ಸೂಚನೆ ||
ಮಂತ್ರಿ ಮತ್ಸರದಿಂದೆ ಮುಂದೆ ತಪ್ಪುವ ದೈವ |
ಯಂತ್ರಭೇದವನರಿಯದಿಂದುಹಾಸನ ಮೇಲೆ |
ತಂತ್ರಮಂ ಪಣ್ಣಿ ಕೊಲಿಸುವೆನೆಂದು ಕಳುಹಿದಂ ಕುಂತಳೇಂದ್ರನ ನಗರಿಗೆ ||

ಧ್ರುವನಂಬರಸ್ಥಳದೊ ಳಸ್ಮತ್ಪಿತಾಮಹಂ |
ದಿವದೊಳ್‌ಭೀಷಣಂ ಲಂಕೆಯೊಳ್ ಪಾತಾಳ |
ಭುವನದೊಳ್ ಬಲಿ ವಿಷ್ಣುಭಕ್ತರಂ ಕಾಣ್ವರಾರೀ ಚಂದ್ರಹಾಸನಿಂದೆ ||
ಅವನಿ ಪಾವನಮಪ್ಪುದಾತನಂ ಸಂಧಿಸುವ |
ಲವಲವಿಕೆಯಾಗಿರ್ಪ್ಪುದೆಲೆ ತಪೋಧನ ತನಗೆ |
ವಿವರಿಸೀತನ ಕಥೆಯನೆಂದರ್ಜುನಂ ಕೇಳ್ದೊಡಾ ಮುನಿಪನಿಂತೆಂದನು ||೧||

ಆಲಿಸೆಲೆ ಫಲುಗುಣ ಕುಳಿಂದಕನ ಭವನದೊಳ್ |
ಬಾಲಕಂ ಪೆರ್ಚುವ ಸುಧಾಂಶುಕಳೆಯಿಂ ನಗುವ |
ಲೀಲೆಯಿಂ ಚಂದ್ರಹಾಸಂ ತಪ್ಪನೆಂಬಂತೆ ದಿನದಿನಕೆ ವಧಿಸುತಿರೆ ||
ಮೇಲೆ ಮೇಲೆಸೆದುದಾ ಪೊಳಲ ಸಿರಿವಿಮಲ ಗುಣ |
ಶೀಲದಿಂ ಮೆರೆದುದೆಲ್ಲಾ ಜನಂ  ಬಿಡದೆ ಕೊಡ |
ವಾಲಂ ಕರೆದುವಾಕಳುತ್ತು ಬಿತ್ತದೆ ಬೆಳೆಯತೊಡಗಿತಿಳೆ ಮಳೆಗಳಿಂದೆ ||೨||

ಸೂಚಿತದ ಪೂರ್ವಜನ್ಮದ ಪುಣ್ಯಫಲದಿಂದೆ |
ಯಾಚಿತದೊಳನುಪಮದ ಶಿಶು ನಿಧಾನಂ ತನಗೆ |
ಗೋಚರಿಸಿತೆಂದು ನಲಿದಾ ಕುಳಿಂದನುಮವನ ರಾಣಿಯುಂ ದಿನದಿನದೊಳು ||
ಲೋಚನಂ ತಣಿಯೆ ನೋಡುತ ಹರ್ಷ ವಾರಿಧಿಯ |
ವೀಚಿಯೊಳ್ ಮುಳುಗಾಡಿ ಪುತ್ರವಾತ್ಸಲ್ಯದಿಂ |
ದಾ ಚಂದ್ರಹಾಸನಭ್ಯುದಯದೊಳ್ ಪೆರ್ಚಿದರನೇಕ ಸಂಪದಮೊದವಲು ||೩||

ಲಕ್ಷಣದೊಳೆಸೆವ ಸುಕುಮಾರನಂ ನಗರಿಗ |
ಧ್ಯಕ್ಷನಾಗಿಹ ಕುಳಿಂದಂ ಕೆಲವು ದಿನದ ಮೇ |
ಲಕ್ಷರಾಭ್ಯಾಸಕಿರಿಸಿದೊಡೆ ಹರಿಯೆಂಬೆರಡು ವರ್ಣಮಲ್ಲದೆ ಪೆರತನು ||
ಅಕ್ಷಿಯಿಂದೀಕ್ಷಿಸದೆ ವಾಚಿಸದಿರಲ್ಕೆ ಗುರು |
ಶಿಕ್ಷಿಸಿ ಕನಲ್ದು ಬರೆಯೆಂದೊಡಂ ಕೇಳದಿರೆ |
ತತ್ಕ್ಷಣದೊಳಾತನೈತಂದವನ ತಾತಂಗದಂ ಪೇಳ್ದೊಡಿಂತೆಂದನು ||೪||

ಈತನೇಕಾದಶಿಯೊಳುಪವಾಸಮಂ ಮಾಳ್ಪ|
ನೀತನಂ ಕಂಡು ನಾವೆಲ್ಲರುಮನುಷ್ಠಿಸುವೆ |
ವೀತನಚ್ಚುತಭಕ್ತ ನೀತನಿಂದೆನಗಪ್ಪುದಭ್ಯುದಯಮಿಹಪರದೊಳು ||
ಈತನಲ್ಲದೆ ಬೇರೆ ತನುಜಾತರಿಲ್ಲ ತನ |
ಗೀತನಲ್ಲಯೆ ಜೀವಮಾಗಿರ್ಪೆನಾನದರಿ |
ನೀತನೆಂತಾದೊಡಿರಲೀತಂಗೆ ಶಿಕ್ಷೆ ಬೇಡೆಂದಂ ಕುಳಿಂದನಂದು ||೫||

ಅಂದು ಮೊದಲಾಗಿ ತನ್ನಿಚ್ಛೆಯಿಂ ಚಂದ್ರಹಾ |
ಸಂ ದಾನವಾರಿಯಂ ಬಿಡದೆ ಬಾಲಕ್ರೀಡೆ |
ಯಿಂದುತ್ಸವಂಗಳಂ ಮಾಡಿ ಕೆಳೆಯರ್ವೆರಸಿ ಕೊಂಡಾಡಿ ಭಕ್ತಿಯಿಂದೆ ||
ತಂದು ಫಲ ವರ್ಗಮಂ ಪೂಜೆಗೈದುಪವಾಸ |
ದಿಂದ ಜಾಗರಣದಿಂದೇಕಾದಶೀ ವ್ರತವ |
ನಂದದಿಂದಾಚರಿಪನಖಿಳ ಜನಕುಪದೇಶಿಪಂತೆ ಹರಿ ಮಹಿಮೆಗಳನು ||೬||

