ಸೂಚನೆ ||
ಸತ್ಯದಿಂದೊಗಿದರ್ ತಮತಮಗೆ ಭುಜ ಸಾಹ |
ಸತ್ವದಿಂ ಪ್ರದ್ಯುಮ್ನ ಮೊದಲಾದ ಪಟುಭಟರ್ |
ಸತ್ವರದೊಳೆಚ್ಚಾಡಿದರ್ ಬಭ್ರುವಾಹನ ಧನಂಜಯರ್ ಸಂಗರದೊಳು ||

ಅರಸ ಕೇಳರ್ಜುನಂ ಬೈದು ನೂಕಿದ ಬಳಿಕ |
ತರಿಸಿದ ಸುವಸ್ತುಗಳ ನಧ್ವರದ ತುರಗಮಂ |
ತಿರುಗಿ ನಿಜನಗರಿಗೆ ಕಳುಹಿ ಬಭ್ರುವಾಹನಂ ಸಮರಕನುವಾಗಿ ನಿಲಲು ||
ಧರಣಿಮಂಡಲಮಂ ಚತುರ್ಬಲಂ ಗೀರ್ವಾಣ |
ಸರಣಿ ಮಂಡಲಮಂ ಧ್ವಜ ಛತ್ರ ಚಾಮರಂ |
ತರಣಿಮಂಡಲಮಂ ಚಮೂ ಪದ ಹತೋದ್ಧೂತ ರೇಣುವ್ರಜಂ ಮೂಸುಕಿತು ||೧||

ಅರ್ಬುದಗಜಂ ಪತ್ತಕೋಟಿ ಸುವರೂಥಮೆರೆ |
ದರ್ಬುದೆ ತುರಂಗಮಂ ಕೂಡಿತು ಪದಾತಿ ಮೂ |
ರರ್ಬುದಂ ಜೋಡಿಸಿದ ರಾಹಪ್ರೌಢರ್ ಸುಬುದ್ದಿಮೊದಲಾದ ಭಟರು ||
ಸರ್ಮಸನ್ನಾಹದಿಂದೊತ್ತರಿಸಿದೆತ್ತಣ ಚ |
ತುರ್ಬಲಮೊ ಕಮಲಜನ ಸೃಷ್ಟಿಯೊಳದೃಷ್ಟಮೆನೆ |
ಪರ್ಬಿದುದು ನೆಲದಗಲಕಾ ಬಭ್ರುವಾಹನಂ ತರಿಸಿದಂ ಮಣಿರಥವನು ||೨||

ಚಿತ್ರಶೋಭಿತಮಾದ ಮಣಿಮಯ ವರೂಥಮಂ |
ಚತ್ರಾಂಗದೆಯ ತನೂಭವ ನಡರ್ದಂ ಕೂಡೆ |
ಚತ್ರಮಾದುದು ಸಮರ ಮೆರಡುಥಟ್ಟಿನ ಚೂಣಿ ಸಂದಣಿಸಿತುರವಣೆಯೊಳು ||
ಮಿತ್ರಮಂಡಲವನೊಡೆದೈದುವತಿಭರದಿಂದೆ |
ಮಿತ್ರಭಟರಂ ತಾಗಿದರ್ ಕಡುಗಲಿಗಳಾಗ |
ಮಿತ್ರಭಾವದ ನೇಹದಿಂದೆ ಮರುಗದೆ ಮಾಣವಂಭೋರುಹಂಗಳೆನಲು ||೩||

ತೇರ ವಂಗಡದ ಜರ್ಜಾರವಂ ಗಜದ ಘಂ |
ಟಾರವಂ ಹಯದ ಹೇಷಾರವಂ ನಡೆವ ಸೇ |
ನಾರವರ ಭೇರಿಯ ಮಹಾರವಂ ಬಹಲ ಕಹಳಾರವಂ ಸಂಗಡಿಸಿದ ||
ಜ್ಯಾರವಂ ಭಟರ ಬಾಹಾರವಂ ದಳದ ಬಂ |
ಭಾರವಂ ರಣ ಕಿಲಕಿಲಾ ರವಂ ಪಟಹ ಢ |
ಕ್ಮಾರವಂ ಪುದಿನ ನಾನಾ ರವಂ ಕಿವಿಗತಿ ಕಠೋರವಂ ತೀವಿತಂದು ||೪||

ಸಿಂಧ ಸೀಗುರಿ ಛತ್ರಚಾಮರಪತಾಕೆಗಳ್ |
ಸಂದಣಿಸಿ ಗಗನಮಂ ಮುಸುಗಲ್ಕೆ ತವೆ ಮೂಡಿ |
ದಂಧಕಾರಂಗಳಂ ಕಿಡಿಸಿದುವು ರತ್ನಾಭರಣಕಾಮತಿಗಳ್ ಭೂಪರ ||
ಕೆಂದೂಳಡರ್ದು ನಭಮಂ ಮುಸುಕಿತಾಗ ಸುರ |
ಸಿಂಧುಪ್ರವಾಹ ಮುತ್ತುಂಗ ಶೋಣಾಚಲದ |
ಬಂಧುರ ತಟಪ್ರದೇಶದೊಳೊಪ್ಪುವೊಜ್ಜರದ ನದಿಯೆಂಬ ತೆರನಾಗಲು ||೫||

ಚೂಣಿಯೊಳ್ ಬೆರಸಿ ಪೊಯ್ದಾಡಿದರ್ ತಮತಮಗೆ |
ಬಾಣ ತೋಮರ ಪರಶು ಚಕ್ರವಸಿ ಮುದ್ಗರ ಕೃ |
ಪಾಣ ಡೊಂಕಣಿ ಕುಂತ ಸುರಗಿ ಸೆಲ್ಲೆವ ಶಕ್ತಿ ಮೊದಲಾದ ಕೈದುಗಳೊಳು ||
ಕೇಣಮಿಲ್ಲದೆ ಚಾರಿ ಚಳಕ ಚಾಳೆಯ ಚದುರ್ |
ಪಾಣಿಲಾಘವ ಪಂಥ ಪಾಡುಗಳನರಿದು ಬಿ |
ನ್ನಾಣದಿಂ ಗಾಯಗಾಣಿಸಿದರತಿಬಲರಲ್ಲಿ ನಾನಾ ಪ್ರಹಾರದಿಂದ ||೬||

