ಮೊನ್ನೆ ವೇಲೆಂಟೈನ್ಸ್ ದಿನದಂದು ಗುಲಾಬಿ ಚೆಡ್ಡಿಗಳ ಹಾರಾಟ, ಕೇಸರಿ ಕೋಲುಗಳ ಆರ್ಭಟ ನೋಡಿದ ಅಜ್ಜಂದಿರು ರಾಮ, ರಾಮ ಎಂದು ತಲೆಯ ಮೇಲೆ ಕೈ ಹೊತ್ತರಂತೆ. ಪಾರ್ಕ್ನಲ್ಲ ಭೇಟಿ, ಪಾರ್ಟಿ, ಎಸ್ಎಂಎಸ್ಗಳು, ಗಿಫ್ಟ್, ಗ್ರೀಟಿಂಗ್ಕಾರ್ಡ್ಗಳ ಗೋಜಿಲ್ಲದೆ ತಮ್ಮ ಭಾವನೆಗಳನ್ನು ಪ್ರಕಟಿಸುವ ಸೌಕರ್ಯ ಪ್ರೇಮಿಗಳಿಗಿದ್ದರೆ ಬಹುಶಃ ಇಷ್ಟೆಲ್ಲಾ ರಾದ್ಧಾಂತ ಆಗುತ್ತಲೇ ಇರಲಿಲ್ಲ. ಈ ವಿಷಯದಲ್ಲಿ ಮನುಷ್ಯರು ಪ್ರಾಣಿಗಳಷ್ಟು ಅದೃಷ್ಟವಂತರಲ್ಲ ಎನ್ನುವುದು ಪ್ರಾಣಿವಿಜ್ಞಾನಿಗಳ ಅಂಬೋಣ. ವಸಂತ ಬಂದ ಕೂಡಲೇ ಕುಹೂ, ಕುಹೂ ಎಂದುಸುರಿ ಕೋಗಿಲೆ ಇನಿಯನನ್ನು ಕರೆಯುವುದಿಲ್ಲವೇ? ಕನ್ಯಾ ಮಾಸ ಬಂದ ಕೂಡಲೇ ವಾಸನೆಯಿಂದಲೇ ತನ್ನ ಹಿಂದೆ ಗಂಡು ಬಳಗವನ್ನು ಆಕರ್ಷಿಸುವ ನಾಯಿಗಳಿಲ್ಲವೇ?  ಗಂಡು ನವಿಲಿನ ನೃತ್ಯವನ್ನು ಮೀರಿಸುವ ಡಿಸ್ಕೊ ಡ್ಯಾನ್ಸ್ ಸಾಧ್ಯವೇ? ಇಂತಹುದೇ ಸೌಕರ್ಯ ಮನುಷ್ಯರಿಗೂ ಇದ್ದಿದ್ದರೆ ವೇಲೆಂಟೈನ್ಸ್ ಡೇ ಎನ್ನುವ ಮಹಾ ಮಾರಾಟ ಮೇಳ ಹುಟ್ಟುತ್ತಲೇ ಇರಲಿಲ್ಲ ಎಂದಿರಾ?

