ಸೂಚನೆ ||
ಪತ್ನಿಯರ ದೆಸೆಯಿಂದ ಮಡಿದಿರ್ದ ಪಾರ್ಥಂ ಪ್ರ |
ಯತ್ನದಿಂ ನಿಜಸುತಂ ತಂದ ಸಂಜೀವಕದ |
ರತ್ನದಿಂ ಕೃಷ್ಣಪ್ರಸಾದದಿಂ ಜೀವಿಸಿದನುರ್ವಿಗಾಶ್ಚರ್ಯಮೆನಲು ||

ರಾಯ ಕೇಳಲ್ಲಿಗಸುರಾಂತಕಂ ಬಂದು ಕೌಂ |
ತೇಯನಂ ನೋಡದಿರನನ್ನೆಗಂ ಸೈರಿಪುದು |
ಪಾಯಮುಳ್ಳೊಡೆ ನರನ ಜೀವಮಂ ಪಡೆವುದಿಂತಗ್ನಿಪ್ರವೇಶದಿಂದೆ ||
ಸಾಯಲೇನಹುದೆಂದಳಲ್ದು ಸುತನಂ ಬೈದು |
ಬಾಯಾರಿ ಚೀರಿ ಚಿತ್ರಾಂಗದೆ ಹಲುಬಲೊಂದು |
ಪಾಯಮಂ ಕಂಡು ನುಡಿದಳ್ ಪನ್ನಗೇಂದ್ರ ಸಂಭವೆ ಬಭ್ರುವಾಹನಂಗೆ ||೧||

ಮಗನೆ ಮಡಿದರ್ಜುನಂ ಮಗುಳೇಳ್ವತೆರನಂ ನಿ |
ನಗೆ ಪೇಳ್ವೆ ನಾನೀಗ ಪಾತಾಳ ಲೋಕದೊಳ್ |
ಖಗರಾಜನೊರಸಿದಹಿ ನಿಕರದಸು ಮರಳ್ವಂತೆ ಫಣಿವರಂ ಬೇಡಿಕೊಳಲು ||
ಆಗಜಾರಮಣನಿತ್ತ ಸಂಜೀವಕದ ಮಣಿಯು |
ರಗಪತಿಯೊಳಿಹುದದಂ ಸತ್ವದಿಂ ತರಬಲ್ಲ |
ವಿಗಡಂ ಕಾಣೆನೀ ಮೂಜಗದೊಳೆನೆ ಬಭ್ರುವಾಹನಂ ಖತಿಗೊಂಡನು ||೨||

ಸಂಜೀವಕದ ಮಣಿಯನೀಗ ತಾರದೊಡೆ ತ |
ನ್ನಂ ಜನನಿ ಪೆತ್ತಳೇತಕೆ ಮತ್ತೆ ಮಡಿದಿಹ ಧ |
ನಂಜಯನ ಹರಣಮಂ ಪಡೆವ ನವನೀಯದೊಡೆ ಫಣಿಲೋಕಮಂ ಸುಡುವೆನು ||
ಕಂಜಜ ಕಪದಿಗಳೊಳ್ ತೊಡಕಿದೊಡೊರಲ್ಚುವೆಂ |
ಬಂಜಿಸುವೆನಖಿಳ ದಿಕ್ಪಾಲರಂ ಸೆಣಸಿದೊಡೆ |
ಸಂಜಾತನಾದುದಕೆ ಸಫಲಮಾಯ್ತೆನುತುಬ್ಬಿದಂ ಬಭ್ರುವಾಹನಂದು ||೩||

ಮರುಳಾಟಮೇಕೆ ನಿನ್ನಕಟು ಕೊಳ್ಳದು ಮಗನೆ |
ಗರಳಮಯದುರಿಯೊಳೆವೆ ಸೀವುದು ಕಣಾ ನೋಡ |
ಲುರಗಪತಿ ಶೇಷರಾಜನ ಕೋಶದೆಡೆಯೊಳಿಹ ಸಂಜೀವಕದ ಮಣಿಯನು ||
ತರಬಲ್ಲನಾವವಂ ಗುಳಿಕ ವಾಸಿಕಿ ತಕ್ಷ |
ಕರ ಶಂಖ ಪದ್ಮ ಕರ್ಕೋಟಕಾದಿಗಳ ಭೀ |
ಕರ ವಿಷೋತ್ಕರದಿಂದೆ ಕಾಹು ಬಲಿದಿಹುದೆನಲುಲೂಪಿಗವ ನಿಂತೆಂದನು ||೪||

ಈ ಮಹಾಹಿಗಳ ವಿಷಕಳಕುವೆನೆ ಯೆನ್ನ ಮಾ |
ತಾಮಹಂ ಹರಿಗೆ ಹಾಸಿಗೆಯಾದವಂ ಮೇಲೆ |
ಭೂಮಿಯಂ ಪೊತೃವಂ ಶೇಷರಾಜ ಗಾಸಿಯಹನೆಂಬ ಭಯಮಲ್ಲದೆ ||
ಆ ಮಣೀಯನೀಯದೊಡೆ ಸಪ್ತಪಾತಾಳಮಂ |
ಸಾಮರ್ಥ್ಯದಿಂದ ಬೇದಿಸಿಕೊಂಡು ಬಂದು ಸು |
ತ್ರಾಮಸುತನಂ ಬರ್ದುಕಿಸದೆ ಮಾಣ್ದಪೆನೆ ತಾಯೆ ಹೇಳೆಂದೊಡಿಂತೆಂದಳು ||೫||

ಒಂದು ಮೊದಲೊಂಬತ್ತುನೂರು ಕಡೆಯಾದ ಪೆಡೆ |
ಯಿಂದೆಸೆವ ನಾಗಂಗಳತಿ ವಿಷೋಲ್ಬಣದುರಗ |
ವೃಂದ ವೋಲೈಸುವುದು ಸಾಸಿರ ಮೊಗದ ಶೇಷರಾಜನಂ ಪಾತಾಳದ ||
ಮಂದಿರದೊಳೊಮ್ಮೊಮ್ಮೆ ಗರುಡನಲ್ಲಿಗೆ ಬಂದು |
ಕೊಂದಹಿಗಳಂ ಬರ್ದುಕಿಪೊಡೆ ತೋರಿಸುವರಲ್ಲ |
ದೆಂದುಂ ತೆಗೆಯರಾ ಮಣಿಯನೆಂದುಲೂಪಿ ನುಡಿಯಲ್ಕಾತ ನಿಂತೆಂದನು ||೬||

ಲೇಸನಾಡಿದೆ ತಾಯೆ ಪಾತಾಳದಲ್ಲಿಹ ಮ |
ಹಾಸರ್ಪ ಸಂಕುಳವನೆಲ್ಲಮಂ ಕೊಂದಳಿದ |
ವಾಸವನ ಸುತನಂ ಮಡಿದ ವೀರವೃಷಕೇತುವಂ ಬಿದ್ದ ಸೈನಿಕವನು ||
ಆ ಸುವಣಿಯಂ ಕೊಂಡು ಬಂದೆಬ್ಬಿಸಿದ ಬಳಿಕ |
ವಿಸಲಾಗಿರ್ದ ಸಂಜೀವಕವನೀವೆಂ ಗ |
ತಾಸುವಾಗಿರ್ದ ಫಣಿಗಳ್ಗೆಂದು ಪಾರ್ಥಜಂ ನುಡಿದೊಡವಳಿಂತೆಂದಳು ||೭||

ತನಯ ಕೇಳನ್ಯರೊಳ್ ಕೊಳ್ವ ಕಜ್ಜದ ಮಾಳ್ಕೆ |
ವಿನಯದಿಂದೆಸಗಿದೊಡೆ ಸಲೆ ಸುಗುಣಮಾದಪುದು |
ಮೊನೆಯ ಮೇಲಪ್ಪುದಾಯಾಸಮಂತದರಿಂದೆ ನೀನತಿಕ್ರಮಿಸಬೇಡ ||
ತನಗುಂಟು ಕಳೆ ಪುಂಡರೀಕನೆಂಬಹಿಯೊರ್ವ |
ನನುಕೂಲನೆಮ್ಮ ತಂದೆಗೆ ಮಂತ್ರಿ ತಾನೀಗ |
ನೆನೆದೊಡಿಲ್ಲಿಗೆ ಬರ್ಪನಾತನಂ ಕಳುಹಿ ತರಿಸುವೆನ ಮಣಿಯನೆಂದಳು ||೮||

ಇಂತೆಮದುಲೂಪಿ ಬಳಿಕಾ ಪುಂಡರೀಕನಂ |
ಚಿಂತಿಸುವಿನಂ ಬಂದಿದೇಕೆ ಬರಿಸಿದೆಯೆನಲ |
ನಂತನಲ್ಲಿಗೆ ಪೋಗಿ ನಿನ್ನ ತನುಜೆಯ ಕರ್ಣತಾಟಂಕದುಳಿವಿಗಳಿದ ||
ಕುಂತೀಕುಮಾರಕಂ ತನ್ನ ರಮಣಂ ಬರ್ದುಕು |
ವಂತಮೃತ ಸಂಜೀವಕದ ಮಣಿಯನೀವುದೆಂ |
ದಂತರಿಸದಖಿಳ ವೃತ್ತಾಂತಮಂ ಪೇಳ್ದದಂ ಕೊಂಡು ಬಾ ನಡೆಯೆಂದಳು ||೯||

ಆ ಪುಂಡರೀಕ ಫಣಿ ಬಳಿಕ ದುಃಖಿತೆಯಾದು |
ಲೂಪಿಯಂ ಸೈತಿಟ್ಟು ಸಂಜೀವಕದ ಮಣಿಗೆ |
ಪೋಪೆನಾ ನಹಿಪತಿಯ ಸಮಯಮಂ ಕಾಣ್ಬುದರಿದಲಿ ತಳುವಾಗದಿರದು ||
ಈ ಪಾರ್ಥನಂಗ ಕಳಿವಾಗದಿರದನ್ನೆಗಂ |
ರೂಪು ಕೆಡದಂತೆ ಕಚ್ಚುವೆನೀಗ ಮದ್ವಿಷಂ |
ವ್ಯಾಪಿಸಲೊಡಲ್ ಕಳಲದೆನೆ ಬಭ್ರುವಾಹನಂ ಕೇಳ್ದು ಮತ್ತಿಂತೆಂದನು ||೧೦||

