ಸೂಚನೆ ||
ಊರ್ಜಿತ ಪ್ರಬಲ ರಿಪುವೀರರಂ ಗೆಲ್ದು ಕೃ |
ಷ್ಣಾರ್ಜುನರನಾಹವದೊಳೊಟ್ಟೈಸಿ ಭುಜ ವಿಕ್ರ |
ಮಾರ್ಜಿತ ವಿನಯದೊಡನೆ ತಾಮ್ರಧ್ವಜಂ ತುರಗಮಂ ತಂದೆಗೊಪ್ಪಿಸಿದನು ||

ಎಲೆ ಮುನಿಪ ಸದಮಲಂ ಮೊದಲೆ ಪಾಲ್ಗಡಲದಕೆ |
ಮಲಯಾನಿಲಂ ತೀಡೆ ಬೆಳುದಿಂಗಳುಂ ಪೂಡೆ |
ಲಲಿತ ಸುಮನೋವಾಸಿತಂ ಕೂಡೆ ಮೇಲೆಮೇಲಿನಿದಾಗಿ ತೋರುವಂತೆ ||
ಸಲೆ ಸೊಗಸು ನಿನ್ನ ನುಡಿ ಸರಸಮಚ್ಚರಿ ಪುಣ್ಯ |
ನಿಲಯಮೆನೆ ಕೃಷ್ಣಚರಿತಾಮೃತವ ನೀಕಿವಿಗ |
ಳೊಲಿದೀಂಟಿ ತಣಿದಪುದೆ ಮುಂಗತೆಯನುಸಿರೆಂದು ಬೆಸಗೊಂಡನವನೀಶನು ||೧||

ಕೈಮುಗಿಯುರಾದರದೊಳನಿಪಂ ಬೆಸಗೊಳಲ್ ||
ಜೈಮಿನಿ ಮುನೀಶ್ವರಂ ಪೇಳ್ದನೆಲೆ ನೃಪತಿ ಕೇ |
ಳೈ ಮುಂದಣಾಶ್ಚರ್ಯಮಂ ಭೀಮಸೇನನಂ ಗಜಪುರಕೆ ಕಳುಹಿ ಬಳಿಕ ||
ಹೈಮಾಂಬರಂ ಸಕಲ ದಳಸಹಿತ ಮೈದುನನ |
ಮೈಮೆಚ್ಚಿಕೆಗೆ ಮಖ ತುರಂಗದೊಡನೈದಿದಂ |
ವೈಮಾನಿಕ ಪ್ರತತಿ ಬೆರಗಾಗೆ ಕಲಿ ಬಭ್ರುವಾಹನಂ ಕೂಡೆ ಬರಲು ||೨||

ತುರಗಂ ನಡೆದುದು ಮಣೀಪುರದಿಂ ಶರದ್ದಿನದೊ |
ಳರಸಂಚೆ ಸಂಚರಿಸತೊಡಗಿದುವು ನದಿಗಳು |
ಬ್ಬರಮಡಗಿ ತಿಳಿದು ಪರಿದುವು ಬೆಳತುದಾಗಸಂ ಮೆರೆದುದುಡುರಾಜಿಕೂಡೆ ||
ತರಣಿ ಶಶಿಗಳ ಕಿರಣಮೈದೆ ನಿರ್ಮಲವಾದು |
ವರವಿಂದದಲರ ನರಸಿದುವಳಿಗಳೆಣ್ದೆಸೆಯ |
ತರುಣಿಯರ ಗುರುಕುಚದ ಮೇಲುದಂ ಸೆಳೆದಂತೆ ಗಿರಿನಿಕರಮೆಸೆದಿರ್ದುದು ||೩||

ಪುಳಿನ ಜಘನಂ ಮತ್ಸ್ಯಲೋಚನಂ ಹಂಸಗತಿ |
ಸುಳಿನಾಭಿ ಕೋಕಸ್ತನಂ ಪಂಕಜಾನನಂ |
ಸೆಳೆನಡು ಸುಕಂಬು ಕಂಠಂ ತರಂಗ ತ್ರಿವಳಿ ಶೈವಾಲ ರೋಮಾವಳಿ ||
ಲಲಿತಪ್ರವಾಹ ಲಾವಣ್ಯ ಲಹರಿಗಳೆಸೆಯೆ |
ತೊಳತೊಳಗಿ ಬೆಳಗುವ ನದೀವಧುಗಳುಳ್ಗದಡು |
ತಿಳಿದು ನಿಜಕಾಂತನಾಗಿಹ ಸಿಂಧುರಾಜನಂ ನೆರೆಯದಿರರೆಂಬೊಲಾಯ್ತು ||೪||

ಕರೆಕರೆದ ತಮ್ಮ ಮಳೆವೊನಲಿಂದೆ ಶಶಿಕಾಂತ |
ದೊರತೆವೊನಲುರೆ ವೆಗ್ಗಳಿಸೆ ನಾಚಿ ಬೆಳ್ಪಾದ |
ತೆರದಿಂ ಮುಗಿಲ್ಗಳಿರೆ ಬೆಳುದಿಂಗಳೊಪ್ಪಿದುದು ಬೆಳಸುಗಳ ಪಣ್ದೆನೆಗಳ ||
ಮಿರುಪ ಯೊಂಬಣ್ಣದ ಹರಿದ್ರಾನುಲೇಪನದ |
ಮೆರೆವ ಮೈಸಿರಿಯ ಮಾಂಗಲ್ಯದಿಂ ಭೂದೇವಿ |
ನೆರೆ ಶೋಭಿಸುವ ಶರತ್ಕಾಲದೊಳ್ ತಿರುಗಿತಧ್ವರ ಹಯಂ ಧರೆಯಮೇಲೆ ||೫||

ವಿಟನಂತೆ ಕಾಂತಾರತಲಸದ್ವಿಲಾಸ ಪ |
ರ‍್ಯಟನದಿಂದೊಪ್ಪಿದುದು ಸುಕವೀಂದ್ರನಂತೆ ಸಂ |
ಘಟಿತ ಚಾತುರ್ಯ ಪದ ರಚನೆಯಂ ವಿವಿಧ ವಿಷಯಂಗಳೊಳ್ ಕಾಣಿಸಿದುದು ||
ಭಟನಂತೆ ಸಮ್ಯಗ್ವಿರಾಜಿತ ಭೂಮಿ ಭೃ |
ತ್ಕಟಕಂಗಳಲ್ಲಿ ಸಂಚರಿಸಿದುದು ಪಾಂಡವನ |
ಪಟುತರ ಮಹಾಧ್ವರ ತುರಂಗಮಂ ಬೆಂಬಿಸದೆ ಬಹ ನೃಪರ ಸೇನೆಸಹಿತ ||೬||

ಪೋದುದಧ್ವರವಾಜಿ ರತ್ನಪುರಮೆಂಬ ಪುಟ |
ಭೇದನದ ಪತಿ ಮಯೂರಧ್ವಜನ ರಾಷ್ಟ್ರಕವ |
ನಾದಿಯೊಳ್ ತುರಗಮೇಧಂಗಳೇಳಂ ಮಾಡಿ ನರ್ಮದಾತಟಕೆ ಬಂದು ||
ಸಾದರದೊಳೆಂಟನೆಯ ಮಖಕೆ ದೀಕ್ಷಿತನಾಗಿ |
ಮೇದಿನಿಯ ಮೇಲೆ ಹಯಮಂ ಬಿಡಲ್ಕಿದಿರಾಗಿ |
ಬೀದಿಯೊಳ್ ಬರುತಿರ್ದುದಾ ನೃಪನ ಸೂನು ತಾಮ್ರಧ್ವಜನ ಕಾಪಿನಿಂದೆ ||೭||

