ಸೂಚನೆ ||
ಅಹವ ಸಮರ್ಥ ಕರ್ಣಜನಂ ಕಡಹು ಬಭ್ರು |
ವಾಹನಂ ಸುರನದಿಯ ಶಾಪದಿಂದರಿಯಲ್ಕೆ |
ರಾಹು ತುಡುಕಿರ್ದಮೃತಕರ ಬಿಂಬದಂತಿರ್ದುದರ್ಜುನನ ತಲೆ ರಣದೊಳು ||

ಜನಪ ಕೇಳುರ್ಜುನನ ಸೈನ್ಯದೊಳ್ ಬಭ್ರುವಾ |
ಹನನಖಿಳವೀರರಂ ಕೆಡಹಿ ಹಂಸಧ್ವಜನೊ |
ಡನೆ ರಣದೊಳೆಚ್ಚಾಡಿ ಸ್ಯಂದನ ಸಹಸ್ರಮಂ ತಡೆಗಡಿದವನ ಪಡೆಯೊಳು ||
ತನಿಗಲಿಗಳಾರುಸಾವಿರಮಂ ಪೊರಳ್ಚಿ ವಾ |
ಹಿನಿಯನೈದಕ್ಷೆಹುಣೀಯನೊಕ್ಕಲಿಕ್ಕಿ ಮೇ |
ದಿನಿಗವಂ ಮೈಮರೆದು ಬೀಳ್ವಂತೆ ಸೆಕ್ಕಿದಂ ಕಾಯದೊಳ್ ಸಾಯಕವನು ||೧||

ಅಸದಲದೊಳವನ ಸುತರಿರ್ವರುಂ ಮಡಿದ ಬಳಿ |
ಕಸುರಾರಿ ತನ್ನೊಳಾಡಿದ ಬಲ್ಮೆಯಂ ನೆನೆದು |
ದೆಸೆಗೆಟ್ಟು ಬಿದ್ದನಕಟೆಂದು ಹಂಸಧ್ವಜಂಗರ್ಜುನಂ ಮರುಗುತಿರಲು ||
ಮುಸುಕಿದಂ ಪಡೆಸಹಿತ ಬಂದು ಪಾರ್ಥಿಯ ರಥವ |
ನಸಮ ಬೂಜಬಲ ಸುವೇಗಂ ಬಳಿಕ ಸಂಗರಂ |
ಪೊಸತಾದುದಿರ್ವರ್ಗೆ ಕೊಂದನರ್ಜುನಿ ಮತ್ತೆ ವೀರರಿರ್ಛಾಸಿರವನು ||೨||

ಸಾಹಸದೊಳಿರ್ವರುಂ ಸರಿಯೆನೆ ಸುವೇಗಂ ಮ |
ಹಾಹವದೊಳೆಚ್ಚಾಡಿ ವಿರಥನಾಗಿಯೆ ಬಭ್ರು |
ವಾಹನನ ಬಾಣದಿಂದುರೆ ನೊಂದು ಬಿದ್ದುನವನಿಗೆ ಬಳಿಕ ಪಾರ್ಥಿ ನರನ ||
ಮೋಹರವನೈದಿದಂ ಪ್ರಳಯಭೈರವನ ಕೋ |
ಲಾಹನಮಿದೆಂಬಂತೆ ಕೊಂದನೆಲ್ಲಾ ಬಲವ |
ದೇಹದೊಳೆಸೆವ ಜೀವ ಪರಮರವೊಲುಳಿದಿರ್ದರಾವೃಷಧ್ವಜ ಪಾರ್ಥರು ||೩||

ರಣದೊಳಂತವರಿರ್ದರತ್ತ ಮುನ್ನೊಂದು ಕಾ |
ರಣಕೆ ಗುರು ಶಾಪಮಂ ಕುಡಲದಂ ಬಿಡಿಸಿ ಫಲು |
ಗುಣನಮಲ ತೀರ್ಥಯಾತ್ರಾಪ್ರಸಂಗದೊಳಂದು ತಾಂ ಪರಿಗ್ರಹಿಸಿ ನೆರೆದ ||
ಫಣಿರಾಜನಂದನೆಯುಲೂಪಿ ಪಾತಾಳದಿಂದೆ |
ಮಣಿಪುರಕೆ ಬಂದು ಮೂರ್ಛಿತರಾಗಿ ಸಮರ ಧಾ |
ರಿಣಿಯೊಳಿಹ ದೊರೆಗಳಂ ತರಿಸಿ ಮಂತ್ರೌಷಧಿಗಳಿಂದೆ ಪಾಲಿಸುತಿರ್ದಳು ||೪||

ನೃಪ ಕೆಳುಲೂಪಿ ಚಿತ್ರಾಂಗದೆಗೆ ಪೇಳ್ದಸುರ |
ರಿಪುಸುತಂ ತನ್ನತನಯಂಬೆರಸಿ ಪಾರ್ಥಜನ |
ವಿಪುಲಾಸ್ತ್ರದಿಂದ ಮೂರ್ಛಿತನಾಗಿ ರಣದೊಳಿರಲಿರ್ವರಂ ತರಿಸಿಕೊಂಡು ||
ಅಪಗತ ಶ್ರಮರಪ್ಪತೆರದಿಂದೆ ಮಂದಿರೊದು |
ಳುಪಚರಿಸಿ ಮಣಿ ಮಂತ್ರ ಮೂಲಿಕಾತತಿಗಳಂ |
ತಪಿಸದಂತಾರೈಯುತಿರ್ದನನಿತ್ತ ವೃಷಕೇತುಗಿಂತೆಂದನು ||೫||

ಮಗನೆ ಮುಡಿದುದು ಸೈನ್ಯಮನುಸಾಲ್ವಮುಖರಾದ |
ವಿಗಡರೇರ್ವಡೆದು ಸೈಗೆಡದರಿಳೆಯೊಳ್ ತಮ್ಮ |
ನಗರಿಗನಿರುದ್ಧಪ್ರದ್ಯುಮ್ನರಂ ಕೊಂಡೊಯ್ದರಹಿತರಿವನಂ ಜಯಿಸುವ ||
ಬಗೆಗಾಣೆನಾದೊಡಂ ನಿಲ್ವೆನಾನಿಲ್ಲಿ ಕಾ |
ಳಗಕೆ ನೀನಿರಿದೆ ಹಸ್ತಿನಪುರಿಗೆ ಪೋಗಿ ಪೇ |
ಳಗಧರ ಯುಧಿಷ್ಠರರ್ಗೀ ಸ್ಥಿತಿಯನೆಂಬಿನಂ ತೋರ್ದುವುತ್ಪಾತಂಗಳು ||೬||

ಪರ್ದು ಕುಳ್ಳಿರ್ದುದರ್ಜುನನ ಮಕುಟಾಗ್ರದೊಳ್ |
ಡರ್ದು ಗೂಡಿಕ್ಕಿದುವು ರಥದೊಳ್ ಕಪೋತಂಗ |
ಳಿರ್ದುದು ತನುಛ್ಛಾಯೆ ತಲೆಯಿಲ್ಲದಿನಿತುಮಂ ಕಂಡು ಬೆರಗಾಗಿ ನರನು ||
ಪೊರ್ದದಿರದಪಜಯಂ ತನಗಿನ್ನು ಧರ್ಮಜಂ |
ನಿರ್ದೈವನಹನಲಾ ಶಿವ ಮಹಾದೇವ ಮುರ |
ಮರ್ದನ ತುರಗಮೇಧವನೆಂತು ಮಾಡಿದಪನೊ ಕರ್ಣಸುತ ಹೇಳೆಂದನು ||೭||

ವಾಜಿ ಸಹಿತಾಂ ಪೋಗಿ ಸಕಲ ಪರಿಕರದಿಂದೆ |
ತೇಜದಿಂದೊಪ್ಪುವಗ್ನಿಗಳಿಂದೆ ಭೂಸುರ ಸ |
ಮಾಜದಿಂದಖಿಳ ಋತ್ವಿಕ್ಕುಗಳ ಬಹುವಿಧದ ಮಂತ್ರಘೋಷಂಗಳಿಂದೆ ||
ರಾಜಿಸುವ ನುತ ಯಜ್ಞಶಾಲೆಯೊಳ್ ಭೂವರಂ |
ಯಾಜಮಾನ್ಯದೊಳೆಸೆವ ಸಿರಿಯಂ ವೃಕೋದರ ಸ |
ರೋಜಾಂಬಕಾದಿ ಬಾಂಧವರೊಳಾವೃತನಾಗಿರಲ್ ಕಾಣೆನಕಟೆಂದನು ||೮||

