ಮಡುವಿನಲಿ ಮಂಡಲವಾಗಿ ಮಲಗಿದ್ದ ಹೊಳೆ
ಮೈಯ್ಯನ್ನೆಳೆದು ಮೆಲ್ಲನೆ ಸಾಗತೊಡಗಿದೆ ಈಗ.
ಜುಳುಜುಳನೆ ಜುಳುಜುಳನೆ ಹೆಚ್ಚತೊಡಗಿದೆ ವೇಗ,
ಜಲತರಂಗದ ಪಲುಕು, ನೀರ್ ವೀಣೆಗಳ ಮಿಡಿತ ;
ಒಳಗೆ ಮೀನಾಡುತಿವೆ.
ಒಂದು, ಎರಡು, ಮೂರು, ಮೂರಲ್ಲ ನೂರು,
ನೂರಲ್ಲ ಸಾವಿರ ;
ಬಣ್ಣ ಬಣ್ಣದ ಮೀನು, ಬೆಳ್ಳಿ ಹೊಟ್ಟೆಯ ಮೀನು !
ನಾಗಲೋಕದ ರಮ್ಯ ರಂಗಮಂಟಪದಲ್ಲಿ
ಮಿಂಚು ತೆಳ್ಳನೆ ಪರದೆ, ಕಾಮಧನುಗಳ ಲಾಸ್ಯ,
ಬೆನ್ನಿನ ಹಿಂದೆ ತೂಗಾಡುತಿದೆ ಹಾವಿನ ಜಡೆ.
ಕಣ್ಣ ಕಣೆ ತಾಗಿತ್ತು ಕಲ್ಪವೃಕ್ಷದ ಗೊನೆಗೆ.
ಸೊಂಡಿಲನೆತ್ತಿ ದಟ್ಟಡಿಯಿಡುವ ಐರಾವತದ
ಹಾಲು ಮೈ ಮರಿ ಪುಟಾಣಿ,
ನೀಲಗಿರಿ ಕಂದರದಿ ಮಂಜನು ಕಡೆವ
ಕಿರಣಗಳ ಕಡೆಗೋಲು ;
ನೊರೆ ಸಿಡಿದು ಮೋಡ ಮೋಡಗಳಾಗಿ
ನೀಲಿಯಲಿ ನಗೆಯರಳಿ ಹೂವಾಯ್ತು.
ಮೇಘದೇಗುಲಗಳಲಿ ಮಿಂಚಿನಾರತಿ ಬೆಳಕು,
ನಸುನಕ್ಕ ನೀಲಿಯಲಿ ಹುಬ್ಬುಗಂಟಿನ ಗುಡುಗು.
ಹೃದಯದೊಳಗುಟ್ಟುಗಳ ಮದ್ದಿನುಗ್ರಾಣಕ್ಕೆ
ಕಿಡಿಯಿಡುವ ಸನ್ನಾಹ.
ಹಳೆಯ ನೆನಪಿನ ಕಲ್ಲನೊಂದೊಂದನೇ ಎತ್ತಿ
ಎಸೆವ ಕವಣೆಯ ತೋಳು.
ಮರೆತ ಕತೆಯಿಂದಾಯ್ದ ಒಂದೊಂದೇ ನುಡಿಮುತ್ತು –
ಗಳನೆತ್ತಿ ಸಮೆದ ಹಾರದ ಸಾಲು.
ಇರುಳೆಲ್ಲ ಕಣ್ಣೀರಿನಿಂದ ನೆಲವನು ನೆನೆಸಿ
ನಿಡುಸುಯ್ದು ನಡೆವ ಮೋಡದ ಹಿಂಡು
ಗಾಳಿ, ಬಿರುಗಾಳಿ – ದಾಳಿ ;
ಮೋಡದ ಸಾಲು ದಿಕ್ಕಾಪಾಲು.
ಚಂದಿರನ ಹಾಲು ಕರೆಯುವ ಬೆಳಕುಗೆಚ್ಚಲ ಧೇನು.
ಏನು ! ದನಿಯು ನಿಂತಿತೆ ?
ರೇಡಿಯೋ, ಮುಖದಲ್ಲಿ ಮಂದಹಾಸದ ಬೆಳಕು.
“ಇದು ಆಕಾಶವಾಣಿ, ಇದುವರೆಗು ನೀವು ಕೇಳಿದ್ದು
ಸಿತಾರ್ ವಾದನದ ಮುದ್ರಿಕೆ.”