ಸೂಚನೆ ||
ಇಂದ್ರಜಂ ತುರಗಂಗಳಂ ಕಾಣದಿರೆ ನಾರ |
ದಂ ದೃಷ್ಟಿಗೋಚರಕ್ಕೈದಿ ವಿಸ್ತರಿಸಿದಂ |
ಚಂದ್ರಹಾಸ ಕಥಾವಿಶೇಷಮಂ ಕರ್ಣ ಪೀಯೂಷಮಂ ಪ್ರೀತಿಯಿಂದೆ ||
ಭೂಮಿಪತಿ ಕೇಳ್ ಬಳಿದ ಸೌರಾಷ್ಟ್ರದಿಂದೆ ಸು |
ತ್ರಾಮ ಸುತನಸುರಾರಿ ಸಹಿತ ಕುದುರೆಗಳ ಕೂ |
ಡಾ ಮಹಾನದವನುತ್ತರಿಸೆ ನಡೆತರುತಿರ್ದನಾ ಪಥದೊಳೈಕಿಲಿಂದೆ ||
ಹೇಮಂತ ಶೈಶಿರದ ಮಾಗಿ ಮಡಲಿಡೆ ತರಣಿ |
ಸೋಮನಂತಿರೆ ಬಿಸಿಲ್ ಬೆಳುದಿಂಗಳ ವೊಲಾಗೆ |
ತಾಮರಸ ರಾಜಿ ನಸಿದುವು ಕುಗ್ಗಿದುವು ಕೋಗಿಲೆಯ ಕಂಠಕಲರವಗಳು ||೧||
ಬಾಲೆಯರ ಕಡೆಗಣ್ಣ ಬಾಣದಿಂದಂಗಜಂ |
ರೋಲಂಬ ರಾಜಿ ಸೊಕ್ಕಾನೆಗಳ ಸೊಗಡಿಂದೆ |
ಕಾಲಮಂ ಕಳೆವೊಲಾದುದು ಪೂಗಳಿಲ್ಲದೆ ಮಸುಳ್ದುವಿನ ಶಶಿ ರುಚಿಗಳು ||
ಜ್ವಾಲೆ ಶೀತಳಮಾದುದಗ್ನಿಯಿಂ ಬಿಟ್ಟು ಕಾಂ |
ತಾಲಿಂಗನವನೆ ಬಯಸಿದುದು ಕಾಮುಕ ಜನಂ |
ಮೂಲೋಕಮಂ ಮಾಗಿ ನಡುಗಿಸಿತು ಮೇಣುಡುಗಿಸಿತು ಪೆರ್ಚಿದೈಕಿಲಿಂದೆ ||೨||
ಉತ್ತಮಾಂಗದ ಗಂಗೆಯಂ ಸಾಗರಕೆ ಕಳುಹಿ |
ಪೊತ್ತ ಶಶಿಕಲೆಯ ನಂಬರಕಿಟ್ಟು ತನ್ನ ನಡು |
ನೆತ್ತಿಯೊಳ್ ಕಣ್ಣತೆರೆದಗ್ನಿಯಂ ತಾಳ್ದುದಲ್ಲದೆ ಕಾಂತೆಗರೆಮೆಯ್ಯನು ||
ತೆತ್ತು ಬಿಡದಪ್ಪಿಕೊಂಡಿರ್ಪನೀಶ್ವರ ನೆನಲ್ |
ಮತ್ತೆ ಕಾಮಿನಿಯರ ಕುಚಾಲಿಂಗನವ ನುಳಿದೊ |
ಡೆತ್ತಣದು ಹಿಮಕೆ ಭೇಷಜಮೆಂದು ವಿರಹಿಗಳ್ ಕೂರ್ಪರ ನರಸುತಿರ್ದರು ||೩||
ನೆರೆ ಲೋಭಿ ವಿತ್ತಮಂ ಸುಯ್ದಾನಮಂ ಮಾಳ್ಪ |
ತೆರದಿಂದೆ ಕಾಮಿನೀ ಪ್ರಣಯಮಂ ನಂಬಿರ್ಪ |
ನರಿವಿನಂತಿಡಿದ ಶೈಶಿರದ ಶೀತಕೆ ಪಗಲಿರುಳ್ತಮ್ಮ ಗೂಡುಗಳನು ||
ಪೊರಮಟ್ಟು ಪಾರಲೊಲ್ಲದೆ ವಾಯಸ ಪ್ರತಿತಿ |
ಗರಿಗಳಂ ಪೊದಿಸಿ ಮಗ್ಗುಲೊಳಿಟ್ಟು ಕೋಗಿಲೆಯ |
ಮರಿಗಳಂ ಮೆಯ್ಯೊಳ್ ಪುದುಗಿಕೊಂಡು ಮರುಕದಿಂದೈದೆ ಪಾಲಿಸುತಿರ್ದುವು ||೪||
ಭುವನಮಂ ತೀವಿರ್ದ ಹಿಮಮುಮಂ ತಮಮುಮಂ |
ತವಿಸುವ ತವಕದಿಂದಮವಗಡಿಸಿ ಜವಗೆಡಿಸಿ |
ಬವಣೆಗೊಂಡಭ್ರದೊಳ್ತೊಳಲುತ್ತೆ ಬಳಲುತ್ತೆ ಬಂದೊಡಂ ಮತ್ತೆ ಬಿಡದೆ ||
ಕವಿಯಲ್ ಪ್ರತಾಪದೇಳಿಗೆ ನಂದಿ ಮಿಗೆ ಕುಂದಿ |
ರವಿ ತಣ್ಣಗಾದನೆನೆ ಕಾಣಿಸಿತು ಮಾಣಿಸಿತು |
ತವೆ ತಕ್ಕೆಯೊಳ್ನೆರೆಯ ಬಲ್ಲರೊಳ್ ನಲ್ಲರರೊಳ್ ಮುನಿಸನಾ ಶೈಶಿರದೊಳು ||೫||
ಉರ್ವೀಶ ಕೇಳ್ಬಳಿಕ ಸೇನಾ ಸಮಗ್ರದಿಂ |
ಗೀರ್ವಾಣ ಪತಿ ನಂದನಂ ಬಹಳದೇಶ ವನ |
ಪರ್ವತ ನದೀ ನದಂಗಳನುತ್ತರಿಸಿ ಕುದುರೆಗಳ ಹಿಂದುಗೊಂಡು ಬರಲು ||
ತರ್ವಾಯೊಳವು ಹಾಯ್ದುವನಿಲ ಜವದಿಂ ಪಡೆಯೊ |
ಳೊರ್ವರುಮುರಿಯದಂತೆ ಕುಂತಳ ನಗರಕೆ ಬಲ |
ಗರ್ವಿತ ಚಂದ್ರಹಾಸಾಖ್ಯನರಸಲ್ಲಿಗವನಾ ಹರಿಗಳಂ ತಡೆದನು ||೬||
ಬೆಂಗಾವಲಾಗಿರ್ದ ಪಟುಭಟರ್ ವಿರಿದ ತು |
ರಂಗಯುಗಮಂ ಕಾಣದೈತಂದು ಸಿತವಾಹ |
ನಂಗೆ ಬಿನ್ನೈಸಿದರ್ಜೀಯ ಪೋದುವು ಹರಿಗಳರಸಿದೊಡೆ ಗೋಚರಿಸವು ||
ಮುಂಗೈವ ಕಜ್ಜಮಂ ಬೆಸಸೆನೆ ಧನಂಜಯಂ |
ಮಂಗಳಾತ್ಮಕನ ಮೊಗನೋಡಿ ಚಿಂತಿಸುವಿನಂ |
ಕಂಗೊಳಿಸಿತಾಗಸದೊಳೊಂದು ಬೆಳಗೆರಡನೆಯ ದಿನಮಣಿಯ ತೇಜದಂತೆ ||೭||
ಕ್ರೀಡೆಯಿಂ ಮಾಧವನುತ ಪ್ರಸಂಗವನುಂಟು |
ಮಾಡುತ್ತೆ ಸುಮನೋನುರಾಗದಿಂದಿರದೆ ನಲಿ |
ದಾಡುತ್ತೆ ಕುಜವಂಶ ಭೇದನಂಗೆಯ್ಯುತ್ತ ಸಾಮಜೋಲ್ಲಾಸದಿಂದೆ ||