ಎಲೆ ಪುಂಡರೀಕ ಕೇಳೀ ಕರ್ಣಸಂಭವಂ |
ಕಲಿ ಚೆಲ್ವನತಿಬಲಂ ಶುಚಿ ಸುಗುಣೀ ಕೋವಿದಂ |
ಕುಲವಿವರ್ಧನನೀತನಂಗಮಂ ಕೆಡದಂತೆ ಮೊದಲೆ ನೀ ಕಚ್ಚಿ ಬಳಿಕ ||
ಫಲುಗುಣನ ದೇಹಮಂ ಕಚ್ಚೆನಲೊಡರ್ಚಿ ಫಣಿ |
ತಿಲಕನವರಿರ್ವರ ಶರೀರಂಗಳಂ ಕಚ್ಚಿ |
ಸಲೆ ಸಂತವಿಟ್ಟು ನಂಬುಗೆಗೊಟ್ಟು ಬೀಳ್ಕೊಂಡು ಪಾತಾಳಕೈತಂದನು ||೧೧||

ಅತಳದಾಶ್ಚರ್ಯಮಂ ವಿತಳದ ವಿಚಿತ್ರಮಂ |
ಸುತಲದ ಸುರುಚಿಯಂ ಮಹಾತಳದ ಮಣಿಮಯೋ |
ನ್ನತಿಯಂ ತಳಾತಳದ ತಾಣದತಿಶಯಮಂ ರಸಾತಳದ ರಂಜಿತವನು ||
ಪ್ರತಿದಿನದೊಳರಿದರಿಯುತಾ ಪುಂಡರೀಕಫಣಿ |
ಪತಿ ನೋಡಿ ನೋಡಿ ವಿಸ್ಮಿತನಾಗುತೈದಿದಂ |
ವಿತತ ರತ್ನ ಪ್ರಭಾ ಶೋಭಿತದ ಪಾತಾಳಲೋಕದಹಿರಾಜನೆಡೆಗೆ ||೧೨||

ಫಲಿತ ಕಾಂಚನ ವೃಕ್ಷಲತೆಗಳ ಬನಂಗಳಿಂ |
ಜ್ವಲಿತ ನವರತ್ನ ಸೌಧಂಗಳ ಪುರಂಗಳಿಂ |
ಕಲಿತ ಪೀಯೂಷ ದೀರ್ಘಿಕೆಗಳಿಂ ಕನಕಾರವಿಂದದದ ಕೊಳಂಗಳಿಂದೆ ||
ಲಲಿತ ಲಾವಣ್ಯದುರಗಾಂಗನೆಯರಿಂ ಸಮಾ |
ಕುಲಿತಮಾಗಿಹ ಭೋಗವತಿಯ ನದಿಯಿಂದೆ ನಿ |

ಶ್ಚಲಿತ ಸುಖನಿಲಯಮೆನಿಸಿರ್ದ ಪಾತಾಳಕ್ಕೆ ಪುಂಡರೀಕಂ ಬಂದನು ||೧೩||

ನವರತ್ನಮಯದ ಗೋಪುರದ ಕಾಂತಿಯ ದಿವ್ಯ |
ಭವನದಿಂ ನಾಗ ವಧುಗಳ ನೃತ್ತಗೀತದು |
ತ್ಸವದಿಂದ ಪುಣ್ಯ ಗಂಧೋತ್ಕರದ ಪದ್ಮವನ ಪುಷ್ಪವಾಟಿಕೆಗಳಿಂದೆ ||
ವಿವಿಧೋಪಚಾರ ಕೃತಪೂಜೆಗಳ ನಾನಾ ವಿ |
ಭವದಿಂದೆಸೆವ ಮಹಾ ಹಾಟಕೇಶ್ವರನೆಂಬ |
ಶಿವಲಿಂಗಮಿರೆ ಭೋಗವತಿಯ ತಟದೊಳ್ ಕಂಡು ಪುಂಡರೀಕಂ ಮಣಿದನು ||೧೪||

ದಿವ್ಯಭವನದೊಳನೇಕಾಸುರ ಸುರಾದಿ ನಿಖಿ |
ಳ ವ್ಯಾಳ ವೃತನಾಗಿ ವರ ಫಣಾಮಣಿ ಸಹ |
ಸ್ರವ್ಯೂಹದರ್ಚಿಯಿಂದುರು ಕಾಯಕಾಂತಿಯಿಂ ದೇದಿಪ್ಯಮಾನನಾಗಿ ||
ಅವ್ಯಾಕುಲದೊಳಚ್ಚ್ಯುತ ಧಾನದಿಂದೆ ಕ |
ರ್ತವ್ಯದಿಂದವನಿಯಂ ತಾಳ್ದನಘ್ಯೋತ್ತಮ |
ದ್ರವ್ಯಕಧಿಪತಿಯಾಗಿ ರಂಜಿಸುವ ಶೇಷನೋಲಗಕುರುಗನೈತಂದನು ||೧೫||

ಪುಂಡರೀಕಂ ಸಮಯಮರಿದುರಗ ರಾಜನಂ |
ಕಂಡೆರಗಿ ನುಡಿದನವಧರಿಸೆಲೆ ಫಣೀಂದ್ರ ಭೂ |
ಮಂಡಲದ ರಾಯರೊಳ್‌ಪಾಂಡುಸುತ ಕಾರವರ್ಗಾದುದಾಹವಮದರೊಳು ||
ದಿಂಡುದರಿದಹಿತರಂ ಭೀಷ್ಮನಂ ಕೊಂದನಾ |
ಖಂಡಲಾತ್ಮಜನದರ ಪಾತಕಕೆ ನೃಪತಿ ಕೈ |
ಕೊಂಡನಚ್ಯುತನಾಜ್ಞೆಯಿಂ ಕ್ರತುವನಾಯ್ತು ಗಂಗಾಶಾಪಮರ್ಜುನಂಗೆ ||೧೬||

ಆ ಜಾಹ್ನವಿಯ ಶಾಪದಿಂ ಬಭ್ರುವಾಹನಂ |
ವಾಜಿಸಹಿತೈದಿದ ಧನಂಜಯನ ತಲೆಯಿಂ ಮ |
ಹಾಜಿಯೊಳ್‌ತರಿಯೆ ಪತಿಶೋಕಮಂ ತಾಳಲಾರದೆ ನಿನ್ನ ಮಗಳುಲೂಪಿ ||
ತೇಜದಿಂದೆಸೆವ ಸಂಜೀವಕದ ಮಣಿಯಂ ಪ್ರ |
ಯೋಜನಕೆ ತಹುದೆಂದು ಕಳುಹಿದೊಡೆ ಬಂದೆನೀ |
ವ್ಯಾಜದಿಂದೆ ನೋಡೆನುತೆ ಕೊಟ್ಟನವಳ ಕುರಹಂ ಪನ್ನಗೇಶ್ವರಂಗೆ ||೧೭||

ಆ ಪುಂಡರೀಕನಿಂತೆಂದುರಗ ರಾಜಂಗು |
ಲೂಪಿ ಕಳುಹಿದ ಕರ್ಣಕಂಠ ಭೂಷನದ ಸ್ವ |
ರೂಪಮಂ ಮುಂದರಿಸಿ ನಿನ್ನನ ನಿಜ ಜಾಮಾತನರ್ಜುನಂ ಸುಜನನಿಳೆಗೆ ||
ಶ್ರೀಪತಿಯ ಸಖನಿಧ್ರಸೂನು ಧರ್ಮಾನುಜಂ |
ಭೂಪಾಲರೊಳ್ ಪೆಸರ್ವಡೆದವಂ ಜೀವಿಸೆ ಪ |
ರೋಪಕಾರಂ ಪೊಲ್ಲಮಲ್ಲ ನಿನಗದರಿಂದೆ ಕುಡುವುದು ಮಣಿಯನೆಂದನು ||೧೮||

ಶೇಷರಾಜಂ ಬಳಿಕ ತನ್ನ ತನುಜೆಯ ಕರ್ಣ |
ಭೂಷಣವನಾ ಕಂಠಸೂತ್ರಮಂ ಕಂಡು ಸಂ |
ತೋಷವರ್ಜಿತನಾಗಿ ಪೊರೆಯೊಳಿಹ ತಕ್ಷಕಾದ್ಯಹಿಪತಿಗಳಂ ನೋಡುತೆ ||
ದೋಷಮೇನಿದಕೆ ಮಣಿಯಂ ಕುಡುವೆವೈಸಲೆ ವಿ |
ಶೇಷ ಪಲಮಹುದಾರ್ಜಿಸಿದ ವಸ್ತು ಲೋಗರಭಿ |
ಲಾಷೆಗಾದೊಡೆ ಪಾರ್ತನುತ್ತಮಂ ವೈಷ್ಣವಂ ಜಾಮಾತನೆಮಗೆಂದನು ||೧೯||

ಕೇಳಿ ದುಮ್ಮಾನದಿಂ ತಮತಮಗೆ ನಿಖಿಳ ಸ |
ರ್ಪಾಳಿ ಚಿಂತಿಸೆ ಬಳಿಕ ಧೃತರಾಷ್ಟ್ರನೆಂಬ ದು |
ರ್ವ್ಯಾಳಪತಿ ನುಡಿದನೆಲೆ ನಾಗೇಂದ್ರ ತಮ್ಮವಸರಕ್ಕೆ ಬೇಹುರದನನ್ಯರ ||
ವೇಳಗಿತ್ತೊಡೆ ಮರಳಿ ಬಂದುಪುದೆ ಮಾನವರ್ |
ಖೂಳರ್‌ಕೃತಘ್ನರುಪಕಾರಮಂ ಬಲ್ಲರೆ ವೃ |
ಥಾಳೋಚನೆಗಳೇತಕಿದಕೆ ಮಣಿಯಂ ಕುಡದಿರೆನೆ ಫಣಿಪನಿಂತೆಂದನು ||೨೦||

