ಸೂಚನೆ ||

ರಘುವರನ ತುರಗಮೇಧಾಧ್ವರದ ಕುದುರೆಯನ |
ಲಘು ಪರಾಕ್ರಮಿ ಲವಂ ತರಳತನದಿಂ ಕಟ್ಟ |
ಲಘಟಿತಮೆನಿಸಿತು ಶತ್ರುಘ್ನಲಕ್ಷ್ಮಣರ ತಳತಂತ್ರಕ್ಕೆ ಬಿಡಿಸಿ ಕೊಳಲು ||

ಹಿಮಕರಕುಲೇಂದ್ರ ಕೇಳ್ ವಾಲ್ಮೀಕಿ ಮುನಿಪನಾ |
ಶ್ರಮದೊಳ್ ಸಮಸ್ತಕಲೆಗಳನರಿದು ಕಾಕ ಪ |
ಕ್ಷಮನಾಂತು ಜಾನಕಿಯ ಶುಶ್ರೂಷೆಯೊಳ್ ಸಂದು ಋಷಿಯ ಚಿತ್ತಕ್ಕೆ ಬಂದು ||
ಯಮವಳರಿರೆ ಕಂಡು ಸಂಪ್ರೀತಿಯಂ ತಾಪಸೋ |
ತ್ತಮನಿತ್ತನಿಷು ಚಾಪ ಚರ್ಮ ಖಡ್ಗಂಗಳಂ |
ರಮಣೀಯ ಕವಚ ಕುಂಡಲ ಕಿರೀಟಂಗಳಂ ತನ್ನಯ ತಪೋಬಲದೊಳು ||೧||

ಅವರ್ಗಳಂತಿರಲಯೋಧ್ಯಾಪುರದೊಳಿತ್ತ ರಾ |
ಘವನಖಿಳ ಧರಣಿಯಂ ಪಾಲಿಸುತ ಸೌಖ್ಯಾನು |
ಭವದೊಳೊಂದಿಸದೆ ರಾವಣವಧೆಯೊಳಂದು ಬಂದಾ ಬ್ರಹ್ಮಹತಿ ತನ್ನನು ||
ಅವಗಡಿಸಲದಕೆ ನಿಷ್ಕೃತಿ ಯಾವುದೆಂದು ಸಾ |
ರುವ ನಿಗಮದರ್ಥಮಂ ತಿಳಿದು ಹಯಮೇಧಮಂ |
ತವೆ ನೆಗಳ್ಚುವನಾಗಿ ನಿಶ್ಚೈಸಿ ಕರೆಸಿದಂ ವರವಸಿಷ್ಠಾದಿಗಳನು ||೨||

ವಾಮದೇವಾತ್ರಿ ಗಾಲವ ಗುರು ವಸಿಷ್ಠ ವಿ |
ಶ್ವಾಮಿತ್ರರಂ ಕರೆಸಿ ಹಯಮೆಂದಲಕ್ಷಣವ |
ನಾ ಮುನಿಗಳಂ ಕೇಳ್ವನುಜ್ಞೆಗೊಳಲವರಿದಕೆ ನಿಜಪತ್ನಿವೇಳ್ವುದೆನಲು ||
ಹೇಮ ನಿರ್ಮಿತವಾದ ಜಾನಕಿಯನಿರಿಕೊಂ |
ಡೀ ಮಹಾಯಜ್ಞಮಂ ನಡೆಸ ವೆಂ ತಾನೆಂದು |
ರಾಮಚಂದ್ರಂ ನಿಖಿಳಋಷಿಗಲನೊಡಂಬಡಿಸಿ ಶಾಲೆಯಂ ಮಾಡಿಸಿದನು ||೩||

ಬಳಿಕ ವೇದೋಕ್ತ ಪ್ರಕಾರದಿಂ ದೀಕ್ಷೆಯಂ |
ತಳೆದು ರಘುನಾಥಂ ತುರಂಗಮಂ ಪೂಜೆಗೈ |
ದಿಳೆಯೊಳ್ ಚರಿಸಲದರ ಪಣೆಗೆ ತನ್ನಗ್ಗಳಿಕೆಯಂ ಬರೆದ ಪತ್ರಿಕೆಯನು ||
ಅಳವಡಿಸಿ ಕೂಡೆ ಮೂರಕ್ಷೌಹಿಣೀಮೂಲ |
ಬಲಸಹಿತ ವೀರಶತ್ರುಘ್ನನಂ ಕಾವಲ್ಗೆ |
ಕಳುಹಿಬಿಡಲಾ ಹಯಂ ತಿರುಗುತಿರ್ದುದು ಧರೆಯಮೇಲಖಿಳ ದೆಸೆದೆಸೆಯೊಳು ||೪||

ಬಲ್ಗಯ್ಯ ನೃಪರಂಜಿ ತಡೆಯದೆ ರಘೂದ್ವಹನ |
ಸೊಲ್ಗೇಳಿ ನಮಿಸಲಿಳೆಯೊಳ್ ಚರಿಸುತಧ್ವರದ |
ನಲ್ಗುದುರೆ ಬಂದು ವಾಲ್ಮೀಕಿಯ ನಿಜಾಶ್ರಮದ ವಿನಿಯೋಗದುಪವನದೊಳು ||
ಪುಲ್ಗಳ ಪಸುರ್ಗೆಳಸಿ ಪೊಕ್ಕೊಡಾ ತೋಟಗಾ |
ವಲ್ಗೆ ತನ್ನೊಡನಾಡಿಗಳ್ ಕೋಡಿ ಲೀಲೆ ಮಿಗೆ |
ಬಿಲ್ಗೊಂಡು ನಡೆತಂದವಂ ಕಂಡನರ್ಚಿತ ಸುವಾಚಿಯಂ ವೀರ ಲವನು ||೫||

ಎತ್ತಣ ತುರಂಗಮಿದುನ ಪೊಕ್ಕು ಪೂದೋಟಮಂ |
ತೊತ್ತಳದುಳಿದುದು ವಾಲ್ಮೀಕಿಮುನಿನಾಥ ನೇ |
ಪೊತ್ತು ಮಾರೈವುದೆಂದೆನಗೆ ನೇಮಿಸಿ ಪೋದನಬ್ಧಿಪಂ ಕರೆಸಲಾಗಿ ||
ಮತ್ತೆ ವರುಣನ ಲೋಕದಿಂ ಬಂದು ಮುಳಿದಪನೆ |
ನುತ್ತ ಹಯದೆಡೆಗೆ ನಡೆತಂದು ನೋಡಲ್ಕದರ |
ನೆತ್ತಿಯೊಳ್ ಮೆರೆವ ಪಟ್ಟದ ಲಿಖಿತಮಂ ಕಂಡು ಲವನೋದಿಕೊಳುತಿರ್ದನು ||೬||

ಉರ್ವಿಯೊಳ್ ಕೌಸಲ್ಯ ಪಡೆದ ಕುವರಂ ರಾಮ |
ನೊರ್ವನೇ ವೀರನಾತನ ಯಜ್ಞತುರಗಮಿದು |
ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ ||
ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯೆಂ |
ಸರ್ವಜನಮುಂ ಬಂಜೆಯೆನ್ನದಿರ್ದಪುದೆ ತನ |
ಗುರ್ವತೋಳ್ಗಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು ||೭||

ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ |
ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್ |
ಮಿಗೆ ನಡುಗಿ ಬೇಡಬೇಡರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು ||
ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ |
ಮಗನಿದಕೆ ಬೆದರುವನೆ ಪೋಗಿ ನೀವೆಂದು ಲವ |
ನಗಡುತನದಿಂದೆ ಬಿಲ್ದಿರುವನೇರಿಸಿ ತೀಡಿ ಜೇಗೈದು ನಿಂತಿರ್ದನು ||೮||