ಕ್ಷೆಣೀಂದ್ರ ಕೇಳೀ ತುರಂಗಮಾ ಕುದುರೆಯಂ |
ಕಾಣುತಂ ಧ್ವನಿಗೈದು ಪರಿತಮದು ಮೊಗವನಾ |
ಘ್ರಾಣಿಸಿ ಮಿಳರ್ಚಿ ಕಿವಿಗಳ ನೊಡನೆ ಪೆರದೆಗೆದು ಮುಂಗಾಲ್ಗಳಿಂದಡರ್ದು ||
ಮೇಣೊಂದನೊಂದದು  ಹಿಂದಣ ಖುರಂಗಳಿಂ |
ಮಾಣದಡಿಗಡಿಗೆ ಕಂದದ ತೀಟೆಗಳನಾಡಿ |
ಮಾಣೀಕ್ಯಮುಕ್ತಾಳಿಗಳ ಭೂಷಣಂಗಳಂ ಪರಿದಿಕ್ಕಿ ಬಿರುಗೊಂಡುವು ||೮||

ಭಾರಣೆಯ ಬಲದೊಡನೆ ಕುದುರೆಗಾವಲೊಳಿರ್ದ |
ವೀರತಾಮ್ರಧ್ವಜನ ಮಂತ್ರಿ ತೆರನಂ ವಿಚಾರಿಸಿದನೆತ್ತಣ ತುರಂಗಮೆಂದು ||
ಚಾರರಂ ಕಳುಹಿ ತರಿಸಿದನದರ ಮಸ್ತಕದೊ |
ಳಾರಾಜಿಸುವ ಕನಕ ಪಟ್ಟ ಲಿಖಿತವನೋದಿ |
ಭೂರಮಣ ಧರ್ಮಜನ ಬಿರುದುಗಳ ವಿಸ್ತರವ ನೊಡೆಯಂಗೆ ಕೇಳಿಸಿದನು ||೯||

ಕೇಳುತ ಕನಲ್ದು ತಾಮ್ರಧ್ವಜಂ ಕಟ್ಟಿದಂ |
ತೋಳ ಬಲ್ಪಂದೆ ಪಾರ್ಥನ ತುರಗಮಂ ಬಳಿಕ |
ಮೇಳೈಸಿ ನಿಲಿಸಿದಂ ನಿಜಬಲದ ಪೌಜುಗಳನರ್ಧಚಂದ್ರಾಕೃತಿಯೊಳು ||
ಏಲಧ್ವರಂ ಪಿಂತೆ ಕೃಷ್ಣವರ್ಜಿರಮಾಯ್ತು |
ಪೇಳಲೇನಿದು ಕೃಷ್ಣಸಂಯುಕ್ತಮಾದಪುದು |
ಕಾಳೆಗಂ ಕೃಷ್ಣನೊಳ್ ದೊರಕೊಳ್ವುದೀಗಳೆಂ ದುಬ್ಬೇರಿದಂ ಮನದೊಳು ||೧೦||

ತಂದೆಯ ಮಹಾಧ್ವರಕೆ ಕೃಷ್ಣನೊಡಗೂಡುವಂ |
ಮುಂದೆ ಪಾಂಡವ ವೀರೂಳ್ ತನಗೆ ಕಾಳೆಗಂ |
ಬಂದಪುದು ಲೇಸಾದುದೆಂದು ತಾಮ್ರಧ್ವಜಂ ನಕುಲಧ್ವಜನೊಳಾಡಲು ||
ಮಂದ ಪೌರುಷದಲ್ಪಭಾಗ್ಯದತಿಕೃಶಮಾದ |
ಮಂದಿ ಕುದುರೆಯ ಮೇದಿನೀಶ್ವರರ್ ಕಾಳೆಗಕೆ |
ನಿಂದಪರೆ ನಿನ್ನೊಳಿದು ಪುಸಿಯೆನುತೆ ಮತ್ತವಂ ನಸುನಗೆಯೊಳಿಂತೆಂದನು ||೧೧||

ಚಪ್ಪನ್ನದೇಶದೊಳ್ ನಿನಗೆ ಮಲೆತಿದಿರಾಗಿ |
ಬಪ್ಪ ಭೂಮಿಪರಿಲ್ಲ ನಿಮ್ಮಯ್ಯನರಮನೆಯೊ |
ಳೊಪ್ಪಂಬಡೆದ ನರ್ತಕೀಜನದ ನಿತ್ಯ ಪುಷ್ಪಾಂಜಲಿಯ ಸಂಗ್ರಹಕ್ಕೆ ||
ತಪ್ಪದೆಂದು ತೆರುವ ಕಟ್ಟಳೆಯ ಮುತ್ತುಗಳ |
ಕಪ್ಪಮಂ ಕೊಂಡು ಬಂದನೊ ಬಭ್ರುವಾಹನಂ |
ಸಪ್ಪುಳಿದು ಪೊಸತೆತ್ತಣದೊ ಸೈನ್ಯಮೆನೆ ತಾಮ್ರಕೇತು ಮಗುಳಿಂತೆಂದನು ||೧೨||

ಧಾತ್ರಿಗಳ್ ವೀರರಿಲ್ಲೆನ್ನದಿರ್ ನಾರದಂ |
ರಾತ್ರಿಯೊಳ್ ಬಂದೆನ್ನೊಳಾಡಿದಂ ಧರೆಗತಿ |
ಕ್ಷಾತ್ರಪೌರುಷದಿಂದೆ ವರ್ತಿಪರ್ ಬಭ್ರುವಾಹನ ಕರ್ಣತನಯರೆಂದು ||
ಗೋತ್ರಾರಿ ಪುತ್ರ ದಾನವ ಸೂದನರ್ ಮನುಜ |
ಮಾತ್ರರಲ್ಲೆಯ್ದೆ ನರನಾರಾಯಣರ್ ಕಮಲ ||
ನೇತ್ರಸಮರನಿರುದ್ದ ಸಾತ್ಯಕಿ ಪ್ರದ್ಯುಮ್ನ ಭೋಜಾದಿ ಯದುಗಳೆಂದು ||೧೩||

ಉದ್ದತ ಪರಾಕ್ರಮಿಗಳ ನಿಬರಿಂದಿವರೊಡನೆ |
ಯುದ್ಧಮಾದಪುದೆಮಗೆ ನಮ್ಮಖಿಳಸೇನೆ ಸ |
ನ್ನದ್ಧಮಾಗಿರ ಲರ್ಧಚಂದ್ರಾಕೃತಿಯೊಳೆಂದು ತಾಮ್ರಧ್ವಜಂ ಮಂತ್ರಿಗೆ ||
ಬುದ್ಧಿಗಲಿಸಿದನಿತ್ತ ಪಾಂಡವನ ಬಲದೊಳ್ ಪ್ರ |
ಸಿದ್ಧಭಟ ರನುಸಾಲ್ವ ಕರ್ಣಸುತ ಸಾಂಬಾನಿ |
ರುದ್ಧ ಕೃಥವರ್ಮಾದಿಗಳ್ ಮಸಗಿದರ್ ತುರಂಗಮಂ ಬಿಡಿಸುವುಜ್ಜುಗದೊಳು ||೧೪||

ಕುದುರೆಯಂ ಕಟ್ಟಿ ಪಡೆಸಹಿತ ತಾಮ್ರಧ್ವಜಂ |
ಕದನಕಿದಿರಾಗಲಸುರಾಂತಕಂ ಕಂಡು ತೋ |
ರಿಸಿದನರ್ಜುನಂಗಿವಂ ಬರ್ಹಿಧ್ವಜನ ತನುಜನನಸೂಯಕಂ *ಧಿರನು ||
ಉದಿತ ಕಾಮಂ ಸತ್ಯವಾದಿ ಶುಚಿ ವೈಷ್ಣವಂ |
ಸದರಮಲ್ಲಿವನೊಡನೆ ಕಾಳಗಂ ನರ್ಮದಾ |
ನದಿಯ ತೀರದೊಳಿವನ ತಂದೆ ದೀಕಿತನಾಗಿಹಂ ಗೆಲ್ವುದರಿದೆಂದನು ||೧೫||