ಪಾಡುತ್ತೆ ವಿಷ್ಣುಪದ ಕಮಲ ಮಧುಕರನೆಂಬ |
ರೂಢಿಯಂ ನಿಜವಾಗಿ ಕಾಣಿಸುವ ತೆರದಿಂದೆ |
ನೋಡುವರ ಕಣ್ಗೆ ಗೋಚರಿಸಿದಂ ನಾರದ ಮುನೀಶ್ವರಂ ಬಾಂದಳದೊಳು ||೮||
ಕೆಂಜೆಡೆಯ ಸುಲಿಪಲ್ಲ ಚೀರ ಕೃಷ್ಣಾಜಿನದ |
ಮಂಜುಲ ತುಲಸಿಯ ದಂಡೆಯ ಕೊರಳ ತಾವಡದ |
ರಂಜಿಸುವ ಪದ್ಮಾಕ್ಷಗಳ ಲಲಿತ ಮೇಖಲೆಯ ಚಾರುತರದುಪವೀತದ ||
ಕಂಜನಾಭ ಧಾನದಮಲ ವೀಣಾಕ್ವಣಿತ |
ಸಂಜಾತ ಗಾನ ಸುಖದೆಸೆವ ತೇಜೋಮಯದ |
ಪುಂಜವೆನಿಪಮರಮುನಿ ನಾರದಂ ಪಾರ್ಥಾದಿಗಳ ಕಣ್ಗೆ ಕಾಣಿಸಿದನು ||೯||
ಅಂಭೋಜಮಿತ್ರ ನಾಸರೊಳಾಗಸವನುಳಿದು |
ಕುಂಭಿನಿಗೆ ಬಂದಪನೊ ಪೇಳೆನಲ್ ಗಗನ ಪಥ |
ದಿಂ ಭಾಸುರಪ್ರಭೆಯೊಳಾ ಮುನಿಪ ನಿಳಿತಂದೊಡಸುರಾಂತಕಾದಿ ನೃಪರು ||
ಸಂಭಾವಿಸಿದರಾ ತಪೋನಿಧಿಯ ನತಿವಿನಯ |
ಗಂಭೀರ ವಾಕ್ಯದಿಂ ಬೆಸಗೊಂಡ ನುಪಚರಿಸಿ |
ಜಂಭಾರಿ ನಂದನಂ ನಾರದನನಖಿಳ ಲೋಕಸ್ಥಿತಿ ವಿಶಾರದನನು ||೧೦||
ಎಲೆ ಮುನೀಶ್ವರ ತನ್ನ ಕುದುರೆಗಳ್ ಪೋದುವೀ |
ನೆಲದೊಳಾವೆಡೆಯೊಳಿರ್ದಪುವೆಂದರಿಯೆನಿನ್ನು |
ಬಲವಂತರೀ ಸ್ಥಳದೊಳಿಲ್ಲಲೇ ಕಂಡುದಂ ತನಗೊರೆಯವೇಳ್ವುದೆಂದು ||
ಫಲುಗುಣಂ ಕೇಳ್ದೊಡಾ ನಾರದಂ ನಸುನಗುತೆ |
ಸುಲಲಿತಾಶ್ವಂಗಳೈದಿದುವು ಕುಂತಳಪುರಕೆ |
ಕಲಿ ಚಂದ್ರಹಾಸಾಖ್ಯ ನರಸಲ್ಲಿಗಾ ನೃಪಂ ಕಟ್ಟಿಕೊಂಡಿಹನೆಂದನು ||೧೧||
ಹಿಂದಣರಸುಗಳ ಬಲಮಿವನ ಹದಿನಾರರೊಳ |
ಗೊಂದು ಕಳೆಯಲ್ಲಿವಂ ಪರಮ ವೈಷ್ಣವನಿವನ |
ಮುಂದದಟರಂ ಕಾಣಿನಾಹವದೊಳೀತನ ಚರಿತ್ರಮತಿಚಿತ್ರಮೆಂದು ||
ಮಂದಸ್ಮಿತದೊಳಾ ತಪೋದನಂ ಪೇಳ್ದೊಡೆ ಪು |
ರಂದರಾತ್ಮಜನವನ ವರ್ತನವನಾದ್ಯಂತ |
ದಿಂದೆನಗೆ ವಿಸ್ತರಿಸಿ ಪೇಳ್ವುದೆನಲರ್ಜುನಂಗಾ ತಪೋನಿಧಿ ನುಡಿದನು ||೧೨||
ಸಮಯಮಲ್ಲಿದು ನಿನಗೆ ಪಾರ್ಥ ಸಿಕ್ಕಿರ್ದಪುವು |
ವಿಮಲಮಖ ವಾಜಿಗಳ್ ಚಿಂತಿಸುತಿಹಂ ಮಹೀ |
ರಮಣವಿಭಪುರದೊಳೆನೆ ಫಲುಗುಣಂ ನರರ ಬಾಳ್ ಚಿರಕಾಲಮಿಪ್ಪುದಿಲ್ಲ ||
ಭ್ರಮೆಯಿಂದೆ ಕೇಳದಿರಬಹುದೆ ವೈಷ್ಣವ ಕಥೆಯ |
ನಮಮ ತನಗಾವ ಪೊಳ್ತುಭಯ ಬಲಮಧ್ಯದೊಳ್ |
ಕಮಲಾಕ್ಷನೊರೆದ ಗೀತಾಮೃತವನಾಲಿಸಿದೆನೆನೆ ಮುನಿಪನಿಂತೆಂದನು ||೧೩||
ಇನ್ನೊರೆವೆನಾಲಿಸಾದೊಡೆ ಪಾರ್ಥ ಧಾರ್ಮಿಕಂ |
ಮುನ್ನೊರ್ವನುಂಟು ಕೇರಳ ದೇಶದವನಿಪಂ |
ಸನ್ನುತ ಗುಣೋದಯಂ ಮೇಧಾವಿಯೆಂಬವಂ ಬಲಯುತಂ ಬಳಿಕವಂಗೆ ||
ತನ್ನ ಪಟ್ಟದ ರಾಣಿಯೊಳ್ ಬಹಳ ಭಾಗ್ಯ ಸಂ |
ಪನ್ನ ನೆಡೆದಂಘ್ರಿಗರುವೆರಳಾಗಿ ದಿವದೊಳು |
ತ್ಪನ್ನನಾದಂ ಮೂಲನಕ್ಷತ್ರದಿಂದರಿಷ್ಟಾಂಶದೊಳ್ ಸುಕುಮಾರನು ||೧೪||
ಪುತ್ರೋತ್ಸವಂ ಮಾಡಿ ಕೆಲವು ದಿನಮಿರೆ ನೃಪಂ |
ಶತ್ರುಗಳ್ ಬಂದು ನಿಜನಗರಮಂ ಮುತ್ತಿದೊಡೆ |
ಕ್ಷತ್ರಧರ್ಮದೊಳವರೊಡನೆ ಯುದ್ಧರಂಗದೊಳ್ಪೊಯ್ದಾಡಿ ಮಡಿಯೆ ಕೇಳ್ದು ||
ಚಿತ್ರಭಾನು ಪ್ರವೇಶಂಗೈದಳಂದು ಶತ |
ಪತ್ರಲೋಚನೆ ಪತಿವ್ರತೆಯಾಗಿ ಬಳಿಕೆಲೆ ದ |
ರಿತ್ರೀಶ್ವರನ ರಾಜ್ಯಮಂ ತೆಗೆದುಕೊಂಡಹಿತರಾಳ್ದರದನೇವೇಳ್ವೆನು ||೧೫||
ಬಳಿಕೋರ್ವ ದಾದಿ ಶಿಶುವಂ ಕೊಂಡು ಪೊರಮಟ್ಟು |
ತೊಳಲಿ ಬಳಲುತೆ ಮೆಲ್ಲಮೆಲ್ಲನೈತಂದು ಕುಂ |
ತಳ ನಗರಮಂ ಪೊಕ್ಕಳಲ್ಲಿ ಸಾಕಿದಳರ್ಭಕನನತಿ ಪ್ರೇಮದಿಂದೆ ||
ಎಳೆಯಂಗೆ ಬೇಕಾದುದಿಲ್ಲದಿರೆ ಮರುಗುವಳ್ |