ಮೆಲ್ಲನಿಂತಿರಲೆಂಟನೆಯ ವರುಷಮಾಗಲ್ಕೆ |
ನಿಲ್ಲದುಪನಯನಮಂ ವಿರಚಿಸಿ ಕುಳಿಂದಂ ಸ |
ಮುಲ್ಲಾಸಮಂ ತಾಳ್ದನಂಗಸಹಿತಖಿಳ ವೇದಂಗಳಂ ನೀತಿಗಳನು ||
ಸಲ್ಲಲಿತ ಶಬ್ದಾದಿ ಶಾಸ್ತ್ರಸಿದ್ಧಾಂತಂಗ |
ಳೆಲ್ಲಮಂ ಗುರುಮುಖದೊಳಧಿಕರಿಸಿ ಬೇಕಾದ |
ಬಿಲ್ಲವಿದ್ಯೆಯನರಿದು ಗಜ ತುರಗದೇರಾಟದೊಳ್ ಚತುರನಾದವನು ||೭||

ವಿದಿತ ವೇದಾರ್ಥಮಂ ವಿಷ್ಣುವೆಂದರಿದು ಬಹು |
ವಿಧ ಶಾಸ್ತ್ರತತಿಗೆ ಹರಿ ಗತಿಯೆಂದು ತಿಳಿದು ತಾ |
ನಧಿಕರಿಸಿ ಬಳಿಕ ನಿಜಭಕ್ತಿಚಾಪಕೆ ಸತ್ವಗುಣವನಳವಡಿಸಿ ತನ್ನ ||
ಸುಧಿಯ ಶರಮಂ ಪೂಡಿ ಕೃಷ್ಣನಂ ಗುರಿಮಾಡಿ |
ವಿಧುಹಾಸನನುಪಮ ಧನುರ್ವಿದ್ಯೆಯಂ ಜಗದೊ |
ಳಧಿಕತರಮಾಗೆ ಸಾಧಿಸಿ ಪರಮ ಭಾಗವತ ಕಲೆಗಳಿಂದೆಸೆದಿರ್ದನು ||೮||

ಷೋಡಶ ಪ್ರಾಯದೊಳವಂ ಪ್ರಬಲ ಭಟನಾಗಿ |
ಮೂಡಿದಗ್ಗಳಿಕೆಯಿಂದೈದ ರಥಿಕರ್ಕಳಂ |
ಕೂಡಿಕೊಂಡೈದಿ ನಿಜ ತಾತಂಗೆ ಮಲೆವ ಮನ್ನೆಯರೆಲ್ಲರಂ ಘಾತಿಸಿ ||
ಮಾಡಿದಂ ದಿಗ್ವಿಜಯಮಂ ಕುಳಿಂದಕನಾಳ್ವ |
ನಾಡಲ್ಲದೆಣ್ದೆಸೆಯ ಸೀಮೆಗಳನೊತ್ತಿದಂ |
ಪೂಡಿಸಿದನವರವರ ಮನೆಗಳ ಸುವಸ್ತುಜಾಲಂಗಳಂ ತನ್ನ ಪುರಕೆ ||೯||

ಹರಿಯನಾರಾಧಿಸಿದೆ ರಾಜ್ಯಮದದಿಂ ಸೊಕ್ಕಿ |
ದರಿ  ಭೂಪರಂ ಗೆಲ್ದು ಮಣಿ ಕನಕ ಮುಕ್ತಾಳಿ |
ಕರಿ ತುರಗ ಮೊದಲಾದ ಮುಖ್ಯ ವಸ್ತುಪ್ರತತಿ ಸಹಿತ ಪಟ್ಟಣಕೆ ಬರಲು ||
ಪುರದ ಸಿಂಗರದ ಮಂಗಳ ವಾದ್ಯರವದಬಲೆ |
ಯರ ಸೊಡರ್ವೆಳಗಿನಾರತಿಗಳ ಮಹೋತ್ಸವದ |
ಸಿರಿಯೊಳ್ ಕುಳಿಂದಂ ಕುಮಾರನನಿದಿರ್ಗೊಳಿಸಿ ಮತ್ತೆ ಕಾಣಿಸಿಕೊಂಡನು ||೧೦||

ತಾಯಿತಂದೆಗಳೀಗಳಿಂದಿರಾದೇವಿ ನಾ |
ರಾಯಣರ್ ತನಗೆಂದು ಭಾವಿಸಿ ನಮಿಸಲವರ್ |
ಪ್ರೀಯದಿಂ ತನಯನಂ ತೆಗೆದಪ್ಪಿದರ್ ಬಳಿಕ ಪುರವೀಧಿಯೊಳ್ ಬರುತಿರೆ ||
ಆಯತಾಕ್ಷಿಯರಾಗಳಲರ್ಗಳಂ ಚೆಲ್ಲಿದರ್ |
ಕಾಯಜಾಕೃತಿಯೊಳೈತಹ ಚಂದ್ರಹಾಸನ ವಿ |
ಡಾಯಮಂ ನೋಡುವ ಕಟಾಕ್ಷದ ಮರೀಚಿಗಳ ವೀಚಿಗಳ ವಿಕರದೊಡನೆ ||೧೧||

ನಿಳಯಕೈತಂದನುತ್ಸವದಿಂ ಕುಳಿಂದಕಂ |
ಬಳಿಕ ತನ್ನಾಧಿಪತ್ಯವನಾತ್ಮಜಂಗೆ ಮಂ |
ಗಳ ಮುಹೂರ್ತದೊಳಿತ್ತನಂದಿನಿಂ ಚಂದ್ರಹಾಸಂ ಪಾಲಿಸುವನಿಳೆಯನು ||
ತುಳುಕಾಡಿತಾನಾಡ ಸಿರಿ ಚಂದನಾವತಿಯ |
ಪೊಳಲ ಸೌಭಾಗ್ಯಮಭಿವಧಿಸಿತು ವೈಷ್ಣವದ |
ಬಳೆವಳಿಗೆಯಾದುದೆಲ್ಲಾ ಜನದೊಳಾಚಾರ ಗುಣ ದಾನ ಧರ್ಮದಿಂದೆ ||೧೨||