ಕುದುರೆಗಾವಲ ಸುಭಟರನಿರೊಳೊದಗಿ ಬಂದು |
ಕದಳೀದ್ರುಮಕೆ ಕಟ್ಟಿದ ತುರಂಗಮಂ ಕಂಡು |
ಸದಮಲ ಬ್ರಹ್ಮಚಾರಿಗಳನಾರ್ಭಟಿಸಿ ವಾಜಿಯನೇಕೆ ಬಿಗಿದಿರೆನಲು ||
ಬೆದರಿ ನಾವಲ್ಲಿವಂ ಬೇಡಬೇಡೆನೆ ಬಂಧಿ |
ಸಿದನೆಂದು ಲವನಂ ಕರಾಗ್ರದಿಂ ತೋರಿಸಿದ |
ರದಟರೀತಂ ತರಳ ನರಿಯದೆಸೆಗಿದನೆಂದು ಬಿಡಹೇಳಿ ಗರ್ಜಿಸಿದರು ||೯||

ವಿಕ್ರಮವಿದೇಕೆ ಬಿಡೆನಶ್ವಮಂ ಮೇಣ್ಬಿಡಲು |
ಪಕ್ರಮಿಸಿದವರ್ಗಳ ಕರಮನರಿವೆನಲವರ ||
ತಿಕ್ರಮಿಸಿ ವಾಜಿಯಂ ಬಿಡುವೊಡೈತರಲವರ ಕೈಗಳಂ ಕೋಪದಿಂ ||
ವಕ್ರಮಿಲ್ಲದೆ ಕೋಲ್ಗಳಿಂದೆಚ್ಚು ಕಡಿದೊಡನೆ |
ಶಕ್ರನದ್ರಿಯ ಮೇಲೆ ಮಳೆಗರೆವೊಲಾ ಸೈನ್ಯ |
ಚಕ್ರಮಂ ಮುಸುಕಿದಂ ವೀರ ಲವನಾಕ್ಷಣದೊಳೇನೆಂಬೆನದ್ಭುತವನು ||೧೦||

ಬಾಲಕನ ಮೇಲೆ ಕವಿದುದು ಬಳಿಕ ಮುಳಿದು ಹಯ |
ಪಾಲಕಬಲಂ ಕರಿ ತುರಗ ರಥ ಪದಾತಿಗಳ |
ಜಾಲಕವನೋರ್ವನೆನ್ನದೆ ಬಾಣ ಪರಶು ತೋಮರ ಶಕ್ತಿ ಸುರಗಿಗಳೊಳು ||
ಕಾಲಕಖಿಳ ಪ್ರಾಣಿಗಳನೈದೆ ಸಂಹರಿಪ |
ಶೂಲಕರನೆನೆಲವಂ ಕೊಲುತಿರ್ದನನಿಬರಂ |
ಕೋಲ ಕಡುವಳೆಗರೆದು ಮುನಿಪನಿತ್ತಕ್ಷಯ ನಿಷಂಗಮೆಸೆದಿರೆ ಬೆನ್ನೊಳು ||೧೧||

ಸಂಖ್ಯೆಯಿಲ್ಲದೆ ಮೇಲೆ ಬೀಳ್ವಕೈದುಗಳೆಲ್ಲ |
ಮಂ ಖಂಡಿಸುತ್ತೊಡನೆ ಮುತ್ತಿದರಿ ಚತುರಂಗ |
ಮಂ ಖಾತಿಯಿಂದೆ ಸಂಹರಿಸುತೊಂದೊಂದು ರಿಪುಬಾಣಕೈದಂಬುಗಳನು ||
ಪುಂಖಾನುಪುಂಖದಿಂದಿಸುವ ಬಾಲಕನಿಸುಗೆ |
ಯಿಂ ಖಿಲಪ್ರಾಯಮಾಗಿರ್ದ ನಿಜಬಲಜಾಲ |
ಮಂ ಖರಾಂತಕನನುಜನೀಕ್ಷಿಸಿ ಕನಲ್ದೇರಿದಂ ಮಹಾಮಣಿರಥವನು ||೧೨||

ದುರಿತ ಗಣಮಿರ್ದಪುದೆ ಗೌತಮಿಯೊಳಾಳ್ದಂಗೆ |
ಪರಮಯೋಗಿಗೆ ಭವದ ಬಂಧನಂ ಬಂದಪುದೆ |
ಪರಸೈನ್ಯದುರುಬೆ ರಘುಕುಲಜರ್ಗೆ ತೋರುವುದೆ ಪೇಳವನಿಪಾಲತಿಲಕ ||
ತರಳನಾದೊಡೆ ಲವಂ ಬೆದರುವನೆ ನಿಮಿಷದೊಳ್ |
ಪರಿಗಡಿದನನಿತು ಚತುರಂಗಮಂ ಶತ್ರುಘ್ನ |
ನುರವಣಿಸೆ ತಡೆದನೆರಗುವ ಸಿಡಿಲ ಗರ್ಜನೆಗೆ ಮಲೆವ ಮರಿಸಿಂಗದಂತೆ ||೧೩||

ಒತ್ತಿಬಹ ಶತ್ರುಘ್ನನುರುಬೆಗೆ ಲವಂ ತನ್ನ |
ತತ್ತದೊಳ್ ಮಹೇಶಮಂತ್ರಮಂ ಸ್ಮರಿಸುತ್ತೆ |
ಮತ್ತೆ ನಿರ್ಭಯನಾಗಿ ಮಾರಾಂತನಾತನೆಲನೆಲವೊ ನೀಂ ಪಸುಳೆ ನಿನಗೆ |
ತೆತ್ತಿಗರದಾರಕಟ ಸಾಯದಿರ್ ಪೋಗೆನುತೆ |
ಹತ್ತು ಶರದಿಂದೆಚ್ಚೊಡವನ ಬಾಣಂಗಳಂ |
ಕತ್ತರಿಸಿ ಕೂಡೆ ಭರತಾನುಜನ ಕಾರ್ಮುಕದ ಹೆದೆಯನಿಕ್ಕಡಿಗೆಯ್ದನು ||೧೪||

ತರಳನ ಪರಾಕ್ರಮಕೆ ಮೆಚ್ಚಿದಂ ಮತ್ತೊಂದು |
ತಿರುವನಳವಡಿಸಿದಂ ಕಾರ್ಮುಕಕೆ ಶತ್ರುಘ್ನ |
ನಿರದೆ ಕಣೆಮೂರರಿಂ ಬಾಲಕನ ಪಣೆಯನೆಚ್ಚೊಡೆ ನಗುತೆ ಪರಿಮಳಿಸುತೆ ||
ವಿರಹಿಗಳನಂಜಿಸುವ ಪೂಗೋಲ್ಗಳ್ ಪೊಲಾಯ್ತು ನಿ |
ನ್ನುರವಣೆಯ ಬಾಣಂಗಳೆನುತ ಭರತಾನುಜನ |
ತುರಗ ಸಾರಥಿ ವರೂಥ ಧ್ವಜ ಶರಾಸನಂಗಳನವಂ ತಡೆಗಡಿದನು ||೧೫||

ಕೋಪದಿಂ ಪೊಸರಥಕಡರ್ದು ಶತ್ರುಘ್ನನುರು |
ಚಾಪಮಂ ಕೊಂಡು ದಿವ್ಯಾತ್ರದಿಂದೆಸುತ ಬರ |
ಲಾಪಥದೊಳೆನೆಕೆಯ್ದಣ್ಣನಂ ಮಾತೆಯಂ ನೆನೆದು ಮನದೊಳು ಮರುಗುತ ||
ಆ ಪಸುಳೆ ಮತ್ತೆ ಕಡುಧೈರ್ಯಮಂ ತವೆ ತಾಳ್ದಿ |
ನೋಪಮದೊಳೆಯ್ದುವ ಪಗೆಯ ಶರವನೆಡೆಯೊಳ್ ಪ್ರ |
ತಾಪದಿಂ ಕತ್ತರಿಸಿ ಕೆಡಹಲ್ಕೆ ಬಯಲಾಯ್ತು ಕೂಟಸಾಕ್ಷಿಯ ಸಿರಿಯೊಲು ||೧೬||

