ಸೂಚನೆ ||
ಹರಿಗಳಂ ತಡೆಯಲ್ಕೆ ಸಾರಸ್ವತಾಖ್ಯಪುರ |
ವರದೊಳಂತಕನ ವೃತ್ತಾಂತಮಂ ಕೇಳ್ದು ಸಂ |
ಗರದೊಳಚ್ಯುತನ ಮತದಿಂ ವೀರವರ್ಮನಂ ಜಯಿಸಿದಂ ಕಲಿಪಾರ್ಥನು ||
ಸೋಮ ಕುಲತಿಲಕ ಜನಮೇಜಯ ನರೇಂದ್ರ ಕೇ |
ಳಾ ಮಯೂರಧ್ವಜಂ ತನ್ನ ನಗರದೊಳತಿ |
ಪ್ರೇಮದಿಂ ಮೂರುದಿನಮರ್ಜುನ ಮುರಾರಿಗಳನಿರಿಸಿಕೊಂಡಿರ್ದು ಬಳಿಕ ||
ಭೀಮಾನುಜನ ಕೂಡೆ ಪೊರಮಟ್ಟನನುಸಾಲ್ವ |
ಕಾಮ ಕರ್ಣಜ ಬಭ್ರುವಾಹನ ಸುವೇಗ ನಿ |
ಸ್ಸೀಮ ನೀಲಧ್ವಜ ಮರಾಳಧ್ವಜಾದಿಗಳ್ ಪಡೆವರಸಿ ನಡೆದರೊಡನೆ ||೧||
ತುಂಬಿತು ಮಹೀಮಂಡಲವನತುಲಸೇನೆ ನಡೆ |
ಗೊಂಬುದಿನ್ನೆಲ್ಲಿಗೆ ಮಹಾದೇವ ಕೌತುಕಮಿ |
ದೆಂಬ ತೆರನಾಗಿ ಮುಂದಕೆ ತಳೆವ ಕುದುರೆಗಳ ಕೂಡೆ ಸೌರಾಷ್ಟ್ರಕಾಗಿ ||
ಬೆಂಬಿಡದೆ ಬಂದುದರ್ಜುನನ ಬಲಮಲ್ಲಿ ಸುಖ |
ದಿಂಬಾಳ್ವ ಭೂವರಂ ವೀರವರ್ಮಂ ಜನಾ |
ಡಂಬರದೊಳಿರ್ದಪಂ ಸಾರಸ್ವತಾಖ್ಯ ನಗರದೊಳತಿ ವಿಲಾಸದಿಂದೆ ||೨||
ನೆರೆ ನಾಲ್ಕು ಚರಣದಿಂ ಧರ್ಮಮಡಿಯಿಡುತಿಹುದು |
ಮರೆದು ಕನಸಿನೊಳಾದೊಡಂ ಪಾತಕದ ಕೃತ್ಯ |
ಕೆರಗುವವರಿಲ್ಲ ಪುರುಷ ಸ್ತ್ರೀಕದಂಬದೊಳ್ ವ್ಯಾದಿಗಳ ಪೀಡೆಗಳನು ||
ಅರಿಯರಾರುಂ ದುಃಖ ಶೋಕಸಂತಾಪದಿಂ |
ಮರುಗುವವರಂ ಕಾಣಿನಾ ನೃಪನ ರಾಷ್ಟ್ರದೊಳ್ |
ಸೆರೆಯಾಗಿ ವೈವಸ್ವತಂ ಮನೆಯಳಿಯತನದೊಳಿರುತಿಹಂ ಭೂವರಂಗೆ ||೩||
ಆ ವೀರವರ್ಮನೀ ಪಾಂಡವನ ಕುದುರೆಗಳ್ |
ಕಾವ ಪಡೆಸಹಿತ ನಿಜರಾಷ್ಟ್ರಕೈತಂದುವೆಂ |
ಬೀ ವಾರ್ತೆಯುಂ ಕೇಳ್ದು ನಗುತೆ ಖತಿಗೊಂಡು ಕೃಷ್ಣಾರ್ಜುನರ ಸಾಹಸವನು ||
ನಾವರಿದುಕೊಂಬೆವಶ್ವಂಗಳಂ ಕಟ್ಟುವುದು |
ನೀವೆಂದು ಕಳುಪಲಾ ನೃಪನ ಪರಿವಾರಂ ಮ |
ಹಾ ವಿಭವದಿಂದೆ ಕರಿ ತುರಗ ರಥ ಪಾಯದಳಮೊತ್ತರಿಸೆ ಪೊರಮಟ್ಟುದು ||೪||
ಸುಲಭನೆಂದನುಪಮ ಸುಫಾಲನೆಂದುನ್ನತ ಕು |
ವಲನೆಂದು ನೀಲನೆಂದಗ್ಗದ ಸರಳನೆಂದು |
ಬಲವಂತರಿವರೈವರಾ ನೃಪನ ಸೂನುಗಳ್ ಪೊರಮಟ್ಟು ಸೇನೆ ಸಹಿತ ||
ಕೆಲವರಿದಡರ್ದು ಕೈದುಡುಕಿ ತುಸ ಮಾತ್ರಮೆನೆ |
ಫಲುಗುಣನ ತುರಂಗಂಗಳಂ ತಂದು ನಿಮಿಷದೊಳ್ |
ನಿಲಿಸಿದರ್ಪಿತನ ಸನ್ನಿಧಿಯೊಳದನರ್ಜುನನ ಪಡೆ ಕಂಡು ಕವಿದುದೊಡನೆ ||೫||
ಮೋಹರದ ಮುಂದೆ ನಡೆತರುತಿರ್ದ ಕಲಿ ಬಭ್ರು |
ವಾಹನಂ ಕೇಳ್ದು ಕಡುಗೋಪದಿಂದೊದಗಿ ಬಂ |
ದಾಹವಕೆ ಶಂಖನಾದಂಗೆಯ್ಯ ಬೆದರಿತು ಜಗತ್ತ್ರಯಂ ಪರಬಲದೊಳು ||
ಸಾಹಸಿಗಳುಡಗಿದರ್ ಬಳಿಕೆರಡು ಚೂಣಿಗಳ |
ಕಾಹುರದ ಕಲಿಗಳೊಡವೆರಿಸಿ ಹೊಯ್ಡಾಡಿದರ್ |
ಬಾಹು ನಖ ಮುಷ್ಟಿ ಕೇಶಾಕೇಶಿ ಮಲ್ಲಯುದ್ಧದ ಹತಾಹತಿಗಳಿಂದೆ ||೬||
ಬಳಿಕೆರಡು ಕಡೆಯ ಭಟರುಬ್ಬರದೊಳುಬ್ಬರದೊ |
ಳೆಳಸಿ ಹೊಯ್ದಾಡುತಿರಲಾಚೆಯಿಂದೀಚೆಯಿಂ |
ತಳತಂತ್ರಮೊಡನೊಡನೆ ಮುಗ್ಗಿದುದು ಮಗ್ಗಿದುದು ಬಹಳ ಕೋಲಾಹಲದೊಳು ||