ದಶಮಿಯ ಮಹೋತ್ಸವಂ ಪೆರ್ಚಿತೇಕಾದಶಿಯೊ |
ಳಶನಮಂ ತೊರೆದರಚ್ಚುತ ಪಾರಯಣರಾಗಿ |
ನಿಶನಮಂ ನಿರಂತರಂ ನಿದ್ರೆಯಂ ಬಿಟ್ಟರಾ ಮರುದಿನಂ ದ್ವಾದಶಿಯೊಳು ||
ಕುಶಶಯನ ಪೂಜೆಯಂ ಮಾಡಿ ಭುಂಜಿಪರಿಂತ |
ತಿಶಯಮಾದುದು ಮೇಲೆ ಮೇಲೆ ಮಾಧವ ಭಕ್ತಿ |
ವಿಶದ ಗುಣನಿಧಿ ಚಂದ್ರಹಾಸನಾಜ್ಞೆಯೊಳವನ ದೇಶದ ಸಮಸ್ತ ಜನಕೆ ||೧೩||

ಜಲಜಾಕ್ಷ ಭಕ್ತಿಯಿಂ ಪ್ರಹ್ಲಾದನಾಗಿ ನಿ |
ಶ್ಚಲ ಹರಿಧಾನದಿಂ ಧ್ರುವನಾಗಿ ಸತ್ವದಿಂ |
ಬಲಿಯಾಗಿ ಶಾಂತತ್ವದಿಂ ವಿಭೀಷಣನಾಗಿ ವೈಷ್ಣವಾಭರಣನೆಂಬ ||
ಕಲೆಯಿಂದೆ ಮಹಿಗೆ ರುಕ್ಮಾಂಗದಂ ತಾನಾಗಿ |
ಸಲೆ ಕೀರ್ತಿಯಿಂ ಪುಂಡರೀಕನಾಗಿರುತಿಹಂ |
ಸುಲಲಿತ ಚರಿತ ಭಾಗವತ ಶಿರೋಮಣಿ ಚಂದ್ರಹಾಸನುರ್ವೀತಳದೊಳು ||೧೪||

ರೂಪಿಂದೆ ಮದನನುಂ ನಾರಿಯರುಮಮಿತ ಪ್ರ |
ತಾಪದಿಂ ದಿನಪನುಂ ಪರ ಮಹೀಪಾಲರುಂ |
ವ್ಯಾಪಿಸಿದ ಕೀತಿಯಿಂ ಪೀಯೂಷ ಕಿರಣನುಂ ತಾರೆಗಳುಮಭಿವಧಿಪ ||
ಶ್ರೀಪತಿಯ ಭಕ್ತಿಯಿಂ ಗರುಡನುಂ ಸನಕಾದಿ |
ತಾಪಸರುಮೈದೆ ಸೋಲ್ದಪರೆಂದೊಡಿನ್ನುಳಿದ |
ಕಾಪುರುಷರೀ ಚಂದ್ರಹಾಸನಂ ಪೋಲ್ದಪರೆ ಪೇಳೆಂದು ಮುನಿ ನುಡಿದನು ||೧೫||

ಈತೆರದೊಳಿರೆ ಕುಳಿಂದಂ ಚಂದ್ರಹಾಸನಂ |
ಪ್ರೀತಿಯಿಂದಂ ಕರೆದು ನುಡಿದನೆಲೆ ಮಗನೆ ವಿ |
ಖ್ಯಾತಮಾಗಿಹ ರಾಜಧಾನಿ ಕುಂತಳಮಿಲ್ಲಿಗಾರುಯೋಜನದೊಳಿಹುದು ||
ಭೂತಳಮಿದಾನಗರದಸಿನದು ನಮಗೊಡೆಯ |
ನಾತನ ಶಿರಃಪ್ರಧಾನಂ ದುಷ್ಟಬುದ್ಧಿ ಸಂ |
ಜಾತ ವಸ್ತುಗಳ ಸಿದ್ಧಾಯಮಂ ಕುಡುವೇಳ್ಪುದರಸಂಗೆ ನಾವೆಂದನು ||೧೬||

ರಾಯಂಗೆ ವರ್ಷವರ್ಷಕೆ ನಾವು ಕುಡುವ ಸಿ |
ದ್ಧಾಯಮಂ ದುಷ್ಟಬುದ್ಧಿಗೆ ಸಲಿಸಿ ಬರ್ಪ ನಿ |
ಷ್ಕಾಯುತ ದ್ರವ್ಯಮಂ ನೃಪನ ರಾಣಿಗೆ ಪುರೋಹಿತನಾದ ಗಾಲವಂಗೆ ||
ಪ್ರೀಯದಿಂದುಪಚರಿಸುವರ್ಥಮಂ ತತ್ಕಾಲ |
ಕೀಯಬೇಕೆಲೆ ಮಗನೆ ಧನವನೊದವಿಸಿ ಕಳುಹ |
ಸೂಯೆಗೀಡಾಗಬೇಡೆಂದು ನಿಜನಂದನಂಗಾ ಕುಳಿಂದಂ ಪೇಳ್ದನು ||೧೭||

ಪಿತನ ಮಾತಂ ಕೇಳ್ದು ಚಂದ್ರಹಾಸಂ ಮಹೀ |
ಪತಿಗೆ ಮಹಿಷಿಗೆ ಮಂತ್ರಿದುಷ್ಟಬುದ್ಧಿಗೆ ಪುರೋ |
ಹಿತ ಗಾಲವಂಗೆ ಸಲಿಸುವ ಧನವನದರ ಸಂಗಡಕೆ ತಾನಾಹವದೊಳು ||
ಪ್ರತಿಭೂಷರಂ ಜಯಿಸಿ ತಂದ ವಸ್ತುಗಳನಂ |
ಕಿತದಿಂದೆ ಕಟ್ಟಿ ಶಕಟೋಷ್ಟ್ರಕರಿ ಭಾರಗಳ |
ಶತ ಸಂಖ್ಯೆಯಿಂದೆ ಕಳುಹಿದನಾಪ್ತರಂ ಕೂಡಿಕೊಟ್ಟು ಕುಂತಳ ನಗರಿಗೆ ||೧೮||