ಎಂದಖಿಳಸೇನೆಯಂ ಗೃಧ್ರದಾಕಾರಕ್ಕೆ |
ತಂದು ನಿಲಿಸಿದನಸುರಮರ್ದನಂ ಮೇಣದರ |
ಮುಂದೆಸೆಯೆ ಕೊರಲೊಳನುಸಾಲ್ವನಂ ಕಂಗಳೊಳ್ ನೀಲ ಹಂಸಧ್ವಜರನು ||
ಕಂದರ್ಪಕಾನಿರುದ್ಧರನುಭಯ ಪಕ್ಷದೆಡೆ |
ಗಂದದಿಂದಡಿಗಳ್ಗೆ ಭೋಜ ಸಾತ್ಯಕಿಗಳಂ |
ಹಿಂದಣಗರಿಗೆ ಮೇಘನಾದನಂ ಕಲಿಯೌವನಾಶ್ವನಂ ಜೋಡಿಸಿದನು ||೧೬||

ವ್ಯೂಹಚಂಚು ಸ್ತಾನಕಿರಿಸಿದಂ ಕಲಿ ಬಭ್ರು |
ವಾಹನ ವೃಷಧ್ವಜನನುಳಿದ ಭಟರಂ ಗೃಧ್ರ |
ದೇಹದವಯವದೆಡೆಗೆ ನೆಲೆಗೊಳಿಸಿ ಬಳಿಕದರ ಹೃದಯದೊಳ್ ಫಲುಗುಣನನು ||
ವಾಹಿನಿ ಸಹಿತ ನಿಲಿಸಿ ದಾರುಕನೆಸಗೆ ರಥಾ |
ರೋಹಣಂಗೈದು ಮುರಮಥನಂ ಪಿಡಿದನಾ ಮ |
ಹಾಹವಕೆ ವರಪಾಂಚಜನ್ಯಮಂ ಘೋರ ರವದಿಂದಹಿತರೆದಳೊಡೆಯೆ ||೧೭||

ಪಾಂಚಜನ್ಯಧ್ವನಿಗೆ ಬೆದರದುಬ್ಬೇರಿ ರೋ |
ಮಾಂಚನದೊಳಾಗ ತಾಮ್ರಧ್ವಜಂ ಶ್ರೀವತ್ಸ |
ಲಾಂಛನಂಗಿದಿರಾಗಿ ನುಡಿದನೆಲೆ ದೇವ ಕಟ್ಟಿದೆನರ್ಜುನನ ಹಯವನು ||
ವಾಂಛೆಯುಳ್ಳೊಡೆ ಬಿಡಿಸು ಪಾಲಿಸು ಕಿರೀಟಿಯಂ |
ನೀಂ ಚಕ್ರಮಂ ತುಡುಕು ಶಾರ್ಙ್ಗಮಂ ಪಿಡಿ ರಣಕೆ |
ನಾಂ ಚಲಿಸೆನಿದೆಯೆನ್ನ ವಾಜಿಯಂ ತಡೆ ಸತ್ವಮುಳ್ಳೊಡೆನುತಾರ್ದೆಚ್ಚನು ||೧೮||

ಹರಿಗೆ ಕೂರ್ಗಣಿ ಮೂರು ದಾರುಕಂಗೈದು ರಥ |
ಹರಿಗಳ್ಗೆ ನಾಲ್ಕು ಸಿತವಾಹನಂಗಿಪ್ಪತ್ತು |
ವರಭೋಹಪತಿಗೆಂಟು ಶಿನಿಸುತಂಗೊಂಬತ್ತು ಹಂಸಧ್ವಜಂಗೆ ಪತ್ತು ||
ತರಣಿತನಯಜ ಬಭ್ರುವಾಹಾನುಸಾಲ್ವಕ |
ಸ್ಮರ ಯೌವನಾಶ್ವಾನಿರುದ್ಧ ನೀಲಧ್ವಜ |
ರ್ಗೆರಡೆರಡು ಮೇಘನಾದಂಗೇಳು ಕೋಲ್ಗಳಂ ಕರೆದವಂ ಬೊಬ್ಬಿರಿದನು ||೧೯||

ಅಚ್ಯುತಂ ಬೆರಗಾದನಾತನ ಪರಾಕ್ರಮಕೆ |
ಮೆಚಿದಂ ಫಲಗುಣಂ ಮಿಕ್ಕುಳಿದ ಪಟುಭಟರ್ |
ಬೆಚ್ಚಿದರ್ ಮಸಗಿ ವೀರಾವೇಶದಿಂದೆ ತಮತಮಗೆ ಬಳಿಕನಿರುದ್ಧನು ||
ಎಚ್ಚನೆಲವೆಲವೊ ತಾಮ್ರಧ್ವಜ ವಿಚಾರಿಸದೆ |
ಕೆಚ್ಚೆದೆಯೊಳಿದಿರಾದೆ ಮುರಹರನ ಮೊಮ್ಮನಾಂ |
ಬೆಚ್ಚುವೊಡೆ ಬಿಡು ಹಯವನಲ್ಲದೊಡೆ ನೋಡೆನ್ನ ಬಾಣ ಜಾತವನೆಂದನು ||೨೦||

ಬಾಣಜಾತವನೀಗ ನೋಡಲಿರ್ದಪುದೆ ನೀಂ |
ಬಾಣಜಾತೆಯ ರಮಣನಂತುಮಲ್ಲದೆ ಪುಷ್ಪ |
ಬಾಣಜಾತಂ ಮೇಲೆ ತನ್ನ ಮಗಳುಷೆಗೆ ನೀಂ ಪ್ರಾಣೇಶನೆಂದು ರಣದೆ ||
ಬಾಣನುಳುಹಿದನಂದು ಕೈಗಾಯ್ವುವಲ್ಲೆಮ್ಮ |
ಬಾಣಮಗಳೀಕ್ಷಿಸೆಂದಾರ್ದು ತಾಮ್ರಧ್ವಜಂ |
ಬಾಣಾಯುತಂಗಳಂ ಸುರಿಯಲ್ಕೆ ಮಧ್ಯದೊಳ್ ತರಿದೀತನಿಂತೆಂದನು ||೨೧||

ಸಂಗರಕೆ ಸಾಹವೊ ಮಾತುಗಳೊ ಪೂರ್ವಪ್ರ |
ಸಂಗಮೇತಕೆ ಮರುಳೆ ತರಹರಿಸಿಕೊಳಳೆನುತೆ |
ಸಂಡಿಸಿದವನ ರಥದಚ್ಚು ನೊಗ ಗಾಲಿ ಟೆಕ್ಕೆಯ ಕುದುರೆ ಸಾರಥಿಗಳ ||
ಅಂಗಿ ಬಿಲ್ಬತ್ತಳಿಕೆ ಸೀಸಕಂಗಳ ಜಂಜ |
ಡಂಗಳಿಲ್ಲೆನಿಸಿ ಕೆಲಬಲದ ರಕ್ಷೆಯ ಚಾತು |
ರಂಗಮಂ ಸವರಿ ರಿಪುಮೋಹರಕೆ ಪೊಕ್ಕನನಿರುದ್ಧನದವೇಳ್ವೆನು ||೨೨||

ರಣದೊಳನಿರುದ್ದನಾಟೋಪದಿಂ ಚಾಪದಿಂ |
ಕಣೆಗಳಂ ತೆಗೆದಿಸಲ್ಕರಿಗಳಂ ಹರಿಗಳಂ |
ಮಣೀಮಯ ರಥಂಗಳಂ ಕಾಲಾಳ ಮೇಲಾಳ ಸಂದಣಿಯ ಮಂದಿಗಳನು ||
ಹಣಿದು ವಾಡಿದುದಹಿತ ಬಲದೊಳಗೆ ನೆಲದೊಳಗೆ |
ಪೆಣನ ಮೆದೆ ಕೆಡೆಯಲಕ್ಷೌಹಿಣಿಯ ವಾಹಿನಿಯ |
ಗಣನೆ ಮೂರಳಿದುದೊಂದೇ ಕ್ಷಣಕೆ ವೀಕ್ಷಣಕೆ ನೆರೆ ಭಯಂಕರಮಾಗಲು ||೨೩||