ಈ ವಿಷಯದಲ್ಲಿ ಮನುಷ್ಯ ಪ್ರಾಣಿಯಲ್ಲ ಎನ್ನುವ ಗತ್ತು ನಿಮಗಿದ್ದರೆ ಕ್ಷಮಿಸಿ. ಕಳೆದ ತಿಂಗಳು ಬಯಾಲಜಿ ಲೆಟರ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನೆ ಮನುಷ್ಯನೂ ಇಂತಹ ಗುಪ್ತ ಸಂದೇಶಗಳನ್ನು ನೀಡುತ್ತಾನೆ ಎಂದು ತಿಳಿಸಿದೆ. ಅಮೆರಿಕೆಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ನಡವಳಿಕೆ ವಿಜ್ಞಾನ ವಿಭಾಗದ ಗ್ರೆಗರಿ ಬ್ರಯಾಂಟ್ ಮತ್ತು ಮಾರ್ಟೀ ಹ್ಯಾಸಲ್ಟನ್ರವರು ನಡೆಸಿರುವ ಸಂಶೋಧನೆ, ಸ್ತ್ರೀಯರ ಧ್ವನಿಯಲ್ಲಿ ಗುಪ್ತ ಸಂದೇಶಗಳು ಅಡಗಿರಬಹುದೆಂದು ಸೂಚಿಸಿವೆ. ಅದೂ ಅಂತಿಂಥ ಸಂದೇಶವಲ್ಲ! ಸ್ತ್ರೀಯ ಧ್ವನಿಯಲ್ಲಿ ತಾನು ಗರ್ಭಧಾರಣೆಗೆ ಸಿದ್ಧಳೆಂದು ಸೂಚಿಸುವ ಸಂಕೇತಗಳು ಇರಬಹುದು ಎಂದು ಇವರು ಗುಮಾನಿಸಿದ್ದಾರೆ.  ಮಹಿಳೆಯರ ಋತು ಚಕ್ರದಲ್ಲಿ ಅಂಡಗಳು ಸೃಷ್ಟಿಯಾಗುವ ದಿನಗಳಲ್ಲಿ ಅವರ ದನಿಯ ಗುಣ ತುಸು ಬದಲಾಗುತ್ತದೆಯಂತೆ.

ಬ್ರಯಾಂಟ್ ಮತ್ತು ಹ್ಯಾಸಲ್ಟನ್ರವರಿಗೆ ಸ್ತ್ರೀಯರ ಧ್ವನಿಯ ಬಗ್ಗೆ ಗುಮಾನಿ ಹುಟ್ಟಿದ್ದಕ್ಕೂ ಕಾರಣಗಳಿವೆ. ತಮ್ಮ ಸಂತಾನ ಸಿದ್ಧತೆಯ ಸ್ಥಿತಿಯ ಬಗ್ಗೆ ಹಲವು ಪ್ರಾಣಿ, ಪಕ್ಷಿಗಳು ವೈವಿಧ್ಯಮಯವಾದ ಸಂಕೇತಗಳ ಮೂಲಕ ಸಂಗಾತಿಗಳಿಗೆ ತಿಳಿಸಿಕೊಡುತ್ತವೆ. ಬಹುತೇಕ ಪ್ರಾಣಿಗಳು ವರ್ಷದ ಯಾವುದೋ ಒಂದು ಋತುವಿನಲ್ಲಿಯಷ್ಟೆ ಗರ್ಭ ಧರಿಸಬಲ್ಲುವು. ಆ ಋತುವಿನಲ್ಲಿಯಷ್ಟೆ ಹೆಣ್ಣಿನಲ್ಲಿ ಮುಂದೆ ಗರ್ಭವಾಗಬಹುದಾದ ಅಂಡಗಳು ಸೃಷ್ಟಿಯಾಗುತ್ತವೆ.  