ಹಸ್ತಿ ಹರಯ ರತ್ನ ವಸ್ತ್ರಾಭರಣ ಕರ‍್ಪೂರ |
ಕಸ್ತೂರಿ ಮಲಯಜ ಸುವರ್ಣ ರಜತಾದ್ಯಖಿಳ |
ವಸ್ತುಚಯಮಂ ಕೊಂಡು ಚಂದ್ರಹಾಸನ ಚರೆರ್ ಬಂದು ಕುಂತಳ ನಗರಿಗೆ |
ವಿಸ್ತಾರದಿಂದೆಸೆವ ನಗರೋಪಕಂಠದ ಸ |
ರಸ್ತೀರದೊಳ್ ಮಿಂದು ಚಕ್ರಿಯಂ ಪೂಜೆಗೈ |
ದಸ್ತಮಯ ಸಮಯದೊಳ್ ಪೊಕ್ಕರಾ ಪಟ್ಟಣವನತಿಶುಚಿರ್ಭೂತರಾಗಿ ||೧೯||

ನೊಸಲೊಳೆಸೆವೂರ್ಧ್ವಪುಂಡ್ರದ ಸುಧೌತಾಂಬರದ |
ಮಿಸುಪ ತುಳಸಿಯ ದಂಡೆಗಳ ಕೊರಳ ನಿಚ್ಚಳದ |
ದಸನಪಙ್ಕ್ತಯ ವಿಕಿಲ್ಬಿಷಗಾತ್ರದಚ್ಛಸಾತ್ವಿಕ ಭಾವದಿಂದೆ ಮೆರೆವ ||
ಶಶಿಹಾಸನನುಚರರ್ ಬಂದು ಕಾಣಲ್ಕಿದೇಂ |
ಪೊಸಶಕಟ ನಿಮಗೀಗಳೇಕೆ ಶುದ್ಧಿಸ್ನಾನ |
ಮಸುವಿಡಿದಿಹನೆ ಕುಳಂದಕನೆಂದು ಶಂಕೆಯಿಂ ಕೇಳ್ದನಾ ದುಷ್ಟಬುದ್ಧಿ ||೨೦||

ಅಶುಭಕೋಟಿಯನೊರಸುವೇಕಾದಶೀ ವ್ರತಕೆ |
ವಿಶದ ಸಲಿಲಸ್ನಾನಮಿಂದೆಮಗೆ ಸಮನಿಸಿತು |
ಕುಶಲದಿಂ ಬಾಳ್ವಂ ಕುಳಿಂದನಾತನ ಸೂನು ಚಂದ್ರಹಾಸಂಗೆ ನಾಡು ||
ವಶವರ್ತಿಯಾಗಿರ‍್ಪುದವನಾಜ್ಞೆಯಿಂದುಭಯ |
ದಶಮಿಯೊಳ್ ನಡೆವುದುತ್ಸವವಚ್ಚುತಂಗೆ ಕ |
ರ್ಕಶಮಿಲ್ಲದಖಿಳಜನಮಂ ಬಿಡದೆ ಪಾಲಿಪಂ ಹರಿಭಕ್ತಿನಿರತನಾಗಿ ||೨೧||

ಸುತ್ತಲುಂ ದಿಗ್ವಿಜಯಮಂ ಮಾಡಿ ರಿಪು ನೃಪರ |
ನೊತ್ತಿ ಭುಜಬಲದಿಂದೆ ಕಪ್ಪಮಂ ಕೊಂಡು ಬಂ |
ದುತ್ತಮ ಸುವಸ್ತುಗಳನೆಂದು ವಿವರ್ಥಮಂ ಚಂದ್ರಹಾಸಂ ಕಳುಹಲು ||
ಪೊತ್ತುತಂದಿಹೆವನೇಕ ದ್ರವ್ಯವರಮನೆಗೆ |
ಹತ್ತು ನಿನಗೊಂದರೆಣಿಕೆಯೊಳೆಂದು ಲೇಖನವ |
ನಿತ್ತೊಡೆ ಕುಳಿಂದಕನ ಸೇವಕರ್ಗಾ ದುಷ್ಟಬುದ್ಧಿ ಮಗುಳಿಂತೆಂದನು ||೨೨||

ಏನಿದೆತ್ತಣ ಕೌತುಕದ ನುಡಿ ಕುಳಿಂದಂಗೆ |
ಸೂನು ಜನಿಸಿರ್ದಪನೆ ಬಂಜೆಯಾಗಿಹಳವನ |
ಮಾನಿನಿ ವಿಚಿತ್ರಮೆನಲಾಚರರ್ ಜೀಯ ಪುಸಿಯಲ್ಲವಂ ಬೇಂಟೆಗೈದೆ ||
ಕಾನನದ ಮಧ್ಯದೊಳನಾಥನಾಗಿಹ ಶಿಶು ನಿ |
ಧಾನಮಿರೆ ಕಂಡೆತ್ತಿಕೊಂಡು ಬಂದನಾತ್ಮಜ ವಿ |
ಧಾನದಿಂದೋವಿದಂ ಪ್ರೀತಿ ಮಿಗೆ ಚಂದ್ರಹಾಸಾಭಿಧಾನದೊಳೆಂದರು ||೨೩||

ಕೇಳ ವಿಸ್ಮಿತನಾದನಾ ದುಷ್ಟಬುದ್ಧಿ ನಾಂ |
ಪಾಳಡವಿಯೊಳ್‌ಪಸುಳೆಯಂ ಕೊಂದು ಬಹುದೆಂದು |
ಹೇಳಿದೊಡೆ ಚಂಡಾಲರಂದುಳುಹಿ ಬಂದರಹುದೆಂದು ನಿಶ್ಚೈಸಿ ಬಳಿಕ ||
ತಾಳಿದಂ ದ್ವೇಷಮಂ ಚಿತ್ತದೊಳ್ ಪೊರಗೆ ಕರು |
ಣಾಳುಗಳ ತೆರದಿಂದವರ್ಗಳಂ ಮನ್ನಿಸಿ ನಿ |
ಜಾಲಯಕೆ ತೆಗೆಸಿದಂ ಚಂದ್ರಹಾಸಂ ಕಳುಹಿದಗಣಿತ ಸುವಸ್ತುಗಳನು ||೨೪|