ತೂಳಿಸಿದರಾನೆಯಂ ಜೋದರುರವಣಿಸಿ ದೂ |
ವಾಳಿಸಿದರುಬ್ಬೆದ್ದು ರಾವುತರ್ ತೇಜಿಯಂ |
ಕೇಳಿಸಿದರಾಹವದ ನಾಟ್ಯಮಂ ರಣರಂಗದೊಳ್ ಚಟುಲ ಪಟುರಥಿಕರು ||
ಏಳಿಸಿದರಾಳತ್ತನದ ಪಂತಮಂ ಕಾಲವರ್ |
ಬೀಳಿಸಿದ ರಹಿತರಂ ಪೊಯ್ದಾಡಿ ತಲೆಯಂ ನಿ |
ವಾಳಿಸಿದ ರಾಳ್ದಂಗೆ ಕೈದುಗಳ ಹೋರಟೆಯ ಖಣಿ ಕಟಿಲ ರಭಸದಿಂದೆ ||೭||

ಕಾರ್ಮುಗಿಲ ಸಿಡಿಲ ರವದಂದಮಾಗಿರೆ ಕರೆದ |
ಕಾರ್ಮುಕಧವನಿ ಮಿಂಚಿನಂತೆ ಪೊಳೆಪೊಳೆವ ಪೊಂ |
ದೇರ್ಮೆರೆಯ ಶರವರ್ಷಮಂ ಕರೆಯುತರ್ಜುನನ ಸಮ್ಮುಖಕೆ ಬಂದು ನಿಂದ ||
ಮಾರ್ಮಲೆಯಬಾರದಯ್ಯನೊಳೆಂದು ಕಂಡು ನಾಂ |
ಕೂರ್ಮೆಯಿಂದೆರಗಿದೊಡೆ ಜರೆದೆಲಾ ರಣದೊಳಿ |
ನ್ನಾಮೊಘಗೆದೊಡಂ  ಜೈಸದೊಡೆ ನಿನ್ನಸುತನಲ್ಲೆನುತೆ ಪಾರ್ಥಿ ತೆಗೆದೆಚ್ಚನು ||೮||

ಪಾರ್ಥಿವರ ಪಂಥಮಲ್ಲೆಂದು ಪೇಳಲ್ಕೆ ಪುರು |
ಷಾರ್ಥಮಂ ಮಾಳ್ಪೆಲಾ ನಿನ್ನ ಪೌರುಷವ ನಪ |
ಕೀರ್ತಿಗಂಜಿವನಲ್ಲ ಪಿತನಂ ಪಚಾರಿಸುವೆ ಮತ್ತೆ ಕಾಳಗಕೆ ಬಂದು ||
ಧೂರ್ತನಹೆ ನೀನೆನುತೆ ನಸುನಗೆಯೊಳಿದಿರಾಗಿ |
ಸುಕುಮಾರನಂ ಘಾತಿಸಿದನೊಂಬತ್ತು |
ಕಾರ್ತಸ್ವರಾಂಕಿತ ಸುಪುಂಖದಿಂದೆಸೆವ ಬಾಣಗಳಿಂದನುಸಾಲ್ವನು ||೯||

ಕೈತವದಿಸುಗೆಯೊ ನಿಜ ಸಾಹಸಮಿನಿತೊ ನಿನ್ನ |
ಮೈತಲೆಗಲಸಿ ಬಂದುದಾಹವಕೆ ಪೊಸತೆನುತ |
ಕೈತವಕದಿಂದೆಚ್ಚ ನನುಸಾಲ್ವನಂ ನೂರುಬಾಣದಿಂ ಪಾರ್ಥಸೂನು ||
ಐತರಲವಂ ಮಧ್ಯಮಾರ್ಗದೊಳ್ ತಡೆಗಡಿದು |
ದೈತೇಯರಾಜಂ ಕನಲ್ದಾಗ ಬರಸಿಡಿಲ |
ಹೊಯ್ತೆಗಿಮ್ಮಡಿಯಾಗಿ ಕಣೆಗಳಂ ಕವಿಸಿದಂ ಬಭ್ರುವಾಹನನ ಮೇಲೆ ||೧೦||

ಉಬ್ಬಿದುದು ಮೈರೋಷದಿಂದೆ ಗಂಟಕ್ಕಿದುವು |
ಹುಬ್ಬುಗಳ್ ಬಭ್ರುವಾಹಂಗೆ ತೆಗೆತೆಗೆದಿಸುತೆ |
ಬೊಬ್ಬಿರಿದನನುಸಾಲ್ವನಂ ಮುಸುಕಿದುವು ಕೋಟಿಸಂಖ್ಯೆಯ ಪೊಗರ್ಗಣೆಗಳು ||
ಅಬ್ಬರಿಸಿ ದೈತ್ಯನದಕಿಮ್ಮಡಿಸಿ ಕೋಲ್ಗರೆದ |
ನೊಬ್ಬೊಬ್ಬರಂ ಜಯಿಸಿವಾತುರದೊಳೆಚ್ಚಾಡ |
ಲಿಬ್ಬರಂಗದೊಳಿಡಿದುವಂಬುಗಳ್ ಬಂದುವರುಣಾಂಬುಗಳ್ ಸಂಗರದೊಳು ||೧೧||

ಬಾಣದೊಳ್ ಬಣಿತೆಯೊಳ್ ಬಿಲ್ಗಾರತನದ ಬಿ |
ನ್ನಾಣದೊಳ್ ಬಿಂಕದೊಳ್ ತಾಳಿಕೆಯೊಳುರುತರ |
ತ್ರಾಣದೊಳ್ ಜಯದೊಳ್ ಚಮತ್ಕೃತಿಯೊಳದಟಿನೊಳ್ ವೀರದೊಳ್ ಭಾರಣೆಯೊಳು ||
ಪಾಣಿಲಾಘವದೊಳ್ ಪರಾಕ್ರಮದ ಪಂತದೊಳ್ |
ಕಾಣೆ ನವರಿರ್ವರ್ಗೆ ಸುಮುರಾದ ಕಲಿಗಳಂ |
ಕ್ಷೆಶಿಯೊಳೆನಲ್ ಬಭ್ರುವಾಹಾನುಸಾಲ್ವರೆಚ್ಚಾಡಿದರ್ ಕೊಳುಗುಳದೊಳು ||೧೨||