ಅಂಡಗಳಿಗೆ ಆ ಋತುವಿನಲ್ಲಿ ವೀರ್ಯ ಸಿಂಚನವಾಗದಿದ್ದರೆ, ಅವು ನಶಿಸುತ್ತವೆ. ಅಂದರೆ ಹೆಣ್ಣು ಗರ್ಭ ಧರಿಸಲು ಮತ್ತೊಂದು ಋತುವಿಗಾಗಿ ಕಾಯಬೇಕು. ಇಂತಹ ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಅಂಡಗಳು ಬಲಿವ ಸಮಯದಲ್ಲಿಯೇ ಹೆಣ್ಣು ಬಹಳ ಆಕರ್ಷಕವಾಗಿ ತೋರುತ್ತದೆ.  ಕ್ಲುಪ್ತ ಕಾಲದಲ್ಲಿ ಅಂಡಗಳಿಗೆ ವೀರ್ಯಗಳ ಜೊತೆ ಸಿಕ್ಕಿ, ಗರ್ಭ ನಿಲ್ಲಲಿ ಎಂದು ನಿಸರ್ಗ ಹೂಡಿರುವ ಉಪಾಯ ಇದು.  ವಾಸನೆಯಿಂದಲೇ ಗಂಡು ನಾಯಿಗಳಿಗೆ ಹೆಣ್ಣು ನಾಯಿಗಳು ಬೆದೆಗೆ ಬಂದಿರುವುದು ತಿಳಿದು ಬಿಡುತ್ತದೆ. ಆನೆಗಳು, ದನ, ಆಡು-ಕುರಿಗಳಲ್ಲೂ ಇದನ್ನು ನೋಡುತ್ತೇವೆ. ವಾಸನೆ, ನೃತ್ಯ, ಬಣ್ಣಗಳ ಜೊತೆಗೇ ಕೆಲವು ಪ್ರಾಣಿಗಳಲ್ಲಿ ಋತುಮಾನಕ್ಕೆ ತಕ್ಕಂತೆ ದನಿಯೂ ಬದಲಾಗುತ್ತದಂತೆ. ಅಂಡಗಳು ಸಿದ್ಧವಾದ ಸಮಯದಲ್ಲಿ ಚಿಂಪಾಂಜಿ ಹೆಣ್ಣುಗಳ ಧ್ವನಿ ಸ್ವಲ್ಪ ಕೀರಲಾಗುತ್ತದೆ ಎಂದು ಗಮನಿಸಲಾಗಿದೆ. ಹಸುಗಳ ಧ್ವನಿಯೂ ಬೆದೆಯ ಸಮಯದಲ್ಲಿ ಬದಲಾಗುತ್ತದೆ. ಹಕ್ಕಿಗಳಲ್ಲಿಯಂತು ಇದು ಸರ್ವೇ ಸಾಮಾನ್ಯ ಸಂಗತಿ.  ಇನಿಯನಿಗೆ ತನ್ನ ಇರವನ್ನಷ್ಟೆ ಅಲ್ಲ, ತಾನು ಗರ್ಭ ಧರಿಸಲು ಸಿದ್ಧ ಎಂದೂ ಕೆಲವು ಹಕ್ಕಿಗಳು ಹಾಡಿ ಹೇಳುತ್ತವೆ.

ಮನುಷ್ಯನಲ್ಲೂ ಇಂತಹ ಸಂಗತಿಗಳು ಇರಬಹುದೇ ಎನ್ನುವುದೇ ಬ್ರಯಾಂಟ್ರವರ ಅನುಮಾನ. ಪ್ರಾಣಿಗಳಿಗೂ ಮನುಷ್ಯರಿಗೂ ಒಂದು ವ್ಯತ್ಯಾಸವಿದೆ. ಹೆಚ್ಚಿನ ಪ್ರಾಣಿಗಳು ವರ್ಷಕ್ಕೊಮ್ಮೆ ಬೆದೆಗೆ ಬರುತ್ತವೆ. ಮನುಷ್ಯರಲ್ಲಿ ಹೀಗಲ್ಲ. ನಿಸರ್ಗದ ದಯೆ. ವರ್ಷಪೂರ್ತಿ ಮನುಷ್ಯ ಸಂತಾನಸಿದ್ಧ ಸ್ಥಿತಿಯಲ್ಲಿಯೇ ಇರುತ್ತಾನೆ.  ಗಂಡಸು ಸದಾ ವೀರ್ಯವಂತ. ಆದರೆ ಹೆಂಗಸರು ತಿಂಗಳಿಗೊಮ್ಮೆ ಮಾತ್ರ ಗರ್ಭಸಿದ್ಧ ಸ್ಥಿತಿಗೆ ಬರುತ್ತಾರೆ.  