ಸೂಚನೆ ||
ದ್ವಿಜನಾಗಿಬಂದು ಬೇಡಲ್ ಮಯೂರ ಧ್ವಜಂ |
ನಿಜ ಶರೀರದೊಳರ್ಧಮಂ ಕೊಯ್ದು ಕೊಟ್ಟು ಪಂ |
ಕಜ ಪತ್ರ ನೇತ್ರನಂ ಮೆಚ್ಚಿಸಿ ಹಯದ್ವಯಮನಿತ್ತು ಮಖಮಂ ಮಾಣ್ದನು ||

ಭೂರಮಣ ಕೇಳ್ ಕೃಷ್ನಾಕಾಂಕ್ಷಿಯಾಗಿರ್ದಂ ಮ |
ಯೂರಧ್ವಜ ಕ್ಷಿತೀಶ್ವರನಿತ್ತಲತ್ತ ರಣ |
ಧಾರಿಣೀಯೊಳಸುರಾರಿಗೆಚ್ಚರಿಕೆ ತಲೆದೋರಿ ತರ್ಜುನಂಗವಾದುದು ||
ವೀರಭಟರೆಲ್ಲರ್ಗೆ ಮೂರ್ಛೆ ತಿಳಿದುದು ಬಳಿಕ |
ವಾರಿಜಾಕ್ಷಂ ಸಕಲ ಸೇನೆಯಂ ಸಂತೈಸಿ |
ಚೋರಬುದ್ದಿಯೊಳೊಂದುಪಾಯಮಂ ಕಂಡಾ ಧನಂಜಯಂಗಿಂತೆಂದನು ||೧||

ನೋಡಿದೈ ಕುಂತೀಕುಮಾರ ತಾಮ್ರಧ್ವಜಂ |
ಮಾಡಿದ ವಿಘಾತಿಯಂ ನಮ್ಮೆಲ್ಲರಂ ಧುರದೊ |
ಳೀಡಿರಿದುರುಳ್ಚಿ ಹಯಮಂ ಕೊಂಡು ರತ್ನಪುರಿಗೈದಿದಂ ಪಿತನ ಬಳಿಗೆ ||
ಅಡಲೇನಹುದಿನ್ನು ಸೇನೆ ಮೆಲ್ಲನೆ ಪಿಂತೆ |
ಬೀಡಾಗಿ ನಡೆತರಲಿ ಮುಂದೆ ಪೋದಪೆನೆನ್ನ |
ಕೂಡೆ ಬಾ ನಿನಗೊಂದುಪಾಯಮಂ ತೋರಿಸುವೆನೆಂದನಸುರಾರಿ ನಗುತೆ ||೨||

ಆ ಹರಿಯ ನುಡಿಗೇಳ್ದು ಫಲುಗುಣಂ ಸೇನಾಸ |
ಮೂಹಮಂ ಪಿಂದುಳಿಪಿ ರತ್ನನಗರಿಗೆ ಪಕ್ಷಿ |
ವಾಹನಕೂಡೆ ನಡೆತಂದನವರಿರ್ವರುಂ ಮಾತಾಡಿಕೊಂಡು ಬಳಿಕ ||
ರೂಹು ಗಾಣಿಸದಂತೆ ವಿಪ್ರವೇಷವನಾಂತು |
ದೇಹಿಕರ ತೆರದಿಂದೆ ವೃದ್ಧನಾದಂ ಶೌರಿ |
ಮೋಹದಿಂ ತನಗೆ ಕೈಗುಡುವ ಬಾಲಕ ಶಿಷ್ಯನಾದನಮರೇಂದ್ರಸೂನು ||೩||

ಬಟ್ಟೆ ವಿಡಿದವರಿರ್ವರುಂ ಮಯೂರಧ್ವಜನ |
ಪಟ್ಟಣಕೆ ನಡೆತಂದರನ್ನೆಗಂ ದೆಸೆದೆಸೆಯೊ |
ಳಿಟ್ಟಣಿಸಿ ಲೋಕಮಂ ಕಂಗೆಡಿಸುವಂಧಕಾರಂಗಳಂ ನಿಲಲೀಯದೆ ||
ಅಟ್ಟಿ ಹರಿಹರಿದುರೆ ಬಳಲ್ದು ಕಾಹುರದೆ ಕಂ |
ಗೆಟ್ಟು ಕಳೆಗುಂದಿ ಮೆಲ್ಲನೆ ನಭೋಮಾರ್ಗಮಂ |
ಬಿಟ್ಟು ಪಶ್ಚಿಮಗಿರಿಯ ತಪ್ಪಲಂ ಸಾರ್ದನೆನೆ ರವಿ ಸಾರ್ದನೆನೆ ರವಿ ಪಡುಗಡೆಯೊಳೆಸೆದನು ||೪||

ಮೆಲ್ಲಮೆಲ್ಲನೆ ತರಣಿ ಮುಳುಗಿದಂ ಪಡುಗಡಲೋ |
ಳಲ್ಲಿಗಲ್ಲಿಗೆ ಮೂಡಿದುವು ಸಂಜೆದಾರಗೆಗ |
ಳೆಲ್ಲೆಲ್ಲಿಯುಂ ತಮಂ ತುಂಬಿದುದು ತುಂಬಿಗಳೊಡನೆ ಮುಗಿದುವಂಬುಜಾಳಿ ||
ನಲ್ಲನಲ್ಲರ ನೇಹ ಗಲಹದೊಳ್ ಮುನಿದು ರತಿ |
ಗೊಲ್ಲದೊಲ್ಲದ ಕಾಂತೆಯರ ಮನಂ ತರಹರಿಸಿ |
ನಿಲ್ಲನಿಲ್ಲದವೊಲಂಗಜ ನುರುಬತೊಡಗಿದಂ ಮರುಗಿದುವು ಕೋಕಂಗಳು ||೫||

ಹೊತ್ತುಹೊತ್ತಿಗೆ ಮತ್ತೆ ಮತ್ತೆ ಬಲವತ್ತರದೊ |
ಳೊತ್ತಿಡಿದು ಸುತ್ತಲೆತ್ತೆತ್ತಲುಂ ಕೆತ್ತವೋಲ್ |
ಮುತ್ತಿ ಮುಸುಕಿತ್ತು ಕಗ್ಗತ್ತಲೆ ಧಂತ್ರಿಯಂ ಮುಳ್ಳದೊನೆ ಕೊಳ್ಳದಂತೆ ||
ಚಿತ್ತಜಂ ಕತ್ತಿಯಂ ಕಿತ್ತುಕೊಂಡೆತ್ತಿ ಹೊ |
ಯ್ಯುತ್ತೆ ಬರಲುತ್ತುಂಗ ವೃತ್ತಕುಚೆಯರ್ ತಮಗೆ |
ತೆತ್ತಿರ್ದ ತೆತ್ತಿಗರನೊತ್ತಿಗರ ಸುತ್ತಿರ್ದರಾಗಳನುರಾಗದಿಂದೆ ||೬||

ಆ ರಜನಿಯೊಳ್ ಬಳಿಕ ರತ್ನಪುರಮಂ ಪೊಕ್ಕು |
ನೀರಜದಳೇಕ್ಷಣಂ ಕೇರಿಕೇರಿಗಳೊಳ್ ಸ |
ವಿರಜನ ತಮ್ಮನಂ ಕೂಡಿಕೊಂಡೈತರುತೆ ಕಂಡನತಿ ನಿದ್ರೆಯಿಂದೆ ||
ಊರ ಜನಮೆಲ್ಲಮುಂ ಮರೆದೊರಗಲಲ್ಲಲ್ಲಿ |
ಮಾರಜ ಭ್ರಮೆಯಿಂದೆ ಪೊರಮಟ್ಟು ಸಂಚರಿಪ |
ಚಾರು ಜಲರುಹ ವದನೆಯರ ಬೇಟದಾಟದ ಪಲವು ಬಗೆಯ ಚೇಷ್ಟೆಗಳನು ||೭||

ಆಭರಣಮಲುಗಿದೊಡೆ ಕಣ್ಣದಿರ್ ಸೂಸಿದೊಡೆ |
ಶೋಭೀಸುವ ತನುಗಂಧ ಮೂಣ್ಮಿದೊಡೆ ಜನರ ನಿ |
ದ್ರಾಭಂಗಮಾಗಿ ಕಂಡಪರೆಂಬ ಭೀತಿಯಿಂದೈತರ್ಪ ಕಾಮಿನಿಯನು ||
ಸಾಭಿಲಾಷೆಯೊಳೊರ್ವ ವಿಟನಿದಿರ್ವಂದು ಮ |
ತ್ತೇಭ ಗಾಮಿನಿ ಭೃಂಗ ನೀಲ ಕುಂತಲೆ ಪನ್ನ |
ಗಾಭ ಸುಂದರ ವೇಣಿ ಬೆದರಬೇಡೆನುತ ತಕ್ಕೈಸಿದನದೇಂ ಪ್ರೌಢನೋ ||೮||

ತೋರ ಮುತ್ತಿನ ಹಾರಮಂ ತೊಟ್ಟು ಚಂದ್ರಮುಖಿ |
ಕಾರ ಕತ್ತಲೆಯೊಳಡಿಯಿಡಲಂಜಿ ಪಣೆಗೆ ಕ |
ಸ್ತೂರಿಯಂ ಕಣ್ಗೆ ಕಾಡಿಗೆಯಂ ಕೊರಲ್ಗೆ ಹರಿ ನೀಲಮಣಿ ಭೂಪಣವನು ||
ಸೇರಿಸಲ್ಕದು ನೈಜಮಾಗೆ ಬೆರಗಾಗಿ ಬಳಿ |
ಕೋರೆದುರುಬಂ ತೆಗೆದು ಜಡೆಕಟ್ಟಿ ಪೊರಮಟ್ಟು |
ಕೋರಿಗೊಂಡೈದಿದಳ್ ಸಂಕೇತ ಭವನದೊಳ್ ಕಾದಿರ್ದ ಕಾಂತನೆಡೆಗೆ ||೯||