ಖಳಿಕಟಿಲು ಖಟಿಲೆಂಬ ರವದಿಂದೆ ಜವದಿಂದೆ |
ಕಳಿವರಿದು ಘೋರಪ್ರಹಾರದಿಂ ವೀರದಿಂ |
ಬಳಸಿ ಬಿದ್ದುದು ಮಂದಿ ಹೆಣಮಯದ ರಣಮಯದ ರೌಕುಳದ ರಚನೆ ಮೆರೆಯೆ ||೭||
ಮತ್ತೆ ಪುರದಿಂದಯುತ ನಿಯುತ ಸಂಖ್ಯೆಯ ರಥವ |
ಮೊತ್ತದಿಂ ಕುದುರೆ ಮಂದಿಗಳ ಸಂದಣಿಗಳಿಂ |
ಮತ್ತಗಜ ಘಟೆಗಳಂದಾನೃಪನ ಸುತರೈವರುಂ ಪಚಾರಿಸುತ ಬಂದು |
ಒತ್ತಾಯಮಂ ಮಾಡೆ ಬಭ್ರುವಾಹಂ ಕನ |
ಲ್ದುತ್ತುಂಗ ಚಾಪದಿಂ ಕಣಿಗರೆಯುತಿರಲ ನಿಬ |
ರೆತ್ತಲಡಗಿದರೊ ಪೇಳೆನೆ ಮಡಿದುದರಿಚಾತುರಂಗಮದನೇವೇಳ್ವೆನು ||೮||
ಕಲಿ ಬಭ್ರುವಾಹನನ ಕೋಲ್ಗಳಿಂ ನಿಜಸೇನೆ |
ಖಿಲಮಾಗುತಿರೆ ಕೇಳ್ದು ವೀರವರ್ಮಂ ತಾನೆ |
ಬಲ ಸಹಿತ ಪೊರಮಟ್ಟು ತನಗಳಿಯನಾಗಿರ್ದ ಕಾಲಂಗೆ ತೋರಿಸಲ್ಕೆ ||
ಕೊಲತೊಡಗಿದಂ ಬಳಿಕ ಧರ್ಮರಾಜಂ ಮುಳಿದು |
ಫಲಗುಣನ ತಳತಂತ್ರಮಂ ತನ್ನ ಮಾವಂಗೆ |
ಗೆಲವಾಗಬೇಕೆಂದು ಜೀವಿಗಳ ವಧೆಗೆ ಜವನಳಕುವನೆ ಜಗದೊಳೆನಲು ||೯||
ಎಂದಿರ್ದೊಡಂ ಪ್ರಾಣಿಗಳನೆಲ್ಲರುಂ ಕೊಲ್ವ |
ದಂದುಗಂ ತನಗೆ ಬಿಡದೆಂದು ಮುಳಿದಂತಕಂ |
ಬಂದು ಪೊಕ್ಕನೊ ಕಿರೀಟಿಯ ದಳವನೆನೆ ಹತಾಹತಿಗಳಂ ಮಾಡುತಿರಲು ||
ನಿಂದು ಕಾದುವರಿಲ್ಲದಂ ಕಂಡು ಪಾರ್ಥ ಮು |
ಕುಂದನಂ ಬೆಸಗೊಂಡನೆಲೆ ದೇವ ಸೈನ್ಯಮಂ |
ಮುಂದುಗೆಡಿಸುವ ಪರಾಕ್ರಮದ ಕಟ್ಟಾಸುರದ ವೀರನಿವನಾವನೆಂದು ||೧೦||
ತಾತ ಕೇಳೈ ಪಾರ್ಥ ನಿನಗೆ ಹಿರಿಯಯ್ಯನಹ |
ನೀತಂ ಕಣಾ ಧರ್ಮರಾಜ ನೀ ನೃಪನ ಜಾ |
ಮಾತನಾಗಿರ್ದಪಂ ಮಾವಂಗೆ ಹಿತಮಾಗಿ ನಮ್ಮ ಚಾತುರ್ಬಲವನು ||
ಘಾತಿಸುವನೆಂದು ಹರಿ ನುಡಿದೊಡೆ ಧನಂಜಯನಿ |
ದೇತಕೆ ಮಹೀಪತಿಗೆ ತಾನಳಿಯನಾದನೀ |
ಭೂತಳದೊಳಿದನರಿಪಬೇಕೆಂದು ಬೇಡಿಕೊಳಲಸುರಹರನಿಂತೆಂದನು ||೧೧||
ಆಲಿಸಾದೊಡೆ ಪಾರ್ಥ ವೀರವರ್ಮಕ ಮಹೀ |
ಪಾಲಕನ ತನುಜೆ ಮಾಲಿನಿಯೆಂಬ ನಾಮದಿಂ |
ದಾಲಯದೊಳಿರುತಿರ್ದೊಡಾದುದಾ ಕನ್ನಿಕೆಗೆ ಯೌವ್ವನಪ್ರಾಪ್ತಿ ಬಳಿಕ ||
ಬಾಲಕಿಗೆ ಪತಿಯಾಗಬೇಕೆಂದು ನರನಾಥ |
ನಾಲೋಚಿಸಿದೊಡಾಕೆ ಪಿತನೊಡನೆ ಮಾನವರ |
ಮೇಲೆನಗೆ ಮನವೆರಗದೆನಲವಂ ಮತ್ತೆ ವರನಾರೆಂದೊಡಿಂತೆಂದಳು ||೧೨||
ಬೊಪ್ಪ ಕೇಳ್ ಮನುಜರ್ಗೆ ಮರಣ ಮೆಂದಿರ್ದೊಡಂ |
ತಪ್ಪದದರಿಂದೆ ಮಾನವರ ಪಾಣಿಗ್ರಹಣ |
ಕೊಪ್ಪೆನಾಂ ಪತಿಯೊಳುರಿವುಗವೇಳ್ಪುದಲ್ಲದೊಡೆ ವಿಧವೆಯಾಗಿರವೇಳ್ಪುದು ||
ಅಪ್ಪುವೊಡೆ ನಿಜಕಾಂತನಿಲ್ಲದೊಡೆ ಮನ್ಮಥಂ |
ನಿಪ್ಪಸರದಿಂದಿಸುವ ಕುಸುಮಾಸ್ತ್ರ ಕನ್ಯರಂ |
ಬಪ್ಪನರಕವ ನರಿಯದೊಡಗೂಡುವೇಳ್ಪುದಿದಕಂಜುವೆಂ ತಾನೆಂದಳು ||೧೩||
ನಿಜನಾಥನಿರ್ದಲ್ಲಿ ಮರಣಮಾದೊಡೆ ಪುಣ್ಯ |
ಮಜನಾದರಿಪನವನ ಕೂಡೆ ತನ್ನಂಗಮಂ |
ತ್ಯಜಿಸಿದೊಡೆ ವಿಧವೆಯಾದೊಡೆ ಸತಿಗೆ ಪಾತಕಂ ಬಂದಲ್ಲದಿರದು ಬಳಿಕ |
ಪ್ರಜೆಗಳಂ ಪಡೆದು ಸದ್ಗತಿಗೈದವೇಳ್ಪುದಿದು |