ತಿಂಗಳಲ್ಲಿ ಒಮ್ಮೆಯಷ್ಟೆ ಸ್ತ್ರೀಯಲ್ಲಿ ಅಂಡಾಣು ಬೆಳೆದು, ಫಲವಂತ ಸ್ಥಿತಿ ತಲುಪುತ್ತದೆ. ಆ ಸಮಯದಲ್ಲಿ ಅಂಡಾಣುವಿಗೆ ಗಂಡಸಿನಿಂದ ಬಂದ ವೀರ್ಯಾಣುವಿನ ಜೊತೆ ಸಿಕ್ಕರೆ ಗರ್ಭ ಫಲಿಸಿತೆನ್ನಬಹುದು. ಇಲ್ಲದಿದ್ದರೆ, ಅಂಡಾಣುವನ್ನು ದೇಹ ಹೊರ ಚೆಲ್ಲುತ್ತದೆ. ಇನ್ನೊಂದು ಅಂಡಾಣು ಬೆಳೆಯಲು ಸಿದ್ಧವಾಗುತ್ತದೆ.  ಮಹಿಳೆಯರ ತಿಂಗಳ ಋತುಚಕ್ರದ ನಟ್ಟ ನಡುವೆ ಒಂದೋ, ಎರಡೋ ದಿನಗಳಲ್ಲಿಯಷ್ಟೆ ಅಂಡಾಣು ಫಲವಂತ ಸ್ಥಿತಿಯಲ್ಲಿ ಇರುವುದಕ್ಕೆ ಸಾಧ್ಯ. ಉಳಿದ ದಿನಗಳಲ್ಲಿ ಅದಕ್ಕೆ ವೀರ್ಯಾಣುವಿನ ಜೊತೆ ದೊರಕಿದರೂ, ಗರ್ಭ ನಿಲ್ಲುವುದಿಲ್ಲ. ಹೀಗಾಗಿ ಮಾನವನ ಸಂತಾನ ಕ್ರಿಯೆಯಲ್ಲಿ ಈ ಎರಡು ದಿನಗಳು ಬಹಳ ಮುಖ್ಯವಾಗುತ್ತವೆ. ಒಂದು ರೀತಿಯಲ್ಲಿ ಇದು ಬೆದೆಯ ದಿನಗಳು ಎನ್ನಬಹುದು. ವಿಚಿತ್ರವೆಂದರೆ ಸ್ವತಃ ಮಹಿಳೆಗೇ ಈ ದಿನಗಳು ಯಾವುವು ಎನ್ನುವುದರ ಅರಿವಾಗುವುದು ಕಷ್ಟ.

ಜೀವಿವಿಜ್ಞಾನಿಗಳ ದೃಷ್ಟಿಯಲ್ಲಿ ಇದು ವಿಚಿತ್ರವೇ ಸರಿ.  ಜೀವಿಗಳ ಜೀವನದ ಗುರಿಯೇ ಸಂತಾನ ಸೃಷ್ಟಿಯಾಗಿರುವಾಗ, ಮಾನವನಲ್ಲಿ ಅದಕ್ಕೆ ಅನುಕೂಲವಾದ ಸ್ಥಿತಿ ಗೋಚರವಾಗದೇ ಹೋಗುವುದು ವಿಪರ್ಯಾಸವೇ ಸರಿ. ಅಥವಾ ಅದನ್ನು ನಾವು ಸರಿಯಾಗಿ ಗಮನಿಸುತ್ತಿಲ್ಲವೋ? ಇದು ಪ್ರಶ್ನೆ.  ಪರಸ್ಪರ ಆಕರ್ಷಣೆಯನ್ನುಂಟು ಮಾಡುವ ಫೆರೋಮೋನುಗಳಂತಹ ವಾಸನಾ ದ್ರವ್ಯಗಳು ಸ್ತ್ರೀ, ಪುರುಷರಲ್ಲಿ ಇವೆ ಎಂದು ಈ ಮೊದಲು ನಡೆದ ಹಲವಾರು ಸಂಶೋಧನೆಗಳು ಸೂಚಿಸಿವೆ.  ಗಂಡು-ಹೆಣ್ಣುಗಳ ಧ್ವನಿಯಲ್ಲಿನ ವ್ಯತ್ಯಾಸಗಳಿಗೆ ಅವರ ದೇಹದಲ್ಲಿರುವ ಹಾರ್ಮೋನುಗಳಲ್ಲಿನ ವ್ಯತ್ಯಾಸವೇ ಕಾರಣ ಎನ್ನುವುದೂ ಸ್ಪಷ್ಟ.