ಸಂಚುವ ಸತೀಜನದೊಳಂಗಭವ ಕೇಳೀ ಪ್ರ |
ಪಂಚ ವರನೊಳ್ ಸಮನಿಸಿದ ಬಳಿಕ ಮನದೊ |
ಳಂಚುವ ಬೆದರ್ಕೆಯಂ ಬಿಟ್ಟು ನಿಜ ಭವನಮಂ ಪುರಮಟ್ಟು ಕತ್ತಲೆಯೊಳು ||
ಮಿಂಚುವ ವಿಭೂಷಣಕೆ ಮುಸುಕಿಟ್ಟು ಸುಳಿವರ್ಗೆ |
ಹೊಂಚುವ ಚಮತ್ಕೃತಿಯ ನಳವಡಿಸಿ ನೆನಹಿಂಗೆ |
ಮುಂಚುವ ಪದನ್ಯಾಸಮಂ ಕಲಿತು ನಡೆವ ಜಾರೆಯರ ಚದುರೆಸೆದಿರ್ದುದು ||೧೦||

ಕಿಕ್ಕಿರಿದಡರ್ದುರನ ನಿಂಬುಗೊಂಡರೆ ಬಳೆದ |
ಕಕ್ಕಪದ ಬಟ್ಟಬಲ್ಮೊಲೆಗಳೊಪನ ಕೈಗೆ |
ವೆಕ್ಕಸಂ ನೋಳ್ಪರ್ಗೆ ಕಣ್ಗಿಸುರ್ ಮುದುಗಿದೊಡೆ ಮದನಂಗೆ ಮಾನಹಾನಿ ||
ಸೊಕ್ಕು ಲೇಸಾಗದೆಂದೋಪ್ಪಿಡಿಯೊಳೊದಗಿ ನೋ |
ಟಕ್ಕೆ ಕಾಣಿಸದೆ ಕಾಮನ ರೂಪನಳವಡಿಸಿ |
ತಕ್ಕ ಬಡತನದೊಳಿರ್ದುದು ಸಣ್ಣ ಸೆಳೆನಡು ನಿಶೆಯೊಳೈದಿ ಬಹು ಜಾರೆಯ ||೧೧||

ನಿಟಿಲಮಂ ನೇವರಿಸುತಂಗುಲಿಯ ತುದಿಯಿಂದೆ |
ತುಟಿವಿಡಿದು ನೋಡುತ್ತೆ ಮಣಿಮಣಿದು ವೃತ್ತ ಕುಚ |
ತಟಮಂ ನಿರೀಕ್ಷಿಸುತೆ ಕರ್ಣಪತ್ರವ ನಮರ್ಚುತ ಹಾರಮಂ ಸರಿಯುತೆ ||
ಕಟಿಗೆ ನಿರಿಯಂ ಸೇರಿಸುತೆ ನಿಮಿರ್ದ ಕ್ಷತಕೆ |
ವಿಟನನುರೆ ಬೈಯುತ್ತ ತಿರುಗಿ ನಿಜಮಂದಿರಕೆ |
ಕುಟಿಲ ಕುಂತಳದ ಜಾರೆಯರೈದಿ ಬರುತಿರ್ದರಲ್ಲಲ್ಲಿ ಕತ್ತಲೆಯೊಳು ||೧೨||

ಕತ್ತಲೆಯೊಳಸುರಾರಿ ಫಲ್ಗುಣರ್ ಜಾರೆಯರ |
ವೃತ್ತಾಂತಮಂ ನೋಡುತೈತರಲ್ಕನಿತರೊಳ್ |
ಪೊತ್ತದಿಹ ಜಕ್ಕವಕ್ಕಿಗಳ ವಿರಹದ ಬೆಂಕಿವೊಗೆ ಪೊಗೆದು ಮೇದಿನಿಯೊಳು ||
ಸುತ್ತಿ ಸುತ್ತಲುಮಂಧಕಾರಮಾಗಿರುತಿರಲ್ ||
ಚಿತ್ತಜಂ ತಂಬೆಲರೊಳೊದಿದೊಡೆ ಪಜ್ಜಳಿಸಿ |
ಮತ್ತುರಿವ ಕಿಚ್ಚಿನೇಳಿಗೆಯಂತೆ ಮೂಡಿದಂ ಚಂದ್ರನಿಂದ್ರನ ದೆಸೆಯೊಳು ||೧೩||

ಮರುಗಿದುವು ಕೋಕ ಕೋಕನದಂಗಳಾಗ ಬಾ |
ಯ್ದೆರೆದುವು ಚಕೋರ ಕೋರಕ ಕುಮುದ ರಾಜಿಗಳ್ |
ತುರುಗಿದ ತಮಿಸ್ರಮಾಲೋಕಸ್ಥಿತಿಗೆ ತೊಲಗಿದುದು ದೆಸೆದೆಸೆಯೊಳು ||
ಮೊರೆದುದು ಸಮುದ್ರಮುದ್ರವದ ಪೆರ್ಚುಗೆಯಿಂದ |
ಮೊರೆತುದುಡುಕಾಂತ ಕಾಂತ ಪ್ರತತಿ ಕುಸಮ ಶರ |
ನುರುಬಿದನಗಲ್ದರಂ ಚಾಪ ಚಾಪಲಹಸ್ತನಾಗಿ ಚಂದ್ರೋದಯದೊಳು ||೧೪||

ಪ್ರಾಚೀನಿತಂಬಿನಿಯ ಮುಖ ಬಿಂಬದೆಳನಗೆಯ |
ರೋಚಿಗಳೊ ಪೆಚರ್ಗಗೆಯೊಳುಬ್ಬೆದ್ದ ಪಾಲ್ಗಡಲ |
ವೀಚಿಗಳೊ ಮನ್ಮಥನ ಕೀರ್ತಿಯ ಮರೀಚಿಗಳೊ ನಿಜಕಾಂತನಂ ಕಾಣುತೆ ||
ನಾಚಿ ಬೇಳ್ಪೇರಿದಳೊ ರಾತ್ರಿವಧು ಚೆಲ್ಲಿದನೊ |
ಭೂಚಕ್ರಕಂಗಜಂ ಬೇಳುವೆಯ ಬೂದಿಯಂ |
ವಾಚಿಸುವೊಡರಿದೆನಲ್ಪಸರಿಸಿತು ಚಂದ್ರಕಿರಣಂಗಳೆಲ್ಲಾದೆಸೆಯೊಳು ||೧೫||

ತವೆ ಶಾಂತನಮೃತ ರೂಪಂ ಶೈತ್ಯ ವರ್ಧನಂ |
ಭುವನ ಪ್ರಕಾಶಂ ಜನಾವಲೋಕ ಪ್ರಿಯಂ |
ಧವಳ ತನು ವೃತ್ತಂ ನಿರಂತರಂ ವಿಷ್ಣುಪದ ಸೇವಕಂ ಕೃಷ್ಣಾಂಕನು ||
ದಿವಿಜ ತೋಷಕನಾದ ರಾಜನಭ್ಯುದಯದೊಳ್ |
ಕುವಲಯ ಶ್ರೀ ವಿರಾಜಿತಮಪ್ಪುದೇಂ ಕೌತು |
ಕವೆ ಜಾರಚೋರರ್ಕಳಡಗದಿರ್ದಪರೆ ಪೇಳೆನಲಿಂದು ಮೆರೆದನಂದು ||೧೬||

ಚಂದ್ರನುದಯಂಗೆಯ್ಯೆ ದೆಸೆದೆಸೆಗಳೆಲ್ಲಮುಂ |
ಚಂದ್ರಿಕೆಗಳಿಂದೆ ಬೆಳಬೆಳಗಿ ಬೆಳ್ಳಿವೊಲಾಗೆ |
ಚಂದ್ರಕಾಂತಂಗಳಿಂದೊಲ್ದು ನಿರ್ಮಿಸಿದ ನವ ಸೌಧಸೌಧಾಗ್ರಂಗಳು
ಚಂದ್ರಶಾಲೆಗಳೊಳಗೆ ರತಿ ಕಲಾ ಪ್ರೌಢಿಯಿಂ |
ಚಂದ್ರವದನೆಯರಂತರಂಗದೊಳ್ ಪುದಿದ ಕೆ |
ಚ್ಚಂ ದ್ರವಿಸುವಂತೆ ರಂಜಿಸಿ ರಮಿಸುತಿಹ ಪುರುಷರಾಪುರದೊಳೆಸೆದಿರ್ದರು ||೧೭||

ಕುಚಮಂಡಲದ ಮೇಲೆ ಚಾರು ನಯನದ ನಡುವೆ |
ಕಚದೆಡೆಯೊಳಿಹ ಕೃಷ್ಣ ವೈಭವಂ ತನ್ನ ಬಗೆ |
ಗುಚಿತಮಪ್ಪುದು ನಿನ್ನೆದೆಯೊಳಿರ್ಪ ಕೃಷ್ಣಭಾವಂ ತನಗೆ ವಿರಹಿತವನು ||
ರಚಿಸದಿರದೆಂದೊರ್ವನಿನಿಯಳಂ ತಿಳಿಸಲ್ಕೆ |
ವಿಚಲಮಪ್ಪುದೆ ಕೃಷ್ಣಹೃದಯಮೆಂದವಳೊದರೆ |
ವಚನದೋಷಕೆ ಬೇಡಿಕೊಂಬವೊಲ್ ಕಾಲ್ಗೆರಗಿ ಸಂತೈಸಿದಂ ಪ್ರಿಯೆಯನು ||೧೮||