ಪೊಳಲೊಳಗೆ ತಿರಿದು ಹೊರೆದಳಲುವಳ್ ಮುದ್ದಿಸಿ ಪ |
ಸುಳೆಯಭಿನಯಂಗಳ್ಗೆ ಹಿಗ್ಗಿ ಬಿಸುಸುಯ್ಯಳವಳನುದಿನದೊಳಾರ್ತೆಯಾಗಿ ||೧೬||
ಇಡೆ ತೊಟ್ಟಲಿಲ್ಲಾಡಿಸುವರಿಲ್ಲ ನಿನಗೆ ಪೊಂ |
ದೊಡಿಗೆಯಿಲ್ಲಿರೆ ನಿಳಯಮಿಲ್ಲ ಬಿಡದೆರೆವ ನೀ |
ರ್ಕುಡಿವಾಲ್ಗಳೆಣ್ಣೆ ಬೆಣ್ಣೆಗಳಿಲ್ಲ ಲಾಲಿಸಿ ನಲಿವ ತಂದೆತಾಯ್ಗಳಿಲ್ಲ ||
ಪೊಡವಿಪತಿ ಕೇರಳಾಧಿಶ್ವರಂ ಪರಕೆಯೊಳ್ |
ಪಡೆದೆನಿದಕೀಗ ನಿನ್ನಂ ನೋಡುವೆನ್ನ ಕ |
ಣ್ಣೊಡೆಯದಕಟಕಟೆಂದು ಬಿಸುಸುಯ್ದಳಲ್ದು ಮರುಗವಳಾಕೆ ದಿನದಿನದೊಳು ||೧೭||
ಮೊಳೆವಲ್ಲುಗುವಜೊಲ್ಲು ದಟ್ಟಡಿ ತೊದಲ್ವನುಡಿ |
ತೊಳತೊಳಗುತಿಹ ಸೊಬಗು ಮೆರೆವ ನಗೆಮೊಗದ ಬಗೆ |
ಪೊಳೆವ ಕಣ್ಮಿಸುಪ ನುಣ್ಗದಪಿಗೆಣೆ ಚೆಲ್ವಪಣೆ ಕುರುಳ ಜೋಲಂಬೆಗಾಲು ||
ಸುಳಿ ನಾಭಿ ಮಿಗೆ ಶೋಭಿಪಧರದೆಡೆ ಬಟ್ಟ ದೊಡೆ |
ನಳಿತೋಳಿಡಿದ ಧೂಳಿ ಸೊಗಯಿಸುವ ವರ ಶಿಶುವ |
ನಲಿದಾಡಿಸುವ ರೂಢಿಯಿಲ್ಲೆಂದು ನೆರೆ ನೊಂದು ಮರುಗವಳಜಸ್ರಮವಳು ||೧೮||
ಬಾಲಕನ ಲೀಲೆಯಂ ಕಂಡು ಹಿಗ್ಗುವಳೊಮ್ಮೆ |
ಲಾಲನೆಗಳಿಲ್ಲೆಂದಳಲ್ದು ಮರುಗುವಳೊಮ್ಮೆ |
ಪಾಲಿಸಿದಳಿಂತು ನಡೆನುಡಿಗಳಂ ಕಲಿವಲ್ಲಿ ಪರಿಯಂತಮಾ ಶಿಶುವನು ||
ಮೇಲೆ ರುಜೆ ಬಂದಡಸಿ ವಿಧಿವಶದೊಳಾ ಧಾತ್ರಿ |
ಕಾಲನರಮನೆಗೈದಿದಳ್ ಬಳಿಕ ಪಸುಳೆಗೆ ನಿ |
ರಾಲಂಬಮಾಗಲಾ ಪಟ್ಟಣದೊಳೆಲ್ಲರ್ಗೆ ಕಾರುಣ್ಯಕೀಡಾದನು ||೧೯||
ಚೆಲ್ವಶಿಶು ಬೀದಿಯೊಳ್ ಬಂದು ದೇಸಿಗನಾಗಿ |
ನಿಲ್ವನಂ ಕಂಡ ಕಂಡಬಲೆಯರ್ ಕರೆಕರೆದು |
ಮೆಲ್ವ ತನಿವಣ್ಗಳಂ ಕಜ್ಜಾಯ ಸಕ್ಕರೆಗಳಂ ಕುಡುವರೆತ್ತಿಕೊಂಡು ||
ಸೊಲ್ವ ಮಾತುಗಳನಾಲಿಸಿ ಮುದ್ದಿಸುವ ರೀವ |
ರೊಲ್ವುದಂ ಮಜ್ಜನಂಗೈಸಿ ಮಡಿಯಂ ಪೊದಿಸಿ |
ಮೆಲ್ವಾಸಿನೊಳ್ ಮಲಗಿಸುವರಳ್ತಿಯಿಂದೊಸೆದು ತಂತಮ್ಮ ಮಕ್ಕಳೊಡನೆ ||೨೦||
ಪರಪುಟ್ಟನಾಗಿ ಪಟ್ಟಣದ ಬೀದಿಗಳೊಳಗೆ |
ತಿರುಗುತಿಹ ಬಾಲಕನ ರೂಪಮಂ ಕಂಡು ಕರೆ |
ಕರೆದು ಭವನಂಗಳ್ಗೆ ಕೊಂಡೊಯ್ದು ಗಣಿಕೆಯರ್ ತಮತಮಗೆ ಮೋಹದಿಂದೆ ||
ಸರಸ ಪರಿಮಳ ಸುಗಂಧಂಗಳಂ ತೀಡಿ ಕ |
ತ್ತುರಿಯ ತಿಲಕವನಿಟ್ಟು ಕಂಮಲರ್ ಮುಡಿಸಿ ಕ |
ಪ್ಪುರ ವೀಳೆಯಂಗೊಟ್ಟು ಮಡಿತೊಡಿಗೆಗಳಿನೈದೆ ಸಿಂಗರಿಸಿ ಕಳುಹುತಿಹರು ||೨೧||
ಆಡುವೆಳೆಮಕ್ಕಳೊಡನಾಡುವಂ ಲೀಲೆ ಮಿಗೆ |
ನೋಡುವಚ್ಚರಿಗಳಂ ನೋಡುವಂ ಬಾಲಕರ |
ಕೂಡೆ ಮನೆಮನೆಗಳೊಳಗಾಡುತಿಹನೆಲ್ಲರ್ಗೆ ಮುದ್ದಾಗಿ ಮೋಹಿಸುವನು ||
ನೋಡುವರ ಪಾಡುವರನಾಡೆ ಸಾಧನೆಗಳಂ |
ಮಾಡುವರ ನರ್ಥಿಯಿಂ ಬೇಡುವರ ನೆರವಿಯೊಳ್ |
ಕ್ರೀಡಿಸುವನಾಪುರದ ರೂಢಿಸಿದ ಬೀದಿಯೊಳ್ ಪಸುಳೆ ಪರಪುಟ್ಟನಾಗಿ ||೨೨||
ಬಟ್ಟೆಯೊಳ್ ಪುಣ್ಯವಶದಿಂದರ್ಭಕನ ಕಣ್ಗೆ |
ಪುಟ್ಟ ಸಾಲಗ್ರಾಮದೊಂದು ರಮಣೀಯ ಶಿಲೆ |
ಕಟ್ಟೆಸಕದಿಂದೆ ಕಾಣಿಸಲದಂ ತಾನೆತ್ತಿಕೊಂಡು ಕೆಳೆಯರ್ಗೆ ತೋರಿ ||
ಬಟ್ಟಗಲ್ಲಿಂತು ವರ್ತುಳದಿಂದೆ ಚೆಲ್ವಾಗಿ |
ಪುಟ್ಟುವುದೆ ಪೊಸತೆಂದು ಪಿಡಿದಾಡುತೊಡನೆ ಬೈ |
ತಿಟ್ಟು ಕೊಂಬಂ ಬಾಯೊಳನವರತ ಮಿರಿಸಲ್ಕೆ ತನಗೆ ಮನೆಯಿಲ್ಲವಾಗಿ ||೨೩||
ತೊಳಪ ಸಾಲಗ್ರಾಮ ದುಪಲಮಂ ಬಾಲಕಂ |
ಕೆಳೆಮಕ್ಕಳೊಡನಾಟದಶ್ಮಗೋಳಕಮೆಂದು |
ತಿಳಿದಣ್ಣಿ ಕಲ್ಲೊಡ್ಡಿಗಳನಾಡುತದರಿಂದೆ ಗೆಲ್ದೆಲ್ಲರಂ ಜರೆಯುತ ||