ವಿಸ್ಮಯಾನ್ವಿತನಾದನಂದು ಶತ್ರುಘ್ನ ನಾ |
ಕಸ್ಮಿಕದ ಪಸುಳೆಯ ಪರಾಕ್ರಮಕೆ ಬಳಿಕ ವಿಲ |
ಯಸ್ಮರಾಂತಕನ ಪಣೆಗಣ್ಣಿಂದ ಪೊರಮಡದ ದಳ್ಳುರಿಯತೆರದೊಳೆಸೆವ ||
ರಶ್ಮಿಗಳನುಗುಳ್ವಮೋಘದ ಬಾಣಮಂ ಪೂಡು |
ತಸ್ಮದಿಷುಘಾತಮಂ ನೋಡೆನುತಿರಲ್ಕೆ ಮಂ |
ದತಸ್ಮಿತದೊಳಾಸರಳನೆಚ್ಚು ಲವನೆಡೆಯೊಳಿಕ್ಕಡಿಗೆಯ್ದನೇವೇಳ್ವೆನು ||೧೭||

ಅರಸ ಕೇಳಾಶರದೊಳರ್ಧಮವನಿಗೆ ಕೆಡೆದು |
ದಿರದೆ ಮೇಳ್ವಾಯ್ದರ್ಧವಿ ಲವನ ಕಾರ್ಮುಕವ |
ನರಿದು ಕೊಂಡೆರ್ದೆಯನುಚ್ಚಳಿಸೆ ಮೈಮರೆದೊರಗಿದಂ ಪಸುಳೆ ಮೂರ್ಛೆಯಿಂದೆ ||
ಹರುಷದಿಂದಾರ್ದುದುಳಿದರಿಬಲಂ ನಡೆತಂದು |
ಕರುಣದಿಂ ತರಳನಂ ನೋಡಿ ರಾಮಾಕೃತಿವೊ |
ಲಿರೆ ಮೋಹದಿಂ ತನ್ನ ರಥದ ಮೇಲಿರಿಸಿಕೋಂಡೈದಿದಂ ಶತ್ರುಘ್ನನು ||೧೮||

ಕದಳಿಯೊಳ್ ಕಟ್ಟಿರ್ದ ಕುದುರೆಯಂ ಬಿಡಿಸಿ ನಗ |
ರದ ಕಡೆಗೆ ಪಡೆವೆರಸಿ ತಿರುಗಿದಂ ಶತ್ರುಘ್ನ |
ನುದಧಿಘೋಷದೊಳಿತ್ತಲೋಡಿದರ್ ತಾಪಸವಟುಗಳವನಿಸುತೆಯ ಪೊರೆಗೆ ||
ಕದನದೊಳ್ ನಡೆದ ವೃತ್ತಂತಮಂ  ಪೇಳಲ್ಕೆ |
ರುದಿತದಿಂ ಕೈವರಳ್ಗಳನೋತ್ತಿಕೊಳುತ ನಿಜ |
ಸದನಮಂ ಪೊರಮಟ್ಟು ಹಲುಬಿದಳ್ ಸುತನ ಗುಣಶೀಲರೂಪಗಳನೆಣಿಸಿ ||೧೯||

ಒದರಿದುವು ಕಂಬನಿಗಳಂಗಲತೆ ಕಂಪಿಸಿತು |
ಪೊಸೆದಳೊಡಲಂ ಕೂಡೆ ಕೂಡೆ ಸುತಮೋಹದಿಂ |
ದಸವಳಿದು ಕಂದನೆಲ್ಲಿರ್ದಪಂ ಕಾದಿದನೆ ಪಗೆಯ ಕೈಗೊಳಗಾದನೇ ||
ಪಸುಳೆಗೇನಾಯ್ತೊ ಮಗನೆಂತು ನೊಂದನೊ ತರಳ |
ನಸುವಿಡಿದಿಹನೊ ಬಾಲಕನ ಮುದ್ದ ಮೊಗಮೆನ್ನ |
ದೆಸೆಗೆ ಸೈರಿಸದೊ ಜೀವಿಸಿ ಕೆಟ್ಟೆನೆಂದು ಹಲುಬಿದಳಂಬುಜಾಕ್ಷಿ ಮರುಗಿ ||೨೦||

ಅನ್ನೆಗಂ ಬಂದನಗ್ಗದ ಸಮಿತ್ಪುಷ್ಪಂಗ |
ಳನ್ನೆತ್ತಿಯೊಳ್ ಪೊತ್ತುಕೊಂಡು ಕುಶನಳುತಿರ್ಪ |
ತನ್ನ ತಾಯಂ ಕಂಡಿದೇನದ್ಭುತಪ್ರಳಾಪಂ ನಿನಗೆ ಪೇಳೆನಲ್ಕೆ ||
ಬನ್ನಮಂ ಕೇಳ್ ಮಗನೆ ಹಯಮೊಂದು ಬರಲದಂ |
ನಿನ್ನ ತಮ್ಮಂ ಕಟ್ಟಲರಸುಗಳ್ ಪಿಡಿದುಯ್ದ ||
ರಿನ್ನೇವೆನೆಂದು ಜಾನಕಿ ನುಡಿಯೆ ರೋಷದಿಂದಾ ಕುವರನಿಂತೆಂದನು ||೨೧||

ಶೋಕಮೇಕಿದಕೆ ಹರಣವನೊಯ್ದೊಡಂತಕನ |
ಲೋಕವಂ ಸುಡುವೆನಲ್ಲಹುದೆಂದೊಡಜ ಹರಿ ಪಿ ||
ನಾಕಿಗಳನುರುಷವೆಂ ಮಿಕ್ಕರಸುಗಿರಸುಗಳ ಪಾಡಾವುದೀಗ ತನಗೆ ||
ಆ ಕವಚ ಖಡ್ಗ ಧನು ಶರ ಮಕುಟಂಗಳಂ ||
ತಾ ಕಳವಳಿಸದಿರೆಂದವನಿಜೆಗೆ ನುಡಿದೊಡವ |
ಳಾಕುಶಂಗೊಳಗಣಿಂದಂಗಿಯಂ ತಂದಳವಡಿಸಿ ಪರಸಿ ಬೀಳ್ಕೊಟ್ಟಳು ||೨೨||

ರಾಯ ಕೇಳ್ ಕುಶನ ವಿಕ್ರಮವನಭಿವರ್ಣಿಸಲ |
ಜಾಯುವುಳ್ಳನ್ನೆಗಂ ತನಗೆ ತೀರದು ಬಳಿಕ |
ತಾಯಂಘ್ರಿಗೆರಗಿ ಬೀಳ್ಕೊಂಡು ತಾರಕನ ಪೆರ್ಬಡೆಗೆ ಗುಹನೆಯ್ದುವಂತೆ ||
ವಾಯುವೇಗದೊಳೊದಗಿ ವೀರಭರತಾನುಜನ |
ಪಾಯದಳಮಂ ಪೋಗಬೇಡ ಬೇಡೆನುತ ಸಲೆ |
ಸಾಯಕದ ಮಳೆಗಳಂ ಕರೆಯಲ್ಕೆ ತಿರುಗಿದುದು ಮತ್ತೆ ಶತ್ರುಘ್ನ ಸೇನೆ ||೨೩||