ಅಚ್ಚಬೆಳ್ದಿಂಗಳೊಳ್ ಮತ್ತೋರ್ವನಿನಿಯಳಂ |
ನಿಚ್ಚಟದೊಳುಳಿವಂತೆ ನೀವಿಯಂ ಬರೆ ಸೆಳೆದು |
ಹೆಚ್ಚಳಿಸಿ ಪ್ರಿಯೆ ನಿನ್ನ ಸರ್ವಾಂಗಮಂ ನೋಡಿ ಕೃಷ್ಣಾವಲೋಕನವನು ||
ಮೆಚ್ಚಿ ತಣಿಯದವೊಲಿರ್ದಪುವೆನ್ನ ಕಂಗಳೆಂ |
ದುಚ್ಚರಿಸಲೆಲೆ ಮರುಳೆ ತಪ್ಪನಾಡಿದೆ ದೃಷ್ಟಿ |
ಗೊಚ್ಚತಂಗೊಂಡು ರಂಜಿಪ ಕೃಷ್ಣರೂಪಮಿರಲನ್ಯಮಿನ್ನೇಕೆಂದಳು ||೧೯||

ಅಂಗಜ ಶ್ರಮದಿಂದೆ ಬೆಮರ್ದ ಕಾಮಿನಿ ತನ್ನ |
ತುಂಗಕುಚ ತಟದ ಕಸ್ತೂರಿಯೊಳ್ ಪುದಿದಿನಿಯ |
ನಂಗಮಂ ಕಂಡಿದೇತಕೆ ಕೃಷ್ಣರೂಪಾದೆ ನೀನೆಂದು ಬೆಸಗೊಳಲ್ಕೆ ||
ಅಂಗನೆ ತಿಳಿಯದಾದೆ ಪೊತ್ತಿರ್ದನಂದು ಕೃ |
ಷ್ಣಂ ಗಿರಿಯನೊಂದ ನೆರಡದ್ರಿಗಳ ನೀಗಳಾಂ |
ಹಿಂಗದಾಂತಿಹೆ ನೆನಗೆ ಕೃಷ್ಣಭಾವಂ ಬರ್ಪುದಚ್ಚರಿಯೆ ಪೇಳೆಂದನು ||೨೦||

ಕತ್ತಲೆಯನಡಸಿ ಪಿಡಿದವರುಂಟೆ ತಾರೆಗಳ |
ಮೊತ್ತಮಂ ಪುಯ್ದು ಕೆಡಪಿದರುಂಟೆ ಬಟ್ಟೆಗಳ |
ನೊತ್ತಿ ಕರದಿಂದೆ ಕದುಬಿದರುಂಟೆ ಗಗನಮಂ ತಕ್ಕೆಗೊಂದಿಸಿದರುಂಟೆ ||
ವೃತ್ತದಿಂದೆಸೆವ ಶಶಿಯಂ ಚುಂಬಿಸಿದರುಂಟೆ |
ಚಿತ್ತಜಾಹವದ ಭಟರಂಗವಣೆ ಪೊಸತೆಂದು |
ಹತ್ತಿರಿಹ ಪಂಜರದ ರಾಜಕೀರಂ ಪೇಳ್ದುದೊರ್ವ ನಾಯಕಿಯ ಕೂಡೆ ||೨೧||

ಹರಶರ ಪ್ರಥಮಾವತಾರಲೋಚನೆ ಮಹೇ |
ಶ್ವರ ಚಾಪ ತುಂಗ ವಕ್ಷೆಜಾತೆ ಹಿಮಕರಾ |
ಭರಣ ಮೌರ್ವೀವೇಣೆ ತಾನಿರ್ದುಮನ್ಯಳಂ ಮದನ ಬಾಣಾಕ್ಷಿಯೆಂದು ||
ಸ್ಮರಕಾರ್ಮುಕ ಭ್ರೂಲತಾಶೋಭೆಯೆಂದು ಶಂ |
ಬರಮಥನ ಶಿಂಜಿನೀ ಲೋಲಕುಂತಳೆಯೆಂದು |
ಕರೆದೆ ಗಡ ನೀನೆಂದು ಸವತಿಮತ್ಸರಕೊರ್ವಳೋಪನಂ ಕೋಪಿಸಿದಳು ||೨೨||

ಅವವಂ ಕೆಳೆಯೆಂದುರಿಯನಪ್ಪಿ ಬಾಳ್ದವಂ |

ಪಾವಗಿದು ಬದುಕಿದವ ನಾವವಂ ಮೃಡ ನಯನ |
ಪಾವಕಜ್ವಾಲೆಯಿಂದುರೆ ಬೆಂದು ಜೀವಿಸುವನಾವವಂ ತ್ರಿಭುವನದೊಳು |
ಈ ವಾಯುವೀಚಂದ್ರ ನೀಪುಷ್ಪಬಾಣನೀ |
ಮೂವರುಂ ವಿಜಹಿಗಳ ಕೊಲೆಗುಳಿದರಕಟ ತಾ |
ನೇಗೈವೆನೆಂದೋಪನಗಲ್ದ ಕಾಮಿನಿಯೊರ್ವಳಾಗ ಚಿಂತಿಸುತಿರ್ದಳು ||೨೩||

ವಂಚನೆಯೊಳಿಂತಿರಳ್ ಪುರಜನದ ನಾನಾ ಪ್ರ |
ಪಂಚೆಲ್ಲಮಂ ನೋಡುತಸುರಾರಿ ಫಲ್ಗುಣರ್ |
ಸಂಚರಿಸುತಿರ್ದರಾ ಪಟ್ಟಣದೊಳನ್ನೆಗಂ ಕಾಂತರಾಲಿಂಗನದೊಳು ||
ಹೊಂಚಿರ್ದ ಕಾಮಿನಿಯರೆದೆಗೆ ಧಿಗಿಲೆನಲ್ ಕೂಗ |
ಲುಂಚದೊಳ್ ಕೋಳಿಗಳ್ ಕೂಟ ವೆಣೆವಕ್ಕಿಗಳ್ |
ಮುಂಚಿದುವು ತಾವರೆಗೆ ತುಂಬಿವಿಂಡೆರಗಿದುದು ಕೊರಗಿದುವು ನೈದಿಲೆಗಳು ||೨೪||

ಬಳಿಕ ದಿನದಿನಕೊಂದು ಪರಿಯಾಗಿ ದೋಷಮಂ |
ತಳೆದು ಸಲೆ ಪೆಚ್ಚಿದ ಕರಂಗಳಿಂ ಸಿರಿಯಿರ್ದ |
ನಿಳಯಂಗಳಂ ಬಾಧಿಸುವ ರಾಜನೈಶ್ವರ್ಯಮಿರ್ದುಪುದೆ ಪೇಳೆನಲ್ಕೆ ||
ತೊಲಗಿದವು ಬೆಳುದಿಂಗಳಾದಿತ್ಯನೊಳ್ ನೆರೆಯ |
ಲೆಳಸಿ ಕುಂಕುಮದಿಂದೆ ಪೂರ್ವದಗ್ವನಿತೆ ಮಂ |
ಗಳ ಮಜ್ಜನಂಗೈದಳೆಂಬಂತೆ ರಂಜಿಸಿತು ಮೂಡದೆಸೆ ಕೆಂಪಡರ್ದು ||೨೫||

ಗಾಲಿಯೊಂದೇ ರಥಕೆ ಜೋಡಾಗಿ ಪೂಡುವೊಡೆ |
ಸಾಲದೇಳೇಹಯಂ ನಡೆಸವೊಡೆ ಸಾರಥಿಗೆ |
ಕಾಲಿಲ್ಲ ಲೋಕ ಯಾತ್ರೆಯನೊಲ್ಲೆನೆಂದೊಡಾಗದೆ ತನಗೆ ತಿರುಗಲೇಕೆ ||
ಕಾಲಗತಿಯಂ ವಿರಬಾರದಿಂತೆಂಬುದಂ |
ಮೂಲೋಕಕೆಚ್ಚರಿಸುವಂತೆ ಪೂರ್ವಾಚಲದ |
ಮೇಲೆ ಮೂಡಿದನೆಂದಿನವೊಲಬ್ಜಬಾಂಧವಂ ನಯನಾಂಧಮಂದಡಗಲು ||೨೬||

ಜನನಾಥ ಕೇಳ್ ಮಯೂರಧ್ವಜ ಮಹೀಶ್ವರಂ |
ದಿನನಾಥನುದಯದೊಳ್ ವಿಮಲ ಸಂಧ್ಯಾವಿಧಿಯ |
ನನುಕರಿಸಿ ಕೃಷ್ಣನಿದ್ದೆಡೆಗೆ ತಾಂ ಪೋಗಿ ಕಂಡೆಪೆನೆಂಬ ಕಾರಿಯವನು ||
ಮನದೊಳಗೆ ನಿಶ್ಚಯಿಸಿ ಪೊರಮಡುವನಾಗಿ ನಿಜ |
ತನುಜನಂ ಕರೆಸಿ ಮಂತ್ರಿಗಳೆಲ್ಲರುಂ ಒರಿಸಿ |
ವಿನುತ ಭೂಸುರ ನೃಪಾಲಸ್ತೋಮದೊಡಗೂಡಿ ಕುಳ್ಳಿರ್ದನೋಲಗದೊಳು ||೨೭||

ಅನ್ನೆಗಂ ವೃದ್ಧ ವಿಪ್ರಾಕಾರಮಂ ತಳೆದ |
ಪನ್ನಗಾರಿಧ್ವಜಂ ನಿಜ ಶಿಷ್ಯ ಪಾರ್ಥನಂ |
ತನ್ನೊಡನೆ ಕೂಡಿಕೊಂಡೊಯ್ಯನೊಯ್ಯನೆ ಹಯದ್ವಯದಿಂದೆ ಪತ್ನಿಸಹಿತ ||
ರನ್ನದೊಡವುಗಳ ಕತ್ತುರಿಯ ತಿಲಕದ ನೊಸಲ |
ಮನ್ನೆಯರ ಗಡಣದಿಂ ದ್ವಿಜನಿಕರದಿಂದೆ ಸಂ |
ಪನ್ನ ದೀಕ್ಷೆಯೊಳೆಸವ ಭೂಪನೆಡೆಯ್ದಿಕೇಳ್ ಸ್ವಸ್ತ್ಯಸ್ತು ನಿನಗೆಂದು ||೨೮||