ಪೇಳಲೇನಹುದಿನ್ನು ಬಭ್ರುವಾಹನನೊಡನೆ |
ಕಾಳೆಗಂಗುಡವೆನಾಂ ಕುಲಕೆ ನೀಂ ಮಗನೊರ್ವ |
ಬಾಳುವೆ ಗೆಡಿಸಬೇಡ ಗಜಪುರಕೆ ಪೋಗಿ ಮುರಹದ ಧರ್ಮನಂದನರ್ಗೆ ||
ಕಾಳಾದ ರಾಜಕಾರ‍್ಯಸ್ಥಿತಿಯ ನೆಚ್ಚರಿಸು |
ಕೇಳೆನ್ನ ಮಾತನೆಂದರ್ಜುನಂ ನುಡಿಯಲ್ಕೆ |
ತಾಳದೆ ವೃಷಧ್ವಜಂ ಕೋಪದಿಂ ಪಾರ್ಥಂಗೆ ಕೈಮುಗಿಯುತಿಂತೆಂದನು ||೯||

ಒಳ್ಳಿತಿದು ತಾತ ನಿನ್ನಂ ಬಿಟ್ಟು ನಾಂಪೋಗ |
ಲುಳ್ಳವನೆ ಗಜನಗರಿಗಕಟ ರಣದೊಳ್ ಜೀವ |
ಗಳ್ಳನಾದೊಡೆ ಮತ್ಪಿತಾಮಹಂ ಬಿಳದಿರ್ಪನೆ ಗಗನಮಾರ್ಗದಿಂದೆ ||
ಹೊಳ್ಳೆದೆಯ ಹೊರಬಿಗರೊಳೆಂದುದೀ ನುಡಿಗಳಂ |
ತಳ್ಳಂಕದಿಂದೆ ನೀನಾಹವದೊಳಿಂತೆಣಿಕೆ |
ಗೊಳ್ಳಲೇಕಿವನ ಬಿಂಕವನೀಗ ಮುರಿವೆನೆನ್ನಂ ಕಳುಹಿ ನೋಡೆಂದನು ||೧೦||

ತಂದೆಗೋಸುಗ ಮಾಳ್ದನವಸರಕೆ ಗೋನಿಮಿ |
ತ್ತಂ ದೇವ ವಿಪ್ರಾರ್ಥಕಸುದೊರೆಡಾತಾಂಗೆ |
ಸಂದೇಹಮಿಲ್ಲದಾದಪುದು ಗಡ ಕೈವಲ್ಯ ವಿಗಳಾನೆಂತು ರಣಕೆ ||
ಹಿಂದುಗಳೆದಪೆ ನೇಕಪತ್ನಿಯಾಗಿಹ ಸತಿಯ |
ಮುಂದಕ್ಕೆದುವೆನೆಂತು ಭಾನುಸಂಭವನ ಸುತ |
ನೆಂದೆನಿಸಿಕೊಂಬೆನೆಂತನೃತಮಂ ನುಡಿವನಲ್ಲಾಹವಕೆ ಕಳುಹೆಂದನು ||೧೧||

ಮಂದಿ ಸಹಿತೀ ಬಭ್ರುವಾಹನಂ ಬರಲಿ ನಾ |
ನಿಂದು ರಣದೊಳ್ ನಿನ್ನ ಕಂಗಳ್ಗೆ ಹಬ್ಬಮಂ |
ತಂದಲ್ಲದಿರೆನೆಂದು ವೃಷಕೇತು ಬಲ್ಪಿಂ  ಧನಂಜಯಂಗೆರಗಿ ಬಳಿಕ ||
ಪೊಂದೇರ್ಗಡರ್ದು ನಿಜ ಚಾಪಮಂ ತುಡುಕಿ ನರ |
ನಂದನನ ಸಮ್ಮುಖಕೆ ನಡೆತಂದು ನುಡಿದನೆಲೆ |
ಮಂದಮತಿ ಪಾರ್ಥಸುತನಹಡೆ ನಿಲ್ ಕರ್ಣಜಂ ತಾನೆನುತ ತೆಗೆದೆಚ್ಚನು ||೧೨||

ಲೇಸನಾಡಿದೆ ಕರ್ಣಸುತನಾದೊಡೊಳ್ಳಿತೈ |
ವಾಸಿಯುಲ್ಳವನಪ್ಪೆ ಫಲುಗುಂ ಕೊಂದನ |
ಲ್ಲಾ ಸಮರದೊಳ್ ನಿನ್ನತಾತನಂ ತನಗೆ ನೀನಿದಿರಪ್ಪುದುಚಿತಮೆನುತೆ ||
ಸೊಸಿದಂ ಕಣೆಗಳಂ ಬಭ್ರುವಾಹನನದಂ |
ನೇಸರಣುಗನ ಸುತಂ ಬರೆಕೆಯ್ದು ಪಾರ್ಥಿಯಂ |
ಗಾಸಿಮಾಡಿದನಂಬುಗಳ ಮಳೆಯೊಳವನೀತನಂ ಮುಸುಕಿದಂ ಶರದೊಳು ||೧೩||

ಇಸುವರೆಚ್ಚಂಬುಗಳನೆಡೆಯೊಳಿಕ್ಕಡಿಗೈವ |
ರಿಸುವರೋರೊರ್ವರಂ ಗಾಯಗಾಣಿಸಿ ಕೆರ |
ಳ್ದಿಸುವರಶ್ವಧ್ವಜ ವರೂಥ ಸಾರಥಿಗಳಂ ತರಿದಿಳೆಗುರುಳ್ಚಿ ಕೂಡೆ ||
ಇಸುವರೊಮ್ಮೊಮ್ಮೆ ಮೈಮರೆದು ಚೇರಿಸಿಕೊಂ |
ಡಿಸುವರಾಗ್ನೇಯಾದಿ ದಿವ್ಯಾಸ್ತ್ರನಿಕರದಿಂ |
ದಿಸುವರಿಂತವರವರ ಸರಿಬರಿಗೆ ಬಾಣಂಗಳಂ ಕರ್ಣಪಾರ್ಥಸುತರು ||೧೪||

ಅಂದಾದ ಕರ್ಣಾರ್ಜುನರ ಕಾಳಗವನವರ |
ನಂದನರ್ ನಿರ್ಣೈಸುತಿರ್ದುರೆನೆ ಶಸ್ತ್ರಾಸ್ತ್ರ |
ದಿಂದೆ ಶರಸಂಧ್ಯಾನ ಸತ್ಯ ಸಾಹಸ ಲಕ್ಷ್ಯ ಲಳಿ ಲಾಘವಂಗಳಿಂದೆ ||
ಮುಂದುವರಿವಗ್ಗಳಿಕೆ ಮುಳಿಸು ಮೂದಲೆ ಮೋಡಿ |
ಬಂದಿ ಭಾರಣಿ ಬಿಂಕ ಬೆಸೆ ಚಮತ್ಕಾರಂಗ |
ಳಿಂದ ಸಮಮಾಗೆ ಕೈದೋರಿದಂ ವೃಷಕೇತು ಬಭ್ರುವಾಹನನ ಮೇಲೆ ||೧೫||

ಬಳಿಕಖಿಳ ದಿವ್ಯಾಸ್ತ್ರದಿಂದೆ ವೃಷಕೇತು ವೆ |
ಗ್ಗಳಿಕೆ ವಾಡಬ ವೈಷ್ಣವಂಗಳಿಮ ಪರಿಹರಿಸಿ |
ಕೊಳುತರ್ಜುನಾತ್ಮಜಂ ಕೆರಳ್ದಿವನನೆಚ್ಚೊಡುಚರ‍್ಚಳಿಸಿ ತಚ್ಛೋಣಿತವನು ||
ತೊಳೆಯಲಿಳಿದುವು ಭೋಗವತಿಯ ಜಲಕಂಬುಗಳ್ |
ಮುಳಿದು ಕರ್ನಜನಿಸಲ್ಕಾ ತನಂ ಸುತ್ತಿಸಿತು |
ಸುಳಿಗಾಳಿಯಂದದಿಂ ಕಣೆಗಳರೆಗಳಿಗೆ ಪರ‍್ಯಂತರಂ ಸಂಗರದೊಳು ||೧೬||