ಪದ್ದೆರಗಿದುವು ಭಟರ ಮಂಡೆಗಳ ಮೇಲುಡಿದು |
ಬಿದ್ದುವು ಚಲಧ್ವಜಪಾಕೆಗಳ್ ಕೂಡೆ ದೂ |
ಳೆದ್ದು ಬಿರುಗಾಳಿ ಬೀಸಿದುದು ಕಂಬನಿ ಕರೆದುವಂದಾನೆಕುದುರೆಗಳ್ಗೆ ||
ಪೊದ್ದಿದುತ್ಪಾತಭಯಕಾ ಬಲಂ ಗಜಬಜಿಸು |
ತಿದ್ದುದೀಚೆಯೊಳೀ ಕುಶಂ ಪೋಗದಿರಿ ನಿಲ್ಲಿ |
ಕದ್ದೈದುವರೆ ತುರಗಸಹಿತ ಲವನಂ ಬಿಟ್ಟು ನಡೆಯಿ ನೀವೆನುತಚ್ಚನು ||೨೪||

ಆ ಬಾಲಕನ ಬಾಣಘಾತದಿಂದಳವಳಿದು |
ದೀಬಲದ ಮಂದಿ ಮತ್ತೀಗಳಿವನೊರ್ವನಿದೆ |
ಕೋ ಬಂದನೆಂದಿಸುವ ಬೆಸೆಗಳ್ಗೆ ದೆಸೆಗೆಟ್ಟು ಸೇನೆ ಗಜಬಜಿಸೆ ಕಂಡು ||
ಶಾಬಮೃಗಂಜಿಪುದು ಗಡ ಪುಲಿಯನೆನುತಾ ಮ |
ಹಾಬಾಹು ಶತ್ರುಘ್ನನಾಗ ನಿಜದಳಪತಿಯ |
ನೇ ಬೇಗ ಕಳುಹಿದೊಡವಂ ಸಕಲಸೇನೆಸಹಿತೈದಿದಂ ಕುಶನಮೇಲೆ ||೨೫||

ಬಳಿಕ ಶತೃಘ್ನನ ನಿರೂಪೆದಿಂ ತಿರುಗಿದಂ |
ದಳಪತಿ ಸಮಸ್ತಬಲಸಹಿತಾ ಕುಮಾರನಂ |
ಬಳಸಿದಂ ತಮತಮಗೆ ವಿವಿಧಾಯುಧಂಗಳಂ ಜಾಳಿಸುತೆ ವಹಿಲದಿಂದೆ ||
ಅಳವಿಯೊಳ್ ತೀವಿದುವು ಕುದುರೆ ತೇರಾನೆಯಾಳ್ |
ಕೊಳುಗುಳದೊಳನಿತುಮಂ ಸವರಿ ಸೇನಾನಿಯಂ |
ಕಳುಹಿದಂ ಜವವೊಳಲ್ಗವನ ಸಾರಥಿರಥಾಶ್ವಂವೆರಸಿ ವೀರಕುಶನು ||೨೬||

ಆ ದಳಪತಿಯ ತಮ್ಮನೋರ್ವ ನಗನೆಂಬವಂ |
ಕಾದಿ ಮಡಿದಣ್ಣನಂ ಕಾಣುತ್ತ ಖತಿಯಿಂ ಮ |
ಹಾದಂತಿಯಂ ಕುಶನ ಮೇಲೆಯಂಕುಶದಿಂದಿರಿದು ನೂಕಿದಂ ಕುಶನದ ||
ಜೋದಗಾಳಗದಿಂದೆ ಬಳಿಕೆರಡುಸೀಳಾಗಿ ||
ಮೇದಿನಿಗೆ ಬೀಳ್ವಂತಿಭವ ನೆಚ್ಚವನ ಧನು |
ಶ್ಛೇದಮಂ ಮಾಡಲಾತಂ ಪಲಗೆ ಕಡುಗಮಂ ಕೊಂಡವಂಗಿದಿರಾದನು ||೨೭||

ಕಿತ್ತಡಾಯುಧದೊಳೈದುಮನ ಘನ ಹಸ್ತಮಂ |
ಕತ್ತರಿಸಲೆಡಗೈಯೊಳೊಂದು ಗದೆಯಂ ಕೊಂಡು |
ಮತ್ತೆ ಮೇಲ್ವಾಯ್ದೊಡಾ ಕರಮಂ ಕಡಿಯೆ ಬಾಹುಗಳಿಂದೆ ಪೊಯ್ವೆನೆಂದು ||
ಒತ್ತಿ ನಡೆತರಲೆರಡು ತೋಳ್ಗಳಂ ಕೂರ್ಗಣೆಯೊ |
ಳುತ್ತರಿಸೆ ಕಾಲ್ಗಳಿಂದೊದೊದು ಕೆಡಪುವ ಭರದೊ |
ಳೆತ್ತಲಾ ತೊಡೆಗಳನವಂ ಬೇಗದಿಂದೆಯ್ದೆ ಕುಶನೆಚ್ಚು ತುಂಡಿಸಿದನು ||೨೮||

ಬಾಹುಯುಗಮೂರುದ್ವಯಂ ಪೋದ ಕಾಯದಿಂ |
ಸಾಹಸಂಗೈದವಂ ಮೇಲ್ವಾಯ್ದು ಚಂದ್ರಂಗೆ |
ರಾಹುವಂಗೈಸುವಂತುರವಣಿಸೆ ಕುಶನಳುಕದೆಚ್ಚವನ ತಲೆಯನರಿಯೆ ||
ಮಾಹೇಶ್ವರಾಭರಣದೊಳ್ ಮೆರೆದುದಾ ಶಿರಂ |
ಕಾಹುರದ ಕುವರನದಟಂ ಕಂಡು ಖಾತಿಯಿಂ |
ದಾಹವಕೆ ಬಿಲ್ದುಡುಕಿ ತರಳನಂ ಕೆಣಕಿದಂ ಬಂದು ಕಲಿ ಶತ್ರುಘ್ನನು ||೨೯||

ಕಡುಮುಳಿದು ಶತ್ರುಘ್ನನೊಂಬತ್ತುಬಾಣದಿಂ |
ಬಿಡದಿಚ್ಚೊಡಾ ಕುಶಂ ಕೋಪೆದಿಂದವನ ತೇ |
ರ್ಪುಡಿಯಾಗೆ ಸಾರಥಿರಥಾಶ್ವಂಗಳೆಡೆಗೆಡೆಯೆ ಬಿಲ್ಲುಡಿಯೆ ಪೇರುರದೊಳು ||
ನಿಡುಸರಲ್ಕೀಲಿಸಲ್ ಕರೆದನಂಬುಗಳನೊಡ |
ನೊಡನೆ ಕೂರ್ಗಣೆಗಳಾರಂ ಮತ್ತೆ ವಕ್ಷದೊಳ್ |
ತುಡಿಸಿದಂ ಕುಶನದರ ಘಾತಿಗೆ ವರೂಥದಿಂ ಭರತಾನುಜಂ ಬಿದ್ದನು ||೩೦||

ಗಿರಿತಟದೊಳೊಂದೊಂದರೊಳ್ ಪೆಣಗಿ ಸೋಲ್ತ ಮದ |
ಕರಿ ಧರೆಗುರುಳ್ವಂತೆ ಪೊರಾಯ ಗಾಯದಿಂ |
ದಿರದೆ ಶತ್ರುಘ್ನಂ ಮಹೀತಳಕೆ ರಥದಿಂದೆ ಬೀಳ್ವನಿತರೊಳ್ ಪಡೆಯೊಳು ||
ದೊರೆದೊರೆಗಳೆಲ್ಲಂ ಕೈಕೊಂಡು ಕಾದಿ ಸಂ |
ಗರದೊಳ್ ಪತಿತರಾದರಾ ಕುಶನ ಬಾಣದಿಂ |
ಪಿರಿದು ಕನ್ಯಾವಿಕ್ರಯಂಗೈದು ಜೀವಿಸುವ ಮಾನವನ ಪಿತೃಗಳಂತೆ ||೩೧||