ನಾಡೊಳೊರೊಳ್ ಮನೆಯೊಳೊರೋರ್ವರುಂಟು ಪರ |
ಪೀಡೆಗಳಿಕದೆ ವಕ್ರಗತಿಯಿಂದೆ ನಡೆವ ಕಡು |
ಗೇಡಿಗರ್‌ನಿನ್ನಂತೆ ಶಿವಶಿವಾ ಪ್ರಾಣಿಗಳ್‌ದುಃಖಾರ್ತರಾಗಿ ಬಂದು ||
ಬೇಡಿದೊಡೆ ತನಗುಳ್ಳ ವಸ್ತ್ರವಂ ಕುಡದೆ ಕೆಡೆ |
ನೋಡುವವನಧಿಕನೆ ದಧಿಚಿ ಶಿಬಿಗಳ ಮಾಳ್ಕೆ |
ಖೋಡಿಯಾದುದೆ ಮಣಿಯನೀವೆಂ ಕಿರೀಟಗೆನೆ ಧೃತರಾಷ್ಟ್ರನಿಂತೆಂದನು ||೨೧||

ಹೇಳಿದಂತಿರದು ಪುರುಷಾರ್ಥಮಂ ನೋಡಿದೊಡೆ |
ಕಾಲಹುದು ನಾಗಲೋಕದ ಬಾಳ್ಕೆ ವಿರಿ ಪಾ |
ತಾಳಕೆ ಮತಂಗೆ ಋಷಿಶಾಒದಿಂ ಬಾರನೈಸಲೆ ಗರುಡನಿಳೆಯಮೇಲೆ ||
ತಾಳಬಲ್ಲನೆ ನಮ್ಮರತ್ನಮಂ ಕಂಡು ನರ |
ರಾಳಿಕೆಗಳಲ್ವಕಾಲಂಗಳಿಂದುಳಿದೊಡಂ |
ನಾಳೆ ಪಾಂಡವನಳಿಯದಿರ್ದಪನೆ ಮಣಿಯಂ ಕುಡದಿರಲ್ಕಿಂತೆಂದನು ||೨೨||

ಕಷ್ಟದಿಂದಾವು ಮಣಿಯಂ ಕುಡದೆ ಮಾಣ್ದೊಡೇಂ |
ನಷ್ಟಮಾದಪುದೆ ಪಾರ್ಥನ ಜೀವಮಸುರಾರಿ |
ಯಿಪ್ಟನಲ್ಲವೆ ಪಾಂಡವಪ್ರಾಣನಾಗಿರ್ಪನಂತಲ್ಲ ದಾನತರ್ಗೆ ||
ಸ್ಪಷ್ಟದಿಂ ಕೃಷ್ಣಕಾರುಣ್ಯ ಸಂಜೀವನಂ |
ದೃಷ್ಟವಾಗಿರಲಿದರ ಹಂಗದೇತಕೆ ನೀನ |
ರಷ್ಟ ನಾಗದಿರಿನ್ನು ಮಿಗಿಸಿಕೊಳ್ವೆವು ಲೇಸನೆಂದೊಡವನಿಂತೆಂದನು ||೨೩||

ಉರಗೇಂದ್ರ ನೀನಾಡಿದವೊಲೆಂತುಮರ್ಜುನಂ |
ಮುರಹರನ ಕರುಣದಿಂ ಸಪ್ರಾಣನಪ್ಪನಿದ |
ಕುರುತರದ ಸಂಜೀವಕದ ಮಣಿಯನಿತ್ತು ನಮ್ಮೆಲ್ಲರಂ ಕೆಡಿಸಬೇಡ ||
ಗರುಡದೇವನ ಹಾವಲೀಗೆ ಜೋಕೆಯಾಗಿರಲಿ |
ತಿರುಗಿ ಕಳುಹಿಸು ಪುಂಡರೀಕನಂ ತವಸುತೆಯ |
ಪೊರೆಗೆಂದು ಧೃತರಾಷ್ಟ್ರನೆನಲೊಪ್ಪಿ ನಿಖಿಳ ಸರ್ಪಾಳಿ ಗರ್ಜಿಸುತಿರ್ದುದು ||೨೪||

ಭೂಪಾಲ್ ಕೇಳ್ ದೊರೆಗಳೊಲಿದೀವ ಕಜ್ಜಂ ಸಂ |
ವಿಪದ ದುರಾತ್ಮರಿಂ ಕೆಡದೆ ಮಾಣ್ದಪುದೆ ಪೇ |
ಳಾಪನ್ನಗೇಶ್ವರಂ ಧೃತರಾಷ್ಟ್ರನೆಂದ ಮಾತಿನ ಮೇಲೆ ಖಿನ್ನನಾಗಿ ||
ಆ ಪುಂಡರೀಕನಂ ಕರೆದು ಕುಡಲೀಸರ್‌ಪ |
ರೋಪಕಾರಕೆ ಮಣಿಯನೀ ಪಣಗಳಿಂತೆಂದು |
ಲೂಪಿಗರಿಪೆಂದು ಕಳುಹಿದೊಡಮಂ ನರನಳಿದ ರಣಭೂಮಿಗೈತಂದನು ||೨೫||

ಚಂದನದ ತೈಲದಿಂದುರಿವ ಬೊಂಬಾಳಂಗ |
ಳಿಂದೆ ಕರ್ಪೂರದ ಸೊಡರ್ಗಳಿಂ ಮಣಿಲೀಪ |
ದಿಂದಿರುಳ್‌ಕಂಗೊಳಿಸುತಿರೆ ಬಭ್ರುವಾಹನಂ ಮಂದಿಸಹಿತಾ ರಣದೊಳು ||
ನಿಂದಿರಲುಲೂಪಿ ಚಿತ್ರಂಗದೆಯರಮರೇಂದ್ರ |
ನಂದನನ ಬಳಿಯ ಸಂಜೀವಕದ ರತ್ನಮಂ |
ದಂದಶೂಕೇಶ್ವರ ಕುಡುವನೆಂಬಾಸೆಯಿಂ ಪಂಬಲಿಸುತಿರುದಿರ್ದರು ||೨೬||

ಅನ್ನೆಗಂ ಪುಂಡರೀಕಂ ಬಂದುಲೂಪಿಯೊಳ್ |
ಪನ್ನಗೇಂದ್ರಂ ಸುದಾಮಣಿಯಂ ಕುಡದೆ ತಿರುಗಿ |
ತನ್ನಂ ಕಳುಹಿದ ವೃತ್ತಾಂತಮನುಸಿರಲದಂ ಚಿತ್ರಾಂಗದೆಗೆ ಸೂಚಿಸೆ ||
ಇನ್ನು ವೈದವ್ಯದಿಂದೊಡಲಂ ಪೊರೆಯೆನೆಂದು |
ನನ್ನಿಯಿಂದಗ್ನಿಪ್ರವೇಶಮಂ ನಿಶ್ಚೈಪ |
ಲಂ ನೋಡಿ ಕೋಪದಿಂದಾ ಬಭ್ರುವಾಹನಂ ನಿಜಮಾತೆಗಿಂತೆಂದನು ||೨೭||

ಚಕ್ರಿಸೇವಕನೀ ಕಿರೀಟಿ ಧರ್ಮಾನುಜಂ |
ಶಕ್ರಸುತನೆನ್ನ ತಾತಂ ಮೇಲೆ ತುರಗಮೇ |
ಧ ಕ್ರತುವಿಗೋಸುಗಂ ಮಡಿದಿರಲ್ಬೇಡಿದೊಡೆ ಮಣಿಯಂ ಕುಡದೆ ಶೇಷನು ||
ವಕ್ರನಾದೊಡೆ ವಾಸುಕಿ ಪ್ರಮುಖ ಫಣಿಗಳ ನ |
ತಿಕ್ರಮಿಸಿ ತದ್ರತನ್ಮಂ ಕೊಂಡುಬಹೆನೆನ್ನ |
ವಿಕ್ರಮನನೀಗ ನೋಡೆನುತೆದ್ದು ಕರೆಸಿದಂ ಪಾರ್ಥಿ ನಿಜಸೈನಿಕವನು ||೨೮||

ಫಣಿಕುಲವನಾಕ್ರಮಿಸಿಕೊಂಡು ಬಹೆನಾ ಮಹಾ |
ಮಣಿಯ ನಲ್ಲಹುದೆಂದೊಡಜ ಹರಿ ಪಿನಾಕಿಗಳ |
ಪಣೆಯಕ್ಕರಂಗಳಂ ತೊಡವೆ ನೊರಸುವೆನಷ್ವ ದಿಕ್ವಾಲರಾಯುಗಳನು ||
ಎಣಿಕೆ ಬೇಡಿದಕಿನ್ನು ವೀರ ವರಷಕೇತು ಫ |
ಲ್ಗುಣರ ದೇಹಂಗಳತಿ ಜತನವೆಂದಾಪ್ತರ್ಗೆ |
ರಣದ ಸುಯ್ದಾನಮಂ ಪೇಳ್ದು ನಿಜ ಬಲಸಹಿತ ಪಾರ್ಥಸುತ ನನುವಾದನು ||೨೯||

ಏರಿಸಿ ಮಹಾಧನುವನಶನಿಬಾಣವನೆಚ್ಚು |
ಡೋರುಗಳೆದವನಿಯಂ ಸಪ್ತಪಾತಳಕ್ಕೆ |
ತೋರಿಸಿದನೊಂದು ಪೆರ್ಬಟ್ಟೆಯಂ ನಡೆದ ನಾರ್ಜುನಿ ತನ್ನ ಸೇನೆ ಸಹಿತ ||
ವಿರಿದ ಶರಾವಳಿಯ ಘಾತಿಯಂ ತವೆ ತಾಳ |
ಲಾರದೆ ಸಕಲ ಭೋಗಿತತಿ ಬಂದನಂತಂಗೆ |
ದೂರಲ್ಕೆ ಧೃತರಾಷ್ಟ್ರನಂ ಬೈದು ಫಣಿಗಳಂ ಕಾಳೆಗಕೆ ಬೀಳ್ಕೊಟ್ಟನು ||೩೦||

ನಾಗ ರಥವಾಙಗಳ ಕಾಲಾಳ ಕೈದುಗಳ |
ನಾಗದಳಮೈದು ಯೋಜನದಗಲದಿಂದೆ ನಾ |
ನಾಗತಿಯೊಳೈತಂದುದಾರ್ಜುನಿಯ ಸೈನಿಕದಮೇಲೆ ಸನ್ನಾಹದಿಂದೆ ||
ತಾಗಿದುದು ಸರ್ಪಾವಳಿ ತಮತಮಗೆ ವಾಸಿ ಮುಂ |
ತಾಗಿ ವದನದ ವಿಷಜ್ವಾಲೆ ಮಿಗೆ ಡಾವರಿಸಿ |
ತಾ ಗಿರಿಶನಕ್ಷಯಿಂ ಪೊರಮಡುವ ದಳ್ಳುರಿಯ ದಾಳಿಯನೆ ಪರಬಲದೊಳು ||೩೧||

