ಶತಮಾನದಿಂದ ಹತಭಾಗ್ಯರಾಗಿ
ಕೆಳಗುರುಳಿ ಬಿದ್ದ ಜನವೇ,
ಕುರುಡು ಕತ್ತಲೆಗೆ ಕಣ್ಣ ಬೆಳಕುಗಳ
ತೆತ್ತು ಮಲಗಿದವರೇ-

ಹೊಲವಿದ್ದು ಕೂಡ ಉಳಲಾಗಲಿಲ್ಲ
ಬಲವಿದ್ದು ಬಾಗಿದವರೇ.
ಬಾಯಿದ್ದು ಕೂಡ ಮಾತಾಡದಂತೆ
ಕಣ್ಣಲ್ಲೆ ಕೊರಗಿದವರೇ-

ತೆನೆ ತುಂಬಿ ನಿಂತ ಹೊಲ-ಗದ್ದೆ ಬದಿಗೆ
ಹಸಿವಿಂದ ಸತ್ತ ಜನವೇ,
ಮಹಲು-ಕಾರುಗಳ ಕೆಂಪು ಟೇಪುಗಳ
ಉರುಳಲ್ಲಿ ನರಳಿದವರೇ-
ಸಾಧು-ಸಂತ-ಮಠ ದೇಗುಲ ವರ್ಗದ
ಅಜಗರ ಪೀಡಿತ ಜನವೇ,
ಮುಗ್ಧ ಶ್ರದ್ಧೆಯಲಿ ಮಂಡೆಯನೊಪ್ಪಿಸಿ
ಬತ್ತಲಾದ ಜನವೇ-

ದಾರಿಯುದ್ದಕೂ ತೊಂಡುಗೂಳಿಗಳ
ತುಳಿತಕ್ಕೆ ಸಿಕ್ಕ ಜನವೇ,
ಬಿರುಗಾಳಿಯಲ್ಲಿ ಗರಿಯುದುರಿದವರೆ
ಇನ್ನೆಂದು ಬೆಳಗು ನಿಮಗೆ?