ಹೊಗಳು ಭಟ್ಟರ ಸಂತೆ-
ಇದು ಲೋಕವಂತೆ !
ಎಲ್ಲೆಲ್ಲಿಯೂ ಇವರೆ,
ಕಂತೆ ಕಂತೆ !

ಆದರ್ಶ-ಗೀದರ್ಶ
ಬರಿ ಬಣಗು ಕಂಥೆ
ಪುಸ್ತಕದ ಬದನೆ ಕಾಯ್
ತಿನುವುದಕೆ ಬಂತೆ ?

ಬಾ ಹರಟು ಒಣ ಹರಟೆ
ಸಿಗರೇಟು ಹಚ್ಚು,
ಅವಳಂತು, ಇವಳಿಂತು-
ಇದೆ ನನಗೆ ಮೆಚ್ಚು.

ರಸಿಕತನ ಬೇಕಯ್ಯ
ಏನಿದ್ದರೇನು?
ಬಂಡಿಗಟ್ಟಲೆ ಓದಿ
ನೀ ಪಡೆದುದೇನು?

ನೀ ಇಂದ್ರ ನೀ ಚಂದ್ರ
ಕಲಿಕರ್ಣ ಪಿಂಡ !
(ನಾನು ಅವರೊಳಗೊಬ್ಬ)
ಬಹದ್ದೂರ ಗಂಡ !

ಹೊಗಳಿ ಹೊಗಳಿಸಿಕೊಳುವ
ಚಿಂತೆಯೇ ಚಿಂತೆ.
ಒಂಟೆ ಮದುವೆಗೆ ಕತ್ತೆ
ಪದ ಹೇಳಿತಂತೆ.