ಗುಳಿಕ ತಕ್ಷಕ ಕರ್ಕೋಟಕಾದಿ ಫಣಿ |
ಗಳ ತಂಡದಿಂದೆ ಧೃತರಾಷ್ಟ್ರನುರವಣಿಸಿ ಪರ |
ಬಲದೊಳಿಪ್ಪತ್ತೊಂದುಸಾಸಿರ ಭಟಾಳಿಯಂ ಕೆಡಲಾರ್ಜುನಿ ಕನಲ್ದು ||
ಪೊಳೆವ ಕೂರ್ಗಣೆಗಳಂ ಕರೆಯಲ್ಕೆ ಪನ್ನಗಾ |
ವಳಿಯ ತಲೆಗಳ್‌ಪರಿದು ಬೀಲುತಿರ್ದುವು ಮಹಾ |
ಪ್ರಳಯದೊಳ್ ಗಗನದಿಂದುದಿರ್ವುಡುಗಳಂತೆ ತೊಳತೊಳಪ ಪೆಡೆವಣೆಗಳೊಡನೆ ||೩೨||

ದರ್ವೀಕರಾವಳಿಯ ನರೆಗಡಿಯಲವು ಮತ್ತೆ |
ಸರ್ವದಳಮಂ ವಿಷಜ್ವಾಲೆಯೊಳುರಿಪಲದಕೆ |
ನಿರ್ವಾಹಮಂ ಕಂಡು ಸಾರಂಗ ಶಿಖಿ ನಕುಲ ಗೃಧ್ರಂಗಳಾಗಿ ಸೀಳ್ವ ||
ಉರ್ವ ಮಂತ್ರಾಸ್ತ್ರಮಗಳಂ ತಿರುವಿನೊಳ್ ಪೂಡಿ |
ಗೀರ್ವಾಣಪತಿ ಸುತನ ಸೂನು ಕಾಲದ ಕಡೆಯ |
ಶರ್ವನಂತಿರೆ ಕೋಪಮಂ ತಾಳ್ದು ತೆಗೆದೆಚ್ಚನೇವೇಳ್ವೆ ನದ್ಭುತವನು ||೩೩||

ಇಟ್ಟಣಿಸಿ ಪದ್ದು ಸಾರಂಗ ಮುಂಗುಲಿ ನವಿಲ |
ಥಟ್ಟುರಗಸೇನೆಯಿಂ ಘಾತಿಸಿ ಪೊರಳ್ಚಿದುದು |
ಬಿಟ್ಟನಾರ್ಜುನಿ ಮತ್ತೆ ಮಧುಶರನಾ ಕ್ಷತಂಗಳಮೇಲೆ ಜೇನ್ಗರೆವೊಲು ||
ತೊಟ್ಟು ತೆಗೆದೆಚ್ಚಂ ಪಿಪೀಲಿಕಾಸ್ತ್ರವನೊಡನೆ |
ಕಟ್ಟಿರುಹೆ ಮುತ್ತಿದುವು ಫಣಿಗಳಂ ಕಚ್ಚಿದುವು |
ನಿಟ್ಟಿಸುವ ಕಂಗಳಂ ತಿಂದವು ನೆಣಂಗಳಂ ಕೊರೆದು ವೊಡಲಸ್ಥಿಗಳನು ||೩೪||

ಪೋಟೆಗೊಂಬುಗಳ ಪಳಮರದಂತೆ ತಿರುಳಿಲ್ಲ |
ದೋಟೆಗಳ ತಿಂತ್ರಿಣೀಪಲದಂತೆ ಕುಳಿಕ ಕ |
ರ್ಕೋಟಕಾದಿಗಳೊಡಲ್ ಪೊಳ್ಳಾದುವಿರುಹೆಗಳ ಮುತ್ತಿಗೆಗೆ ಕಂಗೆಟ್ಟವು ||
ತೋಟಿಯಂ ತಂದು ಧೃತರಾಷ್ಟ್ರನ ವರೂಥಮಂ |
ಘೋಟಕವ ನಿಷುಕಾರ್ಮುಕಂಗಳಂ ಖಂಡಿಸಿ ಕಿ |
ರೀಟಿಸುತ ನುರುಬಿದೊಡೆ ಮುರಿವಡೆದುರಗಸೇನೆ ಶೇಷನಿದ್ದೆಡೆಗೋಡಿತು ||೩೫||

ಕೆಟ್ವೋಡಿ ಬಂದಹಿಗಳಾರ್ಜುನಿಗೆ ರತ್ನಮಂ |
ಕೊಟ್ಟುಳುಹಬೇಕೆಂದು ನಾಗರಾಜಂಗೆ ಮೊರೆ |
ಯಿಟ್ಟೊಡಾತಂ ಕನಲ್ದೇಕೆ ತಡೆದಿರಿ ಮೊದಲ್ ಮಂತ್ರಜ್ಞರಿಳೆಯ ನರರು ||
ಕಟ್ಟುಗ್ರಮಾಗಿರ್ದ ನಿಮ್ಮ ವಿಷಕಂಜರಿ |
ನ್ನಟ್ಟಿ ಸುಡದಿರನೀಗ ಪಾರ್ಥಿ ಪಾತಾಳಮಂ |
ನೆಟ್ಟನೆ ಸಮರ್ಥರ್ಗೆ ತನುವನೊಪ್ಪಿಸದೊಡುಳಿವರೇ ಕೃಶರೆಂದನು ||೩೬||

ಸಾಕದಂತಿರಲಿನ್ನು ಪಾರ್ಥಿಯ ಶರಾಗ್ನಿಯಿಂ |
ಕಾಕೋದರಳಿ ಬೇಯದ ಮುನ್ನಮಾರ್ಜುನಿಗೆ |
ಬೇಕಾದ ವಸ್ತುವಂ ಕೊಟ್ಟೆಮ್ಮನುಳೂಹೆಂದು ಫಣಿಕುಲಂ ಬಾಯ ಬಿಡಲು ||
ಲೋಕದೊಳ್ ದಾನ ಧಮೋಪಕಾರಂಗ್ಗೆ |
ತಾ ಕುಡದೆ ಮಾಜಿಕೊಂಡಿರ್ದ ಲೋಭಿಯ ಧನಂ |
ಕಾಕಭಾಜನಮಪ್ಪುದಡವಿಯೊಳ್ ಬಿದ್ದ ಪೆಣನಂತೆಂದನುರಗೇಂದ್ರನು ||೩೭||

ಧರಣಿಧರ ನಮ್ಮ ದುರ‍್ನೀತಿಯಂ ನೋಡದಿರ್ |
ಮುರಹರ ಪ್ರೀತಿಯಪ್ಪಂತೆ ಕುಡು ರತ್ನಮಂ |
ನರ ಸುತಂ ಗರ್ಜುನಂ ಬದುಕಲೆಂದಹಿಗಳಾ ಶೇಷನಂ ಬೇಡಿಕೊಳಲು ||
ಹರಿಯ ಕಾರುಣ್ಯಸಂಜೀವನಂ ಪಾಂಡವ |
ರ‍್ಗಿ ರಲದೇಗೆಯ್ದುದಾವಿತ್ತಮಣಿ ದುಗ್ಧ ಸಾ |
ಗರಕಜಕ್ಷೀರಮಂ ಬೆರಸಿದುಕಾರಮಹುದೆಂದು ಮತ್ತಿತ್ತೆಂದನು ||೩೮||

ಈ ಮಣಿಯುಮಂ ಕಲ್ಪತರು ಕಾಮಧೇನು ಚಿಂ |
ತಾಮಣಿಯುವಂ ಬಯಸಲೇಕಕಟ ಯಾದವ ಶಿ |
ಖಾಮಣೀಯನುನ್ನದ ಭಕ್ತಿಯಿಂದರವರ್ಗೆ ಸಾಕದಂತಿರಲಿ ನೀವು ||
ಆ ಮಣಿಯ ದಾನಮಂ ತಡೆದ ಪಾಪಂ ಹರಿಯ |
ರಾಮಣೀಯಕ ಮೂರ್ತಿ ದರ್ಶನದೊಳಲ್ಲದು ದು |
ತಾ ಮಣಿಯದಂಜದಿರಿ ಗರುಡಂ ಮುಳಿವನಲ್ಲ ಬನ್ನಿ ಪೋಗುವಮೆಂದನು ||೩೯||

ಇಂತೆಂದಖಿಳ ಪನ್ನಗಾವಳಿಯ ನೊಡಗೊಂಡ |
ನಂತರದೊಳಾ ಮಹಾ ಮಣಿವೆರಸಿ ಪೊರಮಟ್ಟ |
ನಂತನುರು ಕುಂಡಲ ದ್ವಿತಯಮಂ ಶತ ಶಲಾಕೆಯೊಳೆಸೆವ ಸತ್ತಿಗೆಯನು ||
ಸಂತಪದೊಳಾರ್ಜುನಿಗೆ ಕೊಟ್ಟು ಕಂಡಾತನಂ |
ಸಂತೈಸಿ ಪಾತಾಳದುತ್ತಮ ಸುವಸ್ತುಸಹಿ |
ತಂತರಿಸುತೈದಿದಂ ಫಲುಗುಣಂ ಮಡಿದಿಹ ರಣಾವನಿಗೆ ಸಂಭ್ರಮದೊಳು ||೪೦||

ಸುಮ್ಮಾನದಿಂದೆ ಶೇಷಂ ಪೋಗುತಿರೆ ಕಂಡು |
ದುಮ್ಮಾನದಿಂದೆ ಧೃತರಾಷ್ರ್ಟ ನಿಜಾಲಯದೊ |
ಳುಮ್ಮಳಿಸಿ ಮಣಿವಿಜಯಮಾರ್ಜುನಿಗೆ ಪಾರ್ಥಂಗೆ ಜೀವಂ ಯುಧಿಷ್ಠರಂಗೆ ||
ತಮ್ಮನಭ್ಯದಯಂ ಮಹಾಧ್ವರಕೆ ತುರಗ ಮಿನಿ |
ತೊಮ್ಮೆ ಸಂಜನಿಸುತಿರ್ದಪುದಕಟ ಬಹು ವಿಘ್ನ |
ಮಂ ಮಾಡಿದೆಂ ತಪ್ಪಿತೀಗಳಾನೇಗೈವೆನೆಂದು ಚಿಂತಿಸುತಿರ್ದನು ||೪೧||