ಮತ್ತೆ ಹೊಡಕರಿಸಿ ಪಾರ್ಥನ ಸೂನು ರೋಷಾಗ್ನಿ |
ಪೊತ್ತಿ ಕೆಡಿಗೆದರಿ ದಿವ್ಯಾಸ್ತ್ರಮಂ ಪೂಡಿ ತೆಗೆ |
ಯುತ್ತೆಲವೊ ಕರ್ಣಸುತೆ ನೀನೆ ಬಿಲ್ಲಾಳಪ್ಪೆನಾಂ ಪೊನರ್ದತಿಬಲದೊಳು ||
ಚಿತ್ತಚಮಚಲಮಿಲ್ಲದೀಕ್ಷಿಸೆನುತೆಚ್ಚೊಡೆದೆ |
ಗೊತ್ತಿ ಶಿರಮಂ ಕೂಡಿ ಪಿಡಿದಾಗಸಕೆ ಬಾಣ ||
ವೆತ್ತಿಕೊಂಡೊಯ್ದು ವರಷಕೇತುವಂ ತಿರುಗಿಸಿತು ದೆಸೆದೆಸೆಗಳಂ ನಭದೊಳು ||೧೭||

ಭಾನುಸುತ ಸೂನುವಂ  ನಭಕೆತ್ತಿ ಕೊಂಡೊಯ್ದು |
ನಾನಾದೆಸೆಗೆ ತಿರುಗಿಸಿತು ಮೂಹೂರ್ತತ್ರಿತಯ |
ವಿನೆಲಕೆ ಕೆಡಹದೆ ಮಹಾಶರಂ ಕೆಳಗೆ ಬಿಲ್ವಿಡಿದು ಸನ್ನದ್ಧರಾಗಿ ||
ಈ ನರನುಮಾ ಬಬ್ರುವಾಹನನನು ಮೊಡನೈದೆ |
ಬಾನೆಡೆಯೊಳಾತಂ ಪಿತಾಮಹಂಗಭಿನಮಿಸಿ |
ಕಾನನ ಸರಿತ್ಸಾಗರಂಗಳೊಳ್ ಬೀಳದಿಳಿದಂ ಮಣೀಪುರದ ಮಹಿಯೊಳು ||೧೮||

ಮೊಗಮೆತ್ತಿ ಫಲುಗುಣಂ ನೋಡುತ್ತಿರೆ ಕರ್ಣಜಂ |
ಗಗನದಿಂ ಬಿದ್ದಿಳೆಗೆ ಪೊಡೆಚಂಡಿನಂತೆ ಪುಟ |
ನೆಗೆದಿದ್ದುರೋಷದಿಂ ಘುಡುಘುಡುಸಿ ಪ್ರಾರ್ಥಸುತನಂ ಪಚಾರಿಸಿ ಕನಲ್ದು ||
ತೆಗೆದಿಸಲ್ ಬಾಣಂಗಳಶ್ವ ಸಾರಥಿ ಪತಾ |
ಕೆಗಳಿಂದಮರ್ದ ರಥಸಹಿತ ಚಿತ್ರಾಂಗದೆಯ |
ಮಗನಂ ನಭಸ್ಥಳಕೆ ಕೊಂಡಡರ್ದುವು ಪರಿಯಂತಮಾಕ್ಷಣದೊಳು ||೧೯||

ನಭದೊಳತ್ಯುಗ್ರದಿಂ ತಪಿಸುವ ದಿವಾಕರ |
ಪ್ರಭೆಯಿಂದುರಿಯ ರಥಂ ಬಿದ್ದನುರ್ವಿಗೆ ಪಾರ್ಥಿ |
ರಭಸದಿಂ ಪೂರ್ವದೊಳಡರ್ದ ಸಂಪಾತಿ ಗರಿ ಸೀದಿಳೆಗೆ ಬಿಳುವಂತೆ ||
ತ್ರೀಭುವನಕೆ ಪೊಸತಾಗೆ ಕರ್ಣಜಂ ಮತ್ತೆ ರಿಪು |
ಸುಭಟನಂ ಮೂರುಬಾಣದೊಳೆಚ್ಚು ದಿವಸ ವ |
ಲ್ಲಭನ ಮಂಡಲದಲ್ಲಿಗೈದಿಸಿ ಪಚಾರಿಸಿ ಜರೆದು ಕೂಡೆ ಬೊಬ್ಬಿರಿದನು ||೨೦||

ಬೊಬ್ಬಿರಿವ ಕರ್ಣಜನ ದನಿಗೇಳ್ದು ರೋಷದಿಂ |
ದಬ್ಬರಿಸಿ ಗಗನದೊಳ್ ತನ್ನ ರಥಮಂ ಬಿಟ್ಟು |
ಹೆಬ್ಬೆಟ್ಟದಂತಿವನ ಮಸ್ತಕದ ಮೇಲೆ ಬೀಳಲ್ಕಿವಂ ಕನಲ್ದು ಕೂಡೆ ||
ಉಬ್ಬಿ ಪುಟನೆಗೆದೆದ್ದು ಸಾಯಕದೊಳೆಚ್ಚವನ |
ನೆಬ್ಬಿಸಿದನಾಗಸಕೆ ಮತ್ತೆ ಬೀಭತ್ಸು ಕಂ |
ಡೊಬ್ಬೆರಳನಲ್ಲಾಡಿ ಪೊಗಳಲ್ಕೆ ವೃಷಕೇತು ಫಲುಗುಣಂಗಿಂತೆಂದನು ||೨೧||

ತಾತ ನೋಡಂದು ರಣದೊಳ್ ತೇರ ಗಾಲಿ ವಸು |
ಧಾತಳದೊಳಳ್ದೊಡಾಯತಮಾಗಿ ನಿಲ್ವನಂ |
ಘಾತಿಸದಿರೆಂದು ನಿನ್ನೊಡನೆ ನಮ್ಮಯ್ಯನಾಡಿದವೊಲಾಡದೆ ಸುಮ್ಮನೆ ||
ಈತನೆನ್ನನಸ್ತ್ರದಿಂ ಗಾಸಿಯಾದಪನೆಂದು |
ಮಾತಾಡುವನಿತರೊಳ್ ಮತ್ತಿವನ ಮೇಲೆ ಬಂ |
ದಾತ ಬೀಳಲ್ ನೊಂದರಿರ್ವರುಂ ಚೇತರಿಸಿಕೊಂಡು ಧುರಕನುವಾದರು ||೨೨||

ಮಣಿ ವರೂಥಾರೂಢರಾಗಿ ಬಳಿಕಿರ್ವರುಂ |
ರಣರಂಗದೊಳ್ ಕಡುಗಿ ಕಾದಿದರ್ ಕಾಯದೊಳ್ |
ಕಣೆಗಳಿಡಿಯಲ್ ಕಂಡಮಂ ಕಚ್ಚಿ ಪಾರಲರುಣಾಂಬುಗಳ್ ಕೋಡಿವರಿಯೆ ||
ಪೊಣರ್ವರಂಬರಕಡರ್ದೊಮ್ಮೆ ಮೇದಿನಿಗಿಳಿದು |
ಪೆಣಗುವರ್ ಮತ್ತಮ್ಮೆ ನಭದೊಳೀರ್ದೊವರ್ ಧ |
ರಣಿಯೊಳಿರ್ದೊರ್ವರ್ ನೆಲದೊಳೊರ್ ವರಾಗಸದೊಳೊರ್ವರಿರ್ದಾ ಕಲಿಗಳು ||೨೩||

ಭೂಪ ಕೇಳಿಂತೈದುದಿನಮೈದೆ ಕಾದಿದರ್ |
ಚಾಪವಿದ್ಯಾಪ್ರವಿಣರ್ ಬಳಿಕ ಪಾರ್ತಜಂ |
ಭಾಪುರೇ ವೃಷಕೇತು ನೀನೆ ಪಟುಭಟನಪ್ಪೆ ಲೋಕದೊಳ್ ಸಾಕೆದೆಯೊಳು ||
ಶ್ರೀಪತಿಧಾನಮಂ ಮಾಡೆನುತೆ ತೆಗೆದಿಸಲ್ |
ಕೋಪದಿಂದಾಕಣೆಯ ನಿವನರಿವನಿತರೋಳ್ ಪ್ರ |
ತಾಪದಿಂ ಕವಲಂಬನೆಚ್ಚು ಕತ್ತರಿಸಿ ಕರ್ಣಜನ ಕಂಧರವನು ||೨೪||