ಕಳುಕಳಿಸಿ ನಗುತತಿಸ್ನೇಹಿದಿಂ ಕ್ರೀಡೆಯಂ |
ತಳೆದಾಗಳುಣಿಸುಗಳ ನುಂಬಲ್ಲಿ ತನ್ನ ಕೈ |
ದಳಿಕೆ ತಂದುಳಿದ ಪೊಳಿನೊಳಾವಗಂ ಬಾಯೊಳಿರಿಸಿಕೊಂಡಿರುತಿರ್ಪನು ||೨೪||
ಕುಂತೀಕುಮಾರ ಕೇಳಾಮಹ ಪತ್ತನದೊ |
ಳಿಂತರ್ಭಕರೊಳಾಡುತಿಹ ಪಸುಳೆಗೈದು ಬರಿ |
ಸಂ ತುಂಬಿತಾ ಸಮಯದೊಳ್ ಪ್ರಬಲದಿಂ ಪ್ರವರ್ತಿಪ ದುಷ್ಟಬುದ್ಧಿಯೆಂಬ ||
ಕುಂತಳೆಂದ್ರನ ಮಂತ್ರಿ ತನ್ನ ಮನೆಯೊಳ್ ವಿಪ್ರ |
ಸಂತರ್ಪಣಂಗೆಯ್ಯಲಾ ದ್ವಿಜರ್ ಭೋಜನಾ |
ನಂತರದೊಳೈದೆ ಸತ್ಕೃತರಾಗಿ ಕುಳ್ಳಿರ್ದು ಪರಸುತಲ್ಲಿರುತಿರ್ದರು ||೨೫||
ಅಲ್ಲಿ ಕೆಳೆಯರೊಳಾಡುತಿರ್ದ ಶಿಶುವಂ ಕಂಡ |
ರುಲ್ಲಾಸದಿಂದೆಸೆವ ಭೂಸುರರ್ ಬಾಲಕನ |
ಸಲ್ಲಲಿತ ರಾಜಲಕ್ಷಣಕೆ ಬೆರಗಾದರವನಂಗಮಂ ನೋಡಿನೋಡಿ ||
ನಿಲ್ಲದನುರಾಗದಿಂದಾರ ಸುತನೀ ತರುಣ |
ನೆಲ್ಲಿಂದ ಬಂದನೆಂದಾ ದುಷ್ಟಬುದ್ದಿಯಂ |
ಮೆಲ್ಲನೆ ವಿಚಾರದಿಂ ಕೇಳ್ದೊಡಾ ವಿಪ್ರರ್ಗೆ ನಗುತಾತನಿಂತೆಂದನು ||೨೬||
ಈಪುರದೊಳೆನಿತಿಲ್ಲನಾಥರಾಗಿಹ ಬಾಲ |
ರೀಪರಿಯೊಳೆತ್ತಣವ ನಾರಸುತನೆಂದರಿಯೆ |
ವೀ ಪಸುಳೆಯಂ ರಾಜಕಾರ್ಯದೊಳಗಿಹೆವಿದರ ಚಿಂತೆ ನಮಗೇತಕೆನಲು ||
ಆ ಪಾರ್ವರೆಂದಿರ್ದೊಡಂ ಚಾರುಲಕ್ಷಣದೊ |
ಳೀ ಪೊಳಲ್ಗೀ ಕುಂತಳಾಧಿಶನಾಳ್ವ ನ |
ವಿ ಪೊಡವಿಗೊಡೆಯನಹ ನೀತನಂ ನೀನಿರಿಸಿಕೊಂಡು ರಕ್ಷಿಪುದೆಂದರು ||೨೭||
ಕ್ರೂರ ನಕ್ರಾಕುಲದೊಳಿಡಿದಿರ್ದ ಪೆರ್ಮಡು ಗ |
ಭೀರ ನಿರ್ಮಲ ಜಲದೊಳೆಸೆವಂತೆ ಮನದೊಳ್ ಕ |
ಠೋರತರ ಭಾವಮಂ ತಳೆದು ಬಹಿರಂಗದೊಳ್ ವಿನಯಮುಳ್ಳಾತ ನಾಗಿ ||
ಚಾರು ಲಕ್ಷಣದ ಶಿಶುವಂ ನೋಡಿ ಧರೆಯ ಬೃಂ |
ದಾರಕರ ನುಡಿಗೊಪ್ಪಿದವೊಲಿರ್ದು ಬಳಿಕ ಸ |
ತ್ಕಾರದಿಂದಾ ವಿಪ್ರರಂ ಕಳುಹಿದಂ ದುಷ್ಟಬುದ್ಧಿ ನಿಜಭವನದಿಂದೆ ||೨೮||
ಈ ಕುಂತಳೇಂದ್ರಂಗೆ ಸುತರಿಲ್ಲ ರಾಜ್ಯ ಮೆನ |
ಗೇಕಾಧಿಪತ್ಯಮಾಗಿರ್ದಪುದು ಮುಂದಿವಂ |
ಭೂಕಾಂತನಾದಪಂಗಡ ವಿಪ್ರರೆಂದ ನುಡಿ ತಪ್ಪದೆನ್ನಾತ್ಮಜರ್ಗೆ ||
ಬೇಕಾದ ಸಂಪದಂ ಬಯಲಾಗಿ ಪೋಪುದೆಂ |
ದಾ ಕುಮತಿ ಬೇರೊಂದುಪಾಯಮಂ ಚಿಂತಿಸಿ ಭ |
ಯಾಕಾರದೊಡಲ ಚಂಡಾಲರಂ ಕರೆಸಿ ಬೆಸಸಿದನಾರುಮರಿಯದಂತೆ ||೨೯||
ಕಾನನಾಂತರದೊಳೀ ತರಳನಂ ಕೊಂದು ನೀ |
ವೇನಾದೊಡಂ ಕುರುಪುತಂದೆನಗೆ ತೋರ್ಪುದೆಂ |
ದಾ ನರೇಂದ್ರನ ಮಂತ್ರಿ ಬೆಸಸಿದೊಡೆ ಪಶುಘಾತಕಿಗಳಾಡುತಿಹ ಶಿಶುವನು ||
ಹೀನ ದಯದಿಂದೆ ಪಿಡಿದೆತ್ತಿಕೊಂಡೊಯ್ದರ್ ಭ |
ಯಾನಕದೊಳಂದು ಕೊಲೆಗಳಸಿ ಪ್ರಹ್ಲಾದನಂ |
ದಾನವೇಶ್ವರನಾಜ್ಞೆಯಿಂ ಕಾಳರಕ್ಕಸರ್ ಬಂದು ಕೈದುಡುಕಿದಂತೆ ||೩೦||
ಪಾತಕಿಗಳೊಡಲೊಳಿಹ ಪರಮಾತ್ಮನಂತೆ ಯಮ |
ದೂತರೆಳೆತಂದಜಾಮಿಳನಂತೆ ಕಾಕ ಸಂ |
ಘಾತದೊಳ್ ಸಿಕ್ಕರ್ದ ಕೋಗಿಲೆಯ ಮರಿಯಂತೆ ನಲುಗಿ ಕತ್ತಲೆಯೊಳಿರ್ದ ||
ಶೀತಲ ಮರೀಚಿ ಲಾಂಛನದಂತೆ ಬಹಳ ಕೋ |
ಪಾತಿಶಯದೊಳಗಿಹ ವಿವೇಕದಂತಾ ಪಶು |
ಘಾತಕಿಗಳೆತ್ತಿಕೊಂಡೊಯ್ವ ಬಾಲಕನಿರ್ದನವರೆಡೆಯೊಳಂಜುತಳುತೆ ||೩೧||
ಪೆಗಲೊಳೇರಿಸಿ ಬನಕೆ ಚಂಡಾಲರೊಯ್ಯುತಿರೆ |
ಮಿಗೆ ಬೆದರಿ ಭಯದಿಂದೆ ಬಾಲಕಂ ಬಾಯೊಳಾ |
ವಗಮಿರಿಸಿಕೊಂಡಿರ್ಪ ದಿವ್ಯ ಸಾಲಗ್ರಾಮದುಪಲದತಿಮಹಿಮೆಯಿಂದೆ ||