ಒತ್ತಿಬಹ ರಥಿಕರಂ ವ್ಯಥಿಕರಂ ಮಾಡಿದುವು |
ಮುತ್ತವ ತುರಂಗಮದ ತುಂಗ ಮದದಂತಿಗಳ |
ಮೊತ್ತಮಂ ಪೋಳಾಗಿ ಸೀಳಾಗಿ ಕೆಡಹಿದುವು ಕೊಡಹಿದುವು ವಾಹಕರನು ||
ಮತ್ತೆ ಭಟರಂಗಮಂ ಭಂಗಮಂ ಪಡಿಸಿದುವು |
ಕತ್ತರಿಸಿ ತಲೆಗಳಂ ಕೊಲೆಗಳಂ ಕೊಂದು ಬಿಸಿ |
ನೆತ್ತರಂ ಪರಪಿದುವು ನೆರಪಿದುವು ಮರುಳ್ಗಳು ಮನನಿರುದ್ಧನಸ್ತ್ರಂಗಳು ||೨೪||

ಪೊಸರಥದೊಳೈದಿದಂ ಮತ್ತೆ ತಾಮ್ರಧ್ವಜಂ |
ಮುಸುಕಿತಗಣಿತ ಚಾತುರಂಗಮನಿರುದ್ಧನಂ |
ಮಸುಗಿತು ತಮಸ್ತೋಮ ಮಾದಿತ್ಯಮಂಡಲದ ಗಸಣಿಯಿಲ್ಲೆನೆ ನಭದೊಳು ||
ವಸುಧೆಯದಿರಿತು ಗುರುಶೈಲ ಮಲ್ಲಾಡಿದುದು |
ಬಸವಳಿದ ನಹಿ ಕೂರ್ಮನೆದೆಗೆಟ್ಟ ನುಡುಗಿದುವು |
ದೆಸೆಯಾನೆ ಕಡಲುಕ್ಕಿ ತಾಹವಂ ಘೋರಮಾದುದು ರೋಮಹರ್ಷಣದೊಳು ||೨೫||

ಕೋಪದಿಂ ಪ್ರಳಯಾಗ್ನಿಯಂದದ ಶರಂಗಳಂ |
ಚಾಪದಿಂ ತೆಗೆದಿಸುತ್ತನಿರುದ್ಧನಮಿತ ಪ್ರ |
ತಾಪದಿಂದುಜ್ವಲಿಸುತಿರ್ದಂ ವಿಧೂಮ ಪಾವಕನಂತೆ ಪರಬಲದೊಳು ||
ಶ್ರೀಪತಿಯ ಪೌತ್ರನೆಂದಿನ್ನೆಗಂ ತಾಳ್ದೊಡಾ |
ಟೋಪಮೇ ನಿನಗೆನುತೆ ತಾಮ್ರಧ್ವಜಂ ಕನ |
ಲ್ದಾಪುಪ್ಪಬಾಣ ತನುಜನ ಮೇಲೆ ಕಣೆಗರೆದನಂಬರಂ ತುಂಬುವಂತೆ ||೨೬||

ಪರ್ಬಿದುವು ತೆಗೆದಿಸಲ್ ತಾಮ್ರಧ್ವಜನ ಕಣೆಗ |
ಳರ್ಬುದಂಗಳ ಸಂಖ್ಯೆಯಿಂದೊಡನೆ ನರನ |
ಪೆರ್ಬಡೆಯ ಮೇಲೆ ಕವಿದುದು ನೊಂದನನಿರುದ್ಧನೇರ್ವಡೆದು ಮೂರ್ಛೆಯಿಂದೆ ||
ಸರ್ಬದಳಮಂ ತಗಳ್ದುವು ಬೇಸಗೆಯ ಬಿರುವೆ |
ಲರ್ಬೀಸಿ ರಜಮಂ ತೆರಳ್ಚುವಂತಾಗ ವೀ |
ರರ್ಬಿಂಕದಿಂದಾಂತು ನಿಂದರನುಸಾಲ್ವಕ ಪ್ರದ್ಯುಮ್ನ ಸಾತ್ಯಕಿಗಳು ||೨೭||

ಹಂಸಕೇತುವನೆಚ್ಚು ಕೃತವರ್ಮ ಸಾತ್ಯಕಿಗ |
ಳಂ ಸದೆದು ಬಭ್ರುವಾಹನ ಯೌವನಾಶ್ವರ್ಗೆ |
ಹಿಂಸೆಯಂ ಕೈಗೈದು ನೀಲಧ್ವಜಾನುಸಾಲ್ವಾದಿ ಭಟರಂ ಘಾತಿಸಿ ||
ಕಂಸಾರಿ ಸುತನಂ ಪಚಾರಿಸಿ ವಿಜಯ ಮುರ |
ಧ್ವಂಸಿಗಳ ಮೇಲೆ ನಡೆತರೆ ಕಂಡು ಕರ್ಣ ತನ |
ಯಂ ಸರಸಕಿದಿರಾಗಿ ಕತ್ತರಿಸಿ ಕೆಡಹಿದಂ ತಾಮ್ರಧ್ವಜನ ರಥವನು ||೨೮||

ತೇರುಡಿಯೆ ಮತ್ತೊಂದು ತೇರ ನಳವಡಿಸಲಾ |
ತೇರನಿಸಲೊಡನೆ ಪೊಸತೇರೊಳವನೈದಲಾ |
ತೇರುಮಂ ಕತ್ತರಿಸೆ ತೇರೈಸದಂತಿಂತು ನೂರುತೇರಂ ಖಂಡಿಸಿ |
ಸೇರಿಸೇರಿದ ಸೇನೆಯಂ ಸವರಿ ಕರ್ಣಜಂ |
ಸೇರಿಬರೆ ತಾಮ್ರಧ್ವಜಂ ಕನಲ್ದವನಿಯಂ |
ಸೇರಿ ಬಾಣತ್ರಯದೊಳಾತನಂ ಘಾತಿಸಿ ರಥಾರೋಹಣಂಗೈದನು ||೨೯||

ಅನಿರುದ್ಧನಂ ಗೆಲ್ದು ವೃಷಕೇತುವಂ ಕೆಡಹ |
ಲನುಸಾಲ್ವನಿದಿರಾದೊಡಾತನ ಪರಾಕ್ರಮವ |
ನನುವರದೊಳುರೆ ಮುರಿದು ಕೃತವರ್ಮ ಸಾತ್ಯಕಿ ಪ್ರದ್ಯುಮ್ನರಂ ಸೋಲಿಸಿ ||
ಅನುಪಮ ಬಲಂ ಬಭ್ರುವಾಹನಂ ಕಾದಲವ |
ನನುವನೊಪ್ಪಂಗೆಡಿಸಿ ಹಂಸಧ್ವಜನ ಜಯವ |
ನನುಕರಿಸಿ ಯೌವನಾಶ್ವಾಸಿತಧ್ವಜರಂ ತಗುಳ್ದವಂ ಬೊಬ್ಬಿರಿದನು ||೩೦||

ಬಲದೊಳಗೆ ಮಿಡುಕುಳ್ಳ ವೀರರೊಳ್ ಧಿರರೊಳ್ |
ಕಲಿತನದೊಳಿದಿರಾಗಿ ನಿಲ್ವರಂ ಗೆಲ್ವರಂ |
ಸಲೆ ಪಲಾಯನಕೆ ಮೈಗುಡುವರಂ ಬಿಡುವರಂ ವಾಹನಾಯುಧ ತತಿಯನು ||
ಫಲು ಗುಣಂ ಕಾಣೂತತ್ಯುಗ್ರದಿಂ ವ್ಯಗ್ರದಿಂ |
ಸೆಳೆದು ಕೋದಂಡಮಂ ತೀಡಿದಂ ಪೂಡಿದಂ |
ಪೊಳೆವ ಕೆಂಗರಿಯ ನಿಡುಗೋಲ್ಗಳಂ ಸಾಲ್ಗಳಂ ಕಟ್ಟಿದಂ ಗಗನ ಪಥಕೆ ||೩೧||

