ಕಾಲುದಾರಿಯ ಮೇಲೆ ಕಣ್ಣಿಟ್ಟು ನಡೆಯಣ್ಣ
ಎಲ್ಲೆಂದರಲ್ಲಿ ನೀ ದಾಟಬೇಡ ;
ದಾರಿಯ ತುಂಬ ನಿಂತ ಹಲಗೆಯ ಮಾತ
ಅರಿತು ನಡೆ, ನಿನಗೆ ಕ್ಷೇಮ.

ಚೌಕ ಚೌಕದ ನಡುವೆ ಖಾಕಿಬಟ್ಟೆಯ ಬೆರಳ
ಸನ್ನೆಯಲಿ ಬಿಡು ನಿನ್ನ ವಾಹನಗಳ ;
ಕೆಂಪು-ಹಸುರಿನ ಮುಖದ ದೀಪಗಳ ಕಣ್ಣರಿತು
ಮುಂದೆ ನಡೆ, ಬೇಡ ಚಪಲ.

ನುಗ್ಗದಿರು ಮಂದಿಯಲಿ ; ಏನಾದರೂ ನಿನ್ನ
ಜೇಬು ಜೋಪಾನ !
ಹೋಗುತ್ತಲೇ ಇರಬೇಕು ಈ ಹೊಳೆಯಲ್ಲಿ,
ನಿಂತರೂ ದಡಹಿಡಿದು ಏರು ಸೋಪಾನ.

ಅಲ್ಲಲ್ಲಿ ‘ಕ್ಯೂ’ ನಿಂತು ಬಸ್ಸನು ಹತ್ತು ; ಒತ್ತದಿರು
ನಿನಗಿಂತ ಮೊದಲೆ ಬಂದವರ.
ಬಸ್ಸಿನೊಳಗೂ ನೀನು ನಿಂತರೂ ಏನಂತೆ
ಎಷ್ಟು ಹೊತ್ತಿನ ಪಯಣ, ಏನಾತುರ ?

ಇದು ನಗರ ; ಸಾವಿರ ದಾರಿ ಸಾವಿರ ಬೆಳಕು
ತೊಡರುವುದು ಕಾಲಿಗೆ.
ನೂರಾರು ವಾಹನದ ಹೆಜ್ಜೆಸದ್ದಿನ ಜೊತೆಗೆ
ನೀ ಬರುವೆ ಮನೆಗೆ
ಅಲ್ಲಿಯ ತನಕ ಕಾತರವೆ ನನಗೆ.