ಕಾಳಗಂ ಸಮಮಾಗಿ ಬರೆ ಕೆರಳ್ದನುಸಾಲ್ವ |
ನೇಳಂಬಿನಿಂ ಪಾರ್ಥಸುತನ ಬತ್ತಳಿಕೆಯಂ |
ಕೋಲೆಂಟರಿಂದೆ ಟೆಕ್ಕೆಯವ ನೀರೇಳು ಮಾರ್ಗಣದಿಂದ ಕಾರ್ಮುಕವನು ||
ಬೀಳಲಿಕ್ಕಡಿಯಾಗಿ ಕತ್ತರಿಸಿ ಕವಚಮಂ |
ಸೀಳಿದಂ ಕೈಯೊಡನೆ ಸಾಸಿರ ಸರಲ್ಗಳಿಂ |
ಪೊಳಿದಂ ಸಾರಥಿ ವಾಜಿಗಲಂ ಶಿಲೀಮುಖ ವ್ರಾತದಿಂದೆ ||೧೩||

ಕ್ಷಣದೊಳಾಗಲೆ ಬಭ್ರುವಾಹನಂ ಮತ್ತೊಂದು |
ಮಣಿವರೂಥವ ನಡರ್ದಿಸುತಿರ್ದ ನಿತ್ತಲುರ |
ವಣಿಸುವನುಸಾಲ್ವಂ ವಿರಥನಾಗಿ ಕೊಂಡನು ರುಗದೆಯ ನೀ ಪಾರ್ಥಸುತನ ||
ರಣ ಚಮತ್ಕಾರ ಮೆಂತುಟೊ ತನ್ನ ಮೇಲಕಿ |
ಟ್ಟಣಿಸಿ ಬಹ ದಾನವನನೆಚ್ಚೊಡುಚ್ಚಳಿಸಿ ಕೂ |
ರ‍್ಗಣಿಗಳಡಗಿದುವಿಯೊಳಸುರೇಂದ್ರನಸದಳಿದು ವಸುಧೆಯಂ ಪಸೆಗೆಯ್ದನು ||೧೪||

ಅನುಸಾಲ್ವನಳವಳಿಯೆ ಚಾಪಮಂ ಜೇಗೈದು |
ದನುಜಾರಿತನಯ ನಿದಿರಾಗಿ ನಿಲ್ಲೆಲವೊ ತ |
ನ್ನನೆ ಮೊದಲೆ ವಂದಿಸದೆ ಪಾರ್ಥನಂ ಕಂಡು ಕೆಡಿಸಿದೆ ರಾಜಕಾರಿಯವನು ||
ತನುವನುರೆ ನೋಯಿಸೆಂ ಮೈದುನನಲಾ ಸರಸ |
ಕನುವರದೊಳೆಚ್ಚಾಡಿ ನೋಡುವೆಂ ಕಂಗೆಡದಿ |
ರೆನುತೆ ನಾಲ್ಕೈದು ಬಾಣಂಗಳಂ ಬೀರಿದಂ ಬಭ್ರುವಾಹನನ ಮೇಲೆ ||೧೫||

ಸರಸ ಭಾವದೊಳೆ ಬಾವಿಸೆ ಭಾವನವರಿಗಿದು |
ವಿರಸವಾಗದೆ ಮಾಣದೀಗ ಸಂಗ್ರಾಮದೊಳ್ |
ಸರಸ ಕಾರ್ಮುಕಮಿಲ್ಲ ಸರಸ ಶಿಂಜಿನಿಯಿಲ್ಲ ಸರಸ ಬಾಣಂಗಳಿಲ್ಲ ||
ಸರಸ ಯುವತಿಯ ಕಟಾಕ್ಷದ ನೆಮ್ಮಗೆಗಳಿಲ್ಲ |
ಮರುಷಮಾಗದೆ ನೋಡು ರಣವೆನುತ ಪತ್ತು ಸಾ |
ಸಿರ ಕೋಲ್ಗಳಂ ಮುಸುಕಿ ಹರಿ ತನಯನಂ ದಿಟದನಂಗನೆನಿಸಿದ ನಾರ್ಜುನಿ ||೧೬||

ಮುಸುಕಿದ ಸರಳ್ಗಳಂ ಕುಸುರಿದರಿದಂ ಕೂಡೆ |
ದೆಸೆಗಳೇನಾದುವಾಗಸಮೆತ್ತಲಡಗಿದುದು |
ವಸುಮತಿಯದೆಲ್ಲಿಹುದು ಶಶಿವಿಗಳೆಡೆಯಾಡಕಂಗಳಾವೆಡೆಯೊಳು |||
ಅಸುರರೊಳ್ ನಿರ್ಜರ ಪ್ರಸರದೊಳ್ ಮನುಜರೊಳ್ |
ಪೆಸರುಳ್ಳವರ ಸಮರದಿಸುಗೆಯೊಳ್ ಕಾಣಿನಿದು |
ಪೊಸತೆಂಬ ತೆರನಾಗೆ ವಿಶಿಕಮಂ ಕೆದರಿದಂ ಬಿಸರುಲಹಾಕ್ಷನ ತನಯನು ||೧೭||