ಬಹುದುರಿತಮಂ ಸ್ವಧರ್ಮದೊಳೊರಸುವಂತೆ ಕುಶ |
ನಹಿತರಂ ತನ್ನ ಭುಜಬಲದಿಂದೆ ಸವರಿದಂ |
ಮಹದಾಹವದ ಮೂರ್ಛೆ ತಿಳಿದನಿತರೊಳ್ ಕಂಡನಣ್ಣನಂ ಬಳಿಕ ಲವನು ||
ಸಹಜಾತರಿರ್ವರುಂ ಕೂಡಿದರ್ ಪವನ ಹುತ |
ವಹರಂತೆ ಮತ್ತೆ ಹಯಮಂ ಕಟ್ಟಿಕೊಂಡು ವಿ |
ಗ್ರಹಕೆ ನಿಲಲರಸನಲ್ಲಿಗೆ ದೂತರಂ ಕಳುಹಿದರ್ ಬಲದೊಳುಳಿದಭಟರು ||೩೨||

ಚರು ಪುರೋಡಾಶ ತಂಡುಲ ತಿಲ ವ್ರೀಹಿ ಘೃತ ||
ದುರು ಹವಿರ್ಧೂಮದಿಂದರುಣಲೋಚನನಾಗಿ |
ಪರಿಮೇಖಲಾಶೃಂಗ ಮೃಗಚರ್ಮಧರನಾಗಿ ನವನೀತಲಿಪ್ತನಾಗಿ ||
ಪರಮ ಮುನಿಗಳ್ವೆರಸಿ ಕನಕ ಜಾನಕಿಸಹಿತ |
ಭರತಲಕ್ಷ್ಮಣರೊಡನೆ ಕೃತಯಜ್ಞಶಾಲೆಯೊಳ್ |
ವರದೀಕ್ಷೆಯಿಂದೆ ಕುಳ್ಳಿರ್ದೇಸೆವ ರಾಮನಂ ಕಂಡು ಚರರಿಂತೆಂದರು ||೩೩||

ಅವಧರಿಸು ಜೀಯ ನಿನ್ನಧ್ವರದ ಚಾರು ಹಯ |
ಮವನಿಯೊಳವಿಘ್ನನಾತನಂ ತಿರುಗಿ ಬಂದುದು ಬಳಿಕ |
ಲವನೆಂಬ ಬಾಲಕಂ ಕಟ್ಟಿದಂ ಕಡುಗಿದೊಡೆ ಬಲಮೆಲ್ಲಮಂ ಕೊಂದನು ||
ಬವರದೊಳ್ ಶತ್ರುಘ್ನನಾತಂ ಪಿಡಿದು ತರ |
ಲವನ ಬಳಿವಿಡಿದೊರ್ವನೆಯ್ತಂದು ನಿನ್ನನುಜ |
ನವಗಡಿಸೆ ಕೆಡೆಯೆಚ್ಚು ಬೀಳ್ಚಿದಂ ಪೇಳಲಂಜುವೆವೆಂದು ಕೈಮುಗಿದರು ||೩೪||

ಕೇಳುತೆ ಕನಲ್ದೆಲವೊ ಶತ್ರುಘ್ನನಂ ಜಯಿಸು |
ವಾಳುಂಟೆ ಲೋಕದೊಳ್ ಪೋಗಿವರ್ ಮರುಳರೆಂ |
ದಾಳವಾಡಲ್ ಜೀಯ ನಿಮ್ಮಡಿಗಳಾಣೆ ಪುಸಿಯಲ್ಲೆಂದು ಮತ್ತೆ ಚರರು ||
ಪೇಳಲ್ಕೆ ಬೆರಗಾಗಿ ಮರುಗಿ ಲವಣಾಸುರಂ |
ಕಾಳಗದೊಳೀತನಿಂದಳಿದನಾ ಬಾಲಕರ |
ತೋಳ ಬಲ್ಪೆಂತೊ ಲಕ್ಷ್ಮಣ ಸೇನೆಸಹಿತ ನಡೆಯೆಂದು ರಘುಪತಿ ನುಡಿದನು ||೩೫||

ಬಳಿಕ ರಾಘವನಂಘ್ರಿಗೆರಗಿ ಕಳುಹಿಸಿಕೊಂಡು |
ತುಳತಂತ್ರಸನ್ನಾಹದಿಂ ಕಾಲಜಿತುವೆಂಬ |
ದಳಪತಿಸಹಿತ ಸುಮಿತ್ರಾತ್ಮಜಂ ನಗರಮಂ ಪೊರಮಟ್ಟು ನಡೆವ ಭರಕೆ ||
ಇಳೆ ಸವೆದುದೇಳ್ವ ಕೆಂದೂಳ್ಗಳಿಂದಂಬರ |
ಸ್ಥಳಮೈದುರಿರಲ್ ಪತಾಕಾ ಧ್ವಜಂಗಳ್ಗೆ ದಿ |
ಗ್ವಳಯವಿಂಬಿಲ್ಲ ಘೀಳಿಡುವ ವಾದ್ಯಧ್ವನಿಗೆ ಪೊಸತಿದೆಂಬಂತಾಗಲು ||೩೬||

ಪೊಡವಿಯಗಲದೊಳೆಯ್ದು ವಾನೆಗಳ ಸೇನೆಗಳ |
ಕಡುಗಿ ಮುಂಬರಿವ ರಥರಾಜಿಗಳ ತೇಜಿಗಳ |
ಬಿಡದೆ ಗಗನದೊಳಿಡಿದ ಸತ್ತಿಗೆಯ ಮುತ್ತಿಗೆಯ ಢಾಳಿಸುವ ಚಮರಂಗಳ ||
ನಿಡುಪತಾಕೆಯ ವಿವಿಧ ಧಾತುಗಳ ಕೇತುಗಳ |
ಜಡಿವ ಕೈದುಗಳ ಪೊಸರೋಚಿಗಳ ವೀಚಿಗಳ |
ಪೊಡೆವ ತಂಬಟ ಪಟಹ ಭೇರಿಗಳ ಬೂರಿಗಳ ಪದಪಿಂದೆ ಪಡೆ ನಡೆದುದು ||೩೭||

ಪ್ರಾಣಮಿಲ್ಲದೆ ಚೇತರಿಸಿಕೊಳಲ್ ತನುವಿನೊಳ್ |
ತ್ರಾಣಮಿಲ್ಲದೆ ನೊಂದು ಗಾಯದಿಂ ಮರವೆಯಂ |
ಕೇಣಿಗೊಂಡೊರಗಿ ಶತ್ರುಘ್ನನಳಿದಿಳಿದ ಬಲದೊಡನೆ ರಾಹುಗ್ರಸ್ತದ ||
ಏಣಧರನಂತಿರಲ್ ಪಡೆಸಹಿತ ಲಕ್ಷಣಂ |
ಕ್ಷೆಣಿಪತಿ ಕೇಳ್ ಬಂದು ಕಂಡು ಸೈತಿಟ್ಟಿನ್ನು |
ಕಾಣಬಹುದೆನುತೆ ಕೈವೀಸಿದಂ ಕಾಲಜಿತು ಮುಖ್ಯಸೇನಾನಿಗಳ್ಗೆ ||೩೮||

ಕಂಡರೀಚೆಯೊಳರಿಬಲವ್ಯೂಹಮಂ ಬರಲಿ |
ಖಂಡಿಸುವೆನೆಮದೊರ್ವರೊರ್ವರೊಳ್ ಮಾತಾಡಿ |
ಕೊಂಡರವರೊಳ್ ತನ್ನ ಬಿಲ್ಮುರಿದುದಾಹವದೊಳಂದು ಲವನಗ್ರಜಂಗೆ ||
ಚಂಡಮುನಿಪತಿ ಮಾಡಿದುಪದೇಶದಿಂದೆ ಕೋ |
ದಂಡಮಂ ಪಡೆವೇನೀಕ್ಷಣದೊಳೆಂದೊರೆದು ರವಿ |
ಮಂಡಲವನೀಕ್ಷಿಸುತೆ ತರಣಿಯಂ ಪ್ರಾರ್ಥಿಸಿದನನುಪಮ ಸ್ತುತಿಗಳಿಂದೆ ||೩೯||