ರುಜುವಲ್ಲ ಮಾನುಷ್ಯಮಾರ್ಗಮಿದಕಾರದಾಂ |
ಭಜಿಸುವೆಂ ಧರ್ಮರಾಜನ ನೆನ್ನನಾತಂಗೆ ಕುಡು ಮದುವೆಯಹೆನೆಂದಳು ||೧೪||
ಮೃತರಾದೊಡವನ ಪೊರೆಗೈದುವರ್ ಸುಕೃತ ದು |
ಷ್ಕೃತವನಾತನೆ ಬಲ್ಲನದರಿಂದೆ ತನಗೆ ರವಿ |
ಸುತನೆ ವರನಾದಪಂ ವ್ರತ ದಾನ ಜಪತಪದೊಳಾತನಂ ಮೆಚ್ಚಿಸುವೆನು ||
ಅತಿಶಯಮಿದೆನ್ನದಿರ್ ನಿನ್ನ ಪುಣ್ಯದ ಫಲಂ |
ಪ್ರತಿಕೂಲಮಾಗದೆನಗಿನ್ನು ವೈವಸ್ವತಂ |
ಪತಿಯಾಗದಿರನವನ ಕಾಯಮಂ ತಳೆದು ಜಸಪಡೆದಪೆಂ ತಾನೆಂದಳು ||೧೫||
ಇಂತೆಂದು ಮಾಲಿನಿ ಮಹೀಪತಿಗೆ ವಿನಯದಿಂ |
ದಂತಸ್ಥಮಾಗಿಹ ಮನೋರಥವ ನೊರೆದಿನ್ನು |
ಸಂತತಂ ಬಿಡದೆ ನಾನಾವಿಧದ ಪುಣ್ಯ ಕರ್ಮಂಗಳಂ ನೀನೇ ರಚಿಸಿ ||
ಎಂತಾದೊಡಾಂ ಧರ್ಮರಾಜಂಗೆ ಮದುವೆಯ |
ಪ್ಪಂತೆ ಮಾಡೆಂದು ಕಾಲ್ಗೆರಗಿದೊಡೆ ತನುಜೆಯಂ |
ಸಂತೈಸಿ ತೊಡಗಿದಂ ಯಮಸೂಕ್ತದಿಂದ ವೈವಸ್ವತ ಪ್ರಾರ್ಥನೆಯನು ||೧೬||
ಅಂದು ಮೊದಲಾಗಿ ಮಾಲಿನಿ ದಿವಾರಾತ್ರಿಯೊ |
ಳ್ಕುಂದದೆ ಕೃತಾಂತನಂ ನಾನಾ ವಿಧಾನಂಗ |
ಳಿಂದೆ ಪೂಜಿಸುತಿರ್ದಳನ್ನೆಗಂ ದಿನದಿನಕೆ ಯೌವನಂ ಪ್ರಬಲಮಾಗೆ ||
ಇಂದುವದನೆಯ ನೆನಹಿಗೊಳಗಾಗಿ ತರಣಿಜಂ |
ಬಂದು ಮೈದೋರದಿರೆ ಧರ್ಮದ ಸಹಾಯಕ್ಕೆ |
ಮುಂದುವರಿದಮರಮುನಿ ನಾರದಂ ತಿಳಿದನೀ ವೃತ್ತಾಂತಮಂ ಮನದೊಳು ||೧೭||
ನಾರದ ಮುನೀಶ್ವರಂ ಕಾಲನಲ್ಲಿಗೆ ಬಂದು |
ವೀರವರ್ಮಕ ನೃಪನ ತನುಜೆ ಮಾಲಿನಿಯಂ ವಿ |
ಚಾರಿಸದೆ ಸುಮ್ಮನಿರ್ದಪರೆ ನೀಂ ಧರೆಯ ಮಾನವರನೊಲ್ಲದೆ ನಿನ್ನನು ||
ಹಾರೈಸಿ ಪತಿಯಾಗಬೇಕೆಂದು ಭಜಿಸುವಳ್ |
ಚಾರಿತ್ರ ಗುಣ ಶೀಲ ಸತ್ಯ ಧರ್ಮಂಗಳಿಂ |
ಸಾರಸ್ವತಾಖ್ಯ ಪುರಮಂ ಪಾವನಂಗೈವಳಾಕೆಯಂ ವರಿಸೆಂದನು ||೧೮||
ನಿಜವಾಗಿ ಮನದೊಳನ್ಯವನುಳಿದು ತನ್ನನೇ |
ಭಜಿಪ ಶರಣಾಗತರ ನಾದರಿಸದಿರ್ದ ಪರೆ |
ಸುಜನರೆಲೆ ತರಣಿಸುತ ನಾಲ್ಕು ಚರಣವನೂರಿ ನಡೆವ ಧರ್ಮದೊಳಡರ್ದು ||
ಪ್ರಜೆಗಳಿಂದೆಸೆವ ಸಾರಸ್ವತ ಪುರಕ್ಕಾ ಮ |
ನುಜ ವೇಷಮಂ ತಾಳ್ದು ನೀಂ ಪೋಗಿ ವರಿಸು ಭೂ |
ಭುಜ ಕುವರಿಯನೆಂದೊಡೊಪ್ಪಿ ವೈವಸ್ವತಂ ಕಳುಹಿದಂ ಸುರಮುನಿಯನು ||೧೯||
ಅಸ್ವಭಾವಕಮಲ್ಲ ನೈಜಮಿದು ತನಗೆನ ತ |
ಪಸ್ವಿಗಳ ಮೌನಿಮಣಿ ನಾರದಂ ಪೋಗಿ ವೈ |
ವಸ್ವತಂಗರುಪಿ ಮಾಲಿನಿಯ ಭಾವವನಲ್ಲಿ ಬೀಳ್ಕೊಂಡು ಖೇಚರದೊಳು ||
ಸುಸ್ವರದ ವೀಣೆವಿಡಿದಾನಂದದಿಂದೆ ಸಾ |
ರಸ್ವತ ಪುರಕೆ ಬಂದು ಕಾಲನಾಡಿದುದಂ ಯ |
ಶಸ್ವಿಯಾಗಿಹ ವೀರವರ್ಮನಂ ಕಂಡು ಸತ್ಕೃತನಾಗಿ ವಿವರಿಸಿದನು ||೨೦||
ಧರ್ಮರಾಜನ ಪೊರಗೆ ಪೋಗಿರ್ದೆನೆಲೆ ವೀರ |
ವರ್ಮ ಕೇಳಿನ್ನೆಗಂ ನೀನಾರ್ಜಿಸಿದ ಪುಣ್ಯ |
ಕರ್ಮ ಫಲದಿಂದೆ ವೈಶಾಖ ಮಾಸದ ಶುಕ್ಲಪಕ್ಷದೊಳ್ಧರೆಗೆ ಬಂದು ||
ನಿರ್ಮಲಚರಿತ್ರೆ ತವ ತನುಜೆ ಮಾಲಿನಿಯಂ ಜ |
ನರ್ಮೆಚ್ಚೆ ಮದುವೆಯಾದಪನೆಂದನಂತಕಂ |