ಅನ್ನೆಗಂ ದುರ್ಬುದ್ದಿ ದುಸ್ಸ್ವಭಾವರ್ಕಳೆಂ |
ಬುನ್ನತದ ಪೆಸರುಳ್ಳ ಮಕ್ಕಳುಂಟಿರ್ವರಾ |
ಪನ್ನಗಂಗವರಾತನಂ ಸಂತವಿಟ್ಟು ನೀಂ ಬಹುದು ಫಣಿರಾಜನೊಡನೆ ||
ಮುನ್ನಮೆ ಗಣಕೆ ಪೋಗಿ ಪಾರ್ಥನ ತಲೆಯನಾವು |
ಗನ್ನದಿಂ ಕೊಂಡೊಯ್ವೆವೆಮ್ಮ ಚೇಷ್ಟೆಗಳಿಂದೆ |
ಭಿನ್ನಮಾಗದೆ ನರರ್ಗೆ ಬಾಳ್ಕೆ ಬಾರದೆ ನರಕಮಂಜಬೇಡಿದಕೆಂದರು ||೪೨||

ಅರಸ ಕೇಳ್ ದುರ್ಬುದ್ದಿ ದುಸ್ಸ್ವಾಬಾವರ್ ಮೊದಲೆ |
ಧರೆಗೆ ಬಂದರ್ಜುನನ ತಲೆಯನಪಹರಿಸಿಕೊಂ |
ಡಿರದೆ ಬಕದಾಲ್ಬ್ಯನ ಮಹಾಘೋರ ನಿರ್ಜನಾರನ್ಯದೊಳ್ ಬಿಸುಡಲಿತ್ತ ||
ಹರಿಸದಿಂ ಶೇಷನಂ ಮಂದಿಕ್ಕಿಕೊಂಡು ಮಣಿ |
ವೆರಸಿ ರಣಮಂಡಲಕೆ ಕಲಿ ಬಭ್ರುವಾಹನಂ |
ಬರಲಾ ಸಮಯದೊಳಾದುದು ಬಹಳ ಕಳಕಳಂ ಕಾಣದೆ ನರನ ಶಿರವನು ||೪೩||

ಕಾಂತೆಯರೊಡನೆ ತನ್ನ ಜನನಿಯರ್ ಕುಂಡಲದ |
ಕಾಂತಿಯಿಂದಾ ರಣಾಗ್ರದೊಳೆಸೆಯುತಿರ್ದ ನಿಜ |
ಕಾಂತನ ಶಿರವನಲ್ಲಿ ಕಾಣದೇನಾಡುದಾರೊಯ್ದುರೆಲ್ಲಿರ್ಪುದೆಂದು ||
ಪ್ರಾಂತದೆಣ್ಗೆಸೆಗಳಿಂ ನೋಡಿ ಹಮ್ಮೈಸಿ ವಿ |
ಭ್ರಾಂತಿಯಿಂದರಸಿ ಹಾಹಾಯೆಂಬ ರಭಸಮಾ |
ಶಾಂತಮಂ ತೀವಲಾ ಸಮಯಕಹಿಪತಿ ಸಹಿತ ಬಭ್ರುವಾಹಂ ಬಂದನು ||೪೪||

ಅಕ್ಕರೊಳುಲೂಪಿ ಚಿತ್ರಾಂಗದೆಯನ್ನೆಗಂ |
ಕಕ್ಕಸದ ರಣದೊಳರ್ಜುನನ ಕಾಲ್ದೆಸೆಯೊಳೆವೆ |
ಯಿಕ್ಕದೆ ರಮಣನ ತಲೆತನುಗಳಂ ನೋಡುತಿರ್ದವರಾಗ ಪಾರ್ಥಿ ಬರಲು ||
ಇಕ್ಕೆಯೊಳ್ ಶಿರಮಿಲ್ಲದಿರೆ ಬೆದರಿ ಮೈಮರೆಯೆ |
ಮಿಕ್ಕಸತಿಯರ ನೆರವಿ ಗಜಬಜಿಸಿ ಕಂಡಿಳೆಯೊ |
ಳಿಕ್ಕನೊಡಲಂ ಬಭ್ರುವಾಹನಂ ಮೃತಕಲ್ಪನಾಗಿ ಪಲವೆಣಿಕೆಯಿಂದೆ ||೪೫||

ಇಂತಾಗುತಿರಲಿತ್ತ ಲತ್ತಲಿಭನಗರದೊಳ್ |
ಕುಂತಿ ಪಾರ್ಥಂ ಬಿದ್ದದ್ದನದಿರುಳ್ ಕಂಡಳ |
ತ್ಯಂತ ಭೀಕರದ ಕನಸಂ ಪೇಳ್ದಳಸುರಾರಿ ಧರ್ಮಜ ವೃಕೋದರರ್ಗೆ ||
ಆಂತಕನ ದೆಸೆಗೆ ಸೈರಿಭವನೇರಿ ಪೋ |
ಪಂ ತೈಲ ವಾಪಿ ಗತನಾಗಿ ದಾಸಣದ ಪೂ |
ವಂ ತೊಡಂದಾಳ್ದು ಗೋಮಯ ವಿಲಿಪ್ತಾಂಗನಾಗಿರ್ದಪಂ ವಿಜಯನೆಂದು ||೪೬||

ಬೆಂದಪುದು ಪಡೆದೆನ್ನೊಡಲ್ ಸುಭದ್ರೆಯ ಕಂಗ |
ಳಿಂದೊಸರ್ದಪುದು ಕಂಬನಿ ಕೃಷ್ಣ ನಿನ್ನ ಸಖ |
ನಿಂದು ಜೀವಂತನಾಗಿರ್ಪುದರಿದೆಂದು ಪೃಥೆ ಹಂಬಲಿಸಿ ಮರುಗುತಿರಲು ||
ಇಂದಿರಾವಲ್ಲಭಂ ಗರುಡನಂ ನೆನೆಯಲ್ಕೆ |
ಬಂದನಾತಂ ಬಳಿಕವನ ನೆನ್ನಡರ್ದನಿಲ |
ನಂದನ ಯಶೋದೆ ದೇವಕಿ ಕುಂತಿಯರ್ವೆರಸಿ ಮಣೀಪುರಕೆ ನಡೆತಂದನು ||೪೭||

ವಿಸ್ತರದ ರಾಜಭವನದ ಮಾಟಕೂಟದಯು |
ತ ಸ್ತಂಭದಿಂದೆಸೆವ ಸಭೆಯ ನವರತ್ನದ ಗ ||
ಭಸ್ತಿಗಳ ಕೋಟಾವಲಯದ ಮಣೀಪುರಮಂ ಪೊರಗೆ ಕಾದಿ ಮಡಿದ ರಣದ ||
ಹಸ್ತಿಹಯ ನರವೃಮದಮಂ ಸುತ್ತುಲುರಿವ ದೀ |
ಪಸ್ತೋಮಮಂ ಬಿದ್ದ ಪಾರ್ಥನಂ ನೆರೆದಿಹ ಸ |
ಮಸ್ತ ಸತಿಯರನಭ್ರದಿಂ ಶೌರಿ ಭೀಮಂಗೆ ತೋರಿ ಮುಗುಳಿಂತೆಂದನು ||೪೮||

ಭೀಮ ನೋಡಿಲ್ಲಿ ಪಾರ್ಥನ ದೇಹಮಿದೆ ವದನ |
ತಾಮರಸಮಂ ಕಾಣೆನಡಗಿದುದೊ ಬಳಸಿರ್ದು |
ಭಾಮಿನಿಯ ರಾನನ ಶಶಾಂಕ ಮಂಡಲದಿಂದೆನಲ್ಕೆ ಹರಿಗನಿಲಸೂನು ||
ಶ್ರೀಮನೋಹರ ನಿನ್ನ ಮೂರ್ತಿರವಿ ಮೂಡೆ ಸು |
ತ್ರಾಮ ಸುತನಾಸ್ಯಾಬ್ಜಮಪ್ರಕಾಶಿತಮಹುದೆ |
ಭೂಮಿಯೊಳ್ ಪೇಳೆನೆ ಮುರಾರಿ ಪಕ್ಷೀಂದ್ರನಿಂದಿಳಿದನಾ ರಣದೆಡೆಯೊಳು ||೪೯||

ಲಲಿತ ರತ್ನಪ್ರದೀಪಂಗಳಿಂ ಬಳಸಿರ್ದ |
ಲಲನೆಯರ ಭೂಷನದ ಕಾಂತಿಯಿಂ ಕಪ್ಪುರದ |
ಮಲಯಜದ ತೈಲದ ಸೊಡರ್ಗಳಿಂ ನಡುವಿರುಳ್ ಪಗಲಂತೆ ಕಾಣಿಸುತಿರೆ ||
ಕಲಿಭೀಮ ದೇವಕಿ ಯಶೋದೆ ಪೃಥೆಯರ್ವೆರಸಿ |
ನೆಲಕಿಳಿದು ಪಾರ್ಥನ ಶರೀರಮಂ ಕಂಡಾಗ |
ಜಲಜಾಂಬಕಂ ಮರುಗುತಾವನಿಂದಾದುದೈ ತಂದೆ ಮೃತಿ ನಿನಗೆಂದನು ||೫೦||

ಬಂದೆನೇಳೈ ಪಾರ್ಥ ಕೃಷ್ಣನಾಂ ಕುಂತಿಗಭಿ |
ವಂದಿಸೈ ಮಾತೆಯಲ್ಲವೆ ನಿನಗೆ ನೀನಳಿಯ |
ನೆಂದು ಪರಸುವರಲೈ ದೇವಕಿ ಯಶೋದೆಯರ್ ಭಾವಿಸೆಯದೇಕಿವರನು ||
ಎಂದಿನಂತಗ್ರಜನ ನೀಕ್ಷಿಸೈ ಭೀಮನಂ |
ತಂದೆ ಹೇಳಿಂತು ಮಾತಾಡದಿರ್ದಪರೆ ನೀಂ |
ಮುಂದೆ ನೃಪಯಜ್ಞಮಂ ನಡೆಸುವವರಾರೆನುತೆ ಕಳವಳಿಸಿ ಹರಿ ನುಡಿದನು ||೫೧||