ಲೇಸಾದುದೈ ಪಾರ್ಥ ಕೃಷ್ಣನ ಸಹಾಯದಿಂ |
ದೀಸು ದಿನಮಾಹವದೊಳೆಲ್ಲರಂ ಗೆಲ್ದೆ ಬಿಡು |
ವಾಸಿಯಂ ತನ್ನೊಡನೆ ಗೋತ್ರಹತ್ಯದೋಷಮಂ ಕಳೆದುಕೊಂಬ ಮಖಕೆ ||
ಏಸು ಹರಿಗಳ್ ಬೇಕು ನಿನಗೈಸನೀವೆ ನಾ |
ನೀ ಸರೋಜಾಕ್ಷನಿರಲೇತಕೆಲೆ ಮರುಳೆ ಧನ |
ದಾಸೆಯಿಂ ಧರ್ಮಮಂ ಮಾಣ್ದನಂತಾದೆ ಹೋಗೆನುತವಂ ತೆಗೆದೆಚ್ಚನು ||೨೩||

ಎಲವೊ ತಾಮ್ರಧ್ವಜ ಸುವಿತ್ತದಿಂ ಧರ್ಮಮಂ |
ನಿಲಿಸಬೇಕಲ್ಲದೆ ನಿರರ್ಥಕದೊಳಾದಪುದೆ |
ಜಲಜಾಕ್ಷನಂ ಬರಿದೆ ಸಾಕ್ಷಾತ್ಕರಿಸಬಹುದೆ ವಿಧಿ ವಿಧಾನದೊಳಲ್ಲದೆ ||
ಪಲವು ಮುಖದಿಂದೆ ಪರಿಪೂರ್ಣನಾಗಿಹ ಹರಿಯ |
ನೆಲೆಯ ನೀನೆಂತರಿವೆ ಮೈಢ ಫಡ ಹೋಗೆನುತೆ |
ಫಲುಗುಣಂ ತೆಗೆದೆಚ್ಚನಾತನ ವರೂಥ ಹಯ ಸಾರಥಿಗಳೆಡೆಗೆಡೆಯಲು ||೩೩||

ಆ ರಥಂ ಮುರಿಯೆ ಪೊಸರಥವನವನೇರಿ ಬರ |
ಲಾರಥಂ ಪುಡಿಯಾಗೆ ನರನಿಸಲ್ ಬಳಿಕಾ ಮ |
ಹಾ ರಥಂ ಮತ್ತೊಂದು ರಥದೊಳುರವಣಿಸಲದನರ್ಜುನಂ ತಡೆಗಡಿದನು ||
ಆ ರಣದೊಳಿಂತವನ ಸ್ಯಂದನ ಸಹಸ್ರಮಂ |
ಬಾರಿಬಾರಿಗೆ ಕತ್ತರಿಸಿ ಕೆಡಹಿ ಫಲುಗುಣಂ |
ಪೂರೈಸಿದಂ ದೇವದತ್ತಮಂ ಕೊಂದನಿರ್ಕೆಲದ ಚಾತುರ್ಬಲವನು ||೩೪||

ಅರ್ಜುನನ ಸಾಹಸಕೆ ಮೆಚ್ಚಿ ತಾಮ್ರಧ್ವಜಂ |
ಗರ್ಜಿಸಿ ಕನಲ್ದಮಮ ತಾನದೇಂ ಪೌರುಷ ವಿ |
ವರ್ಜಿತನೆ ಫಡಯೆನುತ ತೆಗದಿಸಲ್ ಬರಸಿಡಿಲ್ ಪೊಡೆದು ಗಿರಿ ಜರಿವಂತಿರೆ ||
ನಿರ್ಜರೇಂದ್ರನ ಸೂನು ಪೊನಲಿಡಲ್ ಬಿಸಿಯ ನೆ |
ತ್ತರ್ಜೊಂಪಿಸುತೆ ಮೈಮರೆದು ಬಿದ್ದನಿಳೆಯೊಳ್ ಪು |
ನರ್ಜನ್ಮಮೆನೆ ಕೂಡೆ ಚೇತರಿಸಿ ನರನೆಚ್ಚು ಕಡಿದನಾತನ ಧನುವನು ||೩೫||

ಬಿಲ್ಮುರಿಯೆ ಮತ್ತೊಂದು ಬಿಲ್ಗೊಂಡು ಕೋಪದಿಂ |
ಪಲ್ಮೊರೆಯುತೊಡನೆ ತಾಮ್ರಧ್ವಜಂ ತೆಗೆದಾರ್ದಿ |
ಸಲ್ಮಹಿಯೊಳರ್ಜುನನ ತೇರೊಂದುಯೋಜನಂ ಪೋಗೆ ತರಹರಿಸಿಕೊಳುತೆ ||
ನಿಲ್ಲೋರೆದೋರೆನುತೆ ಫಲುಗುಣಂ ಬೊಬ್ಬಿರಿದಿ |
ಸಲ್ಮುಗಿಲ ಬಟ್ಟೆಯ ನಡರ್ದುದಾತನ ರಥಂ |
ಬಲ್ಮೆಗೆ ಮುರಧ್ವಂಸಿ ಮೆಚ್ಚಿ ತಲೆದೂಗಿದಂ ಭೂಪಕೇಳದ್ಭುತವನು ||೩೬||

ಎಡಬಲದ ಮಂಡಲದ ಭೇದದಿಂ ಖೇದದಿಂ |
ದಡಿಗಡಿಗೆಸೆವ ಪರಾಕ್ರಮದಿಂದ ಕ್ರಮದಿಂದೆ |
ತುಡುವ ಬಿಡುವಂಬಿನ ತರಂಗದಿಂ ರಂಗದಿಂ ತೊಲಗದಗ್ಗಳಿಕೆಯಿಂದೆ ||
ದೃಢಚಾಪ ಘೋಷ ಭೀಕರದಿಂದೆ ನಿಕರದಿಂದೆ |
ಜಡತೆ ಪೊದ್ದದ ಸಾಹಸತ್ವದಿಂ ಸತ್ವದಿಂ |
ಕಡುಗಿ ತಾಮ್ರಧ್ವಜ ವಿಜಯರಾಗ ಜಯರಾಗಕೆಚ್ಚಾಡಿದರ್ ಧುರದೊಳು ||೩೭||

ಧಾತ್ರಿಶ ಕೇಳ್ ಕೌರುಕವ ನೇಳುದಿನ ಮಹೋ |
ರಾತ್ರಿಗಳೊಳಂ ಬಿಡದೆ ಕಾದಿದರ್ ಪಂಕರುಹ |
ನೇತ್ರಂ ಸವಿಪದೊಳ್ ನೋಡುತಿರೆ ತಾಮ್ರಧ್ವಜಾರ್ಜುನರ್ ಬಳಿಕದರೊಳು ||
ಗೋತ್ರಾರಿಸುತನವಂ ಮತ್ತೆ ಜೋಡಿಸಿ ತಂದ |
ಮಾತ್ರದೊಳ್ ಸಾಸಿರ ರಥಂಗಳಂ ಕಡಿದತಿ |
ಕ್ಷಾತ್ರದಿಂ ಕೆಡಹಿದಂ ಪಡೆಯೊಳಕ್ಷೌಹಿಣಿಗಳಿನ್ನೂರನಾಹವದೊಳು ||೩೮||

ಆ ತಾಮ್ರಕೇತು ಪಾಂಡವಸೇನೆಯೊಳ್ ಪ್ರಯುತ |
ಚಾತುರಂಗಮನೈದೆ ಸಂಹರಿಸಿ ಪಾರ್ಥನಂ |
ಘಾತಿಸಿದನಡಿಗಡಿಗೆ ಪಳವಿಗೆಯ ಹನುಮನಂ ಪಲ್ಗಿರಿಸಿ ಹರಿಯನೆಚ್ಚು ||
ಸೂತವಾಜಿಗಳನೊಡನೆ ಜವಗೆಡಿಸಿ ವಿ |
ಖ್ಯಾತ ಚಾಪದ ನಾರಿಯಂ ಕಡಿದು ಕಲಿ ಕರ್ಣ |
ಜಾತಾನುಸಾಲ್ವ ಸಾತ್ಯಕಿ ಬಭ್ರುವಾಹನಾದಿಗಳನುರೆ ನೋಯಿಸಿದನು ||೩೯||