ಪೆರ್ಮಯಿಂದಾದರಿಸುವಂತೆ ಸಂಪಾದಿಸುವುದೆಂದು ಮುನಿಪತಿ ನುಡಿದನು ||೨೧||
ಸುರಮುನಿಯ ವಾಕ್ಯಮಂ ಕೇಳಿದಂ ತಾಳಿದಂ |
ಪರಿತೋಷಮಂ ಭೂಪನೊಲವಿಂದೆ ನಲವಿಂದೆ |
ಪುರವರವನೈದೆ ಸಿಂಗರಿಸಿದಂ ತರಿಸಿದಂ ಬೇಕಾದ ವಸ್ತುಗಳನು ||
ಸರಸ ಗುಣ ಸೌಂದರ್ಯ ಶಾಲಿನಿಗೆ ಮಾಲಿನಿಗೆ |
ತರಣಿಜನಕೊಡೆ ವೈವಾಹಮುಂ ಮೋಹಮುಂ |
ದೊರಕೊಂಬುದೆಂದು ವಿಸ್ತರಿಸಿದಂ ಬರಿಸಿದಂ ಬಾಂಧವರನುತ್ಸವದೊಳು ||೨೨||
ರಿಪುಮಥನ ಕೇಳಿತ್ತ ಮಾಲಿನಿಯ ಪರಿಣಯಕೆ |
ತಪನಜಂ ಪೊರಮಟ್ಟು ತನ್ನ ಮನ್ನಣೆಯವರ |
ನಪರಿಮಿತ ಪರಿವಾರಮಂ ಕರೆಸಿ ಬಹುದು ನೀವೆಮ್ಮೊಡನೆ ಮದುವೆಗೆನಲು ||
ಕುಪಿತ ವದನದ ಕೋರೆದಾಡೆಗಳ ಕಾರೊಡಲ |
ವಿಪರೀತ ವಿಕ್ರಮ ಭಯಂಕರದ ವೀರಭಟ |
ರುಪಮಿಸುವೊಡರಿದೆನಲ್ ಕ್ಷಯನೆಂಬ ಮಂತ್ರಿಯೊಡನೈತಂದರಾಕ್ಷಣದೊಳು ||೨೩||
ದುರಿತ ಕೋಟಿಗಳೊಡನೆ ಪಂಚಪಾತಕ ಮುಖ್ಯ |
ದೊರೆಗಳಿಟ್ಟಣಿಸಲಗಣಿತ ರೋಗ ಸಂಕುಲಂ |
ಬೆರಸಿ ಮಿಗೆ ರಾಜಕ್ಷಯಾದಿ ನಿಖಿಳ ವ್ಯಾಧಿನಾಯಕರ್ಬಳಿಸಂದರು ||
ಉರುತರದ ರುಜೆಗಳರಸಿಯರ ಸಂಖ್ಯಾತದಿಂ |
ನೆರೆದುದು ವಿಷೂಚಿ ಸಂಗ್ರಹಣಿ ಮೊದಲಾದ ಭೀ
ಕರ ವದನೆಯರ ಕೂಡೆ ಬಳಿಕಂತಕಂಗೆ ಬಿನ್ನೈಸಿದಂ ಕ್ಷಯ ಸಚಿವನು ||೨೪||
ದೇವ ನಿಮ್ಮೊಡನೆ ಮದುವೆಗೆ ಬಂದೊಡೆಮಗೆ ವೇ |
ದಾವಳಿಯ ಘೋಷ ಶ್ರವಣಮಹುದು ಹೋಮ ಧೂ |
ಮಾವಲೋಕನಮಹುದು ಪುಣ್ಯಕರ್ಮಿಗಳ ಸೋಂಕಿನಗಾಳಿ ಮೇಲೆಬಹುದು ||
ಆ ವೀರವರ್ಮಕಂ ಧಾರ್ಮಿಕಂ ಗೋ ವಿಪ್ರ |
ಸೇವಕಂ ಪ್ರಜೆಗಳುಂ ದ್ವಿಜಹಿತವರತಿ ಶುಚಿಗ |
ಳಾವೆಂತು ಬಹೆವಲ್ಲಿಗೆಂದೊಡೆ ಕೃತಾಂತಕಂ ಕ್ಷಯಂಗೆ ಮಗುಳಿಂತೆಂದನು ||೨೫||
ಕ್ಷಯ ಕೇಳ್ ಸಮಸ್ತ ಪಾತಕ ರೋಗನಾಯಕರ್ |
ಭಯಮಯಾಕಾರಂಗಳಂ ಬಿಟ್ಟು ದಿವ್ಯಾಕೃ |
ತಿಯನಾಂತು ತನ್ನ ಪಟ್ಟಣದೊಳೆಂತನವರತ ಮಿರುತಿರ್ಪರಂತನಿಬರು ||
ಪ್ರೀಯದಿಂದೆ ಬರಲೆಮ್ಮೊಡನೆ ಮದುವೆಗಾ ಪುರಾ |
ಶ್ರಯದೊಳಿಹರೆಲ್ಲರುಂ ಪುಣ್ಯಕರ್ಮಿಗಳವರ |
ನಯನಾವಲೋಕನಕೆ ಸೊಗಸಾಗಬೇಕೆಂದು ವೈವಸ್ವತಂ ನುಡಿದನು ||೨೬||
ಆಲಿಸುವುದೆಲ್ಲರುಂ ಪಾಪಿಗಳ ಕಣ್ಗೆ ತಾಂ |
ಕಾಲಾಗ್ನಿ ಸದೃಶನಾಗಿರ್ದಪೆಂ ಪುಣ್ಯಾತ್ಮ |
ರಾಲಿಗಳ್ಗತಿಸೌಮ್ಯನಾಗಿಹೆಂ ನೀವು ಮೆನ್ನಂತೆ ರಮಣೀಯಮಾದ ||
ಶಾಲಿಸೌಂದರದೆ ರೂಪಂಗಳಂ ತಳೆದು ದಿ |
ವ್ಯಾಲಂಕೃತಿಗಳಿಂದ ವೀರವರ್ಮಕ ಧರಾ |
ಪಾಲಕನ ಪಟ್ಟಣಕೆ ಬಹುದೆಂದು ಭೃತ್ಯರ್ಗೆ ತರಣಿಜಂ ನೇಮಿಸಿದನು ||೨೭||
ವಿಜಯ ಕೇಳಿಂತೆಂದು ಬಳಿಕ ದಿವ್ಯಾಕೃತಿಯ |
ನಿಜಭೃತ್ಯರೊಡನೆ ಶಮನಂ ವೀರವರ್ಮ ಭೂ |
ಭುಜನ ಪಟ್ಟಣಕೆ ಬರಲಾ ನೃಪನಿದಿರ್ಗೊಂಡು ನಾರದಂ ಮೊದಲಾಗಿಹ ||
ದ್ವಿಜರ ಮುಂದಗ್ನಿ ಸಾಕ್ಷಿಕದೊಳಾತಂಗೆ ಪಂ |
ಕಜವದನೆ ಮಾಲಿನಿಯನಿತ್ತು ವಿಧಿ ವಿಹಿತದಿಂ |