ಮತ್ತೆಲೆ ಮಹೀಪಾಲ ಶಾರ್ದೂಲ ನಿನಗಾಗ |
ಲುತ್ತರೋತ್ತರಮೆಂದು ತನಗೆ ನೀಂ ಬೇಡಿದುದ |
ನಿತ್ತಪೆ ಮಹಾದಾನಿಯೆಂದು ಶಿಷ್ಯಂವೆರಸಿ ಬಂದೆ ನಾನೀಗ ನಿನ್ನ ||
ಉತ್ತಮಾಧ್ವರಶಾಲೆಗೆಂಬ ದ್ವಿಜನಂ ಕಂಡು |
ಚಿತ್ತದೊಳ್ ಬೆದರಿ ನೃಪನಿರದೆದ್ದು ಪದಕೆರಗಿ |
ದತ್ತಾರ್ಘ್ಯ ಪಾದ್ಯಾಸನಂಗಳಿಂದುಪಚರಿಸಿ ಕುಳ್ಳಿರಸುತಿಂತೆಂದನು ||೨೯||

ಎಂದು ಪರಿಯಂತಂ ದ್ವಜರ್ಗವಜ್ಞೆಯನೆಸಗ |
ರಂದು ಪರಿಯಂತ ಮೈಸಲೆ ನರರ ಬಾಳ್ಕೆ ನೀಂ |
ಬಂದು ಪರಸಿದೊಡಾದುದಿಂದುತ್ತರೋತ್ತರಂ ತನಗೆ ನಿಶ್ಚಯಮಿಳೆಯೊಳು ||
ಸಂಧಿಸಿದ ಜನದ ವಂದನೆಗೆ ಮೊದಲೇ ಸ್ವಸ್ತಿ |
ಯೆಂದೊಡಾ ಭೂಸುರಂ ಪ್ರಿಯದೊಳಾ ಪ್ರಾಣಿಯಂ |
ಕೊಂದನಲ್ಲದೆ ಬೇರೆ ಶಾಪಮೇತಕೆ ವಿಪ್ರ ಪೇಳೆಂದೊಡಿಂತೆಂದನು ||೩೦||

ಪರಸಲಾಗದು ನಮಸ್ಕಾರಕ್ಕೆ ಮುನ್ನ ಭೂ |
ಸುರರನ್ಯನಂ ತನ್ನ ಸಂಕಟ ನಿಮಿತ್ತದಿಂ |
ದರಸಂಗೆ ಬಿನ್ನಪಂಗೈವನಾಶೀರ್ವಾದಮಂ ಮೊದಲೆ ಮಾಡದಿಹನೆ ||
ಧರಣಿಪತಿ ವಂದ್ಯನಲ್ಲದೆ ದೋಷಮೇನಿದಕೆ |
ಪಿರಿದಾರ್ತನಾಗಿ ನಿನ್ನೆಡೆಗೆ ನಾಂ ಬಂದೆನ |
ಧ್ವರಶಾಲೆಗೆಂದು ಕಪಟದ್ವಿಜಂ ನುಡಿಯಲ್ಕೆ ನರನಾಥನಿಂತೆಂದನು ||೩೧||

ದ್ವಿಜತಿಲಕ ನೀನನುಗ್ರಹಿಸೆನಗೆ ಧನ್ಯ ನಾಂ |
ನಿಜ ಶಿಷ್ಯನಂ ಕೂಡಿಕೊಂಡು ಮಖ ಮಂಟಪಕೆ |
ಬಿಜಯಮಾಡಿದ ಕಜ್ಜಮಾವುದೇತರೊಳಾಸೆ ನಿನಗಾರ್ತಮೇನಿದರೊಳು ||
ತ್ಯಜಿಸಬೇಡೊಂದುಮಂ ಪೇಳ್ದೊಡಾನೀವೆ ನಾ |
ರಜಮಿಲ್ಲದೆಲ್ಲಮಂ ವಾಚಿಸೆಂದಾಶಿಖಿ |
ಧ್ವಜನಾಡಲಾ ವಿಪ್ರನಿಂತೆಂದು ತನ್ನ ವೃತ್ತಾಂತಮಂ ವಿವರಿಸಿದನು ||೩೨||

ಉರ್ವೀಂದ್ರ ಕೇಳಾದೊಡಾಂ ಧರ್ಮಪುರದೊಳ್ ಪೆ |
ಸರ್ವಡೆದಿಹೆಂ ಕೃಷ್ಣಶರ್ಮನೆಂದೆನಗೆ ಸುತ ||
ನೊರ್ವನುಂಟಾತನ ವಿವಾಹಕ್ಕೆ ತವ ಪುರೋಹಿತ ಸತ್ಯಶೀಲನಲ್ಲಿ ||
ಒರ್ವಕನ್ನಿಕೆ ಮದುವೆಗಿಹಳೆಂದೊಡಲ್ಲಿಗ |
ಕ್ಕರ್ವೆರಸಿ ಮಗನನೊಡಗೊಂಡು ಬರುತಿರ್ದೆಂ ಪೊ |
ದರ್ವಡೆದಡವಿಯ ಪಥದೊಳ್ ಪಿಡಿದುದೊಂದು ಕೇಸರಿ ತನ್ನ ನಂದನನನು ||೩೩||

ಆ ಸಿಂಗಮತಿ ಭರದೊಳೆರಗಲಾ ಭೀತಿಗೆ ನೃ |
ಕೇಸರಿ ಸ್ಮರಣೆಯಂ ಬಿಡದೆ ನಾನಕಟ ಹಾ |
ಹಾಸೂನು ಹಾಯೆಂದು ಹಂಬಲಿಸಲದು ತನ್ನ ಘೋರ ನಖ ದಂಷ್ಟ್ರದಿಂದೆ ||
ಗಾಸಿಮಾಡದೆ ಪುತ್ರನಂ ಪಿಡಿದುಕೊಂಡಟ್ಟ |
ಹಾಸದಿಂ ಮಾನವರ ತೆರದಿಂದೆ ನುಡಿದುದೆಲೆ |
ಭೂಸುರೋತ್ತಮ ತನ್ನ ಮಾತನಾಲಿಸು ಬರಿದೆ ಹಲುಬಲೇನಪ್ಪುದೆಂದು ||೩೪||

ಮಕ್ಕಳಿಲ್ಲದವರ್ಗೆ ಲೋಕಮಿಲ್ಲೆಂಬುದೇ |
ನಕ್ಕಜವೆ ನಿಖಿಳ ನಿಗಮಾರ್ಥಮಿದು ತನಗೀಗ |
ಸಿಕ್ಕೆದನಲಾ ನಿನ್ನ ತನುಸಂಭವಂ ಬಿಡಿಸಿಕೊಳಲಾರ್ಪಲಾರು ಬರಿದೆ ||
ಕಕ್ಕುಲಿತೆ ಬೇಡ ನಡೆ ಶಿಷ್ಯನಂ ಕರೆದುಕೊಂಡು |
ಮಿಕ್ಕಸುತರುಳ್ಳೊಡಾರೈವುದೆನೆ ಮಗನ ಮೇ |
ಲಕ್ಕರಾವರಿಸಿ ಕಡುಶೋಕದಿಂದುಗ್ರಕೇಸರಿಗೆ ತಾನಿಂತೆಂದನು ||೩೫||

ಅತಿ ವೃದ್ಧನಲ್ವದಿನರ್ಪವಂ ಪುತ್ರವ |
ರ್ಜಿತನಿನ್ನು ತಾನಿರ್ದು ಮಾಳ್ಪುದೇನೆನ್ನನಾ |
ಹುತಿಗೊಂಡು ತನಗೆ ಗತಿಗುಡುವ ಸುತನಂ ಬಿಡುವುದೆಂದು ನಾಂಬೇಡಿಕೊಳಲು ||
ಮೃತಿಯ ಬಯಸುವ ದುಃಖಿಗಾವ ಕಂಟಕಮಿಲ್ಲ |
ಹತವಹುದು ಸುಖದಿಂದೆ ಬಾಳ್ವಂಗೆ ಕಾಲಕ |
ಲ್ಪಿತದಿಂದೆ ದೊರಕಿದನಿವಂ ನಿನ್ನನೊಲ್ಲೆನಾಂ ಪೋಗೆಂದು ಹರಿ ನುಡಿದುದು ||೩೬||

ಆ ನುಡಿಗೆ ನಡುಗಿ ತನಯನ ಮೇಲಣಾಸೆಯಿಂ |
ದಾನೆಂದೆನಾ ಸಿಂಹಕೆಲೆ ಮೃಗಾಧಿಪ ತನ್ನ |
ಸೂನುವಂ ಕಾವರಿಲ್ಲವೆ ಧರೆಯೊಳುಗ್ರ ತಪ ದಾನ ಧರ್ಮಂಗಳಿಂದೆ ||
ಏನುಪಾಯಂ ಗೆಯ್ವೆನೆಂದು ಮರುಗಲ್ಕೆ ಪಂ |
ಚಾನನಂ ಬಳಿಕ ತನಗೊಂದಾಸೆಯಂ ಕೊಟ್ಟು |
ಭೂನಾಥ ನಿನ್ನೆಡೆಗೆ ಕಳುಹಿದೊಡೆ ಬಂದೆನೆನಲವನೀಶನಿಂತೆಂದನು ||೩೭||

ವಿಪ್ರೇಂದ್ರ ಕೇಳೆನ್ನ ರಾಷ್ಟ್ರದೊಳ್ ನಾರಸಿಂ |
ಹ ಪ್ರವರ್ತನ ಮಲ್ಲದೆಲ್ಲಿಯಲುಂ ಕ್ಷುದ್ರಸಿಂ |
ಹ ಪ್ರಸಂಗವ ನರಿಯೆನಿನ್ನೆಗಂ ನಿನ್ನ ಸುತನಂ ಪಿಡಿದ ಸಿಂಹಮುಂಟೆ ||
ಅಪ್ರಸಿದ್ಧ ಪ್ರೋಕ್ತಮಿದು ಸಿಂಹಕೆನ್ನಿಂದ |
ಹ ಪ್ರಯೋಜನಮದೇಂ ಮಾಜದಂಜದೆ ತನಗೆ |
ಕ್ಷಿಪ್ರದಿಂ ಪೇಳೆಂದು ಭೂವರಂ ಬೆಸಗೊಂಡೊಡಾ ಪಾರ್ವನಿಂತೆಂದನು ||೩೮||