ಕರ್ಕಶದೊಳೆಸುವ ಕೃಷ್ಣಾತ್ಮಜನ ಬಾಣಸಂ |
ಪರ್ಕದಿಂದಾದ ಕತ್ತಲೆಯಂ ಕೆಡಿಸಿದುವಮ |
ರರ್ಕಳಹುದೆನೆ ಸವ್ಯಸಾಚಿಯ ತನುಜನ ಪೊಸಮಸೆಯ ವಿಶಿಖಪ್ರಭೆಗಳು ||
ಆರ್ಕರಶ್ಮಿಗಳಂಧಕಾರಂಗಳಡಿಗಡಿಗೆ |
ತರ್ಕಮಂ ಮಾಳ್ಪಂತೆ ಕಂಗೊಳಿಸಲಾಗ ವೀ |
ರರ್ಕಳೆಚ್ಚಾಡಿದರ್ ಬಭ್ರುವಾಹನ ರುಕ್ಮಿಣೀಸುತರ್ ಸಂಗರದೊಳು ||೧೮||

ಅಚ್ಚರಿಯನಿನ್ನು ಜನಮೇಜಯ ನರೇಂದ್ರ ಕೇ |
ಳಚ್ಚಯತನ ಸುತನ ಬಾಣಂಗಳಂ ನಡುವೆ ಮುರಿ |
ಯೆಚ್ಚನಾತನ ಮಣಿ ವರೂಥ ಭೈತ್ರವ ನಂಬಿನಂಬುಧಿಯ ವೀಚಿಯಿಂದೆ ||
ಮುಚ್ಚಿದನೊಡನೆ ಮದನನಂಗದೊಳ್ ಕಣೆಗಳಂ |
ಪೊಚ್ಚಿದಂ ಕೆಲಬಲದೊಳಿಡಿದ ರಿಪುಸೇನೆಯಂ |
ಕೊಚ್ಚಿದಂ ಕೊಂದನಗಣಿತಬಲವನಾ ಬಭ್ರುವಾಹನಂ ಕೊಳುಗುಳದೊಳು ||೧೯||

ಕಂಡುರೆ ಕನಲ್ದಾತನಿಸುವಿಸುವ ಕೋಲ್ಗಳಂ |
ಖಂಡಿಸುತೆ ಮಿಡಿಕದಂತವನ ತೇರೊಡನೊಡನೆ |
ಚಂಡ ಶರಜಾಲಮಂ ಸೈಗರೆಯುತುಚ್ಚಳಿಸಿ ಮತ್ತೆ ರಿಪುಬಲದ ಮೇಲೆ ||
ಹಿಂಡುಗಣೆಯಂ ಕವಿಸಿ ಮಂದಿಯಂ ಕೊಲುತಿರ್ದ |
ನಂಡಲೆದು ಮೂಜಗವನೈದೆ ಕುಸುಮಾಸ್ತ್ರದಿಂ |
ದಿಂಡುರುಳ್ಚುವ ಶಂಬರಾರಿದಿರಾರೆನಲ್ ಪೊಂಡರೀಕಾಕ್ಷಸೂನು ||೨೦||

ಕಡಿಯೆ ರಾವುತರ ತಲೆ ನೆಲಕುದುರೆ ಕುದುರೆಗಳ್ |
ಮಡಿಯೆ ಜೋದರ್ ಕೆಡೆಯಲಾನೆಗಳ್ ನೆಗಳ್ದರ್ ರಣ |
ದೆಡೆಯೊಳ್ ಪೊರಳೆ ಶಿರಂ ಪರಿಯಲ್ಕೆ ಸಾರಥಿಯ ರಥಿಯ ತನು ಸೀಳ್ಗಳಾಗೆ ||
ಕಡುಪಂತ ಕಾಳಾಲ್ಗಳೊಡಲಳೀಯೆ ಲಳಿಯೆದ್ದು |
ಪಡೆಯನುರೆ ಕೊಂದುವು ಶರಧಿ ಭವನ ಭವನ ಪೊಗ |
ರಿಡಿದಂಬುಗಳ್ ಪ್ರಳಯ ಶತಕೋಟಿ ಶತಕೋಟಿಯಂ ಪೊತ್ತು ಸಂಗರದೊಳು ||೨೧||

ಧರಣಿತಳದಂತೆ ನವಖಂಡ ಮಯಮಾಗಿ ಯಮ |
ಪುರದಂತೆ ಬಹು ನರಕಪಾಲಮಯಮಾಗಿ ಸಾ |
ಗರದಂತೆ ಭೂರಿಜೀವನ ಭಂಗ ಮಯಮಾಗಿ ಸಂಸಾರಚಕ್ರದಂತೆ ||
ಭರಿತ ಪಾತಕ ಬಂಧ ಮಯಮಾಗಿ ಕೈಲಾಸ |
ಗಿರಿಯಂತೆ ಶಿವಗಣ ವಿಲಾಸ ಮಯಮಾಗಿ ವಿ |
ಸ್ತರದ ನೈಮಿಶದಂತೆ ಪ್ರಾವೃತ ವಿರಕ್ತ ಮಯಮಾಗಿ ರಣಮೆಸೆದಿರ್ದುದು ||೨೨||

ಪೆಣಮಯಂ ವಿರಿ ಮೆದೆಗೆಡೆದಿರ್ದ ವಾಜಿ ವಾ |
ರಣಮಯಂ ಬಿಡದೆ ಕುಣಿದಾಡುವಟ್ಟೆಗಳ ರಿಂ |
ಗಣಮಯಂ ನಿಡುಗುರುಳ್ ಖಂಡ ಮಿದುಳಡಗು ಸಂಟಿಗೆ ಮಜ್ಜೆ ಮಾಂಸಗಳ ||
ನೆಣಮಯಂ ಪರಿವ ನೆತ್ತರ ಬಸೆಯ ಜಿಗಿಯ ದಾ |
ರುಣ ಮಯಂ ಯಕ್ಷರಾಕ್ಷಸ ಭೂತಭೇತಾಳ |
ಗಣಮಯಂ ಸಲೆ ಭಯಂಕರಮಾದುದಂದು ರಣರಂಗಮಾ ಪ್ರದ್ಯಮ್ನನ ||೨೩||