ಇಂದುಹಾಸನ ದೂತರುಪವಾಸವಿರಬಾರ |
ದೆಂದು ಬಾಣಸಿಗರಂ ಕರೆಸಿ ಬಹುವಿಧ ಪಾಕ |
ದಿಂದೆ ಷಡ್ರಸ ಭೋಜ್ಯಮಂ ಮಾಡಿಸಿದೊಡುಟಕವರೊಲ್ಲೆವೆನೆ ಕನಲ್ದು ||
ಎಂದಿನಂತಲ್ಲ ಗರ್ವಿಸಿದಂ ಕುಳಿಂದನವ |
ನಿಂದೆ ಸೊಕ್ಕಿದಠವನ ಭೃತ್ಯರವರೆಲ್ಲರಂ |
ತಂದು ಕಾರಾಗಾರದೊಳ್ ನಿಗಳಮಂ ಪೂಡಿಸುವೆನೆಂದನಾ ಸಚಿವನು ||೨೫||

ಕಷ್ಟಮೇತಕೆ ಜೀಯ ಹರಿವಾಸರ ವ್ರತ |
ಭ್ರಷ್ಟರಾದಪೆವೆಂಬ ಭಯಕೆ ನಿನ್ನಾಲಯದ |
ಮೃಷ್ಟಾನ್ನ ಮಾವೊಲ್ಲೆದಿರ್ದೆವೈಸಲೆ ಗರ್ವದಿಂ ಬೇರೆಯಲ್ಲವೆಂದು ||
ದುಷ್ಟಬುದ್ಧಿಯ ಚಿತ್ತಮಂ ತಿಳುಹಿ ಮರುದಿನದೊ |
ಳಿಷ್ಟಭೋಜನದಿಂದೆ ಸನ್ಮಾನಮಂ ತಳೆದು |
ಹೃಷ್ಟಮಾನಸರಾಗಿ ಬೀಳ್ಕೊಂಡು ತಿರುಗಿದರ್ ಚಂದ್ರಹಾಸನ ದೂತರು ||೨೬||

ಮನ್ನಿಸಿ ಕುಳಿಂದಕನ ಚರರಂ ಕಳುಹಿ ಮಂತ್ರ |
ಭಿನ್ನಮಾಗದವೊಲರಮನೆಗೆ ಬಂದಾಗ ತಾ |
ನುನ್ನಿಸಿದ ಬಗೆಯನಾಳೋಚಿಸಿ ನೃಪಾಲನಂ ಬೀಳ್ಕೊಂಡು ಮದನನೆಂಬ ||
ತನ್ನ ತನಯದ ಮೇಲೆ ರಾಜಕಾರ‍್ಯದ ಭಾರ |
ಮನ್ನಿಯೋಜಿಸಿ ದುಷ್ಟಬುದ್ಧಿ ಪೊರಮಡುತಿರ್ದ |
ನನ್ನೆಗಂ ವಿಷಯಾಭಿಧಾನದಿಂದೆಸೆವ ನಿಜಸುತೆ ಭರದೊಳೈತಂದಳು ||೨೭||

ತನು ಸೊಂಪಡರ್ದು ನುಂಪಿಡಿದು ಕಂಪೊಗೆಯೆ ಲೋ |
ಚನದ ನೋಟದ ಹೊಳಹು ಹೊಡಕರಿಸೆ ಚೆಲ್ವ ಕದ |
ಪಿನ ಕಾಂತೆ ಕಳಕಳಿಸೆ ನಸುಲಜ್ಜೆ ನಗೆಯೊಗದೊಳಂಕುರಿಸೆ ತನಿ ಸೊಬಗಿನ ||
ವನಜ ಕುಟ್ಮಲದಂತೆ ಕುಚ ಯುಗಂ ಪೊಣ್ಮೆ ಬಡ |
ತನದಿಂದೆ ನಡುವೆಸೆಯೆ ಗತಿ ಮಂದಮಾಗೆ ಜೌ |
ವನದೇಳ್ಗೆಯಿಂದೆಸೆವ ವಿಷಯೆ ನಿಜತಾತನ ಸವಿಪಕೈತರುತಿರ್ದಳು ||೨೮||

ಎಸಳ್ಗಂಗಳ ದಿಟ್ಟಿ ಮನ್ಮಥನ ಕರದಿಟ್ಟಿ |
ಮಿಸುವ ಪುರ್ಬಿನ ಗಾಡಿ ದರ್ಪಕನ ಸಿಂಗಾಡಿ |
ಲಲಿತ ಮಂದಸ್ಮತಂ ಮುನಿಜನದ ವಿಸ್ಮಿತಂ ಕುರುಳು ವಿಟ ನಿಕರದುರುಳು ||
ಅಸಿಯ ಕೋಮಲ ಕಾಯ ಮಂಗಜೋತ್ಸದ ಕಾಯ |
ಮೆಸೆವ ನವ ಯೌವನಂ ಸ್ಮರನ ಕೇಳೀವನಂ |
ಪೊಸತಿದೆನಲಾ ವಿಷಯೆ ಜನಿತ ಮೋಹನ ವಿಷಯೆ ಪಿತನೆಡೆಗೆ ನಡೆತಂದಳು ||೨೯||

ಕನ್ನೆ ವೆಣ್ಗಳ ಕೆಳದಿಯರ ಕೂಡೆ ಶೈಶವೋ |
ದ್ಭಿನ್ನಯೌವನೆಯಾದ ವಿಷಯೆ ಬರೆ ಕಂಡಿವ |
ಳ್ಗಿನ್ನು ವರನಾಗಬೇಕೆಂದು ಚಿಂತಿಸಿ ಮನದೊಳಾ ದುಷ್ಟಬುದ್ಧಿ ಬಳಿಕ ||
ತನ್ನ ಮಗಳಂ ತೆಗೆದು ತಕ್ಕೈಸಿ ವಾತ್ಸಲ್ಯ |
ದಿನ್ನಾಳೆ ಬಂದಪೆಂ ಪೋಗು ನಿಜ ಭವನಕೆನೆ |
ಸನ್ನುತ ವಸಂತದೊಳ್‌ಬಾಯ್ದೆರೆವ ಕೋಗಿಲೆಯ ಮರಿವೊಲವಳಿಂತೆಂದಳು ||೩೦||

ತಾತ ನಂದನದೊಳಾಂ ನೀರ್ವೊಯ್ದು ಬೆಳೆಯಿಸಿದ |
ಚೂತಲತೆ ಪೂತುದಿನ್ನುದ್ಯಾಪನಂಗೈಸ |
ದೇತಕಿರ್ದಪೆ ರಾಜಕಾರ್ಯಮೇನೆಂದು ತಲೆವಾಗಿ ನಸುಲಜ್ಜೆಯಿಂದೆ ||
ಮಾತನಾಡುವ ಮಗಳ ಭಾವವಂ ಕಂಡು ಸಂ |
ಪ್ರೀತಿಯಿಂತಿಳಿಪಿ ಮೈದಡವಿ ಮುದ್ದಿಸಿ ತನ್ನ |
ಜಾತ ಮದನಂಗಿವಳ ನೋಪಿಯಂ ಮಾಡಿಸೆಂದಾ ಮಂತ್ರಿ ನೇಮಿಸಿದನು ||೩೧||