ಎನ್ನೊಳಾ ಸಿಂಹವಾಡಿದ ನುಡಿದು ನೀಗಳಾಂ |
ನಿನ್ನೊಳೆಂಬುದು ನೀತಿಯಾದಪುದೆ ಸುತಹೀನ |
ಮಿನ್ನೇಸು ದಾರುಣವೊ ಪೇಳಬೇಕಾಗಿಹುದು ನೃಪ ಕೇಳದರ ಮಾತನು ||
ಮುನ್ನೆ ಮುದಿಗೂಡು ತಪದಿಂದೊಣಗಿತಿದನೊಲ್ಲೆ |
ನುನ್ನಿಸದಿರಾರ್ಪೊಡೀವುದು ದಿವ್ಯ ದುಗ್ಧ ಸಂ |
ಪನ್ನ ಫಲಪುಷ್ಪಮಾಗಿಹ ಮಯೂರಧ್ವಜನ ಮೈಯೊಳರ್ಧವನೆಂದುದು ||೩೯||

ಈ ಮಗನ ಮೇಲೆ ನಿನಗಾಸೆಯೊಳ್ಳೊಡೆ ಬಿಡುವೆ |
ನಾ ಮಯೂರಧ್ವಜನ ದೇಹಾರ್ಧಮಂ ಕೊಂಡ |
ಬಾ ಮಹೀಪಾಲನಲ್ಲಿಗೆ ಪೋಗು ಕೊಲ್ಲೆನಾನನ್ನೆಗಂ ನಡೆಯೆನಲ್ಕೆ ||
ಭೂವಿಶನಿತ್ತಪನೆ ತನ್ನ ತನುಭಾಗಮಂ |
ಭ್ರಾಮಕಮಿದೆಂದು ಜರೆದಾಂ ತಿರಸ್ಕರಿಸೆ ಮ|
ತ್ತೀಮಾತನಾಡಿದುದು ತನ್ನೊಳಾಕೇಸರಿ ನರೇಂದ್ರ ಕೇಳ್ ಕೌತುಕವನು ||೪೦||

ಎಲೆ ಮರುಳೆ ವಿಪ್ರಪರಪುರುಷಾರ್ಥಕೆಳಸುವಂ |
ನೆಲದ ಮೇಲಣ ಬಾಳ್ಕೆಯಂ ನಿಜ ಶರೀರಮಂ |
ನೆಲೆಯೊಂದು ನೋಡುವನೆ ಕವಚಮಂ ಕರ್ಣಂ ದಧಿಚಿ ತನ್ನಸ್ತಿಗಳನು ||
ಒಲಿದಿತ್ತು ಕೀರ್ತಿಯಂ ತಳೆದುದಿಲ್ಲವೆ ನಿನ್ನ |
ಕುಲಮುಳಿಯಬೇಕೆಂದು ಪೋಗಿ ನೀಂ ಬೇಡಿದೋಡೆ |
ಸಲೆ ಕರುಣದಿಂದಾದಾನೃಪಂ ಕಾಯಮಂ ಕೊಯ್ದು ಕುಡದಿರಂ ಪೋಗೆಂದುದು ||೪೧||

ಸುತ್ಯಾಗಿ ಶುಚಿ ಶೂರನುಪಕಾರಿ ಕಮಲಾಕ್ಷ |
ಭೃತ್ಯನನಸೂಯಂ ಕೃಪಾವನಧಿ ಭುವನ ಜನ |
ನ ತ್ಯಂ ಮಯೂರಧ್ವಜಂ ತನ್ನ ಜೀವನದ ನಾದೊಡಂ ಬೇಡಿದರ್ಗೆ ||
ಅತ್ಯಂತ ಹರ್ಷದಿಂದಿತ್ತು ಸತ್ಕೀರ್ತಿಯನ |
ನಿತ್ಯ ಸಂಸಾದೊಳ್‌ಪಡೆದಲ್ಲದಿರ್ದಪನೆ |
ಸತ್ಯಮಿದು ಪೋಗೆಂದು ಸಿಂಹಮೆನ್ನಂ ಕಳುಹಿದೊಡೆ ನಿನ್ನೆಡೆಗೆ ಬಂದೆನು ||೪೨||

ರಾಯನಾಂ ಮೂಢನಲ್ಲವೆ ಸಕಲ ವೈಭವ |
ಶ್ರೀಯುಕ್ತಮಾಗಿರ್ದ ನಿನ್ನ ಘನ ಸೌಂದರ್ಯ |
ಕಾಯಮಂ ಕೊಟ್ಟು ತನ್ನಾತ್ಮಜಂ ಬದುಕಬೇಕೆಂದು ಸಿಂಹದ ಮಾತಿಗೆ ||
ವಾಯದಿಂ ಬಂದೆನಿಲ್ಲಿಗೆ ಸಾಕದಂತಿರಲ |
ಪಾಯಕೊಳಗಾಗಿರ್ದು ತನ್ನ ಸುತನುಳಿವುದಕು |
ಪಾಯಮಂ ಕಾಣೆನೆಂದಾ ಕಪಟ ಭೂಸುರಂ ಸುಯ್ದು ಮತ್ತಿಂತ್ತೆಂದನು ||೪೩||

ಭೂಸುರಂ ಬ್ರಹ್ಮಚರ‍್ಯೆಯೊಳಿರ್ದ ಪುತ್ರಂ ಗ |
ತಾಸುವಾದೊಡೆ ರಾಮಚಂದ್ರಂಗೆ ಮೊರೆಯಿಟ್ಟೊ |
ಡಾ ಸುತನ ಜೀವಮಂ ಬರಿಸನೇ ಪೌರುಸದೊಳಾ ರಾಘವೇಶ್ವರಂಗೆ ||
ಪಾಸಟಿಯಲಾ ನೀನು ಮದರಿನೆನ್ನಾತ್ಮಜಂ |
ಕೇಸರಿಯ ಬಾಯ ತುತ್ತಾದನೀ ದುಃಖದಾ |
ಯಾಸಮಂ ನಿನಗೊರೆದ ನಿನ್ನುಳುಹು ಮಾಣೆಂದು ಕಪಟದ್ವಿಜಂ ನುಡಿದನು ||೪೪||

ಕೇಳ್ದನವನೀಶ್ವರಂ ಪ್ರಚ್ಛನ್ನ ಭೂಸುರಂ |
ಪೇಳ್ದ ವೃತ್ತಾಂತಮಂ ಕೀರ್ತಿ ನಿಲ್ವುದು ನರರ |
ಬಾಳ್ದಿಟಮಿದಲ್ಲೆಂದು ನಿಶ್ಚೈಸಿ ವಿಪ್ರನಂ ಕರೆದು ನಿನಗೀ ತನುವನು ||
ಸೀಳ್ದು ಕೊಟ್ಟಪೆನೆಂದಭಯವಿತ್ತು ಬಳಿಕ ತಾ |
ನಾಳ್ದಿಳೆಯ ನಾತ್ಮಜಂಗಪ್ಪೈಸಿ  ಹರ್ಷಮಂ |
ತಾಳ್ದನಿಬರೆಲ್ಲರಂ ಮಂಟಪದೊಳಿಹುದೆಂದು ಕುಳ್ಳಿರಿಸಿ ಪೊರಮಟ್ಟನು ||೪೫||

ತರಿಸಿ ಗಂಗಾತೋಯಮಂ ಮಜ್ಜನಂಗೈದು |
ಪರಮ ಸಾಲಗ್ರಾಮ ತೀರ್ಥಮಂ ಕೈಕೊಂಡು |
ತರುಣ ತುಳಸೀದಳದ ಮಾಲೆಯಂ ಕಂಧರದೊಳಾಂತು ಮಂಟಪಕೆ ಬಂದು ||
ನೆರೆದ ಭೂಸುರ ಸಭೆಗೆ ಸಾಷ್ಟಾಂಗದಿಂದೆರಗಿ |
ಕರಯುಗಳಮಂ ಮುಗಿದು ನಿಂದು ಬಿನ್ನೈಸಿದಂ |
ಧರಣೀಶ್ವರಾಗ್ರಣಿ ಮಯೂರಧ್ವಜಂ ಜನಾಧಿಶ ಕೇಳ್ ಕೌತುಕವನು ||೪೬||

ಈ ಮಹಾಸ್ಥಾನದೊಳ್‌ನೆರೆದಖಿಳ ಭೂಸುರ |
ಸ್ತೋಮಂ ನಿರೀಕ್ಷಿಸುವುದಂದು ಬಲಿಯಧ್ವರಕೆ |
ವಾಮನಂ ಬಂದಂತೆ ತನ್ನ ಮಖಕೀ ದ್ವಿಜಂ ತಾನೆ ಬಿಜಯಂಗೈದನು ||
ಶ್ರೀಮಾಧವಸ್ಯರೂಪದೊಳೀಗರಿದು ತ |
ನ್ನೀ ಮೆಯ್ಯೊಳರ್ಧಮಂ ಕೊಯ್ದು ಕೊಟ್ಟಪೆ ನತಿ |
ಪ್ರೇಮದಿಂದೀತಂಗೆ ಬದುಕಲೀತನ ಸುತಂ ಪೊಸತಾಗಲಿಳೆಗೆಂದನು ||೪೭||

ಭೂತಾಥನೆಂದ ಮಾತಂ ಕೇಳ್ದು ಸಕಲ ಪ್ರ |
ಧಾನಿಗಳುಮರಸನ ಪುರೋಹಿತರ ಮಾದ್ವಿಜರು |
ಮೇನಿದೆತ್ತಣ ಕೃತ್ಯವಿ ವಿಪ್ರ ನಂತಕೋಪಮನೆಂದು ಭೀತಿಯಿಂದೆ ||
ದಾನಮೆಂದೊಡೆ ರಾಜ್ಯ ಲಕ್ಷ್ಮಿ ಧನ ಕನಕ ಮಣಿ |
ಧೇನುಗಳ ನೀವರೀ ಕಾಯಮಂ ಕೊಯ್ದು ಕುಡು |
ವೀ ನಿಮಿತ್ತದ ನರಿಯೆವೆಂದೆಲ್ಲರುಂ ಕಂಪಿಸಲ್ ನೃಪತಿಯಿಂತೆಂದನು ||೪೮||