ಅರಿದ ಸುಂಡಿಲ ಕಹಳೆವಿಡಿದೂದಿದವು ಕೆಲವು |
ಕರಿಯ ರದನಂಗಳ್ಗೆ ತಲೆಯೋಡ ಸೊರೆಗಟ್ಟಿ |
ನರದ ತಂತ್ರಿಯ ಪೂಡಿ ದಂಡಿಗೆವಿಡಿದು ಕೆಲವು ತುರಗಂಗಳ ||
ಖರಮಂ ಪಿಡಿದು ತಾಳವಿಕ್ಕಿದುವು ಕೆಲವು ಕುಂ |
ಜರಶಿರದ ಮುರಜಂಗಳಂ ಬಾರಿಸಿದುವು ಕೆಲ |
ವಿರದೆ ಕುಣಿದಾಡಿದುವು ಮರುಳ್ಗಳಾ ರಣರಂಗದೊಳ್ ನಾಟ್ಯರಚನೆ ಮೆರೆಯೆ ||೨೪||

ಹರಿಸುತಂ ತನ್ನ ಮೋಹರವನಿಂತೈದೆ ಸಂ |
ಹರಿಸತಂತಕನೊಲಿರೆ ಕಾಣುತೆ ವರೂಥಮಂ |
ಹರಿಸುತಂತಾ ಬಭ್ರುವಾಹನಂ ಖಾತಿಯಂ ಕೈಕೊಂಡು ಕಣೆಗರೆಯುತೆ ||
ಪರದಳವನೊಳಪೊಕ್ಕು ಸುಭಟರಂ ಸದೆದು ಸೊ |
ಪ್ಪರೆದಳಳಿಸಲಾಗ ಭೀತಿಯಿಂ ದೆಸೆದೆಸೆಗೆ |
ಪರೆದಳವಡಿಸಿದರ್ ಪಲಾಯನವನತಿಬಲರ್ ಪಾರ್ತನ ಪತಾಕಿನಿಯೊಳು ||೨೫||

ಕೆಡೆದ ಕರಿಗಳ ಬೆಟ್ಟವಳಿಯ ಗುಂಡುಗಳೊಳಗೆ |
ಮಡಿದ ಕುದುರೆಗಳ ಪೊಡೆಗಲ್ಲ ಪೊರಳಿಗಳೊಳಗೆ |
ಕಡಿದ ಕೈಕಾಲ ನರರಟ್ಟೆಗಳ ತುಂಡುಗಳ ಮರಮಟ್ಟೆಗಳ ನೆಳೆಯುತ ||
ಒಡೆದ ತಲೆಯೋಡ ದೋಣೆಗಳಿಂದೆ ತಡಿಗೈದು |
ತಿಡಿದ ಸೆಣವಸೆ ಮಿದುಳ್ಗಳ ಕರ್ದಮಂಗಳಿಂ |
ಬಿಡದೆ ರುಧಿರ ಪ್ರವಾಹಂ ಪಯೆ ಸವರಿದಂ ಪಾರ್ಥಜಂ ಪರಬಲವನು ||೨೬||

ಶಕ್ರತನಯನ ಸಂಭವಂ ಬಳಿಕ ರೋಷದಿಂ |
ಚಕ್ರಾಯುಧನ ಸುತನ ಸೂತನಂ ಕುದುರೆಯಂ |
ನಕ್ರಧ್ವಜನ ನತುಲ ಚಾಪಮಂ ಕತ್ತರಿಸಿ ವರಥನಂ ಮಾಡೆ ಕೂಡೆ ||
ವಿಕ್ರಮದೊಳಾಗ ಮತ್ತೊಂದು ಮಣಿರಥದಿಂದು |
ಪಕ್ರಮಿಸಿದಂ ಕಾಳಗಕೆ ಕೃಷ್ಣನಂದನನ |
ತಿಕ್ರಮಿಸಿ ಮಗುಳಾ ವರೂಥಮಂ ತಡೆಗಡಿದನಾಪಾರ್ಥಿ ಕೊಳುಗುಳದೊಳು ||೨೭||

ಪೊಸರಥವನಳವಡಿಸಿ ತಂದು ಹರಿಸೂನು ಬಂ |
ಧಿಸುವನಾ ತೇರನೊಡನೊಡನೆ ಪಾರ್ಥನ ಸುತಂ |
ಕುಸುರಿದರಿವಂ ಧುರದೊಳಿಂತು ಬಯಲಾದುದು ವರೂಥಮೆಪ್ಪತ್ತುಬಳಿಕ ||
ಅಸವಳಿದನಾ ಬಭ್ರುವಾಹನನ ಬಾಣದಿಂ |
ದಸುರಾರಿ ನಂದನಂ ಕೂಡೆ ಸಂತೈಸಿಕೊಂ |
ಡಸಮ ಬಲನೊಳ್ ಪಳಂಚಿದನಾಗಳಿರ್ವರ್ಗೆ ಮಸೆದುದಂಕಂ ಖತಿಯೊಳು ||೨೮||

ಎದ್ದು ನಭದೊಳ್ ಪಳಂಚುವರೊಮ್ಮೆ ಭೂತಳದೊ |
ಳಿದ್ದು ಹೆಣಗುವರೊಮ್ಮೆ ಬಳಸಿ ಮಂಡಲದಿಂದೆ |
ಹೊದ್ದಿ ತುಡುಕುವರೊಮ್ಮೆ ತರುಳಮಗುಲಾಗಿ ತಾಗುವರೊಮ್ಮೆ ಸರಿಬರಿಯೊಳು ||
ತಿದ್ದಿ ತುಡುಕುರೊಮ್ಮೆ ಬಾಣಾಂಬೂದಿಯ ತೆರೆಯೊ |
ಳದ್ದಿ ಪೊಣರುವರೊಮ್ಮೆ ಮೂರ್ಛೆಯಿಂ ಮೈಮರೆದು |
ಬಿದ್ದು ಚೇತರಿಸಿ ಕಾದುವರೊಮ್ಮೆ ಕೃಷ್ಣಪಾರ್ಥರ ತನಯರಾಹವದೊಳು ||೨೯||