ತ್ರಿಜಗಕಿದು ಪೊಸತೆನೆ ವಿವಾಹಭವನದೊಳಂದು ಮದುವೆಯಂ ಮಾಡಿಸಿದನು ||೨೮||
ಅಚ್ಚರಿಯೊಳಾದ ವೈವಾಹದುತ್ಸವಕೆ ಸಲೆ |
ಮೆಚ್ಚಿ ವೈವಸ್ವತಂ ನುಡಿದನೆಲೆ ರಾಯ ನಿ |
ನ್ನಿಚ್ಚೆ ಯಾವುದು ಬೇಡು ಕುಡುವೆ ನಿನ್ನಲ್ಪಕಾಲಕೆ ಬಹುದು ಮೃತ್ಯು ನಿನಗೆ ||
ಎಚ್ಚರಿಂದರಿದಿರ್ಪುದೆನೆ ವೀರವರ್ಮಕಂ |
ನಿಚ್ಚಟದೊಳೀ ಮಗಳನಿತ್ತು ಮಗುಳೀಸಿಕೊಂ |
ಬಚ್ಚಿಗದ ವರಮದೇಕೆನೆ ಕನ್ಯಾಶುಲ್ಕಮತಿ ದೋಷಕರಮೆಂದನು ||೨೯||
ಎಂದೊಡಂತಕನೆಂದನೆಲೆ ಮಹೀಪಾಲ ನಿನ |
ಗಿಂದು ಪುರುಷಾರ್ಥಮಲ್ಲೀ ವರಂ ಕರೆದು ಲೇ |
ಸಿಂದೆ ಕೊಟ್ಟಾತನಂ ಮಿಗೆ ಪರಸದಿರ್ದಪನೆ ತೆಗೆದುಕೊಂಡವನಿಳೆಯೊಳು ||
ಹಿಂದುಗಳೆಯದಿರೆನ್ನ ಮಾತನೆನೆ ಭೂವರಂ |
ಮುಂದೆ ತನಗಲ್ಪಕಾಲಕೆ ಮೃತ್ಯು ಬಹುದನರಿ |
ದೊಂದುಪಾಯಾಂತರವ ನೆಣಸಿ ನಸುನಗುತ ಶಮನಂಗೆ ಬಳಿಕಿಂತೆಂದನು ||೩೦||
ಆದೊಡಿಲ್ಲಿಗೆ ಬರಲಿ ನಿನ್ನೀ ಕೃಪೆಯಿಂದೆ ಮಧು |
ಸೂದನಂ ತನಗನ್ನೆಗಂ ಮರಣವಾಗದಿರ |
ಲಾ ದೈತ್ಯಮಥನನಂ ಕಾಣ್ಬ ಪರಿಯಂತರಂ ನೀನುಮೆವಿಪುರದೊಳು ||
ಕಾದುಕೊಂಡಿಹುದೆನ್ನ ನೀವುದೀ ವರವ ನೆನೆ |
ಸಾದರದೊಳಿತ್ತಂದು ಮೊದಲಾಗಿ ನಾನಾ ವಿ |
ನೋದದಿಂ ಮಾಲಿನಿಯೊಡನೆ ರಮಿಸುತಿರ್ಪ ನೀ ಪಟ್ಟಣದೊಳಿನ ತನುಜನು ||೩೧||
ಇನ್ನರಿದೆಲೈ ಪಾರ್ಥ ರವಿತನಯ ನೀಪುರದೊ |
ಳಿನ್ನೆಗಂ ಬಂದಿರ್ದ ವೃತ್ತಾಂತಮಂ ನೋಡು |
ತನ್ನ ಮಾವನ ಸಹಾಯಕೆ ನಮ್ಮ ಸೇನೆಯಂ ಸಂಹರಿಸುತಿಹನಿತ್ತಲು ||
ಸನ್ನದ್ಧನಾಗಿ ತನ್ನಂ ಕಾಣ್ಬ ಲವಲವಿಕೆ |
ಯಿಂ ನಡೆತಹಂ ವೀರವರ್ಮನೀಕ್ಷಿಸು ಧುರಕೆ |
ನಿನ್ನ ಕೋದಂಡಮಂ ನುಡಿಸೆನುತ ಹರಿ ಧನಂಜಯನ ರಥಕೈತಂದನು ||೩೨||
ವೀರವರ್ಮನ ಕಾಳೆಗಕ್ಕೆ ಹರಿ ಫಲುಗುಣನ |
ತೇರನೇರಲ್ಕಂಡು ತಮತಮಗೆ ಕವಿದರ್ ಮ |
ಯೂರಧ್ವಜಾದಿ ಭೂಪಾಲಕರ್ತೊಲಗಹೇಳಂತಂಕಂ ತಾನಾದೊಡೆ ||
ನಾರಕಿಗಳಂ ಬಾಧಿಸುವುದಲ್ಲದಸುರ ಸಂ |
ಹಾರಕನ ಸೇವೆಯಂ ಮಾಡುತಿಹ ನಮ್ಮ ಪರಿ |
ವಾರಮಂ ಕೊಲ್ಪೊಡಧಿಕಾರಮೆತ್ತಣದೆನುತೆ ಮುಂಕೊಂಡು ಕವಿದೆಚ್ಚರು ||೩೩||
ಅನಿರುದ್ಧ ಸಾತ್ಯಕಿ ಪ್ರದ್ಯುಮ್ನ ಕೃತವರ್ಮ |
ನಿನಜಸುತ ಗದ ಸಾಂಬ ಹೈಡಿಂಬಿ ಬಭ್ರುವಾ |
ಹನ ಯೌವನಾಶ್ವ ಪ್ರವೀರ ಹಂಸಧ್ವಜ ಸುವೇಗ ಕಲಿ ನೀಲಕೇತು ||
ಅನುಸಾಲ್ವ ತಾಮ್ರಕೇತನ ಮಯೂರಧ್ವಜರ್ |
ತನತನಗೆ ಕಣಿಗರೆಯಲಾ ವೀರವರ್ಮ ನೆ |
ಚ್ಚನಿಬರಂ ಮುರಿದು ಕೃಷ್ಣಾರ್ಜುನರ ಸರಿಸದೊಳ್ ನಿಂದು ನಗುತಿಂತೆಂದನು ||೩೪||
ಈ ವೀರರೊರ್ವರುಂ ತನಗೆ ಪಾಡಲ್ಲ ರಾ |
ಜೀವ ಲೋಚನ ನಿನ್ನೊಳೀ ನರನೊಳೀ ಧ್ವಜದ |
ಪಾವನಿಯೊಳುರೆ ಕಾದಿ ಮದ್ಭುಜದ ಕಂಡೂತಿಯಂ ಕಳೆಯವೇಳ್ಪುದೀಗ ||
ಮೂವರುಂ ತೊಲಗದಿರಿ ಸಾಕೆನುತ ಕೃಷ್ಣಗಾಂ |
ಡೀವಿ ಪವನಜರನಾರೇಳೆಂಟು ಸರಳನೆ |
ಚ್ಚಾವಸುಮತೀಶನುಳಿದವರ ನೈದೈದುಬಾಣಂಗಳಿಂ ಘಾತಿಸಿದನು ||೩೫||