ಯಾಚಿಸಿದನಂಗಮಂ ಸುತನನುಳುಹೆಂದೆನೆಗೆ |
ಸೂಚಿಸಿದನೀದ್ವಿಜಂ ತಾಂ ಕೊಡುವೆನೆಂದೊಡನೆ |
ವಾಚಿಸಿದೆ ನೀಂತಿದಕೆ ತಪ್ಪಿದೊಡೆ ಲೋಕದೊಳ್ ತನ್ನಂ ಸಮಸ್ತ ಜನರು ||
ನಾಚಿಸದೆ ಮಾಣ್ದಪರೆ ಪುಸುದೊಡಂತಕನವರ್ |
ಪಾಚಿಸರೆ ನರಕದೊಳ್ ಮೈಯನರಿದೀಯಲಾ |
ಳೋಚಿಸಲದೇಕಿನ್ನು ತೊಲಗಿ ನೀವೆಂದು ನೃಪನನಿಬರಂ ಸೈತಿಟ್ಟನು ||೪೯||

ಆ ಮಯೂರಧ್ವಜಂ ಬಳಕಲ್ಲಿ ವಿಪ್ರರಂ |
ಹೇಮ ಮಣಿ ಗಜ ತುರಗ ವಸ್ತ್ರಭೂಷಣ ಧೇನು |
ಭೂಮಿ ದಾನಂಗಳಿಂ ತಣಿಸಿ ನೆಡಿಸಿದನೆರಡು ಕಂಬಮಂ ನಡುವೆ ತನ್ನ ||
ಕೋಮಲ ಶರೀರಮಂ ಪುಗಿಸಿ ಕಾಂಚನಮಯ ಸು |
ದಾಮದಿಂ ತೋಳ್ತೊಡೆಗಳಂ ಬಿಗಿಸಿಕೊಂಡು ನಿಂ |
ದಾ ಮಹೀಸುರನ  ಪದಕಮಲಂಗಳಂ ತೊಳೆದು ಸಾದರದೊಳಿಂತೆಂದನು ||೫೦||

ಭೂಸುರೋತ್ತಮ ನಿನಗೆ ತಾ ಕುಡುವ ದೇಹಾರ್ಧ |
ದೀಸುದಾನದೊಳಖಿಲ ಯಜ್ಞನಾಯಕನಾದ |
ವಾಸುದೇವಂ ಪ್ರೀತನಾಗಲಸ್ಮತ್ಕುಲೋದ್ಭವರಾದ ಜೀವಿಗಳೊಳು ||
ಲೇಸಿಂದೆ ಪಾರ್ವಂಗೆ ತನು ಧನವ ನೀವೆಡೆಯೋ |
ಳೋಸರಸದಿರಲಿ ಬುದ್ದಿಗಳೆಂದು ನೃಪತಿ ಕ |
ಟ್ಟಾಸುರದ ಕೊಯ್ಗಾರರಂ ಕರೆಸಿ ತೆಗೆಸಿದಂ ಮಸೆದ ಕೊಯ್ಗತ್ತಿಗಳನು ||೫೧||

ಕುಡುವನಿರೆ ತನಗೆ ಬೇಕಾದುದಂ ಬೇಡುವಂ |
ಬಿಡುವನೇ ಬೇಡುವಂ ಬರೆ ತನ್ನೊಳಿರ್ದುದಂ |
ತಡೆದಪನೆ ಕುಡುವವಂ ಕುಡುವ ಬೇಡುವರೊಳಗೆ ಕುಡೆನೆಂಬ ಬೇಡೆನೆಂಬ ||
ಎಡೆತಡೆಗಳಿಲ್ಲೆಂಬ ನಾಳ್ನುಡಿಯ ನೀಪಾರ್ವ |
ಪೊಡವೀಶರೊಳ್‌ಕಂಡೆವೆಂದು ನಡನಡುಗಿ ಮೊರೆ |
ಯಿಡುತಿರ್ದುದವನ ರಾಷ್ಟ್ರದ ಜನಂ ಬೆದರಿ ಕುರರೀಗಣಂಗಳ ತೆರದೊಳು ||೫೨||

ಪೂರ್ವಮಂ ನೆನೆದು ಕಂಬನಿಗಳಿಂ ಧ್ವನಿಗಳಿಂ |
ಚೀರ್ವರಂ ಪ್ರಜೆಗಳಂ ಪಾಲಿಸದೆ ಲಾಲಿಸದೆ |
ಜಾರ‍್ವ ಪರಿಯೆಂತೆಂದಳಲ್ವರಂ ನಿಲ್ವರಂ ಬೆರಗಾಗಿ ಬೆರಗುಗೊಂಡು ||
ಸಾರ್ವಭೌಮಕ ನಿನ್ನ ರಕ್ಷೆಯಂ ಶಿಕ್ಷೆಯಂ |
ವಿರ್ವರಲ್ಲೆಮ್ಮ ನೀಂ ಬಿಡುವರೇ ಕುಡುವರೇ |
ವಾರ್ವಂಗಸುವನೆಂದು ಬಯ್ವರಂ ಸುಯ್ವರಂ ನೋಡಿ ನೃಪನಿಂತೆಂದನು ||೫೩||

ಪ್ರಜೆಗಳಿರ ನೀವಿದಕೆ ದುಃಖಿಪರೆ ಧನ್ಯನಾಂ |
ನಿಜಶರೀರದೊಳರ್ಧಮಂ ಕೊಯ್ದು ಕುಡುವೆ ನೀ |
ದ್ವಿಜನ ಹಸ್ತದೊಳಿವಂ ನೃಹರಿಯೆಂದೀತನಡವಿಯ ಸಿಂಹಕೀಯಲಿದನು ||
ಗಜಬಜ ವಿದೇತಕೆ ಪರೋಪಕೃತಿಗಲ್ಲದ ಮ |
ನುಜನ ಬಾಳ್‌ಸಣಬುರಿದ ಬೂದಿಯಂತಪ್ಪುದಾ |
ರಜಮಿಲ್ಲದೀಕ್ಷಿಪುದು ಕೌತುಕವನೆಂದೊಡಂಬಡಿಸಿದಂ ನರನಾಥನು ||೫೪||

ಮತ್ತೆ ಮನುಜೇಂದ್ರನಾವಿಪ್ರನಂ ಕರೆದು ನಿನ |
ಗಿತ್ತೆ ನೀ ದೇಹಾರ್ಧಮಂ ಪರಿಗ್ರಹಿಸೆಂದು |
ಚಿತ್ತದೊಳ್‌ಮಿಗೆ ಹರ್ಷಮಂ ತಾಳ್ದು ಪೊರೆಯೊಳಿಹ ಸೂದಕರ್ಮಜ್ಞರೊಡನೆ ||
ಪೊತ್ತುಕಳೆಯದೆ ತನ್ನ ತನುವ ನೆರಡಾಗಿ ಮಸೆ |
ವೆತ್ತೆಕರಪತ್ರದಿಂ ಸೀಳ್ವುದೆಂದಾಜ್ಞಾಪಿ |
ಸುತ್ತಿರೆಶಿಖಿಧ್ವಜನ ಸತಿ ಕುಮುದ್ವತಿ ನುಡಿದಳತಿವಿನಯದಿಂದೆ ಪತಿಗೆ ||೫೫||

ನೀಂ ತಿಳಿದುದಿಲ್ಲರಸ ವಿಪ್ರೇಂದ್ರನರಿಯಂ ವ |
ನಾಂತರದೊಳಾ ಸಿಂಹಮೆಂದನುಡಿ ಶಾಸ್ತ್ರಸಿ ||
ದ್ಧಾಂತಮಂಗನೆ ಪುರುಷನಧಾಂಗಮೆಂಬುದಕ್ಕೆ ನಿನ್ನ ವಾಮಾಂಗಿಯಾದ ||
ಕಾಂತೆಯಂ ಬೇಡಿದೊಡೆ ಕೊಯ್ದು ಕಾಯವನೀವ |
ಭಾಂತಿಯೇತಕೆ ತನ್ನ ನಸುವೆರಸಿ ಕೊಟ್ಟು ಕಳೆ |
ತಾಂ ತಳೆವ ನೈದೆತನದಿಂದೆ ಸದ್ಗತಿಯನೆಂದಾ ಕುಮುದ್ವತಿ ನುಡಿದಳು ||೫೬||

ಸಮ್ಮತಮಿದಹುದೆಂದರೆಲ್ಲರುಂ ಭೂವರಂ |
ಸುಮ್ಮನಿರೆ ಕಂಡನೀ ತೆರನಂ ದ್ವಿಜತ್ವಮಂ |
ನೆಮ್ಮಿದ ಮುಕುಂದನೆಲೆ ರಾಯ ನಿನ್ನರಸಿ ನುಡಿದುತ್ತರವನೊಪ್ಪಬಹುದು ||
ಸುಮ್ಮಾನದಿಂ ಜನೇಶ್ವರನ ದಕ್ಷಣಭಾಗ |
ಮಮ್ಮೆಲ್ವೆನೆಂದು ಒಕ್ಕಣಿಸಿತಲ್ಲದೆ ಸಿಂಹ |
ವೆಮ್ಮೊಡನೆ ವಾಮಾಂಗಮೆಂದಾಡಿತಿಲ್ಲೆನಲ್ ನೃಪನ ಸುತನಿಂತೆಂದನು ||೫೭||

