಧೆಯಿಂದ ತಾನೇ ಪ್ರವಹಿಸಬಲ್ಲವು? ಚಂಡಿದಾಸ, ಚಂಡಿದಾಸ, ರಾಮಪ್ರಸಾದ ಮೊದಲಾದವರ ಭಕ್ತಿಪ್ರೇರಕ ಕವನಗಳಿಂದ ವಂಗದೇಶದ ಆತ್ಮಜ್ಯೋತಿ ಪ್ರಕಾಶಗೊಂಡಂತೆ ಎಷ್ಟು ಜನ ನೀತಿಪ್ರಚಾರಕ ಉಪನ್ಯಾಸಗಳಿಂದ ಅದು ಉಜ್ವಲವಾದೀತು? ಪುರಂದರದಾಸ, ಕನಕದಾಸ ಮೊದಲಾದ ಭಕ್ತರ ಕೀರ್ತನೆಗಳು ಕನ್ನಡನಾಡಿನ ಜನ ಜೀವಕ್ಕೆ ಮಾಡಿರುವ ಉಪಕಾರವನ್ನು ಎಷ್ಟು ಧರ್ಮಶಾಸ್ತ್ರಗಳು ಮಾಡಬಲ್ಲುವು? ರಾಮದಾಸ, ತುಕಾರಾಮ ಮೊದಲಾದ ಭಕ್ತಕವಿಗಳು ಮಹಾರಾಷ್ಟ್ರಕ್ಕೆ ನೀಡಿರುವ ಅಂತರಿಕ ಸಂಸ್ಕೃತಿಯನ್ನು ಎಷ್ಟು ಜನ ಧರ್ಮೋಪದೇಶಿಗಳು ನೀಡಬಲ್ಲರು? ಕಾವ್ಯಕಲೆಯ ಸಮರ್ಥನೆಗೆ ಈ ನಿದರ್ಶನಗಳ ಹರಿಶ್ಚಂದ್ರಸಾಕ್ಷ್ಯವೆ ಸಾಲದೇನು? ದೇಶದ ಜೀವನೋನ್ನತಿ ಸದಾ ಕಾವ್ಯಕಲೆಯ ಉನ್ನತಿಯೊಡನೆಯೆ ಕಂಡುಬಂದಿರುವುದರಿಂದ ಅವುಗಳಲ್ಲಿ ಕಾರ್ಯಕಾರಣಸಂಬಂಧಭಾವನ್ನು ನಾವು ಧೈರ್ಯವಾಗಿ ಕಲ್ಪಿಸಬಹುದು . ಅದ್ದರಿಂದ ನಿಜವಾದ ಕಾವ್ಯಕಲೆ ಪ್ರತ್ಯಕ್ಷವಾಗಿ ಧರ್ಮಬೋಧೆಗೆ ಕೈಹಾಕದೆಯೆ ಜಗಜ್ಜೀವನಕ್ಕೆ ಸುಂದರ ಪಾವನ ಸಂಸ್ಕಾರವನ್ನು ದಯಪಾಲಿಸಬಲ್ಲುದು ಎಂಬ ತತ್ತ್ವವನ್ನು ನಾವು ನಿಸ್ಸಂದೇಹವಾಗಿ ನಿರ್ಣಯಿಸಬಹುದು.


* ಭಾರತೀಯ, ಅದರಲ್ಲಿಯೂ ವಿಶೇಷವಾಗಿ ಕರ್ಣಾಟಕದ, ಸನ್ನಿವೇಶಕ್ಕೆ ಹೊಂದಿಕೊಳ್ಳುವಂತೆ ‘Defence of Poetry’ ಯ ಸಾರಾನುವಾದ – ೧೩ – ೧೦ – ೧೯೩೦.