ಮನೆಗೆ ಮಗಳಂ ಕಳುಹಿ ರಾಜಕಾರಿಯಕೆ ಮದ |
ನನನಿರಿಸಿ ತನ್ನ ಪರಿಜನ ಸಹಿತ ಪೊರಮಟ್ಟು |
ದಿನವೆರಡಕೈತಂದು ಮುನ್ನಿರ್ದ ಕಾಡೆಲ್ಲಮೆಸೆವ ನಾಡಾಗಿರಲ್ಕೆ
ಮನದೊಳ್‌ಕರುಬನಾಂತು ಮೆಚ್ಚಿದವನಾಗಿ ಲೇ |
ಸಿನೊಳಾ ಕುಳಿಂದಕನಿದಿರ್ವಂದು ಸತ್ಕರಿಸೆ |
ಘನವಿಭವದಿಂದೆ ರಾಜಿಪ ಚಂದನಾವತಿಗೆ ಬಂದನಾ ದುಟ್ಟಬುದ್ಧಿ ||೩೨||

ರಿಪುಮಥನ ಕೇಳ್‌ಕುಳಿಂದಂ ಬಹಳ ವೈಭವದೊ |
ಳುಪಚರಿಸಿ ತನ್ನ ನಂದನ ಚಂದ್ರಹಾಸನಂ |
ವಿಪುಲ ಪರಿತೋಷದಿಂದೊಡೆಯಂಗೆ ಕಾಣಿಕೆಯನಿಡಿಸಿ ಕಾಣಿಸಿದ ಬಳಿಕ ||
ವಿಪಿನದೊಳ್ ತನಗೀ ಕುಮಾರಕಂ ಮುಂಗೈದ |
ತಪದ ಫಲದಿಂ ತಾನೆ ದೊರೆಕೊಂಡನೀತನಂ |
ಕೃಪೆಯಿಂದೆ ನೀವೆ ಪಾಲಿಸವೇಳ್ಪುದೆಂದು ನಿಜಪತಿಗೆ ಕೈವರ್ತಿಸಿದನು ||೩೩||

ಗಾಡಿಸಿದ ನೃಪಲಕ್ಷಣದ ಚಂದ್ರಹಾಸನಂ |
ನೋಡಿ ವಿಸ್ಮಿತನಾಗಿ ತನ್ನ ಮನದೊಳ್‌ಪಿಂತೆ |
ಮಾಡಿಸಿದ ಕೃತ್ಯಮಂ ನೆನೆದು ವಂಚಿಸಿದರೇ ಚಂಡಾಲರೆಮ್ಮನೆಂದು ||
ಕೂಡೆ ಮಮ್ಮಲಮರುಗಿ ಪುಸಿಗೆ ನಸು ನಗುತ ಕೊಂ |
ಡಾಡಿ ಮನ್ನಿಸಿ ತನಗೆ ನಿನ್ನ ಸುತನಂ ಕಂಡು |
ಮೂಡಿತುತ್ಸವಮೆಂದನಾ ದುಷ್ಟಬುದ್ಧಿ ವಿನಯದೊಳಾ ಕುಳಿಂದನೊಡನೆ ||೩೪||

ವ್ಯಾಳದಂಗದ ನಯವೊ ಗರ್ತಸಂಭಾದಿತ ತೃ |
ಣಾಳಿಗಳೊ ಮಕರದಿಕ್ಕೆಯ ಮಡುವಿನಂಬುಜವೊ |
ಬಾಳ ಧಾರೆಗೆ ಲೇಪಿಸಿದ ಮಧುವೊ ಕಮಲಾಂಬಕಿಯರ ಕೃತಕದ ಬೇಟವೊ |
ಕಾಳಕೂಟಂಬೆರಸಿದಮೃತಾನ್ನ ಭೋಜನವೊ |
ಪೇಳಲರಿದೆನೆ ಸೊಗಸಿತಾ ದುಷ್ಟಬಿದ್ಧಿ ಘಾ |
ತಾಳಿಕೆಯನೊಳವುದುಗಿ ಹರ್ಷಲಾಂಭನದಿಂದೆ ನಸುನಗುತ ನುಡಿದ ಮಾತು ||೩೫||

ಎತ್ತ ಬಲ್ಲರ್ ಸುಜನರೆಲೆ ಪಾರ್ಥ ಕಪಟಿಗಳ |
ಚಿತ್ತದೊಳ್ ಪುದುಗಿರ್ದ ಮಾಟಮಂ ವೀಳಯವ |
ನಿತ್ತು ಮನ್ನಿಸಿ ಮಂತ್ರಿಪತಿ ಚಂದ್ರಹಾಸನಂ ಕರೆದು ಕುಳ್ಳಿರಿಸಿಕೊಂಡು ||
ಮತ್ತೆ ಮನದೊಳ್ ಮುನ್ನ ಭೂಸುರರ್ ತನಗೆಂದ |
ವೃತ್ತಾಂತಮಂ ನೆನೆದು ತನ್ನ ಸುತರಾಳ್ಕೆಗಾ |
ಯಿತ್ತು ಕಂಟಕಮಕಟ ಪಗೆಯಾದನಿವನೊರ್ವನೆಂದು ಚಿಂತಿಸುತಿರ್ದನು ||೩೬||

ಬಂಜೆಯಾಗದು ವಿಪ್ರರಂದೆನ್ನೊಳೆಂದ ನುಡಿ |
ರಂಜಿಸುವ ರಾಜಲಕ್ಷಣದೊಳೊಪ್ಪುವ ನಿವಂ |
ಭಂಜಿಸದೊಡೀ ಧರಣಿಗೀತನರಸಾದಪಂ ಬಳಿಕ ತನ್ನಾತ್ಮಜರ್ಗೆ ||
ಸಂಜನಿಸಲರಿದು ಭೂಪಾಲತ್ವಮಗ್ಗಳಿಕೆ |
ಗಂಜುವವನಲ್ಲ ಬಲವಂತನಹನೀತಂಗೆ |
ನಂಜನೂಡಿಸಿ ಕೊಲ್ವುಪಾಯಂ ಮಾಳ್ವೆನೆಂದೆಣಿಸಿದಂ ದುಷ್ಟಬುದ್ಧಿ ||೩೭||