ಕರುಣಿಸೆಲೆ ವಿಪ್ರ ನಿನ್ನಂ ಬೇಡಿಕೊಂಬೆ ನಾಂ |
ತರುಣಂ ಸುಪುಷ್ಟವಪು ತುಷ್ಟಿ ಮೃಗಪತಿಗಾಗ |
ದಿರದು ತಾತನ ಋಣತ್ರಯಕೆ ಹರಿವಹುದು ರಾಘವ ಭೀಷ್ಮರಂತೆ ಕೀರ್ತಿ ||
ಸ್ಥಿರವಹುದು ಪಿತನ ಭಾಷೆಗೆ ನಿಲಲ್ ಜನಕನವ |
ತರಿಪನಾತ್ಮಜನಾಗಿ ತಂದೆಮಕ್ಕಳಿವರೊಳ್ |
ಗೆರವಿಲ್ಲ ತನ್ನಂಗಮಂ ತೆಗೆದುಕೊಳ್ಳೆಂದು ತಾಮ್ರಧ್ವಜಂ ನುಡಿದನು ||೫೮||

ಭೂಪಾಲ ಕೇಳವನ ಮಾತಿಗೆ ಮಹೀಸುರಂ |
ಕಾಪಟ್ಯಮಿಲ್ಲೆಲೆ ಕುಮಾರ ನೀನೆಂದ ನುಡಿ |
ಪಾಪಿ ಕೇಸರಿ ತನ್ನೊಳವನಿಪನ ಸತಿಯೆಂದು ಸುತನೆಂದು ಪೇಳ್ದುದಿಲ್ಲ ||
ಅಪೊಡೆ ಮಯೂರಧ್ವಜನ ದಕ್ಷಿಣಾಂಗಮಂ |
ತಾ ಪುತ್ರನಂ ಬಿಡುವೆನೆಂದೊಡಿಲ್ಲಿಗೆ ಬಂದೆ |
ನೀಪರಿಯೊಳಳುಕುವರೆ ಕುಡಬೇಡ ಪೋಪೆನೆನೆ ನರನಾಥನಿಂತೆಂದನು ||೫೯||

ರಾಣಿಯಂ ಕುಡುವುದಿಲ್ಲಾತ್ಮಜನ ನೀವುದಿ |
ಲ್ಲೂಣೆಯಂ ತನ್ನ ಭಾಷೆಗೆ ಬಾರದಂತಬ್ಜ |
ಪಾಣಿ ಮೆಚ್ಚುವವೊಲರ್ಧದೇಹಮಂ ಕೊಯ್ದು ಕೊಟ್ಟಪೆನೀಗ ಸೈರಿಸೆನುತ ||
ಸಾಣೆವಿಡಿದಿರ್ದ ಕರಪತ್ರಮಂ ಕುಡಿಸಿದಂ |
ಪ್ರಾಣನಾಥೆಯ ಕೈಯೊಳೆನ್ನುತ್ತಮಾಂಗಮಂ |
ಕೇಣಮಿಲ್ಲದೆ ತನುಜನಂ ಕೂಡಿಕೊಂಡು ನೀ ಸೀಳೆಂದು ನೇಮಿಸಿದನು ||೬೦||

ಬಾಲಲೀಲೆಗಳಿಂದೆ ನಂದನಂ ತರುಣಿರತಿ |
ಕಾಲದೊಳ್ ನಖದಿಂದ ಸೀಳಕ್ಕೆ ನೋವುದೆ ವಿ |
ಶಾಲಾಕ್ಷಿ ತನಗಿದು ವಿನೋದ ಮಸಿಪತ್ರದಿಂ ಸೂನು ಸಹಿತೀಗ ನೀನು ||
ಆಲಸ್ಯಮಂ ಮಾಡದರಿವುದೀ ಮಸ್ತಕದ |
ಮೇಲಣಿಂದಿಳಿಯೆ ಮುಂತಾಗಿ ತನ್ನಂಗಮಂ |
ಪಾಲೆರಡು ಸಮಮಾಗೆ ಗರುಡ ಹನುಮಂತರ್ಗೆ ಚಕ್ರಿ ಪಣ್ವಂಚಿದಂತೆ ||೬೧||

ಆ ಮಹೀಪಾಲ ನೀತೆರದೊಳ್ ಕುಮುದ್ವತಿಗೆ |
ನೇಮಿಸೆ ಕುಮಾರನಂ ಕೂಡಿಕೊಂಡವಳತಿ |
ಪ್ರೇಮದಿಂ ಕರಪತ್ರಮಂ ಕೊಂಡು ಮುನ್ನ ದೈತ್ಯನನಿಂತು ಸೀಳ್ದನೆಂದು ||
ಆ ಮಹಾಸಭೆ ನಾರಸಿಂಹನಂ ನೆನೆವಂತೆ |
ರಾಮರಾಮೆಂದು ಜಪಿಸುತ ಕೊಯ್ದಳವನಿಪ |
ಶಿರೋಮಣಿಯ ಮಸ್ತಕವನೆರಡಾಗಿ ಸರಿಸದಿಂದೋರೆಪೋರೆಗಳಿಲ್ಲದೆ ||೬೨||

ಸ್ತಂಭಧ್ವಯದ ನಡುವೆ ನಿಂದ ನೃಪನಂ ತನ್ನ |
ಸಂಭವನುಮರಸಿಯುಂ ಪಿಡಿದೊಬ್ಬರೊಂದುಕಡೆ |
ಯಿಂ ಭಾಳಮಧ್ಯಮಂ ತೀಕ್ಷ್ಣ ಕರಪತ್ರದಿಂ ಘರಘರನೆ ಸೀಳುತಿರಲು ||
ಜಂಭರಿಪುನಂದನ ಮುರಾರಿಗಳ್ ಬೆರಗಾದ |
ರಂಬೋದಿ ಘೋಷದಿಂದೆದ್ದು ಹಾಹಾಕಾರ |
ದಿಂ ಭಯಂಗೊಡೊರಲುತಿರ್ದುದಾಸ್ಥಾನಮೆಲೆ ಭೂಪ ಕೇಳ್‌ಕೌತುಕವನು ||೬೨||

ಪೆಂಡತಿಯೊಳಾತ್ಮ ಜನೊರಸನೊಳ್ ಮಿಗೆ ನೋಡಿ |
ಕಂಡುದಿಲ್ಲೊಂದಿನಿಸು ಖಯಖೋಡಿಯಂ ಬಳಿಕ |
ಪುಂಡರೀಕಾಂಬಕಂ ನೃಪನ ವಾಮಾಕ್ಷಿಯೊಳ್ ಕಂಬನಿಗಳೊಸರುತಿರಲು ||
ಅಂಡಲೆಯೊಳಳುತಳುತ ಕುಡುವವನ ದಾನಮಂ |
ಕೊಂಡಪರೆ ಬುಧರಕಟ ಲೋಕದೊಳ್ ಬೇಡುವಂ |
ಭಂಡನೆನುತೊಡಮುರಿದು ತಿರುಗಿದು ತನಯನಂ ತಿನಲಿ ಹರಿ ಬನದೊಳೆನುತೆ ||೬೪||

ಬೆರಗಾದಳಾ ಕುಮುದ್ವತಿ ನುಡಿದಳರಸಂಗೆ |
ಬರಿದೆ ಕೊಯ್ಸಿದೆ ನಿನ್ನ ವಾಸ್ತಕವ ನೆಡಗಣ್ಣೊ |
ಳೊರೆವ ಕಂಬನಿಗಳಂ ಕಂಡಾ ದ್ವಿಜೋತ್ತಮಂ ನೀನಳುತ ಕುಡುವೆಯೆಂದು ||
ಪೊರಮಟ್ಟು ಪೋದನೊಲ್ಲದೆ ವಿಫಲಮಾದುದ |
ಕ್ಕರೊಳಿತ್ತ ದಾನಮಿದಕಂತೆನೆಲ್ ಭೂವರಂ |
ಮರುಗಿ ಕರೆಸಾತನಂ ತಿಳಿಪುವೆಂ ಪೋಳ್ಗಳೆರಡಂ ಕೂಡಿ ಪಿಡಿಯೆಂದನು ||೬೫||

ಬಳಿಕಾ ಕುಮುದ್ವತಿ ನರೇಂದ್ರಮಸ್ತಕದ ಪೋ |
ಳ್ಗಳನೊಂದುಗೂಡಿ ಪಿಡಿದಾಗ ನಿಜ ತನಯನಂ |
ಕಳುಹಲವನಾಪಾರ್ವನಂ ತಡೆದೊಡಂಬಡಿಸಿ ವಿನಯದಿಂ ಕರೆತರಲ್ಕೆ |
ತಿಳಿಪಿದಂ ಭೂಪನೆಲೆ ವಿಪ್ರ ಕರಪತ್ರಹತಿ |
ಗಳುಕಿತಿಲ್ಲುಪಕಾರಕಾಯ್ತು ದಕ್ಷಿಣಭಾಗ |
ಮುಳಿದುದು ನಿರರ್ಥಕಂ ವಾಮಾಂಗಮೆಂದೊಸರಿತೆಡಗಣ್ಣ ಜಲಮೆಂದನು ||೬೬||

ಮೆಚ್ಚಿದಂ ನೃಪನೆಂದ ಮಾತಿಗೆ ಮುರಧ್ವಂಸಿ |
ಹಚ್ಚಿರ್ದ ರಾಯನ ಕಳೇಬರದ ಪೋಳ್ಗಳಂ |
ಬೆಚ್ಚು ಕಾರುಣ್ಯದಿಂ ಮೈದಡವಿ ತಕ್ಕೈಸಿ ನಿನ್ನಂ ಪರೀಕ್ಷಿಸಿದೆನು |
ನಿಚ್ಚಟದ ಭಕ್ತಿಯಂ ಕಂಡೆನಿವನರ್ಜುನಂ |
ಮುಚ್ಚುಮರೆಯೇಕಿನ್ನು ತಾನೀಗ ಕೃಷ್ಣನೆಂ |
ದೆಚ್ಚರಿಸಿ ನಿಗಮದರಿಕೆಯ ತನ್ನ ಸಾಕಾರ ಮೂರ್ತಿಯಂ ತೋರಿಸಿದನು ||೬೭||

