ಇದೇ ಸಮಯ ಬೆಳಗಾವಿಗೆ ಕೊಪ್ಪಳ ಜಯರಾಮಾಚಾರ್ಯರು ಕೀರ್ತನೆಗಾಗಿ ಬಂದಿದ್ದರು. ಹಿಮ್ಮೇಳದಲ್ಲಿ ಹಾಡಲು ಅವರಿಗೆ ಯಾರೂ ಸಾಥಿದಾರರು ದೊರೆತಿರಲಿಲ್ಲ. ತಮ್ಮ ಬೆಟಗೇರಿಯ ಮನೆಯಲ್ಲಿ ಅದಾಗಲೇ ತಾಯಿಯ ಜತೆಯಾಗಿಯೂ,ಸ್ವಂತವಾಗಿಯೂ ದೇವರ ಪ್ರಾರ್ಥನೆ, ದಾಸರ ಪದಗಳನ್ನು ಸರಾಗವಾಗಿ ಹಾಡುವುದರಲ್ಲಿ ನಿಷ್ಣಾತರಾಗಿದ್ದ ತರುಣ ಆನಂದಕಂದರು ತಾವೇ ಜಯರಾಮಾಚಾರ್ಯರ ಕೀರ್ತನೆಗೆ ಹಿಮ್ಮೇಳ ಹಾಡುಗಾರನಾಗಿ ನಿಂತರು. ಕೀರ್ತನಕಾರ ತಾಳಕ್ಕೆ ತಕ್ಕಂತೆ ಹಾಡಿ, ಕೇಳುಗರ ಮನ ಮೆಚ್ಚಿಸಿದರು. ಯುವಕ ಆನಂದಕಂದರ ಹಾಡುಗಾರಿಕೆ ಎಲ್ಲರಿಗೂ ಹಿಡಿಸಿತ್ತು. ಆಕಸ್ಮಿಕವಗಿ ಅಲ್ಲಿ ಕೀರ್ತನೆ ಕೇಳಲು ಬಂದ ಕಾವ್ಯಾನಂದರು, (ನರಸಿಂಹಾಚಾರ್ಯ ಪುಣೇಕರ) ತರುಣ ಆನಂದಕಂದರ ಲಕ್ಷಣ, ಹಾಡುಗಾರಿಕೆ ಹಾಗೂ ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದರು.

ಅಷ್ಟರಲ್ಲಿಯೇ ಆನಂದಕಂದರ ಒಂದೆರಡು ಕವಿತೆಗಳು, ಆಗ ಧಾರವಾಡದಿಂದ ಹೊರಡುತ್ತಿದ್ದ ‘ಪ್ರಭಾತ’ ಎಂಬ ಕವಿತೆಗಾಗಿಯೇ ಮೀಸಲಾಗಿದ್ದ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಈ ‘ಪ್ರಭಾತ’ ಮಾಸಪತ್ರಿಕೆಯ ಜತೆ ಕಾವ್ಯಾನಂದರ ವಿಶೇಷ ಸಂಬಂಧವಿದ್ದ ಬಗೆಗೆ ಆನಂದಕಂದರಿಗೆ ತಿಳಿದಿತ್ತು. ಪ್ರತಿಯೊಂದು ‘ಪ್ರಭಾತ’ ಸಂಚಿಕೆಯಲ್ಲಿ ಕಾವ್ಯಾನಂದರ ರ್ಮೂನಾಲ್ಕು ಕವಿತೆಗಳು ಇದ್ದೇ ಇರುತ್ತಿದ್ದವು. ಅವರ ಕವಿತೆಗಳನ್ನು ಆನಂದಕಂದರು ತುಂಬ ಮೆಚ್ಚಿಕೊಂಡಿದ್ದರು. ಆ ಕವನಗಳಲ್ಲಿಯ ಹೊಸತನ ಇವರಿಗೆ ಹಿಡಿಸಿತ್ತು. ಅಕಸ್ಮಾತ್‌ ಭೇಟಿಯಾದ ತರುಣನ ಮುಖಲಕ್ಷಣಗಳನ್ನೆಲ್ಲ ಓದಿಕೊಂಡಂತೆ, ಈ ಯುವಕನಿಗೆ ಒಂದು ದಾರಿ ತೋರಬೇಕೆಂದು ಕಾವ್ಯಾನಂದರು, ಸಂಸ್ಕೃತ ಕಲಿಸಲು ತಮ್ಮ ಜತೆ ಆನಂದಕಂದರನ್ನು ಕಿತ್ತೂರಿಗೆ ಕರೆತಂದರು.

ಆನಂದಕಂದರೇ ಈ ಪ್ರಸಂಗವನ್ನು ಈ ರೀತಿ ವಿವರಿಸುತ್ತಾರೆ:

“…ಅನಾಯಾಸವಾಗಿ ಅವರನ್ನು (ಕಾವ್ಯಾನಂದರನ್ನು) ಕಾಣುವ ಯೋಗ ಬಂದಾಗ ನಾನಾಗಿಯೇ ಅವರಿಗೆ ನನ್ನ ಪರಿಚಯ ಮಾಡಿಕೊಟ್ಟೆ. ಅವರು ಪ್ರೀತಿಯಿಂದ ನನ್ನೊಡನೆ ಮಾತನಾಡಿದರು. ‘ಪ್ರಭಾತ’ ಪತ್ರಿಕೆಯಲ್ಲಿ ನನ್ನ ಕವಿತೆಗಳು ಪ್ರಕಟವಾಗಿರುವ ವಿಷಯವನ್ನು ಅವರಿಗೆ ತಿಳುಹಿದೆ. ಅವರು ನನ್ನ ಮುಖವನ್ನು ನಿಟ್ಟಿಸಿ ನೋಡಿದರು. ಒಂದೆರಡು ನಿಮಿಷ ಹಾಗೆಯೇ ನೋಡುತ್ತಿದ್ದು, ಬಳಿಕ ಬಲಗೈಯ ಅಂಗೈಯನ್ನು ತೋರಿಸಲು ಹೇಳಿದರು. ನಾನು ಸಂಕೋಚಭಾವದಿಂದಲೇ ಅವರೆದುರು ಅಂಗೈಯನ್ನು ನೀಡಿದೆ. ಅವರು ಕೂತೂಹಲಿಗಳಾಗಿ ಕೆಲಹೊತ್ತು ನೋಡಿ,ನನ್ನನ್ನು ಮೆಚ್ಚಿಕೆಯ ನೋಟಗಳಿಂದ ನೋಡುತ್ತ ಕೇಳಿದರು:

“ನೀನೀಗ ಏನು ಮಾಡುತ್ತಿದ್ದಿಯೆ?”

ನಾನು ವಿನಯದಿಂದ ಮೆಲುದನಿಯಲ್ಲಿ ಹೇಳಿದೆ:

“ಏನೂ ಮಾಡುತ್ತಿಲ್ಲ. ನೌಕರಿ ಹುಡುಕಲೆಂದು ಹಳ್ಳಿಯನ್ನು ಬಿಟ್ಟು ಇಲ್ಲಿಗೆ ಬಂದಿದ್ದೇನೆ. ಬೇಗನೆ ಮಾಸ್ತರಿಕೆ ಸಿಗುವ ಆಶೆಯಿದೆ.”

ಮುಖವನ್ನು ಕೊಂಕಿಸಿ ಕಾವ್ಯಾನಂದರು ಮೆಲುನಗೆ ನಗುತ್ತ ಹೇಳಿದರು:

“ಹಳ್ಳಿಯ ಮಾಸ್ತರನ ಕೆಲಸವನ್ನು ಮಾಡುವ ಕೈಯಲ್ಲಪ್ಪಾ ನಿನ್ನದು!”

ನಾನು ಮಾತನಾಡದೆ, ಕುತೂಹಲಭಾವದಿಂದ ಅವರತ್ತ ನೋಡತೊಡಗಿದೆ.

ಅವರು ಮತ್ತೆ ತಮ್ಮ ಮಾತನ್ನು ಮುಂದುವರಿಸಿದರು.

“ನಿನ್ನದು ಕೀರ್ತಿಶಾಲಿಯ ಕೈಯಿದೆ. ನಿನಗೆ ಒಳ್ಳೆಯ ಭವಿಷ್ಯವಿದೆ!”

ನಾನು ಬಿನ್ನಯಿಸಿದೆ:

“ನನ್ನ ಚಿಕ್ಕತನದಲ್ಲಿ ನನ್ನ ತಂದೆ ಕೂಡ ನನ್ನ ಭವಿಷ್ಯದ ವಿಚಾರದಲ್ಲಿ ತಮ್ಮ ಹಾಗೆಯೆ ಹೇಳುತ್ತಿದ್ದರಂತೆ. ನಮ್ಮ ತಾಯಿ ಆಗಾಗ ಈ ಮಾತನ್ನು ನನ್ನೆದುರು ಆಡುತ್ತಿದ್ದರು”

“ನಿನಗೆ ತಾಯಿ ಇದ್ದಾರೆಯೆ?”

“ತಾಯಿಯಲ್ಲ; ತಂದೆಯಿಲ್ಲ!”

“ಹಾಗಾದರೆ ನನ್ನೊಂದಿಗೆ ಬರಲು ಸಿದ್ಧನಾಗುವೆಯಾ? ನಿನಗೆ ಸಂಸ್ಕೃತ ಸಾಹಿತ್ಯದ ಅಭ್ಯಾಸ ಮಾಡಿಸುತ್ತೇನೆ ಎಲ್ಲ ಬಗೆಯಿಂದಲೂ ನಿನ್ನ ಅಭ್ಯುದಯವಾಗುವಂತೆ ನೋಡಿಕೊಳ್ಳುತ್ತೇನೆ.”

ನನ್ನ ಮುಗ್ಧ ಮನಸ್ಸು ಒಮ್ಮೆಲೆ ಒಪ್ಪಿಕೊಂಡಿತು. ಕಾವ್ಯಾನಂದರ ಶಿಷ್ಯತ್ವವನ್ನು ವಹಿಸಿ, ಅವರೊಂದಿಗೆ ಕಿತ್ತೂರಿಗೆ ಹೊರಟು ಬಿಟ್ಟೆನು. ಹೆಡ್‌ಕ್ಲಾರ್ಕ್ ನನ್ನ ರೂಪಾಯಿಗಳ ದಾರಿ ಕಾಯುತ್ತ ಕುಳಿತಿರಬಹುದು. ನಾನು, ಅವನು ದಯಪಾಲಿಸಿದ್ದ ನೌಕರಿಯ ದಾರಿಯನ್ನು ಕಾಯದೆ, ಬೇರೆ ದಾರಿಯನ್ನು ಹಿಡಿದು ನಡೆದ.”

[1][1]  ‘ಆನಂದಕಂದ’- ನನ್ನ ಸಾಹಿತ್ಯ ಕೃಷಿಯ ಸಾರತತ್ತ್ವ. ಪುಟ ೯೪-೯೫