ಋತುಚಕ್ರದಲ್ಲಿಯೂ ಈ ಹಾರ್ಮೋನುಗಳ ಪ್ರಮಾಣ ನಿಧಾನವಾಗಿ ವ್ಯತ್ಯಾಸವಾಗುತ್ತಿರುತ್ತದೆ. ಆದರೆ ಅಂಡಾಣು ಫಲವಂತ ಸ್ಥಿತಿಗೆ ತಲುಪುವ ಎರಡು ದಿನಗಳ ಮೊದಲು ಹಾಗೂ ಮೂರು ದಿನಗಳ ಅನಂತರ ಸ್ತ್ರೀಯರ ದೇಹದಲ್ಲಿ ಲ್ಯುಟಿನೈಜಿಂಗ್ ಹಾರ್ಮೋನ್ ಎನ್ನುವ ಹಾರ್ಮೋನಿನ ಪ್ರಮಾಣ ಇದ್ದಕ್ಕಿದ್ದ ಹಾಗೆ ಹೆಚ್ಚಾಗುತ್ತದೆ. ಇದು ಅಂಡಾಣು ಸಿದ್ಧವಾದ ಅವಧಿ. ಹಾಗಿದ್ದರೆ ಈ ಸಂದರ್ಭದಲ್ಲಿ ಧ್ವನಿಯಲ್ಲಿ ಏನಾದರೂ ವ್ಯತ್ಯಾಸಗಳಿರಬಹುದೋ ಎಂದು ಆಲೋಚಿಸಿದ ಬ್ರಯಾಂಟ್ ಒಂದು ಪ್ರಯೋಗ ನಡೆಸಿದರು. ಸುಮಾರು ಎಪ್ಪತ್ತು ಮಹಿಳೆಯರ ಧ್ವನಿಗಳನ್ನು ಋತು ಚಕ್ರದ ಆರಂಭದಿಂದ ಮತ್ತೊಂದು ಋತುಚಕ್ರದ ಆರಂಭವಾಗುವವರೆಗೆ (ಅಂದರೆ ಒಂದು ತಿಂಗಳು) ಧ್ವನಿಮುದ್ರಿಸಿಕೊಂಡರು. ಅದೇ ಸಮಯದಲ್ಲಿ ಅವರ ರಕ್ತ ಹಾಗೂ ಮೂತ್ರದಲ್ಲಿ ವಿವಿಧ ಹಾರ್ಮೋನುಗಳ ಪ್ರಮಾಣವನ್ನು ವಿಶ್ಲೇಷಿಸಿದರು. ಅವರ ಧ್ವನಿಯ ಕಂಪನಾಂಕಗಳನ್ನು ವಿಶ್ಲೇಷಿಸಿದರು. ಮಹಿಳೆಯರು ಫಲವಂತ ಸ್ಥಿತಿ ತಲುಪುತ್ತಿದ್ದ ಹಾಗೆ, ಅಂದರೆ ಲ್ಯೂಟಿನೈಜಿಂಗ್ ಹಾರ್ಮೋನ್ನ ಪ್ರಮಾಣ ಹೆಚ್ಚಿರುವ ದಿನಗಳಲ್ಲಿ, ಅವರ ಸ್ವರದ ಸ್ಥಾಯಿಯೂ ಗಮನಾರ್ಹವಾಗಿ ಹೆಚ್ಚಿದ್ದು ಕಂಡು ಬಂತು. ಅರ್ಥಾತ್, ಗರ್ಭವಾಗಲು ಅಂಡಾಣು ಸಿದ್ಧವಾಗಿದ್ದಾಗ ಮಹಿಳೆಯರ ಸ್ವರದ ಕಂಪನಾಂಕ ಅತಿ ಹೆಚ್ಚಾಗಿತ್ತು. ಅನಂತರ ಅದರಲ್ಲ್ಲಿ ಇಳಿತ ಉಂಟಾಯಿತು ಎನ್ನುತ್ತಾರೆ ಬ್ರಯಾಂಟ್.