ಕಡಿದು ಕವಲಂಬುಗಿಯೆ ಕರ್ಣಜನ ತಲೆ ನಭಕೆ |
ಸಿಡಿದು ಕಂತುಕದಂತೆ ಬಂದು ಬಿದ್ದುದು ಪಾರ್ಥ |
ನಡಿಗೆ ನಾರಾಯಣ ಮುಕುಂದ ಮಾಧವಯೆನುತೆ ಮುಂಡವತಿವೇಗದಿಂದೆ ||
ನಡೆದು ರಣದೊಳ್ ಮಣಿಪುರೇಂದ್ರನಂ ಪೊಯ್ದಿಳೆಗೆ |
ಕೆಡಹಿ ಪಡೆಯೆಲ್ಲಮಂ ಸದೆದುರುಳ್ದುದು ನರಂ |
ಪಿಡಿದೆರಡು ಕೈಗಳಿಂದಾ ಶಿರವನೆತ್ತಿಕೊಂಡೀಕ್ಷಿಸುತಳಲ್ದನಂದು ||೨೫||

ಬಿಟ್ಟಕಂಗಳ್ ಬಿಗಿದ ಪುರ್ಬುಗಳ್ ಪೆರೆ ನೊಸಲ |
ಬೊಟ್ಟು ಸೂಚಿಸಿದ ಕುರುಳ್ ಧಳಥಳಪ ಕುಂಡಲಂ |
ಪುಟ್ಟುದುಪ್ಪುಳ್ಮೀಸೆ ಪೊಳೆವಲ್ ನಗುವ ಮೊಗಂ ಕಳಕಳಿಸೆ ಕಳೆಯದಿಂದೆ ||
ಕಟ್ಟುಗ್ರಮಾಗಿರ್ದ ತನವೀರರಸದೊಂದು |
ಗಟ್ಟಿಯೆನೆ ತೋರ್ಪ ಕರ್ಣಜನ ತಲೆಯಂ ನರಂ |
ನಿಟ್ಟಿಸುತೆ ಪಣೆಯಂ ಪಣೆಯೊಳಿಟ್ಟು ಪೊಸೆದು ಚುಂಬಿಸಿ ಕಂಬನಿಯೊಳಾಳ್ದನು ||೨೬||

ಮಗನೆ ನೀನೆಂತು ಮಡಿದೈ ಕೃಷ್ಣರಾಯಂಗೆ |
ಸೊಗಸಾದುದೇ ನಿನ್ನಳಿವು ಧರ್ಮತನಯಂಗೆ |
ಮೊಗದೋರ್ಪ ಸುತರುಂಟೆ ನೀನಲ್ಲದೇನೆಂದಳಲ್ವಲೈ ಕುಂತಿ ನಿನಗೆ ||
ಪಗೆಯೆಂದು ಕೊಂದೆವಗ್ರಜನ ನೆಮಗಾತನಿಂ |
ಮಿಗಿಲೆಂದು ಕಂಡಿಹೆವಲೈ ನಿನ್ನ ನೈವರ್ಗೆ |
ಸುಗತಿ ಗುಡುವಾತ್ಮಭವರಿರ್ದಪರೆ ಪೇಳೆಂದು ಹಳವಳಿಸಿದಂ ಪಾರ್ಥನು ||೨೭||

ಸಾಲದೆ ಮಹಾಹವದೊಳಭೀಮನ್ಯು ಮಡಿದಳಲ್ |
ಬಾಲಕಂ ನೀನಿರ್ದೊಡೇನಕಟ ಕಣ್ಣ ಮುಂ |
ದಾಲಿಸೈ ತನ್ನ ಮಾತಂ ನುಡಿಸಲಾಗದೇ ನೋಡೆನ್ನ ನಾದರದೊಳು ||
ಪಾಲಿಸೈ ತುರಗಮಂ ಮಂದಿಯಂ ನಡೆಸಿನ್ನು |
ಮೇಳಣುದ್ಯೋಗಮಾವುದು ಕಂದ ನಿನ್ನ ಗುಣ |
ಶೀಲಮಂ ಭೂಪನೊಳ್ ಬಣ್ಣಿಪ ವೃಕೋದರಂಗೇನೆಂಬೆನುಸಿರೆಂದನು ||೨೮||

ಮೂಗಿಲ್ಲದಾನನಂ ಲಿಂಗಮಿಲ್ಲದ ಪೀಠ |
ಮಾಗಿರದೆ ಪಾಂಡವರ ಸಿರಿಯಿನ್ನು ನೀನಿಲ್ಲ |
ದಾಗ ನಿನ್ನದಟಿಂದೆ ಯ್ವವ್ವನಾಶ್ವಾನುಸಾಲ್ವರ ಸಖ್ಯಮಾದುದೆಮಗೆ ||
ಯಾಗಮಹುದರಸಂಗೆ ನಿನ್ನಿಂದ ನೀಂ ಪದ್ದು |
ಕಾಗೆಗೊಡಲಂ ಕೊಟ್ಟು ರನದೊಳೆನ್ನಂ ಬಿಟ್ಟು |
ಪೋಗಲಪ್ಪುದೆ ತಂದೆ ವೃಷಕೇತು ಪೇಳೆಂದು ಮರುಗಿದಂ ಸವ್ಯಸಾಚಿ ||೨೯||

ಈ ಪರಿಯೊಳಾ ವರಷಧ್ವಜನ ತಲೆವಿಡಿದವನ |
ರೂಪಗುಣ ಶೀಲಮಂ ನೆನೆನೆನೆದು ಶೋಕ ಪ್ರ |
ಲಾಪದಿಂ ನರನಳಲುತಿರಲತ್ತ ಕರ್ನಸುತನಟ್ಟೆ ಬಂದಪ್ಪಳಿಸಲು ||
ಧೂಪಿಸಿ ಧರೆಗೆ ಬಿದ್ದೊಡನೆ ಮೂರ್ಛೆ ತಿಳಿದೆದ್ದು |
ಚಾಪದ ಕೊನೆಗೆ ಮೊವನಿಟ್ಟೋರೆಯಾಗಿ ನಿಂ |
ದಾ ಪಾರ್ಥನಂ ನೋಡಿ ನಸುನಗುತೆ ಚಿತ್ರಾಂಗದೆಯ ತನುಜನಿಂತೆಂದನು ||೩೦||

ಎಲೆ ಪಾರ್ಥ ವೈಶ್ಯಸಂಭವರಾವಹೆವು ನಿಮ್ಮ |
ಬಲ ಸಮಾಜದೊಳಂಬುಗಳ ಪಸರಮಂ ಹರಹಿ |
ಗೆಲವಿನಗ್ಗದಲಾಭಮಂ ಪಡೆದೆವದಟರ ಶಿರಂಗಳಂ ಕೊಂಡೆವರಿಸಿ ||
ಕಲಿಗಳೈತಂದು ಜೀವಕೆ ಸಂಚಾಕಾರಮಂ |
ಸಲೆ ಬೇಡಿದೊಡೆ ಕೊಟ್ಟೆ ವಿಚ್ಛೆಯುಳ್ಳೊಡೆ ನಿನ್ನ |
ತಲೆಯ ಬೆಲೆಗಿದೆ ಸಾಹಸ ದ್ರವ್ಯಮೆನ್ನೊಳೆಂದಾರ್ಜುನಿ ಪಚಾರಿಸಿದನು ||೩೧||

ಇವರೊಳೇನಹುದಿನ್ನು ವೀರನೀ ಕರ್ಣಸುತ |
ನಿವನ ತಲೆಯಂ ಸಮರ್ಪಿಸು ಮಹಾದೇವಂಗೆ |
ತವೆ ರುಂಡಮಾಲೆಯೊಳ್ ಪೂಜ್ಯಮಾಗಿಹುದೀಶ್ವರ ಪ್ರೀಯಹುದು ನಿನಗೆ ||
ಶಿವನಂದು ಪಾಶುಪತ ಬಾಣಮಂ ಕೊಟ್ಟುದಿ |
ಲ್ಲವೆ ನಿಜಸ್ವಾಮಿಯಂ ಮರೆದಪರೆ ಸಾಕಿದರ |
ಬವಣಿಯೇತಕೆ ನಮಗೆ ಕಾದುವೆಯೊ ತುರಗಮಂ ಬಿಟ್ವಪೆಯೊ ಪೇಳೆಂದನು ||೩೨||