ರಾಕಾಶಶಾಂಕನಭ್ಯುದಯಮಂ ಕೆಡಿಸಿ ತ |
ನ್ನಾಕಾರಮಂ ತೋರಿಸುವೆನೆಂಬ ಕತ್ತಲೆವೊ |
ಲಾ ಕಮಲಲೋಚನನ ಭೃತ್ಯನಂ ಕೊಲಿಸಿ ತಾಂ ಬಾಳ್ವೆನೆಂಬುಜ್ಜುಗದೊಳು |
ಆ ಕುಮತಿಯಹಮಂತ್ರಿ ಬಳಿಕೊಂದು ಲೇಖನವ |
ನೇಕಾಂತದೊಳ್ ಬರೆದು ಮೇಣದಕೆ ಮುದ್ರೆಯಂ |
ಜೋಕೆಯಿಂದಳವಡಿಸಿ ಶಶಿಹಾಸನಂ ನೋಡಿ ನಸುನಗುತಲಿಂತೆಂದನು ||೩೮||

ಉರ್ವ ಮಂತ್ರದ ಕಜ್ಜಮಿದು ಚಂದ್ರಹಾಸ ನೀ |
ನೊರ್ವನೆ ಹಯಾರೂಢನಾಗಿ ನಾಲ್ವರ್ ಸೇವ |
ಕರ್ವೆರಸಿ ರಾಜಧಾನಿಗೆ ಪೋಗಿ ತನ್ನ ಮಗ ಮದನಂಗೆ ಮುದ್ರೆಸಹಿತ ||
ಸರ್ವಜನಮರಿಯದಂತೀವುದೀ ಪತ್ರಿಕೆಯ |
ನುರ್ವರೆಯೊಳಾವೆಸಗಿದತಿಶಯದ ಮಾಳ್ಕೆ ನ |
ಮ್ಮಿರ್ವರೊಳ್ ಗುಪ್ತಮಾಗಿರಲೆಂದು ಕೊಟ್ಟನಾ ಮಂತ್ರಿ ತಲ್ಲೇಖನವನು ||೩೯||

ಪ್ರೀತಿಯಿಂ ಪೇಳ್ದನಂತಸ್ಥಮಂ ತನ್ನೊಳೀ |
ಮಾತು ನಿಶ್ಚಯವೆಂದು ನಂಬಿ ಕೈಕೊಂಡು ಹ |
ರ್ಷಾತಿಶಯದಿಂದೆ ಮಂತ್ರಿಗೆ ಮಣಿದು ಬೀಳ್ಕೊಂಡು ವಂದಿಸಿ ಕುಳಿಂದನಡಿಗೆ ||
ಆತನೊಳ್ ಪರಕೆವೆತ್ತೊಡೆನೆ ಕಳುಹಿಸಿಕೊಂಡು |
ಮಾತೆ ಮೇಧಾವಿನಿಗೆ ಬಂದು ನಿರ್ಗಮವನಾ |
ಖ್ಯಾತಿಸಿ ಪದಾಂಬುಜಕೆ ಪರ್ಣಿಯಿಟ್ಟನಾ ಚಂದ್ರಹಾಸನಭ್ಯಗ್ರದಿಂದೆ ||೪೦||

ಆ ಸುದತಿ ಪಣಿವಿಡಿದು ನೆಗಪಿ ಸುಕುಮಾರಂಗೆ |
ಸೇಸೆದಳೆದಾರತಿಯನೆತ್ತಿ ತಿಲಕವನಿಟ್ಟು |
ಭಾಸುರ ಸುಲಾಜ ದಧಿ ದೂರ್ವಾಕ್ಷತೆಗಳೊಡನೆ ತಳಿಗೆದಂಬುಲವನಿತ್ತು ||
ಲೇಸೊದವಲಧ್ವದೊಳ್ ನಿನ್ನವಯವಂಗಳಂ |
ವಾಸುದೇವಂ ಕಾಯಲನುಕೂಲೆಯಾಗಿಹ ವ |
ಧೂ ಸಮನ್ವಿತನಾಗಿ ರಾಜ್ಯಮಂ ಪಡೆಯೆಂದು ಪರಸಿ ಬೀಳ್ಕೊಟ್ಟಳಂದು ||೪೧||

ಕ್ರಮದಿಂದೆ ಮಾತೆಯಂ ಬೀಳ್ಕೊಂಡು ಪೊರಮಡುವ |
ಸಮಯದೊಳ್ ಚಂದ್ರಹಾಸಂ ಕಂಡನಿದಿರೆ ಕು |
ಕುಮ ಸುರಂಜಿತ ಹರಿದ್ರಾಂಗದಿಂ ಕಂಗೊಳಿಪ ನೂತನ ವಧೂವರರನು ||
ಸಮ ಸದಾಕಾರದಿಂ ಬರುತಿರ್ದ ಭೂಸುರೋ |
ತ್ತಮಯುಗದ ನೆಳಗರುವೆರಸಿ ಬರ್ಪ್ಪ ಗೃಷ್ಟಿಯಂ |
ರಮಣೀಯ ಕುಸುಮ ಫಲಮಂ ಕೊಂಡು ತನಗೀಯಲೈತಹವನಾಧಿಪರನು ||೪೨||

ಸೂಡಿದಂ ಪರಿಪರಿಯೊಳೆಸೆವ ಕುಸುಮಂಗಳಿಂ |
ಮಾಡಿದ ಸುಮೌಳಿಯಂ ತಲೆಗೊರ್ವನೊರ್ವನೆಡೆ |
ಗೂಡಿ ಸೇರಿಸಿ ಕಟ್ಟಿದಚ್ಚಸಂಪಗೆಯ ಮಾಲೆಯನಿಕ್ಕಿದಂ ಕೊರಳ್ಗೆ ||
ನೀಡಿದಂ ಮತ್ತೊರ್ವನೊಪ್ಪುವ ಕರಾಂಬುಬಕೆ ||
ದಾಡಿಮದ ಫಲವನಿವನೆಲ್ಲಮಂ ಕೈಕೊಂಡು |
ಗಾಡಿಮಿಗೆ ಮೆರೆವ ನವ ವರನಂತೆ ಪೊರಮಟ್ಟನಾ ಚಂದ್ರಹಾಸನಂದು ||೪೩||