ಕೃತಚಾಪ ಚಾಪಲರ್ ಶಸ್ತ್ರಾಸ್ತರ ನಿಪುಣರು |
ನ್ನತ ಸತ್ವಸತ್ವರರ್ ದುಸ್ಸಹರಜೇಯರ |
ಪ್ರತಿಸಮರ ಸಮರಥರ್ ಸಾಹಸಿಗಳಿರ್ವರುಂ ಗಗನ ಗಮನದ ವೀರರು ||
ಧೃತಮಾನ ಮಾನಸರ್ ಕುಪಿತ ಮುಖಕರ್ಕಶರ್ |
ವಿತತ ರಣ ತರಣಕರ್ ಚಂಡಭುಜ ಬಲಯುತರ್ |
ನುತ ಕಾರ್ಷ್ಣಿಕಾರ್ಷ್ಣಿಗಳ್ ಕಡುಪಿಂದೆ ಕಾದಿದರ್ ಬೇಸರದೆ ಸಂಗರಡೊಳು ||೩೦||

ಏಳುವರ್ ಬೀಳುವರ್ ಮೂದಲೆಯ ನುಡಿಗಳಂ |
ಪೇಳುವರ್ ಕೇಳುವರ್ ನಾಂಟಿದ ಶರಂಗಳಂ |
ಕೀಳುವರ್ ತಾಳುವರ್ ಗಾಯವಂ ವಿಕ್ರಮಾಗ್ನಿಗೆ ಪಗೆಯೊಡಲ ಹವಿಯನು |
ಬೇಳುವರ್ ಬಾಳುವರ್ ವೀರಸಿರಿಯಂ ತಳೆದು |
ಸೀಳುವರ್ ತೂಳುವರ್ ಕಣೆಯಿಂದರುಣ ಜಲದೊ |
ಳಾಳುವರ್ ಪೂಳುವರ್ ಕೋಲ್ಗಳಿಂದಹಿತರಂ ಪ್ರದ್ಯುಮ್ನ ಪಾರ್ಥಸುತರು ||೩೧||

ಇಂತೊರ್ವರೊರ್ವರ್ಗೆ ಸೋಲದೆ ಸುಪರ್ನ ಹನು |
ಮಂತರ ಕದನದಂತೆ ಧರೆಯೊಳ್ ಪೊಣರ್ದು ಮೇ |
ಣಂತರಿಕ್ಷವನಡರ್ದುರೆ ಪೆಣಗಿದರ್ ಬಳಿಕ ರೌಕ್ಮಿಣೇಯದ ಚಾಪದ ||
ತಂತುವಂ ಕತ್ತರಿಸಲಾರ್ಜುನಿಯ ಮೇಲೆ ಗದೆ |
ಯಂ ತೆಗೆದಿಡಲ್ಕವನದಂ ನಡುವೆ ಕಡಿಗೈಯ್ಯ |
ಲೆಂತೊದಗಿದನೊ ಮತ್ತೆ ಬಿಲ್ವಿಡಿದು ಹರಿಸೂನು ಪಾರ್ಥಿಯಂ ತೆಗೆದೆಚ್ಚನು ||೩೨||

ಪೊಡವಿಗಧಿನಾಥ ಕೇಳ್ ಬಳಿಕಿರ್ವರುಂ ಗಗನ |
ಕಡರಿ ನಿಜಸತ್ವದಿಂದನ್ಯೋನ್ಯಮಾರ್ದಿಸಲ್ |
ಸಿಡಿಲ ರಭಸದೊಳಂಬುಗಳ್ ಗಲುಭೆಯ ವೀರರ್ ಕ್ರೋಶಮಾತ್ರಕಾಗಿ ||
ಸಿಡಿದಂತರಿಕ್ಷದಿಂ ಧಾರಿಣೀತಳಕೆ ಪೊಡೆ |
ಗೆಡೆದರಾಕ್ಷಣದೊಳ್ ಪುರಂದರನ ವಜ್ರದಿಂ |
ಕಡಿವಡೆಡು ಮೇದಿನಿಗೆ ಬೀಳ್ ಕುಲಗಿರಿಗಳತೊಬ್ಬೊಬ್ಬರೊಂದುಕಡೆಗೆ ||೩೩||

ಸಾಹಸಮದೆಂತೊ ಭೂತಳಕೆ ಬೀಳುತೆ ಬಭ್ರು |
ವಾಹನಂ ತರಹರಿಸುತೆಚ್ಚರಿಕೆಗುಂದದೆ ಮ |
ಹಾಹವಕೆ ಬೇರೊಂದು ಮಣಿವರೂಥವನಡರ್ದಾಗ ತನ್ನಭೀಮುಖದೊಳು ||
ಆ ಹರಿಕುಮಾರನಂ ಕಾಣದೆ ಧನಂಜಯನ |
ಮೋಹರವನೈದಿದಂ ಪಸಿದ ಪೆಬರ್ಯಲಿ ಮೃಗಸ |
ಮೂಹಮಂ ಪುಗುವಂತೆ ಕಾಡಾನೆ ತರುಗಳಂ ತುಡುಕುವಂತೆ ||೩೪||

ಕವಿದರಾಂತರ್ ನಿಂದರುರುಬಿದರ್ ತರುಬಿದರ್ |
ತಿವಿದರೆಚ್ಚರ್‌ಪುದರೊತ್ತಿದರ್ ಮುತ್ತಿದರ್ |
ವಿವಿಧಾಯುಧಂಗಲಂ ಬೀರದರ್ ವಿರಿದರ್ ವಿಗ್ರಹಾವೇಶದಿಂದೆ ||
ತವೆ ತಾಗಿದರ್ ತಡೆದರಡರಿದರ್ ತೊಡರಿದರ್ |
ತವಕದಿಂ ತಮತಮಗೆ ಕಾದಿದರ್ ಮೋದಿದರ್ |
ಬವರದೊಳ್ ಪಾರ್ಥಿಯಂ ಬಳಸಿದರ್ ಸೆಳಸಿದರ್ ನರನ ಸೇನೆಯ ಸುಭಟರು ||೩೫||

