ಕಾರ್ಗಿಲ್ಲಿನ ಗಡಿಗಳಲ್ಲಿ
ಸಿಡಿಗುಂಡಿಗೆ ಎದೆಯನೊಡ್ಡಿ
ಕಾದಾಡುವ ಕಲಿಗಳೇ
ತತ್ತರಿಸುವ ಎತ್ತರದಲಿ
ಧೈರ್ಯದ ಧ್ವಜವೆತ್ತಿ ನಡೆವ
ಪರಾಕ್ರಮದ ಕಿಡಿಗಳೇ
ಇದೋ ನಿಮಗೆ ವಂದನೆ
ಕೃತಜ್ಞತೆಯ ವಂದನೆ.

ಶ್ವೇತ ಶುಭ್ರ ಹಿಮಾಲಯದ
ಭವ್ಯ ಧವಳ ಭಿತ್ತಿಗಳಲಿ
ರಕ್ತಲಿಪಿಯ ಶಾಸನಗಳ
ಬರೆದ ಮಹಾ ಕಲಿಗಳೇ
ಇದೋ ನಿಮಗೆ ವಂದನೆ
ಕೃತಜ್ಞತೆಯ ವಂದನೆ

ದುರ್ಗಮ ಹಿಮ ಶಿಖರದಲ್ಲಿ
ಆಕ್ರಮಣವನೆದುರಿಸುತ್ತ
ಹುತಾತ್ಮರಾದ ಯೋಧರೇ
ಸ್ಪಂದಿಸುತಿದೆ ನಿಮ್ಮ ಹಿಂದೆ
ಕಂಬನಿಯಲಿ ಹೆಮ್ಮೆಯಲ್ಲಿ
ಈ ಅಖಂಡ ದೇಶವೇ
ಇದೋ ನಿಮಗೆ ವಂದನೆ
ಕೃತಜ್ಞತೆಯ ವಂದನೆ.