ಮಿತ್ರಾಯ ಸೂರ‍್ಯಾಯ ಹಂಸಾಯ ಪೂಷ್ಣೇ ಸ |
ವಿತ್ರೇ ಜಗಚ್ಚಕ್ಷುಷೇ ಚಂಡಘೃಣಯೇ ಪ |
ವಿತ್ರಾಯ ಪಿಂಗಾಯ ಪುರುಷಾಯ ಭಾನುವೇ ಜೋತಿಷೇ ಭಾಸ್ಕರಯ ||
ಸತ್ತ್ರೈಕರೂಪಾಯ ವಿಮಲಾಯ ವಿಶ್ವರ |
ಕ್ಷಿತ್ರೇ ಸಹಸ್ರಕಿರಣಾಯ ರವಯೇ ಮಂದ |
ಪಿತ್ರೇ ದಿವಾಕರಾಯ ಬ್ರಹ್ಮ ವಿಷ್ಣು ರುದ್ರಾತ್ಮನೇ ತುಭ್ಯಂ ನಮಃ ||೪೦||

ಜಗಕೆ ನೀನೊಂದು ಕಣ್ಣಾಗಿರ್ಪೆ ಮೇಣೆರಡು |
ಬಗೆಯ ಪಥದೊಳ್ ನಡೆವೆ ತಿಳಿಯಲ್ಕೆ ಮೂರು ಮೂ |
ರ್ತಿಗಳನೊಳಗೊಂಡಿರ್ಪೆ ಸಲೆ ಸಂದ ನಾಲ್ಕುವೇದಂಗಳೊಡಲಾಗಿ ತೋರ್ಪೆ ||
ಅಗಲದೈದಂಗದೊಳ್ ಕಾಣಿಸುವೆ ಪರಿಪರಿಯೊ |
ಳೊಗೆದಾರು ಋತುಗಳೊಳ್ ವರ್ತಿಸುವೆ ಸಂತತಂ |
ಗಗನಕೇಳಶ್ವಮಂ ಕೊಂಡೇಳ್ವೆ ದೇವ ಬಿಲ್ಗೊಟ್ಟುಳುಹಬೇಕೆಂದನು ||೪೧||

ಪತ್ತು ದೆಸೆಯಂ ಬೆಳಗಿಸುವೆ ಪನ್ನೆರಡು ರಾಶಿ |
ಗೊತ್ತಾಸೆಯಾಗಿರ್ಪೆ ಶತಪತ್ರಮಿತ್ರನಹೆ |
ಮತ್ತೆ ಸಾಸಿರಕಿರಣದಿಂದೆಸೆವೆ ಲಕ್ಷಯೋಜನದಳತೆಯೊಳ್ ತೊಳಗುವೆ ||
ಬಿತ್ತರದನಂತದೊಳ್ ಸಂಚರಿಪೆ ದೇವ ನಿ |
ನ್ನುತ್ತಮ ಗುಣಾವಳಿಯನೆಣೆಸಲೆನ್ನಳವೆ ಬಿ |
ಲ್ಲಿತ್ತುಳುಹಬೇಕೆಂದು ದಿನಮಣಿಯನಾ ಲವಂ ನುತಿಸಿದಂ ಭಕ್ತಿಯಿಂದೆ ||೪೨||

ಅವನೀಶ ಕೇಳ್ ಬಳಿಕ ಲವನ ವಿಮಲಸ್ತುತಿಗೆ |
ರವಿ ಮೆಚ್ಚಿ ಕೊಟ್ಟನಾತನ ಕೈಗೆ ದಿವ್ಯಚಾ |
ಪವನದಂ ಕೊಂಡಗ್ರಜಂಗೆ ತೋರಿಸಿ ಮುನಿಪ ವಾಲ್ಮೀಕಿ ಬಾಳುಗೆನುತೆ ||
ಪವಣನಾರೈದು ಬಿಲ್ದಿರುವನೊದರಿಸಿದನು |
ತ್ಸವದಿಂದೆ ಕುಶನುಗ್ರಕೋದಂಡಮಂ ಪಿಡಿದ |
ನವರೀರ್ವರುಂ ಮತ್ತೆ ಪವನ ಪಾವಕರಂತೆ ಪೊಕ್ಕರರಿಬಲವನುರುಬಿ ||೪೩||

ನೂರಾಳಿಗೊಂದು ಹಯಮಿರುತಿರ್ಪುದಾ ಹಯಂ |
ನೂರಕಿರುತಿಹುದು ಮೇಣೊಂದು ರಥ ಮಾರಥಂ |
ನೂರಕಿಭವೊಂದಿರ್ಪುದಿಂತಿಭ ಸಹಸ್ರಮಿರೆ ಭ್ರಮಿಯೆಂದೆನಿಸಿಕೊಳ್ವುದು ||
ವಿರಿಯೋಜನದಗಲದೊಳ್ ಭ್ರಮಿಗಳೀರೈದು |
ನೂರಿಟ್ಟಣಿಸಿ ನಡೆದು ಬಂದೊಟಾ ಸೇನೆಯಂ |
ತಾರು ತಟ್ಟಾಗಿ ಕೆಡಹಿದರೊಂದುನಿಮಿಷದೊಳ್ ಕುಶ ಲವರದೇವೇಳ್ವೇನು ||೪೪||

ಹೂಣೆವೊಕ್ಕಿಸುತ ಬಾಲಕರೈದೆ ಲಕ್ಷ್ಮಣಂ |
ಕಾಣುತಿದಿರಾದಂ ಕುಶಂಗಖಿಳವಾಹಿನೀ |
ಶ್ರೇಣಿಸಹಿತರುಬಿದಂ ಕಾಲಜಿತುವಾ ಲವನ ಮೇಲೆ ವಡಬಾಗ್ನಿಯೆಡೆಗೆ ||
ಮಾಣದಿರಗುವ ಕಡಲಜಲದಂತೆ ಕವಿದುದು ಕೃ |
ಪಾಣ ತೋಮರ ಪರಶು ಕುಂತ ಮುದ್ಗರ ಚಕ್ರ |
ಬಾಣ ಶಕ್ತಿಗಳ ಘೋರಪ್ರಹಾರಂಗಳಿಂದಾ ಸಕಲಸೇನೆ ಮುಳಿದು ||೪೫||

ಏಸು ಭಟರಂಬುಗಳನಿಸುವರೈಸಂಬುಗಳ |
ನಾಸುಭಟರಂಗದೊಳ್ ಕಾಣಿಸಿದನಾ ಬಲದೊ |
ಳೇಸು ಕೈದುಗಳೊಳೊದರಿದರೈಸು ಕೈದುಗಳನೆಲ್ಲಮಂ ತಡೆಗಡಿದನು ||
ಏಸಾನೆಕುದುರೆಗಳ್ ಕವಿದುವೈಸಂ ಸೀಳ್ದ |
ನೇಸು ತೇರುರವಣಿಸಿತೈಸುರಥಮಂ ಮುರಿದ |
ನೇಸುಮಂದಿಗಳುರುಬಿತೈಸುಮಂ ಕೊಂದ ನಿನ್ನೇಸು ಸಾಹಸಿಯೊ ಲವನು ||೪೬||

ಜಾನಕಿಯ ಸುತನ ಬಣಾವಳಿಯ ಹಾವಳಿಯ |
ನೇನೆಂಬೆನಹಿತಂ ಕವರಿದುವು ಸವರಿದುವು |
ಬಾನೆಡೆಯೊಳಿಟ್ಟಣಿಸಿ ಹರಿದುವು ತರಿದುವು ಕೊಂದುವರಿದುವು ಪರಿದುವು ||
ಆನೆ ಕುದುರೆಗಳನುರೆ ಸೀಳಿದುವು ತೂಳಿದುವು |
ನಾನಾ ಪ್ರಕಾರದಿಂ ಕೆಡಹುದುವು ಕೊಡಹಿದುವು |
ಸೇನೆಗಳೊಡಲ್ಗಳಂ ಪಚ್ಚಿದುವು ಕೊಚ್ಚಿದುವು ತಲೆಗಳಂ ತತ್‌ಕ್ಷಣದೊಳು ||೪೭||