ತೆತ್ತಿಸಿದುವುಭಯವೀರರ ಮೈಯೊಳಂಬುಗಳ್ |
ನೆತ್ತರಭ್ರಕೆ ಚಿಮ್ಮಿ ಮಳೆವನಿಗಳಂತೆ ಹರಿ |
ಯುತ್ತಮಾಂಗದಮೇಲೆ ಸೂಸಿದುವು ವಾಯುವಶದಿಂದೆ ಕೇಳದ್ಭುತವನು ||
ಮತ್ತೆ ಫಲುಗುಣನವನ ಧನುವನಿಕ್ಕಡಿಯಾಗಿ |
ಕತ್ತರಿಸೆ ಖತಿಯೊಳೈತಮದು ಪಾರ್ಥನ ರಥವ |
ನೆತ್ತಿಕೊಂಡಾಗಸಕೆ ಪುಟನೆಗೆದು ಧರೆಯೊಳಪ್ಪಳಿಸಿದಂ ತಾಮ್ರಕೇತು ||೪೦||

ನಭಕೆ ವಿಜಯನ ರಥವನೀಡಾಡಿ ಬಳಿಕದಂ |
ರಭಸದಿಂದಿಳೆಗಪ್ಪಳಸುವಿನಂ ಪರಿತಂದು |
ಶುಭಕರ ಕರಾಗ್ರದಿಂ ಪಿಡಿದಾ ವರೂಥಮಂ ಸ್ವಸ್ಥಾನಮಾಗಿ ನಿಲಿಸಿ ||
ಅಭಯಮಂ ಪಾರ್ಥಂಗೆ ವಾಡಿದಂ ಮುರಹರಂ |
ತ್ರಿಭುವನದೊಳಚ್ಯುತನ ಭಕ್ತರ್ಗೆ ಬರ್ಪುದೆ ಪ |
ರಿಭವಮೆಂನಿಮಿಷರ್ ಕೊಂಡಾಡೆ ಬಲಮೆರಡಕಾಶ್ಚರ್ಯಮಾಗೆ ಕೂಡೆ ||೪೧||

ಭೂರಮಣ ಕೇಳ್‌ಬಳಿಕ ನಸುನಗುತ ನುಡಿದನಸು |
ರಾರಾತಿ ಪಾಂಡವಂಗಳು ಕದಿರಧರ್ಮಮೆಂ |
ದೀರಣದೊಳೀತನಂ ಗೆಲ್ದೊಡಾವಿರ್ವರುಂ ಸಾಹಸಂಗೈದಲ್ಲದೆ ||
ತೀರದೆಸು ನೀನೊಂದು ಕಡೆಯೊಳಾನಿಸುವೆನೀ |
ವೀರನಂ ಮತ್ತೊಂದು ದೆಸೆಯೊಳೆಂದರುಪಿ ನರ |
ನಾರಾಯಣರ್ ಕರೆದರಂಬುಗಳ ನೋರೊರ್ವರೊಂದೊಂದು ಮುಖದೊಳಿರ್ದು ||೪೨||

ಪಾಂಡವ ಮುಕುಂದರೊಂದೇಬಾರಿ ಮುಳಿದು ವರ |
ಗಾಂಡೀವ ಶಾರ್ಙ್ಗ ಚಾಪಂಗಳಂ ಕೊಂಡಬ್ಜ |
ಜಾಂಡಕಧಿಕ ಕ್ಷೆಭಮಾಗೆ ತಾಮ್ರಧ್ವಜನ ಮೇಲೆ ತೆಗೆದಿಸುತಿರಲ್ಕೆ ||
ಕಾಂಡವಿಲ್ಲದೆ ಕವಿದುವಂಬುಗಳಡಗಿತು ಮಾ |
ರ್ತಾಂಡ ಮಂಡಲಮಾಗ ಶಿಖಿಕೇತು ನಂದನಂ |
ತಾಂ ಡಿಬಿಕಮರ್ದನಕಿರೀಟಗಳನಡಿಗಡಿಗೆ ಘಾತಿಸಿದನಾಹವದೊಳು ||೪೩||

ವಿರಿದ ಪರಾಕ್ರಮದೊಳಕ್ಷಿಗಳರಲ್ದುವು |
ಬ್ಬೇರಿ ಪುಳಕೋತ್ಸವದೊಳಾ ತಾಮ್ರಕೇತು ಕೈ |
ದೋರಿ ಬೊಬ್ಬಿರಿದು ನಸುನಗುತೆ ಕೃಷ್ಣನೊಳೆಂದನೆಲೆ ದೇವ ತನ್ನ ಕೂಡೆ ||
ಬೇರೆ ನೀಂ ಬಿಲ್ವಿಡಿದು ಕಾದಿ ಕೌಂತೇಯನಂ |
ಗಾರುಮಾಡದಿರರ್ಜುನಂಗೆ ಸಾರಥೀಯಾಗು |
ಸಾರಿದೆಂ ಸಾಕೆಂದು ತೆಗೆದೆಚ್ಚೊಡಚ್ಚಯುತಂ ಮೆಚ್ಚಿನೊಳೊಡಂಬಟ್ಟನು ||೪೪||

ಹರಿ ಬಳಿಕ ತನ್ನ ರಥಮಂ ಬಿಟ್ಟು ಫಲುಗುಣನ |
ವರ ವರೂಥಗ್ರದೊಳ್ ಚಮ್ಮಟಿಕೆ ವಾಘೆಯಂ |
ಧರಿಸಿ ತುರಗಮಗಲಂ ಚಪ್ಪರಿಸಲೆಡಬಲಕೆ ವಾಯುಬೇಗದೊಳಡರ್ದು ||
ಮುರಿದು ಮಂಡಲಭೇದ ಚಳವಳಿಕೆ ಚದುರೋಜೆ |
ವೆರಸಿ ರಣರಂಗದೊಳ್ ಕಾರಮಿಂಚಿನ ತೆರದೊ |
ಳುರವಣಿಸಿದುವು ಕೂಡೆ ಶಕ್ರಸುತನೆಚ್ಚನಡಿಗಡಿಗೆ ತಾಮ್ರಧ್ವಜನನು ||೪೫||

ಹರಿ ನಂದನನ ದಿವ್ಯ ಹರಿಮಯ ವರೂಥಮಂ |
ಹರಿವೇಗದಿಂದೆಸೆವ ಹರಿ ಚತುಷ್ಟಯಮುಮಂ |
ಹರಿಯುಮಂ ಪಳವಿಗೆಯ ಹರಿಯುಮಂ ಪಾರ್ಥನ ಲಹರಿಯುಮಂ ಧಾತುಗೆಡಿಸಿ ||
ಹರಿಬದ ಕಲಿಗಳಂ ಪ್ರಹರಿಸಿ ತಾಮ್ರಧ್ವಜಂ |
ಹರಿನಾದಮಂ ಮಾಡಿ ಹರಿದಾಡುತಿರೆ ಕೂಡೆ |
ಹರಿಣಾಂಕ ಕುಲಜಂ ವಿಹರಿಸಿದಂ ಬಾಣದಿಂ ಹರಿಕಿರಣಮಡಗುವಂತೆ ||೪೬||