ಒತ್ತರಿಸಿ ಫಲುಗುಣನ ಸೂನುವಂ ಭಾನುವಂ |
ಮುತ್ತಿದುವು ಚಾತುರಂಗಾಳಿಯುಂ ಧೂಳಿಯುಂ |
ಬಿತ್ತರದ ಮಣಿಪುರ ಸ್ವಾಮಿಯಂ ಭೈಮಿಯಂ ಸಲೆ ಮುಸುಕಿತಾ ಕ್ಷಣದೊಳ್ ||
ಮೊತ್ತದ ಶರಾವಳಿಯ ಸೋನೆಯುಂ ಸೇನೆಯುಂ |
ಮತ್ತೆ ಚಿತ್ರಾಂಗದೆಯ ಜಾತನಂ ಧಾತನಂ |
ಹತ್ತಿ ಹರಿದುದು ಬಲಮಶೇಷಮಂ ಘೋಷಮುಂ ಘೋರತರ ಸಂಗರದೊಳು ||೩೬||

ರಿಪುಬಲದ ಮುತ್ತಿಗೆಯ ಕೋಲಾಹಲಂಗಳಂ |
ವಿಪುಲ ಶಸ್ತ್ರಾಸ್ತ್ರ ಪ್ರಯೋಗಂಗಳುರುವೆಯಂ |
ಸಪದಿ ಪ್ರಹಾರದಾಯುಧ ಸಮೂಹಂಗಳಂ ಕಂಡು ಫಲುಗುಣನ ಸೂನು ||
ಕುಪಿತ ಬದ್ಧ ಭ್ರಯಕುಟಿ ಮುಖನಾಗಿ ವಹಿಲದಿಂ |
ದ್ವಿಪ ಹಯ ವರೂಥ ಪತ್ತಿಗಳೆನಿತು ಕವಿದುವನಿ |
ತಪರಿಮಿತ ಬಾಣಮಂ ಸುರಿದನರಿದಂ ಪೊರೆದನಂತಕ ಪುರದ ಸಿರಿಯನು ||೩೭||

ಅರಸ ಕೇಳಾಶ್ಚರ್ಯಮಂ ಬಳಿಕ ಪಾರ್ಥಜನ |
ಶರವರ್ಷದೊಳ್ ನನೆಯದವರಿಲ್ಲ ಪಾಂಡವನ |
ಪರಿವಾರದೊಳ್ ಕರಿ ತುರಗ ರತದ ಪಾಳೆಯದೊಳಿರ್ದ ಜನಜಂಗುಳಿಯೊಳು ||
ಅರರೆ ಬಿಲ್ಗಾರತನದೇಳ್ಗೆಯೆಂತುಟೊ ಜಗ |
ದ್ಭರಿತನಾಗಿಹ ವಿಷ್ಣುಮಾಯಾ ಪ್ರಬಾವದಂ ||
ತಿರೆ ಬಭ್ರುವಾಹನನ ಬಾಣಂಗಳೆಲ್ಲರಂ ಮುಸುಕಿ ಮೋಹಿಸಿತಿರ್ದುವು ||೩೮||

ರಂಬಾಧಿಗಳ ಕುಚದ ಕುಂಕುಮದೊಳಾಳ್ದ ಹಾ |
ರಂ ಭಾರಿಯಂಕದೊಳ್ ಮಡಿದ ವೀರಾಂಗ ಸರಿ |
ರಂಭಾತಿಶಯದ ಸಮ್ಮರ್ದನದೊಳಾತನಂ ಪರಿದು ಸೂಸುವ ತೆರೆದೊಳು ||
ಕುಂಭಿಕುಂಭದ ಸುಮುಕ್ತಾಫಲಂಗಳ್ ಶಾತ |
ಕುಂಭ ಚಿತ್ರತ ಮಾರ್ಗಣದ ರುಚಿಗಳೊಡನೆ ರಣ |
ಕುಂಭನಿಗೆ ಬೀಳುತಿರ್ದುವು ಬಭ್ರುವಾಹನನತೀವ್ರತರದಿಸುಗೆಯಿಂದೆ ||೩೯||

ಮುರಿದುನಗಣಿತ ರಥದ ರಾಜಿಗಳ್ ತೇಜಿಗಳ್ |
ತೊರೆದುವಸುವಂ ಮಡಿದುವಾನೆಗಳೆ ಸೇನೆಗಳ್ |
ಕುರಿದರಿವೊಲಾದರರಿವೀರರೊಳ್ ಧಿರರೊಳ್ ಪಾರ್ಥ ನಂದನನ ಮುಂದೆ ||
ಇರಿದು ಮೆರೆಯಲ್ಕಾಣೆನೊರ್ವರಂ ಸರ್ವರುಂ |
ನೆರೆ ಗೆಲ್ದತುಳ ಮಾರ್ಘನೊರ್ವರಂ ಸರ್ವರುಂ |
ಹೆರದೆಗೆದು ಕಂಡಕಡೆಗೋಡಿದರ್ ನೋಡಿದರ್ ಜೀವದುಳಿವಂ ಸುಭಟರು ||೪೦||

ತಾಗಿ ದಂದುಗಗೊಂಡ ನನುಸಾಲ್ವನಂಗಯಸಿ |
ಬೀಗಿದಂ ಕರ್ಣಜಂ ಹಂಸಧ್ವಜಂ ಕೆಣಕಿ |
ನೀಗಿದಂ ಮಾನಮಂ ಯೌವನಾಶ್ವಂ ತಡೆದು ಸೋಲ್ದಂ ಸುವೇಗನಾಂತು ||
ಸಾಗಿದಂ ಧುರದಿಂದೆ ಸೀತಕೇತು ಸೆನಸಿ ತಲೆ |
ದೂಗಿದಂ ಪರಿಭವಕ್ಕನಿರುದ್ಧ ನಿರದಿಳೆಗೆ |
ಬಾಗಿದಂ ಮೈಮರೆತು ಕೃತವರ್ಮ ಸಾತ್ಯಕಿ ಗಳಿದಿರಾಗಿ ದೆಸೆಗೆಟ್ಟರು ||೪೧||

