ಇಲ್ಲ, ಇನ್ನಿಲ್ಲ ನಮಗೆ ನೆಹರೂ-
ಈ ಯುಗದ ಪುಣ್ಯ ಹಣ್ಣಾಗಿ ಬಂದ ಈ ನಾಡ ಸ್ಫೂರ್ತಿಯುಸಿರು.
ಭರತಖಂಡದಲಿ ಕೋಟಿ ಹೃದಯದಲಿ
ಅವನ ಹೆಸರೆ ಹೆಸರು !
ನಮಗಿಲ್ಲ ಇನ್ನು ನೆಹರೂ-
ಕಗ್ಗತ್ತಲಲ್ಲಿ ಮುಖ ಮುದುರಿ ನಿಂತ ಬಾವುಟದ ಮೇಲೆ
ನಿಟ್ಟುಸಿರ ಗಾಳಿ ತೀಡಿ,
ಹಸುರು ತೋಟದಲಿ ನಸುನಕ್ಕು ನಿಂತ ಹೂವೆಲ್ಲ ಉದುರಿ ಬಾಡಿ,
ಎಲ್ಲಿ ನೋಡಿದರು ವೀಣೆ-ತಂಬೂರಿ ತಂತಿ ಸಡಿಲವಾಗಿ,
ಲಕ್ಷ ರೇಡಿಯೋ ಕೊರಳು ಗದ್ಗದಿಸಿ
ಕಣ್ಣೀರ ದನಿಯ ಹರಿಸಿ,
ದಿಕ್ಕು ದಿಕ್ಕಿನಲಿ ರಿಕ್ತಗಗನದಲಿ
ಚಿಕ್ಕೆ ಬಿಕ್ಕುತಿವೆ, ‘ಎಲ್ಲಿ ನಮ್ಮ ನೆಹರೂ,
ಎಲ್ಲಿ ನಮ್ಮ ನೆಹರೂ’-
ಸಿರಿಮನೆಯ ತೊರೆದು ಸೆರೆಮನೆಯ ವರಿಸಿ
ಸಿಡಿಗುಂಡಿಗೆದೆಯನೊಡ್ಡಿ,
ಹೆಜ್ಜೆ ಹೆಜ್ಜೆಗೂ ಧೈರ್ಯ ಉತ್ಸಾಹ ಪೌರುಷದ
ಬೆಳಕನೆರೆದು,
ನಲವತ್ತು ಕೋಟಿ ಮನದ ಮಗ್ಗದಲಿ
ಲಾಳಿಯಾಡಿದಾತ,
ಸ್ವತಂತ್ರ ಭಾರತ ಮಹಾದೇಗುಲದ
ಶಿಲ್ಪಿವರ್ಯನೀತ ;
ಈ ನಾಡಿನೊಂದು ಧ್ವಜ ದಂಡದಂತೆ
ಮುಗಿಲುದ್ದ ನಿಂತ ವೀರ
ಅವನ ನೆರಳಿನಡಿ ಮೊರೆಯುತಿಹುದು ಇಗೊ
ಜನಸಮುದ್ರ ತೀರ !
ಜಾತ್ರೆ ಮುಗಿಯಿತೋ, ಗುಡಿಯ ಸೇರಿತಿಗೊ
ಸ್ವತಂತ್ರ ಭಾರತದಾಸೆಭರವಸೆಯ ಉತ್ಸಾಹದ ತೇರು ;
ಇದರ ನಿಲುವಿನಲಿ ಒಂದು ಯುಗವೆ
ನಿಲುಗಡೆಗೆ ಬಂತು, ಇಂಥ ಕಾಲವನು
ಮತ್ತೆ ತರುವರಾರು ?
ಓ ಇನ್ನು ನಮಗೆ ಯಾರು ?
ಮೊರೆವ ಕಡಲಲ್ಲಿ ನಾಡ ನೌಕೆಯನು ನಡೆಸುವವರು ಯಾರು ?
ಕಷ್ಟ-ನಷ್ಟದಲಿ ಮಂದಹಾಸವನು ಬಿತ್ತಿ ಬೆಳೆವರಾರು ?
ಪಾಚಿಗಟ್ಟುವೀ ಮಡುಗಳಲ್ಲಿ ಹೊಸ ಹೊನಲ ತರುವರಾರು ?
ಬಾಡುತಿರುವ ಈ ಸಸಿಗಳೆದೆಗೆ ತುಂತುರನು ಕರೆವರಾರು ?
ಇವನಾದ ಮೇಲೆ ಯಾರು ?
ಇವನಾದ ಮೇಲೆ ಯಾರು ?
ಸಲ್ಲದು ಭಯ, ಸಲ್ಲದು ನಿರಾಶೆ, ಸಲ್ಲದು
ಇಲ್ಲದ ಅವಿವೇಕ.
ಹಿಡಿದು ನಡೆಯೋಣ ಸದಾಕಾಲದಲಿ
ಸ್ಥಾಯಿಯಾಗಿರುವ ಸಮತೂಕ.
ಧೀರರ ಮರಣಕೆ ಹುಯ್ಯಲಿಡುವುದೂ ಅಪಚಾರ,
ಧೈರ್ಯದ ನಡೆ
ಧೈರ್ಯದ ನುಡಿ ಈ ಎರಡೇ ನಮಗಾಧಾರ.
ಎತ್ತರವಾಗಿದೆ, ಬಿತ್ತರವಾಗಿದೆ, ಉಜ್ವಲವಾಗಿದೆ
ನೆಹರೂ ಕಟ್ಟಿದ ಈ ದೇಶ,
ತುಂಬಿಕೊಳಲಿ ನಿನ್ನ ಎದೆಯೊಳಗೆ ಅವನಾದರ್ಶದ
ಆವೇಶ.
ಆ ಹೆಸರಿಗೆ ನೀನುಸಿರಾಗು,
ಅವನು ಕಟ್ಟಿರುವ ಕನಸೆಲ್ಲಕ್ಕೂ ನನಸಾಗು
ಅವನಾಸೆಗೆ ನೀ ಪೂರಕವಾಗು,
ಅವನಿಗೆ ಒಪ್ಪುವ ಸ್ಮಾರಕವಾಗು.
Leave A Comment