ಈತನೀಗಲೆ ದೇವ ವೀರವರ್ಮಕನೆಂಬ |
ಭೂತಳಾಧಿಪನಾದೊಡೊಳ್ಳಿತಿವನತಿ ಬಲಂ |
ಮಾತುಲನಲಾ ಧರ್ಮರಾಜಂಗೆ ಕಟ್ಟಿಕೊಳಬಹುದಿವಂ ಕುದುರೆಗಳನು ||
ಘಾತಿಸಿದೊಡೆಮಗೆ ತಪ್ಪಿಲ್ಲಲಾ ಬೆಸಗೊಂಬ |
ಮಾತಾವುದಶ್ವಂಗಳಂ ಬಿಡದೆ ಭುಜದ ಕಂ |
ಡೂತಿಯಮ ಕಳೆದಪಂ ಗಡ ನೋಳ್ಪೆನೆನುತ ನರನೆಚ್ಚನಾ ನರಪತಿಯನು ||೩೬||
ಕಟಕಿಯೇಕೆಮ್ಮೊಡನೆ ಪಾಂಡುಸುತ ನೀನೆ ಪಟು |
ಭಟನಪ್ಪೆ ಮೂಜಗಕೆ ಕೃಷ್ಣನ ಸಹಾಯದಿಂ |
ಘಟಿಸಿದಗ್ಗಳಿಕೆಗೇತಕೆ ಬೆರೆವೆ ಸೈರಿಸೆನುತಾ ನೃಪಂ ಕೋಪದಿಂದೆ ||
ಚಟುಲ ಚಾಪದೊಳುರುಳ್ಚಿದ ನಂಬನಖಿಳ ದಿ |
ಕ್ತಟದೊಳ್ ಗಗನ ಮಂಡಲದೊಳಹಿತಬಲದೊಳು |
ತ್ಕಟ ಬಾಣಮಯಮಾಗೆ ಹರಿನರ ಕಪೀಂದ್ರ ರಥಾವಾಜಿಗಳ್ ಭ್ರಮಿಸುವಂತೆ ||೩೭||
ನೆರೆ ಮಂತ್ರಿ ಮಂತ್ರದಿಂ ದಹಿತರುತ್ಸಾಹಮಂ |
ಬರಿಗೈವ ತೆರದಿಂದೆ ನರನವನ ಕಣಿಗಳಂ |
ತರಿದೊಟ್ಟುತಿದರೊಳೇನಾದಪುದು ಸಾಕಿನ್ನು ಬಿಡು ನಮ್ಮ ಕುದುರೆಗಳನು ||
ಬಿರುಸರಳ ಬಿಡೆಯ ಕೆಡೆಗುಡದಿರೊಡಲಂ ಕೆಡೆಯೊ |
ಳುರುಬೆಗೆರಗದೆ ಹರಿಯದರಿದುಕೊಳ್ಳೆನುತ ಕೋ |
ಲ್ಗರೆದೊಡಾ ನೃಪತಿ ಪಾರ್ಥನ ಬಾಣಮಂ ಕಡಿದು ನಸುನಗೆಯೊಳಿಂತೆಂದನು ||೩೮||
ಎಲೆ ಪಾರ್ಥವಿನಯದಿಂ ನೀಂ ಬೇಡಿಕೊಂಡೊಡೆ ಮೊ |
ದಲೆ ಬಿಡುವೆನಶ್ವಂಗಳಂ ಬರಿದೆ ಕಾಳೆಗಕೆ |
ಬಲ ಸಹಿತ ಬಂದೆ ನಮ್ಮೊಡನೆ ನೀನುರು ಬೆಗೆರಗುವರೆ ನೆಲದಾನ್ಮಾರಕಟಾ ||
ಕಲಿತನದ ಪಂತಮುಂಟಾದೊಡಿದು ಸಮರಮೈ |
ಸಲೆ ಕಾಣಬಹುದೆನುತ ಕಣಿಗಳರವತ್ತರಿಂ |
ಫಲುಗುಣ ಮುರಧ್ವಂಸಿ ವಾನರ ಹಯಂಗಳಂ ಕೆಡೆಯೆಚ್ಚು ಬೊಬ್ಬಿರಿದನು ||೩೯||
ಅರಸ ಕೇಳವನ ಬಾಣದ ಘಾತಿಗರ್ಜುನಂ |
ಕೊರಗಿದಂ ಮೇಲೆ ಪಲ್ಗಿರಿದನಾ ಕಪಿ ಚಕ್ರ |
ಧರನೈದೆ ಕೈಮರೆದು ವಾಘೆಯಂ ಸಡಲಿಸೆ ರಥಾಶ್ವಂಗಳಸ್ತ್ರಹತಿಗೆ ||
ತರಹರಿಸಲರಿಯದೋಡಿದುವೊಂದು ಕಡೆಗೆ ಬಳಿ |
ಕುರವಣಿಸಿ ಪಾಂಡವನ ಪತಾಕಿನಿಯ ಸುಭಟ ಪ್ರ |
ಕರವ ನರೆಯಟ್ಟಿದಂ ತಿರುತಿರುಗಿ ಚಾರಿವರಿದೇವೇಳ್ವೆನದ್ಭುತವನು ||೪೦||
ಅಭ್ರದೊಳ್ ಮಿಂಚು ಸುಳಿವಂತೆ ಪರಬಲದೊಳ್ ಪ ||
ರಿಭ್ರಮಿಸಿತವನ ರಥಮೆರಗುತಿಹ ಸಿಡಿಲಂತೆ |
ವಿಭ್ರಾಜಿಸಿತು ಘೋಷಮೊಡನೆ ಬಿರುವಳೆಯಂತೆ ಕರೆದುವಂಬಿನ ಸರಿಗಳು ||
ಬಭ್ರುವಾಹನ ಮಯೂರಧ್ವಜಾದಿಗಳಾಹ |
ವ ಭ್ರಷ್ಟರಾದರಿದಕರ್ಜುನಂ ರೋಷಬ |
ದ್ಧ ಭ್ರುಕುಟಿ ಮುಖಭಯಂಕರನಾಗಲಸುರಾರಿ ಕಂಡು ಬಳಿಕಿಂತೆಂದನು ||೪೧||
ಖಾತಿ ಬೇಡೆಲೆ ಪಾರ್ಥ ನಿನಗೆನಗೆ ಮಣಿಯಂ ಮ |
ಹಾತಿಬಲ ನೆಲ್ಲರಂತಲ್ಲ ದಟುಪಾಯಂಗ |
ಳೀತನೊಳ್ ಕೊಳ್ಳದು ಜಯದ್ರಥನ ತಲೆಯನರಿದಂಬಿವನೆಡೆಗೆ ಪೋಗದು ||
ಸೂತಜನ ರಥದ ಗಾಲಿಗೆ-ಸಿಕ್ಕಿನಿಕ್ಕಿದ ಮ |
ಹೀತಳದೊಳೆಡರಿಲ್ಲವಂಗೆ ನಾಂ ಮುಳಿದೊಡೆ ಸು |
ನೀತನ ಶಿರಚ್ಛೇಚನಂಗೈದ ಚಕ್ರಮಿವನಂ ಮುಟ್ಟದೇವೇಳ್ವೆನು ||೪೨||