ಬಗೆದೋರಲಾಗ ಮುರಹರ ಕೃಷ್ಣ ಕಮಲಾಕ್ಷ |
ಖಗರಾಜಗಮನ ಸಲಹೆಂದು ಚೀರಿದೊಡವನ |
ಮೊಗನೋಡಿ ಕರುಣದಿಂ ಕಟುಕರೆದೆ ಕರಗಿದುದದೆಂತೊ ಹರಿನಾಮದೇಳ್ಗೆ ||೩೨||
ಒಯ್ದು ಪಸುಳೆಯನರಣ್ಯದೊಳಿರಿಸಿ ಮರುಗಿ ಬಿಸು |
ಸುಯ್ದು ಪಶುಘಾತಕಿಗಳಾ ದುಷ್ಟಬುದ್ಧಿಯಂ |
ಬಯ್ದು ಶಿಶುವಧೆಗಳುಕಿ ನಿಂದು ನೋಡುತೆ ಕಂಡರರ್ಭಕನೆಡೆದ ಕಾಲೊಳು ||
ಅಯ್ದಲ್ಲದೊಂದು ಬೆರಲಿರ್ಪುದಂ ಬಳಿಕದಂ |
ಕುಯ್ದು ಕುರುಪಂ ಕೊಂಡು ತಮ್ಮ ದಾತಾರನೆಡೆ |
ಗೆಯ್ದಿ ತೋರಿದೊಡವನವರ್ಗಳಂ ಮನ್ನಿಸಿ ಮಹೋತ್ಸವದೊಳಿರುತಿರ್ದನು ||೩೩||
ಇತ್ತಲಾ ವಿಪಿನದೊಳ್ ತನ್ನ ವದನದೊಳಿರ್ದ |
ವೃತ್ತ ಸಾಲಗ್ರಾಮ ಶಿಲೆಯ ಪ್ರಭಾವದಿಂ |
ದುತ್ತಮಶ್ಲೋಕನಂ ಭಜಿಸೆ ದಯೆಗೈದೆಡದ ಕಾಲ ಷಷ್ಠಾಂಗುಳಿಯನು ||
ಕತ್ತರಿಸಿಕೊಂಡುಳುಹಿ ಪೋದರಂತ್ಯರ್ ಬಳಿಕ |
ತುತ್ತಿಸಿದ ರಾಹು ತೊಲಗಿದ ಶಶಿವೊಲಿರ್ದ ನವ |
ನೆತ್ತಣದು ಬಾಧೆಗಳ್ ನರ ನಿನ್ನ ಮಿತ್ರನಂ ಮರೆವೊಕ್ಕ ಜೀವಿಗಳ್ಗೆ ||೩೪||
ಬಸಿವ ನೆತ್ತರ ಗಾಯದೆಡೆದಡಿಯ ವೇದನೆಗೆ |
ಪಸುಳೆ ಹರಿಹರಿಯೆಂದೊರಲ್ದಳುತಿರಲ್ ಕಣ್ಣೊ |
ಳೊಸರ್ವ ಬಾಷ್ಪಂಗಳಂ ಕಂಡು ಮಿಗವಕ್ಕಿಗಳ್ ನೊಂದು ಕಡು ಶೋಕದಿಂದೆ ||
ಪಸಿವು ನೀರಡಿಕೆಯಂ ತೊರೆದಲ್ಲಿ ನಿಂದುಪಚ |
ರಿಸುತಿರ್ದುವಾ ಶಿಶುವನೆಂದೊಡೆಲೆ ಪಾರ್ಥ ಕೇಳ್ |
ವಸುಮತಿಯೊಳಾರ್ತರಂ ನೋಡಿ ಮಿಗೆ ಮರುಗದಿಹ ಮಾನವಂ ಪಾಪಿಯಲ್ತೆ ||೩೫||
ಗರಿಗೆದರಿ ಕೊಡೆವಿಡಿದು ನಿಂದುವು ಬಿಸಿಲ್ಗೆ ನವಿ |
ಲೆರಕೆಯಿಂ ಬೀಸಿ ಬಿಜ್ಜಣವಿಕ್ಕಿತಂಚೆ ತುಂ |
ತುರನುದುರ್ಚಿತು ಸಾರಸಂ ಸಲಿಲದೊಳ್ ನೆನೆದ ಪಕ್ಕಂಗಳಂ ಬಿದಿರ್ಚಿ ||
ಮರುಗಿ ಮೆಲ್ನುದಿಯೊಳುಪಚರಿಸಿದುವು ಗಿಳಿಗಳ |
ಕ್ಕರೊಳಳಿಗಳರ್ಭಕನ ರೋದನದ ಕೂಡಳುವ |
ತೆರದೊಳ್ ಮೊರೆದುವಲ್ಲಿ ಕರುಬರಿದ್ದೂರಿಂದೆ ಕಾಡೊಳ್ಳಿತೆನಿಸುವಂತೆ ||೩೬||
ನಿಲ್ಲದೆ ನರಳ್ವ ಪಸುಳೆಯ ನಿರ್ಮಲಾಸ್ಯಮಂ |
ಪುಲ್ಲೆಗಳ್ ಕಂಡು ಕಾನನಕೆ ಕಾಮಿಸಿ ತಮ್ಮ |
ನಲ್ಲನೈತರಲುಮ್ಮಳಿಸಿ ವಾಹನವನರಸ ಬಂದ ಪೂರ್ಣೀಂದುವೆಂ ದು ||
ವಲ್ಲಭ ಸ್ವಾಮಿಯಂ ಬೇಡಿಕೊಳುತಿರ್ಪುವೆನೆ |
ಮೆಲ್ಲಮೆಲ್ಲನೆ ಪೊರೆಗೆ ಪೊದ್ದಿ ಬಾಲಕನಂಘ್ರಿ |
ಪಲ್ಲವದ ರುಧಿರಮಂ ಕುಡಿ ನಾಲಗೆಗಳಿಂದೆ ಮಿಗೆ ಲೇಹನಂಗೈದುವು ||೩೬||
ಕೋಗಿಲೆಯ ನಿಡುಸರಂ ಪಾರಿವದ ಕಲ್ಲುಣಿಸು |
ಗೂಗೆಗಳ ಕಣ್ದೊಳಸು ಬಕನ ಮೌನದ ಬೆರಗು |
ನಾಗದ ನಿರಾಹಾರ ಮಳಿಗಳ ಪರಿಭ್ರಮಣ ಮಿಭದ ಸೀತ್ಕಾರಂಗಳು ||
ಪೋಗಲಡಿಯಿಡಲರಿಯದಾರೈವ ಜನಮಿಲ್ಲ |
ದಾಗಹನ ಗಹ್ವರದೊಳಳುವ ಶಿಶುವಂ ನೋಡ |
ಲಾಗಿ ಬಂದೆಡೆಗೊಂಡ ದುಃಖಾತಿರೇಕಮೆಂಬಂತೆ ಕಾಣಿಸುತಿರ್ದುದು ||೩೮||
ಬಾಲಕನ ರೋದನದ ಕೂಡ ಬನದೇವಿಯರ್ |
ಗಾಳಿ ತೀಡಿದೊಡೆ ಭೋರೆಂಬ ತರುಲತೆಗಳಿಂ |
ಗೋಳಿಟ್ಟರಗ್ನಿ ಜಲ ಭೂ ಗಗನ ವಾಯು ರವಿಶಶಿಗಳ್ದೆಸೆವೆಣ್ಗಳು ||
ಹೇಳಲೇನಡವಿಯ ಚರಾಚರಂಗಳ ಜೀವ |
ಜಾಲಂಗಳುರೆ ಮರುತಿರ್ದುವನಿತರೊಳೊಂದು |
ಕೋಲಾಹಲದ ಘೋಷಮೆಲ್ಲಿಯುಂ ಕಿವಿಗಿಡಿದುದಾ ಮಹಾ ಕಾನನದೊಳು ||೩೯||
ದಿನಪನುಪಟಳದಿಂದೆ ನೆಲೆಗೆಟ್ಟು ಪಲವು ರೂ |
ಪನೆ ತಾಳ್ದು ವನವಾಸದುರುತಪದ ಸಿದ್ಧಿಯಿಂ |
ಘನತೆಯಂ ಪಡೆದು ಮಿಗೆ ಪಗೆಯಾದ ಪಗಲಂ ತೊಲಗಿಪಂಧಕಾರಮೆನಲು ||