ವರ ಸುಪ್ರಸನ್ನ ವದನದ ಕಮಲ ನೇತ್ರದ ಮ |
ಕರ ಕುಂಡಲದ ಲಲಿತ ನಾಸಿಕದ ಪಣೆಯ ಕ |
ತ್ತುರಿಯ ತಿಲಕದ ಮುರಿದ ಪುರ್ಬುಗಳ ಸುಳಿಗುರುಳ ಮಣಿ ಮಕುಟದೆಳದೊಳಸಿಯ ||
ಕೊರಲ ವನಮಾಲೆಗಳ ಕೌಸ್ತುಭ ಶ್ರೀವತ್ಸ |
ದುರದ ಚಂದನದ ನಳಿತೋಳ್ಗಳ ಘನಾಂಗ ಸೌಂ |
ದರಿಯದವಯವನದ ಸರ್ವಾಭರಣ ಭೂಷಿತದ ಹರಿ ನೃಪನ ಮುಂದೆಸೆದನು ||೬೮||

ಹೇಮಾಂಬರದ ಲಲಿತ ಕಾಂತಿ ಹೊಳೆಹೊಳೆವ ಸೌ |
ದಾಮಿನಿವೊಲಿರೆ ಪೊರೆದ ಕರುಣರಸ ಮೊಸರ್ವ ಧಾ |
ರಾಮಯದ ಮಳೆವೊಲಿರೆ ನುಡಿದ ಗಂಭೀರವಾಕ್ಯಂ ಕೂಡೆ ಮೊಳಗುವೊಲಿರೆ ||
ಕೋಮಲ ತ್ಯಾಮ ಲಾವಣ್ಯತನು ಮುಂಗಾರ |
ಜೀಮೂತದೊಡ್ಡಿನವೊಲಿರೆ ಪಿರಿದು ನಲಿಯದಿರ |
ನೇ ಮಯೂರಧ್ವಜಂ ಪೇಳೆನಲ್ ಕೃಷ್ಣನಂ ಕಂಡು ಪುಳಕಿತನಾದನು ||೬೯||

ಜಯಜಯ ಜಗನ್ನಾಥ ವರ ಸುಪರ್ಣ ವರೂಥ |
ಜಯಜಯ ರಮಾಕಾಂತ ಶಮಿತ ದುರಿತಧಾಂತ |
ಜಯಜಯ ಸುರಾಧಿಶ ನಿಗಮನಿರ್ಮಲಕೋಶ ಕೋಟಿಸೂರ್ಯಪ್ರಕಾಶ ||
ಜಯಜಯ ಕ್ರತುಪಾಲ ತರುಣ ತುಲಸೀಮಾಲ |
ಜಯಜಯ ಕ್ಷ್ಮಾಪೇಂದ್ರ ಸಕಲ ಸದ್ಗುಣ ಸಾಂದ್ರ |
ಜಯತುಜಯ ಯದುರಾಜ ಭಕ್ತಸುಮನೋಭೂಜ ಜಯತುಜಯ ಯೆನುತಿರ‍್ದನು ||೭೦||

ನೋಡಿದಂ ಕಣ್ತಣಿಯೆ ಬಳಿಕಿಳೆಗೆ ತನುವ ನೀ |
ಡಾಡಿ ದಂಡಪ್ರಣಾಮಂಗೈದು ಭೂವರಂ |
ಮಾಡಿದಂ ನಿಗಮಾರ್ಥದನುಪಮ ಸ್ತುತಿಗಳಂ ಮುರಹರನ ಮುಂದೆ ನಿಂದು ||
ಕೂಡೆ ತಾಮ್ರಧ್ವಜ ಕುಮುದ್ವತಿಗಳೆರಗಿದರ್ |
ಮೂಡಿದಾನಂದದಿಂ ತಮತಮಗೆ ಕೈಮುಗಿದು |
ಬೇಡಿಕೊಳುತಿರ್ದುದು ಮಹಾಸಭೆ ಮುಕುಂದನಂ ಜಯಜಯ ನಿನಾದದಿಂದೆ ||೭೧||

ಪನ್ನಗಾರಿಧ್ವಜಂ ಬಳಿಕಾ ನೃಪಾಲನಂ |
ಮನ್ನಿಸಿ ಕೃತಾರ್ಥನಹೆ ನೀನರ್ಧ ದೇಹಮಂ |
ನನ್ನಿಯಿಂದೀಯೆ ವ್ಮೆಚ್ಚಿದೆನೀಗ ನಿನಗೆ ಸಂಗ್ರಾಮದೊಳ್ ತಾಮ್ರಕೇತು ||
ನಿನ್ನೆ ಪಡೆಯೆಲ್ಲಮುಮ ನೀಸವ್ಯಸಾಚಿಯುಮ |
ನೆನ್ನುವಂ ಮೂರ್ಛೆಗಾಣಿಸಿ ಕೆಡಹಿ ಬಂದುದಕೆ ||
ಮುನ್ನೆ ಹರ್ಶಿತನಾದೆನಿನ್ನು ಸತಿಸುತರೊಡನೆ ಮಾಡು ಯಜ್ಞವನೆಂದನು ||೭೨||

ಧರ್ಮಜನ ತುರಗಮಿದೆ ನಿನ್ನ ಹಯಮಿದೆ ನೀನೆ |
ನಿರ್ಮಲಾಧ್ವರಮೆರಡುಮಂ ಸಮಯಮಾಗಲ್ಕೆ |
ಕರ್ಮಕಧಿಪತಿಯಾಗಿ ಮಾಳ್ಪುದೆಂದಚ್ಯುತಂ ನುಡಿದೊಡೆ ಮಯೂರಕೇತು ||
ಚರ್ಮಶೃಂಗಮನಾಂತು ಮಖದೀಕ್ಷೆಯಂ ಕೊಂಬ |
ದುರ್ಮತಿಗಳುಂಟೆ ನಿನ್ನಂ ಕಂಡ ಬಳಿಕದರ |
ಮರ್ಮಮಂ ಬಲ್ಲೆನಾನೆಲೆ ದೇವ ತನ್ನ ಬಿನ್ನಪವನಧರಿಸೆಂದನು ||೭೩||

ವಿಶ್ವೇಶ ನಿನ್ನ ಶಾಶ್ವತ ಮೂರ್ತಿಯಂ ತಳೆವ |
ವಿಶ್ವಾಸದಿಂದೆ ನಿನಗೊಪ್ಪಿಸಿದೆ ನೀಗಳೀ |
ನಶ್ವರ ಶರೀರಮಂ ಸಾಕದಂತಿರಲಿನ್ನು ತಾಂ ಕರ್ಮಕರ್ತೃವಾಗಿ ||
ಅಶ್ವಮೇಧಂಗಳಂ ಮಾಡಿದೊಡೆ ನಗವೆ ನಿ |
ನ್ನ ಶ್ವಾಸದಿಂದೊಗೆದ ಮಂತ್ರಾಳಿಗಳ್ ಮಾತ |
ರಿಶ್ವ ಮಿತ್ರಜ್ವಾಲೆ  ಪೊರೆಯೊಳಿರೆ ಭೇಷಜವ ನರಸುವರೆ ಹಿಮಕೆಂದನು ||೭೪||

ದೇವ ಚಿತ್ತೈಸೆನ್ನ ನಂದನಂ ನಿನ್ನೆ ಸಮ |
ರಾವನಿಯೊಳೊಳಗಾದ ನಿಮ್ಮಿರ್ವರಂ ಬಿಟ್ಟಿ |
ಭಾವದಿಂ ಬಂದನಿಲ್ಲಿಗೆ ತನ್ನ ಪುಣ್ಯದಿಂ ತನುಗನುಗ್ರಹಿಸಲೆಂದು ||
ನೀವೆ ಬಿಜಯಂಗೈದಿರದರಿಂದೆ ಸಲೆ ಧನ್ಯ |
ರಾವು ನರ ನಾರಾಯಣರ್ಕಳಂ ಕಂಡೆವಿ |
ನ್ನಾವ ಕಲ್ಪಿತವೆನಗೆ ಧರ್ಮಜನೆ ಮಾಡಿ ಬದುಕಲಿ ಮಖಂಗಳನೆಂದನು ||೭೫||

ಸುರನದಿಯ ತೋಯಮಿರೆ ನೀರಡಿಸಿ ಹಿಮ ಜಲಕೆ |
ಪರಿವಂತೆ ನಿನ್ನ ದರ್ಶನಮಿರ್ದು ವಿ ಮಹಾ |
ಧ್ವರಕೆಳಸುವವನಲ್ಲ ತನ್ನುಮಂ ತನ್ನ ಸತಿಸುತರುಮಂ ತನ್ನೊಳಿರ್ದ ||
ತುರಗಂಗಳಂ ತನ್ನ ಯಜ್ಞಮಂ ಯಜ್ಞೋಪ |
ಕರಣಂಗಳಂ ತನ್ನ ರಾಜ್ಯಮಂ ತನ್ನ ಮಂ |
ದಿರದ ಸರ್ವಸ್ವಮಂ ನಿನ್ನ ಪದಕರ್ಪಿಸಿದೆನೆಂದವಂ ಕೈಮುಗಿದನು ||೭೬||

ಇಂತೆಂದು ಭೂವರಂ ನುಡಿಯೆ ಹರ್ಷಿತನಾಗಿ |
ಕುಂತೀಸುತಂಗವನ ಭಕ್ತಿಯಂ ತೋರಿಸುತ |
ನಂತರದೊಳಾ ನೃಸನ ನಗರದೊಳ್ ಮೂರು ದಿನಮಿರ್ದು ನಿಜಸೇನೆ ಬರಲು ||
ದಂತಿಪುರಕಲ್ಲಿಯ ಸಮಸ್ತವಸ್ತುಗಳೈದು |
ವಂತೆ ನೇಮಿಸಿ ಮೈಯೂರಧ್ವಜಂ ಸಹಿತ ನಡೆ |
ದಂ ತುರಗಮೆರಡುಮಂ ಬಿಡಿಸಿ ಮುಂದಕೆ ದೇವಪುರದ ಲಕ್ಷ್ಮೀಕಾಂತನು ||೭೭||