ನೋಡಿದಂ ತಿರುಗಿ ಕಣ್ಣಾಲಿಗಳ್ ಕೆಂಪಡರೆ |
ಮಾಡಿದಂ ಕೋಪಮಂ ಧೈರ್ಯದಿಂದಳಲನೀ |
ಡಾಡಿದಂ ಕರ್ಣಜನ ಶಿರವನಲ್ಲಿರಿಸಿದಂ ಕೋಂಡನುರು ಕಾರ್ಮುಕನು ||
ತೀಡಿದಂ ಜೇಗೈದು ತಿರುವಿನೊಳ್ ಬಾಣಮಂ |
ಪೂಡಿದಂ ತೆಗೆದೆಚ್ಚು ರುಧಿರ ಪ್ರವಾಹವಂ |
ತೋಡಿದಂ ಬಭ್ರುವಾಹನನ ಸರ್ವಾಂಗದೊಳ್ ಕಲಿಪಾರ್ಥನಾ ಕ್ಷಣದೊಳು ||೩೩||

ಮೈಸಿರಿಯಳಲ್ಗಳಿವು ಲೇಸಾಯ್ತು ಪಗೆಯ ಮಗ |
ನೈಸಲೇ ಕರ್ಣಜಂ ಸಾಕಿವೇತಕೆ ಬರಿದೆ |
ವೈಸಿಕದ ಬಾಣಪ್ರಯೋಗಂಗಳಿಂದ್ರ ಕೀಲದೊಳುಮಾಕಾಂತನಿಂದೆ ||
ಕೈಸಾರ್ದ ಸಾಯಕವನುಗಿಯೆನುತ ಪಾರ್ಥನಂ |
ಪೈಸರಿದೆಚ್ಚನೀ ಬಭ್ರುವಾಹನನ ಕಣೆ |
ಗೈಸದು ನಭೋವಲಯಮೆನೆ ಕವಿದುವಂಬುಗಳ್ ದೇವತತಿ ಬೆರಗಾಗಲು ||೩೪||

ಮತ್ತವು ಮಸಯಳ್ವಂತೆ ನರನಾರ್ದು ತೆಗೆದಿಸಲ್ |
ಪೆತ್ತುವು ಸರಳ್ಗಳೊಮದೊಂದುಯುತ ನಿಯುತಮಂ |
ಪೊತ್ತವು ನಭಸ್ಥಳಕೆ ಕೊಂಡು ರಿಪುಸೇನೆಯಂ ತಾರೆಗಳನುದಿರಿಸಿದುವು ||
ಕಿತ್ತುವು ಕುಲಾದ್ರಿಗಳನಾಗಸದ ಬಟ್ಟಯಂ |
ಕೆತ್ತುವು ದಿಗಂತಮಂ ತುಂಬಿದುವು ಬಾಣಂಗ |
ಳಿತ್ತುವು ಜಗತ್ತ್ರಯಕೆ ಕಂಪಮಂ ಪಿಂತೆಂದುಮಿಲ್ಲಿದು ವಿಚಿತ್ರಮೆನಲು ||೩೫||

ಕೊರೆದುವಂಗೋಪಾಂಗಮಂ ಪಾರ್ಥನಂಬುಗಳ್ |
ತೆರದ ಜಾಳಾಂದ್ರದಂತಾಯ್ತುಗಿದ ಬಟ್ಟೆಗಳ್ |
ಕರೆದ ಪೆರ‍್ಮಳೆಯಿಂದೆ ನನೆದ ಜಾದಿನ ಗಿರಿಯೊಳಿರದಿಳಿವ ಕೆಂಬೊನಲ್ಗಳ ||
ತೆರದೊಳೆಸೆದುವು ರಕ್ತಧಾರೆಗಳ್ ಗಾಯದೊಳ್ |
ಮರೆದನಪಡಲಂ ನಿಮಿಷದೊಡನೆ ತರಹರಿಸಿದಂ |
ಜರೆದನರ್ಜುನನಂ ರಣಾಗ್ರದೊಳ್ ಮೂದಲಿಸಿ ಬಭ್ರುವಾಹನಂ ಕನಲ್ದು ||೩೬||

ಕರ್ಣ ಭೀಷ್ಮ ದ್ರೋಣರಂ ಗೆಲ್ದು ಕೊಟ್ಟಂ ಸು |
ಪರ್ಣಧ್ವಜಂ ನಿನಗೆ ಕರುಣದಿಂ ಕಾದಿದ ನ |
ಪರ್ಣಾಧವಂ ನಿನ್ನೊಳಗ್ಗಳಿಕೆ ಪಿರಿದೆಂದು ಮೇದಿನಿಯೊಳರಿಯದವರು ||
ವರ್ಣಿಸುವರೆಂದು ಬೆರೆತಿಹೆ ತನ್ನ ಸಮರಮಂ |
ನಿರ್ಣೈಸಿದೊಡೆ ವೀರನಹುದೆಂದು ಬಾಣಮಯ |
ದರ್ಣವಮಿದೆತ್ತಣಿಂ ಮೇರೆದಪ್ಪಿದುದೆನರ್ ಬಭ್ರುವಾಹನನೆಚ್ಚಲು ||೩೭||

ಕೆತ್ತಿದುವು ದಿಕ್ತಟದ ಭಿತ್ತಿಗಳನದ್ರಿಗಳ |
ನೆತ್ತಿದುವು ಧರೆಯನುಚ್ಚಳಿಸಿ ಕೂರ‍್ಮನ ಬೆನ್ನ |
ನೊತ್ತಿದುವು ಕಲಕಿದುವು ಸಾಗರವನಾದಿತ್ಯಮಂಡಲವ ನಂಡಲೆದುವು ||
ಮುತ್ತಿದುವು ಬಾಂದಳವನೆಲ್ಲಮಂ ಕೆಲಕೆಲವು |
ಪತ್ತಿದುವು ಪರಿದುವಿಳಿದುವು ಸಕಲಲೋಕಕ್ಕೆ |
ಬಿತ್ತಿದುವು ಭೀತಿಯಂ ಬಭ್ರುವಾಹನನ ಶರಜಾಲಮದನೇವೇಳ್ವೆನು ||೩೮||

ಹಾರಿಸಿತು ರಥಮಂ ತುರಂಗಮಂ ರುಧಿರಮಂ |
ಕಾರಿಸಿತು ಸಾರಥಿಯ ಜೀವಮಂ ಸುರಲೋಕ |
ಕೇರಿಸಿತು ಛತ್ರಚಾಮರ ಪತಾಕಾಳಿಯಂ ಕೆಂಗರಿಯ ಗಾಳಿಯಿಂದೆ ||
ತೂರಿಸಿತು ಟೆಕ್ಕೆಯದ ಮೇಲೆ ಹನುಮಂತನಂ |
ಚೀರಿಸಿತು ಪಾರ್ಥನ ಶರೀರದೊಳ್ ಬಟ್ಟೆಯಂ |
ತೋರಿಸಿತು ಬಭ್ರುವಾಹನನ ಶರ ಸಂಕುಲಂ ಫಲುಗುಣಂ ಕಂಪಿಸಲ್ಕೆ ||೩೯||

ಮತ್ತೆ ಸಂಗರದೊಳನ್ಯೋನ್ಯಮವರಿರ್ವರ್ಗೆ |
ಚಿತ್ತದೊಳ್ ಮುಸುಗಿತು ಘನ ಕ್ಷಾತ್ರತಾಮಸಂ |
ಪೊತ್ತಿತತಿರೋಷಾಗ್ನಿ ಬಳಿಕೊರ್ವ ರೊರ್ವರಂ ಜೈಸುವಭಿಲಾಷೆಯಿಂದೆ ||
ತೆತ್ತಿಸಿದ ಕಣೆಗಳಿಂ ಮೈಗಳೈಮೊಗದೊಲಿರೆ |
ನೆತ್ತರೊರತೆಗಳಿಂದೆ ತನುಗಳುರೆ ಪೂತ ಮು |
ಳ್ಮುತ್ತಗದೊಲಿರೆ ತಂದೆಮಕ್ಕಳೆಚ್ಚಾಡಿದರ್ ನಿಚ್ಚಟದೊಳಚ್ಚರಿಯೆನೆ ||೪೦||