ಮತ್ತೆ ಮುರಹರನ ನೀರೈದುಕೂರ್ಗಣೆಯೊಳರು |
ವತ್ತು ಮಾರ್ಗಣದಿಂದೆ ಸುರಪ ಸುತನಂ ಘಾತಿ |
ಸುತ್ತವಂ ಬೊಬ್ಬಿರಿಯೆ ನರನವನ ರೋಮರೋಮಂಗಳಂ ಭೇದಿಪವೊಲು ||
ತೆತ್ತಿಸಿದನಂಬುಗಳನವನು ಮತ್ತಿಸುತಿರ್ದ |
ನಿತ್ತಂಡದಾಹಮಂ ಸಮಮಾಗಿ ಬರೆ ವಿಜಯ |
ನೊತ್ತಾಯದಿಂದವನ ಕುದುರೆ ಸಾರಥಿ ರಥವನೆಚ್ಚು ಹುಡಿಹುಡಿಗೈದನು ||೪೭||

ಚೂರ್ಣಮಾದೊಡೆ ರಥಂ ತಾಮ್ರಧ್ವಜಂ ರೋಷ |
ಪೂರ್ಣಮುಖನಾಗಿ ಕಲಿ ಪಾರ್ಥನ ಸವಿಪಮಂ |
ತೂರ್ಣದಿಂದೈದಿ ಪೊಯ್ವನಿತರೊಳ್ ಚರಣಾಗ್ರದಿಂದೆ ಮುರಹರನೊದೆಯಲು ||
ಜೀರ್ಣತರು ಮುರಿದು ಬೀಳ್ವಂತಿಳೆಗೆ ಬಿದ್ದೊಡನೆ |
ಕೀರ್ಣ ಪ್ರತಾಪದಿಂದೆದ್ದು ಮತ್ತೊಂದು ವಿ |
ಸ್ತೀರ್ಣಮಾಗಿರ್ದ ಮದಕುಂಜರಕಡರ್ದು ಶರಪಂಜರವ ನೊದವಿಸಿದನು ||೪೮||

ಬೀದಿವರಿಸಿದನಾತನಾನೆಯಂ ಬಭ್ರುವಾ |
ಹಾದಿ ವೀರರ ಮೇಲೆ ಕಣೆಗಳಂ ಕರೆದನಿದಿ |
ರಾದ ಭಟರೆಲ್ಲರುಂ ಮೂರ್ಛೆಮೃತಿಯಂ ತಳೆದರ್ಜುನಂ ಮೈಮರೆದನು ||
ಕಾದುವವರಿಲ್ಲ ಪಾಂಡವ ಬಲದೊಳಾಗ ಮಧು |
ಸೂದನಂ ಬೆರಗಾಗಿ ಕಡುಗೋಪದಿಂದೆ ತಾ |
ನೇ ದಿವ್ಯಚಕ್ರಮಂ ತುಡುಕಿ ನಡೆದಂ ಧುರಕೆ ಮೂಜಗಂ ತಲ್ಲಣಿಸಲು ||೪೯||

ಉರಗೇಂದ್ರ ಕಮಠ ದಿಕ್ಕರಿಗಳುಂ ಗಿರಿಗಳುಂ |
ಶರಧಿಯುಂ ದೆಸೆಗಳುಂ ಧರಣಿಯುಂ ತರಣಿಯುಂ |
ಪಿರಿದು ಕಂಪಿಸಲಾ ತ್ರಿವಿಕ್ರಮಂ ಚಕ್ರಮಂ ಕೊಂಡು ಕಾಳೆಗಕೆ ಬರಲು ||
ಅರುಣಧ್ವಜಂ ಕಂಡು ಕೋಪದಿಂ ಚಾಪದಿಂ |
ಸರಳ ಮಳೆಯಂ ಕರೆಯುತುರುಬಿದಂ ತರುಬಿದಂ |
ಹರಿಯನದ್ಭುತಮಾಗೆ ಸಂಗರಂ ಸಿಂಗರಂ ಮೆರೆಯಲಂತಕಪುರದೊಳು ||೫೦||

ಕಟ್ಟುಗ್ರಕೋಪದಿಂದೈತಪ್ಪ ದಾನವ ಘ |
ರಟ್ಟನಂ ತಡೆದು ತಾಮ್ರಧ್ವಜಂ ಕಾಳೆಗಂ |
ಗೊಟ್ಟನಳವಿಗೆ ಸೇರಿತಾತನ ಚತುರ್ಬಲಂ ಸರ್ವಸನ್ನಾಹದಿಂದೆ ||
ಇಟ್ಟಣಿಸಿ ತಾಹವಂ ಬಳಿಕ ಮುರವೈರಿ ತಿರು |
ಪಿಟ್ಟ ಚಕ್ರದ ಪಲವು ಧಾರೆಗಳ ಸೋಂಕಿನಿಂ |
ಥಟ್ಟುಗೆಡೆದುದು ಪಗೆಯ ಪಡೆಯೊಳಕ್ಷೌಹಿಣಿಯ ಶತಕವೊಂದೇಕ್ಷಣದೊಳು ||೫೧||

ಪಡೆ ಮಡಿಯೆ ರೋಷದಿಂದಾಗ ತಾಮ್ರಧ್ವಜಂ |
ನುಡಿದನಸುರಾಂತಕನೊಳೆಲೆ ದೆವ ಸೈನ್ಯಮಂ |
ತಡೆಗಡಿದೊಡೇನಹುದು ಹಿಂದೆ ಪಾರ್ಥಂಗಾಗಿ ನಿನ್ನ ಪುಣ್ಯವನಿತ್ತಲಾ ||
ಕುಡದಿರು ಧನಂಜಯಗಾಗಿ ತನಗೀಗ ನಿ |
ನ್ನೊಡಲನಿದು ನಿಶ್ಚಯಂ ನಿನ್ನ ಕಿರೀಟಿಯಂ |
ಪಿಡಿದು ತಾತನ ಮಖವನಾಗಿಪೆಂ ನೋಡೆಂದು ಹರಿಯಂ ಪಚಾರಿಸಿದನು ||೫೨||

ಧರಣೀಂದ್ರ ಕೇಳ್ ಚಕ್ರಪಾಣೀಯಾಗಿರ್ದ ಮುರ |
ಹರನಂ ರಣಾಗ್ರದೊಳ್ ಮೇಲ್ವಾಯ್ದು ತುಡುಕಿ ನಿಜ |
ಕರವೊಂದರಿಂದೆರಡು ಕೈಗಳಂ ಮತ್ತೊಂದು ಹಸ್ತದಿಂ ಪದಯುಗವನು ||
ಹಿರಿದು ಸತ್ವದೊಳೊತ್ತಿ ಪಿಡಿದೊಂದುಗೂಡಿ ಹರಿ |
ಚರಣಮಂ ನೊಸಲೆಡೆಯೊಳಿಟ್ಟು ತಾಮ್ರಧ್ವಜಂ |
ಪರಿದನುರ್ಜುನನಿದ್ದಬಳಿಗಾಗಿ ಸಾಹಸಕೆ ಮೂಜಗಂ ಬೆರಗಾಗಲು ||೫೩||

ಹಿಡಿಗೈಯ್ಯೊಳಿರ್ದಸುರರಿಪು ಪಾರ್ಥನಂ ಕರೆದು |
ತುಡು ಮಹಾಸ್ತ್ರನನೆಂದು ನೇಮಿಸಲ್ ಫಲುಗುಣಂ |
ಫಡಯೆನುತೆ ಬಾಣಮಂ ಗಾಂಡೀವದೊಳ್ ಪುಡುವನ್ನೆಗಂ ಭರದೊಳೊದಗಿ ||
ತಡೆಗಾಲೊಳಾತನಂ ಕೆಡಹಿ ಭುಜಯುಗ್ಮದಿಂ |
ತೊಡರಿಕೊಂಡುಪ್ಪರಿಸಿ ನರ ಕೃಷ್ಣರಿರ್ವರಂ |
ಮಿಡುಕಲೀಯದೆ ಬಿಗಿದು ತಾಮ್ರಧ್ವಜಂ ಧರೆಗೆ ಬಿದ್ದನಗಧರನೊದೆಯಲು ||೫೪||