ಏನೆಂಬೆನಾರಣ ವಸಂತದೊಳ್ ನೆರೆದ ಜಯ |
ಮಾನಿನಿ ವಿಮುಖಮಾದ ವಿರಹದಿಂ ತಪಿಸುವ ಭ |
ಟಾನೀಕಮಂ ಬೆದರಿಸದೆ ಮಾಣದೆಂಬಿನಂ ಪಾರ್ಥಿಯ ಶಿಲೀಮುಖಾಳಿ ||
ದಾನ ಮಾತಂಗ ಘಟೆಗೆರೆಗಿದುದು ಸ್ಯಂದನ ವಿ |
ತಾನಮಂ ಡೋರುಗಳೆದು ಗರಿಯ ಗಾಳಿಯಿಂ |
ಬಾನೆಡೆಗೆ ತೀಡಿದುದು ಶತಪತರದಳದ ಮೇಲೈದಿ ವಿಸಟಂ ಬರಿದುದು ||೪೨||

ಜೋದ ರಾವುತ ರಥಿಕರಳಿದಾನೆ ಕುದುರೆ ತೇರ್ |
ಪೋದುವೆಣ್ದೆಸೆಗೆ ತಮ್ಮಿಚ್ಛೆಯಿಂ ಪಟ್ಟಣದ |
ಬೀದಿಗರ್ ಕೂಡಿದರ್ ಲಾಯದೊಳೆ ಸೂರೆಗೊಂಡರ್ ಭೂಪಣಾದಿಗಳನು ||
ಕಾದುವ ಕಲಿಗಳಿಲ್ಲ ಪಡೆಯೊಳ್ ಪಲಾಯನವ |
ನಾದರಿಸಿದರ್ ಭಟರ್ ಪ್ರದ್ಯುಮ್ನ ಮೊದಲಾದ |
ರಾದಿಯೊಳ್ ಬಿದ್ದು ಮೋಹಿತರಾದರಾ ಬಭ್ರುವಾಹನನ ಕೋಲ್ಗಳಿಂದ ||೪೩||

ಪಡೆ ಪಟಪುಗೆಟ್ಟು ದೆಸೆದೆಸೆಗೋಡುತಿರ್ಪುದಂ |
ತಡೆತಡೆದು ಕಡುಗಲಿಗಳಡಗೆಡಹುತಿರ್ಪುದಂ |
ಬೊಡೆಹೊಡೆದು ಪುರಕಾನೆ ಕುದುರೆಯಂ ಕೂಡಿಕೊಳುತಿರ್ಪುದಂ ದೊರೆದೊರೆಗಳು ||
ನಿಡುನಿಡುಸರಳ್ ನಾಂಟಿ ಮೂರ್ಛೆವಡೆದಿರ್ಪುದಂ |
ನಡುನಡುಗುತತಿಬಲರ್ ಕೈ ಮರೆಯುತಿರ್ಪುದಂ |
ಬಿಡಬಿಡದೆ ಫಲಗುಣಂ ನೋಡಿ ಖತಿಯಿಂದೆ ಘಡಿಘುಡಿಸಿ ಕಿಡಿಕಿಡಿಯಾದನು ||೪೪||

ಗಾಂಡೀವಮಂ ತುಡುಕಿ ಟಂಕಾರಮಂಬುಜ ಭ |
ವಾಂಡಮಂ ತುಂಬುದಿರನೆಂಬಿನಂ ಜೇಗೈದು |
ತಾಂಡವದ ಮೃಡನ ಸಾರೂಪ್ಯಮಂ ಕೈಕೊಂಡು ರೋಷತಾಮ್ರಾಕ್ಷನಾಗಿ ||
ಪಾಂಡವಂ ಮಣಿರಥದೊಳೆಸೆವ ನಡುವಗಲ ಮಾ |
ರ್ತಾಂಡನಂತುಜ್ವಲಿಸುತೈದಿದಂ ಕಾಳಗಕೆ |
ಖಾಂಡವದಹನದಂದು ತನ್ನ ಮೇಲಮರಪತಿ ಮುಳಿದು ಕದನಕೆ ಬಹವೊಲು ||೪೫||

ಆ ನರಂ ಕೋಪಮಂ ತಾಳ್ದು ನಿಜಚಾಪಮಂ |
ಜ್ಯಾ ನಾದಮಂ ಮಾಡೆ ಹಂಸಧ್ವಜಂ ಕೂಡೆ |
ಸೇನೆ ಸಹಿತುರುಬಿದಂ ಪಾರ್ಥಿಯಂ ತುರುಬಿದಂ ಕೂರ್ಗಣೆಗಳಂ ಕರೆಯುತೆ ||
ಬಾನೆಡೆಯೊಳೆತ್ತಲುಂ ದೆಸೆದೆಸೆಯ ಸುತ್ತಲುಮ |
ನೂನ ಶರಜಾಲಮಯಮಾಗಿರ್ದುದಾ ಸಮಯ |
ಮೇನೆಂಬೆನಚ್ಚರಿಯ ಕಾಳಗದ ಹೊಡಪರಿಯ ನತಿಭಯಂಕರಮಾಗಲು ||೪೬||

ಬಳಿಕ ಹಂಸಧ್ವಜ ಬಭ್ರುವಾಹನಂ |
ಗಳವಿಯೊಳ್ ಕಾಳೆಗಂ ಪೂಣ್ದುದು ಕಠೋರಮೆನೆ |
ದಳಕೆ ದಳಮಗ್ಗಳಿಕೆಗಗ್ಗಳಿಕೆ ಧೃತಿಗೆ ಧೃತಿ ಕೊಲೆಗೆ ಕೊಲೆ ಕೋಲ್ಗೆ ಕೋಲು ||
ಮುಳಿಸಿಂಗೆ ಮುಳಿಸು ಗಾಯಕೆ ಗಾಯ ಮದಟಿಗದ |
ಟಳವಡಿಕೆಗಳವಡಿಕೆ ಸಮಮಾಗೆ ದೇವಪುರ |
ನಿಳಯ ಲಕ್ಷ್ಮೀವರನ ಮೈದುನಂ ತಲೆದೂಗೆ ಮೆಚ್ಚಿ ಸುರರುಲಿಯೆ ಮೇಗೆ ||೪೭||