ಮರುಗಿದಂ ಮೈದುನಂಗಸುರಾರಿ ಮಾನವರ |
ತೆರದಿಂದೆ ದೇವಕಿ ಯಶೋದೆಯರ್ವೆರಸಿ ಮೈ |
ಮರೆದಳಾ ಕುಂತಿ ನಿಜ ತನಯನಿರವಂ ಕಂಡು ಶೋಕದಿಂದಾಕ್ಷಣದೊಳು ||
ಕರೆದುವಶ್ರುಗಳಾ ವೃಕೋದರನ ಕಂಗಳಿಂ |
ತುರುಗಿತಳಲೊಡಲೊಳ್ ಸಹೋದರನ ಮರಣದೊಳ್ |
ಪೊರಗೆಗಿರ್ಪಂಮ ಕೃಷ್ಣನೆಮದು ಮನದೊಳ್ ತಿಳಿದು ಕಲಿಭೀಮನಿಂತೆಂದನು ||೫೨||

ದೇವ ರವಿಗಂಧಕಾರಮೆ ಮಾರ್ಗಮರ್ಜುನಂ |
ಜೀವಿಸದೆ ಮಾಣ್ದಪನೆ ಮರುಗಲೇಕೀಕ್ಷಿಸು ಕೃ |
ಪಾವಲೋಕನದಿಂದೆ ಕರ್ಣಜಂ ಬಿದ್ದಿರ್ದಪಂ ನೋಡುನ ಪಾರ್ತನೊಡನೆ ||
ಭೂವಲಯದೊಳ್ ತಮ್ಮ ತುರಗಮಂ ಕಟ್ಟಿಕೊಂ |
ಡೀ ವೀರರಿರ್ವರಂ ಕೆಡಹಿದ ಪರಾಕ್ರಮಿಯ |
ದಾವನೋ ಕಾಣ್ಬೆನೈಸಲೆ ಬರಲಿ ಕದನಕೆಂದನಿಲಜಂ ಗರ್ಜಿಸಿದನು ||೫೩||

ಈಪರಿಯೊಳನಿಲಜಂ ಕೃಷ್ಣನೊಳ್ ಮಾತಾಡು |
ವಾ ಪಥದೊಳನಿರುದ್ಧ ಸಾತ್ಯಕಿ ಪ್ರದ್ಯುಮ್ನ |
ರಾಪುರದ ಮಧ್ಯದೊಳುಲೂಪಿಯ ನಿವಾಸದೊಳ್ ಚೇತರಿಸಿಕೊಂಡು ಕೂಡೆ ||
ಶಾಪ ಹತನಾಗಿ ಫಲುಗುಣನಿರ್ದ ರಣಕೆ ಬಂ |
ದೀ ಪಂಕಜಾಕ್ಷ ಮಾರುತಿಗಳಂ ಕಂಡು ಬಳಿ |
ಕಾ ಪಾರ್ಥನಂದನಂಗೆಚ್ಚರಿಸಿ ಕಾಣಿಸಿದರಚ್ಯುತ ವೃಕೋದರರನು ||೫೪||

ಜನಪ ಕೇಳ್ ಫಲುಗುಣನ ಕೃತ್ಯಮಂ ಬಭ್ರುವಾ |
ಹನನ ವೃತ್ತಾಂತಮಂ ಪವನಜ ಮುರಾರಿಗ |
ಳ್ಗನಿರುದ್ಧ ಸಾತ್ಯಕಿ ಪ್ರದ್ಯುಮ್ನ ರರಿಪಿ ಬಳಿಕಾತನಂ ಕಾಣಿಸಲ್ಕೆ ||
ಆನುಜಂಗೆ ಮುನಿದವಂ ಪಗೆಯಾದಿರ್ದಪನೆ |
ಜನಕನಂ ಕೊಂದವಂ ಪಾಪಿಯಲ್ಲವೆ ತನ್ನ |
ನನುವರಸದಪ್ಬಳಿಸು ಗದೆಯೊಳೆಂದೆರಗಿದಂ ಪಾರ್ಥಿ ಭೀಮನ ಪದದೊಳು ||೫೫||

ಶಿಕ್ಷರಕ್ಷಗೆ ಕರ್ತೃ ವೈಷ್ಣವದ್ರೋಹಿಗ |
ಳ್ಗಕ್ಷಮಂ ನೀನದರಿನರ್ಜುನಂ ಭಾಗವತ |
ಪಕ್ಷಕಗ್ರೇಸರಂ ತನಗೆ ಪಿತನಾತನಂ ಕೊಂದ ಕತದಿಂದೆ ಕೊಲೆಗೆ ||
ದಕ್ಷನಾಂ ವಿರಿದೊಡೆ ರಾಹುವಿನ ಕಂಠಮಂ |
ತತ್ಕ್ಷಣದೊಳರಿದಂತೆ ಕತ್ತರಿಸು ಚಕ್ರದಿಂ |
ಪಕ್ಷಿವಾಹನ ತನ್ನ ಕೊರಲನೆಂದಾ ಪಾರ್ಥಿ ಕೆಡೆದನಚ್ಯುತನಡಿಯೊಳು ||೫೬||

ಇಂತಾಗಳನಿಲಸುತ ಕೃಷ್ಣರ ಮನಂ ಮರುಗು |
ವಂತಳಲ್ದೊಡನೆ ದೇವಕಿಯಂ ಯಶೋದೆಯಂ |
ಕುಂತಿಯಂ ಕಂಡು ಕಡುಶೋಕದಿಂದವರವರ ಚರಣಂಗಳೊಳ್ ಪೊರಳ್ದು ||
ಎಂತುಟಿದಕಯ್ಯನಂ ಕೊಂದೆನಾ ನಿಮಗೆ ಮೊ |
ಮ್ಮಗಂ ತನ್ನನೇಕೆ ಪರಸುವಿರಕಟ ಪಾರ್ಥ ಸೀ |
ಮಂತಿನಿಯರಿರ್ದಪರುಲೂಪಿ ಚಿತ್ರಾಂಗದೆಯರಿವರ ನೀಕ್ಷಿಪುದೆಂದನು  ||೫೮||

ಅನಿತರೊಳುಲೂಪಿ ಚಿತ್ರಾಂಗದೆಯರ್ಜುನನ |
ಜನನಿಯಂ ಕೃಷ್ಣಮಾತೆಯರಂ ನಿರೀಕ್ಷಿಸಿ ನ |
ರನ ಪೆಂಡಿರಾವೆಂದು ಪೇಳ್ದವರ ಚರಣಂಗಳೊಳ್ ಪೊರಳ್ದಳಲ್ದು ಕೂಡೆ ||
ವನಜಾಂಬಕಿಯರೊರಲೆ ಬಳಿಕಬರೆಲ್ಲರುಂ |
ಘನಶೋಕದಿಂದೆ ಹಾಹಾರವಂಗೆಯ್ಯೆ ನಿಜ |
ತನುಜನಂಗದಮೇಲೆ ಬಿದ್ದು ದುಃಖಿತೆಯಾಗಿ ಕುಂತಿ ಹರಿಗಿಂತೆಂದಳು ||೫೮||

ಕಂಡಲೈ ಕೃಷ್ಣ ಫಲುಗುಣನಿರವನಿನ್ನು ಭೂ |
ಮಂಡಲದೊಳೆನಗೆ ಸುತರಿರ್ದಪರೆ ನೀನಾರ |
ಬಂಡಿಯಂ ಪೊಡೆದಪೈ ತ್ರೈಲೋಕ್ಯವೀರನೆಂದೆನಿಸಿಕೊಳ್ವವನದಾರು ||
ಖಂಡಪರಶುವಿನುತ್ತಮಾಂಗಮಂ ಪೊಯ್ದು ಕೋ |
ದಂಡಮಂ ಪಿಡಿವರಾರನುಜಾಗ್ರಜರ ನಡುವೆ |
ಚಂಡ ತೇಜದೊಳೆಸೆವರುಂಟೆ ಧರ್ಮಜನಾರನಪ್ಪುವಂ ಪೇಳೆಂದಳು ||೫೯||

ಈತನಂತಿರಲಿತ್ತನೋಡೆಲೆ ಮುಕುಂದ ವೃಷ |
ಕೇತು ಮಡಿದಿರ್ದಪಂ ಸೈರಿಸುವೆನೆಂತಿವನ |
ತಾತನಂ ಕಂಡು ಹಿಗ್ಗುವೆನಾರುಮರಿಯದಂತಾತ್ಮಜ ಸ್ನೇಹದಿಂದೆ |
ಆತನಂ ಕೊಂದನೀ ಪಾರ್ಥನಂದಾನೋವ |
ನೀತರಳನೇಳ್ಗೆಯಿಂ ಮರೆದಿರ್ದೆನಿನ್ನೆಗಂ |
ಬೀತುದೆನಗಿಂದು ಸಂತತಿ ಕರ್ಣಜನನೊಳೆಂದಳಲ್ದಳಾ ಕುಂತಿ ಮರುಗಿ ||೬೦||

ಆ ಸಮಯಕೈತಂದು ಕಂಡನಹಿಪತಿ ಪೀತ |
ವಾಸನಂ ಪೊಡಮಟ್ಟನಡಿದಾವರೆಗೆ ನುಡಿದ |
ನೀಸಕಲ ಲೋಕಮಂ ಪೊರೆವ ನಿನಗೀ ನರನ ಜೀವಮಂ ಪಡೆವುದರಿದೆ ||
ಬೇಸರೇತಕೆ ದೇವ ಧರ್ಮಜನ ಕುಲಮದ್ದು |
ದೋಸರಿಸದುದ್ಧರಿಸು ನಿನ್ನ ಡಿಂಗರಿಗರ್ಗೆ |
ಲೇಸಲ್ಲದಘ ಶೋಕ ಭಯ ತಾಪ ದುಃಖಂಗಳಿರ್ದಪುವೆ ಪೇಳೆಂದನು ||೬೧||

ತಾತನಸುವಂ ಪಡೆಯಲೀ ಬಭ್ರುವಾಹನಂ |
ಪಾತಾಳೆಕೆಯ್ದಿ ಜೀವದ ರತ್ನಮಂ ಬೇಡಿ |
ಘಾತಿಸಿದ ನಹಿಗಳಂ ತಾನದಂ ಪರಿಹರಿಸಿ ನಿನ್ನ ನೀಕ್ಷಿಸುವೆನೆಂದು ||
ಭೂತಳಕೆ ಬಂದೆನಿದೆ ಮಣಿ ತನ್ನ ಕೈಯೊಳೀ |
ಶ್ವೇತವಾಹನನ ತಲೆಯಂ ತರಿಸು ಜಗದೊಳ್ |
ಜ್ಞಾತಮಾವುದು ನಿನಗೆ ಸರ್ವಗತನಪ್ಪೆ ನೀನೆಂದು ಫಣಿಪತಿ ನುಡಿದನು ||೬೨||