ಇಂತೆಂದು ಹರಿ ಪಾರ್ಥನಂ ನಿಲಿಸಿ ನೋಡಿ ಹನು |
ಮಂತನಂ ಕರೆದು ನೀನೀತನ ವರೂಥಮಂ |
ತೊಂತಿ ವಾಲಾಗ್ರದಿಂ ಗಗನದೊಳ್ ತಿರುಪಿಡು ಮಹಾರ್ಣವಕೆ ಪೋಗಲೆನಲು ||
ಎಂತಿವನ ರಥಮನೀಡಾಡುವೆಂ ದಶವದನ |
ನಂತೆಯುಂ ಜಂಬುಮಾಲಿಯವೊಲುಂ ರಾಮಸೀ |
ಮಂತಿನಿಗೆ ಕಾವಲಿರ್ದಸುರೆಯರ ತೆರದೊಳಂ ಖಳನೀತನಲ್ಲೆಂದನು ||೪೩||
ವಾಯುಸುತ ಶಂಕೆ ಬೇಡೆನ್ನಾಜ್ಞೆ ಧರ್ಮದ ಸ |
ಹಾಯಮಿದು ನಿನಗೆಮಗೆ ಬೇಕಾದ ಕಜ್ಜಮೆಂ |
ದಾ ಯದುಕುಲಾಧಿಪಂ ನೇಮಿಸಿದೊಡಾ ಕಪಿವರಂ ತನ್ನ ವಾಲಧಿಯನು ||
ಅಯತಂಗೈದು ಸಾರಥಿ ಕುದುರೆಗಳ್ ಸಹಿತ |
ಜೇಯನಾಗಿಹ ನೃಪನ ರಥಮಂ ತೊಡರ್ದಾಂಜ |
ನೇಯಂ ನಭಸ್ಥಳಕೆ ಚಿಗಿದಂ ಪಯೋನಿಧಿಗೆ ಬಿಸುಡುವುದ್ಯೋಗದಿಂದೆ ||೪೪||
ಅನ್ನೆಗಂ ತನ್ನ ರಥಮಂ ಬಿಟ್ಟು ವೀರವ |
ರ್ಮನರನ ಮಣಿಯ ವರೂಥಮಂ ತೆಗೆದು ಕೂಂ |
ಡುನ್ನತ ಪರಾಕ್ರಮದೊಳಾಗಸದೆಡೆಗೆ ಚಿಗಿದು ಬಂದೆಲೈ ವಾನರೇಂದ್ರ ||
ನಿನ್ನೊಳಿರ್ದಪುದು ಬರಿದೇರೆನ್ನ ಕೈಯೊಳಿದೆ |
ಪನ್ನಗಾರಿಧ್ವಜ ಕಿರೀಟಗಳ್ವೆರಸಿರ್ದ |
ಸನ್ನು ತಸ್ಯಂದನಂ ನೋಡೆಂದು ಗಗನದೊಳ್ ಕಪಿಯಂ ಪಚಾರಿಸಿದನು ||೪೫||
ಎಲ್ಲಿಗೆನ್ನ ವರೂಥವಂ ಬೀರ್ವೆ ಕೀಶ ನೀ |
ನಲ್ಲಿಗೀಡಾಡುವೆಂ ಸವ್ಯಸಾಚಿಯ ರಥವ |
ನಲ್ಲದೊಡೆ ಪಾಲ್ಗಡಲ ಶೇಷ ತಲ್ಪದೊಳೆ ಮೆರೆವಿಂದಿರಾ ದೇವಿ ತನ್ನ ||
ವಲ್ಲಭನಗಲ್ದು ಪಾರ್ಥನ ಭಕ್ತಿಗೊಲಿದಿರಲ್ |
ತಲ್ಲಣಿಸಿ ವಿರಹದಿಂ ತಪಿಸುತಿಹಳಾ ರಮೆಗೆ |
ನಲ್ಲನೊಡಗೂಡುವಂತಮೃತಬ್ಧಿಗಿಡುವೆನೆಂದುಬ್ಬಿದಂ ಭೂಪಾಲನು ||೪೬||
ಸಾಗರಕೆ ಲಂಘಿಸಿದ ಸಾಹಸಕೆ ಬೆರೆವೆ ನೀ |
ನಾಗಸದೊಳಾದಿತ್ಯನಿರೆ ಚಂದ್ರನೊಪ್ಪುವನೆ |
ಪೋಗೆಲೆ ಮರುಳೆ ತನ್ನ ಮುಂದಣ ಪರಾಕ್ರಮಿಗಳುಂಟೆ ಮೂಜಗದೊಳೆನುತೆ ||
ತಾಗಿದಂ ನೃಪತಿ ಹನುಮಂತನಂ ಬಳಿಕ ನಾ |
ವೀಗಳವರಂತಲ್ಲ ತಾನೆತನ್ನಂ ಪೊಗಳು |
ವೀ ಗರುವಿಕೆಯ ನರಿಯೆವತಿವೃದ್ಧರೆಂದೆರಗಿದಂ ಕಪಿ ಮಹೀಶ್ವರನನು ||೪೭||
ಆ ವೀರವರ್ಮಂ ಕನಲ್ದಾಗ ಪಾರ್ಥ ರಾ |
ಜೀವಾಕ್ಷ ಕಪಿಗಳಂ ಕರೆದು ಲೋಕತ್ರಯಕೆ |
ಮೂವರುಂ ನೀವತಿಪರಾಕ್ರಮಿಗಳಾನೊರ್ವನಾಹವದೊಳೆನ್ನ ಕೂಡೆ ||
ಸಾವಧಾನದೊಳೊದಗಿದೊಡೆ ಕಾಣಬಹುದೆನುತ |
ಪಾವನಿಯ ನಡಸಿ ಪೊಯ್ದೊಡೆ ಮುಷ್ಟಿಘಾತದಿಂ |
ದಾ ವಾಯುಜಂ ತೊಲಗಲಸುರಹರನಾ ನೃಪನ ವಕ್ಷಸ್ಥಳವನೊದೆದನು ||೪೮||
ಹರಿಯ ಪದಘಾತಿಗಾ ನೃಪತಿ ಮೂರ್ಛಿತನಾಗಿ |
ಧರೆಗುರುಳ್ದೊಡನೆ ಚೇತರಿಸುತೆಲೆ ವೀರರ್ಕ |
ಳಿರ ನೀವು ಮೂವರಾನೊರ್ವನೆಂದಾಹವದೊಳುರವಣಿಸಬೇಡಿ ಬರಿದೆ ||
ಮುರಹರನ ದರ್ಶನಂ ದೊರೆಕೊಳ್ಳಿನಂ ತನಗೆ
ಮರಣಮಿಲ್ಲಂತಕ ವರದಿಂದೆ ಬಳಿಕೀಗ |
ಪುರುಷೋತ್ತಮನ ಪದಸ್ಪರ್ಶಮಾಯ್ತೆನಗಿನ್ನು ಮೃತ್ಯುವೆತ್ತಣದೆಂದನು ||೪೯||