ಭೂರಿಬಾಣದೊಳಹಿತಸೇನೆಯೊಳ್ ಮುಳಿದು ಚ |
ತ್ವಾರಿಂಶದನುಪಮ ಭ್ರಮಿಗಳಂ ತಡೆಗಡಿದು |
ವೀರ ಲವನಲ್ಲಿ ಕುಶನಂ ಕಾಣದೆಡಬಲದೊಳರಸೆ ರುಧಿರಾಕ್ಷನೆಂಬ||
ಶೂರಾಸುರಂ ಲವಣ ದಾನವನ ಮಾತುಲಂ |
ಶ್ರೀರಾಮ ಚರಣ ಶರನಾಗತಂ ಸೀತಾಕು |
ಮಾರಕನ ಕರದ ಕೋದಂಡಮಂ ತುಡುಕಿದಂ ಮೇಲ್ವಾಯ್ದು ರೋಷದಿಂದೆ ||೪೮||

ಕರದ ಬಿಲ್ಲಂ ಕಿತ್ತುಕೊಂಡೋಡುವ ಸುರನಂ |
ಭರದಿಂದೆ ಬೆಂಬತ್ತಿ ಪೋಗದಿರ್ ಪೋಗದಿರ್ |
ತಿರುಗೆನುತ ವಾಲ್ಮೀಕಿಮುನಿಪನಿತ್ತಗ್ನಿ ಮಂತ್ರಧಾನಮಂ ಮಾಡಲು ||
ದೊರೆಕೊಂಡುದೊಂದು ಚಕ್ರಂ ಬಳಿಕ ಲವನದಂ |
ಧರಿಸಿ ಚಕ್ರಾಯುಧಂ ತಾನೆನಲ್ ಕಂಗೊಳಿಸು |
ತುರವಣಿಸಿ ರುಧಿರಾಕ್ಷನಂ ಗಗನದೊಳ್ ಪಿಡಿಯೆ ಕಂಡವನ ಪಡೆ ಕವಿದುದು ||೪೯||

ಮತ್ತುರುಬಿದನಿತು ಬಲಮಂ ಕರದ ಚಕ್ರದಿಂ |
ತತ್ತರವರಿದು ರಾಕ್ಷಸೇಂದ್ರನಂ ಬಿಡದೆ ಲವ |
ನೊತ್ತಾಯಮಂ ಮಾಡುತಿರೆ ಕಂಡು ದಶರಥ ನೃಪತಿಯ ಮಂತ್ರಿಯ ತನುಜರು ||
ಹತ್ತುಮಂದಿ ಪ್ರಸಿದ್ಧಪ್ರಧಾನಿಗಲಾಗ |
ಹತ್ತುಹತ್ತಂಬುಗಳನೋರೊರ್ವರೆಚ್ಚು ಕಡಿ |
ಹತ್ತು ಹತ್ತಾಗ ಬಾಲಕನ ಪಾರುಂಬಳೆಯನಾಕ್ಷಣಂ ಖಂಡಿಸಿದರು ||೫೦||

ಕರದ ಚಕ್ರಂ ಪೋಗೆ ಪರಿಘಮಂ ಕೊಂಡು ಲವ |
ನುರವಣಿಸಿ ಹೊಯ್ದ ನಿಬರಂ ಕೆಡಹಿ ಮತ್ತೆ ಬಂ |
ಧುರು ಗದಾದಂಡಮಂ ಕೊಂಡು ರುಧಿರಾಕ್ಷನೀತನ ಪಣೆಯನಪ್ಪಳಿಸಲು ||
ಇರದೆ ಮೂರ್ಛಿತನಾಗಿ ಬಾಲಕಂ ಕೂಡೆ ಚೇ |
ತರಿಸಿಕೊಂಡೆದ್ದು ಕುಂತದೊಳಾ ಮಹಾಸುರನ |
ಶಿರವನರಿದಾದಿನ್ಯನಿತ್ತ ನಿಜಚಾಪಮಂ ತೆಗೆದುಕೊಂಡಂ ಧುರದೊಳು ||೫೧||

ಬಿಡದೆ ರುಧಿರಾಕ್ಷ ರಾಕ್ಷ*ಸನಂ ರಣಾಗ್ರದೊಳ್ |
ಕೆಡಹಿ ನಿಜಚಾಪ ಚಾಪಲಹಸ್ತನಾಗಿ ಲವ |
ನಡಸಿದರಿಚತುರ ಚತುರಂಗಮಂ ಸಂಹರಿಸತೊಡಗಿದಂ ಮತ್ತೆ ಮುಳಿದು ||
ತೊಡವುಗಳ ಕಾಯಕಾಯತಮಾದ ಜೋಡುಗಳ್ |
ಕಡಿಯೆ ಕುಣಪಕ್ಕೆ ಪಕ್ಕೆಗಳಾಗೆ ಪಟುಭಟರ್ |
ಪೊಡೆಗೆಡೆದರಾಗ ರಾಗದೊಳಮರನಾರಿಯರ್ ತಕ್ಕೈಸಲಂಬರದೊಳು ||೫೨||

ಪಡೆ ಮಡಿಯುತಿರ್ದುದು ಲವಾಸ್ತ್ರದಿಂದಿತ್ತ ಕುಶ |
ನೊಡನೆ ಸೌಮಿತ್ರಿಗಾದುದು ಯುದ್ಧಮಾಗ ಕಿವಿ |
ಗಡಿಗೆ ತೆಗೆದೆಚ್ಚನೈದಂಬುಗಳನಿದಿರಾಗಿ ಭೂಮಿಜೆಯ ಸುತನ ಮೇಲೆ |
ಕಡುಗಿ ಖಾತಿಯೊಳೀತನೊಂದು ಸರಳಂ ಪೂಡಿ |
ಬಿಡಲೂರ್ಮಿಳಾವಲ್ಲಭನ ತೇರೆರಡು ಗಳಿಗೆ |
ಬಿಡದೆ ತಿರುಗಿತು ಬವಣಿಗೊಂಡು ರಥವಾಜಿಗಳ್ ಪೊಡೆಗೆಡೆದುವೇನೆಂಬೆನು ||೫೩||

ಮೆಚ್ಚಿದಂ ಬಾಲಕನ ವಿಕ್ರಮಕೆ ಲಕ್ಷ್ಮಣಂ |
ಪೆಚ್ಚಿದತಿರೋಷದಿಂ ಮತ್ತೊಂದು ರಥಕಡ |
ರ‍್ದೆಚ್ಚನೆರಡಂಬಿನಿಂದೀತನ ಕಿರೀಟಮಂ ಕವಚಮಂ ಮೂರರಿಂದೆ ||
ಕೊಚ್ಚಿ ಕೆಡಹಿದನಾಗ ಜಾನಕಿಯ ಸೂನು ಪೆರೆ |
ಯುಚ್ಚಿದಹಿಪತಿಯಂತೆ ಶೌರ್ಯವಿಮ್ಮಡಿಸೆ ನಗು |
ತುಚ್ಚರಿಸಿದಂ ವಿನಯಪೂರ್ವಕದೊಳರಸ ಕೇಳಾ ರಾಘವಾನಿಜಂಗೆ ||೫೪||