ಜನಪ ಕೇಳ್ ಜಾಹ್ನವಿಯ ಶಾಪದಿಂ ಬಳಿಕ ಪಾ |
ರ್ಥನ ಸತ್ವಮೆಳದಾಗಿ ಬರೆ ಕಂಡು ಬಭ್ರುವಾ |
ಹನನೆಂದನೆಲೆ ಧನಂಜಯ ತನ್ನ ಜನನಿ ಚಿತ್ರಾಂಗದೆ ಪತಿವ್ರತೆ ಕಣಾ |
ಅನಿಮಿತ್ತಮಾಕೆಯಂ ಪಳಿದ ಕಾರಣದಿಂದೆ |
ನಿನಗೆ ಕೈಗುಂದುತಿದೆ ಸಾಕಿನ್ನು ಕೃಷ್ಣನಂ |
ನೆನೆ ಮರುಳೆ ಮುರಹರನ ಸಾರಥ್ಯಮಿಲ್ಲದಾರಂ ಗೆಲ್ದೆ ಹೇಳೆಂದನು ||೪೧||

ಕ್ಷೆಣಿಗೋಸುಗ ಕೊಂದೆ ನೀನಂದು ಕರ್ಣನು |
ಮೇಣವನ ತನಯನ ನೆಳ್ಗೆ ಸೇರದೆ ಮನದ |
ಕೇಣದಿಂದೆನ್ನ ಕೈಯಿಂದೆ ಕೊಲಿಸಿದೆ ಸಾಕು ಹಗೆ ಹರಿದುದಿನ್ನು ನಿನಗೆ ||
ಪ್ರಾಣಮಂ ಕಾದುಬಿಡುವೆಂ ಪೋಗು ಬಿಲ್ಗೊಳಲ್ |
ತ್ರಾಣಮುಳ್ಲೊಡೆ ನಿಂದು ಚಿತ್ತದೊಳ್ ನೆನೆ ಚಕ್ರ |
ಪಾಣಿಯಂ ಬಲಮಪ್ಪುದೆಂದು ಜರೆದಂ ಬಭ್ರುವಾಹನಂ ಫಲುಗುಣನನು ||೪೨||

ಹೊಣೆ ಹೊಕ್ಕಿದು ತಾಂ ಪಗೆವನಂ ಗೆಲ್ದೊಡಂ |
ಮಾಣದೆ ರಣಾಗ್ರದೊಳ್ ಮಡಿದೊಡಂ ಕ್ಷತ್ರಿಯ |
ರ್ಗೂಣೆಯಮೆ ಕರ್ಣನಂ ಕೊಂದೊಡೇನವನ ಸುತನಳಿದೊಡೇನಾಹದೊಳು ||
ಕ್ಷೀಣಬಲನೇ ತಾನಕಟ ನೀಂ ಸಮರ್ಥನೇ |
ಕಾಣಬಹುದೆನುತೆ ಭೀಮಾನುಜಂ ಕೋಪದಿಂ |
ಬಾಣಂಗಳಂ ಮಗನಮೇಲೆ ಕರೆಯಲ್ಕವಂ ಪರೆಗಡಿಯುತಿಂತೆಂದನು ||೪೩||

ಪ್ರೀತಿಯಿಂ ದ್ರೋನತಿತ್ತಂಬುಗಳ ಮನ್ಮಥಾ |
ರಾತಿ ಮುಖ್ಯಾಮರರ್ ಕೊಟ್ಟ ಬಾಣಂಗಳ |
ಜ್ಞಾತಮಾದುವು ನಿನಗೆ ಮರುಳೆ ನಿನ್ನೊಡನಾಡಿ ಕೃಷ್ಣನಂ ಮರೆದೆಯಾಗಿ |
ಏತಕಾಹವಮಿನ್ನು ಸಾಕೆನಲ್ ಫಲುಗುಣಂ |
ಕಾತಿಯಿಂ ಮಗುಳಿಸಲ್ಕಾ ಬಭ್ರುವಾಹನಂ |
ಘಾತಿಸಿದನಡಿಗಡಿಗೆ ಪಾರ್ಥನಂ ಜಾಹ್ನವಿಯ ಶಾಪದಿಂ ಕೈಗಿಡಲ್ಕೆ ||೪೪||

ಸುರನದಿಯ ಶಾಪದಿಂ ಮೋಹಿಸಿ ನರಂ ಮುಳಿದು |
ಧುರದೊಳಾವಾವಂಬನಿಸುವ ನದನೆಲ್ಲಮಂ |
ಪರೆಗಡಿದು ಕೋಪದಿಂದೆ ಪೂಡಿದಂ ಬಭ್ರುವಾಹಂ ತನ್ನ ಕಾರ್ಮುಕದೊಳು ||
ನಿರುಪಮ ಜ್ವಾಲಾಮುಖದ ಕಾಮರೂಪದುರು |
ತರ ವಡಬಶಿಖಿಯಂದರ್ಧಚಂದ್ರಾಕೃತಿಯ |
ಶರವನುತ್ಕೀರ್ಣಸ್ಛುಲಿಂಗ ಪ್ರಕರವನುಗ್ರ ಪ್ರಭಾಭೀಕರವನು ||೪೫||

ಅರ್ಕಾದಿ ಸರ್ವಗ್ರಹಗಳಿಂದ್ರಾದಿ ದೇ |
ವರ್ಕಳಾಂಗಿರಸಾದಿ ಮುನಿಗಳೆಲ್ಲರ್ ಮರುಗಿ |
ದರ್ಕರೆದು ವರುಣಾಂಬಲೆವಂ ಮೇಘಮುದುರಿತುಲ್ಕಾಪಾತಮಿಳೆ ನಡುಗಿತು ||
ಶರ್ಕರಾವರ ಪ್ರವರ್ತಿಸಿತು ಪಾರ್ಥಜಂ |
ಕರ್ಕಶದ ಬಾಣಮಂ ತೆಗೆದಿಸಲ್ ಕಿಡಿಗಳ ಪೊ |
ದರ್ಕವಿಯೆ ದೆಸೆದೆಸೆಗೆ ಭುಗುಭುಗಿಸುವ ಜ್ವಾಲೆ ಮೇಲ್ವಾಯ್ದು ಬರುತಿರ್ದುದು ||೪೬||

ಅತ್ಯುಗ್ರ ಸಾಯಕಂ ಬರೆ ಪಾರ್ಥನಿದಿರಾಗಿ |
ಪ್ರತ್ಯಸ್ತ್ರದಿಂದಿಸಲದಂ ಕೊಳ್ಳದೈತರಲ್ |
ಸತ್ಯಭಾಮಾ ಕಾಂತನಂ ಚಿಂತಿಪನಿತರೊಳ್ ತೀವ್ರದಿಂ ಕೊರಳನರಿಯೆ ||
ಅತ್ಯಧಿಕ ಕುಂಡಲದ ತಲೆ ಚಿಗಿದು ನಭದೊಳಾ |
ದಿತ್ಯ ಮಂಡಲಮಿಳೆಗುರುಳ್ವಂತೆ ಮುನಿಗಣ |
ಸ್ತುತ್ಯ ಕೇಶವ ಕೃಷ್ಣಯೆನುತ ಬಿದ್ದುದು ಕರ್ಣಸುತನ ಶಿರದೆಡೆಗೆ ಪೋಗಿ ||೪೭||

ಕಲಿ ವೃಷಧ್ವಜನ ಶಿರದೊಡನೆ ಕೂಡಿತು ನರನ |
ತಲೆ ಕರ್ಣಜನ ಕಬಂಧವನಪ್ಪಿಕೊಂಡುದಾ |
ಫಲುಗುಣನ ಮುಂಡಮಿದನೆಲ್ಲರುಂ ಕಂಡು ಮರುಗಿದಾಗ ಕರುಣದಿಂದೆ ||
ನಲವಿಂದೆ ಬೊಬ್ಬರಿದುದಾ ಬಭ್ರುವಾಹನನ |
ಬಲಮೈದೆ ಮೊಳಗಿದುವು ವಾದ್ಯಂಗಳಾಹವದ |
ಗೆಲವಿಂದೆ ಪುರಕೆ ತಿರುಗಿದನವಂ ವಂದಿ ಸಂದೋಹದ ಪೊಗಳ್ಕೆಯಿಂದೆ ||೪೮||