ಉದ್ದಂಡ ಭೂಜಬಲದೊಳೊರ್ವರೊರ್ವರ ನೊತ್ತಿ |
ಬಿದ್ದರಿಳೆಗಾ ಮುವರುಂ ನೊಂದು ಮೂರ್ಛೆಗೊಂ |
ಡಿದ್ದರದರೊಳ್ ಪಾರ್ಥ ಶೌರಿಗಳ್ ಬಳಿಕ ತಾಮ್ರಧ್ವಜಂ ಸತ್ವದಿಂದೆ ||
ಎದ್ದು ನೋಡಿದನಲ್ಲಿ ತನ್ನೊಡನೆ ಕಾಳೆಗಕೆ |
ಹೊದ್ದುವದಟರನಾರುಮಂ ಕಾಣೆದೆಲ್ಲರಂ |
ಗೆದ್ದೆರಡು ಕುದುರೆಯಂ ಕೊಂಡುಳಿದ ಪಡೆ ಸಹಿತ ನಿಜನಗರಿಗೈತಂದನು ||೫೫||

ಪಟ್ಟಣದ ಪೊರವಳಯದೊಳ್ ಚಿತ್ರಮಯಮಾಗಿ |
ಕಟ್ಟಿದಧ್ವರ ಮಂಟಪದ ನಡುವೆ ದೀಕ್ಷೆಯಿಂ |
ನೆಟ್ಟನೆ ಪರಿಗ್ರಹಿಸಿ ಭೂಸುರರ್ ವೆರಸಿ ಕುಳ್ಳಿರ್ಪ ಪಿತನೆಡೆಗೆ ಬಂದು ||
ಮುಟ್ಟಿ ಚರಣಂಗಳಂ ಸಾಷ್ಟಂಗದಿಂದೆ ಪೊಡ |
ಮಟ್ಟು ತಾಮ್ರಧ್ವಜಂ ಕೈಮುಗಿದು ತರಿಸಿ ಮುಂ |
ದಿಟ್ಟನೆರಡಶ್ವಂಗಳಂ ಬಳಿಕ ಶಿಖಿಕೇತು ನಂದನಂಗಿಂತೆಂದನು ||೫೬||

ವತ್ಸರಂ ತುಂಬದೇತಕೆ ತಿರುಗಿತೀ ಹಯಂ |
ವತ್ಸ ಹೇಳಿದರೊಡನೆ ಮತ್ತೊಂದು ವಾಜಿ ಬಲ |
ವತ್ಸಮರ ಮುಖದಿಂದೆ ಜಯಿಸಿದಂತಿರ್ದುಪುದಿದೆತ್ತಣದು ನಿನಗಿಳೆಯೊಳು ||
ಮತ್ಸರದ ಕದನದಿಂದಾವ ಭೂಪನೊಳಾಯ್ತು |
ಮತ್ಸವಿಪಕೆ ಬಂದ ಹದನಾವುದೆಂದು ಶ್ರೀ |
ಮತ್ಸಭಾಮಧ್ಯದೊಳ್ ನಸುನಗುತೆ ಶಿಖಿಕೇತು ತನಯನಂ ಬೆಸಗೊಂಡನು ||೫೭||

ಚಿತ್ತಯಿಸು ತಾತ ನೃಪವರ ಯುಧಿಷ್ಠಿರನ ಮಖ |
ದುತ್ತಮ ತುರಂಗಮಿದು ರಕ್ಷೆಗರ್ಜುನ ಕೃಷ್ಣ |
ರಿತ್ತಂಡಮುಂ ಪಡೆವೆರಸಿ ಬಂದೊಡಾನದಂ ಕಟ್ಟಿದೊಡೆ ತನಗವರೊಳು ||
ತತ್ತುದಾಹವಮೆಂದು ನಿಜಸುತಂ ಬಿನ್ನೈಪೆ |
ಮತ್ತೆ ಸಂಶಯದಿಂದೆ ಭೂಪಾಲಕಂ ತನ್ನ |
ಹತ್ತಿರಿಹ ನಿಜಮಂತ್ರಿ ನಕುಲಕೇತುನೀಕ್ಷಿಸಲ್ಕಾತನಿಂತೆಂದನು ||೫೮||

ಜೀಯ ಪುಸಿಯಲ್ಲ ಪಾಂಡವರಾಯನಶ್ವಮಂ |
ಕಾಯಬಂದಿಹ ಬಭ್ರುವಾಹನಾದಿಗಳ ನೊ |
ತ್ತಾಯದಿಂದೆಲ್ಲರಂ ಸದೆಬಡಿದುರುಳ್ಚಿ ಬಳಿಕೈದೆ ಕೃಷ್ಣಾರ್ಜುನರನು ||
ಸಾಯದಂತಡಗೆಡಹಿ ಪಿಡಿದು ಬಿಟ್ಟೊಡನೆ ಕೌಂ |
ತೇಯನ ತುರಂಗಮಂ ಕೊಂಡು ನಿನ್ನಾತ್ಮಜಂ |
ನೋಯದೈತಂದನೆನೆ ಮರುಗುತೆ ಮಯೂರಧ್ವಜಂ ಮಂತ್ರಿಗಿಂತೆಂದನು ||೫೯||

ಅಕಟ ಕೆಡಿಸಿದನಲಾ ಕಾರ್ಯಮಂ ನಮಗಿದೇ |
ತಕೆ ಯಜ್ಞಮಿನ್ನು ನಮಗೀ ಮಗಂ ಪಗೆಯಲ್ತೆ |
ಸ್ವಕರಸ್ಥನಾದ ಹರಿಯಂ ಬಿಟ್ಟು ಕಟ್ಟಿದಂ ಗರ್ದಭಾಕೃತಿ ಹರಿಯನು ||
ವಿಕಳಮತಿಯಾಗಿರ್ದ ನೀತನೇವೇಳ್ವೆನು |
ತ್ಸುಕದಿಂದಮೊಡಗೂಡಿ ಮಂಚದೊಳ್ ಪ್ರಾಣನಾ |
ಯಕನಿರಲ್ ಮರೆದೊರಗಿದಧಮಾಂಗನೆಯವೊಲೆಂದವನಿಪಂ ಬಿಸುಸುಯ್ದನು ||೬೦||

ಮತ್ತೆ ಸುತನಂ ನೋಡಿ ಬೈದನೆಲವೊ ಪೋ |
ಗತ್ತ ನಿನ್ನಂ ಮಾಳ್ಪುದೇನಮಲ ತುಲಸಿಯಂ |
ದುತ್ತಿವಿಡಿದಬ್ಜಮಂ ಮಾಣುತುತ್ತರದ ಕುಸುಮದ ತೊಡವುಗಟ್ಟುವಂತೆ ||
ಉತ್ತಮವಿದೆಂದು ಕೃಷ್ಣಾರ್ಜುನರ ಬಿಟ್ಟು ತಂ |
ದಿತ್ತೆ ತುರಂಗಂಗಳಂ ಸಾಕಿನ್ನು ಯಜ್ಞ ಮವ |
ರೆತ್ತಲಿರ್ದಪರೆಂಬುದಂ ಪೇಳ್ದೊಡುಳುಹಿದನವನೆಂದು ಭೂಪತಿ ಸುಯ್ದನು ||೬೧||

ಕಡೆಯಾದುದಧ್ವರಕೆ ಸಾಕಿನ್ನು ತುರಗಮಂ |
ಪೊಡೆಯೆತ್ತಲಾದೊಡಂ ಮುರಮಥನ ಪಾರ್ಥರಾ |
ವೆಡೆ ತನಗದಂ ತೋರವೇಳ್ಪುದೆಂದಾ ಮಯೂರಧ್ವಜಂ ಮರುಗಿ ಮರುಗಿ ||
ಬಿಡದೆ ನಿಜ ತನಯನಂ ಬೈದು ಗರ್ಜಿಸಿ ತನ್ನ |
ಮಡದಿಸಹಿತಿರುತಿರ್ದನಾ ದಿನಂ ದೇವಪುರ |
ದೊಡೆಯ ಲಕ್ಷ್ಮೀಶನಂ ಕಣ್ಣಾರೆ ಕಾಣಬೇಕೆಂಬ ಕಡುತವಕದಿಂದೆ ||೬೨||