ಧುರದೊಳ್ ಕಿರೀಟ ಕವಚದ ಪೊರೆಯಿದೇಕೆಂದು |
ಪರಿಹರಿಸಿದುಪಕಾರಕಪಕಾರಮಂ ಮಾಡೆ |
ನುರುಸೈನ್ಯಭಾರಮಂ ನಿನಗೆ ಬಿಡಿಸುವೆನೀಗ ನೋಡಾದೊಡೆನುತೆ ಕುಶನು ||
ವರವಹ್ನಿನಿಕ್ತದೊಳಥರ್ವಮಂತ್ರದ ಪುನ |
ಶ್ಚರಣೆಯಿಂದನಲಾಸ್ತ್ರಮಂ ಪೂಡಿ ತೆಗೆದಿಸ |
ಲ್ಕುರಿದುದು ಚತುರ್ಬಲಮಕಾಲದೊಳ್ ಪುರಹರಂ ಪಣೆಗಣ್ದೆರೆದನೆನಲ್ಕೆ ||೫೫||

ಬಲಮೆಲ್ಲಮಂ ಸುಡುವ ಪಾವಕ ಜ್ವಾಯೆಯಂ |
ಕಲಿಲಕ್ಷ್ಮಣಂ ಕಂಡು ವರುಣಾಸ್ತ್ರದಿಂದದಂ |
ನಿಲಿಸಲ್ಕೆ ಬಾಲಕರಂ ಮತ್ತೆ ನಸುನಗುತೆ ವಾಯವ್ಯಮಾರ್ಗಣವನೆನಸಲು ||
ಕುಲಶೈಲಮಂ ಕಿತ್ತು ಬಿಸುಡುವಂದದ ಗಾಳಿ |
ಸಲೆ ಬಡಿದು ಪಡೆಗಳಿಂ ಕಡಹುತಿರೆ ನಡೆತಂದು |
ಸೆಲವುಗೊಂಡರ್ಮಿಳಾಖಾಂತನಂ ಪೆರಗಿಕ್ಕಿ ಕಾಲಜಿತುವಿದಿರಾದನು ||೫೬||

ಭುಜಬಲಕೆ ಪಾಡಲ್ಲ ತರಳನೆಂದುಳುಹಿದೊಡೆ |
ವಿಜಯನಾದಪೆ ಬೇಡ ಹೋಗೆಲವೋ ಕಾರುಣ್ಯ ||
ರುಜುವಲ್ಲ ತಾನೆನುತ ಕಾಲಜಿತುವಪಚ್ಚೊಡಾತನ ಬಾಣಮಂ ಖಂಡಿಸಿ ||
ಅಜಗಳಸ್ತನದಂತೆಸೆವ ನಿನ್ನ ಪೌರುಷಂ |
ನಿಜವಾದೊಡಾಂ ಸೈರಿಸುವೆನಲ್ಲದಿದೊಡಾ |
ರಜದಿಂದೆ ಪುಸಿವೇಳ್ದ ನಾಲಗೆಯನರಿವೆಂದಾಕುಶಂ ಕೋಲ್ಗರೆದನು ||೫೭||

ಎಸುಗೆಯೆಂತುಟೊ ಕುಶನ ಕಣೆ ರಣದೊಳಾರ್ದು ಗ |
ರ್ಜಿಸುವ ನಾಲಗೆಯ ನರಿದುದು ಬಳಿಕ ಮೌನದಿಂ |
ಮಸಗಿ ರೋಷದೊಳುಬ್ಬಿ ಕಾಲಜಿತುವೆಚ್ಚೊಡಾ ಜಾನಕಿಯ ಸೂನು ನಗುತೆ ||
ನಿತಿಶಾಸ್ತ್ರದಿಂದೆ ಕೈಕಾಲ್ ತಲೆಗಳಂ ಕೂಡೆ |
ಕುಸುರಿದರಿಯಲ್ ಕಂಡು ಖತಿಯಿಂದೆ ಲಕ್ಷ್ಮಣಂ |
ಮುಸುಕಿದಿಂ ಕೋಲ್ಗಳಂ ಬಾಲಕನಮೇಲೆ ಮೈಲೋಕದಾಲೋಕಮಡಗೆ ||೫೮||

ವೀರಲಕ್ಷ್ಮಣನಿಸುವ ಕೈರಂಬನೆಲ್ಲಮಂ |
ವಾರುವಂ ನಾಲ್ಕುಮಂ ತೇರು ಸುಕೇತುವಂ |
ನಾರಿಯಂ ಚಾಪ ತೂಣೀರಂಗಳಂ ಕೆಲದ ಚಾರರಂ ಸಾರಥಿಯನು ||
ಚಾರು ಕವಚವನೆಚ್ಚು ಧಾರಿಣಿಗೆ ಕೆಡಹಲ್ಕೆ |
ತೋರುಗದೆಗೊಂಡೂರ್ಮಿಳಾರಮಣ ನೈತರಲ್ |
ಧಿರನಹ ಸೀತಾಕುಮಾರಕಂ ಸಾಯಕದ ಸಾರದಿಂ ಪುಡಿಗೈದನು ||೫೬||

ಚರ್ಮಖಡ್ಗಂಗಳಿಂ ವಿವಿಧಾಯುಧಂಗಳಿಂ |
ದೂರ್ಮಿಳಾಕಾಂತನೊದಗಿದೊಡನಿತನೆಲ್ಲಮಂ |
ನಿರ್ಮಲಾಸ್ತ್ರಂಗಳಿಂ ಕತ್ತರಿಸಿ ವಾಲ್ಮೀಕಿ ಮುನಿವರಂ ತನಗೆ ಕೊಟ್ಟ ||
ಮರ್ಮಭೇದಿಗಳಾದುವೈದಂಬುಗಳ ನಿಸಲ್ |
ಸ್ವರ್ಮಣೀ ಧರಾತಳಕೆ ನಭದಿಂದುರುಳ್ವಂತೆ |
ಪೆರ್ಮರವೆಗೊಂಡು ಬೀಳ್ವನಿತರೊಳ್‌ತೋಳ್ವೊಯ್ದು ಕುಶನಾರ್ದು ಬೊಬ್ಬಿರಿದನು ||೬೦||

ಆ ಘೋರತರದ ಸಂಗ್ರಾಮದೊಳ್ ತಾನೆಚ್ಚ |
ಮೋಘಮಾಗಿರ್ದ ಮುನಿ ಕೊಟ್ಟ ದಿವ್ಯಾಸ್ತ್ರದ ಮ |
ಹಾಘಾತಿಯಿಂದೆ ಕಡುನೊಂದು ಮೂರ್ಛಿತನಾಗಿ ಬಿದ್ದು ಭೂಳತದಮೇಲೆ ||
ರಾಘವಾನುಜನಿರೆ ಕುಶಂ ಬಳಿಕ ನಿಜಹಸ್ತ |
ಲಾಘವದೊಳಲ್ಲರ್ದರಂ ಸದೆದು ಲವನಂ ಬ |
ಲೌಶಮೊತ್ತಾಯದಿಂ ಮುತ್ತಿಕೊಂಡಿರ್ದ ಕೋಲಾಹಲವನಾಲಿಸಿದನು ||೬೧||

ಶರ ಚಾಪ ಚರ್ಮ ಖಡ್ಗಂಗಳಂ ಕೊಂಡು ಕುಶ |
ನಿರದೆ ಲವನಿದ್ದೆಡೆಗೆ ಚಿಗಿದನಲ್ಲಿಂ ಖಗೇ |
ಶ್ವರನಂತೆಗಿದನದನೇವೇಳ್ವೆ ನಳಿದುಳಿದ ರಿಪುವಾಹಿನೀ ಭ್ರಮಿಗಳು ||
ಪರೆದುವೆಣ್ದೆ ಸೆಗಳ್ಗೆ ಸೀತಾಕುಮಾರಕರ್ |

ತಿರುಗಿದರ್ ತುರಗಮಿಹ ಬನಕಾಗಿ ದೇವಪುರ |
ದರಸ ಲಕ್ಷ್ಮೀಶ ರಾಘವನಲ್ಲಿಗೈದಿರ್ ದೂತರತಿವೇಗದಿಂದೆ ||೬೨||