ಮಾತಿನ ವೇಳೆ ಧ್ವನಿಯ ಸ್ಥಾಯಿ ಬದಲಾಗಬಹುದು. ಆದರೆ ಸಾಮಾನ್ಯವಾಗಿ ಆ, ಹೂ ಕಾರಗಳ ಸ್ವರೂಪ ಬದಲಾಗುವುದಿಲ್ಲ. ಋತುಚಕ್ರದ ಕೆಲವು ದಿನಗಳಲ್ಲಿ ಇವುಗಳಲ್ಲಿಯೂ ಬದಲಾವಣೆ ಕಾಣುತ್ತದೆ ಎನ್ನುತ್ತದೆ ಬ್ರಯಾಂಟ್ರ ಸಂಶೋಧನೆ. ಹಾಗಿದ್ದರೆ ಈ ಬದಲಾವಣೆ ಒಂದು ಗುಪ್ತ ಸಂಕೇತವೇ? ಎನ್ನುವ ಕುತೂಹಲಕರ ಪ್ರಶ್ನೆಯನ್ನು ಬ್ರಯಾಂಟ್ ಮುಂದಿಟ್ಟಿದ್ದಾರೆ. ಒಂದೆರಡು ಮಹಿಳೆಯರಲ್ಲಿ ಹೀಗಾಗಿದ್ದರೆ ಅದು ಆಕಸ್ಮಿಕವೆನ್ನಬಹುದಿತ್ತು. ಎಲ್ಲ ಮಹಿಳೆಯರ ಸ್ವರ ಸ್ಥಾಯಿಯೂ ಕ್ರಮೇಣ ಏರುಮುಖವಾಗಿದ್ದುವಂತೆ. ಅರ್ಥಾತ್, ಸ್ವರದ ಕಂಪನಾಂಕ ಮಹಿಳೆಯರ ಫಲವತ್ತತೆಯ ದಿನಗಳಲ್ಲಿ ಅತಿ ಹೆಚ್ಚಾಗಿರುತ್ತದೆ.

ಇನಿಯಳ ದನಿ ಹೀಗೆ ತಿಂಗಳ ಕೆಲವು ದಿನಗಳಲ್ಲಿ ಇನ್ನಷ್ಟು ಇನಿದಾಗುವುದು ಗಂಡಸರಿಗೆ ಗೊತ್ತಾಗುತ್ತದೆಯೋ? ಗೊತ್ತಿಲ್ಲ ಎನ್ನುತ್ತಾರೆ ಬ್ರಯಾಂಟ್. ಗಂಡಸರಿಗೆ ಈ ವ್ಯತ್ಯಾಸವನ್ನು ಪತ್ತೆ ಹಚ್ಚುವುದು ಸಾಧ್ಯವೋ, ಇಲ್ಲವೋ ಎನ್ನುವುದರ ಪರೀಕ್ಷೆ ಇನ್ನು ಆಗಬೇಕಷ್ಟೆ. ಸಾಮಾನ್ಯವಾಗಿ ಗಂಡಸರು ಹೆಂಗಸರಲ್ಲಿ ಉಚ್ಛ ಸ್ಥಾಯಿಯ ಸ್ವರವಿರುವವರನ್ನು ಮೆಚ್ಚುತ್ತಾರೆನ್ನುವುದಕ್ಕೆ ಪುರಾವೆಗಳಿವೆ. ಒಟ್ಟಾರೆ ಪ್ರಾಣಿಗಳಲ್ಲಿ ಕಾಣುವಂತಹುದೇ ವ್ಯತ್ಯಾಸ ಮನುಷ್ಯರಲ್ಲಿಯೂ ಸಹಜವಾಗಿಯೇ ಇದೆ ಎನ್ನುವುದು ಬ್ರಯಾಂಟ್ರವರ ತೀರ್ಮಾನ.

Gregory A Bryant and Martie G Haselton; Vocal cues of ovulation in human females, Biology Letters, 5, Pp 12-15, 2009