ಹಯವರ ಸಮಾರೂಧನಾಗಿ ಸೇವಕ ಚತು |
ಷ್ಟಯದೊಡನೆ ಸೂಚಿತ ಶುಭೋಧೈಧ ಶಕುನಾವ |
ಳಿಯನಾಲಿಸುತ ಬಟ್ಟೆವಿಡಿದು ಕುಂತಳಪುರದ ಬಾಹ್ಯೋಪವನಕೆ ಬರಲು ||
ನಯಸರದ ಕೋಗಿಲೆಯ ಸಾದರದ ನುಡಿಯೊಳತಿ |
ಶಯ ಫಲೋತ್ಕರದ ತರು ಶಾಖೆಗಳ ಕೈಗಾಣಿ |
ಕೆಯೊಳಿದಿರ್ಗೊಳ್ವವೊಲಾ ವನಂ ಚಂದ್ರಹಾಸನ ಮುಂದೆ ಕಣ್ಗೆಸೆದುದು ||೪೪||

ತಳಿರ್ದುರುಗಿದೆಳೆವಾವುಗಳ ನೆಳಲ್ ಕವಿದ ನಿ |
ರ್ಮಲ ಪುಳಿನ ತಳದಿಂ ತೊಡರ್ದಡರ್ದಲರ್ವಳ್ಳಿ |
ಗಳ ಮಂಟಿಪಂಗಳಂ ವಿವಿಧ ಮಣಿಮಯ ಕೃತಕ ಗಿರಿ ಕಂಡರಂಗಳಿಂದೆ ||
ತೊಳೆಪ ರನ್ನದ ಪಾಸರೆಗಳಿಂದ ರಂಜಿಸುವ |
ನಳಿನೋತ್ವಲ ಪ್ರಕರ ಶೋಭಿತ ಸರೋವರಂ |
ಗಳ ರಮ್ಯಸೋಪಾನದಿಂದೆ ತದ್ರಾಜ ಕೇಳಿವನಂ ಕಣ್ಗೆಸೆದುದು ||೪೫||

ಸರಸಿಂಯೊಳ್‌ನಲಿದಾಡುವಂಚೆಗಳ ಕೊಂಚೆಗಳ |
ಬೆರಸಿ ರಮಿಸುವ ಕುಣಿವ ಕೋಕಿಗಳ ಕೇಕಿಗಳ |
ನೆರೆನೆರೆದು ಮೊರೆವ ಮರಿದುಂಬಿಗಳ ದೊಂಬಿಗಳ ಚೀರ್ವ ಗಿಳಿ ಕೋಗಿಲೆಗಳ ||
ತರುಲತೆಯ ತುರುಗಲ ರಸಾಲ ಪ್ರವಾಳ ಪ್ರ |
ಕರದ ಶೋಭೆಗಳ ಕುಸುಮಾಳಿಗಳ ಗಾಳಿಗಳ |
ಪರಿಮಳದ ಮನಕಿಂಪನೊಗೆಯಿಸುವ ರಾಜೋಪವನಮೆಸೆದುದು ||೪೬||

ಹೃದ್ಯಮಾಗಿಹ ಶೈತ್ಯ ಸೌರಭ್ಯ ಮಾಂದ್ಯದಿಂ |
ದುದ್ಯಾದ ಮಾರುತಂ ಬೀಸಿ ಮಾರ್ಗಶ್ರಮಂ |
ಸದ್ಯಃ ಪ್ರಶಮನಮಾಗಲ್ಕೆ ಹರ್ಷದೊಳಲ್ಲಿ ಕೃಷ್ಣನಂ ಪೂಜೆಗೈವ ||
ಉದ್ಯೋಗದಿಂದಿಳಿದು ತಣ್ಣಿಳಲ ತರುಮೂಲ |
ಕುದ್ಯುತ್ತರಂಗಮಂ ನೀರ್ಗುಡಿಸಿ ಕಟ್ಟಿ ನಿರ |
ವದ್ಯಗುಣನಿಧಿ ಚಂದ್ರಹಾಸನೆಳವುಲ್ಗಳಂ ತಿರಿತರಿಸಿ ಮುಂದಿಟ್ಟನು ||೪೭||

ತೇಜಿಯಂ ಕಟ್ಟಿದೆಡೆಯೊಳ್ ಸೇವಕರನಿರಿಸಿ |
ರಾಜವನದೊಳ್ ಪೊಕ್ಕು ಶಶಿಹಾಸನಲ್ಲಿ ವಿ |
ಭ್ರಾಜಿಸುವ ನಿರ್ಮಲಸರಸ್ತೀರದೊಳ್‌ಮಿಂದು ಶುಚಿಯಾಗಿ ಸುಸ್ಥಳದೊಳು ||
ರಾಜೀವಮಾದಿಯಾದಲರ್ಗಳಂ ತಿರಿದು ಹರಿ |
ಪೂಜೆಯಂ ಮಾಡಿ ತಾಂ ತಂದ ಪಾಥೇಯಮಂ |
ಭೋಜನಂಗೈದು ವಿಶ್ರಮನಾಗಿ ತಳಿತ ಮಾಮರನ ನೆಳಲಂ ಸಾರ್ದನು ||೪೮||

ತಿರಿದೆಳೆಳಿರ್ಗಳಂ ಪಾಸಿ ಕುಳ್ಳಿರ್ದೊಯ್ಯ |
ನೊರಗಲ್ಕೆ ನಡುವಗಲ ಬಿಸಿಲಿಂದೆ ಮಾರ್ಗದೊಳ್ |
ನೆರೆ ಬಳಲ್ದಿಹ ಚಂದ್ರಹಾಸಂಗೆ ತಣ್ಣಿಲರ ಸೊಗಸಿಂದೆ ಕಣ್ಣಿವೆಗಳು ||
ಸೆರೆಗೊಂಡುವಾಲಿಗಳನಾತ್ಮೀಯ ಕೃತ್ಯಮಂ |
ಮರೆದು ನಿದ್ರಾಲೋಲನಾಗಿ ಮಲಗಿದವನಂ |
ಮಿರುಗುವಹಿತಲ್ಪದೊಳ್ ದೇವಪುರನಿಲಯ ಲಕ್ಷ್ಮೀವರಂ ಪವಡಿಸುವೊಲು ||೪೯||