ತ್ರಿಜಗಂ ಮರುಗುವಂತೆ ಕಾರ್ತಿಕೈಕಾದಶೀ |
ಕುಜವಾರದುತ್ತರಾನಕ್ಷತ್ರದಂದು ವಾ |
ರಿಜಮಿತ್ರನಸ್ತಮಯ ಸಮಯದೊಳ್ ಕೃಷ್ಣಯೆನುತರ್ಜುನನ ತಲೆ ಬೀಳಲು ||
ವಿಜಯೋತ್ಸವದೊಳೈದಿದಂ ಬಭ್ರುವಾಹನಂ |
ನಿಜಪುರಕೆ ಗುಡಿ ತೋರಣದೊಳೆಸೆಯೆ ಬಣ್ಣಿಸಲ್ |
ಪ್ರಜೆಗಳಂಗನೆಯರಾರತಿ ಪುಷ್ಪ ದಧಿ ಲಾಜ ದೂರ್ವೆಯೊಳಿದಿರ್ಗೊಳಲ್ಕೆ ||೪೯||

ಮಿಗೆ ಜಯೋತ್ಸವದಿಂದೆ ಪೌರಜನದೊಸಗೆಯಿಂ |
ಬಗೆಬಗೆಯ ಸಿಂಗರದ ಪೆಣ್ಗಳ ಸೊಡರ್ಗಗಳಿಂ |
ನಗರ ಪ್ರವೇಶಮಂ ಮೂಡಿದಂ ಬಭ್ರುವಾಹನನಿತ್ತಲರಮನೆಯೊಳು ||
ಸೊಗಸಿಂದುಲೂಪಿ ಸಹಿತಿರುತಿರ್ದ ಚಿತ್ರಾಂಗ |
ದೆಗೆ ಬಂದು ಸುದತಿಯರ್ ದೇವಿ ನೀನೇಂ ನೋಂತು |
ಮಗನಂ ಪಡೆದೆಯೊ ನರನಂ ಕೊಂದು ಬರ್ಪನಾರತಿಗಳಂ ತರಿಸೆಂದರು ||೫೦||

ಮಾನಿನಿಯರಿಂತಾಗ ಚಿತ್ರಾಂಗದೆಗೆ ನಿನ್ನ |
ಸೂನು ಕಲಿ ಪಾರ್ಥನಂ ಸಮರದೊಳ್ ಕೊಂದು ಸುಂ |
ಮಾನದಿಂದೈತಪ್ಪನೆಂದು ಪೊಗಳಲ್ ಕೇಳಿ ಹಮ್ಮೈಸಿ ಬಿದ್ದಿಳೆಯೊಳು ||
ಹಾ ನಾಥ ಕೆಟ್ಟೆನಕಟೆಂದು ಕಂಬನಿಯೊಳ್ |
ಳ್ದಾನಾರಿ ದುಃಖಾರ್ತೆಯಾಗಲಂತಃಪುರದ |
ವಿನಾಕ್ಷಿಯರ್ ಕೂಡೆ ರೋದಿಸಲ್ ಪೆರ್ಚಿತು ವಿಷಾದರವಮರಮನೆಯೊಳು ||೫೧||

ರಾಜಾಲಯ ದ್ವಾರದೊಳ್ ತೇರನಿಳಿದು ನೀ |
ರಾಜನಾದಿಗಳಿಂದಿದಿರ್ಗೊಂಬ ಸಂಭ್ರಮದ |
ರಾಜವದನೆಯರೊಳಗೆ ಚಿತ್ರಾಂಗದೆಯ ಶೋಕದಿಂದಮಾರ್ತೆಯರಾಗಿರೆ ||
ಈ ಜಯೋತ್ಸವದೊಳಿಂತೀ ವಿಷಾದ ಧ್ವನಿ ವ |
ಧೂ ಜನಕಿದೇಕೆನುತ ಪೊಕ್ಕನಂತಃಪುರವ |
ನಾ ಜನನಿಯಂಗದಿರವಂ ಕಂಡು ಬೆರಗಾಗಿ ಪಾರ್ಥಸುತ ನಿಂತೆಂದನು ||೫೨||

ಅಪಜಯಂ ತನಗಾದುದಿಲ್ಲ ಸಂಗ್ರಾಮದೊಳ್ |
ವಿಪರೀತಮೇತಕಿಂತಾನಂದ ಕಾಲದೊಳ್ |
ಕುಪಿತ ಮುಖನಾಗಿ ತನ್ನಂ ಜರೆದೊಡರ್ಜುನನ ಶಿರವನರಿದೆಂ ಧುರದೊಳು ||
ರಿಪುಭಯಂಕರ ಕರ್ಣ ತನಯಂಗೆ ಸಂಗರದೊ |
ಳುಪಹತಿಯನಿತ್ತೆಂ ಪ್ರಯಾಸದಿಂದದಕೆ ನೀಂ |
ತಪಿಸಲೇಕೆಂದು ಕಣ್ಣೀರ್ದೊಡೆದು ಮಾತೆಯಂ ಸಂತೈಸಲಿಂತೆಂದಳು ||೫೩||

ಲೇಸು ಮಾಡಿದೆ ಮಗನೆ ಪಗೆಯಾದನೇ ನರಂ |
ವಾಸಿ ಬಂದುದೆ ನಿನಗೆ ಮತ್ಕಾಂತನಳಿದನೇ |
ವಾಸವನ ಸೂನು ಮೃತನಾದನೇ ಧರ್ಮಾನುಜಂ ಪ್ರಾಣಮಂ ತೊರೆದನೇ ||
ವಾಸುದೇವನ ಸಖಂ ಮಾಡಿದನೇ ನಿನ್ನಂತ |
ದಾಸುರ ಪರಾಕ್ರಮದೊಳಾತ್ಮಪಿತೃಘಾತಮಂ |
ಹೇಸದೆಸಗಿದರುಂಟೆ ಸುಡಲಿ ಸುತರೇಕೆಂದಳಲ್ದಳಾ ಚಿತ್ರಾಂಗದೆ ||೫೪||

ಈ ಕರ್ಣಸೂತ್ರವಿಕರ್ನ ತಾಟಂಕವಿ |
ಶ್ರೀಕರಂ ನಿಜ ಜನನಿಗೇಕೆಂದು ಬಿಡಿಸಿದೈ |
ಸಾಕಿನ್ನು ಮಗದೊಮ್ಮಗರಳಿದುದಂ ಕೇಳ್ದೆಂತು ಸೈರಿಪಳೊ ಕುಂತಿದೇವಿ ||
ಭೂಕಾಂತನೇ ಗೈದಪನೊ ಧರ್ಮರಾಜ ನವಿ |
ವೇಕದಿಂ ಬಾಳ್ಕೆಗಿಡಿಸಿದೆಯೆಂದು ತನಯನಂ |
ಶೋಕದಿಂ ಮಿಗೆ ಬೈದಳಲ್ವ ಚಿತ್ರಾಂಗದೆ ಗುಲೂಪಿ ಬಳಿಕಿಂತೆಂದಳು ||೫೫||

ದೇವಿ ನಿಲ್ಲಿನ್ನು ಮರ್ಜುನನ ಮೃತಿ ಸಂಶಯಂ |
ಭಾವಿಸುವೊಡೆನಗೊಂದು ಕುರುಪುಂಟು ತನ್ನ ಕೇ |
ಳೀವನದೊಂಳದು ಪಾರ್ಥಂ ತನಗೆ ತೋರಿದಂ ದಾಡಿದು ದ್ರುಮಮೈದನು ||
ಆವ ದಿನಕೊಣಗುವುವು ತರುಗಲಾ ದಿನಕೆನ್ನ |
ಜೀವಕಳಿವಹುದೆಂದು ತಾನದಂ ನೋಡಿ ಬಹೆ |
ನೀ ವಿಷಾದಂ ಬೇಡ ಸೈರಿಸೆನೆ ಕಳುಹಿದ ಳುಲೂಪಿಯಂ ಚಿತ್ರಾಂಗದೆ ||೫೬||