ಅನುಪಮದ ಕಾರೊಡಲ ಬೇಡವಡೆ ಬೇಂಟೆಗೆ ವಿ |
ಪಿನದೊಳೈತರುತಿರ್ದುದಬ್ಬರದ ಬೊಬ್ಬೆಗಳ |
ನಿನದದಿಂ ಜೀವಿಗಳ ಕೊಲೆಗೆಳಸಿದಂತಕನ ದೂತ ಸಂಘಾತದಂತೆ ||೪೦||
ತಪ್ಪತಪ್ಪಲೊಳಲ್ಲಿಗಲ್ಲಿ ಮಂಜುಗಳೆಸೆವ |
ಕಪ್ಪಕಪ್ಪನೆಯ ಗಿರಿಗಳ ಪರ್ಬುಗೆಗಳಂತೆ |
ಬಪ್ಪಬಪ್ಪೆಳನಾಯ್ಗಳಂ ಹಾಸೊಳಾಂತು ಬಂದುದು ಶಬರ ಸೇನೆ ಬಳಿಕ ||
ಸೊಪ್ಪುಸೊಪ್ಪುಗಳ ಮೆಳೆ ಮೆಳೆಗಳಂ ಸೋವುತ್ತೆ |
ತಪ್ಪತಪ್ಪದೆ ಶರ ಶರಂಗಳಂ ತೆಗೆದೆಚ್ಚು |
ತೊಪ್ಪತೊಪ್ಪನೆ ಮೃಗ ಮೃಗಂಗಳಂ ಕೆಡಹಿದರ್ ಕಾನನದೊಳೇವೇಳ್ವೆನು ||೪೧||
ಚಾಪ ಬಾಣಂಗಳೆತಕೆ ಬೇಂಟೆ ಗಂಗಜನ |
ಚಾಪ ಬಾಣಂಗಳಿರ್ದಪುವೆಮ್ಮೊಳೆಂಬೊಲಿಹ |
ಚಾಪಲ ಭ್ರೂಲತೆಯ ಚಂಚಲಾಪಾಂಗದ ಪುಳಿಂದಿಯರರ್ ತಮ್ಮ ತಮ್ಮ ||
ಓಪರಂ ಬಳಿವಿಡಿದು ಬರುತಿರ್ದರಾಗ ಸ |
ಲ್ಲಾಪದಿಂದೆಸೆವ ಹರಿ ಹರಿಣ ಕರಿ ಚಮರಿಗಳ |
ರೂಪಂಗಳವಯವದೊಳಾರಾಜಿಸಲ್ಯವಕೆ ತಾವೆ ದೇಹಂಗಳೆನಲು ||೪೨||
ಸೊಕ್ಕಾನೆಗಳ ಸೊಗಡನುರ್ವ ಕತ್ತುರಿಯ ಮೃಗ |
ದಿಕ್ಕೆಗಳ ನಲ್ಲಲ್ಲಿ ಪುಣುಗಿನ ಜವಾದಿಗಳ |
ಬೆಕ್ಕುಗಳ ಬಿಡೆಯದಾಡುಂಬೊಲನನರಸುವ ಕಿರಾತರಂಗಚ್ಛವಿಗಳು ||
ಅಕ್ಕರಿಂದವರವರ ತನು ಪರಿಮಳಂಗಳ್ಗೆ |
ತುಕ್ಕುವೆಳದುಂಬಿಗಳ ಬಳಗಂಗಳೆಂಬಂತೆ |
ಪೊಕ್ಕುಪೊಕ್ಕಡವಿಯೊಳ್ ಕಣ್ಗೆ ಕಾಣಿಸುತಿರ್ದುವೇನೆಂಬೆ ನಚ್ಚರಿಯನು ||೪೩||
ಇದೆ ಪಂದಿ ಕೆದರಿದ ನೆಲಂ ನೋಡಲಿದೆ ದಂತಿ |
ಕದಡಿದ ಕೊಳಂ ತೋರಲಿದೆ ಪುಲಿಯುಗಿದ ಮೃಗದ |
ಮಿದುಳಿತ್ತಲಿದೆ ಸಿಂಗಮೆರಗಿದಾನೆಯ ತಲೆಯ ಮುತ್ತುದುರಿ ನೆತ್ತರೊಡನೆ ||
ಇದೆ ವನಮಹಿಷನುದ್ದಿಕೊಂಡ ಮರದಿಗುಡಿತ್ತ |
ಲಿದೆಕೊ ಸಾರಂಗಮಿಕ್ಕಡಿಗೈದ ಪಾವಿತ್ತ |
ಲಿದೆ ಪುಲ್ಲೆಗಳ ಪಕ್ಕೆ ಮರೆಗಳಿಕ್ಕೆಗಳೆಂದು ಪರಿದರೆ ಪುಳಿಂದರಂದು ||೪೪||
ನಡೆ ಪಜ್ಜೆವಿಡೆ ಪೋಗು ತಡೆ ನಿಲ್ಲು ಜಡಿ ಬೊಬ್ಬೆ |
ಗುಡು ಪೊದರೊಳಡಗು ಕೈಗೆಡದಿರಿಸು ನಿಡು ಸರಳ |
ತುಡು ಕೆಲಕೆ ಸಿಡಿಯದಿರ್ ಪೊಡೆ ಸಾರ್ಚು ತುಡುಕು ಮೊಗಸಡಗು ಮರಕಡ ರೊಡರ್ಚು||
ಅಡಗಿ ಪೊಯ್ಜಡಿ ಕೋಲನಿಡು ಮುಂದುಗಡೆ ನಾಯ ||
ಬಿಡು ಕೂಡೆ ಪಡಿತಳಿಸು ಸೆಡೆಯದಿರ್ ಕೆಡೆಪೆಂಬ |
ನುಡಿಗಳಡಿಗಡಿಗೆ ಕಿವಿಗಿಡಿದುವೆಲ್ಲೆಡೆಯೊಳಿಂದಡವಿಯೊಳ್ ಕಡುಪೊಸತೆನೆ ||೪೫||
ಉಬ್ಬದುರದೇರದೆಗೆದೊಡಲ ಬಾಗಿದ ಬೆನ್ನ |
ಹೆಬ್ಬುಗೆಯ ಪಚ್ಚಳದ ಸೆಡೆದ ಬಾಲದ ಕೊನೆಯ |
ಕೊಬ್ಬಿದ ಕೊರಳ ಸಣ್ಣ ಜಂಘೆಗಳ ಕೊಂಕುಗುರ ಮಡಗಿವಿಯ ಕಿಡಿಗಣ್ಗಳ ||
ಹೆಬ್ಬಲ್ಲ ಬಿಡುವಾಯ ಜೋಲ್ವ ಕೆನ್ನಾಲಗೆಯ |
ಗಬ್ಬಿನಾಯ್ಗಳ ಹಾಸನುಗಿದು ಬಿಡೆ ಪಂದಿಗಳ |
ನಬ್ಬರಿಸಿ ತುಡುಕಿದುವು ಕೇಸರಿಗಡರ್ದು ಮೇಲ್ವಾಯ್ದು ಪುಲಿಯಂ ಕೊಂದುವು ||೪೬||
ಬಿಡದೆ ಕತ್ತುರ್ಗಳಂ ಸೋವಿದರ್ ತೀವಿದರ್ |
ಗಿಡಗಳ ಪೊದರ್ಗಳಿಂದೆಬ್ಬಿಸಿದರುಬ್ಬಿಸಿದ |
ರೊಡನೊಡನೆ ಖಗ ಮೃಗ ವ್ರಾತಮಂ ಪಾತಮಂ ಮಾಡಿದರ್ ಕೂಡೆಕೂಡೆ |
ಸಿಡಿಗುಂಡು ಬಡಿಗೋಲ್ಗಳುರುಬೆಯಿಂದಿರುಬೆಯಿಂ |
ದಿಡು ಗವಣಿ ನೇಣುರುಲ್ಗೊಲೆಗಳಿಂ ಬಲೆಗಳಿಂ |
ಜಡಿದಾರ್ದು ಬೊಬ್ಬೆಯಬ್ಬರದಿಂದೆ ಶರದಿಂದೆ ಕಾಡೊಳ್ ಕಿರಾತರಂದು ||೪೭||
ಕುತ್ತುರೊಳ್ ಪುದುಗಿರ್ದು ಪುಲಿ ಪೊರಮಡಲ್ ಕಂಡು |