ಎಂದೊಡಸುರಾಂತಕಂ ನೋಡಿದಂ ಕಾರುಣ್ಯ |
ದಿಂದೆ ನಿಜ ರಥದೊಳಿದಿರಾಗಿ ಸಮರಕೆ ಮತ್ತೆ |
ನಿಂದಿಹ ನರೇಂದ್ರನಂ ನುಡಿದಂ ಕಿರೀಟಿಗೆಲೆ ಪಾರ್ಥ ನಿನಗೆನಗಿವನೊಳು ||
ಕುಂದದೆ ಸಹಸ್ರ ವರ್ಷಂ ಪೊಣರ್ದೊಡೆ ತೀರ |
ದೆಂದಿಗುಂ ಲಘು ಹಸ್ತನತಿಬಲಂ ಶಸ್ತ್ರಾಸ್ತ್ರ |
ದಿಂದಧಿಕ ನಖಿಳ ವೀರರ್ಕಳಂ ಗೆಲ್ದ ನಿವನಾಂ ತೋಷಿಸುವೆನೆಂದನು ||೫೦||
ದೇವ ನೀನಾವನಂ ತೋಷಿಸುವೆ ಜಗದೊಳವ |
ನೇ ವಿಜಯಿ ಮೇಣವನೆ ಬಲವಂತನೆಂದೊಡಿ |
ನ್ನೀ ವಸುಮತೀಶ್ವರಂ ಧುರದೊಳೆನ್ನಾಳ್ತನಕೆ ಸೋಲ್ದಪನೆ ಸಾಕಿದೆಂದು ||
ಶ್ರೀವಲ್ಲಭನೊಳರ್ಜುನಂ ಪೇಳ್ದೊಡಾ ಮಾತ |
ನಾ ವೀರವರ್ಮಕಂ ಕೇಳ್ದು ಮಿಗೆ ಮೆಚ್ಚಿ ಗಾಂ |
ಡೀವಿಗಭಿವಂದಿಸಿ ಬೆರಳ್ಗೊನೆಯ ನೊಲೆದೊಲೆದು ಕೊಂಡಾಡುತಿಂತೆಂದನು ||೫೧||
ಎಲೆ ಧನಂಜಯ ಚರಾಚರಮೆಲ್ಲಮಂ ಬಾಹು |
ಬಲದಿಂದೆ ಗೆಲ್ವೆನೆಂಬಗ್ಗಳಿಕೆಯಂ ಬಿಟ್ಟು |
ಜಲಜಾಯತಾಕ್ಷನಾಡಿದ ಮಾತಿಗನುಸಾರಿಯಾಗಿ ನೀನೆಂದ ನುಡಿಗೆ ||
ಸಲೆ ಸೊಗಸಿತೆನ್ನ ಮನವಿನ್ನು ಕಾದುವೆನೆಂಬ |
ಚಲಮಿಲ್ಲ ತನಗೆನುತ ಕರದ ಚಾಪವನಿಳುಹಿ |
ನಲವಿಂದೆ ಬಂದು ಕೃಷ್ಣನ ಪಾದಕೆರಗಿದಂ ವೀರವರ್ಮಂ ಪ್ರಿಯದೊಳು ||೫೨||
ತಾಮರಸ ಲೋಚನಂ ತೆಗೆದು ಬಿಗಿದಪ್ಪಿದಂ |
ಪ್ರೇಮದಿಂದಾ ನೃಪನನರ್ಜುನಂ ಮನ್ನಿಸಿದ |
ನಾ ಮಯೂರಧ್ವಜಾದಿಗಳೆಲ್ಲರುಂ ಕೂಡೆ ಭಾವಿಸಿದರುಚಿತದಿಂದೆ ||
ಜಾಮಾತನಾಗಿರ್ದ ವೈವಸ್ವತಂ ಬಂದು |
ಭೂವಿಶನಂ ಮುಕುಂದನ ಕೈಯೊಳಿತ್ತು ಸು |
ತ್ರಾಮಸುತ ಮುಖ್ಯರಭಿವಂದಿಸಲ್ಪರಸಿ ನಿಜನಗರಕ್ಕೆ ಬೀಳ್ಕೊಂಡನು ||೫೩||
ಬಳಿಕವಂ ತನ್ನ ತನು ದೇಶ ಕೋಶಂಗಳಂ |
ಬಳುವಳಿಗಳಂ ಮಾಡಿ ತುರಗಂಗಳಂ ತರಿಸಿ |
ನಳಿನೋದರನ ಕೈಯೊಳಿತ್ತು ಮಿಗೆ ಭಕ್ತಿಯಿಂದುಪಚರಿಸಿ ಮುರಹರನನು ||
ಉಳಿದ ನೃಪರೆಲ್ಲರಂ ಸತ್ಕರಿಸಿ ವಿನಯದಿಂ |
ಪೊಳಲೊಳರುದಿನಮಿರಿಸಿಕೊಂಡಿರ್ದು ಪಾರ್ಥನಂ |
ದಳ ಸಹಿತ ಪೊರಮಟ್ಟನುತ್ಸವದೊಳಶ್ವರಕ್ಷೆಗೆ ಧನಂಜಯನ ಕೂಡೆ ||೫೪||
ಭದ್ರ ಲಕ್ಷಣದಿಂದೆ ಶುಭ್ರಮಾಗಿಹ ಕರಿಗ |
ಳದ್ರಿ ಸಮಮಾದುವೆಪ್ಪತ್ತೊಂದು ಸಾವಿರವ |
ನುದ್ರೇಕದತಿವೇಗದೇಕ ಕರ್ಣ ಶ್ಯಾಮದಗಣಿತ ಸುವಾಜಿಗಳನು ||
ವಿದ್ರುಮಾಧರೆಯರ ಸಹಸ್ರಮಂ ನವ ವಿಧದ |
ಸದ್ರತ್ನ ರಾಜಿಗಳನೆಂಟೆಡೆಯೊಳೊಗೆದ ವಿಲ |
ಸದ್ರುಚಿರ ಮುಕ್ತಾಫಲಂಗಳಂ ಕೊಟ್ಟು ನರನೊಡನವಂ ಪೊರಮಟ್ಟನು ||೫೫||
ಸಾರಸ್ವತಾಖ್ಯ ಪುರದಿಂದೆ ಬಳಿಕರ್ಜುನಂ |
ವೀರವರ್ಮ ಕ್ಷಿತಪನಂ ಕೂಡಿಕೊಂಡಾ ಮ |
ಯೂರಧ್ವಜಾದಿಗಳ್ವೆರಸಿ ಪಡೆ ಸಹಿತ ಕುದುರೆಗಳೊಡನೆ ನಡೆಯೆ ಮುಂದೆ ||
ಘೋರನಕ್ರಾಕುಲದ ಪೆರ್ಮಡುಗಳಿಂದೆ ಗಂ |
ಭೀರಮಾಗಿಹ ಮಹಾನವಮಿರ್ದುದೊಂದದಂ |
ಭೂರಿಪೋತಪ್ರಕರದಿಂ ಕಳೆದನಮರನಗರೀ ಶ್ರೀ ಶನಾಜ್ಞೆಯಿಂದ ||೫೬||
Leave A Comment