ಕ್ರೀಡಾವನಕೆ ಪೋಗಿ ನಿಮಿಷದೊಳಹೀಂದ್ರಸುತೆ |
ನೋಡಿ ಬಂದಲ್ಲಿಯ ದವಾಗ್ನಿಯಿಂದಾ ಪಂಚ |
ದಾಡಿಮ ದ್ರುಮಮೊಣಗಿತರ್ಜುನನ ಮೃತಿ ದಿಟಂ ಪೊಪೆವಲ್ಲಿಗೆಂದು ||
ಪೀಡಿಸುವ ಶೋಕದಿಂ ಚಿತ್ರಾಂಗದೆಗೆ ನುಡಿಯೆ |
ಕೂಡೆ ಪೊರಮಟ್ಟೆಲ್ಲರುಂ ರಣಕೆ ನಡೆತಂದು |
ಜೋಡಾಗಿ ಬಿದ್ದಿರ್ದ ಕರ್ಣಸುತ ಪಾರ್ಥರಂ ಕಂಡಲ್ಲಿ ಕೆಡೆದಳಲ್ದರು ||೫೭||

ಶೀತೋಷ್ಣರುಚಿಗಳಂ ಗಗನ ಗತಿಯಂ ಬಿಟ್ಟು |
ಭೂತಳದ ಮೇಲೆ ರವಿ ಶಶಿಗಳೆಸೆವಂತೆ ಪುರು |
ಹೂತಸುತ ಕರ್ಣಜರ ತಲೆಗಳೊಪ್ಪಿರೆ ಕಂಡುಲೂಪಿ ಚಿತ್ರಾಂಗದೆಯರು ||
ಕಾತರಸಿ ಕರಗಿ ಕಂಬನಿಯೊಳಾಳ್ದಾಗ ಶೋ |
ಕಾತಿಶಯದಿಂದೆ ಪಾರ್ತನ ಪಾದದೊಳ್ ಪೊರ |
ಳ್ದಾತನ ಗುಣಂಗಳಂ ಸಾಲ್ಗೊಳಿಸಿ ಬಣ್ಣಿಸಿ ಪೊರಳ್ದು ಗೋಳಿಡುತಿರ್ದರು ||೫೮||

ನಿನ್ನಂಗ ಸಂಗಮನಗಲ್ದಾಯ್ತು ಪಲಕಾಲ |
ಮಿನ್ನೊಮ್ಮೆ ನೆರೆಯಲಾಗದೆ ನಾಥ ಮೂಜಗದೊ |
ಳುನ್ನಿಸಲ್ ನಿನಗೆ ಪಡಿಯಹರುಂಟೆ ರೂಪ ಗುಣ ವಿಕ್ರಮ ಪ್ರೌಢಿಗಳೊಳು ||
ಭಿನ್ನಿಸದೆ ಕೆಚ್ಚೆದೆಯ ಸತಿಯರಾವಸುವಿಡಿದೆ |
ವಿನ್ನೆಗಂ ಕೇಳ್ದೆಂತು ಸೈರಿಪರೋ ಕಾಂತದೊಳ್ |
ನನ್ನಿಯುಳ್ಳರಸಿಯರ್ ದ್ರೌಪದಿ ಸುಭದ್ರೆಯರದೆಂತುಳಿವರಕಟೆಂದರು ||೫೯||

ಅಡಿಯೊಳ್ ಪೊರಳ್ದು ಕಾಯವನಪ್ಪಿ ಕೈಗಳಂ |
ಪಿಡಿದುರಸ್ಥಳಕೆ ತೆಗೆದೊಂದಿಸಿ ಕೊರಲ್ಗೆ ಕಡಿ |
ವಡೆದ ತಲೆಯಂ ಕೂಡಿ ನೋಡಿ ಮುಂಡಾಡಿ ಪಣೆಗಿಟ್ಟು ಮೊಗಮಂ ಚುಂಬಿಸಿ ||
ಒಡನೊಡನೆ ಪಾರ್ಥನ ಚರಿತ್ರಮಂ ಸಾಲ್ಗೊಳಿಸಿ |
ನುಡಿನುಡಿಗಳಲ್ದು ಕೆಲದೊಳ್ ಕಡೆದ ಕರ್ಣಜಂ |
ಗೊಡಲುರಿಯೊಳಕಟ ಸುತ ಹಾಯೆಂದು ಮರುಗಿದರುಲೂಪಿ ಚತ್ರಾಂಗದೆಯರು ||೬೦||

ಬಳಿಕ ಚಿತ್ರಾಂಗದೆ ಕುಮಾರನಂ ನೋಡಿ ಕೊಲೆ |
ಗೆಳಸಿದೈ ಜನಕಂಗೆ ಜನನಿಯರ್ ನಾವಿರ್ವ |
ರುಳಿಯಲೇಕಿನ್ನಕಟ ವೈಧವ್ಯಮಂ ತಾಳಬಲ್ಲೆವೆ ಮಹೀತಳದೊಳು ||
ಸೆಳೆದು ಪೊಡೆ ಖಡ್ಗದಿಂದೆವಿಶಿರಂಗಳಂ |
ಬಳಿಕೈದೆ ಭಾರ್ಗವಂ ಕೊಂದುದಿಲ್ಲದೆ ತಾಯ |
ನಳುಕದಿರ್ ಪಿತನ ಮಾತೃದ್ವಯದ ವಧೆ ನಿನಗೆ ಸಫಲಮಾದಪುದೆಂದಳು ||೬೧||

ತಾಯ ಮಾತಂ ಕೇಳ್ದು ಶೋಕಕಲುಷಿತನಾಗಿ |
ಪ್ರೀಯದಿಂ ಪೋಗಿ ಕಂಡೊಡೆ ತನುಜನಲ್ಲೆಂದು |
ನೋಯೆ ನುಡಿದಾಹವಂ ಬೇಕೆಂದೊಡೀತನಂ ಕೊಂದೆ ನಾಂ ಪಂತಮೆಂದು ||
ದಾಯತಪ್ಪಿದ ಬಳಿಕ ಪೇಳ್ದೊಡೇನಹುದಿನ್ನು |
ಹೇಯಮಾದುದು ತನ್ನ ಬಾಳ್ಕೆ ಪಿತೃವಧೆಯೊಳೀ |
ಕಾಯಮಂ ಬಿಡುವೆನೀಗಲೆ ನೋಳ್ಪುದೆಂದವಂ ಕಿಚ್ಚುವುಗಲನುವಾದನು ||೬೨||

ತಂದೆಯಂ ಕೊಂದುಳಿದನೆಮದು ಲೋಕದ ಜನಂ |
ನಿಂದಿಸದೆ ಬಿಡದಿದಕೆ ನಿಷ್ಕೃತಿಗಳಂ ಕಾಣೆ |
ನೊಂದು ಮಂತ್ರಧಾನ ಜಪ ತೀರ್ಥ ಯಾಗ ಯೋಗಂಗಳಿಂ ಕಳೆದುಕೊಳಲು ||
ಸಂದಿಗ್ದಮಾಗಿರ್ದ ಪಾತಕಂ ಪೋಪುದು ಮು |
ಕುಂದಸ್ಮರಣೆಯಿಂದಮರ್ಜುನಂ ವೈಷ್ಣವಂ |
ಬಂದುದಪಕೀರ್ತಿ ನಾಂ ನಾಚದೆಂತಿರ್ದಪೆಂ ಪುಗುವೆನಗ್ನಿಯೊಳೆಂದನು ||೬೩||

ಅನಲಪ್ರವೇಶಮಂ ನಿಶ್ಚಯಿಸಿ ಬಭ್ರುವಾ |
ಹನನಗುರು ಚಂದನದ ಕಾಷ್ಠಂಗಳಂ ತರಿಸು |
ವನಿತ ರೊಳ್ ಕಂಡು ಚಿತ್ರಾಂಗದೆ ಕನಲ್ದು ಸುತನಂ ಬೈದು ಫಲುಗುಣಂಗೆ |
ವನಜನಾಭಂ ಮಿತ್ರನಿನ್ನೆಗಂ ಮನದೊಳಂ |
ದನುಪಮ ಕೃಪಾಳು ತಾನಿಲ್ಲಿ ಗೈದದೆ ಮಾಣ್ದ |
ಪನೆ ಸೈರಿಸನ್ನೆಗಂ ನರನ ಜೀವಕ್ಕೆ ಪೊಣೆ ದೇವಪುರ ಲಕ್ಷ್ಮೀಶನು |||೬೪||