ಶೇಷನಿಂತೆಂದೊಡಾಲಿಸಿ ಕೃಷ್ಣನಬಲೆಯರ |
ಘೋಷಮಂ ನಿಲಿಸಿ ನೀವೆಲ್ಲರುಂ ಕೇಳ್ವುದೀ |
ಭಾಷೆಯಂ ಬ್ರಹ್ಮಚರ್ಯದೊಳಿಂದ್ರಿಯಂಗಳಂ ತಾನಿನ್ನೆಗಂ ಧರೆಯೊಳು ||
ಪೋಸಿಸಿದೆನಾದೊಡಾ ಪುಣ್ಯದಿಂ ಕುಂಡಲ ವಿ |
ಭೂಷಿತದ ಪಾರ್ಥನ ಶಿರಂ ಬರಲಿ ಕಳ್ದೊಯ್ದ |
ದೋಷಿಗಳ್ ತನ್ನಾಜ್ಞೆಯಿಂದ ಹತರಾಗಲರಿದಿಹುದು ಸಾರಿದೆನೆಂದನು ||೬೩||

ಜನಪ ಕೇಳಾಶ್ಚರ್ಯಮಂ ಬಳೀಕ ಕೃಷ್ಣನಿಂ |
ತೆನೆ ದುಸ್ಸ್ವಭಾವ ದುರ್ಬುದ್ದಿಗಳನರಿದು ಪಾ |
ರ್ಥನ ತಲೆಯನಾಕ್ಷಣಕೆ ತಂದುದು ಸುದರ್ಶನಂ ಮಣೀಪುರದ ರಣಭೂಮಿಗೆ ||
ಜನಮೈದೆ ಕೊಂಡಾಡಿತುರಗಪತಿ ಹರಿಸದಿಂ |
ವಿನುತ ಸಂಜೀವಕದ ಮಣೀಯನಿತ್ತಂ ಮುಕುಂ |
ದನ ಕೈಯೊಳಾಗ ಹರಿ ನೋಡಿದಂ ಕೃಪೆಯಿಂದೆ ಕರ್ಣಸುತ ಫಲ್ಗುನರನು ||೬೪||

ತದನಂತರದೊಳಂಬುರುಹ ಲೋಚನಂ ತಾನೆ ||
ಮೊದಲಿನಸುತನ ತನುತಲೆಗಳಂ ಕೂಡಿ ಜೀ |
ವದ ಮಣಿಯನೆದೆಯಮೇಲಿರಿಸಿ ಬಳಿಕರ್ಜುನನ ಕಾಯಕೆ ಶಿರವನೊಂದಿಸಿ ||
ಹೃದಯದೆಡೆಗಾ ದಿವ್ಯರತ್ನಮಂ ಸಂಗರಿಸಿ |
ಬದುಕಲಿವರಿಶನಾಜ್ಞೆಯೊಳೆಂದು ಪರಸಿ ಕರು |
ಣದೊಳವರನೀಕ್ಷಿಸಿದೊಡಭವಪ್ರಸಾದದಿಂ ಜೀವಿಸಿದರಾ ಕ್ಷಣದೊಳೂ ||೬೫||

ಲೀಲೆಯೊಳಜಾಂಡ ಕೋಟಿಗಳಳಿವುವಾದುಪುವು |
ಪಾಲಿಸಿದೊಡಿರ್ದಪುವು ಗಡ ಪರಮ ಪುರುಷನ ಕೃ |
ಪಾಲೋಕನದೊಳೇಳ್ವುದರಿದೆ ಮಡಿದರ್ಜುನಾದಿಗಳೆಂದು ಧರೆ ಪೊಗಳಲು ||
ಆಲಿಗಳರಳ್ದುವಸು ಪನರಿಸಿತೊಡಲೊಳಗೆಸೆದು |
ದಾಲಲಿತ ಮುಖಕಾಂತಿ ಪೊಗರೇರಿತವಯವಂ |
ಮೇಲೆ ಮೈಮುರಿದರೊಯ್ಯನೆ ಪಾರ್ಥ ಕರ್ಣ ಸುತರಸುರಾರಿಯಂ ಜಪಿಸುತೆ ||೬೬||

ಇಡಿದ ಕತ್ತಲೆಯಿಂ ಜಗುಳ್ದವಾರಿಜದಂತೆ |
ಬಿಡದೆ ಮುಸುಕಿದ ಮೇಘಮಂ ಕಳೆದ ರವಿಯಂತೆ |
ತುಡುಕಿರ್ದ ರಾಹು ತೊಲಗಿದ ಚಂದ್ರನಂತೆ ಕರ್ಣಜ ಪಾರ್ಥರಾಸ್ಯಂಗಳು ||
ಕಡುಚೆಲ್ವಕಾಂತಿ ಕಳೆಗಳನಾಂತುವಾಗ ಪಾ |
ಲ್ಗಡಲೊಡೆಯನಂ ಮುಂದೆ ಕಂಡು ಪದ ಕಮಲದೊಳ್ |
ಪೊಡಮಡಲವರ್ಗಳಂ ತೆಗೆದಪ್ಪಿ ಚುಂಬಿಸುತೆ ಮೈದಡವಿದಂ ಕೃಪೆಯೊಳು ||೬೭||

ದುಂದುಭಿಗಳಭ್ರದೊಳ್ ಮೊಳಗಿದುವು ಸೂಸಿದುದು |
ಮಂದಾರದರಲ ಸರಿ ನರ ಕರ್ಣಜರ ಮೇಲೆ |
ಬಂದಪ್ಪಿದಂ ಬಳಿಕವರ್ಗಳಂ ಭೀಮನಾಲಿಂಗಿಸಿದಳಾಗ ಕುಂತಿ ||
ವಂದಿಸಲ್ ಪರಸದರ್ ದೇವಕಿ ಯಶೋದೆಯರ್ |
ಮುಂದಿರ್ದ ಶೇಷನಂ ಕಾಣಿಸಲ್ ಪೊಡಮಟ್ಟ |
ರಂದವರ್ ಮುದದಿಂದೆ ಹರಿ ಪಾಂಚಜನ್ಯಮಂ ಪಿಡಿದನುರು ಘೋಷಮಾಗೆ ||೬೮||

ಪದುಳಿಸಿದನನಿರುದ್ಧ ಸಾತ್ಯಕಿ ಪ್ರದ್ಯುಮ್ನ |
ಗದ ಸಾಂಬ ಕೃತವರ್ಮ ಶಠ ನಿಶಠ ಪ್ರಮುಖ |
ಯದುವೀರರನುಸಾಲ್ವ ಯೌವನಾಶ್ವಾಸಿತಧ್ವಜ ಹಂಸಕೇತುಗಳ್ಗೆ ||
ಮುದವೇರಿತಸುರಾರಿಯಂ ಕಂಡು ತಮತಮಗೆ |
ಪದಕೆರಗಿ ಬಿನ್ನೈಸಿದರ್ ಬಭ್ರುವಾಹನನ |
ಕದನದಾಯಾಸಮಂ ನಗರದೊಳುಲೂಪಿ ಚಿತ್ರಾಂಗದೆಯರೆಸಗಿದುದನು ||೬೯||

ಹರಿ ಬಳಿಕ ಜಾಹ್ನವಿಯ ಶಾಪದಿಂದಾದುದೀ |
ಪರಿಭವಂ ನಿನಗೆಂದು ಪಾರ್ಥನಂ ತಿಳಿಪಿದಂ |
ತರಿಸಿ ಕಾಣಿಕೆಗೊಟ್ಟು ಲೂಪಿ ಚಿತ್ರಾಂಗದೆಯರಸುರಾರಿಯಂ ಕಂಡರು ||
ನೆರೆದುದುಭಯರ ಸೇನೆ ಬಹಳ ಪರಿತೋಷದಿಂ |
ಮೊರೆದುದುತ್ಸವದಿಂದೆ ನಿಖಿಳ ವಾದ್ಯಪ್ರತತಿ |
ಪರೆದುವು ಸಮಸ್ತಸಂತಾಪಂಗಳೆಲ್ಲರ್ಗೆ ಕೃಷ್ಣದರ್ಶನದೊಳಂದು ||೭೦||

ಪಾರ್ಥಜಂ ಬಳಿಕನಿಬರೆಲ್ಲರಂ ವಿನಯದಿಂ |
ಪ್ರಾರ್ಥಿಸಿದೊಡಲ್ಲಿಂದೆ ಮಣೀಪುರಕೆ ಬರಲಾಗಿ |
ತೀರ್ಥಸ್ವರೂಪನಹ ಕೃಷ್ಣನಂ ಶೇಷನಂ ಮಂಡಲಾಧಿಶರೆನಿಪ ||
ಪಾರ್ಥಿವರನಳಿದೆದ್ದ ವಿಜಯನಂ ಕಂಡತಿ ಕೃ |
ತಾರ್ಥರಾದಪೆವೆಂಬ ಹರ್ಷದಿಂ ತಮತಮಗೆ |
ಸಾರ್ಥ ವೈಭವದಿಂದಲಂಕರಿಸಿ ನಗರಮಂ ನಿಖಿಲಜನಮಿದಿರ್ಗೊಂಡುದು ||೭೧||

ತಳಿತ ಗುಡಿಗಳ ಚೆಲ್ವಿನೋರಣದ ತೋರಣದ |
ಕಳಸ ಕನ್ನಡಿವಿಡಿದ ಕನ್ನೆಯರ ಮನ್ನೆಯರ |
ದಳದ ಪೊಡೆಪಿನ ಮೊರೆವ ಭೇರಿಗಳ ಭೂರಿಗಳ ಮೃದುಮೃದಂಗಧ್ವನಿಗಳ ||
ತೊಳಗಿ ಬೆಳಗುವ ಲೋಚನಾಂತೆಯರ ಕಾಂತೆಯರ |
ಲಳಿಲುಳಿಯ ನರ್ತನದ ಕೋಪುಗಳ ರೂಪುಗಳ |
ತಳಿವ ಸೇಸೆಯ ಪೊಗಳೊತ್ತುಗಳ ಮುತ್ತಗಳ ವಿಭವದಿಂ ಪೊಳಲೆಸೆದುದು ||೭೨||