ಕಿತ್ತು ಕೂರ್ಗಣಿಗಳಂ ಪೂಡಿ ಲುಬ್ಧಕರಿರ್ವ |
ರಿತ್ತತ್ತಲಿರ್ದು ಸರಿಸದೊಳೆಚ್ಚೂಡದರೊಡಲ ನುಚ್ಚಳಿಸಿದಂಬು ತಾಗಿ ||
ಇತ್ತಂಡಮುಂ ವ್ಯಾಘ್ರದೊಡನಿಳೆಗುರುಳ್ದುದು |
ದ್ವ*ತ್ತದಿಂದಭಯ ಜನಮೇಕಾರ್ಥಕೆಳಸಿದೊಡೆ |
ಮತ್ತೆ ಲೇಸಾದಪುದೆ ಜಗದೊಳೀ ಮೂವರುಪಹತಿ ಚಿತ್ರಮಲ್ಲೆಂದನು ||೪೮||
ನಳಿತೋಳ ಬಲ್ಮೊಲೆಯ ಸೊಕ್ಕುಜವ್ವನದ ಪರಿ |
ಮಳ ಗಾತ್ರದಳಿಕುಂತಳದ ಮೆಲ್ನಡೆಯ ಶಬರಿ |
ಹಳುವದೊಳ್ತನ್ನ ಕಾಂತನ ಬಳಿಯೆ ಬರಲೊಂದು ಸಿಂಗಮತಿ ಭರದೊಳೆರಗಿ ||
ಬಳಿಕವಳ ಮಧ್ಯಮಂ ಕಂಡು ಸಾಮಾನ್ಯಮಂ |
ತಳೆದು ಮತ್ತಾಕೆಯ ಚಲಾಪಾಂಗಮಂ ನೋಡಿ |
ಮುಳಿದಡರಲಾ ಕೇಸರಿಯನೆಚ್ಚು ಕೆಡಹಿದಂ ಕ್ರೋಧದಿಂದಾ ವ್ಯಾಧನು ||೪೯||
ಮರಿಗೆ ಮರೆಯಾಗಿ ಮೈಯೊಡ್ಡಿ ಮಡಿದುವು ಕೆಲವು |
ಬರಿಯಬಿಲ್ದನಿಗೆ ರಮಣನ ತಾಗಿತಂಬೆಂದು |
ನೆರೆ ಮೋಹದಿಂ ಪೊರಳ್ದುವು ಕೆಲವು ರೂಪುಗೊಂಡೊಂದೊಂದೆಣಿಯನಗಲ್ದು ||
ಮರುಗಿ ಮದನಾಸ್ತ್ರದಿಂದಿರದೆ ಬಿದ್ದುವು ಕೆಲವು |
ಬಿರುಸರಳ್ ತಮ್ಮ ಕೂರ್ಪರ ಮೇಲೆ ಬರಲದಕೆ |
ಗುರಿಯಾಗಿ ತೊರೆದುವಸುವಂ ಕೆಲವು ಪುಲ್ಲೆಗಳ್ ಬೇಡರಿಸುವೆಸುಗೆಯಿಂದೆ ||೫೦||
ಕರಿಯ ಕುಂಭಸ್ಥಳದ ಮುಕ್ತಾಫಲಂಗಳಂ |
ಬರುಹಿಗಳ ಗರಿಗಳಂ ಚಮರಿ ವಾಲಂಗಳಂ |
ದ್ವಿರದ ನವ ದಂತಾಂಕುರಂಗಳಂ ಮೃಗಸಾರ ಮೃತ್ತಿಕೆಗಳಂ ಬನದೊಳು ||
ಇರದೆತ್ತಿಕೊಂಡು ಬರುತಿರ್ದಪರೊ ಶಬರಿಯರ್ |
ದರಹಾಸ ಕಬರಿ ಕುಂತಳ ಕುಚ ಶ್ಯಾಮ ತನು |
ಪರಿಮಳಂಗಳನಾಂತು ಬಂದಪರೊ ತಿಳಿಯಲರಿದೆಂಬಂತೆ ಕಾಣಿಸಿದರು ||೫೧||
ಪುಲಿ ಕರಡಿ ಕರಿ ಸಿಂಗ ಸಾರಂಗ ಮರಿ ಪಂದಿ |
ಮೊಲ ಹುಲ್ಲೆ ಕಾಡೆಮ್ಮೆ ಚಮರಿಗಳ್ ಮೊದಲಾದ |
ಪಲವು ಮೃಗಜಾತಿಯಂ ಕ್ರೌಂಚ ಶಿಖಿ ತಿತ್ತಿರಿ ಕಪೋತಾದಿ ಪಕ್ಷಿಗಳನು ||
ಕೊಲುತೆ ಬಹ ಬೇಡರ್ಗೆ ಸಿಕ್ಕದೊಡಿದುದೊಂದೆ |
ರಳೆ ಕುಳಿಂದಕನೆಂಬ ದೊರೆ ಕಂಡು ತನ್ನ ಚಾ |
ಪಲ ಹಯದೊಳದರ ಬಳಿಸಂದನತಿವೇಗಂದಿಂ ಬಿಲ್ವಿಡಿದು ಕೊಲ್ವೆನೆಂದು ||೫೨||
ಆ ಕುಳಿಂದಂ ದುಷ್ಟಬುದ್ಧಿಯ ನಿಯೋಗದಿಂ |
ದಾ ಕಾನನದ ನಾಡ ವಳಿತಮಂ ಕೈಕೊಂಡು |
ಭೂಕಾಂತನಾಗಿಹಂ ಚಂದನಾವತಿಯೆಂಬ ಪುರದೊಳವನಳ್ತಿಯಿಂದೆ ||
ಈ ಕಿರಾತ ಪ್ರಕರದೊಡನೆ ಪೊರಮಟ್ಟು ಮೃಗ |
ಯಾ ಕಾಮನಾಗಿ ಬಂದಿರ್ದವಂ ಸಿಡಿದೋಡು |
ವಾ ಕುರಂಗದ ಬೆನ್ನನೈದಿದಂ ತೇಜಿಯ ಜವಂ ಗಾಳಿಯಂ ಮುಂಚಲು ||೫೩||
ಹರಿಣನಂ ಬೆಂಬತ್ತಿ ಬರಲಾ ಕುಳಿಂದಕಂ |
ಹರಿಯನೇ ಜಪಿಸುತಳುತಿಹ ಬಾಲನಂ ಕಂಡು |
ಹರಿಯನಲ್ಲಿಯೆ ನಿಲಿಸಿ ನೋಡಿ ನಿಜ ಶಿರವ ನಲ್ಲಾಡಿ ತಾಂ ಮೃಗದ ಕೊಲೆಗೆ ||
ಹರಿತಂದ ಪಾಪಮತಿ ಪುಣ್ಯಮೊದವಿಸಿತು ಸುವಿ |
ಹರಿಸುವೊಡೆ ಶಿವಶಿವಾ ಪೊಸತೆಂದು ಹರ್ಷದ ಲ |
ಹರಿಯೊಳೋಲಾಡಿದಂ ಕಡವರವನೆಡಹಿ ಸಂಧಿಸಿದ ಕಡುಬಡವನಂತೆ ||೫೪||
ಇಳಿದು ನಿಜವಾಜಿಯಂ ಸಾರ್ದು ಮೈದಡವಿ ಬರೆ |
ಸೆಳೆದು ಬಿಗಿಯಪ್ಪಿ ಕಂಬನಿದೊಡೆದು ಕೂಡೆ ಸ |
ಗ್ಗಳೆಯ ನೀರಿಂದ ಕಾಲ್ದುದಿಯೊಳ್ ಬಸಿವ ನೆತ್ತರಂ ತೊಳೆದು ಮೋಹದಿಂದೆ ||
ಗಳದೊಳುಬ್ಬುವ ಗದ್ಗದಂಗಳಂ ಸೈತಿಟ್ಟು |
ತಿಳಿಪಿ ಲಾಲಿಸಿದಂ ಕುಳಿಂದಕಂ ಸೌಭಾಗ್ಯ |
ನಿಳಯದರಕೆಯ ವಸುವ ನೊಡವಿದಗ್ಗದ ಪುಣ್ಯದೊಡಲಸುವನಾ ಶಿಶುವನು ||೫೫||
ಎಡಬಲದೊಳಿಹ ತನ್ನವರೊಳಾ ಕುಳಿಂದಕಂ |
ನುಡಿದನೀ ಬಾಲಕಂ ತನ್ನ ತಾಯ್ತಂದೆಗಳ |
ನೊಡಹುಟ್ಟಿದವರ ಹಂಬಲಿಸದೆ ಮುರಾರಿಯಂ ನೆನೆವ ನದರಿಂದಿವಂಗೆ ||
ಒಡೆಯನಚ್ಚುತನಾದ ಕಾರಣಂ ಮೃತನಾಗ |
ದಡವಿಯೊಳ್ಜೀವಿಸಿದನೆಲ್ಲರ್ಗೆ ತನುಜರಂ |
ಕುಡುವವಂ ಕೃಷ್ಣನೈಸಲೆ ತನಗೆ ಮಕ್ಕಳಿಲ್ಲೀತನೇ ಸುತನೆಂದನು ||೫೬||
ಪತ್ತುವಿಧಮುಂಟು ಸುತರದರೊಳೌರಸ ಪುತ್ರ |
ನುತ್ತಮಂ ಮೇಣಾತನಿಲ್ಲದೊಡೆ ಬಳಿಕಮೊಂ |
ಬತ್ತು ಬಗೆಯೊಳಗೊಂದು ತೆರದ ಮಗನಾದೊಡಂ ಬೇಕಲಾ ಮಾನವರ್ಗೆ ||
ತತ್ತನಯರೊಳ್ ತನಗೆ ತಾನೆ ದೊರೆಕೊಂಡವಂ |
ದತ್ತನಂದನನಿವಂ ತನಗೆಂದವಂ ಮುದದೊ |
ಳೆತ್ತಿ ಕೊಂಡಶ್ವವನಡರ್ದು ಪರಿಜನಸಹಿತ ನಿಜಪುರಕೆ ಬರುತಿರ್ದನು ||೫೭||
ಮೃಗಯಾ ವ್ಯಸನದಿಂದೆ ಕಾನನಕೆ ತಾಂ ಕೃಷ್ಣ |
ಮೃಗದ ಕೂಡೈದಿದೊಡೆ ದೊರೆಕೊಂಡನೀ ಕೃಷ್ಣ |
ಮೃಗ ಭಾವದರ್ಭಕಂ ಪಾಪಕೆಳಸಿದೊಡಾಯ್ತು ಪುಣ್ಯಮೆನುತಲ್ಲಿ ಮಡಿದ ||
ಮೃಗಜಾತಿಗಳನವರವರ್ಗೆ ವೆಚ್ಚಿಸಿ ನೆರೆದ |
ಮೃಗಜೀವಿಗಳನೆಲ್ಲರಂ ಕಳುಹಿ ನಿಜಪುರಕೆ |
ಮೃಗಧರನೊಲೆಸೆವ ಶಿಶುವಂ ಕೊಂಡು ಪರಿಜನದೊಡನೆ ಬಂದನುತ್ಸವದೊಳು ||೫೮||
ಮುಂದೆ ಪರಿತಂದು ಚರರರಿಪೆ ಸಿಂಗರಿಸಿದರ್ |
ಚಂದನಾವತಿಗೆ ಸಂಭ್ರಮದಿಂ ಕುಳಿಂದಕಂ |
ಬಂದು ನಿಜ ಭವನಮಂ ಪುಗಲಿದಿರ್ವಂದು ನಲಿದವನ ಸತಿ ಮೇಧಾವಿನಿ ||
ಕಂದನಂ ತೆಗೆದೆತ್ತಿಕೊಳುತ್ತ ಬಿಗಿಯಪ್ಪಿ ಸಾ |
ನಂದದಿಂ ಪೊರೆಯೇರಿದಳ್ ತನ್ನ ಬಂಜೆತನ |
ಮಿಂದು ಪೋದುದು ಪುತ್ರವತಿಯಾದೆನೆನ್ನ ಪುಣ್ಯದ್ರುಮಂ ಫಲಿಸಿತೆಂದು ||೫೯||
ಬಳಿಕ ನಗರದೊಳಾದುದುತ್ಸವಂ ಪಾರ್ವರ್ಗೆ |
ನಿಳಯದ ಸಮಸ್ತ ವಸ್ತುಗಳನೊಲಿದಿತ್ತನೊಂ |
ದುಳಿಯದೆ ವಿಹಿತ ಜಾತಕರ್ಮಮಂ ಮಾಡಿಸಲ್ಬುಧರುತ್ತರೋತ್ತರವನು ||
ತಿಳಿದು ನಿರ್ಮಲ ಮುಖಾಂಬುಜದಿಂ ಶಶಾಂಕನಂ |
ಕಳಕಳಿಸಿ ನಗುವನದರಿಂ ಚಂದ್ರಹಾಸನೆಂ |
ದಿಳೆಯೋಳೀತಂಗೆ ಪೆಸರಾಗಲೆಂದುಚ್ಚರಿಸಿ ನಾಮಕರಣಂಗೈದರು ||೬೦||
ಪಸುಳೆತನದಂದಿಂದೆ ವೃದ್ಧಾಪ್ಯದನ್ನೆಗಂ |
ಬಿಸಜನಾಭನ ಭಕ್ತಿ ದೊರೆಕೊಳದ ಮನುಜರಂ |
ನಸು ನಗುವ ವಳದೊಳ್ಪಿಂ ಚಂದ್ರಹಾಸನಿವನಖಿಳ ಭೂಮಂಡಲದೊಳು ||
ಪಸರಿಸುವ ಜಸದ ಬೆಳ್ಪಿಂ ಚಂದ್ರಹಾಸನಿವ |
ನಸಮ ನಕ್ಷೀಣನಕಳಂಕನತಿಶಾಂತನೆಂ |
ದೆಸೆವ ಸದ್ಗುಣದೇಳ್ಗೆಯಿಂ ಚಂದ್ರಹಾಸನಿವನಹುದೆಂದು ಬುಧರೊರೆದರು ||೬೧||
ಮಂಜು ಮಹಿಮಾಸ್ಪದಂ ಚಾರು ವೃತ್ತಂ ಕಲಾ |
ಪುಂಜಂ ಸದಾನಭೋಗಂ ಕುವಲಯ ಪ್ರಿಯಂ |
ರಂಜಿಸುವ ರಾಜನೆನ್ನ ವೊಲಾದೊಡಂ ಮಿತ್ರತೇಜ ಕಳವಳಿದು ಪಗೆಯ ||
ಭಂಜನೆಗೆ ಸಿಕ್ಕಿ ಬಡತನವಟ್ಟು ಕಂದಿ ಪಳಿ |
ವಂ ಜಗವರಿಯೆ ಪೊತ್ತನೆಂದು ಬಿಡದಮೃತಾರ್ಚಿ |
ಯಂ ಜರೆದು ನಗುವನದರಿಂ ಚಂದ್ರಹಾಸನಿವನಹನೆನೆ ಪೆಸರ್ ಮೆರೆದುದು ||೬೨||
ಕತ್ತಲೆಯ ಮನೆಗೆ ಮಣಿದೀಪಮಾದಂತೆ ಸಲೆ |
ಬತ್ತಿದ ಸರೋವರಕೆ ನವ ಜಲಮೊದವಿದಂತೆ |
ಬಿತ್ತರದ ಕಾವ್ಯರಚನೆಗೆ ದೇವತಾಸ್ತುತಿ ನೆಗಳ್ದಂತೆ ಭೂತಳದೊಳು ||
ಮತ್ತೆ ಸಂತಾನಮಿಲ್ಲದ ಕುಳಿಂದನ ಬಾಳ್ಕೆ |
ಗುತ್ತಮ ಕುಮಾರನಾದಂ ಚಂದ್ರಹಾಸನೆನ |
ಲುತ್ತರೋತ್ತರಮಪ್ಪುದಚ್ಚರಿಯೆ ಸುರಪುರದ ಲಕ್ಷ್ಮೀವರನ ಭಕ್ತರು ||೬೩||
Leave A Comment