ಈ ಸಂಭ್ರಮದೊಳೆಸೆವ ನಗರದೊಳ್ ನಡೆತಂದು |
ವಾಸುದೇವಾದಿಗಳ್ ಬಭ್ರುವಾಹನ ಸದನ |
ದಾಸಭೆಗೆ ವಿವಿಧೋಪಚಾರ ವಿಭವಂಗಳಂ ಕೈಕೊಳುತೆ ಬಂದು ಪುಗಲು ||
ಆ ಸವ್ಯಸಾಚಿಗೆ ನಿಜಾತ್ಮಜಂ ತನ್ನ ಸಿಂ |
ಹಾಸನವನಿತ್ತಖಿಲ ರಾಜ್ಯಮಂ ಕೊಟ್ಟು ಲ |
ಜ್ಜಾಸಮನ್ವಿತನಾಗಿ ಸುಮ್ಮನಿರಲರ್ಜುನಂ ಮಾತಾಡದಿರುತಿರ್ದಣು ||೭೩||

ರಾಯ ಕೇಳರ್ಜುನಂ ಖಿನ್ನನಾಗಿರೆ ಕಂಡು |
ವಾಯುಸುತ ಸೇಷಾದಿಗಳ್ ನುಡಿದರೆಲ್ಲಿಯುಮ |
ಜೇಯನಹೆ ಧರೆಯೊಳಿಂದಾತ್ಮಜನ ದೆಸೆಯಿಂದೆ ನಿನಗಪಜಯಂ ಬಂದುದು ||
ನೋಯಲೇತಕೆ ಬರಿದೆ ಮನ್ನಿಸು ಕುಮಾರನಂ |
ಪ್ರೀಯಮಾಗಿದೆ ಮಗನ ಮೇಲಿನ್ನು ಮಕಟ ಕಟ |
ಪಾಯಮಿದು ಸುರನದಿಯ ಶಾಪದಿಂದಾಯ್ತುಳಿದೆ ಕೃಷ್ಣಪ್ರಸಾದದಿಂದೆ ||೭೪||

ಅರಸಿಯರುಲೂಪಿ ಚಿತ್ರಾಂಗದೆಯರಿವರನಾ |
ದರಿಸದೆ ನಿಜಾತ್ಮಜಂ ಬಭ್ರುವಾಹನನಿವನ |
ಸಿರಿಯನಂಗೀಕರಿಸದೀತನಂ ಮನ್ನಿಸದೆ ಫಲುಗುಣನಿದೇಕೆ ಬರಿದೆ ||
ಮರುಳಾದನಕಟ ನೀಮ ಪೇಳಲಿಲ್ಲವೆ ಚಕ್ರ |
ಧರ ನಿನ್ನ ಮೈದುನಂಗೆಂದು ಪವನಜ ಫಣೀ |
ಶ್ವರ ಹಂಸಕೇತು ಕೇವಕಿ ಕುಂತಿ ವರ ಯಶೋದಾದಿಗಳ್ ಪೇಳ್ದರಂದು ||೭೫||

ಲಜ್ಜಿಸಿದನಾ ಬಭ್ರುವಾಹನಂ ಬಳಿಕ ತ |
ನ್ನುಜ್ಜಗವನೆಲ್ಲರುಂ ಕೇಳ್ವುದೀ ರಾಜ್ಯಮಂ |
ಮಜ್ಜನಕನಂಘ್ರಿಗೊಪ್ಪಿಸಿ ನಿಜ ಶರೀರಮಂ ಕೆಡಹಿ ತುಹಿನಾಚಲದೊಳು ||
ಸಜ್ಜನರ ಗರಿವಡೆವೆನಲ್ಲದೊಡೆ ಗುರುಧರ್ಮ |
ಕೃಜ್ಜನಾರ್ದನ ಭಕ್ತನೀತನಂ ಘಾತಿಸಿದ |
ಕಜ್ಜದಿಂದೊದವಿದ ಮಹಾಪಾತಕಂ ಪೋಗದೆನೆ ಭೀಮನಿಂತೆಂದನು ||೭೬||

ತಪ್ಪನಾಡಿದೆ ಮಗನೆ ಕೃಷ್ಣನಿರುತಿರೆ ಮುಂದೆ |
ಬಪ್ಪುದೇ ಪಾತಕಂ ಗುರು ಪಿತಾಮಹ ಮುಖ್ಯ |
ರಪ್ಪವರನೆಲ್ಲರುಂ ಕೊಂದೆಮಗೆ ನಿಂದುವೇ ದೋಷ ಲೇಶಂಗಳೀಗ ||
ಒಪ್ಪುವಾದಿತ್ಯನಂ ಕಂಡಬಳಿಕಿರ್ದಪುದೆ |
ಕಪ್ಪಿನ ತಮಂ ಮರುಳೆ ಹರಿಯನಾಶ್ರೈಸಿದರ |
ನಪ್ಪುವದೆ ಕಲಿತಾಪ ದುಃಖ ಭಯಶೋಕ ನರಕಾದಿ ಪೀಡೆಗಳೆಂದನು ||೭೭||

ಸಲೆ ನಿಷ್ಕೃತಿಗಳಿಲ್ಲದೈದು ಪಾಪಂಗಳಂ |
ಕಲಿಯುಗದ ಮಾನವರ ಬಹಳ ದುರಿತಂಗಳಂ |
ತೊಲಗಿಸಿ ಭವಾಂಬುಧಿಯನುತ್ತರಿಪ ಜರಿಯ ನಾಮಂಗಳಾವ ಜಿಹ್ವೆಗೆ ||
ನೆಲೆಗೊಂಬುವಾತನಂ ಕಂಡವಂ ಶುಚಿ ನಿನಗೆ |
ಜಲರುಹಾಕ್ಷಂ ಕಣ್ಣಮುಂದಿರಲ್ ಪಾತಕವೆ |
ಪಲವೆಣಿಕೆ ಬೇಡ ಪಾಲಿಸು ನೃಪನ ತುರಗಮಂ ಮಗನೆ ಸುಖಿಯಾಗೆಂದನು ||೭೮||

ಇಂತೆಂದು ಭೀಮನಾಡಿದೊಡನಿಬರೆಲ್ಲರುಂ |
ಸಂತೋಷಮಂ ತಾಳ್ದರರ್ಜುನಂ ತನಯನಂ |
ಸಂತೈಸಿ ಕುಳ್ಳಿರ್ದನಸುರಾರಿ ಪವನಜರ್ವೆರಸಿ ಸಿಂಹಾಸನದೊಳು ||
ಕುಂತಿ ನಿಜಪುತ್ರ ಪೌತ್ರರ ವಿಭವಕುಬ್ಬಿದಳ |
ನಂತರದೊಳಾದುದಾ ಮಣೀಪುರದೊಳುತ್ಸವ ಮ |
ನಂತನಂ ಸತ್ಕರಿಸಿ ಕಳುಹಿದರ್ ಪಾತಾಳಕಖಿಳ ಸರ್ಪಾಳೀ ಸಹಿತ ||೭೯||

ಸತ್ಯಭಾಮಾಕಾಂತ ಭೀಮ ನರ ಮನ್ಮಥಾ |
ದಿತ್ಯಭವಸುತ ಕುಂತಿ ದೇವಕಿ ಯಶೋದೆಯರ |
ನತ್ಯಂತ ಹರ್ಷದೊಳುಲೂಪಿ ಚಿತ್ರಾಂಗದೆಯರಾದರಿಸೆ ನೃಪಗೃಹದೊಳು ||
ನಿತ್ಯಕೃತ್ಯದ ವಿವಿಧ ಭೋಗ ವಿಭವಂಗಳಿಂ |
ನೃತ್ಯಗೀತಂಗಳ ವಿಲಾಸ ಗೋಷ್ಠಿಗಳಿಂದೆ |
ಪ್ರತ್ಯೇಕಮೆಲ್ಲರುಂ ಸಂತುಷ್ಟರಾಗಿರ್ದರೈದುದಿನಮಾಪುರದೊಳು ||೮೦||

ದಿವಸಮೈದರ ಮೇಲೆ ಚಿಂತಿಪಂ ಗಜಪುರದೊ |
ಳವನೀಶನೆಂದಲ್ಲಿ ಕೂಡಿದ ಸುವಸ್ತುಗಳ |
ನಿವಹಮಂ ಕುಂತಿ ಚಿತ್ರಾಂಗದೆ ಫಣೀಂದ್ರಸುತೆ ದೇವಕಿ ಯಶೋದೆಯರನು ||
ಪವನಜನೊಡನೆ ಹಸ್ತಿನಾವತಿಗೆ ಕಳುಹಿ ಪಾ |
ರ್ಥಿವ ಪಾರ್ಥಿ ಪಾರ್ಥರಂ ಸಲೆ ಕೂಡಿಕೊಂಡು ದಾ |
ನವ ಮರ್ದನಂ ತಾನೆ ಕುದುರೆಯಂ ಬಿಡಿಸಿ ರಕ್ಷೆಗೆ ನಡೆದನದರ ಪಿಂತೆ ||೮೧||

ಸಂಜೀವಕದ ಮಣಿಯ ಫಣಿಪತಿಯ ಕೃಷ್ಣದ ಧ |
ನಂಜಯನ ಪುಣ್ಯಪ್ರಸಂಗದಿಂದಪಮೃತ್ಯು |
ನಂಜು ದುಷ್ಕೃತಿ ಶತೃಪೀಡೆಗಳ್ ಪೊರ್ದವೆಂಬೀ ಮಹಾ ಮಹಿಮೆಯಿಂದೆ ||
ರಂಜಿಪೀ ಕಥೆಗೇಳ್ಗೊದೊಡಾಯುರಾರೋಗ್ಯ ಮತಿ |
ಮಂಜುಳ ಸುಕೀರ್ತಿ ಸುಖ ಸಂಪತ್ಕಳತ್ರ ಸುತ |
ಸಂಜಾತ ಹರಿಭಕ್ತಿ ಸಮನಿಪುದು ದೇವಪುರ ಲಕ್ಷೀಶನಾಜ್ಞೆಯಿಂದೆ ||೮೨||